ಇಂದಿನ ಇತಿಹಾಸ History Today ನವೆಂಬರ್ 15
2020: ಕೋಲ್ಕತ: ಸುದೀರ್ಘ ಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಖ್ಯಾತ ಬಂಗಾಳಿ ನಟ ಸೌಮಿತ್ರ ಚಟರ್ಜಿ(೮೫) ಅವರು 2020 ನವೆಂಬರ್ 15ರ ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು. ಚಟರ್ಜಿ ಅವರಿಗೆ ಕೋವಿಡ್-19 ಸೋಂಕು ತಗುಲಿದ್ದು ದೃಢಪಟ್ಟಿತ್ತು. ಬಳಿಕ ಅಕ್ಟೋಬರ್ 6ರಂದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದರು. ಆದರೆ, ಹಲವು ಕಾಯಿಲೆಗಳಿದ್ದರಿಂದ ಬಳಲುತ್ತಿದ್ದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ. ಸೌಮಿತ್ರ ಚಟರ್ಜಿ ಅವರು ಈದಿನ ಮಧ್ಯಾಹ್ನ ೧೨.೧೫ಕ್ಕೆ ಬಿಲೆ ವ್ಯೂವ್ ಕ್ಲಿನಿಕ್ಕಿನಲ್ಲಿ ನಿಧನರಾದರು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿತು. ಸತ್ಯಜಿತ್ ರೇ ನಿರ್ದೇಶನದ ಅಪೂರ್ ಸಂಸಾರಂನಲ್ಲಿ ವಯಸ್ಕ ಅಪುವಿನ ಪಾತ್ರ ನೋಡಿದವರಿಗೆ ಸೌಮಿತ್ರ ಚಟರ್ಜಿಯ ಪ್ರತಿಭೆ ಕಣ್ಣಮುಂದೆ ಬರುತ್ತದೆ. ಅಪುವಿನ ಕಥೆ ಮುಂದುವರಿದ ಮೂರನೇ ಭಾಗವಿದು. ರೇ ಅವರ ೧೪ ಚಿತ್ರಗಳಲ್ಲಿ ಚಟರ್ಜಿ ಅವರು ನಟಿಸಿದ್ದಾರೆ. ‘ಅಭಿಜಾನ್’ (೧೯೬೨), ‘ಚಾರುಲತಾ’ (೧೯೬೪), ‘ಅರಣ್ಯೆರ್ ದಿನ್ ರಾತ್ರಿ’ (೧೯೬೪), ‘ಆಶಾನಿ ಸಂಕೇತ್’ (೧೯೭೨), ‘ಸೋನರ್ ಕೆಲ್ಲಾ’ (೧೯೭೪) ‘ಜೋಯ್ ಬಾಬಾ ಫೇಲುನಾಥ್’ (೧೯೭೮) ಸೇರಿದಂತೆ ಬಂಗಾಳಿ, ಹಿಂದಿಯ ಒಟ್ಟು ೧೦೫ ಚಿತ್ರಗಳಲ್ಲಿ ಚಟರ್ಜಿ ನಟಿಸಿದ್ದರು. ‘ಸ್ತ್ರೀ ಕಾ ಪಾತ್ರ’ ಅವರು ನಿರ್ದೇಶಿಸಿದ ಚಿತ್ರ. ಹೀಗೆ ಸೌಮಿತ್ರ ಚಟರ್ಜಿ (ಸೌಮಿತ್ರ ಚಟ್ಟೋಪಾಧ್ಯಾಯ) ಭಾರತೀಯ ಚಿತ್ರರಂಗದಲ್ಲಿ ಸಾಧನೆ ಮತ್ತು ಕೀರ್ತಿಯ ಶಿಖರವೇರಿದ ನಟ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಪಟ್ನಾ: ಬಿಹಾರದಲ್ಲಿ ಎನ್ ಡಿಎ ನಾಯಕರಾಗಿ ನಿತೀಶ್ ಕುಮಾರ್ ಅವರನ್ನು ಸರ್ವಾನುಮತದಿಂದ 2020 ನವೆಂಬರ್ 15ರ ಭಾನುವಾರ ಆಯ್ಕೆ ಮಾಡಲಾಗಿದ್ದು, ಹಕ್ಕು ಮಂಡನೆಯ ಬಳಿಕ ಸರ್ಕಾರ ರಚಿಸುವಂತೆ ರಾಜ್ಯಪಾಲರು ಅವರಿಗೆ ಆಹ್ವಾನ ನೀಡಿದ್ದಾರೆ. ನಿತೀಶ ಕುಮಾರ್ ಅವರು 2020 ನವೆಂಬರ್ 16ರ ಸೋಮವಾರ ನಾಲ್ಕನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಮತ್ತೊಮ್ಮೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಕಟಿಹಾರ್ ಶಾಸಕ ತಾರ್ ಕಿಶೊರ್ ಪ್ರಸಾದ್ ಅವರನ್ನು ವಿಧಾನಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಹನೊಯಿ: ಏಷ್ಯಾ ಪೆಸಿಫಿಕ್ನ ೧೫ ರಾಷ್ಟ್ರಗಳು 2020 ನವೆಂಬರ್ 11ರ ಭಾನುವಾರ ವಿಶ್ವದಲ್ಲೇ ಅತ್ಯಂತ ದೊಡ್ಡದು ಎನ್ನಲಾಗಿರುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದವು. ಜಗತ್ತಿನ ಒಟ್ಟು ಆರ್ಥಿಕ ಚಟುವಟಿಕೆಯ ಮೂರನೇ ಒಂದು ಭಾಗದಷ್ಟು ವಹಿವಾಟು ಇದಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಕೊರೊನಾ ಸಾಂಕ್ರಾಮಿಕದಿಂದ ಆರ್ಥಿಕವಾಗಿ ನಲುಗಿರುವ ರಾಷ್ಟ್ರಗಳಿಗೂ ಇದು ನೆರವಾಗಲಿದೆ. ಈ ಒಪ್ಪಂದವನ್ನು ’ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ’ (ಆರ್ ಸಿಇಪಿ) ಎಂದು ಕರೆಯಲಾಗಿದ್ದು, ಚೀನಾ ಮತ್ತು ಇತರ ೧೪ ರಾಷ್ಟ್ರಗಳು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಶೃಂಗಸಭೆಯ ಸಂದರ್ಭದಲ್ಲಿ ವರ್ಚುವಲ್ ವ್ಯವಸ್ಥೆಯ ಮೂಲಕ ಒಪ್ಪಂದಕ್ಕೆ ಸಹಿ ಹಾಕಿದವು. ೨೦೧೨ರಲ್ಲಿ ಈ ಬಗ್ಗೆ ಪ್ರಸ್ತಾವ ಮಂಡಿಸಲಾಗಿತ್ತು. ಆದರೆ, ಒಪ್ಪಂದದ ಕುರಿತ ಇದ್ದ ಗೊಂದಲಗಳನ್ನು ನಿವಾರಿಸುವ ಕುರಿತು ವ್ಯಾಪಕ ಚರ್ಚೆ ನಡೆಸಿ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.‘ಎಂಟು ವರ್ಷಗಳ ಕಾಲ ಸತತ ಸಂಧಾನ, ಚರ್ಚೆಗಳನ್ನು ನಡೆಸಿದ್ದೇವೆ. ಇದಕ್ಕಾಗಿ ಅಪಾರ ಪರಿಶ್ರಮಪಟ್ಟಿದ್ದೇವೆ. ಅಂತಿಮವಾಗಿ ಆರ್ ಸಿಇಪಿ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಮಲೇಷ್ಯಾದ ವಾಣಿಜ್ಯ ಸಚಿವ ಮೊಹಮ್ಮದ್ ಅಜ್ಮಿನ್ ಅಲಿ ತಿಳಿಸಿದರು. ‘ಆರ್ ಸಿಇಪಿ ಜಗತ್ತಿನಲ್ಲೇ ಅತಿ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಪ್ರಾದೇಶಿಕ ವ್ಯಾಪಾರ ವಹಿವಾಟಿಗೆ ಹೊಸ ವ್ಯವಸ್ಥೆಯನ್ನು ಇದು ರೂಪಿಸಲಿದೆ. ಸುಸ್ಥಿರ ವ್ಯಾಪಾರಕ್ಕೂ ಇದು ಆಧಾರವಾಗಲಿದೆ. ಕೋವಿಡ್-೧೯ನಿಂದ ಅಸ್ತವ್ಯಸ್ತಗೊಂಡಿರುವ ವಿತರಣಾ ಸರಪಳಿಗೆ ಇದು ಪುನಶ್ಚೇತನ ನೀಡಲಿದೆ’ ಎಂದು ವಿಯಟ್ನಾಂ ಪ್ರಧಾನಿ ಗ್ಯುಯೇನ್ ಕ್ಸುಆನ್ ಫುಕ್ ವಿವರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾದವನ್ನು ಬೆಂಬಲಿಸಿ ಅವರ ಬೆಂಬಲಿಗರು 2020 ನವೆಂಬರ್ 14ರ ಶನಿವಾರ ಹಲವೆಡೆ ಪ್ರದರ್ಶನ ನಡೆಸಿದ್ದು, ಈ ವೇಳೆ ಹಿಂಸಾಚಾರ ಭುಗಿಲೆದ್ದಿತು. ಒಂದೆಡೆ ಟ್ರಂಪ್ ಬೆಂಬಲಿಗರು ಚುನಾವಣಾ ಫಲಿತಾಂಶದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದಡೆ ಜೋ ಬಿಡೆನ್ ಗೆಲುವನ್ನು ಸಂಭ್ರಮಿಸಿ ಅವರ ಬೆಂಬಲಿಗರು ಮೆರವಣಿಗೆ ನಡೆಸಿದರು. ಆದರೆ ಶ್ವೇತಭವನದಿಂದ ಸ್ವಲ್ಪ ದೂರದಲ್ಲಿ ಎರಡು ಬಣಗಳು ಮುಖಾಮುಖಿಯಾಗಿ, ಶಾಂತಿಯುತ ಪ್ರದರ್ಶನ ಹಿಂಸಾಚಾರಕ್ಕೆ ತಿರುಗಿತು. ಈ ವೇಳೆ ‘ಬ್ಲ್ಯಾಕ್ ಲೈಫ್ ಮ್ಯಾಟರ್’ ಪ್ರತಿಭಟನಕಾರೊಬ್ಬರು ಚಾಕು ಇರಿತಗೊಳಗಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ ಎಂದು ವರದಿಯೊಂದು ಹೇಳಿದೆ. ಟ್ರಂಪ್ ವಿರೋಧಿ ಪ್ರತಿಭನಕಾರರು ಟ್ರಂಪ್ ಬೆಂಬಲಿಗರ ಮೇಲೆ ಮೊಟ್ಟೆ ಎಸೆದಿದ್ದಾರೆ. ಬ್ಯಾನರ್,ಟೋಪಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿ ತಿಳಿಸಿತು. ಈ ಗಲಭೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೊದಲ್ಲಿ ಎರಡು ಬಣದ ಬೆಂಬಲಿಗರು ಪರಸ್ಪರ ಹೊಡೆದಾಡುತ್ತಿರುವುದು ಕಂಡುಬಂದಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment