ಇಂದಿನ ಇತಿಹಾಸ History
Today
ಜುಲೈ 27
2020: ಮುಂಬೈ: ಕೊರೋನಾ ವೈರಸ್ ಸೋಂಕಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಬಾಲಿವುಡ್ ಚಿತ್ರನಟ ಅಮಿತಾಭ್ ಬಚ್ಚನ್ ಕುಟುಂಬ ಸದಸ್ಯರ ಪೈಕಿ ಅಭಿಷೇಕ್ ಬಚ್ಚನ್ ಪತ್ನಿ, ಖ್ಯಾತ ನಟಿ ಐಶ್ವರ್ಯ ರೈ ಮತ್ತು ಪುತ್ರ ಆರಾಧ್ಯ ಸೋಂಕಿನಿಂದ ಗುಣಮುಖರಾಗಿದ್ದಾರೆ. ತಮ್ಮ ಪತ್ನಿ ಐಶ್ವರ್ಯ ಮತ್ತು ಪುತ್ರ ಆರಾಧ್ಯ ಅವರಿಗೆ ಕೊರೋನಾವೈರಸ್ ನೆಗೆಟಿವ್ ವರದಿ ಬಂದಿದ್ದು, ಇಬ್ಬರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅಭಿಷೇಕ್ ಬಚ್ಚನ್ 2020 ಜುಲೈ 27ರ ಸೋಮವಾರ ಟ್ವೀಟ್ ಮಾಡಿದರು. ತಾವು ಮತ್ತು ತಂದೆ ಅಮಿತಾಭ್ ಬಚ್ಚನ್ ಇನ್ನೂ ವೈದ್ಯರ ನಿಗಾದಲ್ಲಿ ಇರುವುದಾಗಿ ಅಭಿಷೇಕ್ ಬಚ್ಚನ್ ತಿಳಿಸಿದರು. ’ನಿರಂತರ ಪ್ರಾರ್ಥನೆ ಮತ್ತು ಶುಭ ಹಾರೈಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ನಾವು ನಿಮಗೆ ಚಿರ ಋಣಿಗಳಾಗಿದ್ದೇವೆ. ಐಶ್ವರ್ಯ ಮತ್ತು ಆರಾಧ್ಯ ಅವರಿಗೆ ಕೊರೋನಾವೈರಸ್ ನೆಗೆಟಿವ್ ವರದಿ ಬಂದಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಈಗ ಮನೆಯಲ್ಲಿದ್ದಾರೆ. ನನ್ನ ತಂದೆ ಮತ್ತು ನಾನು ಇನ್ನೂ ಆಸ್ಪತ್ರೆಯಲ್ಲಿ ಇದ್ದು ವೈದ್ಯಕೀಯ ಸಿಬ್ಬಂದಿಯ ನಿಗಾದಲ್ಲಿ ಇದ್ದೇವೆ’ ಎಂದು ಅಭಿಷೇಕ್ ಟ್ವೀಟಿನಲ್ಲಿ ಬರೆದರು. ಅಮಿತಾಭ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ಜುಲೈ ೧೧ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಐಶ್ವರ್ಯ ಮತ್ತು ಆರಾಧ್ಯ ಅವರನ್ನು ಜುಲೈ ೧೨ರಂದು ಸಣ್ಣದಾಗಿ ಸೋಂಕಿನ ಲಕ್ಷಣಗಳು ಕಂಡು ಬಂದದ್ದನ್ನು ಅನುಸರಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ/ ಜೈಪುರ: ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ಪುನರಪಿ ಮನವಿಗಳ ಬಳಿಕ ರಾಜಸ್ಥಾನದ ರಾಜ್ಯಪಾಲ ಕಲರಾಜ್ ಮಿಶ್ರ ಅವರು ರಾಜ್ಯ ವಿಧಾನಸಭೆಯ ಅಧಿವೇಶನ ಕರೆಯಲು 2020 ಜುಲೈ 27ರ ಸೋಮವಾರ ಒಪ್ಪಿಗೆ ನೀಡಿದ್ದಾರೆ. ಆದರೆ ಸರ್ಕಾರದಿಂದ ೨೧ ದಿನಗಳ ನೋಟಿಸ್ ಸಹಿತವಾಗಿ ಮೂರು ಶರತ್ತುಗಳನ್ನು ವಿಧಿಸಿದ್ದಾರೆ. ಇದೇ ವೇಳೆಗೆ ರಾಜಸ್ಥಾನ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟಿಗೆ ಸಲ್ಲಿಸಲಾಗಿದ್ದ ತಮ್ಮ ವಿಶೇಷ ಅರ್ಜಿಯನ್ನು ರಾಜಸ್ಥಾನ ವಿಧಾನಸಭಾಧ್ಯಕ್ಷ ಸಿ.ಪಿ. ಜೋಶಿ ಅವರು ಸೋಮವಾರ ಹಿಂಪಡೆದಿದ್ದಾರೆ. ವಿಧಾನಸಭಾ ಅಧಿವೇಶನ ಕರೆಯುವಂತೆ ಸಚಿವ ಸಂಪುಟದ ಶಿಫಾರಸು ಸಹಿತವಾಗಿ ಗೆಹ್ಲೋಟ್ ಅವರು ಸಲ್ಲಿಸಿದ್ದ ಪರಿಷ್ಕೃತ ಮನವಿಯನ್ನು ಹಿಂದಿರುಗಿಸುತ್ತಾ ರಾಜ್ಯಪಾಲರು ಅಧಿವೇಶನ ಕರೆಯುವ ಸಂಬಂಧ ವಿಧಿಸಲಾದ ಶರತ್ತುಗಳನ್ನೂ ತಿಳಿಸಿದ್ದಾರೆ. ಪ್ರಕಟಣೆಯೊಂದನ್ನು ಸೋಮವಾರ ನೀಡಿರುವ ಮಿಶ್ರ, ರಾಜ್ಯಪಾಲರು ಮೇಲಿನ ಒತ್ತಡದ ಒಳಗಾಗಿದ್ದಾರೆ ಎಂಬ ಮುಖ್ಯಮಂತ್ರಿಯ ಆರೋಪದ ಮಧ್ಯೆ ಸದನದ ಅಧಿವೇಶನ ಕರೆಯುವುದನ್ನು ತಾನು ವಿಳಂಬಿಸುತ್ತಿರುವುದಾಗಿ ಮಾಡಲಾದ ಆಪಾದನೆಯನ್ನು ತಳ್ಳಿಹಾಕಿದರು. ರಾಜಸ್ಥಾನದ ಅಧಿಕಾರದ ಜಗಳದ ಮಧ್ಯೆ ವಿಧಾನಸಭಾ ಅಧಿವೇಶನ ಕರೆಯುಂತೆ ಸಚಿವ ಸಂಪುಟ ಮಾಡಿದ ಶಿಫಾರಸನ್ನು ರಾಜ್ಯಪಾಲ ಮಿಶ್ರ ಅವರು ಹಿಂದಿರುಗಿಸಿದ್ದು ಇದು ಎರಡನೇ ಬಾರಿ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಜೈಪುರ: ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನೇತೃತ್ವದಲ್ಲಿ ಬಂಡಾಯ ಎದುರಿಸುತ್ತಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ವಿಧಾನಸಭೆ ಅಧಿವೇಶನ ಕರೆಯುವಲ್ಲಿ ರಾಜ್ಯಪಾಲರು ಮಾಡುತ್ತಿರುವ ವಿಳಂಬದ ಬಗ್ಗೆ ದೂರು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡುತ್ತಾ, ರಾಜ್ಯಪಾಲ ಕಲರಾಜ್ ಮಿಶ್ರ ಅವರ ‘ನಡವಳಿಕೆ’, ರಾಜಭವನದ ಹುಲ್ಲು ಹಾಸಿನಲ್ಲಿ ಶಾಸಕ ಧರಣಿ ಹಾಗೂ ಪುನರಪಿ ಮನವಿಗಳ ಹೊರತಾಗಿಯೂ ವಿಧಾನಸಭೆ ಅಧಿವೇಶನ ಕರೆಯಲು ಮಾಡುತ್ತಿರುವ ವಿಳಂಬ ಬಗ್ಗೆ ತಿಳಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಮನವಿ ಸಲ್ಲಿಸಿ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿಸುವುದಾಗಿ ಮುಖ್ಯಮಂತ್ರಿ 2020 ಜುಲೈ 27ರ ಸೋಮವಾರ ಹೇಳಿದರು. ‘ನಾನು ಭಾನುವಾರ (ನಿನ್ನೆ) ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದ್ದೇನೆ ಮತ್ತು ರಾಜ್ಯಪಾಲರ ವರ್ತನೆಯ ಬಗ್ಗೆ ಹೇಳಿದ್ದೇನೆ. ಏಳು ದಿನಗಳ ಹಿಂದೆ ನಾನು ಅವರಿಗೆ ಬರೆದ ಪತ್ರದ ಬಗ್ಗೆ ನಾನು ಅವರೊಂದಿಗೆ ಮಾತನಾಡಿದ್ದೇನೆ’ ಎಂದು ಗೆಹ್ಲೋಟ್ ಹೇಳಿದರು. ರಾಜ್ಯಪಾಲರು ತಮಗೆ ಆರು ಪುಟಗಳ ’ಪ್ರೇಮಪತ್ರ’ ಕಳುಹಿಸಿದ್ದಾರೆ ಎಂದೂ ಗೆಹ್ಲೋಟ್ ನುಡಿದರು. ಜುಲೈ ೩೧ ರಿಂದ ವಿಧಾನಸಭೆ ಅಧಿವೇಶನ ಸಭೆ ನಡೆಸುವಂತೆ ಮುಖ್ಯಮಂತ್ರಿ ಗೆಹ್ಲೋಟ್ ಸಲ್ಲಿಸಿದ ಪ್ರಸ್ತಾವನೆಯನ್ನು ಹಿಂದಿರುಗಿಸಿದ್ದ ರಾಜ್ಯಪಾಲರು ಸೋಮವಾರ ಬೆಳಿಗ್ಗೆ ರಾಜ್ಯ ಸರ್ಕಾರದಿಂದ ಅಧಿವೇಶನಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ರಫೇಲ್ ಜೆಟ್ ವಿಮಾನಗಳ ಮೊದಲ ಕಂತು ಫ್ರಾನ್ಸಿನಿಂದ 2020 ಜುಲೈ 27ರ ಸೋಮವಾರ ಹೊರಟಿದ್ದು, ಜುಲೈ ೨೯ರ ಬುಧವಾರ ಭಾರತಕ್ಕೆ ಆಗಮಿಸಲಿದೆ. ಭಾರತಕ್ಕೆ ಬಂದಿಳಿದ ಬಳಿಕ ರಫೇಲ್ ಜೆಟ್‌ಗಳು ಅಧಿಕೃತವಾಗಿ ಹರಿಯಾಣದ ಅಂಬಾಲಾದಲ್ಲಿನ ಭಾರತೀಯ ವಾಯುಪಡೆಯ ನೌಕಾಪಡೆಗೆ ಸೇರ್ಪಡೆಯಾಗಲಿವೆ. ಫ್ರಾನ್ಸ್ ಮೂಲದ ಡಸಾಲ್ಟ್ ಏವಿಯೇಷನ್ ಸಂಸ್ಥೆಯು ತಯಾರಿಸಿದ ಫೈಟರ್ ಜೆಟ್‌ಗಳು ಅವಳಿ-ಎಂಜಿನ್‌ಗಳ ಬಹುಪಾತ್ರ ಯುದ್ಧ ವಿಮಾನಗಳಾಗಿವೆ. ಇವು ಅಣ್ವಸ್ತ್ರ ಸಾಮರ್ಥ್ಯ ಹೊಂದಿದ್ದು, ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ನೆಲಕ್ಕೆ ದಾಳಿಗಳಲ್ಲಿ ತೊಡಗಬಲ್ಲುದು. ಈ ವಿಮಾನವು ಭಾರತವನ್ನು ತಲುಪಲು ೭,೦೦೦ ಕಿ.ಮೀ ಪ್ರಯಾಣಿಸಬೇಕಾಗಿದ್ದು,ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಲ್ ದಫ್ರಾ ವಾಯುನೆಲೆಯಲ್ಲಿ ಮಧ್ಯಂತರ ವಿಶ್ರಾಂತಿ ಪಡೆಯಲಿವೆ. ದಾರಿಯಲ್ಲಿ ಆಗಸದಲ್ಲೇ ಇಂಧನ ತುಂಬಲಾಗುವುದು ಎಂದು ಮೂಲಗಳು ತಿಳಿಸಿವೆ. ಚೀನಾ ಜೊತೆಗಿನ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಲಡಾಖ್ ವಲಯದಲ್ಲಿ ನಿಯೋಜಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಟಿಕ್ ಟಾಕ್ ಲೈಟ್, ಹೆಲೊ ಲೈಟ್, ಶೇರ್‌ಇಟ್ ಲೈಟ್, ಬಿಗೊ ಲೈವ್ ಲೈಟ್, ವಿಎಫ್ವೈ ಲೈಟ್ ಸೇರಿದಂತೆ ಚೀನಾದ ೪೭ ಅಪ್ಲಿಕೇಷನ್‌ಗಳನ್ನು (ಆಪ್) ಕೇಂದ್ರ ಸರ್ಕಾರ 2020 ಜುಲೈ 27ರ ಸೋಮವಾರ ನಿಷೇಧಿಸಿತು. ಚೀನಾದ ೫೯ ಆಪ್‌ಗಳನ್ನು ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿತ್ತು. ಈ ಆಪ್‌ಗಳ ಮಾದರಿಯ ಮತ್ತಷ್ಟು ಅಪ್ಲಿಕೇಷನ್‌ಗಳನ್ನು ಇದೀಗ ನಿಷೇಧಿಸಲಾಗಿದೆ. ಟಿಕ್ ಟಾಕ್, ಶೇರ್‌ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್ ಮತ್ತು ವಿ-ಚಾಟ್ ಸೇರಿದಂತೆ ೫೯ ಮೊಬೈಲ್ ಆಪ್‌ಗಳ ಮೇಲೆ ಜೂನ್ ೩೦ರಂದು ನಿಷೇಧ ಹೇರಲಾಗಿತ್ತು. ‘ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುತಿದ್ದ ಕಾರಣ ಇವುಗಳನ್ನು ನಿಷೇಧಿಸಲಾಗಿದೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿತ್ತು. ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನೆ ಜತೆ ನಡೆದ ಸಂಘರ್ಷದ ಬಳಿಕ ಸರ್ಕಾರ ಈ ಕ್ರಮ ಕೈಗೊಂಡಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಸರಿಯಾದ ಸಮಯದಲ್ಲಿ ಕೈಗೊಂಡ ಸಮರ್ಪಕ ನಿರ್ಧಾರಗಳಿಂದಾಗಿ ಕೋವಿಡ್ -೧೯ ಸಾಂಕ್ರಾಮಿಕ ರೋಗ ವಿರೋಧೀ ಹೋರಾಟದಲ್ಲಿ ಭಾರತವು ಉತ್ತಮ ಪರಿಸ್ಥಿತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಜುಲೈ 27ರ ಸೋಮವಾರ ಹೇಳಿದರು. "ಸರಿಯಾದ ಸಮಯದಲ್ಲಿ ಸಮಪರ್ಕಕ ನಿರ್ಧಾರಗಳು ಎಂದರೆ ಇತರ ದೇಶಗಳಿಗಿಂತ ಭಾರತೀಯರ ಸ್ಥಿತಿ ಉತ್ತಮವಾಗಿದೆ, ಸಾವಿನ ಪ್ರಮಾಣವು ಇತರ ಪ್ರಮುಖ ದೇಶಗಳಿಗಿಂತ ಕಡಿಮೆಯಾಗಿದೆ ಮತ್ತು ನಮ್ಮ ಚೇತರಿಕೆ ಅನೇಕ ದೇಶಗಳಿಗಿಂತ ಹೆಚ್ಚಾಗಿದೆ’ ಎಂದರ್ಥ ಎಂದು ಪ್ರಧಾನಿಯವರು ಐಸಿಎಂಆರ್‌ನ ’ಹೈ-ಥ್ರೂಪುಟ್’ ಕೊರೊನಾವೈರಸ್ ಪರೀಕ್ಷೆಗೆ ಚಾಲನೆ ನೀಡುತ್ತಾ ಹೇಳಿದರು. ಮುಂಬೈ, ಕೋಲ್ಕತಾ ಮತ್ತು ನೋಯ್ಡಾದಲ್ಲಿ ಈ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ. "ದೇಶದಲ್ಲಿ ೧೧,೦೦೦ ಕ್ಕೂ ಹೆಚ್ಚು ಕೋವಿಡ್ ಸೌಲಭ್ಯ ಕೇಂದ್ರಗಳಿವೆ, ೧೧ ಲಕ್ಷಕ್ಕೂ ಹೆಚ್ಚು ಪ್ರತ್ಯೇಕ ಹಾಸಿಗೆಗಳಿವೆ. ಪ್ರತಿದಿನ ೫ ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರತಿಯೊಬ್ಬ ಭಾರತೀಯನನ್ನೂ ಉಳಿಸುವುದು ನಮ್ಮ ಧ್ಯೇಯವಾಗಿದೆ’ ಎಂದು ಪ್ರಯೋಗಾಲಯಗಳ ವರ್ಚುವಲ್ ಉದ್ಘಾಟನೆಯ ನಂತರ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಮುಂಬೈ, ಕೋಲ್ಕತಾ ಮತ್ತು ನೋಯ್ಡಾ ಆರ್ಥಿಕ ಶಕ್ತಿ ಕೇಂದ್ರಗಳಾಗಿದ್ದು, ಇವು ಸಾವಿರಾರು ಯುವ ಭಾರತೀಯರನ್ನು ಉದ್ಯೋಗಕ್ಕಾಗಿ ಇಲ್ಲಿಗೆ ಆಕರ್ಷಿಸುತ್ತವೆ ಎಂದು ಪ್ರಧಾನಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment