ನಾನು ಮೆಚ್ಚಿದ ವಾಟ್ಸಪ್

Thursday, July 16, 2020

ಇಂದಿನ ಇತಿಹಾಸ History Today ಜುಲೈ 16

ಇಂದಿನ ಇತಿಹಾಸ  History Today ಜುಲೈ 16

2020: ನವದೆಹಲಿ:  ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು, ಪಾಕಿಸ್ತಾನವು ಭಾರತಕ್ಕೆ ರಾಜತಾಂತ್ರಿಕ ಅವಕಾಶವನ್ನು ಒದಗಿಸಿದ್ದು, ಇದನ್ನು ಅನುಸರಿಸಿ ಭಾರತೀಯ ಅಧಿಕಾರಿಗಳು 2020 ಜುಲೈ 16ರ ಗುರುವಾರ  ಜಾಧವ್ ಅವರನ್ನು ಭೇಟಿ ಮಾಡಿದರು  ಎಂದು ಮಾಧ್ಯಮ ವರದಿಗಳು ತಿಳಿಸಿದವು. ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ೨೦೧೬ರಲ್ಲಿ ಬಂಧಿಸಲ್ಪಟ್ಟಿದ್ದ ಜಾಧವ್, ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ತನ್ನ ಪ್ರಕರಣವನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲು ನಿರಾಕರಿಸಿದ್ದಾಗಿ ಕಳೆದ ವಾರ ಪಾಕಿಸ್ತಾನ ಹೇಳಿಕೊಂಡಿತ್ತು. ನವದೆಹಲಿ ಇದನ್ನು ನಿರಾಕರಿಸಿತ್ತು ಮತ್ತು ಪ್ರಕರಣದ ವಿರುದ್ಧ ಮೇಲ್ಮನವಿ ಸಲ್ಲಿಸದಂತೆ ಜಾಧವ್ ಮೇಲೆಸ್ಪಷ್ಟ ಒತ್ತಡ ವಿಧಿಸಲಾಗಿದೆ ಎಂದು ಹೇಳಿತ್ತು. ಭಾರತೀಯ ಹೈಕಮಿಷನ್‌ನ ಅಧಿಕಾರಿಗಳು, ವಕೀಲರೊಂದಿಗೆ ಗುರುವಾರ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಬಹುದು ಎಂದು ಪಾಕಿಸ್ತಾನ ತಿಳಿಸಿದೆ. ಆದಾಗ್ಯೂ, ಅಡೆತಡೆ ರಹಿತವಾಗಿದ್ದರೆ ಮಾತ್ರ ಭಾರತವು ರಾಜತಾಂತ್ರಿಕ ಭೇಟಿಯ ಅವಕಾಶವನ್ನು ಬಳಸಿಕೊಳ್ಳುತ್ತದೆ ಎಂದು ಮೂಲಗಳು ಹೇಳಿವೆ. ಪಾಕಿಸ್ತಾನವು ಮೊದಲು ಇದನ್ನು ಒಪ್ಪಿಕೊಳ್ಳಬೇಕು ಎಂದು ಭಾರತ ಹೇಳಿರುವುದಾಗಿ ಮೂಲಗಳು ತಿಳಿಸಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನವು ಕೋವಿಡ್ ಪೂರ್ವ ಸ್ಥಿತಿಗೆ ಮರಳುವವರೆಗೆ ಮತ್ತು ಜಾಗತಿಕ ವಿಮಾನಯಾನ ಉದ್ಯಮ ಸಾಮಾನ್ಯವಾಗುವವರೆಗೆ ಭಾರತದಿಂದ ಯಾವುದೇ ಅಂತರಾಷ್ಟ್ರೀಯ ವಿಮಾನಯಾನ ಇರುವುದಿಲ್ಲ ಎಂದು ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಅವರು 2020 ಜುಲೈ 16ರ ಗುರುವಾರ ಇಲ್ಲಿ ಹೇಳಿದರು. ಅಲ್ಲಿಯವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಸಾಗಿಸಲು ಭಾರತವು ದ್ವಿಪಕ್ಷೀಯ ಗುಂಪು ಬಾಂಧವ್ಯಗಳನ್ನು  ಅವಲಂಬಿಸಿರುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ನುಡಿದರು. ಭಾರತ ಸೇರಿದಂತೆ ಎಲ್ಲ ದೇಶಗಳು ವಿಮಾನ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸುತ್ತಿರುವುದರಿಂದ ದ್ವಿಪಕ್ಷೀಯ  ಬಾಂಧವ್ಯ ಆಧರಿಸಿ ಸಾಧ್ಯವಿರುವಷ್ಟು ಪ್ರಯಾಣಿಕರನ್ನು ಸಾಗಿಸಲಾಗುವುದು ಎಂದು ಅವರು ಹೇಳಿದರು. ಸರ್ಕಾರವು ಪ್ರಸ್ತುತ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಾಪಸಾತಿ ವಿಮಾನಗಳನ್ನು ನಿರ್ವಹಿಸುತ್ತಿದೆ, ಅದು ಈಗ ನಾಲ್ಕನೇ ಹಂತದಲ್ಲಿದೆ. ಹಿಂದಿನ ವಿಬಿಎಂ ವಿಮಾನಗಳನ್ನು ಏರ್ ಇಂಡಿಯಾ ಮಾತ್ರ ಕೈಗೆತ್ತಿಕೊಂಡಿದ್ದರೆ, ಈಗ ಸರ್ಕಾರವು ಸ್ಪೈಸ್ ಜೆಟ್, ಇಂಡಿಗೊ ಮತ್ತು ಗೋಏರ್ ವಿಮಾನಗಳನ್ನು ಕೂಡಾ ಅಂತಾರಾಷ್ಟ್ರೀಯ ವಾಪಸಾತಿಗಾಗಿ ಬಳಸುತ್ತಿದೆ. ವಿಮಾನಗಳು ಮುಖ್ಯವಾಗಿ ಕೊಲ್ಲಿ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿವೆ. ಕೋವಿಡ್ -೧೯ ಸೋಂಕನ್ನು ನಿಯಂತ್ರಣದಲ್ಲಿ ಇಡುವ ಸಲುವಾರಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್‌ಡೌನ್) ಘೋಷಿಸಿದ ಕಾರಣ ಮಾರ್ಚ್ ೨೩ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಹಂತಹಂತವಾಗಿ ದೇಶೀಯ ವಿಮಾನಗಳು ಮೇ ೨೫ ರಿಂದ ಪುನರಾರಂಭಗೊಳ್ಳುವುದಾಗಿ ಘೋಷಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪ್ರಸ್ತುತ ವರ್ಷದ ದೀಪಾವಳಿಯ ವೇಳೆಗೆ ಭಾರತದ ದೇಶೀ ವಿಮಾನಗಳ ಹಾರಾಟ ಕೊರೋನಾ ಪೂರ್ವ ಹಾರಾಟದ ಶೇಕಡಾ ೫೫-೬೦ರಷ್ಟಕ್ಕೆ ತಲುಪಲಿದೆ ಎಂದು ಕೇಂದ್ರ ವಾಯುಯಾನ ಸಚಿವ ಹರ್‌ದೀಪ್ ಪುರಿ 2020 ಜುಲೈ 16ರ ಗುರುವಾರ ಇಲ್ಲಿ ಹೇಳಿದರು. ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ವಾಯುಯಾನವನ್ನು ಸ್ಥಗಿತಗೊಳಿಸಿದ್ದರಿಂದ ದೇಶೀಯ ವಾಯುಯಾನ ಉದ್ಯಮವು ಆರ್ಥಿಕ ನಷ್ಟವನ್ನು ಎದುರಿಸುತ್ತಿದೆ. " ವರ್ಷ ದೀಪಾವಳಿಯ ವೇಳೆಗೆ, ಭಾರತದಲ್ಲಿ ಕೊರೋನಾಪೂರ್ವ ಹಾರಾಟದ ಶೇಕಡಾ ೫೫-೬೦ರಷ್ಟು  ದೇಶೀಯ ವಿಮಾನಗಳು ಕಾರ್ಯನಿರ್ವಹಿಸುತ್ತವೆ ಎಂದು ನಾವು ಊಹಿಸುತ್ತಿದ್ದೇವೆ" ಎಂದು ಪುರಿ ನುಡಿದರು. ವರ್ಷದ ಆರಂಭದಲ್ಲಿ ವಾಯುಯಾನ ಸಲಹಾ ಸಂಸ್ಥೆ ಕಾಪಾ ಇಂಡಿಯಾ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕೋವಿಡ್ ಸಂಬಂಧಿತ ಅಡತಡೆಗಳ ಪರಿಣಾಮವಾಗಿ ೨೦೨೦ ಮೊದಲ ತ್ರೈಮಾಸಿಕದಲ್ಲಿ ಸಂಭವಿಸಿದ ಉದ್ಯಮದ ನಷ್ಟವು  ೩ರಿಂದ . ಶತಕೋಟಿ (ಬಿಲಿಯನ್) ಡಾಲರುಗಳಷ್ಟು ಆಗಬಹುದು ಎಂದು ಹೇಳಲಾಗಿದೆ. ಜೂನ್‌ನಿಂದ ಸೆಪ್ಟೆಂಬರವರೆಗೆ ನಾಲ್ಕು ತಿಂಗಳುಗಳು ಉದ್ಯಮಕ್ಕೆ ನಿರ್ಣಾಯಕ ಹಂತವಾಗಲಿದೆ ಎಂದು ಅದು ಹೇಳಿತ್ತು. ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಸಂಭವನೀಯ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆಯ ಅಗತ್ಯತೆ ಹಿನ್ನೆಲೆಯಲ್ಲಿ ವಿಧಿಸಲಾದನಿರ್ಬಂಧಗಳು ಕಾರಣದಿಂದಾಗಿ ಕೆಲವು ವಿಮಾನಯಾನ ಸಂಸ್ಥೆಗಳು ೨೦೨೧ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಅಂತ್ಯದವರೆಗೆ ತಮ್ಮ ವೆಚ್ಚವನ್ನು ಸರಿದೂಗಿಸಲು ಹೆಣಗಾಡಬೇಕಾಗಬಹುದು ಎಂದು ಅದು ಹೇಳಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದಿಂದ ರಾಜಸ್ಥಾನದಲ್ಲಿ ಉದ್ಭವಿಸಿರುವ ಬಿಕ್ಕಟ್ಟು 2020 ಜುಲೈ 16ರ ಗುರುವಾರ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದೆ. ವಿಧಾನಸಭಾ ಅಧ್ಯಕ್ಷ ಸಿಪಿ ಜೋಶಿ ಅವರು ನೀಡಿರುವ ಅನರ್ಹತೆ ನೋಟಿಸ್  ಗಂಭೀರ ಕಿಡಿಗೇಡಿತನ ಎಂದು ದೂರಿದ ಪೈಲಟ್ ಮತ್ತು ರಾಜಸ್ಥಾನದ ೧೮ ಶಾಸಕರು ನೋಟಿಸ್ ರದ್ದು ಪಡಿಸುವಂತೆ ಹೈಕೋರ್ಟಿಗೆ ಮನವಿ ಮಾಡಿದರು. ಅರ್ಜಿಯು ರಾಜಸ್ಥಾನ ವಿಧಾನಸಭೆಯ ನಿಯಮಾವಳಿಗಳನ್ನು ಪ್ರಶ್ನಿಸಿರುವ ಕಾರಣ ಅದನ್ನು ದ್ವಿಸದಸ್ಯ ವಿಭಾಗೀಯ ಪೀಠಕ್ಕೆ ಒಪ್ಪಿಸುವುದಾಗಿ ನ್ಯಾಯಮೂರ್ತಿ ಸತೀಶ್ ಶರ್ಮ ಸಂಜೆ ಪ್ರಕಟಿಸಿದರು. ವಿಧಾನಸಭೆಯ ಹೊರಗಿನ ಕೆಲವು ನಾಯಕರು ನಿರ್ಣಯಗಳು ಮತ್ತು ನೀತಿಗಳನ್ನು ಒಪ್ಪದ ಕಾರಣಕ್ಕಾಗಿ ತಮ್ಮ ವಿರುದ್ಧ ಪಕ್ಷಾಂತರ ನಿಷೇಧ ಕಾನೂನನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಬಂಡಾಯ ಸದಸ್ಯರು ರಾಜಸ್ಥಾನ ಹೈಕೋರ್ಟಿನ ಜೈಪುರ ಪೀಠಕ್ಕೆ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ವಿಧಾನಸಭಾಧ್ಯಕ್ಷರ ನೋಟಿಸ್ ವಿರುದ್ಧ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರುವ ಸಚಿನ್ ಪೈಲಟ್ ಕ್ರಮವು ಅವರು ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಜೊತೆಗಿನ ತಮ್ಮ ಸಮgವನ್ನು ಅದರ ತಾರ್ಕಿಕ ತೀರ್‍ಮಾನಕ್ಕೆ ಒಯ್ಯಲು ಉದ್ದೇಶಿಸಿರುವುದರ ಸಂಕೇತವಾಗಿದೆ ಎಂದು ರಾಜಕೀಯ ವಲಯಗಳು ಅಭಿಪ್ರಾಯಪಟ್ಟಿವೆ. ಪೈಲಟ್ ಬೆಂಬಲಿಗರ ಗುಂಪನ್ನು ವಿಧಾನಸಭೆಯಿಂದ ಅನರ್ಹಗೊಳಿಸಿದರೆ, ಅದು ವಿಧಾನಸಭೆಯ ಬಲವನ್ನು ಕುಗ್ಗಿಸುತ್ತದೆ ಮತ್ತು ಅಲ್ಪ ಮತಗಳ ಅಂತರದೊಂದಿಗೆ ಸ್ಥಾನಗಳಿಗೆ ಚುನಾವಣೆ ನಡೆಯುವವರೆಗೆ ಪೈಲಟ್ ಬಲವಾದ ಹೆಜ್ಜೆಗಳನ್ನು ಇಡಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಲೆಕ್ಕ ಹಾಕಿದ್ದಾರೆ. ಸಚಿನ್ ಪೈಲಟ್ ಮತ್ತು ಬೆಂಬಲಿಗ ಶಾಸಕರ ಜಂಟಿ ಅರ್ಜಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಸತೀಶ್ ಶರ್ಮಾ ಅವರು ಗುರುವಾರ ಮಧ್ಯಾಹ್ನ ಕೈಗೆತ್ತಿಕೊಂಡರು. ಆದರೆ ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ, ಅರ್ಜಿಯನ್ನು ವ್ಯಾಪ್ತಿ ವಿಸ್ತರಿಸುವ ಸಲುವಾಗಿ ತಿದ್ದುಪಡಿ ಮಾಡಲು ಕಾಲಾವಕಾಶ ಕೋರಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ಭಾರೀ ಮಳೆಯ ಪರಿಣಾಮವಾಗಿ ಮುಂಬೈಯಲ್ಲಿ 2020 ಜುಲೈ 16ರ ಗುರುವಾರ ಎರಡು ಕಟ್ಟಡಗಳು ಕುಸಿದಿದ್ದು ಹಲವರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ಇದೇ ವೇಳೆಗೆ ಉತ್ತರಾಖಂಡದಲ್ಲಿ ಧಾರಾಕಾರ ಮಳೆಗೆ ಹಲವಡೆಗಳಲ್ಲಿ ಭೂಕುಸಿತಗಳು ಉಂಟಾಗಿ, ಬದರೀನಾಥದ ಚಾರ್ ಧಾಮಕ್ಕೆ ಹೋಗುವ ಹೆದ್ದಾರಿ ಸೇರಿ ಮೂರು ಹೆದ್ದಾರಿಗಳು ಬಂದ್ ಆಗಿವೆ. ಮುಂಬೈಯ ಮಲಾಡ್‌ನ ಮಾಲ್ವಾನಿ ಪ್ರದೇಶ ಮತ್ತು ಕೋಟೆ ಪ್ರದೇಶದಲ್ಲಿ ಕಟ್ಟಡಗಳು ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.  ಗುರುವಾರ ಮಧ್ಯಾಹ್ನ ಕೋಟೆ ಪ್ರದೇಶದಲ್ಲಿ ನೆಲ ಮತ್ತು ಆರು ಅಂತಸ್ತಿನ ವಸತಿ ಕಟ್ಟಡದ ದೊಡ್ಡ ಭಾಗ ಕುಸಿಯಿತು. ಇಲ್ಲಿಯವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಆದರೆ ಕೆಲವು ನಿವಾಸಿಗಳು ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಲಕ್ಕಿ ಹೌಸ್ ಬಳಿಯ ಕೋಟೆಯ ಮಿಂಟ್ ರಸ್ತೆಯಲ್ಲಿರುವ ಭಾನುಶಾಲಿ ಕಟ್ಟಡದಲ್ಲಿ ಸಂಜೆ .೪೩ ಸುಮಾರಿಗೆ ಘಟನೆ ಘಟಿಸಿತು. ಎಂಟು ಅಗ್ನಿಶಾಮಕ ವಾಹನಗಳು, ಎರಡು ರಕ್ಷಣಾ ವ್ಯಾನ್‌ಗಳು ಮತ್ತು ಸುಮಾರು ೧೦ ಆಂಬುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಜನರು ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಕೆಲವರು ಕಟ್ಟಡದ ಉಳಿದ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ. ಸಿಕ್ಕಿಬಿದ್ದ ವ್ಯಕ್ತಿಗಳಿಗಾಗಿ ಹುಡುಕಾಟ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರಭಾತ್ ರಹಂಗ್‌ಡೇಲ್ ಹೇಳಿದರು. ಕಟ್ಟಡವನ್ನು ಎಂಎಚ್‌ಎಡಿಎ ಖಾಲಿ ಮಾಡಿತ್ತು ಮತ್ತು ದುರಸ್ತಿ ಕಾರ್ಯ ಪ್ರಗತಿಯಲ್ಲಿತ್ತು. ಕಟ್ಟಡವನ್ನು ಖಾಲಿ ಮಾಡಿದ್ದರೂ ಸಹ, ಕೆಲವು ನಿವಾಸಿಗಳು ಅದರಲ್ಲಿ ವಾಸಿಸುತ್ತಿದ್ದರು ಎಂದು ಹಿರಿಯ ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
 
ಇಂದಿನ ಇತಿಹಾಸ  History Today ಜುಲೈ 16 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ


No comments:

Post a Comment