ಇಂದಿನ ಇತಿಹಾಸ History
Today
ಜುಲೈ 15
2020: ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟ (ಇಯು) ಪ್ರಜಾಪ್ರಭುತ್ವ ಮತ್ತು ಬಹುತ್ವದ ಸಾರ್ವತ್ರಿಕ ಮೌಲ್ಯಗಳನ್ನು ಹಂಚಿಕೊಂಡಿವೆ ಎಂದು 2020 ಜುಲೈ 15ರ ಬುಧವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯರ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಒಗ್ಗಟ್ಟು, ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಮಾಡಲು ದಾರಿದೀಪವಾಗಿದೆ ಎಂದು ಹೇಳಿದರು. ಭಾರತ- ಐರೋಪ್ಯ ಒಕ್ಕೂಟದ ೧೫ನೇ ಶೃಂಗಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ’ಭಾರತ-ಐರೋಪ್ಯ ಒಕ್ಕೂಟದ ಯೂರೋಪಿಯನ್ ಒಕ್ಕೂಟದ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಎಂದು ಆಶಿಸಿದರು. ೨೧ನೇ ಶತಮಾನದ ವೇಗಕ್ಕೆ ತಕ್ಕಂತೆ ಭಾರತ ಮತ್ತು ಐರೋಪ್ಯ ಒಕ್ಕೂಟ ಒಟ್ಟಿಗೆ ಹೆಜ್ಜೆ ಹಾಕಲಿವೆ. ಆರ್ಥಿಕ ಮತ್ತು ಸಾಮಾಜಿಕ ಒಗ್ಗಟ್ಟು ನಮ್ಮನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸಲಿದೆ ಎಂದು ಅವರು ಹೇಳಿದರು. ಭಾರತ-ಐರೋಪ್ಯ ಒಕ್ಕೂಟದ ಒಗ್ಗಟ್ಟು ಇಡೀ ವಿಶ್ವದ ಕಲ್ಯಾಣಕ್ಕೆ ಪೂರಕವಾಗಲಿ ಎಂದು ಹಾರೈಸಿದ ಪ್ರಧಾನಿ ಮೋದಿ, ಕೊರೊನಾ ವೈರಸ್ ಹಾವಳಿಯ ಈ ಸಂಕಷ್ಟದ ಸಮಯದಲ್ಲಿ ಭಾರತ-ಐರೋಪ್ಯ ಒಕ್ಕೂಟ ಮಧ್ಯೆ ಇನ್ನಷ್ಟು ಆರ್ಥಿಕ ಒಪ್ಪಂದಗಳು ರೂಪುಗೊಳ್ಳಬೇಕಾಗಿದೆ ಎಂದು ನುಡಿದರು. ಪರಸ್ಪರರ ಲಾಭಕ್ಕಾಗಿ ಪೂರಕ ವಾತಾವರಣ ನಿರ್ಮಾಣ ಮಾಡುವುದು ಭಾರತ-ಐರೋಪ್ಯ ಒಕ್ಕೂಟದ ಜವಾಬ್ದಾರಿಯಾಗಿದೆ. ನಮ್ಮ ಆರ್ಥಿಕ ಸಂಬಂಧಗಳು ದೀರ್ಘ ಮತ್ತು ಪರಿಣಾಮಕಾರಿಯಾಗಿರುವಂತೆ ಕರಾರುವಾಕ್ ಯೋಜನೆಯನ್ನು ರೂಪಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ’ಬಿಜೆಪಿಯೊಂದಿಗಿನ ಎಲ್ಲ್ಲ ಸಂಭಾಷಣೆಯನ್ನು ನಿಲ್ಲಿಸಿ ಮತ್ತು ಜೈಪುರದ ನಿಮ್ಮ ಮನೆಗೆ ಹಿಂತಿರುಗಿ’ ಎಂಬ ಸೂಚನೆ ನೀಡುವ ಮೂಲಕ, ಬಂಡಾಯ ಎದ್ದಿರುವ ಸಚಿನ್ ಪೈಲಟ್ ಅವರನ್ನು ತಲುಪಲು ಕಾಂಗೆಸ್ 2020 ಜುಲೈ 15ರ ಬುಧವಾರ ಇನ್ನೊಂದು ಯತ್ನ ನಡೆಸಿತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗಿನ ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಪೈಲಟ್ ಬಹಿರಂಗ ಪಡಿಸಿದಂದಿನಿಂದ ರಾಜ್ಯದ ಕಾಂಗ್ರೆಸ್ ಸರ್ಕಾರವು ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಬಂಡಾಯದ ಬಳಿಕ ಪಕ್ಷವು ಸಚಿನ್ ಪೈಲಟ್ ಅವರನ್ನು ಮಂಗಳವಾರ ಉಪಮುಖ್ಯಮಂತ್ರಿ ಸ್ಥಾನ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿತ್ತು. ಬಿಜೆಪಿ ಜೊತೆಗೆ ಕೈಜೋಡಿಸುವ ಸಾಧ್ಯತೆಗಳನ್ನು ಬಂಡಾಯ ನಾಯಕ ಪೈಲಟ್ ಅವರು ಬುಧವಾರ ಬೆಳಗ್ಗೆ ಖಂಡತುಂಡವಾಗಿ ನಿರಾಕರಿಸಿದ ಬಳಿಕ, ಕಾಂಗ್ರೆಸ್ ನಾಯPತ್ವವು ಅವರ ಜೊತೆಗೆ ಸಂಧಾನದ ಇನ್ನೊಂದು ಯತ್ನಕ್ಕೆ ಕೈಹಾಕಿದೆ. ’ಗಾಂಧಿ ಕುಟುಂಭದ ದೃಷ್ಟಿಯಲ್ಲಿ ನನ್ನ ಪ್ರತಿಷ್ಠೆಯನ್ನು ಹಾಳುಮಾಡುವ ದುರುದ್ದೇಶದಿಂದ ನಾನು ವಿರೋಧ ಪಕ್ಷವನ್ನು ಸಂಪರ್ಕಿಸುತ್ತಿರುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ೪೨ರ ಹರೆಯದ ಪೈಲಟ್ ಬೆಳಗ್ಗೆ ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಬೆಂಗಳೂರು: ರಿಲಯನ್ಸ್ ಜಿಯೊ ಪ್ಲಾಟ್ಫಾರ್ಮ್ಸ್ನಲ್ಲಿ ತಂತ್ರಜ್ಞಾನ ಕ್ಷೇತ್ರ ದೊಡ್ಡ ಸಂಸ್ಥೆಯಾಗಿರುವ ಗೂಗಲ್ ಹೂಡಿಕೆ ಮಾಡಿದೆ. ’ಗೂಗಲ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜಿಯೊ ಪ್ಲಾಟ್ಫಾರ್ಮ್ಸ್ನಲ್ಲಿ ರೂ. ೩೩,೭೩೭ ಕೋಟಿ ಹೂಡಿಕೆ ಮಾಡುವ ಮೂಲಕ ಶೇ ೭.೭ರಷ್ಟು ಪಾಲುದಾರಿಕೆ ಪಡೆಯಲಿದೆ’ ಎಂದು ಮುಕೇಶ್ ಅಂಬಾನಿ 2020 ಜುಲೈ 15ರ ಬುಧವಾರ ಹೇಳಿದರು. ರಿಲಯನ್ಸ್ ಇಂಡಸ್ಟ್ರೀಸ್ನ ೪೩ನೇ ವಾರ್ಷಿಕ ಸಭೆಯಲ್ಲಿ (ಎಜಿಎಂ) ಷೇರುದಾರರನ್ನು ಉದ್ದೇಶಿ ಮುಕೇಶ್ ಅಂಬಾನಿ ಮಾತನಾಡಿದರು. ದೇಶೀಯ ನಿರ್ಮಿತ ೫ಜಿ ನೆಟ್ವರ್ಕ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಜಿಯೊ ಪ್ಲಾಟ್ಫಾರ್ಮ್ ಸುಮಾರು ೨೦ ಸ್ಟಾರ್ಟ್-ಅಪ್ ಪಾಲುದಾರರೊಂದಿಗೆ ಜಾಗತಿಕ ಗುಣಮಟ್ಟದ ೪ಜಿ ಮತ್ತು ೫ಜಿ ತಂತ್ರಜ್ಞಾನಗಳ ಅಭಿವೃದ್ಧಿ ಪಡಿಸುವ ಸಾಮರ್ಥ್ಯ ಹೊಂದಿದೆ. ಕ್ಲೌಡ್ ಕಂಪ್ಯೂಟಿಂಗ್, ಸಾಧನಗಳು, ಒಎಸ್, ಬಿಗ್ ಡೇಟಾ, ಕೃತಕ ಬುದ್ಧಿಮತ್ತೆ (ಎಐ), ಎಆರ್/ವಿಆರ್, ಬ್ಲಾಕ್ಚೈನ್ ಸೇರಿದಂತೆ ಹಲವು ತಂತ್ರಜ್ಞಾನ ಅಭಿವೃದ್ಧಿ ಪಡುಸುವ ಸಾಮರ್ಥ್ಯ ಇರುವುದಾಗಿ ಅಂಬಾನಿ ಹೇಳಿದ್ದಾರೆ. ರಿಲಯನ್ಸ್ ಕಂಪನಿ ಹಕ್ಕಿನ ಷೇರುಗಳ ವಿತರಣೆ ಹಾಗೂ ಜಿಯೊ ಪ್ಲಾಟ್ಫಾರ್ಮ್ಸ್ನಲ್ಲಿ ವಿದೇಶಿ ಕಂಪನಿಗಳ ಹೂಡಿಕೆಗಳ ಮೂಲಕ ಒಟ್ಟು ರೂ. ೨,೧೨,೮೦೯ ಕೋಟಿ ಸಂಗ್ರಹಿಸಿದೆ. ಜಿಯೊ ೫ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲವನ್ನೂ ವಿನ್ಯಾಸಗೊಳಿಸಿದೆ ಹಾಗೂ ಅಭಿವೃದ್ಧಿ ಪಡಿಸಿದೆ. ೫ಜಿ ತರಂಗಾಂತರ ಲಭ್ಯವಾಗುತ್ತಿದ್ದಂತೆ ಅದರ ಪರೀಕ್ಷೆ ನಡೆಯಲಿದೆ. ಹಾಗೂ ಮುಂದಿನ ವರ್ಷದಲ್ಲಿ ಬಳಕೆ ತೆರೆದುಕೊಳ್ಳಲಿದೆ. ಮುಂದಿನ ಮೂರು ವರ್ಷಗಳಲ್ಲಿ ಜಿಯೊ ೫೦ ಕೋಟಿ ಮೊಬೈಲ್ ಬಳಕೆದಾರರೊಂದಿಗೆ ಸಂಪರ್ಕ ಹೊಂದಿರಲಿದೆ ಎಂದು ಮುಕೇಶ್ ಅಂಬಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್-ಎಡಿಬಿ) ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ 2020 ಜುಲೈ 15ರ ಬುಧವಾರ ಬುಧವಾರ ಮಧ್ಯಾಹ್ನ ಪ್ರಕಟಿಸಿತು. ೬೨ ವರ್ಷದ ಶ್ರೀ ಲವಾಸಾ ಅವರು ಶೀಘ್ರದಲ್ಲೇ ಚುನಾವಣಾ ಆಯೋಗದ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಲವಾಸಾ ಅವರು ೨೦೧೮ ರ ಜನವರಿಯಲ್ಲಿ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದು, ಅವರ ಅಧಿಕಾರಾವಧಿಯಲ್ಲಿ ಇನ್ನೂ ಎರಡು ವರ್ಷಗಳು ಉಳಿದಿವೆ. ಮುಂದಿನ ವರ್ಷ ಏಪ್ರಿಲ್ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ನಿವೃತ್ತಿಯೊಂದಿಗೆ ಸಿಇಸಿ ಹುದ್ದೆಗೆ ಏರುವ ಮೊದಲ ಸ್ಥಾನದಲ್ಲಿ ಅವರು ಇದ್ದಾರೆ. "ಲವಾಸಾ ಅವರು ಭಾರತೀಯ ನಾಗರಿಕ ಸೇವೆಯಲ್ಲಿ ಸುದೀರ್ಘ ಮತ್ತು ವಿಶಿಷ್ಟ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಪ್ರಸ್ತುತ ಭಾರತದ ಚುನಾವಣಾ ಆಯುಕ್ತರಲ್ಲಿ ಒಬ್ಬರಾಗಿದ್ದಾರೆ ಮತ್ತು ಈ ಹಿಂದೆ ಹಲವಾರು ಹಿರಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ" ಎಂದು ಎಡಿಬಿ (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್) ಹೇಳಿಕೆ ತಿಳಿಸಿದೆ. "ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ರಾಜ್ಯ ಮತ್ತು ಫೆಡರಲ್ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅವರು ವ್ಯಾಪಕ ಅನುಭವ ಹೊಂದಿದ್ದಾರೆ, ಸಾರ್ವಜನಿಕ ನೀತಿ ಮತ್ತು ಖಾಸಗಿ ವಲಯದ ಪಾತ್ರದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ" ಎಂದೂ ಬ್ಯಾಂಕ್ ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ೧೯೬೨ರ ಭಾರತ-ಚೀನಾ ಸಮರದ ಬಳಿಕ ಇದೇ ಮೊದಲ ಬಾರಿಗೆ ಗಂಭಿರಗೊಂಡಿರುವ ಲಡಾಕ್ ಗಡಿ ಬಿಕ್ಕಟ್ಟು ಮತ್ತು ಉದ್ವಿಗ್ನತೆಗಳ ಮಧ್ಯೆ, ತನ್ನ ನಿರ್ಣಾಯಕ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸಲು ಅಗತ್ಯವಿರುವ ಶಸ್ತ್ರಾಸ್ತ್ರಗಳು ಮತ್ತು ೩೦೦ ಕೋಟಿ ರೂ.ಗಳ ಮೌಲ್ಯದ ಉಪಕರಣಗಳನ್ನು ತುರ್ತಾಗಿ ಖರೀದಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಸಶಸ್ತ್ರ ಪಡೆಗಳಿಗೆ ಕೇಂದ್ರ ಸರ್ಕಾರವು 2020 ಜುಲೈ 15ರ ಬುಧವಾರ ಅಧಿಕಾರ ನೀಡಿತು. "ಇದು ಖರೀದಿಯ ಸಮಯವನ್ನು ಕುಗ್ಗಿಸುತ್ತದೆ ಮತ್ತು ಆರು ತಿಂಗಳಲ್ಲಿ ಆದೇಶಗಳನ್ನು ನೀಡುವುದನ್ನು ಖಚಿತಪಡಿಸುತ್ತದೆ ಮತ್ತು ಒಂದು ವರ್ಷದೊಳಗೆ ವಿತರಣೆ ಪ್ರಾರಂಭವಾಗುತ್ತದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯ (ಡಿಎಸಿ) ವಿಶೇಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. "ಉತ್ತರ ಗಡಿಗಳಲ್ಲಿನ ಹಾಲಿ ಪರಿಸ್ಥಿತಿ ಮತ್ತು ನಮ್ಮ ಗಡಿಗಳ ರಕ್ಷಣೆಗಾಗಿ ಸಶಸ್ತ್ರ ಪಡೆಗಳನ್ನು ಬಲಪಡಿಸುವ ಅಗತ್ಯತೆ ಮತ್ತು ಭದ್ರತಾ ಪರಿಸರವನ್ನು ಪರಿಗಣಿಸಿ" ವಿಶೇಷ ಸಭೆ ಕರೆಯಲಾಗಿತ್ತು ಎಂದು ಸಚಿವಾಲಯ ಹೇಳಿದೆ. ೩೮,೯೦೦ ಕೋಟಿ ರೂ.ಗಳ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಖರೀದಿಸಲು ಡಿಎಸಿ ಜುಲೈ ೨ರ ಗುರುವಾರ ಅನುಮೋದನೆ ನೀಡಿದೆ. ಈ ಖರೀದಿಗಳಲ್ಲಿ ಯುದ್ಧ ವಿಮಾನಗಳ ಕೊರತೆಯನ್ನು ಎದುರಿಸುತ್ತಿರುವ ಭಾರತೀಯ ವಾಯುಪಡೆಗಾಗಿ (ಐಎಎಫ್) ೩೩ ಹೊಸ ಫೈಟರ್ ಜೆಟ್ಗಳು ಸೇರಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನೋಯ್ಡಾ: ಅವರಿಬ್ಬರೂ ತದ್ರೂಪಿ ಅವಳಿಗಳು. ಇಬ್ಬರಲ್ಲೂ ಅಧ್ಭುತ ಸಾಮ್ಯತೆ. ವಿಶೇಷವೆಂದರೆ ಸಿಬಿಎಸ್ಇ ನಡೆಸಿದ ೧೨ನೇ ತರಗತಿಯ ಪರೀಕ್ಷೆಯಲ್ಲೂ ಅವರು ಸಮಾನ ಅಂಕಗಳನ್ನು ಗಳಿಸಿದ್ದಾರೆ. ಮಂಡಳಿ ಪರೀಕ್ಷೆಯಲ್ಲಿ ಇಬ್ಬರಿಗೂ ತಲಾ ೯೮.೫ ಅಂಕಗಳು ಬಂದಿವೆ. ದೆಹಲಿ ಸಮೀಪದ ನೋಯ್ಡಾ ನಿವಾಸಿಗಳಾದ ಮಾನಸಿ ಮತ್ತು ಮಾನ್ಯ ಅವಳಿ ಒಡಹುಟ್ಟಿದವರಾಗಿದ್ದು ಗ್ರೇಟರ್ ನೋಯ್ಡಾದ ಆಸ್ಟರ್ ಪಬ್ಲಿಕ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಅವರು ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ತಲಾ ೯೮, ಮತ್ತು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ ತಲಾ ೯೫ ಅಂಕಗಳನ್ನು ಗಳಿಸಿದ್ದಾರೆ. "ಎಲ್ಲರೂ ಒಂದೇ ರೀತಿಯ ನೋಟಕ್ಕಾಗಿ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ನಮ್ಮ ಹೆಸರುಗಳು ಮಾತ್ರ ನಮ್ಮನ್ನು ಪ್ರತ್ಯೇಕಿಸುತ್ತವೆ. ನಾವು ಉತ್ತಮ ಅಂಕ ಗಳಿಕೆ ಬಗ್ಗೆ ವಿಶ್ವಾಸ ಹೊಂದಿದ್ದೆವು. ಆದರೆ ಒಂದೇ ರೀತಿಯ ಅಂಕಗಳನ್ನು ಗಳಿಸುವ ನಿರೀಕ್ಷೆ ಇರಲಿಲ್ಲ. ಪರೀಕ್ಷೆಗಳ ನಂತರ ನಮ್ಮ ಸಾಧನೆಯನ್ನು ವಿಶ್ಲೇಷಿಸಿದಾಗ, ಮಾನ್ಯ ಹೆಚ್ಚು ಅಂಕ ಗಳಿಸಬಹುದು ಎಂದು ನಾವು ಲೆಕ್ಕ ಹಾಕಿದ್ದೆವು’ ಎಂದು ಮಾನಸಿ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ತಿಳಿಸಿದರು. ಒಡಹುಟ್ಟಿದವರಿಬ್ಬರೂ ಈಗ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಯೋಜಿಸುತ್ತಿದ್ದಾರೆ ಮತ್ತು ಜೆಇಇ ಮೇನ್ಸ್ಗೆ ಹಾಜರಾಗಲು ಕಾಯುತ್ತಿದ್ದಾರೆ, ಪರೀಕ್ಷೆಯು ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸೆಪ್ಟೆಂಬರಿಗೆ ಮುಂದೂಡಿಕೆಯಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment