ನಾನು ಮೆಚ್ಚಿದ ವಾಟ್ಸಪ್

Monday, July 27, 2020

ಇಂದಿನ ಇತಿಹಾಸ History Today ಜುಲೈ 26

ಇಂದಿನ ಇತಿಹಾಸ  History Today ಜುಲೈ 26

2020: ನವದೆಹಲಿ: ಕಾರ್ಗಿಲ್ ಸಮರದ ವೇಳೆಯಲ್ಲಿ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯವನ್ನು 2020 ಜುಲೈ 26ರ ಭಾನುವಾರ ನೆನಪಿಸಿ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಯೋಧರ ನೈತಿಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾತನಾಡುವಂತೆ ಮತ್ತು ಕೆಲಸ ಮಾಡುವಂತೆ ಜನರಿಗೆ ಸೂಚಿಸಿದರು. ‘ಯುದ್ಧಗಳು ಗಡಿಗಳಲ್ಲಿ ಮಾತ್ರವೇ ನಡೆಯುವುದಿಲ್ಲ, ದೇಶದ ಒಳಗೂ ಹಲವಾರು ರಂಗಗಳಲ್ಲಿ ನಡೆಯುತ್ತವೆ ಎಂದು ಅವರು ನುಡಿದರು. ೨೧ನೇ ಕಾರ್ಗಿಲ್ ವಿಜಯದಿನದಂದೇ ಕಾಕತಾಳೀಯವಾಗಿ ಬಂದ ತಮ್ಮಮನ್ ಕಿ ಬಾತ್ ಬಾನುಲಿ ಕಾರ್‍ಯಕ್ರಮದಲ್ಲಿ ಕಾರ್ಗಿಲ್ ಸಮರದಲ್ಲಿ ಪ್ರದರ್ಶಿಸಿದ ಕೆಚ್ಚೆದೆಯನ್ನು ಪ್ರಧಾನಿ ನೆನಪು ಮಾಡಿಕೊಂಡರು. ಕಾರ್ಗಿಲ್ ಬಿಕ್ಕಟ್ಟಿಗಾಗಿ ಪಾಕಿಸ್ಥಾನವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿನವದೆಹಲಿಯ ಸ್ನೇಹಹಸ್ತಕ್ಕೆ ಪಾಕಿಸ್ತಾನ ಬೆನ್ನ ಹಿಂದಿನಿಂದ ಇರಿಯಿತು ಎಂದು ಹೇಳಿದರು. ಭಾರತೀಯ ಯೋಧರು ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಿದ ಬಳಿಕ ೧೯೯೯ರ ಜುಲೈ ೨೬ರಂದು ಕಾರ್ಗಿಲ್ ಕದನ ಮುಗಿದಿದೆ ಎಂದು ಘೋಷಿಸಲಾಗಿತ್ತು. ತಮ್ಮ ಹೇಳಿಕೆಗಳು ಮತ್ತು ವರ್ತನೆ ಯೋಧರಿಗೆ ಗೌರವ ಸಲ್ಲಿಸುವಂತಿರಬೇಕು ಮತ್ತು ಅವರ ಸ್ಥೈರ್‍ಯವನ್ನು ವೃದ್ಧಿಸುವಂತಿರಬೇಕು ಎಂಬುದನ್ನು ಜನರು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದ ಪ್ರಧಾನಿರಾಷ್ಟ್ರೀಯ ಏಕತೆಗಾಗಿ ಪ್ರತಿಯೊಬ್ಬರೂ ತಮಗೆ ಸಾಧ್ಯವಿರುವುದರಲ್ಲವನ್ನೂ ಮಾಡಬೇಕು ಎಂದು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ).

2020: ಜೈಪುರ/ ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಒಂದು ಮಸೂದೆ ಸೇರಿದಂತೆ ವಿವಿಧ ಮಸೂದೆಗಳ ಚರ್ಚೆಯ ಸಲುವಾಗಿ ಜುಲೈ ೩೧ರಿಂದ ವಿಧಾನಸಭೆಯ ಅಧಿವೇಶನ ಕರೆಯುವಂತೆ ಪರಿಷ್ಕೃತ ಮನವಿಯೊಂದನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು 2020 ಜುಲೈ 26ರ ಭಾನುವಾರ ರಾಜ್ಯಪಾಲ ಕಲರಾಜ್ ಮಿಶ್ರ ಅವರಿಗೆ ಕಳುಹಿಸಿದರು. ಆದರೆ ಪರಿಷ್ಕೃತ ಪ್ರಸ್ತಾವದಲ್ಲಿ ಗೆಹ್ಲೋಟ್ ಅವರು ಸದನದಲ್ಲಿ ಬಲಾಬಲ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪವನ್ನೂ ಮುಂದಿಟ್ಟಿಲ್ಲ ಎಂದು ವರದಿಗಳು ಹೇಳಿದವು. ಬಂಡಾಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಬೆಂಬಲಿಸುತ್ತಿರುವ ಶಾಸಕರ ಬಣದ ಬಂಡಾಯದ ಪರಿಣಾಮವಾಗಿ ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ತನ್ನ ಸಂಖ್ಯಾಬಲದ ಬಗ್ಗೆ ವಿಶ್ವಾಸ ಹೊಂದಿರುವ ಗೆಹ್ಲೋಟ್ ಶಿಬಿರವು ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸಲು ಸದನದಲ್ಲಿ ಬಲಾಬಲ ಪರೀಕ್ಷೆ ಅತ್ಯುತ್ತಮ ಎಂದು ಭಾವಿಸಿದೆ. ಆದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ರಾಜ್ಯಪಾಲರು ಅಧಿವೇಶನ ನಡೆಸಲು ವಿಳಂಬ ಮಾಡುತ್ತಿದ್ದಾರೆ ಎಂದು ಗೆಹ್ಲೋಟ್ ಬಣ ಆಪಾದಿಸಿದೆ. ಏನಿದ್ದರೂ, ಗೆಹ್ಲೋಟ್ ಬಣದ ಆರೋಪವನ್ನು ನಿರಾಕರಿಸಿರುವ ರಾಜ್ಯಪಾಲ ಕಲರಾಜ್ ಮಿಶ್ರ ಅವರು ಅಧಿವೇಶನ ಕರೆಯಲು ತಾವು ಸಾಂವಿಧಾನಿಕ ಮಾನದಂಡಗಳನ್ನು ಅನುಸರಿಸುವುದಾಗಿ ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಭಾರತಕ್ಕೆ ಕಿರಿ ಕಿರಿ ಉಂಟು ಮಾಡುವ ಉದ್ದೇಶದಿಂದ ಭೂತಾನ್ ಜೊತೆಗೆ ಹೊಸ ತಗಾದೆ ಆರಂಭಿಸಿರುವ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರವಿಸ್ತರಣಾ ತಂತ್ರಗಾರಿಕೆ ಸ್ವತಃ ಚೀನಾಕ್ಕೆ ತಿರುಗುಬಾಣವಾಗಿದ್ದು, ಹಿಮಾಲಯದ ಪುಟ್ಟ ರಾಜ್ಯ ಭೂತಾನ್ ಭಾರತಕ್ಕೆ ಸಮೀಪವಾಗುವ ಲಕ್ಷಣಗಳು ಕಂಡು ಬಂದಿವೆ. ೨೦೧೭ರ ಡೊಕ್ಲಾಮ್ ಬಿಕ್ಕಟ್ಟಿನ ವೇಳೆಯಲ್ಲಿ ಭಾರತ ಮತ್ತು ಚೀನಾದ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಥಿಂಪು ಚೀನಾ ಅಥವಾ ಭಾರತದ ಜೊತೆಗಿನ ಸಾಮೀಪ್ಯದ ಬಗ್ಗೆ ಮರುಚಿಂತನೆ ನಡೆಸಿತ್ತು ಎಂದು ಸುದ್ದಿ ಮೂಲಗಳು  2020 ಜುಲೈ 26ರ ಭಾನುವಾರ ತಿಳಿಸಿವೆ. ಬೌಗೋಳಿಕವಾಗಿ ಭಾರತ ಮತ್ತು ಚೀನಾದ ಮಧ್ಯೆ ಇರುವ ಭೂತಾನ್, ತನ್ನ ಗಡಿಯಾಚೆಗಿನ ಎರಡು ದೇಶಗಳ ಜೊತೆಗೆ ಸಮತೋಲನವನ್ನು ಕಾಪಾಡಿಕೊಂಡು ಬರಬೇಕು ಎಂಬುದಾಗಿ ಯೋಚಿಸಿತ್ತು. ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಹೇಳದೇ ಇದ್ದರೂ ಕಳೆದ ಎರಡು ಮೂರು ವರ್ಷಗಳಿಂದ ಭೂತಾನ್ ಅರಸೊತ್ತಿಗೆ ಇಂತಹ ಯೋಚನೆಯತ್ತ ಹೆಚ್ಚು ವಾಲಿತ್ತು ಎಂದು ಮೂಲಗಳು ಹೇಳಿವೆ. ಆದರೆ, ಕಳೆದ ಒಂದು ತಿಂಗಳಿನಿಂದ ಈಚೆಗೆ, ಥಿಂಪುವಿನ ಧೋರಣೆಯಲ್ಲಿ ಬದಲಾವಣೆ ಆಗಿದೆ. ಇದಕ್ಕೆ ಕಾರಣವಾದದ್ದು ಸಕ್ತೆಂಗ್ ವನ್ಯಜೀವಿ ಅಭಯಾರಣ್ಯಕ್ಕೆ ಆರ್ಥಿಕ ನೆರವು ನೀಡುವಂತೆ ಥಿಂಪು ಅಮೆರಿಕ ಮೂಲದ ಬಹುರಾಷ್ಟ್ರೀಯ ನಿಧಿಯಾಗಿರುವ ಜಾಗತಿಕ ಪರಿಸರ ಸವಲತ್ತು (ಗ್ಲೋಬಲ್ ಎನ್ವಿರಾನ್‌ಮೆಂಟ್ ಫೆಸಿಲಿಟಿ) ಜೊತೆಗಿನ ಸಭೆಯಲ್ಲಿ ಕೋರಿದಾಗ ಚೀನಾ ಪ್ರದರ್ಶಿಸಿದ ವರ್ತನೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಹೊಸದಾಗಿ ೪೮,೦೦೦ ಪ್ರಕರಣಗಳೊಂದಿಗೆ ಭಾರತದ ಕೊರೋನಾವೈರಸ್ ಸೋಂಕಿತರ ಸಂಖ್ಯೆ 2020 ಜುಲೈ 26ರ ಭಾನುವಾರ ೧೩.೮೫ ಲಕ್ಷಕ್ಕೆ ಏರಿದೆ. ಇದೇ ವೇಳೆಗೆ ಗುಣಮುಖರಾಗಿ ಚೇತರಿಸಿದವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಿದ್ದು, ಚೇತರಿಕೆ ಪ್ರಮಾಣ ಶೇಕಡಾ ೬೪ಕ್ಕೆ ಏರಿದೆ. ೬೮ ದಿನಗಳ ಕಠಿಣ ದಿಗ್ಬಂಧನದ (ಲಾಕ್ ಡೌನ್) ಬಳಿಕ ವಿಧಿಸಲಾಗಿರುವ ಅನ್ಲಾಕ್ . ಜುಲೈ ೩೧ರಂದು ಮುಕ್ತಾಯಗೊಳ್ಳಲಿದ್ದು, ಮುಂದಿನ ವಾರ ನಿರ್ಬಂಧಗಳು ಇನ್ನಷ್ಟು ಸಡಿಲಿಕೆಯಾಗುವ ನಿರೀಕ್ಷೆ ಇದೆ. ಆದರೆ ಮುಂದಿನ ಹಂತದಲ್ಲಿ ಶಾಲೆಗಳನ್ನು ಪುನಾರಂಭಿಸಲು ಕೇಂದ್ರವು ಅವಕಾಶ ನೀಡುವ ಸಾಧ್ಯತೆ ಇಲ್ಲ ಎಂದು ಸುದ್ದಿ ಮೂಲಗಳು ತಿಳಿಸಿವೆ. ಜಿಮ್‌ಗಳು, ಈಜುಕೊಳಗಳು, ಮೆಟ್ರೋ ರೈಲು ಸೇವೆಗಳು ಮತ್ತು ದೊಡ್ಡ ಸಭೆಗಳ ಮೇಲಿನ ನಿಷೇಧ ಮುಂದುವರೆಯಬಹುದು ಎಂದು ಮೂಲಗಳು ಹೇಳಿವೆ. ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆ ಪ್ರಕಾರ ದೇಶವು ಶನಿವಾರ ಮತ್ತು ಭಾನುವಾರದ ನಡುವೆ ೪೮,೬೬೧ ಹೊಸ ಪ್ರಕರಣಗಳು ಮತ್ತು ೭೦೫ ಸಾವುಗಳನ್ನು ದಾಖಲಿಸಿದೆ. ಇದರೊಂದಿಗೆ ಸೋಂಕಿನ ಸಂಖ್ಯೆ  ೧೩,೮೫,೫೨೨ ಕ್ಕೆ ತಲುಪಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ರಾಜ್ಯ ಸರ್ಕಾರಗಳನ್ನು ಉರುಳಿಸುವ ಬಿಜೆಪಿ ಸಂಚಿನ ವಿರುದ್ಧ ರಾಷ್ಟ್ರಾದ್ಯಂತ ರಾಜಭವನಗಳ ಮುಂದೆ ಜುಲೈ ೨೭ರ ಸೋಮವಾರ ಧರಣಿ ನಡೆಸಲು ಕಾಂಗ್ರೆಸ್ ಪಕ್ಷವು ಕರೆ ಕೊಟ್ಟಿದ್ದು, ರಾಜಸ್ಥಾನದಲ್ಲಿ ರಾಜ್ಯಪಾಲ ಕಲರಾಜ್ ಮಿಶ್ರ ಅವರು 2020 ಜುಲೈ 26ರ ಭಾನುವಾರ ತಮ್ಮ ಅಧಿಕೃತ ಕಚೇರಿಯಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಇದೇ ವೇಳೆಯಲ್ಲಿ ಅವರು ರಾಜ್ಯದ ಕೊರೋನಾ ಸಾಂಕ್ರಾಮಿಕ ಸ್ಥಿತಿಗತಿ ಬಗೆಗೂ ಚರ್ಚಿಸಿದರು. ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮತ್ತು  ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಮಧ್ಯೆ ನಡೆಯುತ್ತಿರುವ ಗಂಭೀರ ರಾಜಕೀಯ ಅಧಿಕಾರದ ಹೋರಾಟದ ಮಧ್ಯೆ, ಉಂಟಾಗಿರುವ ತೀವ್ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸುಮಾರು ೧೦೦ ಮಂದಿ ಕಾಂಗ್ರೆಸ್ ಶಾಸಕರು ಗೆಹ್ಲೋಟ್ ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ರಾಜಭವನದ ಹುಲ್ಲು ಹಾಸಿನ ಮೇಲೆ ಗಂಟೆಗಳ ಕಾಲ ಧರಣಿ ನಡೆಸಿದ್ದರು. ರಾಜ್ಯಪಾಲರು ತತ್ ಕ್ಷಣ ವಿಧಾನಸಭೆ ಅಧಿವೇಶನ ಕರೆದು ಬಲಾಬಲ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 26 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment