ಇಂದಿನ ಇತಿಹಾಸ History
Today
ಜುಲೈ 18
2020: ನವದೆಹಲಿ: ಅಯೋಧ್ಯಾ ರಾಮಮಂದಿರ ನಿರ್ಮಾಣ ಕಾರ್ಯವು ಆಗಸ್ಟ್ ೩ ಅಥವಾ ೫ರಂದು, ಪ್ರಧಾನಿ ನರೇಂದ್ರ ಮೋದಿ ಅವರು 'ಭೂಮಿ ಪೂಜೆಗೆ’ ದಿನಾಂಕ ಆಯ್ಕೆ ಮಾಡಿದ ಬಳಿಕ ಆರಂಭವಾಗುವ ಸಾಧ್ಯತೆ ಇದೆ ಎಂದು ಅಯೋಧ್ಯಾ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕಾರಿಯೊಬ್ಬರು 2020 ಜುಲೈ 18ರ ಶನಿವಾರ ಇಲ್ಲಿ ತಿಳಿಸಿದರು. ‘ನಾವು ಪ್ರಧಾನಿಯವರಿಗೆ ’ಶಿಲಾನ್ಯಾಸ’ಕ್ಕಾಗಿ ಆಯ್ಕೆ ಮಾಡಲು ಆಗಸ್ಟ್ ೩ ಅಥವಾ ಆಗಸ್ಟ್ ೫ ಈ ಎರಡು ದಿನಾಂಕಗಳನ್ನು ಕಳುಹಿಸಿದ್ದೇವೆ. ಅವರು ಒಪ್ಪಿಗೆ ನೀಡುವ ದಿನಾಂಕದಂದು ನಿರ್ಮಾಣ ಪ್ರಾರಂಭವಾಗಲಿದೆ’ ಎಂದು ಟಸ್ಟಿನ ಕಾಮೇಶ್ವರ ಚೌಪಾಲ್ ಹೇಳಿದರು. ನಿರ್ಮಾಣದ ಪ್ರಾರಂಭದ ದಿನಾಂಕವನ್ನು ನಿರ್ಧರಿಸಲು ಟ್ರಸ್ಟ್ ಶನಿವಾರ ಅಯೋಧ್ಯೆಯಲ್ಲಿ ಸಭೆ ಸೇರಿತ್ತು. ರಾಮ ಮಂದಿರದ ಅಡಿಪಾಯಕ್ಕಾಗಿ ಮಣ್ಣಿನ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ ಎಂದು ಅದು ಹೇಳಿತು. "ಮಣ್ಣಿನ ಪರೀಕ್ಷೆಗಾಗಿ ಮಾದರಿಗಳನ್ನು ಲಾರ್ಸೆನ್ ಮತ್ತು ಟೂಬ್ರೊ ಸಂಗ್ರಹಿಸುತ್ತಿದೆ. ದೇವಾಲಯದ ಅಡಿಪಾಯದ ರೇಖಾಚಿತ್ರಗಳನ್ನು ೬೦ ಮೀಟರ್ ಕೆಳಗಿನ ಮಣ್ಣಿನ ಬಲದ ಆಧಾರದ ಮೇಲೆ ಮಾಡಲಾಗುವುದು. ಚಿತ್ರಕಲೆಯ ಆಧಾರದ ಮೇಲೆ ಅಡಿಪಾಯವನ್ನು ಹಾಕುವ ಕೆಲಸ ಪ್ರಾರಂಭವಾಗುತ್ತದೆ’ ಎಂದು ಟ್ರಸ್ಟಿನ ಪ್ರಧಾನ ಕಾರ್‍ಯದರ್ಶಿ ಚಂಪತ್ ರಾಯ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಒಂದೇ ದಿನದಲ್ಲಿ ೩೪,೮೮೪ ಜನರಿಗೆ ಹೊಸದಾಗಿ ಕೊರೋನಾವೈರಸ್ ಸೋಂಕು ತಗಲುವುದರೊಂದಿಗೆ, ಭಾರತದ ಕೋವಿಡ್ ೧೯ ಪ್ರಕರಣಗಳ ಸಂಖ್ಯೆ 2020 ಜುಲೈ 18ರ ಶನಿವಾರ ೧೦,೩೮,೭೧೬ಕ್ಕೆ ಏರಿತು. ಆದರೆ ಇದೇ ವೇಳೆಗೆ ಚೇತರಿಸುವವರ ಸಂಖ್ಯೆಯೂ ಗಣನೀಯವಾಗಿ ಏರಿದ್ದು ಒಟ್ಟು ಸೋಂಕಿತರ ಪೈಕಿ ೬,೫೩,೭೫೦ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ. ಒಂದೇ ದಿನದಲ್ಲಿ ೬೭೧ ಮಂದಿ ಸಾವನ್ನಪ್ಪುವುದರೊಂದಿಗೆ ಕೋವಿಡ್-೧೯ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ೨೬,೨೭೩ಕ್ಕೆ ಏರಿಕೆಯಾಗಿದೆ ಎಂದು ಶನಿವಾರ ಬೆಳಗ್ಗೆ ೮ ಗಂಟೆಗೆ ನವೀಕರಿಸಲಾಗಿರುವ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ. ಪ್ರಸ್ತುತ, ದೇಶದಲ್ಲಿ ೩,೫೮,೬೯೨ ಸಕ್ರಿಯ ಪ್ರಕರಣಗಳಿವೆ. ಚೇತರಿಸಿದವರ ಸಂಖ್ಯೆ ಏರುವುದರೊಂದಿಗೆ ಚೇತರಿಕೆಯ ಪ್ರಮಾಣ ಶೇಕಡಾ ೬೨.೯೪ಕ್ಕೇ ಏರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋವಿಡ್- ೧೯ ಪ್ರಕರಣಗಳ ಸಂಖ್ಯೆ ೩೦,೦೦೦ ಕ್ಕಿಂತ ಹೆಚ್ಚಾಗಿರುವುದು ಶನಿವಾರ ಸತತ ಮೂರನೇ ದಿವಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ, ಜುಲೈ ೧೭ ರವರೆಗೆ ಒಟ್ಟು ೧,೩೪,೩೩,೭೪೨ ಮಾದರಿಗಳನ್ನು ಕೊರೋನಾ ಸಲುವಾಗಿ ಪರೀಕ್ಷಿಸಲಾಗಿದ್ದು, ೩,೬೧,೦೨೪ ಮಾದರಿಗಳನ್ನು ಶುಕ್ರವಾರ ಒಂದೇ ದಿನ ಪರೀಕ್ಷಿಸಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಹದಿನೆಂಟು ಮಂದಿ ಬಂಡುಕೋರ ಕಾಂಗ್ರೆಸ್ ಶಾಸಕರು ಸಚಿನ್ ಪೈಲಟ್ ಜೊತೆಗೆ ಹರಿಯಾಣ ಮಾನೆಸರದ ಎರಡು ರೆಸಾರ್ಟ್‌ಗಳಲ್ಲಿ ಇದ್ದಾರೆಂಬ ಶಂಕೆಯಲ್ಲಿ ಅಲ್ಲಿಗೆ ತೆರಳಿದ್ದ ರಾಜಸ್ಥಾನದ ಪೊಲೀಸ್ ಅಧಿಕಾರಿಗಳ ತಂಡವು ಅಲ್ಲಿ ಬಂಡಾಯ ಶಾಸಕರು ಪತ್ತೆಯಾಗದ ಹಿನ್ನೆಲೆಯಲ್ಲಿ ಬರಿಗೈಯಲ್ಲಿ ರಾಜಸ್ಥಾನಕ್ಕೆ ವಾಪಸಾಗಿದ್ದಾರೆ ಎಂದು ಸುದ್ದಿ ಮೂಲಗಳು 2020 ಜುಲೈ 18ರ ಶನಿವಾರ ತಿಳಿಸಿದವು. ಐಪಿಎಸ್ ವಿಕಾಸ್ ಶರ್ಮ ನೇತೃತ್ವದಲ್ಲಿ ಮಾನೆಸರಕ್ಕೆ ಆಗಮಿಸಿದ್ದ ಎಸ್‌ಒಜಿ ತಂಡವನ್ನು ಹರಿಯಾಣ ಪೊಲೀಸರು ಮೊದಲಿಗೆ ತಡೆದರೂ ಬಳಿಕ ಒಳಕ್ಕೆ ಬಿಟ್ಟಿದ್ದರು. ತಂಡವು ಶಾಸಕ ಭನ್ವರ್ ಲಾಲ್ ಶರ್ಮ ಅವರ ಧ್ವನಿ ಮಾದರಿ ದಾಖಲಿಸುವ ಸಲುವಾಗಿ ಮತ್ತು ಅವರ ವಿರುದ್ಧ ವಾರಂಟ್ ಜಾರಿಗೊಳಿಸುವ ಸಲುವಾಗಿ ಅಲ್ಲಿಗೆ ತೆರಳಿತ್ತು. ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ನಡೆದಿದೆ ಎನ್ನಲಾದ ಷಡ್ಯಂತ್ರಕ್ಕೆ ಸಂಬಂಧಿಸಿದ ಎರಡು ಆಡಿಯೋ ಕ್ಲಿಪ್‌ಗಳ ಬಗ್ಗೆ ತನಿಖೆ ನಡೆಸುವ ಸಲುವಾಗಿ ವಿಶೇಷ ಕಾರ್ಯಾಚರಣಾ ತಂಡವು (ಎಸ್‌ಒಜಿ) ಹರಿಯಾಣಕ್ಕೆ ತೆರಳಿತ್ತು. ಆದಾಗ್ಯೂ ರೆಸಾರ್ಟಿನಲ್ಲಿ ಬಂಡಾಯ ಶಾಸಕರು ಪತ್ತೆಯಾಗಲಿಲ್ಲ. ಹರಿಯಾಣ ಪೊಲೀಸರು ಸಂಪೂರ್ಣವಾಗಿ ಸಹಕರಿಸಲಿಲ್ಲ ಎಂದು ಎಸ್‌ಒಜಿ ಅಧಿಕಾರಿಗಳು ಬಳಿಕ ಪ್ರತಿಪಾದಿಸಿದರು. ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸೋರಿಕೆಯಾದ ಆಡಿಯೋ ಕ್ಲಿಪ್‌ನ್ನು ಉಲ್ಲೇಖಿಸಿ ರಾಜಸ್ಥಾನದಲ್ಲಿ ಅಶೋಕ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ನಡೆದಿರುವ ಯತ್ನಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹಾಗೂ ಜೋಧಪುರದ ಸಂಸದ ಗಜೇಂದ್ರ ಶೆಖಾವತ್ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಮತ್ತು ಆರೋಪಿತ ಕುದುರೆವ್ಯಾಪಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರsss ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಸಚಿನ್ ಪೈಲಟ್ ವರು ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದರು, ಕನಿಷ್ಠ ಕಳೆದ ಒಂದೂವರೆ ವರ್ಷದಿಂದ ಪೈಲಟ್ ಜೊತೆಗೆ ಮಾತನಾಡಿಲ್ಲ ಎಂಬ ಸಂಗತಿಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 2020 ಜುಲೈ 18ರ ಶನಿವಾರ ಬಹಿರಂಗ ಪಡಿಸಿದರು. ಇದೇ ವೇಳೆಗೆ ಬಿಜೆಪಿ ನಾಯಕಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕಾಂಗ್ರೆಸ್ಸಿನ ಒಳಜಗಳಕ್ಕೆ ರಾಜಸ್ಥಾನದ ಜನತೆ ಬೆಲೆ ತೆರಬೇಕಾಗಿ ಬಂದಿರುವುದು ದುರದೃಷ್ಟಕರ ಎಂದು ಹೇಳಿದರು. ‘ಸಚಿವರಾಗಿ ತನ್ನ ಮುಖ್ಯಮಂತ್ರಿ ಜೊತೆ ಮಾತನಾಡುವುದಿಲ್ಲ, ಅವರ ಸಲಹೆಯನ್ನೂ ಪಡೆಯುವುದಿಲ್ಲ, ಯಾವುದೇ ಮಾತುಕತೆ ಕೂಡಾ ಇಲ್ಲ. ಪ್ರಜಾಪ್ರಭುತ್ವದಲ್ಲಿ ಬದ್ಧ ವೈರಿಗಳು ಕೂಡ ಮಾತನಾಡುತ್ತಾರೆ. ಪ್ರಜಾಪ್ರಭುತ್ವದ ಸೌಂದರ್ಯವೇ ಸಂಭಾಷಣೆ. ಕಳೆದ ಒಂದೂವರೆ ವರ್ಷದಲ್ಲಿ ಸೃಷ್ಟಿಯಾದ ಸುದ್ದಿಗಳು ಒಂದು ಪುಸ್ತಕಕ್ಕೆ ಆಗುವಷ್ಟಿದೆ’ ಎಂದು ಗೆಹ್ಲೋಟ್ ಬೇಸರ ವ್ಯಕ್ತಪಡಿಸಿದ್ದಾರೆ. ’ಪೈಲಟ್ ತಾನು ಬಲಿಪಶುವಾಗಿದ್ದೇನೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ರಾಜ್ಯ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ನೀಡಿದ ನೋಟಿಸನ್ನೇ ಅನಗತ್ಯವಾಗಿ ದೊಡ್ಡದು ಮಾಡಿದ್ದಾರೆ. ಅವರೊಬ್ಬರಿಗೇ ಅಲ್ಲ, ೧೦-೧೨ ಮಂದಿ ಶಾಸಕರಿಗೂ ನೋಟಿಸ್ ನೀಡಲಾಗಿದೆ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಹೇಳಿದರು. ’ಸರ್ಕಾರವನ್ನು ಉರುಳಿಸುವ ಸಂಚನ್ನು ಬಿಜೆಪಿ ರೂಪಿಸಿದೆ ಎಂದು ನಮ್ಮ ಪಕ್ಷ ಎಸ್‌ಒಜಿಗೆ ದೂರು ನೀಡಿತ್ತು. ನಾವು ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ, ಆದರೂ ಅವರು ಸ್ಪಷ್ಟನೆ ನೀಡುತ್ತಿದ್ದರು. ಅವರು ಏಕೆ ಸ್ಪಷ್ಟನೆ ನೀಡುತ್ತಿದ್ದರು ಎಂಬುದು ಈಗ ಸ್ಪಷ್ಟವಾಗಿದೆ’ ಎಂದು ಗೆಹ್ಲೋಟ್ ಹರಿಹಾಯ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಉಭಯರಾಷ್ಟ್ರಗಳ ಸಮಾನ ಶತ್ರುವಾದ ಚೀನಾವನ್ನು ಕಟ್ಟಿಹಾಕಲು ಭಾರತ ಮತ್ತು ಜಪಾನ್ ಹೊಸ ದಾರಿಗಳನ್ನು ಹುಡುಕುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಮುಂದಿನ ಅಕ್ಟೋಬರಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶೃಂಗಸಭೆ ನಡೆಸಲು ಯೋಜಿಸಿದ್ದಾರೆ. ಚೀನಾದ ಪ್ರಾಬಲ್ಯ ತಗ್ಗಿಸುವ ಬಗೆಗೇ ಉಭಯ ನಾಯಕರು ಚಿಂತಿಸುವ ಸಾಧ್ಯತೆ ಇದೆ ಎಂದು ಮೂಲಗಳು 2020 ಜುಲೈ 18ರ ಶನಿವಾರ ಹೇಳಿದವು. ಕೊರೊನಾ ಸೋಂಕು ಹಾವಳಿ ನಡುವೆಯೇ ಚೀನಾವು ಗಡಿ ತಕರಾರು ಎತ್ತುತ್ತಿದೆ. ಲಡಾಖ್‌ನಲ್ಲಿ ಭಾರತದ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದರೆ, ಅತ್ತ ಪೂರ್ವ ಮತ್ತು ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ಹಲವು ರಾಷ್ಟ್ರಗಳ ಹಿತಾಸಕ್ತಿಯನ್ನು ದಮನ ಮಾಡಹೊರಟಿದೆ. ವಿಸ್ತರಣಾವಾದದ ಹುಚ್ಚು ಚೀನಾ ನೆತ್ತಿಗೇರಿದೆ. ಇದನ್ನು ನಿಯಂತ್ರಿಸಲೇಬೇಕು ಎಂಬ ಅಭಿಪ್ರಾಯವನ್ನು ಭಾರತ-ಜಪಾನ್ ವ್ಯಕ್ತಪಡಿಸಿವೆ. ಮೋದಿ-ಅಬೆ ವಾರ್ಷಿಕ ಶೃಂಗಸಭೆ ಕಳೆದ ಡಿಸೆಂಬರಿನಲ್ಲಿ ನಡೆಯಬೇಕಾಗಿತ್ತು. ಅದಕ್ಕಾಗಿ ಅಸ್ಸಾಮಿನ ಗುವಾಹಟಿಯನ್ನು ನಿಗದಿ ಪಡಿಸಲಾಗಿತ್ತು. ಆದರೆ ದಿಢೀರನೆ ಭುಗಿಲೆದ್ದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿ ಪ್ರತಿಭಟನೆಯಿಂದ ಸಭೆ ಮುಂದೂಡಿಕೆಯಾಗಿತ್ತು. ಆ ಬಳಿಕ ಕೊರೊನಾ ಸೋಂಕು ಹಾವಳಿ ಶುರುವಾದದ್ದರಿಂದ ಮಾತುಕತೆ ಅನಿಶ್ಚಿತಾವಧಿಗೆ ಮುಂದೂಡಲ್ಪಟ್ಟಿತ್ತು. ಈಗ ಮುಖಾಮುಖಿ ಭೇಟಿಯ ಬದಲು ವಿಡಿಯೊ ಕಾನ್ಫರೆನ್ಸ್ ಮೂಲಕ ಅಕ್ಟೋಬರಿನಲ್ಲಿ ಉಭಯ ಪ್ರಧಾನಿಗಳ ಶೃಂಗಸಭೆ ಏರ್ಪಡಿಸಲು ಚಿಂತನೆ ನಡೆದಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment