ಇಂದಿನ ಇತಿಹಾಸ History
Today
ಜುಲೈ 07
2020: ನವದೆಹಲಿ: ಮುಂಬೈ ವಿಮಾನ ನಿಲ್ದಾಣವನ್ನು ನಡೆಸುತ್ತಿರುವ ಜಿವಿಕೆ ಸಮೂಹ ಮತ್ತು ಅದರ ಅಧ್ಯಕ್ಷ ಡಾ.ವಿ.ವಿ.ಕೆ.ರೆಡ್ಡಿ, ಅವರ ಪುತ್ರ ಜಿ.ವಿ. ಸಂಜಯ್ ರೆಡ್ಡಿ ವಿರುದ್ಧ ಮುಂಬೈ ವಿಮಾನ ನಿಲ್ದಾಣದ ಅಭಿವೃದ್ಧಿಯಲ್ಲಿ ೮೦೦ ಕೋಟಿ ರೂ.ಗಳ ಅಕ್ರಮ ಎಸಗಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) 2020 ಜುಲೈ 07ರ ಮಂಗಳವಾರ ಹಣ ವರ್ಗಾವಣೆ ಪ್ರಕರಣ ದಾಖಲಿಸಿತು. ಜೂನ್ ೨೭ರಂದು ಸಿಬಿಐ ನೋಂದಾಯಿಸಿದ ಎಫ್ ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಅಡಿಯಲ್ಲಿ ತನಿಖೆ ಆರಂಭಿಸಿದೆ. ಇದರಲ್ಲಿ ಡಾ. ವಿ.ವಿ.ಕೆ ರೆಡ್ಡಿ ಮತ್ತು ಅವರ ಪುತ್ರ ಸಂಜಯ್ ರೆಡ್ಡಿ ಅವರು ಮಿಯಾಲ್ (ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್) ಮತ್ತು ಇತರ ಹಲವಾರು ಕಂಪನಿಗಳು ಸೇರಿದಂತೆ ೧೩ ಜನರನ್ನು ಹೆಸರಿಸಲಾಗಿದೆ. ಸಿಬಿಐ ಕಳೆದ ವಾರ ಮುಂಬೈ ಮತ್ತು ಹೈದರಾಬಾದ್ನ ಜಿವಿಕೆ ಆವರಣದಲ್ಲಿ ಶೋಧ ನಡೆಸಿತ್ತು.ಹಣ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು, ಹಣ ವರ್ಗಾವಣೆ ನಿಗ್ರಹ ಸಂಸೆಯ್ಥು ಶೀಘ್ರದಲ್ಲೇ ಕಂಪನಿಗಳ ಖಾತೆಗಳನ್ನು ಪರೀಕ್ಷಿಸಲು ಪ್ರಾರಂಭಿಸಲಿದೆ. ತನಿಖಾ ವೇಳೆಯಲ್ಲಿ ಕಂಪೆನಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಸಂಸ್ಥೆಗೆ ಇದೆ. ಕಳೆದವಾರ ಬಿಡುಗಡೆ ಮಾಡಲಾಗಿದ್ದ ಹೇಳಿಕೆಯಲ್ಲಿ ಮಿಯಾಲ್ ವಕ್ತಾರರು ’ಮಿಯಾಲ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದು ಕಂಡು ಮಿಯಾಲ್ ಅಚ್ಚರಿಗೊಂಡಿತ್ತು. ಪ್ರಾಥಮಿಕ ತನಿಖೆ ಆರಂಭಿಸಿದ್ದರೆ, ಮಿಯಾಲ್ ಸ್ವತಃ ತನಿಖಾ ಸಂಸ್ಥೆ ಕೇಳಿದ ಎಲ್ಲ ದಾಖಲೆ ಹಾಗೂ ತನಿಖೆಗೆ ನೆರವು ನೀಡಲು ಸಿದ್ಧವಿತ್ತು’ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಸೇನೆಯಲ್ಲಿ ಅಲ್ಪಾವಧಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವೆಯ ಅವಕಾಶ (ಪರ್ಮನೆಂಟ್ ಕಮಿಷನ್) ನೀಡುವಂತೆ ಈ ಹಿಂದೆ ನೀಡಿದ್ದ ತೀರ್ಪನ್ನು ಜಾರಿಗೊಳಿಸಲು ಸರ್ಕಾರಕ್ಕೆ ಸುಪ್ರಿಂ ಕೋರ್ಟ್ 2020 ಜುಲೈ 07ರ ಮಂಗಳವಾರ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಿತು. ಕೊರೋನಾ ಸಂಕಷ್ಟ ಎದುರಾಗಿರುವುದರಿಂದ, ತೀರ್ಪನ್ನು ಜಾರಿಗೊಳಿಸಲು ಆರು ತಿಂಗಳ ಕಾಲಾವಕಾಶ ಕೊಡುವಂತೆ ಕೇಂದ್ರ ಸರ್ಕಾರವು ಮಾಡಿದ ಮನವಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, ಕೇವಲ ಒಂದು ತಿಂಗಳ ಕಾಲಾವಕಾಶವನ್ನು ನೀಡಿತು. ‘ತೀರ್ಪಿನಲ್ಲಿ ನೀಡಲಾಗಿರುವ ಎಲ್ಲ ನಿರ್ದೇಶನಗಳನ್ನು ಪಾಲಿಸಬೇಕು’ ಎಂದೂ ಪೀಠ ನಿರ್ದೇಶಿಸಿತು. ಸೇನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಸೇವೆಯ ಅವಕಾಶ ನೀಡಬೇಕು, ಕಮಾಂಡ್ ಹುದ್ದೆಯನ್ನೂ ನೀಡಬೇಕು ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಫೆಬ್ರುವರಿ ೧೭ರಂದು ನೀಡಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ನೇಪಾಳದ ಪ್ರಧಾನಿ ಕೆಪಿ ಶರ್ಮ ಒಲಿ ಅವರ ಸಂರಕ್ಷಣೆಗಾಗಿ ಚೀನಾ ಮತ್ತೆ ಆಖಾಡಕ್ಕೆ ಇಳಿದಿದ್ದು, ಚೀನೀ ರಾಯಭಾರಿ ಹೂ ಯಾಂಕಿ ಅವರು 2020 ಜುಲೈ 07ರ ಮಂಗಳವಾರ ನೇಪಾಳ ಕಮ್ಯೂನಿಸ್ಟ್ ಪಕ್ಷದ ನಾಯಕ ಝಲಾ ನಾಥ್ ಖಾನಲ್ ಅವರನ್ನು ಭೇಟಿ ಮಾಡಿದರು.ಕೆಪಿ ಶರ್ಮ ಒಲಿ ಪದಚ್ಯುತಿಗಾಗಿ ಇತರ ನಾಯಕರ ಜೊತೆಗೆ ಝಲಾ ನಾಥ್ ಖಾನಲ್ ಅವರೂ ಕೈಜೋಡಿಸಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿವೆ. ಹೂ ಅವರು ಕಳೆದ ಕೆಲವು ದಿನಗಳಿಂದ ಅಧ್ಯಕ್ಷರಾದ ಬಿದ್ಯಾ ದೇವಿ ಭಂಡಾರಿ ಮತ್ತು ನೇಪಾಳ ಕಮ್ಯೂನಿಸ್ಟ್ ಪಕ್ಷದ (ಎನ್ಸಿಪಿ) ನಾಯಕ ಮಾಧವ ಕುಮಾರ್ ನೇಪಾಳ ಅವರನ್ನೂ ಭೇಟಿ ಮಾಡಿದ್ದಾರೆ. ಇದು ನೇಪಾಳದ ಆಂತರಿಕ ರಾಜಕಾರಣದಲ್ಲಿ ರಾಜತಾಂತ್ರಿಕರ ಪಾತ್ರದ ಬಗ್ಗೆ ಟೀಕೆಗಳನ್ನು ಹುಟ್ಟು ಹಾಕಿದೆ. ಮಾಜಿ ಪ್ರಧಾನಿಗಳಾದ ನೇಪಾಳ ಮತ್ತು ಖಾನಲ್ ಅವರು ಪುಷ್ಪ ಕಮಲ್ ದಹಲ್ ನೇತೃತ್ವದ ಪ್ರತಿಸ್ಪರ್ಧಿ ಬಣದ ಜೊತೆಗೆ ಗುರುತಿಸಿಕೊಂಡಿದ್ದಾರೆ. ಹೂ ಮತ್ತು ಪ್ರಚಂಡ ನಡುವಣ ಸಭೆ ಇನ್ನೂ ಸಾಧ್ಯವಾಗಿಲ್ಲ. ಪ್ರಧಾನಿ ಒಲಿ ಪದಚ್ಯುತಿ ಅಭಿಯಾನದ ನೇತೃತ್ವ ವಹಿಸಿರುವ ಪ್ರಚಂಡ ಅವರು ಹೂ ಯಾಂಕಿ ಅವರ ಭೇಟಿಗೆ ನಿರಾಸಕ್ತಿ ವ್ಯಕ್ತ ಪಡಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಆದರೆ ಅವರು ಈ ರೀತಿ ಎಷ್ಟು ಸಮಯ ಪ್ರತಿರೋಧ ವ್ಯಕ್ತ ಪಡಿಸಬಹುದು ಎಂಬುದು ಸ್ಪಷ್ಟವಿಲ್ಲ ಎಂದು ಮೂಲಗಳು ಹೇಳಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕದ ಮಧ್ಯೆ ಶೈಕ್ಷಣಿಕ ನಷ್ಟವನ್ನು ಸರಿದೂಗಿಸುವ ಸಲುವಾಗಿ ೨೦೨೦-೨೦೨೧ರ ಶೈಕ್ಷಣಿಕ ವರ್ಷದಲ್ಲಿ ೯ ರಿಂದ ೧೨ ನೇ ತರಗತಿವರೆಗಿನ ಪಠ್ಯಕ್ರಮವನ್ನು ಶೇಕಡಾ ೩೦ರಷ್ಟು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 2020 ಜುಲೈ 07ರ ಮಂಗಳವಾರ ಪ್ರಕಟಿಸಿತು. "ದೇಶ ಮತ್ತು ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಅಸಾಮಾನ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಿಬಿಎಸ್ಇ ಪಠ್ಯಕ್ರಮವನ್ನು ಪರಿಷ್ಕರಿಸಲು ಮತ್ತು ೯ರಿಂದ ೧೨ರವರೆಗಿನ ತರಗತಿಯ ವಿದ್ಯಾರ್ಥಿಗಳಿಗೆ ಕೋರ್ಸ್ ಹೊರೆಯನ್ನು ಕಡಿಮೆ ಮಾಡಲು ಸೂಚಿಸಲಾಗಿದೆ" ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್ ಪೋಖ್ರಿಯಾಲ್ ಹೇಳಿದರು. ಪಠ್ಯಸೂಚಿ ಕಡಿತವು ಪ್ರಮುಖ ಪರಿಕಲ್ಪನೆಗಳನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಇರುತ್ತದೆ ಎಂದು ಮಾನವ ಸಂಪನ್ಮೂಲ ಸಚಿವರು ಹೇಳಿದರು. "ಕಲಿಕೆಯ ಮಟ್ಟವನ್ನು ಸಾಧಿಸುವ ಪ್ರಾಮುಖ್ಯತೆಯನ್ನು ಪರಿಗಣಿಸಿ, ಪಠ್ಯಕ್ರಮವನ್ನು ಪ್ರಮುಖ ಪರಿಕಲ್ಪನೆಗಳನ್ನು ಉಳಿಸಿಕೊಳ್ಳುವುದರೊಂದಿಗೆ ಸಾಧ್ಯವಾದಷ್ಟು ಮಟ್ಟಿಗೆ ತರ್ಕಬದ್ಧಗೊಳಿಸಲಾಗಿದೆ" ಎಂದು ಸಿಬಿಎಸ್ಇ ಹೇಳಿಕೆಯಲ್ಲಿ ತಿಳಿಸಿತು. ಶಾಲೆಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಕಡಿತಗೊಳಿಸಿದ ವಿಷಯಗಳನ್ನು ಸಹ ವಿದ್ಯಾರ್ಥಿಗಳಿಗೆ ವಿವರಿಸಬಹುದು. ಆದಾಗ್ಯೂ ಆದಾಗ್ಯೂ ಕಡಿತಗೊಳಿಸಲಾದ ಪಠ್ಯಕ್ರಮವು ಆಂತರಿಕ ಮೌಲ್ಯಮಾಪನ ಮತ್ತು ವರ್ಷಾಂತ್ಯದ ಮಂಡಳಿಯ ಪರೀಕ್ಷೆಯ ವಿಷಯಗಳ ಭಾಗವಾಗಿರುವುದಿಲ್ಲ" ಎಂದು ಹೇಳಿಕೆ ತಿಳಿಸಿದೆ. ಪರ್ಯಾಯ ಅಕಾಡೆಮಿಕ್ ಕ್ಯಾಲೆಂಡರ್ ಮತ್ತು ವಿಭಿನ್ನ ತಂತ್ರಗಳನ್ನು ಬಳಸಿಕೊಂಡು ಪಠ್ಯಕ್ರಮವನ್ನು ರೂಪಿಸುವ ನಿಟ್ಟಿನಲ್ಲಿ ಎನ್ಸಿಇಆರ್ಟಿಯ ಒಳಹರಿವು ಕೂಡಾ ಬೋಧನಾ ಶಿಕ್ಷಣದ ಭಾಗವಾಗಬಹುದು ಎಂದು ಹೇಳಿಕೆ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದ ಒಟ್ಟು ಕೊರೋನವೈರಸ್ ಪ್ರಕರಣಗಳು ಮತ್ತು ಪ್ರತಿ ಮಿಲಿಯನ್ (ದಶಲಕ್ಷ) ಜನಸಂಖ್ಯೆಗೆ ಅನುಗುಣವಾದ ಸಾವುನೋವುಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಜುಲೈ 07ರ ಮಂಗಳವಾರ ತಿಳಿಸಿತು. ಈ ಮಧ್ಯೆ, ದೇಶzಲ್ಲಿ ಕೊರೋನಾವೈರಸ್ ಸೋಂಕು ಮಂಗಳವಾರ ೭ ಲಕ್ಷದ ಗಡಿ ದಾಟಿದೆ ಮತ್ತು ಸಾವಿನ ಸಂಖ್ಯೆ ೨೦,೧೬೦ ಕ್ಕೆ ಏರಿದೆ. ಜುಲೈ ೬ ರ ದಿನಾಂಕದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ವಸ್ತುಸ್ಥಿತಿ ವರದಿ -೧೬೮’ ನ್ನು ಉಲ್ಲೇಖಿಸಿರುವ ಸಚಿವಾಲಯವು, ಪ್ರತಿ ಮಿಲಿಯನ್ ಜನಸಂಖ್ಯೆಗೆ ಭಾರತದ ಕೋವಿಡ್ -೧೯ ಪ್ರಕರಣಗಳು ೫೦೫.೩೭ ಆಗಿದೆ, ಇದು ಜಾಗತಿಕ ಸರಾಸರಿ ೧,೪೫೩.೨೫ ಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಎಂದು ಹೇಳಿತು. ಚಿಲಿಯಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ೧೫,೪೫೯.೮ ಕೋವಿಡ್-೧೯ ಪ್ರಕರಣಗಳು ದಾಖಲಾಗಿದ್ದರೆ, ಪೆರುವಿನಲ್ಲಿ ಪ್ರತಿ ಮಿಲಿಯನ್ ಜನರಿಗೆ ೯,೦೭೦.೮ ಪ್ರಕರಣಗಳಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ) ಇಂದಿನ ಇತಿಹಾಸ History Today ಜುಲೈ 07 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment