ನಾನು ಮೆಚ್ಚಿದ ವಾಟ್ಸಪ್

Monday, July 6, 2020

ಇಂದಿನ ಇತಿಹಾಸ History Today ಜುಲೈ 06

ಇಂದಿನ ಇತಿಹಾಸ  History Today ಜುಲೈ 06 

2020:  ನವದೆಹಲಿ
: ಗಡಿಯಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ನಡೆದಿರುವ ಸೇನಾ ಮಾತುಕತೆಗಳು ಫಲಪ್ರದವಾಗಿರುವ ಮೊದಲ ಸಂಕೇತವಾಗಿ , ಜುಲೈ ೧೫ರಂದು ಹಿಂಸಾತ್ಮಕ ಘರ್ಷಣೆ ನಡೆದ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಸೇರಿದಂತೆ ನೈಜ ನಿಯಂತ್ರಣ ರೇಖೆಯಲ್ಲಿನ ಮೂರು ಘರ್ಷಣಾ ತಾಣಗಳಿಂದ ಚೀನಾ ಮತ್ತು ಭಾರತದ ಸೇನಾಪಡೆಗಳು ಹಿಂದಕ್ಕೆ ತೆರಳಿವೆ ಎಂದು ಸುದ್ದಿ ಮೂಲಗಳು 2020 ಜುಲೈ 6ರ ಸೋಮವಾರ ತಿಳಿಸಿದವು.  ಪಡೆಗಳು ಎಷ್ಟು ಹಿಂದಕ್ಕೆ ಹೋಗಿವೆ ಎಂಬುದು ನಿರ್ದಿಷ್ಟವಾಗಿ ಗೊತ್ತಾಗಿಲ್ಲ. ಆದರೆ ಕಳೆದೆರಡು ತಿಂಗಳುಗಳಲ್ಲಿ ಭಾರೀ ಪ್ರಮಾಣದಲ್ಲಿ ಸೇನಾ ಜಮಾವಣೆಯಾಗಿದ್ದ ಗಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಪ್ರದೇಶ ಮತ್ತು ಗೋಗ್ರಾ ಪಹರೆ ಸ್ಥಳಗಳಿಂದ, ಕಮಾಂಡರ್ ಮಟ್ಟದ ಮೂರು ಸುತ್ತಿನ ಮಾತುಕತೆಗಳ ಬಳಿಕ ಭದ್ರತಾ ಪಡೆಗಳು ಹಿಂದಕ್ಕೆ ಹೋಗಿವೆ. ಭಾರತ ಮತ್ತು ಚೀನೀ ಪಡೆಗಳ ಮಧ್ಯೆ ತಟಸ್ಥ ವಲಯ ಸೃಷ್ಟಿಸಲಾಗಿದೆ. ಪರಸ್ಪರರ ಸೇನಾ ಪಡೆಗಳ ವಾಪಸಾತಿ ಭರವಸೆಯಂತೆ ಚೀನಾ ಕ್ರಮ ಕೈಗೊಂಡಿದೆಯೇ ಎಂಬುದಾಗಿ ರಿಶೀಲಿಸಲು ನಡೆಸಲಾದ ಸಮೀಕ್ಷೆಯಲ್ಲಿ ಚೀನಾ ಪಡೆಗಳು ವಾಪಸಾಗಿರುವುದು ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ. ಅಧಿಕಾರಿಯೊಬ್ಬರು ಸೇನಾ ಪಡೆಗಳ ವಾಪಸಾತಿಯನ್ನು ಸೇನಾ ಪಡೆ ಹಿಂಪಡೆಯುವ ಪ್ರಕ್ರಿಯೆಯಲ್ಲಿ ಅಂಬೆಗಾಲು ಎಂದು ಬಣ್ಣಿಸಿದರು. ಇದು ನೈಜ ಹಾಗೂ ದೀರ್ಘಕಾಲೀನವಾದದ್ದೇ ಎಂಬುದನ್ನು ನೋಡಬೇಕಾಗಿದೆ ಎಂದು ಅವರು ಹೇಳಿದರು.  ಸೇನಾ ಪಡೆಗಳ ವಾಪಸಾತಿ ಪ್ರಕ್ರಿಯೆಯಲ್ಲಿ ಪ್ರಗತಿಯಾಗಿರುವುದನ್ನು ಚೀನೀ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯನ್ ದೃಢ ಪಡಿಸಿದರು. ಮುಂಚೂಣಿಯ ಪಡೆಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಮತ್ತು ಗಡಿಯಲ್ಲಿ ಉದ್ವಿಗ್ನತೆ ಶಮನಗೊಳಿಸಲು ಜೂನ್ ೩೦ರಂದು ನಡೆದ ಕಮಾಂಡರ್ ಮಟ್ಟದ ಮೂರನೇ ಸುತ್ತಿನ ಮಾತುಕತೆಗಳಲ್ಲಿ ಒಪ್ಪಲಾಗಿದ್ದು, ಇದರ ಜಾರಿ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಚೀನಾ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್  ವರದಿ ಮಾಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ
: ಕೋವಿಡ್-೧೯ ಸಾಂಕ್ರಾಮಿಕದ ಪರಿಣಾಮವಾಗಿ ಸಂಕಷ್ಟದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಹಣಕಾಸು ಹರಿವನ್ನು ಹೆಚ್ಚಿಸುವ ಸಲುವಾಗಿ ವಿಶ್ವಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ೭೫೦ ದಶಲಕ್ಷ ಡಾಲರ್ ಮೊತ್ತದ ನೆರವು ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಹಣಕಾಸು ಸಚಿವಾಲಯವು 2020 ಜುಲೈ 6ರ ಸೋಮವಾರ ಪ್ರಕಟಿಸಿತು. ಎಂಎಸ್‌ಎಂಇ ತುರ್ತು ನೆರವು ಕಾರ್‍ಯಕ್ರಮಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಕಾರ್‍ಯಕ್ರಮದ ಅಡಿಯಲ್ಲಿ ಕೊರೋನಾವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಕಂಗೆಟ್ಟಿರುವ ಎಂಎಸ್‌ಎಂಇಗಳಿಗೆ ಹಣಕಾಸು ನೆರವನ್ನು ಹೆಚ್ಚಿಸಲಾಗುವುದು. ವಿಶ್ವ ಬ್ಯಾಂಕಿನ ಎಂಎಸ್‌ಎಂಇ ನೆರವು ಕಾರ್‍ಯಕ್ರಮವು ಸುಮಾರು ೧೫ ಲಕ್ಷ (. ಮಿಲಿಯನ್) ಸುಸ್ಥಿರ ಎಂಎಸ್‌ಎಂಇಗಳಿಗೆ ತತ್‌ಕ್ಷಣವೇ ದ್ರವ್ಯತೆ ಮತ್ತು ಸಾಲದ ಅಗತ್ಯಗಳನ್ನು ಪೂರೈಸಲಿದೆ ಮತ್ತು ಕೊರೋನಾ ವೈರಸ್ ಸಂಕಷ್ಟದ ಹಾಲಿ ಆಘಾತದಿಂದ ಚೇತರಿಸುವಂತೆ ಮಾಡಿ ಲಕ್ಷಾಂತರ ಉದ್ಯೋಗಗಳ ಸಂರಕ್ಷಣೆ ಮಾಡಲಿದೆ. ವಿಶಾಲ ತಳಹದಿಯ ಸುಧಾರಣೆಯ ನಿಟ್ಟಿನಲ್ಲಿ ಇದು ಮೊದಲ ಕ್ರಮವಾಗಿದೆ ಎಂದು ವಿಶ್ವಬ್ಯಾಂಕ್ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿತು. ಭಾರತ ಸರ್ಕಾರದ ಪರವಾಗಿ ಒಪ್ಪಂದಕ್ಕೆ ಹಣಕಾಸು ಸಚಿವಾಲಯದ  ಆರ್ಥಿಕ ವ್ಯವಹಾರಗಳ ಇಲಾಖೆಯ ಅಡಿಷನಲ್ ಕಾರ್‍ಯಕದರ್ಶಿ ಸಮೀರ್ ಕುಮಾರ್ ಖಾರೆ ಮತ್ತು ವಿಶ್ವಬ್ಯಾಂಕ್ ಪರವಾಗಿ ಅದರ ರಾಷ್ಟ್ರೀಯ ನಿರ್ದೇಶಕ ಜುನೈದ್ ಅಹ್ಮದ್ ಸಹಿ ಹಾಕಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಪಿಥೋರಗಢ
/ಡೆಹ್ರಾಡೂನ್: ತಮ್ಮ ಭಾರತ ವಿರೋಧಿ ಭಂಗಿಗಾಗಿ ನೇಪಾಳದ ಆಡಳಿತಾರೂಢ ಕಮ್ಯೂನಿಸ್ಟ್‌ದಲ್ಲೇ ತೀವ್ರ ದಾಳಿಗೆ ಒಳಗಾಗಿರುವ ಪ್ರಧಾನಿ ಕೆಪಿ ಶರ್ಮ ಒಲಿ ಅವರಿಗೆ ಎರಡು ದಿನಗಳ ಜೀವದಾನ ಲಭಿಸಿದ್ದು, ಇದೇ ವೇಳೆಯಲ್ಲಿ ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಧಾರ್ಚುಲಾ ಪ್ರದೇಶದ ಬಳಿ ಭಾರತದ ಗಡಿಯಲ್ಲಿ ಸ್ಥಾಪಿಸಲಾದ ಹೊಸ ಗಡಿಠಾಣೆಗಳ ಪೈಕಿ ಎರಡನ್ನು ರದ್ದು ಪಡಿಸಲಾಗಿದೆ. ಆರು ಹೊಸ ಗಡಿ ಹೊರಠಾಣೆಗಳನ್ನು ನಿರ್ವಹಿಸುತ್ತಿದ್ದ ನೇಪಾಳ ಸಶಸ್ತ್ರ ಪ್ರಹರಿ (ಎನ್‌ಎಸ್‌ಪಿ) ಅಥವಾ ನೇಪಾಳ ಸಶಸ್ತ್ರ ಪೊಲೀಸರು ಅವುಗಳಲ್ಲಿ ಎರಡನ್ನು ಹಿಂತೆಗೆದುಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು 2020 ಜುಲೈ 06ರ ಸೋಮವಾರ ತಿಳಿಸಿದರು. ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಭಾರತ ವಿರೋಧಿ ಭಂಗಿಗಾಗಿ ತಮ್ಮ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದಿಂದ (ಎನ್‌ಸಿಪಿ) ದಾಳಿಗೆ ಒಳಗಾಗಿದ್ದಾರೆ ಎಂಬ ವರದಿಗಳ ಮಧ್ಯೆ ಬೆಳವಣಿಗೆ ನಡೆದಿದೆ. ಮಧ್ಯೆ, ನೇಪಾಳ ಕಮ್ಯೂನಿಸ್ಟ್ ಪಕ್ಷದ ಸ್ಥಾಯಿ ಸಮಿತಿಯು ಸೋಮವಾರ ಒಲಿ ಭವಿಷ್ಯವನ್ನು ನಿರ್ಧರಿಸಲು ನಡೆಸಬೇಕಾಗಿದ್ದ ನಿರ್ಣಾಯಕ ಸಭೆಯನ್ನು ಬುಧವಾರಕ್ಕೆ ಮುಂದೂಡಿದ್ದು, ಪ್ರಧಾನಿಗೆ ಎರಡು ದಿನಗಳ ಜೀವದಾನ ಲಭಿಸಿತು. ಪಿಥೋರಗಢ ಜಿಲ್ಲೆಯ ಧಾರ್ಚುಲಾ ಪಟ್ಟಣದ ಜೊತೆಗೆ ಲಿಪುಲೇಖ ಕಣಿವೆಯನ್ನು ಸಂಪರ್ಕಿಸುವ ಆಯಕಟ್ಟಿನ ಮಹತ್ವದ ರಸ್ತೆಯನ್ನು ಭಾರತ ಉದ್ಘಾಟಿಸಿದ ನಂತರ ಆರು ಹೊಸ ಗಡಿ ಹೊರಠಾಣೆಗಳನ್ನು ಭಾರತದ ಜೊತೆಗಿನ ಭಾಂಧವ್ಯದ ಬಿರುಕು ಸಂಭವಿಸಿದ ನಂತರ ಒಂದು ತಿಂಗಳ ಹಿಂದೆ ನೇಪಾಳ ಸ್ಥಾಪಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ
: ಉಭಯ ರಾಷ್ಟ್ರಗಳು ಗಡಿಯಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿರುವುದರಿಂದ ಗಡಿಯಲ್ಲಿ ಉದ್ವಿಗ್ನತೆ ಶಮನದ ಬಗ್ಗೆ ಹೆಚ್ಚಿನ ಭರವಸೆ ಮೂಡಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನೀ ವಿದೇಶಾಂಗ ಸಚಿವ ವಾಂಗ್ ಅವರ ವಿಶೇಷ ಪ್ರತಿನಿಧಿ ಮಾತುಕತೆಗಳ ಬಳಿಕ ಭಾರತ 2020 ಜುಲೈ 06ರ ಸೋಮವಾರ  ಹೇಳಿಕೆ ನೀಡಿತು. ಭಾನುವಾರ ನಡೆದ ಮಾತುಕತೆಯಲ್ಲಿ ಉಭಯ ಕಡೆಗಳೂ ಆದಷ್ಟೂ ಬೇಗ ನೈಜ ನಿಯಂತ್ರಣ ರೇಖೆಯಲ್ಲಿನ ಪಡೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವುದು ಮತ್ತು ಗಡಿಯಲ್ಲಿ ಉದ್ವಿಗ್ನತೆ ನಿವಾರಿಸಿ ಪೂರ್ಣ ಪ್ರಮಾಣದ ಶಾಂತಿಸ್ಥಾಪನೆ ಅತ್ಯಗತ್ಯ ಎಂಬುದಾಗಿ ಒಪ್ಪಿವೆ ಎಂದು ಸರ್ಕಾರ ತಿಳಿಸಿತು. ಮಾತುಕತೆಗಳಿಗೆ ಸಂಬಂಧಿಸಿದಂತೆ ಚೀನಾವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಭಾರತ ಮತ್ತು ಚೀನಾ ಏರಿಳಿತಗಳ ಪರೀಕ್ಷೆಯನ್ನು  ತಡೆದುಕೊಂಡಿವೆ ಮತ್ತು ಈದಿನದ ಬೆಳವಣಿಗೆಯ ಸಾಧನೆ ಸುಲಭದ್ದಾಗಿರಲಿಲ್ಲ. ಕೆಲವೇ ದಿನಗಳ ಹಿಂದೆ ಗಲ್ವಾನ್ ಕಣಿವೆಯಲ್ಲಿ ಏನಾಗಿತ್ತು ಎಂಬುದು ಅತ್ಯಂತ ಸ್ಪಷ್ಟ. ಚೀನಾವು ಪರಿಣಾಮಕಾರಿಯಾಗಿ ತನ್ನ ಪ್ರಾದೇಶಿಕ ಸಾರ್ವಭೌಮತೆಯನ್ನು ರಕ್ಷಿಸುವುದು ಎಂದು ಹೇಳಿತು.  ಇದೇ ವೇಳೆಗೆ ಪ್ಯಾಂಗೊಂಗ್ ತ್ಸೊದಲ್ಲಿ ಸೇನಾ ಪಡೆಗಳ ವಾಪಸಾತಿ ಕುರಿತ ವರದಿಗಳನ್ನು ಭಾರತೀಯ ಸೇನೆ ನಿರಾಕರಿಸಿತು. ಪ್ಯಾಂಗೊಂಗ್ ತ್ಸೋದಲ್ಲಿ ಫಿಂಗರ್ ಪಾಯಿಂಟ್‌ವರೆಗೂ ಬಂದಿದ್ದ ಪಿಎಲ್‌ಎ ಬಂಕರ್ ಗಳನ್ನು ನಿರ್ಮಿಸಿ ಡೇರೆ ಸ್ಥಾಪನೆಗೂ ಮುಂದಾಗಿತ್ತಲ್ಲದೆ ಸಣ್ಣ ವಿಮಾನದಾಣವನ್ನೂ ನಿರ್ಮಿಸಿತ್ತು. ಭಾರತೀಯ ಸೈನಿಕರು ಫಿಂಗರ್ ಪಾಯಿಂಟ್‌ವರೆಗಿನ ಮುಂಚೂಣಿಯ ನೆಲೆಗಳಿಂದ ಪಹರೆ ನಡೆಸುವುದನ್ನು ಪಿಎಲ್‌ಎ ನಿರಾಕರಿಸಿತ್ತು. ಪ್ರದೇಶವು ನೈಜ ನಿಯಂತ್ರಣ ರೇಖೆಯ ವ್ಯಾಪ್ತಿಯಲ್ಲಿದೆ ಎಂಬುದಾಗಿ ಭಾರತದ ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 06  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment