Wednesday, July 29, 2020

ಇಂದಿನ ಇತಿಹಾಸ History Today ಜುಲೈ 29

ಇಂದಿನ ಇತಿಹಾಸ  History Today ಜುಲೈ 29

2020: ಹರಿಯಾಣ: ಫ್ರಾನ್ಸಿನಿಂದ 2020 ಜುಲೈ 27ರ ಸೋಮವಾರ ಹೊರಟಿದ್ದ ಮೊದಲ ಹಂತದ ಐದು ರಫೇಲ್ ಯುದ್ಧ ವಿಮಾನಗಳು 2020 ಜುಲೈ 7ರ ಬುಧವಾರ ಬುಧವಾರ ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದವು. ಭಾರತದ ನೆಲವನ್ನು ಚುಂಬಿಸಿದ ಸಮರವಿಮಾನಗಳು ಭಾರತೀಯ ವಾಯುಪಡೆಗೆ ಭೀಮಬಲವನ್ನು ತಂದುಕೊಟ್ಟಿದ್ದು ಸಮಸ್ತ ಭಾರತೀಯ ಹೆಮ್ಮೆ ನೂರ್ಮಡಿಗೊಂಡಿತು. ಫ್ರಾನ್ಸಿನ ಮೆರಿಗ್ನಾಕ್ ವಾಯುಸೇನಾ ನೆಲೆಯಿಂದ ಹೊರಟಿದ್ದ ವಿಮಾನಗಳು ಅಂಬಾಲಾ ತಲುಪುತ್ತಿದ್ದಂತೆಯೇ ರಾಷ್ಟ್ರ ಸಂರಕ್ಷಣೆಗೆ ಸಂಬಂಧಿಸಿ ಸಂಸ್ಕೃತ ಶ್ಲೋಕವೊಂದನ್ನು ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನಗಳಿಗೆ ಸ್ವಾಗತ ಕೋರಿದರು. ರಫೇಲ್ ಯುದ್ಧ ವಿಮಾನಗಳು ರಾಷ್ಟ್ರ ರಕ್ಷಣೆಯಲ್ಲಿ ಸದ್ಗುಣ ಹಾಗೂ ತ್ಯಾಗ ಮನೋಭಾವದಿಂದ ಕರ್ತವ್ಯ ನಿರತವಾಗಲಿವೆ ಎಂದು ಪ್ರಧಾನಿ ಮೋದಿ ವೇಳೆ ಭರವಸೆ ವ್ಯಕ್ತಪಡಿಸಿದರು. ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಯ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿದ್ದು, ದೇಶದ ಗಡಿಗಳು ಮತ್ತಷ್ಟು ಸುರಕ್ಷಿತವಾಗಿವೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. ಐದೂ ರಫೇಲ್ ವಿಮಾನಗಳು ಒಂದಾದ ಬಳಿಕ ಒಂದರಂತೆ ಅಂಬಾಲಾ ವಾಯುನೆಲೆಗೆ ಯಶಸ್ವಿಯಾಗಿ ಬಂದಿಳಿಯುತ್ತಿದ್ದಂತೆಯೇ ವಾಯುಸೇನಾ ಸಿಬ್ಬಂದಿ ಹರ್ಷೊದ್ಘಾರ ಮೊಳಗಿಸಿದರು. ಭಾರತೀಯ ವಾಯುಸೇನೆಯ ಸ್ವರ್ಣ ಬಾಣಗಳು (ಗೋಲ್ಡನ್ ಆರೋಸ್) ತಂಡ ಸೇರಿದ ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಬಧೌರಿಯಾ (ಆರ್ಕೆ ಎಸ್ ಭದೌರಿಯಾ) ಮತ್ತು ಇತರ ಅಧಿಕಾರಿಗಳು ವಿಮಾನಗಳನ್ನು ಸ್ವಾಗತಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಫ್ರಾನ್ಸಿನಿಂದ ಹೊರಟಿದ್ದ ಐದು ರಫೇಲ್ ಯುದ್ಧ ವಿಮಾನಗಳ 2020 ಜುಲೈ 7ರ ಬುಧವಾರ ಭಾರತೀಯ ವಾಯುಸೇನೆಯ ಅಂಬಾಲಾ ವಾಯುನೆಲೆಗೆ ಬಂದಿಳಿದಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೆಸರು ಹೇಳದೆಯೇ ಚೀನಾಕ್ಷೆ ತೀಕ್ಷ್ಣ ಎಚ್ಚರಿಕೆ ನೀಡಿದರು. ಭಾರತಕ್ಕೆ ಯುದ್ಧ ವಿಮಾನದ ಆಗಮನವು ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ಸಾಮರ್ಥ್ಯಕ್ಕೆಸಮಯೋಚಿತ ಶಕ್ತಿಯನ್ನು ನೀಡುತ್ತದೆ ಮತ್ತು ನಮ್ಮ ದೇಶಕ್ಕೆ ಬರಬಹುದಾದ ಯಾವುದೇ ಬಾಹ್ಯ ಬೆದರಿಕೆಯನ್ನುತಡೆಯಲು ಭಾರತೀಯ ವಾಯುಪಡೆ ಈಗ ಹೆಚ್ಚು ಬಲಶಾಲಿಯಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಮೊದಲ ರಫೇಲ್ ಯುದ್ಧ ವಿಮಾನವನ್ನು ಔಪಚಾರಿಕವಾಗಿ ಸ್ವೀಕರಿಸಲು ಕಳೆದ ವರ್ಷ ಫ್ರಾನ್ಸಿಗೆ ಪ್ರಯಾಣಿಸಿದ್ದ ಸಿಂಗ್, ಬಹುಕಾರ್ಯಾಚರಣೆ ಸಾಮರ್ಥ್ಯದ ವಿಮಾನಗಳ ಶಕ್ತಿಯನ್ನು ಪಶಂಸೆ ಮಾಡಿದರು ಮತ್ತು ೩೬ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು. ರಾಜನಾಥ್ ಸಿಂಗ್ ಅವರು ತಮ್ಮ ಸಂದೇಶದಲ್ಲಿ ಚೀನಾವನ್ನು ಹೆಸರಿಸಲಿಲ್ಲ. ಅವರ ಮಾತುಗಳು ನೇರವಾಗಿ ಚೀನಾದ ವರ್ತನೆಗೆ ನೀಡಿದ ತೀಕ್ಷ್ಣ ಪ್ರತಿಕ್ರಿಯೆಯಾಗಿತ್ತು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕನಿಷ್ಠ ೫ನೇ ತರಗತಿವರೆಗೆ ಮತ್ತು ಆದ್ಯತೆ ಆಧಾರದಲ್ಲಿ ೮ನೇ ತರಗತಿವರೆಗೆ ಮನೆಭಾಷೆ/ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ  ಶಿಕ್ಷಣ ಕಲಿಕಾ ವ್ಯವಸ್ಥೆಗೆ ಅವಕಾಶ ಕಲ್ಪಿಸುವ ನೂತನ ಶಿಕ್ಷಣ ನೀತಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2020 ಜುಲೈ 29ರ ಬುಧವಾರ ಒಪ್ಪಿಗೆ ನೀಡಿತು.  ಸಚಿವ ಸಂಪುಟ ಸಭೆಯ ಬಳಿಕ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ರಮೇಶ ನಿಶಾಂಕ್ ಪೋಖ್ರಿಯಾಲ್ ಅವರು ವಿಚಾರವನ್ನು ಪ್ರಕಟಿಸಿದರು. ಕಳೆದ ೩೪ ವರ್ಷಗಳಷ್ಟು ಹಳೆಯದಾದ ರಾಷ್ಟ್ರೀಯ ಶಿಕ್ಷಣ ನೀತಿ ಈಗ ಬದಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ೨೧ನೇ ಶತಮಾನದ ಹೊಸ ಶಿಕ್ಷಣ ನೀತಿಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು. ಶಿಕ್ಷಣದಲ್ಲಿ ಏಕರೂಪತೆ ತರುವುದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಮತ್ತು ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸುಧಾರಿಸುವತ್ತ ಗಮನಹರಿಸುವುದು ಹೊಸ ನೀತಿಯ ಗುರಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ೧೯೮೬ರಲ್ಲಿ ರೂಪಿಸಲಾಗಿದ್ದು, ೧೯೯೨ರಲ್ಲಿ ಮಾರ್ಪಾಡು ಮಾಡಲಾಯಿತು. ಅದು ಜಾರಿಗೆ ಬಂದ ಸುಮಾರು ಮೂರು ದಶಕಗಳ ನಂತರ ಹೊಸ ಶಿಕ್ಷಣ ನೀತಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ನುಡಿದರು. ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವನ್ನು (ಎಂಎಚ್ಆರ್ ಡಿ) ಈಗಶಿಕ್ಷಣ ಸಚಿವಾಲಯ ಎಂಬುದಾಗಿ ಮರುನಾಮಕರಣ ಮಾಡಲಾಗಿದೆ ಎಂದೂ ಸಚಿವರು ತಿಳಿಸಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

ಜೈಪುರತುರ್ತು ವಿಧಾನಸಭಾ ಅಧಿವೇಶನ ಕರೆಯುವಂತೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ನೇತೃತ್ವದ ರಾಜ್ಯ ಸರ್ಕಾರವು ಸಲ್ಲಿಸಿದ ಪ್ರಸ್ತಾಪವನ್ನು ರಾಜಸ್ಥಾನ ರಾಜ್ಯಪಾಲ ಕಲರಾಜ್ ಮಿಶ್ರ ಅವರು 2020 ಜುಲೈ 29ರ ಬುಧವಾರ ಮೂರನೇ ಬಾರಿಗೆ ತಿರಸ್ಕರಿಸಿದ ಬಳಿಕ, ಮುಖ್ಯಮಂತ್ರಿ ಕಳುಹಿಸಿದ ನಾಲ್ಕನೇ ಪ್ರಸ್ತಾವವನ್ನು ಒಪ್ಪಿದ್ದು, ಆಗಸ್ಟ್ 14ರಿಂದ ವಿಧಾನಸಭೆ ಅಧಿವೇಶನಕ್ಕೆ ಸಮ್ಮತಿಸಿದರು. ರಾಜ್ಯಪಾಲರು ಮೂರನೇಬಾರಿಗೆ ಪ್ರಸ್ತಾವ ತಿರಸ್ಕಿಸಿದ ಬೆನ್ನಲ್ಲೇ ಸಚಿವ ಸಂಪುಟದ ಸಭೆ ನಡೆಸಿದ ಗೆಹ್ಲೋಟ್ ಆಗಸ್ಟ್ ೧೪ರಿಂದ ಅಧಿವೇಶನ ಸಮಾವೇಶಗೊಳಿಸುವಂತೆ ಮತ್ತೆ ಪರಿಷ್ಕೃತ ಪ್ರಸ್ತಾಪ ಕಳಿಸಿದ್ದರು. ಇದೇ ವೇಳೆಗೆ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ೧೮ ಮಂದಿ ಬೆಂಬಲಿಗ ಶಾಸಕರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಅನರ್ಹತೆ ಪ್ರಕ್ತಿಯ ನಡೆಸದಂತೆ ತಮಗೆ ಆಜ್ಞಾಪಿಸಿರುವ ರಾಜಸ್ಥಾನ ಹೈಕೋರ್ಟ್ ಆದೇಶದ ವಿರುದ್ಧ ವಿಧಾನಸಭಾದ್ಯಕ್ಷ ಸಿಪಿ ಜೋಶಿ ಬುಧವಾರ ಮತ್ತೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು. ಕೊರೋನಾವೈರಸ್ ಸಾಂಕ್ರಾಮಿಕವನ್ನು ಉಲ್ಲೇಖಿಸಿದ ರಾಜ್ಯಪಾಲರು ಹಾಲಿ ಸಂಕಷ್ಟ ಸಮಯದಲ್ಲಿ ಕ್ಷಿಪ್ರ ನೋಟಿಸ್ ನೀಡಿ ಅಧಿವೇಶನ ಸಮಾವೇಶಗೊಳಿಸಲು ನಿರ್ದಿಷ್ಟ ಕಾರಣಗಳೇನು ಎಂಬುದಾಗಿ ಸ್ಪಷ್ಟ ಪಡಿಸಿ ಎಂಬುದಾಗಿ ಸೂಚಿಸಿದರು.  ೨೧ ದಿನಗಳ ನೋಟಿಸ್ ನೀಡಿ ಮಾಮೂಲಿಯಾಗಿ ಮುಂಗಾರು ಅಧಿವೇಶನ ಕರೆಯುವಂತೆಯೂ ರಾಜ್ಯಪಾಲರು ಸಲಹೆ ಮಾಡಿದರು. ರಾಜ್ಯಪಾಲರು ಮೂರನೇ ಬಾರಿ ಸಚಿವ ಸಂಪುಟದ ಶಿಫಾರಸನ್ನು ತಿರಸ್ಕರಿಸಿದ ಬಳಿಕ ಮುಖ್ಯಮಂತ್ರಿ ಗೆಹ್ಲೋಟ್ ಸಚಿವ ಸಂಪುಟದ ಸಭೆ ಕರೆದರು.  (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ಹರಡದಂತೆ ತಡೆಯುವ ಸಲುವಾಗಿ ಆಗಸ್ಟ್ ೧ರಿಂದ ಜಾರಿಯಾಗುವಂತೆ ಕೇಂದ್ರ ಸರ್ಕಾರವು ಅನ್ ಲಾಕ್ ೩ರ ಹೊಸ ಮಾರ್ಗಸೂಚಿಗಳನ್ನು 2020 ಜುಲೈ 29ರ ಬುಧವಾರ ಪ್ರಕಟಿಸಿತು.  ಆಗಸ್ಟ್ ೧ರಿಂದ ದೇಶಾದ್ಯಂತ ರಾತ್ರಿ ಕರ್ಫ್ಯೂವನ್ನು ರದ್ದು ಪಡಿಸಲಾಗಿದ್ದು, ಯೋಗ ಸಂಸ್ಥೆಗಳು ಹಾಗೂ ಜಿಮ್ನಾಷಿಯಂಗಳನ್ನು ಆಗಸ್ಟ್ ೫ರಿಂದ ತೆರೆಯಲು ಅನುಮತಿ ನೀಡಲಾಯಿತು.  ಮೆಟ್ರೋ ಸೇವೆಗಳು, ಚಿತ್ರ ಮಂದಿರಗಳು, ಈಜುಕೊಳಗಳು, ಮನರಂಜನಾ ಉದ್ಯಾನಗಳು, ಬಾರ್ಗಳು, ಸಭಾಂಗಣಗಳು ಮತ್ತು ಇತರ ಸಾಮಾಜಿಕ ಕೂಟಗಳಿಗೆ ಅವಕಾಶ ಇಲ್ಲ ಎಂದು ಮಾರ್ಗಸೂಚಿ ಹೇಳಿತು. ಕೊರೊನಾವೈರಸ್ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿನ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸಲು ಗೃಹ ಸಚಿವಾಲಯವು ತನ್ನ ಅನ್ಲಾಕ್ ಯೋಜನೆಗಳ ಅಡಿಯಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಹೊಸ ಮಾರ್ಗಸೂಚಿಗಳ ಪ್ರಕಾರ, ಕೋವಿಡ್ -೧೯ ಹರಡುವಿಕೆಯನ್ನು ಎದುರಿಸಲು ದೇಶದಲ್ಲಿ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂಗಳನ್ನು ಆಗಸ್ಟ್ ೧ರಿಂದ ರದ್ದು ಪಡಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಸಾಮಾಜಿಕ ಅಂತರ ಪಾಲಿಸುವುದರ ಜೊತೆಗೆ ಕಡ್ಡಾಯ ಮುಖಗವಸು (ಮಾಸ್ಕ್) ಧರಿಸುವುದು ಮುಂತಾದ ಇತರ ಆರೋಗ್ಯ ಶಿಷ್ಟಾಚಾರಗಳನ್ನು ಅನುಸರಿಸುವ ಮೂಲಕ ಆಚರಿಸಲು ಅನುಮತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಧಿಕಾರಿಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಪ್ರತಿಕ್ರಿಯೆಗಳ ಆಧಾರದ ಮೇಲೆ ಹೊಸ ಮಾರ್ಗಸೂಚಿಗಳನ್ನು ರಚಿಸಲಾಗಿದೆ ಎಂದು ಸರ್ಕಾರ ಹೇಳಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 29 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment