ಇಂದಿನ ಇತಿಹಾಸ History Today ಆಗಸ್ಟ್ 17
2020: ನವದೆಹಲಿ: ಶಾಸ್ತ್ರೀಯ ಸಂಗೀತ ಕ್ಷೇತ್ರದ ದಂತಕತೆಯಾಗಿರುವ ಹಿರಿಯ ಗಾಯಕ ಪಂಡಿತ್ ಜಸರಾಜ್ ಅವರು ತಮ್ಮ ೯೦ ನೇ ವಯಸ್ಸಿನಲ್ಲಿ 2020 ಆಗಸ್ಟ್ 17ರ ಸೋಮವಾರ ಅಮೆರಿಕದಲ್ಲಿ ನಿಧನರಾದರು. ಸೋಮವಾರ ಬೆಳಗ್ಗೆ ೫: ೧೫ ಕ್ಕೆ ತಮ್ಮ ತಂದೆ ಕೊನೆಯುಸಿರು ಎಳೆದರು ಎಂದು ಜಸ್ ರಾಜ್ ಪುತ್ರಿ ದುರ್ಗಾ ಜಸರಾಜ್ ಹೇಳಿಕೆಯಲ್ಲಿ ದೃಢಪಡಿಸಿದರು. ಜಸರಾಜ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. "ಅಮೆರಿಕದ ನ್ಯೂಜೆರ್ಸಿಯ ಮನೆಯಲ್ಲಿ, ಹೃದಯ ಸ್ತಂಭನದಿಂದಾಗಿ ಸಂಗೀತ ಮಾರ್ತಾಂಡ ಪಂಡಿತ ಜಸರಾಜ್ ಜಿ ಅವರು ಸೋಮವಾರ ಬೆಳಗ್ಗ್ಗೆ ೫: ೧೫ ಕ್ಕೆ ನಿಧನರಾದರು ಎಂದು ತಿಳಿಸಲು ನಾವು ಅತೀವವಾಗಿ ದುಃಖಿಸುತ್ತೇವೆ. ಭಗವಾನ್ ಕೃಷ್ಣನು ಅವರನ್ನು ಸ್ವರ್ಗದ ಬಾಗಿಲುಗಳ ಮೂಲಕ ಪ್ರೀತಿಯಿಂದ ಸ್ವಾಗತಿಸಲಿ, ಅಲ್ಲಿ ಪಂಡಿತ್ ಜಿ ಈಗ ಓಂ ನಮೋ ಭಗವತೆ ವಾಸುದೇವವನ್ನು ಕೇವಲ ತನ್ನ ಪ್ರೀತಿಯ ಭಗವಂತನಿಗಾಗಿ ಮಾತ್ರ ಹಾಡಲಿದ್ದಾರೆ. ಅವರ ಆತ್ಮವು ಶಾಶ್ವತ ಸಂಗೀತ ಶಾಂತಿಯಿಂದ ಕೂಡಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ. ನಿಮ್ಮೆಲ್ಲರ ಚಿಂತನೆ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು- ಪಂಡಿತ್ ಜಸರಾಜ್ ಜಿ ಅವರ ಕುಟುಂಬ ಮತ್ತು ಮೇವತಿ ಘರಾನಾ ವಿದ್ಯಾರ್ಥಿಗಳು’ ಎಂದು ದುರ್ಗಾ ಜಸರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏಳು ದಶಕಗಳಿಗಿಂತಲೂ ಹೆಚ್ಚು ಕಾಲ ಗಾಯನ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಪಂಡಿತ್ ಜಸರಾಜ್ ಅವರು ಪದ್ಮಶ್ರೀ, ಪದ್ಮಭೂಷಣ, ಮತ್ತು ಪದ್ಮವಿಭೂಷಣ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳಿಗೆ ಪಾತ್ರರಾಗಿದ್ದರು. ೧೯೩೦ ರಲ್ಲಿ ಹರಿಯಾಣದ ಹಿಸ್ಸಾರ್ ಪ್ರದೇಶದಲ್ಲಿ ಜನಿಸಿದ ಜಸರಾಜ್ ಸಂಗೀತಗಾರರ ಕುಟುಂಬಕ್ಕೆ ಸೇರಿದವರು. ಅವರ ತಂದೆ ಪಂಡಿತ್ ಮೋತಿರಾಮ್ ಮತ್ತು ಸಹೋದರರಾದ ಪ್ರತಾಪ್ ನಾರಾಯಣ್ ಮತ್ತು ಮಣಿರಾಮ್ ಸಹ ನುರಿತ ಸಂಗೀತಗಾರರಾಗಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಬೀಜಿಂಗ್: ಪರಸ್ಪರ ನಂಬಿಕೆಯನ್ನು ಹೆಚ್ಚಿಸಲು ಮತ್ತು ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ 2020 ಆಗಸ್ಟ್ 17ರ ಸೋಮವಾರ ಪ್ರತಿಕ್ರಿಯಿಸಿತು. ಪರಸ್ಪರ ಗೌರವಿಸುವುದು ಉಭಯ ದೇಶಗಳ ಮುಂದಿರುವ ‘ಸರಿಯಾದ ಮಾರ್ಗ ಎಂದೂ ಚೀನಾ ಹೇಳಿತು. ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣಕ್ಕೆ ವಿದೇಶಾಂಗ ಸಚಿವಾಲಯ ಸೋಮವಾರ ಪ್ರತಿಕ್ರಿಯಿಸಿತ್ತು. ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ಬಲಪಡಿಸುವ ಬಗ್ಗೆ ಮಾತನಾಡಿದ್ದಲ್ಲದೆ, ದೇಶದ ಪ್ರಾದೇಶಿಕ ಸಮಗ್ರತೆಯು ಸರ್ವೋಚ್ಚವಾಗಿದೆ ಎಂದು ಹೇಳಿದ್ದರು. "ಎಲ್‌ಒಸಿಯಿಂದ (ಲೈನ್ ಆಫ್ ಕಂಟ್ರೋಲ್) ಹಿಡಿದು ಎಲ್‌ಎಸಿವರೆಗೆ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್), ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟವರಿಗೆ ಸ್ವತಃ ಅರ್ಥವಾಗುವಂತಹ ಭಾಷೆಯಲ್ಲಿ ಭಾರತದ ಸಶಸ್ತ್ರ ಪಡೆಗಳು ಪ್ರತಿಕ್ರಿಯಿಸಿವೆ’ ಎಂದು ಪ್ರಧಾನಿ ಮೋದಿ ಅವರು ದೆಹಲಿಯ ಕೆಂಪುಕೋಟೆಯಿಂದ ಮಾಡಿದ ತಮ್ಮ ಭಾಷಣದಲ್ಲಿ ಹೇಳಿದ್ದರು. ಚೀನಾವನ್ನು ಹೆಸರಿಸದೆಯೇ ಪೂರ್ವ ಲಡಾಕ್‌ನಲ್ಲಿ ನಡೆದ ಗಡಿ ಸಂಘರ್ಷವನ್ನೂ ಮೋದಿ ಉಲ್ಲೇಖಿಸಿದ್ದರು. ‘ಭಾರತದ ಸಮಗ್ರತೆಯು ನಮಗೆ ಸರ್ವೋಚ್ಚವಾಗಿದೆ. ನಾವು ಏನು ಮಾಡಬಹುದು, ನಮ್ಮ ಸೈನಿಕರು ಏನು ಮಾಡಬಹುದು ಎಂಬುದನ್ನು ಎಲ್ಲರೂ ಲಡಾಖ್‌ನಲ್ಲಿ ನೋಡಿದ್ದಾರೆ’ ಎಂದು ಗಲ್ವಾನ್ ಕಣಿವೆಯಲ್ಲಿ ಜೂನ್ ೧೫ ರಂದು ಸಂಭವಿಸಿದ ಗಡಿ ಘರ್ಷಣೆಯನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದ್ದರು. ಘರ್ಷಣೆಯಲ್ಲಿ ಕನಿಷ್ಠ ೨೦ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು ಮತ್ತು ಚೀನಾ ಸಹ ಸಾವುನೋವುಗಳನ್ನು ಅನುಭವಿಸಿರುವುದಾಗಿ ಒಪ್ಪಿಕೊಂಡಿದೆ. ಆದರೆ ನಿಖರವಾದ ಸಾವು ನೋವಿನ ಸಂಖ್ಯೆಯನ್ನು ಚೀನಾ ಬಹಿರಂಗ ಪಡಿಸಿಲ್ಲ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಎಲ್ಲ್ಲ ಮುನ್ನೆಚ್ಚರಿಕೆಗಳೊಂದಿಗೆ ಜೀವನ ಸಾಗಬೇಕಾಗಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ ತಿಂಗಳಿಗೆ ನಿಗದಿಯಾಗಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಹಾಗೂ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಂದೂಡಲು 2020 ಆಗಸ್ಟ್ 17ರ ಸೋಮವಾರ ನಿರಾಕರಿಸಿತು. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ನ್ಯಾಯಾಲಯವು ಕೋವಿಡ್-೧೯ ಸಾಂಕ್ರಾಮಿಕ ರೋಗದ ಬಗ್ಗೆ ಗಮನಹರಿಸಿದೆ ಆದರೆ ವಿದ್ಯಾರ್ಥಿಗಳ ಇಡೀ ವರ್ಷ ವ್ಯರ್ಥವಾಗಲು ಸಾಧ್ಯವಿಲ್ಲ, ಪರೀಕ್ಷೆ ಮುಂದೂಡಿಕೆಯಿಂದ ಅವರ ವೃತ್ತಿಜೀವನದ ಭವಿಷ್ಯಕ್ಕೆ ಅಪಾಯವಿದೆ ಎಂದು ಹೇಳಿತು. ‘ಜೀವನವನ್ನು ನಿಲ್ಲಿಸಲು ಸಾಧ್ಯವಿಲ್ಲ. ನಾವು ಎಲ್ಲಾ ಸುರಕ್ಷತೆಗಳೊಂದಿಗೆ ಮುಂದುವರೆಯಬೇಕಾಗಿದೆ ಮತ್ತು ಎಲ್ಲ ವಿದ್ಯಾರ್ಥಿಗಳ ವೃತ್ತಿಜೀವನವನ್ನು ಅನಿರ್ದಿಷ್ಟವಾಗಿ ಅಪಾಯಕ್ಕೆ ಸಿಲುಕಿಲು ಸಾಧ್ಯವಿಲ್ಲ’ ಎಂದು ಹೇಳಿದ ನ್ಯಾಯಪೀಠ ಹೇಳಿದ್ದು, ಕೊರೋನವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ಮುಂದೂಡಬೇಕೆಂದು ಬಯಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಪುರಸ್ಕರಿಸಲು ನಿರಾಕರಿಸಿತು. ಕೋವಿಡ್ -೧೯ ಬಹುಶಃ ಇನ್ನೊಂದು ವರ್ಷ ಇಲ್ಲಿ ಉಳಿಯಲಿದೆ ಎಂದು ನ್ಯಾಯಪೀಠ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾದ ಕನಿಷ್ಠ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು 2020 ಆಗಸ್ಟ್ 17ರ ಸೋಮವಾರ ಬೇಟೆಯಾಡಿ ಯೋಧರ ಮೇಲಿನ ದಾಳಿಯ ಸೇಡು ತೀರಿಸಿಕೊಂಡವು. ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಸೋಮವಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಇಬ್ಬರು ಸೈನಿಕರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಮೇಲೆ ದಾಳಿ ನಡೆಸಿ ಅವರನ್ನು ಹುತಾತ್ಮರನ್ನಾಗಿಸಿದ ಬೆನ್ನಲ್ಲೇ ತನ್ನ ಕಾರ್‍ಯಾಚರಣೆಯನ್ನು ತ್ವರಿತಗೊಳಿಸಿದ ಭದ್ರತಾ ಪಡೆಗಳು ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಿವೆ. ಸಿಆರ್ ಪಿಎಫ್ ಮತ್ತು ಪೊಲೀಸರ ಜಂಟಿ ಗಸ್ತು ತಂಡದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಬೆನ್ನಟ್ಟಿದ್ದು, ಪರಿಣಾಮವಾಗಿ ಗುಂಡಿನ ಘರ್ಷಣೆ ಆರಂಭವಾಗಿತ್ತು. ‘ಇನ್ನೂ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು (ಒಟ್ಟು ಇಬ್ಬರ ಹತ್ಯೆಯಾಗಿದೆ). ಕಾರ್ಯಾಚರಣೆ ಮುಂದುವರೆದಿದೆ’ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಭಾರತ-ಜಪಾನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಪ್ರಮುಖ ಸೇನಾ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಮೋದಿ ಮತ್ತು ಅಬೆ ನಡುವಣ ಭಾರತ-ಜಪಾನ್ ಶೃಂಗಸಭೆಯು ಮುಂದಿನ ತಿಂಗಳು ನಡೆಯಲಿದೆ ಎಂದು ಸುದ್ದಿ ಮೂಲಗಳು 2020 ಆಗಸ್ಟ್ 17ರ ಸೋಮವಾರ ತಿಳಿಸಿದವು. ಉಭಯ ನಾಯಕರು ಪ್ರಮುಖ ಸೇನಾ ಸಾಗಣೆ ಒಪ್ಪಂದ, ಸ್ವಾಧೀನ ಮತ್ತು ಕ್ರಾಸ್ ಸರ್ವಿಂಗ್ ಅಗ್ರಿಮೆಂಟ್‌ಗಳಿಗೆ (ಎಸಿಎಸ್‌ಎ) ಸಹಿ ಹಾಕುವ ನಿರೀಕ್ಷೆಯಿದೆ ಮತ್ತು ಜಪಾನಿನ ಕೆಲವು ಉತ್ಪಾದನಾ ಘಟಕಗಳು ಭಾರತಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯ ಬಗ್ಗೆ ಚರ್ಚಿಸಲಿದ್ದಾರೆ. ಸೌತ್ ಬ್ಲಾಕ್ ಅಧಿಕಾರಿಗಳ ಪ್ರಕಾರ, ವರ್ಚುವಲ್ ಶೃಂಗಸಭೆಯ ಅಂತಿಮ ದಿನಾಂಕಗಳು ಇನ್ನೂ ಚರ್ಚೆಯಲ್ಲಿವೆ. ಉಭಯ ದೇಶಗಳ ರಾಜತಾಂತ್ರಿಕರು ಸೆಪ್ಟೆಂಬರ್ ತಿಂಗಳಿನಲ್ಲಿ ದಿನಾಂಕ ಪರಿಗಣಿಸಲು ಯೋಚಿಸುವ ಮುನ್ನ ಅಕ್ಟೋಬರ್‌ನಲ್ಲಿ ಸಭೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಿದ್ದರು. ಅಸ್ಸಾಮಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆಯಿಂದಾಗಿ ಡಿಸೆಂಬರ್ ೧೫-೧೭ರಂದು ಗುವಾಹಟಿಯಲ್ಲಿ ನಡೆಸಲು ಉದ್ದೇಶಿಸಿದ್ದ ಶೃಂಗಸಭೆಯನ್ನು ಮುಂದೂಡಲಾಗಿತ್ತು. ಭಾರತದ ಪೂರ್ವ ಲಡಾಕ್ ವಲಯ ಮತ್ತು ಜಪಾನ್‌ನ ಸೆನ್ಕಾಕು ದ್ವೀಪಗಳಲ್ಲಿ ಕ್ರಮವಾಗಿ ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡೆಸಿದ ಆಕ್ರಮಣಕಾರಿ ಕ್ರಮಗಳ ಹಿನ್ನೆಲೆಯಲ್ಲಿ ಈ ಶೃಂಗಸಭೆ ವ್ಯವಸ್ಥೆಯಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment