ನಾನು ಮೆಚ್ಚಿದ ವಾಟ್ಸಪ್

Tuesday, August 25, 2020

ಇಂದಿನ ಇತಿಹಾಸ History Today ಆಗಸ್ಟ್ 25

 ಇಂದಿನ ಇತಿಹಾಸ  History Today ಆಗಸ್ಟ್ 25

2020: ನವದೆಹಲಿ: ಸುಪ್ರೀಂಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರನ್ನು ಟೀಕಿಸಿದ ಟ್ವೀಟ್‌ಗಳಿಗಾಗಿ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರಿಗೆ ನೀಡಬೇಕಾದ ಶಿಕ್ಷೆಯ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ 2020 ಆಗಸ್ಟ್ 25ರ ಮಂಗಳವಾರ ಕಾಯ್ದಿರಿಸಿತು. ನ್ಯಾಯಮೂರ್ತಿ ಅರುಣ್ ಮಿಶ್ರ್ರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ತೀರ್ಪನ್ನು ಕಾಯ್ದಿರಿಸುತ್ತಾನ್ಯಾಯಾಲಯವು ನ್ಯಾಯಯುತ ಟೀಕೆಗಳನ್ನು ಸ್ವಾಗತಿಸುತ್ತದೆ, ಆದರೆ ನ್ಯಾಯಾಲಯಗಳನ್ನು ಟೀಕಿಸುವವರು ನ್ಯಾಯಾಧೀಶರಿಗೆ ಪ್ರಚೋದನೆ ನೀಡಬಾರದು ಎಂದು ಹೇಳಿತು.  "ನಾವು ನ್ಯಾಯಯುತ ಟೀಕೆಗಳನ್ನು ಸಹಿಸುತ್ತೇವೆ ಮತ್ತು ಅದನ್ನು ಸ್ವಾಗತಿಸುತ್ತೇವೆ. ಆದರೆ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಪತ್ರಿಕೆಗಳಿಗೆ ಹೋಗಲು ಸಾಧ್ಯವಿಲ್ಲ. ನಾನು ಎಂದಿಗೂ ಪತ್ರಿಕೆಗಳಿಗೆ ಹೋಗಿಲ್ಲ. ನಾವು ಪ್ರಮಾಣವಚನಕ್ಕೆ ಬದ್ಧರಾಗಿದ್ದೇವೆ ಎಂದು ಮಿಶ್ರ  ಹೇಳಿದರು. ವಕೀಲರು ಮತ್ತು ನ್ಯಾಯಾಧೀಶರು ಒಂದೇ ಸಂಸ್ಥೆಯ ಭಾಗವಾಗಿದ್ದಾರೆ ಮತ್ತು ಸಂಸ್ಥೆಯ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಒಟ್ಟಾಗಿ ಕೆಲಸ ಮಾಡಬೇಕು ಎಂದು  ನ್ಯಾಯಮೂರ್ತಿ ಮಿಶ್ರ ಹೇಳಿದರು. ನೀವು (ವಕೀಲರು) ವ್ಯವಸ್ಥೆಯ ಭಾಗ. ನಾವು ಬಾರ್‌ನಿಂದ (ವಕೀಲರ ಮಂಡಳಿ) ಪ್ರತ್ಯೇಕವಾಗಿಲ್ಲ. ನಾವು (ನ್ಯಾಯಾಧೀಶರು) ಸಹ ಬಾರ್‌ನಿಂದ ಬಂದಿದ್ದೇವೆ ಎಂದು ಅವರು ಹೇಳಿದರು. ಭೂಷಣ್ ಪರ ಹಾಜರಾದ ಹಿರಿಯ ವಕೀಲ ರಾಜೀವ್ ಧವನ್, ನ್ಯಾಯಾಲಯವು ಭೂಷಣ್ ಅವರನ್ನು ಶಿಕ್ಷಿಸಬಾರದು ಮತ್ತು ಅವರು ಹುತಾತ್ಮರಾಗಬಾರದು ಎಂದು ಹೇಳಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ’ಮುಖವಾಡ ಧರಿಸದ ಬೇಜವಾಬ್ದಾರಿ ಜನರು ಭಾರತದಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ರೋಗವನ್ನು ಹರಡುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮುಖ್ಯಸ್ಥರು 2020 ಆಗಸ್ಟ್ 25ರ ಮಂಗಳವಾರ ಹೇಳಿದರು. "ನಾನು ಎಳೆಯರು ಅಥವಾ ವಯಸ್ಸಾದವರು ಎಂದು ಹೇಳುತ್ತಿಲ್ಲ. ಆದರೆ ಬೇಜವಾಬ್ದಾರಿಯುತರಾದ, ಕಡಿಮೆ ಜಾಗರೂಕತೆಯ, ಮುಖಗವಸುಗಳನ್ನು (ಮಾಸ್ಕ್) ಧರಿಸದ ಜನರು ಭಾರತದಲ್ಲಿ ಸಾಂಕ್ರಾಮಿಕ ರೋಗವನ್ನು ಹರಡುತ್ತಿದ್ದಾರೆ ಎಂದು ಐಸಿಎಂಆರ್ ಮಹಾನಿರ್ದೇಶಕ ಪ್ರೊಫೆಸರ್ (ಡಾ) ಬಲರಾಮ್ ಭಾರ್ಗವ ಹೇಳಿದರು.  ಮೂರು ಲಸಿಕೆ ಸಂಶೋಧಕರು ದೇಶದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದೂ ಭಾರ್ಗವ ಅವರು ಅವರು ಹೇಳಿದರು.  "ಭಾರತದಲ್ಲಿ ಮೂರು ಕೋವಿಡ್-೧೯ ಲಸಿಕೆ ಸಂಶೋಧಕರು ಮುಂಚೂಣಿಯಲ್ಲಿದ್ದಾರೆ. ಸೀರಮ್ ಇನ್ಸ್ಟಿಟ್ಯೂಟಿನ  ಲಸಿಕೆಯು ಹಂತ (ಬಿ) ಮತ್ತು ಹಂತ ಪ್ರಯೋಗಗಳಲ್ಲಿದೆ. ಭಾg ಬಯೋಟೆಕ್ ಮತ್ತು ಝೈಡಸ್  ಕ್ಯಾಡಿಲಾ ಅವರ ಲಸಿಕೆಗಳು ೧ನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿದೆ ಎಂದು ಡಾ ಭಾರ್ಗವ ನುಡಿದರು. ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೬೦,೯೭೫ ಕೊರೋನಾವೈರಸ್ ಪ್ರಕರಣಗಳು ಭಾರತದಲ್ಲಿ ದಾಖಲಾದ ದಿನ ಭಾರ್ಗವ ಅವರ ಹೇಳಿಕೆಗಳು ಬಂದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: "ನಾವು ಅವರ (ಸೋನಿಯಾ ಗಾಂಧಿಯವರ) ಭಾವನೆಗಳನ್ನು ನೋಯಿಸಿದ್ದರೆ, ಅದಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ತುರ್ತು ಸಾಂಸ್ಥಿಕ ಸುಧಾರಣೆಗಳನ್ನು ಕೋರಿದ ೨೩ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಎಂ ವೀರಪ್ಪ ಮೊಯಿಲಿ ಅವರು 2020 ಆಗಸ್ಟ್ 25ರ ಮಂಗಳವಾರ ಹೇಳಿದರು. ನಾವು ತಮ್ಮ ನಾಯಕತ್ವವನ್ನು ಪ್ರಶ್ನಿಸಿಲ್ಲ ಎಂಬುದಾಗಿ ಪ್ರತಿಪಾದಿಸಿದ ಮಾಜಿ ಕೇಂದ್ರ ಸಚಿವ, ಇದೇ ವೇಳೆಯಲ್ಲಿ ಹಂಗಾಮೀ ಅಧ್ಯಕ್ಷರನ್ನು ಉದ್ದೇಶಿಸಿ ಬರೆದ ಪತ್ರಕ್ಕೆ ಸಹಿ ಹಾಕಿರುವುದನ್ನು ಸಮರ್ಥಿಸಿದ್ದಾರೆ. ’ಪಕ್ಷವನ್ನು ಪುನಶ್ಚೇತನಗೊಳಿಸುವ ಮತ್ತು ಪುನರ್ರಚಿಸುವ ಅಗತ್ಯವಿರುವುದರಿಂದ ಪತ್ರ ಬರೆಯಲಾಗಿದೆ ಎಂದು ಮೊಯಿಲಿ  ಒತ್ತಿ ಹೇಳಿದ್ದಾರೆ.  ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಸರಿಯಲ್ಲ ಎಂಬುದಾಗಿ ಹೇಳಿದ ಮೊಯಿಲಿ, ಕೃತ್ಯದ ಹಿಂದಿದ್ದವರು ಯಾರು ಎಂಬುದನ್ನು ಕಂಡುಹಿಡಿಯಲು ಪಕ್ಷದ ಆಂತರಿಕ ವಿಚಾರಣೆಗೆ ಆಗ್ರಹಿಸಿದರು ಮತ್ತು ಅವರಿಗೆ ಶಿಕ್ಷೆಯಾಗಬೇಕೆಂದು ಬಯಸಿದರು. ಪತ್ರಕ್ಕೆ ಸಹಿ ಹಾಕಿದ ೨೩ ನಾಯಕರಲ್ಲಿ ಯಾರಿಗೂ ಕಾಂಗ್ರೆಸ್ ತೊರೆಯುವ ಉದ್ದೇಶವಿಲ್ಲ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೂ ಆದ ಮೊಯಿಲಿ ಪ್ರತಿಪಾದಿಸಿದರು. ಪತ್ರ ಪ್ರಕರಣದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಕೈಗಳನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬಲಪಡಿಸಲು ಕಾಂಗ್ರೆಸ್ ಕಾರ್‍ಯಕಾರಿ ಸಮಿತಿಯು (ಸಿಡಬ್ಲ್ಯೂಸಿ) ಸರ್ವಾನುಮತದಿಂದ ತೀರ್ಮಾನ ಕೈಗೊಂಡ ಮರುದಿನ ಹೇಳಿಕೆ ನೀಡಿದ ಮೊಯಿಲಿನಾವು ಸೋನಿಯಾಜಿ ಅವರ ನಾಯಕತ್ವವನ್ನು ಎಂದಿಗೂ ಪ್ರಶ್ನಿಸಿಲ್ಲಎಂದು ಸ್ಪಷ್ಟ ಪಡಿಸಿದರು. ಪಕ್ಷ ಮತ್ತು ಅದರ ನಾಯಕತ್ವವನ್ನು ದುರ್ಬಲಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಉನ್ನತ ನೀತಿ ನಿರ್ಧಾರ ಸಮಿತಿಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಘರ್ಷಣೆಯ ಹಿನ್ನೆಲೆಯಲ್ಲಿ ಲಡಾಖ್ ತಲುಪಲು ಸರ್ವ ಋತು ಮಾರ್ಗ ರಚನೆಯನ್ನು ಪೂರ್ಣಗೊಳಿಸಲು ಭಾರತದ ರಾಷ್ಟ್ರೀಯ ಭದ್ರತಾ ಯೋಜಕರು ಶ್ರಮಿಸುತ್ತಿದ್ದಾರೆ. ಇದು ಹಿಮಾಚಲ ಪ್ರದೇಶದ ದಾರ್ಚಾವನ್ನು ಕಾರ್ಗಿಲ್‌ನ ಝನ್ಸ್ಕರ್ ಕಣಿವೆಯ ಪಡುಮ್ ಮೂಲಕ ನಿಮುವಿಗೆ ಸಂಪರ್ಕಿಸುತ್ತದೆ ಎಂದು ವರದಿಗಳು 2020 ಆಗಸ್ಟ್ 25ರ ಮಂಗಳವಾರ ತಿಳಿಸಿದವು. ನಿಮು ಲೇಹ್ ಪಟ್ಟಣದಿಂದ ೩೫ ಕಿಲೋಮೀಟರ್ ದೂರದಲ್ಲಿದೆ ಮತ್ತು ಪೂರ್ವ ಲಡಾಕ್ ಮತ್ತು ಸಿಯಾಚಿನ್ ಹಿಮನದಿಯ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿರುವ ೧೪ ಕೋರ್‌ನ ಪ್ರಧಾನ ಕಚೇರಿಯನ್ನು ಹೊಂದಿದೆ. ಮಾರ್ಗವು ಈಗಾಗಲೇ ಇತರ ಎರಡು ಮಾರ್ಗಗಳಿಂದ ಸಂಪರ್ಕ ಹೊಂದಿದ ಲಡಾಖ್‌ಗೆ ಮೊತ್ತ ಮೊದಲ ಸರ್ವ ಋತು ಮಾರ್ಗವಾಗಿದೆ. ಮೊದಲನೆಯದು ಜಮ್ಮು ಮತ್ತು ಕಾಶ್ಮೀರದ ಜೊಜಿ ಲಾ ಮೂಲಕ ಇರುವ ಮಾರ್ಗವಾದರೆ, ಎರಡನೆಯದು ಹಿಮಾಚಲದ ಮನಾಲಿ-ಉಪಶಿ-ಲೇಹ್ ಅಕ್ಷದ ಮೂಲಕ ಸಾಗುವ ಮಾರ್ಗವಾಗಿದೆ. ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು ೪೬ ಕಿ.ಮೀ ಕಡಿಮೆ ಮಾಡುವ ರೋಹ್ಟಾಂಗ್ ಲಾದಲ್ಲಿರುವ .೦೨ ಕಿಲೋಮೀಟರ್ ಅಟಲ್ ಸುರಂಗವು ಮುಂದಿನ ತಿಂಗಳು ಕಾರ್ಯಾಚರಣೆಗೆ ಲಭ್ಯವಾಗಲಿದೆ. ಪಾಕಿಸ್ತಾನ ಮತ್ತು ಅದರ ಸರ್ವಋತು ಸ್ನೇಹಿತ ಚೀನಾವು ಸಿಯಾಚಿನ್ ಹಿಮನದಿ ಮತ್ತು ದೌಲತ್ ಬೇಗ್ ಓಲ್ಡಿ ಮೇಲೆ ಹೇಗೆ ಕಣ್ಣಿಟ್ಟಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಲಡಾಖ್‌ನ್ನು ಸಂಪರ್ಕಿಸಲು ಮೂರನೆಯ  ಮಾರ್ಗವನ್ನು ತುರ್ತಾಗಿ ರಚಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಮಿಲಿಟರಿ ಕಮಾಂಡರುಗಳು  ತಿಳಿಸಿದ್ದಾರೆ. ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾ ಜೊತೆಗೆ ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಸೇನೆ ಜಮಾವಣೆ ಆರಂಭಿಸಿದ ಬಳಿಕ ರಕ್ಷಣಾ ಸಚಿವಾಲಯದ ರಸ್ತೆ ಯೋಜನೆಗೆ ರಸ್ತೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮತ್ತು ಅವರ ಸಹೋದ್ಯೋಗಿ ಜನರಲ್ ವಿಕೆ ಸಿಂಗ್ ಒತ್ತು ನೀಡುತ್ತಿದ್ದಾರೆ. ಸೇನೆ ವಾಪಸಾತಿ ಸಂಬಂಧ ಮಾತುಕತೆ ನಡೆಸುತ್ತಿದ್ದರೂ, ಸೈನಿಕರನ್ನು ಹಿಂಪಡೆಯಲು ಚೀನಾವು ಹಿಂಜರಿಯುತ್ತಿರುವುದನ್ನೂ ಭಾರತ ಗಮನದಲ್ಲಿ ಇಟ್ಟುಕೊಂಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮಾನವ ಕಂಪ್ಯೂಟರ್ ಎಂದು ಖ್ಯಾತರಾಗಿದ್ದ ಕರ್ನಾಟಕದ ಶಕುಂತಲಾ ದೇವಿ ಅವರ ಪ್ರತಿಭೆಗೆ ಸಮನಾದ ಮತ್ತೊಬ್ಬ ಬುದ್ದಿ ವಂತ ಯುವಕ ದೇಶದಲ್ಲಿ ಉದಯವಾಗಿದ್ದಾನೆ. ಕೆಲ ದಿನಗಳ ಹಿಂದೆ ಲಂಡನ್ನಲ್ಲಿ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ (ಎಂಎಸ್)ನಲ್ಲಿ ನಡೆದಿದ್ದ ಮೆಂಟಲ್ ಕೌಂಟ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆಲಿಸಿಕೊಟ್ಟಿದ್ದ ಹೈದರಾಬಾದಿನ ನೀಲಕಂಠ ಭಾನುಪ್ರಕಾಶ (೨೦) ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಆಗಿ ಹೊರಹೊಮ್ಮಿದ್ದಾರೆ.  ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನ ಗಣಿತ ವಿದ್ಯಾರ್ಥಿ ನೀಲ ಕಂಠ ಭಾನುಪ್ರಕಾಶ ಅವರು ವಿಶ್ವ ದಾಖಲೆಯೊಂದಿಗೆ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತವನ್ನು ಜಾಗತಿಕ ಮಟ್ಟದಲ್ಲಿ ಗಣಿತ ದಲ್ಲಿ ಮುಂಚೂಣಿಯಲ್ಲಿರಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಭಾನು ಪ್ರಕಾಶ ತಿಳಿಸಿದರು.  ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂದು ಖ್ಯಾತರಾಗಿರುವ ಅವರು ವಿಶ್ವ ದಾಖಲೆ ಮತ್ತು ೫೦ ಲಿಮ್ಕಾ ದಾಖಲೆ ಹೊಂದಿದ್ದಾರೆ. ಭಾನುಪ್ರಕಾಶ  ಅವರ ಮೆದುಳು ಕ್ಯಾಲ್ಕು ಲೇಟರ್ ವೇಗಕ್ಕಿಂತ ವೇಗವಾಗಿ ಲೆಕ್ಕಾಚಾರ ಮಾಡುತ್ತದೆ. ದಾಖಲೆಗಳನ್ನು ಮುರಿಯುವ ಶಕ್ತಿ ಮಾನವ ಕಂಪ್ಯೂಟರ್ ಎಂದೇ ಖ್ಯಾತ ವಾದ ಶಕುಂತಲಾ ದೇವಿ ಅವರ ಬಳಿ ಇದ್ದಿತು. ಯುಕೆ, ಜರ್ಮನಿ, ಯುಎಇ, ಫ್ರಾನ್ಸ್ ಗ್ರೀಸ್ ಮತ್ತು ಲೆಬನಾನ್ ಸೇರಿದಂತೆ ೧೩ ದೇಶಗಳಿಂದ ೫೭ ಸ್ಪರ್ಧಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಭಾನುಪ್ರಕಾಶ ಗೆಲುವು ಸಾಧಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 25 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment