ನಾನು ಮೆಚ್ಚಿದ ವಾಟ್ಸಪ್

Tuesday, August 11, 2020

ಇಂದಿನ ಇತಿಹಾಸ History Today ಆಗಸ್ಟ್ 11

 ಇಂದಿನ ಇತಿಹಾಸ  History Today ಆಗಸ್ಟ್ 11

2020: ಮಾಸ್ಕೊ: ರಷ್ಯಾದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ವಿಶ್ವದ ಪ್ರಪ್ರಥಮ ಕೋವಿಡ್-೧೯ ಲಸಿಕೆಸ್ಪುಟ್ನಿಕ್-ವಿಗೆ ರಷ್ಯಾದ ಆರೋಗ್ಯ ಸಚಿವಾಲಯ 2020 ಆಗಸ್ಟ್  11ರ ಮಂಗಳವಾರ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ನೀಡಿದ್ದು ಜನರ ಬಳಕೆಗೆ ಬಿಡುಗಡೆಯಾಗಲಿದೆ. ರಷ್ಯಾ ಅಧ್ಯಕ್ಷ ವ್ಯಾಡಿಮೀರ್ ಪುಟಿನ್ ಅವರ ಪುತ್ರಿಗೆ ಲಸಿಕೆಯನ್ನು ನೀಡಲಾಗಿದೆ. ಕೊರೋನವೈರಸ್ ವಿರುದ್ಧ "ಸುಸ್ಥಿರ ರೋಗ ನಿರೋಧಕ ಶಕ್ತಿ ನೀಡುವ ಮೊದಲ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಕಟಿಸಿದರು. ಸೋವಿಯತ್ ಉಪಗ್ರಹದ ನಂತರ ಮಾಸ್ಕೋ ತನ್ನ ಹೊಸ ಕೊರೋನವೈರಸ್ ಲಸಿಕೆಯನ್ನು "ಸ್ಪುಟ್ನಿಕ್ ವಿ" ಎಂಬುದಾಗಿ ಹೆಸರು ನೀಡಿದೆ ಎಂದು ಪುಟಿನ್ ಹೇಳಿದರು. "ಇಂದು ಬೆಳಗ್ಗೆ, ವಿಶ್ವದಲ್ಲೇ ಮೊದಲ ಬಾರಿಗೆ ರಷ್ಯಾದಲ್ಲಿ ಹೊಸ ಕೊರೋನವೈರಸ್ ವಿರುದ್ಧ ಲಸಿಕೆ ನೋಂದಾಯಿಸಲಾಗಿದೆ ಎಂದು ಪುಟಿನ್ ಸರ್ಕಾರಿ ಮಂತ್ರಿಗಳೊಂದಿಗೆ ನಡೆಸಿದ ದೂರದರ್ಶನದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಿಳಿಸಿದರು. "ನನ್ನ ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಲಸಿಕೆ ನೀಡಲಾಗಿದೆ ಎಂದು ಪುಟಿನ್ ನುಡಿದರು. ಲಸಿಕೆಯ ಅಭಿವೃದ್ಧಿಗೆ ಕೆಲಸ ಮಾಡಿದ ಎಲ್ಲರಿಗೂ ಪುಟಿನ್ ಅವರು ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಇದನ್ನು "ಜಗತ್ತಿಗೆ ಬಹಳ ಮುಖ್ಯವಾದ ಹೆಜ್ಜೆ" ಎಂದು ಬಣ್ಣಿಸಿದರು. ದೇಶದ ಸಂಶೋಧನಾ ಸಂಸ್ಥೆ ಶೀಘ್ರದಲ್ಲೇ ಕೊರೋನವೈರಸ್ ಲಸಿಕೆಯ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ ಎಂದು ಅವರು ಆಶಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಹೆಣ್ಣುಮಕ್ಕಳು ಹಿಂದೂ ಅವಿಭಜಿತ ಕುಟುಂಬದ ಆಸ್ತಿಯಲ್ಲಿನ ಸಮಾನತೆಯ ಹಕ್ಕಿನಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ 2020 ಆಗಸ್ಟ್  11ರ ಮಂಗಳವಾರ  ಮಹತ್ವದ ತೀರ್ಪು ನೀಡಿತು. ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಗೆ ತಿದ್ದುಪಡಿ ತರಲಾದ ೨೦೦೫ ಕ್ಕೆ ಮೊದಲೇ ತಂದೆ ತೀರಿಕೊಂಡಿದ್ದರೂ ಸಹ ಜಂಟಿ ಹಿಂದೂ ಕುಟುಂಬ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಸಹವರ್ತಿ ಹಕ್ಕುಗಳಿವೆ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್ ನಜೀರ್ ಮತ್ತು ಎಮ್‌ಆರ್ ಷಾ ಅವgನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠವು ತೀರ್ಪು ನೀಡಿತು. ೧೯೫೬ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ ೬ಕ್ಕೆ ಸೇರಿಸಲಾಗಿರುವ ವಿಧಿಗಳು ತಿದ್ದುಪಡಿಗೆ ಮೊದಲ ಅಥವಾ ನಂತರ ಜನಿಸಿದ ಪುತ್ರಿಗೆ, ಪುತ್ರನಿಗೆ ಸಮಾನವಾದ ಹಕ್ಕು ಮತ್ತು ಹೊಣೆಗಾರಿಕೆಗಳೊಂದಿಗೆ ಸಹವರ್ತಿ (ಕೋಪಾರ್ಸೆನರ್) ಸ್ಥಾನಮಾನವನ್ನು ನೀಡುತ್ತದೆ ಎಂದು ಪೀಠ ಹೇಳಿತು. ಕೋಪಾರ್ಸೆನರ್ ಎನ್ನುವುದು ಜನ್ಮದಿಂದ ಮಾತ್ರ ಪೋಷಕರ ಆಸ್ತಿಯಲ್ಲಿ ಕಾನೂನುಬದ್ಧ ಹಕ್ಕನ್ನು ಪಡೆದುಕೊಳ್ಳುವ ವ್ಯಕ್ತಿಗೆ ಬಳಸುವ ಪದವಾಗಿದೆ. ನ್ಯಾಯಪೀಠವು, "ಸೆಪ್ಟೆಂಬರ್ , ೨೦೦೫ ರಿಂದ ಜಾರಿಗೆ ಬಂದ ಸೆಕ್ಷನ್ () ಪ್ರಕಾರ, ಮಗಳು ೨೦೦೪ ಡಿಸೆಂಬರ್ ಮುನ್ನ ನಡೆದ ಇತ್ಯರ್ಥ ಅಥವಾ ಅನ್ಯೀಕರಣ, ವಿಭಜನೆ ಅಥವಾ ಒಡಂಬಡಿಕೆಯ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಉಳಿತಾಯ ಸಹಿತವಾದ ಹಕ್ಕುಗಳನ್ನು ಪಡೆಯಬಹುದು. ಕೊಪಾರ್ಸೆನರಿಯಲ್ಲಿನ ಹಕ್ಕು ಹುಟ್ಟಿನಿಂದಲೇ ಇರುವುದರಿಂದ, ಸೆಪ್ಟೆಂಬರ್ , ೨೦೦೫ ರಲ್ಲಿ ಕೊಪಾರ್ಸೆನರ್ ತಂದೆ ಜೀವಂತವಾಗಿರುವುದು ಅನಿವಾರ್ಯವಲ್ಲ ಎಂದು ಪೀಠ ಹೇಳಿತು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಒಂದು ದಿನದ ಬಳಿಕ ತೀವ್ರ ಅಸ್ವಸ್ಥರಾಗಿದ್ದು ಗಂಭೀರ ಸ್ಥಿತಿಯಲ್ಲಿ ಇರುವ ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ ಎಂದು ಸೇನಾ ಸಂಶೋಧನಾ ಮತ್ತು ಚಿಕಿತ್ಸಾ ಆಸ್ಪತ್ರೆಯು 2020 ಆಗಸ್ಟ್  11ರ ಮಂಗಳವಾರ ತಿಳಿಸಿತು. ೮೪ರ ಹರೆಯದ ಮುಖರ್ಜಿ ಅವರನ್ನು ಸೋಮವಾರ ಮಧ್ಯಾಹ್ನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನವೇ ಅವರಿಗೆ ಕೋವಿಡ್-೧೯ ಸೋಂಕು ತಗುಲಿತ್ತು. ದೆಹಲಿ ಕಂಟೋನ್ಮೆಂಟ್ ಪ್ರದೇಶದ ಸೇನಾ ಆಸ್ಪತ್ರೆಗೆ ದಾಖಲಾಗಿರುವ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿಯು ಇನ್ನೂ ಗಂಭೀರವಾಗಿಯೇ ಇದೆ. ಆಗಸ್ಟ್ ೧೦ರಂದು ಮೆದುಳಿನ ಹೆಪ್ಪುಗಟ್ಟುವಿಕೆಯ ಕಾರಣ ಪ್ರಾಣರಕ್ಷಕ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾದ ಮಾಜಿ ರಾಷ್ಟ್ರಪತಿಯವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಬದಲಿಗೆ ಆರೋಗ್ಯ ಇನ್ನಷ್ಟು ಹದಗೆಟ್ಟಿದೆ. ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ. ತಜ್ಞ ವೈದ್ಯರ ತಂಡ ಮಾಜಿ ರಾಷ್ಟ್ರಪತಿಯವರ ಆರೋಗ್ಯದ ಮೇಲೆ ನಿರಂತರ ನಿಗಾ ಇಟ್ಟಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

 2020: ಇಂದೋರ್ (ಮಧ್ಯಪ್ರದೇಶ): ಸಮಕಾಲೀನ ಉರ್ದು ಕವಿಗಳಲ್ಲಿ ಒಬ್ಬರಾದ ಖ್ಯಾತ ಉರ್ದು ಕವಿ ರಾಹತ್ ಇಂದೋರಿ ಅವರು 2020 ಆಗಸ್ಟ್  11ರ ಮಂಗಳವಾರ ಮಧ್ಯಪ್ರದೇಶದ ಇಂದೋರಿನ  ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಪುತ್ರ ಸತ್ಲಾಜ್ ಇಂದೋರಿ ತಿಳಿಸಿದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು. ಇಂದೋರಿ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಭಾನುವಾರ ದೃಢಪಟ್ಟಿತ್ತು. "ಅವರನ್ನು ಕೊರೋನವೈರಸ್ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಹೃದಯಾಘಾತದಿಂದ ನಿಧನರಾದರು" ಎಂದು ಸತ್ಲಾಜ್ ಇಂದೋರಿ ಹೇಳಿದರು. ಇಂದೋರಿ ಅವರಿಗೆ ಸೋಮವಾರ ಎರಡು ಬಾರಿ ಹೃದಯಾಘಾತವಾಗಿದೆ ಎಂದು ಶ್ರೀ ಅರಬಿಂದೋ ಆಸ್ಪತ್ರೆಯ ವೈದ್ಯರು ತಿಳಿಸಿದರು. "ಕೋವಿಡ್ -೧೯ ಸೋಂಕು ತಗುಲಿದ್ದು ಖಚಿತವಾದ ಬಳಿಕ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಶೇಕಡಾ ೬೦ರಷ್ಟು ನ್ಯುಮೋನಿಯಾ ಇತ್ತು" ಎಂದು ಡಾ.ವಿನೋದ್ ಭಂಡಾರಿ ಹೇಳಿದರು. ೭೦ ಹರೆಯದ ಇಂದೋರಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು ಮತ್ತು ಮಂಗಳವಾರ ಬೆಳಿಗ್ಗೆ ಅವರು ಕೋವಿಡ್ ದೃಢಪಟ್ಟ ವರದಿಯ ಬಗ್ಗೆ ಟ್ವೀಟ್ ಮಾಡಿ, ಸಾಮಾಜಿಕ ಮಾಧ್ಯಮಗಳ ಮೂಲಕ ಆರೋಗ್ಯದ ಬಗ್ಗೆ ವಿವರ ನೀಡುವುದಾಗಿ ತಿಳಿಸಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಕೊರೋನವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಾಮೂಹಿಕ ಸಾರಿಗೆ ವ್ಯವಸ್ಥೆಗೆ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಉಲ್ಲೇಖಿಸಿ ಉಪನಗರ ಸೇವೆಗಳು ಸೇರಿದಂತೆ ನಿಯಮಿತ ರೈಲ್ವೆ ಸೇವೆಗಳನ್ನು ಮುಂದಿನ ಸೂಚನೆ ಬರುವವರೆಗೂ ಸ್ಥಗಿತಗೊಳಿಸಲಾಗುವುದು ಎಂದು ರೈಲ್ವೆ ಸಚಿವಾಲಯ 2020 ಆಗಸ್ಟ್ 11ರ ಮಂಗಳವಾರ ಪ್ರಕಟಿಸಿತು. ಸರ್ಕಾರದ ಕೊನೆಯ ಆದೇಶದ ಪ್ರಕಾರ, ರೈಲ್ವೇ ಸೇವೆಗಳ ಅಮಾತನ್ನು ಆಗಸ್ಟ್ ೧೨ ರವರೆಗೆ ವಿಸ್ತರಿಸಲಾಗಿತ್ತು. ರಾಜ್ಯ ಸರ್ಕಾರಗಳ ವಿನಂತಿ ಮೇರೆಗೆ, ಆಯ್ದ ತಾಣಗಳ ನಡುವೆ ಪ್ರಸ್ತುತ ಚಲಿಸುತ್ತಿರುವ ೨೩೦ ವಿಶೇಷ ರೈಲುಗಳು ಮುಂಬೈನ ಸ್ಥಳೀಯ ರೈಲುಗಳ ಜೊತೆಗೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಲಿವೆ ಎಂದು ಸಚಿವಾಲಯವು ಸೂಚಿಸಿದೆ. ಪ್ರಸ್ತುತ ಅಗತ್ಯ ಸೇವೆಗಳೊಂದಿಗೆ ಕೆಲಸ ಮಾಡುವ ಸಿಬ್ಬಂದಿಯನ್ನು ಮಾತ್ರ ಇದಕ್ಕಾಗಿ ಬಳಸಲಾಗುತ್ತಿದೆ. ವಿಶೇಷ ರೈಲುಗಳ ಬೋಗಿಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಅವಶ್ಯಕತೆಯ ಆಧಾರದ ಮೇಲೆ ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಬಹುದು ಎಂದು ಸಚಿವಾಲಯ ತಿಳಿಸಿತು. "ಆದಾಗ್ಯೂ, ದಿಗ್ಬಂಧನಕ್ಕೆ ಮುಂಚಿತವಾಗಿ ಚಲಿಸುತ್ತಿದ್ದ ಎಲ್ಲ್ಲ ಇತರ ಸಾಮಾನ್ಯ ರೈಲುಗಳು ಮತ್ತು ಉಪನಗರ ರೈಲುಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ಜೈಪುರ: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಜೊತೆ ಶಾಂತಿ ಒಪ್ಪಂದಕ್ಕೆ ಮೊಹರು ಹಾಕಿದ ಒಂದು ದಿನದ ನಂತರ, 2020 ಆಗಸ್ಟ್ 11ರ ಮಂಗಳವಾರ ಜೈಪುರಕ್ಕೆ ವಾಪಸಾದ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರುಪಕ್ಷದಿಂದ ಯಾವುದೇ ಹುದ್ದೆಗೆ ಒತ್ತಾಯಿಸಿಲ್ಲ ಎಂದು ಸ್ಪಷ್ಟ ಪಡಿಸಿದರು. ‘ನಾನು ಪಕ್ಷದಿಂದ ಯಾವುದೇ ಹುದ್ದೆಯನ್ನು ಕೋರಿಲ್ಲ ಆದರೆ ಶಾಸಕರು ಸಮಸ್ಯೆಗಳನ್ನು ಎತ್ತಿದ್ದಾರೆ ಮತ್ತು ಅವರ ವಿರುದ್ಧ ಯಾವುದೇ ರಾಜಕೀಯ ರಾಜಕೀಯ ಇರಬಾರದು ಎಂದು ಹೇಳಿದ್ದಾರೆ ಎಂದು ಪೈಲಟ್ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕಾರ್ಯವೈಖರಿ ಅಥವಾ ಆಲೋಚನೆಗಳ ಮೇಲೆ ಭಿನ್ನಾಭಿಪ್ರಾಯಗಳು ಸೈದ್ಧಾಂತಿಕವಾಗಿರಬಹುದು, ಆದರೆ ರಾಜಕೀಯದಲ್ಲಿ, ಸೇಡಿಗೆ ಸ್ಥಳವಿಲ್ಲ ಎಂದು ಅವರು ಹೇಳಿದರು. "ನಾನು ಎಲ್ಲ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇ ಎಂದು ಅವರು ಹೇಳಿದರು. "ಪಕ್ಷದ ನಾಯಕತ್ವವು ಕಾರ್ಯವೈಖರಿ, ಅಭಿವೃದ್ಧಿ, ಕಾರ್ಮಿಕರ ಭಾಗವಹಿಸುವಿಕೆ, ಸ್ವಾಭಿಮಾನ ಇತ್ಯಾದಿಗಳಿಗೆ ಸಂಬಂಧಿಸಿದ ನಮ್ಮ ಸಮಸ್ಯೆಯನ್ನು ಪರಿಶೀಲಿಸಲು ಮುಂದಾಗಿರುವುದು ನನಗೆ ಸಂತಸ ತಂದಿದೆ. ಎಐಸಿಸಿಯು ಒಂದು ಸಮಿತಿಯನ್ನು ರಚಿಸಿದೆ, ಅದು ಸಮಯಕ್ಕೆ ತಕ್ಕಂತೆ ಸಮಸ್ಯೆಗಳನ್ನು ಬಗೆಹರಿಸುತ್ತದೆ" ಎಂದು ಪೈಲಟ್ ಹೇಳಿದರು. ಜೈಪುರಕ್ಕೆ ಆಗಮಿಸಿದಾಗ, ಅವರ ಪರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಕಾರ್‍ಯಕರ್ತರ ದೊಡ್ಡ ಗುಂಪು ಪೈಲಟ್ ಅವರನ್ನು ಸ್ವಾಗತಿಸಿತು. ನಮ್ಮ ಬಂಡಾಯ ಎಂದಿಗೂ "ಪಕ್ಷ ವಿರೋಧಿ ಅಲ್ಲ, ಆದರೆ ರಾಜಸ್ಥಾನದಲ್ಲಿ ನಡೆದ ಘಟನೆಗಳನ್ನು ನಿರೂಪಿಸುವ ಸಾಧನವಾಗಿದೆ ಎಂದು ಇದಕ್ಕೂ ಮುನ್ನ ಪೈಲಟ್ ಹೇಳಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 11 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment