ಇಂದಿನ ಇತಿಹಾಸ History Today ಆಗಸ್ಟ್ 14
2020: ಜೈಪುರ: ತಮ್ಮ ಪಕ್ಷದ ೧೯ ಭಿನ್ನಮತೀಯ ಶಾಸಕರು ಬಂಡಾಯವೆದ್ದು ಸರ್ಕಾರದ ಉಳಿವಿಗೇ ಹಾಕಿದ್ದ ಬೆದರಿಕೆಯ ಒಂದು ತಿಂಗಳ ನಂತರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 2020 ಆಗಸ್ಟ್ 14ರ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದರು. ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಂಡಾಯ ನಾಯಕ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಗೆಹ್ಲೋಟ್ ಅವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು "ರಾಜಸ್ಥಾನದ ಜನರ ಹಿತದೃಷ್ಟಿಯಿಂದ ಮತ್ತು ಜನರಿಗೆ ನೀಡಿದ ಭರವಸೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದೇವೆ’ ಎಂಬುದಾಗಿ ಘೋಷಿಸಿದ ಒಂದು ದಿನದ ಬಳಿಕ ಸದನದಲ್ಲಿ ಈ ಬಲಾಬಲ ಪರೀಕ್ಷೆ ನಡೆಯಿತು. ಸದನದಲ್ಲಿ ಪಡೆದಿರುವ ಈ ಗೆಲುವು ಮುಖ್ಯಮಂತ್ರಿ ಗೆಹ್ಲೋಟ್ ಅವರಿಗೆ ಮನೆಗೆ ಮರಳಿದ ಬಂಡುಕೋರರ ಜೊತೆ ಸಂಬಂಧ ಸುಧಾರಣೆಗೆ ಆರು ತಿಂಗಳ ಕಾಲಾವಕಾಶವನ್ನು ನೀಡಿತು. ಗೊತ್ತುವಳಿ ಕುರಿತು ಚರ್ಚೆಯನ್ನು ಪ್ರಾರಂಭಿಸಿದ ಧಾರಿವಾಲ್, ಮಧ್ಯಪ್ರದೇಶ, ಮಣಿಪುರ ಮತ್ತು ಗೋವಾ ಸರ್ಕಾರಗಳನ್ನು ಹಣ ಮತ್ತು ಅಧಿಕಾರವನ್ನು ಬಳಸಿಕೊಂಡು "ಉರುಳಿಸಲು" ಪ್ರಯತ್ನಿಸಕಾಗಿದೆ ಎಂದು ದೂಷಿಸಿದರು, ಆದರೆ ರಾಜಸ್ಥಾನದಲ್ಲಿ ಇದೇ ರೀತಿಯ ಪ್ರಯತ್ನವು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು. ಅಕ್ಬರನನ್ನು ಉಲ್ಲೇಖಿಸಿ, ಮೊಘಲ್ ಚಕ್ರವರ್ತಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಅನ್ವೇಷಣೆಯಲ್ಲಿ ರಾಜಸ್ಥಾನದ ಮೇವಾರದಲ್ಲಿ ಸೋಲನ್ನು ಅನುಭವಿಸಬೇಕಾಯಿತು ಎಂದು ಹೇಳಿದರು. ಅಂತೆಯೇ, ಅಶೋಕ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿಯ ಪ್ರಯತ್ನಗಳು ಸೋಲಲ್ಪಟ್ಟವು ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ನ್ಯಾಯಾಂಗದ ವಿರುದ್ಧ ನಿರ್ದಿಷ್ಟವಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರತ್ ಅರವಿಂದ ಬೋಬ್ಡೆ ವಿರುದ್ಧ ಪ್ರಕಟಿಸಿದ ಎರಡು ಅವಹೇಳನಕಾರಿ ಟ್ವೀಟ್ಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ- ವಕೀಲ ಪ್ರಶಾಂತ್ ಭೂಷಣ್ ಅವರು ಅಪರಾಧಿ ಎಂಬುದಾಗಿ ಸುಪ್ರೀಂ ಕೋರ್ಟ್ 2020 ಆಗಸ್ಟ್ 14ರ ಶುಕ್ರವಾರ ತೀರ್ಪು ನೀಡಿತು. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಈ ಅಪರಾಧಕ್ಕಾಗಿ ಭೂಷಣ್ ಅವರಿಗೆ ನೀಡಬೇಕಾದ ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ ೨೦ ರಂದು ನಿರ್ಧರಿಸುವುದಾಗಿ ಹೇಳಿತು. ನ್ಯಾಯಾಂಗದ ಅವಹೇಳನ ಅಪರಾಧಕ್ಕೆ ಸಮಕಾಲೀನ ವ್ಯಕ್ತಿಗೆ ಆರು ತಿಂಗಳವರೆಗೆ ವಿಸ್ತರಿಸಬಹುದಾದ ಸರಳ ಸೆರೆವಾಸದ ಶಿಕ್ಷೆ ಅಥವಾ ೨,೦೦೦ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ತಮ್ಮ ಟ್ವೀಟ್ಗಳು ನ್ಯಾಯಮೂರ್ತಿಗಳ ವೈಯಕ್ತಿಕ ವರ್ತನೆಗೆ ವಿರುದ್ಧವಾಗಿವೆ ಮತ್ತು ಅವು ನ್ಯಾಯದಾನಕ್ಕೆ ಅಡ್ಡಿ ಉಂಟು ಮಾಡುವುದಿಲ್ಲ ಎಂಬುದಾಗಿ ಪ್ರಶಾಂತ ಭೂಷಣ್ ಅವರು ಸಮರ್ಥಿಸಿಕೊಂಡ ಬಳಿಕ ಆಗಸ್ಟ್ ೫ರಂದು ಪೀಠವು ವಿಷಯಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಭೂಷಣ್ ಅವರ ಟ್ವೀಟ್ ಗಳ ಬಗ್ಗೆ ಉಲ್ಲೇಖಿಸಿದ್ದ ಸುಪ್ರೀಂಕೋರ್ಟ್ ಇದಕ್ಕೆ ಮುನ್ನ ಈ ಹೇಳಿಕೆಗಳು ಸಾಮಾನ್ಯವಾಗಿ ಸುಪ್ರೀಂಕೋರ್ಟಿನ ಮತ್ತು ನಿರ್ದಿಷ್ಟವಾಗಿ ಮುಖ್ಯ ನ್ಯಾಯಮೂರ್ತಿಯ ಘನತೆ ಮತ್ತು ಅಧಿಕಾರವನ್ನು ಜನರ ಕಣ್ಣಿನಲ್ಲಿ ಕುಗ್ಗಿಸುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ ಎಂದು ಹೇಳಿತ್ತು.ವಿಷಯದಲ್ಲಿ ಭೂಷಣ್ ಪರ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಅವರು ಎರಡು ಟ್ವೀಟ್ ಗಳು ಸಂಸ್ಥೆಯ ವಿರುದ್ಧವಲ್ಲ ಎಂದು ವಾದಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಜಗತ್ತನ್ನು ಬಾಧಿಸಿರುವ ಕೊರೋನಾ ಸಂಕಷ್ಟವನ್ನು ಎದುರಿಸಲು ಅರ್ಥ (ಹಣಕಾಸು) ಕೇಂದ್ರಿತ ಸಹಯೋಗಕ್ಕಿಂತ ಮಾನವ ಕೇಂದ್ರಿತ ಸಹಯೋಗ ಅತ್ಯಂತ ಮುಖ್ಯ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2020 ಆಗಸ್ಟ್ 14ರ ಶುಕ್ರವಾರ ಹೇಳಿದರು. ೭೪ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾದಿನ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ’ಪ್ರಕೃತಿಯು ಮಾನವರಿಗೆ ಆಧೀನವಾಗಿದೆ ಎಂಬ ಮಿಥ್ಯೆಯನ್ನು ಕಣ್ಣಿಗೆ ಕಾಣದ ವೈರಸ್ ಒಡೆದಿದೆ. ಪ್ರಕೃತಿಯೊಂದಿಗೆ ಸೌಹಾರ್ದವನ್ನು ಆಧರಿಸಿದ ಬದುಕಿನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಸಮರ್ಪಕ ದಾರಿಯಲ್ಲಿ ಸಾಗಲು ಮನುಷ್ಯರಿಗೆ ಈಗಲೂ ಅವಕಾಶವಿದೆ ಎಂಬುದು ನನ್ನ ನಂಬಿಕೆ’ ಎಂದು ನುಡಿದರು. ೨೦೨೦ನೇ ವರ್ಷದಲ್ಲಿ ನಾವೆಲ್ಲರೂ ಅತ್ಯಂತ ಮಹತ್ವದ ಪಾಠಗಳನ್ನು ಕಲಿತಿದ್ದೇವೆ. ಹವಾಮಾನ ಬದಲಾವಣೆಯಂತೆಯೇ, ವಿಶ್ವ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಹಣೆಬರಹವೂ ಪರಸ್ಪರ ಜೋಡಿಕೊಂಡಿದೆ ಎಂಬ ಪ್ರಜ್ಞೆಯನ್ನು ಈ ಸಾಂಕ್ರಾಮಿಕವು ಮೂಡಿಸಿದೆ. ಆದ್ದರಿಂದ ಹಣಕಾಸು ಕೇಂದ್ರಿತ ಸಹಯೋಗಕ್ಕಿಂತ ಮಾನವ ಕೇಂದ್ರಿತ ಸಹಯೋಗ ಮುಖ್ಯ ಎಂದು ನನ್ನ ನಂಬಿಕೆ ಎಂದು ಅವರು ಹೇಳಿದರು. ಕೊರೋನಾವೈರಸ್ ವಿರುದ್ಧದ ಹೋರಾಟದ ವೇಳೆಯಲ್ಲಿ ಜೀವ ಮತ್ತು ಜೀವನ ಎರಡನ್ನೂ ರಕ್ಷಿಸುವ ಅಗತ್ಯದ ಬಗ್ಗೆ ಗಮನ ಹರಿಸುವುದು ಮುಖ್ಯ. ಹಾಲಿ ಬಿಕ್ಕಟ್ಟು, ಪ್ರತಿಯೊಬ್ಬನ ಹಿತಾಸಕ್ತಿ, ಮುಖ್ಯವಾಗಿ ರೈತರು ಮತ್ತು ಸಣ್ಣ ಉದ್ಯಮಿಗಳ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಆರ್ಥಿಕತೆಗೆ ಪುನಶ್ಚೇತನ ನೀಡುವ ಸಮರ್ಪಕ ಸುಧಾರಣೆಗಳನ್ನು ತರುವ ಅವಕಾಶವನ್ನು ಒದಗಿಸಿದೆ ಎಂದು ಕೋವಿಂದ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಚೆನ್ನೈ: ಕೊರೋನಾವೈರಸ್ ಸೋಂಕಿನ ಬಾಧೆಗೆ ಒಳಗಾಗಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದ ವರದಿಗಳು 2020 ಆಗಸ್ಟ್ 14ರ ಶುಕ್ರವಾರ ತಿಳಿಸಿದವು. ಬಾಲಸುಬ್ರಹ್ಮಣ್ಯಂ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದ್ದು, ಜೀವ ರಕ್ಷಕ ಉಪಕರಣಗಳ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ಹೇಳಿದವು. ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಚೆನ್ನೈ ಎಂಜಿಎಂ ಆಸ್ಪತ್ರೆಯು ತನ್ನ ಬುಲೆಟಿನ್ನಲ್ಲಿ ತಿಳಿಸಿತು. ‘ಆಗಸ್ಟ್ ೧೩ರ ತಡರಾತ್ರಿ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ತಜ್ಞ ವೈದ್ಯರ ತಂಡದ ಸಲಹೆ ಮೇರೆಗೆ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದೆ. ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ’ ಎಂದು ಎಂಜಿಎಂ ಬುಲೆಟಿನ್ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment