ನಾನು ಮೆಚ್ಚಿದ ವಾಟ್ಸಪ್

Monday, August 24, 2020

ಇಂದಿನ ಇತಿಹಾಸ History Today ಆಗಸ್ಟ್ 24

 ಇಂದಿನ ಇತಿಹಾಸ  History Today ಆಗಸ್ಟ್ 24

2020: ನವದೆಹಲಿ
: ಪಕ್ಷದ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಹಂಗಾಮಿ ಮುಖ್ಯಸ್ಥರಾಗಿ ಉಳಿಯಲಿದ್ದಾರೆ. ಪಕ್ಷದ ಹಿರಿಯ ಮುಖಂಡ ಪಿ.ಎಲ್.ಪುನಿಯಾ ಅವರು 2020 ಆಗಸ್ಟ್ 24ರ ಸೋಮವಾರ ಇಲ್ಲಿ ವಿಚಾರವನ್ನು ತಿಳಿಸಿದರು. ಕಾರ್‍ಯಕಾರಿ ಸಮಿತಿಯ ಮುಂದಿನ ಸಭೆಯನ್ನು "ಶೀಘ್ರದಲ್ಲೇ, ಬಹುಶಃ ಆರು ತಿಂಗಳಲ್ಲಿ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಲುವಾಗಿ ಕರೆಯಲಾಗುವುದು ಎಂದು ಪುನಿಯಾ ನುಡಿದರು. "ಸದಸ್ಯರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ನಂಬಿಕೆ ವ್ಯಕ್ತಪಡಿಸಿದರು ಮತ್ತು ಪ್ರಮುಖ ಪಕ್ಷವನ್ನು ಮುನ್ನಡೆಸಬೇಕೆಂದು ಒತ್ತಾಯಿಸಿದರು, ಉಭಯ ನಾಯಕರು ಅದಕ್ಕೆ ಒಪ್ಪಿಕೊಂಡರು ಎಂದು ಪುನಿಯಾ ಹೇಳಿದರು. ಹಳೆಯ ಮಹಾನ್ ಪಕ್ಷವನ್ನು (ಗ್ರ್ಯಾಂಡ್ ಓಲ್ಡ್ ಪಾರ್ಟಿ) ಮುನ್ನಡೆಸುವಂತೆ ಪಕ್ಷದ ವಿವಿಧ ಘಟಕಗಳು ಕೂಡಾ ಸೋನಿಯಾ ಗಾಂಧಿಯವರನ್ನು ಕೋರಿದವು ಎಂದು ಅವರು ನುಡಿದರು. ಬೆಳಗ್ಗೆ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಮುಖ್ಯಸ್ಥರ ಬದಲಾವಣೆ  ಪ್ರಕ್ರಿಯೆಯನ್ನು ಪ್ರಾರಂಭಿಸಲು ಪಕ್ಷವನ್ನು ಕೋರಿದ್ದರು. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಇಂಗಿತವನ್ನು ಸಮಿತಿ ಸಭೆಯಲ್ಲಿ ಅವರು ವ್ಯಕ್ತ ಪಡಿಸಿದರು. ಆದರೆ ಮಾಜಿ ಪ್ರಧಾನಿ ಮತ್ತು ಹಿರಿಯ ಸಹೋದ್ಯೋಗಿ ಮನಮೋಹನ್ ಸಿಂಗ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಸೋನಿಯಾಗಾಂಧಿ ಅವರನ್ನು ಕೋರಿದ್ದರು. ಮಾಜಿ ಸಚಿವರು ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು "ನಾಯಕತ್ವದಲ್ಲಿ ಬದಲಾವಣೆಗಳನ್ನು ಮಾಡಬೇಕು ಎಂದು ಒತ್ತಾಯಿಸಿ ಪತ್ರ ಬರೆದ ನಂತರ ನಿರ್ಧಾರ ತೆಗೆದುಕೊಳ್ಳಲಾಯಿತು. ಮಾಜಿ ಸಚಿವರು ಮತ್ತು ಕೆಲವು ಸಂಸದರು ಬರೆದಿರುವರೆನಲಾದ ಪತ್ರವನ್ನು ಕೆಲವು ವಾರಗಳ ಹಿಂದೆ ಬರೆಯಲಾಗಿದೆ ಎಂದು ನಂಬಲಾಗಿದೆ. ಮಾಜಿ ಸಚಿವರು ಮತ್ತು ಸಂಸದರನ್ನು ಒಳಗೊಂಡ ಒಂದು ವರ್ಗವು ಸಾಮೂಹಿಕ ನಾಯಕತ್ವವನ್ನು ಕೋರಿದರೆ, ಮತ್ತೊಂದು ಗುಂಪು ರಾಹುಲ್ ಗಾಂಧಿ ಅವರು ಪಕ್ಷದ ಚುಕ್ಕಾಣಿ ಹಿಡಿಯಬೇಕು ಆಂದು ಆಗ್ರಹಿಸಿತ್ತು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ
: ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಕ್ಷಮೆಯಾಚಿಸಲು ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಭೂಷಣ್ 2020 ಆಗಸ್ಟ್ 24ರ ಸೋಮವಾರ ನಿರಾಕರಿಸಿದರು. ತಾವು ವ್ಯಕ್ತಪಡಿಸಿದ ಸಂಗತಿಗಳು ತಮ್ಮ ನಂಬಿಕೆಯನ್ನು ಪ್ರತಿನಿಧಿಸುತ್ತಿವೆ ಎಂದು ಭೂಷಣ್ ಹೇಳಿದರು.  ಅಪ್ರಾಮಾಣಿಕವಾಗಿ ಕ್ಷಮೆಯಾಚಿಸಿದರೆ ನನ್ನ ಆತ್ಮಸಾಕ್ಷಿಯನ್ನು ನಿಂದಿಸಿದಂತಾಗುತ್ತದೆ ಎಂದು ಪ್ರಶಾಂತ ಭೂಷಣ್ ಹೇಳಿದರು. ಈ ಬಗ್ಗೆ ನ್ಯಾಯಾಲಯಕ್ಕೆ ಪೂರಕ ಹೇಳಿಕೆಯನ್ನು  ಸೋಮವಾರ ಸಲ್ಲಿಸಿರುವ ಅವರು, ನನ್ನ ನಂಬಿಕೆಗಳ ವಿರುದ್ಧವಾಗಿ, ಷರತ್ತುಬದ್ಧ ಅಥವಾ ಬೇಷರತ್ ಆಗಿ ಕ್ಷಮೆಯಾಚಿಸುವುದು ಅಪ್ರಾಮಾಣಿಕತೆಯಾಗುತ್ತದೆ ಎಂದು ತಿಳಿಸಿದರು. ನ್ಯಾಯಾಲಯದ ಅಧಿಕಾರಿಯಾಗಿ ಸ್ಟರ್ಲಿಂಗ್ ದಾಖಲೆಯಿಂದ ವಿಚಲವಾಗಿದೆ ಎಂದು ನಂಬಿದಾಗ ಮಾತನಾಡುವುದು ಕರ್ತವ್ಯ ಎಂದು ಭಾವಿಸಿದ್ದೇನೆ.  ಹೀಗಾಗಿ ನಾನು ಸದಭಿಪ್ರಾಯದಿಂದ ಹೇಳಿಕೆ ನೀಡಿದ್ದೇನೆ, ಸುಪ್ರೀಂ ಕೋರ್ಟ್ ಅಥವಾ ಯಾವುದೇ ನಿರ್ದಿಷ್ಟ ಮುಖ್ಯ ನ್ಯಾಯಮೂರ್ತಿಯನ್ನು ನ್ಯಾಯಮೂರ್ತಿಯವರನ್ನು ಕೆಣಕುವುದಕ್ಕಾಗಿ ಅಲ್ಲ. ರಚನಾತ್ಮಕ ಟೀಕೆಗಳನ್ನು ಮಾಡುವುದರಿಂದ ನ್ಯಾಯಾಲಯವು ಸಂವಿಧಾನದ ರಕ್ಷಕ ಮತ್ತು ಜನರ ಹಕ್ಕುಗಳ ಪಾಲಕನಾಗಿ ತನ್ನ ದೀರ್ಘಕಾಲದ ಪಾತ್ರದಿಂದ ದೂರವಾಗುವ  ಯಾವುದೇ ದಿಕ್ ಚ್ಯುತಿಯನ್ನು ನಿವಾರಿಸಬಹುದು ಎಂದು ನಂಬಿದ್ದೇನೆ ಎಂದು ಭೂಷಣ್ ಹೇಳಿದರು. ನನ್ನ ಟ್ವೀಟ್‌ಗಳು ನಾನು ನಂಬಿರುವ ನಂಬಿಕೆಯನ್ನು ಪ್ರತಿನಿಧಿಸುತ್ತವೆ. ನಂಬಿಕೆಗಳ ಸಾರ್ವಜನಿಕ ಅಭಿವ್ಯಕ್ತಿಯು ನಾಗರಿಕ ಮತ್ತು ನ್ಯಾಯಾಲಯದ ನಿಷ್ಠಾವಂತ ಅಧಿಕಾರಿಯಾಗಿ ನನ್ನ ಉನ್ನತ ಜವಾಬ್ದಾರಿಗಳಿಗೆ ಅನುಗುಣವಾಗಿದೆ ಎಂದು ನಾನು ನಂಬಿದ್ದೇನೆ. ಆದ್ದರಿಂದ, ಷರತ್ತುಬದ್ಧ ಅಥವಾ ಬೇಷರತ್ತಾಗಿ ಕ್ಷಮೆಯಾಚಿಸುವುದು ಕಪಟವಾಗುತ್ತದೆ.  ಕ್ಷಮೆಯಾಚನೆಯು ಕೇವಲ ಮಂತ್ರವಲ್ಲ ಮತ್ತು ಯಾವುದೇ ಕ್ಷಮೆಯಾಚನೆಯನ್ನು ನ್ಯಾಯಾಲಯವು ಹೇಳಿದಂತೆ ಪ್ರಾಮಾಣಿಕವಾಗಿ ಮಾಡಬೇಕಾಗುತ್ತದೆ ಎಂದು ಭೂಷಣ್ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ
: ಚೀನಾದ ನೌಕಾಪಡೆಯು ಮ್ಯಾನ್ಮಾರ್, ಪಾಕಿಸ್ತಾನ ಮತ್ತು ಇರಾನ್‌ನ ಬಂದರುಗಳ ಮೂಲಕ ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯ ಸಾಧಿಸಲು ಮುಂದಾಗಿರುವುದಕ್ಕೆ ಪ್ರತಿಯಾಗಿ, ಭಾರತವು ತನ್ನ ದ್ವೀಪ ಪ್ರದೇಶಗಳಲ್ಲಿ ತ್ವರಿತವಾಗಿ ಮೂಲಸೌಕರ್ಯ ನವೀಕರಣಕ್ಕೆ ಯೋಜಿಸುತ್ತಿದೆ, ತನ್ಮೂಲಕ ಸಮುದ್ರಯಾನಕ್ಕೆ ಯಾವುದೇ ಧಕ್ಕೆಯಾಗದಂತೆ ಮತ್ತು ಭಾರತೀಯ ಹಿತ್ತಲಿನಲ್ಲಿ ದಕ್ಷಿಣ ಚೀನಾ ಮರುಸೃಷ್ಟಿಯಾಗದಂತೆ ತಡೆಯಲು ಭಾರತ ಉದ್ದೇಶಿಸಿದೆ. ಉನ್ನತ ಸೇನಾ ಅಧಿಕಾರಿಗಳ ಪ್ರಕಾರ, ಭಾರತವು ಉತ್ತರ ಅಂಡಮಾನಿನ ಐಎನ್‌ಎಸ್ ಕೊಹಸ್ಸಾ, ಶಿಬ್‌ಪುರ ಮತ್ತು ನಿಕೋಬಾರ್ ದ್ವೀಪದ ಕ್ಯಾಂಪ್‌ಬೆಲ್ ಭಾಗವನ್ನು ಪೂರ್ಣ ಪ್ರಮಾಣದ ಯುದ್ಧ ನೆಲೆಗಳಾಗಿ ನವೀಕರಿಸಲಿದೆ. ಲಕ್ಷದ್ವೀಪದ ಅಗತ್ತಿಯಲ್ಲಿರುವ ವಾಯುನೆಲೆಯನ್ನು ಸೇನಾ ಕಾರ್ಯಾಚರಣೆಗಾಗಿ ನವೀಕರಿಸುವುದರಿಂದ ಬಂಗಾಳಕೊಲ್ಲಿಯಲ್ಲಿ ಮಲಕ್ಕಾ ಜಲಸಂದಿವರೆಗೆ ಮತ್ತು ಅರಬ್ಬೀ ಸಮುದ್ರದಲ್ಲಿ ಅಡೆನ್ ಕೊಲ್ಲಿಯವರೆಗಿನ ಭಾಗವನ್ನು ಭದ್ರ ಪಡಿಸಿಕೊಳ್ಳಲು ಭಾರತಕ್ಕೆ ಅನುಕೂಲವಾಗಲಿದೆ. "ಎರಡು ದ್ವೀಪ ಪ್ರದೇಶಗಳು ಭಾರತಕ್ಕೆ ಹೊಸ ವಿಮಾನವಾಹಕ ನೌಕೆಗಳಂತೆ ಇರುತ್ತವೆ, ಇದು ಮುಖ್ಯ ಭೂಭಾಗದಿಂದ ದೂರದಲ್ಲಿರುವ ಪ್ರದೇಶದಲ್ಲಿ ನೌಕಾಪಡೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಎರಡೂ ದ್ವೀಪಗಳು ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ಪಥಗಳಲ್ಲಿ ಇದ್ದು, ಮಾರ್ಗದ ಮೂಲಕ ವಿಶ್ವ ವ್ಯಾಪಾರದ ಅರ್ಧಕ್ಕಿಂತ ಹೆಚ್ಚಿನ ವ್ಯಾಪಾರ ನಡೆಯುತ್ತಿದೆ ಎಂದು  ತ್ರಿ ಸೇವಾ ಕಮಾಂಡರ್ 2020 ಆಗಸ್ಟ್ 24ರ ಸೋಮವಾರ ಹೇಳಿದರು. ಲಕ್ಷದ್ವೀಪವು ಒಂಬತ್ತು ಡಿಗ್ರಿ ಚಾನೆಲ್‌ನಲ್ಲಿ ಇದೆ, ಏಕೆಂದರೆ ಇದು ಸಮಭಾಜಕದ ಉತ್ತರಕ್ಕೆ ಡಿಗ್ರಿ ಅಕ್ಷಾಂಶ ರೇಖೆಯಲ್ಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಗ್ನೇಯ ಏಷ್ಯಾ ಮತ್ತು ಉತ್ತರ ಏಷ್ಯಾದ ಕಡೆಗೆ ಆರು ಡಿಗ್ರಿ ಮತ್ತು ಹತ್ತು ಡಿಗ್ರಿ ಚಾನೆಲ್‌ಗಳಲ್ಲಿ ನೌಕಾಪಡೆಯು ಪ್ರಾಬಲ್ಯ ಸಾಧಿಸಲು ಅನುವು ಮಾಡಿಕೊಡುತ್ತದೆ. ಕಳೆದ ೭೦ ವರ್ಷಗಳಿಂದ ನೆನೆಗುದಿಯಲ್ಲಿದ್ದ ಥಾಯ್ ಕಾಲುವೆ ಅಕಾ ಕ್ರಾ ಕಾಲುವೆಯ ಕಾಮಗಾರಿ ಪ್ರಾರಂಭಿಸಲು ಚೀನಾವು ತುರ್ತು ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಭಾರತ ಕ್ರಮದ ಬಗ್ಗೆ ಚಿಂತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕಾಕಿನಿಂದ ದಕ್ಷಿಣಕ್ಕೆ ೮೦೦ ಕಿ.ಮೀ ದೂರದಲ್ಲಿರುವ ಮಲಯ ಪರ್ಯಾಯ ದ್ವೀಪವನ್ನು ತುಂಡರಿಸಿ ಥಾಯ್ ಕಾಲುವೆಯನ್ನು ರಚಿಸುವ ಮೂಲಕ ಥೈಲ್ಯಾಂಡ್ ಕೊಲ್ಲಿಯನ್ನು ಅಂಡಮಾನ್ ಸಮುದ್ರದೊಂದಿಗೆ ಸಂಪರ್ಕಿಸಲು ಚೀನಾ ಉದ್ದೇಶಿಸಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ
: ಪೂರ್ಣಾವಧಿಯ ಮತ್ತು ಗೋಚರ ಅಧ್ಯಕ್ಷರನ್ನು ಕೋರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಕೆಲವು ನಾಯಕರು ಬರೆದ ಪತ್ರದ ಹಿನ್ನೆಲೆಯಲ್ಲಿ 2020 ಆಗಸ್ಟ್ 24ರ ಸೋಮವಾರ ನಡೆದ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆಯು ಅಂತಿಮವಾಗಿ ಸೋನಿಯಾ ಗಾಂಧಿ ಅವರನ್ನೇ ಹಂಗಾಮೀ ಅಧ್ಯಕ್ಷರಾಗಿ ಮುಂದುವರೆಸಲು ನಿರ್ಧರಿಸಿದರೂ ಅದಕ್ಕೂ ಮುನ್ನ ನಾಟಕೀಯ ವಿದ್ಯಮಾನಗಳು ನಡೆದವು ಎಂದು ವರದಿಗಳು ತಿಳಿಸಿದವು. ಕಾರ್‍ಯಕಾರಿಣಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್‍ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ವಿಷಯಕ್ಕೆ ಸಂಬಂಧಿಸಿದಂತೆ ವಿಸ್ತೃತ ಉತ್ತರ ನೀಡಿದ್ದೇನೆ ಎಂದು ಹೇಳಿದ ಸೋನಿಯಾಗಾಂಧಿ ಅವರು ರಾಜೀನಾಮೆ ನೀಡಲು ಮುಂದಾಗಿ ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ಸೂಚಿಸಿದರು ಎಂದು ಮೂಲಗಳು ಹೇಳಿದವು. ಸೋನಿಯಾ ಗಾಂಧಿಯವರು ಮಾತು ಮುಗಿಸುತ್ತಿದ್ದಂತೆಯೇ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಸೋನಿಯಾ ಅವರನ್ನು ಒತ್ತಾಯಿಸಿದರು. ಬಳಿಕ, ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಕೂಡಾ ಸೋನಿಯಾ ಮುಂದುವರಿಕೆಗೆ ಆಗ್ರಹಿಸಿದರು. ಕಾಂಗ್ರೆಸ್ ಕಾರ್‍ಯಕಾರಿ ಸಮಿತಿಯ (ಸಿqಬ್ಲ್ಯೂಸಿ) ಭಾಗವಾಗಿರುವ ಗುಲಾಂ ನಬಿ ಆಜಾದ್, ಆನಂದ ಶರ್ಮ, ಮುಕುಲ್ ವಾಸ್ನಿಕ್ ಸೇರಿದಂತೆ ಪಕ್ಷದ ಕೆಲವು ನಾಯಕರು ಬರೆದ ಪತ್ರವನ್ನು ಉಭಯ ನಾಯಕರೂ ಟೀಕಿಸಿದರು. ಸೋನಿಯಾ ಗಾಂಧಿಯವರು ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ಆಜಾದ್ ಮತ್ತು ಇತರರನ್ನು ಎರಡು ಬಾರಿ ಉಲ್ಲೇಖಿಸಿ ಅವರು ಪ್ರಸ್ತಾಪಿಸಿದ ವಿಷಯದ ಬಗೆಗೂ ಮಾತನಾಡಿದರು ಎಂದು ಮೂಲಗಳು ಹೇಳಿದವು. ತಮ್ಮ ವಿಸ್ತೃತ ಉತ್ತರವನ್ನು ಸೋನಿಯಾ ಗಾಂಧಿ ವೇಣುಗೋಪಾಲ್ ಅವರಿಗೆ ಹಸ್ತಾಂತರಿಸಿದರು. ಪತ್ರದ ವಿವರಗಳನ್ನು ವೇಣುಗೋಪಾಲ್ ಅವರು ಓದಿ ಹೇಳಿದರು. ಪತ್ರದಲ್ಲಿ ಸೋನಿಯಾ ಅವರು ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡುವಂತೆ ಕೋರಿದ್ದರು ಎಂದು ಮೂಲಗಳು ತಿಳಿಸಿದವು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 24 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment