ನಾನು ಮೆಚ್ಚಿದ ವಾಟ್ಸಪ್

Thursday, August 13, 2020

ಇಂದಿನ ಇತಿಹಾಸ History Today ಆಗಸ್ಟ್ 13

 ಇಂದಿನ ಇತಿಹಾಸ  History Today ಆಗಸ್ಟ್ 13

2020: ನವದೆಹಲಿ: ತೆರಿಗೆ ಆಡಳಿತದಲ್ಲಿ ಮಾಡಲಾದ ಮಹತ್ವದ ಬದಲಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2020 ಆಗಸ್ಟ್ 13ರ ಗುರುವಾರ ಮುಖರಹಿತ ತೆರಿಗೆ ಮೌಲ್ಯ ಮಾಪನ ಮತ್ತು ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಅತಿಕ್ರಮಣ  ಅವಕಾಶವನ್ನು ಕಡಿಮೆಗೊಳಿಸುವ ಉಪಕ್ರಮಗಳನ್ನು ಅನಾವರಣಗೊಳಿಸಿದರು. ಮುಕ್ತ, ನ್ಯಾಯೋಚಿತ ಮತ್ತು ಪಾರದರ್ಶಕ ತೆರಿಗೆ ಪರಿಸರ ನಿರ್ಮಾಣದ ಖಾತರಿಗಾಗಿ ತೆರಿಗೆ ಪಾವತಿದಾರರ ಚಾರ್ಟರ್ ಜಾರಿಗೆ ತರಲಾಗುತ್ತಿದೆ ಎಂದು ಪ್ರಧಾನಿ ಪ್ರಕಟಿಸಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕಪ್ರಾಮಾಣಿಕ ವೇದಿಕೆ ಗೌರವ- ಪಾರದರ್ಶಕ ತೆರಿಗೆ ಉಪಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ, ಭಾರತದಲ್ಲಿ ಕೇವಲ . ಕೋಟಿ ತೆರಿಗೆ ಪಾವತಿದಾರರಿದ್ದು, ಅತ್ಯಂತ ಕಡಿಮೆ ಮಟ್ಟವಾಗಿದೆ ಎಂದು ಹೇಳಿದರು. ತೆರಿಗೆ ಪಾವತಿ ಮಾಡಬೇಕಾದವರು ಮುಂದೆ ಬರಬೇಕು ಮತ್ತು ಪ್ರಾಮಾಣಿಕವಾಗಿ ತಮ್ಮ ತೆರಿಗೆ ಬಾಕಿಯನ್ನು ಪಾವತಿ ಮಾಡುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕಾಣಿಕೆ ನೀಡಬೇಕು ಎಂದು ಪ್ರಧಾನಿ ಆಗ್ರಹಿಸಿದರು. ತೆರಿಗೆದಾರರ ಚಾರ್ಟರ್ ಮತ್ತು ಮುಖರಹಿತ ಮೌಲ್ಯಮಾಪನವು ನೇರ ತೆರಿಗೆ ಸುಧಾರಣೆಗಳ ಮುಂದಿನ ಹಂತಗಳಾಗಿವೆ, ಇದು ಸಾಂಕ್ರಾಮಿಕ ಪೀಡಿತ ಆರ್ಥಿಕತೆಯನ್ನು ಪುನರ್ನಿರ್ಮಿಸಲು,  ಅನುಸರಣೆಯನ್ನು ಸರಾಗಗೊಳಿಸುವ ಮತ್ತು ಪ್ರಾಮಾಣಿಕ ತೆರಿಗೆದಾರರಿಗೆ ಬಹುಮಾನ ನೀಡುವ ಗುರಿಯನ್ನು ಹೊಂದಿದೆ. ಆದರೆ, ತೆರಿಗೆ ಪಾವತಿದಾರನು ಯಾವುದೇ ಕಚೇರಿಗೆ ಭೇಟಿ ನೀಡಲು ಅಥವಾ ಯಾವುದೇ ಅಧಿಕಾರಿಯನ್ನು ಭೇಟಿಯಾಗುವ ಅಗತ್ಯವಿಲ್ಲದ ಮುಖರಹಿತ ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ರನ್ನು ಈದಿನದಿಂದ (ಗುರುವಾರ) ಜಾರಿಗೆ ತರಲಾಗುವುದು, ಮುಖರಹಿತ ಮನವಿಯು ಸೆಪ್ಟೆಂಬರ್ ೨೫ ರಿಂದ ಜಾರಿಗೆ ಬರಲಿದೆ ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ/ ಜೈಪುರ: ಆಗಸ್ಟ್ ೧೪ರಂದು ಪ್ರಾರಂಭವಾಗಲಿರುವ ರಾಜಸ್ಥಾನ ವಿಧಾನಸಭಾ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ 2020 ಆಗಸ್ಟ್ 13ರ ಗುರುವಾರ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ  ಜೈಪುರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ  ನಡೆದಿದ್ದು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತ ಇತರ ಭಿನ್ನಮತೀಯ ಶಾಸಕರು ಮಹತ್ವದ ಸಭೆಯಲ್ಲಿ ಪಾಲ್ಗೊಂಡರು ಎಂದು ಪಕ್ಷ ಮೂಲಗಳು ತಿಳಿಸಿದವು. ಅಸೆಂಬ್ಲಿ ಅಧಿವೇಶನ ಪ್ರಾರಂಭವಾಗುವ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವ ಯಾವುದೇ ಯೋಜನೆ ಇಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು. ಭಿನ್ನಮತೀಯ ಶಾಸಕರು ಮರಳಿ ಮನೆಗೆ ಹಿಂದಿರುಗಿದ ಹಿನ್ನೆಲೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸಭೆ ಕರೆಯಲಾಗಿತ್ತು. "ಆಗಸ್ಟ್ ೧೪ ರಂದು ವಿಧಾನಸಭೆ ಅಧಿವೇಶನ ಪ್ರಾರಂಭವಾಗುತ್ತಿದೆ, ಅಧಿವೇಶನದಲ್ಲಿ, ರಾಜ್ಯದಲ್ಲಿನ ಕೊರೋನವೈರಸ್ ಬಿಕ್ಕಟ್ಟಿನ ಪರಿಸ್ಥಿತಿ ಮತ್ತು ದಿಗ್ಬಂಧನ (ಲಾಕ್ ಡೌನ್) ನಂತರ ಉಂಟಾದ ಆರ್ಥಿಕ ಸ್ಥಿತಿಗತಿಗಳನ್ನು ನಾವು ಬಹಿರಂಗವಾಗಿ ಚರ್ಚಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಉತ್ತಮ ಆಡಳಿತವನ್ನು ನೀಡುವಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಬೆಂಬಲ ಇರುತ್ತದೆ ಮತ್ತು ಇದು ರಾಜ್ಯದ ಜನರಿಗೆ ಹೊಸ ವಿಶ್ವಾಸವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಹಿಂದೆ ಟ್ವೀಟ್ ಮಾಡಿದ್ದರು. ಈಗ ಒಂದು ಒಪ್ಪಂದದತ್ತ ಸಾಗುತ್ತಿರುವಂತೆ ತೋರುತ್ತಿರುವ, ಸುಮಾರು ಒಂದು ತಿಂಗಳ ರಾಜಕೀಯ ಪ್ರಕ್ಷುಬ್ಧತೆಯ ನಂತರ, ಶಾಸಕರು ಅಸಮಾಧಾನಗೊಳ್ಳುವುದು ಸಹಜ. ಹೊರಟು ಹೋಗಿದ್ದಸ್ನೇಹಿತರು ಈಗ ಹಿಂತಿರುಗಿದ್ದಾರೆ ಎಂದು ಗೆಹ್ಲೋಟ್ ಬುಧವಾರ ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಜೈಪುರ: ಸಚಿನ್ ಪೈಲಟ್ ಮತ್ತು ಬೆಂಬಲಿಗರ ಬಂಡಾಯ ಶಮನದೊಂದಿಗೆ ನಿರಾಳತೆಯ ಉಸಿರೆಳೆದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಸರ್ಕಾರದ ವಿರುದ್ಧ ಇನ್ನೊಂದು ಬಿರುಗಾಳಿ ಏಳುತ್ತಿದ್ದು, ಗೆಹ್ಲೋಟ್ ಸರ್ಕಾರದ ವಿರುದ್ಧ ಆಗಸ್ಟ್ ೧೪ರಂದು ವಿಧಾನಸಭಾ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲು ಬಿಜೆಪಿ 2020 ಆಗಸ್ಟ್ 13ರ ಗುರುವಾರ ತೀರ್ಮಾನಿಸಿತು. ಬಿಜೆಪಿ ಶಾಸಕಾಂಗ ಸಭೆಯಲ್ಲಿ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ಪ್ರಕಟಿಸಿದರು. ಸಭೆಯ ನಂತರ, ಸುದ್ದಿಗಾರರ ಜೊತೆ ಮಾತನಾಡಿದ ಕಟಾರಿಯಾಶುಕ್ರವಾರದಿಂದ ಪ್ರಾರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗುವುದು. ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಹೇಳಿದರು. "ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಎಸ್ಒಜಿಯಿಂದ (ವಿಶೇಷ ಕಾರ್ಯಾಚರಣೆ ಗುಂಪು) ಯಿಂದ ಬಂಧಿಸಲ್ಪಟ್ಟವರಿಗೆ ಬಿಜೆಪಿ ಸಂಪರ್ಕವಿದೆ ಎಂದು ಹುಯಿಲು ಎಬ್ಬಿಸುವ ಪ್ರಯತ್ನಗಳು ನಡೆದವು. ಆದರೆ ಸರ್ಕಾರ ವಿಫಲವಾಗಿದೆ. ಎಲ್ಲ ವಿಷಯಗಳನ್ನು ನಾವು ಗೊತ್ತುವಳಿ ಚರ್ಚೆ ವೇಳೆ ಉಲ್ಲೇಖಿಸುತ್ತೇವೆ ಎಂದು ಕಟಾರಿಯಾ ನುಡಿದರು. ಕಾಂಗ್ರೆಸ್ ಪಕ್ಷದ ರಾಜಕೀಯ ಬಿಕ್ಕಟ್ಟು ಬಗೆಹರಿದಿದ್ದರೂ, ಪಕ್ಷದಲ್ಲಿ "ಒಬ್ಬರು ಪೂರ್ವಕ್ಕೆ ಮತ್ತು ಇನ್ನೊಬ್ಬರು ಪಶ್ಚಿಮಕ್ಕೆ ಹೋಗುತ್ತಿದ್ದಾರೆ. ಎಲ್ಲವೂ ಇನ್ನೂ ಬಗೆಹರಿದಿಲ್ಲ ಎಂದು ಅವರು ಹೇಳಿದರು. ಶುಕ್ರವಾರ ಗೊತ್ತುವಳಿಯನ್ನು ಮಂಡಿಸಲಾಗುವುದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಪೂನೈ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥ ಮಹಂತ ನೃತ್ಯ ಗೋಪಾಲ ದಾಸ್ ಅವರಿಗೆ 2020 ಆಗಸ್ಟ್ 13ರ ಗುರುವಾರ ಕೊರೋನಾ ಸೋಂಕು ತಗುಲಿದ್ದು, ಅವರನ್ನು ಗುಡಗಾಂವದ ಮೇದಂತ ಆಸ್ಪತ್ರೆಗೆ ಸೇರಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿದವು. ಪ್ರಸ್ತುತ ಮಥುರಾದಲ್ಲಿರುವ ದಾಸ್ ಉಸಿರಾಟದ ತೊಂದರೆ ಅನುಭವಿಸುತ್ತಿದ್ದು, ಅವರಿಗೆ ಚಿಕಿತ್ಸೆ ನೀಡಲು ವೈದ್ಯರನ್ನು ಕರೆಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಆಯೋಜಿಸುವ ಸಲುವಾಗಿ ೮೦ರ ಹರೆಯದ ದಾಸ್ ಮಥುರಾಕ್ಕೆ ಹೋಗಿದ್ದರು. ಆಗಸ್ಟ್ ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಶಿಲಾನ್ಯಾಸ ಸಮಾರಂಭದಲ್ಲಿ ಭೂಮಿ ಪೂಜೆ ನೆರವೇರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ವೇದಿಕೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆನಂದಿಬೆನ್ ಪಟೇಲ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ ಭಾಗವತ್ ಉಪಸ್ಥಿತರಿದ್ದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥರಿಗೆ ಕೊರೋನಾವೈರಸ್ ಸೋಂಕು ತಗುಲಿದ ಸುದ್ದಿ ಬಂದಿದೆ ಎಂದು ತಿಳಿಸಿದರು. ಆದಿತ್ಯನಾಥ್ ಅವರು ಮೇದಂತ ಆಸ್ಪತ್ರೆಯ ಡಾ.ನರೇಶ್ ಟ್ರಹಾನ್ ಅವರೊಂದಿಗೆ ಮಾತನಾಡಿ, ದಾಸ್ ಅವರಿಗೆ ತತ್ಕ್ಷಣ ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಮಾಡಲು ವಿನಂತಿಸಿದರು. ಮುಖ್ಯಮಂತ್ರಿಯವರು ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್, ಗೋಪಾಲ ದಾಸ್ ಅವರ ಅನುಯಾಯಿಗಳು ಮತ್ತು ಮೇದಾಂತ ಆಸ್ಪತ್ರೆಯ ಮುಖ್ಯಸ್ಥರ ಜೊತೆಗೂ ಮಾತನಾಡಿ ದಾಸ್ ಅವರಿಗೆ ತ್ವರಿತ ಚಿಕಿತ್ಸಾ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020:  ನವದೆಹಲಿ: ಭಾರತದಲ್ಲಿ ಒಂದೇದಿನ ೬೬,೯೯೯ ಕೊರೋನಾವೈಸ್ ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2020 ಆಗಸ್ಟ್ 13ರ ಗುರುವಾರ ೨೩,೯೬,೬೩೭ ಕ್ಕೆ ತಲುಪಿತು. ಇದೇ ವೇಳೆಗೆ ಚೇತರಿಕೆಯ ಪ್ರಮಾಣವು ಶೇಕಡಾ ೭೦.೭೬ ಕ್ಕೆ ಏರಿತು. ದೇಶದಲ್ಲಿ ಒಟ್ಟು ೧೬,೯೫,೯೮೨ ಜನರು ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿದವು. ಕಳೆದ ೨೪ ಗಂಟೆಗಳಲ್ಲಿ ೯೪೨ ರೋಗಿಗಳು ಸಾವನ್ನಪ್ಪಿದ್ದು, ಇದರೊಂದಿಗೆ ಕೋವಿಡ್ -೧೯ ಸಾವಿನ ಸಂಖ್ಯೆ ೪೭,೦೩೩ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಮೆರಿಕ ಮತ್ತು ಬ್ರೆಜಿಲ್ ನಂತರ ಸಾಂಕ್ರಾಮಿಕ ರೋಗದಿಂದ ಅತಿ ಹೆಚ್ಚು ಹಾನಿಗೆ ಒಳಗಾಗಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತ ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರವು ಸೋಂಕಿನಿಂದ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿ ಮುಂದುವರೆದಿದೆ, ನಂತರದ ಸ್ಥಾನಗಳಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಇವೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಐದು ರಾಜ್ಯಗಳಲ್ಲಿ ಕಳೆದ ೨೪ ಗಂಟೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಇದುವರೆಗೆ ,೪೮,೩೧೩ ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ ,೪೭,೮೨೦ ಸಕ್ರಿಯ ಪ್ರಕರಣಗಳು ಮತ್ತು ೧೩,೪೦೮ ಚೇತರಿಸಿದ ಪ್ರಕರಣಗಳು ಸೇರಿವೆ. ರಾಜ್ಯದಲ್ಲಿ ಬುಧವಾರ ೧೨,೭೧೨ ಹೊಸ ಕೋವಿಡ್ -೧೯ ಪ್ರಕರಣಗಳು ದಾಖಲಾಗಿದ್ದರೆ, ಸಾವಿನ ಸಂಖ್ಯೆ ೧೮,೬೫ಕ್ಕೆ ಏರಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಜೈಪುರ: ೧೯ ಬಂಡಾಯ ಶಾಸಕರು ಇಲ್ಲದಿದ್ದರೂ ತಮಗೆ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಸಾಧ್ಯವಿತ್ತು, ಆದರೆ ಈಗ ಇರುವಷ್ಟು ಖುಷಿ ಇರುತ್ತಿರಲಿಲ್ಲ, ಏನಿದ್ದರೂ ನಮ್ಮವರು ನಮ್ಮವರೇ ಆಗಿರುತ್ತಾರೆ.. ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ 2020 ಆಗಸ್ಟ್ 13ರ ಗುರುವಾರ ಹೇಳಿದರು. "ಏನಾಯಿತು, ಅದನ್ನು ಹಿಂದಕ್ಕೆ ಬಿಟ್ಟು ಬಿಡೋಣ. ೧೯ ಶಾಸಕರು ಇಲ್ಲದೆಯೇ ನಾವು ನಮ್ಮ ಬಹುಮತವನ್ನು ಸಾಬೀತುಪಡಿಸುತ್ತಿದ್ದೆವು, ಆದರೆ ಅದು ನಮಗೆ ಯಾವುದೇ ಸಂತೋಷವನ್ನು ನೀಡುತ್ತಿರಲಿಲ್ಲ. ಕ್ಯೋಂಕಿ ಅಪ್ನೆ ತೋ ಅಪ್ನೆ ಹೀ ಹೋತೆ ಹೈ ಎಂದು ಮುಖ್ಯಮಂತ್ರಿ ಹೇಳಿದರು. ಶುಕ್ರವಾರ ನಡೆಯಲಿರುವ ವಿಧಾನಸಭೆ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ, ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೆಹ್ಲೋಟ್ ಮತ್ತು ಅವರಿಂದ ವಜಾಗೊಂಡಿದ್ದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಭೇಟಿಯಾದ ಬಳಿಕ ಮುಖ್ಯಮಂತ್ರಿಯಿಂದ ಹೇಳಿಕೆ ಬಂದಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 13 (2019+

ಹಿಂದಿನವುಗಳಿಗೆ
ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment