ನಾನು ಮೆಚ್ಚಿದ ವಾಟ್ಸಪ್

Monday, August 10, 2020

ಇಂದಿನ ಇತಿಹಾಸ History Today ಆಗಸ್ಟ್ 10

 ಇಂದಿನ ಇತಿಹಾಸ  History Today ಆಗಸ್ಟ್ 10

2020: ನವದೆಹಲಿ:  ಸಚಿನ್ ಪೈಲಟ್  ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಕೆಲವು ಗಂಟೆಗಳ ಬಳಿಕ ಬಂಡಾಯ ಶಾಸಕರ ಸಮಸ್ಯೆಗಳನ್ನು ಆಲಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2020 ಆಗಸ್ಟ್ 10ರ ಸೋಮವಾರ ಉನ್ನತ ಮಟ್ಟದ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದವು. ರಾಜಸ್ಥಾನ ಕಾಂಗ್ರೆಸ್ಸಿನಲ್ಲಿ ಬಂಡಾಯವೆದ್ದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಪಕ್ಷದ ಮಾಜಿ ಅಧ್ಯಕ್ಷ ಸಚಿನ್ ಪೈಲಟ್ ಅವರು ಸೋಮವಾರ ಪಕ್ಷದ ವರಿಷ್ಠ ನಾಯಕತ್ವವನ್ನು ಸಂಪರ್ಕಿಸಿದ್ದು, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಸೋಮವಾರ ದೆಹಲಿಯಲ್ಲಿ ಸಭೆ ನಡೆಸಿದರು ಎಂದು ಇಬ್ಬರು ಹಿರಿಯ ನಾಯಕರು ತಿಳಿಸಿದರು. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಏನು ಚರ್ಚಿಸಲಾಯಿತು ಎಂಬುದು ತತ್ ಕ್ಷಣಕ್ಕೆ ಸ್ಪಷ್ಟವಾಗಿಲ್ಲ. "ಆದಾಗ್ಯೂ, ಅವರು ಭೇಟಿಯಾದಾಗಿನಿಂದ, ಧನಾತ್ಮಕ ಫಲಿತಾಂಶವನ್ನು ನಿರೀಕ್ಷಿಸಲಾಗಿದೆಎಂದು ನಾಯಕರ ಪೈಕಿ ಒಬ್ಬರು ನುಡಿದರು. ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ವಿರುದ್ಧ ದಂಗೆ ಏಳಲು ಪೈಲಟ್ ಮತ್ತು ೧೮ ಭಿನ್ನಮತೀಯ ರಾಜಸ್ಥಾನ ಶಾಸಕರು ಜೈಪುರದಿಂದ ಹೊರಟ ಒಂದು ತಿಂಗಳ ನಂತರ ಬೆಳವಣಿಗೆ ನಡೆದಿದೆ. ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರೊಂದಿಗೆ ಪೈಲಟ್ ಭೇಟಿಗೆ ಕಾಲಾವಕಾಶ ಕೋರಿದ್ದಾರೆ ಮತ್ತು ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಮತ್ತು ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಪೈಲಟ್ ಮಾತನಾಡುತ್ತಿದ್ದಾರೆ ಎಂದು ಇನ್ನೊಬ್ಬ ನಾಯಕ ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನ ಮತ್ತು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ಆಗಸ್ಟ್ ೧೪ ರಂದು ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ವೇಳೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಪರ ಮತ ಚಲಾಯಿಸುವ ಸಾಧ್ಯತೆಯಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಮೂಲಗಳ ಪ್ರಕಾರ, ಪೈಲಟ್ ಅವರು ಕಾಂಗ್ರೆಸ್ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.  ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ವರಿಷ್ಠ ಮಂಡಳಿಯು ಬಂಡಾಯ ನಾಯಕನಿಗೆ ಭರವಸೆ ನೀಡಿದೆ ಮತ್ತು ಅಶೋಕ ಗೆಹ್ಲೋಟ್ ಶಿಬಿರಕ್ಕೆ ಅವರ ಬೆಂಬಲವನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು "ಸಮನ್ವಯದ ಅಂತಿಮ ಸೂತ್ರ" ವನ್ನು ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ. ಅಶೋಕ ಗೆಹ್ಲೋಟ್ ವಿರುದ್ಧ ಬಹಿರಂಗ ಬಂಡಾಯ ಘೋಷಿಸಿ, ೧೮ ಶಾಸಕರೊಂದಿಗೆ ತಮ್ಮ ಸರ್ಕಾರದ ಕೈಬಿಟ್ಟ ಪೈಲಟ್, ಕಳೆದ ತಿಂಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗದ ಕಾರಣ ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದರು. ಪೈಲಟ್ ಶಿಬಿರದಲ್ಲಿ ಇದ್ದ ಇತರ ಇಬ್ಬರು ಮಂತ್ರಿಗಳನ್ನೂ ಕ್ಯಾಬಿನೆಟ್‌ನಿಂದ ಕೈಬಿಡಲಾಯಿತು. ಪಕ್ಷದ ರಾಜಸ್ಥಾನ ಘಟಕದ ಅಧ್ಯಕ್ಷರಾಗಿ ಗೋವಿಂದ್ ಸಿಂಗ್ ದೋಟಾಸರ ಅವರನ್ನು ಕಾಂಗ್ರೆಸ್ ನೇಮಿಸಿತು. ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಸಂಚು ಆಪಾದನೆಯ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸರು ತಮಗೆ ಕಳುಹಿಸಿದ ನೋಟಿಸ್ ಬಗ್ಗೆ ಪೈಲಟ್ ತೀವ್ರ ಅಸಮಾಧಾನಗೊಂಡಿದ್ದರು ಎಂದು ಸಚಿನ್ ಬೆಂಬಲಿಗರು ಹೇಳಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪ್ರವಾಹ ಮುನ್ಸೂಚನೆ ನೀಡುವ ಶಾಶ್ವತ ವ್ಯವಸ್ಥೆ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯಗಳ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವ ಅಗತ್ಯ ಇದೆ ಮತ್ತು ಪ್ರವಾಹ ಮುನ್ಸೂಚನೆ ಮತ್ತು ಎಚ್ಚರಿಕೆ ವ್ಯವಸ್ಥೆ ಸುಧಾರಿಸಲು ನವೀನ ತಂತ್ರಜ್ಞಾನಗಳನ್ನು ವ್ಯಾಪಕವಾಗಿ ಬಳಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಆಗಸ್ಟ್ 10ರ ಸೋಮವಾರ ಸೂಚನೆ ನೀಡಿದರು. ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು. ಪ್ರವಾಹದಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳದ ಮುಖ್ಯಮಂತ್ರಿಗಳ ಜೊತೆಗೆ ಆನ್‌ಲೈನ್ ಮೂಲಕ ಪ್ರಧಾನಿ ವರ್ಚುವಲ್ ಸಭೆ ನಡೆಸಿದರು. ಪ್ರಸ್ತುತ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಂಡು ಭಾರಿ ಮಳೆ ಮುನ್ಸೂಚನೆ ಹಾಗೂ ಅನಾಹುತದ ಎಚ್ಚರಿಕೆಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಮೋದಿ ಸೂಚಿಸಿದರು ಎಂದು ಪ್ರಧಾನಿಯವರ ಕಚೇರಿ ಪ್ರಕಟಣೆ ತಿಳಿಸಿತು.  ಸಿಡಿಲು, ಪ್ರವಾಹದಂತಹ ಸಂದರ್ಭದಲ್ಲಿ ಒಂದು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲು ಬೇಕಾಗುವಂತಹ ವ್ಯವಸ್ಥೆ ನಿರ್ಮಾಣಕ್ಕೆ ಹೆಚ್ಚಿನ ಹೂಡಿಕೆ ಮಾಡಬೇಕಾಗಿದೆ. ಕೋವಿಡ್-೧೯ ಪಿಡುಗಿನ ಕಾರಣ, ರಕ್ಷಣಾ ಚಟುವಟಿಕೆಯ ಸಂದರ್ಭದಲ್ಲೂ ಎಲ್ಲರೂ ಮುಖಗವಸು, ಸ್ಯಾನಿಟೈಸರ್, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆಯೂ ರಾಜ್ಯಗಳು ಎಚ್ಚರಿಕೆ ವಹಿಸಬೇಕುಎಂದು ಪ್ರಧಾನಿ ನುಡಿದರು. ಸಂತ್ರಸ್ತರಿಗೆ ನೀಡುವ ಪರಿಹಾರ ವಸ್ತುಗಳಲ್ಲಿ ಮುಖಗವಸು, ಸ್ಯಾನಿಟೈಸರ್ ಹಾಗೂ ಹ್ಯಾಂಡ್‌ವಾಶ್‌ಗಳೂ ಇರಬೇಕು. ಹಿರಿಯರಿಗೆ, ಗರ್ಭಿಣಿಯರಿಗೆ ವಿಶೇಷ ವ್ಯವಸ್ಥೆ ರೂಪಿಸಬೇಕುಎಂದು ಪ್ರಧಾನಿ ನುಡಿದರು. ಕೊರೋನಾ ಪಿಡುಗು ಇಲ್ಲದೇ ಹೋಗಿದ್ದರೆ, ನೆರೆ ಸಂಕಷ್ಟಕ್ಕೆ ಈಡಾದ ಎಲ್ಲ ರಾಜ್ಯಗಳಿಗೂ ತಾವು ಖುದ್ದಾಗಿ ಭೇಟಿ ನೀಡುತ್ತಿದ್ದೆ ಎಂದು ಮೋದಿ ಸಭೆಯಲ್ಲಿ ಉಲ್ಲೇಖಿಸಿದರು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ೨೦೨೧ ಜನವರಿಯಲ್ಲಿ ಹೆಚ್ಚುವರಿ ಉಪ ಖಾಯಂ ಪ್ರತಿನಿಧಿ (ಡಿಪಿಆರ್) ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಷಯಗಳನ್ನು ನಿರ್ವಹಿಸಲು ನೇಮಕಗೊಂಡಿರುವ  ಸಲಹೆಗಾರರೊಂದಿಗೆ ವಿಶ್ವಸಂಸ್ಥೆಯಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಹೆಚ್ಚಿಸಲು ಭಾರತ ನಿರ್ಧರಿಸಿದೆ. ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರು ಪ್ರತಿ ತಿಂಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ನಿಲುವನ್ನು ವೈಯಕ್ತಿಕವಾಗಿ ಪರಿಶೀಲಿಸಲಿದ್ದಾರೆ. ಸೌತ್ ಬ್ಲಾಕ್ ಪ್ರಕಾರ, ೧೯೯೯ ತಂಡದ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ಆರ್. ರವೀಂದ್ರನ್ ಅವರು ಜಂಟಿ ಕಾರ್ಯದರ್ಶಿಯಾಗಿ (ಮಧ್ಯ ಮತ್ತು ಪಶ್ಚಿಮ ಆಫ್ರಿಕಾ) ನೇಮಕಗೊಂಡಿದ್ದು, ನ್ಯೂಯಾರ್ಕಿನಲ್ಲಿ ಇರುವ ಭಾರತದ ಕಾಯಂ ಮಿಷನ್‌ಗೆ ವಿಶ್ವಸಂಸ್ಥೆಯಿಂದ ಡಿಪಿಆರ್‌ಗೆ ಸಮನಾದ ಶ್ರೇಣಿಯಲ್ಲಿ ಸೇರ್ಪಡೆಯಾಗಲಿದ್ದಾರೆ. ೨೦೦೭ ಐಎಫ್‌ಎಸ್ ಅಧಿಕಾರಿ ಮತ್ತು ಉಪ ಕಾರ್ಯದರ್ಶಿ (ಪಿಎಂಒ) ಪ್ರತೀಕ್ ಮಾಥುರ್ ಅವರು ಕೌನ್ಸಿಲರ್ (ವಿಶ್ವಸಂಸ್ಥೆ ಭದ್ರತಾ ಮಂಡಳಿ) ಆಗಿ ಸೇರಲಿದ್ದಾರೆ. ಮಿಷನ್ ಈಗಾಗಲೇ ಟಿಎಸ್ ತಿರುಮೂರ್ತಿ ನೇತೃತ್ವದಲ್ಲಿದೆ ಮತ್ತು ನಾಗರಾಜ್ ನಾಯ್ಡು ಅವರನ್ನು ಡಿಪಿಆರ್ ಆಗಿ ಹೊಂದಿದೆ. ೭೫ ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ೨೦೨೦ ಸೆಪ್ಟೆಂಬರ್ ೧೫ ರಂದು ಪ್ರಾರಂಭವಾಗಲಿದ್ದು, ಅದಕ್ಕೆ ಮುನ್ನ ಇಬ್ಬರು ಅಧಿಕಾರಿಗಳು ಅಧಿಕಾರಿ ಸಮೂಹಕ್ಕೆ ಸೇರಿಕೊಳ್ಳಲಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಔಪಚಾರಿಕವಾಗಿ ಸೇರ್ಪಡೆಗೊಳ್ಳಲು ತಿಂಗಳುಗಳ ಮೊದಲೇ ಹೊಸ ಖಾಯಂ ಸದಸ್ಯರ ಪೂರ್ವಸಿದ್ಧತಾ ಕಾರ್ಯಗಳು ಪ್ರಾರಂಭವಾಗುತ್ತವೆ. ರವೀಂದ್ರನ್ ಅವರು ಯುಎನ್‌ಪಿಆರ್‌ನಲ್ಲಿ ಪ್ರಸ್ತುತ ನಾಗರಿಕ ವಿಮಾನಯಾನ, ನಗರಾಭಿವೃದ್ಧಿ ಮತ್ತು ವಾಣಿಜ್ಯ ಸಚಿವರಾಗಿರುವ ಹರದೀಪ್ ಸಿಂಗ್ ಪುರಿ ಅವರ ನೇತೃತ್ವದಲ್ಲಿ ಸೇವೆ ಸಲ್ಲಿಸಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 10 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment