ಇಂದಿನ ಇತಿಹಾಸ History
Today
ಆಗಸ್ಟ್ 06
2020: ನವದೆಹಲಿ: ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದ ನೇರ ಪ್ರಸಾರವನ್ನು ವಿಶ್ವದಾದ್ಯಂತ ವ್ಯಾಪಕವಾಗಿ ವೀಕ್ಷಿಸಲಾಗಿದ್ದು, ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಥೈಲ್ಯಾಂಡ್, ನೇಪಾಳ ಮತ್ತು ಇತರ ಹಲವಾರು ದೇಶಗಳ ದೂರದರ್ಶನ ಕೇಂದ್ರಗಳು ಪ್ರಸಾರ ಮಾಡಿದ್ದವು. ಅನೇಕ ಕ್ಯಾಮೆರಾಗಳು, ಹೊರಗಿನ ಪ್ರಸಾರ (ಒಬಿ) ಮತ್ತು ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಜಿಟಲ್ ಉಪಗ್ರಹ ಸುದ್ದಿ ಸಂಗ್ರಹ- ಡಿಎಸ್‌ಎನ್‌ಜಿ) ವ್ಯಾನ್‌ಗಳ ಬಳಕೆಯ ಮೂಲಕ ಮುಖ್ಯ ಪ್ರಸಾರವನ್ನು ದೂರದರ್ಶನ ನಿರ್ವಹಿಸಿತ್ತು. ಜನರು ಕಾರ್ಯಕ್ರಮವನ್ನು ಯೂಟ್ಯೂಬ್ ಮೂಲಕವೂ ವೀಕ್ಷಿಸಿದರು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ನೆದರ್‌ಲ್ಯಾಂಡ್ಸ್, ಜಪಾನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಇ, ಸೌದಿ ಅರೇಬಿಯಾ, ಒಮಾನ್, ಕುವೈತ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಇಂಡೋನೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಸಿಂಗಾಪುರ, ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಲ್ಲಿ ಅತ್ಯಂತ ಹೆಚ್ಚು ಮಂದಿ ಕಾರ್ಯಕ್ರಮ ವೀಕ್ಷಿಸಿದ್ದಾರೆ ಎಂದು ದೂರದರ್ಶನವು 2020 ಆಗಸ್ಟ್ 06ರ ಗುರುವಾರ ತಿಳಿಸಿತು. ಭಾರತದಲ್ಲಿ, ೨೦೦ ಕ್ಕೂ ಹೆಚ್ಚು ಚಾನೆಲ್‌ಗಳು ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿವೆ ಎಂದು ದೂರದರ್ಶನ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ೨೦೨೦-೨೧ರ ಹಣಕಾಸು ವರ್ಷದಲ್ಲಿ ದೇಶದ ನೈಜ ಸಮಗ್ರ ಆಂತರಿಕ ಉತ್ಪನ್ನವು (ಜಿಡಿಪಿ) ಋಣಾತ್ಮಕವಾಗಿಯೇ ಮುಂದುವರೆಯಲಿದೆ ಎಂದು 2020 ಆಗಸ್ಟ್ 06ರ ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ ಭವಿಷ್ಯ ನುಡಿದಿದ್ದು, ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ಈ ಹಿನ್ನೆಲೆಯಲ್ಲಿ ಪ್ರಮುಖ ಸಾಲದರಗಳಾದ ರೆಪೋ ದರ ಮತ್ತು ರಿವರ್ಸ್ ರೆಪೋ ದರವನ್ನು ಬದಲಾಯಿಸದೇ ಇರಲು ನಿರ್ಧರಿಸಿದೆ. ಆದಾಗ್ಯೂ, ಕೋವಿಡ್-೧೯ ಹತೋಟಿ ಯತ್ನಗಳಿಗೆ ಸಂಬಂಧಿಸಿದಂತೆ ಧನಾತ್ಮಕ ಸುದ್ದಿ ಬಂದಲ್ಲಿ ಜಿಡಿಪಿ ಸುಧಾರಣೆ ಆಗಬಹುದು ಎಂದು ಆರ್ ಬಿಐ ಗವರ್ನರ್ ಹಾಗೂ ಬ್ಯಾಂಕಿನ ನೀತಿ ಸಮಿತಿ ಮುಖ್ಯಸ್ಥ ಶಕ್ತಿಕಾಂತ ದಾಸ್ ಹೇಳಿದರು. ಹೊಂದಾಣಿಕೆ ನಿಲುವನ್ನು ಮುಂದುವರೆಸಲು ನಿರ್ಧರಿಸಿರುವ ಸಮಿತಿ ರೆಪೋ ದರವನ್ನು ಶೇಕಡಾ ೪ರಲ್ಲಿ ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ ೩.೩೫ರ ದರಲ್ಲಿಯೇ ಮುಂದುವರೆಸಲು ನಿರ್ಧರಿಸಿದೆ. ಮೇ/ ಜೂನ್ ಅವಧಿಯಲ್ಲಿ ಸ್ಥಿತಿ ಸುಧಾರಿಸುವ ಬಗೆಗೆ ಇದ್ದ ನಿರೀಕ್ಷೆ ಕೋವಿಡ್ ಪ್ರಕರಣಗಳ ಹೆಚ್ಚಳದ ಕಾರಣ ಜುಲೈ ತಿಂಗಳಲ್ಲಿ ಕಮರಿದೆ ಎಂದು ದಾಸ್ ನುಡಿದರು. ರೆಪೋ ದರ ಎಂದರೆ ವಾಣಿಜ್ಯ ಬ್ಯಾಂಕುಗಳಿಗೆ ಅಗತ್ಯವಿದ್ದಾಗ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸಲಾಗುವ ಬಡ್ಡಿ ದರ. ೨೦೨೦ರಲ್ಲಿ ಈಗಾಗಲೇ ಆರ್‌ಬಿಐ ರೆಪೋ ದರವನ್ನು ೧೧೫ ಮೂಲಾಂಶದಷ್ಟು ಕಡಿತ ಮಾಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ವಿವಾದಾತ್ಮಕ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾದ ಆಕ್ರಮಣಶೀಲತೆ ಹೆಚ್ಚುತ್ತಿದ್ದು, ಪ್ರಸ್ತುತ ಬಿಕ್ಕಟ್ಟು ಸುದೀರ್ಘವಾಗುವ ನಿರೀಕ್ಷೆ ಇದೆ ಎಂದು ರಕ್ಷಣಾ ಸಚಿವಾಲಯದ ದಾಖಲೆ ತಿಳಿಸಿದೆ, ೨೦ ಮಂದಿ ಭಾರತೀಯ ಸೈನಿಕರನ್ನು ಹುತಾತ್ಮರನ್ನಾಗಿ, ಅಸಂಖ್ಯ ಚೀನೀ ಸೈನಿಕರ ಸಾವು ನೋವಿಗೆ ಕಾರಣವಾಗಿರುವ ಗಲ್ವಾನ್ ಕಣಿವೆ ಹಿಂಸಾತ್ಮಕ ಘರ್ಷಣೆಯನ್ನು ಈ ದಾಖಲೆಯು ನಿರ್ದಿಷ್ಟವಾಗಿ ಉಲ್ಲೇಖಿಸಿದೆ.ಜೂನ್‌ನಲ್ಲಿ ರಕ್ಷಣಾ ಇಲಾಖೆಯ ಪ್ರಮುಖ ಚಟುವಟಿಕೆಗಳನ್ನು ಪಟ್ಟಿ ಮಾಡಿರುವ ಅಧಿಕೃತ ದಾಖಲೆಯಲ್ಲಿ, ಸಚಿವಾಲಯವು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮೇ ತಿಂಗಳಲ್ಲಿ ಕುಗ್ರಾಂಗ್ ನಾಲಾ, ಗೋಗ್ರಾ ಮತ್ತು ಮೇ ೧೭-೧೮ರಂದು ಪ್ಯಾಂಗೊಂಗ್ ತ್ಸೊದ ಉತ್ತರ ದಂಡೆಯ ಪ್ರದೇಶಗಳಲ್ಲಿ ಭಾರತದ ಕಡೆಗೆ ಅತಿಕ್ರಮಿಸಿದೆ ಎಂದು ಹೇಳಿದೆ. ಈ ವಿಚಾರವನ್ನು ಆಗಸ್ಟ್ ೪ ರಂದು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ."ಇದರ ಪರಿಣಾಮವಾಗಿ, ಉಂಟಾದ ಉದ್ರಿಕ್ತ ಪರಿಸ್ಥಿತಿಯನ್ನು ತಗ್ಗಿಸಲು ಉಭಯ ಕಡೆಯ ಸಶಸ್ತ್ರ ಪಡೆಗಳ ನಡುವೆ ಸಂವಹನ ನಡೆಸಲಾಯಿತು. ಕೋರ್ ಕಮಾಂಡರ್ ಮಟ್ಟದ ಧ್ವಜ ಸಭೆ ೨೦೨೦ರ ಜೂನ್ ೬ ರಂದು ನಡೆಯಿತು. ಆದಾಗ್ಯೂ, ಜೂನ್ ೧೫ ರಂದು ಎರಡು ಕಡೆಯವರ ನಡುವೆ ಹಿಂಸಾತ್ಮಕ ಮುಖಾಮುಖಿ ಘರ್ಷಣೆ ಘಟನೆ ನಡೆದಿದ್ದು, ಪರಿಣಾಮವಾಗಿ ಉಭಯ ಕಡೆಯಲ್ಲೂ ಸಾವು ನೋವುಗಳಾಗಿವೆ’ ಎಂದು ಅದು ಹೇಳಿದೆ.ಜೂನ್ ತಿಂಗಳನ್ನು ಮಾತ್ರ ಉಲ್ಲೇಖಿಸಿರುವ ದಾಖಲೆ, ನಂತರದ ಮಿಲಿಟರಿ ಮಾತುಕತೆ ಜೂನ್ ೨೨ ರಂದು ನಡೆಯಿತು ಎಂದು ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ: ಕೇವಲ ಎರಡು ದಿನಗಳ ಕೆಲವೇ ಗಂಟೆಗಳಲ್ಲಿ ಸುರಿದ ಮಹಾಮಳೆಗೆ ಮುಂಬೈ ತತ್ತರಿಸಿದ್ದು ಮಹಾರಾಷ್ಟ್ರ ಸರ್ಕಾರವು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ೧೬ ತುಕಡಿಗಳನ್ನು ನಗರದ ವಿವಿಧ ಕಡೆಗಳಲ್ಲಿ 2020 ಆಗಸ್ಟ್ 06ರ ಗುರುವಾರ ನಿಯೋಜಿಸಿದೆ. ಬುಧವಾರ ಮತ್ತು ಗುರುವಾರ ಕೆಲವೇ ಗಂಟೆಗಳ ಅವಧಿಯಲ್ಲಿ ಮುಂಬೆಯಲ್ಲಿ ಇಡೀ ಋತುವಿನಲ್ಲೇ ಅತ್ಯಧಿಕ ಮಳೆ ಸುರಿದಿದೆ. ಮುಂಬೈಯಲ್ಲಿ ಐದು, ಕೊಲ್ಹಾಪುರದಲ್ಲಿ ನಾಲ್ಕು ಮತ್ತು ಸಾಂಗ್ಲಿಯಲ್ಲಿ ಎರಡು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ವಿಪರೀತ ಮಳೆಯ ನಂತರ ಉಕ್ಕಿ ಹರಿಯುತ್ತಿರುವ ಪಂಚಗಂಗಾ ನದಿಯು ಕೊಲ್ಹಾಪುರದಲ್ಲಿ ತನ್ನ ಅಪಾಯದ ಮಟ್ಟ ತಲುಪುತ್ತಿದ್ದು, ಸ್ಥಳೀಯ ಅಧಿಕಾರಿಗಳನ್ನು ಎಚ್ಚರಿಸಲಾಗಿದೆ ಎಂದು ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ವಾಡೆಟ್ಟಿವಾರ್ ಹೇಳಿದರು. ನಗರದಲ್ಲಿ ೩೩೧.೦೮ ಮಿ.ಮೀ ಮಳೆಯಾಗಿದ್ದು, ಪೂರ್ವ ಉಪನಗರಗಳಲ್ಲಿ ೧೦೧.೯ ಮಿ.ಮೀ ಮತ್ತು ಪಶ್ಚಿಮ ಉಪನಗರಗಳಲ್ಲಿ ೭೬.೦೩ ಮಿ.ಮೀ ಮಳೆಯಾಗಿದೆ. ಇದರೊಂದಿಗೆ ಮುಂಬೈಯಲ್ಲಿ ಗಂಟೆಗೆ ೧೦೬ ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಕೂಡಾ ಬೀಸಿತು. ಇತರ ಜಿಲ್ಲೆಗಳಲ್ಲಿ ೭೦ ರಿಂದ ೮೦ ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಸತತ ಭಾರಿ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ನೀರು ತುಂಬಿದ್ದು, ಮನೆಗಳು ಕುಸಿದಿವೆ ಮತ್ತು ಮುಂಬೈಯ ಹಲವಾರು ಪ್ರದೇಶಗಳಿಂದ ಮರಗಳು ಬೇರುಸಹಿತ ಉರುಳಿ ಬಿದ್ದ ವರದಿಗಳು ಬಂದಿವೆ. ಮುಂಬೈಯ ರೆಡ್ ಕಾರ್ನರ್ ಬಳಿಯ ಪೆಡ್ಡಾರ್ ರಸ್ತೆಯಲ್ಲಿ, ರಸ್ತೆಯ ಒಂದು ಭಾಗವು ಕುಸಿದು ಬಾಯಿಬಿಟ್ಟಿದೆ. ದಾದರ್ ಪಶ್ಚಿಮದಲ್ಲಿ ಮನೆಯೊಂದರ ಎರಡನೇ ಅಂತಸ್ತು, ಮತ್ತು ಇತರ ನಾಲ್ಕು ಕಟ್ಟqಗಳು ಗುರುವಾರ ಮಧ್ಯಾಹ್ನ ಕುಸಿದಿದೆ. ಆದರೆ, ಯಾವುದೇ ಸಾವು ನೋವು ಸಂಭವಿಸಿಲ್ಲ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ೨೨ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್-೧೯ ತುರ್ತು ಸ್ಪಂದನೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್‌ನ ಎರಡನೇ ಕಂತಾಗಿ ಕೇಂದ್ರ ಸರ್ಕಾರವು ೮೯೦.೩೨ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಆರೋಗ್ಯ ಸಚಿವಾಲಯ 2020 ಆಗಸ್ಟ್ 06ರ ಗುರುವಾರ ತಿಳಿಸಿತು. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸಿನ ನೆರವು ಅವರ ಕೋವಿಡ್-೧೯ ಪ್ರಕರಣಗಳನ್ನು ಆಧರಿಸಿ ಹಂಚಿಕೆಯಾಗುತ್ತದೆ. ಎರಡನೇ ಕಂತಿನಲ್ಲಿ ಆರ್ಥಿಕ ನೆರವು ಪಡೆದವರಲ್ಲಿ ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಗುಜರಾತ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ಸಿಕ್ಕಿಮ್ ಸೇರಿವೆ ಎಂದು ಸಚಿವಾಲಯ ತಿಳಿಸಿದೆ. ಪೂರ್ಣ ಸರ್ಕಾರಿ ನೆರವು ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ೧೫ ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಅನ್ನು ಘೋಷಿಸಿದ್ದರು, ಇದರಲ್ಲಿ ಕೇಂದ್ರವು ಕೋವಿಡ್-೧೯ ಪ್ರತಿಕ್ರಿಯೆ ಮತ್ತು ನಿರ್ವಹಣೆಯನ್ನು ಮುನ್ನಡೆಸುತ್ತಿದ್ದು, ತಾಂತ್ರಿಕ ಮತ್ತು ಆರ್ಥಿಕ ಸಂಪನ್ಮೂಲಗಳ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳೀತ ಪ್ರದೇಶಗಳನ್ನು ಬೆಂಬಲಿಸುತ್ತಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment