ಇಂದಿನ ಇತಿಹಾಸ History Today ಆಗಸ್ಟ್ 21
2020: ಹೈದರಾಬಾದ್: ತೆಲಂಗಾಣದ ಶ್ರೀಶೈಲಂನ ಜಲವಿದ್ಯುತ್ ಸ್ಥಾವರದಲ್ಲಿ 2020 ಆಗಸ್ಟ್ 20ರ ಗುರುವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಿಕ್ಕಿಹಾಕಿಕೊಂಡ ಎಲ್ಲ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು 2020 ಆಗಸ್ಟ್ 21ರ ಶುಕ್ರವಾರ ತಿಳಿಸಿದರು. ಮೃತರಾಗಿರುವ ಒಂಬತ್ತು ಮಂದಿಯ ಪೈಕಿ ಮೂವರನ್ನು ಸಹಾಯಕ ಎಂಜಿನಿಯರುಗಳಾದ ಸುಂದರ ನಾಯಕ್, ಮೋನ ಕುಮಾರ್ ಮತ್ತು ಫಾತಿಮಾ ಎಂಬುದಾಗಿ ಗುರುತಿಸಲಾಗಿದೆ. ಬೆಂಕಿ ದುರಂತದ ಕಾರಣ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಆದೇಶಿಸಿದ್ದಾರೆ. ಸಿಐಡಿಯ ಹೆಚ್ಚುವರಿ ಪೊಲೀಸ್ ನಿರ್ದೇಶಕರಾದ ಗೋವಿಂದ ಸಿಂಗ್ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ಶೀಘ್ರವಾಗಿ ವರದಿ ಸಲ್ಲಿಸುವಂತೆ ಗೋವಿಂದ ಸಿಂಗ್ ಅವರಿಗೆ ಸೂಚಿಸಲಾಗಿದೆ. ಶ್ರೀಶೈಲಂ ವಿದ್ಯುತ್ ಕೇಂದ್ರದ ಬೆಂಕಿಯಲ್ಲಿ ಪ್ರಾಣಹಾನಿ ಸಂಭವಿಸಿದ ಬಗ್ಗೆ ಮುಖ್ಯಮಂತ್ರಿ ದುಃಖ ವ್ಯಕ್ತಪಡಿಸಿದರು. ಇದು ದುರದೃಷ್ಟಕರ ಎಂದು ಬಣ್ಣಿಸಿದ ಕೆಸಿಆರ್, ಸಿಕ್ಕಿಬಿದ್ದ ಎಂಜಿನಿಯರುಗಳನ್ನು ರಕ್ಷಿಸಲು ಮತ್ತು ಅವರನ್ನು ಜೀವಂತವಾಗಿ ಹೊರಗೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ, ಆದರೆ ವ್ಯರ್ಥವಾಯಿತು ಎಂದು ಹೇಳಿದರು. ದುಃಖಿತ ಕುಟುಂಬಗಳಿಗೆ ಅವರು ತಮ್ಮ ಸಂತಾಪವನ್ನು ಸೂಚಿಸಿದರು. ಟಿಎಸ್ ಜೆಂಕೊ ಉನ್ನತ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ ತೆಲಂಗಾಣ ವಿದ್ಯುತ್ ಸಚಿವ ಜಿ.ಜಗದೀಶ್ವರ್ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಿದ್ಯುತ್ ಘಟಕದ ವಿದ್ಯುತ್ ಫಲಕಗಳಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ಅದು ವಿದ್ಯುತ್ ಘಟಕದ ಇತರ ಭಾಗಗಳಿಗೆ ಹರಡಿತು ಎಂದು ಶಂಕಿಸಲಾಗಿದೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್ ೧೯ ರೋಗಿಗಳು ಮತ್ತು ೮೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತಪತ್ರ ಹಾಗೂ ಆನ್ ಲೈನ್ ಮೂಲಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿರುವ ಹೊಸ ಚುನಾವಣಾ ಮಾರ್ಗಸೂಚಿಗಳನ್ನು ಚುನಾವಣಾ ಆಯೋಗ 2020 ಆಗಸ್ಟ್ 21ರ ಶುಕ್ರವಾರ ಪ್ರಕಟಿಸಿತು. ಕೊರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ಮತ್ತು ಉಪಚುನಾವಣೆ ನಡೆಸಲು ಭಾರತದ ಚುನಾವಣಾ ಆಯೋಗ ಶುಕ್ರವಾರ ಈ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತು. ಹೊಸ ಮಾರ್ಗಸೂಚಿ ಪ್ರಕಾರ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಾಮಪತ್ರಗಳನ್ನು ಸಲ್ಲಿಸಬಹುದು ಮತ್ತು ಜನರು ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮುಖಗವಸುಗಳನ್ನು (ಮಾಸ್ಕ್) ಧರಿಸಬೇಕಾಗುತ್ತದೆ. ಸಭೆಯ ಬಳಿಕ ಚುನಾವಣಾ ಆಯೋಗವು ಹೊಸ ಚುನಾವಣಾ ಮಾರ್ಗಸೂಚಿಗಳನ್ನು ಪ್ರಕಟಿಸಿತು. ರಾಜಕೀಯ ಪಕ್ಷಗಳು ಮತ್ತು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ನೀಡಿದ ಸಲಹೆ, ಸೂಚನೆಗಳನ್ನು ಆಧರಿಸಿ ಹೊಸ ನಿಯಮಗಳನ್ನು ರೂಪಿಸಲಾಗಿದೆ. "ಅಂಚೆ ಮತದಾನ ಸೌಲಭ್ಯದ ಆಯ್ಕೆಯನ್ನು ’ದಿವ್ಯಾಂಗ ವ್ಯಕ್ತಿಗಳು’, ೮೦ ವರ್ಷಕ್ಕಿಂತ ಮೇಲ್ಪಟ್ಟ ಜನರು, ಅಧಿಸೂಚಿತ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವ ಜನರು ಮತ್ತು ಕೋವಿಡ್-೧೯ ಪಾಸಿಟಿವ್/ ಬಹುತೇಕ ಸೋಂಕಿಗೆ ಒಳಗಾದವರು ಎಂಬುದಾಗಿ ಗುರುತಿಸಲ್ಪಟ್ಟ ಮತದಾರರಿಗೆ ವಿಸ್ತರಿಸಲಾಗಿದೆ,’ ಎಂದು ಮುಖ್ಯ ಚುನಾವಣಾ ಆಯುಕ್ತರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಆಗಸ್ಟ್ ೨೨ ಮತ್ತು ೨೩ ರ ಶನಿವಾರ ಮತ್ತು ಭಾನುವಾರ ವಿಶೇಷ ಪರಿಷಣ್ ಉತ್ಸವ ಕಾಲದಲ್ಲಿ ಮುಂಬಯಿಯ ದಾದರ್, ಚೆಂಬೂರು ಮತ್ತು ಬೈಕುಲ್ಲಾದ ಮೂರು ಜೈನ ದೇವಾಲಯಗಳಿಗೆ ಭಕ್ತರಿಗೆ ಸೀಮಿತ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ 2020 ಆಗಸ್ಟ್ 21ರ ಶುಕ್ರವಾರ ಅನುಮತಿ ನೀಡಿತು. ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು ಒಡಿಶಾ ರಥಯಾತ್ರೆಗೆ ಅವಕಾಶ ನೀಡಿದ್ದನ್ನು ಉಲ್ಲೇಖಿಸಿ, ದಿನಕ್ಕೆ ೨೫೦ ಜನರ ಪ್ರವೇಶಕ್ಕೆ ಮಿತಿ ವಿಧಿಸಿತು. "ನಮ್ಮ ಅಭಿಪ್ರಾಯವನ್ನು ನಿಷ್ಠೆಯಿಂದ ಪಾಲಿಸಿದರೆ, ಮೂರು ದೇವಾಲಯಗಳಲ್ಲಿ ಪ್ರಾರ್ಥನೆಗೆ ಅನುಮತಿ ನೀಡುವುದು ಅಪಾಯಕಾರಿಯಲ್ಲ" ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿತು. ಒಡಿಶಾ ರಥಯಾತ್ರೆಗೆ ಅವಕಾಶ ನೀಡಿದ ಉದಾಹರಣೆಯನ್ನು ಉಲ್ಲೇಖಿಸಿದ ಪೀಠ, ‘ಇದು ಒಡಿಶಾ ರಥಯಾತ್ರೆಯೊಂದಿಗೆ ನಾವು ಹೊಂದಿದ್ದ ಆಯ್ಕೆಯಾಗಿದೆ. ದೂರವನ್ನು ಕಾಪಾಡಿಕೊಳ್ಳಲಾಗಿದೆಯೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದಿಲ್ಲ ಎಂಬುದನ್ನು ಖಚಿತಪಡಿಸಿದರೆ ಕೇವಲ ರಥಯಾತ್ರೆ ನಡೆಸುವುದರಿಂದ ಹಾನಿಯಾಗುವುದಿಲ್ಲ ಎಂದು ನಾವು ನಂಬುತ್ತೇವೆ’ ಎಂದು ಪೀಠ ತಿಳಿಸಿತು. ದೊಡ್ಡ ಸಮೂಹವನ್ನು ಒಳಗೊಂಡ ಬೇರೆ ಯಾವುದೇ ದೇವಾಲಯಗಳು ಅಥವಾ ಹಬ್ಬಗಳಿಗೆ ತನ್ನ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. "ನಾವು ನಿರ್ದಿಷ್ಟವಾಗಿ ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಗಣೇಶ ಚತುರ್ಥಿ ಸಮಯದಲ್ಲಿ ನಡೆಯುವ ಸಭೆಯನ್ನು ಉಲ್ಲೇಖಿಸುತ್ತಿದ್ದೇವೆ" ಎಂದು ನ್ಯಾಯಾಲಯವು ಬೊಟ್ಟು ಮಾಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಮಹಾರಾಷ್ಟ್ರದಲ್ಲಿ ಗಣಪತಿ ಹಬ್ಬದ ಸಂದರ್ಭದಲ್ಲಿ ಜನಸಂದಣಿಯನ್ನು ನಿಯಂತ್ರಿಸಲಾಗದ ಕಾರಣ ಗಣೇಶ ಉತ್ಸವಗಳಿಗೆ ಈ ವರ್ಷ ಅನುಮತಿ ನೀಡಲು ಒಲವು ಇಲ್ಲ ಎಂದು ಸುಪ್ರೀಂ ಕೋರ್ಟ್ 2020 ಆಗಸ್ಟ್ 21ರ ಶುಕ್ರವಾರ ಹೇಳಿತು. ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿದ, ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಗಣೇಶ ಚತುರ್ಥಿ ಉತ್ಸವಗಳು ಸ್ವಭಾವತಃ ದೊಡ್ಡ ಜನಸಂದಣಿಯನ್ನು ಒಳಗೊಂಡಿರುತ್ತವೆ ಎಂದು ಸಮರ್ಥಿಸಿತು. ‘ಗಣಪತಿ ಹಬ್ಬಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗದ ಕಾರಣ ನಾವು ಅದಕ್ಕೆ ಅನುಮತಿ ನೀಡುವುದಿಲ್ಲ’ ಎಂದು ಸಿಜೆಐ ಹೇಳಿದರು. ಸಮುದಾಯದ ವಾರ್ಷಿಕ ಶುದ್ಧೀಕರಣ ವಿಧಿಗಳನ್ನು ನಡೆಸುವ ಪರಿಷನ್ ಉತ್ಸವದ ಸಂದರ್ಭದಲ್ಲಿ ಮುಂಬೈಯ ಕೆಲವು ಜೈನ ದೇವಾಲಯಗಳನ್ನು ತೆರೆಯುವ ವಿಚಾರದ ಬಗ್ಗೆ ನಡೆದ ಕಲಾಪದ ವೇಳೆಯಲ್ಲಿ ಪೀಠವು ಈ ಅಭಿಪ್ರಾಯ ವ್ಯಕ್ತ ಪಡಿಸಿತು. ಮಹಾರಾಷ್ಟ್ರ ಸರ್ಕಾರವು ಜೈನ ಮಂದಿರದಲ್ಲಿ ಪ್ರಾರ್ಥನೆ ನಡೆಸಲು ಅವಕಾಶ ಕೋರಿದ ಈ ಮನವಿಯನ್ನು ವಿರೋಧಿಸಿತು. ’ಇದು ಪಂಡೋರಾದ ಪೆಟ್ಟಿಗೆ (ಅಸ್ಥಿ ಪಂಜರಗಳ ಪೆಟ್ಟಿಗೆ). ನಿರ್ವಹಿಸಲಾಗದ ಸನ್ನಿವೇಶಗಳಿಗೆ ಕಾರಣವಾಗಬಹುದು, ಪ್ರತಿ ಸಮುದಾಯವು ತಮ್ಮ ಹಬ್ಬಗಳಿಗೆ ಕ್ರಮವಾಗಿ ಅನುಮೋದನೆ ಪಡೆಯಲು ಈ ಆದೇಶದೊಂದಿಗೆ ನ್ಯಾಯಾಲಯಕ್ಕೆ ಬರುತ್ತವೆ’ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿತು. ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ಅವರು ಮಹಾರಾಷ್ಟ್ರದ ಗಣೇಶ ಚತುರ್ಥಿ ಹಬ್ಬಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ, ಅದೇ ರಾಜ್ಯದಿಂದ ಬಂದಿರುವ ನ್ಯಾಯಮೂರ್ತಿ ಬೋಬ್ಡೆ ಅವರು ಇದಕ್ಕೂ ಅನುಮತಿ ಕೋರಿದರೆ ಏನಾಗಬಹುದು ಎಂದು ಊಹಿಸಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ, ಗಣಪತಿ ಹಬ್ಬಗಳು ಸಂಪೂರ್ಣವಾಗಿ ವಿಭಿನ್ನ ಹೆಜ್ಜೆಯಲ್ಲಿ ನಿಲ್ಲುತ್ತವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ವಿದ್ಯಾರ್ಥಿಗಳ ಆಗ್ರಹದ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ ಮತ್ತು ನೀಟ್ ಪರೀಕ್ಷಾ ದಿನಾಂಕಗಳು ಇನ್ನೂ ಕೆಲವು ದಿನಗಳ ಕಾಲ ವಿಳಂಬವಾಗುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು 2020 ಆಗಸ್ಟ್ 21ರ ಶುಕ್ರವಾರ ತಿಳಿಸಿದವು. ಪ್ರವೇಶ ಪರೀಕ್ಷೆಗಳ ದಿನಾಂಕವನ್ನು ಮುಂದೂಡುವ ಬಗ್ಗೆ ಸರ್ಕಾರವು ಆಗಸ್ಟ್ ೨೫ರ ಬಳಿಕ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು ಹೇಳಿದವು. ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪರೀಕ್ಷೆ ವೇಳೆಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಧರಿಸಲು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಆರೋಗ್ಯ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಿದ್ದಾರೆ ಎಂದೂ ಮೂಲಗಳು ಹೇಳಿದವು. ಪರೀಕ್ಷಾ ದಿನಾಂಕ ಮುಂದೂಡಿಕೆಗೆ ಸುಪ್ರೀಂಕೋರ್ಟ್ ನಿರಾಕರಿಸಿದ ಬಳಿಕ, ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ನಡೆಸಲಾಗುವ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಸೆಪ್ಟೆಂಬರಿನಲ್ಲಿ ನಡೆಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ನಿಗದಿಯಾಗಿರುವ ಪ್ರಕಾರ ಸೆಪ್ಟೆಂಬರ್ ೧ರಿಂದ ೬ರವರೆಗೆ ಜೆಇಇ (ಮೆಯಿನ್), ಸೆಪ್ಟೆಂಬರ್ ೨೭ರಂದು ಜೆಇಇ (ಅಡ್ವಾನ್ಸಿಡ್) ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯು (ನೀಟ್) ಸೆಪ್ಟೆಂಬರ್ ೧೩ಕ್ಕೆ ನಿಗದಿಯಾಗಿದೆ. ಕಳೆದ ವರ್ಷ ೨,೫೪೬ರಷ್ಟಿದ್ದ ನೀಟ್ ಕೇಂದ್ರಗಳ ಸಂಖ್ಯೆಯನ್ನು ಈ ವರ್ಷ ೩,೮೪೩ಕ್ಕೆ ಏರಿಸಲಾಗಿದೆ ಎಂದು ಮೂಲಗಳು ಹೇಳಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ೬೨,೨೮೨ ರೋಗಿಗಳು ಚೇತರಿಸಿಕೊಂಡು ಆಸ್ಪತ್ರೆಯಿಮದ ಬಿಡುಗಡೆಯಾಗುವುದರೊಂದಿಗೆ ದೇಶವು ಶುಕ್ರವಾರ ಕೋವಿಡ್ ಪ್ರಕರಣಗಳ ಚೇತರಿಕೆಯಲ್ಲಿ ದಾಖಲೆ ಸ್ಥಾಪಿಸಿದೆ ಎಂದು ಕೇಂರ ಆರೋಗ್ಯ ಸಚಿವಾಲಯ 2020 ಆಗಸ್ಟ್ 21ರ ಶುಕ್ರವಾರ ತಿಳಿಸಿತು. ಆಸ್ಪತ್ರೆಗಳು ಮತ್ತು ಮನೆಯ ಪ್ರತ್ಯೇಕತೆಯಲ್ಲಿರುವ ಹೆಚ್ಚಿನ ರೋಗಿಗಳು ಗುಣಮುಖರಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶುಕ್ರವಾರದವರೆಗೆ ಗುಣಮುಖರಾದವರ ಸಂಖ್ಯೆ ೨೧.೫ ಲಕ್ಷವನ್ನು (೨೧,೫೮,೯೪೬) ದಾಟಿತು. ಈ ಚೇತರಿಕೆಗಳೊಂದಿಗೆ ದೇಶದ ಚೇತರಿಕೆಯ ಪ್ರಮಾಣವು ಈಗ ಶೇಕಡಾ ೭೪ ರಷ್ಟು (ಆಗಸ್ಟ್ ೨೧ ರ ವೇಳೆಗೆ ೭೪.೨೮ ಶೇಕಡಾ) ಏರಿದೆ ಎಂದು ಸಚಿವಾಲಯ ಹೇಳಿತು. ೩೩ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚೇತರಿಕೆಯ ಪ್ರಮಾಣ ಶೇಕಡಾ ೫೦ ಕ್ಕಿಂತ ಹೆಚ್ಚು ದಾಖಲಾಗಿದೆ ಅದು ಹೇಳಿತು. ಭಾರತದಲ್ಲಿ ಕೊರೋನಾವೈರಸ್ ಸಾವಿನ ಪ್ರಮಾಣ (ಸಿಎಫ್‌ಆರ್) ಜಾಗತಿಕ ಸರಾಸರಿಗಿಂತ ಕಡಿಮೆ ಇದೆ. ಇದು ನಿರಂತರವಾಗಿ ಧನಾತ್ಮಕವಾಗಿದ್ದು, ಪ್ರಸ್ತುತ ಶೇಕಡಾ ೧.೮೯ಕ್ಕೆ ಇಳಿದಿದೆ. ಹಾಗಾದರೆ ಭಾರತವು ಕೋವಿಡ್ -೧೯ ಸೋಂಕಿನ ಉತ್ತುಂಗಕ್ಕೆ ಏರಿದೆಯೇ? ಅಥವಾ ನಾವು ಅದರ ಸಮೀಪದಲ್ಲಿ ಇದ್ದೇವೆಯೇ ಎಂಬ ಪ್ರಶ್ನೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಇಕೋವ್ರಾಪ್‌ನಲ್ಲಿ ಉತ್ತರ ಕೊಟ್ಟಿದೆ. ಆಗಸ್ಟ್ ೧೭ ರಂದು ಬಿಡುಗಡೆಯಾದ ಎಸ್‌ಬಿಐ ವರದಿಯಲ್ಲಿ, ಜುಲೈ ೩೦ ರಿಂದ ಆಗಸ್ಟ್ ೧೫ ರವರೆಗೆ ಭಾರತವು ೧೦ ಲಕ್ಷ ಪ್ರಕರಣಗಳನ್ನು (ಅಥವಾ ಸರಾಸರಿ ೫೮,೦೦೦ ದೈನಂದಿನ ಪ್ರಕರಣಗಳು) ವರದಿ ಮಾಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಆಗಸ್ಟ್ 21 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment