Friday, May 31, 2019

ಇಂದಿನ ಇತಿಹಾಸ History Today ಮೇ 31

ಇಂದಿನ ಇತಿಹಾಸ History Today ಮೇ 31
2019: ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟವು ತನ್ನ ಎರಡನೇ ಅವಧಿಯ ತನ್ನ ಚೊಚ್ಚಲ ಸಭೆಯಲ್ಲಿ  ಸೈನಿಕರು ಮತ್ತು ರೈತರ ಹಿತಕ್ಕೆ ಆದ್ಯತೆ ನೀಡಿ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸುವ ನಿರ್ಧಾರದ ಮೂಲಕಜೈ ಜವಾನ್, ಜೈ ಕಿಸಾನ್ಮಂತ್ರದ ಅಡಿಯಲ್ಲಿ ಕಾರ್ಯಾರಂಭ ಮಾಡಿತುಯೋಧರ ಮಕ್ಕಳಿಗೆ ಶಿಷ್ಯವೇತನ ಹೆಚ್ಚಳ ಹಾಗೂ ಅದನ್ನು ಭಯೋತ್ಪಾದನೆ ಹಾಗೂ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೂ ವಿಸ್ತರಿಸುವ ಮೂಲಕ ಸಂಪುಟದ ಮೊದಲ ನಿರ್ಧಾರವನ್ನುದೇಶದ ರಕ್ಷಕರಿಗೆ ಅರ್ಪಿಸಿದರೆ, ಇನ್ನೊಂದು ಮಹತ್ವದ ಕ್ರಮವಾಗಿ  ರೈತರಿಗೆ ವರ್ಷಕ್ಕೆ  6000 ರೂಪಾಯಿಗಳ  ‘ಗೌರವ ಧನಒದಗಿಸುವ  ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಎಲ್ಲ ರೈತರಿಗೂ ವಿಸ್ತರಿಸುವ ಹಾಗೂ 2 ಹೆಕ್ಟೇರ್  ಮಿತಿ ರದ್ದು ಪಡಿಸುವ ನಿರ್ಧಾರವನ್ನು ಕೈಗೊಂಡಿದೆ. ಜೊತೆಗೆ 60 ವರ್ಷ ಮೀರಿದ ರೈತರಿಗೆ  ಮತ್ತು ವರ್ತಕರಿಗೆ ಪಿಂಚಣಿ ಒದಗಿಸುವ ನಿರ್ಧಾರವನ್ನು ಕೈಗೊಂಡಿತು.  ಸರ್ಕಾರದ ಕ್ರಮವು ಸುಮಾರು ೧೫ ಕೋಟಿಗೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯ ಮಕ್ಕಳಿಗೆ ನೀಡಲಾಗುತ್ತಿದ್ದ ಶಿಷ್ಯ ವೇತನ ಯೋಜನೆಯನ್ನು (ಸ್ಕಾಲರ್ ಶಿಪ್ ಸ್ಕೀಮ್) ನಕ್ಸಲ್ ಮತ್ತು ಭಯೋತ್ಪಾದಕ ದಾಳಿಗಳಲ್ಲಿ ಹುತಾತ್ಮರಾದ ರಾಜ್ಯ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ವಿಸ್ತರಿಸಿದರು.ಸರ್ಕಾರವು ರಾಷ್ಟ್ರೀಯ ರಕ್ಷಣಾ ನಿಧಿ ಯೋಜನೆಯಡಿಯಲ್ಲಿ ಮಕ್ಕಳಿಗೆ ನೀಡಲಾಗುವ ಮಾಸಿಕ ಶಿಷ್ಯವೇತನವನ್ನು ಬಾಲಕರಿಗೆ ೨೦೦೦ ರೂಪಾಯಿಗಳಿಂದ ೨೫೦೦ ರೂಪಾಯಿಗಳಿಗೆ ಮತ್ತು ಬಾಲಕಿಯರಿಗೆ ,೨೫೦ ರೂಪಾಯಿಯಿಂದ ,೦೦೦ ರೂಪಾಯಿಗಳಿಗೆ ಏರಿಸಿತು. ನಮ್ಮ ಸರ್ಕಾರದ ಮೊದಲ ನಿರ್ಧಾರವನ್ನು ಭಾರತವನ್ನು ಸಂರಕ್ಷಿಸುವವರಿಗೆ ಸಮರ್ಪಣೆ ಮಾಡಲಾಗಿದೆ. ರಾಷ್ಟ್ರೀಯ ರಕ್ಷಣಾ ನಿಧಿಯಡಿಯ ಪ್ರಧಾನ ಮಂತ್ರಿಗಳ ಶಿಷ್ಯವೇತನ ಯೋಜನೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಭಯೋತ್ಪಾದಕ ಅಥವಾ ಮಾವೋವಾದಿ ದಾಳಿಗಳಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಶಿಷ್ಯ ವೇತನ ವಿಸ್ತರಣೆಯೂ ಸೇರಿದೆಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸರ್ಕಾರದ ಪ್ರಥಮ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡ ತತ್ ಕ್ಷಣವೇ ಟ್ವೀಟ್ ಮಾಡಿದರು೧೭ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನವನ್ನು ಜೂನ್ ೧೭ರಿಂದ ಜುಲೈ ೨೬ರವರೆಗೆ ನಡೆಸಲು ಮತ್ತು ಜುಲೈ ೫ರಂದು ೨೦೧೯-೨೦ರ ಸಾಲಿನ ಮುಂಗಡಪತ್ರವನ್ನು ಮಂಡಿಸಲೂ ಸಂಪುಟ ಸಭೆ ನಿರ್ಧರಿಸಿತು.  ಸಂಸತ್ ಅಧಿವೇಶನದ ದಿನಾಂಕಗಳ ಬಗ್ಗೆ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು.೨೦೧೯-೨೦ರ ಸಾಲಿನ ಮಧ್ಯಂತರ ಮುಂಗಡಪತ್ರವನ್ನು ಆಗಿನ ಹಣಕಾಸು ಸಚಿವ ಪೀಯೂಶ್ ಗೋಯಲ್ ಅವರು ೨೦೧೯ರ ಫೆಬ್ರುವರಿ ೧ರಂದು ಮಂಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿ ಎರಡನೇ ಅವಧಿಗೆ ಚುನಾಯಿತರಾದ ಮೊದಲ ಬಿಜೆಪಿ ನಾಯಕರಾಗಿದ್ದು, ಇಂತಹ ಸಾಧನೆಯನ್ನು ಹಿಂದೆ ಮೂವರು ಕಾಂಗ್ರೆಸ್ ನಾಯಕರು - ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಮಾತ್ರ ಮಾಡಿದ್ದರು.ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು ಲೋಕಸಭಾ ಚುನಾವಣೆಯಲ್ಲಿ ೩೫೨ ಸ್ಥಾನಗಳೊಂದಿಗೆ ಪ್ರಚಂಡ ಬಹುಮತ ಗಳಿಸಿ ಅಧಿಕಾರಕ್ಕೆ ಏರಿದೆ. ಬಿಜೆಪಿ ಒಂದೇ ಪಕ್ಷ ಸ್ವಂತ ಬಲದಲ್ಲೇ ೩೦೩ ಸ್ಥಾನ ಗೆದ್ದಿತ್ತು. ಕಾಂಗ್ರೆಸ್ ಪಕ್ಷವು ಕೇವಲ ೫೨ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ್ದ ೪೪ ಸ್ಥಾನಗಳಿಗಿಂತ ಸ್ಥಾನಗಳನ್ನು ಮಾತ್ರ ಹೆಚ್ಚು ಗಳಿಸಿತ್ತು.  ಪ್ರಧಾನಿ ಮೋದಿ ಮತ್ತು ಅವರ ೫೭ ಸದಸ್ಯರ ಸಚಿವ ಸಂಪುಟವು ಗುರುವಾರ ಪ್ರಮಾಣ ವಚನ ಸ್ವೀಕರಿಸಿತ್ತುಶುಕ್ರವಾರ ಸಂಪುಟ ಸಭೆಗೆ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿದರು.

2019: ನವದೆಹಲಿ: ನಾಲ್ಕು ಉನ್ನತ ಸಚಿವ ಸ್ಥಾನಗಳನ್ನು ಸಂಪೂರ್ಣ ಪಲ್ಲಟಗೊಳಿಸರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹೊಸದಾಗಿ ಸಂಪುಟದರ್ಜೆ ಸಚಿವರಾಗಿ ಸಚಿವ ಸಂಪುಟ ಸೇರಿರುವ ಅಮಿತ್ ಶಾ ಅವರನ್ನು ರಾಷ್ಟ್ರದ ನೂತನ ಗೃಹ ಸಚಿವರನ್ನಾಗಿ ನೇಮಕ ಮಾಡಿದರು. ಎನ್‌ಡಿಎ-೧ ಸರ್ಕಾರದಲ್ಲಿ ಗೃಹ ಖಾತೆಯನ್ನು ನಿಭಾಯಿಸಿದ್ದ ರಾಜನಾಥ್ ಸಿಂಗ್ ಅವರಿಗೆ ನಿರ್ಮಲಾ ಸೀತಾರಾಮನ್ ಅವರ ಕೈಯಲ್ಲಿದ್ದ ರಕ್ಷಣಾ ಖಾತೆಯ ಹೊಣೆಗಾರಿಕೆಯನ್ನು ನೀಡಿದರು. ಅರುಣ್ ಜೇಟ್ಲಿ ಅವರು ನಿಭಾಯಿಸಿದ್ದ ವಿತ್ತ ಖಾತೆಯನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಿದರು. ಸುಷ್ಮಾ ಸ್ವರಾಜ್ ಅವರು ನಿರ್ವಹಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಖಾತೆಯ ಭಾರವನ್ನು ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯಂ ಜೈಶಂಕರ್ ಅವರ ಹೆಗಲಿಗೆ ಏರಿಸಿದರು. ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ನೂತನ ಸಂಪುಟದಿಂದ ಹೊರಗೆ ಉಳಿದ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರ ಸ್ಥಾನಕ್ಕೆ  ಆಶ್ಚರ್ಯಕರವಾಗಿ ಅಮಿತ್ ಶಾ ಮತ್ತು ಜೈಶಂಕರ್ ಅವರನ್ನು ಪ್ರಧಾನಿ ಮೋದಿಯವರು ತಮ್ಮ ನೂತನ ಸಂಪುಟಕ್ಕೆ ಸೇರಿಸಿಕೊಂಡರು. ಕರ್ನಾಟಕದಿಂದ ಎರಡನೇ ಬಾರಿಗೆ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಡಿ.ವಿ. ಸದಾನಂದ ಗೌಡ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಿದರು. ಮೊದಲ ಬಾರಿಗೆ ಕೇಂದ್ರ ಸಂಪುಟ ದರ್ಜೆ ಸಚಿವರಾಗಿರುವ ಪ್ರಹ್ಲಾದ ಜೋಶಿ ಅವರಿಗೆ ಸಂಸದೀಯ ವ್ಯವಹಾರಗಳು; ಕಲ್ಲಿದ್ದಲು ಮತ್ತು ಗಣಿ ಖಾತೆ ಹೊಣೆಗಾರಿಕೆಯನ್ನು ವಹಿಸಲಾಗಿದೆ. ಕರ್ನಾಟಕದ ಬೆಳಗಾವಿಯಿಂದ ಸತತ ೪ನೇ ಬಾರಿಗೆ ಆಯ್ಕೆಯಾಗಿ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟದಲ್ಲಿ ರಾಜ್ಯ ದರ್ಜೆ ಸಚಿವರಾಗಿರುವ ಅಂಗಡಿ ಸುರೇಶ್ ಚನ್ನಬಸಪ್ಪ ಅವರನ್ನು ರೈಲ್ವೇ ಖಾತೆ ಸಹಾಯಕ ಸಚಿವರನ್ನಾಗಿ ಮಾಡಲಾಯಿತು. ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಹೊರತಾಗಿ ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಮೇನಕಾ ಗಾಂಧಿ, ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ರಾಧಾ ಮೋಹನ್ ಸಿಂಗ್, ಮಹೇಶ್ ಶರ್ಮ, ಜಯಂತ್ ಸಿಂಗ್, ಜುವಾಲ್ ಓರಮ್, ರಾಮ್ ಕೃಪಾಲ್ ಯಾದವ್, ರಾಜ್ಯವರ್ಧನ್ ಸಿಂಗ್ ರಾಥೋಡ್ (ಎಲ್ಲರೂ ಬಿಜೆಪಿ) ಮತ್ತು ಅನುಪ್ರಿಯಾ ಪಟೇಲ್ (ಬಿಜೆಪಿ ಮಿತ್ರ ಪಕ್ಷ ಅಪ್ನಾ ದಳ) ಅವರು ಚುನಾವಣೆಯಲ್ಲಿ ವಿಜಯಗಳಿಸಿದ್ದರೂ ಮತ್ತೆ ಮಂತ್ರಿಸ್ಥಾನ ಪಡೆಯುವಲ್ಲಿ ವಿಫಲರಾದರು. ವಿವಾದಾತ್ಮಕ ಹೇಳಿಕೆಗಳಿಗೆ ಖ್ಯಾತಿ ಪಡೆದಿದ್ದ ಕರ್ನಾಟಕದ ಹಿಂದುತ್ವ ನಾಯಕ ಅನಂತ ಕುಮಾರ ಹೆಗಡೆ ಅವರನ್ನೂ ಈ ಬಾರಿ ಮೋದಿ ಸಂಪುಟದಿಂದ ಕೈಬಿಟ್ಟರು. ಸುರೇಶ ಪ್ರಭು ಮತ್ತು ಜೆಪಿ ನಡ್ಡಾ (ಇಬ್ಬರೂ ರಾಜ್ಯಸಭಾ ಸದಸ್ಯರು) ಕೂಡಾ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಬಿಜೆಪಿಯ ಉತ್ತರಪ್ರದೇಶ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜೆಪಿ ನಡ್ಡಾ ಅವರು ಅಮಿತ್ ಶಾ ಅವರ ಉತ್ತರಾಧಿಕಾರಿಯಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಪಡೆಯಬಹುದು ಎಂಬ ಊಹಾಪೋಹ ಇದೆ. ಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ರಾಜತಂತ್ರಜ್ಞ ಹರ್ ದೀಪ್ ಸಿಂಗ್ ಪುರಿ ಅವರು ತಮ್ಮ ಸಚಿವ ಸ್ಥಾನ ಉಳಿಸಿಕೊಂಡರು.  ಜೈಶಂಕರ್ ಮತ್ತು ಪುರಿ ಇಬ್ಬರೂ ಆರು ತಿಂಗಳುಗಳ ಒಳಗಾಗಿ ಸಂಸತ್ತಿಗೆ ಆಯ್ಕೆಯಾಗಿ ಬರಬೇಕಾಗಿದೆ. ಸಚಿವ ಸ್ಥಾನಗಳ ಸಂಖ್ಯೆಗೆ ಸಂಬಂಧಿಸಿದಂತೆ ಕೇಸರಿ ಪಕ್ಷದ ಜೊತೆಗೆ ಭಿನ್ನಾಭಿಪ್ರಾಯ ವ್ಯಕ್ತ ಪಡಿಸಿರುವ ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾಗಿರುವ ಜೆಡಿ(ಯು) ಸಂಪುಟದಿಂದ ಹೊರಗುಳಿಯಿತು. ಬಿಜೆಪಿ ವಿಜಯದ ಮುಖ್ಯ ರೂವಾರಿಯಾಗಿದ್ದ ಹಾಗೂ ಪಕ್ಷದ ನೆಲೆ ವಿಸ್ತರಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಅಮಿತ್ ಶಾ ಅವರ ಸೇರ್ಪಡೆ ಮತ್ತು ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಜೈಶಂಕರ್ ಅವರ ಸೇರ್ಪಡೆ ಅಚ್ಚರಿಯನ್ನು ಮೂಡಿಸಿತು. ದಿವಂಗತ ಕೆ. ಸುಬ್ರಮಣ್ಯಂ ಅವರ ಪುತ್ರನಾದ ಜೈಶಂಕರ್ ಭಾರತದ ಆಯಕಟ್ಟಿನ ವಿಚಾರಗಳ ವಿಶ್ಲೇಷಣೆಯಲ್ಲಿ ಮುಂಚೂಣಿ ಪಾತ್ರ ವಹಿಸಿರುವವರಲ್ಲಿ ಒಬ್ಬರಾಗಿದ್ದು, ಭಾರತ- ಅಮೆರಿಕ ಪರಮಾಣು ಒಪ್ಪಂದದಲ್ಲಿ ಭಾರತೀಯ ತಂಡದ ಪ್ರಮುಖ ಪ್ರತಿನಿಧಿಯಾಗಿದ್ದರು. ಕೇಂದ್ರ ಸಂಪುಟದಲ್ಲಿ  ಗರಿಷ್ಠ ೯ ಮಂದಿ ಉತ್ತರ ಪ್ರದೇಶವರಾಗಿದ್ದರೆ, ೧೮ ಸ್ಥಾನಗಳನ್ನು ಗೆದ್ದಿರುವ ಪಶ್ಚಿಮ ಬಂಗಾಳವು ಎರಡು ಸಚಿವ ಸ್ಥಾನಗಳನ್ನು (ಬಾಬುಲ್ ಸುಪ್ರಿಯೋ ಮತ್ತು ದೇಬಶ್ರೀ ಚೌಧರಿ) ಪಡೆಯಿತು. ಶೂನ್ಯ ಫಲಿತಾಂಶ ಪಡೆದ ಕೇರಳಕ್ಕೆ ಮಹಾರಾಷ್ಟ್ರದಿಂದ ರಾಜ್ಯಸಭಾ ಸದಸ್ಯರಾಗಿರುವ ವಿ.ಮುರಳೀಧರನ್ ಮೂಲಕ ಕೇಂದ್ರ ಸಂಪುಟದಲ್ಲಿ ಪ್ರಾತನಿಧ್ಯ ಒದಗಿಸಲಾಯಿತು. ಪ್ರಧಾನಿಯವರೂ ಸೇರಿದಂತೆ ೫೮ ಸದಸ್ಯರನ್ನು ಹೊಂದಿರುವ ಸಚಿವ ಸಂಪುಟದಲ್ಲಿ ೨೫ ಮಂದಿ ಸಂಪುಟ ದರ್ಜೆ ಸಚಿವ ಸ್ಥಾನಗಳನ್ನು ಹೊಂದಿದರೆ, ೯ ಮಂದಿ ಸ್ವತಂತ್ರ ಹೊಣೆಗಾರಿಕೆಯ ರಾಜ್ಯ ಸಚಿವರ ಸ್ಥಾನ ಹೊಂದಿದ್ದಾರೆ ಮತ್ತು ೨೪ ಮಂದಿ ರಾಜ್ಯ ಸಚಿವರ ಸ್ಥಾನ ಹೊಂದಿದ್ದಾರೆ.

2019: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಮಾಡಿರುವ ಸಚಿವ ಸಂಪುಟ ಸದಸ್ಯರ ಖಾತೆ ಹಂಚಿಕೆಯಲ್ಲಿ ಮಹತ್ವದ ವಿತ್ತ ಖಾತೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಹಂಚುವುದರೊಂದಿಗೆ ೪೮ ವರ್ಷಗಳ ಬಳಿಕ ಮಹಿಳೆಯೊಬ್ಬರು ವಿತ್ತ ಸಚಿವರಾದರು. ಇದರೊಂದಿಗೆ ಲೋಕಸಭೆಗೆ ೨೫ ಸ್ಥಾನಗಳನ್ನು ದೊರಕಿಸಿಕೊಟ್ಟಿರುವ ಕರ್ನಾಟಕಕ್ಕೂ ಮಹತ್ವದ ಖಾತೆ ಲಭಿಸಿದಂತಾಯಿತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ೧೯೬೯ ರಿಂದ ಜೂನ್ ೧೯೭೦ ರ ವರೆಗೆ ಹಣಕಾಸು ಖಾತೆಯನ್ನು ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ೨೦೧೪ರಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಮಹತ್ವದ ರಕ್ಷಣಾ ಖಾತೆಯನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ರಕ್ಷಣಾ ಖಾತೆಯನ್ನು ನಿರ್ಮಲಾ ಸೀತಾರಾಮನ್ ಅವರು ಸಮರ್ಥವಾಗಿ ನಿರ್ವಹಿಸುವ ಮೂಲಕ ಈಗ ವಿತ್ತ ಖಾತೆಗೆ ಬಡ್ತಿ ಪಡೆದರು. ೫೯ ರ ಹರೆಯದ ತಮಿಳುನಾಡು ಮೂಲದ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಎರಡನೇ ಬಾರಿಗೆ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಡಿ.ವಿ. ಸದಾನಂದ ಗೌಡ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಿದ್ದರೆ, ಮೊದಲ ಬಾರಿಗೆ ಕೇಂದ್ರ ಸಂಪುಟ ದರ್ಜೆ ಸಚಿವರಾಗಿರುವ ಪ್ರಹ್ಲಾದ ಜೋಶಿ ಅವರಿಗೆ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಹೊಣೆಗಾರಿಕೆಯನ್ನು ವಹಿಸಲಾಯಿತು.  ಕರ್ನಾಟಕದ ಬೆಳಗಾವಿಯಿಂದ ಸತತ ೪ನೇ ಬಾರಿಗೆ ಆಯ್ಕೆಯಾಗಿ ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟದಲ್ಲಿ ರಾಜ್ಯ ದರ್ಜೆ ಸಚಿವರಾಗಿರುವ ಅಂಗಡಿ ಸುರೇಶ್ ಚನ್ನಬಸಪ್ಪ ಅವರನ್ನು ರೈಲ್ವೇ ಖಾತೆ ಸಹಾಯಕ ಸಚಿವರನ್ನಾಗಿ ಮಾಡಲಾಯಿತು.

2019: ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ಮತ್ತು ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಅವರ ಜೊತೆಗೆ ಪ್ರತ್ಯೇಕ ಮಾತುಕತೆಗಳನ್ನು ನಡೆಸಿ ದ್ವಿಪಕ್ಷೀಯ ಬಾಂಧ್ಯವ್ಯ ವೃದ್ಧಿಯ ಮಾರ್ಗಗಳ ಅನ್ವೇಷಣೆ ನಡೆಸಿದರು. ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ಬಳಿಕ ಮೋದಿಯವರು ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ ಜಗುನಾಥ್ ಅವರ ಜೊತೆಗೆ ವಿಸ್ತೃತ ಮಾತುಕತೆಗಳನ್ನು ನಡೆಸಿದರು. ವಿದೇಶೀ ನಾಯಕರು ಭಾರತಕ್ಕೆ ಪ್ರಧಾನಿ ಮೋದಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ್ದರು. ಮೋದಿ ಮತ್ತು ಸಿರಿಸೇನಾ ಅವರು ತಮ್ಮ ಮಾತುಕತೆಯಲ್ಲಿ ಭಯೋತ್ಪಾದನೆ ಮತ್ತು ಉಗ್ರವಾದ ನಿರಂತರವಾಗಿ ಮಾನವತೆಗೆ ಒಡ್ಡಿರುವ ಅಪಾಯದ ಬಗ್ಗೆ ಕಳವಳ ವ್ಯಕ್ತ ಪಡಿಸಿ, ದಕ್ಷಿಣ ಏಷ್ಯಾ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆ ಸಲುವಾಗಿ ದ್ವಿಪಕ್ಷೀಯ ಸಹಕಾರ ವಿಸ್ತರಣೆಗೆ ಬದ್ಧತೆ ವ್ಯಕ್ತ ಪಡಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿತು. ಶ್ರೀಲಂಕಾವು ಇತ್ತೀಚೆಗೆ ಭಯೋತ್ಪಾದಕ ಬಾಂಬ್ ದಾಳಿಗಳಿಂದ ತತ್ತರಿಸಿದ್ದು, ೨೫೦ಕ್ಕೂ ಹೆಚ್ಚು ಮಂದಿ ಕಳೆದ ತಿಂಗಳಲ್ಲಿ ಸಾವನ್ನಪ್ಪಿದ್ದರು. ಪ್ರಧಾನಿಯವರು ಅಧ್ಯಕ್ಷ ಸಿರಿಸೇನಾ ಅವರಿಗೆ ಸಮಾರಂಭಕ್ಕೆ ಆಗಮಿಸಿದ್ದಕಾಗಿ ಮತ್ತು ಶುಭಾಶಯ ಕೋರಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದ ವ್ಯಕ್ತ ಪಡಿಸಿದರು. ಶ್ರೀಲಂಕಾ ಜೊತೆಗೆ ಮೈತ್ರಿಯುತ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ತಮ್ಮ ಸರ್ಕಾರದ ಬದ್ಧತೆಯನ್ನು ದೃಢ ಪಡಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಜಗುನಾಥ್ ಅವರ ಜೊತೆಗಿನ ಮೋದಿ ಭೇಟಿಯಲ್ಲಿ ಉಭಯ ನಾಯಕರೂ ಹಿಂದೂ ಮಹಾಸಾಗರ ಪ್ರದೇಶದ ಉಭಯ ರಾಷ್ಟ್ರಗಳ ಭದ್ರತೆ ಮತ್ತು ಬೆಳವಣಿಗೆಯ ದೃಷ್ಟಿಕೋನವನ್ನು ಹಂಚಿಕೊಂಡರು ಮತ್ತು ಈ ನಿಟ್ಟಿನಲ್ಲಿ ಇನ್ನಷ್ಟು ಶ್ರಮಿಸಲು ಒಪ್ಪಿದರು. ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧನೆ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಅವರು ವ್ಯಕ್ತ ಪಡಿಸಿದರು. ಮೋದಿಯವರು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ಅವರ ಜೊತೆಗೂ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರೂ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ವ್ಯಕ್ತ ಪಡಿಸಿದರು. ಭೂತಾನ್ ಪ್ರಧಾನಿ ತ್ಶೆರಿಂಗ್ ಜೊತೆಗಿನ ಮೋದಿಯವರ ಮಾತುಕತೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಬದ್ಧತೆಗಳ ಬಗ್ಗೆ ಮಾತನಾಡಿದರು ಮತ್ತು ಪರಂಪರಾಗತ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಒಪ್ಪಿದರು. ಪ್ರಧಾನಿಯವರು ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಅವರ ಜೊತೆಗೂ ಮಾತನಾಡಿ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಪ್ರಮಾಣ ವಚದ ಬಳಿಕ ಪ್ರಪ್ರಥಮವಾಗಿ ಕಿರ್ಗಿಝ್  ಅಧ್ಯಕ್ಷ ಸೋರೋನ್‌ಬೇ ಜೀಂಬೆಕೊವ್ ಅವರ ಜೊತೆಗೆ ಪ್ರಧಾನಿ ಮೋದಿ ಮಾತನಾಡಿದರು. ಶಾಂಘಾಯ್ ಸಹಕಾರ ಸಂಘಟನೆಯ ಮುಖ್ಯಸ್ಥರಾಗಿ ಅವರು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಭಾರತ ಮತ್ತು ಕಿರ್ಗಿಸ್ಥಾನ್ ಮಧ್ಯೆ ಆತ್ಮೀಯ ಹಾಗೂ ಮೈತ್ರಿಯುತ ಬಾಂಧವ್ಯಗಳಿವೆ ಎಂಬುದನ್ನು ನೆನಪಿಸಿದ ಪ್ರಧಾನಿ ಇತ್ತೀಚಿನ ವರ್ಷಗಳಲ್ಲಿ ದ್ವಿಪಕ್ಷೀಯ ಸಹಕಾರ ಬಲಗೊಂಡಿರುವುದಕ್ಕೆ ತೃಪ್ತಿ ವ್ಯಕ್ತ ಪಡಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿತು. ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಅಧಿಕಾರ ಸ್ವೀಕಾರ ಪ್ರಮಾಣವಚನ ಸಮಾರಂಭಕ್ಕೆ ಭಾರತವು ಬಂಗಾಳ ಕೊಲ್ಲಿ ಬಹರಂಗ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಉಪಕ್ರಮ (ಬೇ ಆಫ್ ಬೆಂಗಾಲ್ ಇನಿಷಿಯೇಟಿವ್ ಫಾರ್ ಮಲ್ಟಿ-ಸೆಕ್ಟೋರಲ್ ಟೆಕ್ನಿಕಲ್ ಅಂಡ್ ಇಕನಾಮಿಕ್ ಕೋಆಪರೇಷನ್ - ಬಿಮ್‌ಸ್ಟೆಕ್) ರಾಷ್ಟ್ರಗಳ ನಾಯಕರಿಗೆ ಮತ್ತು ಜೀನ್‌ಬೆಕೊವ್ ಮತ್ತು ಜಗುನಾಥ್ ಅವರಿಗೆ ಆಮಂತ್ರಣ ಕಳುಹಿಸಿತ್ತು. ಭಾರತದ ಹೊರತಾಗಿ ಬಿಮ್‌ಸ್ಟೆಕ್‌ನಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ನೇಪಾಳ ಮತ್ತು ಭೂತಾನ್ ಈ ರಾಷ್ಟ್ರಗಳು ಇವೆ.  ೨೦೧೪ರಲ್ಲಿ ಮೋದಿಯವರು ಪ್ರಮಾಣವಚನ ಸಮಾರಂಭಕ್ಕೆ ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ಸೇರಿದಂತೆ ಸಾರ್ಕ್ ನಾಯಕರಿಗೆ ಆಮಂತ್ರಣ ಕಳುಹಿಸುವ ಮೂಲಕ ನೆರೆಹೊರೆ ಬಾಂಧವ್ಯ ವೃದ್ಧಿಗೆ ಪ್ರಮುಖ ಹೆಜ್ಜೆ ಇಟ್ಟಿದ್ದರು. ಆದರೆ ಈ ಬಾರಿ ಬಿಮ್‌ಸ್ಟೆಕ್ ನಾಯಕರಿಗೆ ಆಹ್ವಾನ ನೀಡಿದ್ದು ಪಾಕಿಸ್ತಾನಕ್ಕೆ ಆಮಂತ್ರಣ ನೀಡುವುದನ್ನು ತಪ್ಪಿಸುವ ಸಲುವಾಗಿ ಕೈಗೊಂಡ ಕ್ರಮ ಎಂಬುದಾಗಿ ಭಾವಿಸಲಾಗಿತ್ತು. ೧೯೯೭ರಲ್ಲಿ ಸ್ಥಾಪನೆಗೊಂಡ ಬಿಮ್‌ಸ್ಟೆಕ್ ಪ್ರಸ್ತುತ ೧.೫ ಬಿಲಿಯನ್‌ಗೂ ಹೆಚ್ಚಿನ ಜನರನ್ನು ಪ್ರತಿನಿಧಿಸುತ್ತಿದ್ದು, ಒಟ್ಟಾರೆ ೩.೫ ಟ್ರಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ದೇಶೀ ಉತ್ಪನ್ನಗಳನ್ನು ಉತ್ಪಾದಿಸುತ್ತಿವೆ.


2018: ನವದೆಹಲಿ: ೨೦೧೯ ರ ಲೋಕಸಭೆಗೆ ದಿಕ್ಸೂಚಿ  ಎಂದೇ ಪರಿಗಣಿಸಲಾಗಿದ್ದ ವಿವಿಧ ರಾಜ್ಯಗಳ ೪ ಲೋಕಸಭಾ ಕ್ಷೇತ್ರಗಳು ಮತ್ತು ೧೧ ವಿಧಾನ ಸಭಾ  ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶ ಹೊರ ಬಿದ್ದಿತು. ಕೇಂದ್ರದಲ್ಲಿ ನಾಲ್ಕು ವರ್ಷಗಳ ಆಡಳಿತವನ್ನು ಪೂರೈಸಿರುವ ಬಿಜೆಪಿ ಒಂದು ಲೋಕಸಭೆ ಮತ್ತು ಒಂದು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಜಯ ಗಳಿಸಿ, ಉಳಿದ ಎಲ್ಲ ಕಡೆಗಳಲ್ಲೂ ಸೋಲುಣ್ಣುವ ಮೂಲಕ ತೀವ್ರ ಮುಖಭಂಗ ಅನುಭವಿಸಿತು.  ೪ ಲೋಕಸಭಾ ಕ್ಷೇತ್ರಗಳ ಪೈಕಿ ಒಂದನ್ನು ಬಿಜೆಪಿ ೧ ಗೆದ್ದರೆ, ಇನ್ನೊಂದು ಕ್ಷೇತ್ರವನ್ನು ಎನ್‌ಡಿಎ ಮಿತ್ರ ಪಕ್ಷ ಎನ್‌ಡಿಪಿಪಿ ಗೆದ್ದಿತು. ಆರ್‌ಎಲ್‌ಡಿ ಮತ್ತು ಎನ್ ಸಿಪಿ ತಲಾ ಒಂದು ಕ್ಷೇತ್ರಗಳನ್ನು ಗೆದ್ದುಕೊಂಡವು. ೧೧ ವಿಧಾನಸಭಾ ಕ್ಷೇತ್ರಗಳ ಪೈಕಿ ಉತ್ತರಾ ಖಂಡದ ಥರಾಲಿ ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿದ ಬಿಜೆಪಿ ಉಳಿದ ಎಲ್ಲ ಕಡೆ ಸೋತಿತು. ಮಹಾರಾಷ್ಟ್ರ:  ಪಾಲ್ಘರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪಕ್ಷದ ರಾಜೇಂದ್ರ ಗಾವಿತ್ ಅವರು ಗೆಲುವು ಸಾಧಿಸುವ ಮೂಲಕ ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಂಡಿತು.  ಪಾಲ್ಘರ್‌ನಲ್ಲಿ ಬಿಜೆಪಿ ಸಂಸದ ಚಿಂತಾಮನ್ ವನಗಾ ಅವರ ಸಾವಿನಿಂದಾಗಿ ಉಪಚುನಾವಣೆ ನಡೆದಿತ್ತು. ಚಿಂತಾಮನ್ ಪುತ್ರ ಶ್ರೀನಿವಾಸ್ ವನಗಾ ಬಿಜೆಪಿ ತೊರೆದು ಶಿವಸೇನೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡರು. ಭಂಡರಾ ಗೊಂಡಿಯಾ ಲೋಕಸಭಾ ಕ್ಷೇತ್ರದಲ್ಲಿ ಎನ್‌ಸಿಪಿಯ ಕುಕಾಡೆ ಎಂ.ಯಶವಂತ್ ರಾವ್ ಅವರು ಬಿಜೆಪಿ ಅಭ್ಯರ್ಥಿಯನ್ನು ಪರಾಭವಗೊಳಿಸಿದರು. ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿತು. ಮಹಾರಾಷ್ಟ್ರದ ಪಲೂಸ್ ಕಡೇಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವಜೀತ್ ಪತಂಗರಾವ್ ಗೆಲ್ಲುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡಿತು.  ಉತ್ತರ ಪ್ರದೇಶ: ಕೈರಾನ ಕಳೆದುಕೊಂಡ ಬಿಜೆಪಿ - ಬಿಜೆಪಿ ಸಂಸತ್ ಸದಸ್ಯ ಹುಕುಂ ಸಿಂಗ್ ಅವರ ನಿಧನದಿಂದ ತೆರವಾಗಿದ್ದ  ಕೈರಾನ ಲೋಕಸಭಾ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ  ಆರ್‌ಎಲ್‌ಡಿ ಅಭ್ಯರ್ಥಿ ತಬಸ್ಸಮ್ ಬೇಗಂ ಅವರು ಬಿಜೆಪಿ ಅಭ್ಯರ್ಥಿ ಮೃಗಾಂಕ ಸಿಂಗ್ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು.  ಆರ್‌ಎಲ್‌ಡಿಗೆ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಬೆಂಬಲ ಸೂಚಿಸಿದ್ದವು. ಹೀಗಾಗಿ ಗೆಲುವು ಸಾಧಿಸುವುದು ಸುಲಭವಾಯಿತು.  ನೂರ್‌ಪುರ್ ವಿಧಾನಸಭಾ ಕ್ಷೇತ್ರವನ್ನೂ ಆಡಳಿತಾರೂಢ ಬಿಜೆಪಿ ಕಳೆದುಕೊಂಡಿದ್ದು, ಸಮಾಜವಾದಿ ಪಕ್ಷದ ಅಭ್ಯರ್ಥಿ ನಯೀಮ್ ಉಲ್ ಹಸನ್ ಜಯ ಭೇರಿ ಬಾರಿಸಿದರು. ಬಿಹಾರ: ಜೊಕಿಹತ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ  ಜೆಡಿಯು ಗೆದ್ದಿದ್ದ ಸ್ಥಾನವನ್ನು ವಿಪಕ್ಷ ಆರ್‌ಜೆಡಿ ಅಭ್ಯರ್ಥಿ ಶಹನವಾಜ್ ಅವರು ಗೆಲ್ಲುವ ಮೂಲಕ ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಆಘಾತ ನೀಡಿದರು.  ನಾಗಾಲ್ಯಾಂಡ್:
ನಾಗಾಲ್ಯಾಂಡ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷ ಎನ್‌ಡಿಪಿಪಿ ಗೆಲುವು ಸಾಧಿಸಿತು. ಪಂಜಾಬ್: ವಿಪಕ್ಷ ಶಿರೋಮಣಿ ಆಕಾಲಿದಳ ಗೆದ್ದಿದ್ದ ಶಾಕೋಟ್ ವಿಧಾನಸಭಾ  ಕ್ಷೇತ್ರವನ್ನು ಆಡಳಿತಾರೂಢ ಕಾಂಗ್ರೆಸ್ ಮತ್ತೆ ತನ್ನ ವಶಕ್ಕೆ ಪಡೆಯುವಲ್ಲಿ  ಯಶಸ್ವಿಯಾಯಿತು. ಪಕ್ಷದ ಹರ್‌ದೇವ್ ಸಿಂಗ್ ಲಡಿ ಇಲ್ಲಿ ವಿಜಯ ಸಾಧಿಸಿದರು. ಜಾರ್ಖಂಡ್ ಜೆಎಂಎಂ ಜಯಭೇರಿ:  ಸಿಲ್ಲಿ ವಿಧಾನಸಭಾ ಕ್ಷೇತ್ರ ಮತ್ತು ಗೋಮಿಯಾವನ್ನು ವಿಪಕ್ಷ ಜೆಎಂಎಂ ಪಕ್ಷ ಉಳಿಸಿಕೊಂಡಿದ್ದು ಕ್ರಮವಾಗಿ ಪಕ್ಷದ ಸೀಮಾ ದೇವಿ ಮತ್ತು ಬಬಿತಾ ದೇವಿ ಅವರು ಈ ಕ್ಷೇತ್ರಗಳಲ್ಲಿ ಜಯಗಳಿಸಿದರು.  ಪಶ್ಚಿಮ ಬಂಗಾಳ:  ಪಶ್ಚಿಮ ಬಂಗಾಳದ ಮಹೇಸ್ತಲದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ದುಲಾಲ್ ಚಂದ್ರ ದಾಸ್
ತನ್ನ ಕ್ಷೇತ್ರ ಉಳಿಸಿಕೊಂಡರು. ಉತ್ತರಾಖಂಡ: ಥರಾಲಿ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ಜಯಗಳಿಸಿತು. ಅಭ್ಯರ್ಥಿ ಮುನ್ನಿದೇವಿ ಶಾ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಪರಾಭವಗೊಳಿಸುವ ಮೂಲಕ ಕ್ಷೇತ್ರವನ್ನು ಪಕ್ಷಕ್ಕೆ ಉಳಿಸಿಕೊಟ್ಟರು. ಮೇಘಾಲಯ:  ಅಂಪಾಟಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿತು. ಪಕ್ಷದ ಮಿಯಾನಿ ಡಿ ಸಿರಾ ಅವರು ಜಯ ಸಾಧಿಸಿದರು. ಈ ವಿಜಯದೊಂದಿಗೆ ಮೇಘಾಲಯದಲ್ಲಿ ಇದೀಗ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಯಿತು. ಕೇರಳ:  ಚಂಗನೂರು ವಿಧಾನಸಭಾ ಕ್ಷೇತ್ರವನ್ನು ಆಡಳಿತಾರೂಢ ಸಿಪಿಎಂ ಗೆಲ್ಲುವಲ್ಲಿ ಯಶಸ್ವಿಯಾಯಿತು. ಕ್ಷೇತ್ರವನ್ನು ಎಡರಂಗ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎಲ್‌ಡಿಎಫ್ ಮೈತ್ರಿ ಕೂಟದ ಅಭ್ಯರ್ಥಿ ಸಾಜಿ ಚೆರಿಯನ್ ಅವರು ಕಾಂಗ್ರೆಸ್‌ನ ವಿಜಯ್‌ಕುಮಾರ್ ವಿರುದ್ಧ ೨೦,೯೫೬ ಮತಗಳ ಅಂತರದ ಜಯವನ್ನು ತನ್ನದಾಗಿಸಿಕೊಂಡರು. ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳೈ ಅವರು ೩೫,೨೭೦ ಮತಗಳನ್ನು ಪಡೆದರು. ವಿಜೇತ ಚೆರಿಯನ್ ೬೭,೩೦೩ ಮತಗಳನ್ನು ಪಡೆದರು. ಕರ್ನಾಟಕ:  ಕರ್ನಾಟಕದ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಮುಂದೂಡಲ್ಪಟ್ಟ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎನ್. ಮುನಿರತ್ನ ಅವರು ೨೫,೦೦೦ಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಪುನರಾಯ್ಕೆಯಾದರು. ಗುರುತಿನ ಚೀಟಿ ಹಗರಣದ ಹಿನ್ನೆಲೆಯಲ್ಲಿ ಇಲ್ಲಿನ ಮತದಾನ ಮುಂದೂಡಲ್ಪಟ್ಟಿತ್ತು. ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ದೊಡ್ಡ ಉಪಚುನಾವಣೆ ಇದಾಗಿದ್ದು, ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಬಾಕಿ ಇದೆ. ಹೀಗಾಗಿ ಈ ಚುನಾವಣೆಗಳ ಫಲಿತಾಂಶ ವ್ಯಾಪಕ ಕುತೂಹಲ ಮೂಡಿಸಿತ್ತು.

2018: ನವದೆಹಲಿ: ೨೦೧೭-೧೮ರ ಜನವರಿ - ಮಾರ್ಚ್ ಅವಧಿಯ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇಕಡಾ ೭.೭ರ ಬೆಳವಣಿಗೆಯನ್ನು ದಾಖಲಿಸಿತು. ಕಳೆದ ವರ್ಷ (೨೦೧೬-೧೭) ಇದೇ ಅವಧಿಯಲ್ಲಿ ದೇಶದ ಸಮಗ್ರ ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ ೬.೧ ಇತ್ತು. ನೋಟು ಅಮಾನ್ಯೀಕರಣದ ಬಳಿಕ ದಾಖಲಾಗಿರುವ ಗರಿಷ್ಠ ಜಿಡಿಪಿ (ಶೇಕಡಾ ೭.೭) ಇದಾಗಿದೆ. ೨೦೧೭-೧೮ರ ಜನವರಿ - ಮಾರ್ಚ್ ಅವಧಿಯ ತ್ರೈಮಾಸಿಕದಲ್ಲಿ ಶೇಕಡಾ ೭.೭ ಜಿಡಿಪಿ ದಾಖಲಾಗಲು ಉತ್ಪಾದನಾ ರಂಗ, ನಿರ್ಮಾಣ ಮತ್ತು ಸೇವಾ ರಂಗಗಳಲ್ಲಿನ ಉತ್ತಮ ನಿರ್ವಹಣೆ ಹಾಗೂ ಕೃಷಿ ರಂಗದಲ್ಲಿನ ಉತ್ತಮ ಉತ್ಪಾದನೆ ಭಾರತೀಯ ಆರ್ಥಿಕತೆ ಶೇಕಡಾ ೭.೭ಕ್ಕೆ ಜಿಗಿಯಲು ಕಾರಣ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿದವು.  ೨೦೧೭-೧೮ರ ಸಂಪೂರ್ಣ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇಕಡಾ ೬.೭ರಷ್ಟು ದಾಖಲಾಗಿದ್ದು, ಪ್ರಗತಿ ನಿಧಾನಗೊಂಡಿತು. ೨೦೧೬-೧೭ರ ಹಣಕಾಸು ವರ್ಷದಲ್ಲಿ ಶೇಕಡಾ ೭.೧ ಜಿಡಿಪಿ ದಾಖಲಾಗಿತ್ತು.   ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದು ರೂಪಾಯಿ ದುರ್ಬಲಗೊಳ್ಳಲು ಕಾರಣವಾಗಿದ್ದು ಇದರಿಂದ ದೇಶದ ಆಮದು ತೀವ್ರ ಒತ್ತಡಕ್ಕೆ ಗುರಿಯಾಯಿತು.  ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಅನುಷ್ಠಾನದ ಬಳಿಕದಲ್ಲಿ ದೇಶದ ಜಿಡಿಪಿ ೨೦೧೭-೧೮ರ ಜನವರಿ - ಮಾರ್ಚ್ ಅವಧಿಯ ತ್ರೈಮಾಸಿಕದಲ್ಲಿ ಶೇಕಡಾ ೭.೭ ದಾಖಲಾಗಿರುವುದು ಗರಿಷ್ಠವೆನಿಸಿತು. ಕಲ್ಲಿದ್ದಲು, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು ಮತ್ತು ಸಿಮೆಂಟ್ ರಂಗ ಶೇಕಡಾ ೧೬ರ ಬೆಳವಣಿಗೆಯನ್ನು ಕಂಡಿವೆ. ಈ ವರ್ಷ ಏಪ್ರಿಲ್ ತಿಂಗಳಲ್ಲಿ ಇವು ಅನುಕ್ರಮವಾಗಿ ಶೇಕಡಾ ೭.೪, ಶೇಕಡಾ ೨.೭, ಮತ್ತು ಶೇಕಡಾ ೧೬.೬ರ ಬೆಳವಣಿಗೆಯನ್ನು ದಾಖಲಿಸಿವೆ. ರಸಗೊಬ್ಬರ ಉತ್ಪಾದನೆ ಶೇಕಡಾ ೪.೬ ಮತ್ತು ಉಕ್ಕು ಉತ್ಪಾದನೆ ರಂಗ ಶೇಕಡಾ ೩.೫ರ ಬೆಳವಣಿಗೆಯನ್ನು ಏಪ್ರಿಲ್ ತಿಂಗಳಲ್ಲಿ  ವಾರ್ಷಿಕ ನೆಲೆಯಲ್ಲಿ ದಾಖಲಿಸಿದವು. ೨೦೧೭ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ಏಪ್ರಿಲ್ ತಿಂಗಳಲ್ಲಿ  ವಿದ್ಯುತ್ ಉತ್ಪಾದನೆ ಶೇ. ೨.೨ರಷ್ಟು ಹೆಚ್ಚಿತು. ೨೦೧೭-೧೮ರ ಸಾಲಿನ ಮೊದಲ ಮೂರು ತ್ರೈಮಾಸಿಕಗಳಲ್ಲಿ ಶೇಕಡಾ ೫.೬, ಶೇಕಡಾ ೬.೩ ಮತ್ತು ಶೇಕಡಾ ೭ರಷ್ಟು ಜಿಡಿಪಿ ದಾಖಲಾಗಿತ್ತು.  ಕೃಷಿ (ಶೇಕಡಾ ೪.೫), ಉತ್ಪಾದನೆ (ಶೇಕಡಾ ೯.೧) ಮತ್ತು ನಿರ್ಮಾಣ (ಶೇಕಡಾ ೧೧.೫) ರಂಗಗಳಲ್ಲಿ ಕ್ಷಿಪ್ರ ಪ್ರಗತಿ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ತನ್ನ ಕಾಣಿಕ ಸಲ್ಲಿಸಿದೆ ಎಂದು ಕೇಂದ್ರೀಯ ಅಂಕಿಸಂಖ್ಯೆ ಕಚೇರಿ (ಸಿಎಸ್ ಒ) ಈದಿನ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಿತು. ಈ ಹಿಂದೆ ೨೦೧೬-೧೭ರ ಏಪ್ರಿಲ್-ಜೂನ್ ಅವಧಿಯ ತ್ರೈಮಾಸಿಕದಲ್ಲಿ ಗರಿಷ್ಠ ಅಂದರೆ ಶೇಕಡಾ ೮.೧ರಷು ಜಿಡಿಪಿ ದಾಖಲಾಗಿತ್ತು. ೨೦೧೬-೧೭ರ ಜನವರಿ- ಮಾರ್ಚ್ ನಡುವಣ ಅವಧಿಯ ತ್ರೈಮಾಸಿಕದಲ್ಲಿ ಶೇಕಡಾ ೬.೧ರಷ್ಟು ಜಿಡಿಪಿ ದಾಖಲಾಗಿತ್ತು.


2016: ನವದೆಹಲಿ/ ಪಲಗಾಂವ್: ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪಲಗಾಂವ್ನಲ್ಲಿರುವ ರಾಷ್ಟ್ರದ ಅತಿ ದೊಡ್ಡ ಸೇನಾ ಶಸ್ತ್ರಾಸ್ತ್ರ, ಮದ್ದುಗುಂಡು ಸಂಗ್ರಹಾಗಾರದಲ್ಲಿ (ಡಿಪೊ) ನಸುಕಿನ ವೇಳೆಯಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಇಬ್ಬರು ಸೇನಾ ಅಧಿಕಾರಿಗಳು  ಸೇರಿ ಕನಿಷ್ಠ 16  ಮಂದಿ ಸಾವನ್ನಪ್ಪಿದ್ದು, ಇತರ 19 ಮಂದಿ ಗಾಯಗೊಂಡರು. ಪ್ರಧಾನಿ ನರೇಂದ್ರ ಮೋದಿ ಘಟನೆಗೆ ತೀವ್ರ ದುಃಖ ವ್ಯಕ್ತ ಪಡಿಸಿದರು. ನಸುಕಿನ 1.30 ವೇಳೆಗೆ ದುರಂತ ಸಂಭವಿಸಿದ್ದು, ಮದ್ದುಗುಂಡುಗಳು ಭಾರಿ ಪ್ರಮಾಣದಲ್ಲಿ ಸ್ಪೋಟಿಸಿದವು ಎಂದು ವರದಿಗಳು ತಿಳಿಸಿದವು. ಎಕೆ 47, ಬ್ರಹ್ಮೋಸ್ ಕ್ಷಿಪಣಿಗಳು ಕೂಡಾ ಸಂಗ್ರಹಾಗಾರದಲ್ಲಿ ಇದ್ದವು. 10 ಅಗ್ನಿಶಾಮಕ ವಾಹನಗಳು ತೀವ್ರವಾಗಿ ಶ್ರಮಿಸಿ ಅಗ್ನಿಯನ್ನು ಹತೋಟಿಗೆ ತಂದವು. ಅಗ್ನಿ ದುರಂತದಲ್ಲಿ ಆಗಿರುವ ಪ್ರಾಣ ಹಾನಿಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತ ಪಡಿಸಿದರು. ಘಟನೆಯ ಹಿನ್ನೆಲೆಯಲ್ಲಿ ಆಸುಪಾಸಿನ ಹಳ್ಳಿಗಳ ಸಹಸ್ರಾರು ಜನರನ್ನು ಸುರಕ್ಷತೆ ದೃಷ್ಟಿಯಿಂದ ಬೇರೆ
ಸ್ಥಳಕ್ಕೆ ವಾನಿಸಲಾಯಿತು..ನಸುಕಿನಲ್ಲಿ ಉಂಟಾದ ಸ್ಫೋಟ ಕ್ಷಣಮಾತ್ರದಲ್ಲಿ ಎಲ್ಲೆಡೆ ಆವರಿಸಿ ಈ ದುರಂತ ಸಂಭವಿಸಿತು.ದೆ. ಭಾರತದ ಅತಿದೊಡ್ಡ ಯುದ್ದ ಸಾಮಗ್ರಿ ಶೇಖರಣೆ ಡಿಪೊ ಇದಾಗಿತ್ತು. ಮಹಾರಾಷ್ಟ್ರದ ಪಲ್ಗಾಂವ್ ಕೇಂದ್ರೀಯ ಮದ್ದುಗುಂಡು ಸಂಗ್ರಹಾಗಾರದಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಆಗಿರುವ ಪ್ರಾಣಹಾನಿಯಿಂದ ನೋವಾಗಿದೆ. ಮೃತರ ಕುಟುಂಬಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ದುರ್ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವೆಎಂದು ಪ್ರಧಾನಿ ಟ್ವೀಟ್ ಮಾಡಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪರಿಕ್ಕರ್ ಸೇನಾಧಿಕಾರಿಗಳಿಂದ ಮಾಹಿತಿ ಪಡೆದರು ಮತ್ತು ದತ್ತ ಮೇಘೆ ಆಸ್ಪತ್ರೆಗೆ ತೆರಳಿ ಗಾಯಗೊಂಡಿರುವವರ ಆರೋಗ್ಯ ವಿಚಾರಿಸಿದರು.
2016: ನವದೆಹಲಿ: ಸರ್ಕಾರಿ ವೈದ್ಯರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ  ಏರಿಕೆ ಮಾಡುವ ಸಂಬಂಧ ಆರೋಗ್ಯ ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ಸೂಚಿಸಿದರು. ನಿವೃತ್ತಿ ವಯಸ್ಸು ಏರಿಕೆ ಮಾಡಿರುವ ಆದೇಶವು 31 ಮೇ, 2016ರಿಂದಲೇ ಜಾರಿಗೆ ಬರಲಿದೆ. ಇದರ ವ್ಯಾಪ್ತಿಗೆ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಿ ವೈದ್ಯರು ಒಳಪಡಲಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು. ಮೇ 26 ರಂದು ಉತ್ತರ ಪ್ರದೇಶದ ಸಹಾರನ್ಪುರದಲ್ಲಿ ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ವೈದ್ಯರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವುದಾಗಿ ಮೋದಿ ತಿಳಿಸಿದ್ದರು. ಅನುಭವಿ ವೈದ್ಯರನ್ನು ಹೆಚ್ಚು ದಿನಗಳವರೆಗೆ ಸೇವೆಯಲ್ಲಿ ಉಳಿಸಿಕೊಳ್ಳಲು ಮತ್ತು ಮೂಲಕ ವೈದ್ಯಕೀಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿತು. ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿರುವ ಬಹುಪಾಲು ಜನರಿಗೆ ಅನುಕೂಲವಾಗಲಿದೆ. ನಿವೃತ್ತಿ ವಯಸ್ಸು ಹೆಚ್ಚಿಸಿರುವುರಿಂದ ಹೆಚ್ಚುವರಿ ವೈದ್ಯರು ಲಭ್ಯರಾಗಲಿದ್ದಾರೆ ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದರು.

2016: ನವದೆಹಲಿ: 2015ರಲ್ಲಿ ಸಂಭವಿಸಿದ್ದ ದಾದ್ರಿ ಹಿಂಸಾಚಾರದ ಪ್ರಕರಣದ ಸಂದರ್ಭದಲ್ಲಿ ಮೊಹಮ್ಮದ್ ಇಕ್ಲಾಖ್ ಅವರ ಮನೆಯ ಫ್ರಿಡ್ಜ್ನಲ್ಲಿ ಸಿಕ್ಕಿದ್ದು, ಕುರಿ ಮಾಂಸವಲ್ಲ ಗೋಮಾಂಸ ಎಂದು ವಿಧಿವಿಜ್ಞಾನ ಪ್ರಯೋಗಾಲಯ ತನ್ನ ವರದಿಯಲ್ಲಿ ಖಚಿತಪಡಿಸಿತು. ಗೋಮಾಂಸ ಸಂಗ್ರಹಿಸಿದ್ದಾರೆ, ಗೋ ಹತ್ಯೆ ಮಾಡಿದ್ದಾರೆ ಎಂಬ ವದಂತಿಯ ಆಧಾರದ ಮೇಲೆ ದಾದ್ರಿಯ ಬಿಸಾದ ಗ್ರಾಮದ ಮೊಹಮ್ಮದ್ ಇಕ್ಲಾಖ್ (52) ಮತ್ತು ಅವರ ಮಗ ದನೀಷ್ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಘಟನೆಯ ನಂತರ ತೀವ್ರವಾಗಿ ಗಾಯಗೊಂಡಿದ್ದ ಇಕ್ಬಾಲ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಅವರ ಮಗನ ತಲೆಗೆ ಗಂಭೀರವಾದ ಪೆಟ್ಟಾಗಿತ್ತು. ಘಟನೆಯ ನಂತರ ದೇಶದ್ಯಂತ ಹಲವೆಡೆ ಪ್ರತಿಭಟನೆಗಳು ನಡೆದರೆ, ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಆರೋಪಿಸಿ ಹಲವು ಸಾಹಿತಿಗಳು, ಚಿತ್ರ ರಂಗದ ಗಣ್ಯರು, ವಿಜ್ಞಾನಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡುವ ಮೂಲಕ ಪ್ರತಿಭಟಿಸಿದ್ದರು. ಪೊಲೀಸರು ಮಥುರಾದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಇಕ್ಲಾಖ್ ಅವರ ಮನೆಯಲ್ಲಿ ದೊರೆತಿದ್ದ ಮಾಂಸದ ತುಂಡನ್ನು ಪರಿಶೀಲನೆಗಾಗಿ ಕಳುಹಿಸಿಕೊಟ್ಟಿದ್ದರು. ಇಕ್ಲಾಖ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ತನಿಖೆ ನಡೆಸುತ್ತಿದ್ದೇವೆ. ಹಾಗಾಗಿ ಹತ್ಯೆಗೆ ಕಾರಣವಾಗಿರುವ ಮಾಂಸ ಯಾವುದು ಎಂದು ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಾಂಸದ ತುಂಡನ್ನು ಕಳುಹಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು. ಉತ್ತರ ಪ್ರದೇಶ ಸರ್ಕಾರ ನೇಮಿಸಿದ್ದ ಸಮಿತಿಯು ಇಕ್ಲಾಖ್ ಅವರ ಮನೆಯಲ್ಲಿ ದೊರೆತಿದ್ದು, ಗೋಮಾಂಸವಲ್ಲ ಕುರಿಯ ಮಾಂಸ ಎಂದು ವರದಿ ನೀಡಿತ್ತು.

2016: ನವದೆಹಲಿ: ದೇಶದೊಳಗಿನ ಕಾಳಸಂತೆಕೋರರಿಗೆ ತಮ್ಮ ಕಾಳಧನವನ್ನು ಘೋಷಿಸಿಕೊಳ್ಳಲು 4 ತಿಂಗಳ ಅವಕಾಶ ನೀಡುವಸ್ವಯಂ ಘೋಷಣೆ ಯೋಜನೆಜೂನ್ 1ರಿಂದ ಆರಂಭವಾಗುವುದು. ಅವಧಿಯಲ್ಲಿ ಕಾಳಸಂತೆಕೋರರು ತಮ್ಮ ಕಪ್ಪುಹಣವನ್ನು ಘೋಷಿಸಿ ತೆರಿಗೆ ಹಾಗೂ ಶೇಕಡಾ 45ರಷ್ಟು ದಂಡ ಪಾವತಿಸುವ ಮೂಲಕ ಕಾಳಧನ ಚಿಂತೆಯಿಂದ ಮುಕ್ತರಾಗಬಹುದು. ಭ್ರಷ್ಟ ಮಾರ್ಗಗಳಿಂದ ಹಣ ಮಾಡಿದವರಿಗೆ ಮಾತ್ರ ಸ್ವಯಂ ಘೋಷಣೆಯ ಅನುಕೂಲ ಲಭಿಸುವುದಿಲ್ಲ. ಆದಾಯ ಘೋಷಣೆ ಯೋಜನೆಯ ಅಡಿಯಲ್ಲಿ ತಮ್ಮ ಅಘೋಷಿತ ಆಸ್ತಿಪಾಸ್ತಿಯನ್ನು ಘೋಷಿಸುವವರಿಗೆ ನವೆಂಬರ್ 30 ವರೆಗೆ ಅವಕಾಶ ನೀಡಲಾಗಿದ್ದು, ಅವಧಿಯಲ್ಲಿ ಅವರು ತಮ್ಮ ಆಸ್ತಿಯನ್ನುಘೋಷಿಸಿ ತೆರಿಗೆ ಜೊತೆಗೆ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇಕಡಾ 45ರಷ್ಟು ಮೇಲ್ ತೆರಿಗೆ (ಸರ್ಚಾರ್ಜ್) ಪಾವತಿ ಮಾಡಬಹುದು. ಅಘೋಷಿತ ಆಸ್ತಿ ಘೋಷಣೆ ಯೋಜನೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಮುಂಗಡಪತ್ರ ಭಾಷಣದಲ್ಲಿ ಪ್ರಕಟಿಸಿದ್ದು, ಬಗ್ಗೆ ವಿತ್ತ ಸಚಿವಾಲಯ ಅಧಿಕಾರಿಗಳು ಆನ್ಲೈನ್ ಟಾಕಥಾನ್ ಮೂಲಕ ಜಾಗೃತಿ ಮೂಡಿಸಲೂ ಯತ್ನಿಸಿದ್ದರು.

2016: ಕಾಬೂಲ್: ಅಫ್ಘಾನಿಸ್ತಾನದ ಕುಂಡುಝ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಮೂರು ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ 200 ಜನರನ್ನು ಅಪಹರಿಸಿ 17 ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೊಂದುಹಾಕಿದರು. ಘಟನೆಯಲ್ಲಿ 160 ಜನರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಕನಿಷ್ಠ 17 ಜನ ಹತರಾಗಿದ್ದಾರೆ ಹಾಗೂ ಇನ್ನೂ 18 ಜನರು ತಾಲಿಬಾನ್ ವಶದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದರು.

2016: ನವದೆಹಲಿ: ದೆಹಲಿಯ ನಿವೃತ್ತ ಪೊಲೀಸ್ ಕಮೀಷನರ್ ಬಿ.ಎಸ್. ಬಸ್ಸಿ ಅವರನ್ನು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಸದಸ್ಯರಾಗಿ ಮಂಗಳವಾರ ನೇಮಕ ಮಾಡಲಾಯಿತು. ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುವ ಸಂಸ್ಥೆಯಾಗಿದೆ. ಫೆಬ್ರುವರಿ ತಿಂಗಳಲ್ಲಿ ಬಸ್ಸಿ ಅವರು ತಮ್ಮ ವಿವಾದಾತ್ಮಕ ದೆಹಲಿ ಪೊಲೀಸ್ ಕಮೀಷನರ್ ಹುದ್ದೆಯ ಅವಧಿ ಪೂರ್ಣಗೊಂಡ ಬಳಿಕ ಸೇವೆಯಿಂದ ನಿವೃತ್ತರಾಗಿದ್ದರು. ರಾಷ್ಟ್ರದ ಅತ್ಯುನ್ನತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಕೇಂದ್ರೀಯ ಮಾಹಿತಿ ಆಯೋಗದದಲ್ಲಿ ಹಿರಿಯ ಪಾತ್ರ ವಹಿಸಲು ಬಸ್ಸಿ ಆಸಕ್ತರಾಗಿದ್ದರು. ಆದರೆ ಕಾಂಗ್ರೆಸ್ಸಿನ ತೀವ್ರ ವಿರೋಧದ ಕಾರಣ ಅವರ ಹೆಸರನ್ನು ಕೈಬಿಡಲಾಗಿತ್ತು. ಮಾಹಿತಿ ಆಯುಕ್ತರನ್ನು ನೇಮಿಸುವ ಸಮಿತಿಗೆ ಪ್ರಧಾನಿ ಮುಖ್ಯಸ್ಥರಾಗಿದ್ದರೆ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಸದಸ್ಯರಾಗಿದ್ದರು. ದೆಹಲಿ ಪೊಲೀಸ್ ಕಮೀಷನರ್ ಆಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆಗೆ ಬಸ್ಸಿ ಅವರು ಬಹುತೇಕ ನಿರಂತವಾಗಿ ಘರ್ಷಿಸಿದ್ದರು. ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ಬಸ್ಸಿ ಅವರನ್ನುಬಿಜೆಪಿ ಏಜೆಂಟ್ಎಂದು ಟೀಕಿಸಿದ್ದರು.

2016: ವಾಷಿಂಗ್ಟನ್: ನಾಸಾದ ಸೋಲಾರ್ ಡೈನಮಿಕ್ ವೀಕ್ಷಣಾಲಯವು ಸೂರ್ಯನ ಹೊರಭಾಗದ ಮೈಮೇಲೆ ಬೃಹತ್ ಪರಿವೇಷಕ ರಂಧ್ರ ಇರುವುದನ್ನು ಪತ್ತೆ ಮಾಡಿರುವುದಾಗಿ ಪ್ರಕಟಿಸಲಾಯಿತು. ಪರಿವೇಷಕ ರಂಧ್ರಗಳು ಸೂರ್ಯನ ಕಾಂತೀಯ ಕ್ಷೇತ್ರದ ಹೊರ ಮೇಲ್ಮೈ ಮೇಲೆ ಬಾಹ್ಯಾಕಾಶದಲ್ಲಿ ಗೋಚರಿಸಿದ್ದು, ಸೌರ ಮಾರುತಗಳ ವೇಗ ಹೆಚ್ಚಿಸುವ ಕೆಲಸ ಮಾಡುತ್ತವೆ. ವಿಜ್ಞಾನಿಗಳ ಅಧ್ಯಯನದ ಪ್ರಕಾರ ಸೌರ ಮಾರುತಗಳು ಭೂಮಿಯ ಆಯಸ್ಕಾಂತೀಯ ಬಲದೊಂದಿಗೆ ವರ್ತಿಸಿ ಭೂಕಾಂತೀಯ ಚಂಡಮಾರುತ ಉಂಟು ಮಾಡುತ್ತವೆ. ಇವುಗಳನ್ನು ಉಪಗ್ರಹದ ಸಹಾಯದಿಂದ ಗುರುತಿಸಬಹುದು. ಸೂರ್ಯನಲ್ಲಿರುವ ಪರಿವೇಷಕ ರಂಧ್ರಗಳು ಕಡಿಮೆ ಸಾಂದ್ರತೆ ಹೊಂದಿದ್ದು, ಪರಿವೇಷಕಗಳಲ್ಲಿ ಕಡಿಮೆ ಪ್ರಮಾಣದ ಉಷ್ಣತೆ ಹೊಂದಿವೆ ಮತ್ತು ತಮ್ಮ ಪರಿಸರಕ್ಕಿಂತ ಗಾಢವಾದ ಕಪ್ಪು ಬಣ್ಣ ಹೊಂದಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇವುಗಳ ಸಹಾಯದಿಂದ ಬಾಹ್ಯಾಕಾಶದ ಹವಾಮಾನದ ಬಗ್ಗೆ ತಿಳಿದುಕೊಳ್ಳಬಹುದು. ಕಾಂತೀಯ ಸಂಪರ್ಕಕ್ಕೆ ಸಿಲುಕಿ ಪರಿವೇಷಕ ರಂಧ್ರಗಳು ಉದ್ಭವಿಸಿವೆಯೆ ಅಥವಾ ಸೂರ್ಯನಲ್ಲಾಗುವ ಆಂತರಿಕ ಪ್ರಕ್ರಿಯೆಯಿಂದ ರಚನೆ ಆಗಿವೆಯೆ ಎಂಬುದರ ಅಧ್ಯಯನ ನಡೆದಿದೆ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದರು.
 2016: ಮುಂಬೈ: ಬಾಲಿವುಡ್ ಹಿರಿಯ ಸಿನಿಮಾ ನಿರ್ಮಾಪಕ, ಹೆಸರಾಂತ ಮಾರುಕಟ್ಟೆ ವಿಶ್ಲೇಷಕರೂ ಆದ ವಿಕಾಸ್ ಮೋಹನ್ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಪದೇ ಪದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಅವರು, ಹಿಂದಿನ ದಿನ ಸಂಜೆ ಹೃದಯಾಘಾತಕ್ಕೆ ಒಳಗಾಗಿ ಇಲ್ಲಿನ ಕ್ರಿಟಿಕ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರುಮಾಧುರಿ ದೀಕ್ಷಿತ್ ಮತ್ತು ಅಕ್ಷಯ್ ಖನ್ನಾ ಅವರ ಜನಪ್ರಿಯ ಚಿತ್ರ ಆರ್ಜೂ ಸೇರಿದಂತೆ ಹಲವು ಸಿನಿಮಾಗಳನ್ನು ಅವರು ಬಾಲಿವುಡ್ಡಿಗೆ ನೀಡಿದ್ದರು.
2016: ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೇವೆಗಳ ಮೇಲೆ ವಿಧಿಸಿರುವ ಶೇಕಡಾ 0.5
ಕೃಷಿ ಕಲ್ಯಾಣ ಸೆಸ್ ಜೂನ್ 1 ಬುಧವಾರದಿಂದ ಜಾರಿಗೆ ಬರಲಿದೆ. ಸೆಸ್ ಮೂಲಕ ಪ್ರಸ್ತುತ ವಿತ್ತ ವರ್ಷದ ಉಳಿದ 10 ತಿಂಗಳುಗಳಲ್ಲಿ 5000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಕೇಂದ್ರ ಉದ್ದೇಶಿಸಿದೆ. ಪ್ರಸ್ತುತ ವಿತ್ತ ವರ್ಷದಲ್ಲಿ ಒಟ್ಟು 2,16,000 ರೂಪಾಯಿ ಸೇವಾ ತೆರಿಗೆ ಸಂಗ್ರಹಿಸುವ ಗುರಿಯನ್ನು ಸರ್ಕಾರ ಇರಿಸಿಕೊಂಡಿದೆ. ಜೊತೆಗೆ ಶೇಕಡಾ 0.5 ಸ್ವಚ್ಛ ಭಾರತ ಸೆಸ್ ಮೂಲಕ 10,000 ಕೋಟಿ ರೂಪಾಯಿ ಹಾಗೂ ಶೇಕಡಾ 0.5 ಕೃಷಿ ಕಲ್ಯಾಣ ಸೆಸ್ ಮೂಲಕ 5000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಉದ್ದೇಶಿಸಿದೆ.
ಕೃಷಿ ಅಭಿವೃದ್ದಿ ಹಾಗೂ ರೈತರ ಕಲ್ಯಾಣ ಕಾರ್ಯಕ್ರಮಗಳಿಗೆ ನಿಧಿ ಒದಗಿಸುವ ಸಲುವಾಗಿ ಶೇಕಡಾ 5ರಷ್ಟು ಕೃಷಿ ಸೆಸ್ ವಿಧಿಸಲು ನಾನು ಪ್ರಸ್ತಾಪಿಸುತ್ತಿದ್ದೇನೆ. ಹಣವನ್ನು ಕೃಷಿ ಅಭಿವೃದ್ಧಿ ಹಾಗೂ ರೈತರ ಕಲ್ಯಾಣ ಕಾರ್ಯಕ್ರಮಗಳಿಗಾಗಿಯೇ ವಿನಿಯೋಗಿಸಲಾಗುವುದು. ಸೆಸ್ 2016 ಜೂನ್ 1ರಿಂದ ಜಾರಿಗೆ ಬರುವುದು ಎಂದು ಜೇಟ್ಲಿ ತಮ್ಮ ಪ್ರಸ್ತುತ ಸಾಲಿನ ಮುಂಗಡಪತ್ರ ಮಂಡಿಸುತ್ತಾ ಹೇಳಿದ್ದರು.
2016: ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ಜಿಟಿ) ಆರ್ಟ್ ಆಫ್ ಲಿವಿಂಗ್
(ಎಒಎಲ್) ಸಂಸ್ಥೆಗೆ 4.75 ಕೋಟಿ ರೂಪಾಯಿ ಬಾಕಿ ದಂಡದ ಹಣವನ್ನು ಪಾವತಿಸುವಂತೆ ಆಜ್ಞಾಪಿಸಿತು. ಮಾರ್ಚ್ ತಿಂಗಳಲ್ಲಿ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಯಮುನಾ ನದಿ ತಟದಲ್ಲಿ ನಡೆದ ಮೂರು ದಿನದ ಸಾಂಸ್ಕ್ರತಿಕ ಉತ್ಸವದಲ್ಲಿ ಪರಿಸರಕ್ಕೆ ಧಕ್ಕೆ ಉಂಟಾಗಿದೆ ಎಂಬ ಕಾರಣಕ್ಕಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಎನ್ಜಿಟಿ 4.75 ಕೋಟಿ ರೂ ಗಳ ದಂಡ ವಿಧಿಸಿತ್ತು. ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ಮಂಗಳವಾರ ಸಂಜೆ ವೇಳೆಗೆ ಬಾಕಿಯಿರುವ ದಂಡದ ಮೊತ್ತ ಪಾವತಿಸಲು ಆಜ್ಞಾಪಿಸಿತು. ಕುರಿತು ಪ್ರತಿಕ್ರಿಯಿಸಿದ ಶ್ರೀ ಶ್ರೀ ರವಿಶಂಕರ್ ಗುರೂಜಿ ಪರಿಸರ ಹಾನಿ ಆರೋಪವನ್ನು ತಳ್ಳಿ ಹಾಕಿದರು. ಬೇಕಾದರೆ ಜೈಲಿಗೆ ಹೋಗಲು ಸಿದ್ಧ್ದರುವುದಾಗಿ ಹೇಳಿದರು.. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿಯೂ ಅವರು ತಿಳಿಸಿದರು. ಈ ಮೊದಲು 120 ಕೋಟಿ ದಂಡ ವಿಧಿಸಿದ್ದ ಎನ್ಜಿಟಿ ನಂತರ ಸಾಂಸ್ಕೃತಿಕ ಉತ್ಸವ ಯಾವುದೇ ಲಾಭಕ್ಕಾಗಿ ಮಾಡುತ್ತಿಲ್ಲ ಎಂಬ ಅಂಶವನ್ನು ಪರಿಗಣಿಸಿ 5 ಕೋಟಿ ದಂಡ ಪಾವತಿಸಲು ಗಡುವು ನೀಡಿತು ನಿರ್ದೇಶಿಸಿತ್ತು.


2016: ಅಯೋಧ್ಯಾ: ವಿವಾದಾತ್ಮಕ ಅಯೋಧ್ಯಾ ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ವಿಷಯವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಹಿಂದೂ-ಮುಸ್ಲಿಂ ಮುಖಂಡರು ಮುಂದಾಗಿದ್ದು, ಮೇ 30ರ ಸೋಮವಾರ ಅಯೋಧ್ಯೆಯಲ್ಲಿ ಅಖಿಲ ಭಾರತ ಅಖಾರ ಪರಿಷದ್ ನೂತನ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಹಾಗೂ ಹಿರಿಯ ಮುಸ್ಲಿಮ್ ಮುಖಂಡ ಮತ್ತು ಬಾಬ್ರಿ ಮಸೀದಿ ವ್ಯಾಜ್ಯದಾರ ಹಾಶಿಮ್ ಅನ್ಸಾರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಗಿರಿಯವರು ತಮ್ಮೊಟ್ಟಿಗೆ ಕೆಲ ಸಾಧುಗಳನ್ನು ಮಾತುಕತೆಗೆ ಕರೆದೊಯ್ದಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ಅನ್ಸಾರಿ ಜತೆ ಚರ್ಚೆ ನಡೆಸಿದರು. ಉಭಯ ಸಮುದಾಯದವರಿಗೆ ಅನ್ಯಾಯವಾಗದಂತೆ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸುನ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದೇವೆ. ಸುಪ್ರಿಂ ಕೋರ್ಟ್ ಕೂಡಾ ಆದಷ್ಟು ಬೇಗ ಖಟ್ಲೆಯ ವಿಚಾರಣೆ ನಡೆಸಬೇಕು ಎಂದು ಗಿರಿ ಹೇಳಿ್ದರು. ಅನ್ಸಾರಿ ಕೂಡ ಶಾಂತಿ ಒಪ್ಪಂದಕ್ಕೆ ತಯಾರಿದ್ದು, ಎರಡೂ ಸಮುದಾಯದವರಿಗೆ ಒಳ್ಳೆಯದಾಗುವುದಾದರೆ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧ ಎಂದರು.

2016: ನವದೆಹಲಿ: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್ ಸುನಿಲ್ ಲಂಬಾ ಅವರು ಅಧಿಕಾರ ವಹಿಸಿಕೊಂಡರು. ಮೊದಲಿದ್ದ ಅಡ್ಮಿರಲ್ ಆರ್. ಕೆ. ಧೊವನ್ ಅವರು ಅಧಿಕಾರಾವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಲಂಬಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಪಶ್ಚಿಮ ನೌಕಾದಳದ ಫ್ಲ್ಯಾಗ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿರುವ ಲಂಬಾ 1978 ರಲ್ಲಿ ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನೇಮಕಗೊಂಡಿದ್ದರು. ನಂತರ ಹಡಗು ಸಂಚರಣೆ ಮತ್ತು ದಿಕ್ಸೂಚಿ ವಿಷಯದಲ್ಲಿ ಪರಿಣತಿ ಪಡೆದ ಲಂಬಾ ವಿದೇಶದಲ್ಲಿ ನೌಕೆಗೆ ಸಂಬಂಧಿಸಿದಂತೆ ಹೆಚ್ಚುವರಿ ಅಧ್ಯಯನ ಮಾಡಿ, ನೌಕಾದಳದ ವಿವಿಧ ವಿಭಾಗಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದರು.
2016: ನವದೆಹಲಿ: ಐಐಟಿ ಮುಂಬೈನ 75 ವಿದ್ಯಾರ್ಥಿಗಳು ಭಾರತದ ಅತಿ ವೇಗದ ಕಾರನ್ನು ತಯಾರಿಸಿರುವುದಾಗಿ ಪ್ರಕಟಿಸಿದರು. ಫಾರ್ಮುಲಾ-1 ಮಾದರಿಯ ಕಾರನ್ನು ಅಭಿವೃದ್ದಿಪಡಿಸಿರುವ ವಿದ್ಯಾರ್ಥಿಗಳು ಯುಕೆ ನಲ್ಲಿ ನಡೆಯಲಿರುವ ನೂತನ ಕಾರು ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಕಾರಿಗೆಒರ್ಕಾಎಂದು ಹೆಸರಿಟ್ಟಿರುವ ವಿದ್ಯಾರ್ಥಿಗಳು ಇದನ್ನು ತಯಾರಿಸಲು ಬರೊಬ್ಬರಿ 9 ತಿಂಗಳು ಅವಧಿ ತೆಗೆದುಕೊಂಡಿದ್ದಾರೆ. ಕಾಲೇಜಿನ ಪ್ರಾಂಗಣದಲ್ಲಿ ಕೆಲವು ದಿಗ್ಗಜ ಆಟೊಮೊಬೈಲ್ಸ್ ಕಂಪನಿಗಳ ಸಹಯೋಗದೊಂದಿಗೆ ಕಾರನ್ನು ಪ್ರದರ್ಶಿಸಲಾಯಿತು. ಗಂಟೆಗೆ 0-100 ಕಿ ಮೀ ವೇಗವನ್ನು ಕೇವಲ 3.47 ಸೆಕೆಂಡುಗಳಲ್ಲಿ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿರುವ ಒರ್ಕಾ ಪ್ರತಿಷ್ಠಿತ ಕಾರು ಕಂಪನಿಗಳಾದ ಮರ್ಸಿಡಿಸ್, ಟೆಲ್ಸಾ, ಆಡಿ ಮಾದರಿಯ ಕಾರುಗಳಿಗೆ ಸೆಡ್ಡು ಹೊಡೆದಿದೆ. ಇದಲ್ಲದೆ ಸಂಪೂರ್ಣ ಸ್ಟೀಲ್ ಚಾಸ್ಸಿಸ್ ಜತೆಗೆ ಕಾರ್ಬನ್ ಫೈಬರ್ ಮೈಕಟ್ಟು ನೀಡಲಾಗಿದ್ದು ಇದು ವಾಹನದ ಕ್ಷಮತೆ ಮತ್ತು ವೇಗಕ್ಕೆ ಪೂರಕವಾಗಿದೆ ಎಂದು 4 ನೇ ವರ್ಷದ ವಿದ್ಯಾರ್ಥಿ ಒರ್ಕಾದ ತಯಾರಕ ತಂಡದ ರಿಶಬ್ ಕಪಾಸಿಯ ಹೇಳಿದರು. ಯುಕೆ ಯಲ್ಲಿ ಪ್ರತಿವರ್ಷ  ನಡೆಯುವ ಕಾರು ವಿನ್ಯಾಸ ಸ್ಪರ್ಧೆಯಲ್ಲಿ ಜಗತ್ತಿನ ಎಲ್ಲ ಭಾಗಗಳಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ವಿನ್ಯಾಸಗಳೊಂದಿಗೆ ಭಾಗವಹಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ಐಐಟಿ ಮುಂಬೈ ತನ್ನ ಉತ್ಕ್ರಷ್ಟ ವಿನ್ಯಾಸಕ್ಕಾಗಿ ಪ್ರಶಸ್ತಿ ಗಳಿಸುತ್ತಾ ಬಂದಿತ್ತು.

2016: ಮುಂಬೈ: ಹಾಸ್ಯ ಸಂಸ್ಥೆ ಎಐಬಿ ಮುಖ್ಯಸ್ಥ ತನ್ಮಯ್ ಭಟ್ ಸಾಮಾಜಿಕ ಜಾಲತಾಣದಲ್ಲಿ
ಸಚಿನ್ ತೆಂಡೂಲ್ಕರ್ ಹಾಗೂ ಲತಾ ಮಂಗೇಶ್ಕರ್ ಅವರ ಬಗ್ಗೆ ರೂಪಿಸಿದ್ದ ವ್ಯಂಗ್ಯ ವೀಡಿಯೊ ತುಣುಕನ್ನು ಪೊಲೀಸರು ಬ್ಲಾಕ್ ಮಾಡಿದರು. ಶಿವಸೇನೆ, ಬಿಜೆಪಿ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ ವಿಡಿಯೋವನ್ನು ಬಲವಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ ಪೊಲೀಸರು ತನ್ಮಯ್ ವಿರುದ್ಧ ಎಫ್ಐಆರ್ ದಾಖಲಿಸಿ, ವಿಡಿಯೋ ತುಣುಕನ್ನು ಗೂಗಲ್, ಫೇಸ್ಬುಕ್ ಹಾಗೂ ಯೂ ಟ್ಯೂಬ್ನಲ್ಲಿ ತಡೆಹಿಡಿದರು. ಕುರಿತು ಪ್ರತಿಕ್ರಿಯಿಸಿರುವ ಸಹಾಯಕ ಪೊಲೀಸ್ ಕಮಿಷನರ್ ಯಶವಂತ ಪಾಠಕ್, ಎಐಬಿ ಸಂಸ್ಥೆಯ ವೆಬ್ ಐಪಿ ವಿಳಾಸ ಪತ್ತೆ ಹಚ್ಚಿ ನಿರ್ಬಂಧಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು. ತನ್ಮಯ್ ಭಟ್ ಫೇಸ್ ಸ್ವಾಪ್ ಎಂಬ ಮೊಬೈಲ್ ಆಪ್ ಬಳಕೆ ಮಾಡಿ ಸಚಿನ್ ಹಾಗೂ ಲತಾ ಮಂಗೇಶ್ಕರ್ ಅವರ ಮುಖವನ್ನು ವಿಕಾರ ರೂಪದಲ್ಲಿ ಚಿತ್ರಿಸಿ, ಸಚಿನ್ ಹಾಗೂ ಲತಾ ಅಂತರ್ಯುದ್ಧ ಎಂಬ ಶೀರ್ಷಿಕೆ ನೀಡಿದ್ದರು. ಅಷ್ಟೇ ಅಲ್ಲ ಇಬ್ಬರು ಮಹಾನ್ ಪ್ರತಿಭೆಗಳ ಕುರಿತು ಕೀಳು ಮಟ್ಟದ ಹಾಸ್ಯಗಳನ್ನು ಮಾಡಿ, ಸಚಿನ್ ಹಾಗೂ ವಿರಾಟ್ ಇವರಿಬ್ಬರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದ್ದರು. ಬಾಲಿವುಡ್ ನಟರಾದ ಅನುಪಮ್ ಖೇರ್, ರಿತೇಶ್ ದೇಶ್ವುುಖ್, ನಟಿ ಸೇಲಿನಾ ಜೇಟ್ಲಿ, ಹಾಸ್ಯ ಕಲಾವಿದೆ ನೀತಿ ಪಲ್ಟಾ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿ, ತನ್ಮಯ್ಗೆ ಬಿಸಿ ಮುಟ್ಟಿಸಿದ್ದರು.

2016: ನವದೆಹಲಿ: ಜಗತ್ತಿನ 10 ಶ್ರೀಮಂತ ರಾಷ್ಟ್ರಗಳಲ್ಲಿ ಭಾರತ 7ನೇ ಸ್ಥಾನ ಪಡೆದಿದೆ. ಭಾರತೀಯರ ಒಟ್ಟು ಸಂಪತ್ತು 5,200 ಶತಕೋಟಿ ಡಾಲರ್. ಆದರೆ ಭಾರತದ ಜನಸಂಖ್ಯೆ ಅಧಿಕವಾಗಿದ್ದು, ಪ್ರತಿ ವ್ಯಕ್ತಿಯ ಸರಾಸರಿ ತಲಾ ಆದಾಯ ನೋಡಿದರೆ ಭಾರತಿಯರ ಸ್ಥಿತಿ ಇನ್ನೂ ಬಡತನದಲ್ಲೇ ಇದೆ ಎಂಬ ಮಾಹಿತಿ ನೀಡುರುವ ನ್ಯೂ ವಲ್ಡ್ ವೆಲ್ತ್ ಸಂಸ್ಥೆ, ಸಮೀಕ್ಷಾ ವರದಿಯೊಂದನ್ನು ಬಿಡುಗಡೆ ಮಾಡಿತು. ಈ ವರದಿಯನ್ವಯ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಅಮೆರಿಕ ಅಂತೆ. ಅಲ್ಲಿನ ಒಟ್ಟು ಆಸ್ತಿ ಮೌಲ್ಯವು 48,700 ಶತಕೋಟಿ ಡಾಲರ್ ಎಂದು ವರದಿ ಹೇಳಿತು. ವರದಿ ಆಧರಿಸಿ ಹೇಳುವುದಾದರೆ ಭಾರತ ಬಡರಾಷ್ಟ್ರ. ಕಾರಣ ಏನೆಂದರೆ ದೇಶದ ಜನಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳವಾಗಿರುವುದು. ಹಾಗಾಗಿ ಸರಾಸರಿ ತಲಾದಾಯದಲ್ಲಿ ಹಿನ್ನೆಡೆಯಾಗಿದೆ ಎಂದು ವರದಿ ಹೇಳಿತು. 
 2009: 'ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದೇ ನಮ್ಮ ಗುರಿ. ಅದಕ್ಕಾಗಿ ಯಾರ ಮನೆ ಬಾಗಿಲಿಗೆ ಹೋಗಲೂ ಸಿದ್ಧ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಘೋಷಿಸಿದರು. ರಾಜ್ಯ ಬಿಜೆಪಿ ಸರ್ಕಾರದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ 'ವಿಕಾಸ ಸಂಕಲ್ಪ ಉತ್ಸವ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 'ಬೆಳಿಗ್ಗೆ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ವೀರಪ್ಪ ಮೊಯಿಲಿ ಅವರ ಮನೆಗೆ ಭೇಟಿ ನೀಡಿ ಅವರನ್ನು ಅಭಿನಂದಿಸಿದೆ. ಲೋಕಸಭೆಯಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು, ಪ್ರಧಾನಿಯವರ ಗಮನ ಸೆಳೆದು ಪರಿಹಾರ ದೊರಕಿಸಿಕೊಡಬೇಕು, ಮತ್ತೊಮ್ಮೆ ರಾಜ್ಯಕ್ಕೆ ಅನ್ಯಾಯ ಆಗದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದೆ' ಎಂದು ಅವರು ಹೇಳಿದರು.

2009: ಮಾಜಿ ಉಪಪ್ರಧಾನಿ ದಿವಂಗತ ಜಗಜೀವನ್ ರಾಮ್ ಅವರ ಪುತ್ರಿ, ಬಿಹಾರದ ದಲಿತ ನಾಯಕಿ ಮೀರಾ ಕುಮಾರ್ (64) ಅವರನ್ನು ಕಾಂಗ್ರೆಸ್ ಪಕ್ಷವು ಲೋಕಸಭಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿತು. ಆಂಧ್ರಪ್ರದೇಶದ ಹಿರಿಯ ನಾಯಕ ಕಿಶೋರ್ ಚಂದ್ರ ದೇವ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂಬ ವದಂತಿ ಕಳೆದ ಹದಿನೈದು ದಿನಗಳಿಂದ ಸುಳಿದಾಡುತ್ತಿತ್ತು. ಈದಿನ ಮಧ್ಯಾಹ್ನ ಮೀರಾ ಕುಮಾರ್, ಸೋನಿಯಾ ನಿವಾಸಕ್ಕೆ ಭೇಟಿ ನೀಡುವುದರೊಂದಿಗೆ ಸ್ಪೀಕರ್ ಆಯ್ಕೆ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆಬಿದ್ದಿತು.

2009: ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ಜನಾಂಗೀಯ ಹಲ್ಲೆಗಳಿಂದ ಭಯಭೀತರಾದ ಸಾವಿರಾರು ಭಾರತೀಯರು ಮೆಲ್ಬರ್ನ್‌ನಲ್ಲಿ ಶಾಂತಿ ಮೆರವಣಿಗೆ ನಡೆಸಿ ತಮಗೆ ನ್ಯಾಯ ನೀಡುವಂತೆ ಆಗ್ರಹಿಸಿದರು. ಆಸ್ಟ್ರೇಲಿಯಾದ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟ (ಎಫ್‌ಐಎಸ್‌ಎ) ಹಾಗೂ ರಾಷ್ಟ್ರೀಯ ವಿದ್ಯಾರ್ಥಿಗಳ ಸಂಘಟನೆ ಜಂಟಿಯಾಗಿ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ರಾಯಲ್ ಮೆಲ್ಬರ್ನ್ ಆಸ್ಪತ್ರೆ ಹೊರಭಾಗದಿಂದ ಆರಂಭಿಸಲಾಯಿತು.

2009: ಮಲಯಾಳಂ ಹಾಗೂ ಇಂಗ್ಲಿಷಿನ ಹೆಸರಾಂತ ಕವಯಿತ್ರಿ ಮತ್ತು ಲೇಖಕಿ ಕಮಲಾ ದಾಸ್, ಈದಿನ ಬೆಳಗಿನ ಜಾವ ಪುಣೆಯಲ್ಲಿ ಕೊನೆಯುಸಿರೆಳೆದರು. ಮಧುಮೇಹದಿಂದ ಬಳಲುತ್ತಿದ್ದ ಅವರು, ನ್ಯೂಮೋನಿಯಾದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಾಹಿತ್ಯ ಕೃತಿಗಳಲ್ಲಿ ಸ್ತ್ರೀಸಂವೇದನೆಯನ್ನು ಅತ್ಯಂತ ನಿಸ್ಸಂಕೋಚ ಹಾಗೂ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಿಪಡಿಸಿದ ಕೆಲವೇ ಕೆಲವು ಭಾರತೀಯ ಲೇಖಕಿಯರಲ್ಲಿ ಮಾಧವಿ ಕುಟ್ಟಿ (ಕಮಲಾ ದಾಸ್) ಕೂಡ ಒಬ್ಬರು. ಸಂಪ್ರದಾಯದ ವಿರುದ್ಧ ಬಂಡೆದ್ದು ಯಾವುದೇ ಅಳುಕಿಲ್ಲದೇ ಬರೆದದ್ದಕ್ಕಾಗಿ ಇವರು ಒಂದು ವರ್ಗದ ಓದುಗರ ಕೆಂಗಣ್ಣಿಗೂ ಗುರಿಯಾಗಬೇಕಾಯಿತು. ತಮ್ಮ ಕೃತಿಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಕಮಲಾ ಒಳ್ಳೆಯ ಚಿತ್ರಕಲಾವಿದೆಯೂ ಹೌದು. ದಶಕಗಳ ಹಿಂದೆ, ಅಂದರೆ 1999 ರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಅವರು ತಮ್ಮ ಹೆಸರನ್ನು 'ಕಮಲಾ ಸುರಯ್ಯ' ಎಂದು ಬದಲಾಯಿಸಿಕೊಂಡಿದ್ದರು. ಇದು ಸಾಮಾಜಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ಭಾರಿ ಕೋಲಾಹಲ ಉಂಟು ಮಾಡಿತ್ತು. ಕಮಲಾಗೆ ರಾಜಕೀಯದಲ್ಲಿಯೂ ಆಸಕ್ತಿ ಇತ್ತು. ಅನಾಥ ತಾಯಂದಿರಿಗೆ ಆಶ್ರಯ ನೀಡುವ ಹಾಗೂ ಜಾತ್ಯತೀತ ಮೌಲ್ಯ ಎತ್ತಿಹಿಡಿಯುವ ಉದ್ದೇಶದಿಂದ 'ಲೋಕ್ ಸೇವಾ ಪಾರ್ಟಿ' ಹುಟ್ಟುಹಾಕಿದ್ದರು. 1984 ರಲ್ಲಿ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. 1934 ರ ಮಾರ್ಚ್ 31 ರಂದು ವಿ.ಎಂ.ನಾಯರ್ ಹಾಗೂ ಬಾಲಮಣಿ ಅಮ್ಮ ದಂಪತಿಗೆ ಜನಿಸಿದ ಕಮಲಾ, ತಮ್ಮ ಬಾಲ್ಯದ ದಿನಗಳನ್ನು ತಂದೆ ಕೆಲಸ ಮಾಡುತ್ತಿದ್ದ ಕೋಲ್ಕತದಲ್ಲಿಯೇ ಕಳೆದರು. ಕವಯಿತ್ರಿ ಅಮ್ಮ, ಚಿಕ್ಕಪ್ಪ, ಖ್ಯಾತ ಲೇಖಕ ನಲಪತ್ ನಾರಾಯಣ ಮೆನನ್ ಅವರಿಂದ ಪ್ರಭಾವಿತರಾಗಿದ್ದ ದಾಸ್, ತಮ್ಮ 17 ನೇ ವಯಸ್ಸಿನಲ್ಲಿ 'ಮಾಧವಿಕುಟ್ಟಿ' ಎಂಬ ಕಾವ್ಯನಾಮದಲ್ಲಿ ಬರವಣಿಗೆ ಶುರುಮಾಡಿದರು. ತಮಗಿಂತಲೂ 15 ವರ್ಷ ದೊಡ್ಡವರಾದ ಮಾಧವ್ ದಾಸ್ ಅವರನ್ನು ಮದುವೆಯಾದ ಕಮಲಾಗೆ 3 ಮಕ್ಕಳು. ಹಿರಿಯ ಪುತ್ರ ಎಂ.ಡಿ.ನಲಪತ್ ಇಂಗ್ಲಿಷ್ ದಿನಪತ್ರಿಕೆಯೊಂದರ ರಾಜಕೀಯ ವಿಭಾಗದ ಸಂಪಾದಕರು. ಇನ್ನೊಬ್ಬ ಮಗ ಚಿನ್ನನ್‌ದಾಸ್ ಕೂಡ ಅದೇ ಪತ್ರಿಕೆಯ ಆಡಳಿತ ಮಂಡಳಿಯ ನಿರ್ದೇಶಕರು. 42 ನೇ ವಯಸ್ಸಿನಲ್ಲಿ 'ಮೈ ಸ್ಟೋರಿ' ಎಂಬ ಆತ್ಮಕಥೆಯೊಂದಿಗೆ ಅವರ ಚೊಚ್ಚಲ ಕೃತಿ ಹೊರಬಂದಿತು. 2007 ರಲ್ಲಿ ಕಮಲಾ ಕೇರಳದಿಂದ ಪುಣೆಗೆ ತೆರಳಿ ಅಲ್ಲಿಯೇ ನೆಲೆ ನಿಂತರು. 'ದಿ ಸೈರನ್ಸ್' ( ಏಷ್ಯಾ ಕವನ ಸ್ಪರ್ಧೆಯಲ್ಲಿ ಬಹುಮಾನ), 'ಸಮ್ಮರ್ ಇನ್ ಕಲ್ಕತ್ತಾ' (ಕೆಂಟ್ ಪ್ರಶಸ್ತಿ), 'ದಿ ಡಿಸೆಂಡೆಂಟ್ಸ್', 'ದಿ ಓಲ್ಡ್ ಪೆಹ್ಲೌಸ್', 'ಅದರ್ ಪೊಯಮ್ಸ್', 'ಅಲ್ಫಾಬೆಟ್ ಆಫ್ ಲಸ್ಟ್' (ಕಾದಂಬರಿ). 'ದಿ ಅಣ್ಣಾಮಲೈ ಪೊಯಮ್ಸ್', 'ಪದ್ಮಾವತಿ ದಿ ಹರ್ಲೊಟ್ ಆಂಡ್ ಅದರ್ ಸ್ಟೋರೀಸ್ (ಸಣ್ಣ ಕಥೆಗಳು), 'ಓನ್ಲಿ ದ ಸೋಲ್ ನೋಸ್ ಹೌ ಟು ಸಿಂಗ್' ಮತ್ತು 'ಯಾ ಅಲ್ಲಾ' (ಕವನ) ಕಮಲಾಗೆ ಖ್ಯಾತಿ ತಂದುಕೊಟ್ಟ ಕೃತಿಗಳು. ಮಲಯಾಳಂನಲ್ಲಿಯೂ ಇವರು ಸಾಕಷ್ಟು ಕೃತಿಗಳನ್ನು ರಚಿಸಿದ್ದರು. 'ಪಕ್ಷಿಯುಡೆ ಮನಂ' , 'ನಾರಿಚೀರುಕಳ್ ಪರಕ್ಕಂಬೊಲ್', ಥಾನುಪ್ಪು' ( ಸಾಹಿತ್ಯ ಅಕಾಡೆಮಿ ಪ್ರಶಸ್ತಿ), 'ಮಾಧವಿಕುಟ್ಟಿಯುಡೆ ಉನ್ಮಕ್ಕಧಕ್ಕಳ್'-ಇವು ಮಾಧವಿ ಕುಟ್ಟಿ (ಕಮಲಾ ದಾಸ್) ಅವರ ಪ್ರಮುಖ ಸಣ್ಣಕಥೆಗಳು. 'ನೀರ್‌ಮಾದಳಂ ಪೂತ ಕಾಲಂ' (ವಯಲಾರ್ ಪ್ರಶಸ್ತಿ), 'ಬಾಲ್ಯಕಾಲ ಸ್ಮರಣಂಗಳ್'ನಂಥ ನೆನಪಿನಲ್ಲಿ ಉಳಿಯುವ ಕಾದಂಬರಿಗಳನ್ನೂ ಅವರು ಬರೆದಿದ್ದರು. ಇವರ ಕಥೆ ಹಾಗೂ ಕಾದಂಬರಿಗಳು ಬೇರೆ ಭಾಷೆಗಳಿಗೂ ಅನುವಾದಗೊಂಡಿವೆ. 'ನೀರ್‌ಮಾದಳ ಪೂತಂ ಕಾಲಂ' ಕಾದಂಬರಿಯನ್ನು ಕನ್ನಡಕ್ಕೆ ಪಾರ್ವತಿ ಐತಾಳ್ ಅನುವಾದಿಸಿದ್ದರು. ಇದು 'ಸುಧಾ' ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟಗೊಂಡಿತ್ತು.

2009: ಜಮ್ಮು- ಕಾಶ್ಮೀರದ ಕುಪ್ವಾರದಲ್ಲಿ ಈದಿನ ಬೆಳಿಗ್ಗೆ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಬೆಂಗಳೂರಿನ ಯೋಧ ಗುರುರಾಜ್ (27) ವೀರ ಮರಣವನ್ನಪ್ಪಿದರು. ಚಾಮರಾಜಪೇಟೆಯ ಮೊದಲನೇ ಮುಖ್ಯ ರಸ್ತೆಯಲ್ಲಿ ಗುರುರಾಜ್ ಅವರ ಮನೆ. ಮೂರು ವರ್ಷದ ಹಿಂದೆ ಉಷಾ ಅವರನ್ನು ಗುರುರಾಜ್ ವಿವಾಹವಾಗಿದ್ದರು.

2009: ನಾಗಪುರ ಮೂಲದ ಏರ್‌ಚೀಫ್ ಮಾರ್ಷಲ್ ಪ್ರದೀಪ್ ವಸಂತ್ ನಾಯಕ್ ಅವರು ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ನವದೆಹಲಿಯಲ್ಲಿ ಅಧಿಕಾರ ವಹಿಸಿಕೊಂಡರು. ಎರಡು ವರ್ಷಗಳಿಂದ ಸಮರದ ನೇರ ಅನುಭವವಿಲ್ಲದವರ ನೇತೃತ್ವದಲ್ಲಿದ್ದ ವಾಯುಪಡೆ, ಇದರಿಂದಾಗಿ ರಣರಂಗದ ಅನುಭವ ಇರುವ ವ್ಯಕ್ತಿಯ ಸುಪರ್ದಿಗೆ ಬಂದಿತು.

2009: ಬ್ರಿಟನ್‌ನಲ್ಲಿ ಎದ್ದು ಕಾಣುವ ಮೈಲಿಗಲ್ಲುಗಳಲ್ಲಿ ಒಂದಾದ ಲಂಡನ್ನಿನ ಚತುರ್ಮುಖ ಸಂಗೀತ ಗಡಿಯಾರ ಗೋಪುರ 'ಬಿಗ್ ಬೆನ್'ಗೆ ಈದಿನ 150 ವರ್ಷಗಳು ಪೂರ್ಣಗೊಂಡವು. ಎರಡನೇ ವಿಶ್ವಸಮರದ ವೇಳೆ ಲಂಡನ್ನಿನ ವೆಸ್ಟ್‌ಮಿನ್‌ಸ್ಟರ್ ಪ್ಯಾಲೇಸ್ ಹಾಗೂ ಬಿಗ್ ಬೆನ್ ಗಡಿಯಾರ ಗೋಪುರದ ಮೇಲೆ ಭಾರಿ ಪ್ರಮಾಣದ ಬಾಂಬ್ ಸ್ಫೋಟ ನಡೆದಿತ್ತು. ವೈಮಾನಿಕ ದಾಳಿಗೆ ಜಖಂಗೊಂಡರೂ ಗಡಿಯಾರ ನಿರಂತರವಾಗಿ ಕೆಲಸ ಮಾಡುತ್ತಲೇ ಇದೆ. 1834ರಲ್ಲಿ ಬ್ರಿಟನ್ ಸಂಸತ್‌ನಲ್ಲಿ ನಡೆದ ಭಾರಿ ಅಗ್ನಿ ದುರಂತದ ಬಳಿಕ ಈ ಗಡಿಯಾರ ಗೋಪುರ ಅಸ್ತಿತ್ವಕ್ಕೆ ಬಂತು. 1859 ರ ಮೇ 31 ರಂದು ಇದು ಸಮಯ ತೋರಿಸಲು ಆರಂಭಿಸಿತು. 19 ನೇ ಶತಮಾನದ ತಂತ್ರಜ್ಞಾನವನ್ನು ಹೊಂದಿರುವ ಈ ಗಡಿಯಾರ ಇಂದಿಗೂ ಕೂಡ ಸರಿಯಾದ ಸಮಯ ತೋರಿಸುವುದು ವಿಶೇಷ.

2009: ನೈಋತ್ಯ ಚೀನಾ ಪ್ರಾಂತ್ಯದ ಗಣಿಯೊಂದರಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 30 ಜನ ಮೃತರಾದರು. ದುರಂತದಲ್ಲಿ 59 ಜನ ಗಾಯಗೊಂಡವರು ಸೇರಿದಂತೆ ನೂರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಯಿತು. ಟೋಂಗ್ವಾ ಕಲ್ಲಿದ್ದಲು ಗಣಿಯಲ್ಲಿ ಹಿಂದಿನ ದಿನ 131 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾಗ ಅನಿಲ ಸ್ಫೋಟಿಸಿ ಈ ದುರಂತ ಸಂಭವಿಸಿತು.

2008: ಅಧಿವೇಶನದ ಆರಂಭದಲ್ಲೇ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಸಂಪ್ರದಾಯಕ್ಕೆ ಬದಲಾಗಿ ಸರ್ಕಾರವು ಬಹುಮತ ಸಾಬೀತು ಪಡಿಸಿದ ಬಳಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿಳಿಸಿದರು.

2008: ಪಾಕಿಸ್ಥಾನದ ಮಾನವ ಹಕ್ಕುಗಳ ಮಾಜಿ ಸಚಿವ ಅನ್ಸರ್ ಬರ್ನೆ ಅವರನ್ನು ಭಾರತಕ್ಕೆ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ದುಬೈಗೆ ಗಡೀಪಾರು ಮಾಡಿದ ಘಟನೆ ಈದಿನ ರಾತ್ರಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಿತು. ಕೇಂದ್ರ ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳಿಂದ ಬಂದ ಆದೇಶದ ಮೇರೆಗೆ ಬರ್ನೆ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ವಿವರಿಸಿದರು. ಆದರೆ ಬರ್ನೆ ಆಗಮನ ಕುರಿತು ವಿದೇಶಾಂಗ ಸಚಿವಾಲಯಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಬರ್ನೆ ಗಡೀಪಾರಿನ ಕುರಿತು ವರದಿ ನೀಡಬೇಕೆಂದು ಅದು ಗೃಹ ಸಚಿವಾಲಯಕ್ಕೆ ವಿದೇಶಾಂಗ ಸಚಿವಾಲಯ ಸೂಚಿಸಿತು. ಕಾಶ್ಮೀರ್ ಸಿಂಗ್ ಬಿಡುಗಡೆ ಹಾಗೂ ಸರಬ್ಜಿತ್ ಸಿಂಗ್ ಗಲ್ಲು ಶಿಕ್ಷೆ ಮುಂದೂಡುವಿಕೆಯಲ್ಲಿ ಬರ್ನೆ ಮಹತ್ವದ ಪಾತ್ರ ವಹಿಸಿದ್ದರು. ಕೇಂದ್ರ ಸರ್ಕಾರ ಈ ಘಟನೆಗೆ ವಿಷಾದ ವ್ಯಕ್ತಪಡಿಸಿ, ಬರ್ನೆ ಅವರು ಭಾರತಕ್ಕೆ ಯಾವಾಗ ಬೇಕಾದರೂ ಬರಬಹುದು ಎಂದು ಹೇಳಿತು.

2008: ಕೇರಳಕ್ಕೆ ಮುಂಗಾರು ಪ್ರವೇಶಿಸಿತು. ನಿರೀಕ್ಷಿತ ನೈರುತ್ಯ ಮಾರುತದ ಅಬ್ಬರದೊಂದಿಗೆ ಕೇರಳದ ಬಹುತೇಕ ಕಡೆ ಭಾರಿ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿತು.

2008: ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವಾಲಯಕ್ಕೆ ಮೂವರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತು. ಸಾರಿಗೆ ಇಲಾಖೆ ಆಯುಕ್ತ ಎಂ.ಲಕ್ಷ್ಮೀ ನಾರಾಯಣ ಅವರನ್ನು ಮುಖ್ಯಮಂತ್ರಿ ಗಳ ಕಾರ್ಯದರ್ಶಿಯಾಗಿ, ವಿಜಾಪುರ ಜಿಲ್ಲಾಧಿಕಾರಿ ಬಿ.ಜಿ.ನಂದಕುಮಾರ್ ಅವರನ್ನು ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ದಯಾಶಂಕರ ಅವರನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಲಾಯಿತು. ಕೆಎಎಸ್ ಅಧಿಕಾರಿ ಬಿ.ಎನ್. ಕೃಷ್ಣಯ್ಯ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಲಾಯಿತು.

2008: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ವಿದ್ಯುತ್ ಕಂಬ ನೆಲಕ್ಕುರುಳಿ ಜನ ಜೀವನ ಅಸ್ತವ್ಯಸ್ತವಾಯಿತು.

2008: ಭಾರತೀಯ ಮೂಲದ 8ನೇ ಗ್ರೇಡ್ ವಿದ್ಯಾರ್ಥಿ ಸಮೀರ್ ಮಿಶ್ರಾ ಅವರು `ಗೆರ್ಡಾನ್' ಪದವನ್ನು ಸರಿಯಾಗಿ ಉಚ್ಚಾರ ಮಾಡಿ, ಅದರ ಸ್ಪೆಲ್ಲಿಂಗ್ ಹೇಳುವ ಮೂಲಕ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯನ್ನು ಗೆದ್ದುಕೊಂಡರು. 8ರಿಂದ 15ರ ವಯಸ್ಸಿನ ಒಟ್ಟು 288 ಮಂದಿ ಸ್ಪರ್ಧಿಸಿದ್ದರು. ಅಂತಿಮ 12 ಮಂದಿಯಲ್ಲಿ 4 ಮಂದಿ ಭಾರತೀಯರೇ ಆಗಿದ್ದರು. 2ನೇ ಸ್ಥಾನವನ್ನು ಮತ್ತೊಬ್ಬ ಭಾರತೀಯ ಮೂಲದ ವಿದ್ಯಾರ್ಥಿ ಸಿದ್ಧಾರ್ಥ ಚಂದ್ ಪಡೆದರು. ಬಹುಮಾನ ರೂಪದಲ್ಲಿ ಮಿಶ್ರಾಗೆ 30 ಸಾವಿರ ಡಾಲರ್ ನಗದು ಲಭಿಸಿತು. 2005ರಲ್ಲಿ ಅನುರಾಗ್ ಕಾಶ್ಯಪ್ ಎಂಬ ವಿದ್ಯಾರ್ಥಿ `ಅಪೋಜಿತುರಾ' ಎಂಬ ಪದವನ್ನು ಸರಿಯಾಗಿ ಉಚ್ಚರಿಸಿ ಸ್ಪೆಲ್ಲಿಂಗ್ ಹೇಳಿ ಇದೇ ಪ್ರಶಸ್ತಿ ಗೆದ್ದಿದ್ದರು.

2008: ಇಥಿಯೋಪಿಯಾದ ಪೂರ್ವ ಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹಕ್ಕೆ ಸಿಕ್ಕಿ 25 ಮಂದಿ ಮೃತರಾದರು. ವೇಬ್ ಮತ್ತು ಶೆಬೆಲ್ ನದಿಗಳು ಉಕ್ಕಿ ಹರಿದುದರಿಂದ ಜಿಜಿಗಾದಲ್ಲಿ ಈ ಸಾವು ಸಂಭವಿಸಿತು.

2008: ಪೆರುವಿನಲ್ಲಿ 1980-2000 ಅವಧಿಯಲ್ಲಿ ನಡೆದ ಆಂತರಿಕ ಯುದ್ಧದ ಸಂದರ್ಭದಲ್ಲಿ 100 ಮಕ್ಕಳನ್ನು ಗುಂಡಿಟ್ಟು ಕೊಂದು ಸಾಮೂಹಿಕವಾಗಿ ಹೂತ ಸ್ಥಳವೊಂದು ಅಯಾಕುಚೋ ಪ್ರಾಂತ್ಯದ ಪುಟಿಸ್ ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಯಿತು. 1984ರಲ್ಲಿ ನೂರಾರು ಜನರನ್ನು ಕೊಂದ ಬಳಿಕ ಜನರು ಈ ಪ್ರದೇಶ ತೊರೆದಿದ್ದರು.

2008: ಮ್ಯಾನ್ಮಾರಿನ ಈಶಾನ್ಯ ಭಾಗದಲ್ಲಿ ಜನಾಂಗೀಯ ಶಾನ್ ಬಂಡುಕೋರರು ಗಿರಣಿಗೆ ಬೆಂಕಿ ಹಚ್ಚಿ ಎಂಟು ಜನರನ್ನು ಕೊಂದರು.

2008: ನೇಪಾಳದ ಸಿಂಹಾಸನವನ್ನು `ಶಾಂತಿಯುತ' ರೀತಿಯಲ್ಲಿ ತೊರೆಯಲು ದೊರೆ ಜ್ಞಾನೇಂದ್ರ ಸಮ್ಮತಿಸಿದ್ದರೂ, ತಮಗೆ, ತಮ್ಮ ಕುಟುಂಬಕ್ಕೆ ಸೂಕ್ತ ವಸತಿ ಮತ್ತು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂವಿಧಾನ ರಚನಾ ಸಭೆಯ ಐತಿಹಾಸಿಕ ನಿರ್ಧಾರವನ್ನು ಗೌರವಿಸಲು ಮತ್ತು ಶಾಂತಿಯುತವಾಗಿ ಸಿಂಹಾಸನ ತೊರೆಯಲು ದೊರೆ ಒಪ್ಪಿದ್ದಾರೆ ಎಂದು ನಾರಾಯಣಹಿತಿ ಅರಮನೆಯನ್ನು ನೋಡಿಕೊಳ್ಳುವ ಕಾರ್ಯದರ್ಶಿ ಪ್ರದೀಪ್ ಆರ್ಯಾಲ್ ತಿಳಿಸಿದರು. ಸರ್ಕಾರವು ದೊರೆಗೆ ಔಪಚಾರಿಕ ಪತ್ರ ಕಳುಹಿಸಿ, 15 ದಿನಗಳ ಒಳಗೆ ಅರಮನೆ ತೊರೆಯಲು ಕೇಳಿಕೊಂಡಿತ್ತು. ಮೇ 28ರಂದು ಸಂವಿಧಾನ ರಚನಾ ಸಭೆಯು 240 ವರ್ಷಗಳ ಕಾಲದ ರಾಜಮನೆತನವನ್ನು ಕೊನೆಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು. ಈ ಮಧ್ಯೆ, ದೊರೆ ಜ್ಞಾನೇಂದ್ರ ಅವರು ಅರಮನೆ ತೊರೆದಿದ್ದಾರೆ ಎಂಬ ವದಂತಿಗಳನ್ನು ಗೃಹ ಸಚಿವ ಕೃಷ್ಣ ಪ್ರಸಾದ್ ಸಿತೂಲಾ ಅವರು ಅಲ್ಲಗಳೆದರು.

2008: ಪೆರು ಗಡಿಯ ಸಮೀಪದ ಬ್ರೆಜಿಲಿನ ಅಮೆಜಾನ್ ಪ್ರದೇಶದಲ್ಲಿ ಇದುವರೆಗೆ ಯಾರ ಸಂಪರ್ಕಕ್ಕೂ ಬಾರದ `ಇಂಡಿಯನ್' ಬುಡಕಟ್ಟು ಜನಾಂಗವೊಂದು ಪತ್ತೆಯಾಗಿದೆ ಎಂದು `ಫುನೈ' ಹೆಸರಿನ ಸರ್ಕಾರಿ ಪ್ರತಿಷ್ಠಾನ ಹೇಳಿತು.

2008: ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ಟೆಸ್ಟ್ ಕ್ರಿಕೆಟ್ಟಿನಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ತಮ್ಮದಾಗಿಸಿದರು. ವೆಸ್ಟ್ ಇಂಡೀಸ್ ವಿರುದ್ಧ ಅಂಟಿಗುವಾದಲ್ಲಿ ಆರಂಭವಾದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನ 61 ರನ್ ಗಳಿಸಿದ ಸಂದರ್ಭ ಅವರು ಈ ಮೈಲಿಗಲ್ಲು ನೆಟ್ಟರು. 33 ರ ಹರೆಯದ ಪಾಂಟಿಂಗ್ ಈ ಸಾಧನೆ ಮಾಡುತ್ತಿದ್ದಂತೆಯೇ ತಮ್ಮ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಸಹ ಆಟಗಾರ ಕಾಟಿಚ್ ಪಾಂಟಿಂಗ್ ಅವರನ್ನು ಅಭಿನಂದಿಸಿದರು. ಟೆಸ್ಟ್ ಕ್ರಿಕೆಟ್ಟಿನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ ಏಳನೇ ಮತ್ತು ಆಸ್ಟ್ರೇಲಿಯಾದ ಮೂರನೇ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾಂಟಿಂಗ್ ಪಾತ್ರರಾದರು. ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಇತರ ಇಬ್ಬರೆಂದರೆ ಸ್ಟೀವ್ ವಾ ಮತ್ತು ಅಲನ್ ಬಾರ್ಡರ್. ಪಾಂಟಿಂಗ್ ತಮ್ಮ 118ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಬ್ರಯನ್ ಲಾರಾ (111 ಟೆಸ್ಟ್) ಬಳಿಕ ಅತಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಬ್ಯಾಟ್ಸ್ ಮನ್ ಎಂಬ ಗೌರವವನ್ನು ಪಾಂಟಿಂಗ್ ಪಡೆದರು. ಭಾರತದ ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರು `10 ಸಾವಿರ ರನ್ ಕ್ಲಬ್' ಸೇರಿದ ಇತರ ಬ್ಯಾಟ್ಸ್ ಮನ್ನರು.

2008: ಗಲಾಪಗೋಸ್ ದ್ವೀಪ ಸಮೂಹದಲ್ಲಿ ದೊಡ್ಡದಾದ ಇಸಬೆಲ್ಲಾ ದ್ವೀಪದ ಬೃಹತ್ ಜ್ವಾಲಾಮುಖಿ ಸೆರೋ ಅಝುಲ್ ಲಾವಾರಸ ಹೊರಸೂಸತೊಡಗಿತು. ಈ ಲಾವಾರಸ ಹೊರಸೂಸುವ ಈ ಚಿತ್ರವನ್ನು ಗಲಾಪಗೋಸ್ ರಾಷ್ಟ್ರೀಯ ಉದ್ಯಾನ ಅಧಿಕಾರಿಗಳು ಈದಿನ ಬಿಡುಗಡೆ ಮಾಡಿದರು.

2008: ಪುಣೆಯ ಖಡಕ್ ವಾಸ್ಲಾದಲ್ಲಿ ನಡೆದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ಡಿಎ)ಯ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡ್ದಿದ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ವೇದಿಕೆಯಲ್ಲೇ ಕಣ್ಣು ಕತ್ತಲೆ ಬಂದು ಕುಸಿದು ಬಿದ್ದು ಮೂರ್ಛೆ ಹೋದ ಪರಿಣಾಮ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

2008: ಆಋಷಿ ಕೊಲೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರ ಕಳುಹಿಸಿದ್ದ ಪತ್ರ ಕೇಂದ್ರ ಸರ್ಕಾರಕ್ಕೆ ತಲುಪಿತು. ಸಿಬ್ಬಂದಿ ಸಚಿವಾಲಯ ಈ ಪತ್ರವನ್ನು ಸಿಬಿಐಗೆ ರವಾನಿಸಿದ್ದು, ಜೋಡಿ ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸುವಂತೆ ತಿಳಿಸಿತ್ತು. ನೋಯ್ಡಾದಲ್ಲಿ ಡಿಪಿಎಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಆಋಷಿ ತನ್ನ ಮನೆಯಲ್ಲಿ 2008ರ ಮೇ 16ರಂದು ಕೊಲೆಯಾಗಿದ್ದಳು. ಈಕೆಯ ಜೊತೆಗೆ ಅವರ ಮನೆಯ ನೌಕರ ಹೇಮರಾಜನೂ ಕೊಲೆಯಾಗಿದ್ದ.

2008: ಗುರ್ಜರ್ ಚಳವಳಿಯನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ ಎಂಬ ಕಾರಣಕ್ಕೆ ರಾಜಸ್ಥಾನ ಸರ್ಕಾರವು ಪೊಲೀಸ್ ಮಹಾ ನಿರ್ದೇಶಕ ಎ. ಎಸ್. ಗಿಲ್ ಅವರನ್ನು ದೀರ್ಘಕಾಲದ ರಜೆಯ ಮೇಲೆ ತೆರಳುವಂತೆ ಆದೇಶಿಸಿತು. ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ಪೊಲೀಸ್ ಮಹಾ ನಿರ್ದೇಶಕ ಕೆ. ಎಸ್. ಬೈನ್ಸ್ ಅವರು ನೂತನ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡರು.

2008: ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕ ಹಾಗೂ ಭಾರತದ ಶ್ರೇಷ್ಠ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ.ರಾಜಕುಮಾರ ಶಿವಪ್ಪ ರಡ್ಡೇರ (35) ಈದಿನ ನಸುಕಿನ ಜಾವ ಹೃದಯಾಘಾತದಿಂದ ಮುಳವಾಡ ಗ್ರಾಮದಲ್ಲಿ ನಿಧನರಾದರು. ಬಸವನ ಬಾಗೇವಾಡಿ ತಾಲ್ಲೂಕು ಮುಳವಾಡ ಗ್ರಾಮದವರಾದ ಈ ಯುವ ವಿಜ್ಞಾನಿ ರಡ್ಡೇರ ಅವರಿಗೆ 2003ರಲ್ಲಿಭಾರತ ಸರಕಾರ `ಶ್ರೇಷ್ಠ ಯುವ ವಿಜ್ಞಾನಿ' ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

2008: ಭೂಮಿ ಬಿಸಿಯಾಗುವಿಕೆ, ಜಾಗತಿಕ ತಾಪಮಾನದಿಂದ ಧ್ರುವ ಪ್ರದೇಶಗಳಲ್ಲಿನ ಹಿಮ ಗರಿಷ್ಠ ಪ್ರಮಾಣದಲ್ಲಿ ಕರಗುತ್ತ ಸಮುದ್ರದ ನೀರಿನ ಮಟ್ಟದಲ್ಲಿ ಆಗುವ ಹೆಚ್ಚಳವು ಅನೇಕ ದೇಶಗಳಲ್ಲಿ ಭಾರಿ ಅನಾಹುತಕ್ಕೆ ಎಡೆ ಮಾಡಿಕೊಡಲಿದೆ ಎಂದು ವಿಶ್ವಬ್ಯಾಂಕ್ ವರದಿ ಮತ್ತೊಮ್ಮೆ ಎಚ್ಚರಿಸಿತು. ಒಟ್ಟು 84 ಅಭಿವೃದ್ಧಿಶೀಲ ದೇಶಗಳ ಕರಾವಳಿ ಪ್ರದೇಶದಲ್ಲಿನ ಇತ್ತೀಚಿನ ಬದಲಾವಣೆಗಳ ಬಗ್ಗೆ ಉಪಗ್ರಹಗಳಿಂದ ಪಡೆದ ನಕ್ಷೆ ಮತ್ತು ಇತರ ಮಾಹಿತಿ ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಸಮುದ್ರದ ನೀರಿನ ಮಟ್ಟ ಹೆಚ್ಚಳದಿಂದ ತೀರ ಪ್ರದೇಶದಲ್ಲಿ ವಾಸಿಸುವವರ ಜನಜೀವನ, ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ), ನಗರ ಪ್ರದೇಶ ಮತ್ತು ಕೃಷಿ ಯೋಗ್ಯ ಭೂಮಿ ಮೇಲೆ ಆಗುವ ಒಟ್ಟಾರೆ ಪರಿಣಾಮಗಳನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿದೆ. `ಪರಿಸರ ನಿರಾಶ್ರಿತರ' ಹೊಸ ಸಮಸ್ಯೆ ಉದ್ಭವವಾಗಲಿದೆ ಎಂದು ವರದಿ ಎಚ್ಚರಿಸಿತು. ಸಮುದ್ರದಲ್ಲಿ ಒಂದು ಮೀಟರಿನಷ್ಟು ನೀರು ಹೆಚ್ಚಿದರೆ (ಅಂದಾಜು ಶೇ 0.3ರಷ್ಟು) ಅದರಿಂದ 1,94,000 ಚದರ ಕಿ.ಮೀಗಳಷ್ಟು ಭೂಮಿಯ 5.5 ಕೋಟಿ ಜನರು (ಒಟ್ಟು ಜನಸಂಖ್ಯೆಯ ಶೇ 1.28ರಷ್ಟು) ಸಂಕಷ್ಟಕ್ಕೆ ಒಳಗಾಗುವರು. ಈ ದೇಶಗಳ ಜಿಡಿಪಿ ನಷ್ಟವು ಶೇ 1.3ರಷ್ಟಾಗುವುದು. ಪ್ರತಿಯೊಂದು ದೇಶಗಳ ನಷ್ಟದ ಅಂದಾಜನ್ನು ಬೇರೆ, ಬೇರೆ ಮಾನದಂಡಗಳ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ ಎಂದು ವರದಿ ತಿಳಿಸಿತು. ಪಶ್ಚಿಮ ಬಂಗಾಳದ ಸುಂದರಬನ ಮತ್ತು ಒರಿಸ್ಸಾದ ಸತಭಯ ಪ್ರದೇಶದಲ್ಲಿ ಸಮುದ್ರ ರಾಜನ ಆರ್ಭಟಕ್ಕೆ ಕಳೆದ ಒಂದೂವರೆ ದಶಕದಲ್ಲಿ ಸಾಕಷ್ಟು ಭೂಮಿ ಜಲಾವೃತವಾಗಿದೆ. ಎರಡೂವರೆ ಕಿ.ಮೀಗಳಷ್ಟು ದೂರ ನೀರು ಆಕ್ರಮಿಸಿಕೊಂಡಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಪ್ರದೇಶದಲ್ಲಿನ ಏಳು ಗ್ರಾಮಗಳ ಸಂಖ್ಯೆ ಈಗ ಒಂದಕ್ಕೆ ಇಳಿದಿದೆ. ಕೃಷಿ ಭೂಮಿಯಂತೂ ಇಲ್ಲವೇ ಇಲ್ಲ. ಇಂತಹ `ಪರಿಸರ ನಿರಾಶ್ರಿತರ' ಪರಿಸ್ಥಿತಿಯ ಗಂಭೀರತೆ ಸರ್ಕಾರದ ಅರಿವಿಗೆ ಬರಬೇಕು. ಇನ್ನಷ್ಟು ಭೂಮಿ ಸಮುದ್ರ ರಾಜನಿಗೆ ಆಪೋಶನಗೊಳ್ಳುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರದಿ ಹೇಳಿತು.

2008: ಆಲೋಚನೆಯಿಂದಲೇ ಯಂತ್ರಗಳನ್ನು ನಿಯಂತ್ರಿಸಲು ಸಾಧ್ಯ. ಮಾನವನಿಗೆ ಅಳವಡಿಸುವ ಯಾಂತ್ರಿಕ ಅಂಗಾಂಗಗಳನ್ನು ಬರೀ ಆಲೋಚನೆಯಿಂದಲೇ ಬೇಕಾದ ಹಾಗೆ ಬಳಸಲು ಸಾಧ್ಯ ಎನ್ನುವುದು ಕೋತಿಗಳ ಮೇಲಿನ ಪ್ರಯೋಗದಿಂದ ಸಾಬೀತಾಯಿತು. ಯಂತ್ರಗಳನ್ನು ನಿರ್ವಹಿಸುವ ಮೆದುಳಿನ ಆಲೋಚನಾ ಶಕ್ತಿಯ ಸಾಮರ್ಥ್ಯಕ್ಕೆ ಕೋತಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. ಬೆನ್ನು ಹುರಿ ಗಾಯ, ಪಾರ್ಶ್ವವಾಯು ಮತ್ತಿತರ ಕಾಯಿಲೆಗಳಿಗೆ ಗುರಿಯಾಗಿ ಕೈಕಾಲು ಸ್ವಾಧೀನ ಕಳೆದುಕೊಳ್ಳುವವರಿಗೆ ಈ ಪ್ರಯೋಗದಿಂದ ಹೆಚ್ಚು ಉಪಯೋಗವಾಗಲಿದೆ. ಎರಡು ಕೋತಿಗಳ ಮೆದುಳಿನಲ್ಲಿ ಅಳವಡಿಸಿದ, ಸಂವೇದನೆ ಗ್ರಹಿಸುವ ಪುಟ್ಟ ಗಾತ್ರದ ಸಾಧನಗಳ ನೆರವಿನಿಂದ ಕೋತಿಗಳು ಯಾಂತ್ರಿಕ ತೋಳನ್ನು ನಿರ್ವಹಿಸುವುದನ್ನು ಸಮರ್ಪಕವಾಗಿ ತೋರಿಸಿವೆ. ಕೋತಿಗಳಿಗೆ ಅಳವಡಿಸಿದ ಯಾಂತ್ರಿಕ ಕೈಯನ್ನು ಅದರ ಆಲೋಚನೆಯಿಂದಲೇ ಯಶಸ್ವಿಯಾಗಿ ನಿರ್ವಹಿಸಲಾಯಿತು. ಪದಾರ್ಥ ತಲುಪಿಸಲು, ಆಹಾರ ಹಿಡಿಯಲು, ಯಾಂತ್ರಿಕ ಕೈಚಾಚಲು, ಅಗತ್ಯ ಬಿದ್ದಾಗ ಆಹಾರ ತುಂಡಿನ ಗಾತ್ರಕ್ಕೆ ಅನುಗುಣವಾಗಿ ಕೈಬೆರಳುಗಳ ಗಾತ್ರ ಕುಗ್ಗಿಸುವ, ಹಿಗ್ಗಿಸುವುದನ್ನೂ ಕೋತಿಗಳು ನಿರಾಯಾಸವಾಗಿ (ಯಾಂತ್ರಿಕವಾಗಿ) ನಿರ್ವಹಿಸಿದ್ದನ್ನು `ನೇಚರ್' ಪತ್ರಿಕೆ ವರದಿ ಮಾಡಿತು. ಈ ಪ್ರಯೋಗದಲ್ಲಿ ಕೋತಿಗಳಿಗೆ ಜೋಡಿಸಿದ ಕೃತಕ ಕೈಯನ್ನು ಅವುಗಳ ಮೆದುಳು ತನ್ನದೇ ದೇಹದ ಒಂದು ಅಂಗ ಎಂಬಂತೆ ಗುರುತಿಸುವಲ್ಲಿ ಸಂವೇದನೆಯ ಸಾಧನ ನೆರವಾಗಿತ್ತು. ಹೀಗಾಗಿ ಆ ಕೃತಕ ತೋಳನ್ನು ಸಹಜ ಕೈ ಎಂಬಂತೆ ಈ ಕೋತಿಗಳು ಬಳಸಿದ್ದವು. ಅಪಘಾತ ಮತ್ತು ಗಂಭೀರ ಸ್ವರೂಪದ ಕಾಯಿಲೆಗಳಲ್ಲಿ ಕೈಕಾಲುಗಳ ಮೇಲೆ ಸ್ವಾಧೀನ ಕಳೆದುಕೊಂಡವರಲ್ಲಿ ಹೊಸ ಭರವಸೆ ಮೂಡಿಸುವಲ್ಲಿ ಈ ಪ್ರಯೋಗ ಯಶಸ್ವಿಯಾಯಿತು.

2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡ ಖಾಸಗಿ ಶಾಲೆಗಳ ಮಾನ್ಯತೆ ರದ್ದತಿಗೆ ತಾನು ಈ ಹಿಂದೆ ನೀಡಿದ ತಡೆಯಾಜ್ಞೆಯನ್ನು ಹೈಕೋರ್ಟ್ ಜೂನ್ 14ರವರೆಗೆ ವಿಸ್ತರಿಸಿತು.

2007: ಶಸ್ತ್ರಾಸ್ತ್ರ ಮದ್ದುಗುಂಡು, ಮದ್ದುಗುಂಡು ಸಾಗಣೆ, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವುದು ಮತ್ತು 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಸಂಚಿನಲ್ಲಿ ವಹಿಸಿದ ಪಾತ್ರಕ್ಕಾಗಿ ಏಳು ಮಂದಿಗೆ ವಿಶೇಷ ಟಾಡಾ ನ್ಯಾಯಾಲಯವು ಐದು ವರ್ಷಗಳ ಕಠಿಣ ಸಜೆಯಿಂದ ಜೀವಾವಧಿ ಸಜೆವರೆಗಿನ ಶಿಕ್ಷೆಗಳನ್ನು ವಿಧಿಸಿತು.

2007: ಅಗ್ಗದ ದರದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ತನ್ನ ಶೇಕಡಾ 26ರಷ್ಟು ಪಾಲನ್ನು ವಿಜಯ ಮಲ್ಯ ನೇತೃತ್ವದ ಯುಬಿ ಹೋಲ್ಡಿಂಗ್ಸ್ ಕಂಪೆನಿಗೆ ಮಾರಾಟ ಮಾಡಿರುವುದಾಗಿ ಘೋಷಿಸಿತು.

2007: ಜೈಬಾಸಾ ಬೊಕ್ಕಸದಿಂದ 1990ರ ದಶಕದಲ್ಲಿ 48 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದುಕೊಂಡದ್ದಕ್ಕಾಗಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರ ಇಬ್ಬರು ಸೋದರಳಿಯಂದಿರು ಸೇರಿದಂತೆ ಒಟ್ಟು 58 ಮಂದಿಗೆ ಎರಡೂವರೆ ವರ್ಷಗಳಿಂದ 6 ವರ್ಷಗಳವರೆಗಿನ ಸೆರೆವಾಸದ ಶಿಕ್ಷೆಯನ್ನು ಮೇವು ಹಗರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಲಯವು ವಿಧಿಸಿತು.

2007: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆ/ಸಾವಿಗೆ ಸಂಬಂಧಿಸಿದ ಕಡತವನ್ನು 30 ವರ್ಷಗಳ ಹಿಂದೆ ನಾಶ ಪಡಿಸಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳಿ ಕೇಂದ್ರೀಯ ಮಾಹಿತಿ ಆಯೋಗದ ಮುಂದೆ ಸಲ್ಲಿಸಲಾದ ಅರ್ಜಿಯನ್ನು ಪ್ರಧಾನ ಮಂತ್ರಿಗಳ ಕಚೇರಿ ಬಲವಾಗಿ ವಿರೋಧಿಸಿತು. ದೆಹಲಿ ಮೂಲಕ ಮಿಷನ್ ನೇತಾಜಿ ಸಂಸ್ಥೆ ಈ ಅರ್ಜಿ ಸಲ್ಲಿಸಿತ್ತು.

2006: ತತ್ ಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದನ್ನು ಅನುಸರಿಸಿ ನವದೆಹಲಿಯ ಎಲ್ಲ ಪ್ರಮುಖ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸ್ಥಾನೀಯ ವೈದ್ಯರು ಮುಷ್ಕರಕ್ಕೆ ಅಂತ್ಯ ಘೋಷಿಸಿದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ 20 ದಿನಗಳಿಂದ ವೈದ್ಯರು ಅಸಹಕಾರ ಚಳವಳಿ ನಡೆಸಿದ್ದರು.

2006: ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ 12ನೇ ಹಾರಾಟ ಪರೀಕ್ಷೆಯನ್ನು ರಾಜಸ್ಥಾನ ಮರುಭೂಮಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

2006: ಒರಿಸ್ಸಾದ ಕರಾವಳಿಯ ಆತಾಲ ಗ್ರಾಮದ ನಿವಾಸಿ ಬಸುದೇವ್ ಭೋಯಿ ಅವರ ಪುತ್ರಿ 30 ವರ್ಷದ ಬಿಂಬಾಲಿ ಭೋಯಿ ಎಂಬ ತರುಣಿ ಈ ದಿನ ನಾಗದೇವತೆಯನ್ನು ಶಾಸ್ತ್ರೋಕ್ತವಾಗಿ ಮದುವೆಯಾದಳು. ತನ್ನನ್ನು ವರಿಸಲು ಬಂದ ಯಾವುದೇ ವರ ಒಪ್ಪದೇ ಹೋದುದರಿಂದ ಬೇಸತ್ತ ಆಕೆ ಕೊನೆಗೆ ನಾಗದೇವತೆಯನ್ನು ಮದುವೆಯಾಗಲು ನಿರ್ಧರಿಸಿದಳು. ಕೆಲವು ದಿನಗಳ ಹಿಂದೆ 30ರ ಹರೆಯದ ಯುವಕನೊಬ್ಬ ಆಕೆಯ ತಾಯಿಯ ಬಳಿ ನಿಮ್ಮ ಮಗಳು 14 ವರ್ಷದಿಂದ ಪೂಜಿಸುತ್ತಾ ಬಂದ ನಾಗರ ಹಾವನ್ನು ಮದುವೆಯಾಗಲಿ ಎಂದು ಹೇಳಿದ್ದು ಹಾಗೂ ಇದಕ್ಕೂ ಮೊದಲು ಒಂದು ದಿನ ಮನೆಯ ಹಿಂಬದಿಯ ಹುತ್ತದಲ್ಲಿ ಹಾವು ಬಿಂಬಾಲಿಗೆ ದರ್ಶನ ನೀಡಿದ ಘಟನೆ ನಡೆದು, ಆ ಬಳಿಕ ಆಕೆ ಆ ಹಾವಿನೊಂದಿಗೆ ಪ್ರೀತಿ ಹೊಂದಿದ್ದಳು. ಕುಟುಂಬ ಸದಸ್ಯರು ಮೊದಲು ಈ ಮದುವೆಗೆ ಒಪ್ಪದಿದ್ದರೂ ನಂತರ ಗ್ರಾಮದ ಹಿರಿಯರ ಸಲಹೆ ಮೇರೆಗೆ ಆಕೆಗೂ ಕಂಚಿನಿಂದ ಮಾಡಿದ ಹಾವಿನ ಪ್ರತಿರೂಪಕ್ಕೂ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಲಾಯಿತು.

1996: ಹಿರಿಯ ಸಮಾಜವಾದಿ ಚಿಂತಕ ಜೆ.ಎಚ್. ಪಟೇಲ್ ಅವರು ಈದಿನ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

1988: ಈ ದಿನವನ್ನು `ತಂಬಾಕುರಹಿತ ದಿನ' ಎಂದು ಆಚರಿಸಬೇಕು ಎಂದು ವಿಶ್ವ ಸ್ವಾಸ್ಥ್ಯ ಸಂಸ್ಥೆ ಘೋಷಿಸಿತು.

1962: ನಾಝಿ ಕ್ರಿಮಿನಲ್ ಅಡಾಲ್ಫ್ ಇಚ್ಮನ್ ಗೆ ಇಸ್ರೇಲಿನಲ್ಲಿ ಗಲ್ಲು ವಿಧಿಸಲಾಯಿತು. ಇದು ಇಸ್ರೇಲಿನ ಪ್ರಪ್ರಥಮ ಗಲ್ಲು ಶಿಕ್ಷೆ.

1939: ಜೈನ ಸಾಹಿತ್ಯ, ಸಿದ್ಧಾಂತಗಳಿಗೆ ಮಹತ್ವದ ಕಾಣಿಕೆಗಳನ್ನು ನೀಡಿದ ಸಾಹಿತಿ ಡಾ. ಎಸ್.ಪಿ. ಪಾಟೀಲ ಅವರು ಪೀರಗೌಡ ಧರ್ಮ ಗೌಡ ಪಾಟೀಲ- ಪದ್ಮಾವತಿ ದಂಪತಿಯ ಪುತ್ರನಾಗಿ ಮಹಾರಾಷ್ಟ್ರದ ಸಾಂಗಲಿಯಲ್ಲಿ ಈದಿನ ಜನಿಸಿದರು.

1928: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ರಿಕೆಟಿಗ ಪಂಕಜ್ ಖಿರೋಡ್ ಜನನ.

1911: ಜಗತ್ತಿನ ಅತ್ಯಾಧುನಿಕ ನೌಕೆ `ಟೈಟಾನಿಕ್' ಬೆಲ್ ಫಾಸ್ಟ್ ನಿಂದ ತನ್ನ ಮೊದಲ ಪಯಣ ಆರಂಭಿಸಿತು.

1845; ರೂಕ್ಸ್ ಇವೆಲಿನ್ ಬೆಲ್ ಕ್ರಾಂಪ್ಟನ್ (1845-1940) ಜನ್ಮದಿನ. ಬ್ರಿಟಿಷ್ ಸಂಶೋಧಕನಾದ ಈತ ವಿದ್ಯುತ್ ದೀಪಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ.

1818: ವಿಲಿಯಂ ಕ್ಯಾರೀ ಮತ್ತು ಸೆರಾಂಪೋರಿನ ಜೊಶುವಾ ಮಾರ್ಶ್ ಮ್ಯಾನ್ ನೇತೃತ್ವದಲ್ಲಿ ಬಂಗಾಳಿಯಲ್ಲಿ ಪ್ರಪ್ರಥಮ ಪ್ರಾದೇಶಿಕ ಭಾಷಾ ಪತ್ರಿಕೆ `ಸಮಾಚಾರ್ ದರ್ಪಣ್' ಪ್ರಕಟಣೆ ಆರಂಭವಾಯಿತು.

1578: ರೋಮ್ನ ಸಮಾಧಿ ಗುಹೆಗಳು ಅನಿರೀಕ್ಷಿತವಾಗಿ ಪತ್ತೆಯಾದವು. ಉತ್ತರ ರೋಮ್ನ ಪ್ರವೇಶದ್ವಾರದಲ್ಲಿ ಕೆಲವು ಕಾರ್ಮಿಕರ ಭೂಮಿ ಅಗೆಯುತ್ತಿದ್ದಾಗ ಸಮಾಧಿಗುಹೆಯೊಂದರ ಸುರಂಗ ಕಾಣಿಸಿ, ಸಮಾಧಿ ಗುಹೆ ಬೆಳಕಿಗೆ ಬಂತು. ಹದಿನೈದು ವರ್ಷಗಳ ನಂತರ ನಂತರ 1593ರಲ್ಲಿ 18ರ ತರುಣ ಆಂಟಾನಿಯೋ ಬೋಸಿಯೋ ಈ ಗುಹಾ ಸಮಾಧಿಗಳ ಪತ್ತೆ ಕಾರ್ಯ ಆರಂಭಿಸಿದ. ತಮ್ಮ ಜೀವಮಾನಪೂರ್ತಿ ಇದೇ ಕಾರ್ಯ ಮಾಡಿದ ಈತ ಈ ಸಮಾಧಿ ಗುಹೆಗಳ ಮಧ್ಯೆ ಸಂಪರ್ಕ ಇದ್ದುದನ್ನು ಪತ್ತೆ ಹಚ್ಚಿದ. ಅವುಗಳಿಗೆ 30 ಹೆಚ್ಚುವರಿ ಪ್ರವೇಶದ್ವಾರಗಳು ಇದ್ದುದನ್ನೂ ಪತ್ತೆ ಮಾಡಿದ. ಈ ಸಮಾಧಿ ಗುಹೆಗಳು ಮೂರನೇ ಶತಮಾನದಷ್ಟು ಪ್ರಾಚೀನ ಕಾಲದವು. ಸ್ಮಶಾನಗಳಲ್ಲಿ ಶವ ಹೂಳದಂತೆ ಬಹಿಷ್ಕೃತರಾಗಿದ್ದ ಕ್ರೈಸ್ತರು ಈ ಗುಹೆಗಳಲ್ಲಿ ಶವಗಳನ್ನು ಹೂಳುತ್ತಿದ್ದರು.

No comments:

Post a Comment