2019: ಮಂಗಳೂರು: 2019
ಜುಲೈ 29ರ ಸೋಮವಾರ ಸಂಜೆಯಿಂದ ಕಣ್ಮರೆಯಾಗಿದ್ದ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ ಅವರ ಮೃತದೇಹ ನೇತ್ರಾವತಿ ನದಿ ನೀರಿನ ಹೊಯಿಗೆ ಬಜಾರ್ ಬಳಿ ಈದಿನ ಬೆಳಗ್ಗೆ ಪತ್ತೆಯಾಯಿತು.. ಇದರೊಂದಿಗೆ ಸಿದ್ದಾರ್ಥ ನಾಪತ್ತೆ ಪ್ರಕರಣದ ಗೊಂದಲಕ್ಕೆ ತೆರೆ ಬಿದ್ದಿತು.
ನೇತ್ರಾವತಿ ಸಮೀಪ ಜುಲೈ 29ರ ಸಂಜೆಯಿಂದ ಸಿದ್ದಾರ್ಥ ಅವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರನ್ನು ಅಪಹರಿಸಲಾಗಿತ್ತೇ ಅಥವಾ ಆತ್ಮಹತ್ಯೆಗೆ ಶರಣಾಗಿದ್ದರೇ ಎಂಬಿತ್ಯಾದಿ ಅನುಮಾನಗಳು ವ್ಯಕ್ತವಾಗಿದ್ದವು. ಅಗ್ನಿಶಾಮಕ ದಳ, ಹೋವರ್ ಕ್ರಾಫ್ಟ್ ಎನ್ ಡಿಆರ್ ಎಫ್ ಸತತ ಶೋಧ ಕಾರ್ಯಾಚರಣೆ ನಡೆಸಿದ್ದವು. ಪೊಲೀಸರು ಕೂಡಾ ಸಿದ್ದಾರ್ಥ ಕಾರು ಚಾಲಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಏತನ್ಮಧ್ಯೆ ಕಾಫಿ ಡೇ ಸಂಸ್ಥೆಯನ್ನು ಬಂದ್ ಮಾಡಲಾಗಿತ್ತು. ಈದಿನ ಬೆಳಗ್ಗೆ ನೇತ್ರಾವತಿ ನದಿಯ ಹೊಯ್ಗೆ ಬಜಾರ್ ಕಡಲ ತೀರದಲ್ಲಿ ಮೃತದೇಹವನ್ನು ಮೀನುಗಾರರ ಗಮನಿಸಿ
ಪೊಲೀಸರಿಗೆ ಮಾಹಿತಿ ನೀಡಿದ್ದರು. ನಾಡಿನ ಖ್ಯಾತ ಉದ್ಯಮಿ, ಕಾಫಿ ಬೆಳೆಗಾರರ ಆಶಾಕಿರಣ, ಕೆಫೆ ಕಾಫಿ ಡೇ ಉದ್ಯಮ ಸಾಮ್ರಾಜ್ಯದ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಮೃತದೇಹ ಅವರ ಹುಟ್ಟೂರಿನಲ್ಲೇ ಈ ಸಂಜೆ ಪಂಚಭೂತಗಳಲ್ಲಿ ಲೀನವಾಯಿತು. ಅವರ ಪುತ್ರ ಅಮರ್ತ್ಯ ಮತ್ತು ಇಶಾನ್ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಾವಿರಾರು ಮಂದಿ ಅಭಿಮಾನಿಗಳ ಕಣ್ಣೀರ ವಿದಾಯದೊಂದಿಗೆ ಸಿದ್ಧಾರ್ಥ ಪಾರ್ಥಿವ ಶರೀರ ಅನಂತದಲ್ಲಿ ಲೀನವಾಯಿತು. 50,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಿ, ಲಕ್ಷಾಂತರ ಕುಟುಂಬಗಳಿಗೆ ಆಸರೆಯಾದ ನಾಡಿನ ಖ್ಯಾತ ಕಾಫಿ ಉದ್ಯಮಿ ಸಿದ್ಧಾರ್ಥ, ಇತ್ತೀಚಿನ ದಿನಗಳಲ್ಲಿ ಉದ್ಯಮದ ಸಂಕಷ್ಟಗಳಿಂದ ತೀವ್ರ ನೊಂದಿದ್ದರು. ಜುಲೈ 28ರಂದು ಅವರು ಸಂಸ್ಥೆಯ ನಿರ್ದೇಶಕ ಮಂಡಳಿಗೆ ಬರೆದರೆನ್ನಲಾದ ಪತ್ರದಲ್ಲಿ ತಾವು ಸೋತು ಕೈ ಚೆಲ್ಲುತ್ತಿರುವುದಾಗಿ ನೋವಿನಿಂದಲೇ ಹೇಳಿಕೊಂಡಿದ್ದರು. ಜುಲೈ 29ರ ಸೋಮವಾರ ಬೆಂಗಳೂರಿನಿಂದ ಸಕಲೇಶಪುರಕ್ಕೆ ಹೊರಟಿದ್ದ ಅವರು, ನಂತರ ಮಂಗಳೂರಿಗೆ ತೆರಳಿದ್ದರು. ಅಲ್ಲಿಂದ ಕೇರಳಕ್ಕೆ ಸಾಗುವ ಹೆದ್ದಾರಿ ಮೂಲಕ ಸಾಗಿ ಉಳ್ಳಾಲದ ನೇತ್ರಾವತಿ ಸೇತುವೆಯ ಮೇಲೆ ವಾಹನ ನಿಲ್ಲಿಸುವಂತೆ ಕಾರು ಚಾಲಕನಿಗೆ ಸೂಚಿಸಿ ತಾವು ವಾಕಿಂಗ್ ಮುಗಿಸಿ ಸ್ವಲ್ಪ ಹೊತ್ತಿನ ನಂತರ ಬರುವುದಾಗಿ ಹೇಳಿದ್ದರು. ಆದರೆ ನಂತರ ಶಾಶ್ವತವಾಗಿ ಮರಳಿ ಬಾರದ ಲೋಕಕ್ಕೆ ತೆರಳಿದ್ದರು. ರಾತ್ರಿ 6.30ರಿಂದ
7.30ರ ಅಂತರದಲ್ಲಿ ಸಿದ್ದಾರ್ಥ ಅವರು ಉಳ್ಳಾಲ ಸೇತುವೆಯ ಮೇಲೆ ವಾಕಿಂಗ್ ಹೋಗುವ ವೇಳೆ ಏಕಾಏಕಿ ನಾಪತ್ತೆಯಾಗಿದ್ದರು. ಕಾರಿನ ಚಾಲಕ ಬಸವರಾಜು ಅವರು ನೀಡಿದ ಮಾಹಿತಿ ಆಧಾರದಲ್ಲಿ ಅದೇ ದಿನ ರಾತ್ರಿ 9
ಗಂಟೆಯಿಂದ ನದಿ, ಸಮುದ್ರ ಕಿನಾರೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿತ್ತು. ಸುಮಾರು
33 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಸಿದ್ದಾರ್ಥ ಮೃತದೇಹ ಪತ್ತೆಯಾಗಿತ್ತು
2019: ಬೆಂಗಳೂರು: ಕಾಫಿ ಡೇ ಮಾಲೀಕ ವಿ.ಜಿ. ಸಿದ್ದಾರ್ಥ ಹೆಗ್ಡೆ ಸಾವು ಇಡೀ ದೇಶಕ್ಕೆ ದಿಗ್ಭ್ರಮೆ ಮೂಡಿಸಿತು. ಸಾವಿರಾರು ಕೋಟಿ ಒಡೆತನದ ಕೆಫೆ ಕಾಫಿ ಡೇ ಮಾಲೀಕರನ್ನು ಕಳೆದುಕೊಂಡ ನಂತರ ತುರ್ತು ಸಭೆ ಕರೆದ ಕಾಫಿ ಡೇ ಆಡಳಿತ ಮಂಡಳಿ ಸದ್ಯ ಹಂಗಾಮಿ ಅಧ್ಯಕ್ಷರನ್ನಾಗಿ ಎಸ್ವಿ ರಂಗನಾಥ್ ಅವರನ್ನು ನೇಮಕ ಮಾಡಿತು. ಎಸ್ ವಿ ರಂಗನಾಥ್ ಕರ್ನಾಟಕ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ. ಇವರ ಜತೆಗೆ ಬಾಗ್ಮನೆ ಟೆಕ್ ಪಾರ್ಕ್ ಮಾಲೀಕ ನಿತಿನ್ ಬಾಗ್ಮನೆ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಯಿತು. ಸಿದ್ದಾರ್ಥ ಸಾವಿನ ಹಿನ್ನೆಲೆ ಇಂದು ತುರ್ತು ಸಭೆ ನಡೆಸಿದ ಕಾಫಿ ಡೇ ಮಂಡಳಿ ಈ ನಿರ್ಧಾರವನ್ನು ಪ್ರಕಟಿಸಿತು.
2019: ನವದೆಹಲಿ: ಮೆಡಿಕಲ್ ಸೀಟು ವಿಚಾರದಲ್ಲಿ ದುರುದ್ದೇಶಪೂರ್ವಕ ತೀರ್ಪು ನೀಡಿದ ಆರೋಪ ಎದುರಿಸುತ್ತಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್. ಶುಕ್ಲ ವಿರುದ್ಧ ಸಾಮಾನ್ಯ ಕಾನೂನು ರೀತ್ಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕೆಂದು ಸಿಬಿಐ ಮಾಡಿಕೊಂಡ ಮನವಿಗೆ ಭಾರತೀಯ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಸಮ್ಮತಿ ನೀಡಿದರು. ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಸಾಮಾನ್ಯ ಪ್ರಕರಣ ದಾಖಲಾಗಲಿರುವುದು ಇದೇ ಮೊದಲು. ಈ ಮೇಲ್ಮಟ್ಟದ ಕೋರ್ಟ್ಗಳ ನ್ಯಾಯಾಧೀಶರಿಗೆ ಸಂವಿಧಾನದ ರಕ್ಷಣೆ ಇದೆ. ಮುಖ್ಯ ನ್ಯಾಯಮೂರ್ತಿಗಳ ಅಪ್ಪಣೆ ಇಲ್ಲದೆ ಅವರ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನ್ಯಾಯಾಧೀಶರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವುದು ಸಿಜೆಐ ವಿವೇಚನೆಗೆ ಬಿಟ್ಟಿದ್ದು. ಆರೋಪದಲ್ಲಿ ಒಂದಷ್ಟು ಹುರುಳಿದೆ ಎನಿಸಿದರೆ ಸಿಜೆಐ ಅನುಮತಿ ನೀಡುವ ಸಾಧ್ಯತೆ ಹೆಚ್ಚಿರುತ್ತದೆ. ಭಾರತದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತಿರುವುದು ಇದೇ ಮೊದಲೆನ್ನಲಾಯಿತು. ನ್ಯಾ| ಎಸ್.ಎನ್. ಶುಕ್ಲ ಅವರು ಮೆಡಿಕಲ್ ಸೀಟಿನ ಅಡ್ಮಿಶನ್ ವಿಚಾರದಲ್ಲಿ ಭ್ರಷ್ಟಾಚಾರ ಎಸಗಿರುವ ಆರೋಪ ಇದೆ. ಸುಪ್ರೀಂ ಕೋರ್ಟ್ ಆದೇಶವನ್ನೂ ಮೀರಿ ಅವರು ಖಾಸಗಿ ಕಾಲೇಜೊಂದರಲ್ಲಿ ಮೆಡಿಕಲ್ ಅಡ್ಮಿಶನ್ನ ಡೆಡ್ಲೈನ್ ವಿಸ್ತರಿಸಿ ಆದೇಶ ಹೊರಡಿಸಿದ್ದರು. ಆ ಕಾಲೇಜಿನ ಆಡಳಿತ ಮಂಡಳೀಗೆ ಅನುಕೂಲ ಮಾಡಿಕೊಡಲು ಈ ತೀರ್ಪು ನೀಡಿದ್ದರೆನನ್ಲಾಗಿತ್ತು. ಈ ಘಟನೆ ಬೆಳಕಿಗೆ ಬಂದಾಗ ಆಂತರಿಕ ತನಿಖೆ ನಡೆಸಲಾಗಿತ್ತು. ಅದರಲ್ಲಿ ನ್ಯಾ| ಶುಕ್ಲ ತಪ್ಪೆಸಗಿರುವುದು ಕಂಡುಬಂದಿತ್ತು. 2018ರ ಜನವರಿಯಲ್ಲಿ ನ್ಯಾ| ಶುಕ್ಲ ಅವರನ್ನು ನ್ಯಾಯದಾನ ಕಾರ್ಯದಿಂದ ನಿರ್ಬಂಧಿಸಲಾಗಿತ್ತು. ಅದಾದ ಬಳಿಕ ನ್ಯಾ| ಶುಕ್ಲ ಅವರು ತಮ್ಮ ವಿರುದ್ಧದ ಆದೇಶವನ್ನು ಹಿಂಪಡೆಯುವಂತೆ ಸಿಜೆಐ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು. ಆದರೆ, ಈ ಮನವಿಯನ್ನು ಪುರಸ್ಕರಿಸದ ಸಿಜೆಐ ರಂಜನ್ ಗೊಗೋಯ್, ಕಳೆದ ತಿಂಗಳು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಸಂಸತ್ನಲ್ಲಿ ನ್ಯಾ| ಶುಕ್ಲಾ ವಿರುದ್ಧ ಮಹಾಭಿಯೋಗ (Impeachment) ನಿಲುವಳಿ ಮಂಡಿಸುವ ಉದ್ದೇಶವಿರುವುದನ್ನು ತಿಳಿಸಿದ್ದರು. ಈ ನಿಲುವಳಿ ಮಂಡನೆಯಾಗಿ ಸಂಸತ್ನಲ್ಲಿ ಸಮ್ಮತಿ ಸಿಕ್ಕರೆ ಹೈಕೋರ್ಟ್ ನ್ಯಾಯಮೂರ್ತಿಯನ್ನು ಸೇವೆಯಿಂದ ವಜಾಗೊಳಿಸಲು ಸಾಧ್ಯವಿದೆ.
2019: ನವದೆಹಲಿ: ರಾಜ್ಯಸಭೆಯಲ್ಲಿ ಮೋಟಾರು ವಾಹನ (ತಿದ್ದುಪತಿ) ಮಸೂದೆ 2019 ಅಂಗೀಕಾರಗೊಂಡಿತು. ಮೋಟಾರು ವಾಹನ ಕಾಯ್ದೆ 1988ಕ್ಕೆ ಈ ತಿದ್ದುಪಡಿ ಮಾಡಲಾಯಿತು. ಇದೇ ಮಸೂದೆ ಇದೇ ತಿಂಗಳಲ್ಲಿ ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ಈ ಮಸೂದೆಯನ್ನು 2017ರಲ್ಲೇ ಪರಿಚಯಿಸಲಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಳ್ಳದ ಕಾರಣ 16ನೇ ಲೋಕಸಭೆಯಲ್ಲಿ ಈ ಮಸೂದೆ ಮೂಲೆ ಸೇರಿತ್ತು. 2019ರಲ್ಲಿ ಇದೇ ಮಸೂದೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯ ಮುಂದೆ ಇರಿಸಿದ್ದರು. ರಸ್ತೆ ಸಾರಿಗೆ ನಿಯಮ ಉಲ್ಲಂಘಿಸುವವರಿಗೆ ಹೆಚ್ಚು ಪ್ರಮಾಣದ ಕಠಿಣ ದಂಡ ವಿಧಿಸುವ ನಿಯಮವನ್ನು ಮೋಟಾರು ವಾಹನ (ತಿದ್ದುಪಡಿ) ಮಸೂದೆ ಒಳಗೊಂಡಿದೆ. ಮಸೂದೆ ಪ್ರಕಾರ ಕನಿಷ್ಠ ದಂಡದ ಮೊತ್ತ 1 ಸಾವಿರ ರೂ. ಆಗಿರಲಿದೆ. ಅಲ್ಲದೆ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶ ಇರಲಿದೆ.
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್ ಅಸೋಸಿಯೇಶನ್ (ಜೆಕೆಸಿಎ) ನಿದಿಯ ೧೧೨ ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣದಲ್ಲಿ
ರಾಜ್ಯದ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲ ಅವರನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸಿತು.
ಜಾರಿ ನಿರ್ದೇಶನಾಲಯದ
ಚಂಡೀಗಢ ಕಚೇರಿಯಲ್ಲಿ ಫರೂಕ್ ಅಬ್ದುಲ್ಲ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕೇಂದ್ರೀಯ ತನಿಖಾ ದಳವು (ಸಿಬಿಐ) ೨೦೧೫ರಲ್ಲಿ ೩೮ ಕೋಟಿ ರೂಪಾಯಿಗಳಿಗೆ
ಸಂಬಂಧಿಸಿದಂತೆ ದಾಖಲಿಸಿದ್ದ ಮೊದಲ ಮಾಹಿತಿ ವರದಿಯನ್ನು (ಎಫ್ಐಆರ್) ಆಧರಿಸಿ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿತ್ತು. ಸಿಬಿಐಯು ಬಳಿಕ ಡಾ. ಅಬ್ದುಲ್ಲ ಮತ್ತು ಇತರ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಕ್ರೀಡಾ ಮೂಲಸವಲತ್ತು ಅಭಿವೃದ್ಧಿ ಪಡಿಸಲು ಬಿಸಿಸಿಐ ಒದಗಿಸಿದ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಸಿಬಿಐ ಆಪಾದಿಸಿತ್ತು. ಡಾ. ಅಬ್ದುಲ್ಲ
ಅವರು ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದರು. ಅಸೋಸಿಯೇಶನ್‌ನ ಮಾಜಿ ಪ್ರಧಾನ
ಕಾರ್ಯದರ್ಶಿ ಸಲೀಮ್ ಖಾನ್ ಮತ್ತು ಖಜಾಂಚಿ ಅಹ್ಸನ್ ಮಿರ್ಜಾ ಹಾಗೂ ಬ್ಯಾಂಕ್ ಎಕ್ಸಿಕ್ಯೂಟಿವ್ ಬಶೀರ್ ಅಹ್ಮದ್ ಅವರ ವಿರುದ್ಧ ಶ್ರೀನಗರದ (ಜಮ್ಮು ಮತ್ತು ಕಾಶ್ಮೀರ) ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಆರ್ ಪಿಸಿಯ ಸೆಕ್ಷನ್ ೧೨೦ಬಿ ಆರ್/ಡಬ್ಲ್ಯೂ ೪೦೬ ಅನ್ವಯ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ನೀಡಿದ ಆದೇಶವನ್ನು ಅನುಸರಿಸಿ ಸಿಬಿಐ ೨೦೧೫ರ ಸೆಪ್ಟೆಂಬರ್ ೨೧ರಂದು ಸಿಬಿಐ ಪ್ರಕರಣ ದಾಖಲಿಸಿತ್ತು. ಬಳಿಕ ಸಿಬಿಐ ರಾಜ್ಯ ಪೊಲೀಸರಿಂದ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಬಿಸಿಸಿಐಗೆ ಕ್ರಿಕೆಟ್ ಮೂಲ ಸವಲತ್ತು ಅಭಿವೃದ್ಧಿಗಾಗಿ ೨೦೦೨-೨೦೧೧ರ ನಡುವಣ ಅವಧಿಯಲ್ಲಿ ಅಂದಾಜು ೧೧೨ ಕೋಟಿ ರೂಪಾಯಿಗಳನ್ನು ಅನುದಾನವಾಗಿ ನೀಡಿತ್ತು. ಈ ಹಣದಲ್ಲಿ ಅಂದಾಜು
೪೩.೬೯ ಕೋಟಿ ರೂಪಾಯಿಗಳನ್ನು
ಆರೋಪಿಗಳು ಗುಳಂಕರಿಸಿ ದುರುಪಯೋಗ ಮಾಡಿಕೊಂಡಿದ್ದರು ಎಂದು ಆಪಾದಿಸಲಾಗಿತ್ತು. ಈ ಅವಧಿಯಲ್ಲಿ ಜೆಕೆಸಿಎ ಅಧ್ಯಕ್ಷ ಮತ್ತು ಖಜಾಂಚಿ ಇತರರ ಜೊತೆ ಸೇರಿಕೊಂಡು ಈ ಹಣ ವರ್ಗಾವಣೆ
ಮಾಡಿಕೊಂಡಿದ್ದರು ಎಂದೂ ಆಪಾದಿಸಲಾಗಿತ್ತು. ಸಂಪೂರ್ಣ ತನಿಖೆಯ ಬಳಿಕ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
2019: ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಲೋಕಸಭೆಯಲ್ಲಿ ಮುಂಭಾಗದ ಸಾಲಿನಲ್ಲಿ ಆಸನವನ್ನು ಹಂಚಿಕೆ ಮಾಡಲಾಗಿದ್ದು, ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಅವರಿಗೆ ಹೆಚ್ಚಿನ ಮಹತ್ವ ನೀಡಿರುವುದನ್ನು ಪ್ರಚುರ ಪಡಿಸಿತು. ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಅಮೇಥಿಯ ಅವರ ಕೌಟುಂಬಿಕ ಕೋಟೆಯಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಪರಾಭವಗೊಳಿಸಿದ ಲೋಕಸಭಾ ಸದಸ್ಯರಾಗಿದ್ದಾರೆ. ಅವರು ೨೦೧೪ರಿಂದಲೇ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಸಚಿವರಾಗಿದ್ದರು. ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು
ನೂತನ ಲೋಕಸಭೆಯ ಆಸನ ವ್ಯವಸ್ಥೆಗೆ ಒಪ್ಪಿಗೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತು ಪಡಿಸಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಸಾರಿಗೆ ಸಚಿವ ನಿತಿನ್ ಗಡ್ಕರಿ, ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್, ಡಿ.ವಿ. ಸದಾನಂದ
ಅವರಿಗೂ ಮೊದಲ ಸಾಲಿನ ಆಸನಗಳನ್ನು ಒದಗಿಸಲಾಯಿತು. ಇರಾನಿ ಅವರ ಜೊತೆಗೆ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರಿಗೂ ಮುಂಭಾಗದ ಸಾಲಿನಲ್ಲಿ ಆಸನ ನೀಡಲಾಯಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಅವರಿಗೆ ಎರಡನೇ ಸಾಲಿನಲ್ಲಿ ಆಸನ ನೀಡಲಾಯಿತು. ಸದಾ
ಕಾಲ ಮುಂಭಾಗದ ಆಸನಗಳಲ್ಲಿ ಕೂರುತ್ತಿದ್ದ ಆರು ಮಂದಿ ಹಿರಿಯ ಸಂಸದೀಯ ಪಟುಗಳು ಈ ಬೇಸಿಗೆಯಲ್ಲಿ ನಡೆದ
ಲೋಕಸಭಾ ಚುನಾವಣೆಯ ಬಳಿಕ ಸದನಕ್ಕೆ ಹಿಂತಿರುಗದ ಕಾರಣ, ಭಾರತಿಯ ಸಂಸದೀಯ ವ್ಯವಸ್ಥೆಯ ಭಾಗವಾಗಿರುವ ಲೋಕಸಭೆಯಲ್ಲಿ ಅತ್ಯಂತ ಮಹತ್ವದ ಆಸನಗಳೆಂದು ಪರಿಗಣಿಸಲಾಗಿರುವ ಅಗ್ರ ಪಂಕ್ತಿಯ ಆಸನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಾದವು. ಸಭಾಧ್ಯಕ್ಷರ ಪೀಠಕ್ಕೆ ಸಮೀಪವಾಗಿರುವ ಮುಂಭಾಗದ ಸಾಲಿನಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ಪಾಲು ಈ ಬಾರಿ ಸ್ವಲ್ಪ
ಹೆಚ್ಚಿತು. ಕಳೆದ
ಬಾರಿಗಿಂತ ಕೇವಲ ೬ ಸ್ಥಾನಗಳನ್ನು ಹೆಚ್ಚು
ಗೆದ್ದಿರುವ ಕಾಂಗ್ರೆಸ್ ಪಕ್ಷವು ಮುಂಭಾಗದ ಸಾಲಿನಲ್ಲಿ ೨ ಆಸನಗಳಿಗೆ ಸೀಮಿತವಾಯಿತು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕಾಂಗ್ರೆಸ್ ಪಕ್ಷದ ಸದನದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಯಾವಾಗಲೂ ಮುಂಭಾಗದ ಆಸನಗಳಲ್ಲಿ ಕೂರುತ್ತಿದ್ದವರಲ್ಲಿ ಸೇರಿದ್ದರು. ಸದರಿ ನಾಯಕರ ಪೈಕಿ ಬಹುತೇಕ ಮಂದಿ ಈ ಬಾರಿ ನಿವೃತ್ತರಾಗಿದ್ದರೆ,
ಎಚ್.ಡಿ. ದೇವೇಗೌಡ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಪರಾಭವಗೊಂಡಿದ್ದರು.
2017: ನವದೆಹಲಿ: ಸಿಕ್ಕಿಂ ವಲಯದ ಡಾಂಗ್ಲಾಂಗ್ನಲ್ಲಿ ಭಾರತ ಮತ್ತು ಚೀನಾ ಮಧ್ಯೆ ಘರ್ಷಣೆ ನಡೆಯುತ್ತಿರುವ ಬೆನ್ನಲ್ಲೇ ಉತ್ತರಾಖಂಡದ ಚಮೋಲಿ ವ್ಯಾಪ್ತಿಯಲ್ಲಿ ಚೀನಾ ಸೇನೆ ಒಂದು ಕಿ.ಮೀ. ವರೆಗೆ ಭಾರತದ ಗಡಿಯೊಳಗೆ ಅತಿಕ್ರಮ ಪ್ರವೇಶಿಸಿರುವ ಬಗ್ಗೆ ವರದಿಯಾಯಿತು. ಚೀನಾ ಪಡೆಗಳು ಒಂದು ಕಿ.ಮೀ. ಭಾರತೀಯ ಭೂಪ್ರದೇಶಕ್ಕೆ ಅಕ್ರಮ ಪ್ರವೇಶಿಸಿ, ಉತ್ತರಾಖಂಡದ ಚಮೋಲಿ ಜಿಲ್ಲೆಯ ಬರಾಹೋಟಿ ಪ್ರದೇಶದಲ್ಲಿ ಕುರಿಗಾಹಿಗಳಿಗೆ ಬೆದರಿಕೆ ಹಾಕಿದೆ ಎಂದು ಅಧಿಕಾರಿಗಳು ಹೇಳಿದರು. ಜುಲೈ 25ರಂದು ಕುರಿಗಾಹಿಗಳಿಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಸ್ಥಳವನ್ನು ತೆರವು ಗೊಳಿಸುವಂತೆ ಹೇಳಿರುವುದು ಬೆಳಕಿಗೆ ಬಂದಿತು. ಈ ಘಟನೆ ಉತ್ತರಾಖಂಡ್‌ನ ಡೆಹರಾಡೂನ್‌ನಿಂದ 140 ಕಿ.ಮೀ ದೂರದಲ್ಲಿರುವ 80 ಚದರ ಕಿ.ಮೀ. ಇಳಿಜಾರು ಹುಲ್ಲುಗಾವಲಿನ ಬರೋಹತಿ ಪ್ರದೇಶದಲ್ಲಿ ಘಟಿಸಿತು. ಇದು ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಒಳಗೊಂಡ ‘ಮಧ್ಯಮ ವಲಯ’ ಎಂಬ ಮೂರು ರಾಜ್ಯಗಳ ಗಡಿಗಳು ಕೂಡಿರುವ ಸ್ಥಳವಾಗಿದೆ.
2017: ಮುಂಬೈ: ಆನ್ಲೈನ್ ವಿಡಿಯೊ ಗೇಮ್ನಲ್ಲಿ ಜಯಗಳಿಸುವ ಉದ್ದೇಶದಿಂದ ಬಾಲಕನೊಬ್ಬ
ಬಹುಮಹಡಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಅಂಧೇರಿ ಬಳಿ ಶನಿವಾರ ಜುಲೈ 29ರಂದು ಘಟಿಸಿದ್ದು ತಡವಾಗಿ ಈದಿನ ಬೆಳಕಿಗೆ ಬಂದಿತು. ಮೃತ ಬಾಲಕನನ್ನು ಮನ್ಪ್ರೀತ್ ಸಿಂಗ್ (14) ಎಂದು ಗುರುತಿಸಲಾಯಿತು. ಭಾರತದಲ್ಲೇ ಇದು ವಿಡಿಯೋ ಗೇಮ್ ಸಾವಿನ ಮೊದಲ ಪ್ರಕರಣ. ಮನ್‌ಪ್ರೀತ್ ಸಿಂಗ್ ‘ಬ್ಲೂ ವೇಲ್’ ಎಂಬ ಆನ್ಲೈನ್ ವಿಡಿಯೊ ಗೇಮ್ಗೆ ಆಕರ್ಷಿತನಾಗಿದ್ದನು. ಈ ಆಟದ ಪ್ರಕಾರ ಮೇಲ್ವಿಚಾರರಕರು ಭಾಗವಹಿಸುವ ಅಭ್ಯರ್ಥಿಗೆ 50 ದಿನ 50 ಸವಾಲುಗಳನ್ನು ನೀಡುತ್ತಾರೆ. ಅಭ್ಯರ್ಥಿಯು ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಜಯಗಳಿಸಬೇಕು. ಈ ಆಟದ ಹುಚ್ಚು ಹಿಡಿಸಿಕೊಂಡ ಮನ್ಪ್ರೀತ್ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಗೆದ್ದು ಕೊನೆಯ ಹಂತ ತಲುಪಿದ್ದನು. ಆ ವೇಳೆ ಆತ್ಮಹತ್ಯೆ ಮಾಡಿಕೊಂಡರೆ ನೀವು ಆಟದಲ್ಲಿ ಗೆದ್ದಂತೆ ಎಂದು ಹೇಳಲಾಗಿತ್ತು. ಮೇಲ್ವಿಚಾರಕರ ಕೊನೆಯ ಸವಾಲು ಒಪ್ಪಿಕೊಂಡ ಮನ್‌ಪ್ರೀತ್, ಏಳನೇ ಮಹಡಿಯಿಂದ ಜಿಗಿದು ಸಂಜೆ 5ಕ್ಕೆ ಆತ್ಮಹತ್ಯೆ ಮಾಡಿಕೊಂಡ. ಈ ಸಂಗತಿ ಮನ್ಪ್ರೀತ್ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಮನ್‌ಪ್ರೀತ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೇರವಾಗಿ ನೋಡಿದ ನೆರೆಹೊರೆಯ ಸಾಕ್ಷಿಗಳಿಂದ ಮಾಹಿತಿ ಪಡೆದ ಪೊಲೀಸರು ತನಿಖೆ ಕೈಗೊಂಡರು.
2016: ಬೆಂಗಳೂರು: ಖ್ಯಾತ ಕಲಾವಿದ ಹಾಗೂ ಬೆಂಗಳೂರು ಶೇಷಾದ್ರಿಪುರದ ಕೆನ್ ಕಲಾ ಶಾಲೆಯ
ಸಂಸ್ಥಾಪಕ ಆರ್.ಎಂ. ಹಡಪದ್ ಅವರ ಪತ್ನಿ ಶ್ರೀಮತಿ ಶಾರದಮ್ಮ ರುದ್ರಪ್ಪ ಹಡಪದ್ (72) ಅವರು 31ನೇ ಜುಲೈ 2016ರ ಭಾನುವಾರ ಬೆಂಗಳೂರಿನ ರಾಜೀವಗಾಂಧಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸ್ವಸ್ಥತೆಯ ಬಳಿಕ ನಿಧನರಾದರು. ಕೆನ್ ಕಲಾ ಶಾಲೆಯ ಆಡಳಿತವನ್ನು ನೋಡಿಕೊಳ್ಳುವ ಕುವೆಂಪು ಕಲಾ ಸಂಸ್ಥೆಯ ಅಧ್ಯಕ್ಷರಾಗಿದ್ದ ಶಾರದಮ್ಮ ಅವರು ಬೆಂಗಳೂರಿನಲ್ಲಿ ಕೆನ್ ಕಲಾ ಶಾಲೆಯನ್ನು ಸ್ಥಾಪಿಸಿ ಬೆಳೆಸುವಲ್ಲಿ ಆರ್. ಎಂ. ಹಡಪದ್ ಅವರಿಗೆ ಬೆನ್ನು ಮೂಳೆಯಂತೆ ದೃಢವಾಗಿ ನಿಂತು ಬೆಂಬಲಿಸಿದ್ದರು. ಗದಗಿನಲ್ಲಿ ಜನಿಸಿ, ಮದುವೆಯಾದ ಬಳಿಕ ಬಾದಾಮಿಗೆ ಬಂದಿದ್ದ ಶಾರದಾ ಅವರು ಬೆಂಗಳೂರಿಗೆ ಬಂದ ಬಳಕ ಕಳೆದ 28 ವರ್ಷಗಳಿಂದ ಕೆನ್ ಕಲಾ ಶಾಲೆಯನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದರು. ಶಾಲೆಯ ಮಕ್ಕಳೊಂದಿಗೆ ಬೆರೆಯುವುದರ ಜೊತೆಗೆ ರಾತ್ರಿ ವೇಳೆಯಲ್ಲೂ ಅಭ್ಯಾಸಕ್ಕಾಗಿ ಶಾಲೆಯಲ್ಲೇ ತಂಗುತ್ತಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪಾಲಿಗೆ ಊಟವನ್ನು ಕೂಡಾ ನೀಡುತ್ತಿದ್ದ ಅವರು ಈ ಮಕ್ಕಳ ಪಾಲಿಗೆ ಸಾಕ್ಷಾತ್ ಅಮ್ಮನಂತೆಯೇ ಇದ್ದರು. ಶಾರದಮ್ಮ ಅವರು ಕೆನ್ ಕಲಾ ಶಾಲೆಯ ಹಾಲಿ ಪ್ರಾಂಶುಪಾಲ ಉಮೇಶ ಹಡಪದ್ ಸೇರಿದಂತೆ ಇಬ್ಬರು ಪುತ್ರು, ಒಬ್ಬ ಪುತ್ರಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದರು.
2016: ಕಿರ್ಕಕ್: ಉತ್ತರ ಇರಾಕ್ನ ಎರಡು ತೈಲ ಘಟಕಗಳಿಗೆ ಈದಿನ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರು ದಾಳಿ ನಡೆಸಿ ಘಟಕಗಳನ್ನು ಸ್ಪೋಟಿಸಿದರು. ಘಟನೆಯಲ್ಲಿ ಒಟ್ಟು ಐವರು ನೌಕರರು ಮೃತರಾದರು. ಕಿರ್ಕಕ್ ಎಂಬಲ್ಲಿಂದ 15 ಕಿ.ಮೀ. ದೂರದ ಎಬಿ2 ಗ್ಯಾಸ್ ಕಂಪ್ರೆಶರ್ ಸ್ಟೇಷನ್ಗೆ ದಾಳಿ ನಡೆಸಿದ ಉಗ್ರರು ಹ್ಯಾಂಡ್ ಗ್ರೇನೇಡ್ಗಳ ಉಪಯೋಗದಿಂದ ಸ್ಟೇಷನ್ನ ಬಾಗಿಲು ಸ್ಪೋಟಿಸಿ ನಿಯಂತ್ರಣಾ ಕೊಠಡಿಯಲ್ಲಿ ಅಡಗಿದ್ದ ನಾಲ್ವರು ನೌಕರರನ್ನು ಕೊಂದು ಹಾಕಿದರು. ನಂತರ ಅಲ್ಲಿಂದ 25 ಕಿ.ಮೀ ದೂರದ ಬೈ ಹಸನ್ ತೈಲ ಘಟಕ್ಕೆ ದಾಳಿ ನಡೆಸಿದ ಉಗ್ರರು ತೈಲ ಶೇಖರಣಾ ಟ್ಯಾಂಕ್ ಮೊದಲಾದವುಗಳನ್ನು ನಾಶಗೊಳಿಸಿದ್ದಲ್ಲದೆ ಅಲ್ಲಿನ ಎಂಜಿನಿಯರನ್ನು ಕೊಂದು ಹಾಕಿದರು. ಇರಾಕ್ ಸೇನೆ ತೈಲ ಘಟಕಗಳನ್ನು ಪುನರ್ವಶಪಡಿಸಿಕೊಂಡಿದ್ದು ವಿವಿಧ ಕೋಣೆಗಳಲ್ಲಿ ಅಡಗಿದ್ದ ನೌಕರರನ್ನು ರಕ್ಷಣೆ ಮಾಡಿತು.
2016: ಕಿರ್ಕಕ್: ಉತ್ತರ ಇರಾಕ್ನ ಎರಡು ತೈಲ ಘಟಕಗಳಿಗೆ ಈದಿನ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರು ದಾಳಿ ನಡೆಸಿ ಘಟಕಗಳನ್ನು ಸ್ಪೋಟಿಸಿದರು. ಘಟನೆಯಲ್ಲಿ ಒಟ್ಟು ಐವರು ನೌಕರರು ಮೃತರಾದರು. ಕಿರ್ಕಕ್ ಎಂಬಲ್ಲಿಂದ 15 ಕಿ.ಮೀ. ದೂರದ ಎಬಿ2 ಗ್ಯಾಸ್ ಕಂಪ್ರೆಶರ್ ಸ್ಟೇಷನ್ಗೆ ದಾಳಿ ನಡೆಸಿದ ಉಗ್ರರು ಹ್ಯಾಂಡ್ ಗ್ರೇನೇಡ್ಗಳ ಉಪಯೋಗದಿಂದ ಸ್ಟೇಷನ್ನ ಬಾಗಿಲು ಸ್ಪೋಟಿಸಿ ನಿಯಂತ್ರಣಾ ಕೊಠಡಿಯಲ್ಲಿ ಅಡಗಿದ್ದ ನಾಲ್ವರು ನೌಕರರನ್ನು ಕೊಂದು ಹಾಕಿದರು. ನಂತರ ಅಲ್ಲಿಂದ 25 ಕಿ.ಮೀ ದೂರದ ಬೈ ಹಸನ್ ತೈಲ ಘಟಕ್ಕೆ ದಾಳಿ ನಡೆಸಿದ ಉಗ್ರರು ತೈಲ ಶೇಖರಣಾ ಟ್ಯಾಂಕ್ ಮೊದಲಾದವುಗಳನ್ನು ನಾಶಗೊಳಿಸಿದ್ದಲ್ಲದೆ ಅಲ್ಲಿನ ಎಂಜಿನಿಯರನ್ನು ಕೊಂದು ಹಾಕಿದರು. ಇರಾಕ್ ಸೇನೆ ತೈಲ ಘಟಕಗಳನ್ನು ಪುನರ್ವಶಪಡಿಸಿಕೊಂಡಿದ್ದು ವಿವಿಧ ಕೋಣೆಗಳಲ್ಲಿ ಅಡಗಿದ್ದ ನೌಕರರನ್ನು ರಕ್ಷಣೆ ಮಾಡಿತು.
2016: ಅಗರ್ತಲಾ: ಈಶಾನ್ಯ ರಾಜ್ಯಗಳಲ್ಲಿ ರೈಲ್ವೆ ಜಾಲ ಅಭಿವೃದ್ಧಿ ಪಡಿಸುವ ಭಾಗವಾಗಿ ಅಗರ್ತಲಾವರೆಗಿನ ಮಾರ್ಗವನ್ನುಅಭಿವೃದ್ಧಿಪಡಿಸಲಾಗಿದ್ದು, ದೆಹಲಿ ಮತ್ತು ಅಗರ್ತಲಾ ನಡುವೆ ಸಂಚರಿಸಲಿರುವ ‘ತ್ರಿಪುರ ಸುಂದರಿ ಎಕ್ಸ್ಪ್ರೆಸ್’ ರೈಲಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಈದಿನ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅಗರ್ತಲಾ ಮತ್ತು ಬಾಂಗ್ಲಾದೇಶದ ಅಖೌರಾ ನಡುವೆ ರೈಲ್ವೆ ಮಾರ್ಗ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಯಿತು. ಸುರೇಶ್ ಪ್ರಭು ಮತ್ತು ಬಾಂಗ್ಲಾದೇಶ ರೈಲ್ವೆ ಸಚಿವ ಮೊಹಮ್ಮದ್ ಮಜೀಬುಲ್ ಹಕ್ ಶಂಕುಸ್ಥಾಪನೆ ನೆರವೇರಿಸಿದರು. ರೈಲ್ವೆ ಇಲಾಖೆಯು 968 ಕೋಟಿ ರೂ. ವೆಚ್ಚದಲ್ಲಿ ಅಗರ್ತಲಾ ಮತ್ತು ದೆಹಲಿ ರೈಲ್ವೆ ಮಾರ್ಗವನ್ನು ಅಭಿವೃದ್ಧಿ ಪಡಿಸಿದೆ.
2016: ಬೀಜಿಂಗ್: ಸುಮಾರು 3000 ವರ್ಷಗಳಷ್ಟು ಹಳೆಯದು ಎನ್ನಲಾಗಿರುವ ಅಪರೂಪದ ಚೀನೀ ‘ಯೂ’ (ಸದಾ ಹಸಿರು) ಮರವನ್ನು ಝಿಲಿನ್ ಪ್ರಾಂತದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಇಲ್ಲಿ ಹೇಳಿದರು. ಹುವಾಂಗ್ಗೊಯು ಕಾಡಿನಲ್ಲಿ ಈ ಜೀವಂತ ಮರವನ್ನು ಪತ್ತೆ ಹಚ್ಚಲಾಗಿದೆ. 40 ಮೀಟರ್ಗಳಿಗೂ ಹೆಚ್ಚು ಎತ್ತರ ಹಾಗೂ 1.68 ಮೀಟರ್ ವ್ಯಾಸವನ್ನು ಈ ಮರ ಹೊಂದಿದೆ ಎಂದು ಅರಣ್ಯ ಆಡಳಿತದ ಮುಖ್ಯಸ್ಥ ಯಾಂಗ್ ಯೊಂಗ್ಶೆಂಗ್ ನುಡಿದರು. ಈ ವಾರದ ಆದಿಯಲ್ಲಿ ಪತ್ತೆ ಹಚ್ಚಲಾದ 30ಕ್ಕೂ ಹೆಚ್ಚು ‘ಯೂ’ ಮರಗಳಲ್ಲಿ ಈ ಮರವೂ ಒಂದಾಗಿದ್ದು, ಅತ್ಯುತ್ತಮ ನಿರ್ವಹಣೆ ಪಡೆದಿರುವ ಅತ್ಯಂತ ಹಳೆಯ ಮರ ಇದಾಗಿದೆ ಎಂದು ಅವರು ಹೇಳಿದರು. ಸಸ್ಯ ಜಗತ್ತಿನ ‘ಜೀವಂತ ಪಳೆಯುಳಿಕೆ’ ಎಂಬುದಾಗಿ ಈ ಮರವನ್ನು ಕರೆದಿರುವ ಅವರು ಚೀನೀ ‘ಯೂ’ ಮರಗಳಿಗೆ 25 ಲಕ್ಷ ವರ್ಷಗಳ ಇತಿಹಾಸವಿದೆ. ಬಹಳಷ್ಟು ಮರಗಳನ್ನು ಕ್ಯಾನ್ಸರ್ ಚಿಕಿತ್ಸೆ ಸಲುವಾಗಿ ‘ಟ್ಯಾಕ್ಸೋಲ್’ ತೆಗೆಯಲು ಕಟಾವು ಮಾಡಲಾಗುತ್ತದೆ. ಈಗ ಈ ಮರಗಳು ಅವಸಾನದ ಅಂಚಿನಲ್ಲಿರುವ ಮರಗಳ ಸಾಲಿಗೆ ಸೇರಿವೆ ಎಂದು ವಿವರಿಸಿದರು.
2016: ಲಾಹೋರ್: ಪಾಕಿಸ್ತಾನ ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆಯಿಂದ ಉಗ್ರವಾದಿಗಳ ಭಾರಿ ದಾಳಿಯ ಸಂಚು ವಿಫಲಗೊಂಡಿತು. ಸುದ್ದಿ ತಿಳಿಯುತ್ತಿದ್ದಂತೆ ಕಟ್ಟಡದಲ್ಲಿ ಅಡಗಿ ಕುಳಿತಿದ್ದ ಉಗ್ರರ ಮೇಲೆ ದಾಳಿ ನಡೆಸಿ 7 ಮಂದಿಯನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರು. ಘಟನೆ ಪಂಜಾಬ್ ಪ್ರಾಂತ್ಯದ ಶಿಖಾಪುರ ಜಿಲ್ಲೆಯ ಚೆಕ್ ಚಾರ್ ರಸಾಲಾ ಎಂಬಲ್ಲಿ ಘಟಿಸಿತು.
2016: ಮೊಗಡಿಶು: ಸೋಮಾಲಿಯಾದ ಅಪರಾಧ ತನಿಖಾ ಇಲಾಖೆಯ ಕಚೇರಿಯಲ್ಲಿ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಉಗ್ರರು ಸೇರಿದಂತೆ ಒಟ್ಟು ಏಳು ಜನರು ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದರು. ಸೋಮಾಲಿಯಾದ ರಾಜಧಾನಿ ಮೊಗಡಿಶುವಿನಲ್ಲಿ ಅಪರಾಧ ತನಿಖಾ ಕಚೇರಿಗೆ ನುಗ್ಗುವ ಮುನ್ನ ಕಾರ್ ಬಾಂಬ್ ದಾಳಿ ನಡೆಸಲಾಗಿದ್ದು ದಾಳಿ ವೇಳೆ ಇಬ್ಬರು ಉಗ್ರರು ಮತ್ತು ನಾಗರಿಕರು ಸೇರಿದಂತೆ ಒಟ್ಟು ಏಳು ಜನ ಮೃತರಾದರು ಎಂದು ಸೋಮಾಲಿಯಾ ಪೊಲೀಸ್ ಅಧಿಕಾರಿ ಅಲಿ ಮೊಹಮ್ಮದ್ ಹೇಳಿದರು. ಬಾಂಬ್ ದಾಳಿಯ ಹೊಣೆಯನ್ನು ತಾನು ಹೊತ್ತಿರುವುದಾಗಿ ಇಸ್ಲಾಮೀ ಉಗ್ರ ಸಂಘಟನೆ ಅಲ್ ಶಬಾಬ್ ಪ್ರಕಟಿಸಿತು. ಕಳೆದ ಮಂಗಳವಾರ ಅಲ್ ಶಬಾಬ್ ಉಗ್ರ ಸಂಘಟನೆ ಸೋಮಾಲಿಯಾದ ಆಫ್ರಿಕನ್ ಯೂನಿಯನ್ ಕಟ್ಟಡದಲ್ಲಿ ನಡೆಸಿದ ಎರಡು ಕಾರ್ ಬಾಂಬ್ ದಾಳಿಗಳಲ್ಲಿ ಒಟ್ಟು 13 ಜನ ಸಾವನ್ನಪ್ಪಿದ್ದರು.
2016: ಭಿವಂಡಿ (ಮುಂಬೈ): ಮುಂಬೈ ಸಮೀಪದ ಭಿವಂಡಿಯಲ್ಲಿ ಬೆಳಗ್ಗೆ ಮೂರಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮವಾಗಿ 8 ಮಂದಿ ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಕಟ್ಟಡ ಅವಶೇಷಗಳ ಅಡಿಯಲ್ಲಿ ಸಿಲುಕಿಹಾಕಿಕೊಂಡರು. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ 25 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು ಎಂದು ಪೊಲೀಸರು ತಿಳಿಸಿದರು. ಭಿವಂಡಿಯ ಗರೀಬಿ ನಗರ ಪ್ರದೇಶದಲ್ಲಿ ಕುಸಿದಿರುವ ಕಬೀರ್ ಕಟ್ಟಡ ಶಿಥಿಲಗೊಂಡಿತ್ತು ಎಂದು ಹೇಳಲಾಗಿದೆ. ಈದಿನ ಬೆಳಗ್ಗೆ 9.15ರ ಸುಮಾರಿಗೆ ಕಟ್ಟಡ ಹಠಾತ್ತನೆ ಕುಸಿಯಿತು. ಇಂತಹ ಹಲವಾರು ಕಟ್ಟಡಗಳಲ್ಲಿ ವಾಸವಾಗಿರುವವರಿಗೆ ಅವುಗಳು ಯಾವುದೇ ಸಮಯದಲ್ಲಿ ಕುಸಿದು ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ತೆರವುಗೊಳಿಸುವಂತೆ ಮುನಿಸಿಪಲ್ ಕಾರ್ಪೊರೇಷನ್ ನೋಟಿಸ್ ನೀಡಿತ್ತು. ಕುಸಿದಿರುವ ಕಟ್ಟಡ ಅಪಾಯಕಾರಿ ಕಟ್ಟಡಗಳ ಪಟ್ಟಿಯಲ್ಲಿ ಇತ್ತು, ಈ ಹಿನ್ನೆಲೆಯಲ್ಲಿ ಈ ಕಟ್ಟಡ ತೆರವಿಗೆ ನೋಟಿಸ್ ನೀಡಲಾಗಿತ್ತು ಎಂದು ಭಿವಂಡಿ ನಿಜಾಮಪುರ ಮುನಿಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಹೇಳಿದರು.
2016: ಟೆಕ್ಸಾಸ್: ಬಿಸಿ ಗಾಳಿಯ ಬಲೂನ್ ಪತನಗೊಂಡು 16ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಲೊಕ್ಹಾರ್ಟ್ನ ಮಧ್ಯ ಟೆಕ್ಸಾಸ್ನಲ್ಲಿ ಘಟಿಸಿತು. ಬಲೂನ್ ಸಂಪೂರ್ಣವಾಗಿ ಸುಟ್ಟು ಕರಕಲಾಯಿತು. ದಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಸಿ ಗಾಳಿ ಬಲೂನ್ನಲ್ಲಿ 16ಕ್ಕೂ ಹೆಚ್ಚು ಪ್ರಯಾಣಿಸಿರುವ ಬಗ್ಗೆ ಮಾಹಿತಿ ಇದೆ. ಬಲೂನ್ ಆಸ್ಟಿನ್ನಿಂದ ಅಂದಾಜು 50 ಕಿಲೋಮೀಟರ್ ದೂರದಲ್ಲಿ ಪತನಗೊಂಡಿದೆ ಎಂದು ತಿಳಿಸಿದರು. ಅಮೆರಿಕ ಬಾವುಟದ ಚಿತ್ರ ಹಾಗೂ ನಗುವಿನ ಚಿನ್ಹೆ ಇರುವ ಬಲೂನ್ ಇದು. ಬಲೂನ್ನಲ್ಲಿ ಪ್ರಯಾಣ ಬೆಳೆಸಿದ ಯಾರೂ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದರು. 16 ಮಂದಿ ಸಾವನ್ನಪ್ಪಿರುವ ಬಗ್ಗೆ ಟೆಕ್ಸಾಸ್ ನಾಗರಿಕ ಕಲ್ಯಾಣ ಇಲಾಖೆ ವಕ್ತಾರ ಖಚಿತಪಡಿಸಿದರು. ಏರ್ ಬಲೂನ್ಗೆ ಅಳವಡಿಸಲಾಗಿರುವ ಬಾಸ್ಕೆಟ್(ಜನರು ನಿಂತಿರಲು ಮಾಡಿಕೊಳ್ಳುವ ಸ್ಥಳಾವಕಾಶ)ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಯಿತು.
2016: ನವದೆಹಲಿ: ರೋಚಕ ಮತ್ತು ಬೆರಗುಗೊಳಿಸುವ ರೀತಿಯಲ್ಲಿ ಸ್ಕೈ ಡೈವ್ ಮಾಡಿದ ಅಮೆರಿಕದ ಸ್ಟಂಟ್ ಮಾಸ್ಟರ್ ಲ್ಯೂಕ್ ಅಕಿನ್ಸ್, ಪ್ಯಾರಾಚೂಟ್ ಇಲ್ಲದೆ 25 ಸಾವಿರ ಅಡಿ ಎತ್ತರದಿಂದ ಧುಮುಕಿ ಈ ಸಾಧನೆ ಮಾಡಿದ ಜಗತ್ತಿನ ಪ್ರಥಮ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದರು. ವಿಂಗ್ಸೂಟ್ (ಗಾಳಿ ನಿಯಂತ್ರಣ ಕವಚ) ಅಥವಾ ಯಾರೊಬ್ಬ ಹಿಂಬಾಲಕರ ಸಹಾಯ ಇಲ್ಲದೆ ಧುಮುಕಿ ಆಶ್ಚರ್ಯದ ಜತೆ ಸಾಹಸ ಮೆರೆದರು. ಅವರ ಲ್ಯಾಂಡಿಂಗ್ಗಾಗಿ ಫುಟ್ಬಾಲ್ ಮೈದಾನದಷ್ಟು ಅಗಲ ನೆಟ್ ಹಾಕಲಾಗಿತ್ತು. ಕೇವಲ 2 ನಿಮಿಷದ ಅವಧಿಯಲ್ಲಿ 25 ಸಾವಿರ ಅಡಿ ಎತ್ತರದಿಂದ ಕೆಳಕ್ಕಿಳಿದು ವಿಶ್ವವೇ ತಮ್ಮತ್ತ ನೋಡುವಂತೆ ಮಾಡಿದರು. ಅಕಿನ್ಸ್ ಕುಟುಂಬದವರೆಲ್ಲ ಸ್ಥಳದಲ್ಲಿ ನೆರೆದಿದ್ದರು. ಸುರಕ್ಷಿತವಾಗಿ ಧರೆಗಿಳಿದ ಅಕಿನ್ಸ್ ಹೊಸ ದಾಖಲೆಗೆ ಸಾಕ್ಷಿಯಾದರು. ವೃತ್ತಿಪರ ಸಾಹಸಪಟುವಾದ ಅಕಿನ್ಸ್ ಹಾಲಿವುಡ್ನ ಆಕ್ಷನ್ ಓರಿಯೆಂಟೆಡ್ ಸಿನಿಮಾ ಐರನ್ ಮ್ಯಾನ್-3 ಸಿನಿಮಾದಲ್ಲಿ ಸ್ಟಂಟ್ಗಳನ್ನು ಮಾಡಿದ್ದಾರೆ. ಈ ದಾಖಲೆ ನಿರ್ಮಿಸಲು 18 ಸಾವಿರ ಜಿಗಿತಗಳ ಮೂಲಕ ಅಭ್ಯಾಸ ಮಾಡಿದ್ದರು.
2015: ನವದೆಹಲಿ: ಲಿಬಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿ ಪ್ರಾಬಲ್ಯದ ಪ್ರದೇಶದಲ್ಲಿ ಜುಲೈ 29ರಂದು ಅಪಹರಿಸಲಾಗಿದ್ದ ನಾಲ್ವರು ಭಾರತೀಯರ ಪೈಕಿ ಇಬ್ಬರು ಕನ್ನಡಿಗರನ್ನು ಈದಿನ 31 ಜುಲೈ 2015ರಂದು ಬಿಡುಗಡೆ ಮಾಡಲಾಯಿತು. ‘ಲಿಬಿಯಾದಲ್ಲಿ ಅಪಹರಿಸಲಾಗಿದ್ದ ಭಾರತೀಯರ ಪೈಕಿ ಲಕ್ಷ್ಮೀಕಾಂತ್ ಮತ್ತು ವಿಜಯ್ ಕುಮಾರ್ ಅವರ ಬಿಡುಗಡೆ ಮಾಡಿಸುವಲ್ಲಿ ನಾವು ಸಫಲರಾಗಿದ್ದೇವೆ ಎಂದು ತಿಳಿಸಲು ಸಂತೋಷವಾಗಿದೆ. ಇನ್ನಿಬ್ಬರ ಬಿಡುಗಡೆಗಾಗಿ ಯತ್ನಿಸುತ್ತಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಸಂಜೆ ಟ್ವೀಟ್ ಮಾಡಿದರು. ಇಬ್ಬರು ಕನ್ನಡಿಗರು ಸೇರಿದಂತೆ 4 ಮಂದಿ ದಕ್ಷಿಣ ಭಾರತೀಯರನ್ನು ಲಿಬಿಯಾದಲ್ಲಿ 29ರಂದು ಅಪಹರಿಸಲಾಗಿತ್ತು. ಉಗ್ರಗಾಮಿಗಳಿಂದ ಅಪಹರಣಗೊಂಡ ಕನ್ನಡಿಗರ ಪೈಕಿ ಲಕ್ಷ್ಮೀಕಾಂತ್ ರಾಯಚೂರಿನವರಾಗಿದ್ದು, ವಿಜಯಕುಮಾರ್ ಬೆಂಗಳೂರಿನವರು ಎಂದು ಹೇಳಲಾಗಿತ್ತು. ಇನ್ನಿಬ್ಬರನ್ನು ಹೈದರಾಬಾದ್ನ ಬಲರಾಂ ಮತ್ತು ಶ್ರೀಕಾಕುಲಂನ ಗೋಪಾಲಕೃಷ್ಣ ಎಂಬದಾಗಿ ಗುರುತಿಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದ್ದವು. ಟ್ರಿಪೋಲಿ ಮತ್ತು ಟ್ಯುನಿಸ್ನಿಂದ ಭಾರತಕ್ಕೆ ವಾಪಸಾಗುತ್ತಿದ್ದಾಗ ಇವರನ್ನ್ನು ಅಪಹರಿಸಲಾಗಿತ್ತು. ನಾಲ್ವರ ಪೈಕಿ ಮೂವರು ಲಿಬಿಯಾದ ಸೆರ್ಟೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ಒಬ್ಬರು ಅದೇ ವಿಶ್ವವಿದ್ಯಾಲಯದ ಜುಫ್ರಾ ಶಾಖೆಯಲ್ಲಿ ನೌಕರ ಎಂದು ಸರ್ಕಾರ ತಿಳಿಸಿತ್ತು.
2015: ನ್ಯೂಯಾರ್ಕ್: ಉಲ್ಬಣಗೊಂಡ ಕಿಡ್ನಿ ಕ್ಯಾನ್ಸರ್ ರೋಗಿಗಳಿಗೆ ರೊಬೋಟ್ ಸರ್ಜರಿಗಳನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಭಾರತೀಯ ಮೂಲದ ಅಮೆರಿಕನ್ ಸರ್ಜನ್ ಗಿಲ್ ನೇತೃತ್ವದ ತಂಡ ಮಹತ್ವದ ಸಾಧನೆ ಮಾಡಿರುವುದಾಗಿ ಪ್ರಕಟಿಸಿತು. ಲಾಸ್ ಏಂಜೆಲಿಸ್ನ ಯುಎಸ್ಸಿ ಇನ್ಸ್ಟಿಟ್ಯೂಟ್ ಆಫ್ ಯುರೋಲಜಿಯ (ಯುಎಸ್ಸಿ ಮೂತ್ರಶಾಸ್ತ್ರ ಸಂಸ್ಥೆ) ವೈದ್ಯರ ತಂಡವು ಅತ್ಯಂತ ದೀರ್ಘವಾದ ಈ ಸರ್ಜರಿಯನ್ನು ಏಳು ಸಣ್ಣ ಛೇದನಗಳು ಮತ್ತು ನಾಲ್ಕು ರೊಬೋಟ್ ಉಪಕರಣಗಳನ್ನು ಮಾತ್ರ ಬಳಸಿ ಮಾಡಿತು.. ಡಾ. ಇಂದೇರ್ಬಿರ್ ಎಸ್. ಗಿಲ್ ಈ ತಂಡದ ನಾಯಕರು. ಹೃದಯವನ್ನು ಮರು ಸಂರ್ಪಸುವ ಪ್ರಮುಖ ರಕ್ತನಾಳದಲ್ಲಿ ಕ್ಯಾನ್ಸರ್ ಪರಿಣಾಮವಾಗಿ ಮೂರನೇ ಹಂತದ ಹೆಪ್ಪುಗಟ್ಟುವಿಕೆ ಸಂಭವಿಸಿದಾಗ ಈ ಸರ್ಜರಿಯೇ ಮದ್ದು, ಬೇರೆ ದಾರಿಯಿಲ್ಲ. ಸಾಮಾನ್ಯವಾಗಿ ‘ಇನ್ಫೆರಿಯರ್ ವೀನಾ ಕಾವಾ (ಐವಿಸಿ) ಥ್ರೊಂಬೆಕ್ಟೊಮಿ ಎಂಬುದಾಗಿ ಕರೆಯಲಾಗುವ ಈ ಕ್ಲಿಷ್ಟ ಸರ್ಜರಿಯನ್ನು ದೊಡ್ಡ ಗಾಯವನ್ನು ಪ್ರಾಥಮಿಕವಾಗಿಯೇ ಮಾಡಿ ಮಾಡಬೇಕಾಗುತ್ತದೆ. ಮೂತ್ರನಾಳದ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾಡಲಾಗುವ ಈ ಕ್ಲಿಷ್ಟ ಸರ್ಜರಿಯು ಮೂತ್ರನಾಳ ಸಂಬಂಧಿ ಓಪನ್ ಸರ್ಜರಿಗಳಲ್ಲೇ ಅತ್ಯಂತ ಸವಾಲಿನದು ಎಂದು ಯುಎಸ್ಸಿ ಇನ್ಸ್ಟಿಟ್ಯೂಟ್ನ ಡಾ. ಇಂದೇರ್ಬಿರ್ ಎಸ್. ಗಿಲ್ ವಿವರಿಸುತ್ತಾರೆ. ಕೇವಲ 4ರಿಂದ 10 ರೋಗಿಗಳಿಗೆ ಅಥವಾ ಕಿಡ್ನಿ ಕ್ಯಾನ್ಸರ್ ಸಂದರ್ಭದಲ್ಲಿ ಇಂತಹ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಸ್ಯೆಯಾದಾಗ ಸರ್ಜರಿಯೊಂದೇ ದಾರಿ. ಈ ಕ್ಲಿಷ್ಟ ಸರ್ಜರಿಯನ್ನು ಕೇವಲ 7 ಸಣ್ಣ ಗಾಯ ಹಾಗೂ 4 ರೊಬೋಟ್ ಉಪಕರಣ ಬಳಸಿ ಮಾಡಿರುವುದು ಬಹುದೊಡ್ಡ ಸಾಧನೆ ಎಂಬುದು ಡಾ. ಗಿಲ್ ಹೇಳಿಕೆ. ತಂಡವು ಈವರೆಗೆ ಮೂತ್ರನಾಳದ ಕ್ಯಾನ್ಸರ್ ಮತ್ತು 3ನೇ ಹಂತದ ಥ್ರೋಂಬಿ ತಲುಪಿದ 9 ರೋಗಿಗಳಿಗೆ ಈ ‘ರೊಬೋಟ್ ಐವಿಸಿ ಥ್ರೊಂಬೊಕ್ಟೊಮಿ’ ನಡೆಸಿದೆ. ಏಳು ತಿಂಗಳ ಬಳಿಕ ಗಮನಿಸಿದಾಗ ಇವರೆಲ್ಲರೂ ಸಮಸ್ಯೆಯಿಂದ ಪಾರಾಗಿದ್ದು, ರೋಗ ಲಕ್ಷಣವೇ ಕಾಣಿಸಲಿಲ್ಲ’ ಎಂದು ಅವರು ನುಡಿದರು. ಬೆನ್ನಹುರಿಯಲ್ಲಿ ಗಡ್ಡೆ ಬೆಳೆದ ಒಬ್ಬ ರೋಗಿಗೆ ಮುಂದಿನ ಸರ್ಜರಿ ನಡೆಸಬೇಕಾಯಿತು ಎಂದು ಅವರು ಹೇಳಿದರು. ‘ಹೆಪ್ಪುಗಟ್ಟಿದ್ದನ್ನು ತೆಗೆಯುವುದರ ಜೊತೆಗೆ ವ್ಯಾಧಿಪೀಡಿತ ಕಿಡ್ನಿಯನ್ನೂ ತೆಗೆದುಹಾಕಬೇಕಾದ್ದರಿಂದ ಮುಂದಿನ ಸಮಸ್ಯೆಗಳಾಗದಂತೆ ಸರ್ಜನ್ ಮೊದಲು ರಕ್ತ ಹೆಪ್ಪುಗಟ್ಟಿದ್ದನ್ನು ತೆಗೆಯಬೇಕು, ಮತ್ತು ರಕ್ತ ಮುಂದಕ್ಕೆ ಪ್ರವಹಿಸದಂತೆ ತಡೆಗಟ್ಟಬೇಕು. ಈ ಎಲ್ಲಾ ಸರ್ಜರಿ ಅಗತ್ಯಗಳನ್ನು ಸಂಪೂರ್ಣವಾಗಿ ರೊಬೋಟ್ ಬಳಸಿ ಯಾವುದೇ ತೆರೆದ ಗಾಯ ಇಲ್ಲದೆಯೇ ಮಾಡಲಾಗಿದೆ’ ಎಂದು ಅವರು ವಿವರಿಸಿದರು. ‘ನಮ್ಮ ಅನುಭವ ಇನ್ನೂ ಪ್ರಾಥಮಿಕವಾದುದಾಗಿದ್ದರೂ, ಭವಿಷ್ಯದಲ್ಲಿ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾಗಬಲ್ಲುದು ಎಂಬುದು ನಮ್ಮ ನಂಬಿಕೆ’ ಎಂದು ಜರ್ನಲ್ ಆಫ್ ಯುರೋಲಜಿಯಲ್ಲಿ ಪ್ರಕಟಗೊಂಡಿರುವ ಪ್ರಬಂಧದಲ್ಲಿ ಗಿಲ್ ವಿಶ್ವಾಸ ವ್ಯಕ್ತ ಪಡಿಸಿದರು.
2015: ನವದೆಹಲಿ: ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮತ್ತು ಇತರ 8 ಮಂದಿಯ ವಿರುದ್ಧ ವಿಶೇಷ ನ್ಯಾಯಾಲಯವು ದೋಷಾರೋಪ ಹೊರಿಸಿತು. ಪ್ರಕರಣದಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಮತ್ತು ಜಾರ್ಖಂಡ್ನ ಮಾಜಿ ಮುಖ್ಯ ಕಾರ್ಯದರ್ಶಿ ಎ.ಕೆ. ಬಸು ಅವರ ವಿರುದ್ಧವೂ ನ್ಯಾಯಾಲಯ ದೋಷಾರೋಪ ಹೊರಿಸಿತು. ರಾಜ್ಯದ ರಾಜ್ಹರಾ ಪಟ್ಟಣದ ವಿನಿ ಐಯರ್ನ್ ಅಂಡ್ ಸ್ಟೀಲ್ ಉದ್ಯೋಗ್ ಲಿಮಿಟೆಡ್ (ವಿಐಎಸ್ಯುುಎಲ್) ಕಂಪೆನಿಗೆ ಕಲ್ಲಿದ್ದಲು ನಿಕ್ಷೇಪ ಮಂಜೂರಾತಿ ಮಾಡಿದ್ದಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಒಟ್ಟು 9 ಜನರ ವಿರುದ್ಧ ಆರೋಪಗಳಿದ್ದವು. ಕಲ್ಲಿದ್ದಲು ಗಣಿ ನಿಕ್ಷೇಪ ಹಂಚಿಕೆ ಮಾಡುವಂತೆ ಕೋಡಾ, ಗುಪ್ತಾ ಮತ್ತಿತರರು ಸಂಚು ಹೂಡಿದ್ದರು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಆಪಾದಿಸಿತ್ತು. ಇದೇ ಸಂದರ್ಭದಲ್ಲಿ ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ವಿಜಯ್ ದರ್ದಾ ಮತ್ತು ಇತರ 6 ಮಂದಿ ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತು.
2008:
`ಏಷ್ಯಾದ ನೊಬೆಲ್ ಪ್ರಶಸ್ತಿ' ಎಂದೇ ಬಿಂಬಿತವಾದ ಪ್ರತಿಷ್ಠಿತ `ರೇಮನ್ ಮ್ಯಾಗ್ಸೇಸೆ' ಪ್ರಶಸ್ತಿ ಈ ಬಾರಿ ಭಾರತದ `ಲೋಕೋಪಕಾರಿ ವೈದ್ಯ ದಂಪತಿ' ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರ ಮುಡಿಗೇರಿತು. ಮಹಾರಾಷ್ಟ್ರದಲ್ಲಿರುವ ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರೇಮನ್ ಮ್ಯಾಗ್ಸೇಸೆ' ಪ್ರಶಸ್ತಿ ಪ್ರತಿಷ್ಠಾನವು ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ತಿಳಿಸಿತು
2007: ನಟ ಸಂಜಯ್ ದತ್ ಗೆ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕೊನೆಗೂ ಸಾಧ್ಯವಾಗಲಿಲ್ಲ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಸಂಜಯ್ ಗೆ, ವಿಶೇಷ ಟಾಡಾ ನ್ಯಾಯಾಲಯ ಈದಿನ ಆರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25,000 ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿತು. ಸಂಜಯ್ ದತ್ ಮೇಲಿನ ಆರೋಪ ಹಾಗೂ ವಿಚಾರಣೆಯ ವಿವರ ಇಲ್ಲಿದೆ: ಏಪ್ರಿಲ್ 19, 1993: ಮಾರಿಷಸ್ಸಿನಿಂದ ಆಗಮಿಸಿದ ತತ್ ಕ್ಷಣ ವಿಮಾನ ನಿಲ್ದಾಣದಲ್ಲೇ ಪೊಲೀಸರಿಂದ ಬಂಧನ. ಏಪ್ರಿಲ್ 28: ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ದತ್. ಮೇ 5: ಬಾಂಬೆ ಹೈಕೋರ್ಟಿನಿಂದ ಮಧ್ಯಂತರ ಜಾಮೀನು. ನವೆಂಬರ್ 4: ಸಂಜಯ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ. ಜುಲೈ 4, 1994: ವಿಚಾರಣಾ ನ್ಯಾಯಾಲಯದಿಂದ ಜಾಮೀನು ರದ್ದು, ಮತ್ತೆ ಬಂಧನ. ಸೆಪ್ಟೆಂಬರ್ 11, 1995: ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯ. ಅಕ್ಟೋಬರ್ 16, 1995: ಸುಪ್ರೀಂಕೋರ್ಟಿನಿಂದ ಜಾಮೀನು. ಅಕ್ಟೋಬರ್ 18, 1995: ಹದಿನಾರು ತಿಂಗಳ ನಂತರ ಜೈಲಿನಿಂದ ಬಿಡುಗಡೆ. ಜುಲೈ 31, 2007: ಸಂಜಯ್ ದತ್ ಗೆ 6 ವರ್ಷ ಕಠಿಣ ಶಿಕ್ಷೆ ಪ್ರಕಟ. 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ಸತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೂಗತ ಜಗತ್ತಿನ ವ್ಯಕ್ತಿಗಳು ನೀಡಿದ್ದ ಶಸ್ತ್ರಾಸ್ತ್ರಗಳನ್ನು ಪಡೆದಿದ್ದ ಆರೋಪ ಬಾಲಿವುಡ್ ಚಿತ್ರನಟ ಸಂಜಯ್ ದತ್ ಮೇಲಿತ್ತು. ಸಂಜಯ್ ದತ್ ಗೆ ಎಕೆ-56 ರೈಫಲ್ ಹೊಂದಲು ನೆರವಾದ ಆರೋಪಿ ಯೂಸುಫ್ ನಲ್ ವಲ್ಲಾಗೆ ಐದು ವರ್ಷಗಳ ಸಜೆ ಮತ್ತು ಇನ್ನೊಬ್ಬ ಆರೋಪಿ ಕೇಸರಿ ಅಡ್ಜಾನಿಯಾಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಧೀಶ ಪಿ.ಡಿ. ಖೋಡೆ ವಿಧಿಸಿದರು.
2007: ಸೂರ್ಯ ಮುಳುಗದ ಸಾಮ್ರಾಜ್ಯ ಎಂಬುದಾಗಿ ಹೆಸರು ಪಡೆದಿದ್ದ ಇಂಗ್ಲೆಂಡಿನ ನಾಟಿಂಗ್ ಹ್ಯಾಮಿನ ಟ್ರೆಂಟ್ ಬ್ರಿಜ್ ಕ್ರೀಡಾಂಗಣದಲ್ಲಿ ಈದಿನ ರಾಹುಲ್ ದ್ರಾವಿಡ್ ಪಡೆ `ಟೀಮ್ ಇಂಡಿಯಾ' ಇಂಗ್ಲೆಂಡನ್ನು 1-0 ಅಂತರದಲ್ಲಿ ಪರಾಭವಗೊಳಿಸಿ ಸರಣಿಯಲ್ಲಿ ಮಹತ್ವದ ಮುನ್ನಡೆ ಸಾಧಿಸಿತು.
2007: ಆಂಧ್ರಪ್ರದೇಶದ ಸುಂಡೂರಿನಲ್ಲಿ 1991ರಲ್ಲಿ ನಡೆದ ದಲಿತರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ತೀರ್ಪು ನೀಡಿದ ಸ್ಥಳೀಯ ನ್ಯಾಯಾಲಯ 56 ಮಂದಿ ತಪ್ಪಿತಸ್ಥರೆಂದು ಘೋಷಿಸಿ, ಇತರ 123 ಮಂದಿಯನ್ನು ಖುಲಾಸೆಗೊಳಿಸಿತು. 1991 ರ ಆಗಸ್ಟ್ 6 ರಂದು ಗುಂಟೂರು ಜಿಲ್ಲೆಯಿಂದ 20 ಕಿ.ಮೀ. ದೂರದಲ್ಲಿರುವ ಸುಂಡೂರು ಗ್ರಾಮದಲ್ಲಿ ಎಂಟು ದಲಿತರನ್ನು ಹತ್ಯೆ ಮಾಡಲಾಗಿತ್ತು. ಸುಂಡೂರ್ ಹತ್ಯಾಕಾಂಡ ಎಂದೇ ಖ್ಯಾತಿ ಪಡೆದ ಈ ಪ್ರಕರಣದಲ್ಲಿ ಸವರ್ಣೀಯರು ಹಾಗೂ ದಲಿತರ ನಡುವೆ ಸಣ್ಣ ಮಟ್ಟಿನ ಹೊಡೆದಾಟ ಮತ್ತು ಮಾತಿನ ಚಕಮಕಿ ಎಂಟು ಮಂದಿ ದಲಿತರ ಹತ್ಯೆಯಲ್ಲಿ ಪರ್ಯವಸಾನಗೊಂಡಿತ್ತು.
2007: ಜೈಲಿನಲ್ಲಿ ಬಂಧಿಸಿಟ್ಟ ಉಗ್ರರನ್ನು ಬಿಡುಗಡೆ ಮಾಡಲು ಆಫ್ಘಾನಿಸ್ಥಾನ ಸರ್ಕಾರಕ್ಕೆ ನೀಡ್ದಿದ ಗಡುವು ಅಂತ್ಯಗೊಂಡದ್ದರಿಂದ, ತಾಲಿಬಾನ್ ಉಗ್ರರು ದಕ್ಷಿಣ ಕೊರಿಯಾದ ಒತ್ತೆಯಾಳು ಒಬ್ಬರನ್ನು ಗುಂಡಿಟ್ಟು ಕೊಂದರು. ಇದಕ್ಕೆ ಮೊದಲೇ ಒಬ್ಬ ಒತ್ತೆಯಾಳನ್ನು ಹತ್ಯೆ ಮಾಡಲಾಗಿತ್ತು. ಆಫ್ಘಾನಿಸ್ಥಾನದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದ 23 ಜನ ದಕ್ಷಿಣ ಕೊರಿಯಾ ನಾಗರಿಕರನ್ನು ತಾಲಿಬಾನ್ ಉಗ್ರರು ಜುಲೈ 19ರಂದು ಅಪಹರಿಸಿದ್ದರು. ಈ ಗುಂಪಿನಲ್ಲಿ 16 ಜನ ಮಹಿಳೆಯರಿದ್ದರು. ಕೊರಿಯಾ ತಂಡದ ನಾಯಕನನ್ನು ಗುಂಡಿಟ್ಟು ಕೊಲ್ಲಲಾಗಿತ್ತು.
2006: ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಡ ನಾಗರಿಕರನ್ನು ಪ್ರೇರೇಪಿಸಿದ ಮಾಹಿತಿ ಹಕ್ಕು ಆಂದೋಲನದ ಮುಂಚೂಣಿಯಲ್ಲಿರುವ ದೆಹಲಿ ಮೂಲದ `ಪರಿವರ್ತನ್' ನಾಗರಿಕ ಆಂದೋಲನ ಸಂಸ್ಥೆಯ ಮುಖ್ಯಸ್ಥ ಅರವಿಂದ ಕೇಜರಿವಾಲ (38) ಅವರು ಪ್ರಸ್ತುತ ವರ್ಷದ `ರೇಮನ್ ಮ್ಯಾಗ್ಸೆಸೆ' ಪ್ರಶಸ್ತಿಗೆ ಆಯ್ಕೆಯಾದರು. ಇವರ ಜೊತೆಗೆ ಸಂದುಕ್ ರುಯಿತ್ (ನೇಪಾಳ), ಎಕ್ ಸೊನ್ ಚಾನ್ (ಕಾಂಬೋಡಿಯಾ), ಪಾರ್ಕ್ ವಾನ್ ಸೂನ್ (ದಕ್ಷಿಣ ಕೊರಿಯ) ಹಾಗೂ ಇಗೇನಿಯಾ ದುರಾನ್ ಅಪೊಸ್ತೊಲ್ ಮತ್ತು ಅಂಟೋನಿಯೊ ಮೆಲೊಟೊ (ಇಬ್ಬರೂ ಫಿಲಿಪ್ಪೀನ್ಸ್ನವರು) ಅವರು `ಏಷ್ಯಾದ ನೊಬೆಲ್ ಪಾರಿತೋಷಕ' ಎಂದೇ ಖ್ಯಾತಿ ಪಡೆದಿರುವ ಈ ಪ್ರಶಸ್ತಿಗೆ ಆಯ್ಕೆಯಾದರು.
2006: ನಾಲ್ಕು ತಿಂಗಳ ರಾಜಕೀಯ ಬಿರುಗಾಳಿಗೆ ತೆರೆ ಎಳೆಯುವ ಉದ್ದೇಶದ ವಿವಾದಾತ್ಮಕ `ಲಾಭದ ಹುದ್ದೆ' ಮಸೂದೆಯನ್ನು ಲೋಕಸಭೆಯು ಈದಿನ ಪ್ರತಿಪಕ್ಷ ಸದಸ್ಯರ ತೀವ್ರ ವಿರೋಧದ ಮಧ್ಯೆ ಮೂಲ ಸ್ವರೂಪದಲ್ಲಿಯೇ ಮತ್ತೆ ಅಂಗೀಕರಿಸಿತು. 56 ಹುದ್ದೆಗಳಿಗೆ ವಿನಾಯ್ತಿ ನೀಡುವ ಮತ್ತು ಅನರ್ಹತೆ ಭೀತಿ ಎದುರಿಸುತ್ತಿದ್ದ 40 ಸಂಸದರನ್ನು ಶಿಕ್ಷೆಯಿಂದ ಮುಕ್ತಗೊಳಿಸುವ ಮಸೂದೆಯನ್ನು ಮರುಪರಿಶೀಲಿಸುವಂತೆ ಸೂಚಿಸಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸಂಸತ್ತಿಗೆ ವಾಪಸ್ ಕಳುಹಿಸಿದ್ದರು. ಈ ಮಸೂದೆಯನ್ನು ಅದೇ ಸ್ವರೂಪದಲ್ಲಿ ಸಂಸತ್ತು 230-71 ಮತಗಳ ಅಂತರದೊಂದಿಗೆ ಅಂಗೀಕರಿಸಿತು.
2006: ಮೈಸೂರಿನ ತನ್ನ ಆವರಣದಲ್ಲಿ `ನಾಸ್ಡಾಕ್' ಶಾಖೆಯನ್ನು ತೆರೆಯುವ ಮೂಲಕ ಅಮೆರಿಕದ `ನಾಸ್ಡಾಕ್' ಷೇರು ಮಾರುಕಟ್ಟೆಯನ್ನು ಅಮೆರಿಕದಿಂದ ಹೊರಗೆ ಆರಂಭಿಸಿದ ಏಷ್ಯ- ಫೆಸಿಫಿಕ್ ಪ್ರದೇಶದ ಮೊತ್ತ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಪಾತ್ರವಾಯಿತು. ಮೈಸೂರನ್ನು ಬಿಟ್ಟರೆ ಅಮೆರಿಕದಿಂದ ಹೊರಗೆ `ನಾಸ್ಡಾಕ್' ಮಾರುಕಟ್ಟೆ ಹೊಂದಿರುವ ಹೆಗ್ಗಳಿಕೆ ಇರುವುದು ಲಂಡನ್ ಮತ್ತು ದಾವೋಸ್ ಗಳಿಗೆ ಮಾತ್ರ. `ನಾಸ್ಡಾಕ್' ಅತ್ಯಂತ ದೊಡ್ಡದಾದ ಅಮೆರಿಕದ ಎಲೆಕ್ಟ್ರಾನಿಕ್ ಷೇರು ಮಾರುಕಟ್ಟೆಯಾಗಿದ್ದು 3200 ಕಂಪೆನಿಗಳು ಅದರ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.
2006: ಸೂರ್ಯಕಾಂತಿ ಕಳಪೆ ಬೀಜದಿಂದ ನಷ್ಟ ಅನುಭವಿಸಿದ ರೈತನಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬಹುರಾಷ್ಟ್ರೀಯ ಮಾನ್ಸಾಂಟೊ ಕಂಪೆನಿಗೆ ಆಂಕೋಲಾದ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿತು.
1997: ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್ಪಿ) ರಾಷ್ಟ್ರೀಯ ಪಕ್ಷಕ್ಕೆ ಮಾನ್ಯತೆ ನೀಡಲು ಚುನಾವಣಾ ಆಯೋಗ ಸಮ್ಮತಿಸಿತು.
1982: ಫ್ರಾನ್ಸಿನಲ್ಲಿ ಎರಡು ಬಸ್ಸು ಮತ್ತು ಹಲವು ಕಾರುಗಳ ಡಿಕ್ಕಿಯಾಗಿ 46 ಮಕ್ಕಳೂ ಸೇರಿದಂತೆ 53 ಜನ ಮೃತರಾದರು.
1925: ಇಂಗ್ಲೆಂಡಿನಲ್ಲಿ ನಿರುದ್ಯೋಗ ವಿಮೆ ಕಾಯಿದೆಗೆ ಅಂಗೀಕಾರ ನೀಡಲಾಯಿತು.
1916: ಸಾಹಿತಿ ಶಾರದಾ ಗೋಕಾಕ್ ಜನನ.
1903: ಮಧುರ ಚೆನ್ನ ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿ ಖ್ಯಾತಿ ಪಡೆದಿದ್ದ ಚೆನ್ನಮಲ್ಲಪ್ಪ ಗಲಗಲಿ (31-7-1903ರಿಂದ 15-8-1953) ಅವರು ಸಿದ್ದಲಿಂಗಪ್ಪ - ಅಂಬವ್ವ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಹಲಸಂಗಿ ಬಳಿಯ ಹಿರೇಲೋಣಿಯಲ್ಲಿ ಜನಿಸಿದರು.
1861: ಅಸ್ಸಾಮಿನ ಚಿರಾಪುಂಜಿಯಲ್ಲಿ 19,300 ಮಿ.ಮೀ. ಮಳೆ ಸುರಿದದ್ದು ವಿಶ್ವ ದಾಖಲೆಯಾಯಿತು. (ಈಗ ಚಿರಾಪುಂಜಿಯ ಹೆಸರು 'ಸೊಹರಾ' ಎಂಬುದಾಗಿ ಬದಲಾಗಿದೆ).
No comments:
Post a Comment