Wednesday, July 17, 2019

ಇಂದಿನ ಇತಿಹಾಸ History Today ಜುಲೈ 17

ಇಂದಿನ ಇತಿಹಾಸ History Today ಜುಲೈ 17
2019: ನವದೆಹಲಿ: ಭಾರತದ ನಿವೃತ್ತ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ ಮರಣದಂಡನೆ ವಿರುದ್ಧ ಭಾರತ ಸಲ್ಲಿಸಿದ್ದ ಮೇಲ್ಮನವಿಯ ಪರವಾಗಿ ನೆದರ್ಲ್ಯಾಂಡಿನ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ (ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್- ಐಸಿಜೆ) ಚಾರಿತ್ರಿಕ ತೀರ್ಪು ನೀಡಿದ್ದು ಭಾರತಕ್ಕೆ ಜಾಗತಿಕ ವಿಜಯ ಲಭಿಸಿದೆ. ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಯಿತು. ಕುಲಭೂಷಣ್ ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸದೆಯೇ ಮರಣದಂಡನೆ ವಿಧಿಸಿದ್ದನ್ನು ಪ್ರಶ್ನಿಸಿ ಭಾರತ ಸಲ್ಲಿಸಿದ್ದ  ದೂರನ್ನು ಎತ್ತಿ ಹಿಡಿದ ಐಸಿಜೆ ಅಧ್ಯಕ್ಷ ನ್ಯಾಯಮೂರ್ತಿ ಅಬ್ದುಲ್ಖಾವಿ ಅಹಮದ್ ಯೂಸುಫ್ ಅವರುಪಾಕಿಸ್ತಾನವು ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಹೇಳಿ ಕುಲಭೂಷಣ್ ಅವರ ರಾಜತಾಂತ್ರಿಕ ಸಂಪರ್ಕ ಪಡೆಯುವ ಹಕ್ಕನ್ನು ಎತ್ತಿ ಹಿಡಿದರು. ‘ಪಾಕಿಸ್ತಾನವು ಪರಿಣಾಮಕಾರಿಯಾಗಿ ಪುನರ್ ವಿಮರ್ಶೆ ಮಾಡಿ ನಿರ್ಧಾರವನ್ನು ಮರುಪರಿಶೀಲಿಸುವವರೆಗೂ ಜಾಧವ್ ಅವರಿಗೆ ವಿಧಿಸಲಾದ ಮರಣದಂಡನೆಯನ್ನು ಅಮಾನತುಗೊಳಿಸಲಾಗಿದೆ ಎಂದೂ ನ್ಯಾಯಮೂರ್ತಿ ಪ್ರಕಟಿಸಿದರು. ಏನಿದ್ದರೂ, ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನದ ಸೇನಾ ನ್ಯಾಯಾಲಯ ನೀಡಿದ ತೀರ್ಪಿನ ರದ್ದತಿ, ಜಾಧವ್ ಅವರ ಬಿಡುಗಡೆ ಮತ್ತು ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಿಸುವುದು ಸೇರಿದಂತೆ ಭಾರತ ಕೋರಿದ್ದ ಬಹುತೇಕ ಪರಿಹಾರಗಳನ್ನು ನ್ಯಾಯಾಲಯ ತಿರಸ್ಕರಿಸಿತು. ನೆದರ್ಲ್ಯಾಂಡ್ಸಿನ ಹೇಗ್ನಲ್ಲಿ ಪೀಸ್ ಪ್ಯಾಲೇಸ್ನಲ್ಲಿ ನಡೆದ ಬಹಿರಂಗ ಕಲಾಪದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷ ನ್ಯಾಯಮೂರ್ತಿ ಯೂಸುಫ್ ತೀರ್ಪನ್ನು ಓದಿ ಹೇಳಿದರು. ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿದ್ದ ಭಾರೀ ಪ್ರಚಾರ ಪಡೆದಿದ್ದ ಪ್ರಕರಣದಲ್ಲಿ ನ್ಯಾಯಮೂರ್ತಿ ಯೂಸುಫ್ ನೇತೃತ್ವದ ೧೫ ಸದಸ್ಯರ ಪೀಠವು ವಿಚಾರಣೆ ನಡೆಸಿ ಫೆಬ್ರುವರಿ ೨೧ರಂದು ತೀರ್ಪು ಕಾಯ್ದಿರಿಸಿತ್ತು. ಅದಾಗಿ ಐದು ತಿಂಗಳುಗಳ ಬಳಿಕ ತೀರ್ಪು ಹೊರಬಿದ್ದಿತು. ಭಾರತ ಮತ್ತು ಪಾಕಿಸ್ತಾನದ ವಕೀಲರು ತಮ್ಮ ಅಹವಾಲುಗಳನ್ನು ಮಂಡಿಸಿ, ವಾದ-ಪ್ರತಿವಾದಗಳು ನಡೆದ ಬಳಿಕ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಪ್ರಕರಣದ ವಿಚಾರಣಾ ಕಲಾಪ ಎರಡು ವರ್ಷ ಮತ್ತು ಎರಡು ತಿಂಗಳ ಕಾಲ ನಡೆದಿತ್ತು.  ೪೯ರ ಹರೆಯದ ಮಹಾರಾಷ್ಟ್ರ ಮೂಲಕ ಭಾರತೀಯ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಬೇಹುಗಾರಿಕೆ ಆರೋಪದಲ್ಲಿ ಬಂಧಿಸಿತ್ತು. ಬಳಿಕ ಪಾಕಿಸ್ತಾನದ ಸೇನಾ ನ್ಯಾಯಾಲಯವುಗೂಢಚರ್ಯೆ ಮತ್ತು ಭಯೋತ್ಪಾದನೆ ಆಪಾದನೆಗಾಗಿ ೨೦೧೭ರ ಏಪ್ರಿಲ್ ತಿಂಗಳಲ್ಲಿ ರಹಸ್ಯ ವಿಚಾರಣೆ ಬಳಿಕ ಮರಣದಂಡನೆ ವಿಧಿಸಿತ್ತು. ಜಾಧವ್ ಅವರಿಗೆ ಮರಣದಂಡನೆ ವಿಧಿಸಿದ ಸುದ್ದಿ ಭಾರತದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತುಭಾರತವು ೨೦೧೭ರ ಮೇ ೮ರಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಕದ ತಟ್ಟಿತ್ತು. ಜಾಧವ್ ಅವರಿಗೆ ಭಾರತವು ನೀಡಬಯಸಿದ್ದ ರಾಜತಾಂತ್ರಿಕ ಸಂಪರ್ಕವನ್ನು ನಿರಂತರವಾಗಿ ನಿರಾಕರಿಸುವ ಮೂಲ ಪಾಕಿಸ್ತಾನವು ವಿಯೆನ್ನಾ ಸಮಾವೇಶದ ವಿಧಿಗಳನ್ನು ಸಾರಾಸಗಟು ಉಲ್ಲಂಘಿಸಿದೆ ಎಂದು ಭಾರತ ಐಸಿಜೆಗೆ ನೀಡಿದ ತನ್ನ ದೂರಿನಲ್ಲಿ ತಿಳಿಸಿತ್ತು. ಅಂತಾರಾಷ್ಟ್ರೀಯ ವಿವಾದಗಳ ಇತ್ಯರ್ಥಕ್ಕಾಗಿ ದ್ವಿತೀಯ ಜಾಗತಿಕ ಸಮರದ ಬಳಿಕ ರಚಿಸಲಾಗಿದ್ದ ಐಸಿಜೆಯ ಪೀಠವು ಪ್ರಕರಣವು ಇತ್ಯರ್ಥವಾಗುವವರೆಗೆ ಜಾಧವ್ ಅವರಿಗೆ ವಿಧಿಸಲಾದ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸದಂತೆ ೨೦೧೭ರ ಮೇ ೧೮ರಂದು ಪಾಕಿಸ್ತಾನವನ್ನು ನಿರ್ಬಂಧಿಸಿತ್ತು. ಪ್ರಕರಣದಲ್ಲಿ ಪಾಕಿಸ್ತಾನ ೧೯೬೩ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ. ನೌಕಾಪಡೆಯಿಂದ ನಿವೃತ್ತರಾದ ಬಳಿಕ ತಮ್ಮದೇ ಉದ್ಯಮ ನಡೆಸುತ್ತಿದ್ ಕುಲಭೂಷಣ್ ಜಾಧವ್ ಅವರನ್ನು ಇರಾನಿನಿಂದ ಅಪಹರಣ ಮಾಡಲಾಗಿದೆ ಎಂದು ಭಾರತ ಪರ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ, ಕುಲಭೂಷಣ್ ಜಾಧವ್ ಉದ್ಯಮಿಯಲ್ಲ. ಉದ್ಯಮಿ ಎಂದು ಹೇಳಿಕೊಂಡು ಗೂಢಚರ್ಯೆ ನಡೆಸಿದ್ದಾರೆ ಎಂದು ವಾದಿಸಿತ್ತು. ಅಲ್ಲದೆ, ಕುಲಭೂಷಣ್ ಜಾಧವ್ ಅವರಿಗೆ ಭಾರತದ ರಾಜತಾಂತ್ರಿಕ ಕಚೇರಿ ನೆರವು ನೀಡಲು ಅವಕಾಶ ನೀಡಬೇಕು ಎಂದು ಮಾಡಲಾಗಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ ಎಂದೂ ಭಾರತ ವಾದಿಸಿತ್ತು. ಭಾರತದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನ ಮೂಲದ ಜೈರ್ಶ--ಮೊಹಮ್ಮದ್ ಉಗ್ರಗಾಮಿ ಸಂಘಟನೆಯು ಆತ್ಮಹತ್ಯಾ ದಾಳಿ ನಡೆಸಿ ಭಾರತೀಯ ಗಡಿಭದ್ರತ ಪಡೆಯ ೪೦ ಯೋಧರನ್ನು ಬಲಿ ಪಡೆದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತೀವ್ರ ಉದ್ವಿಗ್ನತೆ ಉಂಟಾಗಿದ್ದ ಸಮಯದಲ್ಲಿಯೇ ಅಂತಾರಾಷ್ಟ್ರೀಯ ನ್ಯಾಯಾಲಯದಲಿ ಜಾಧವ್ ಪ್ರಕರಣದ ವಿಚಾರಣೆ ನಡೆದಿತ್ತು. ೨೦೧೭ರ ಡಿಸೆಂಬರಿನಲ್ಲಿ ಕುಲಭೂಷಣ್ ಜಾಧವ್ ತಮ್ಮ ಪತ್ನಿ ಮತ್ತು ತಾಯಿಯನ್ನು ಭೇಟಿಯಾಗಲು ಬಯಸಿದ್ದರು. ಇದಕ್ಕೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅನುಮತಿ ನೀಡಿತ್ತು. ಇಸ್ಲಾಮಾಬಾದಿನಲ್ಲಿರುವ ಪಾಕ್ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಭೇಟಿಗೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು ೩೦ ನಿಮಿಷಗಳ ಕಾಲ ಜಾಧವ್, ತಾಯಿ ಮತ್ತು ಪತ್ನಿ ಜೊತೆ ಮಾತುಕತೆ ನಡೆಸಿದ್ದರು. ಆದರೆ, ನೇರವಾಗಿ ಭೇಟಿಗೆ ಅವಕಾಶ ನೀಡದೆ ಗಾಜಿನ ತಡೆಗೋಡೆಯ ಆಚೀಚೆ ಮುಖ ನೋಡಿಕೊಳ್ಳಲು ಅವಕಾಶ ನೀಡಿ ಇಂಟರ್ಕಾಂ ಮೂಲಕ ಮಾತನಾಡಲು ಅವಕಾಶ ಕಲ್ಪಿಸಿದ ಪಾಕಿಸ್ತಾನದ ಧೋರಣೆಗೆ ಭಾರತದಲ್ಲಿ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ, ಕುಲಭೂಷಣ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆದಿದ್ದವು. ಪಾಕಿಸ್ತಾನವು ತನ್ನ ಭದ್ರತಾ ಪಡೆಗಳು ಜಾಧವ್ ಅವರು ಗಲಭೆಗ್ರಸ್ತ ಬಲೂಚಿಸ್ತಾನ ಪ್ರಾಂತ್ಯದಲ್ಲಿ ೨೦೧೬ರ ಮಾರ್ಚ್ ೩ರಂದು ಇರಾನಿನಿಂದ ಬಂದ ಬಳಿಕ ಬಂಧಿಸಿದೆ ಎಂದು ಪ್ರತಿಪಾದಿಸಿತ್ತು. ಆದರೆ ಜಾಧವ್ ಅವರು ವ್ಯವಹಾರ ನಿಮಿತ್ತವಾಗಿಇರಾನಿಗೆ ಹೋಗಿದ್ದಾಗ ಅಲ್ಲಿಂದ ಅವರನ್ನು ಅಪಹರಿಸಲಾಗಿತ್ತು ಎಂದು ಭಾರತ ಹೇಳಿತ್ತು. ಸತ್ಯ ಮತ್ತು ನ್ಯಾಯ ಗೆದ್ದಿದೆ: ಮೋದಿ: ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಪರ ತೀರ್ಪು ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ತೀರ್ಪಿಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರುಸತ್ಯ ಮತ್ತು ನ್ಯಾಯ ಗೆದ್ದಿದೆ ಎಂದು ಟ್ವೀಟ್ ಮಾಡಿದರು.

2019: ನವದೆಹಲಿ: ಕರ್ನಾಟಕ ವಿಧಾನಸಭೆಗೆ ರಾಜೀನಾಮೆ ನೀಡಿದ ೧೫ ಮಂದಿ ಬಂಡಾಯ ಶಾಸಕರನ್ನು ವಿಧಾನಸಭಾ ಕಲಾಪಗಳಲ್ಲಿ ಪಾಲ್ಗೊಳ್ಳುವಂತೆ ಬಲಾತ್ಕರಿಸುವಂತಿಲ್ಲ ಮತ್ತು ಅವರ ರಾಜೀನಾಮೆಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ವಿಧಾನಸಭಾಧ್ಯಕ್ಷರಿಗೆ ಪರಮಾಧಿಕಾರವಿದೆ ಎಂಬುದಾಗಿ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿತು. ಇದರೊಂದಿಗೆ  ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಸರ್ಕಾರ ತೂಗುಯ್ಯಾಲೆಯಲ್ಲಿ ಜೋತಾಡುವಂತಾಯಿತು. ಜುಲೈ ೧೮ರ ಗುರುವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ವಿಶ್ವಾಸಮತ ಯಾಚನೆ ಕಲಾಪ ನಿಗದಿಯಾಗಿದ್ದು, ತಾವು ವಿಶ್ವಾಸ ಮತ ಯಾಚನೆ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ೧೫ ಮಂದಿ ಬಂಡಾಯ ಶಾಸಕರು ಮುಂಬೈಯಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಪ್ರಕಟಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ತ್ರಿಸದಸ್ಯ ಪೀಠವು ಅತೃಪ್ತ ಶಾಸಕರ ರಾಜೀನಾಮೆಗಳ ಬಗ್ಗೆ ತಮಗೆ ಸೂಕ್ತ ಎನಿಸುವ ಸಮಯದಲಿ ನಿರ್ಧರಿಸಲು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶಕುಮಾರ್ ಮುಕ್ತ ಅಧಿಕಾರ ಹೊಂದಿದ್ದಾರೆ. ಅನರ್ಹತೆ ಬಗ್ಗೆ ನಿರ್ಧರಿಸುವ ಅಧಿಕಾರವೂ ಅವರಿಗೆ ಇದೆ ಎಂದು ಹೇಳಿತು. ಆದರೆ ಅದಕ್ಕೆ ಯಾವುದೇ ಕಾಲಮಿತಿಯನ್ನು ಸೂಚಿಸಲಿಲ್ಲ. ವಿಧಾನಸಭಾಧ್ಯಕ್ಷರ ನಿರ್ಧಾರವನ್ನು ತನ್ನ ಮುಂದೆ ಮಂಡಿಸಬೇಕು ಎಂದು ಪೀಠ ನಿರ್ದೇಶಿಸಿತು. ನ್ಯಾಯಮೂರ್ತಿ ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರನ್ನೂ ಒಳಗೊಂಡಿರುವ ಪೀಠವು ರಾಜೀನಾಮೆ ನೀಡಿರುವ ೧೫ ಶಾಸಕರ ರಾಜೀನಾಮೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ವಿಧಾನಸಭಾಧ್ಯಕ್ಷರ ವಿವೇಚನೆಗೆ ಕೋರ್ಟಿನ ನಿರ್ದೇಶನಗಳು ಅಥವಾ ವಿಶ್ಲೇಷಣೆಗಳು ಅಡ್ಡಿಯಾಗಬಾರದು. ವಿಷಯದ ಬಗ್ಗೆ ನಿರ್ಧರಿಸಲು ಅವರು ಮುಕ್ತರಾಗಿದ್ದಾರೆ ಎಂದು ಹೇಳಿತು. ತೀರ್ಪು ಪ್ರಕಟಿಸುತ್ತಾ ವಿಷಯಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಸಮತೋಲನವನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ಹೇಳಿದ ಪೀಠವು ವಿಷಯಕ್ಕೆ ಸಂಬಂಧಿಸಿದಂತೆ ಎತ್ತಲಾಗಿರುವ ಇತರ ವಿಷಯಗಳ ಬಗ್ಗೆ ಮುಂದಿನ ಹಂತದಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿತು.  ಸಭಾಧ್ಯಕ್ಷರು ರಾಜೀನಾಮೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವವರೆಗೂ ರಾಜೀನಾಮೆ ನೀಡಿರುವ ಶಾಸಕರನ್ನು ವಿಧಾನಸಭಾ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಯಾರೂ ಬಲಾತ್ಕರಿಸುವಂತಿಲ್ಲ ಎಂದೂ ಪೀಠ ಸ್ಪಷ್ಟ ಪಡಿಸಿತು. ಪೀಠವು ಹಿಂದಿನ ದಿನ  ಪ್ರಕರಣದ ಎಲ್ಲ ಕಕ್ಷಿದಾರರ ವಾದ -ಪ್ರತಿವಾದಗಳನ್ನು ಆಲಿಸಿತ್ತು ಸಂದರ್ಭದಲ್ಲಿ ಕುಮಾರ ಸ್ವಾಮಿ ಮತ್ತು ವಿಧಾನಸಭಾಧ್ಯಕ ರಮೇಶ ಕುಮಾರ್ ಅವರು ಕರ್ನಾಟಕದ ಮೈತ್ರಿ ಸರ್ಕಾರವು ಬಹುಮತ ಕಳೆದುಕೊಂಡಿದ್ದು, ತಮ್ಮ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂಬುದಾಗಿ ಆಪಾದಿಸುತ್ತಿರುವ ಬಂಡಾಯ ಶಾಸಕರ ಅರ್ಜಿಗಳ ವಿಚಾರಣೆ ನಡೆಸಲು ನ್ಯಾಯಾಯಕ್ಕೆ ಇರುವ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿದ್ದರು. ಶಾಸಕರ ರಾಜೀನಾಮೆ ಬಗ್ಗೆ ಮೊದಲು ತೀರ್ಮಾನಿಸುವಂತೆ ಮತ್ತು ಬಳಿಕ ಅನರ್ಹತೆ ಕೋರಿಕೆ ಅರ್ಜಿಗಳನ್ನು ಇತ್ಯರ್ಥ ಪಡಿಸುವಂತೆ  ವಿಧಾನಸಭಾಧ್ಯಕ್ಷರಿಗೆ ನಿರ್ದೇಶಿಸುವ ಮೂಲಕ ವಿಧಾನಸಭಾಧ್ಯಕ್ಷರ ಕಾರ್ಯವ್ಯಾಪ್ತಿಗೆ ನ್ಯಾಯಾಲಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಕುಮಾರ ಸ್ವಾಮಿ ಮತ್ತು ರಮೇಶ ಕುಮಾರ್ ಪ್ರತಿಪಾದಿಸಿದ್ದರು. ವಿಧಾನಸಭಾ ಸಭಾಧ್ಯಕ್ಷರಿಗೆ ತಾನು ಅತ್ಯುನ್ನತ ಸ್ಥಾನವನ್ನು ನೀಡಿರುವುದಾಗಿ ನ್ಯಾಯಾಲಯ ಹೇಳಿತು. ಆದರೆ, ದಶಕಗಳ ಹಿಂದೆ ರೂಪಿಸಲಾದ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇಷ್ಟೊಂದು ವರ್ಷಗಳ ಬಳಿಕ ಮರುಪರಿಶೀಲಿಸಬೇಕಾದ ಅಗತ್ಯ ಇರುವಂತಿದೆ ಎಂದೂ ಅಭಿಪ್ರಾಯ ವ್ಯಕ್ತ ಪಡಿಸಿತು. ಶಾಸಕರ  ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ವ್ಯತಿರಿಕ್ತ ವಾದಗಳನ್ನು ಮಂಡಿಸಲಾಗಿರುವುದರಿಂದ ನ್ಯಾಯಾಲಯವು ಅಗತ್ಯವಾದ ಸಮತೋಲನವನ್ನು ಕಾಪಾಡುತ್ತದೆ ಎಂದು ಹೇಳಿತು. ಅನರ್ಹತೆಯ ವಿಷಯವನ್ನು ಮೊದಲು ನಿರ್ಧರಿಸಬೇಕು ಎಂಬುದಾಗಿ ವಿಧಾನಸಭಾಧ್ಯಕ್ಷರು ಮುಂದಿಟ್ಟ ವಾದವನ್ನು ಪ್ರಶ್ನಿಸಿದ ನ್ಯಾಯಾಲಯಶಾಸಕರು ಜುಲೈ ೬ರಂದೇ ರಾಜೀನಾಮೆ ಕೊಟ್ಟಿರುವಾಗ ಜುಲೈ ೧೦ರವರೆಗೆ ಅವರು ಏನು ಮಾಡುತ್ತಿದ್ದರು?’ ಎಂದು ಕೇಳಿತು. ಕುಮಾರ ಸ್ವಾಮಿ ಅವರ ಪರ ಹಾಜರಾಗಿದ್ದ ವಕೀಲ ರಾಜೀವ ಧವನ್ ಅವರುಬಂಡಾಯ ಶಾಸಕರು ಒಟ್ಟಾಗಿ ಬೇಟೆಯಾಡಲು ಹೊರಟಿದ್ದಾರೆ, ಬಗ್ಗೆ ಸಭಾಧ್ಯಕ್ಷರು ಕಣ್ಣು ಮುಚ್ಚಿಕೊಂಡಿರಲು ಸಾಧ್ಯವಿಲ್ಲ. ಅವರ ಉದ್ದೇಶ ಸರ್ಕಾರವನ್ನು ಉರುಳಿಸುವುದು ಎಂದು ಹೇಳಿದ್ದರು.
ಇದು ವಿಧಾನಭಾಧ್ಯಕ್ಷರು ವರ್ಸಸ್ ನ್ಯಾಯಾಲಯ ಅಲ್ಲ. ಇದು ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಬಯಸಿರುವ ಬೇರೆ ಯಾರೋ ವ್ಯಕ್ತಿಯ ನಡುವಣ ರಾಜಕೀಯ. ಅವರು ಸರ್ಕಾರವನ್ನು ಉರುಳಿಸಲು ಹೊರಟಿದ್ದಾರೆ ಎಂದೂ ಧವನ್ ಹೇಳಿದ್ದರು. ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಯಥಾಸ್ಥಿತಿ ಪಾಲಿಸುವಂತೆ ವಿಧಾನಸಭಾಧ್ಯಕ್ಷರಿಗೆ ನಿರ್ದೇಶಿಸಿರುವ ಎರಡು ಮಧ್ಯಂತರ ಆದೇಶಗಳನ್ನು ತೆರವುಗೊಳಿಸುವಂತೆ ಧವನ್ ಕೋರಿದ್ದರು. ಬಂಡಾಯ ಶಾಸಕರ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರುವಿಧಾನಸಭಾಧ್ಯಕ್ಷರು ಪಕ್ಷಪಾತಿಯಾಗಿ ದುರುದ್ದೇಶದ ವರ್ತನೆ ತೋರುತ್ತಿದ್ದಾರೆ ಮತ್ತು ಶಾಸಕರ ರಾಜೀನಾಮೆಗಳನ್ನು ಅಂಗೀಕರಿಸುತ್ತಿಲ್ಲ ಹಾಗೂ ರಾಜೀನಾಮೆ ಸಲ್ಲಿಸುವ ಅವರ ಮೂಲಭೂತ ಹಕ್ಕನ್ನೇ ವಿಫಲಗೊಳಿಸಿದ್ದಾರೆ ಎಂದು ಹೇಳಿದ್ದರು. ಸಾಂವಿಧಾನಿಕ ನಿಯಮಗಳ ಪ್ರಕಾರ ರಾಜೀನಾಮೆಗಳ ಬಗ್ಗೆ ಸಭಾಧ್ಯಕ್ಷರ ತತ್ ಕ್ಷಣವೇ ನಿರ್ಧಾರ ಕೈಗೊಳ್ಳಬೇಕು. ಹಾಗೆ ಮಾಡದೇ ಇರುವ ಮೂಲಕ ಅವರು ನಿಯಮಗಳನ್ನು ಮೂಲೆಪಾಲು ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದ ರೋಹ್ಟಗಿ, ’ಇಲ್ಲಿ ಸದನದಲ್ಲಿ ಬಹುಮತ ಕಳೆದುಕೊಂಡ ಸರ್ಕಾರವಿದೆ ಮತ್ತು ಸಭಾಧ್ಯಕ್ಷರು ಸರ್ಕಾರವನ್ನು ಉಳಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ರಾಜೀನಾಮೆಯು ಅನರ್ಹತೆ ಪ್ರಕ್ರಿಯೆಯಿಂದ ಬೇರೆಯಾಗಿದ್ದು, ’ಮಿನಿ ವಿಚಾರಣೆಗಾಗಿ ಸಮಯ ತೆಗೆದುಕೊಳ್ಳುತ್ತಾ ಅವುಗಳನ್ನು ಬೆರೆಸುವಂತಿಲ್ಲ ಎಂದೂ ಅವರು ವಾದಿಸಿದ್ದರು. ಅನರ್ಹತೆಯ ಪ್ರಶ್ನೆಯನ್ನು ಮುಂದಿಟ್ಟು ರಾಜೀನಾಮೆಗಳನ್ನು ಅಂಗೀಕರಿಸದೇ ಇರುವ ಆಟವನ್ನು ಆಡಲಾಗುತ್ತಿದೆ. ತನ್ಮೂಲಕ ಗುರುವಾರ ವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕಿದಾಗ ಶಾಸಕರು ನಿರ್ದಿಷ್ಟ ರೀತಿಯಲ್ಲೇ ವರ್ತಿಸುವಂತೆ ಒತ್ತಡ ಹಾಕಲು ಸಾಧ್ಯವಾಗುವಂತೆ ಆಡಳಿತ ಮೈತ್ರಿಕೂಟಕ್ಕೆ ನೆರವು ನೀಡಲಾಗುತ್ತಿದೆ. ಏಕೆಂದರೆ, ಇಂತಹ ಸಂದರ್ಭದಲ್ಲಿ ಶಾಸಕರ ವ್ಯತಿರಿಕ್ತ ವರ್ತನೆಯನ್ನು ಬಳಸಿ ಅವರನ್ನು ಅನರ್ಹಗೊಳಿಸಲು ಸಾಧ್ಯವಿದೆ ಎಂದು ರೋಹ್ಟಗಿ ಪೀಠಕ್ಕೆ ತಿಳಿಸಿದ್ದರು. ವಿಧಾನಸಭಾ ಅಧ್ಯಕ್ಷರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರುಅನರ್ಹತೆ ಅರ್ಜಿಗಳನ್ನು ಶಾಸಕರು ಜುಲೈ ೧೧ರಂದು ಸಭಾಧ್ಯಕ್ಷರ ಮುಂದೆ ಖುದ್ದು ಹಾಜರಾಗಿ ರಾಜೀನಾಮೆ ನೀಡುವುದಕ್ಕೆ ಮುನ್ನವೇ ಸಲ್ಲಿಸಲಾಗಿತ್ತು ಎಂದು ವಾದಿಸಿದ್ದರು. ೧೫ ಶಾಸಕರ ಪೈಕಿ ೧೧ ಶಾಸಕರು ಜುಲೈ ೧೧ರಂದು ವಿಧಾನಸಭಾಧ್ಯಕ್ಷರ ಮುಂದೆ ಖುದ್ದು ಹಾಜರಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದು ಅರ್ಜಿದಾರರು ನೀಡಿರುವ ಅರ್ಜಿಗೆ ಸಾಮಾನ್ಯ ನೆಲೆಯಾಗಿದೆ.. ಅನರ್ಹತೆ ಪ್ರಕ್ರಿಯೆಗಳನ್ನು ವಿಫಲಗೊಳಿಸಲು ರಾಜೀನಾಮೆಯು ಸಾಮಾನ್ಯ ನೆಲೆ ಆಗುವುದಿಲ್ಲ ಎಂದೂ ಅವರು ವಾದ ಮಂಡಿಸಿದ್ದರುರಾಜೀನಾಮೆಯ ವಿಷಯವನ್ನು ಕಾಲಮಿತಿಯಲ್ಲಿ ನಿರ್ದಿಷ್ಟ ರೀತಿಯಲ್ಲೇ ನಿರ್ಧರಿಸುವಂತೆ ವಿಧಾನಸಭಾಧ್ಯಕ್ಷರಿಗೆ ನಿರ್ದೆಶನ ನೀಡುವ ಅಧಿಕಾರ ವ್ಯಾಪ್ತಿ ಸುಪ್ರೀಂಕೋರ್ಟಿಗೆ ಇಲ್ಲ ಎಂದೂ ಸಿಂಘ್ವಿ ಪ್ರತಿಪಾದಿಸಿದ್ದರು. ಸಭಾಧ್ಯಕ್ಷರು ಉಭಯ ವಿಷಯಗಳ ಬಗೆಗೂ ನಿರ್ಧರಿಸಬಹುದು ಎಂದು ಅವರು ಹೇಳಿದ್ದರು. ಸದನವು ಕಲಾಪ ನಡೆಸಲು ಸಮಾವೇಶಗೊಂಡಿದ್ದಾಗ  ಆಡಳಿತ ಮೈತ್ರಿಕೂಟದ ವಿಪ್ನಿಂದ ೧೫ ಮಂಡಿ ಬಂಡಾಯ ಶಾಸಕರಿಗೆ ವಿನಾಯ್ತಿ ನೀಡಬಹುದೇ ಎಂದೂ ಅವರು ಪ್ರಶ್ನಿಸಿದ್ದರು.

2019: ಮುಂಬೈ/ ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು  ಈದಿನ  ಮಧ್ಯಂತರ ತೀರ್ಪು ನೀಡಿದ ಬಳಿಕ ಮುಂಬೈಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಕಾಂಗ್ರೆಸ್ ಮತ್ತು ಜನತಾದಳದ (ಎಸ್) ೧೨ ಬಂಡಾಯ ಶಾಸಕರು ತಾವು ವಿಧಾನಸಭೆಯ ವಿಶ್ವಾಸ ಮತ ಯಾಚನೆ ಕಲಾಪದಲ್ಲಿ ಪಾಲ್ಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ದೃಢ ಪಡಿಸಿದರು. ಮಾಧ್ಯಮಗಳ ಮುಂದೆ ಒಟ್ಟಾಗಿ ಬಂದು ಒಗ್ಗಟ್ಟು ಪ್ರದರ್ಶಿಸಿದ ಅತೃಪ್ತ ಶಾಸಕರು ತಮ್ಮ  ನಿಲುವು ಅಚಲ ಎಂದು ಹೇಳಿದರು. ಮಧ್ಯೆ, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ವಾಕ್ಸಮರಕ್ಕೆ ಇಳಿದವು. ತೀರ್ಪಿನ ಬಗ್ಗೆ ಭ್ರಮ ನಿರಸನ ವ್ಯಕ್ತ ಪಡಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರುಸುಪ್ರೀಂಕೋರ್ಟ್ ಆದೇಶವು ಬಂಡಾಯ ಶಾಸಕರಿಗೆ ವಿಪ್ ಉಲ್ಲಂಘನೆಗೆ ನೆರವಾಗಲು ಅತ್ಯಂತ ಸೂಕ್ತವಾಗಿ ಸಮನ್ವಯಗೊಳಿಸಿದಂತಿದೆ ಎಂದು ಹೇಳಿದರು.  ಸರಣಿ ಟ್ವೀಟ್ಗಳನ್ನು ಮಾಡಿದ ದಿನೇಶ್ ಗುಂಡೂರಾವ್ ಅವರು ತೀರ್ಪು ತಪ್ಪು ಪೂರ್ವ ನಿದರ್ಶನವನ್ನು ಹುಟ್ಟುಹಾಕಿದೆ. ಸಂವಿಧಾನದ ೧೦ನೇ ಶೆಡ್ಯೂಲಿನ ಅನ್ವಯ ಜಾರಿಗೊಳಿಸಲಾಗುವ ವಿಪ್ ಮೌಲ್ಯ ಈಗ ಅಪ್ರಸ್ತುತವಾಗುತ್ತದೆ ಎಂದು ಬರೆದರು. ‘ನಿಜವಾಗಿಯೂ ಅದ್ಭುತ ಆದೇಶ. ಬಂಡಾಯಶಾಸಕರಿಗೆ ಬಲಾಪಲ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಯಡಿಯೂರಪ್ಪ ಅವರು ಕುಮಾರ ಸ್ವಾಮಿ ವಿರುದ್ಧ ಗನ್ ಹಿಡಿದಿದ್ದಾರೆ ಎಂದು ಗುಂಡೂರಾವ್ ಟ್ವೀಟ್ ಮಾಡಿದರು. ಸುಪ್ರೀಂಕೋರ್ಟ್ ತೀರ್ಪನ್ನು ಅತ್ಯಂತ ಕೆಟ್ಟ ತೀರ್ಪು ಎಂಬುದಾಗಿ ಇನ್ನೊಂದು ಟ್ವೀಟಿನಲ್ಲಿ ಬಣ್ಣಿಸಿದ ಗುಂಡೂರಾವ್,  ’ಇದು ಪಕ್ಷಾಂತರಿಗಳನ್ನು ರಕ್ಷಿಸುವಂತೆ ಕಾಣುತ್ತದೆ ಮತ್ತು ಕುದುರೆ ವ್ಯಾಪಾರಕ್ಕೆ  ಪ್ರೋತ್ಸಾಹ ನೀಡುತ್ತದೆ ಎಂದು ಬಣ್ಣಿಸಿದರು. ವಿಧಾನಸಭಾಧ್ಯಕ್ಷರ ಮುಂದಿರುವ ಶಾಸಕರ ಅನರ್ಹತೆ ಕುರಿತ ಕಾಂಗ್ರೆಸ್ ದೂರನ್ನು  ಪಕ್ಷಾಂತರ ನಿಷೇಧ ಕಾನೂನಿನ ಸೆಕ್ಷನ್ -೧ಎ ಅಡಿಯಲ್ಲಿ ನೀಡಲಾಗಿದೆ ಎಂದು ಹೇಳಿದ ಗುಂಡೂರಾವ್ಇದನ್ನು ವಿಪ್ ಉಲ್ಲಂಘಿಸಿದ್ದಕ್ಕಾಗಿ ಸಲ್ಲಿಸಿದ್ದಲ್ಲ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಕ್ಕಾಗಿ ಸಲ್ಲಿಸಿದ್ದು ಎಂದು ಹೇಳಿದರು. ಈಗ ಸುಪ್ರಿಂಕೋರ್ಟ್ ತೀರ್ಪು ಶಾಸಕಾಂಗದ ಹಕ್ಕುಗಳ ಮೇಲೆ ಅತಿಕ್ರಮಿಸುತ್ತಿದೆ. ಇದು ಅತ್ಯಂತ ಕೆಟ್ಟ ತೀರ್ಪು, ಪಕ್ಷಾಂತರಿಗಳನ್ನು ರಕ್ಷಿಸಲು ಮತ್ತು ಕುದುರೆ ವ್ಯಾಪಾರವನ್ನು ಪ್ರೋತ್ಸಾಹಿಸಲು ನೀಡಿರುವಂತಿದೆ. ಇದು ಅಧಿಕಾರ ವಿಕೇಂದ್ರೀಕರಣದ ಸಿದ್ಧಾಂತವನ್ನೂ ಉಲ್ಲಂಘಿಸುತ್ತದೆ ಎಂದೂ ಗುಂಡೂರಾವ್ ಟ್ವೀಟ್ ಮಾಡಿದರು. ಗುಂಡೂರಾವ್ ಟ್ವೀಟಿಗೆ  ಭಾರತೀಯ ಜನತಾ ಪಕ್ಷವು ಖಾರವಾಗಿ ಪ್ರತಿಕ್ರಿಯಿಸಿತು.  ‘ಗುಂಡೂರಾವ್ ಅವರ ಬೂಟಾಟಿಕೆ (ಹಿಪೋಕ್ರೆಸಿ)’ ಎಂಬುದಾಗಿ ಸುಪ್ರೀಂಕೋರ್ಟ್ ತೀರ್ಪನ್ನು ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷರನ್ನು ಬಿಜೆಪಿ ಟ್ವೀಟ್ ಮೂಲಕವೇ ತರಾಟೆಗೆ ತೆಗೆದುಕೊಂಡಿತು.  ‘ಕಾಂಗ್ರೆಸ್ಸಿಗೆ ಸರ್ಕಾರ ರಚಿಸಲು ಮಧ್ಯರಾತ್ರಿಯಲ್ಲಿ ಸುಪ್ರೀಂಕೋರ್ಟ್ ತನ್ನ ಬಾಗಿಲು ತೆರೆದದ್ದುಸಮರ್ಪಕ ಪೂರ್ವ ನಿದರ್ಶನ. ಆದರೆ ಸುಪ್ರೀಂಕೋರ್ಟ್ ಕಾಂಗ್ರೆಸ್ಸಿಗೆ ನೀಡಿದ ತಮ್ಮ ಬೆಂಬಲ ಹಿಂಪಡೆಯಬಯಸಿದ ಚುನಾಯಿತ ಶಾಸಕರ ಮೂಲಭೂತ ಹಕ್ಕನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಾಗ ಅದುತಪ್ಪು ಪೂರ್ವ ನಿದರ್ಶನ ಎಂದು ಬಿಜೆಪಿ ಟ್ವೀಟ್ ಮೂಲಕ ದಿನೇಶ್ ಗುಂಡೂರಾವ್ ಅವರಿಗೆ ಚುಚ್ಚಿತು. ಈ ಮಧ್ಯೆ ಸಭಾಧ್ಯಕ್ಷ ರಮೇಶ ಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಸಚಿವ ಕೃಷ್ಣ ಬೈರೇಗೌಡ ಅವರುಸದನ ಕಲಾಪದಿಂದ ಗೈರು ಹಾಜರಾಗಲು ಶಾಸಕರು ಸಭಾಧ್ಯಕ್ಷರ ಅನುಮತಿ ಪಡೆಯಬೇಕು. ಆದರೆ ವಿಪ್ ಜಾರಿಗೊಳಿಸುವುದು ಅಥವಾ ಬಿಡುವುದು ಪಕ್ಷಗಳಿಗೆ ಬಿಟ್ಟ ವಿಷಯ. ಅವರು ವಿಪ್ ಉಲ್ಲಂಘಿಸಿದರೆ ನೀವು ದೂರು ನೀಡಬಹುದು. ಆಗ ಅವರು ಅದನ್ನು ಪರಿಶೀಲಿಸುತ್ತಾರೆ ಎಂದು ಹೇಳಿದರು.

2019: ಕರಾಚಿ: ಮುಂಬೈ ದಾಳಿಯ ರೂವಾರಿ ಮತ್ತು ಜಾಗತಿಕ ಉಗ್ರ ಹಫೀಝ್ ಸಯೀದ್ ನನ್ನು ಪಾಕಿಸ್ಥಾನ ಪಂಜಾಬ್ ಪೊಲೀಸ್ ಇಲಾಖೆಗೆ ಸೇರಿದ ಉಗ್ರನಿಗ್ರಹ ಇಲಾಖೆಯ ಅಧಿಕಾರಿಗಳು ಇಂದು ಬಂಧಿಸಿದರು. ಉಗ್ರ ಚಟುವಟಿಕೆಗಳಿಗೆ ಹಣಕಾಸು ಸಹಾಯ ನೀಡುತ್ತಿದ್ದ ಕಾರಣ ನೀಡಿ ಹಫೀಝ್ ಬಂಧನವಾಗಿದೆ ಎಂದು ತಿಳಿದುಬಂದಿತು. ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ದ್ವಿಪಕ್ಷೀಯ ಮಾತುಕತೆಗಾಗಿ ಅಮೆರಿಕಾಕ್ಕೆ ತೆರಳುವ ಒಂದು ದಿನ ಮುಂಚಿತವಾಗಿ ಬಂಧನ ನಡೆದಿರುವುದು ವಿಶೇಷ. ಹಫೀಝ್ ಸಯೀದ್ ಲಾಹೋರಿನಿಂದ ಗುಜ್ರಾನ್ ವಾಲಾಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲೇ ಉಗ್ರನಿಗ್ರಹ ದಳದ ಅಧಿಕಾರಿಗಳು ಜಾಗತಿಕ ಉಗ್ರ ಸಂಚರಿಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿದರು. ಹಫೀಝ್ ನನ್ನು ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

2019: ಸೋನಭದ್ರ: ಉತ್ತರ ಪ್ರದೇಶದ ಸೋನಭದ್ರದ ಘೋರವಾಲ್ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಕಾಳಗಕ್ಕೆ ಈದಿನ   ಮಂದಿ ಬಲಿಯಾದರು.  ಸಂಜೆ ಸಪಹಿ ಗ್ರಾಮದಲ್ಲಿ ಇಬ್ಬರು ಸೋದರಳಿಯರ ನಡುವೆ ನಡೆದ ಸಂಘರ್ಷವು ಗುಂಡಿನ ಚಕಮಕಿಗೆ ತಿರುಗಿತು ಎಂದು ವರದಿಗಳು ಹೇಳಿದವು. ಗುಂಡಿನ ಚಕಮಕಿಯ ವೇಳೆಯಲ್ಲಿ ಒಟ್ಟಾರೆ ೧೯ ಮಂದಿಗೆ ಗಾಯಗಳಾಗಿದ್ದು, ಮೃತರಾದವರಲ್ಲಿ  ಮೂವರು ಮಹಿಳೆಯರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಘಟನೆ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಕ್ರಿಯೆ ನೀಡಿದ್ದು, ಘಟನೆ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಡಿಜಿಪಿಗೆ ಸೂಚಿಸಿರುವುದಾಗಿ ಹೇಳಿದರು. ಅಷ್ಟೇ ಅಲ್ಲ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಆದಿತ್ಯನಾಥ್ ಹೇಳಿದರು. ದೀರ್ಘಕಾಲದ ಜಮೀನು ವಿವಾದವೇ ಗುಂಡಿನ ಕಾಳಗಕ್ಕೆ ಕಾರಣವಾಗಿದೆ. ಯಜ್ಞಾ ದತ್ ಹಾಗೂ ಬೆಂಬಲಿಗರು ಏಕಾಏಕಿ ಎದುರಾಳಿ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ನೆರವು ನೀಡುವ ಸಂಬಂಧ ಎಲ್ಲ ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ  ಆದಿತ್ಯನಾಥ್ ಸೂಚನೆ ನೀಡಿದರು.

2017: ಕೋಲ್ಕತಕರ್ನಾಟಕದ ಕರಾವಳಿಯೂ ಸೇರಿದಂತೆ ಭಾರತದ ಪರ್ಯಾಯ ದ್ವೀಪ ಭಾಗದ ಸಮುದ್ರ ತೀರದಲ್ಲಿ ಅಪಾರ ಪ್ರಮಾಣದ ಖನಿಜ ನಿಕ್ಷೇಪಗಳು ಪತ್ತೆಯಾಗಿದೆ ಎಂದು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ (ಜಿಎಸ್ಐ) ಪ್ರಕಟಿಸಿತು. ಕೋಟಿಗಟ್ಟಲೆ ಟನ್ಖನಿಜ ಸಂಪತ್ತುಗಳನ್ನು ಸಮುದ್ರದಾಳದಲ್ಲಿ ಪತ್ತೆಯಾಗಿದೆ ಎಂದು ಇಲಾಖೆ ಹೇಳಿತುಮಂಗಳೂರು, ಕಾರವಾರ, ಚೆನ್ನೈ, ಮನ್ನಾರ್ಬೇಸಿನ್‌, ಅಂಡಮಾನ್ನಿಕೋಬಾರ್ದ್ವೀಪಗಳು, ಲಕ್ಷದ್ವೀಪಗಳಲ್ಲಿ ಖನಿಜ ಸಂಪತ್ತುಗಳು ಇವೆ. 1.81 ಲಕ್ಷ ಕಿ.ಮೀ. ಸಮುದ್ರ ಸಂಶೋಧನೆ ವೇಳೆ 100 ಕೋಟಿ ಟನ್ಗೂ ಹೆಚ್ಚು ಖನಿಜ ನಿಕ್ಷೇಪಗಳಿವೆ ಎಂದು ಗೊತ್ತಾಗಿವೆ. 2014ಕ್ಕೂ ಹಿಂದೆ ಭಾಗದ ಸಮುದ್ರದಲ್ಲಿನ ಮಾದರಿಗಳನ್ನು ಸಂಗ್ರಹಿಸಿದ ಬಳಿಕ ಸಮುದ್ರದಲ್ಲಿ ಮೂರು ವರ್ಷ ಶೋಧನೆ ನಡೆಸಲಾಗಿದ್ದು, ನಿಕ್ಷೇಪಗಳಿರುವುದು ಖಚಿತಪಟ್ಟಿದೆ ಎಂದು ಇಲಾಖೆ ತಿಳಿಸಿತು. ಯಾವೆಲ್ಲ ಪ್ರದೇಶದಲ್ಲಿ?: ಕಾರವಾರ, ಮಂಗಳೂರು, ಚೆನ್ನೈಯಲ್ಲಿ ಫಾಸ್ಪೇಟ್ನಿಕ್ಷೇಪ, ತಮಿಳುನಾಡಿನ ಮನ್ನಾರ್ಬೇಸಿನ್ನಲ್ಲಿ ಗ್ಯಾಸ್ಹೈಡ್ರೇಟ್‌, ಅಂಡಮಾನ್ತೀರದಲ್ಲಿ ಕೋಬಾಲ್ಟ್, ಲಕ್ಷದ್ವೀಪದಲ್ಲಿ ಮೈಕ್ರೋ ಮ್ಯಾಂಗನೀಸ್ನೋಡಲ್ಸ್ಪತ್ತೆಯಾಗಿದೆಖನಿಜ ನಿಕ್ಷೇಪಗಳ ಪತ್ತೆಗೆ ಸಮುದ್ರ ಸಂಶೋಧನಾ ಹಡಗು ಗಳನ್ನು ಬಳಸಲಾಗಿದೆ.ಸಮುದ್ರ ರತ್ನಾಕರ್‌, ಸಮುದ್ರ ಕೌಸ್ತುಭ, ಸಮುದ್ರ ಸೌದಿಕಾಮಗಳು ಅತಿ ಹೆಚ್ಚು ಸಂಪನ್ಮೂಲಗಳು ಇರುವ ಪ್ರದೇಶಗಳನ್ನು ಗುರುತಿಸಿವೆ ಎಂದು ಜಿಎಸ್ಐ ತಿಳಿಸಿತು. ಪತ್ತೆ ಮಾಡಿದ್ದು ಹೇಗೆ?: ಹೈರೆಸಲ್ಯೂಷನ್ ಸಮುದ್ರದ ಆಳದ ಮ್ಯಾಪಿಂಗ್ಮತ್ತು ನೈಸರ್ಗಿಕ ಸಂಪನ್ಮೂಲ ಪತ್ತೆ ಸಾಧನಗಳಿಂದ ಖನಿಜ ನಿಕ್ಷೇಪಗಳನ್ನು ಪತ್ತೆ ಹಚ್ಚಲಾಯಿತು.


2017: ನವದೆಹಲಿ ರಾಷ್ಟ್ರಪತಿ ಚುನಾವಣೆ ಮುಕ್ತಾಯಗೊಂಡಿದ್ದು ಎಲ್ಲ ರಾಜ್ಯಗಳಲ್ಲಿ ಶೇ.100ರಷ್ಟು ಮತದಾನವಾಯಿತು.  ಜು.20ರಂದು ಮತ ಎಣಿಕೆ ನಡೆಯಲಿದ್ದು, ನಿರೀಕ್ಷೆಯಂತೆ ಎನ್ಡಿಎ ಅಭ್ಯರ್ಥಿ ರಾಮನಾಥ್ಕೋವಿಂದ್ಜಯ ಗಳಿಸುವ ಸಾಧ್ಯತೆ ಇದೆ. ನವದೆಹಲಿಯ ಸಂಸತ್ಭವನದಲ್ಲಿ ಶೇ.99ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಲೋಕಸಭೆಯ ಸೆಕ್ರೆಟರಿ ಜನರಲ್ಅನೂಪ್ಮಿಶ್ರಾ ಹೇಳಿದರು. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ಶಾ, ಕಾಂಗ್ರೆಸ್ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿಯ ಹಿರಿಯ ತಲೆಯಾಳು ಎಲ್‌.ಕೆ.ಅಡ್ವಾಣಿ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ತಮ್ಮ ಹಕ್ಕು ಚಲಾವಣೆ ಮಾಡಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಗೋವಾ ಮುಖ್ಯಮಂತ್ರಿ ಮನೋಹರ ಪಾರೀಕರ್ಸೇರಿದಂತೆ ಒಟ್ಟು 44 ಮಂದಿ ಆಯಾ ರಾಜ್ಯಗಳ ರಾಜಧಾನಿಯಲ್ಲಿಯೇ ಮತ ಹಾಕಲು ಅನುಮತಿ ಪಡೆದಿದ್ದರು. ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಮಾತನಾಡಿದ ಬಿಜೆಪಿ ವಕ್ತಾರ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯೇ ಜಯಗಳಿಸಲಿದ್ದಾರೆ ಎಂದು ಹೇಳಿಕೊಂಡರೆ ಸಂವಿಧಾನ ಎತ್ತಿ ಹಿಡಿಯುವಂತೆ ಹಕ್ಕು ಚಲಾವಣೆಯಾಗಿದೆ ಎಂಬ ವಿಶ್ವಾಸವಿದೆ ಎಂದು ಸಿಪಿಎಂ ಹೇಳಿಕೊಂಡಿದೆ.

2017: ನವದಹೆಲಿ"ನಾನು ರಾಷ್ಟ್ರಪತಿ, ಉಪರಾಷ್ಟ್ರಪತಿಯಾಗುವುದಿಲ್ಲ; ಉಷಾ ಪತಿಯಾಗಿಯೇ ಇರುತ್ತೇನೆ'' ಎಂದು ತಿಂಗಳ ಹಿಂದೆ ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಮುಪ್ಪಾವರಪು ವೆಂಕಯ್ಯ ನಾಯ್ಡು ಈಗ ಅಧಿಕೃತವಾಗಿ ಉಪರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿ. ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಸ್ಥಾನದ ಚುನಾವಣಾ ಪ್ರಕ್ರಿಯೆ ಆರಂಭವಾಗುವುದಕ್ಕೆ ಮೊದಲು ಎನ್ಡಿಎ ವಲಯದಲ್ಲಿ ನಾಯ್ಡು ಹೆಸರು ಚಾಲ್ತಿಯಲ್ಲಿತ್ತು. ಇದೀಗ ಅದರಂತೆಯೇ ಆಗಿ ಹೋಗಿದೆ. ಉಷಾ ಪತಿ (ಸಚಿವ ನಾಯ್ಡು ಪತ್ನಿಯವರ ಹೆಸರು) ವೆಂಕಯ್ಯ ನಾಯ್ಡು ಅವರು .5ರಂದು ನಡೆಯಲಿರುವ ಉಪ-ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅವರು ಮಂಗಳವಾರ, ಜು.18 ಬೆಳಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆಯ ಬಳಿಕ ಪಕ್ಷದ ಅಧ್ಯಕ್ಷ ಅಮಿತ್ಶಾ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದರು. ಎನ್ಡಿಎ ಪಾಲುದಾರ ಪಕ್ಷಗಳ ಜತೆಗೆ ಬಗ್ಗೆ ಚರ್ಚೆ ನಡೆಸಿಯೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರುಕೋವಿಂದ್ಆಯ್ಕೆ ಮಾದರಿಯೇ?:  ರಾಷ್ಟ್ರಪತಿ ಸ್ಥಾನಕ್ಕೆ ಪ್ರತಿಪಕ್ಷಗಳು ಯಾರನ್ನು ಆಯ್ಕೆ ಮಾಡಬೇಕು ಎಂದು ಚಿಂತನೆ ನಡೆಸುತ್ತಿರುವಂತೆಯೇ ಹಲವು ಸಂಭಾವ್ಯ ಹೆಸರುಗಳ ನಡುವೆ ಅಚ್ಚರಿಯ ಘೋಷಣೆಯಾದದ್ದು ಬಿಹಾರ ರಾಜ್ಯಪಾಲ ರಾಮನಾಥ್ಕೋವಿಂದ್ ಹೆಸರು. ಅದೇ ಮಾದರಿಯ ದಾಳವನ್ನು ಬಿಜೆಪಿ ಅಧ್ಯಕ್ಷ ಅಮಿತ್ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ .5ರಂದು ನಡೆಯುವ ಉಪರಾಷ್ಟ್ರಪತಿ ಸ್ಥಾನದ ಚುನಾವಣೆಯಲ್ಲೂ ಮಾಸ್ಟರ್ಸ್ಟ್ರೋಕ್ನೀಡಿದರು. ಸದ್ಯ ನಗರಾಭಿವೃದ್ಧಿ ಸಚಿವರಾಗಿರುವ ನಾಯ್ಡು, ಎಲ್ಲ ಮಿತ್ರ ಪಕ್ಷಗಳ ಜತೆ ಒಡನಾಟ ಇಟ್ಟುಕೊಂಡವರು. ಅಲ್ಲದೆ, ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸದನದ ಒಳಗೆ ಮತ್ತು ಹೊರಗೆ ಗಮನಸೆಳೆಯುವ ವ್ಯಕ್ತಿತ್ವ ಅವರದ್ದು. ದಕ್ಷಿಣ ಭಾರತದಿಂದ ಬಿಜೆಪಿಗೆ ಸಮರ್ಥ ನಾಯಕರಿಲ್ಲ ಎಂಬ ಕೊರಗನ್ನು ನೀಗಿಸಿದವರು ನಾಯ್ಡು.  ಇವರ ಆಯ್ಕೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ""ನನಗೆ ವೆಂಕಯ್ಯ ನಾಯ್ಡುಗಾರು ಹಲವು ವರ್ಷಗಳಿಂದ ಪರಿಚಿತರು. ರೈತನ ಮಗನಾಗಿರುವ ಅವರು  ಕಠಿಣ ಪರಿಶ್ರಮಿ. ಉಪರಾಷ್ಟ್ರಪತಿಗೆ ಅವರು ಸಮರ್ಥ ಅಭ್ಯರ್ಥಿ'' ಎಂದು ಹೇಳಿದರು.

2017: ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದೆ ಎನ್ನಲಾದ ಲಂಚ ಪ್ರಕರಣ
ಕುರಿತು ನಿವೃತ್ತ ಐಎಎಸ್ಅಧಿಕಾರಿ ವಿನಯ ಕುಮಾರ್ವಿಚಾರಣೆ ಆರಂಭಿಸಿದ ದಿನವೇ ಬಂದಿಖಾನೆ ಮಹಾನಿರ್ದೇಶಕ ಎಚ್.ಎನ್ಸತ್ಯನಾರಾಯಣರಾವ್‌, ಡಿಐಜಿ ಡಿ. ರೂಪಾ ಹಾಗೂ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ಅವರನ್ನು ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಖಡಕ್ಸಂದೇಶ ರವಾನಿಸಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಗಲಭೆಯ ಬಗ್ಗೆ ಗೃಹ ಇಲಾಖೆಗೆ ಸೂಕ್ತ ಮುನ್ನೆಚ್ಚರಿಕೆ ನೀಡಲಿಲ್ಲ ಎಂಬ ಕಾರಣಕ್ಕೆ ಗುಪ್ತಚರ ವಿಭಾಗದ ಡಿಜಿಪಿ ಎಂ.ಎನ್‌.ರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಯಿತು. ಅವರ ಉತ್ತರಾಧಿಕಾರಿಯಾಗಿ ಅಮೃತ್ಪಾಲ್ಅವರನ್ನು ನೇಮಕ ಮಾಡಲಾಯಿತುಮೇಘರಿಕ್ಬಂದಿಖಾನೆ ಎಡಿಜಿಪಿ ತಿಂಗಳ ಕೊನೆಗೆ ನಿವೃತ್ತಿಯಾಗಲಿರುವ ರಾವ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಹುದ್ದೆ ತೋರಿಸಿಲ್ಲ. ಬಂದಿಖಾನೆ ಹೆಚ್ಚುವರಿ ಡಿಜಿಪಿ ಆಗಿ ಎನ್‌.ಎಸ್‌. ಮೇಘರಿಕ್ಅವರನ್ನು ನೇಮಕ ಮಾಡಲಾಗಿದೆ. ಮೇಘರಿಕ್ಇದುವರೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಡಿಜಿಪಿ ಆಗಿದ್ದರು. ರೂಪಾ ಅವರನ್ನು ಕಾರ್ಯನಿರ್ವಾಹಕ ಹುದ್ದೆಯಲ್ಲದ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಕಮಿಷನರ್ಆಗಿ ನೇಮಕ ಮಾಡಲಾಯಿತು. ಕೃಷ್ಣಕುಮಾರ್ಗೂ ಹುದ್ದೆ ತೋರಿಸಿಲ್ಲ. ಅಧೀಕ್ಷಕರಾಗಿರುವ ಆರ್. ಅನಿತಾಗೆ ಮುಖ್ಯ ಅಧೀಕ್ಷಕರ ಹುದ್ದೆ ಹೆಚ್ಚುವರಿ ಹೊಣೆ ನೀಡಲಾಯಿತು. ‘ಕಾರಾಗೃಹದಲ್ಲಿ ಬಂದಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ. ಶಶಿಕಲಾಗೆ ವಿಶೇಷ ಸೌಲಭ್ಯ ನೀಡಲು ಸತ್ಯನಾರಾಯಣರಾವ್ಅವರು ರೂ. 2 ಕೋಟಿ  ಲಂಚ ಪಡೆದಿದ್ದಾರೆಎಂದು ಡಿ. ರೂಪಾ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಲ್ಲದೆ, ತಮ್ಮ ಬಳಿ ದಾಖಲೆ ಇದೆ ಎಂದೂ ಪ್ರತಿಪಾದಿಸಿದ್ದರು. ‘ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಕೈದಿಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಅವರಿಂದಲೇ ಕಾರಾಗೃಹದ ಪರಿಸ್ಥಿತಿ ಹದಗೆಟ್ಟಿದೆಎಂದೂ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದರಿಂದ ಸರ್ಕಾರ ಮುಜುಗರಕ್ಕೆ ಸಿಲುಕಿತ್ತು.   ಬಗ್ಗೆ ವಿಚಾರಣೆ ನಡೆಸಲು ವಿನಯಕುಮಾರ್ಅವರನ್ನು  ನೇಮಿಸಲಾಯಿತು. ಇಲಾಖೆಯ ನಿಯಮಗಳಿಗೆ ಹಾಗೂ ಶಿಸ್ತಿಗೆ ಬದ್ಧವಾಗಿ ನಡೆದುಕೊಳ್ಳಬೇಕಾದ ಹೊಣೆ ಹಿರಿಯ ಅಧಿಕಾರಿಗಳಾದ ರಾವ್ಹಾಗೂ ರೂಪಾ ಅವರದ್ದಾಗಿತ್ತುಇಬ್ಬರೂ  ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ ಎಂಬ ಆಪಾದನೆ ಇಬ್ಬರ ಮೇಲೂ ಇತ್ತು. ಸೇವಾ ನಿಯಮಗಳನ್ನು ಉಲ್ಲಂಘಿಸಿದ ಇಬ್ಬರಿಗೂ ವಿವರಣೆ ಕೇಳಿ ಇದೇ 14ರಂದು ನೋಟಿಸ್ಜಾರಿ ಮಾಡಲಾಗಿತ್ತು.


2008: ಹಿರಿಯ ನಟ- ನಿರ್ಮಾಪಕ ಮೈಸೂರು ಪುಟ್ಟಲಿಂಗಪ್ಪ (ಎಂ.ಪಿ.) ಶಂಕರ್ (73) ಈದಿನ ಮಧ್ನಾಹ್ಯ 2.30 ಕ್ಕೆ ಮೈಸೂರಿನ ಸ್ವಗೃಹದಲ್ಲಿ ನಿಧನರಾದರು. `ಭರಣಿ' ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ 16 ಚಿತ್ರಗಳನ್ನು ನಿರ್ಮಿಸಿದ ಶಂಕರ್ `ಕಳ್ಳರ ಕಳ್ಳ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಒಟ್ಟಾರೆ 108 ಚಿತ್ರಗಳಲ್ಲಿ ನಟಿಸಿದ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಖಳನಾಯಕರಲ್ಲಿ ಒಬ್ಬರು.

2007: ಆಗುಂಬೆ ಸಮೀಪದ ತಲ್ಲೂರು ಬಳಿಯ ಹುಲಗಾರಿನ ಗೌರಿಗುತ್ತಲ ದುರ್ಗಮ ಅರಣ್ಯದೊಳಗೆ ನಕ್ಸಲೀಯರು ಇರುವ ಸುಳಿವು ಅನುಸರಿಸಿ ನಿಖರ ಮಾಹಿತಿ ಸಂಗ್ರಹಿಸಲು ಮಫ್ತಿಯಲ್ಲಿ ಹೋಗಿದ್ದ ಮಾಳೂರು ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ ಸ್ಪೆಕ್ಟರ್ ವೆಂಕಟೇಶ್ ಅವರನ್ನು ನಕ್ಸಲೀಯರು ಗುಂಡು ಹಾರಿಸಿ ಕೊಲೆಗೈದರು.

2007: ವಿಧಾನಸೌಧದ ಎರಡನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 203ರಲ್ಲಿ ಈದಿನ ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ಹೊತ್ತಿಕೊಂಡು ಕಂಪ್ಯೂಟರ್ ಹಾಗೂ ಸರ್ವರ್ಗಳು ಸುಟ್ಟು ಭಸ್ಮವಾದವು.

2007: ಪರಮಾಣು ಇಂಧನ ಪೂರೈಕೆ ಗುಂಪಿನಲ್ಲಿ (ಎನ್ ಎಸ್ ಜಿ) ಪ್ರಮುಖ ಸದಸ್ಯರಾದ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಭವಿಷ್ಯದ ಯೋಜನೆಗಳನ್ನು ಒಪ್ಪಿಕೊಳ್ಳುವ ಮೂಲಕ ಭಾರತದೊಂದಿಗೆ ನಾಗರಿಕ ಪರಮಾಣು ಕ್ಷೇತ್ರದಲ್ಲಿ ಸಹಕರಿಸಲು ನಿರ್ಧರಿಸಿದವು. ಸುರಕ್ಷತಾ ಕ್ರಮಗಳ ಅಡಿಯಲ್ಲಿ ಸಾಧನ - ಸಲಕರಣೆ ಹಾಗೂ ಸೂಕ್ತ ತಂತ್ರಜ್ಞಾನ ಪೂರೈಕೆ ಮಾಡಿ, ಶಾಂತಿಯುತ ಕಾರಣಕ್ಕಾಗಿ ಬಳಸಲು ಅಣುಶಕ್ತಿ ಅಭಿವೃದ್ಧಿಪಡಿಸಲು ಮೂರು ದೇಶಗಳು ಸಮ್ಮತಿಸಿದವು.

2007: ಜಪಾನಿನ ವಾಯವ್ಯ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಕಶಿವಜಕಿಯಲ್ಲಿಲಿರುವ ಪರಮಾಣು ವಿದ್ಯುತ್ ಸ್ಥಾವರದಿಂದ ಸುಮಾರು 1200 ಲೀಟರಿನಷ್ಟು ಅಪಾಯಕಾರಿ ರೇಡಿಯೋ ವಿಕಿರಣಯುಕ್ತ ನೀರು ಸಮುದ್ರ ಸೇರಿದೆ ಎಂದು ಟೋಕಿಯೋ ಎಲೆಕ್ಟ್ರಿಕ್ ಕಂಪೆನಿ ಬಹಿರಂಗ ಪಡಿಸಿತು. ಭೂಕಂಪದಿಂದ ಸತ್ತವರ ಸಂಖ್ಯೆ 9ಕ್ಕೆ ಏರಿತು.

2006: ಇಂಡೋನೇಷ್ಯಾದ ಜಾವಾ ದ್ವೀಪ ಮತ್ತು ಆಸ್ಟ್ರೇಲಿಯಾದ ಕ್ರಿಸ್ ಮಸ್ ದ್ವೀಪದಲ್ಲಿ ಶಕ್ತಿಶಾಲಿ ಭೂಕಂಪ ಸಂಭವಿಸಿ, ಸಮುದ್ರದಲ್ಲಿ ಎದ್ದ ಸುನಾಮಿ ಅಲೆಗಳಿಗೆ ಸಿಲುಕಿ 327 ಮಂದಿ ಮೃತರಾಗಿ ಇತರ 40 ಜನ ಕಣ್ಮರೆಯಾದರು.

2006: ಕೃಷಿ ಸಬ್ಸಿಡಿ ಕಡಿತಕ್ಕೆ ಸಂಬಂಧಿಸಿದಂತೆ ತಮ್ಮ ಬಿಗಿ ನಿಲುವನ್ನು ಸಡಿಲಿಸಲು ಸೇಂಟ್ ಪೀಟರ್ಸ್ ಬರ್ಗಿನಲ್ಲಿ ನಡೆದ ಶೃಂಗಸಭೆಯಲ್ಲಿ ಜಿ-8 ರಾಷ್ಟ್ರಗಳು ಸಮ್ಮತಿಸಿದವು. ಇದರಿಂದಾಗಿ ನನೆಗುದಿಗೆ ಬಿದ್ದಿದ್ದ ಡಬ್ಲ್ಯೂಟಿಓ ಮಾತುಕತೆಗೆ ಮರುಜೀವ ದೊರೆಯಿತು.

2006: ಅಮೆರಿಕದ ಬಾಹ್ಯಾಕಾಶ ನೌಕೆ `ಡಿಸ್ಕವರಿ' ಹದಿಮೂರು ದಿನಗಳ ಯಾತ್ರೆಯನ್ನು ಯಶಸ್ವಿಗೊಳಿಸಿ ಫ್ಲೋರಿಡಾದಲ್ಲಿ ಸುರಕ್ಷಿತವಾಗಿ ಧರೆಗಿಳಿಯಿತು.

2006: ಛತ್ತೀಸ್ ಗಢದ ದಂಟೆವಾಡ ಜಿಲ್ಲೆಯಲ್ಲಿ ಎರ್ರಾಬೋರ್ ಸರ್ಕಾರಿ ನಿರಾಶ್ರಿತರ ಶಿಬಿರ ಒಂದರ ಮೇಲೆ ದಾಳಿ ನಡೆಸಿದ ಮಾವೋವಾದಿ ನಕ್ಸಲೀಯರು ಕನಿಷ್ಠ 33 ಮಂದಿ ಗುಡ್ಡಗಾಡು ಜನರನ್ನು ಕೊಂದು, 80ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದರು. 250ಕ್ಕೂ ಹೆಚ್ಚು ಗ್ರಾಮಸ್ಥರು ಕಣ್ಮರೆಯಾದರು.

1925: ಪ್ರಹ್ಲಾದಕುಮಾರ ಭಾಗೋಜಿ ಜನನ.

1910: ಸಾಹಿತಿ ಕೌಸಲ್ಯಾದೇವಿ ಜನನ.

1837: ಕನ್ನಡಕ್ಕಾಗಿ ದುಡಿದ ವಿದೇಶೀಯರಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದ ಬೆಂಜಮಿನ್ ಲೂಯಿ ರೈಸ್ (17-7-1837ರಿಂದ 10-7-1927) ದಿನ ಬೆಂಗಳೂರಿನಲ್ಲಿ ಬೆಂಜಮಿನ್ ಹೋಲ್ಡ್ ರೈಸ್ ಅವರ ಮಗನಾಗಿ ಜನಿಸಿದರು. ವಿದ್ಯಾ ಇಲಾಖೆಯ ಕಾರ್ಯದರ್ಶಿಯಾಗಿ ಕೊಡಗಿನ ಶಾಸನಗಳನ್ನು ಸಂಗ್ರಹಿಸಿ 1886ರಲ್ಲಿ `ಎಪಿಗ್ರಾಫಿಯ ಕರ್ನಾಟಕ' ಪ್ರಕಟಿಸಿ ಶಿಲಾ ಶಾಸನಗಳ ಪ್ರಕಟಣೆಗೆ ಇವರು ನಾಂದಿ ಹಾಡಿದ್ದರು. ಬಳಿಕ ಕನ್ನಡ ನಾಡಿನಲ್ಲೆಲ್ಲ ಸಂಚರಿಸಿ ಶಾಸನಗಳನ್ನು ಸಂಗ್ರಹಿಸಿ 12 ಸಂಪುಟಗಳನ್ನು ಪ್ರಕಟಿಸಿದರು. ಅವರು ಪ್ರಕಟಿಸಿದ ಒಟ್ಟು ಶಾಸನಗಳ ಸಂಖ್ಯೆ 8869. ಶಾಸನಗಳಲ್ಲದೆ ಪ್ರಾಚೀನ ಕನ್ನಡ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ ಅವರು ತಾಳೆಗರಿ ಗ್ರಂಥಗಳನ್ನು ಸಂಗ್ರಹಿಸಿ ಅವುಗಳನ್ನು ಕಾಪಾಡಿ ಇಡಲು `ಓರಿಯಂಟಲ್ ಲೈಬ್ರರಿ' ಎಂದು ಗ್ರಂಥಭಂಡಾರವನ್ನೂ ಸ್ಥಾಪಿಸಿದ್ದರು.


No comments:

Post a Comment