ನಾನು ಮೆಚ್ಚಿದ ವಾಟ್ಸಪ್

Monday, July 29, 2019

ಇಂದಿನ ಇತಿಹಾಸ History Today ಜುಲೈ 29

2019: ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯವನ್ನು ಮಂಡಿಸಿ ಯಶಸ್ವಿಯಾಗಿ ಬಹುಮತ ಸಾಬೀತು ಪಡಿಸಿದರು.ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ ಕುಮಾರ್ ಅವರು ವಿಶ್ವಾಸಮತವನ್ನು ಧ್ವನಿಮತಕ್ಕೆ ಹಾಕಿ ಅದು ಅಂಗೀಕೃತವಾಗಿದೆ ಎಂದು ಘೋಷಿಸಿದರು.ವಿಶ್ವಾಸಮತ ನಿರ್ಣಯದ ಅಂಗೀಕಾರ ಬಳಿಕ ಮುಖ್ಯಮಂತ್ರಿಯವರು ಪೂರಕ ಧನ ವಿನಿಯೋಗ ಗೊತ್ತುವಳಿಯನ್ನು ಮಂಡಿಸಿದರು. ಹೆಚ್ಚಿನ ಚರ್ಚೆ ಇಲ್ಲದೆ ಸದನವು ಮೂರು ತಿಂಗಳ ಅವಧಿಗೆ ಲೇಖಾನುದಾನಕ್ಕೆ ಸರ್ವಾನುಮತದ ಅನುಮೋದನೆ ನೀಡಿತು.ಎಚ್.ಡಿ. ಕುಮಾರ ಸ್ವಾಮಿ ನೇತೃತ್ವದ ಕಾಂಗ್ರೆಸ್- ಜನತಾದಳ (ಎಸ್) ಮೈತ್ರಿ ಸರ್ಕಾರವು ವಿಶ್ವಾಸಮತದಲ್ಲಿ ಸೋಲು ಅನುಭವಿಸಿ ಪತನಗೊಂಡ ಬಳಿಕ ಯಡಿಯೂರಪ್ಪ 2019 ಜುಲೈ 27 ಶುಕ್ರವಾರ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.ಯಡಿಯೂರಪ್ಪ ವಿಶ್ವಾಸಮತ ಯಾಚನೆಗೆ ಒಂದು ದಿನ ಮುಂಚಿತವಾಗಿ ಸಭಾಧ್ಯಕ್ಷ ರಮೇಶ ಕುಮಾರ್ ಅವರು 14 ಮಂದಿ ಬಂಡಾಯ ಶಾಸಕರನ್ನು ಶಾಸಕತ್ವದಿಂದ ಅನರ್ಹಗೊಳಿಸಿದ್ದರು. ವಿಶ್ವಾಸ ಮತ ಯಾಚನೆ ಮತ್ತು ಧನ ವಿನಿಯೋಗ ಗೊತ್ತುವಳಿ ನಿರ್ಣಯದ ಬಳಿಕ ಸದನ್ನು ಉದ್ದೇಶಿಸಿ ಸಂಕ್ಷಿಪ್ತ  ವಿದಾಯ ಭಾಷಣ ಮಾಡಿದ ಸಭಾಧ್ಯಕ್ಷ ಕೆ.ಆರ್. ರಮೇಶ ಕುಮಾರ್ ಅವರು ಸಭಾಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.

2019: ನವದೆಹಲಿ: ರಾಯ್ ಬರೇಲಿಯಲ್ಲಿ ಹಿಂದಿನ ದಿನ  ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಸ್ಥಿತಿ ಇನ್ನೂ ಚಿಂತಾಜನಕವಾಗಿಯೇ ಇದ್ದು, ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಲಿದೆ. ಈ ಮಧ್ಯೆ, ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಮತ್ತು ಇತರ ೧೦ ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿದವು. ಅತ್ಯಾಚಾರ ಸಂತ್ರಸ್ಥೆಯ ಕುಟುಂಬ ನೀಡಿದ ದೂರನ್ನು ಅನುಸರಿಸಿ ಸೆರೆಮನೆಯಲ್ಲಿರುವ  ಶಾಸಕ ಮತ್ತು ೧೦ ಮಂದಿ ಸಹಚರರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದರು. ಅಪಘಾತ ಘಟನೆಯಲ್ಲಿ ಅತ್ಯಾಚಾರ ಸಂತ್ರಸ್ಥೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದು, ಸಂತ್ರಸ್ಥೆ ಹಾಗೂ ಆಕೆಯ ವಕೀಲರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಜೀವರಕ್ಷಕ ವ್ಯವಸ್ಥೆ ಒದಗಿಸಲಾಯಿತು. ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ತನ್ನ ಕುಟುಂಬದ ಸದಸ್ಯರು ಹಾಗೂ ವಕೀಲರ ಜೊತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿತ್ತು.  ಅತ್ಯಾಚಾರ ಸಂತ್ರಸ್ಥೆಯ ಜೊತೆಗೆ ಆಕೆಯ ರಕ್ಷಣೆಗಾಗಿ ಒದಗಿಸಲಾಗಿದ್ದ ಪೊಲೀಸ್ ಪೇದೆ ಇದ್ದನೆನ್ನಲಾಗಿದ್ದು, ಕಾರಿಗೆ ಡಿಕ್ಕಿ ಹೊಡೆದ ಟ್ರಕ್ಕಿನ ನಂಬರ್ ಪ್ಲೇಟಿಗೆ  ಕಪ್ಪು ಬಣ್ಣ ಬಳಿಯಲಾಗಿತ್ತು ಎಂದು ವರದಿಗಳು ತಿಳಿಸಿದವು. ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಮಹಿಳೆ ಮತ್ತು ಆಕೆಯ ವಕೀಲ ಅಪಘಾತದಲ್ಲಿ ಗಾಯಗೊಂಡಿದ್ದು, ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರು. ಚಿಕ್ಕಮ್ಮಂದಿರ ಪೈಕಿ ಒಬ್ಬಾಕೆ ಸೆಂಗರ್ ವಿರುದ್ಧದ ಪ್ರಕರಣದಲ್ಲಿ ಸಾಕ್ಷಿಯಾಗಿದ್ದರು ಎನ್ನಲಾಯಿತು. ಮಹಿಳೆ, ಆಕೆಯ ವಕೀಲ ಮತ್ತು ಇಬ್ಬರು ಚಿಕ್ಕಮ್ಮಂದಿರು ಫತೇಪುರದಿಂದ ರಾಯ್ ಬರೇಲಿ ಸೆರೆಮನೆಗೆ ಆಕೆಯ ಚಿಕ್ಕಪ್ಪ ಮಹೇಶ ಸಿಂಗ್ ಭೇಟಿಗಾಗಿ ಪ್ರಯಾಣ ಹೊರಟಿದ್ದಾಗ ಈ ಅಪಘಾತ ಸಂಭವಿಸಿತ್ತು. ತಾಯಿಯ ಆರೋಪ: ’ಅದು ಅಪಘಾತವಲ್ಲ, ನಮ್ಮೆಲ್ಲರನ್ನೂ ನಿರ್ಮೂಲನಗೊಳಿಸಲು ನಡೆದಿರುವ ಸಂಚು ಎಂದು ಅತ್ಯಾಚಾರ ಸಂತ್ರಸ್ಥೆಯ ತಾಯಿ ಹೇಳಿದರು. ’ಪ್ರಕರಣದ ಸಹ ಆರೋಪಿಯ ಪುತ್ರ ಶಾಹಿ ಸಿಂಗ್ ಮತ್ತು ಗ್ರಾಮದ ಇನ್ನೊಬ್ಬ ಯುವಕ ನಮಗೆ ಬೆದರಿಕೆ ಹಾಕಿದ್ದರು. ನಮ್ಮನ್ನು ನೋಡಿಕೊಳ್ಳುವುದಾಗಿ ಅವರು ಹೇಳಿದ್ದರು ಎಂದು ಆಕೆ ನುಡಿದರು. ಉನ್ನಾವೋದ ಮಖಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ಮಹಿಳೆ, ೨೦೧೭ರಲ್ಲಿ ಉತ್ತರ ಪ್ರದೇಶದ ಬೆಂಗೆರೆಮಾವು ಕ್ಷೇತ್ರವನ್ನು ನಾಲ್ಕು ಅವಧಿಗಳಿಂದ ಪ್ರತಿನಿಧಿಸುತ್ತಿರುವ ಶಾಸಕರ ಸೆಂಗರ್ ಅವರು ತಮ್ಮ ನಿವಾಸದಲ್ಲಿ ಹದಿ ಹರೆಯದ ತನ್ನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆಪಾದಿಸಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂಭಾಗದಲ್ಲಿ ಅತ್ಯಾಚಾರ ಸಂತ್ರಸ್ಥೆ ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಬಳಿಕ ಈ ಪ್ರಕರಣ ಬಹಿರಂಗಕ್ಕೆ ಬಂದಿತ್ತು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಮಹಿಳೆಯ ತಂದೆ ಪೊಲೀಸ್ ವಶದಲ್ಲಿದ್ದಾಗಲೇ ಸಾವನ್ನಪ್ಪಿದ್ದರು. ಆತನನ್ನು ಅತುಲ್ ಸೆಂಗರ್ ಮತ್ತು ಸಹಚರು ಥಳಿಸಿದ್ದರು ಎಂದು ಆಪಾದಿಸಲಾಗಿತ್ತು ಮತ್ತು ಮರಣೋತ್ತರ ಪರೀಕ್ಷಾ ವರದಿ ತೀವ್ರ ಗಾಯಗಳಿದುದನ್ನು ತೋರಿಸಿತ್ತು.

2019: ಚಂಡೀಗಢ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಪ್ರಿಯಾಂಕಾ ಗಾಂಧಿ ವಾದ್ರ ಅವರು ಎಲ್ಲ ಕಡೆಯಿಂದಲೂ ಬೆಂಬಲ ಪಡೆಯಬಲ್ಲರು ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಹೇಳಿದರು. ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದ ಬಳಿಕ ಅವರ ಸ್ಥಾನಕ್ಕೆ ಯುವ ನಾಯಕರು ಬರಬೇಕು ಎಂಬುದಾಗಿ ಪ್ರತಿಪಾದಿಸಿದ ಮೊದಲ ಕಾಂಗ್ರೆಸ್ ನಾಯಕರ ಪೈಕಿ ಒಬ್ಬರಾದ ಕ್ಯಾಪ್ಟನ್ ಸಿಂಗ್ ಅವರು ’ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಲು ಪ್ರಿಯಾಂಕಾ ಗಾಂಧಿ ಅವರು ಅತ್ಯುತ್ತಮ ಆಯ್ಕೆ. ಆದರೆ ನಿರ್ಧಾರ ಪಕ್ಷದ ಉನ್ನತ ನೀತಿ ನಿರೂಪಣಾ ಸಮಿತಿಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಬಿಟ್ಟದ್ದು ಎಂದು ಅವರು ಸ್ಪಷ್ಟ ಪಡಿಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ೫೪೫ ಸದಸ್ಯ ಬಲದ ಲೋಕಸಭೆಗೆ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷವು ಕೇವಲ ೫೨ ಸ್ಥಾನಗಳನ್ನು ಗೆದ್ದ ಬಳಿಕ ಹೀನಾಯ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಉನ್ನತ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದರು.  ಹುದ್ದೆಯಲ್ಲಿ ಮುಂದುವರೆಯುವಂತೆ ರಾಹುಲ್ ಗಾಂಧಿ ಅವರ ಮನ ಒಲಿಸಲು ಕಾಂಗ್ರೆಸ್ ನಾಯಕರು ಹೊರಸಾಹಸ ಪಟ್ಟರು. ಪಕ್ಷದ ಪುನಾರಚನೆಗೆ ಮುಕ್ತ ಅಧಿಕಾರವನ್ನೂ ನೀಡಿದರು. ಆದರೆ ೪೯ರ ಹರೆಯದ ಕಾಂಗ್ರೆಸ್ ಮುಖ್ಯಸ್ಥ ಸಾಮಾಜಿಕ  ಜಾಲತಾಣದಲ್ಲಿ ೪ ಪುಟಗಳ ತಮ್ಮ ವಿದಾಯ ಪತ್ರವನ್ನು ಈ ಮಾಸದ ಆರಂಭದಲ್ಲಿ ಪ್ರಕಟಿಸುವ ಮೂಲಕ ತಮ್ಮ ಮನಸ್ಸು ಬದಲಾಯಿಸುವುದಿಲ್ಲ ಎಂಬುದನ್ನು ಖಚಿತ ಪಡಿಸಿದ್ದರು. ಪತ್ರದಲ್ಲಿ ರಾಹುಲ್ ಅವರು ತಮ್ಮ ನಿರ್ಧಾರ ಮತ್ತು ಅದಕ್ಕೆ ಕಾರಣಗಳನ್ನು ಸ್ಪಷ್ಟ ಪಡಿಸಿದ್ದರು.
ರಾಹುಲ್ ಗಾಂಧಿ ಅವರ ಸ್ಥಾನಕ್ಕೆ ಬೇರೆ ನಾಯಕನ ಆಯ್ಕೆ ಸಲುವಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಪಕ್ಷವು ಇನ್ನೂ ಕರೆದಿಲ್ಲ. ಪಕ್ಷದ ಹುನ್ನತ ಹುದ್ದೆಯಲ್ಲಿನ ಶೂನ್ಯವನ್ನು ತುಂಬುವ ಬಗ್ಗೆ ಕಾಂಗ್ರೆಸ್ ನಾಯಕರಿಂದ ಹಲವಾರು ಹೇಳಿಕೆಗಳು ಬಂದಿವೆ. ಪಕ್ಷ ನಾಯಕತ್ವವು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂಬ ಸಲಹೆಗಳನ್ನೂ ಅವು ಮಾಡಿದ್ದವು. ಕೇರಳದ ಹಿರಿಯ ಶಾಸನಕರ್ತ ಶಶಿ ತರೂರ್ ಅವರು ಕಳೆದ ವಾರಂತ್ಯದಲ್ಲಿ ಈ ವಿಚಾರವಾಗಿ ಬಹಿರಂಗ ಚರ್ಚೆಗೆ ನಾಂದಿ ಹಾಡಿ, ರಾಹುಲ್ ಗಾಂಧಿ ಅವರ ಉತ್ತರಾಧಿಕಾರಿ ಬಗ್ಗೆ ಸ್ಪಷ್ಟತೆ ಇಲ್ಲದೇ ಇರುವುದು ಪಕ್ಷಕ್ಕೆ ಹಾನಿ ಉಂಟು ಮಾಡುತ್ತಿದೆ ಎಂದು ಹೇಳಿದ್ದರು. ಸಹಜ ವರ್ಚಸ್ಸು ಹೊಂದಿರುವ ಪ್ರಿಯಾಂಕಾ  ಗಾಂಧಿ ವಾದ್ರ ಅವರು ಪ್ರಮುಖ ಪಾತ್ರವನ್ನು ವಹಿಸುವರು ಎಂಬುದು ತಮ್ಮ ಆಶಯ ಎಂದು ನುಡಿದ ಅವರು ಪಕ್ಷದ ಉನ್ನತ ಹುದ್ದೆಗಾಗಿ ಚುನಾವಣೆಗಳು ನಡೆದಾಗ ಪ್ರಿಯಾಂಕಾ ಅವರು ’ರಿಂಗಿಗೆ ತಮ್ಮ ಹ್ಯಾಟ್ ಎಸೆಯುವರು ಎಂದು ಭಾವಿಸುವೆ ಎಂದು ಹೇಳಿದ್ದರು. ತರೂರ್ ಅವರ ಹೇಳಿಕೆಯ ಬಗ್ಗೆ ಪ್ರಶ್ನಿಸಿದಾಗ, ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ’ಪ್ರಿಯಾಂಕಾ ಅವರು ಸಮರ್ಪಕವಾದ ಆಯ್ಕೆ ಎಂದು ಹೇಳಿದರು. ಪ್ರಿಯಾಂಕಾ ಗಾಂಧಿಯವರು ಪಕ್ಷದ ನಾಯಕತ್ವ ವಹಿಸಲು ಯೋಗ್ಯವಾದ ವ್ಯಕ್ತಿಯಾಗಿದ್ದಾರೆ. ಪಕ್ಷವನ್ನು ಮರು ನಿರ್ಮಾಣ ಮಾಡಲು ಚುರುಕಾದ ಯುವ ನಾಯಕ ಬೇಕು ಎಂದು ಕ್ಯಾಪ್ಟನ್ ನುಡಿದರು. ಆಕೆಗೆ ಬುದ್ದಿವಂತಿಕೆ ಮತ್ತು ದೇಶದ ಅಗತ್ಯಗಳಿಗೆ ಸಂಬಂಧಿಸಿದಂತೆ ಅರ್ಥ ಮಾಡಿಕೊಳ್ಳುವ ಹಾಗೂ ಅದನ್ನು ಹೊಂದಿಸುವ ಜಾಣ್ಮೆ ಇದೆ. ಯಾವುದೇ ಸವಾಲನ್ನು ಎದುರಿಸಿ ವಿಜಯ ಸಾಧನೆಯತ್ತ ಹೋರಾಟವನ್ನು ಮುನ್ನಡೆಸುವ ಛಾತಿ ಇದೆ ಎಂದು ಮುಖ್ಯಮಂತ್ರಿಯನ್ನು ಉಲ್ಲೇಖಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ.

2019: ನವದೆಹಲಿ: ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ತಮ್ಮನ್ನು ವಿಧಾನಸಭೆಯಿಂದ ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ ಕುಮಾರ್ ಅವರ ತೀರ್ಪನ್ನು ಪ್ರಶ್ನಿಸಿ ಅನರ್ಹಗೊಂಡ ೧೭ ಶಾಸಕರಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು.
ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು. ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಮೈತ್ರಿ ಸರ್ಕಾರ ವಿಫಲಗೊಂಡ ಮರುದಿನ ಜುಲೈ ೨೫ರ ಗುರುವಾರ  ಮೊದಲ ಹಂತದಲ್ಲಿ ಸಭಾಧ್ಯಕ್ಷ ರಮೇಶ ಕುಮಾರ್ ಅವರು ಮೂವರು ಶಾಸಕರನ್ನು ಅನರ್ಹಗೊಳಿಸಿ ಆದೇಶಿಸಿದ್ದರು. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮೂವರು ಶಾಸಕರನ್ನು ೧೫ ನೇ ವಿಧಾನಸಭೆ ಅವಧಿ (೨೦೨೩) ಮುಗಿಯುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಿ ಅನರ್ಹಗೊಳಿಸಲಾಗಿತ್ತು.  ರಮೇಶ ಜಾರಕಿಹೊಳಿ ಹಾಗೂ ಮಹೇಶ ಕುಮಠಳ್ಳಿ ಅವರನ್ನು ಅನರ್ಹಗೊಳಿಸುವಂತೆ ಫೆಬ್ರುವರಿಯಲ್ಲೇ ಕಾಂಗ್ರೆಸ್ ನಾಯಕರು ಮನವಿ ಸಲ್ಲಿಸಿದ್ದರು. ಜುಲೈಯಲ್ಲಿ ಇವರಿಬ್ಬರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅನರ್ಹಗೊಳಿಸುವ ಅರ್ಜಿ ಮೊದಲು ಸಲ್ಲಿಕೆಯಾಗಿದ್ದರಿಂದ ಅದನ್ನು ಕೈಗೆತ್ತಿಕೊಂಡು ಅವರನ್ನು ವಿಚಾರಣೆಗೆ ಕರೆಯಲಾಯಿತು. ಅವರು ಹಾಜರಾಗಲಿಲ್ಲ. ಅವರ ನಡವಳಿಕೆ, ಬೇರೆ ಪಕ್ಷದ ಜತೆಗೆ ಗುರುತಿಸಿಕೊಂಡಿರುವುದು ಮತ್ತು ಹೇಳಿಕೆಗಳನ್ನು ಆಧರಿಸಿ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ರಮೇಶ ಕುಮಾರ್ ವಿವರಿಸಿದ್ದರು.  ಈಮಧ್ಯೆ, ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಮತ್ತೊಬ್ಬ ಶಾಸಕ ಉಮೇಶ ಜಾದವ್ ನೀಡಿದ್ದ ರಾಜೀನಾಮೆಯನ್ನು ಸಭಾಧ್ಯಕ್ಷರು ಅಂಗೀಕರಿಸಿದ್ದರು. ಇದನ್ನು ಗಮನಿಸಿದರೆ, ಅನರ್ಹತೆಯ ಆದೇಶ ಕಾನೂನುಬದ್ಧವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ವಿವರಿಸಿದರು. ಸಭಾಧ್ಯಕ್ಷರು ಕಾಂಗ್ರೆಸ್ ಪಕ್ಷದ ಪ್ರಚೋದನೆಯ ಮೇರೆಗೆ ಅವಸರ ಅವಸರವಾಗಿ ಅನರ್ಹಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ಸಭಾಧ್ಯಕ್ಷರು ಜುಲೈ ತಿಂಗಳಲ್ಲಿ ತಾವು ನೀಡಿದ್ದ ರಾಜೀನಾವೆಗಳನ್ನು ವಿಫಲಗೊಳಿಸಲು, ೨೦೧೯ರ ಫೆಬ್ರುವರಿಯಲ್ಲಿ ತಮ್ಮ ವಿರುದ್ಧ ನೀಡಲಾಗಿದ್ದ ಅನರ್ಹತೆ ಪ್ರಕ್ರಿಯೆಗೆ ಜೀವ ನೀಡಿದರು. ಮತ್ತು ಸಹಜ ನ್ಯಾಯದ ತತ್ವವನ್ನು ಮೂಲೆಗೆ ತಳ್ಳಿ ಅವಸರ ಅವಸರವಾಗಿ ಅನರ್ಹಗೊಳಿಸಿದರು ಎಂದು ಅರ್ಜಿದಾರರು ತಿಳಿಸಿದರು. ಅರ್ಜಿದಾರರು ವಿಧಾನಸಭಾಧ್ಯಕ್ಷರ ಹೊರತಾಗಿ ಕರ್ನಾಟಕ ಸರ್ಕಾರ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ ಗುಂಡೂರಾವ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದರು. ಅನರ್ಹಗೊಂಡಿರುವ ಆರ್. ಶಂಕರ್ ಸೇರಿದಂತೆ ಇನ್ನಷ್ಟು ಶಾಸಕರು ಕೂಡಾ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ನಿರೀಕ್ಷೆ ಇದೆ. ಹಾಲಿ ಅರ್ಜಿಯಲ್ಲಿ ಇಬ್ಬರು ಶಾಸಕರು ೧೫ನೇ ಕರ್ನಾಟಕ ಶಾಸನ ಸಭೆಯಿಂದ ತಮ್ಮನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಜುಲೈ ೨೫ರ ನಿರ್ಧಾರವನ್ನು ರದ್ದುಪಡಿಸುವಂತೆ ನ್ಯಾಯಾಲಯವನ್ನು ಕೋರಿದರು.  ತಮ್ಮ ರಾಜೀನಾಮೆಗಳು ಸ್ವ ಇಚ್ಛೆಯವು ಅಥವಾ ನೈಜವಾದವು ಅಲ್ಲ ಎಂಬುದಾಗಿ ಸಭಾಧ್ಯಕ್ಷರು ಕೈಗೊಂಡಿರುವ ತೀರ್ಮಾನವನ್ನು ಅವರು ಪ್ರಶ್ನಿಸಿದ್ದಾರೆ. ತಮ್ಮ ರಾಜೀನಾಮೆ ಮತ್ತು ಅನರ್ಹತೆಗೆ ಸಂಬಂಧಿಸಿದ ಕಲಾಪಗಳ ದಾಖಲೆಗಳನ್ನು ತರಿಸಿಕೊಳ್ಳುವಂತೆ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಸಂವಿಧಾನದ ಹತ್ತನೇ ಶೆಡ್ಯೂಲಿನ ಅಡಿಯಲ್ಲಿ ನೀಡಲಾಗಿರುವ ಅನರ್ಹತೆಯ ಆದೇಶವು ೧೯೮೬ರ ಕರ್ನಾಟಕ ಶಾಸನಸಭೆಯ (ಪಕ್ಷಾಂತರ ನೆಲೆಯಲ್ಲಿ ಸದಸ್ಯರ ಅನರ್ಹತೆ) ನಿಯಮಾವಳಿಗಳಿಗಳ ೬ ಮತ್ತು ೭ನೇ ನಿಯಮಗಳಿಗೆ ಪೂರಕವಾಗಿಲ್ಲ, ವಿಷಯವನ್ನು ವಿಚಾರಣೆಗೆ ಎತ್ತಿಕೊಳ್ಳುವುದಕ್ಕೆ ಮುನ್ನ ತಮಗೆ ಏಳು ದಿನಗಳ ನೋಟಿಸ್ ನೀಡಲಾಗಿಲ್ಲ ಎಂದು ಅವರು ಪ್ರತಿಪಾದಿಸಿದರು. ವಾಸ್ತವವಾಗಿ ಕಲಾಪಗಳ ಕುರಿತು ಸಕಾಲಿಕ ನೋಟಿಸ್ ತಮಗೆ ತಲುಪಿಯೇ ಇಲ್ಲ ಎಂದು ಅರ್ಜಿದಾರರು ಹೇಳಿದರು.  ಜುಲೈ ೨೩ರಂದು ಸಭಾದ್ಯಕ್ಷರ ಮುಂದೆ ಹಾಜರಾಗುವಂತೆ ಸೂಚಿಸಿ ಜುಲೈ ೧೮ರಂದು ತಲುಪಿದ ಒಂದು ನೋಟಿಸ್ ಕೂಡಾ ಸಂಪೂರ್ಣವಾಗಿ ಅಸಮರ್ಪಕವಾಗಿತ್ತು ಎಂದು ಅರ್ಜಿದಾರರು ಸುಪ್ರೀಂಕೋರ್ಟಿಗೆ ತಿಳಿಸಿದರು. ತಮ್ಮ ರಾಜೀನಾಮೆಗಳ ಬಗ್ಗೆ ನಿರ್ಧರಿಸುವಾಗ ಸಭಾಧ್ಯಕ್ಷರು ’ಸಂಚಾರೀ ತನಿಖೆಯಲ್ಲಿ ನಿರತರಾಗಿದ್ದರು. ಅರ್ಜಿದಾರರು ರಾಜೀನಾಮೆಗಳನ್ನು ಸಲ್ಲಿಸುವ ಹಿಂದಿನ ಉದ್ದೇಶ ಮತ್ತು ಆರೋಪಿತ ವರ್ತನೆಯನ್ನು ನೆಚ್ಚಿಕೊಳ್ಳಲು ಸಭಾಧ್ಯಕ್ಷರು ಬಯಸಿದ್ದರು. ಶಾಸಕರ ರಾಜೀನಾಮೆಯು ಸ್ವ ಇಚ್ಛೆಯದೋ ಮತ್ತು ನೈಜವಾದದ್ದೋ ಎಂಬುದನ್ನು ತೀರ್ಮಾನಿಸಲು ರಾಜೀನಾಮೆಯ ಹಿಂದಿನ ಉದ್ದೇಶವನ್ನು ತಿಳಿಯಬೇಕಾದುದಕ್ಕೂ ಸಂಬಂಧವೇ ಇಲ್ಲ ಎಂದು ಅರ್ಜಿದಾರರು ಹೇಳಿದರು.
ಸಭಾಧ್ಯಕ್ಷರ ಈ ವರ್ತನೆ ನಿರಂಕುಶವಾದದ್ದು ಮತ್ತು ಅವಿವೇಕದ್ದು ಮತ್ತು ಸಂವಿಧಾನದ ೧೪ನೇ ವಿಧಿಗೆ ವಿರುದ್ಧವಾದದ್ದು ಎಂದು ಅರ್ಜಿದಾರರು ವಾದಿಸಿದರು. ಅಲ್ಲದೆ, ನಾವು ಜುಲೈ ೬ರಂದು ರಾಜೀನಾಮೆ ನೀಡಿದ್ದು ಮಾತ್ರವಲ್ಲ, ಜುಲೈ ೧೧ರಂದು ಸಭಾಧ್ಯಕ್ಷರ ಮುಂದೆ ಖುದ್ದು ಹಾಜರಾಗಿ ರಾಜೀನಾಮೆಯನ್ನು ದೃಢಪಡಿಸಿದ್ದೇವೆ. ಸಂವಿಧಾನದ ೧೯೦ನೇ ವಿಧಿಯ ಅಡಿಯಲ್ಲಿ ರಾಜೀನಾಮೆ ಸಲ್ಲಿಸಲಾಗಿದೆ.   ಕರ್ನಾಟಕ ಶಾಸನಸಭೆಯ ನಿಯಮ ೨೦೨ರ ಪ್ರಕಾರ ಸದಸ್ಯನು ಸ್ವಹಸ್ತಕ್ಷರದಲ್ಲಿ ಬರೆದ ರಾಜೀನಾಮೆಯನ್ನು ಸ್ವತಃ ಸಭಾಧ್ಯಕ್ಷರಿಗೆ ಸಲ್ಲಿಸಬಹುದು ಮತ್ತು ಸಭಾಧ್ಯಕ್ಷರು ರಾಜೀನಾಮೆಯ ನೈಜತೆಯನ್ನು ಮತ್ತು ಸ್ವಯಂ ಇಚ್ಛೆಯದೋ ಎಂಬುದನ್ನು ತನಗೆ ತಾನೇ ಖಚಿತ ಪಡಿಸಿಕೊಳ್ಳಬೇಕು ಅಷ್ಟೇ ಎಂದು ಅರ್ಜಿದಾರರು ತಿಳಿಸಿದರು. ಸಭಾಧ್ಯಕ್ಷರು ’ಆಯ್ದು ಆಯ್ಕೆ ಮಾಡಿಕೊಳ್ಳುವ ನೀತಿ ಅನುಸರಿಸಿದ್ದಾರೆ ಎಂದೂ ಶಾಸಕರು ದೂರಿದರು.  ರಮೇಶ ಕುಮಾರ್ ಅವರು ಇನ್ನೊಬ್ಬ ಶಾಸಕ ಉಮೇಶ ಜಾಧವ್ ಅವರ ಅನರ್ಹತೆಯ ಅರ್ಜಿ ತಮ್ಮ ಮುಂದೆ ಬಾಕಿ ಇದ್ದರೂ ಅಂಗೀರಿಸಿದ್ದಾರೆ ಎಂದು ಅರ್ಜಿದಾರರು ಉಲ್ಲೇಖಿಸಿದರು. ಜುಲೈ ೬ರಂದು ಶಾಸಕರು ರಾಜೀನಾಮೆ ನೀಡಲು ಹೋದಾಗ ಸಭಾಧ್ಯಕ್ಷರು ಕಚೇರಿಯಿಂದ ಹೊರಹೋಗಿದ್ದರು. ಜುಲೈ ೧೧ರಂದು ಅದೇ ದಿನ ರಾಜೀನಾಮೆ ಬಗ್ಗೆ ತೀರ್ಮಾನಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿದಾಗಲೂ ಸಭಾಧ್ಯಕ್ಷರು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲಿಲ್ಲ. ಜುಲೈ ೧೮ರಂದು ನಡೆಯಬೇಕಾಗಿದ್ದ ಸದನ ಬಲಾಬಲ ಪರೀಕ್ಷೆಯನ್ನು ವಿನಾಕಾರಣ ವಿಳಂಬಿಸಲಾಯಿತು ಎಂದೂ ಅರ್ಜಿ ಹೇಳಿತು. ಈ ಮಧ್ಯೆ, ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ’ಹೆಚ್ಚುವರಿ ಕಾರಣಗಳನ್ನು ಕಾಂಗ್ರೆಸ್ ಪಕ್ಷವು ಜುಲೈ ೨೨ರಂದು ಸಲ್ಲಿಸಿತು. ಶಾಸಕರನ್ನು ವಿಧಾನಸಭೆಯ ಕಲಾಪಗಳಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಜುಲೈ ೧೭ರಂದು ನೀಡಿದ್ದ ಆದೇಶದ ಹೊರತಾಗಿಯೂ ಕಾಂಗ್ರೆಸ್ ಈ ಹೆಚ್ಚುವರಿ ಕಾರಣಗಳನ್ನು ಸಲ್ಲಿಸಿತು. ಏನಿದ್ದರೂ ಈ ಹೆಚ್ಚುವರಿ ಕಾರಣಗಳು ಅಂತಿಮವಾಗಿ ತಮ್ಮನ್ನು ಸದನದಿಂದ ನಿಷೇಧಿಸಲು ಬುನಾದಿಯಯಿತು ಎಂದು ಅರ್ಜಿದಾರರು ಹೇಳಿದರು. ಶಾಸಕರನ್ನು ವಿಧಾನಸಭಾ ಕಲಾಪಗಳಲ್ಲಿ ಪಾಲ್ಗೊಳ್ಳುವಂತೆ ಬಲಾತ್ಕರಿಸುವಂತಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ನಿರ್ದೇಶನ ಕೊಟ್ಟಿದ್ದಾಗ, ಸಭಾಧ್ಯಕ್ಷರು ಕಾಂಗ್ರೆಸ್ ಪಕ್ಷವು ನೀಡಿದ್ದ ವಿಪ್‌ನ್ನು ಆಧರಿಸಿ ಅನರ್ಹಗೊಳಿಸಬಾರದಾಗಿತ್ತು. ವಿಪ್‌ನ ಗುರಿ ಅರ್ಜಿದಾರರನ್ನು ಸದನಕ್ಕೆ ಹಾಜರಾಗುವಂತೆ ಒತ್ತಡ ಬೀರುವುದಾಗಿತ್ತು ಎಂದು ಅರ್ಜಿ ಹೇಳಿತು.
೨೦೧೯ರ ಜನವರಿ-ಫೆಬ್ರುವರಿಯಲ್ಲಿ ವಿಧಾನಸಭೆಯ ಹೊರಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲಿಲ್ಲ ಎಂಬುದು ಅನರ್ಹತೆಗೆ ನೀಡಲಾಗಿರುವ ಮೂಲ ಕಾರಣವಾಗಿದೆ. ಸದಸ್ಯನೊಬ್ಬ ಪಕ್ಷದ ಸಭೆಗೆ ಗೈರುಹಾಜರಾದ ಮಾತ್ರಕ್ಕೆ ಆತ ರಾಜಕೀಯ ಪಕ್ಷವನ್ನು ಬಿಟ್ಟಿದ್ದಾನೆ ಎಂಬ ತೀರ್ಮಾನಕ್ಕೆ ಬರಲಾಗದು. ಸಭೆಯಲ್ಲಿ ಹಾಜರಾಗದೇ ಇರಲು ಕಾರಣವೇನು ಎಂಬ ಬಗ್ಗೆ  ಅವರು ಪಕ್ಷ ನಾಯಕನಿಗೆ ಲಿಖಿತ ಪತ್ರಗಳನ್ನು ಸಲ್ಲಿಸಿದ್ದರು. ಈ ಆರೋಪವೊಂದರ ಹೊರತಾಗಿ ಪ್ರತಿವಾದಿಗಳು ತಮ್ಮ ಆರೋಪಗಳನ್ನು ಸಮರ್ಥಿಸುವಂತಹ ಯಾವುದೇ ಮಾಹಿತಿಯನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅರ್ಜಿ ತಿಳಿಸಿತು.

2018: ನವದೆಹಲಿ: ರೈತರನ್ನು ನಿರ್ಲಕ್ಷಿಸಿ, ಕೈಗಾರಿಕೋದ್ಯಮಿಗಳಿಗೆ ಹತ್ತಿರವಾಗಿದ್ದಾರೆ ಎಂದು ತಮ್ಮ ವಿರುದ್ಧ ಹರಿಹಾಯುತ್ತಿರುವ ವಿರೋಧ ಪಕ್ಷಗಳಿಗೆ ಇಲ್ಲಿ ಪ್ರಖರ ಎದಿರೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ, ’ಕೈಗಾರಿಕೋದ್ಯಮಿಗಳ ಜೊತೆ ಬೆರೆಯುವುದರಲ್ಲಿ ತಪ್ಪೇನಿಲ್ಲ, ಮಹಾತ್ಮ ಗಾಂಧಿ ಕೂಡಾ ಬಿರ್ಲಾ ಕುಟುಂಬದ ಜೊತೆ ಬೆರೆಯುತ್ತಿದ್ದರು’ ಎಂದು ಹೇಳಿದ್ದಾರೆ.  ಉತ್ತರ ಪ್ರದೇಶದ ಲಕ್ನೋದ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ರಾಜ್ಯದ ಸುಮಾರು ೬೦,೦೦೦ ಕೋಟಿ ರೂಪಾಯಿ ಮೊತ್ತದ ೮೧ ಹೂಡಿಕೆ ಯೋಜನೆಗಳಿಗೆ ಚಾಲನೆ ನೀಡಿ ಪ್ರಧಾನಿ ಮಾತನಾಡುತ್ತಿದ್ದರುಉದ್ಯಮಿಗಳನ್ನುಚೋರ ಮತ್ತು ಲೂಟಿಕೋರರು’ ಎಂಬುದಾಗಿ ಕರೆಯುತ್ತಿರುವುದಕ್ಕಾಗಿ ವಿಪಕ್ಷಗಳ ಮೇಲೆ ಹರಿಹಾಯ್ದ ಪ್ರಧಾನಿನನ್ನ ಉದ್ದೇಶಗಳು ಸ್ಪಷ್ಟವಾಗಿರುವುದರಿಂದ ಅವರ ಜೊತೆ ನಿಲ್ಲಲು ನಾನು ಹಿಂಜರಿಯುವುದಿಲ್ಲ’ ಎಂದು ಹೇಳಿದರು.  ‘ರಾಷ್ಟ್ರ ನಿರ್ಮಾಣದಲ್ಲಿ ಕೈಗಾರಿಕೋದ್ಯಮಿಗಳ ಕೊಡುಗೆ ರೈತರು ಅಥವಾ ವೃತ್ತಿ ನಿರತರು ಅಥವಾ ಅಧಿಕಾರಿಯ ಕೊಡುಗೆಗೆ ಸಮ. ಕೈಗಾರಿಕೋದ್ಯಮಿಗಳ ಜೊತೆ ಒಡನಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಹಾಗೆ ಮಾಡಲು ನಾನು ಅಂಜುವುದಿಲ್ಲ’ ಎಂದು ಮೋದಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.  ‘ನನ್ನ ಆತ್ಮಸಾಕ್ಷಿ ನಿರ್ಮಲವಾಗಿದೆ. ಮಹಾತ್ಮಾ ಗಾಂಧಿ ಅವರು ಕೂಡಾ ಬಿರ್ಲಾಗಳ ಜೊತೆ ಸುದೀರ್ಘ ಒಡನಾಟ ಹೊಂದಿದ್ದರು. ಹಲವಾರು ಸಂದರ್ಭಗಳಲ್ಲಿ ಅವರು ಕೈಗಾರಿಕೋದ್ಯಮಿಯ ಕುಟುಂಬದ ಜೊತೆಗೇ ವಾಸವಾಗಿದ್ದರು’ ಎಂದು ಮೋದಿ ನುಡಿದರು

2018: ಇಸ್ಲಾಮಾಬಾದ್ಪಾಕಿಸ್ತಾನವು ಆಗಸ್ಟ್ ೧೪ರಂದು ಸ್ವಾತಂತ್ರ್ಯ ದಿನ ಆಚರಿಸುವುದಕ್ಕೆ ಮುನ್ನವೇ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸುವರು ಎಂದು ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ -- ಇನ್ಸಾಫ್ (ಪಿಟಿಐ) ಪಕ್ಷವು ಪ್ರಕಟಿಸಿತು. ಮುಂದಿನ ಸರ್ಕಾರ ರಚನೆಗಾಗಿ ಪಕ್ಷವು ಪಕ್ಷೇತರರು ಮತ್ತು ಸಣ್ಣ ಪಕ್ಷಗಳನ್ನು ಸಂಪರ್ಕಿಸಲು ತೀವ್ರ ಯತ್ನ ನಡೆಸುತ್ತಿದೆ. ಪಾಕಿಸ್ತಾನ್ ತೆಹ್ರೀಕ್ --ಇನ್ಸಾಫ್ (ಪಿಟಿಐ) ಪಕ್ಷವು ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಜುಲೈ ೨೫ರ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆಯಾಗಿದ್ದರೂ ಸ್ವಂತ ಬಲದಲ್ಲಿ ಸರ್ಕಾರ ರಚಿಸಲು ಬೇಕಾದ ಸದಸ್ಯರ ಬೆಂಬಲವನ್ನು ಅದು ಹೊಂದಿಲ್ಲಸಂಖ್ಯಾ ಆಟವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಳೆದ ರಾತ್ರಿ ಸಮಾಲೋಚನೆಗಳನ್ನು ನಡೆಸಲಾಗಿದೆ ಮತ್ತು ಅವರು ಆಗಸ್ಟ್ ೧೪ಕ್ಕೆ ಮುನ್ನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಿಟಿಐ ನಾಯಕ ನಯೀನುಲ್ ಹಖ್ ಮಾಧ್ಯಮಗಳಿಗೆ ತಿಳಿಸಿದರು. ಪಾಕಿಸ್ತಾನ ಚುನಾವಣಾ ಆಯೋಗದ ಸಂಪೂರ್ಣ ಪ್ರಾಥಮಿಕ ಫಲಿತಾಂಶಗಳ ಪ್ರಕಾರ ಪಿಟಿಐ ೧೧೫ ಸ್ಥಾನಗಳನ್ನು ಗೆದ್ದಿದ್ದು, ಸರಳ ಬಹುಮತಕ್ಕೆ ೧೨ ಸ್ಥಾನಗಳ ಕೊರತೆಯಾಗಿದೆ. ಇದೇ ವೇಳೆಗೆ ನವಾಜ್ ಶರೀಫ್ ನೇತೃತ್ವದ ಪಿಎಂಎಲ್ -ಎನ್ ಮತ್ತು ಅಸಿಫ್ ಅಲಿ ಜರ್ದಾರಿ ನೇತೃತ್ವದ ಪಿಪಿಪಿ ಕ್ರಮವಾಗಿ ೬೪ ಮತ್ತು ೪೩ ಸ್ಥಾನಗಳನ್ನು ಹೊಂದಿವೆ.

2018: ನವದೆಹಲಿ: ಸ್ವರಾಜ್ (ಸ್ವಯಂ ಆಡಳಿತದ) ಕರೆಯ ಬಳಿಕ, ಉತ್ತಮ ಆಡಳಿvವನ್ನು ಕೇಳಲು ಇದೀಗ ಸಕಾಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ನುಡಿದರು.  ‘ಸ್ವರಾಜ್’ (ಸ್ವಯಂ ಆಡಳಿತ) ನನ್ನ ಜನ್ಮಸಿದ್ಧ ಹಕ್ಕು ಮತ್ತು ನಾನು ಅದನ್ನು ಪಡೆದೇ ತೀರುತ್ತೇನೆ’ ಎಂಬುದಾಗಿ ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕ್ ಅವರು ದೇಶಕ್ಕೆ ನೀಡಿದ್ದ ಘೋಷಣೆಯನ್ನು ಪ್ರಸ್ತಾಪಿಸಿದ ಪ್ರಧಾನಿಇಂದು ಉತ್ತಮ ಆಡಳಿತ ನಮ್ಮ ಜನ್ಮಸಿದ್ಧ ಹಕ್ಕು ಮತ್ತು ನಾವು ಅದನ್ನು ಪಡೆದೇ ತೀರುತ್ತೇವೆ ಎಂದು ಘೋಷಿಸಲು ಸಕಾಲ’ ಎಂದು ಹೇಳಿದರು.  ‘ಪ್ರತಿಯೊಬ್ಬ ಭಾರತೀಯನಿಗೂ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಧನಾತ್ಮಕ ಫಲಿತಾಂಶ ಲಭಿಸಬೇಕು. ಇದು ಜನಮನವನ್ನು ತಲುಪಿದಾಗ ಅದು ಹೊಸ ಭಾರತವನ್ನು ಸೃಷ್ಟಿಸುತ್ತದೆ’ ಎಂದು ಮೋದಿ ನುಡಿದರು. ತಿಲಕ್, ವಲ್ಲಭ ಭಾಯಿ ಪಟೇಲ್ ಮತ್ತು ಚಂದ್ರಶೇಖರ ಆಜಾದ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ಪ್ರಧಾನಿ ಉಲ್ಲೇಖಿಸಿದರು.

2018: ಲಾಹೋರ್: ಪಾಕಿಸ್ತಾನದ ಅಡಿಯಾಲ ಸೆರೆಮನೆಯಲ್ಲಿ ಸೆರೆವಾಸದ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಹೃದಯ ಸಂಬಂಧಿ ಸಮಸ್ಯೆಗಳ ಕಾರಣ ತತ್ ಕ್ಷಣವೇ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲು ಸರ್ಕಾರ ತೀರ್ಮಾನಿಸಿತು. ಅವರನ್ನು ತತ್ ಕ್ಷಣವೇ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಬೇಕಾದ ಅಗತ್ಯ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರುಕುಟುಂಬವು ಲಂಡನ್ನಿನಲ್ಲಿ ಐಷಾರಾಮೀ ಅಪಾರ್ಟ್ಮೆಂಟುಗಳನ್ನು ಖರೀದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರೀಫ್ ವಿರುದ್ಧ ದಾಖಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನವಾಜ್ ಶರೀಫ್ ಅವರಿಗೆ ೧೦ ವರ್ಷಗಳ ಸೆರೆವಾಸ ವಿಧಿಸಲಾಗಿದ್ದು ಅವರನ್ನು ಜುಲೈ ೧೩ರಿಂದ ರಾವಲ್ಪಿಂಡಿಯ ಅಡಿಯಾಲ ಸೆರೆಮನೆಯಲ್ಲಿ ಇರಿಸಲಾಗಿತ್ತುಹಿಂದಿನ ವಾರ ಶರೀಫ್ ಅವರು ಕಿಡ್ನಿ ವೈಫಲ್ಯದ ಅಂಚಿಗೆ ತಲುಪಿದ್ದರು ಎನ್ನಲಾಗಿದ್ದು, ವೈದ್ಯರು ಅವರನ್ನು ತತ್ ಕ್ಷಣವೇ ಆಸ್ಪತೆಗೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಿದ್ದರು. ಪಾಕಿಸ್ತಾನದ ಉಸ್ತುವಾರಿ ಸರ್ಕಾರವು  ಈದಿನ ಮಾಜಿ ಪ್ರಧಾನಿಯನ್ನು ಇಸಿಜಿ ಮತ್ತು ರಕ್ತ ಪರೀಕ್ಷಾ ವರದಿಗಳಲ್ಲಿ ಭಾರಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಪಾಕಿಸ್ತಾನ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಗೆ  (ಪಿಐಎಂಎಸ್) ಸ್ಥಳಾಂತರಿಸಲು ನಿರ್ಧರಿಸಿತು.
 
2018: ಅಹಮದಾಬಾದ್: ಬುಡಕಟ್ಟು ಜನರ ಪ್ರಾಬಲ್ಯವಿರುವ ಗುಜರಾತಿನ ದಹೋಡ್ ಜಿಲ್ಲೆಯಲ್ಲಿ ೨೨ರ ಹರೆಯದ ವ್ಯಕ್ತಿಯೊಬ್ಬನನ್ನು ಜನರ ಗುಂಪು ಚಚ್ಚಿ ಸಾಯಿಸಿದ್ದು, ಆತನ ಜೊತೆಗಿದ್ದ ಮಾರಣಾಂತಿಕವಾಗಿ ಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಗುಂಪುದಾಳಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿಯನ್ನು ಅಜ್ಮಲ್ ವಹೋನಿಯಾ ಎಂಬುದಾಗಿ ಗುರುತಿಸಲಾಗಿದ್ದು ಆತನ ಜೊತೆಗಿದ್ದ ವ್ಯಕ್ತಿಯನ್ನು ಭಾದು ಮಾಥುರ್ ಎಂಬುದಾಗಿ ಗುರುತಿಸಲಾಗಿದೆ. ಇವರಿಬ್ಬರೂ ಮೊಬೈಲ್ ಕಳ್ಳರು ಎಂಬ ಅನುಮಾನದಿಂದ ಗುಂಪು ಅಂಗಡಿಯೊಂದರ ಬಳಿ ಇವರ ಮೇಲೆ ದಾಳಿ ಮಾಡಿತು ಎಂದು ವರದಿಗಳು ಹೇಳಿದವು. ಮೃತ ವ್ಯಕ್ತಿಯ ವಿರುದ್ಧ ಕಳವು, ದರೋಡೆ, ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ೩೨ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದ್ದು, ಆತನ ಜೊತೆಗಿದ್ದ ಮಾಥುರ್ ಕೂಡಾ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದ ಎನ್ನಲಾಯಿತು.  ಇಬ್ಬರೂ ಇತ್ತೀಚೆಗೆ ಸೆರೆಮನೆಯಿಂದ ಬಿಡುಗಡೆಯಾಗಿದ್ದರು.

 2018:
ನವದೆಹಲಿ: ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಸ್ಪರ್ಧೆ ನಡೆಯುತ್ತಿದ್ದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸ್ಟೇಡಿಯಂನ ಟಿನ್ ಛಾವಣಿ, ಅದರ ಮೇಲಿದ್ದ ನೂರಾರು ಮಂದಿ ವೀಕ್ಷಕರ ಸಹಿತವಾಗಿ ಕುಸಿದ ಘಟನೆ ಘಟಿಸಿ, ಹಲವರು ಗಾಯಗೊಂಡರು.  ಐವರ ಸ್ಥಿತಿ ಚಿಂತಾಜನಕ  ಎಂದು ಪೊಲೀಸರು ತಿಳಿಸಿದರು.
ಜಿಲ್ಲೆಯ ಪದಂಪುರ ಧಾನ್ ಮಂಡಿ ಪ್ರದೇಶದಲ್ಲಿ ನಡೆಯುತ್ತಿದ್ದ ಟ್ರ್ಯಾಕ್ಟರ್ ಸ್ಪರ್ಧೆಯನ್ನು ವೀಕ್ಷಿಸಲು ನೂರಾರು ಮಂದಿ ಜಮಾಯಿಸಿದ್ದ ಸಂದರ್ಭದಲ್ಲಿ ದುರಂತ ಘಟಿಸಿತುಘಟನೆಯಲ್ಲಿ ೧೫ ಮಂದಿ ಗಾಯಗೊಂಡರು.. ಅವರ ಪೈಕಿ ೧೦ ಮಂದಿಯನ್ನು ಪದಂಪುರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಐವರನ್ನು ಶ್ರೀಗಂಗಾನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶ್ರೀಗಂಗಾನಗರ ಜಿಲ್ಲಾಧಿಕಾರಿ ಗ್ಯಾನರಾಮ್ ತಿಳಿಸಿದರು. ಶ್ರೀಗಂಗಾನಗರದ ಸಂಸತ್ ಸದಸ್ಯ ನಿಹಾಲ್ ಚಂದ್ ಚೌಹಾಣ್ ಅವರು ಗಾಯಾಳುಗಳಿಗೆ ಶೀಘ್ರವೇ ಪರಿಹಾರ ಧನ ಪ್ರಕಟಿಸಲಾಗುವುದು ಎಂದು ತಿಳಿಸಿದರುಅವಶೇಷಗಳ ಅಡಿಯಲ್ಲಿ ಯಾರೂ ಸಿಕ್ಕಿಹಾಕಿಕೊಂಡಿಲ್ಲ. ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ನುಡಿದರು. ಅವರ ಮಾಹಿತಿಯ ಪ್ರಕಾರ ೧೭ ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾಯಿತು.

2016:
ಶಿಮ್ಲಾ: ಮುಂದಿನ ಆರು ತಿಂಗಳ ಒಳಗಾಗಿ ರಾಷ್ಟ್ರದಲ್ಲಿ ಗೋಹತ್ಯೆಯನ್ನು ನಿಷೇಧಿಸುವಂತೆ ಕೇಂದ್ರ
ಸರ್ಕಾರಕ್ಕೆ ನಿರ್ದೇಶನ ನೀಡಿ ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶ ನೀಡಿತು. ದನಕರುಗಳ ಆಮದು ಮತ್ತು ರಫ್ತುಗೋಮಾಂಸ ಮತ್ತು ಗೋಮಾಂಸದ ಉತ್ಪನ್ನಗಳ ಮಾರಾಟವನ್ನು ಆರು ತಿಂಗಳುಗಳೊಳಗಾಗಿ ಕೇಂದ್ರ ಸರ್ಕಾರ ನಿಷೇಧಿಸಬೇಕು ಎಂದು ಹೈಕೋರ್ಟ್ ಸೂಚಿಸಿತು. ಗೋಹತ್ಯಾ ನಿಷೇಧ ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಷಯ ಎಂಬ ಕೇಂದ್ರ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ‘‘ದನಕರುಗಳ ಆಮದು ಮತ್ತು ರಫ್ತುಗೋಮಾಂಸ ಮತ್ತು ಗೋಮಾಂಸದ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ 14 ಅಕ್ಟೊಬರ್ 2015ರಲ್ಲೇ ಆದೇಶ ನೀಡಲಾಗಿತ್ತುಇದೀಗ ಇನ್ನೊಮ್ಮೆ ಅದೇಶ ನೀಡಿದ್ದು ಮುಂದಿನ ಆರು ತಿಂಗಳುಗಳೊಳಗೆ ದೇಶದಲ್ಲಿ ಗೋ ಹತ್ಯೆ ನಿಷೇಧಕ್ಕೆ ಕ್ರಮಕೈಗೊಳ್ಳಬೇಕು ’’ ಎಂದು ನ್ಯಾಯಮೂತಿಗಳಾದ ರಾಜೀವ್ ಶರ್ವ ಹಾಗೂ ಸುರೇಶ್ವರ್ ಠಾಕೂರ್ರನ್ನೊಳಗೊಂಡ ಪೀಠ ಹೇಳಿತುಆದೇಶದ ಪ್ರತಿಯನ್ನು ರಾಷ್ಟ್ರೀಯ ಕಾನೂನು ಆಯೋಗಕ್ಕೂ ಕಳುಹಿಸಲಾಗುವುದು ಎಂದು ಪೀಠ ತಿಳಿಸಿತುಹಿಮಾಚಲ ಪ್ರದೇಶದ ಹಿಂದೂ ಸಂಘಟನೆಗಳು ಹಾಗೂ ಭಾರತೀಯ ಗೋವಂಶ ರಕ್ಷಣಾ ಸಂವರ್ಧನ ಪರಿಷದ್ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಹೈಕೋರ್ಟ್  ಆದೇಶ ಹೊರಡಿಸಿತು.

2008: ಜುಲೈ 26 ಸರಣಿ ಸ್ಛೋಟದಿಂದ ಅಹಮದಾಬಾದ್ ನಗರ ಚೇತರಿಸಿಕೊಳ್ಳುತ್ತಿರುವಾಗಲೇ ಗುಜರಾತಿನ ಮತ್ತೊಂದು ಪ್ರಮುಖ ನಗರ ಸೂರತ್ತಿನಲ್ಲಿ ಮತ್ತೆ 18 ಸಜೀವ ಬಾಂಬುಗಳು ಪತ್ತೆಯಾದವು. ಅವುಗಳನ್ನು ನಿಷ್ಕ್ರಿಯಗೊಳಿಸಲಾಯಿತು. ಇದರೊಂದಿಗೆ ಎರಡು ದಿನಗಳಲ್ಲಿ ಸೂರತ್ತಿನಲ್ಲಿ ಪತ್ತೆಯಾದ ಬಾಂಬುಗಳ ಸಂಖ್ಯೆ 23ಕ್ಕೆ ಏರಿತು..

2007: ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕ ಎಂಬ ಹಣೆಪಟ್ಟಿ ಬಿದ್ದು ಬಂಧಿತನಾಗಿ ಅಲ್ಲಿನ ಪೊಲೀಸರಿಂದ ಚಿತ್ರಹಿಂಸೆಗೆ ಒಳಗಾದ ಬೆಂಗಳೂರಿನ ವೈದ್ಯ ಹನೀಫ್ ಆರೋಪಮುಕ್ತರಾಗಿ ತಮ್ಮ ವಕೀಲ ಪೀಟರ್ ರುಸ್ಸೊ ಜೊತೆಗೆ ಬೆಂಗಳೂರಿಗೆ ಬಂದಿಳಿದರು. ಹನೀಫ್ ಮಾವ ಅಶ್ಫಾಕ್ ಅಹಮದ್, ಸಹೋದರ ಮಹಮದ್ ಶಫಿ ಮೊದಲಾದ ಸಂಬಂಧಿಕರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ್ದರು.

2007: ಉಡುಪಿಯಲ್ಲಿ ನಡೆಯುವ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ವಿಮರ್ಶಕ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು ಆಯ್ಕೆಯಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯು, ಶೇಷಗಿರಿರಾವ್ ಅವರನ್ನು ಮುಂದಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿತು.

2007: ಸರಕು ಸಾಗಣೆ ವಿಮಾನವೊಂದು ಈದಿನ ಮಾಸ್ಕೊದ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೆ ಈಡಾಯಿತು. ಪರಿಣಾಮವಾಗಿ ಐವರು ಸಿಬ್ಬಂದಿ ಸೇರಿ ಎಂಟು ಮಂದಿ ಮೃತರಾದರು. ಸೈಬೀರಿಯಾ ಮೂಲದ ಅತ್ರಾನ್ ಏರ್ಲೈನ್ಸಿನ ಅಂತೊನಾವ್ ಎನ್-12 ವಿಮಾನವು ಭಾರತೀಯ ಕಾಲಮಾನ ಬೆಳಿಗ್ಗೆ 6.46 ಸುಮಾರಿಗೆ ಮಾಸ್ಕೊ ಡಾಮೊದೆಡೊವೊ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿ, ರನ್ವೇಯಿಂದ ಹಾರಿ ಕೇವಲ ನಾಲ್ಕು ಕಿ.ಮೀ. ದೂರ ಸಾಗುವಷ್ಟರಲ್ಲಿ ಬೆಂಕಿಗೆ ಆಹುತಿಯಾಯಿತು.

2007: ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಒಡೆತನದ ಕಪಾರೊ ಸಮೂಹವು ಸ್ಕೈ ಕಂಪೆನಿಯ `ಚಾನೆಲ್ 158'ನ್ನು ಖರೀದಿಸಿತು. ಚಾನೆಲ್ ಮೂಲಕ ಕಪಾರೊ ಸಮೂಹ ತನ್ನ `ಫಿಲ್ಮ್ 24' ಉದ್ಯಮವನ್ನು ವಿಸ್ತರಿಸುವುದು ಕಪಾರೋ ಸಮೂಹದ ಗುರಿ.

2007: ಉಡುಪಿ ನಗರದ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ಈದಿನ ಸಂಜೆ ಯಕ್ಷಗಾನ ಕ್ಷೇತ್ರದಲ್ಲಿ ನೂತನ ದಾಖಲೆಯೊಂದು ನಿರ್ಮಾಣವಾಯಿತು. ಒಂದಲ್ಲ, ಎರಡಲ್ಲ, ಹತ್ತಕ್ಕಿಂತ ಹೆಚ್ಚು ರಾಕ್ಷಸ ವೇಷಧಾರಿಗಳ ಸಂಗಮ ಇಲ್ಲಿ ಏರ್ಪಟ್ಟಿತು. ಯಕ್ಷಗಾನ ಅಭಿಮಾನಿಗಳು ಹಿಂದೆಂದೂ ಕಂಡಿರದ ಅಪೂರ್ವ ಸಂಗಮ ಅದಾಗಿತ್ತು. ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಬಡಗುತಿಟ್ಟು ಬಣ್ಣದ ವೇಷ (ರಾಕ್ಷಸ ವೇಷ) ಕಮ್ಮಟದ ಸಮಾರೋಪ ಸಮಾರಂಭದಲ್ಲಿ ರಾಕ್ಷಸರ ದಂಡೇ ರಂಗಸ್ಥಳಕ್ಕೆ ಆಗಮಿಸಿತು. ತೆಂಕುತಿಟ್ಟಿನ ಒಂಬತ್ತು ಮಂದಿ ರಾಕ್ಷಸರು ಹಾಗೂ ಬಡಗುತ್ತಿಟ್ಟಿನ ಇಬ್ಬರು ರಾಕ್ಷಸರ ಸಂಗಮದಿಂದ ಇಡೀ ವೇದಿಕೆ ಭರ್ತಿಯಾಯಿತು. ಅಲ್ಲಿ ಬರೀ ರಾಕ್ಷಸರಿರಲಿಲ್ಲ, ರಾಕ್ಷಸಿಯರೂ ಇದ್ದರು. ಅಲ್ಲಿ ಬಣ್ಣದ ವೇಷಧಾರಿಗಳ ಕಲ್ಪನೆಯ ವಿನಿಮಯವೂ ಇತ್ತು. ತಜ್ಞರ ಸಲಹೆ ಇತ್ತು. ಹೀಗಾಗಿ ರಾಕ್ಷಸ ವೇಷ ಕಮ್ಮಟ ಹೆಚ್ಚು ಕಲಾತ್ಮಕವಾಗಿ ಮೂಡಿ ಬಂತು. ಕಾರಣದಿಂದ ಯಕ್ಷಗಾನದ ಇತಿಹಾಸದಲ್ಲೇ ಕಮ್ಮಟ ನೂತನ ದಾಖಲೆ ನಿರ್ಮಿಸಿತು.

2007: ಜೋರ್ಡಾ ಅಮ್ಮಾನಿನಲ್ಲಿ ನಡೆದ 17ನೇ ಆಸಿಯಾನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನ ಮುಕ್ತಾಯ ದಿನವಾದ ಈದಿನ ಭಾರತವು ಮೂರು ಬಂಗಾರದ ಪದಕಗಳನ್ನು ಗಳಿಸುವುದರೊಂದಿಗೆ ಎರಡನೇ ಸ್ಥಾನ ಪಡೆಯಿತು. ರಂಜಿತ್ ಮಹೇಶ್ವರಿ ಪುರುಷರ ಟ್ರಿಪಲ್ ಜಿಗಿತದಲ್ಲಿ 17.19 ಮೀಟರ್ ಜಿಗಿದು ಚಿನ್ನದ ಪದಕ ಗೆದ್ದುಕೊಂಡರು. ಸಿನಿಮೋಲ್ ಪೌಲೋಸ್ ಮಹಿಳೆಯರ ವಿಭಾಗದಲ್ಲಿ ಚಿನ್ನ ಗಳಿಸಿದರು. ಮಹಿಳೆಯರ ರಿಲೆ ತಂಡ ಮೊದಲ ಸ್ಥಾನ ಗಳಿಸಿತು. ಇದರಿಂದಾಗಿ ಭಾರತ ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಒಟ್ಟು ಐದು ಪದಕಗಳನ್ನು ತನ್ನದಾಗಿಸಿಕೊಂಡಿತು.

2006: ಜಾನಪದ ಗಾರುಡಿಗ, ಸ್ವಾತಂತ್ರ್ಯ ಯೋಧ, ಕರ್ನಾಟಕ ಏಕೀಕರಣ ಹೋರಾಟಗಾರ ಡಾ. ಎಸ್. ಕೆ. ಕರೀಂಖಾನ್ ಅವರು ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 104 ವರ್ಷ ವಯಸ್ಸಾಗಿತ್ತು. (ಇನ್ನೊಂದು ಮೂಲದ ಪ್ರಕಾರ 98 ವರ್ಷ ವಯಸ್ಸು). ಮೂರು ತಿಂಗಳುಗಳಿಂದ ಅಸ್ವಸ್ಥರಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

2006: ಶ್ರೀಲಂಕಾ ನಾಯಕ ಜಯವರ್ಧನೆ (374) ಮತ್ತು ಸಂಗಕ್ಕಾರ (287) ಅವರು ದಕ್ಷಿಣ ಆಫ್ರಿಕಾ ವಿರುದ್ಧ ಕೊಲಂಬೋದಲ್ಲಿ ನಡೆದ ಮೊದಲ ಟೆಸ್ಟಿನಲ್ಲಿ ಜೊತೆಯಾಟದಲ್ಲಿ `ವಿಶ್ವದಾಖಲೆ' (ಒಟ್ಟು 624 ರನ್) ಸ್ಥಾಪಿಸಿದರು. 1997ರಲ್ಲಿ ಭಾರತದ ವಿರುದ್ಧ ಕೊಲಂಬೋದಲ್ಲೇ ನಡೆದ ಪಂದ್ಯದಲ್ಲಿ ಮಹಾನಾಮಾ ಮತ್ತು ಜಯಸೂರ್ಯ 2ನೇ ವಿಕೆಟ್ ಜೊತೆಯಾಟಕ್ಕೆ 576 ರನ್ ಗಳಿಸಿದ್ದೇ ಜೊತೆಯಾಟದ ವಿಶ್ವದಾಖಲೆಯಾಗಿತ್ತು.

2006: ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಪ್ರಸಾಧನ ಕಲೆಯ ಹಿರಿಯ ಕಲಾವಿದ ಸದಾನಂದ ಶಾನಭಾಗ (65) ನಿಧನರಾದರು. `ಪುತ್ರಣ್ಣ' ಎಂದೇ ಖ್ಯಾತರಾಗಿದ್ದ ಅವರು ಚಿತ್ರ ಕಲಾವಿದರಾಗಿ, ಮುಖವಾಡ ತಯಾರಿಕೆಗಳಲ್ಲಿ ಮತ್ತು ತೆರೆಯ ಹಿಂದಿನಪ್ರಸಾಧನ ಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದರು.

2004: ಮಾಜಿ ಮಿಸ್ ಇಂಡಿಯಾ ಖ್ಯಾತಿಯ ರೂಪದರ್ಶಿ ಬೆಂಗಳೂರು ಮೂಲದ ನಫೀಸಾ ಜೋಸೆಫ್ ಮುಂಬೈಯ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.

2003: ಎಬಿಪಿಜೆಡಿ ನಾಯಕ ಸಿ. ಭೈರೇಗೌಡ ನಿಧನ.

1963: ಸಾಹಿತಿ ವಿಜಯಾ ಜಿ.ಎಸ್. ಜನನ.

1958: ಸಾಹಿತಿ ಪಿ. ಬಸವಲಿಂಗಯ್ಯ ಜನನ.

1957: ವಿಶ್ವ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಅಸ್ತಿತ್ವಕ್ಕೆ.

1925: ಸಾಹಿತಿ ಗೋವಿಂದ ರಾಜುಲು ಜನನ.

1904: ಸಾಹಿತಿ ಜಿ.ಬಿ. ಜೋಶಿ ಜನನ.

1904: ಭಾರತೀಯ ಕೈಗಾರಿಕೋದ್ಯಮದ ಜನಕ ಜೆಹಾಂಗೀರ್ ರತನ್ ಜಿ ದಾದಾಭಾಯಿ ಟಾಟಾ (29-7-1904ರಿಂದ 29-11-1993ರವರೆಗೆ) ಅವರು ಈದಿನ ಪ್ಯಾರಿಸ್ಸಿನಲ್ಲಿ ಜನಿಸಿದರು. ಜೆ. ಆರ್. ಡಿ. ಟಾಟಾ ಎಂದೇ ಖ್ಯಾತರಾದ ಅವರು ನಾಲ್ಕು ಮಕ್ಕಳ ಪೈಕಿ ಎರಡನೆಯವರು. ಫ್ರಾನ್ಸ್, ಜಪಾನ್ ಮತ್ತು ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆದ ಅವರು 1938ರಲ್ಲಿ 34ನೇ ವಯಸ್ಸಿನವರಾಗಿದ್ದಾಗ ಸಹೋದರರ ಜೊತೆ ಸೇರಿ ಭಾರತದಲ್ಲಿ ಅತಿದೊಡ್ಡ ಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿದರು. ಮಾನವೀಯ ವ್ಯಕ್ತಿತ್ವಕ್ಕಾಗಿ 1992ರಲ್ಲಿ ಟಾಟಾ ಅವರಿಗೆ `ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತದಲ್ಲಿ ಕುಟುಂಬಯೋಜನೆ ಯಶಸ್ವಿಯಾಗುವಂತೆ ಮಾಡಿದ್ದಕ್ಕಾಗಿ ಅವರಿಗೆ ಯುನೈಟೆಡ್ ನೇಷನ್ಸ್ ಪಾಪ್ಯುಲೇಷನ್ ಪ್ರಶಸ್ತಿ ಲಭಿಸಿತ್ತು. 1993 ನವೆಂಬರ್ 29ರಂದು ತವರು ರಾಜ್ಯವಾದ ಮಹಾರಾಷ್ಟ್ರದಲ್ಲಿ ಅವರು ನಿಧನರಾದರು.

1891: ಖ್ಯಾತ ಶಿಕ್ಷಣ ತಜ್ಞ, ಸಮಾಜ ಸುಧಾರಕ, ಸಾಹಿತಿ ಈಶ್ವರ ಚಂದ್ರ ವಿದ್ಯಾಸಾಗರ ನಿಧನ.

1884: ನಾಟಕದ ಮೂಲಕ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿದ ಖ್ಯಾತ ನಾಟಕಕಾರ ತಂಜಾವೂರು ಪರಮಶಿವ ಕೈಲಾಸಂ (ಟಿ.ಪಿ. ಕೈಲಾಸಂ) (29-7-1884ರಿಂದ 23-11-1946ರವರೆಗೆ) ನ್ಯಾಯಾಧೀಶ ಪರಮಶಿವ ಅಯ್ಯರ್- ಕಮಲಮ್ಮ ದಂಪತಿಯ ಪುತ್ರನಾಗಿ ಬೆಂಗಳೂರಿನಲ್ಲಿ ಈದಿನ ಜನಿಸಿದರು.

1835: ಹವಾಯಿಯಲ್ಲಿ ಮೊದಲ ಬಾರಿಗೆ ಕಬ್ಬು ಕೃಷಿ ಆರಂಭ.

No comments:

Post a Comment