2019: ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಬಹುಮತ ಸಾಬೀತು ಪಡಿಸುವುದಕ್ಕೆ ಒಂದು ದಿನ ಮುಂಚಿತವಾಗಿಯೇ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶಕುಮಾರ್ ಅವರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಎಲ್ಲ 14 ಮಂದಿ ಅತೃಪ್ತ ಶಾಸಕರನ್ನೂ ಶಾಸಕತ್ವದಿಂದ ಅನರ್ಹಗೊಳಿಸಿದರು. ತುರ್ತು ಪತ್ರಿಕಾಗೋಷ್ಠಿಯಲ್ಲಿ ರಮೇಶ ಕುಮಾರ್ ಅವರು ಈ ವಿಚಾರವನ್ನು ತಿಳಿಸಿದರು.ಎಸ್.ಟಿ. ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಪ್ರತಾಪಗೌಡ ಪಾಟೀಲ್, ರೋಷನ್ ಬೇಗ್, ಎಂಟಿಬಿ ನಾಗರಾಜ್, ಸುಧಾಕರ್, ಬಿಸಿ ಪಾಟೀಲ್, ಶಿವರಾಂ ಹೆಬ್ಬಾರ್, ಗೋಪಾಲಯ್ಯ, ಶ್ರೀಮಂತ ಪಾಟೀಲ್,ನಾಗೇಂದ್ರ, ಆನಂದ್ ಸಿಂಗ್, ನಾರಾಯಣ ಗೌಡ, ಹೆಚ್ ವಿಶ್ವನಾಥ್ ಅವರನ್ನು ಪ್ರಸ್ತುತ ವಿಧಾನ ಸಭೆಯ ಅವಧಿ ಮುಕ್ತಾಯಗೊಳ್ಳುವವರೆಗೂ ಅನರ್ಹಗೊಳಿಸಲಾಗಿದೆ ಎಂದು ಸಭಾಧ್ಯಕ್ಷರು ಪ್ರಕಟಿಸಿದರು. ಪಕ್ಷ ಜಾರಿಗೊಳಿಸಿದ ಆದೇಶವನ್ನು (ವಿಪ್) ಉಲ್ಲಂಘಿಸಿದ ಶಾಸಕರನ್ನು ಅನರ್ಹಗೊಳಿಸಿ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡುರಾವ್ ದೂರು ನೀಡಿದ್ದರು.2019 ಜುಲೈ 29ರ ಸೋಮವಾರ ಬೆಳಗ್ಗೆ ಅಧಿವೇಶನದ ತುರ್ತು ಇರುವುದರಿಂದ ಈದಿನವೇ ಅತೃಪ್ತ ಶಾಸಕರ ರಾಜೀನಾಮೆಯ ಬಗ್ಗೆ ಇತ್ಯರ್ಥ ಮಾಡುವ ಅಗತ್ಯವಿದೆ. ಆದ್ದರಿಂದ ತುರ್ತು ಸುದ್ದಿಗೋಷ್ಠಿ ನಡೆಸಿದ್ಧೇನೆ ಎಂದು ರಮೇಶ ಕುಮಾರ್ ನುಡಿದರು. ಮುಖ್ಯಮಂತ್ರಿಗಳು 2019 ಜುಲೈ 29ರ ಸೋಮವಾರ ವಿಶ್ವಾಸ ಮತಯಾಚನೆ ಮಾಡುವುದಾಗಿ ಕೋರಿದ ಕಾರಣ ಎಲ್ಲಾ ಶಾಸಕರಿಗೆ ಅಧಿವೇಶನಕ್ಕೆ ಹಾಜರಾಗಲು ಸೂಚನೆ ನೀಡಿದ್ದೇವೆ. ಕಾರ್ಯ ಕಲಾಪದ ಬಗ್ಗೆ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.ಕೆಲ ದಿನಗಳ ಹಿಂದೆಯಷ್ಟೇ ರಾಜೀನಾಮೆ ನೀಡಿದ್ದ ರಮೇಶ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್. ಶಂಕರ್ ಅವರನ್ನು ಪ್ರಸ್ತುತ ವಿಧಾನ ಸಭೆಯ ಅವಧಿಯವರೆಗೆ ಸಭಾಧ್ಯಕ್ಷ ರಮೇಶ ಕುಮಾರ್ ಅನರ್ಹಗೊಳಿಸಿದ್ದರು.
2019: ನವದೆಹಲಿ: ಹಿಂದುತ್ವಕ್ಕೆ ಕೆಟ್ಟ ಹೆಸರು ತರಲು ’ಸಂಚು’ ರೂಪುಗೊಂಡಿದೆ ಎಂಬುದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಇಲ್ಲಿ ಪ್ರತಿಪಾದಿಸಿದರು. ವೃಂದಾವನದಲ್ಲಿ ನಡೆದ ಸಮಾರಂಭ ಒಂದರಲ್ಲಿ ಮಾತನಾಡುತ್ತಿದ್ದ ಅವರು ’ಕೆಲವು ರಾಷ್ಟ್ರ ವಿರೋಧಿ ಶಕ್ತಿಗಳು ಗುಂಪು ಹತ್ಯೆಗಳ ಮೂಲಕ ದ್ವೇಷ ಹರಡಲು ಯತ್ನಿಸುತ್ತಿವೆ. ಹಿಂದೂ ಸಂಸ್ಕೃತಿಗೆ ಮಸಿ ಬಳಿಯುವ ಯತ್ನವಾಗಿ ನಡೆಯುತ್ತಿರುವ ಇಂತಹ ಪ್ರಯತ್ನಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದು ಸಂಘ ಕಾರ್ಯಕರ್ತರಗೆ ಅವರು ಸೂಚಿಸಿದರು. ‘ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಅಪಖ್ಯಾತಿ ತರಲು ದೇಶಾದ್ಯಂತ ಆಳವಾದ ಸಂಚು ರೂಪಿಸಲಾಗಿದೆ. ಕೆಲವು ಶಕ್ತಿಗಳು ಗೋವುಗಳ ಹೆಸರಿನಲ್ಲಿ ಗುಂಪು ಹತ್ಯೆಯ ಮೂಲಕ ಸಮಾಜದಲ್ಲಿ ದ್ವೇಷ ಹರಡಲು ಯತ್ನಿಸುತ್ತಿವೆ. ಕೆಲವು ರಾಜ್ಯಗಳಲ್ಲಿ ನಿರ್ದಿಷ್ಟ ಯೋಜನೆಯ ಅಡಿಯಲ್ಲಿ ಧಾರ್ಮಿಕ ಮತಾಂತರ ನಡೆಯುತ್ತಿದೆ. ಸಂಘದ ಎಲ್ಲ ಪ್ರಚಾರಕರೂ ರಾಷ್ಟ್ರದ ಹಾಲಿ ಪರಿಸ್ಥಿತಿಯಲ್ಲಿ ಅತ್ಯಂತ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅಗತ್ಯ ಇದೆ’ ಎಂದು ಭಾಗ್ವತ್ ಹೇಳಿದರು. ಇದಕ್ಕೆ ಮುನ್ನ ರಾಷ್ಟ್ರದ ಅಭಿವೃದ್ಧಿಗೆ ಅಡ್ಡಿ ಒಡ್ಡುತ್ತಿರುವ ಶಕ್ತಿಗಳನ್ನು ದಮನಿಸುವಂತೆ ಆರ್ಎಸ್ಎಸ್ ಮುಖ್ಯಸ್ಥರು ಜನತೆಗೆ ಮನವಿ ಮಾಡಿದ್ದರು. ‘ಹಲವಾರು ಶಕ್ತಿಗಳು ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಅಡ್ಡಿ ಉಂಟು ಮಾಡಲು ಯತ್ನಿಸುತ್ತಿವೆ. ಇಂತಹ ಶಕ್ತಿಗಳನ್ನು ಸಕಾಲದಲ್ಲಿ ದಮನಿಸುವ ಅಗತ್ಯ ಇದೆ’ ಎಂದು ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಘಟನೆಗಳನ್ನು ಉಲ್ಲೇಖಿಸುತ್ತಾ ಭಾಗ್ವತ್ ಹೇಳಿದ್ದರು.
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಆಂತರಿಕ ಗುಂಪಿನ ಜೊತೆಗೆ ಮಂಗಳವಾರ ದೆಹಲಿಯಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕರು ಪಾಲ್ಗೊಳ್ಳಲಿದ್ದು, ರಾಜ್ಯದಲ್ಲಿ ಯಾವುದೇ ದಿನ ವಿಧಾನಸಭೆ ಚುನಾವಣೆ ನಡೆದರೂ ಪಕ್ಷವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವ ಬಗ್ಗೆ ಚರ್ಚಿಸಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.
ಸಭೆಯಲ್ಲಿ ಅಮಿತ್ ಶಾ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಪಾಲ್ಗೊಳ್ಳುವರು ಎಂಬ ವರದಿಯಿದ್ದು, ಪಕ್ಷವು ವಿಧಾನಸಭಾ ಚುನಾವಣೆಗಳಿಗೆ ಸಿದ್ಧತೆ ಆರಂಭಿಸಿದೆ ಎಂಬ ಸುಳಿವನ್ನು ನೀಡಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವರದಿ ನೀಡಿದ ಬಳಿಕ ಚುನಾವಣಾ ಆಯೋಗವು ಅಂತಿಮಗೊಳಿಸಲಿದೆ.ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮತ್ತು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ರವೀಂದ್ರ ರೈನಾ ಹಾಗೂ ರಾಜ್ಯದ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಅವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.ಇದಕ್ಕೆ ಮುನ್ನ ಪಕ್ಷದ ಜಮ್ಮು ಮತ್ತು ಕಾಶ್ಮೀರ ಘಟಕದ ವಕ್ತಾರ ಮಾಧವ್ ಅವರು ರಾಜ್ಯದಲ್ಲಿ ಈ ವರ್ಷವೇ ಚುನಾವಣೆ ನಡೆಸಬೇಕು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು. ರಾಜ್ಯ ಬಿಜೆಪಿ ಘಟಕವು ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ತಾನು ಸಿದ್ಧವಾಗಿರುವುದಾಗಿ ದೃಢ ಪಡಿಸಿದೆ. ಈ ವರ್ಷ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಈಗಲೂ ಬೇಕಾದಷ್ಟು ಸಮಯವಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ನರೇಂದ್ರ ಸಿಂಗ್ ಹೇಳಿದ್ದರು. ೨೦೧೪ರಲ್ಲಿ ರಾಜ್ಯದ ಚುನಾವಣೆಗಳು ನವೆಂಬರ-ಡಿಸೆಂಬರ್ ಅವಧಿಯಲ್ಲಿ ನಡೆದಿದ್ದವು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆ ಇದೆ. ಜುಲೈ ೩ರಿಂದ ಅನ್ವಯವಾಗುವಂತೆ ರಾಷ್ಟ್ರಪತಿ ಆಳ್ವಿಕೆಯನ್ನು ಮುಂದಿನ ಆರು ತಿಂಗಳುಗಳಿಗೆ ವಿಸ್ತರಿಸಲಾಗಿತ್ತು.
2019: ಬೆಂಗಳೂರು : ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿ ಮಧ್ಯೆ ಹೈಸ್ಪೀಡ್ ರೈಲು ಆರಂಭಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ ಎಂದು ಕೇಂದ್ರ ರೈಲ್ವೇ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಇಲ್ಲಿ ಹೇಳಿದರು.ಪ್ರಸ್ತುತ ಬೆಳಗಾವಿ ಮತ್ತು ಧಾರವಾಡ ಮಧ್ಯೆ ಯಾವುದೇ ನೇರ ರೈಲುಗಳು ಸಂಚಾರ ನಡೆಸುತ್ತಿಲ್ಲ. "ಬೆಳಗಾವಿ-ಹುಬ್ಬಳ್ಳಿ-ಧಾರವಾಡ ನಗರಗಳ ನಡುವೆ ಬುಲೆಟ್ ರೈಲು ಮಾದರಿಯ ಹೈಸ್ಫೀಡ್ ರೈಲು ಓಡಿಸುವ ಚಿಂತನೆ ಇದೆ. ಈ ಸಂಬಂಧ ಅಧ್ಯಯನ ನಡೆಸಲಾಗುತ್ತದೆ" ಎಂದು ಅಂಗಡಿ ನುಡಿದರು."ಈ ಮೂರು ನಗರಗಳ ನಡುವೆ ಬಸ್ಸಿನ ಹಾಗೆ ರೈಲು ಸಂಪರ್ಕ ಕಲ್ಪಿಸಿದರೆ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಯೋಜನೆಯನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ" ಎಂದು ಸಚಿವರು ಹೇಳಿದರು.ಬೆಳಗಾವಿ-ಧಾರವಾಡ ನಡುವೆ ಪ್ರಸ್ತುತ ನೇರವಾದ ರೈಲುಗಳು ಮಾರ್ಗವಿಲ್ಲ. ಖಾನಾಪುರ-ಲೋಂಡಾ-ಆಳ್ನಾವರ ಮಾರ್ಗವಾಗಿ ಸದ್ಯ ರೈಲುಗಳು ಸಂಚಾರ ನಡೆಸುತ್ತಿವೆ. ಇದೇ ಮಾರ್ಗದಲ್ಲಿ ರೈಲು ಓಡಿಸಬೇಕೇ? ಎಂದು ಅಧ್ಯಯನ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.ಧಾರವಾಡ-ಕಿತ್ತೂರು ಮೂಲಕ ರೈಲು ಹಾದು ಹೋಗುವಂತೆ ಹೊಸ ಮಾರ್ಗ ನಿರ್ಮಾಣ ಮಾಡಲಾಗುತ್ತದೆಯೇ? ಎಂಬ ಪ್ರಶ್ನೆಗೆ ಸಚಿವರು ಯಾವುದೇ ಸ್ಪಷ್ಟವಾದ ಮಾಹಿತಿ ನೀಡಲಿಲ್ಲ.
2019: ಹೈದರಾಬಾದ್: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಎಸ್ ಜೈಪಾಲ್ ರೆಡ್ಡಿ ನಸುಕಿನ 1.30 ಗಂಟೆಗೆ ನಿಧನರಾದರು. ಜೈಪಾಲ್ ರೆಡ್ಡಿಯವರಿಗೆ 77 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ರೆಡ್ಡಿಯವರಿಗೆ ಅನಾರೋಗ್ಯ ಕಾಡಿತ್ತು. ಹೈದರಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಧ್ಯರಾತ್ರಿಯ ವೇಳೆ ಇಹಲೋಕ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿದವು. ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಜೈಪಾಲ್ ರೆಡ್ಡಿ, ಎರಡು ಬಾರಿ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ನ ಎರಡೂ ಅವಧಿಯಲ್ಲಿ ಸಚಿವರಾಗಿದ್ದ ರೆಡ್ಡಿ, ಮಾಹಿತಿ ಮತ್ತು ಪ್ರಸಾರ ಖಾತೆ, ನಗರಾಭಿವೃದ್ದಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ, ವಿಜ್ಞಾನ ತಂತ್ರಜ್ಞಾನ ಖಾತೆಗಳನ್ನು ನಿಭಾಯಿಸಿದ್ದರು. ಎಸ್ ಜೈಪಾಲ್ ರೆಡ್ಡಿಯವರು ಇಬ್ಬರು ಪುತ್ರರು, ಒಬ್ಬರು ಪುತ್ರಿಯನ್ನು ಅಗಲಿದರು. ಎಸ್. ಜೈಪಾಲ್ ರೆಡ್ಡಿ 1942ರ ಜನವರಿ 16ರಂದು ಈಗಿನ ತೆಲಂಗಾಣದ ಮುದ್ಗಲ್ ಗ್ರಾಮದಲ್ಲಿ ಸುದಿನಿ ದುರ್ಗಾ ರೆಡ್ಡಿ ಮತ್ತು ಯಶೋದಮ್ಮ ದಂಪತಿಗಳ ಮಗನಾಗಿ ಜನಿಸಿದ್ದರು. ಹೈದರಾಬಾದಿನಲ್ಲಿ ಶಿಕ್ಷಣ ಪಡೆದರು. ಪ್ರತಿಷ್ಠಿತ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ರೆಡ್ಡಿ, 1975ರಲ್ಲಿ ತುರ್ತು ಪರಿಸ್ಥಿತಿ ವೇಳೆ ಕಾಂಗ್ರೆಸ್ನಿಂದ ಹೊರಬಂದರು. ಬಳಿಕ ಜನತಾ ಪಾರ್ಟಿ ಸೇರಿದರು. 1985ರಿಂದ 1988ರ ವರೆಗೆ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಂತರ 1990ರಲ್ಲಿ ಪುನಃ ಕಾಂಗ್ರೆಸ್ಗೆ ಮರಳಿದರು.
1969ರಲ್ಲಿ ಆಂಧ್ರಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕುಲ್ವಕುರ್ತಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಾಲ್ಕು ಬಾರಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1984ರಲ್ಲಿ ಮೆಹಬೂಬ್ನಗರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಬಳಿಕ 1999ರಲ್ಲಿ ಮಿರಿಯಾಲಗುಡ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 2004ರಲ್ಲಿ ಮತ್ತೊಮ್ಮೆ ಮಿರಿಯಾಲಗುಡದಿಂದ ಚುನಾಯಿತರಾದರು. ಬಳಿಕ 2009ರಲ್ಲಿ ಚೆವಲ್ಲಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಯೆಯಾದರು. ತಮ್ಮ ರಾಜಕೀಯ ಜೀವನದಲ್ಲಿ ಎರಡು ಬಾರಿ ರಾಜ್ಯಸಭೆಗೂ ಆಯ್ಕೆಯಾಗಿದ್ದರು. 1998ರಲ್ಲಿ ಶ್ರೇಷ್ಠ ಸಂಸದೀಯ ಪಟು ಪ್ರಶಸ್ತಿಗೆ ಪಾತ್ರರಾಗಿದ್ದರು.
2018: ಮುಂಬೈ/ ಲಕ್ನೋ: ಮಹಾರಾಷ್ಟ್ರದಲ್ಲಿ ಮಹಾಬಲೇಶ್ವರದ ಮಾರ್ಗದಲ್ಲಿದ್ದ ಬಸ್ಸೊಂದು ಪ್ರಪಾತಕ್ಕೆ ಉರುಳಿದ ಪರಿಣಾಮವಾಗಿ ಪಿಕ್ನಿಕ್ ಹೊರಟಿದ್ದ ೩೪ ಮಂದಿ ಅಸು ನೀಗಿದ್ದು, ಉತ್ತರ ಪ್ರದೇಶದಲ್ಲಿ 3 ದಿನದಿಂದ ಸತತ ಸುರಿಯುತ್ತಿರುವ ಭಾರೀ ಮಳೆಗೆ ೪೯ ಜನರು ಪ್ರಾಣ ಕಳೆದುಕೊಂಡರು. ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಈದಿನ ಅಂಬೆನಾಲಿ ಘಾಟ್ ಪ್ರದೇಶದಲ್ಲಿ ಬಸ್ಸೊಂದು ಕಮರಿಗೆ ಉರುಳಿದ ಪರಿಣಾಮವಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ೩೪ ಮಂದಿಯ ಪೈಕಿ ೩೩ ಮಂದಿ ದಾರುಣವಾಗಿ ಅಸು ನೀಗಿದ್ದಾರೆ ಎಂದು ಮುಂಬೈಯಿಂದ ಬಂದ ವರದಿ ತಿಳಿಸಿತು. ಬಸ್ಸು ದುರಂತಕ್ಕೆ ಈಡಾದ ವೇಳೆಯಲ್ಲಿ ದಾಪೋಲಿ ಕೃಷಿ ವಿಶ್ವವಿದ್ಯಾಲಯದ ಸುಮಾರು ೩೪ ಮಂದಿ ಸಿಬ್ಬಂದಿ ಅದರಲ್ಲಿ ಮಹಾಬಲೇಶ್ವರದ ಕಡೆಗೆ ಪ್ರಯಾಣ ಹೊರಟಿದ್ದರು. ಮುಂಬೈಯಿಂದ ೧೮೦ ಕಿಮೀ ದೂರದ ಪೊಲಾದ್ಪುರ ಪಟ್ಟಣದ ಸಮೀಪ ಅಂಬೆನಾಲಿ ಘಾಟ್ ಪ್ರದೇಶದಲ್ಲಿ ಬಸ್ಸು ೫೦೦ ಅಡಿ ಆಳದ ಕಮರಿಗೆ ಉರುಳಿತು ಎಂದು ಜಿಲ್ಲಾ ಕಲೆಕ್ಟರ್ ವಿಜಯ್ ಸೂರ್ಯವಂಶಿ ತಿಳಿಸಿದರು. ರಾಷ್ಟ್ರೀಯ ದುರಂತ ಸ್ಪಂದನಾ ಪಡೆ (ಎನ್ ಡಿ ಆರ್ ಎಫ್) ತಂಡಗಳನ್ನು ತತ್ ಕ್ಷಣವೇ ದುರಂತ ಸ್ಥಳಕ್ಕೆ ರವಾನಿಸಲಾಗಿದ್ದು, ನತದೃಷ್ಟ ಬಸ್ಸಿನಲ್ಲಿರುವ ಶವಗಳನ್ನು ಹೊರ ತರುವ ಕಾರ್ಯಾಚರಣೆ ನಡೆಯುತ್ತಿದೆ. ಒಂದು ಡಜನ್ ಆಂಬುಲೆನ್ಸ್ ಗಳು ಮತ್ತು ೧೫ ಮಂದಿ ವೈದ್ಯರು ಸ್ಥಳಕ್ಕೆ ತಲುಪಿದ್ದಾರೆ ಎಂದು ಅಡಿಷನಲ್ ಎಸ್ ಪಿ ಸಂಜಯ್ ಪಾಟೀಲ್ ನುಡಿದರು. ಪ್ರಯಾಣಿಕರ ಪೈಕಿ ಪ್ರಕಾಶ್ ರಾಜಾರಾಮ್ ಸಾವಂತ್ ದೇಸಾಯಿ ಎಂಬುದಾಗಿ ಗುರುತಿಸಲಾದ ಒಬ್ಬರು ದುರಂತದ ವೇಳೆಯಲ್ಲಿ ಬಸ್ಸಿನಿಂದ ಹೊರಕ್ಕೆ ಜಿಗಿದು ಪಾರಾಗಿದ್ದಾರೆ ಎಂದು ಹೇಳಲಾಯಿತು.
2018: ಪುಣೆ: ಪುಣೆ ನಗರದಲ್ಲಿ ನಡೆಸಲಾದ ಅತ್ಯಂತ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಪುಣೆಯ ಕತ್ತಾಜ್ ಪ್ರದೇಶದ ಮುಸ್ಲಿಮ್ ಅನಾಥಾಶ್ರಮವೊಂದರಿಂದ ೩೬ ಮಕ್ಕಳನ್ನು ಕಾಮುಕ ಮೌಲಾನಾ ಮುಷ್ಠಿಯಿಂದ ರಕ್ಷಿಸಲಾಗಿದೆ. ಮೌಲಾನಾ ನಡೆಸುತ್ತಿದ್ದ ನಿರಂತರ ಲೈಂಗಿಕ ಶೋಷಣೆ ಬಗ್ಗೆ ಇಬ್ಬರು ಮಕ್ಕಳು ಆಪಾದಿಸಿದ ಬಳಿಕ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಆರೋಪಿ ಮೌಲಾನಾನನ್ನು ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಗೆ ಕಾಯ್ದೆಯ ವಿವಿಧ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ೧೦ರ ಹರೆಯದ ಬಾಲಕರಿಬ್ಬರು ಇತ್ತೀಚೆಗೆ ಅನಾಥಾಶ್ರಮದಿಂದ ತಪ್ಪಿಸಿಕೊಂಡಿದ್ದು ಅವರನ್ನು ಸರ್ಕಾರೇತರ ಸಂಘಟನೆಯೊಂದು ಪುಣೆ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚಿತ್ತು. ಪರಾರಿಯಾಗಲು ಯತ್ನ ನಡೆಸಿದ್ದೇಕೆ ಎಂಬುದಾಗಿ ಸತತವಾಗಿ ಪ್ರಶ್ನಿಸಿದಾಗ ಈ ಬಾಲಕರು ತಾವು ಮೌಲಾನಾ ಸಹಪಾಠಿಯ ಮೇಲೆ ಶಿಕ್ಷಣದ ಹೆಸರಿನಲ್ಲಿ ಪದೇ ಪದೇ ನಡೆಸಿದ ಲೈಂಗಿಕ ಕಿರುಕುಳವನ್ನು ಕಂಡು ಇಂತಹ ಹಿಂಸೆಯಿಂದ ಪಾರಾಗಲು ಅನಾಥಾಶ್ರಮದಿಂದ ಪರಾರಿಯಾಗಿರುವುದಾಗಿ ತಿಳಿಸಿದರು ಎಂದು ಪೊಲೀಸರು ಹೇಳಿದರು.
2018: ಶ್ರೀನಗರ: ಪಾಕಿಸ್ತಾನದ ಪ್ರಧಾನಿಯಾಗಲಿರುವ ಇಮ್ರಾನ್ ಖಾನ್ ಅವರ ಮುಂದಿಟ್ಟಿರುವ ಮೈತ್ರಿಯ ಕೊಡುಗೆ ಬಗ್ಗೆ ಧನಾತ್ಮಕವಾಗಿ ಸ್ಪಂದಿಸುವಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ’ಪಾಕಿಸ್ತಾನವು ಹೊಸ ಸರ್ಕಾರ, ಹೊಸ ಪ್ರಧಾನಿಯನ್ನು ಪಡೆಯುತ್ತಿದೆ. ಅವರು (ಮಿಸ್ಟರ್ ಖಾನ್) ಮೈತ್ರಿಯ ಕೊಡುಗೆ ಮುಂದಿಟ್ಟಿದ್ದಾರೆ. ಈ ಕೊಡುಗೆ ಬಗ್ಗೆ ಧನಾತ್ಮಕವಾಗಿ ಸ್ಪಂದಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಬಯಸುತ್ತೇನೆ’ ಎಂದು ಮೆಹಬೂಬಾ ನುಡಿದರು. ಪಾಕಿಸ್ತಾನದ ಚುನಾವಣೆಯಲ್ಲಿ ವಿಜಯ ಗಳಿಸಿದ್ದಕ್ಕಾಗಿ ಮುಫ್ತಿ ಅವರು ಇಮ್ರಾನ್ ಖಾನ್ ಅವರನ್ನು ಅಭಿನಂದಿಸಿದರು. ಬಿಜೆಪಿ ಜೊತೆಗಿನ ಮೈತ್ರಿ ವಿಷ ಕುಡಿದಂತೆ: ಬಿಜೆಪಿ ಜೊತೆಗಿನ ಎರಡು ವರ್ಷಗಳ ಮೈತ್ರಿ ಕಾಲದಲ್ಲಿ ತಾವು ಅಗಾಧ ಒತ್ತಡ ಎದುರಿಸಿದ್ದಾಗಿ ಹೇಳಿದ ಮೆಹಬೂಬಾ ’ಅದು (ಬಿಜೆಪಿ ಜೊತೆಗಿನ ಮೈತ್ರಿ) ಕಪ್ ವಿಷ ಕುಡಿದಂತಿತ್ತು. ನಾನು ರಾಜಿಯಾಗಲಿಲ್ಲ. ನಾನು ಹಲವಾರು ಬಾರಿ ಪ್ರಧಾನಿಯನ್ನು ಭೇಟಿ ಮಾಡಿದಾಗ, ಪಾಕಿಸ್ತಾನ ಮತ್ತು ಹುರಿಯತ್ ಜೊತೆಗೆ ಮಾತುಕತೆ ಆರಂಭಿಸುವಂತೆ ಅವರಿಗೆ ಹೇಳಿದ್ದೆ. ಕಾಶ್ಮೀರದಲ್ಲಿ ಶಾಂತಿಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಕಸ್ಟಡಿಯಿಂದ ಹುರಿಯತ್ ನಾಯಕರನ್ನು ಬಿಡುಗಡೆ ಮಾಡುವಂತೆ ನಾನು ಕೇಂದ್ರಕ್ಕೆ ಸೂಚಿಸಿದ್ದೆ’ ಎಂದು ಹೇಳಿದರು. ಮುಫ್ತಿ ಅವರು ಪಕ್ಷದ ಸ್ಥಾಪನಾ ದಿನ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
2018: ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ೨೭೦ ಸ್ಥಾನಗಳಿಗೆ ಸ್ಪರ್ಧಿಸಿದ್ದ ಇಮ್ರಾನ್ ಖಾನ್ ಅವರು ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ೧೧೬ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದೆ ಎಂದು ಪಾಕ್ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಅಧಿಕೃತ ಫಲಿತಾಶ ತಿಳಿಸಿತು. ಜುಲೈ ೨೫ರಂದು ನಡೆದ ಸಂಸದೀಯ ಚುನಾವಣೆಯ ಅಂತಿಮ ಫಲಿತಾಂಶವನ್ನು ವಿಳಂಬದ ಕಾರಣಕ್ಕಾಗಿ ಸೋತ ಪಕ್ಷಗಳ ನಾಯಕರ ತೀವ್ರ ಆಕ್ರೋಶ, ಅಕ್ರಮಗಳ ಆರೋಪದ ಮಧ್ಯೆ ಚುನಾವಣಾ ಆಯೋಗ ಈದಿನ ಪ್ರಕಟಿಸಿತು. ಭ್ರಷ್ಟಾಚಾರ ಆರೋಪದಲ್ಲಿ ಸೆರೆಮನೆ ಸೇರಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಮುಸ್ಲಿಮ್ ಲೀಗ್- ನವಾಜ್ (ಪಿಎಂಎಲ್-ಎನ್) ೬೪ ಸ್ಥಾನಗಳೊಂದಿಗೆ ಮತ್ತು ಮಾಜಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು (ಪಿಪಿಪಿ) ೪೩ ಸ್ಥಾನಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ ಎಂದು ಪಾಕಿಸ್ತಾನ ಚುನಾವಣಾ ಆಯೋಗ (ಇಸಿಪಿ) ಹೇಳಿತು. ಮುತ್ತಹಿದಾ ಮಜ್ಲಿಸ್-ಇ-ಅಮ್ಲ್ ಪಾಕಿಸ್ತಾನ್ (ಎಂಎಂಎಪಿ) ಪಕ್ಷವು ೧೩ ಸ್ಥಾನಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದೆ. ೧೩ ಮಂದಿ ಸ್ವತಂತ್ರ ಅಭ್ಯರ್ಥಿಗಳು ಕೂಡಾ ಜಯಗಳಿಸಿದ್ದಾರೆ.
2018: ಬೆಂಗಳೂರು: ೨೦೧೯ರಲ್ಲಿ ಕಠಿಣ ಸಮರ ಎದುರಿಸಲು ಸಜ್ಜಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಇಲ್ಲಿ ಕರೆ ನೀಡಿದ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು, ಪಕ್ಷಕ್ಕೆ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರ ಹೆಸರು ಬಳಸಿಕೊಂಡು ಇನ್ನು ಓಟು ಪಡೆಯಲು ಸಾಧ್ಯವಿಲ್ಲ, ಚುನಾವಣೆ ಗೆಲ್ಲಲು ಬೂತ್ ಮಟ್ಟದಲ್ಲೇ ಕೆಲಸ ಮಾಡಿ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಸವಾಲು ಹಾಕಲಾಗದ ರಾಜಕೀಯ ಪಕ್ಷವಾಗಿ ಇದ್ದ ಕಾಲವಿತ್ತು. ಈಗ ಅದು ಬದಲಾಗಿದೆ. ಆದ್ದರಿಂದ ತಳಮಟ್ಟದಲ್ಲೇ ಪಕ್ಷವನ್ನು ಬಲ ಪಡಿಸಬೇಕಾದ ಅಗತ್ಯ ಇದೆ ಎಂದು ಅವರು ನುಡಿದರು. ‘ಅದೊಂದು ಕಾಲವಿತ್ತು. ಕಾಂಗ್ರೆಸ್ ಪಕ್ಷವು ಜವಾಹರಲಾಲ್ ನೆಹರೂ ಅಥವಾ ಇಂದಿರಾ ಗಾಂಧಿ ಅವರ ಹೆಸರು ಪ್ರಸ್ತಾಪಿಸಿದರೆ ಸಾಕಿತ್ತು, ಲಕ್ಷಾಂತರ ಜನ ಮತಗಟ್ಟೆಗೆ ಬಂದು ವೋಟು ನೀಡುತ್ತಿದ್ದರು’ ಎಂದು ಚಿದಂಬರಂ ಹೇಳಿದರು. ‘ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಪ್ರಚಾರದಿಂದ ಮೋಸಹೋಗಬೇಡಿ. ಅದು ಸಾಧ್ಯವಿಲ್ಲ. ಹಾಗೇನಾದರೂ ಇದ್ದರೆ ಅದು ಬಿಜೆಪಿ ಮುಕ್ತ ಭಾರತ’ ಎಂದು ಕಾಂಗ್ರೆಸ್ ನಾಯಕ ನುಡಿದರು. ಈಗ ಮತಗಟ್ಟೆ ಮಟ್ಟದ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಪ್ರತಿಯೊಂದು ಮತಗಟ್ಟೆಯಲ್ಲೂ ನಾವು ಹಾಜರಿರಬೇಕು. ಪ್ರತಿಯೊಂದು ಮತಗಟ್ಟೆಯಲ್ಲೂ ನಮ್ಮ ಸಂಖ್ಯೆ ಸಾಕಷ್ಟು ಇರಬೇಕು. ನೆಲದ ಮೇಲೆ ನಮ್ಮ ಹೆಜ್ಜೆಗಳು ಎಷ್ಟಿವೆ ಎಂಬುದೇ ಈಗ ಮುಖ್ಯವಾದ ವಿಷಯ ಎಂದು ಚಿದಂಬರಂ ನುಡಿದರು.
2018: ಲಕ್ನೋ: ಮುಂದಿನ ಮಹಾಚುನಾವಣೆಗಾಗಿ ಮೈತ್ರಿ ಮತ್ತು ಸೀಟು ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಮಾಜವಾದಿ ಪಕ್ಷದ (ಎಸ್ ಪಿ) ರಾಷ್ಟ್ರೀಯ ಕಾರ್ಯಕಾರಿಣಿಯು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ನೀಡಿತು. ಪಕ್ಷದ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರು ಲಕ್ನೋದಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ’೨೦೧೯ರ ಲೋಕಸಭಾ ಚುನಾವಣೆಗಾಗಿ ಮೈತ್ರಿ ಮತ್ತು ಸೀಟು ಹಂಚಿಕೆ ಮಾಡುವ ಬಗೆಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ನೀಡುವ ಮುಖ್ಯ ನಿರ್ಧಾರವನ್ನು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತೆಗೆದು ಕೊಳ್ಳಲಾಯಿತು’ ಎಂದು ಹೇಳಿದರು. ಚುನಾವಣೆಗಳು ಬ್ಯಾಲೆಟ್ ಪೇಪರ್ ಗಳ ಮೂಲಕ ನಡೆಯಬೇಕು, ವಿದ್ಯುನ್ಮಾನ ಯಂತ್ರಗಳ (ಇವಿಎಂ) ಮೂಲಕ ಅಲ್ಲ ಎಂಬ ಅಭಿಪ್ರಾಯವನ್ನು ಕಾರ್ಯಕಾರಿಣಿ ವ್ಯಕ್ತಪಡಿಸಿತು ಎಂದು ಅವರು ನುಡಿದರು.
2016: ಕೋಲ್ಕತ: ಖ್ಯಾತ ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಹಾಶ್ವೇತಾ ದೇವಿ(90) ಈದಿನ ಮಧ್ಯಾಹ್ನ ನಿಧನರಾದರು. 90 ವರ್ಷ ಪ್ರಾಯದ ಮಹಾಶ್ವೇತಾದೇವಿ ಅವರು ಜುಲೈ 23ರಂದು ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವಯೋಸಹಜವಾದ ಸಮಸ್ಯೆಗಳಿಂದಲು ಬಳಲುತ್ತಿದ್ದ ಮಹಾಶ್ವೇತಾ ದೇವಿ ಅವರಿಗೆ ಕೋಲ್ಕತದ ಬೆಲ್ಲೆ ವ್ಯೂ ಕ್ಲಿನಿಕ್ ಆಸ್ಪತ್ರೆಯಲ್ಲಿ ಕಳೆದೆರಡು ತಿಂಗಳಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು. ಜುಲೈ 23ರಂದು ತೀವ್ರ ಹೃದಯಾಘಾತಕ್ಕೊಳಗಾದ ಬಳಿಕ ಸಾಕಷ್ಟು ಸೊರಗಿದ್ದರು. ಅವರ ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದರು. ಸಾಧನೆಯ ಹಾದಿ: ಹೊತ್ತಿ ಉರಿಯುತ್ತಿರುವ ಈಶಾನ್ಯ ಭಾರತದ ಆತ್ಮಸಾಕ್ಷಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಮಹಾಶ್ವೇತಾ ದೇವಿ ಅವರದ್ದು. ಇಂಗ್ಲಿಷ್ ಸಾಹಿತ್ಯದ ಮಾಜಿ ಉಪನ್ಯಾಸಕಿಯಾದ ಮಹಾಶ್ವೇತಾ ದೇವಿ, ಜನಸಾಮಾನ್ಯರ ಬದುಕನ್ನು ತೀರಾ ಹತ್ತಿರದಿಂದ ಕಂಡವರು. ಪಶ್ಚಿಮ ಬಂಗಾಳದ ಪುರುಲಿಯಾ ಹಾಗೂ ಬಂಕುರಾ ಜಿಲ್ಲೆಗಳಲ್ಲಿ ಖೇರಿಯಾ-ಶಬರ್ ಬುಡಕಟ್ಟು ಜನರೊಂದಿಗೇ ಒಬ್ಬರಾಗಿ ಸಾಮಾಜಿಕ ಕಳಕಳಿಯಿಂದ ದುಡಿದವರು. ಬುಡಕಟ್ಟು ಜನರ ಏಳಿಗೆಗಾಗಿ ಸುಮಾರು 25 ವರ್ಷಗಳ ಕಾಲ ದುಡಿದಿರುವ ಮಹಾಶ್ವೇತಾದೇವಿ ಸಾಹಿತ್ಯ ಅಕಾಡಮಿ, ಜ್ಞಾನಪೀಠ ಪ್ರಶಸ್ತಿ, ಮ್ಯಾಗ್ಸೆಸೆ ಸೇರಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಕಾದಂಬರಿಗಾರ್ತಿ. ಮಹಾಶ್ವೇತಾ ದೇವಿ ಅವರು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 1926 ಜನವರಿಯಲ್ಲಿ ಜನಿಸಿ, ಸಾಮಾಜಿಕವಾಗಿ ಸೂಕ್ಷ್ಮ ಸಂವೇದಿಯಾಗಿ ಬೆಳೆದರು. ತಮ್ಮ 17ನೇ ವರ್ಷದಲ್ಲೇ ಬಂಗಾಳದ ಬರಗಾಲ ಪರಿಸ್ಥಿತಿಯಲ್ಲಿ (1943) ಪರಿಹಾರ ಕಾರ್ಯಕ್ಕೆ ದುಡಿದು ಶಹಬ್ಬಾಸ್ ಎನಿಸಿಕೊಂಡಿದ್ದರು.
2016: ಮುಂಬೈ: 2006 ರ ಔರಂಗಾಬಾದ್ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಬಂಧಿತರಾಗಿದ್ದ ಸೈಯದ್ ಜಬಿವುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ಸಹಿತ 11 ಮಂದಿ ಆರೋಪಿಗಳು ತಪ್ಪಿತಸ್ತರು ಎಂದು ಇಲ್ಲಿನ ಸೆಷನ್ಸ್ ಕೋರ್ಟ್ ತೀರ್ಪು ನೀಡಿತು. ಭಾರತೀಯ ದಂಡ ಸಂಹಿತೆ ಮತ್ತು ಅಕ್ರಮ ಚಟುವಟಿಕೆ ನಿಗ್ರಹ ಕಾಯ್ದೆ (ಯುಎಪಿಎ) ವಿಧಿಗಳ ಅಡಿಯಲ್ಲಿ ಈ ಆರೋಪಿಗಳನ್ನು ತಪ್ಪಿತಸ್ತರು ಎಂದು ಘೋಷಿಸಿದ ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಗ್ರಹ ಕಾಯ್ದೆ ವಿಶೇಷ ನ್ಯಾಯಾಲಯವು 8 ಮಂದಿಯನ್ನು ಖುಲಾಸೆ ಮಾಡಿತು. ನ್ಯಾಯಾಲಯವು ಒಬ್ಬ ಆರೋಪಿಗೆ ಕ್ಷಮೆ ನೀಡಿತು. 2013 ರಲ್ಲಿ ಎಟಿಎಸ್ ಜುಂದಾಲ್ ಹಾಗೂ ಇನ್ನಿತರರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು.
2016: ಬೆಂಗಳೂರು: ಉತ್ತರ ಕರ್ನಾಟಕ ಜನರ ದಾಹ ತಣಿಸುವ ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಮಹದಾಯಿಯಿಂದ 7 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಕ್ಕೆ ಹರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಾಧಿಕರಣ (ಟ್ರಿಬ್ಯೂನಲ್) ಹಿಂದಿನ ದಿನ ತಳ್ಳಿ ಹಾಕಿದ ಹಿನ್ನೆಲೆಯಲ್ಲಿ ಈದಿನ ಕರ್ನಾಟಕದಾದ್ಯಂತ ಪ್ರತಿಭಟನೆ ಭುಗಿಲೆದ್ದಿತು. ಈ ಹಿನ್ನೆಲೆಯಲ್ಲಿ ಕರೆ ನೀಡಲಾಗಿದ್ದ ಉತ್ತರ ಕರ್ನಾಟಕ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಗದಗ, ಹುಬ್ಬಳ್ಳಿ-ಧಾರವಾಡಗಳಲ್ಲಿ ವ್ಯಾಪಕ ಹಿಂಸಾಚಾರ ನಡೆಯಿತು. ನರಗುಂದದಲ್ಲಿ ಇಬ್ಬರು ರೈತರು ವಿಷ ಸೇವಿಸಲು ಯತ್ನಿಸಿ ಅಸ್ವಸ್ಥರಾದರೆ, ನವಲಗುಂದದಲ್ಲಿ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಕರ್ಫ್ಯೂ ಘೋಷಿಸಲಾಯಿತು.
2008: ಟೊರಾಂಟೊದಲ್ಲಿನ ಶಿಯಾಮಕ್ ದಾವರ್ ಶಿಕ್ಷಣ ಸಂಸ್ಥೆಯ ನೃತ್ಯ ನಿರ್ದೇಶಕಿ ಗುಜರಾತ್ ಮೂಲದ ರುಪಾಲ್ ಲಖಾನಿ (21) `ಮಿಸ್ ಭಾರತ-ಕೆನಡಾ'ಆಗಿ ಆಯ್ಕೆಯಾದರು.
2007: ಭಾರತೀಯ ವೈದ್ಯ ಮೊಹಮ್ಮದ್ ಹನೀಫ್ ಮೇಲಿದ್ದ ಭಯೋತ್ಪಾದನೆ ಆರೋಪವನ್ನು ಆಸ್ಟ್ರೇಲಿಯಾ ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ಹನೀಫ್ ಅವರು ಈದಿನ ಮಧ್ಯರಾತ್ರಿ 12.25ಕ್ಕೆ (ಭಾರತೀಯ ಕಾಲಮಾನ ರಾತ್ರಿ 7.55) ಆಸ್ಟ್ರೇಲಿಯದ ಬ್ರಿಸ್ಬೇನ್ ವಿಮಾನ ನಿಲ್ದಾಣದಿಂದ ಥಾಯ್ ಏರ್ ವೇಸ್ ವಿಮಾನದಲ್ಲಿ ಬ್ಯಾಂಕಾಕ್ ಮೂಲಕ ಬೆಂಗಳೂರಿಗೆ ಹೊರಟರು. ಆಸ್ಟ್ರೇಲಿಯ ಸರ್ಕಾರವು ಹನೀಫ್ ಗೆ ದೇಶದಿಂದ ಹೊರಗೆ ತೆರಳಲು ಅವಕಾಶ ನೀಡಿತು. ಆದರೆ ಉದ್ಯೋಗದ ವೀಸಾ ನೀಡಲು ನಿರಾಕರಿಸಿತು.
2007: ನೈಸ್ ಸಂಸ್ಥೆಯನ್ನು ಕಿತ್ತೊಗೆದು, ಬೆಂಗಳೂರು-ಮೈಸೂರು ಹೆದ್ದಾರಿ ಕಾರಿಡಾರ್ ಯೋಜನೆ ಗುತ್ತಿಗೆಯನ್ನು 25000 ಕೋಟಿ ಡಾಲರ್ ವ್ಯವಹಾರದ `ಗ್ಲೋಬಲ್ ಇನ್ ಫ್ರಾಸ್ಟ್ರಕ್ಚರ್ ಕನಸೋರ್ಟಿಯಮ್' (ಜಿಐಸಿ)ಗೆ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ನ್ಯಾಯಾಲಯದ ಅನುಮತಿ ಕೋರಿತು. ಆದರೆ ಯಾವುದೇ ಕಾರಣಕ್ಕೂ ಬೆಂಗಳೂರು- ಮೈಸೂರು ಕಾರಿಡಾರ್ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ, ಸರ್ಕಾರದ ವಿರುದ್ಧ ಕಾನೂನು ಸಮರ ಮುಂದುವರೆಯುವುದು ಎಂದು ನೈಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಸ್ಪಷ್ಟಪಡಿಸಿದರು. ಅಮೆರಿಕಾದ ಇಂಡಸ್ ಕ್ಯಾಪಿಟಲ್, ನ್ಯೂಯಾರ್ಕ್ ಲೈಫ್ ಇನ್ಶೂರೆನ್ಸ್ ಫಂಡ್, ಅವೆನ್ಯೂ ಕ್ಯಾಪಿಟಲ್ ಮತ್ತು ಐಆರ್ಇಒ ಫಂಡ್ ಹಾಗೂ ಮುಂಬೈನ ಸ್ಕಿಲ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿ ಮತ್ತು ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗಳನ್ನು ಒಳಗೊಂಡಿರುವ ಜಿಐಸಿ ಮುಂಬೈ ಮತ್ತು ಬೆಂಗಳೂರಿನ ಕೋರಮಂಗಲದಲ್ಲಿ ಕಚೇರಿ ಹೊಂದಿತ್ತು. ಜಿಐಸಿ ನೀಡಿರುವ ಪ್ರಸ್ತಾವಕ್ಕೆ ಲೇಖಿರಾಜ್ ಜೈನ್ ಎಂಬವರು ಸಹಿ ಹಾಕಿದ್ದರು. ಮೂಲಚೌಕಟ್ಟು ಒಪ್ಪಂದವನ್ನು ಮೀರಿ ಸುಮಾರು 30000 ಕೋಟಿ ರೂಪಾಯಿ ಬೆಲೆಬಾಳುವ 2289 ಎಕರೆ ಭೂಮಿಯನ್ನು ನೈಸ್ ಸಂಸ್ಥೆ ಸ್ವಾಧೀನಪಡಿಸಿಕೊಂಡಿದೆ, ಇದಕ್ಕಾಗಿ ಸರ್ಕಾರದ ಕೆಲವು ಅಧಿಕಾರಿಗಳನ್ನು ಕೈವಶಮಾಡಿಕೊಂಡು ದಾಖಲೆಗಳನ್ನು ಕೂಡಾ ತಿರುಚಿದೆ ಎನ್ನುವುದು ರಾಜ್ಯಸರ್ಕಾರದ ಪ್ರಮುಖ ಆರೋಪ. ಇದೇ ಆರೋಪದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎರಡು ವರ್ಷಗಳ ಹಿಂದೆ ರಾಜ್ಯ ಹೈಕೋರ್ಟ್ ವಜಾ ಮಾಡಿ ಯೋಜನೆಗೆ ಹಸಿರು ನಿಶಾನೆ ತೋರಿತ್ತು.
2007: ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯ ಮುದಿಗೊಂಡ ಗ್ರಾಮದಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದವರನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಮಹಿಳೆಯರು ಸೇರಿ 8 ಮಂದಿ ಮೃತರಾದರು. ಎಡಪಕ್ಷಗಳು ಕರೆ ನೀಡಿದ್ದ ಆಂಧ್ರಪ್ರದೇಶ ಬಂದ್ ಹಿಂಸಾಚಾರಕ್ಕೆ ತಿರುಗಿದಾಗ ಈ ಘಟನೆ ಸಂಭವಿಸಿತು.
2007: ಭಾರತ-ಶ್ರೀಲಂಕಾವನ್ನು ಸಂಪರ್ಕಿಸುವ `ರಾಮರ್ ಸೇತು ಅಥವಾ ಆಡಮ್ ಬ್ರಿಡ್ಜ್ ಮಾನವ ನಿರ್ಮಿತ ರಚನೆ ಅಲ್ಲ ಎಂದು ಬಾಹ್ಯಾಕಾಶದಿಂದ ತೆಗೆದಿರುವ ಭೂಮಿಯ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಭಾಗ ಅರ್ ್ಥ ವೆಬ್ ಹೇಳಿರುವುದಾಗಿ ಚೆನ್ನೈಯ ಸೇತು ಸಮುದ್ರಂ ಕಾರ್ಪೊರೇಷನ್ ಪ್ರಕಟಿಸಿತು. ಕಾರ್ಪೊರೇಷನ್ ಎರಡು ದಿನದ ಹಿಂದೆ ನಾಸಾಗೆ ಇ ಮೇಲ್ ಮೂಲಕ `ರಾಮರ್ ಸೇತುವೆ ಮಾನವ ನಿರ್ಮಿತವೇ?' ಎಂಬ ಪ್ರಶ್ನೆಯನ್ನು ಕಳುಹಿಸಿತ್ತು. ಅದಕ್ಕೆ ಉತ್ತರಿಸಿರುವ ನಾಸಾದ ಅರ್ಥ್ ವೆಬ್ ವಿಭಾಗ, `ಇದು, ಸಾವಿರಾರು ವರ್ಷಗಳಿಂದ ಅಲೆಗಳಿಂದಾಗಿ ನಿರ್ಮಾಣವಾದ ಮರಳಿನ ಸ್ವಾಭಾವಿಕ ರಚನೆ. ಹಾಗಾಗಿ ಇದು ಮಾನವ ನಿರ್ಮಿತ ಅಲ್ಲ ಎಂದು ಸ್ಪಷ್ಟ ಪಡಿಸಿದೆ' ಎಂದು ಕಾರ್ಪೊರೇಷನ್ ಹೇಳಿತು. ನಾಸಾ ಕಳುಹಿಸಿದ ಉತ್ತರವನ್ನು ಪತ್ರಿಕಾಗೋಷ್ಠಿಯಲ್ಲಿ ಸೇತು ಸಮುದ್ರಂ ಕಾರ್ಪೊರೇಷನ್ ಮತ್ತು ತೂತ್ತುಕುಡಿ ಬಂದರು ಮಂಡಳಿ ಅಧ್ಯಕ್ಷ ಎನ್. ರಘುಪತಿ ವಿವರಿಸಿದರು. ಸೇತು ಸಮುದ್ರಂ ಜಲಮಾರ್ಗ ಯೋಜನೆ ಶೇ 50 ರಷ್ಟು ಪೂರ್ಣಗೊಂಡಿದೆ. ಈವರೆಗೆ 231 ಲಕ್ಷ ಘನ ಅಡಿ ಹೂಳು ಎತ್ತಲಾಗಿದೆ ಎಂದು ರಘುಪತಿ ಹೇಳಿದರು.
2007: ಭಾರತದ ಪೆಂಟ್ಯಾಲ ಹರಿಕೃಷ್ಣ ಅವರು ಕೆನಡಾದ ಮ್ಯಾಂಟ್ರಿಯಲ್ನಲ್ಲಿ ನಡೆದ ಮಾಂಟ್ರಿಯಲ್ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್ನ ಎಂಟನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದು, ಪೂರ್ಣ ಪಾಯಿಂಟ್ ಸಂಗ್ರಹಿಸಿದರು.
2007: ಭಾರತದಿಂದ ಕೋಳಿಗಳನ್ನು ಆಮದು ಮಾಡಿಕೊಳ್ಳದಂತೆ ಶ್ರೀಲಂಕಾ ನಿಷೇಧ ಹೇರಿತು. ಮಣಿಪುರ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಪಕ್ಷಿಜ್ವರ (ಕೋಳಿಜ್ವರ) ಕಾಣಿಸಿಕೊಂಡಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಭಾರತದ ಕೋಳಿ ಸೇರಿದಂತೆ ಯಾವುದೇ ಪಕ್ಷಿಗಳನ್ನು ಆಮದು ಮಾಡಿಕೊಳ್ಳದಂತೆ ನಿಷೇಧ ವಿಧಿಸಿತು.
2007: ಭಾರತ ಹಾಗೂ ಭೂತಾನ್ ರೂ 3,500 ಕೋಟಿಗಳ ವೆಚ್ಚದ ಮಹತ್ವಾಕಾಂಕ್ಷಿ ಜಲ ವಿದ್ಯುತ್ ಉತ್ಪಾದನಾ ಯೋಜನೆಯ ಒಪ್ಪಂದಕ್ಕೆ ಈದಿನ ಭೂತಾನಿನ ಥಿಂಪುವಿನಲ್ಲಿ ಸಹಿ ಹಾಕುವ ಮೂಲಕ ಉಭಯ ದೇಶಗಳು ಆರ್ಥಿಕ ಸಹಕಾರದಲ್ಲಿ ಹೊಸ ಹೆಜ್ಜೆ ಇಟ್ಟವು. 1095 ಮೆಗಾವಾಟ್ ಸಾಮರ್ಥ್ಯದ ಜಲ ವಿದ್ಯುತ್ ಉತ್ಪಾದನಾ ಯೋಜನೆಯ ಒಪ್ಪಂದಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಮತ್ತು ಭೂತಾನ್ ವಿದೇಶಾಂಗ ಸಚಿವ ಲೊಂಪೊ ಕಾಂಡು ವಾಂಗ್ ಚುಕ್ ಅವರು ಸಹಿ ಹಾಕಿದರು. ಭಾರತದ ಸಹಕಾರದೊಂದಿಗೆ ಭೂತಾನಿನಲ್ಲಿ ನಿರ್ಮಾಣವಾಗುವ ಅತಿದೊಡ್ಡ ಜಲವಿದ್ಯುತ್ ಯೋಜನೆ ಇದು. ಭಾರತದ ಸಹಕಾರದೊಂದಿಗೆ ಭೂತಾನ್ ಕೈಗೆತ್ತಿಕೊಂಡ ಹಲವು ಜಲ ವಿದ್ಯುತ್ ಯೋಜನೆಗಳಲ್ಲಿ ಚುಖಾ, ಹರಿಚಾ, ಢಾಲಾ ಹಾಗೂ ಪುನತ್ ಸಂಘಚುವಾನ್ ಯೋಜನೆಗಳು ಮುಖ್ಯವಾದವು. ಈ ಯೋಜನೆಗಳಲ್ಲಿ ಭಾರತ 5,000 ಕೋಟಿ ರೂ. ಬಂಡವಾಳ ಹೂಡಿದೆ.
2007: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಹಿನ್ನೆಲೆ ಗಾಯನಕ್ಕೆ ಕಾಲಿರಿಸಿ ಐವತ್ತು ವರ್ಷ ಸಂದ ಸಂದರ್ಭದಲ್ಲಿ ರಮ್ಯ ಕಲ್ಚರಲ್ ಅಕಾಡೆಮಿ ಬೆಂಗಳೂರಿನ ಶಿಕ್ಷಕರ ಭವನದಲ್ಲಿ `ಗೌರವಾಭಿನಂದನೆ' ಕಾರ್ಯಕ್ರಮ ಏರ್ಪಡಿಸಿತ್ತು. ಜಾನಕಿ ಅವರು ಸಮಾರಂಭದಲ್ಲಿ ಹೃದಯತುಂಬಿ ಹಾಡಿದರು. ಈ ಸನ್ಮಾನ ಸಮಾರಂಭದಲ್ಲಿ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್, ಸಂಗೀತ ನಿರ್ದೇಶಕರಾದ ಜಯಗೋಪಾಲನ್, ರಾಜನ್, ಹಿರಿಯ ನಟಿಯರಾದ ಹರಿಣಿ, ಜಯಂತಿ, ಡಾ. ಬಿ. ಸರೋಜಾದೇವಿ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಪಾಲ್ಗೊಂಡಿದ್ದರು. `ಸುರಭಿ ಪ್ರಕಾಶನ' ಹೊರತಂದ ಆರ್. ಶ್ರೀನಾಥ್ ಅವರ `ನಾದ ದೇವತೆ-ಎಸ್. ಜಾನಕಿ' ಪುಸ್ತಕವನ್ನು ಇದೇ ಸಂದರ್ಭದಲ್ಲಿ ಹಿರಿಯ ನಟಿ ಜಯಂತಿ ಬಿಡುಗಡೆ ಮಾಡಿದರು.
2006: ಪಾಂಡಿಚೇರಿಯನ್ನು `ಪುದುಚೇರಿ' ಎಂಬುದಾಗಿ ನಾಮಕರಣ ಮಾಡುವ ವಿಧೇಯಕವನ್ನು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಮಂಡಿಸಿದರು.
2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನೂತನ ಮೀಸಲಾತಿ ನೀತಿ ರೂಪಿಸುವ ಸಂಬಂಧ ರಚಿಸಲಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯು ತನ್ನ ಮಧ್ಯಂತರ ವರದಿಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿತು.
2006: ದೀರ್ಘ ಕಾಲದ ಸಮರದ ಬಳಿಕ ಕಡೆಗೂ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರು ರಂಜನಾ ಝಾ ಅವರನ್ನು ತಮ್ಮ ಪತ್ನಿ ಎಂಬುದಾಗಿ ಬಿಹಾರಿನ ಮಹಿಳಾ ಆಯೋಗದ ಮುಂದೆ ಅಂಗೀಕರಿಸಿದರು. ರಂಜನಾ ಅವರನ್ನು ತಮ್ಮ ಮೊದಲ ಪತ್ನಿ ಎಂಬುದಾಗಿ ಒಪ್ಪಿಕೊಂಡು ಅವರಿಗೆ ಪತ್ನಿಯ ಸ್ಥಾನಮಾನ ನೀಡಲು ಉದಿತ್ ಅವರು ಒಪ್ಪಿದ್ದಾರೆ ಎಂದು ಆಯೋಗದ ಅಧ್ಯಕ್ಷೆ ಮಂಜು ಪ್ರಕಾಶ್ ಈದಿನ ಪ್ರಕಟಿಸಿದರು.
1943: ಇಟಲಿಯ ಫ್ಯಾಸಿಸ್ಟ್ ಸರ್ವಾಧಿಕಾರಿ ಬೆನಿಟೊ ಮುಸೋಲಿನಿ ಈದಿನ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ. 10 ವರ್ಷಗಳ ಕಾಲ ನಿರಂಕುಶ ಆಡಳಿತ ನಡೆಸಿದ ಈತ 1936-1939ರ ನಡುವಣ ಸ್ಪಾನಿಷ್ ಜತೆಗಿನ ಯುದ್ಧದಲ್ಲಿ ಹಿಟ್ಲರ್ ಜೊತೆಗೆ ಕೈಜೋಡಿಸಿದ.
1935: ಪ್ರಾಧ್ಯಾಪಕ, ಸಾಹಿತಿ ವಾಮನ ಬೇಂದ್ರೆ ಅವರು ವರಕವಿ ದ.ರಾ. ಬೇಂದ್ರೆ- ಲಕ್ಷ್ಮೀಬಾಯಿ ದಂಪತಿಯ ಪುತ್ರನಾಗಿ ಹಾವೇರಿ ಜಿಲ್ಲೆಯ (ಹಿಂದಿನ ಧಾರವಾಡ ಜಿಲ್ಲೆ) ರಾಣೆಬೆನ್ನೂರಿನಲ್ಲಿ ಜನಿಸಿದರು. ಶಾಲೆಯಲ್ಲಿ ಇದ್ದಾಗಲೇ ಬರವಣಿಗೆ ಪ್ರಾರಂಭಿಸಿದ ಅವರಿಗೆ ಸಾಹಿತ್ಯ ರಚನೆ ತಂದೆಯಿಂದ ಬಂದ ಬಳುವಳಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ವಾಮನ ಬೇಂದ್ರೆ ಅವರು ಪ್ರಬಂಧ, ಕವನ, ನಾಟಕ, ಅನುವಾದ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದವರು.
1909: ರಾಜಕಾರಣಿ ಬ್ರಹ್ಮಾನಂದರೆಡ್ಡಿ ಜನನ.
- (ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment