ನಾನು ಮೆಚ್ಚಿದ ವಾಟ್ಸಪ್

Monday, November 4, 2019

ಇಂದಿನ ಇತಿಹಾಸ History Today ನವೆಂಬರ್ 04

2019: ನವದೆಹಲಿ: ರಾಜಧಾನಿ ದೆಹಲಿ ಮತ್ತು ಉತ್ತರ ಭಾರತದ ಬಹಳಷ್ಟು ಕಡೆಗಳಲ್ಲಿ ವಾಯುಮಾಲಿನ್ಯವು ವಿಷಮ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು 2019 ನವೆಂಬರ್ 05ರ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್, ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ತ್ಯಾಜ್ಯ ಸುಟ್ಟರೆ ಒಂದು ಲಕ್ಷ ರೂಪಾಯಿ ದಂಡ ವಿಧಿಸುವಂತೆ ಆಜ್ಞಾಪಿಸಿತು. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ತ್ಯಾಜ್ಯಗಳನ್ನು ತಂದು ಸುರಿದವರಿಗೆ ೫೦೦೦ ರೂಪಾಯಿಗಳ ದಂಡ ವಿಧಿಸುವಂತೆಯೂ ಆದೇಶ ನೀಡಿದ ಸುಪ್ರೀಂಕೋರ್ಟ್ ಪೀಠವು, ತಾನು ಮುಂದಿನ ಆದೇಶ ನೀಡುವವರೆಗೆ ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಬಾರದು ಎಂದೂ ಕಟ್ಟು ನಿಟ್ಟಿನ ಆಜ್ಞೆ ಮಾಡಿತು. ವಿದ್ಯುತ್ ಜನರೇಟರ್‌ಗಳ ಬಳಕೆಯನ್ನು ಸ್ಥಗಿತಗೊಳಿಸುವಂತೆಯೂ ಆಜ್ಞೆ ಮಾಡಿದ ಸುಪ್ರೀಂಕೋರ್ಟ್ ತನ್ನ ಆದೇಶಗಳನ್ನು ವ್ಯಾಪಕ ಪ್ರಮಾಣದಲ್ಲಿ ಪ್ರಸಾರ ಮಾಡುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಿತು. ದೆಹಲಿಯ ವಾಯುಮಾಲಿನ್ಯ ವಿಷಯಕ್ಕೆ ಸಂಬಂಧಿಸಿದಂತೆ ನವೆಂಬರ್ ೬ರ ಬುಧವಾರ ಪೀಠವು ಮತ್ತೆ ವಿಚಾರಣೆ ನಡೆಸಲಿದೆ. ಇದಕ್ಕೆ ಮುನ್ನ ದೆಹಲಿ ಮತ್ತು ಇತರ ಕಡೆಗಳಲ್ಲಿ ಪ್ರತಿವರ್ಷವೂ ವಾಯುಮಾಲಿನ್ಯ ಇದೇ ರೀತಿ ಪುನರಾವರ್ತನೆಯಾಗುತ್ತಿದೆ ಎಂದು ಹೇಳಿದ ಸುಪ್ರೀಂಕೋರ್ಟ್, ಸಮಸ್ಯೆ ಬಗೆ ಹರಿಸಲು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಕ್ಕೆ ಒಂದಿಷ್ಟೂ ಕಾಳಜಿ ಇಲ್ಲ. ಕೇವಲ ಬೂಟಾಟಿಕೆ (ಗಿಮಿಕ್) ಮಾಡುತ್ತಾ ಕಾಲ ತಳ್ಳುತ್ತಿವೆ ಎಂದು ಚಾಟಿ ಬೀಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ದೆಹಲಿಯಲ್ಲಿ ಒಂದು ವಾರ ಉಸಿರಾಡಿದರೆ ಸಾಕು, ಅದು ೧೪೮ ಸಿಗರೇಟ್
ಸೇದಿದ್ದಕ್ಕೆ ಸಮವಾಗುತ್ತದೆ. ಹೌದು ವಾಯುಮಾಲಿನ್ಯ ಮಟ್ಟವನ್ನು ಸೂಚಿಸುವ ಆಪ್ ಇದನ್ನು ಬಹಿರಂಗ ಗೊಳಿಸಿದೆ. ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದ ವಾಯುಮಾಲಿನ್ಯ ತೀವ್ರಗೊಂಡಿದ್ದು,  ವಾಯುಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಸೋಮವಾರ ೫೦೦ ಅಂಕಗಳಿಗೆ ತಲುಪಿದೆ. ವಾರಾಂತ್ಯದಲ್ಲಿ ಸುರಿದ ಮಳೆ ಪರಿಸರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಏನೇನೂ ಅನುಕೂಲ ಮಾಡಿಕೊಟ್ಟಿಲ್ಲ ಎಂಬುದು ರಾಜಧಾನಿಯಲ್ಲಿ ಕರಿಯ ಹೊಗೆ ಮತ್ತು ದೂಳಿನ ಪದರ ಹೆಚ್ಚುತ್ತಲೇ ಇರುವುದರಿಂದ ಖಚಿತಗೊಂಡಿದೆ. ದಿನದಿಂದ ದಿನಕ್ಕೆ ಕುಸಿಯುತ್ತಲೇ ಇರುವ ವಾಯುಗುಣಮಟ್ಟ ಸಹಜ ಬದುಕನ್ನು ಅಸ್ತವ್ಯಸ್ತಗೊಳಿಸಿದ್ದು,  ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಸಾರಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ದಟ್ಟ ಹೊಗೆ, ದೂಳಿನ ಪದರದಿಂದಾಗಿ ಉಂಟಾಗಿರುವ ಪ್ರತಿಕೂಲ ಹವಾಮಾನದಲ್ಲಿ ಇಳಿಯಲು ಸಾಧ್ಯವಾಗದೆ ವಿಮಾನಗಳ ಹಾರಾಟ ಮಾರ್ಗಗಳನ್ನೇ ಬದಲಿಸಲಾಗುತ್ತಿದೆ. ದೆಹಲಿಯಿಂದ ಹೊರಡಬೇಕಾದ ಹಲವಾರು ವಿಮಾನಗಳ ಹಾರಾಟ ವಿಳಂಬಗೊಂಡಿದೆ.  ಉಸಿರಾಟಕ್ಕೇ ಪರದಾಡಬೇಕಾದ ಸನ್ನಿವೇಶದಲ್ಲಿ ನಗರದಿಂದ ಹೊರಕ್ಕೆ ಹೋಗುವುದೇ ಬುದ್ಧಿವಂತಿಕೆಯ ಕ್ರಮ ಎಂದು ಹಲವರು ಸಲಹೆ ಮಾಡಲಾರಂಭಿಸಿದ್ದಾರೆ. ಕಣ್ಣುಗಳಲ್ಲಿ ಉರಿ, ತುರಿಕೆ, ಗಂಟಲು ಒಣಗುವಿಕೆ ಮತ್ತು ಉಸಿರಾಟದ ಸಮಸ್ಯೆ ನಗರದಾದ್ಯಂತ ಮಾತುಕತೆಯ ಪ್ರಮುಖ ವಿಷಯವಾಗಿ ಬದಲಾಗುತ್ತಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


2019: ಬ್ಯಾಂಕಾಕ್:  ಸೇವಾ ನೌಕರರು ಮತ್ತು ರೈತರ ರಕ್ಷಣೆಯ ಸಲುವಾಗಿ ಪ್ರಾದೇಶಿಕ ಸಮಗ್ರ
ಆರ್ಥಿಕ ಪಾಲುದಾರಿಕೆ ಅಥವಾ ಆರ್‌ಸಿಇಪಿಯನ್ನು  ಸೇರದೇ ಇರಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ. ‘ಕೊರತೆಗಳ ಬಗ್ಗೆ ಗಮನ ಹರಿಸುವಂತೆ  ಮುತ್ತು ಭಾರತದ ಸೇವೆಗಳು ಮತ್ತು ಹೂಡಿಕೆಗಳಿಗೆ ತಮ್ಮ ಮಾರುಕಟ್ಟೆಗಳನ್ನು ತೆರೆಯುವಂತೆ ಭಾರತವು ಇತರ ೧೫ ರಾಷ್ಟ್ರಗಳನ್ನು ಆಗ್ರಹಿಸಿದೆ ಎಂದು ಭಾರತದ ಅಧಿಕಾರಿಯೊಬ್ಬರು 2019 ನವೆಂಬರ್  4ರ ಸೋಮವಾರ ನವದೆಹಲಿಯಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿದರು.  ‘ಇತ್ಯರ್ಥವಾಗದೇ ಇರುವ ಮಹತ್ವದ ವಿಷಯಗಳಿವೆ ಅವುಗಳನ್ನು ಮೊದಲು ಇತ್ಯರ್ಥ ಪಡಿಸಬೇಕಾಗಿದೆ ಎಂದು ಆರ್‌ಸಿಇಪಿ ರಾಷ್ಟ್ರಗಳಿಗೆ ಭಾರತ ಆಗ್ರಹಿಸಿತು ಎಂದು ಆರ್‌ಸಿಇಪಿ ರಾಷ್ಟ್ರಗಳು ಕೂಡಾ ಸೋಮವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿದವು. ‘ಪರಸ್ಪರ ಒಪ್ಪಿಗೆಯಾಗುವ ರೀತಿಯಲ್ಲಿ ಎಲ್ಲ ಆರ್‌ಸಿಇಪಿ ರಾಷ್ಟ್ರಗಳು ಬಾಕಿ ಉಳಿದಿರುವ ವಿಷಯಗಳ ಇತ್ಯರ್ಥಕ್ಕೆ ಒಟ್ಟಾಗಿ ಶ್ರಮಿಸಲಿವೆ. ಭಾರತದ ಅಂತಿಮ ನಿರ್ಧಾರವು ಈ ವಿಷಯಗಳ ಸಮಾಧಾನಕರ ಇತ್ಯರ್ಥವನ್ನು ಅವಲಂಬಿಸಿದೆ ಎಂದೂ ಹೇಳಿಕೆ ತಿಳಿಸಿತು.  ‘ಯಾವಾಗ ಬೇಕಿದ್ದರೂ ಆರ್‌ಸಿಇಪಿ ಸೇರಲು ಭಾರತಕ್ಕೆ ಸ್ವಾಗತವಿದೆ ಎಂದು ಉಪ ವಿದೇಶಾಂಗ ಸಚಿವ ಲೆ ಯುಚೆಂಗ್ ಅವರು ಸೋಮವಾರ ಬ್ಯಾಂಕಾಕಿನಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ವಾಣಿಜ್ಯ ಒಪ್ಪಂದದ ಪ್ರಗತಿ ಬಗ್ಗೆ ಈ ವಾರದಲ್ಲಿ ಪ್ರಕಟಣೆ ಬರಬಹುದು ಎಂದು ಏಷ್ಯಾದ ನಾಯಕರು ಆಶಯ ವ್ಯಕ್ತ ಪಡಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


2019: ನವದೆಹಲಿ: ಅನರ್ಹ ಶಾಸಕರ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು
ಮಾತನಾಡಿದ್ದಾರೆ ಎನ್ನಲಾಗಿರುವ ಹೊಸ ಆಡಿಯೋ ಟೇಪ್ ಪ್ರಕರಣ 2019 ನವೆಂಬರ್ 04ರ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಪ್ರತಿಧ್ವನಿಸಿದ್ದು, ಶಾಸಕರ ಅನರ್ಹತೆ ಪ್ರಕರಣದಲ್ಲಿ ಇದನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಕರ್ನಾಟಕ ಕಾಂಗ್ರೆಸ್ ಪಕ್ಷವು ನ್ಯಾಯಪೀಠಕ್ಕೆ ಮನವಿ ಮಾಡಿತು. ಕರ್ನಾಟಕ ಕಾಂಗ್ರೆಸ್ ನೀಡಿರುವ ಹೊಸ ಸಾಕ್ಷ್ಯವನ್ನು ಪರಿಗಣಿಸಲು ವಿಶೇಷ ಪೀಠ ರಚಿಸುವ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ಜೊತೆ ಸಮಾಲೋಚಿಸುವುದಾಗಿ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಹೇಳಿತು.  2019 ನವೆಂಬರ್ 05ರ ಮಂಗಳವಾರ ವಿಷಯವನ್ನು ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ಪೀಠ ಸಮ್ಮತಿಸಿತು. ಜನತಾದಳ -ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ೧೭ ಮಂದಿ ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ಶಾಸಕರ ಬಂಡಾಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪಾತ್ರವಿದೆ ಎಂಬುದಾಗಿ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ  ಎಂಬುದನ್ನು ಹೊಸ ಆಡಿಯೋ ಟೇಪ್ ಬಹಿರಂಗ ಪಡಿಸಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತು. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠದ ಮುಂದೆ ಸೋಮವಾರ ವಿಷಯವನ್ನು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರ ಪರವಾಗಿ ಪ್ರಸ್ತಾಪಿಸಿದರು. ಕರ್ನಾಟಕದ ಅನರ್ಹ ಶಾಸಕರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಇತ್ಯರ್ಥ ಪಡಿಸುವಲ್ಲಿ ಈ ವಿಷಯವು ಪರಿಣಾಮ ಬೀರಬಲ್ಲುದು ಎಂದು ಸಿಬಲ್ ಹೇಳಿದರು. ಅದಕ್ಕೆ ಪೀಠವು ಆಗಿನ ವಿಧಾನಸಭಾಧ್ಯಕ್ಷರ ವಿರುದ್ಧ ಅನರ್ಹ ಶಾಸಕರು ಸಲ್ಲಿಸಿದ್ದ ಮನವಿ ಕುರಿತ ತೀರ್ಪನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂದು ಹೇಳಿತು. ‘ಸಾರ್ವಜನಿಕ ಬದುಕಿನಲ್ಲಿ ರಾಜಕಾರಣಿಗಳು ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ ಎಂದೂ ಪೀಠ ಹೇಳಿತು. ಆದರೆ ಸಿಬಲ್ ಅವರು ಸಂಭಾಷಣೆ ದಾಖಲಾಗಿರುವ ಆಡಿಯೋ ಟೇಪನ್ನು ದಾಖಲೆಗೆ ಸೇರ್ಪಡೆ ಮಾಡಬೇಕು ಎಂಬುದಾಗಿ ಆಗ್ರಹಿಸಿದಾಗ, ನ್ಯಾಯಮೂರ್ತಿ ರಮಣ ಅವರು ಮಂಗಳವಾರ ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ವಿಶೇಷ ಪೀಠ ರಚಿಸುವಂತೆ ತಾವು ಸಿಜೆಐ ಅವರಿಗೆ ಮನವಿ ಮಾಡುವುದಾಗಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

ಇಂದಿನ ಇತಿಹಾಸ   History Today 
ನವೆಂಬರ್ 04 (2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment