ನಾನು ಮೆಚ್ಚಿದ ವಾಟ್ಸಪ್

Wednesday, November 13, 2019

ಇಂದಿನ ಇತಿಹಾಸ History Today ನವೆಂಬರ್ 13

2019: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಕಚೇರಿಯು ಪಾರದರ್ಶಕತೆಯ ಕಾನೂನಾಗಿರುವ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು 2019 ನವೆಂಬರ್ 13ರ ಬುಧವಾರ ಮಹತ್ವದ ತೀರ್ಪು ನೀಡಿತು. ಮಾಹಿತಿಯನ್ನು ಮುಚ್ಚಿಡುವ ಮೂಲಕ ನ್ಯಾಯಾಂಗ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು. ‘ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಉತ್ತರದಾಯಿತ್ವವು ಪರಸ್ಪರ ಕೈ ಹಿಡಿದುಕೊಂಡೇ ಸಾಗುತ್ತವೆ.. ಪಾರದರ್ಶಕತೆಯು ಸ್ವಾತಂತ್ರ್ಯವನ್ನು ಬಲಪಡಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹೇಳಿದರು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಕ್ ಗುಪ್ತ, ಎನ್‌ವಿ ರಮಣ ಮತ್ತು ಡಿವೈ ಚಂದ್ರಚೂಡ್ ಅವರು ಪೀಠದ ಇತರ ಸದಸ್ಯರಾಗಿದ್ದರು. ‘ನ್ಯಾಯಾಂಗ ಸ್ವಾತಂತ್ರ್ಯ ಎಂದರೆ ನ್ಯಾಯಾಧೀಶರು ಕಾನೂನಿಗಿಂತ ಮೇಲೆ ಎಂದು ಅರ್ಥವಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. ಸಿಜೆಐ ಕಚೇರಿಯು ಸಾರ್ವಜನಿಕ ಪ್ರಾಧಿಕಾರವಾಗಿದೆ ಎಂಬುದಾಗಿ ಹೇಳಿ ಆರ್‌ಟಿಐ ಕಾರ್‍ಯಕರ್ತ ಎಸ್‌ಸಿ ಅಗರ್‌ವಾಲ್ ಅವರು ಕೋರಿದ್ದಂತೆ ನ್ಯಾಯಾಧೀಶರ ಆಸ್ತಿ ವಿವರ ನೀಡುವಂತೆ ಸುಪ್ರೀಂಕೋರ್ಟ್ ಸೆಕ್ರೆಟರಿ ಜನರಲ್ ಅವರಿಗೆ ನಿರ್ದೇಶನ ನೀಡಿ ೨೦೧೦ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಕೋರ್ಟಿನ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸಲ್ಲಿಸಿದ್ದ ಅರ್ಜಿಯ ಮೇಲೆ, ನವೆಂಬರ್ ೧೭ರಂದು ನಿವೃತ್ತರಾಗಲಿರುವ ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ಈ ತೀರ್ಪನ್ನು ನೀಡಿದೆ. ಸುಪ್ರೀಂಕೋರ್ಟ್ ೧೯೯೭ರ ಮೇ ೧೭ರಂದು ಕೈಗೊಂಡಿದ್ದ ನಿರ್ಣಯದ ಪ್ರತಿಯೊಂದನ್ನು ನೀಡುವಂತೆ ಅಗರ್‌ವಾಲ್  ಅವರು ೨೦೦೭ರಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೋರಿದ್ದರು. ಈ ನಿರ್ಣಯದ ಪ್ರಕಾರ ಎಲ್ಲ ನ್ಯಾಯಮೂರ್ತಿಗಳು ತಾವು ಹೊಂದಿರುವ ಆಸ್ತಿಯನ್ನು ಘೋಷಿಸುವುದು ಕಡ್ಡಾಯವಾಗಿತ್ತು. ೨೦೧೦ರಲ್ಲಿ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಪಿ ಶಾ, ವಿಕ್ರಮ್ ಜಿತ್ ಸೇನ್ ಮತ್ತು ಎಸ್.ಮುರಳೀಧರ್ ಅವರನ್ನು ಒಳಗೊಂಡ ದೆಹಲಿ ಹೈಕೋರ್ಟಿನ ತ್ರಿಸದಸ್ಯ ಪೀಠವು ಸಿಜೆಐ ಕಚೇರಿಯು ಸಾರ್ವಜನಿಕ ಪ್ರಾಧಿಕಾರವಾಗಿದೆ. ಆದ್ದರಿದ ಅದು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ಮೇಲ್ಮನವಿಯನ್ನು ಅಂಗೀಕರಿಸಿದ್ದ ಸುಪ್ರೀಂಕೋರ್ಟ್ ಪೀಠವು, ಹೈಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿತ್ತು.  (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಮಹಾರಾಷ್ಟ್ರದ ಸರ್ಕಾರ ರಚನೆ ಬಿಕ್ಕಟ್ಟಿನ ಬಗ್ಗೆ 2019 ನವೆಂಬರ್ 13ರ ಬುಧವಾರ ಇದೇ ಮೊದಲ ಬಾರಿಗೆ ತಮ್ಮ ಮೌನವನ್ನು ಮುರಿದ ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ’ಸಂಖ್ಯಾ ಬಲವುಳ್ಳ ಯಾವುದೇ ಪಕ್ಷ ಈಗಲೂ ರಾಜ್ಯಪಾಲರನ್ನು ಭೇಟಿ ಮಾಡಬಹುದು ಎಂದು ಹೇಳಿದರು. ಇದಕ್ಕೆ ಮುನ್ನ, ಯಾವುದೇ ರಾಜ್ಯವೂ ಸರ್ಕಾರ ರಚನೆಗೆ ಇಷ್ಟೊಂದು ಕಾಲಾವಕಾಶ ನೀಡಿರಲಿಲ್ಲ. ಮಹಾರಾಷ್ಟ್ರದಲ್ಲಿ ೧೮ ದಿನಗಳನ್ನು ನೀಡಲಾಯಿತು. ವಿಧಾನಸಭೆಯ ಅವಧಿ ಮುಗಿದ ಬಳಿಕ ಮಾತ್ರವೇ ರಾಜ್ಯಪಾಲರು ಪಕ್ಷಗಳನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ಶಿವಸೇನೆ, ಇಲ್ಲವೇ ಕಾಂಗ್ರೆಸ್-ಎನ್‌ಸಿಪಿ ಅಥವಾ ನಾವು ಸರ್ಕಾರ ರಚನೆಗೆ ಹಕ್ಕು ಮಂಡಿಸಲಿಲ್ಲ ಎಂದು ಗೃಹ ಸಚಿವರು ನುಡಿದರು. ತಮ್ಮ ಪಕ್ಷ ಮತ್ತು ಶಿವಸೇನೆಯ ಮಧ್ಯೆ ಉಂಟಾದ ಬಿರುಕು ರಾಜ್ಯದಲ್ಲಿ 2019 ನವೆಂಬರ್ 12ರ ಮಂಗಳವಾರ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಕಾರಣವಾಯಿತು ಎಂದು ಬಿಜೆಪಿ ನಾಯಕ ಹೇಳಿದರು. ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕು ಎಂಬುದು ಶಿವಸೇನೆಯ ಹೊಸ ಬೇಡಿಕೆಯಾಗಿದ್ದು ಅದು ಭಾರತೀಯ ಜನತಾ ಪಕ್ಷಕ್ಕೆ ಸ್ವೀಕಾರಾರ್ಹವಾಗಿರಲಿಲ್ಲ ಎಂದು ಅಮಿತ್ ಶಾ ಸ್ಪಷ್ಟ ಪಡಿಸಿದರು. ಶಿವಸೇನೆಯು ಈ ವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಿಂದ ತನ್ನ ಏಕೈಕ ಸಚಿವ ಅರವಿಂದ ಸಾವಂತ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಮಹಾರಾಷ್ಟ್ರದಲ್ಲಿ ಉಭಯ ಪಕ್ಷಗಳ ಮೈತ್ರಿ ಮುರಿದುದರ ಸೂಚನೆ ನೀಡಿತ್ತು. ಆ ಬಳಿಕ ಶಿವಸೇನೆಯು ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಜೊತೆಗೆ ಸರ್ಕಾರ ರಚನೆಯ ನಿಟ್ಟಿನಲ್ಲಿ ಮೈತ್ರಿಕೂಟ ರಚಿಸಲು ತೀವ್ರ ಮಾತುಕತೆಗಳನ್ನು ನಡೆಸುತ್ತಿದೆ. ಆದಾಗ್ಯೂ ತನ್ನ ಮಾಜಿ ಮಿತ್ರ ಪಕ್ಷ ಬಿಜೆಪಿಯತ್ತ ವಾಗ್ಬಾಣಗಳನ್ನು ಬಿಡುವುದನ್ನು ಶಿವಸೇನೆ ನಿಲ್ಲಿಸಿಲ್ಲ.  ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಉದ್ಧವ್ ಠಾಕ್ರೆ ಅವರು ’ಮುಖ್ಯಮಂತ್ರಿ ಸ್ಥಾನವನ್ನು  ಹಂಚಿಕೊಳ್ಳುವ ಬಗ್ಗೆ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು ಎಂಬುದಾಗಿ ತಾವು ಪ್ರತಿಪಾದಿಸುತ್ತಿರುವುದಕ್ಕಾಗಿ ತಮ್ಮನ್ನು ಸುಳ್ಳುಗಾರ ಎಂಬುದಾಗಿ ಬಿಂಬಿಸಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎಂದು ದೂರುವ ಮೂಲಕ ವಿಷಯವನ್ನು ಪುನಃ ಪ್ರಸ್ತಾಪಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್  2019 ನವೆಂಬರ್ 14 ಗುರುವಾರ ಪ್ರಕಟಿಸಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್, ಡಿ.ವೈ.ಚಂದ್ರಚೂಡ್ ಮತ್ತು ಇಂದು ಮಲ್ಹೊತ್ರಾ ಒಳಗೊಂಡ ನ್ಯಾಯಪೀಠ ತೀರ್ಪು ನೀಡಲಿದೆ. ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು 2018 ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. 5 ವರ್ಷದಿಂದ 50 ವರ್ಷ ವಯಸ್ಸಿನವರೆಗಿನ ಮಹಿಳೆಯರು ದೇಗುಲ ಪ್ರವೇಶಿಸಬಾರದು ಎಂಬ ನಿಯಮವನ್ನು 2018 ಸೆಪ್ಟೆಂಬರ್ 28ರಂದು ರದ್ದುಪಡಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್, .ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದು ಮಲ್ಹೊತ್ರಾ ಅವರಿದ್ದ ನ್ಯಾಯಪೀಠ 4:1 ತೀರ್ಪು ನೀಡಿತ್ತು. ನಾಲ್ವರು ನ್ಯಾಯಮೂರ್ತಿಗಳು ತೀರ್ಪಿನ ಪರ ಇದ್ದರೆ ಇಂದು ಮಲ್ಹೊತ್ರಾ ಮಾತ್ರ ತೀರ್ಪಿಗೆ ಸಹಮತ ವ್ಯಕ್ತಪಡಿಸಿರಲಿಲ್ಲ. ಧಾರ್ಮಿಕ ಆಚರಣೆಗಳನ್ನು ಸಂವಿಧಾನದ 14ನೇ ವಿಧಿ ಅನ್ವಯ ಪರಿಗಣಿಸಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನ ಅನುಷ್ಠಾನ ವಿಚಾರವಾಗಿ ಕೇರಳದಲ್ಲಿ ರಾಜಕೀಯ ಸಂಘರ್ಷಗಳೂ ನಡೆದಿದ್ದವು. ಬಳಿಕ ತೀರ್ಪಿನ ಮರುಪರಿಶೀಲನೆಗೆ ಕೋರಿ ಸುಮಾರು 56 ಅರ್ಜಿಗಳು ಹಾಗೂ ಕೆಲವು ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಚಾರಣೆಯನ್ನು 2019 ಫೆಬ್ರುವರಿ 6ರಂದು ಮುಕ್ತಾಯಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. (ವಿವರಗಳಿಗೆ ಇಲ್ಲಿ ಕಿಕ್ಕಿಸಿ)

2019: ನವದೆಹಲಿ: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಕ್ಲೀನ್ಚಿಟ್ ನೀಡಿರುವ ಬಗ್ಗೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ 2019 ನವೆಂಬರ್ 14ರ ಗುರುವಾರ ಪ್ರಕಟಿಸಲಿದೆ. ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮೇ 10ರಂದು ಪೂರ್ಣಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಸರ್ಕಾರಕ್ಕೆ ಕ್ಲೀನ್ಚಿಟ್ ನೀಡಿರುವುದನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್, ಕೆ.ಎಂ.ಜೋಸೆಫ್ ಅವರಿದ್ದ ನ್ಯಾಯಪೀಠವು ತೀರ್ಪು ನೀಡಲಿದೆ. ರಫೇಲ್ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ 2018 ಡಿಸೆಂಬರ್ 14ರಂದು ವಜಾಗೊಳಿಸಿತ್ತು. (ವಿವರಗಳಿಗೆಇಲ್ಲಿ ಕಿಕ್ಕಿಸಿ)

2019: ಬೆಂಗಳೂರು: ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಹೊಂದಿದ್ದಾರೆ ಎಂಬುದಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೇ ಅನರ್ಹ ಶಾಸಕರಿಗೆ ಉಪಚುನಾವಣಾ ಅಭ್ಯರ್ಥಿಗಾಗಿ ಟಿಕೆಟ್ ನೀಡಲು ಆಡಳಿತಾರೂಢ ಭಾರತೀಯ ಜನತಾ ಪಕ್ಷ 2019 ನವೆಂಬರ್ 13ರ ಬುಧವಾರ ನಿರ್ಧರಿಸಿತು. ಅನರ್ಹ ಶಾಸಕರು 2019 ನವೆಂಬರ್ 14ರ ಗುರುವಾರ ಪಕ್ಷವನ್ನು ಸೇರಿದ ಬಳಿಕ ಅವರನ್ನು ಪಕ್ಷದ ಅಭ್ಯರ್ಥಿಗಳು ಎಂಬುದಾಗಿ ಘೋಷಿಸಲು ಬಿಜೆಪಿ ತೀರ್ಮಾನಿಸಿತು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಾಯಕರು ಈ ತೀರ್ಮಾನ ಕೈಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿದವು. ಅನರ್ಹ ಶಾಸಕರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡನೆಯಾದ ಬಳಿಕ ಅವರಿಗೆ ಟಿಕೆಟ್ ನೀಡಲಾಗುವುದು. ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿದವು. ಕೋರ್ ಕಮಿಟಿ ಸಭೆಯಲ್ಲಿ ಟಿಕೆಟ್ ನೀಡುವ ಬಗೆಗಿನ ನಿರ್ಧಾರದ ಜೊತೆಗೆ ೧೫ ಕ್ಷೇತ್ರಗಳಿಗೆ ಉಸ್ತುವಾರಿಗಳ ಆಯ್ಕೆಯನ್ನೂ ಮಾಡಲಾಗಿದೆ.  ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಸಲಾಗುವುದು. ನಾನು ಹಾಗೂ ರಾಜ್ಯಾಧ್ಯಕ್ಷರು ಈ ವಿಚಾರ ಚರ್ಚಿಸಿದ್ದು,  ಸಮಾಲೋಚನೆ ನಡೆಸಿದ್ದೇವೆ  ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು. ಅನರ್ಹರಿಗೆ ಟಿಕೆಟ್ ನೀಡುವುದರಿಂದ ಪಕ್ಷದಲ್ಲಿ ಮೂಲ ಕಾರ್ಯಕರ್ತರು ಬಂಡಾಯ ಏಳುವ ಸಾಧ್ಯತೆ ಕೂಡಾ ಇದ್ದು, ಅದನ್ನು ಯಾವ ರೀತಿ ಶಮನ ಮಾಡಬೇಕು ಎಂಬ ಕುರಿತೂ  ಸಭೆಯಲ್ಲಿ ಚರ್ಚಿಸಲಾಯಿತು. (ವಿವರಗಳಿಗೆಇಲ್ಲಿ ಕಿಕ್ಕಿಸಿ)

2019: ನವದೆಹಲಿ: ಹದಿನೇಳು ಮಂದಿ ಅನರ್ಹ ಶಾಸಕರನ್ನು ಅನರ್ಹಗೊಳಿಸಿ ಅಂದಿನ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ನೀಡಿದ್ದ ಆದೇಶವನ್ನು  ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು 2019 ನವೆಂಬರ್ 13ರ ಬುಧವಾರ ಭಾಗಶಃ ಎತ್ತಿಹಿಡಿದು, ಡಿಸೆಂಬರ್ ೫ರಂದು ನಡೆಯಲಿರುವ ಉಪಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶ ನೀಡಿತು. ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಆದೇಶ ಸರಿ, ಆದರೆ ಶಾಸನಸಭೆಯ ಪೂರ್ತಿ ಅವಧಿಗೆ ಅನರ್ಹಗೊಳಿಸಿದ್ದು ಸರಿಯಲ್ಲ, ಅನರ್ಹರಾದವರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್‌ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ತೀರ್ಪು ನೀಡಿತು. ಇದರೊಂದಿಗೆ ಡಿಸೆಂಬರ್ ೫ರಂದು ನಡೆಯಲಿರುವ ರಾಜ್ಯದ ೧೫ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಅನರ್ಹ ಶಾಸಕರ ಪ್ರಕರಣಕ್ಕೆ ತೆರೆ ಬಿದ್ದಿತು. ೨೦೨೩ರವರೆಗೆ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ರಾಜೀನಾಮೆ ಸ್ವೀಕರಿಸುವುದಷ್ಟೇ ಸ್ಪೀಕರ್ ಕೆಲಸ ಎಂದು ಸುಪ್ರೀಂಕೋರ್ಟ್ ಪೀಠ ಸ್ಪಷ್ಟಪಡಿಸಿತು.  ಶಾಸಕರ ಅನರ್ಹತೆಗೆ ಅವಧಿ ನಿರ್ಧಾರ ಮಾಡುವಂತಿಲ್ಲ. ಅನರ್ಹತೆ ಕೇವಲ ಉಪಚುನಾವಣೆ ನಡೆಯುವವರೆಗೆ ಮಾತ್ರ. ವಿಧಾನಸಭೆ ಅವಧಿ ಮುಗಿಯುವವರೆಗೆ ಅಲ್ಲ. ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಚುನಾವಣೆಗೆ ಸ್ಪರ್ಧಿಸುವವರೆಗೆ ಮಂತ್ರಿಯಾಗುವಂತಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಮಂತ್ರಿಯಾಗಬಹುದು ಎಂದು ಸುಪ್ರೀಂಕೋರ್ಟ್ ಹೇಳಿತು. (ವಿವರಗಳಿಗೆ ಇಲ್ಲಿ ಕಿಕ್ಕಿಸಿ)


No comments:

Post a Comment