ನಾನು ಮೆಚ್ಚಿದ ವಾಟ್ಸಪ್

Tuesday, November 5, 2019

ಇಂದಿನ ಇತಿಹಾಸ History Today ನವೆಂಬರ್ 05

2019: ನವದೆಹಲಿ: ವಕೀಲರು ಪೊಲೀಸರನ್ನು ಥಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರದ ರಾಜಧಾನಿಯಲ್ಲಿ ಪೊಲೀಸ್ ಸಿಬ್ಬಂದಿ ೨೦೧೯ ನವೆಂಬರ್ ೦೫ರ ಮಂಗಳವಾರ ಪೊಲೀಸ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದ್ದಲ್ಲದೆ, ವಾಹನ ನಿಬಿಡ ರಸ್ತೆಯಲ್ಲಿ ೧೧ ಗಂಟೆಗಳ ಕಾಲ ಅಭೂತಪೂರ್ವವಾದ  ಭಾರೀ ಪ್ರತಿಭಟನೆಯನ್ನು ನಡೆಸಿದ್ದು, ಬೇಡಿಕೆ ಈಡೇರಿಕೆ ಬಗ್ಗೆ ಹಿರಿಯ ಅಧಿಕಾರಿಗಳ ಭರವಸೆಯ ಬಳಿಕ ರಾತ್ರಿ  ಪ್ರತಿಭಟನೆ ಹಿಂತೆಗೆದುಕೊಂಡರು. ಮಧ್ಯೆ ಕೇಂದ್ರ ಗೃಹ ಸಚಿವಾಲಯವು ಬಿಕ್ಕಟ್ಟು ಶಮನಗೊಳಿಸುವ ಸಲುವಾಗಿ ವಕೀಲರನ್ನು ಬಂಧಿಸದಂತೆ ಪೊಲೀಸರಿಗೆ ಆಜ್ಞಾಪಿಸಿದ ಆದೇಶದ ಬಗ್ಗೆ ಸ್ಪಷ್ಟನೆ ನೀಡುವಂತೆ ದೆಹಲಿ ಹೈಕೋರ್ಟಿಗೆ ಮನವಿ ಮಾಡಿತು. ದೆಹಲಿ ಹೈಕೋರ್ಟ್ ಪ್ರಕರಣದ ಮರುವಿಮರ್ಶೆಯನ್ನು ನವೆಂಬರ್ ೬ರ ಬುಧವಾರ ನಡೆಸಲಿದೆ. ಕಳೆದ ವಾರ ವಕೀಲರಿಂದ ಹಲ್ಲೆಗೆ ಒಳಗಾದ ಪೊಲೀಸರಿಗೆ ನ್ಯಾಯ ಒದಗಿಸುವಂತೆ ಕೋರಿ ನೂರಾರು ಮಂದಿ ಪೊಲೀಸ್ ಸಿಬ್ಬಂದಿ ದೆಹಲಿಯ ವಾಹನ ನಿಬಿಡ ರಸ್ತೆಯೊಂದರಲ್ಲಿ ಮಲಗಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಸರ್ಕಾರವು ಹೈಕೋರ್ಟಿಗೆ ಅದರ ಆದೇಶದ ಬಗ್ಗೆ ಸ್ಪಷ್ಟನೆ ಕೇಳಿ ಮನವಿ ಸಲ್ಲಿಸಿತು. ಕೇಂದ್ರದ ನೋಟಿಸಿಗೆ ಸ್ಪಂದಿಸುವಂತೆ ಹೈಕೋರ್ಟ್ ಬಾರ್ ಅಸೋಸಿಯೇಶನ್ ಮತ್ತು ಬಾರ್ ಕೌನ್ಸಿಲ್ಗೆ ಸೂಚನೆ ನೀಡಿದ್ದು, ತನ್ನ ಸದಸ್ಯರನ್ನು ಸಂಯಮವಹಿಸುವಂತೆ ನಿಯಂತ್ರಿಸಲೂ ನಿರ್ದೇಶನ ನೀಡಿತು.   ಶನಿವಾರ ಪೊಲೀಸರು ಮತ್ತು ವಕೀಲರು ಪಾರ್ಕಿಂಗ್ ವಿವಾದವನ್ನು ಅನುಸರಿಸಿ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಹಿಂಸಾತ್ಮಕ ಘರ್ಷಣೆಗೆ ಇಳಿದಿದ್ದರು. ಘರ್ಷಣೆಯ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಇಬ್ಬರು ಆಧೀನ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್ ವಕೀಲರ ವಿರುದ್ಧ ದಮನಕಾರೀ ಕ್ರಮಗಳನ್ನು ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ‘ ದಮನಕಾರಿ ಕ್ರಮಗಳು ನಂತರದ ಘಟನೆಗಳಲ್ಲಿ ಶಾಮೀಲಾದ ವಕೀಲರನ್ನೂ ಬಂಧಿಸದಂತೆ ಪೊಲೀಸರನ್ನು ತಡೆಯುತ್ತದೆಯೇ?’ ಎಂಬುದಾಗಿ ಸ್ಪಷ್ಟ ಪಡಿಸುವಂತೆ ಗೃಹ ಸಚಿವಾಲಯವು ಇದೀಗ ಹೈಕೋರ್ಟನ್ನು ಕೋರಿತು.  (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಂದಿನಿಂದ ಅಧಿಕಾರಕ್ಕಾಗಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ನಡೆಯುತ್ತಿರುವ ಘರ್ಷಣೆ ಇನ್ನೂ ಇತ್ಯರ್ಥ ಕಾಣದ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವುಕಾಯುವ ಆಟವನ್ನು ಆಯ್ಕೆ ಮಾಡಿಕೊಂಡಿತು. ಶಿವಸೇನಾ ನಾಯಕ ಸಂಜಯ್ ರಾವತ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆ ಮಾತುಕತೆಗಳನ್ನು ನಡೆಸಿದ ಬಳಿಕ ಪವಾರ್ ಅವರು ತಮ್ಮ ನಿರ್ಧಾರವನ್ನು ತಮ್ಮಲ್ಲೇ ರಹಸ್ಯವಾಗಿ ಇರಿಸಿಕೊಂಡರು. ಆದಾಗ್ಯೂ, ೨೦೧೯ರ ವಿಧಾನಸಭಾ ಚುನಾವಣೆಯಲ್ಲಿ ೨೦೧೪ರ ಚುನಾವಣೆಗಿಂತ ೧೩ ಸ್ಥಾನಗಳನ್ನು ಹೆಚ್ಚು ಪಡೆದುಕೊಂಡು ತನ್ನ ಬಲವನ್ನು ೫೪ಕ್ಕೆ ಏರಿಸಿಕೊಂಡಿರುವ ಎನ್ಸಿಪಿಯು, ಮೋದಿ ಸಂಪುಟದಲ್ಲಿರುವ ಏಕೈಕ ಶಿವಸೇನಾ ಸಚಿವ ರಾಜೀನಾಮೆ ನೀಡಿದರೆ, ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ಸಿನಿಂದ ಬಾಹ್ಯ ಬೆಂಬಲ ಪಡೆಯಲು ಇಚ್ಛಿಸಿದೆ ಎಂದು ಎನ್ಸಿಪಿ ಮೂಲಗಳು ಹೇಳಿದವು. ಬಿಜೆಪಿ ಜೊತೆಗಿನ ಮೈತ್ರಿಕೂಟದಿಂದ ಶಿವಸೇನೆಯು ಹೊರಕ್ಕೆ ಬಂದರೆ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆಯಕೊಡುಗೆನೀಡಲು ಎನ್ಸಿಪಿ ಸಿದ್ಧವಿದೆ ಎಂದು ಮೂಲಗಳು ಹೇಳಿದವು. ಇನ್ನೊಂದು ಸಂಭಾವ್ಯತೆಯೆಂದರೆ ಶಿವಸೇನೆ ಮತ್ತು ಎನ್ಸಿಪಿಯಿಂದ ತಲಾ ಒಬ್ಬರಂತೆ ಇಬ್ಬರು ಉಪ ಮುಖ್ಯಮಂತ್ರಿಗಳ ನೆರವಿನೊಂದಿಗೆ ಶಿವಸೇನೆಯು ಮುಖ್ಯಮಂತ್ರಿ ಸ್ಥಾನವನ್ನು ಪಡೆಯುವುದು. ‘ಎನ್ಸಿಪಿಯು ಮುಖ್ಯಮಂತ್ರಿ ಸ್ಥಾನವನ್ನು ಬಯಸುವುದಿಲ್ಲ. ನಮಗೆ ಪ್ರಮುಖ ಖಾತೆಗಳು ಲಭಿಸಿದರೆ ಸಾಕುಎಂದು ಎನ್ಸಿಪಿ ಮೂಲ ಹೇಳಿದೆ. ಆದರೆ ಸೇನೆಯಿಂದ ಇನ್ನೂ ಇಂತಹ ಯಾವ ಪ್ರಸ್ತಾಪಗಳೂ ಬಂದಿಲ್ಲ  ಎಂದೂ ಮೂಲ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ಬಿಜೆಪಿಯ ಜೊತೆ ಅಧಿಕಾರದ ಸಮಾನ ಹಂಚಿಕೆಗಾಗಿ ಹೋರಾಟಕ್ಕೆ ಇಳಿದಿರುವ ಮಿತ್ರ ಪಕ್ಷ ಶಿವಸೇನೆ 2019 ನವೆಂಬರ್ 05ರ ಮಂಗಳವಾರ ಮುಖ್ಯಮಂತ್ರಿ ದೇವೇಂದ್ರ  ಫಡ್ನವಿಸ್ ಅವರನ್ನುಹೊರ ಹೋಗುತ್ತಿರುವ ಮುಖ್ಯಮಂತ್ರಿಎಂಬುದಾಗಿ ಕರೆಯುವ ಮೂಲಕ ಬಿಜೆಪಿಯತ್ತ ಇನ್ನೊಂದು ಬಾಣ ಬಿಟ್ಟಿತು. ಶಿವಸೇನೆಯ ಮುಖವಾಣಿಸಾಮ್ನಾ2019 ನವೆಂಬರ್ 04ರ ಸೋಮವಾರ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಫಡ್ನವಿಸ್ ಅವರು  ’ಮಾತು ಕಳೆದುಕೊಂಡಂತೆ’  ಕಾಣುತ್ತಿದೆ ಎಂದು ಹೇಳಿತು. ಸೇನಾ ಮತ್ತು ಬಿಜೆಪಿ ಕಳೆದ ೩೦ ವರ್ಷಗಳಿಂದ ಮಿತ್ರ ಪಕ್ಷಗಳಾಗಿದ್ದು ರಾಜ್ಯದಲ್ಲಿ ಮೈತ್ರಿಕೂಟ ರಚಿಸಿಕೊಂಡು ಸೆಣಸಿವೆ. ಮಿತ್ರಪಕ್ಷಗಳು ಅಕ್ಟೋಬರ್ ೨೪ರಂದು ಮಹಾರಾಷ್ಟ್ರ ವಿಧಾನಸಭೆಯ ಚುನಾವಣಾ ಫಲಿತಾಂಶ ಪ್ರಕಟವಾದಂದಿನಿಂದ ನಿರಂತರ ಜಗಳಾಡುತ್ತಿವೆ. ಅಧಿಕಾರವನ್ನು ೫೦:೫೦ ಸೂತ್ರದ ಪ್ರಕಾರ ಹಂಚಿಕೊಳ್ಳಬೇಕು ಮತ್ತು ಉಭಯ ಪಕ್ಷಗಳು ತಲಾ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಹೊಂದಿರಬೇಕು ಎಂದು ಸೇನೆ ಪಟ್ಟು ಹಿಡಿದಿದೆ. ಸೇನೆಯ ಜೊತೆಗೆ ಅಂತಹ ಯಾವುದೇ ಒಪ್ಪಂದವೂ ಆಗಿಲ್ಲ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದರು. 2019 ನವೆಂಬರ್ 4ರ ಸೋಮವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿರುವ ಫಡ್ನವಿಸ್ ಅವರ ಮೇಲೆ ಈಗ ಮುಂದಿನ ಹೆಜ್ಜೆ ಇರಿಸಬೇಕಾದ ಹೊಣೆ ಇದೆ ಎಂದು ಸೇನಾ ಮುಖವಾಣಿ ಈದಿನ  ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಕರ್ನಾಟಕದ ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಸಿದ್ಧವಿದೆ ಎಂದು 2019 ನವೆಂಬರ್ 05ರ ಮಂಗಳವಾರ ಹೇಳಿದ ಸುಪ್ರೀಂಕೋರ್ಟ್, ತೀರ್ಪಿಗಾಗಿ ಕಾಯುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಿತು. ಆದಾಗ್ಯೂ, ೧೭ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಯಿರುವ ಆಡಿಯೋ ಟೇಪನ್ನು ದಾಖಲೆಗೆ ತೆಗೆದುಕೊಳ್ಳಬೇಕು ಎಂಬ ಕಾಂಗ್ರೆಸ್ ಮನವಿಯನ್ನು ಪರಿಶೀಲಿಸುವುದಾಗಿ ಕೋರ್ಟ್ ಹೇಳಿತು. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾತುಗಳು ಇವೆ ಎನ್ನಲಾಗಿರುವ ಆಡಿಯೋ ಟೇಪನ್ನು ಶಾಸಕರ ಅನರ್ಹತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಕ್ಷಿಯಾಗಿ ದಾಖಲೆಗೆ ತೆಗೆದುಕೊಳ್ಳಬೇಕು ಎಂಬುದಾಗಿ ಕಾಂಗ್ರೆಸ್ ವಕೀಲ ಕಪಿಲ್ ಸಿಬಲ್ ಅವರ ಸಲ್ಲಿಸಿದ ಮನವಿ ಮೇಲಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪೀಠವು ಈದಿನ  ನಡೆಸಿತು. ಈದಿನ,  ಅರ್ಜಿದಾರ ದಿನೇಶ ಗುಂಡೂರಾವ್ ಅವರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮುಖ್ಯಮಂತ್ರಿಯವರು ಇತ್ತೀಚೆಗೆ ಬಿಜೆಪಿಯ ಕೋರ್ ಸಮಿತಿ ಸಭೆಯಲ್ಲಿ ಸಂಪೂರ್ಣ ಪ್ರಕರಣ ಕೇಂದ್ರ ಗೃಹ ಸಚಿವರ ಸೂಚನೆ ಮೇರೆಗೆ ನಡೆದಿದೆ ಎಂಬುದಾಗಿ ಹೇಳಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕಾಂಗ್ರೆಸ್ ವಕೀಲ ಕಪಿಲ್ ಸಿಬಲ್ ಅವರು ಸಲ್ಲಿಸಿದ ಆಡಿಯೋ ಟೇಪಿನ ಪ್ರಸ್ತುತತೆ ಏನು ಎಂಬುದಾಗಿ ಸುಪ್ರೀಂಕೋರ್ಟ್ ಆರಂಭದಲ್ಲೇ ಪ್ರಶ್ನಿಸಿತು. ’ನಾವು ವಿಸ್ತೃತವಾಗಿ ಎಲ್ಲವನ್ನೂ ಪರಿಶೀಲಿಸಿದ್ದೇವೆ. ಈಗ ಇದರ ಪ್ರಸ್ತುತತೆ ಏನು?’ ಎಂದು ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ನ್ಯಾಯಪೀಠವು ಕೇಳಿತು. ಶಾಸಕರನ್ನು ಮುಂಬೈಗೆ ಒಯ್ಯಲಾಗಿತ್ತು ಎಂದು ನೀವು ಈಗಾಗಲೇ ವಾದಿಸಿದ್ದೀರಿ. ನಾವು ಎಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿದ್ದೇವೆ. ನಾವು ಅದನ್ನು ಪರಿಶೀಲಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ಪೀಠ ಹೇಳಿತು. ರಾಜೀನಾಮೆ ನೀಡುವಂತೆ ಬಂಡಾಯ ಶಾಸಕರ ಒತ್ತಡ ಹೇರುವಲ್ಲಿ ಬಿಜೆಪಿಯ ಪಾತ್ರ ಇರುವುದನ್ನು  ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆಡಿಯೋ ಟೇಪ್ ಮತ್ತು ಪತ್ರಿಕಾ ವರದಿಗಳು ಸಾಬೀತು ಪಡಿಸಿವೆ ಎಂದು ಕಪಿಲ್ ಸಿಬಲ್ ಅವರು ವಾದಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)



No comments:

Post a Comment