ನಾನು ಮೆಚ್ಚಿದ ವಾಟ್ಸಪ್

Wednesday, November 6, 2019

ಇಂದಿನ ಇತಿಹಾಸ History Today ನವೆಂಬರ್ 06

2019: ನವದೆಹಲಿ: ಸ್ಥಗಿತಗೊಂಡಿರುವ ೧,೬೦೦ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ೨೫,೦೦೦ ಕೋಟಿ ರೂಪಾಯಿಗಳ ಪರ್ಯಾಯನಿಧಿ ಒದಗಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019 ನವೆಂಬರ್ 06ರ ಬುಧವಾರ ಪ್ರಕಟಿಸಿದರು. ಅಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ದೇಶದ ಆರ್ಥಿಕತೆಗೆ ಒತ್ತು ನೀಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.  ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈ ನಿರ್ಧಾರವನ್ನು ಅನುಮೋದಿಸಿತು. ಕೈಗೆಟಕುವ ಮತ್ತು ಮಧ್ಯಮ ಆದಾಯದ ವಸತಿ ರಂಗದಲ್ಲಿ ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ಆಧಾರದಲ್ಲಿ ಸಾಲ ನೆರವು ಒದಗಿಸಲು ’ವಿಶೇಷ ಕಿಡಕಿ’ (ಸ್ಪೆಶ್ಯಲ್ ವಿಂಡೋ) ವ್ಯವಸ್ಥೆಯನ್ನು ಸರ್ಕಾರ ಮಾಡುವುದು ಎಂದು ಸಚಿವರು ನುಡಿದರು. ೧೬೦೦ ವಸತಿ ಯೋಜನೆಗಳ ೪.೫೮ ಲಕ್ಷ ಮನೆಗಳಿಗೆ ಸರ್ಕಾರದ ಪರ್ಯಾಯ ನಿಧಿ ನೆರವಿನಿಂದ ಅನುಕೂಲವಾಗಲಿದೆ.. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಅದರ ಗವರ್ನರ್ ಗೃಹ ಖರೀದಿದಾರರನ್ನು ತಲುಪುವ ಸುಸ್ಥಿರ ಮಾರ್ಗದ ಬಗ್ಗೆ ಚರ್ಚಿಸಿದ್ದಾರೆ ಎಂದು ಸಚಿವರು ಹೇಳಿದರು. ‘ಆಸ್ತಿ ಪರ್ಯಾಯ ನಿಧಿ (ಅಸೆಟ್ ಆಲ್ಟರ್‌ನೇಟಿವ್ ಫಂಡ್- ಎಐಎಫ್) ಒಂದನ್ನು ರಚಿಸಲಾಗುವುದು. ಸರ್ಕಾರವು ಅದಕ್ಕೆ ೧೦,೦೦೦ ಕೋಟಿ ರೂಪಾಯಿಗಳನ್ನು ಒದಗಿಸಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಭಾರತೀಯ ಜೀವ ವಿಮಾ ನಿಗಮದಂತಹ (ಎಲ್‌ಐಸಿ) ಸಂಸ್ಥೆಗಳು ಉಳಿದ ಹಣ ಒದಗಿಸುವುವು. ತನ್ಮೂಲಕ ಒಟ್ಟು ೨೫,೦೦೦ ಕೋಟಿ ರೂಪಾಯಿಗಳ ನಿಧಿಯನ್ನು ಸೃಜಿಸಲಾಗುವುದು ಎಂದು ನಿರ್ಮಲಾ ಅವರು ಕೇಂದ್ರ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ವಾಯುಮಾಲಿನ್ಯದಿಂದ ಜನರು ಸಾಯುತ್ತಿರುವಾಗ ನೀವು ’ದಂತಗೋಪುರಗಳಲ್ಲಿ ವಾಸಿಸುತ್ತಿದ್ದೀರಿ  ಎಂದು  2019 ನವೆಂಬರ್ 06ರ ಬುಧವಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್,  ಕೊಯ್ದ ಪೈರಿನ ಕೂಳೆ ಸುಡದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಏಳು ದಿನಗಳ ಒಳಗಾಗಿ ಕ್ವಿಂಟಲ್‌ಗೆ ತಲಾ ೧೦೦ ರೂಪಾಯಿಗಳ ಪ್ರೋತ್ಸಾಹಧನವನ್ನು  ವಿತರಣೆ ಮಾಡುವಂತೆ ಸರ್ಕಾರಗಳಿಗೆ ಆದೇಶ ನೀಡಿತು.ವಾಯುಮಾಲಿನ್ಯ ಅತಿಯಾದ ಮಟ್ಟಕ್ಕೆ ಏರಿದ ಪರಿಣಾಮವಾಗಿ ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಯ್ದ ಪೈರಿನ ಕೂಳೆ ಸುಡುತ್ತಿರುವುದರಿಂದ ದೆಹಲಿಯ ವಾಯುಮಾಲಿನ್ಯ ಹದಗೆಟ್ಟಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಹೇಳಿತ್ತು. ರೈತರಿಗೆ ಬಾಡಿಗೆ ಆಧಾರದಲ್ಲಿ ಕೂಳೆ/ ತ್ಯಾಜ್ಯ ಕತ್ತರಿಸುವ/ ಪುಡಿಮಾಡುವ ಯಂತ್ರಗಳನ್ನು ಒದಗಿಸುವಂತೆಯೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದ ಸುಪ್ರೀಂಕೋರ್ಟ್ ಯಂತ್ರಗಳನ್ನು ಬಾಡಿಗೆಗೆ ತರಲು ಅಗತ್ಯವಾದ ನಿರ್ವಹಣಾ ವೆಚ್ಚವನ್ನು ಸ್ವತಃ ಭರಿಸುವಂತೆ ಸರ್ಕಾರಗಳಿಗೆ ಆಜ್ಞಾಪಿಸಿತು. ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕತ್ತರಿಸುವ/ ಪುಡಿಮಾಡುವ ಯಂತ್ರಗಳು ಲಭಿಸುವಂತೆ ಖಾತರಿ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕೋರ್ಟ್ ಹೇಳಿತು. ರೈತರಿಗೆ ತತ್‌ಕ್ಷಣ ಹಣ ವಿತರಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ ಸುಪ್ರೀಂಕೋರ್ಟ್ ಪೀಠವು, ಈ ಹೊರೆಯನ್ನು ರಾಜ್ಯಗಳು ಭರಿಸಬೇಕೆ ಅಥವಾ ಕೇಂದ್ರ ಭರಿಸಬೇಕೆ ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಮುಂದಕ್ಕೆ ಮಾಡಲಾಗುವುದು ಎಂದು ಹೇಳಿತು. ಕೇಂದ್ರ ಸರ್ಕಾರದಿಂದ ಹಣ ವಿತರಣೆ ಆಗುವವರೆಗೆ ರಾಜ್ಯಗಳು ಕಾಯಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ’ಪಾಕಿಸ್ತಾನವು ರಹಸ್ಯ ಕಾರ್ಯಸೂಚಿಯನ್ನು ಹೊಂದಿದೆ ಎಂದು ನಾನು ನಿಮಗೆ ಮೊದಲೇ ಹೇಳಿದ್ದೆ ಎಂಬುದಾಗಿ ಹೇಳುವ ಮೂಲಕ ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕರ್ತಾರಪುರ ಕಾರಿಡಾರ್ ಉದ್ಘಾಟನೆ ಸಂದರ್ಭಕ್ಕಾಗಿ ಪಾಕಿಸ್ತಾನ ಬಿಡುಗಡೆ ಮಾಡಿದ ವಿವಾದಾತ್ಮಕ ವಿಡಿಯೋ ದೃಶ್ಯಾವಳಿಗೆ ಆಕ್ರೋಶ ವ್ಯಕ್ತ ಪಡಿಸಿದರು. ಕರ್ತಾರಪುರ ಕಾರಿಡಾರ್ ಉದ್ಘಾಟನೆ ಸಂದರ್ಭಕ್ಕಾಗಿ ಬಿಡುಗಡೆ ಮಾಡಲಾಗಿರುವ ಹಾಡಿನ ವಿವಾದಾತ್ಮಕ ವಿಡಿಯೋದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರಾದ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ, ಮೇಜರ್ ಜನರಲ್ ಶಾಬೆಗ್ ಸಿಂಗ್ ಮತ್ತು ಆಮ್ರಿಕ್ ಸಿಂಗ್ ಖಾಲ್ಸಾ ಅವರ ಭಿತ್ತಿಚಿತ್ರಗಳನ್ನು ಹಿನ್ನೆಲೆಯಲ್ಲಿ ಪ್ರದರ್ಶಿಸಿದ್ದಕ್ಕೆ ಪಂಜಾಬ್ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದರು. ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2019 ನವೆಂಬರ್ 04ರ ಸೋಮವಾರ ಬಿಡುಗಡೆ ಮಾಡಿದ ಈ ವಿಡಿಯೋದ ಹಾಡಿನ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ೧೯೮೪ರಲ್ಲಿ ಸ್ವರ್ಣದೇಗುಲವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಲು ನಡೆಸಿದ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಹತರಾದ  ಮೂವರು ಭಯೋತ್ಪಾದಕರ ಭಿತ್ತಿ ಚಿತ್ರಗಳು ಕಂಡು ಬಂದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ‘ಕಾರಿಡಾರ್ ಮುಕ್ತಗೊಳಿಸುವಿಕೆಯ ಹಿಂದೆ ಪಾಕಿಸ್ತಾನಕ್ಕೆ  ಕೀಳು ಉದ್ದೇಶದ ರಹಸ್ಯ ಕಾರ್ಯಸೂಚಿ ಇದೆ ಎಂದು ಮೊದಲ ದಿನದಿಂದಲೇ ನಾನು ಆಗಾಗ ಎಚ್ಚರಿಕೆ ನೀಡುತ್ತಲೇ ಬಂದಿದ್ದೆ ಎಂದು ಅಮರೀಂದರ್ ಸಿಂಗ್ ಹೇಳಿದರು. ಪವಿತ್ರವಾದ ಕರ್ತಾರಪುರ ಗುರುದ್ವಾರಕ್ಕೆ ಪ್ರವೇಶಾವಕಾಶ ಕಲ್ಪಿಸಬೇಕು ಎಂದು ಸಿಖ್ ಸಮುದಾಯವು ಕಳೆದ ೭೦ ವರ್ಷಗಳಿಂದ ಆಗ್ರಹಿಸುತ್ತಲೇ ಇದೆ. ಈ ಬೇಡಿಕೆಯನ್ನು ಒಪ್ಪಿಕೊಳ್ಳಲು ಪಾಕಿಸ್ತಾನವು ದಿಢೀರ್ ತೀರ್ಮಾನ ಕೈಗೊಂಡಾಗಲೇ, ಧಾರ್ಮಿಕ ಭಾವನೆಗಳ ದುರ್ಬಳಕೆ ಮಾಡಿಕೊಂಡು ಸಿಖ್ ಸಮುದಾಯದ ಜನರನ್ನು ಸೆಳೆಯುವ ರಹಸ್ಯ ಉದ್ದೇಶವು ಪಾಕಿಸ್ತಾನಕ್ಕೆ ಇತ್ತು ಎಂಬುದು ಈಗ ಬಹಿರಂಗಗೊಂಡಿದೆ ಎಂದು ಕ್ಯಾಪ್ಟನ್ ಸಿಂಗ್ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಿವಾದಾತ್ಮಕ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರಾದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ, ಮೇಜರ್ ಜನರಲ್ ಶಾಬೆಗ್ ಸಿಂಗ್ ಮತ್ತು ಅಮ್ರಿಕ್ ಸಿಂಗ್ ಖಾಲ್ಸಾ ಅವರ ಭಿತ್ತಿಚಿತ್ರಗಳನ್ನು  (ಪೋಸ್ಟರ್) ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗಿದೆ. ೧೯೮೪ರಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರನ್ನು ಹೊರದಬ್ಬಲು ಭಾರತೀಯ ಸೇನೆಯು ಸ್ವರ್ಣ ದೇಗುಲಕ್ಕೆ ನುಗ್ಗಿ ನಡೆಸಿದ್ದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಈ ಮೂರೂ ಮಂದಿ ಪ್ರತ್ಯೇಕತಾವಾದಿ ಉಗ್ರಗಾಮಿಗಳು ಹತರಾಗಿದ್ದರು. ಇತರ ಉಗ್ರಗಾಮಿಗಳೊಂದಿಗೆ ಈ ಮೂವರು ಉಗ್ರನಾಯಕರು ಸ್ವರ್ಣದೇಗಲದೊಳಗೆ ಅಡಗಿ ಕುಳಿಸಿದ್ದರು. ಈ ವರ್ಷ ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆ ವರ್ಷವಾಗಿದ್ದು, ಇದರ ಅಂಗವಾಗಿ ಕರ್ತಾರಪುರ ಕಾರಿಡಾರ್ ನಿರ್ಮಿಸುವ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ ಮಾಡಿದ್ದವು. ಈ ಕಾರಿಡಾರ್ ಭಾರತದಲ್ಲಿರುವ ಗುರುದಾಸಪುರ ಜಿಲ್ಲೆಯಲ್ಲಿನ ಡೇರಾ ಬಾಬಾ ನಾನಕ್ ಮತ್ತು ಪಾಕಿಸ್ತಾನದ ಕರ್ತಾರಪುರದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರವನ್ನು ಪರಸ್ಪರ ಸಂಪರ್ಕಿಸುತ್ತದೆ. ಈ ಕಾರಿಡಾರ್ ಮೂಲಕ ಭಾರತೀಯ ಯಾತ್ರಿಕರಿಗೆ ೧೫೫೨ರಲ್ಲಿ ಸಿಖ್ ಪಂಥದ ಸಂಸ್ಥಾಪಕರಾದ ಗುರುನಾನಕ್ ಅವರು ನಿರ್ಮಿಸಿದ ಕರ್ತಾರಪುರ ಸಾಹಿಬ್ ಗೆ ವೀಸಾಮುಕ್ತ ಭೇಟಿಗೆ ಅವಕಾಶ ಕಲ್ಪಿಸುತ್ತದೆ. ಮಾಹಿತಿ ಮತ್ತು ಪ್ರಸಾರ ಖಾತೆಗೆ ಸಂಬಂಧಿಸಿದ ಪಾಕಿಸ್ತಾನದ ಪ್ರಧಾನಿಯ ವಿಶೇಷ ಸಹಾಯಕಿ ಡಾ. ಫಿರ್ದೂಸ್ ಆಶಿಖ್ ಅವಾನ್ ಬಿಡುಗಡೆ ಮಾಡಿದ ಹಾಡಿನ ವಿಡಿಯೋದಲ್ಲಿ ಸಿಖ್ ಯಾತ್ರಾರ್ಥಿಗಳು ಪಾಕಿಸ್ತಾನದಲ್ಲಿನ ಹಲವಾರು ಗುರುದ್ವಾರಗಳಿಗೆ ಭೇಟಿ ನೀಡುವ ದೃಶ್ಯಾವಳಿ ಇದ್ದು ಪ್ರಮುಖವಾಗಿ ಗುರುನಾನಕ್ ಅವರ ಜನ್ಮಸ್ಥಳವಾದ ಗುರುದ್ವಾರ ಜನಮ್ ಆಸ್ಥಾನ್, ನಾನ್‌ಕಾನ ಸಾಹಿಬ್‌ನ್ನು ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ನಾಯಕರ ಪೋಸ್ಟರ್ ಜೊತೆಗೆ ತೋರಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


No comments:

Post a Comment