Saturday, December 26, 2020

ಇಂದಿನ ಇತಿಹಾಸ History Today ಡಿಸೆಂಬರ್ 26

 ಇಂದಿನ ಇತಿಹಾಸ  History Today ಡಿಸೆಂಬರ್ 26

2020: ನವದೆಹಲಿ: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಮೂರು ಕೃಷಿ ಕಾಯಿದೆಗಳ ವಿರುದ್ಧ ಪ್ರತಿಭಟಿಸುತ್ತಿರುವ  ರೈತ ಸಂಘಗಳು ಬಿಕ್ಕಟ್ಟು ಇತ್ಯರ್ಥದ ಸಲುವಾಗಿ ಸರ್ಕಾರದೊಂದಿಗೆ ತಮ್ಮ ಸಂವಾದವನ್ನು ಪುನಾರಂಭ ಮಾಡಲು  2020 ಡಿಸೆಂಬರ್ 26ರ ಶನಿವಾರ  ನಿರ್ಧರಿಸಿದ್ದು, ಮುಂದಿನ ಸುತ್ತಿನ ಮಾತುಕತೆಗೆ ಡಿಸೆಂಬರ್ ೨೯ನೇ ದಿನಾಂಕದ ಪ್ರಸ್ತಾಪ ಮಾಡಿದವು. ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ೪೦ ರೈತ ಸಂಘಗಳ ಮಾತೃ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ವಿಧಾನಗಳು ಮತ್ತು ಸರ್ಕಾರವು ರೈತರಿಂದ ಬೆಳೆಗಳನ್ನು ಖರೀದಿಸುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಬಗ್ಗೆ ಖಾತರಿ ನೀಡುವ ವಿಧಾನಗಳು ಮಾತುಕತೆ ಪುನರಾರಂsಕ್ಕೆ ಸರ್ಕಾರದ ಕಾರ್ಯಸೂಚಿಯ ಭಾಗವಾಗಿರಬೇಕು ಎಂದು ಹೇಳಿದರು.  ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಡಿಸೆಂಬರ್ ೩೦ ರಂದು ಕುಂಡ್ಲಿ-ಮನೇಸರ್-ಪಾಲ್ವಾಲ್ (ಕೆಎಂಪಿ) ಹೆದ್ದಾರಿಯಲ್ಲಿ ರೈತರ ಟ್ರಾಕ್ಟರ್ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ ಎಂದೂ ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ದರ್ಶನ್ ಪಾಲ್ ಹೇಳಿದರು.  "ದೆಹಲಿ ಮತ್ತು ದೇಶದ ಇತರ ಭಾಗಗಳಿಂದ ಜನರು ಪ್ರತಿಭಟನಾಕಾರ ರೈತರೊಂದಿಗೆ ಹೊಸ ವರ್ಷವನ್ನು ಆಚರಿಸುವಂತೆ ವಿನಂತಿಸುತ್ತೇವೆ" ಎಂದು ಪಾಲ್ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ 

: ’ದೆಹಲಿಯಲ್ಲಿನ ನನ್ನ ಟೀಕಾಕಾರರು ಜಮ್ಮು ಮತ್ತು ಕಾಶ್ಮೀರದಿಂದ ಪಾಠ ಕಲಿಯಬೇಕು ಎಂದು ವಿರೋಧ ಪಕ್ಷಗಳಿಗೆ 2020 ಡಿಸೆಂಬರ್ 26ರ ಶನಿವಾರ ಟಾಂಗ್ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರಕ್ಕೆ ಪ್ರಿಯವಾದಆಯುಷ್ಮಾನ್ ಭಾರತ ವೈದ್ಯಕೀಯ ವಿಮಾ ಯೋಜನೆಯನ್ನು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸಿದರು. ಪಂಚಾಯತ್ ಚುನಾವಣೆ ವಿಳಂಬದ ವಿಷಯದಲ್ಲಿ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಪಿಡಿಪಿಯೊಂದಿಗೆ ಮಾಡಿಕೊಳ್ಳಲಾಗಿದ್ದ ಹೊಂದಾಣಿಕೆಯನ್ನು ರದ್ದು ಪಡಿಸಿ ಬಿಜೆಪಿ ಅಧಿಕಾರದಿಂದ ಹೊರನಡೆದಿತ್ತು ಎಂದು ಪ್ರಧಾನಿಯವರು ಆಯುಷ್ಮಾನ್ ಭಾರತ ಯೋಜನೆಯನ್ನು ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸುತ್ತಾ ಹೇಳಿದರು. ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಮುಕ್ತಾಯದೊಂದಿಗೆ ಜಮ್ಮು ಮತ್ತು ಕಾಶ್ಮೀರದಲಿ ಹೊಸ ದಶಕವನ್ನು ಬರೆಯಲಾಗಿದೆ ಎಂದು ಅವರು ನುಡಿದರು.  "ನಾವು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸರ್ಕಾರದ ಭಾಗವಾಗಿದ್ದೆವು ಆದರೆ ಪಂಚಾಯತ್ ಚುನಾವಣೆ ವಿಳಂಬದ ಕಾರಣಕ್ಕಾಗಿ ನಾವು ಸರ್ಕಾರದಿಂದ ಹೊರಬಂದಿದ್ದೆವು ಮತ್ತು ಸಾಮಾನ್ಯ ವ್ಯಕ್ತಿಯೊಂದಿಗೆ ರಸ್ತೆಗೆ ಬಂದೆವು ಎಂದು ಪ್ರಧಾನಿ ಹೇಳಿದರು. ಡಿಡಿಸಿ ಮತದಾನದ ಮುಕ್ತಾಯದೊಂದಿಗೆ, ಮೂರು ಹಂತದ ತಳಮಟ್ಟದ ಪ್ರಜಾಪ್ರಭುತ್ವದ [ಬ್ಲಾಕ್, ಪಂಚಾಯತ್ ಮತ್ತು ಜಿಲ್ಲಾ ಮಂಡಳಿಗಳ] ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಕನಸನ್ನು ನಾವು ನನಸಾಗಿಸಿದ್ದೇವೆ. ನಾನು ಚುನಾವಣೆಯ ಪ್ರತಿಯೊಂದು ಹಂತವನ್ನು ಅನುಸರಿಸಿದ್ದೇನೆ ಮತ್ತು ತೀವ್ರವಾದ ಚಳಿ ಮತ್ತು ಸಾಂಕ್ರಾಮಿಕ ರೋಗದ ರೋಗದ ನಡುವೆಯೂ ಯುವಕರು, ವೃದ್ಧರು ಮತ್ತು ಮಹಿಳೆಯರು ಮತ ಚಲಾಯಿಸಲು ಹೇಗೆ ಬಂದರು ಎಂದು ನಾನು ನೋಡಿದ್ದೇನೆ. ಹಿಂದಿನದನ್ನು ಬಿಟ್ಟು ಉತ್ತಮ ಭವಿಷ್ಯಕ್ಕಾಗಿ ಹಾರೈಸುವ ಕನಸನ್ನು ನಾನು ಅವರ ಕಣ್ಣುಗಳಲ್ಲಿ ನೋಡಿದ್ದೇನೆ. ಜಮ್ಮು ಮತ್ತು ಕಾಶ್ಮೀರ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಿದೆ ಎಂದು ಶಾಂತಿಯುತ ಚುನಾವಣೆ ನಡೆಸಿದ್ದಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಅವರ ತಂಡವನ್ನು ಅಭಿನಂದಿಸುತ್ತಾ ಮೋದಿ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಭೋಪಾಲ್: ಉತ್ತರ ಪ್ರದೇದ ಹಾದಿಯಲ್ಲಿಯೇ ಮುಂದಕ್ಕೆ ಸಾಗಿರುವ ಮಧ್ಯಪ್ರದೇಶವು 2020 ಡಿಸೆಂಬರ್ 26ರ ಶನಿವಾರ  ಲವ್ ಜಿಹಾದ್ ನಿಷೇಧ ಕಾಯ್ದೆಗೆ ತನ್ನ ಒಪ್ಪಿಗೆ ನೀಡಿದೆ. ಬಲವಂತದ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಮಸೂದೆಗೆ ಮಧ್ಯಪ್ರದೇಶ ಸಚಿವ ಸಂಪುಟವು ತನ್ನ ಸಮ್ಮತಿಯ ಮುದ್ರೆಯನ್ನು ಒತ್ತಿದೆ. "ಹೊಸ ಮಸೂದೆಯ ಅಡಿಯಲ್ಲಿ, ಯಾರೊಬ್ಬರ ಮೇಲೆ ಧಾರ್ಮಿಕ ಮತಾಂತರವನ್ನು ಒತ್ತಾಯಿಸುವುದು ಒಂದರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ ೨೫ ಸಾವಿರ ರೂ.ಗಳ ದಂಡಕ್ಕೆ ಕಾರಣವಾಗುತ್ತದೆ. ಅಪ್ರಾಪ್ತ ವಯಸ್ಕ, ಮಹಿಳೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಬಲವಂತವಾಗಿ ಮತಾಂತರಗೊಳಿಸುವವರಿಗೆ ದುಪ್ಪಟ್ಟು ಜೈಲು ಶಿಕ್ಷೆ ಅಂದರೆ ಕನಿಷ್ಠ ೨ರಿಂದ ೧೦ ವರ್ಷಗಳ ಸೆರೆವಾಸ ಮತ್ತು ಕನಿಷ್ಠ ೫೦,೦೦೦ ರೂಪಾಯಿಗಳ ದಂಡ ವಿಧಿಸಲಾಗುವುದು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರ ಸಂಪುಟ ಸಭೆಯ ಬಳಿಕ ಹೇಳಿದರು. ಸಂಪುಟದ ಅನುಮೋದನೆ ಪಡೆದಿರುವ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಹೊಸ ಕಾಯ್ದೆಯು ಮಧ್ಯಪ್ರದೇಶದಲ್ಲಿ ಈಗ ಜಾರಿಯಲ್ಲಿರುವ ಮಧ್ಯಪ್ರದೇಶ ಧರ್ಮ ಸ್ವಾತಂತ್ರ್ಯ ಅಧಿಕಾರ ೧೯೬೮ರ ಕಾನೂನನ್ನು ಬದಲಾಯಿಸಲು ಸಜ್ಜಾಗಿದೆ.  ವರದಿಗಳ ಪ್ರಕಾರ ೧೯೬೮ ಕಾನೂನು ಹಳೆಯದಾಗಿದ್ದು, ಬಲವಂತದ ಮತಾಂತರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಕಳೆದ ೫೦ ವರ್ಷಗಳ ಅನುಭವದ ಬೆಳಕಿನಲ್ಲಿ ಅದನ್ನು ಪುನರ್ರಚಿಸಲಾಗುತ್ತಿದೆ ಎಂದು ಬಿಜೆಪಿ ಸರ್ಕಾರ ಪ್ರತಿಪಾದಿಸಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ತಿರುವನಂತಪುರ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಭೇಟಿ ಮಾಡಲು ತನ್ನ ಅಧಿಕಾರಿಗಳಿಗೆ ಅವಕಾ ನಿರಾಕರಿಸಿರುವ ರಾಜ್ಯ ಜೈಲು ಇಲಾಖೆಯ ನಿರ್ಧಾರದ ವಿರುದ್ಧ ಕೇರಳ ಹೈಕೋರ್ಟ್ ಮೆಟ್ಟಿಲೇರಲು ಕಸ್ಟಮ್ಸ್ ಇಲಾಖೆ ಯೋಜಿಸುತ್ತಿದೆ ಎಂದು ಸುದ್ದಿ ಮೂಲಗಳು  2020 ಡಿಸೆಂಬರ್ 26ರ ಶನಿವಾರ ತಿಳಿಸಿವೆ.  ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ- ಕೋಫೆಪೊಸಾ ಅಡಿಯಲ್ಲಿ ರಾಜ್ಯ ರಾಜಧಾನಿಯಲ್ಲಿ ಮಹಿಳಾ ಸೆರೆಮನೆಯಲ್ಲಿ ಇರುವ ಚಿನ್ನ ಕಳ್ಳಸಾಗಣೆ ಪ್ರಕರಣದ ಮುಖ್ಯ ಆರೋಪಿಯನ್ನು ಭೇಟಿ ಮಾಡುವ ಯಾರೇ ವ್ಯಕ್ತಿಗಳ ಬಗ್ಗೆ ತನಗೆ ತಿಳಿಸಬೇಕು ಮತ್ತು ಕಸ್ಟಮ್ಸ್ ಅಧಿಕಾರಿಯೊಬ್ಬರು ಅಂತಹ ಸಂದರ್ಶಕರ ಜೊತೆಗಿರುತ್ತಾರೆ ಎಂದು ಕಸ್ಟಮ್ಸ್ ಇಲಾಖೆ ಇತ್ತೀಚೆಗೆ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.  ಆದರೆ ಇದನ್ನು ನಿರಾಕರಿಸಿದ ಜೈಲು ಇಲಾಖೆ ಕಳೆದ ವಾರ ಆರೋಪಿಯ ಸಂಬಂಧಿಕರೊಂದಿಗೆ ಸೆರೆಮನೆಗೆ ಬಂದ ಕಸ್ಟಮ್ಸ್ ಅಧಿಕಾರಿಯನ್ನು ವಾಪಸ್ ಕಳುಹಿಸಿತ್ತು. ಇಂತಹ ಕ್ರಮವು ಹೊಸ ಪೂರ್ವನಿದರ್ಶನವನ್ನು ಸೃಷ್ಟಿಸುತ್ತದೆ ಮತ್ತು ಜೈಲು ಅಧಿಕಾರಿಗಳನ್ನು ಭ್ರಮ ನಿರಸನಗೊಳಿಸುತ್ತದೆ ಎಂದು ರಾಜ್ಯ ಜೈಲು ಮುಖ್ಯಸ್ಥ ರಿಷಿರಾಜ್ ಸಿಂಗ್ ಹೇಳಿದ್ದಾರೆ.   ಆದರೆ ಇದು ಉನ್ನತ ಮಟ್ಟದ ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಕಸ್ಟಮ್ಸ್ ಅಧಿಕಾರಿಗಳು ಭಯಪಡುತ್ತಾರೆ. ನಾವು ಈಗಾಗಲೇ ಕೋಫೆಪೊಸಾ ಮಂಡಳಿಗೆ ಬಗ್ಗೆ ಮಾಹಿತಿ ನೀಡಿದ್ದೇವೆ. ನಾವು ಮುಂದಿನ ವಾರ ಹೈಕೋರ್ಟ್‌ಗೆ ಹೋಗುತ್ತೇವೆ. ಆಕೆ ಈಗಾಗಲೇ ಗಂಭೀರ ಬೆದರಿಕೆಗಳನ್ನು ಎದುರಿಸುತ್ತಿರುವುದಾಗಿ ದೂರು ನೀಡಿದ್ದಾರೆ ಮತ್ತು ಕೆಲವರು ಆಕೆಯನ್ನು ಜೈಲಿನಲ್ಲಿ ಭೇಟಿಯಾಗಿ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020:  ಜೈಪುರ: ನೂತನ ಕೃಷಿ-ಮಾರುಕಟ್ಟೆ ಕಾನೂನುಗಳ ಬಗ್ಗೆ ನಡೆಯುತ್ತಿರುವ ಬೃಹತ್ ರೈತ ಆಂದೋಲನದ ಮಧ್ಯೆ ರಾಜಸ್ಥಾನದಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್‌ಡಿಎ) ಅಂಗ ಪಕ್ಷವಾಗಿ ಬಿಜೆಪಿಯ ಏಕೈಕ ಮಿತ್ರ ಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) 2020 ಡಿಸೆಂಬರ್ 26ರ ಶನಿವಾರ ಮೈತ್ರಿಕೂಟದಿಂದ ಹೊರನಡೆಯಿತು.  ಕೃಷಿ ಸುಧಾರಣಾ ಕಾಯ್ದೆಗಳ ಹಿನ್ನೆಲೆಯಲ್ಲಿ ಶಿರೋಮಣಿ ಅಕಾಲಿದಳ ಹೊರಗೆ ಬಂದ ಬಳಿಕ ಅದನ್ನು ಅನುಸರಿಸಿದ ಎನ್‌ಡಿಎಯ ಎರಡನೇ ಮಿತ್ರ ಪಕ್ಷ ಇದಾಗಿದೆ.  ಎನ್‌ಡಿಎ ತ್ಯಜಿಸುವ ನಿರ್ಧಾರವನ್ನು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಆರ್‌ಎಲ್‌ಪಿ ನಾಯಕ, ನಾಗೌರ್ ಸಂಸತ್ ಸದಸ್ಯ ಹನುಮಾನ್ ಬೆನಿವಾಲ್ ಅವರು ತಮ್ಮ ಪಕ್ಷವು "ಫೆವಿಕೋಲ್ ಹಚ್ಚಿಕೊಂಡು ಮೈತ್ರಿಗೆ ಅಂಟಿಕೊಂಡಿಲ್ಲ" ಎಂದು ಹೇಳಿದರು.  ವಿವಾದಾತ್ಮಕ ಕಾನೂನುಗಳನ್ನು ಕೇಂದ್ರವು ಹಿಂತೆಗೆದುಕೊಳ್ಳದಿದ್ದರೆ ಲೋಕಸಭೆಗೆ ರಾಜೀನಾಮೆ ನೀಡುತ್ತೇನೆ ಎಂದೂ ಬೆನಿವಾಲ್ ಹೇಳಿದರು.  "ನಾನು ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಎನ್‌ಡಿಎಎಯನ್ನು ತೊರೆದಿದ್ದೇನೆ. ಕಾನೂನುಗಳು ರೈತ ವಿರೋದಿಯಾಗಿವೆ. ನಾನು ಎನ್‌ಡಿಎಯನ್ನು ತೊರೆದಿದ್ದೇನೆ, ಆದರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬೆನಿವಾಲ್ ಅವರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿದೆ. ಇದಕ್ಕೂ ಮುನ್ನ ಶನಿವಾರ ಬೆನಿವಾಲ್ ಅವರು ಜೈಪುರ ಬಳಿ ತಮ್ಮದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿದ ಸಾವಿರಾರು ರೈತರೊಂದಿಗೆ ಸೇರಿಕೊಂಡರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ದೇಶಾದ್ಯಂತ ಏಕಕಾಲದಲ್ಲಿ ನಡೆಸುವ ನಿಟ್ಟಿನಲ್ಲಿ ಒಮ್ಮತ ಮೂಡಿಸುವ ಸಲುವಾಗಿ ಮುಂಬರುವ ವಾರಗಳಲ್ಲಿಒಂದು ರಾಷ್ಟ್ರ, ಒಂದು ಚುನಾವಣೆ ಅನುಕೂಲಗಳ ಬಗ್ಗೆ ೨೫ ವೆಬಿನಾರ್‌ಗಳನ್ನು ಆಯೋಜಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಸಿದ್ಧತೆ ನಡೆಸಿದೆ.  ಕಳೆದ ಕೆಲವು ವರ್ಷಗಳಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.  ಆಗಾಗ್ಗೆ ನಡೆಯುವ  ಚುನಾವಣೆಗಳಿಗಾಗಿ ಅನುಷ್ಠಾನಗೊಳಿಸಲಾಗುವ ಚುನಾವಣಾ ನೀತಿ ಸಂಹಿತೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಆಗುತ್ತಿರುವ ಅಡಚಣೆಗಳನ್ನು ದೂರ ಮಾಡಲುಒಂದು ದೇಶ, ಒಂದು ಚುನಾವಣೆ ಅತ್ಯಗತ್ಯ ಎಂದು ಪ್ರಧಾನಿ ಹೇಳುತ್ತಲೇ ಬಂದಿದ್ದಾರೆ.  ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಒಂದೇ ರೀತಿಯ ಆಟದ ಮೈದಾನ ರೂಪಿಸಲು ಸಾಧ್ಯವಾಗುವಂತೆ  ಮಾಡಲು ಇದು ಅಗತ್ಯವಾಗಿದೆ. ನೀತಿ ಸಂಹಿತೆ ಜಾರಿಯಾದಾಗ ರ್ಕಾರಗಳು ಯೋಜನೆ ಮತ್ತು ನೀತಿಗಳಿಗೆ ಸಂಬಂಧಿಸಿದ ಹೊಸ ಪ್ರಕಟಣೆ ಮಾಡಲು ನಿಷೇಧವಿರುವುzರಿಂದ ಅಭಿವೃದ್ಧಿ ಕಾರ್‍ಯಗಳಿಗೆ ಅಡ್ಡಿಯಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.  ಚುನಾವಣಾ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿದ್ದಾಗ ಹೊಸ ಯೋಜನೆ, ನೀತಿಗಳ ಪ್ರಕಟಣೆಗಳಿಗೆ ನಿಷೇಧವಿದ್ದರೂ, ನಡೆಯುತ್ತಿರುವ ಕೆಲಸಗಳನ್ನು ಪೂರ್ಣಗೊಳಿಸಲು ಯಾವುದೇ ನಿಷೇಧ ಇರುವುದಿಲ್ಲ.  ಏಕಕಾಲದಲ್ಲಿ ಚುನಾವಣೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ವೆಬಿನಾರ್‌ಗಳನ್ನು ಉದ್ದೇಶಿಸಿ ಪಕ್ಷದ ಹಿರಿಯ ಮುಖಂಡರು ಮಾತನಾಡಲಿದ್ದು, ಶಿಕ್ಷಣ ತಜ್ಞರು ಮತ್ತು ಕಾನೂನು ತಜ್ಞರು ಭಾಗವಹಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಡಿಸೆಂಬರ್ 26 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment