ನಾನು ಮೆಚ್ಚಿದ ವಾಟ್ಸಪ್

Thursday, December 17, 2020

ಇಂದಿನ ಇತಿಹಾಸ History Today ಡಿಸೆಂಬರ್ 17

 ಇಂದಿನ ಇತಿಹಾಸ  History Today ಡಿಸೆಂಬರ್ 17

2020: ನವದೆಹಲಿ:  ಪ್ರತಿಭಟನೆ ಸಾಂವಿಧಾನಿಕ ಹಕ್ಕು, ಆದರೆ ದೆಹಲಿ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತರು ನಗರವನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು 2020 ಡಿಸೆಂಬರ್ 17ರ ಗುರುವಾರ ಹೇಳಿದ ಸುಪ್ರೀಂಕೋರ್ಟ್ ರೈತ ಬಿಕ್ಕಟ್ಟು ನಿವಾರಣೆ ನಿಟ್ಟಿನಲ್ಲಿ ಅಡಿ ಇಡಲು ಸಮಿತಿ ರಚನೆಯ ಚಿಂತನೆ ನಡೆಸಿತು.  ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರತ್ ಬೋಬ್ಡೆ ಅವರು ಮಾತು ಹೇಳಿದ್ದಾರೆ.  ಅರ್ಜಿದಾರ ಕಾನೂನು ವಿದ್ಯಾರ್ಥಿಯು ಹೆದ್ದಾರಿ ದರಣಿಯಿಂದ ರಾಷ್ಟ್ರ ರಾಜಧಾನಿಯ ಗಡಿ ಪ್ರದೇಶಗಳಲ್ಲಿನ ಅನಾನುಕೂಲತೆ ಮತ್ತು ಕೋವಿಡ್ -೧೯ರ ಬೆದರಿಕೆಯ ಹಿನ್ನೆಲೆಯಲ್ಲಿ  ಪ್ರತಿಭಟನಾಕಾರ ರೈತರನ್ನು ತೆರವುಗೊಳಿಸುವಂತೆ ಕೋರಿದ್ದಾರೆ. "ಆಸ್ತಿಪಾಸ್ತಿಗೆ ಹಾನಿ ಅಥವಾ ಜೀವಕ್ಕೆ ಅಪಾಯವನ್ನುಂಟು ಮಾಡದೇ ಇರುವವರೆಗೆ ಪ್ರತಿಭಟನೆಯು ಸಾಂವಿಧಾನಿಕವಾಗಿರುತ್ತದೆಎಂದು ಹೇಳಿದ ಪೀಠವು, ’ಸರ್ಕಾರ ಮತ್ತು ರೈತರು ಮಾತನಾಡಬೇಕು. ನಾವು ನಿಷ್ಪಕ್ಷಪಾತ ಮತ್ತು ಸ್ವತಂತ್ರ ಸಮಿತಿಯ ಬಗ್ಗೆ ಯೋಚಿಸುತ್ತಿದ್ದೇವೆ, ಅವರ ಮುಂದೆ ಉಭಯ ಪಕ್ಷಗಳು ಕೃಷಿ ಕಾನೂನುಗಳ ಮೇಲಿನ ಬಿಕ್ಕಟ್ಟು ಪರಿಹಾರಕ್ಕೆ ಸಲಹೆ ನೀಡಬಹುದುಸಿಜೆಐ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) 2020 ಡಿಸೆಂಬರ್ 17ರ ಗುರುವಾರ ಮಧ್ಯಾಹ್ನ ಸಿಎಂಎಸ್-೦೧ ಹೆಸರಿನ ದೇಶದ ೪೨ ನೇ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಿತು.  ಬಾಧಿಸುತ್ತಿರುವ ಕೊರೋನವೈರಸ್ (ಕೋವಿಡ್ -೧೯) ಸಾಂಕ್ರಾಮಿಕದ ಮಧ್ಯೆ ಬಾಹ್ಯಾಕಾಶ ಇಸ್ರೋ ಉಡಾವಣೆ ಮಾಡಿದ ಎರಡನೇ ಉಪಗ್ರಹ ಇದಾಗಿದೆ.  ಆವರ್ತನ ವರ್ಣಪಟಲದ ವಿಸ್ತೃತ-ಸಿ ಬ್ಯಾಂಡ್ನಲ್ಲಿ ಸೇವೆಗಳನ್ನು ಒದಗಿಸಲು ಸಾಧ್ಯವಾಗುವಂತೆ ಸಿಎಂಎಸ್ -೦೧ ರೂಪಿಸಲಾಗಿದೆ, ಭಾgತದ ಮುಖ್ಯ ಭೂಪ್ರದೇಶ, ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳು ಉಪಗ್ರಹದ ವ್ಯಾಪ್ತಿಗೆ ಸೇರಿವೆ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿದೆ.  ಜಿಎಸ್ಎಟಿ ಮತ್ತು ಇನ್ಸಾಟ್ ಸರಣಿಯ ನಂತರ ಭಾರತವು ಉಡಾಯಿಸಿರುವ ಹೊಸ ಸಂವಹನ ಉಪಗ್ರಹಗಳಲ್ಲಿ ಇದು ಮೊದಲನೆಯದಾಗಿದೆ. "ಸಂವಹನ ಉಪಗ್ರಹ ಸಿಎಮ್ಎಸ್ -೦೧ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ನ್ನು (ಪಿಎಸ್ಎಲ್ವಿ-ಸಿ ೫೦) ಗುರುವಾರ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದ (ಎಸ್ಡಿಎಸ್ಸಿ) ಶಾರ್ನಿಂದ ಉಡಾಯಿಸಲು ನಿಗದಿಪಡಿಸಲಾಗಿದೆ" ಎಂದು ಇಸ್ರೋ ಇದಕ್ಕೆ ಮುನ್ನ ಹೇಳಿತ್ತು. . (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ) 

2020: ನವದೆಹಲಿ: ಮೂರು ವಾರಗಳಲ್ಲಿ ಎರಡನೇ ಬಾರಿಗೆ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ನಿಯೋಜನೆಗಾಗಿ ರಾಜ್ಯ ಸೇವೆಯಿಂದ ಬಿಡುಗಡೆ ಮಾಡುವಂತೆ ಸೂಚಿಸಿ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರವನ್ನು  2020 ಡಿಸೆಂಬರ್ 17ರ ಗುರುವಾರ ಪುನಃ ಕೇಳಿದೆ.  ಐಪಿಎಸ್ ಅಧಿಕಾರಿಗಳಾದ ರಾಜೀವ್ ಮಿಶ್ರಾ, ಪ್ರವೀಣ್ ಕುಮಾರ್ ತ್ರಿಪಾಠಿ ಮತ್ತು ಭೋಲಾನಾಥ್ ಪಾಂಡೆ ಅವರು ರಾಜ್ಯ ಪ್ರವಾಸದ ವೇಳೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲಿಗೆ ಸಮರ್ಪಕ ಭದ್ರತೆ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ಕೇಂದ್ರ ನಿಯೋಜನೆಗಾಗಿ ಬಿಡುಗಡೆ ಮಾಡಿ ತತ್ ಕ್ಷಣ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸುವಂತೆ ಪತ್ರ ಸೂಚಿಸಿದೆಮೂವರನ್ನು ಕೇಂದ್ರ ಅರೆಸೈನಿಕ ಪಡೆಗಳಿಗೆ ಕಳುಹಿಸಲಾಗಿದೆ. ರಾಜ್ಯ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋದಲ್ಲಿ ಭೋಲನಾಥ್ ಪಾಂಡೆ ಅವರನ್ನು ಎಸ್ಪಿ ಆಗಿ, ಸಶಸ್ತ್ರ ಸೀಮಾ ಬಲದಲ್ಲಿ ಡಿಐಜಿಯಾಗಿ ಪ್ರವೀಣ್ ಕುಮಾರ್ ತ್ರಿಪಾಠಿ ಅವರನ್ನು ಮತ್ತು ಭಾರತ-ಟಿಬೆಟನ್ ಗಡಿ ಭದ್ರತಾ ಪಡೆಯ ಐಜಿ ಆಗಿ ರಾಜೀವ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಮೂರೂ ಮಂದಿ ಐಪಿಎಸ್ ಅಧಿಕಾರಿಗಳನ್ನು ಹೊಸ ಹುದ್ದೆಗಳಿಗೆ ತತ್ ಕ್ಷಣ ಕಳುಹಿಸುವಂತೆಯೂ ಪತ್ರ ಸೂಚಿಸಿದೆ. ಮೂವರು ಐಪಿಎಸ್ ಅಧಿಕಾರಿಗಳನ್ನು ತಕ್ಷಣವೇ ರಾಜ್ಯ ಸೇವೆಯಿಂದ ಮುಕ್ತಗೊಳಿಸಬೇಕು ಎಂಬುದಾಗಿ ಗೃಹ ಸಚಿವಾಲಯವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಗುರುವಾರ ಎರಡನೇ ಪತ್ರ ಬರೆದಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ದೃಢ ಪಡಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ರೈತರ ಆಂದೋಲನದ ಮಧ್ಯೆ ಗುರುವಾರ ನಡೆದ ದೆಹಲಿ ವಿಧಾನಸಭೆಯ ಏಕದಿನ ಅಧಿವೇಶನದಲ್ಲಿ  2020 ಡಿಸೆಂಬರ್ 17ರ ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಮೂರೂ ಕೃಷಿ ಸುಧಾರಣಾ ಕಾನೂನುಗಳ ಪ್ರತಿಗಳನ್ನು ಹರಿದೆಸೆದರು. ಸದನವು ಬಳಿಕ ಮೂರೂ ಕಾನೂನುಗಳನ್ನು ತಿರಸ್ಕರಿಸಿತು.  ಕೇಂದ್ರದ ಮೂರು ಕೃಷಿ ಸುಧಾರಣೆಗಳ ವಿರುದ್ಧದ ಪ್ರತಿಭಟನೆಗಳು ೨೨ ನೇ ದಿನವನ್ನು ಪ್ರವೇಶಿಸಿವೆ. ಅಧಿವೇಶನದಲ್ಲಿ ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದೆಸೆದ ಕೇಜ್ರಿವಾಲ್, ’ಬ್ರಿಟಿಷರಿಗಿಂತ ಕೆಟ್ಟವರಾಗಬೇಡಿಎಂದು ಕೇಂದ್ರಕ್ಕೆ ಮನವಿ ಮಾಡಿದರು. ಸಾಂಕ್ರಾಮಿಕ ಸಮಯದಲ್ಲಿ ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ಅಂಗೀಕರಿಸುವ ಆತುರ ಏನಿತ್ತು? ರಾಜ್ಯಸಭೆಯಲ್ಲಿ ಇದೆ ಮೊದಲ ಬಾರಿಗೆ ಮತದಾನವನ್ನೇ ಮಾಡದೆ ಮೂರು ಕಾನೂನುಗಳನ್ನು ಅಂಗೀಕರಿಸಲಾಗಿದೆ. ವಿಧಾನಸಭೆಯಲ್ಲಿ ನಾನು ಕೃಷಿ ಕಾನೂನುಗಳನ್ನು ಹರಿದು ಹಾಕಿದ್ದೇನೆ ಮತ್ತು  ಬ್ರಿಟಿಷರಿಗಿಂತ ಕೆಟ್ಟವರಾಗಬೇಡಿ ಎಂದು ಕೇಂದ್ರಕ್ಕೆ ಮನವಿಮಾಡಿದ್ದೇನೆಎಂದು ಕೇಜ್ರಿವಾಲ್ ಹೇಳಿದರು. ಆಂದೋಲನ ನಡೆಸುತ್ತಿರುವ ರೈತರು ತಮ್ಮ ಧ್ವನಿಯನ್ನು ಆಲಿಸುವಂತೆ ಮಾಡಲು ಇನ್ನೂ ಎಷ್ಟು ತ್ಯಾಗಗಳನ್ನು ಮಾಡಬೇಕಾಗುತ್ತದೆ? ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. . (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ದೇಶೀಯ ಉದ್ಯಮದಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ವಾಯುಗಾಮಿ ಮುನ್ನೆಚ್ಚರಿಕೆ ವಿಮಾನಗಳು ಮತ್ತು ಗಸ್ತು ಹಡಗುಗಳು ಸೇರಿದಂತೆ ೨೭,೦೦೦ ಕೋಟಿ ರೂ. ಮೌಲ್ಯದ ಸೇನಾ ಉಪಕರಣಗಳ ಖರೀದಿಗೆ ರಕ್ಷಣಾ ಸ್ವಾಧೀನ ಮಂಡಳಿಯು (ಡಿಎಸಿ) 2020 ಡಿಸೆಂಬರ್ 17ರ ಗುರುವಾರ  ಒಪ್ಪಿಗೆ ನೀಡಿದೆ.  ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಎಸಿ ಸಭೆಯಲ್ಲಿ ಖರೀದಿ ತೆರವುಗೊಳಿಸಿದ ಕ್ರಮವನ್ನು ಅಧಿಕಾರಿಗಳು "ಮೇಕ್ ಇನ್ ಇಂಡಿಯಾ" ಮತ್ತು "ಆತ್ಮನಿರ್ಭರ ಭಾರತಉಪಕ್ರಮಗಳಿಗೆ ದೊಡ್ಡ ಉತ್ತೇಜನ ಎಂದು ಹೇಳಿದ್ದಾರೆ.  ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಅನುಮೋದಿತ ಸ್ವಾಧೀನ ಪ್ರಸ್ತಾಪಗಳಲ್ಲಿ ಭಾರತೀಯ ವಾಯುಪಡೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ವಾಯುಗಾಮಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ (ಎಇಯು ಮತ್ತು ಸಿ) ವಿಮಾನಗಳು, ಭಾರತೀಯ ನೌಕಾಪಡೆಗೆ ಮುಂದಿನ ಪೀಳಿಗೆಯ ಕಡಲಾಚೆಯ ಗಸ್ತು ಹಡಗುಗಳು ಮತ್ತು ಮಾಡ್ಯುಲರ್ ಸೇತುವೆಗಳು ಸೇರಿವೆ. . (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಕೋಲ್ಕತ/ ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರಾದ ಸುವೆಂದು ಅಧಿಕಾರಿ ಮತ್ತು ಜಿತೇಂದ್ರ ತಿವಾರಿ ಅವರು 2020 ಡಿಸೆಂಬರ್ 17ರ ಗುರುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದರೊಂದಿಗೆ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿಗೆ ಎರಡು ಪೆಟ್ಟು ಅನುಭವಿಸಿತು.  ನಂದಿಗ್ರಾಮ ಶಾಸಕ ಸ್ಥಾನದಿಂದ ಬುಧವಾರ ಹೊರಬಂದ ಸುವೇಂದು ಅಧಿಕಾರಿ, ಪಕ್ಷದ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಗುರುವಾರ ರಾಜೀನಾಮೆ ನೀಡಿದರು. ಅವರು ಶೀಘ್ರದಲ್ಲೇ ಬಿಜೆಪಿ ಸೇರುವ ನಿರೀಕ್ಷೆಯಿದೆ.  "ಎಲ್ಲಾ ಸವಾಲುಗಳು ಮತ್ತು ಅವಕಾಶಗಳಿಗೆ ಧನ್ಯವಾದಗಳು ಮತ್ತು ಟಿಎಂಸಿ ಸದಸ್ಯರಾಗಿ ಕಳೆದ ಸಮಯವನ್ನು ಯಾವಾಗಲೂ ಗೌರವಿಸುವೆಎಂದು ಸುವೇಂದು ಅಧಿಕಾರಿ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.  ಪುರ್ಬಾ ಮದಿನಿಪುರ ಜಿಲ್ಲೆಯ ನಂದಿಗ್ರಾಮ ಕ್ಷೇತ್ರವನ್ನು ಸುವೇಂದು ಅಧಿಕಾರಿ ಪ್ರತಿನಿಧಿಸುತ್ತಿದ್ದರು ಮತ್ತು ನಂದಿಗ್ರಾಮ ಚಳವಳಿಯ ಮುಂಚೂಣಿ ನಾಯಕರಾಗಿದ್ದರು. ನಂದಿ ಗ್ರಾಮ ಚಳವಳಿಯೇ ೨೦೧೧ ರಲ್ಲಿ ಮಮತಾ ಬ್ಯಾನರ್ಜಿಯವರನ್ನು ಅಧಿಕಾರಕ್ಕೆ ತಂದಿತ್ತು.  ಕಳೆದ ಕೆಲವು ತಿಂಗಳುಗಳಲ್ಲಿ ಪಕ್ಷದಿಂದ ದೂರವಾಗಿದ್ದ ಮತ್ತು ಪಕ್ಷದ ಬ್ಯಾನರ್ ಹೊರಗೆ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಧಿಕಾರಿ, ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್ ೧೯-೨೦ ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ವೇಳೆಯಲ್ಲಿ ಕೆಲವು ಬಂಡಾಯ ಟಿಎಂಸಿ ನಾಯಕರೊಂದಿಗೆ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ.  ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಪಶ್ಚಿಮ ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗಿಯ ಅವರು, ‘ಅಧಿಕಾರಿ ಅತ್ಯಂತ ಕ್ರಿಯಾಶೀಲ ನಾಯಕ. ಅವರು ಬಿಜೆಪಿಗೆ ಸೇರಲು ಬಯಸಿದರೆ, ಅವರನ್ನು ಸ್ವಾಗತಿಸಲಾಗುತ್ತದೆ ಆದರೆ ಅದು ಅವರ ನಿರ್ಧಾರವನ್ನು ಅವಲಂಬಿಸಿರುತ್ತದೆಎಂದು ಹೇಳಿದರು. . (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಡಿಸೆಂಬರ್ 17 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment