Wednesday, December 9, 2020

ಇಂದಿನ ಇತಿಹಾಸ History Today ಡಿಸೆಂಬರ್ 09

 ಇಂದಿನ ಇತಿಹಾಸ  History Today ಡಿಸೆಂಬರ್ 09

2020:  ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಬಗ್ಗೆ ಲಿಖಿತ ಭರವಸೆ, ವಿಷಯಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮತ್ತು ಸಿವಿಲ್ ನ್ಯಾಯಾಲಯಗಳಲ್ಲಿ ಮೇಲ್ಮನವಿ ಅವಕಾಶದ ಕೊಡುಗೆಯನ್ನು ಕೇಂದ್ರ ಸರ್ಕಾರವು ಚಳವಳಿ ನಿರತ ರೈತರ ಮುಂದಿಟ್ಟಿದೆ. ಆದರೆ ಕೃಷಿ ಕಾಯ್ದೆಗಳ ಸಂಪೂರ್ಣ ವಾಪಸಾತಿ ಇಲ್ಲ ಎಂದು 2020 ಡಿಸೆಂಬರ್ 09ರ ಬುಧವಾರ ತಿಳಿಸಿದೆ. ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಾವಿರಾರು ರೈತರು ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ, ೧೩ ರೈತ ಸಂಘಗಳಿಗೆ ಬುಧವಾರ ಕಳುಹಿಸಿರುವ ಕರಡು ಪ್ರಸ್ತಾವನೆಯಲ್ಲಿ ಸರ್ಕಾರವು ರೈತರ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಉಳಿಸಿಕೊಳ್ಳುವ ಬಗ್ಗೆ "ಲಿಖಿತ ಭರವಸೆಯನ್ನು ನೀಡುವುದಾಗಿ ತಿಳಿಸಿದೆ. ಇದರ ಜೊತೆಗೆ ಮಂಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಬಗೆಗಿನ ಆತಂಕಗಳ ನಿವಾರಣೆ ಸೇರಿದಂತೆ ಕನಿಷ್ಠ ಏಳು ವಿಷಯಗಳ ಬಗ್ಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲು ಸರ್ಕಾರ ಪ್ರಸ್ತಾಪಿಸಿದೆ.ಚಳವಳಿಯ ನೇತೃತ್ವ ವಹಿಸಿರುವ ೧೩ ರೈತ ಸಂಘಗಳಿಗೆ ಕಳುಹಿಸಿದ ಕರಡು ಪ್ರಸ್ತಾವನೆಯಲ್ಲಿ, ಸೆಪ್ಟೆಂಬರಿನಲ್ಲಿ  ಜಾರಿಗೆ ತರಲಾದ ಹೊಸ ಕೃಷಿ ಕಾನೂನುಗಳ ಬಗೆಗಿನ ಅವರ ಕಳವಳ ನಿವಾರಿಸಲು ಅಗತ್ಯವಿರುವ ಎಲ್ಲ ಸ್ಪಷ್ಟೀಕರಣಗಳನ್ನು ನೀಡಲು ಸಿದ್ಧ ಎಂದು ಸರ್ಕಾರ ಹೇಳಿದೆ, ಆದರೆ ಕಾನೂನು ರದ್ದು ಪಡಿಸುವಂತೆ ರೈತರು ಆಗ್ರಹಿಸುತ್ತಿರುವ ಮುಖ್ಯ ಬೇಡಿಕೆಯ ಬಗ್ಗೆ ಅದು ಏನನ್ನೂ ಉಲ್ಲೇಖಿಸಿಲ್ಲ. ೧೩ ರೈತ ಸಂಘಗಳ ಮುಖಂಡರೊಂದಿಗೆ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಎತ್ತಿದ ಪ್ರಮುಖ ವಿಷಯಗಳ ಕುರಿತು ಕರಡು ಪ್ರಸ್ತಾವನೆಯನ್ನು ಕಳುಹಿಸುವುದಾಗಿ ಹೇಳಿದ್ದರು, ಆದರೆ ಸಭೆಯು ಕೃಷಿ ಒಕ್ಕೂಟದ ಮುಖಂಡರೊಂದಿಗಿನ ಬಿಕ್ಕಟ್ಟು ಮುರಿಯಲು ವಿಫಲವಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಿ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕನಿಷ್ಠ ಬೆಂಬಲ ಬೆಲೆ ಬಗ್ಗೆ ಲಿಖಿತ ಭರವಸೆ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿಯನ್ನು ಪ್ರಸ್ತಾಪಿಸಿ ಮುಂದಿಟ್ಟ ಕರಡು ಪ್ರಸ್ತಾವನೆಯನ್ನು  2020 ಡಿಸೆಂಬರ್ 09ರ ಬುಧವಾರ ತಿರಸ್ಕರಿಸಿದರು. ಸರ್ಕಾರದ ಪ್ರಸ್ತಾಪ ರೈತರಿಗೆ ಅವಮಾನ ಎಂದು ತಿಳಿಸಿದ ರೈತ ಮುಖಂಡರು "ಡಿಸೆಂಬರ್ ೧೪ ರಂದು ನಮ್ಮ ಪ್ರತಿಭಟನೆ ರಾಷ್ಟ್ರವ್ಯಾಪಿ ಪ್ರತಿಭಟನೆಯಾಗಲಿದೆ" ಎಂದು ಘೋಷಿಸಿದ್ದಾರೆ. ಡಿಸೆಂಬರ್ "೧೪ ರಂದು ದಿಲ್ಲಿ ಚಲೋ ಮೆರವಣಿಗೆಗಾಗಿ ಎಲ್ಲಾ ಉತ್ತರ ಭಾರತದ ರೈತರಿಗೆ ದೆಹಲಿಗೆ ಬರಲು ಕರೆ ನೀಡಲಾಗಿದೆ. ದಕ್ಷಿಣ ಭಾರತ ಮತ್ತು ಇತರ ದೂರದ ರಾಜ್ಯಗಳ ರೈತರು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಮತ್ತು ಅನಿರ್ದಿಷ್ಟ ಪ್ರತಿಭಟನಾ ಸ್ಥಳಗಳನ್ನು ಪ್ರಾರಂಭಿಸಲಾಗುವುದು. ಜಿಯೋ ಸೇವೆಗಳನ್ನು ಮತ್ತು ಅದಾನಿ / ಅಂಬಾನಿ ಮಾಲ್ಗಳು, ಉತ್ಪನ್ನ ಇತ್ಯಾದಿಗಳನ್ನು ಬಹಿಷ್ಕರಿಸಲೂ ಕರೆ ನೀಡಲಾಗುತ್ತಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಸರ್ಕಾರ ನಮಗೆ ಕಳುಹಿಸಿದ ಹೊಸ ಪ್ರಸ್ತಾಪವನ್ನು ನಾವು ಓದಿದ್ದೇವೆ ಮತ್ತು ಅದನ್ನು ನಾವು ತಿರಸ್ಕರಿಸಿದ್ದೇವೆ. ಕಾನೂನುಗಳನ್ನು ರದ್ದುಗೊಳಿಸದಿದ್ದರೆ ನಾವು ನಮ್ಮ ಪ್ರತಿಭಟನೆಗಳನ್ನು ತೀವ್ರಗೊಳಿಸುತ್ತೇವೆ. ಡಿಸೆಂಬರ್ ೧೪ ರಂದು ಹೊಸ ಧರಣಿ ನಡೆಯಲಿದೆ. ಜೈಪುರ- ದೆಹಲಿ ಹೆದ್ದಾರಿಯನ್ನು ಡಿಸೆಂಬರ್ ೧೨ ರಂದು ನಿರ್ಬಂಧಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ಸೋಂಕಿನಿಂದಾಗಿ ನೆಲಕಚ್ಚಿರುವ ಆರ್ಥಿಕ ಸ್ಥಿತಿಗೆ ಪುನಃಶ್ಚೇತನ ನೀಡುವ ಸಲುವಾಗಿ ಘೋಷಿಸಲಾಗಿರುವ ಆತ್ಮ ನಿರ್ಭರ ಭಾರತ ರೋಜ್ಗಾರ್ ಹೊಸ ಉದ್ಯೋಗ ಯೋಜನೆಗಾಗಿ ೨೨,೮೧೦ ಕೋಟಿ ರೂಪಾಯಿಗಳ ವಿನಿಯೋಗಕ್ಕೆ ಕೇಂದ್ರ ಸಚಿವ ಸಂಪುಟವು 2020 ಡಿಸೆಂಬರ್ 09ರ ಬುಧವಾರ ಅನುಮೋದನೆ ನೀಡಿತು. ಆತ್ಮ ನಿರ್ಭರ ಭಾರತ ರೋಜ್ಗಾರ್ ಯೋಜನೆ ಅಡಿಯಲ್ಲಿ, ವ್ಯವಹಾgದೋದ್ಯಮ ಘಟಕಗಳಿಂದ ಮಾಡುವ ಹೊಸ ನೇಮಕಾತಿಗಳ ನಿವೃತ್ತಿ ನಿಧಿಗೆ ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆಯನ್ನು ಸರ್ಕಾರವೇ ಎರಡು ವರ್ಷಗಳ ಕಾಲ ಒದಗಿಸುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದರು. ಯೋಜನೆಯ ಮತ್ತು ೨೦೨೩ ರವರೆಗೆ ೨೨,೮೧೦ ಕೋಟಿ ರೂಪಾಯಿಗಳಾಗುತ್ತದೆ ಮತ್ತು ಯೋಜನೆಯಿಂದ ಸುಮಾರು ೫೮. ಲಕ್ಷ ನೌಕರರಿಗೆ ಅನುಕೂಲವಾಗಲಿದೆ ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪಿಎಂ-ವಾಣಿ ಅಡಿಯಲ್ಲಿ ಸಾರ್ವಜನಿಕ ವೈಫೈ ನೆಟ್ ವರ್ಕ್ಗಳನ್ನು ಸ್ಥಾಪಿಸಲು ಕೇಂದ್ರ ಸಂಪುಟವು 2020 ಡಿಸೆಂಬರ್ 09ರ ಬುಧವಾರ ಅನುಮೋದನೆ ನೀಡಿತು. ಸಾರ್ವಜನಿಕ ವೈಫೈ ಸೇವೆಯನ್ನು ಬಲಪಡಿಸುವ ಉದ್ದೇಶದಿಂದ ದೇಶಾದ್ಯಂತ ಸಾರ್ವಜನಿಕ ವೈಫೈ ನೆಟ್ವರ್ಕ್ಗಳನ್ನು ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು. ಇದನ್ನು ಪಬ್ಲಿಕ್ ಡಾಟಾ ಆಫೀಸ್ ಅಗ್ರಿಗೇಟರ್ಸ್ (ಪಿಡಿಒಎ) ಮಾಡಲಿದ್ದು, ಇದು ದೇಶಾದ್ಯಂತ ಹರಡಿರುವ ಪಬ್ಲಿಕ್ ಡಾಟಾ ಆಫೀಸ್ (ಪಿಡಿಒ) ಮೂಲಕ ಸಾರ್ವಜನಿಕ ವೈಫೈ ಸೇವೆಯನ್ನು ಒದಗಿಸುತ್ತದೆ. ಇದರೊಂದಿಗೆ, ದೇಶದ ಸಾರ್ವಜನಿಕ ವೈಫೈ ನೆಟ್ವರ್ಕ್ಗಳ ಮೂಲಕ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳ ಪ್ರಸರಣವನ್ನು ವೇಗಗೊಳಿಸಲು ಸರ್ಕಾರ ಉದ್ದೇಶಿಸಿದೆ. ಸಾರ್ವಜನಿಕ ವೈಫೈ ನೆಟ್ವರ್ಕ್ಗಳ ಮೂಲಕ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಒದಗಿಸಲು ಯಾವುದೇ ಪರವಾನಗಿ ಶುಲ್ಕವಿರುವುದಿಲ್ಲ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಾರ್ವಜನಿಕ ವೈಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್ನ್ನು ಪಿಎಂ-ವಾಣಿ ಎಂಬುದಾಗಿ ಕರೆಯಲಾಗುತ್ತದೆ ಎಂದು ಮಾಹಿತಿ ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್ ಪ್ರಕಟಿಸಿದರು. ಇದು ದೇಶದ ಸಾರ್ವಜನಿಕ ವೈಫೈ ನೆಟ್ವರ್ಕ್ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ವೈಫೈ ಕ್ರಾಂತಿಯನ್ನು ಬೃಹತ್ ಪ್ರಮಾಣದಲ್ಲಿ ರಳಗೊಳಿಸುತ್ತದೆ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ವಿವಾದಾತ್ಮಕ ಹೇಳಿಕೆಯೊಂದರಲ್ಲಿ  ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್ ಕಾಂತ್ ಅವರು ಭಾರತದಲ್ಲಿ ಅತಿಯಾದ ಪ್ರಜಾಪ್ರಭುತ್ವವು ಕಠಿಣ ಸುಧಾರಣೆಗಳ ಜಾರಿಯನ್ನು ಕಠಿಣಗೊಳಿಸುತ್ತಿದೆ ಎಂದು 2020 ಡಿಸೆಂಬರ್ 09ರ ಬುಧವಾರ ಹೇಳಿದರು. ‘ನಾವು ಹೆಚ್ಚು ಪ್ರಜಾಪ್ರಭುತ್ವವನ್ನು ಹೊಂದಿರುವುದರಿಂದ "ಕಠಿಣ" ಸುಧಾರಣೆಗಳು "ಭಾರತೀಯ ಸಂದರ್ಭದಲ್ಲಿ ಬಹಳ ಕಷ್ಟಕರವಾಗಿದೆ ಎಂದು ಅವರು ಹೇಳಿದರು.  ಆದಾಗ್ಯೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇಂತಹ ಕಠಿಣ ಸುಧಾರಣೆಗಳನ್ನು ತರಲು ಧೈರ್ಯ ಮತ್ತು ದೃಢ ನಿಶ್ಚಯವನ್ನು ತೋರಿಸಿದೆ ಎಂದು ಅವರು ನುಡಿದರು. ಆನ್ಲೈನ್ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಕಾಂತ್, ಹೊಸ ಕೃಷಿ ಕಾನೂನುಗಳನ್ನು ಬೆಂಬಲಿಸಿದರು ಮತ್ತು ದೇಶದ ಸುಧಾರಣೆಗೆ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದು ಪ್ರತಿಪಾದಿಸಿದರು. ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗಬೇಕೇ? ಎಂಬ ಪ್ರಶ್ನೆಗೆ ಉತ್ತರಿಸಿದ ನೀತಿ ಆಯೋಗದ ಸಿಇಒ, ಭಾರತದ ಸಂದರ್ಭದಲ್ಲಿ ಕಠಿಣ ಸುಧಾರಣೆಗಳು ಬಹಳ ಕಷ್ಟ, ನಾವು ತುಂಬಾ ಹೆಚ್ಚು ಪ್ರಜಾಪ್ರಭುತ್ವವನ್ನು ಹೊಂದಿದ್ದೇವೆ. ಗಣಿಗಾರಿಕೆ, ಕಲ್ಲಿದ್ದಲು, ಕಾರ್ಮಿಕ, ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ಬಹಳ ಕಠಿಣ ಸುಧಾರಣೆಗಳನ್ನು ಕೈಗೊಳ್ಳುವ ಧೈರ್ಯ ಮತ್ತು ದೃಢ ನಿಶ್ಚಯವನ್ನು ಮೊದಲ ಬಾರಿಗೆ ಸರ್ಕಾರ ಹೊಂದಿದೆ. ಇವು ಬಹಳ ಕಷ್ಟಕರವಾದ ಸುಧಾರಣೆಗಳು. ಸುಧಾರಣೆಗಳನ್ನು ಕೈಗೊಳ್ಳಲು ನಿಮಗೆ ಪ್ರಚಂಡವಾದ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾ ಶಕ್ತಿ ಬೇಕು ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಅಂಕಿ ಸಂಖ್ಯಾ ಮಾಹಿತಿ ಕೊರತೆಯ ಕಾರಣ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮತ್ತು ಭಾರತ ಬಯೋಟೆಕ್ ಸಂಸ್ಥೆಗಳ ಕೋವಿಡ್ -೧೯ ಲಸಿಕೆಗಳನ್ನು ತುರ್ತು ಬಳಕೆಯ ದೃಢೀಕರಣಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಸುದ್ದಿ ಮೂಲಗಳು 2020 ಡಿಸೆಂಬರ್ 09ರ ಬುಧವಾರ ತಿಳಿಸಿವೆ.  ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ಸಂಸ್ಥೆಗಳಿಂದ ಹೆಚ್ಚಿನ ಮಾಹಿತಿಯನ್ನು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ssಸಿಡಿಎಸ್ಸಿಒ) ಕೋರಿದ್ದು, ಅಂತಹ ಮಾಹಿತಿ ಅಲಭ್ಯತೆಯ ಹಿನ್ನೆಲೆಯಲ್ಲಿ ಲಸಿಕೆಗಳಿಗೆ ತುರ್ತು ಬಳಕೆಯ ಅಧಿಕಾರವನ್ನು ತಿರಸ್ಕರಿಸಿದೆ ಎಂದು ಸುದ್ದಿ ಮೂಲಗಳು ಹೇಳಿವೆ. ಆದಾಗ್ಯೂ, ತುರ್ತು ಬಳಕೆಯ ಅಧಿಕಾರ ನಿರಾಕರಣೆಯ ಕುರಿತ ಮಾಧ್ಯಮ ವರದಿಗಳ ಬೆನ್ನಲ್ಲೇ ವರದಿಗಳನ್ನು ನಿರಾಕರಿಸಿ ಆರೋಗ್ಯ ಸಚಿವಾಲಯ ಪ್ರಕಟಣೆ ಹೊರಡಿಸಿತು. ಸಮಗ್ರ ಪರಿಶೀಲನೆಯ ಬಳಿಕ ಲಸಿಕೆಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು. ಮತ್ತು ಅವುಗಳನ್ನು ತಿರಸ್ಕರಿಸಲಾಗುತ್ತದೆಯೇ ಅಥವಾ ಸ್ವೀಕರಿಸಲಾಗುತ್ತದೆಯೇ ಎಂದು ಈಗ ಹೇಳುವುದು ತುಂಬಾ ಅಪ್ರಬುದ್ಧವಾಗುತ್ತದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮೂಲಗಳನ್ನು ಉಲ್ಲೇಖಿಸಿ ಹೇಳಿತು. ಭಾರತೀಯ ಕೋವಿಡ್ -೧೯ ಲಸಿಕೆ ಕೋವಾಕ್ಸಿನ್ಗೆ ತುರ್ತು ಬಳಕೆಯ ಅನುಮತಿ ಕೋರಿ ಭಾರತ್ ಬಯೋಟೆಕ್ ಸೋಮವಾರ ಭಾರತದ ಔಷಧ ನಿಯಂತ್ರಕ ಸಂಸ್ಥೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿತ್ತು. ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಔಷಧೀಯ ಸಂಸ್ಥೆ ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ವಿರೋಧ ಪಕ್ಷದ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು 2020 ಡಿಸೆಂಬರ್ 09ರ ಬುಧವಾರ ಭೇಟಿ ಮಾಡಿ, ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ವಿರೋಧ ಪಕ್ಷಗಳ ಜಂಟಿ ನಿಯೋಗ ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿತು.  ನಿಯೋಗದಲ್ಲಿ  ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ಡಿ ರಾಜಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ವಾದಿ (ಸಿಪಿಐ-ಎಂ) ನಾಯಕ ಸೀತಾರಾಮ್ ಯೆಚೂರಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ  (ಡಿಎಂಕೆ) ನಾಯಕ ಟಿಕೆಎಸ್ ಎಳಂಗೋವನ್ ಅವರು ಇದ್ದರು. ಹತ್ತು ದಿನಗಳಿಂದ ದೇಶಾದ್ಯಂತ ಪ್ರತಿಭಟನೆಗೆ ನಾಂದಿ ಹಾಡಿದ ಮೂರು ಶಾಸನಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದು ನಿರ್ಣಾಯಕವಾಗಿದೆ ಎಂದು ನಿಯೋಗ ರಾಷ್ಟ್ರಪತಿಗೆ ತಿಳಿಸಿತು.ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಅವರು ಮನವಿ ಪತ್ರವನ್ನು ಸಲ್ಲಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಡಿಸೆಂಬರ್ 09 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment