Wednesday, December 2, 2020

ಇಂದಿನ ಇತಿಹಾಸ History Today ಡಿಸೆಂಬರ್ 02

 ಇಂದಿನ ಇತಿಹಾಸ  History Today ಡಿಸೆಂಬರ್ 02 

2020: ಲಂಡನ್: ಕೋವಿಡ್-೧೯ ಸಾಂಕ್ರಾಮಿಕದ ವಿರುದ್ಧದ ಬಳಕೆಗಾಗಿ ಫಿಜರ್ ಬಯೋ ಎನ್‌ಟೆಕ್ ಲಸಿಕೆಯನ್ನು ಇಂಗ್ಲೆಂಡ್ 2020 ಡಿಸೆಂಬರ್ 2ರ ಬುಧವಾರ ಅನುಮೋದಿಸಿದ್ದು, ಕೊರೋನಾ ವಿರೋಧಿ ಲಸಿಕೆ ಅನುಮೋದಿಸಿದ ವಿಶ್ವದ ಚೊಚ್ಚಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಲಸಿಕೆಯು ಮುಂದಿನ ವಾರ ಬಿಡುಗಡೆಯಾಗಲಿದೆ ಎಂಬ ಚಾರಿತ್ರಿಕ ಪ್ರಕಟಣೆಯನ್ನು ಇಂಗ್ಲೆಂಡ್ ಈದಿನ ಮಾಡಿತು.  "ಫಿಜರ್-ಬಯೋಎನ್‌ಟೆಕ್‌ನ  ಕೋವಿಡ್-೧೯ ಲಸಿಕೆಯನ್ನು ಬಳಕೆಗಾಗಿ ಅನುಮೋದಿಸಲು ಸ್ವತಂತ್ರ  ಔಷಧ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸೆಯ್ಥ (ಎಂಎಚ್ ಆರ್‌ಎ) ಶಿಫಾರಸನ್ನು ಸರ್ಕಾರ ಬುಧವಾರ ಸ್ವೀಕರಿಸಿದೆ" ಎಂದು ಸರ್ಕಾರ ತಿಳಿಸಿತು.  "ಲಸಿಕೆ ಮುಂದಿನ ವಾರದಿಂದ ಇಂಗ್ಲೆಂಡಿನಾದ್ಯಂತ ಲಭ್ಯವಾಗಲಿದೆ. ಮುಂದಿನ ವಾರದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಹೇಳಿದರು. "ಇದು ತುಂಬಾ ಒಳ್ಳೆಯ ಸುದ್ದಿ" ಎಂದು ಹ್ಯಾನ್ಕಾಕ್ ನುಡಿದರು. ಲಸಿಕೆಯನ್ನು ಬ್ರಿಟನ್ ಅನುಮೋದಿಸಿದ್ದು ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ಇದೊಂದು "ಐತಿಹಾಸಿಕ ಕ್ಷಣ ವಾಗಿದೆ ಎಂದು ಯುಎಸ್ ಫಾರ್ಮಾ ಸಮೂಹದ ಮುಖ್ಯ ಕಾರ್ಯನಿರ್ವಾಹಕರು ಪಶ್ಚಿಮದಲ್ಲಿ ಲಸಿಕೆ ವಿತರಣೆಯ ಅಧಿಕಾರವನ್ನು ತಮ್ಮ ಕಂಪೆನಿಯು ಗೆದ್ದ ಬಳಿಕ ಹೇಳಿದರು. "ಇಂಗ್ಲೆಂಡಿನಲ್ಲ್ಲಿ ಇಂದಿನ ತುರ್ತು ಬಳಕೆ ದಢೀಕರಣವು ಕೋವಿಡ್ -೧೯ ವಿರುದ್ಧದ ಹೋರಾಟದಲ್ಲಿ ಒಂದು ಐತಿಹಾಸಿಕ ಕ್ಷಣವನ್ನು ಸೂಚಿಸುತ್ತದೆ" ಎಂದು ಫಿಜರ್ ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿದರು, "ನಾವು ಉತ್ತಮ ಗುಣಮಟ್ಟದ ಲಸಿಕೆಯನ್ನು ಇದೇ ಗುಣಮಟ್ಟದೊಂದಿಗೆ ಸುರಕ್ಷಿತವಾಗಿ ಜಗತ್ತಿಗೆ ಪೂರೈಸುವತ್ತಲೂ ಗಮನ ಹರಿಸಿದ್ದೇವೆ ಎಂದು ಅವರು ನುಡಿದರು. "ಮುಂಬರುವ ದಿನಗಳು ಮತ್ತು ವಾರಗಳಲ್ಲಿ" ಇತರ ದೇಶಗಳಿಂದ ಹೆಚ್ಚಿನ ನಿಯಂತ್ರಕ ನಿರ್ಧಾರಗಳನ್ನು ನಿರೀಕ್ಷಿಸಲಾಗಿದೆ ಎಂದು ಅಮೆರಿಕದ ಕಂಪೆನಿ ಮತ್ತು ಜರ್ಮನಿಯ ಬಯೋಎನ್ ಟೆಕ್ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ೨೦೨೧ ಗಣರಾಜ್ಯೋತ್ಸವದಲ್ಲಿ ಇಂಗ್ಲೆಂಡಿನ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಿ ಭಾಗವಹಿಸುವ ನಿರೀಕ್ಷೆಯಿದೆ, ಪ್ರಧಾನಿ ನರೇಂದ್ರ ಮೋದಿ ಅರು ನವೆಂಬರ್ ೨೭ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಜಾನ್ಸನ್ ಅವರಿಗೆ ಔಪಚಾರಿಕ ಆಹ್ವಾನ ನೀಡಿದ್ದಾರೆ. ಮುಂದಿನ ವರ್ಷ ಇಂಗ್ಲೆಂಡಿನಲ್ಲಿ ನಡೆಯಲಿರುವ ಜಿ - ಶೃಂಗಸಭೆಗೆ ಪ್ರಧಾನಿ ಮೋದಿಯವರನ್ನು ಜಾನ್ಸನ್ ಆಹ್ವಾನಿಸಿದ್ದಾರೆ ಎಂದು ಸುದ್ದಿ ಮೂಲಗಳು 2020 ಡಿಸೆಂಬರ್ 2ರ ಬುಧವಾರ ತಿಳಿಸಿವೆ. ಭಾರತದ ಗಣರಾಜ್ಯೋತ್ಸವದ ಪರೇಡಿನಲ್ಲಿ ಪಾಲ್ಗೊಂಡಿದ್ದ ಕೊನೆಯ ಬ್ರಿಟಿಷ್ ಪ್ರಧಾನಿ ಜಾನ್ ಮೇಜರ್. ಅವರು ೧೯೯೩ರಲ್ಲಿ ಗಣರಾಜ್ಯೋತ್ಸವ ಪರೇಡಿನಲ್ಲಿ ಪಾಲ್ಗೊಂಡಿದ್ದರು. ನವದೆಹಲಿಯು ವಿಷಯದ ಬಗ್ಗೆ ತುಟಿ ಬಿಚ್ಚಿಲ್ಲ. ಆದರೆ, ರಾಜತಾಂತ್ರಿಕರು ಇದು ಪ್ರಧಾನಿ ಮೋದಿಯವರ ಉತ್ತಮ ಚಿಂತನೆಯ ತಂತ್ರ ಎಂದು ಭಾವಿಸಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷರಾಗಲಿರುವ ಜೋ ಬಿಡೆನ್ ಅವರ ಆಡಳಿತದಲ್ಲಿನ ಸಂಬಂಧದ ಬಗ್ಗೆ ಆತಂಕ ಇರುವ ಹಿನ್ನೆಲೆಯಲ್ಲಿ ಬ್ರೆಕ್ಸಿಟ್‌ನಿಂದ ಹೊರಬರುತ್ತಿರುವ ಇಂಗ್ಲೆಂಡನ್ನು ಆಹ್ವಾನಿಸಿರುವುದು ಉತ್ತಮ ಚಿಂತನೆಯ ಫಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮುಂದಿನ ದಶಕದಲ್ಲಿ ಭಾರತ-ಇಂಗ್ಲೆಂಡ್ ಸಂಬಂಧಗಳಿಗಾಗಿ ಮಹತ್ವಾಕಾಂಕ್ಷೆಯ ಮಾರ್ಗ ನಕ್ಷೆಯಲ್ಲಿ ತಮ್ಮ ಸ್ನೇಹಿತ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಅತ್ಯುತ್ತಮ ಚರ್ಚೆ ನಡೆಸಿರುವುದಾಗಿ ಪ್ರಧಾನಿ ಮೋದಿ ತಮ್ಮ ನವೆಂಬರ್ ೨೭ ಟ್ವೀಟ್ ನಲ್ಲಿ ತಿಳಿಸಿದ್ದಾರೆ. "ವ್ಯಾಪಾರ ಮತ್ತು ಹೂಡಿಕೆಗಳು, ರಕ್ಷಣಾ ಮತ್ತು ಭದ್ರತೆ, ಹವಾಮಾನ ಬದಲಾವಣೆ ಮತ್ತು ಕೋವಿಡ್ -೧೯ ವಿರುದ್ಧ ಹೋರಾಡುವ ಎಲ್ಲಾ ಕ್ಷೇತ್ರಗಳಲ್ಲಿನ ನಮ್ಮ ಸಹಕಾರವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಾವು ಒಪ್ಪಿದ್ದೇವೆ" ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೃಷಿ ಕ್ಷೇತ್ರವನ್ನು ಉದಾರೀಕರಣಗೊಳಿಸಲು ಸೆಪ್ಟೆಂಬರಿನಲ್ಲಿ ಅಂಗೀಕರಿಸಲಾಗಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮೊದಲಿಗೆ ಉತ್ತರ ಭಾರತ ಮತ್ತು ತರುವಾಯ ಇಡೀ ದೇಶದಾದ್ಯಂತ ಅಗತ್ಯ ವಸ್ತುಗಳ ಸಂಚಾರವನ್ನು ನಿಲ್ಲಿಸುವುದಾಗಿ ಸಾರಿಗೆದಾರರ ಉನ್ನತ ಸಂಸ್ಥೆ 2020 ಡಿಸೆಂಬರ್ 2ರ ಬುಧವಾರ ಬೆದರಿಕೆ ಹಾಕಿತು. ಸುಮಾರು ಕೋಟಿ (೧೦ ಮಿಲಿಯನ್) ಟ್ರಕ್ಕರ್‌ಗಳನ್ನು ಪ್ರತಿನಿಧಿಸುವ ಸರಕುಗಳ ವಾಹನ ನಿರ್ವಾಹಕರ ಸಂಘಗಳ ಒಕ್ಕೂಟವಾದ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ) ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಡಿಸೆಂಬರ್ ರಿಂದ ಮುಷ್ಕರ ಆರಂಭಿಸಲು ಕರೆ ನೀಡಿತು. "ಡಿಸೆಂಬರ್ ರಿಂದ, ನಾವು ಉತ್ತರ ಭಾರತದಾದ್ಯಂತ ನಮ್ಮ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುತ್ತೇವೆ ಮತ್ತು ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ, ಮತ್ತು ಜಮ್ಮು [ಮತ್ತು ಕಾಶ್ಮೀರ] ಸೇರಿದಂತೆ ಉತ್ತರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಸ್ತೆಗಳಿಗೆ ಅಡ್ಡಲಾಗಿ ನಮ್ಮ ಎಲ್ಲಾ ವಾಹನಗಳನ್ನು ನಿಲ್ಲಿಸುತ್ತೇವೆ. ಪ್ರತಿಭಟನಾ ನಿರತ ರೈತರ ಬೇಡಿಕೆಗಳಿಗೆ ಸರ್ಕಾರ ಆಗಲೂ ಸಮ್ಮತಿಸದಿದ್ದರೆ, ನಾವು ಭಾರತದಾದ್ಯಂತ ಚಕ್ಕಾ ಜಾಮ್‌ಗೆ ಕರೆ ನೀಡುತ್ತೇವೆ ಮತ್ತು ನಮ್ಮ ಎಲ್ಲಾ ವಾಹನಗಳನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇ ಎಂದು ಎಐಎಂಟಿಸಿ ಅಧ್ಯಕ್ಷ ಕುಲ್ತಾರನ್ ಸಿಂಗ್ ಅಟ್ವಾಲ್ ಹೇಳಿದ್ದಾರೆ(ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಚೆನ್ನೈ: ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರನ್ನು ಮಹಿಳಾ ನ್ಯಾಯಾಧೀಶರು ಮತ್ತು ನ್ಯಾಯಾಧೀಶರ ಪತ್ನಿಯರ ವಿರುದ್ಧ ಪ್ರಯೋಗಿಸಿದ ಅವಾಚ್ಯ ಪದಗಳಿಗಾಗಿ 2020 ಡಿಸೆಂಬರ್ 2ರ ಬುಧವಾರ ಬಂಧಿಸಲಾಯಿತು. ಕರ್ಣನ್ ಅವರು ಬಳಸಿದ ಅವಾಚ್ಯ ಪದಗಳ ಕುರಿತ ವಿಡಿಯೋವನ್ನು ಯುಟ್ಯೂಬಿನಲ್ಲಿ ಪ್ರಕಟಿಸಲಾಗಿತ್ತು. ಹೈಕೋರ್ಟಿನ ಮಾಜಿ ನ್ಯಾಯಮೂರ್ತಿಯನ್ನು ಚೆನ್ನೈ ಪೊಲೀಸರು ಬಂಧಿಸಿದರು. ಕರ್ಣನ್ ಅವರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳ ಪತ್ನಿಯರ ವಿರುದ್ಧ ಮಾನಹಾನಿಕರ ಮತ್ತು ಆಕ್ರಮಣಕಾರಿ ಟೀಕೆಗಳನ್ನು ಮಾಡಿದ್ದಾರೆ ಮತ್ತು ವಿಡಿಯೋವನ್ನು ಅಂತರ್ಜಾಲದಲ್ಲಿ (ಆನ್ ಲೈನ್) ಅಪ್‌ಲೋಡ್ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಪೊಲೀಸರಿಗೆ ಛೀಮಾರಿ ಹಾಕಿತ್ತು. ೨೦೧೭ ರಲ್ಲಿ, ಮಾಜಿ ನ್ಯಾಯಮೂರ್ತಿ ಕರ್ಣನ್ ಅವರು ಜೈಲು ಶಿಕ್ಷೆ ಅನುಭವಿಸಿದ ಮೊದಲ ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದರು. ನ್ಯಾಯಾಂಗ ನಿಂದನೆಗಾಗಿ, ಕಲ್ಕತ್ತಾ ಹೈಕೋರ್ಟಿನ ನ್ಯಾಯಮೂರ್ತಿಯಾಗಿದ್ದ ಸಮಯದಲ್ಲಿ ಅವರಿಗೆ ಆರು ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿತ್ತು. ಸಮಯದಲ್ಲಿ, ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಸುಪ್ರೀಂ ಕೋರ್ಟಿನ ಏಳು ನ್ಯಾಯಮೂರ್ತಿಗಳ ಪೀಠವು ಅವರನ್ನು ವಶಕ್ಕೆ ಪಡೆಯುವಂತೆ ಪಶ್ಚಿಮ ಬಂಗಾಳ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿತ್ತು. ಆದರೆ ಕರ್ಣನ್ ತಲೆಮರೆಸಿಕೊಂಡು ಹಲವು ವಾರಗಳ ಕಾಲ ಬಂಧನದಿಂದ ತಪ್ಪಿಸಿಕೊಂಡಿದ್ದರು. ಕೊನೆಗೆ ಕರ್ಣನ್ ಅವರ ಮೊಬೈಲ್ ಫೋನಿನ ಜಾಡು ಹಿಡಿದು ಅವರನ್ನು ಬಂಧಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ವಾಷಿಂಗ್ಟನ್: ವಿಶ್ವಸಂಸ್ಥೆಯನ್ನು ನಾಶಪಡಿಸುವ ಚೀನಾದ ಹುನ್ನಾರವನ್ನು ಎದುರಿಸಲು ಅಮೆರಿಕ ಕಾರ್‍ಯ ನಿರ್ವಹಿಸಬೇಕು ಎಂದು ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗವು ಕಾಂಗ್ರೆಸ್ಸಿಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ. ವಿಶ್ವಸಂಸ್ಥೆಯ ಸದಸ್ಯರ ಮತಗಳ ಮೇಲೆ ಪ್ರಭಾವ ಬೀರಲು ಬೀಜಿಂಗ್‌ನ ಕ್ರಮಗಳ ಬಗ್ಗೆ ವರದಿಯನ್ನು ಸಿದ್ಧಪಡಿಸುವುದು ಸೇರಿದಂತೆ ವಿಶ್ವಸಂಸ್ಥೆ ಮತ್ತು ಅದರ ಆಧೀನ ಸಂಸ್ಥೆಗಳ ತತ್ವಗಳನ್ನು ತಗ್ಗಿಸುವ ಚೀನಾ ಪ್ರಯತ್ನಗಳನ್ನು ಎದುರಿಸಲು ಅಮೆರಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವರದಿ ಹೇಳಿದೆ. ವಿಶ್ವಸಂಸ್ಥೆಯ ಆಧೀನ ಸಂಸ್ಥೆಗಳಲ್ಲಿ ಸುಧಾರಣೆಯ ಯತ್ನಗಳು ಅಲ್ಪ ಮುನ್ನಡೆ ಸಾಧಿಸಿರುವ ವೇಳೆಯಲ್ಲಿ ಸಂಸ್ಥೆಗಳ ಮೇಲೆ ಚೀನಾ ಬೀರುತ್ತಿರುವ ಪ್ರಭಾವದ ಬಗ್ಗೆ ನವದೆಹಲಿ ಸೇರಿದಂತೆ ವಿಶ್ವದ ಇತರ ಅನೇಕ ದೇಶಗಳ ರಾಜಧಾನಿಗಳಲ್ಲಿ ಕಳವಳ ವ್ಯಕ್ತವಾಗುತ್ತಿರುವ ವೇಳೆಯಲ್ಲೇ ಅಮೆರಿಕದ ಆಯೋಗ ವರದಿಯನ್ನು ಸಲ್ಲಿಸಿದೆ.   "ವಿಶ್ವಸಂಸ್ಥೆಯ ತತ್ವಗಳು ಮತ್ತು ಉದ್ದೇಶಗಳನ್ನು ಬುಡಮೇಲು ಮಾಡುವ ಚೀನಾದ ಕ್ರಮಗಳನ್ನು ವಿವರಿಸುವ ವಾರ್ಷಿಕ ವರದಿಗಳನ್ನು ತಯಾರಿಸುವಂತೆ ಅಮೆರಿಕದ ರಾಜ್ಯಾಂಗ ಇಲಾಖೆಗೆ ಕಾಂಗ್ರೆಸ್ ನಿರ್ದೇಶಿಸಬೇಕು ಎಂದು ಆಯೋಗದ ವರದಿ ಲಹೆ ಮಾಡಿದೆ. ರಾಜ್ಯಾಂಗ ಇಲಾಖೆಯು ತಯಾರಿಸುವ ಇಂತಹ ವರದಿಗಳು ವಿಶ್ವಸಂಸ್ಥೆ ಒಪ್ಪಂದಗಳನ್ನು ಉಲ್ಲಂಘಿಸುವ ಮತ್ತು ವಿಶ್ವಸಂಸ್ಥೆಯ ಸದಸ್ಯರ ಮತಗಳ ಮೇಲೆ ಪ್ರಭಾವ ಬೀರುವ ಬಲವಂತದ ವಿಧಾನ ಸಹಿತವಾಗಿ ಚೀನಾದ ಕ್ರಮಗಳನ್ನು ದಾಖಲಿಸಬೇಕು ಎಂದು ವರದಿ ಹೇಳಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಡಿಸೆಂಬರ್ 02 
(2019+ ಹಿಂದಿನವುಗಳಿಗೆ 
 ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment