ಇಂದಿನ ಇತಿಹಾಸ History Today ಡಿಸೆಂಬರ್ 01
2020: ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆದಾಯ ಸತತ ಎರಡನೇ ತಿಂಗಳಲ್ಲಿ ೧ ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದ್ದು, ನವೆಂಬರಿನಲ್ಲಿ ೧,೦೪,೯೬೩ ಕೋಟಿ ರೂಪಾಯಿಗಳಿಗೆ ತಲುಪಿದೆ. ಇದರಿಂದಾಗಿ ಶೇಕಡಾ ೧.೪ರ ವಾರ್ಷಿಕ ಬೆಳವಣಿಗೆಯನ್ನು ದಾಖಲಾದಂತಾಗಿದೆ. ಆದಾಗ್ಯೂ, ಹಿಂದಿನ ತಿಂಗಳಲ್ಲಿ ಸಂಗ್ರಹಿಸಿದ ೧,೦೫,೧೫೫ ಕೋಟಿ ರೂ.ಗಳಿಗೆ ಹೋಲಿಸಿದರೆ ಆದಾಯವು ಸ್ವಲ್ಪ ಕುಸಿದಿದ್ದು, ಶೇ.೦.೧೮ರಷ್ಟು ಕಡಿಮೆಯಾಗಿದೆ. ಜಿಎಸ್ಟಿ ಸಂಗ್ರಹವು ಆರು ತಿಂಗಳ ಕಾಲ ಸಂಕೋಚನ ಕ್ರಮದಲ್ಲಿ ಉಳಿದುಕೊಂಡ ನಂತರ ಸತತ ಮೂರನೇ ತಿಂಗಳು ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸಿದೆ, ಇದು ಕೋವಿಡ್ -೧೯ ಸಾಂಕ್ರಾಮಿಕ ರೋಗವು ಭಾರತವನ್ನು ಬಾಧಿಸಿದ ಬಳಿಕ ಈ ವರ್ಷದ ಮಾರ್ಚ್ ತಿಂಗಳಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಜಾರಿಗೊಳಿಸಿದಂದಿನಿಂದ ಕುಸಿದ ಆರ್ಥಿಕತೆಯು ಈಗ ಚೇತರಿಕೆಯ ಲಕ್ಷಣಗಳನ್ನು ಸೂಚಿಸುತ್ತಿರುವುದನ್ನು ಇದು ತೋರಿಸಿದೆ. ಜಿಎಸ್ಟಿಗೆ ಸಂಬಂಧಿಸಿದ ಅಧಿಕೃತ ಅಂಕಿ ಅಂಶಗಳನ್ನು 2020 ಡಿಸೆಂಬರ್ 01ರ ಮಂಗಳವಾರ ಬಿಡುಗಡೆ ಮಾಡಲಾಗಿದೆ. "ಜಿಎಸ್ಟಿ ಆದಾಯದಲ್ಲಿ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, ೨೦೨೦ ರ ನವೆಂಬರ್ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿನ ಜಿಎಸ್ಟಿ ಆದಾಯಕ್ಕಿಂತ ಶೇಕಡಾ ೧.೪ರಷ್ಟು ಹಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ೨೦೨೦ ರ ನವೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ ೧,೦೪,೯೬೩ ಕೋಟಿ ರೂಪಾಯಿಗಳು. ಇದರಲ್ಲಿ ಕೇಂದ್ರ ಜಿಎಸ್ಟಿ (ಸಿಜಿಎಸ್ಟಿ) ೧೯,೧೮೯ ಕೋಟಿ ರೂಪಾಯಿಗಳು. ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) ೨೫,೫೪೦ ಕೋಟಿ ರೂಪಾಯಿಗಳು, ಇಂಟಿಗ್ರೇಟೆಡ್ ಜಿಎಸ್ಟಿ (ಐಜಿಎಸ್ಟಿ) ೫೧, ೯೯೨ ಕೋಟಿ ರೂಪಾಯಿಗಳು (ಸರಕುಗಳ ಆಮದಿಗೆ ಸಂಗ್ರಹಿಸಿದ ೨೨,೦೭೮ ಕೋಟಿ ರೂ. ಸೇರಿದಂತೆ) ಎಂದು ಅದು ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳು ಮತ್ತು ಅದರ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಭಾರತದ ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯುದ್ದಕ್ಕೂ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುವ ಸಾಮರ್ಥ್ಯವನ್ನು ವಿಸ್ತರಿಸಲು ದೊಡ್ಡ ಡ್ರೋಣ್ಗಳನ್ನು ಬಳಸಲಾರಂಭಿಸಿದೆ ಎಂದು ಸುದ್ದಿ ಮೂಲಗಳು 2020 ಡಿಸೆಂಬರ್ 01ರ ಮಂಗಳವಾರ ತಿಳಿಸಿವೆ. ಕಳೆದ ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆಗಾಗಿ ಡ್ರೋಣ್ಗಳನ್ನು ಬಳಸುತ್ತಿದ್ದ ಭಯೋತ್ಪಾದಕ ಗುಂಪುಗಳು ಮತ್ತು ಐಎಸ್‌ಐ, ಪ್ರತಿ ಸರಕಿನಲ್ಲಿ ಹೆಚ್ಚಿನ ಪ್ರಮಾಣದ ಬಂದೂಕುಗಳನ್ನು ಸಾಗಿಸಬಲ್ಲ ದೊಡ್ಡ ಡ್ರೋಣ್ಗಳ ನವೀಕರಿಸಿದ ಆವೃತ್ತಿಗಳನ್ನು ಸಂಗ್ರಹಿಸಿಕೊಂಡಿವೆ ಎಂದು ದೆಹಲಿಯ ಭಯೋತ್ಪಾದನೆ ನಿಗ್ರಹ ಅಧಿಕಾರಿಗಳು ತಿಳಿಸಿದ್ದಾರೆ. ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಎತ್ತರದ ಪರ್ವತ ಮಾರ್ಗಗಳಲ್ಲಿ ಹಿಮಪಾತದ ಕಾರಣ ಜಮ್ಮು ಮತ್ತು ಕಾಶ್ಮೀgಕ್ಕೆ ಜಿಹಾದಿ ಒಳನುಸುಳುವಿಕೆಯನ್ನು ಕಷ್ಟಕರವಾಗುವ ಹಿನ್ನೆಲೆಯಲ್ಲಿ ನವೀಕೃತ ದ್ರೋಣ್ ಬಳಕೆಯು ಭಯೋತ್ಪಾದಕರು, ಪಾಕ್ ಸೈನಿಕರ ಸಾಮರ್ಥ್ಯ ಹೆಚ್ಚಳಕ್ಕೆ ನಿರ್ಣಾಯಕವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕರಿಗೆ ಸರಬರಾಜು ಮಾಡಲು ಉದ್ದೇಶಿಸಲಾಗಿರುವ ಶಸ್ತ್ರಾಸ್ತ್ರಗಳನ್ನು ಪಂಜಾಬಿನಲ್ಲಿ ಉದುರಿಸುತ್ತಿದೆ ಎಂದು ಅನೇಕ ಗುಪ್ತಚರ ವರದಿಗಳು ತಿಳಿಸಿವೆ. ಗಡಿ ರಾಜ್ಯದಲ್ಲಿ ಉಗ್ರಗಾಮಿತ್ವವನ್ನು ಪುನರುಜ್ಜೀವನಗೊಳಿಸುವ ಸತತ ಪ್ರಯತ್ನದ ಭಾಗವಾಗಿ ಹ್ಯಾಂಡ್ಲರುಗಳು ಪಂಜಾಬಿನ ರೈತ ಆಂದೋಲನವನ್ನು ಬಳಸಿಕೊಳ್ಳಲು ಪಾಕಿಸ್ತಾನ ಮೂಲದ ಖಲಿಸ್ತಾನಿ ಗುಂಪುಗಳನ್ನು ನುಗ್ಗಿಸುತ್ತಿವೆ ಎಂದು ಇತ್ತೀಚಿನ ವರದಿಗಳು ಸೂಚಿಸಿವೆ. ಈ ಅನುಮಾನಗಳನ್ನು ಕೇಂದ್ರ ಮತ್ತು ಆಂತರಿಕ ಭದ್ರತಾ ಸಂಸ್ಥೆಗಳಿಗೆ ರಾಜ್ಯ ಪೊಲೀಸ್ ಮತ್ತೆ ಮತ್ತೆ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಶೆಹ್ಲಾ ರಶೀದ್ ಶೋರಾ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ನಾಯಕಿಯಾಗಿದ್ದು, ಆಕೆ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ಆಕೆಯ ತಂದೆ ಅಬ್ದುಲ್ ರಶೀದ್ ಜೋರಾ ಆಪಾದಿಸಿದ್ದಾರೆ. ತನಗೆ ಪುತ್ರಿಯಿಂದ ಪ್ರಾಣ ಬೆದರಿಕೆ ಇದೆ ಎಂದೂ ರಶೀದ್ ದೂರಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಡಿಜಿಪಿಗೆ ಬರೆದ ಪತ್ರದಲ್ಲಿ, ಅಬ್ದುಲ್ ರಶೀದ್ ಶೋರಾ, ‘ನನ್ನ ಮಗಳು ಶೆಹ್ಲಾ ರಶೀದ್ ಶೋರಾಳಿಂದ ನಾನು ನಿರಂತರವಾಗಿ ಮಾರಣಾಂತಿಕ ಅಪಾಯಕ್ಕೆ ಒಳಗಾಗಿದ್ದೇನೆ. ಆಕೆಗೆ ನನ್ನ ಹಿರಿಯ ಪುತ್ರಿ ಅಸ್ಮಾ ರಶೀದ್ ಮತ್ತು ನನ್ನ ಹೆಂಡತಿ ಜುಬೈದಾ ಶೋರಾ ಹಾಗೂ ಸೆಕ್ಯುರಿಟಿ ಗಾರ್ಡ್ ಸಕೀಬ್ ಅಹ್ಮದ್ ಅವರ ಬೆಂಬಲವಿದೆ’ ಎಂದು ತಿಳಿಸಿದ್ದಾರೆ. ೨೦೧೭ ರಲ್ಲಿ ಶೆಹ್ಲಾ ಇದ್ದಕ್ಕಿದ್ದಂತೆ ಕಾಶ್ಮೀರ ರಾಜಕೀಯಕ್ಕೆ ನೆಗೆದ ಬಳಿಕ ತನಗೆ ಈ ಜೀವ ಬೆದರಿಕೆ ಗ್ರಹಿಕೆ ಪ್ರಾರಂಭವಾಯಿತು ಎಂದು ರಶೀದ್ ಹೇಳಿದ್ದಾರೆ. "ಯುಎಪಿಎ ಅಡಿಯಲ್ಲಿ ಭಯೋತ್ಪಾzನೆಗೆ ಧನಸಹಾಯ ಪ್ರಕರಣದಲ್ಲಿ ಜಹೂರ್ ವಟಾಲಿಯನ್ನು ಬಂದಿಸುವುದಕ್ಕೆ ಕೇವಲ ಎರಡು ತಿಂಗಳ ಮೊದಲು, ನನ್ನನ್ನು ೨೦೧೭ರ ಜೂನ್ ತಿಂಗಳಲ್ಲಿ ಶ್ರೀನಗರದ ವಟಾಲಿಯ ನಿವಾಸಕ್ಕೆ ವಟಾಲಿ ಮತ್ತು ಮಾಜಿ ಶಾಸಕ ರಶೀದ್ ಎಂಜಿನಿಯರ್ ಕರೆದಿದ್ದರು. ಈ ಕುಖ್ಯಾvರ ಜೊತೆ ಶೆಹ್ಲಾ ಸೇರ್ಪಡೆಗಾಗಿ ಅವರು ನನಗೆ ೩ ಕೋಟಿ ರೂಪಾಯಿಗಳನ್ನು ನೀಡುವುದಾಗಿ ಹೇಳಿದ್ದರು’ ಎಂದು ರಶೀದ್ ಹೇಳಿದ್ದಾರೆ. ಈ ಹಣ ಅಕ್ರಮ ಮಾರ್ಗಗಳ ಮೂಲಕ ಬರುತ್ತಿರುವುದರಿಂದ ಮತ್ತು ಅದನ್ನು ಕಾನೂನುಬಾಹಿರ ಚಟುವಟಿಕೆಗಳನ್ನು ಬಳಸಲಾಗುತ್ತಿರುವುದರಿಂದ ಅದನ್ನು ತೆಗೆದುಕೊಳ್ಳಬೇಡ ಎಂಬುದಾಗಿ ಅಬ್ದುಲ್ ರಶೀದ್ ತಮ್ಮ ಪುತ್ರಿ ಶೆಹ್ಲಾಗೆ ಹೇಳಿದರು. "ಆದರೆ ಶೆಹ್ಲಾ ಈ ಒಪ್ಪಂದದ ಭಾಗವಾಗಿದ್ದುದನ್ನು ನಾನು ನಂತರ ಕಂಡುಕೊಂಡೆ’ ಎಂದು ರಶೀದ್ ಹೇಳಿದರು. ತಮ್ಮ ಪುತ್ರಿ ಈ ಹಣವನ್ನು ಸ್ವೀಕರಿಸಿರುವುದಾಗಿ ಬಳಿಕ ತನಗೆ ತಿಳಿಸಿದಳು ಮತ್ತು ಈ ವಹಿವಾಟಿನ ಬಗ್ಗೆ ಯಾರಿಗೂ ಬಹಿರಂಗ ಪಡಿಸಬೇಡಿ. ಇಲ್ಲದಿದ್ದಲ್ಲಿ ನಿಮ್ಮ ಜೀವಕ್ಕೆ ಅಪಾಯವಾಗುತ್ತದೆ ಎಂದು ಪುತ್ರಿ ನನಗೆ ತಿಳಿಸಿದಳು ಎಂದು ರಶೀದ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್-೧೯ ವಿರುದ್ಧ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಯಾವುದೇ ಒತ್ತಡ ಹಾಕಲಾಗುವುದಿಲ್ಲ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು 2020 ಡಿಸೆಂಬರ್ 01ರ ಮಂಗಳವಾರ ವರದಿ ಮಾಡಿದೆ. ‘ಇದು ಪ್ರಜಾಪ್ರಭುತ್ವ. ನೀವು ಆದ್ಯತೆಯ ಗುಂಪಿನಲ್ಲಿದ್ದರೂ ಮತ್ತು ದುರ್ಬಲ ವ್ಯಕ್ತಿಯೆಂದು ಗುರುತಿಸಲ್ಪಟ್ಟಿದ್ದರು ಕೂಡಾ, ಲಸಿಕೆ ತೆಗೆದುಕೊಳ್ಳಲು ನಿಮ್ಮನ್ನು ಒತ್ತಾಯಿಸಲಾಗುವುದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಉನ್ನತ ಮೂಲವೊಂದು ತಿಳಿಸಿದೆ ಎಂದು ವರದಿ ಹೇಳಿದೆ. ಕೊರೋನಾವೈರಸ್ ವಿರುದ್ಧ ದೇಶದ ಎಲ್ಲ ಜನರಿಗೂ ಚುಚ್ಚುಮದ್ದು ಹಾಕುವುದಿಲ್ಲ.ಅಂದರೆ, ಆದ್ಯತೆಯ ಗುಂಪುಗಳಿಗೆ ಸರ್ಕಾರದ ಬೆಂಬಲದೊಂದಿಗೆ ಚುಚ್ಚುಮದ್ದು ನೀಡಲಾಗುವುದು, ಆದರೆ ಆರೋಗ್ಯವಂತ ವಯಸ್ಕರು ಯಾವುದೇ ಅನಾರೋಗ್ಯ ಇಲ್ಲದೇ ಇದ್ದಲ್ಲಿ ಲಸಿಕೆಯನ್ನು ಇತರ ವೈದ್ಯಕೀಯ ಉತ್ಪನ್ನಗಳಂತೆ ಖರೀದಿಸಬೇಕಾಗುತ್ತದೆ ಎಂದು ಸುದ್ದಿ ಮೂಲ ಹೇಳಿದೆ. ‘ಇಡೀ ದೇಶಕ್ಕೆ ಲಸಿಕೆ ಹಾಕುವ ಬಗ್ಗೆ ಸರ್ಕಾರ ಎಂದಿಗೂ ಮಾತನಾಡಿಲ್ಲ. ಈ ವಿಷಯಗಳ ಬಗ್ಗೆ ವಾಸ್ತವಿಕ ಮಾಹಿತಿ ಪಡೆಯುವುದು ಬಹಳ ಮುಖ್ಯ’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಸಂಪೂರ್ಣ ಪ್ರಸರಣದ ಸರಪಳಿಯನ್ನು ಮುರಿಯುವುದು ಇದರ ಉದ್ದೇಶ. ನಾವು ಕೆಲವರಿಗೆ ಲಸಿಕೆ ಹಾಕಲು ಮತ್ತು ಅದನ್ನು ಮಾಡಲು ಸಾಧ್ಯವಾದರೆ ನಾವು ಮಾಡುತ್ತೇವೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಪ್ರೊಫೆಸರ್ ಬಲರಾಮ್ ಭಾರ್ಗವ ಹೇಳಿದರು. ‘ಲಸಿಕೆಗಳ ನಂತರವೂ ಮುಖಗವಸು (ಫೇಸ್ ಮಾಸ್ಕ್) ಬಳಸುವುದನ್ನು ಮುಂದುವರಿಸಬೇಕು. ನಾವು ನಿರ್ಣಾಯಕ ಕನಿಷ್ಠ ಪ್ರಕರಣಗಳ ಸಂಖ್ಯೆಯನ್ನು ತಲುಪಿದರೆ, ಎಲ್ಲರಿಗೂ ಲಸಿಕೆ ಹಾಕುವ ಅಗತ್ಯವಿಲ್ಲ’ ಎಂದು ಭಾರ್ಗವ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ನೂತನ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಪ್ರತಿಭಟನಾ ನಿರತ ರೈತ ಸಂಘದ ಮುಖಂಡರು ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ನಡುವೆ ವಿಜ್ಞಾನಭವನದಲ್ಲಿ 2020 ಡಿಸೆಂಬರ್ 01ರ ಮಂಗಳವಾರ ನಡೆದ ಮಾತುಕತೆ ’ಫಲಪ್ರದವಾಗಿದ್ದು’ ಮುಂದಿನ ಸುತ್ತಿನ ಮಾತುಕತೆ ಡಿಸೆಂಬರ್ ೩ರ ಗುರುವಾರ ನಡೆಯಲಿದೆ. ಮುಂದಿನ ಸುತ್ತಿನ ಮಾತುಕತೆಗೆ ಕೇಂದ್ರವು ರೈತ ಗುಂಪುಗಳ ಪ್ರತಿನಿಧಿಗಳನ್ನು ಮಂಗಳವಾರ ಆಹ್ವಾನಿಸಿದೆ. ‘ಫಲಪ್ರದ’ ಎಂಬ ವ್ಯಾಖ್ಯಾನದೊಂದಿಗೆ ಈದಿನ ನಡೆದ ಮಾತುಕತೆ ರಾತ್ರಿ ಮುಕ್ತಾಯಗೊಂಡಿದ್ದು, ಹೊಸ ಕೃಷಿ ಕಾನೂನುಗಳ ವಿವಾದಾತ್ಮಕ ನಿಬಂಧನೆಗಳ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪವನ್ನು ಸರ್ಕಾರವು ಪ್ರತಿಭಟನಾ ನಿರತ ರೈತರ ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ಆದರೆ ರೈತ ಸಂಘಟನೆಗಳು ಸಮಿತಿ ಪ್ರಸ್ತಾವವನ್ನು ತಿರಸ್ಕರಿಸಿರುವುದಾಗಿ ರಾತ್ರಿ ಹೇಳಿವೆ. ಪ್ರಸ್ತಾವಿತ ಸಮಿತಿಗೆ ರೈತರ ಕಡೆಯಿಂದ ಸದಸ್ಯರಾಗಿ ನಾಮ ನಿರ್ದೇಶನ ಮಾಡುವಂತೆ ಕೇಂದ್ರ ಸಚಿವರಾದ ತೋಮರ್ ಮತ್ತು ಪಿಯೂಷ್ ಗೋಯಲ್ ಅವರು ರೈತ ಸಂಘದ ಮುಖಂಡರನ್ನು ಕೇಳಿಕೊಂಡಿದ್ದಾರೆ. ಅದಕ್ಕೆ ರೈತ ಮುಖಂಡರು ಎಲ್ಲರ ಜೊತೆ ಮಾತನಾಡುವುದಾಗಿ ತಿಳಿಸಿದ್ದರು. ಸಮಿತಿಯಲ್ಲಿ ಕೃಷಿ ತಜ್ಞರು ಮತ್ತು ಸರ್ಕಾರಿ ಪ್ರತಿನಿಧಿಗಳು ಸಹ ಇರಲಿದ್ದಾರೆ ಎಂದು ಮೂಲಗಳು ಹೇಳಿವೆ. ಸರ್ಕಾರ ಮತ್ತು ರೈತ ಧುರೀಣರ ಮುಂದಿನ ಸಭೆ ಡಿಸೆಂಬರ್ ೩ರ ಗುರುವಾರ ನಡೆಯಲಿದೆ. ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ನವೆಂಬರ್ ೨೬ ರಿಂದ ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ಕೃಷಿ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಹಾಳುಮಾಡಲಿದ್ದು ಮತ್ತು ಕಾರ್ಪೊರೇಟ್ ಕೃಷಿಗೆ ಅವಕಾಶ ಕಲ್ಪಿಸಲಿದೆ ಎಂಬ ಭಯ ರೈತರಲ್ಲಿ ಮೂಡಿದ್ದು, ಈ ಹಿನ್ನೆಲೆಯಲ್ಲಿ ರೈತ ಚಳವಳಿ ಭುಗಿಲೆದ್ದಿದೆ. ಈ ಮಧ್ಯೆ, ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ೨೦೨೦, ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ೨೦೨೦, ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, ೨೦೨೦ - ಈ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರ ಪ್ರಸ್ತುತ ನಿರ್ಧರಿಸಿಲ್ಲ ಎಂದು ವರದಿಗಳು ಹೇಳಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment