ಇಂದಿನ ಇತಿಹಾಸ History Today ಡಿಸೆಂಬರ್ 21
2020: ನವದೆಹಲಿ: ಇಂಗ್ಲೆಂಡಿನಲ್ಲಿ ರೂಪಾಂತರಗೊಂಡ ಹೊಸ ಸೂಪರ್ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ೨೨ ರಿಂದ ಭಾರತಕ್ಕೆ ಬರುವ ಇಂಗ್ಲೆಂಡಿನ ಎಲ್ಲ ವಿಮಾನಗಳನ್ನು 2020 ಡಿಸೆಂಬರ್ 21ರ ಸೋಮವಾರ ಭಾರತ ನಿಷೇಧಿಸಿತು. ಡಿಸೆಂಬರ್ ೨೨ರಂದು ರಾತ್ರಿ ೨೩.೫೯ ಗಂಟೆಯಿಂದ ಭಾರತಕ್ಕೆ ಇಂಗ್ಲೆಂಡಿನಿಂದ ಬರುವ ಎಲ್ಲ ವಿಮಾನಯಾನಗಳನ್ನು ನಿಷೇಧಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ. ಹಾಂಗ್ ಕಾಂಗ್ ಇದೇ ರೀತಿಯ ಘೋಷಣೆ ಮಾಡಿದ ಕೆಲವೇ ಗಂಟೆಗಳ ನಂತg ಭಾರತ ಇಂಗ್ಲೆಂಡಿನಿಂದ ವಿಮಾನಗಳ ಹಾರಾಟವನ್ನು ನಿಷೇಧಿಸಿತು. ಇತರ ಹಲವು ದೇಶಗಳೂ ಇದೇ ರೀತಿ ಇಂಗ್ಲೆಂಡಿನ ವಿಮಾನಗಳನ್ನು ನಿಷೇಧಿಸಿವೆ. ರೂಪಾಂತರಗೊಂಡ ಹೊಸ ಸೂಪರ್-ವೈರಸ್ ಒತ್ತಡದ ಹಿನ್ನೆಲೆಯಲ್ಲಿ ಹಾಂಕಾಂಗ್ ಮೊತ್ತ ಮೊದಲಿಗೆ ಇಂಗ್ಲೆಂಡ್ ವಿಮಾನಗಳನ್ನು ನಿಷೇಧಿಸಿತು. ಇದರಿಂದಾಗಿ ಇಂತಹ ನಿಷೇಧ ಘೋಷಿಸಿದ ಏಷ್ಯಾದ ಮೊದಲ ನಗರ ಎಂಬ ಹೆಗ್ಗಳಿಕೆ ಹಾಂಕಾಂಗಿಗೆ ಪ್ರಾಪ್ತವಾಗಿದೆ. ಸೂಪರ್ ಕೊರೋನಾವೈರಸ್ಸನ್ನು ಬ್ರಿಟನ್ನಿನಲ್ಲಿ ಗುರುತಿಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)
2020: ಕೋಲ್ಕತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾರಾಂತ್ಯದಲ್ಲಿ ರಾಜ್ಯಕ್ಕೆ ನೀಡಿದ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ತೃಣಮೂಲ ನಾಯಕರನ್ನು ಸೆಳೆದುಕೊಂಡ ನಂತರ ’ಬಂಗಾಳ ಚುನಾವಣೆಯಲ್ಲಿ ಎರಡಂಕಿ ದಾಟಿ’ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ 2020 ಡಿಸೆಂಬರ್ 21ರ ಸೋಮವಾರ ಬಿಜೆಪಿಗೆ ಸವಾಲು ಹಾಕಿದರು. ಕಳೆದ ವರ್ಷ ಬಂಗಾಳ ಅಭಿಯಾನಕ್ಕಾಗಿ ಮಮತಾ ಬ್ಯಾನರ್ಜಿ ಅವರಿಂದ ಸೆಳೆಯಲ್ಪಟ್ಟ ಪ್ರಶಾಂತ ಕಿಶೋರ್ ಅವರು ’ಬಿಜೆಪಿಯು ಎರಡು ಅಂಕಿಗಳನ್ನು ದಾಟಲು ಹೆಣಗಾಡಲಿದೆ’ ಎಂದು ಹೇಳಿದರು. ಬಿಜೆಪಿಯು ತಮ್ಮ ಊಹೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಈ ‘ಜಾಗವನ್ನು (ಸ್ಪೇಸ್)’ ತೊರೆಯುವೆ ಎಂದು ಅವರು ಹೇಳಿದರು. ’ದಯವಿಟ್ಟು ಈ ಟ್ವೀಟನ್ನು ಸಂರಕ್ಷಿಸಿ ಇಟ್ಟುಕೊಳ್ಳಿ. ಬಿಜೆಪಿ ಏನಾದರೂ ಉತ್ತಮ ಸಾಧನೆ ತೋರಿದರೆ, ನಾನು ಈ ಜಾಗ (ಸ್ಪೇಸ್) ಬಿಡಬೇಕಾಗುತ್ತದೆ’ ಎಂದು ಪ್ರಶಾಂತ್ ಟ್ವೀಟ್ ಮಾಡಿದರು. ಪ್ರಶಾಂತ ಕಿಶೋರ್ ಅವರು ಬಳಸಿದ ’ಸ್ಪೇಸ್’ ಪದದ ಅರ್ಥವೇನು ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗಳು ನಡೆದವು. ಕಿಶೋರ್ ಅವರು ’ಸ್ಪೇಸ್’ ಪದದ ಅರ್ಥವನ್ನು ಸ್ಪಷ್ಟಪಡಿಸದ ಕಾರಣ ಇದು ಅಸ್ಪಷ್ಟವಾಗಿದೆ ಎಂದು ಬಿಜೆಪಿ ನಾಯಕರು ಪ್ರಶಾಂತ ಕಿಶೋರ್ ಟ್ವೀಟನ್ನು ಲೇವಡಿ ಮಾಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)
2020: ನವದೆಹಲಿ: ಪಧಾನಿ ನರೇಂದ್ರ ಮೋದಿ ಅವರು ’ಪಿಎಂ-ಕಿಸಾನ್ ಸಮ್ಮಾನ್’ ನೇರ ನಗದು ವರ್ಗಾವಣೆ ಯೋಜನೆಯಡಿ ರೈತರಿಗೆ ಮುಂದಿನ ಕಂತನ್ನು ಬಿಡುಗಡೆ ಮಾಡಲಿದ್ದು ಅದಕ್ಕೆ ಸಂಬಂಧಿಸಿದಂತೆ ಕ್ರಿಸ್ ಮಸ್ ದಿನದಂದು ರೈತರ ಜೊತೆ ಚಾಟ್ ಮಾಡಲಿದ್ದಾರೆ. ಈ ಬಾರಿಯ ಕಂತಿನಲ್ಲಿ ಪ್ರಧಾನಿಯವರು ೮ ಕೋಟಿ ರೈತರಿಗೆ ೧೮,೦೦೦ ಕೋಟಿ ರೂಪಾಯಿಗಳನ್ನು ಪಾವತಿ ಮಾಡಲಿದ್ದಾರೆ ಎಂದು ಕೃಷಿ ಸಚಿವಾಲಯ 2020 ಡಿಸೆಂಬರ್ 21ರ ಸೋಮವಾರ ತಿಳಿಸಿತು. ಮೋದಿಯವರು ೨೦೧೯ ರಲ್ಲಿ ಮೊದಲ ಕಂತನ್ನು ಬಿಡುಗಡೆ ಮಾಡಿದ್ದರು ಮತ್ತು ತಮ್ಮ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ ಎಂದು ಬಹುತೇಕ ಪಂಜಾಬಿನ ಸಾವಿರಾರು ರೈತರು ೩ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ಸಮಯದಲ್ಲಿ ಇನ್ನೊಂದು ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಕೃಷಿ ಸುಧಾರಣೆಗಳು ರೈತರಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶವನ್ನು ನೀಡುತ್ತವೆ ಮತ್ತು ಕೃಷಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ. ‘ಇದು ಮುಕ್ತ ಸಂಭಾಷಣೆಯಾಗಿದೆ. ಪ್ರಧಾನಮಂತ್ರಿ ಹೊಸ ಕೃಷಿ ಕಾನೂನುಗಳ ಬಗ್ಗೆ ಮತ್ತು ಅವು ರೈತರಿಗೆ ಹೇಗೆ ಪ್ರಯೋಜನವನ್ನು ನೀಡುತ್ತವೆ ಎಂಬ ಮಾತನಾಡುವ ಸಾಧ್ಯತೆ ಇದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು. ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ, ಸರ್ಕಾರವು ಮಾನ್ಯ ದಾಖಲಾತಿಯೊಂದಿಗೆ ರೈತರಿಗೆ ವರ್ಷಕ್ಕೆ ೬,೦೦೦ ರೂ.ಗಳ ಆದಾಯ ಬೆಂಬಲವನ್ನು ಒದಗಿಸುತ್ತದೆ, ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ನಗದು ವರ್ಗಾವಣೆಯಲ್ಲಿ ೨,೦೦೦ ರೂ. ಮೊದಲ ಕಂತು ಪಾವತಿಸುವ ಮೂಲಕ ೨೦೧೯ರ ಫೆಬ್ರುವರಿಯಲ್ಲಿ ಇದನ್ನು ಪ್ರಾರಂಭಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪರಿಚಯಿಸಿದ ಹೊಸ ಕೃಷಿ ಸುಧಾರಣೆಗಳ ವಿರುದ್ಧ ರಾಷ್ಟ್ರ ರಾಜಧಾನಿಯ ಸುತ್ತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ಸುದ್ದಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಹೆಚ್ಚಿನ ಭಾರತೀಯರು ಹೊಸ ಕೃಷಿ ಕಾಯ್ದೆಗಳ ಅನುಷ್ಠಾನವನ್ನು ಬೆಂಬಲಿಸಿದ್ದಾರೆ ಮತ್ತು ರೈತರು ಆಂದೋಲನವನ್ನು ಹಿಂತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ೨೨ ರಾಜ್ಯಗಳಲ್ಲಿ ೨,೪೦೦ ಕ್ಕೂ ಹೆಚ್ಚು ಜನರನ್ನು ಸಮೀಕ್ಷೆಗಾಗಿ ಸಂಪರ್ಕಿಸಲಾಗಿದ್ದು, ಬಹುತೇಕ ಮಂದಿ ಹೊಸ ಕೃಷಿ ಸುಧಾರಣಾ ಕಾನೂನುಗಳು ಬೆಳೆಗಾರರಿಗೆ ಪ್ರಯೋಜನವನ್ನು ನೀಡುತ್ತವೆ ಎಂದು ಹೇಳಿದರು. ಹೆಚ್ಚಿನ ಕೃಷಿ ರಾಜ್ಯಗಳಲ್ಲಿ, ವಿಶೇಷವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹೊಸ ಶಾಸನಗಳಿಗೆ ಬೆಂಬಲವು ಪ್ರಬಲವಾಗಿದೆ ಎಂದು ಅಂಕಿ ಸಂಖ್ಯೆಗಳು ತೋರಿಸಿವೆ. ಇದಕ್ಕೆ ಹೊರತಾಗಿರುವುದು ಪಂಜಾಬ್, ಅಲ್ಲಿ ಕೃಷಿ ಕ್ಷೇತ್ರದ ಉದಾರೀಕರಣದ ವಿಷಯವು ಹೆಚ್ಚು ರಾಜಕೀಯೀಕರಣಗೊಂಡಿರುವುದರಿಂದ ಬೆಂಬಲವನ್ನು ಸ್ವಲ್ಪ ಕಡಿಮೆಯಾಗಿದೆ. ದೇಶಾದ್ಯಂತ ಹೊಸ ಕಾನೂನುಗಳಿಗೆ ಒಟ್ಟಾರೆ ಬೆಂಬಲವು ಶೇಕಡಾ ೫೩.೬ ರಷ್ಟಿದೆ ಎಂದು ಸಮೀಕ್ಷೆಯು ಹೇಳಿದೆ. ಶೇಕಡಾ ೫೬.೫೯ ರಷ್ಟು ಜನರು ರೈತರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ಇದು ಸಕಾಲ ಎಂಬ ನಂಬಿಕೆ ವ್ಯಕ್ತ ಪಡಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)
2020: ನವದೆಹಲಿ: ಭಾರತದಲ್ಲಿ ಚಿರತೆಗಳ ಸಂಖ್ಯೆಯು ಶೇಕಡಾ ೬೦ ರಷ್ಟು ಹೆಚ್ಚಾಗಿದೆ ಎಂದು ಸರ್ಕಾರ 2020 ಡಿಸೆಂಬರ್ 21ರ ಸೋಮವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಭಾರತದಲ್ಲಿ ಈಗ ೧೨,೮೫೨ ಚಿರತೆಗಳಿವೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಬಿಡುಗಡೆ ಮಾಡಿದ ‘ಭಾರತದಲ್ಲಿ ಚಿರತೆಗಳ ಸ್ಥಿತಿಗತಿ-೨೦೧೮’ ವರದಿಯಲ್ಲಿ ತಿಳಿಸಲಾಗಿದೆ. "೨೦೧೪ರಲ್ಲಿ ನಡೆಸಿದ ಹಿಂದಿನ ಅಂದಾಜಿಗಿಂತ ಸಂಖ್ಯೆಯಲ್ಲಿ ಶೇಕಡಾ ೬೦ಕ್ಕಿಂvಲೂ ಹೆಚ್ಚು ಹೆಚ್ಚಿದೆ’ ಎಂದು ವರದಿಯನ್ನು ಬಿಡುಗಡೆ ಮಾಡಿದ ನಂತರ ಜಾವಡೇಕರ್ ಹೇಳಿದರು. ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ‘ಅತಿ ಹೆಚ್ಚು ಚಿರತೆ ಅಂದಾಜುಗಳನ್ನು ದಾಖಲಿಸಿದ ಮಧ್ಯಪ್ರದೇಶ (೩,೪೨೧), ಕರ್ನಾಟಕ (೧೭೮೩) ಮತ್ತು ಮಹಾರಾಷ್ಟ್ರ (೧೬೯೦) ರಾಜ್ಯಗಳಿಗೆ ಅಭಿನಂದನೆಗಳು. ಕಳೆದ ಕೆಲವು ವರ್ಷಗಳಿಂದ ಹುಲಿ, ಸಿಂಹ ಮತ್ತು ಚಿರತೆಗಳ ಸಂಖ್ಯೆಯಲ್ಲಿನ ಹೆಚ್ಚಳವು ವನ್ಯಜೀವಿ ಮತ್ತು ಜೀವವೈವಿಧ್ಯತೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ’ ಎಂದು ಜಾವಡೇಕರ್ ಟ್ವಿಟರಿನಲ್ಲಿ ತಿಳಿಸಿದ್ದಾರೆ. ಚಿರತೆಗಳು ಹೆಚ್ಚು ಹೊಂದಿಕೊಳ್ಳಬಲ್ಲ ಮಾಂಸಾಹಾರಿಗಳಲ್ಲಿ ಸೇರಿವೆ, ಮತ್ತು ಅವು ಮಾನವನ ವಾಸಸ್ಥಾನಗಳಿಗೆ ಬಹಳ ಹತ್ತಿರದಲ್ಲಿವೆ ಎಂದು ತಿಳಿದುಬಂದಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)
2020: ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಹಿರಿಯ ಕಾಂಗ್ರೆಸ್ ನಾಯಕ ಮೋತಿಲಾಲ್ ವೊರಾ ಅವರು ತಮ್ಮ ೯೩ ನೇ ಹುಟ್ಟುಹಬ್ಬವನ್ನು ಆಚರಿಸಿದ ಒಂದು ದಿನದ ಬಳಿಕ ದೆಹಲಿಯಲ್ಲಿ 2020 ಡಿಸೆಂಬರ್ 21ರ ಸೋಮವಾರ ನಿಧನರಾದರು. ಅಕ್ಟೋಬರಿನಲ್ಲಿ ಕೋವಿಡ್ -೧೯ ರಿಂದ ಚೇತರಿಸಿಕೊಂಡಿದ್ದ ವೋರಾ ಅವರನ್ನು ಡಿಸೆಂಬರ್ ೧೯ ರಂದು ಉಸಿರಾಟದ ತೊಂದರೆಗಾಗಿ ದೆಹಲಿಯ ಎಸ್ಕೋರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ವೋರಾ ನವಭಾರತ್ ಟೈಮ್ಸ್ ಪತ್ರಿಕೆಯಲ್ಲಿ ಮುಂಬೈಯಲ್ಲಿ (ಆಗಿನ ಬಾಂಬೆ) ವರದಿಗಾರರಾಗಿ ಕೆಲಸ ಮಾಡಿದ್ದರು. ಬಳಿಕ ನಾಗಪುರ ಮತ್ತು ರಾಯಪುರದಲ್ಲಿ ನವಭಾರತ್ ಮತ್ತು ನಂತರ ನಾಗಪುರದಲ್ಲಿ ನಾಗಪುರ ಟೈಮ್ಸ್ ನಲ್ಲಿ ಸೇವೆ ಸಲ್ಲಿಸಿದ್ದರು. ಸುಮಾರು ಎರಡು ದಶಕಗಳಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಖಜಾಂಚಿಯ ಪ್ರಮುಖ ಸಾಂಸ್ಥಿಕ ಹುದ್ದೆಯಲ್ಲಿದ್ದ ವೋರಾ ಅವರನ್ನು ೨೦೧೮ ರಲ್ಲಿ ಆಡಳಿತದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಮತ್ತೊಬ್ಬ ಹಿರಿಯ ನಾಯಕ ಅಹ್ಮದ್ ಪಟೇಲ್ ಎಐಸಿಸಿ ಖಜಾಂಚಿಯಾಗಿ ಅಧಿಕಾರ ವಹಿಸಿಕೊಂಡು ಈ ವರ್ಷದ ನವೆಂಬರ್ ೨೫ ರಂದು ನಿಧನರಾಗುವವರೆಗೂ ಈ ಹುದ್ದೆಯನ್ನು ಅಲಂಕರಿಸಿದ್ದರು. ಗುರುಗ್ರಾಮ ಆಸ್ಪತ್ರೆಯಲ್ಲಿ ಕೋವಿಡ್ ನಂತರದ ಸಮಸ್ಯೆಗಳಿಂದ ಅವರು ನಿಧನರಾಗಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)
2020: ಕೋಲ್ಕತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಸ್ಥಾನವನ್ನು ಇತ್ತೀಚೆಗೆ ತ್ಯಜಿಸಿದ ಸುವೇಂದು ಅಧಿಕಾರಿ ಶಾಸಕ ಸ್ಥಾನಕ್ಕೆ ತಾವು ನೀಡಿದ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ಬಿಮನ್ ಬ್ಯಾನರ್ಜಿ ಅವರು ಅಂಗೀಕರಿಸಿದ್ದಾರೆ ಎಂದು 2020 ಡಿಸೆಂಬರ್ 21ರ ಸೋಮವಾರ ಹೇಳಿದರು. ತಮ್ಮ ಮುಂದೆ ಸೋಮವಾರ ಹಾಜರಾಗುವಂತೆ ಅಧಿಕಾರಿ ಅವರಿಗೆ ವಿಧಾನಸಭಾಧ್ಯಕ್ಷರು ಸೂಚಿಸಿದ್ದರು. ‘ಸದನದ ಶಾಸಕ ಸ್ಥಾನಕ್ಕೆ ನೀಡಿದ ನನ್ನ ರಾಜೀನಾಮೆಗೆ ಸಂಬಂಧಿಸಿದಂತೆ ವಿಧಾನಸಭೆ ಸಭಾಧ್ಯಕ್ಷರು ನನ್ನನ್ನು ಕರೆದಿದ್ದರು. ಇಂದು, ನಾನು ಅವರನ್ನು ಭೇಟಿ ಮಾಡಿದೆ.... ನನ್ನ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ನನಗೆ ತಿಳಿಸಲಾಯಿತು’ ಎಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಹೊಸದಾಗಿ ಸೇರ್ಪಡೆಯಾದ ಅಧಿಕಾರಿ ಹೇಳಿದರು. "ಸುವೇಂದು ಅಧಿಕಾರಿ ಅವರು ಈದಿನ ನನ್ನ ಮುಂದೆ ಹಾಜರಾಗಿದ್ದರು ಮತ್ತು ಬೇರೆಯವರ ಪ್ರಭಾವಕ್ಕೆ ಒಳಗಾಗದೆ ರಾಜೀನಾಮೆ ನೀಡಿರುವುದಾಗಿ ಖಚಿತ ಪಡಿಸಿದರು. ಅವರ ರಾಜೀನಾಮೆ ಸ್ವಯಂಪ್ರೇರಿತ ಮತ್ತು ನಿಜವಾದದ್ದು ಎಂದು ನನಗೆ ಮನವರಿಕೆಯಾಗಿದೆ. ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದೇನೆ’ ಎಂದು ಸಭಾಧ್ಯಕ್ಷರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)
No comments:
Post a Comment