ನಾನು ಮೆಚ್ಚಿದ ವಾಟ್ಸಪ್

Monday, May 27, 2019

ಇಂದಿನ ಇತಿಹಾಸ History Today ಮೇ 27

ಇಂದಿನ ಇತಿಹಾಸ History Today ಮೇ 27
2019: ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಇಂಗಿತ ವ್ಯಕ್ತ ಪಡಿಸಿದ ಎರಡು ದಿನಗಳ ಬಳಿಕ, ತಮ್ಮ ನಿರ್ಧಾರ ದೃಢವಾದದ್ದು ಎಂಬುದಾಗಿ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ ಎಂದು ವರದಿಗಳು ಹೇಳಿದವು. ರಾಹುಲ್ ಗಾಂಧಿಯವರು ಈದಿನ  ತಮ್ಮ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಪಡಿಸಿದ್ದು, ಪಕ್ಷದ ನೂತನ ಸಂಸದರ ಜೊತೆಗೆ ಭೇಟಿಯನ್ನು ಕೂಡಾ ಮಾಡಲಿಲ್ಲ ಎಂದು ವರದಿಗಳು ಹೇಳಿದವು. ಪಕ್ಷದ ಹಿರಿಯ ನಾಯಕ ಹಾಗೂ ಸೋನಿಯಾ ಗಾಂಧಿಯವರ ಮಾಜಿ ರಾಜಕೀಯ ಸಲಹೆಗಾರ ಅಹ್ಮದ್ ಪಟೇಲ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮನವೊಲಿಸಲು ಯತ್ನಿಸಿದರು. ಆದರೆ ತಮ್ಮ ನಿರ್ಧಾರ ದೃಢವಾದದ್ದು ಎಂಬುದಗಿ ಅವರಿಗೆ ಸ್ಪಷ್ಟ ಪಡಿಸಿದ ರಾಹುಲ್ ಗಾಂಧಿ ಪಕ್ಷವು ಬದಲಿ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲೇಬೇಕು ಎಂದು ಹೇಳಿದರು ಎಂದು ವರದಿಗಳು ಹೇಳಿದವು. ಏನಿದ್ದರೂ, ಬದಲಿ ವ್ಯಕ್ತಿಯ ಆಯ್ಕೆಗೆ ಸ್ವಲ್ಪ ಕಾಲಾವಕಾಶವನ್ನು ನೀಡಲು ಸಿದ್ಧ ಎಂದು ರಾಹುಲ್ ಗಾಂಧಿ ಹೇಳಿದರು ಎನ್ನಲಾಯಿತು. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ರಾಹುಲ್ ಗಾಂಧಿಯವರ ಮನವೊಲಿಸಲು ಯತ್ನಿಸಿದ್ದು, ಫಲ ಕೊಟ್ಟಿಲ್ಲ ಎನ್ನಲಾಯಿತು.  ಕಡೆಗೆ ಅವರ ನಿರ್ಧಾರಕ್ಕೆ ಸೋನಿಯಾ ಮತ್ತು ಪ್ರಿಯಾಂಕಾ ಕೂಡಾ ಒಪ್ಪಿದರು ಎಂದು ವರದಿಗಳು ಹೇಳಿದವು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರಾಹುಲ್ ಗಾಂಧಿಯವರ ಪದತ್ಯಾಗ ಕೊಡುಗೆಯನ್ನು ನಿರಾಕರಿಸಿ, ಪಕ್ಷದ ಪುನಾರಚನೆಗೆ ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡುವ ನಿರ್ಣಯ ಕೈಗೊಂಡಿತ್ತು.

2019: ಕೋಲ್ಕತ: ಕೋಲ್ಕತದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಕೋಲ್ಕತ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರು ಶಾರದಾ ಚಿಟ್ ಫಂಡ್ ಪ್ರಕರಣದ ತನಿಖೆಗಾಗಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಂದೆ ಹಾಜರಾಗಲಿಲ್ಲ, ಬದಲಿಗೆ ಸಂಸ್ಥೆಯ ಮುಂದೆ ಹಾಜರಾಗಲು ಏಳು ದಿನಗಳ ಹೆಚ್ಚುವರಿ ಕಾಲಾವಕಾಶ ಕೋರಿ ಸಿಬಿಐಗೆ ಪತ್ರವೊಂದನ್ನು ಕಳುಹಿಸಿದರು. ಹಿಂದಿನ ದಿನ  ಸಂಜೆ ಸಿಬಿಐ ಅಧಿಕಾರಿಗಳ ತಂಡವೊಂದು ರಾಜೀವ ಕುಮಾರ್ ಅವರ ದಕ್ಷಿಣ ಕೋಲ್ಕತದಲ್ಲಿನ ನಿವಾಸಕ್ಕೆ ಆಗಮಿಸಿ ಅವರ ಗೈರು ಹಾಜರಿಯಲ್ಲಿ ಸೋಮವಾರ ಬೆಳಗ್ಗೆ ೧೦ ಗಂಟೆಗೆ ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ತನಿಖೆಗಾಗಿ ತನ್ನ ಕಚೇರಿಯಲ್ಲಿ ಹಾಜರಾಗುವಂತೆ ಸಿಬಿಐ ಸಮನ್ಸ್ ಜಾರಿ ಮಾಡಿದ್ದರು. ಈದಿನ  ಪ್ರಸ್ತುತ ರಾಜೀವ ಕುಮಾರ್ ಅವರು ಮುಖ್ಯಸ್ಥರಾಗಿರುವ ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆಯ ಅಧಿಕಾರಿಗಳ ಗುಂಪೊಂದು ಸಾಲ್ಟ್ ಲೇಕ್ನಲ್ಲಿನ ಕೇಂದ್ರೀಯ ಸರ್ಕಾರಿ ಅಧಿಕಾರಿಗಳ (ಸಿಜಿಒ) ಸಮುಚ್ಚಯಕ್ಕೆ ಆಗಮಿಸಿ ರಾಜೀವ ಕುಮಾರ್ ಅವರ ಪತ್ರವನ್ನು ಸಲ್ಲಿಸಿತು. ಪತ್ರದಲ್ಲಿ ಕುಮಾರ್ ಅವರಿ ತಾವು ವೈಯಕ್ತಿಕ ಕಾರಣದಿಂದ ರಜಾದಲ್ಲಿದ್ದು ಸಂಸ್ಥೆಯ ಮುಂದೆ ಹಾಜರಾಗಲು ದಿನಗಳ ಹೆಚ್ಚುವರಿ ಕಾಲಾವಕಾಶ ಕೋರಿದ್ದಾರೆ ಎನ್ನಲಾಯಿತು. ಬಹುಕೋಟಿ ಶಾರದಾ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೈನಂದಿನ ಆಧಾರದಲ್ಲಿ ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ರಾಜೀವ ಕುಮಾರ್ ಅವರನ್ನು ಪ್ರಶ್ನಿಸಲು ಸಿಬಿಐ ಕಾತರದಿಂದಿತ್ತು. ೨೦೧೯ರ ಫೆಬ್ರುವರಿ ತಿಂಗಳಲ್ಲಿ ಪ್ರಶ್ನಿಸುವ ಸಲುವಾಗಿ ಕೋಲ್ಕತಕ್ಕೆ ಬಂದಿದ್ದ ಸಿಬಿಐ ಅಧಿಕಾರಿಗಳ ತಂಡವನ್ನು ರಾಜೀವ ಕುಮಾರ್ ಅವರ ನಿವಾಸ ಪ್ರವೇಶಿಸದಂತೆ ತಡೆದ ಪರಿಣಾಮವಾಗಿ ಕುಮಾರ್ ಅವರನ್ನು ಪ್ರಶ್ನಿಸುವ ಸಿಬಿಐ ಪ್ರಯತ್ನಗಳಿಗೆ ಅಡ್ಡಿಯಾಗಿತ್ತು. ಬಳಿಕ ಪ್ರಕರಣ ಸುಪ್ರೀಂಕೋರ್ಟಿನ ಅಂಗಳಕ್ಕೆ ತಲುಪಿತ್ತು. ಸುಪ್ರೀಂಕೋರ್ಟಿನ ಆದೇಶದಂತೆ ಕುಮಾರ್ ಅವರನ್ನು ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ ಪ್ರಶ್ನಿಸಲಾಗಿತ್ತುಮೇ ೧೭ರಂದು ಸುಪ್ರೀಂಕೋರ್ಟ್ ಕುಮಾರ್ ಅವರಿಗೆ ಬಂಧನದಿಂದ ರಕ್ಷಣೆ ಒದಗಿಸಿ ತಾನು ನೀಡಿದ್ದ ಆದೇಶವನ್ನು ಹಿಂತೆಗೆದುಕೊಂಡಿತ್ತು ಮತ್ತು ಕಾನೂನು ಪ್ರಕಾರ ಮುಂದುವರೆಯುವಂತೆ ಸಿಬಿಐಗೆ ನಿರ್ದೇಶಿಸಿತ್ತು. ನಿರೀಕ್ಷಣಾ ಜಾಮೀನಿಗಾಗಿ ಪಶ್ಚಿಮ ಬಂಗಾಳದಲ್ಲಿನ ಸಂಬಂಧಿತ ನ್ಯಾಯಾಲಯವನ್ನು ಸಂಪರ್ಕಿಸುವಂತೆ ರಾಜೀವ ಕುಮಾರ್ ಅವರಿಗೆ ಸೂಚಿಸಿತ್ತು. ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ರಾಜೀವ ಕುಮಾರ್ ಅವರು ಸಾಕ್ಷ್ಯನಾಶದ ಆರೋಪಕ್ಕೆ ಗುರಿಯಾಗಿದ್ದರು. ಮಾಜಿ ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ ಕುಮಾರ್ ಅವರು ರಾಷ್ಟ್ರ ತ್ಯಜಿಸಲು ಅವಕಾಶ ನೀಡದಂತೆ ಕೇಂದ್ರೀಯ ತನಿಖಾ ದಳವು ಈಗಾಗಲೇ ವಲಸೆ ಅಧಿಕಾರಿಗಳಿಗೆ ತಿಳಿಸಿತ್ತು. ೨೦೧೪ರಲ್ಲಿ ಸಿಬಿಐ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವುದಕ್ಕೆ ಮುನ್ನ ರಾಜೀವ ಕುಮಾರ್ ಅವರ ಆಧೀನದಲ್ಲಿದ್ದ ವಿಶೇಷ ತನಿಖಾ ತಂಡವು ಚಿಟ್ ಫಂಡ್ ಹಗರಣದ ತನಿಖೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ರಾಜಕಾರಣಿಗಳಿಗೆ ಮತ್ತು ಅವರ ಜೊತೆ ಸಂಪರ್ಕದಲ್ಲಿದ್ದ ಪ್ರಮುಖ ಆರೋಪಿಯನ್ನು ರಕ್ಷಿಸುವ ಸಲುವಾಗಿ ದೂರವಾಣಿ ಕರೆ ದಾಖಲೆಗಳು, ಮೊಬೈಲುಗಳು ಮತ್ತು ಲ್ಯಾಪ್ ಟ್ಯಾಪ್ ಸಾಕ್ಷ್ಯಾಧಾರಗಳಲ್ಲಿ ರಾಜೀವ ಕುಮಾರ್ ಕೈಯಾಡಿಸಿದ್ದಲ್ಲದೆ, ಹಲವನ್ನು ನಾಶಪಡಿಸಿದ್ದರು ಎಂದು ಸಿಬಿಐ ಆಪಾದಿಸಿತ್ತು. ಕುಮಾರ್ ಅವರು ನಿರ್ಣಾಯಕ ಸಾಕ್ಷ್ಯಾಧಾರಗಳಿದ್ದ ಮೊಬೈಲ್ ಫೋನುಗಳು ಮತ್ತು ಲ್ಯಾಪ್ ಟ್ಯಾಪ್ಗಳ ಬಿಡುಗಡೆಗೆ ಅವಕಾಶ ನೀಡಿದ್ದರು ಎಂದು ಸಿಬಿಐ ಹೇಳಿತ್ತು. ಸಿಬಿಐ ಪ್ರಕರಣದ ತನಿಖೆ ಆರಂಭಿಸಿದ ಬಳಿಕ ಕುಮಾರ್ ಅವರನ್ನು ಸ್ಥಾನ ಬದಲಾಯಿಸಿ ರಾಜ್ಯದ ಕ್ರಿಮಿನಲ್ ತನಿಖಾ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಬಂಧಿಸದಂತೆ ರಕ್ಷಣೆ ನೀಡಲು ನ್ಯಾಯಮೂರ್ತಿಗಳು ಒಪ್ಪುವುದರೊಂದಿಗೆ ಕುಮಾರ್ ಅವರಿಗೆ ಸುಪ್ರೀಂಕೋರ್ಟಿನಲ್ಲಿ ವರ್ಷದ ಫೆಬ್ರುವರಿ ಆದಿಯಲ್ಲಿ ನಿರಾಳತೆ ಲಭಿಸಿತ್ತು. ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಸಿಬಿಐ ಶಿಲ್ಲಾಂಗ್ನಲ್ಲಿ ಐದು ದಿನಗಳ ಕಾಲ ಕುಮಾರ್ ಅವರನ್ನು ಪ್ರಶ್ನಿಸಿತ್ತುಬಂಧಿಸದಂತೆ ರಕ್ಷಣೆ ನೀಡಿದ್ದ ಸುಪ್ರೀಂಕೋರ್ಟ್ ಆದೇಶವನ್ನು ತೆರವುಗೊಳಿಸಲು ಸಿಬಿಐ ಕಳೆದ ಹಲವಾರು ದಿನಗಳಿಂದ ಯತ್ನಿಸಿತ್ತು. ಕಡೆಗೂ ಸುಪ್ರೀಂಕೋರ್ಟ್ ರಾಜೀವ ಕುಮಾರ್ ಅವರನ್ನು ಬಂಧಿಸದಂತೆ ತಾನು ಒದಗಿಸಿದ್ದ ರಕ್ಷಣೆಯನ್ನು ಹಿಂತೆಗೆದುಕೊಂಡಿತ್ತುಸಿಬಿಐ ಸಮನ್ಸ್ ಜಾರಿಗೊಳಿಸುವುದಕ್ಕೆ ಕೆಲವು ತಾಸುಗಳ ಮುನ್ನ ಪಶ್ಚಿಮ ಬಂಗಾಳ ಸರ್ಕಾರವು ಕುಮಾರ್ ಅವರನ್ನು ಸಿಐಡಿಯ ಹೆಚ್ಚುವರಿ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು. ಚುನಾವಣೆಗೆ ಮುಂಚೆ ಚುನಾವಣಾ ಆಯೋಗವು ಹುದ್ದೆಯಿಂದ ಅವರನ್ನು ಕಿತ್ತು ಹಾಕಿತ್ತು. ಸಿಬಿಐ ತಂಡವು ಅಲಿಪುರದ ಸಿಐಡಿ ಕಚೇರಿಗೆ ತೆರಳಿ ಎರಡನೇ ಸಮನ್ಸ್ ಜಾರಿಗೊಳಿಸಿತ್ತು. ಇದಕ್ಕೆ ಮುನ್ನ ಸಿಬಿಐ ತಂಡ ಮಾಜಿ ಕೋಲ್ಕತ ಪೊಲೀಸ್ ಕಮೀಷನರ್ ಅವರ ಅಧಿಕೃತ ಬಂಗಲೆಗೆ ಭೇಟಿ ನೀಡಿದಾಗ ಕಾವಲುಗಾರರು ಕುಮಾರ್ ಅವರು ಬಂಗಲೆ ತೆರವುಗೊಳಿಸಿ ಸಮೀಪದ ಸಮುಚ್ಚಯಕ್ಕೆ ಮನೆಯನ್ನು ಬದಲಾಯಿಸಿರುವುದಾಗಿ ತಿಳಿಸಿದ್ದರು.  ‘ವಿಶಾಲ ಸಂಚು ಬಯಲಿಗೆಳೆಯಲು ರಾಜೀವ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಬೇಕು ಎಂದು ಸಿಬಿಐ ಬಯಸಿದೆ. ಆದರೆ ತನ್ನ ವಿರುದ್ಧರಾಜಕೀಯ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಕೋಲ್ಕತದ ಮಾಜಿ ಪೊಲೀಸ್ ಕಮೀಷನರ್ ಆಪಾದಿಸಿದ್ದಾರೆ. ಆರೋಪಿತ ಹಗರಣದಲ್ಲಿ ಹಲವಾರು ಟಿಎಂಸಿ ನಾಯಕರು ಶಾಮೀಲಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ದೂರಿದೆ. ಬಿಜೆಪಿಯು ರಾಜಕೀಯ ಸೇಡು ತೀರಿಸಿಕೊಳ್ಳಲು ಸಿಬಿಐಯನ್ನು ಬಳಸಿಕೊಳ್ಳುತ್ತಿದೆ ಎಂದು ಟಿಎಂಸಿ ಆಪಾದಿಸಿದೆ. ಮಾಜಿ ಟಿಎಂಸಿ ನಾಯಕ ಮುಕುಲ್ ರಾಯ್ ಅವರನ್ನು ಬಿಜೆಪಿ ಸೇರುವುದಕ್ಕೆ ಮುನ್ನ ಪ್ರಶ್ನಿಸಲಾಗಿತ್ತು. ಲೋಕಸಭಾ ಚುನಾವಣೆಗೆ ಮುನ್ನ ಕುಮಾರ್ ಅವರನ್ನು ಪ್ರಶ್ನಿಸಲು ಸಿಬಿಐ ನಡೆಸಿದ ಯತ್ನಗಳಿಗೂ ರಾಜ್ಯದಲ್ಲಿ ತಳವೂರುವ ನಿಟ್ಟಿನಲ್ಲಿ ಬಿಜೆಪಿ ನಡೆಸುತ್ತಿರುವ ಯತ್ನಗಳಿಗೂ ಸಂಪರ್ಕ ಕಲ್ಪಿಸಲು ಮುಖ್ಯಮಂತ್ರಿ ಮಮತಾ ಬ್ಯಾನಜಿ ಯತ್ನಿಸಿದ್ದರು. ೨೦೧೪ರಲ್ಲಿ ೪೨ ಲೋಕಸಭಾ ಸ್ಥಾನಗಳ ಪೈಕಿ ಕೇವಲ ಸ್ಥಾನ ಗೆದ್ದಿದ್ದ ಬಿಜೆಪಿ ಕಡೆಗೂ ಬಾರಿ ೧೮ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

2019: ರಾಂಚಿ/ ಚಂಡೀಗಢ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಗೆನೈತಿಕ ಹೊಣೆ ಹೊತ್ತು ಕಾಂಗ್ರೆಸ್ ರಾಜ್ಯ ಘಟಕಗಳ ಇನ್ನೂ ಮೂವರು ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ೫೪೨ ಲೋಕಸಭಾ ಸ್ಥಾನಗಳ ಪೈಕಿ ೩೫೨ ಸ್ಥಾನಗಳನ್ನು ಗೆದ್ದು ಪ್ರಚಂಡ ಜಯಭೇರಿ ಭಾರಿಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಒಟ್ಟು ಮಂದಿ ಪಕ್ಷ ಪ್ರಮುಖರು ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದಂತಾಯಿತು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖಡ್, ಜಾರ್ಖಂಡ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಮತ್ತು ಅಸ್ಸಾಂ ಘಟಕದ ಮುಖ್ಯಸ್ಥ ರಿಪುನ್ ಬೋರಾ ಅವರು ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು. ಇದಕ್ಕೆ ಮುನ್ನ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ನಿರಂಜನ್ ಪಾಟ್ನಾಯಕ್ ಮತ್ತು ಮಹಾರಾಷ್ಟ್ರದ ಅಶೋಕ ಚವಾಣ್ ಅವರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖಡ್ ಅವರು ತಮ್ಮ ರಾಜೀನಾಮೆಯನ್ನು ರಾಹುಲ್ ಗಾಂಧಿ ಅವರಿಗೆ -ಮೇಲ್ ಮೂಲಕ ಕಳುಹಿಸಿದ್ದರು. ರಾಜ್ಯದಲ್ಲಿ ೨೦೧೪ರಲ್ಲಿ ಗಳಿಸಿದ್ದ ಸ್ಥಾನಗಳಿಗೆ ಹೋಲಿಸಿದರೆ ಬಾರಿ ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷ ಉತ್ತಮ ಸಾಧನೆ ಮಾಡಿದ್ದರೂ ಗುರುದಾಸಪುರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸನ್ನಿ ಡಿಯೋಲ್ ಅವರ ಪರಾಭವಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಸುನಿಲ್ ಜಾಖಡ್ ತಿಳಿಸಿದ್ದಾರೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಎಸ್ಎಡಿ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದವು. ರಾಜ್ಯದ ೧೪ ಸ್ಥಾನಗಳ ಪೈಕಿ ಕೇವಲ ಸ್ಥಾನದಲ್ಲಿ ಗೆದ್ದ ಹಿನ್ನೆಲೆಯಲ್ಲಿ ಪಕ್ಷದ ಕಳಪೆ ಸಾಧನೆಗೆ ನೈತಿಕ ಹೊಣೆ ಹೊತ್ತು ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ರಾಜೀನಾಮೆ ಸಲ್ಲಿಸಿದ್ದರು.  ‘ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥರು ಪಕ್ಷದ ಕಳಪೆ ಸಾಧನೆಗೆ ನೈತಿಕ ಹೊಣೆ ಹೊತ್ತು ತಮ್ಮ ರಾಜೀನಾಮೆಯನ್ನು ಮೇ ೨೪ರಂದು ಕಳುಹಿಸಿದ್ದಾರೆ. ಏನಿದ್ದರೂ ಸಿಂಘಭೂಮ್ ಕ್ಷೇತ್ರವನ್ನು ಅನಾಯಾಸವಾಗಿ ಗೆದ್ದಿರುವ ಕಾರಣ ಪಕ್ಷದ ಸಾಧನೆ ಅಂತಹ ಕಳಪೆಯೇನಲ್ಲಖುಂಟಿ ಮತ್ತು ಲೋಹಾರ್ದಗ ಕ್ಷೇತ್ರಗಳಲ್ಲಿ ಅಲ್ಪ ಅಂತರದಲ್ಲಿ ನಾವು ಸೋತಿದ್ದೇವೆ ಎಂದು ಜಾರ್ಖಂಡ್ ಕಾಂಗ್ರೆಸ್ ವಕ್ತಾರ ಅಲೋಕ್ ದುಬೆ ಹೇಳಿದರು. ಕಾಂಗ್ರೆಸ್ ಖುಂಟಿಯಲ್ಲಿ ೧೪೦೦ ಮತ್ತು ಮತ್ತು ಲೋಹಾರ್ದಗ ಕ್ಷೇತ್ರದಲ್ಲಿ ೧೦,೦೦೦ ಮತಗಳ ಅಂತರದಲ್ಲಿ ಸೋತಿತ್ತುರಾಜೀನಾಮೆ ಸಲ್ಲಿಸಿರುವ ಪಕ್ಷದ ಇನ್ನೊಬ್ಬ ಮುಖ್ಯಸ್ಥ ಅಸ್ಸಾಂ ಘಟಕದ ಅಧ್ಯಕ್ಷ ರಿಪುನ್ ಬೋರಾ. ರಾಹುಲ್ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ ಬೋರಾ ಅವರುಅಸ್ಸಾಂನಲ್ಲಿ ಪಕ್ಷದ ಹೀನಾಯ ಪರಾಭವಕ್ಕೆ ಏನೇ ಕಾರಣವಿದ್ದರೂ, ಅಸ್ಸಾಂ ಪಿಸಿಸಿ ಅಧ್ಯಕ್ಷನಾಗಿ ಮುಂದುವರೆಯಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಬರೆದರು. ರಾಜ್ಯದ ೧೪ ಸ್ಥಾನಗಳ ಪೈಕಿ ಕಲಿಯಾಬೋರ್, ನಾಗಾಂನ್ ಮತ್ತು ಬರಪೇಟಾ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದೆ. ೨೦೧೪ರಲ್ಲೂ ಕಾಂಗ್ರೆಸ್ ಇಷ್ಟೇ ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಜೆಪಿಗೆ ಸ್ಥಾನಗಳು ಲಭಿಸಿದ್ದು, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮತ್ತು ಪಕ್ಷೇತರರು ತಲಾ ಒಂದೊಂದು ಸ್ಥಾನ ಗೆದ್ದಿದ್ದರು.  2014ರಲ್ಲಿ ಕಾಂಗ್ರೆಸ್ ಒಟ್ಟು ಮತಗಳ ಶೇಕಡಾ ೨೯. ರಷ್ಟನ್ನು ಪಡೆದಿತ್ತು. ೨೦೧೬ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಶೇಕಡಾ ೩೦.೯೬ರಷ್ಟು ಮತಗಳನ್ನು ಪಡೆದಿತ್ತು. ಬಾರಿ ಪಕ್ಷದ ಮತಗಳ ಪಾಲು ಹೆಚ್ಚಿದ್ದು ಪಕ್ಷವು ಶೇಕಡಾ ೩೫.೪೪ರಷ್ಟು ಮತಗಳನ್ನು ಪಡೆದುಕೊಂಡಿತ್ತು.  ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸ್ವತಃ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಕಾರ್ಯಾಕಾರಿಣಿ ಸಭೆಯು ಅದನ್ನು ತಿರಸ್ಕರಿಸಿತ್ತು. ರಾಜ್ಯ ನಾಯಕರನೇಕರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಮುಂದಾಗಿದ್ದು, ರಾಜೀನಾಮೆ ಪತ್ರಗಳ ರಾಶಿಯೇ ರಾಹುಲ್ ಅವರ ಮುಂದೆ ಬಂದು ಬಿದ್ದವು. ನಾಂದೇಡ್ ಕ್ಷೇತ್ರದಲ್ಲಿ ಸೋತ ಮಹಾರಾಷ್ಟ್ರ ಘಟಕ ಅಧ್ಯಕ್ಷ ಅಶೋಕ ಚವಾಣ್ ಅವರು ಕಾಂಗ್ರೆಸ್ ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ್ದರು.. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪಕ್ಷವನ್ನು ಸಂಪೂರ್ಣ ಪುನಾರಚಿಸಲು ರಾಹುಲ್ ಗಾಂಧಿಯವರಿಗೆ ಪೂರ್ಣ ಅಧಿಕಾರ ನೀಡಿದ ದಿನವೇ ಅಶೋಕ ಚವಾಣ್ ರಾಜೀನಾಮೆ ಕೊಡುಗೆ ಮುಂದಿಟ್ಟಿದ್ದರು. ಚುನಾವಣಾ ಪರಾಭವವು ಸಾಮೂಹಿಕ ಹೊಣೆಗಾರಿಕೆ, ಕೇವಲ ರಾಹುಲ್ ಗಾಂಧಿ ಅವರದ್ದಲ್ಲ ಎಂದು ಚವಾಣ್ ಹೇಳಿದ್ದರು. ಉತ್ತರಪ್ರದೇಶದಲ್ಲಿ ಪಕ್ಷದ ಕಳಪೆ ಸಾಧನೆಯ ಹೊಣೆ ಹೊತ್ತು ರಾಜ್ಯ ಘಟಕ ಅಧ್ಯಕ್ಷ ರಾಜ್ ಬಬ್ಬರ್, ಅಮೇಥಿಯಲ್ಲಿ ರಾಹುಲ್ ಗಾಂಧಿ ಪರಾಭವದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಯೋಗೇಂದ್ರ ಮಿಶ್ರ ರಾಜೀನಾಮೆ ಕೊಟ್ಟಿದ್ದರು.  ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ ಇನ್ನೊಬ್ಬ ಮುಖ್ಯಸ್ಥ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನಿರಂಜನ್ ಪಾಟ್ನಾಯಕ್. ’ನಾನೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಪಕ್ಷವು ನನಗೆ ಹೊಣೆಗಾರಿಕೆ ನೀಡಿತ್ತು. ಸೋಲಿನ ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡುತ್ತಿದ್ದು, ಇದನ್ನು ಎಐಸಿಸಿ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಪಾಟ್ನಾಯಕ್ ಹೇಳಿದ್ದರು.ಕರ್ನಾಟಕದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಅವರು ಪಕ್ಷಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ’ಇದು ನಮ್ಮೆಲ್ಲರಿಗೂ ಆತ್ಮಾವಲೋಕನ ಮಾಡಬೇಕಾದ ಕ್ಷಣ. ಸೋಲಿನ ಹೊಣೆಗಾರಿಕೆ ಹೊತ್ತುಕೊಳ್ಳುವುದು ನನ್ನ ನೈತಿಕ ಕರ್ತವ್ಯ ಎಂಬುದು ನನ್ನ ಭಾವನೆ. ಆದ್ದರಿಂದ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪಾಟೀಲ್ ಬರೆದಿದ್ದರು.

2019: ಮುಂಬೈ:  ಚಿತ್ರನಟ ಅಜಯ್ ದೇವಗನ್ ಅವರ ತಂದೆ ಬಾಲಿವುಡ್ ಚಿತ್ರಗಳ ಸ್ಟಂಟ್ ನಿರ್ದೇಶಕ ವೀರು ದೇವಗನ್ ಅವರು ಮುಂಬೈಯಲ್ಲಿ ನಿಧನರಾದರು. ವೀರು ದೇವಗನ್ ಅವರನ್ನು ಮುಂಬೈಯ ಸಾಂತ್ರಾಕ್ರೂಜ್ ಸೂರ್ಯ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೀರು ದೇವಗನ್ ಅವರು ಲಾಲ್ ಬಾದಶಹ ಮತ್ತು ಇಶ್ಕ್ ಸೇರಿದಂತೆ ಸುಮಾರು ೮೦ ಚಲನ ಚಿತ್ರಗಳಲ್ಲಿ ಸ್ಟಂಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅವರು ೧೯೯ರಲ್ಲಿ ಹಿಂದುಸ್ತಾನ್ ಕೀ ಕಸಮ್ ಚಿತ್ರದ ನಿರ್ದೇಶನವನ್ನೂ ಮಾಡಿದ್ದರು. ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಅಜಯ್ ದೇವಗನ್ ಮತ್ತು ಮನಿಶಾ ಕೊಯಿರಾಲ ನಟಿಸಿದ್ದರು. ವಿಕ್ಕಿ ಕೌಶಲ್ ಅವರ ತಂದೆ ಮತ್ತು ಸ್ಟಂಟ್ ನಿರ್ದೇಶಕ ಶಾಮ್ ಕೌಶಲ್ ಅವರು ವೀರು ದೇವಗನ್ ನಿಧನಕ್ಕೆ ದುಃಖ ವ್ಯಕ್ತಪಡಿಸಿದರು. ‘ರಿಪ್ ವೀರು ದೇವಗನ್ಜಿ. ಬೇಸರದ ಸುದ್ದಿ ಈಗಷ್ಟೇ ಗೊತ್ತಾಯಿತು. ಆಕ್ಷನ್ ನಿರ್ದೇಶಕರಾಗಿ ತಮ್ಮ ಕಾಲಕ್ಕಿಂತ ಯಾವಾಗಲೂ ಮುಂದಿರುತ್ತಿದ್ದ ಮತ್ತು ಮನುಷ್ಯನಾಗಿ ಅತ್ಯುನ್ನತ ಸಾಧನೆ ಮಾಡಿದ ವ್ಯಕ್ತಿ ಅವರು. ನಾನು ಸ್ಟಂಟ್ ಮ್ಯಾನ್ ಆಗಿರುವುದು ಅವರ ಆಶೀರ್ವಾದದಿಂದಲೇ. ೧೯೮೦ರ ಆಗಸ್ಟ್ ೮ರಂದು ಸ್ಟಂಟ್ ಮ್ಯಾನ್ ಆಗಲು ನಾನು ಸಲ್ಲಿಸಿದ್ದ ಅರ್ಜಿಗೆ ಅವರು ಸಹಿ ಹಾಕಿದರು ಮತ್ತು ನನ್ನನ್ನು ಅವರ ತಂಡದ ಭಾಗವನ್ನಾಗಿ ಮಾಡಿಕೊಂಡರು ಎಂದು ಶಾಮ್ ಕೌಶಲ್ ಟ್ವೀಟ್ ಮಾಡಿದರುಕೆಲವು ವರ್ಷಗಳ ಹಿಂದೆ ತನ್ನ ತಂದೆಯ ಬಗ್ಗೆ ಮಾತನಾಡುತ್ತಾ ಅಜಯ್ ದೇವಗನ್ ಅವರು ತಂದೆಯೇ ತನ್ನ ನಿಜವಾದ ಸಿಂಘಮ್ ಎಂದು ಹೇಳಿದ್ದರು. ’ನನ್ನ ಬದುಕಿನ ಸಿಂಘಮ್ ನನ್ನ ತಂದೆ ಮಾತ್ರ. ಏಕೆಂದರೆ ಅವರು ಮುಂಬೈಗೆ ಪಾಕೆಟ್ಗಳೊಂದಿಗೆ ಬಂದ ಸಮಯದಲ್ಲಿ ಅವರು ತಾನು ಏನೋ ಆಗಬೇಕೆಂದು ಬಯಸಿ ಹೋರಾಟ ನಡೆಸಿದ್ದರು. ಟ್ಯಾಕ್ಸಿಗಳಲ್ಲಿ ಬದುಕಿದ್ದರು ಹೀಗಾಗಿ ನಾನು ಇಲ್ಲಿ ಬದುಕಲು ಸಾಧ್ಯವಾಯಿತು. ಕೆಲವೊಮ್ಮೆ ಅವರು ಎಂಟು ದಿನಗಳವರೆಗೂ ಏನೂ ಆಹಾರ ತಿನ್ನದೇ ಇರುತ್ತಿದ್ದರು, ಕಠಿಣ ಶ್ರಮ ಪಡುತ್ತಿದ್ದರು. ರವಿಖನ್ನಾ ಅವರು ನೋಡುವವರೆಗೆ ಅವರು ಸ್ಟ್ರೀಟ್ ಫೈಟರ್ ಆಗಿದ್ದರು. ಅವರನ್ನು ನೋಡಿದ ರವಿಖನ್ನಾ ಫೈಟ್ ಡೈರೆಕ್ಟರ್ ಆಗ ಬಲ್ಲೆಯಾ ಎಂದು ಪ್ರಶ್ನಿಸಿದ್ದರು. ಅಲ್ಲಿಂದ ಆಚೆಗೆ ಅವರು ಅದ್ಭುತವಾಗಿ ಬೆಳೆದರು ಮತ್ತು ಭಾರತದ ಅತ್ಯುನ್ನತ ಆಕ್ಷನ್ ನಿರ್ದೇಶಕರಾದರು ಎಂದು ಅಜಯ್ ಹೇಳಿದ್ದರು. ಕೆಲವು ಶ್ರೇಷ್ಠ ನಟರಿಂದ ಅಪಾರ ಗೌರವವನ್ನು ಅವರು ಪಡೆಯುತ್ತಿದ್ದುದನ್ನು ನಾನು ಕಂಡಿದ್ದೇನೆ. ನಟರು ಅವರ ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು, ಅವರ ಜೊತೆಗೆ ಕೆಲಸ ಮಾಡಲು ಇಚ್ಛಿಸುತ್ತಿದ್ದರು. ನಾನು ಹುಟ್ಟುವ ವೇಳೆಗೆ ಅವರ ಬಳಿ ಬೇಕಾದಷ್ಟು ಹಣವಿತ್ತು. ಮಗುವಾಗಿ ಮತ್ತು ಆಕ್ಷನ್ ನಿರ್ದೇಶಕರ ಮಗನಾಗಿ, ನಾನು ಮರ್ಸಿಡಸ್ ಇಟ್ಟುಕೊಂಡು ಈಗ ಯಾವ ರೀತಿ ಬದುಕುತ್ತಿದ್ದೇನೋ ಅದೇ ಶೈಲಿಯ ಬದುಕನ್ನು ನಡೆಸಿದ್ದೆ. ಅವರ ತಲೆಯಲ್ಲಿ ೫೦ ಹೊಲಿಗೆಗಳಿದ್ದವು ಮತ್ತು ಅವರ ದೇಹದ ಪ್ರತಿಯೊಂದು ಎಲುಬೂ ಮುರಿದಿತ್ತು. ಆದ್ದರಿಂದ ಬೇರೆ ಯಾರೂ ನನ್ನ ಸಿಂಘಮ್ ಆಗಲು ಸಾಧ್ಯವೇ ಇಲ್ಲ ಎಂದು ಅಜಯ್ ದೇವಗನ್ ಹೇಳಿದ್ದರು.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್ ಮಾಗ ಮತ್ತು ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಮಾರ್ಗದ ಮೊದಲ ಹಂತವನ್ನು ಲೋಕಾರ್ಪಣೆ ಮಾಡಿದರು.  ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಮಾರ್ಗವು ರಾಷ್ಟ್ರದ ರಾಜಧಾನಿಯ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವುದರ ಜೊತೆಗೆ ಮೀರತ್- ದೆಹಲಿ ನಡುವಣ ತಾಸುಗಟ್ಟಲೆ ಪಯಣವನ್ನು ಗಣನೀಯ ಪ್ರಮಾಣದಲ್ಲಿ ಇಳಿಸುವ ನಿರೀಕ್ಷೆ ಇದೆ.  ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್ ಮಾರ್ಗವನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ವಿರುದ್ಧ ಪ್ರಖರ ದಾಳಿ ನಡೆಸಿದರು.  ‘ನಾಲ್ಕು ವರ್ಷಗಳ ಹಿಂದೆ, ಸರ್ಕಾರವು ಕೇವಲ ೧೨ ಕಿಮೀ ಹೆದ್ದಾರಿಗಳನ್ನು ನಿರ್ಮಿಸಿತ್ತು. ಆದರೆ ನಾವು ೨೭ ಕಿಮೀ ಹೆದ್ದಾರಿಗಳನ್ನು ಮತ್ತು ಬಹುಪಥಗಳ ಎಕ್ಸ್ ಪ್ರೆಸ್ ಮಾರ್ಗಗಳನ್ನು ಸಾಮಾನ್ಯ ಜನರ ಬದುಕನ್ನು ಸರಳಗೊಳಿಸುವ ಸಲುವಾಗಿ ನಿರ್ಮಿಸಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ೨೮,೦೦೦ ಕಿಮೀ ಉದ್ದದ ಹೆದ್ದಾರಿಗಳ ನಿರ್ಮಾಣಕ್ಕಾಗಿ ನಾವು ೩ ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದೇವೆ ಎಂದು ಪ್ರಧಾನಿ ನುಡಿದರು.  ಹೆದ್ದಾರಿಗಳಿಗಾಗಿ ಭಾರತ ಮಾಲಾ ಯೋಜನೆಗೆ ೫ ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸುವುದರ ಜೊತೆಗೆ ಕೃಷಿ ಸಂಬಂಧಿತ ಮೂಲ ಸವಲತ್ತುಗಳನ್ನು ಕಲ್ಪಿಸಲು ನಾವು ಮುಂಗಡಪತ್ರದಲ್ಲೇ ೧೪ ಲಕ್ಷ ಕೋಟಿ ರೂಪಾಯಿಗಳನ್ನು ನೀಡಿದ್ದೇವೆ ಎಂದು ಮೋದಿ ಹೇಳಿದರು.  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದ ಪ್ರಧಾನಿ, ’ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳು ಈಗ ತಾವಾಗಿಯೇ ಶರಣಾಗುತ್ತಿದ್ದಾರೆ ಎಂದು ಹೇಳಿದರು. ಗಂಗಾ ಸ್ವಚ್ಛತಾ ಕಾರ್‍ಯಕ್ರಮದ ಬಗ್ಗೆ ಪ್ರಸ್ತಾಪಿಸಿದ ಮೋದಿ ೨೧,೦೦೦ ಕೋಟಿ ರೂಪಾಯಿ ಮೌಲ್ಯದ ೨೦೦ಕ್ಕೂ ಹೆಚ್ಚು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನುಡಿದರು.  ಇದಕ್ಕೆ ಮುನ್ನ ೭೫೦೦ ಕೋಟಿ ರೂಪಾಯಿ ವೆಚ್ಚದ ದೆಹಲಿ-ಮೀರತ್ ಎಕ್ಸ್ ಪ್ರೆಸ್ ಮಾರ್ಗದ ಮೊದಲ ಹಂತವನ್ನು ಪ್ರಧಾನಿ ಉದ್ಘಾಟಿಸಿದರು. ಈ ಮಾರ್ಗವು ಮೀರತ್ ಮತ್ತು ದೆಹಲಿ ನಡುವಣ ನಾಲ್ಕೈದು ತಾಸುಗಳ ಪಯಣವನ್ನು ಅಂದಾಜು ೪೫ ನಿಮಿಷಗಳಿಗೆ ಇಳಿಸುವ ನಿರೀಕ್ಷೆ ಇದೆ.  ದೆಹಲಿಯ ಸರಾಯಿ ಕಾಲೇ ಖಾನ್ ನಿಂದ ಯುಪಿ ಗೇಟ್ ವರೆಗಿನ ೧೪ ಪಥಗಳ ಮಾರ್ಗವನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಹೆದ್ದಾರಿಯ ಇಕ್ಕೆಲಗಳಲ್ಲೂ ಜಮಾಯಿಸಿದ್ದ ಜನರತ್ತ ಕೈಗಳನ್ನು ಬೀಸುತ್ತಾ ತೆರೆದ ಕಾರಿನಲ್ಲಿ ರೋಡ್ ಶೋ ನಡೆಸಿದರು. ರಸ್ತೆ ಸಾರಿಗೆ ಮತ್ತು ನೌಕಾಯಾನ ಸಚಿವ ನಿತಿನ್ ಗಡ್ಕರಿ ಅವರು ಪ್ರತ್ಯೇಕ ಕಾರಿನಲ್ಲಿ ಪ್ರಧಾನಿ ರೋಡ್ ಶೋಗೆ ಸಾಥ್ ನೀಡಿದರು.  ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಮಾರ್ಗದ ೯ ಕಿಮೀ ದೂರದ ಮೊದಲ ಹಂತದ ಆರಂಭಿಕ ಸ್ಥಳವಾದ ನಿಜಾಮುದ್ದೀನ್ ಸೇತುವೆಯಿಂದ ರೋಡ್ ಶೋ ಆರಂಭಗೊಂಡಿತು. ರೋಡ್ ಶೋದಲ್ಲಿ ೬ ಕಿಮೀ ದೂರ ಕ್ರಮಿಸಿದ ಬಳಿಕ ಪ್ರಧಾನಿಯವರು ವಾಯುಮಾರ್ಗವಾಗಿ ಬಾಗ್ ಪತ್ ಗೆ ಪೂರ್ವ ಪೆರಿಫೆರಲ್ ಎಕ್ಸ್ ಪ್ರೆಸ್ ಮಾರ್ಗ ಉದ್ಘಾಟನೆ ಸಲುವಾಗಿ ತೆರಳಿದರು.  ೮೪೧ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಸಲಾಗಿರುವ ದೆಹಲಿ-ಮೀರತ್ ಎಕ್ಸ್ ಪ್ರೆಸ್ ಮಾರ್ಗವು ಯಮುನಾ ಸೇತುವೆಯಲ್ಲಿ ಸೌರ ಫಲಕಗಳ ಸಹಿತವಾದ ಉದ್ಯಾನವನ್ನೂ ಹೊಂದಿದೆ. ಸೌರ ವಿದ್ಯುತ್ ವ್ಯವಸ್ಥೆ, ಹನಿ ನೀರಾವರಿಯನ್ನು ಒಳಗೊಂಡ ಉದ್ದನೆಯ ಉದ್ಯಾನವನ್ನು ಹೊಂದಿರುವ ರಾಷ್ಟ್ರದ / ವಿಶ್ವದ ಮೊತ್ತ ಮೊದಲನೆಯ ಸೇತುವೆ ಇದಾಗಿದೆ.  ಈ ಎಕ್ಸ್ ಪ್ರೆಸ್ ಮಾರ್ಗದ ಇಕ್ಕೆಲಗಳಲ್ಲೂ ೨.೫ ಮೀಟರ್ ಅಗಲದ ಸೈಕಲ್ ಮಾರ್ಗವನ್ನೂ ರಚಿಸಿರುವುದು ಇನ್ನೊಂದು ವಿಶೇಷ. ಜೊತೆಗೆ ಪಾದಚಾರಿಗಳಿಗಾಗಿ ಮಾರ್ಗದ ಉಭಯ ಕಡೆಗಳಲ್ಲೂ ೧.೫ ಮೀಟರ್ ಅಗಲದ ಪುಟ್ಟಪಥವನ್ನೂ (ಫುಟ್ ಪಾತ್) ನಿರ್ಮಿಸಲಾಗಿದೆ.  ೬ ಪಥಗಳ ಎಕ್ಸ್ ಪ್ರೆಸ್ ಮಾರ್ಗದ ಜೊತೆ ೪+೪ ಲೇನ್ ಹೊಂದಿರುವ ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಹೆದ್ದಾರಿಯ ಮೊದಲ ಹಂತದ ಲೋಕಾರ್ಪಣೆಯಿಂದ ದೆಹಲಿ-ನೋಯಿಡಾದ ನಡುವಣ ಸಂಚಾರಿಗಳಿಗೆ ನಿಜಾಮುದ್ದೀನ್ ಸೇತುವೆಯಿಂದ ಯುಪಿ ಗಡಿಯವರೆಗೆ ಭಾರಿ ನಿರಾಳತೆ ಲಭಿಸಲಿದೆ.  ದೆಹಲಿ ಮತ್ತು ಮೀರತ್ ನಡುವಣ ಈ ಎಕ್ಸ್‌ಪ್ರೆಸ್ ಹೆದ್ದಾರಿ ದೆಹಲಿ ಮತ್ತು ಮೀರತ್ ನಡುವಣ ಪ್ರಯಾಣದ ಅವಧಿ ಈಗಿನ ೪-೫ ತಾಸಿನಿಂದ ೪೫ ನಿಮಿಷಗಳಿಗೆ ಇಳಿಯುವ ನಿರೀಕ್ಷೆ ಇದೆ. ಈ ಯೋಜನೆಯನ್ನು ೩೦ ತಿಂಗಳಲ್ಲಿ ಪೂರ್ಣಗೊಳಿಸಲು ಸಮಯ ನಿಗದಿ ಪಡಿಸಲಾಗಿತ್ತು. ಆದರೆ ಯೋಜನೆಯು ಕೇವಲ ೧೭ ತಿಂಗಳುಗಳಲ್ಲೇ ಪೂರ್ಣಗೊಂಡಿದೆ ಎಂದು ಸಚಿವ ನಿತಿನ್ ಗಡ್ಕರಿ ಶನಿವಾರ ವರದಿಗಾರರಿಗೆ ತಿಳಿಸಿದ್ದರು.

2018: ಬಾಗ್‌ಪತ್: ದಲಿತ ವಿರೋಧಿ ದೌರ್ಜನ್ಯ ಕಾಯ್ದೆ ದುರ್ಬಲಗೊಳ್ಳುವಿಕೆಯಿಂದ ಹಿಡಿದು ರೈತರ ಸಂಕಷ್ಟಗಳವರೆಗೆ ವಿವಿಧ ವಿಷಯಗಳ ಬಗ್ಗೆ ಕಾಂಗ್ರೆಸ್ ಪಕ್ಷವು ಸುಳ್ಳುಗಳನ್ನು ಮತ್ತು ವದಂತಿಗಳನ್ನು ಪ್ರಚಾರ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಕಾಂಗ್ರೆಸ್ ವಿರುದ್ಧ ಪ್ರಖರ ದಾಳಿ ನಡೆಸಿದರು.  ೧೧,೦೦೦ ಕೋಟಿ ರೂಪಾಯಿ ವೆಚ್ಚದ ಪೂರ್ವ ಬಾಹ್ಯ ಎಕ್ಸ್‌ಪ್ರೆಸ್ ಮಾರ್ಗವನ್ನು (ಈಸ್ಟರ್ನ್ ಪೆರಿಪೆರಲ್ ಎಕ್ಸ್‌ಪ್ರೆಸ್ ವೇ) ಉದ್ಘಾಟಿಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ’ಕಾಂಗ್ರೆಸ್ ಪಕ್ಷವು ತನ್ನ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಬಹಿರಂಗವಾಗಿಯೇ ಸುಳ್ಳುಗಳ ಪ್ರಚಾರ ಮಾಡುತ್ತಿದೆ ಎಂದು ಆಪಾದಿಸಿದರು.  ‘ಒಂದು ಕುಟುಂಬದ ಆರಾಧನೆ ಮಾಡಲು ಅಭ್ಯಾಸವಾದವರು ಪ್ರಜಾಪ್ರಭುತ್ವದ ಆರಾಧನೆ ಮಾಡಲಾರರು. ಚುನಾವಣೆಗಳಲ್ಲಿ ಸೋತ ಬಳಿಕ ಅವರು ವಿವಶರಾಗಿದ್ದಾರೆ. ’ಮೋದಿ ವಿರೋಧದಲ್ಲಿ ದೇಶವನ್ನೇ ವಿರೋಧಿಸಲು ಆರಂಭಿಸಿದ್ದಾರೆ (ಮೋದಿ ಕೆ ವಿರೋಧ್ ಮೆ ದೇಶ್ ಕಿ ವಿರೋಧ್ ಕರನೆ ಲಗೇ ಹೈ) ಎಂದು ಅವರು ಹೇಳಿದರು.  ನೆರೆಯ ಕೈರಾನಾ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಒಂದು ದಿನ ಮುಂಚಿತವಾಗಿ ಇಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ’ಇನ್ನೊಂದು ಕಡೆಯಲ್ಲಿರುವ ಜನರನ್ನು ನೋಡಿ. ಅಲ್ಲಿನ ಜನರಿಗೆ ಅವರ ಕುಟುಂಬವೇ ರಾಷ್ಟ್ರ. ನನಗೆ ನನ್ನ ರಾಷ್ಟ್ರವೇ ನನ್ನ ಕುಟುಂಬ ಎಂದು ನುಡಿದರು.  ಸುಪ್ರೀಂಕೋರ್ಟಿನ ಕಡೆಗೆ ಬೊಟ್ಟು ಮಾಡುವುದು, ಚುನಾವಣಾ ಆಯೋಗ ಮತ್ತು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ಸಂಶಯ ವ್ಯಕ್ತ ಪಡಿಸುವುದು, ರಿಸರ್ವ್ ಬ್ಯಾಂಕ್ ಮತ್ತು ಅದರ ನೀತಿಗಳ ಮೇಲೆ ಗುಮಾನಿಯ ದೃಷ್ಟಿ ಇರಿಸುವುದು, ತಮ್ಮ ತಪ್ಪು- ಒಪ್ಪುಗಳ ತನಿಖೆ ನಡೆಸುವ ಪ್ರತಿಯೊಂದು ತನಿಖಾ ಸಂಸ್ಥೆಯನ್ನೂ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ’ವಿಶ್ವಾಸ ಬಿಕ್ಕಟ್ಟು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಟೀಕಿಸಿದರು.  ‘ಈಗ ಅವರಿಗೆ ಮಾಧ್ಯಮವೂ ಪಕ್ಷಪಾತಿಯಾಗಿ ಕಂಡು ಬರುತ್ತಿದೆ ಎಂದು ಅವರು ನುಡಿದರು.  ವಿರೋಧ ಪಕ್ಷವು ಗಡಿಯಾಚೆ ಸರ್ಜಿಕಲ್ ದಾಳಿ ನಡೆಸಿದ ಸೇನೆಯ ಶೌರ್‍ಯವನ್ನು ನಿರಾಕರಿಸುತ್ತಿದೆ ಮತ್ತು ಭಾರತವನ್ನು ಪ್ರಶಂಸಿಸಿದ ವಿದೇಶೀ ಗಣ್ಯರನ್ನೇ ಪ್ರಶ್ನಿಸುತ್ತಿದೆ ಎಂದು ಅವರು ಹೇಳಿದರು.  ‘ತಮ್ಮ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಅವರು ಹೇಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂಬುದನ್ನು ಜನರು ನೋಡಿದ್ದಾರೆ ಮೋದಿ ಅವರು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸುತ್ತಾ ಹೇಳಿದರು.  ತೀರ್ಪು ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ ಎಂದು ಹಲವರು ಭಾವಿಸಿದರು ಮತ್ತು ಸರ್ಕಾರವು ಅಂತಹ ತಪ್ಪು ಕಲ್ಪನೆಯನ್ನು ನಿವಾರಿಸಲು ವಿಶೇಷ ಪ್ರಯತ್ನವನ್ನು ಮಾಡಿತು ಎಂದು ಮೋದಿ ಹೇಳಿದರು.  ‘ತಮ್ಮ ಸುಳ್ಳುಗಳು ರಾಷ್ಟ್ರದಲ್ಲಿ ಅಸ್ಥಿರತೆಯನ್ನು ಸೃಷ್ಟಿಸುತ್ತವೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿಲ್ಲ. ದಲಿತರ ವಿರುದ್ಧದ ದೌರ್ಜನ್ಯಗಳನ್ನು ತಡೆಯುವುದಕ್ಕೆ ಸಂಬಂಧಿಸಿದ ಕಾನೂನೇ ಇರಲಿ ಅಥವಾ ಅವರ ಮೀಸಲಾತಿಗೆ ಸಂಬಂಧಿಸಿದ ವಿಷಯವೇ ಇರಲಿ ಅವರು (ಕಾಂಗ್ರೆಸ್) ಸುಳ್ಳುಗಳನ್ನು ಹೇಳಿದರು ಮತ್ತು ಜನರನ್ನು ದಾರಿ ತಪ್ಪಿಸಲು ವದಂತಿಗಳನ್ನು ಹರಡಿದರು ಎಂದು ಪ್ರಧಾನಿ ದೂರಿದರು.   ‘ಗುತ್ತಿಗೆ ವ್ಯವಸಾಯದ (ಕಾಂಟ್ರಾಕ್ಟ್ ಫಾರ್ಮಿಂಗ್) ಮೇಲೆ ಶೇಕಡಾ ೧೮ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಬರಲಿದೆ ಎಂಬ ಹೊಸ ಸುಳ್ಳನ್ನು ಈಗ ಹರಡಲಾಗುತ್ತಿದೆ. ಇಂತಹ ಸುಳ್ಳು, ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಾನು ನನ್ನ ರೈತ ಸಹೋದರರಿಗೆ ಸೂಚಿಸಬಯಸುತ್ತೇನೆ ಎಂದು ಮೋದಿ ಹೇಳಿದರು.  ದಲಿತರ ಕಲ್ಯಾಣಕ್ಕಾಗಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಪಟ್ಟಿ ಮಾಡಿದ ಪ್ರಧಾನಿ, ’ನಾವು ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಿದ್ದೇವೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗಿದೆ ಎಂದು ಅವರು ನುಡಿದರು.  ಇತರ ಹಿಂದುಳಿದ ವರ್ಗಗಳಲ್ಲಿ (ಒಬಿಸಿ) ಉಪ ವರ್ಗಗಳನ್ನು ಮಾಡಿ ಅತ್ಯಂತ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಕೆಲಸಗಳಲ್ಲಿ ಕಾಲಮಿತಿಯಲ್ಲಿ ಮೀಸಲಾತಿ ಕಲ್ಪಿಸಲು ಆಯೋಗವನ್ನು ಸರ್ಕಾರ ರಚಿಸಿದೆ ಎಂದು ಅವರು ಹೇಳಿದರು.  ಸತ್ಯ ಏನೆಂದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಡವರು ಮತ್ತು ದಲಿತರ ಅಭಿವೃದ್ಧಿಗಾಗಿ ನಾವು ಮಾಡುವ ಕೆಲಸಗಳಿಗೆ ತಡೆ ಒಡ್ಡುತ್ತವೆ ಅಥವಾ ಮಾಡಿದ ಕೆಲಸಗಳನ್ನು ಗೇಲಿ ಮಾಡುತ್ತವೆ. ಅವರಿಗೆ ರಾಷ್ಟ್ರದ ಅಭಿವೃದ್ಧಿ ಕೂಡಾ ತಮಾಷೆಯ ವಿಷಯವಾಗಿದೆ ಎಂದು ಪ್ರಧಾನಿ ಚುಚ್ಚಿದರು. ಬಡ ಮಹಿಳೆಯರಿಗೆ ಸರ್ಕಾರವು ಉಚಿತವಾಗಿ ಅಡುಗೆ ಅನಿಲ (ಎಲ್ ಪಿಜಿ) ಸಂಪರ್ಕ ನೀಡಿದಾಗ, ಅಥವಾ ಬಡವರಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆದಾಗ ಅವರು ಅದನ್ನು ತಮಾಷೆ ಎಂದು ಯೋಚಿಸುತ್ತಾರೆ ಎಂದು ಮೋದಿ ನುಡಿದರು. ಹಲವಾರು ವರ್ಷಗಳಿಂದ ಒಂದು ಕುಟುಂಬದ ಆರಾಧನೆ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡ ಜನರಿಗೆ ಬಡವರ ಸಲುವಾಗಿ ಮಾಡುವ ಕೆಲಸಗಳೆಲ್ಲ ತಮಾಷೆಗಳಾಗಿ ಕಾಣುತ್ತವೆ ಎಂದು ಅವರು ಹೇಳಿದರು.

2018: ನವದೆಹಲಿ: ಪಾರದರ್ಶಕ ಕಾನೂನು ಆಗಿರುವ ಮಾಹಿತಿ ಹಕ್ಕು (ಆರ್ ಟಿಐ) ಕಾಯ್ದೆಯ ವ್ಯಾಪ್ತಿಗೆ ಆರು ರಾಜಕೀಯ ಪಕ್ಷಗಳನ್ನು ತಂದ ಕೇಂದ್ರೀಯ ಮಾಹಿತಿ ಆಯೋಗದ ನಿರ್ದೇಶನಕ್ಕೆ ವ್ಯತಿರಿಕ್ತವಾದ ನಿಲುವು ತಳೆದಿರುವ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತು. ೨೦೧೩ರ ಜೂನ್ ತಿಂಗಳಲ್ಲಿ ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ತನ್ನ ಆದೇಶದ ಮೂಲಕ ಪಾರದರ್ಶಕ ಕಾಯ್ದೆಯ ವ್ಯಾಪ್ತಿಗೆ ತಂದಿದ್ದ ಆರು ರಾಜಕೀಯ ಪಕ್ಷಗಳು ಸಂಗ್ರಹಿಸಿದ ದೇಣಿಗೆ ಬಗ್ಗೆ ಆರ್ ಟಿಐ ಅರ್ಜಿದಾರರೊಬ್ಬರು ಮಾಡಿದ ಮನವಿ ಬಗ್ಗೆ ವಿವಾದಾತ್ಮಕವಾಗಬಲ್ಲ ಈ ಆದೇಶವನ್ನು ಚುನಾವಣಾ ಆಯೋಗ ನೀಡಿತು.  ‘ಕೋರಲಾದ ಮಾಹಿತಿ ಆಯೋಗದಲ್ಲಿ ಲಭ್ಯವಿಲ್ಲ. ಇದು ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟದ್ದಾಗಿದ್ದು, ಅವರು ಆರ್ ಟಿಐ ವ್ಯಾಪ್ತಿಯಿಂದ ಹೊರಗಿವೆ. ಅವುಗಳು ೨೦೧೭-೧೮ರ ವಿತ್ತ ವರ್ಷದಲ್ಲಿ ಚುನಾವಣಾ ಬಾಂಡ್ ಗಳ ಮೂಲಕ ಸಂಗ್ರಹಿಸಿದ ದೇಣಿಗೆಯ ವಿವರಗಳನ್ನು ಸಲ್ಲಿಸಬಹುದಾಗಿದ್ದು ಅದಕ್ಕೆ ೨೦೧೮ರ ಸೆಪ್ಟೆಂಬರ್ ೩೦ರ ವರೆಗೆ ಗಡುವು ಇದೆ ಎಂದು ಚುನಾವಣಾ ಆಯೋಗವು ಆರ್‌ಟಿಐ ಅರ್ಜಿದಾರನ ಅರ್ಜಿಯನ್ನು ಇತ್ಯರ್ಥ ಪಡಿಸಿದ ತನ್ನ ಆದೇಶದಲ್ಲಿ ತಿಳಿಸಿದೆ.  ಪುಣೆ ಮೂಲದ ವಿಹಾರ್ ಧ್ರುವ ಅವರು ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಎನ್ ಸಿಪಿ, ಸಿಪಿಐ ಮತ್ತು ಸಿಪಿಐ(ಎಂ) ಈ ಆರು ರಾಷ್ಟ್ರೀಯ ಪಕ್ಷಗಳು ಮತ್ತು ನೂತನ ಚುನಾವಣಾ ಬಾಂಡ್ ಮೂಲಕ ರಾಷ್ಟ್ರೀಯ ಪಕ್ಷಗಳ ಪಟ್ಟಿಗೆ ಸೇರ್ಪಡೆಯಾಗಿರುವ ಸಮಾಜವಾದಿ ಪಕ್ಷ ಸಂಗ್ರಹಿಸಿದ ದೇಣಿಗೆಯ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೋರಿದ್ದರು.  ಚುನಾವಣಾ ಆಯೋಗದಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರಿಯಾಗಿರುವ ಹಿರಿಯ ಪ್ರಿನ್ಸಿಪಲ್ ಕಾರ್‍ಯದರ್ಶಿ ಕೆ.ಎಫ್. ವಿಲ್ಫ್ರೆಡ್ ಅವರು ತಮ್ಮ ಆದೇಶದಲ್ಲಿ ತಾವು ಸಿಪಿಐಒ ಅವರು ತಳೆದ ಅಭಿಪ್ರಾಯವನ್ನು ಒಪ್ಪುವುದಾಗಿ ಆದೇಶದಲ್ಲಿ ಬರೆದರು.  ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಎನ್ ಸಿಪಿ, ಸಿಪಿಐ ಮತ್ತು ಸಿಪಿಐ(ಎಂ) ಈ ಆರು ರಾಷ್ಟ್ರೀಯ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ ಎಂದು ಕೇಂದ್ರೀಯ ಮಾಹಿತಿ ಆಯೋಗದ ಪೂರ್ಣ ಪೀಠವು ಈ ಪಕ್ಷಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೋರಿದ್ದ ಅರ್ಜಿದಾರರ ಅರ್ಜಿಯನ್ನು ಇತ್ಯರ್ಥ ಪಡಿಸುತ್ತಾ ೨೦೧೩ರ ಜೂನ್ ೩ರಂದು ತೀರ್ಪು ನೀಡಿತ್ತು. ೨೦೧೬ರ ಸೆಪ್ಟೆಂಬರ್ ತಿಂಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನೂ ರಾಷ್ಟ್ರೀಯ ಪಕ್ಷವಾಗಿ ಮಾನ್ಯ ಮಾಡಲಾಗಿದೆ. ಕೇಂದ್ರೀಯ ಮಾಹಿತಿ ಆಯೋಗದ ಪೂರ್ಣಪೀಠದ ಈ ಆದೇಶವನ್ನು ಯಾವುದೇ ಉನ್ನತ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿಲ್ಲ. ಆದರೆ ರಾಜಕೀಯ ಪಕ್ಷಗಳು ಕೇಂದ್ರೀಯ ಮಾಹಿತಿ ಆಯೋಗದ ನಿರ್ದೇಶನದ ಪ್ರಕಾರ ಮಾಹಿತಿ ಹಕ್ಕು ಕಾಯ್ದೆಯ ಅಡಿ ಬಂದ ಅರ್ಜಿಗಳಿಗೆ ಉತ್ತರ ನೀಡಲು ನಿರಾಕರಿಸಿವೆ. ಹಲವಾರು ಮಂದಿ ಮಾಹಿತಿ ಹಕ್ಕು ಕಾರ್‍ಯಕರ್ತರು ಸಿಐಸಿ ಆದೇಶವನ್ನು ರಾಜಕೀಯ ಪಕ್ಷಗಳು ಪಾಲಿಸುತ್ತಿಲ್ಲ ಎಂಬ ನೆಲೆಯಲ್ಲಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ವಿಷಯ ವಿಚಾರಣೆಗೆ ಬಾಕಿ ಉಳಿದಿದೆ.  ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಕೇಂದ್ರೀಯ ಮಾಹಿತಿ ಆಯೋಗವು ಏಕೈಕ ಅಂತಿಮ ಮೇಲ್ಮನವಿ ಪ್ರಾಧಿಕಾರಿಯಾಗಿದ್ದು ಯಾವುದಾದರೂ ಸಂಘಟನೆಯು ಮಾಹಿತಿ ಹಕ್ಕು ಕಾಯ್ದೆಯ ಮಾನದಂಡಗಳ ಪ್ರಕಾರ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆಯೇ ಎಂದು ನಿರ್ಧರಿಸುವ ಮತ್ತು ಘೋಷಿಸುವ ಅಧಿಕಾರವನ್ನು ಹೊಂದಿದೆ.  ಆರು ರಾಜಕೀಯ ಪಕ್ಷಗಳು ಸಾರ್ವಜನಿಕ ಪ್ರಾಧಿಕಾರಗಳು ಎಂಬುದಾಗಿ ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ)  ಘೋಷಿಸಿದಾಗ, ಈ ಸಿಐಸಿ ಆದೇಶವನ್ನು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ಗಳು ರದ್ದುಪಡಿಸದ ವಿನಃ ಚುನಾವಣಾ ಆಯೋಗವು ಅದಕ್ಕೆ ವ್ಯತಿರಿಕ್ತವಾದ ನಿಲುವು ತಳೆಯುವಂತಿಲ್ಲ, ಹೀಗಾಗಿ ಚುನಾವಣಾ ಆಯೋಗದ ಈ ಆದೇಶಕ್ಕೆ ಯಾವುದೇ ಮಾನ್ಯತೆಯೂ ಇಲ್ಲ ಎಂದು ಮಾಜಿ ಮುಖ್ಯ ಮಾಹಿತಿ ಆಯುಕ್ತ ಎ.ಎನ್. ತಿವಾರಿ ಹೇಳಿದರು. ಚುನಾವಣಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿಯು ಈ ಆದೇಶ ನೀಡುವಾಗ ತನ್ನ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಖ್ಯಾತ ಆರ್ ಟಿಐ ಕಾರ್‍ಯಕರ್ತ ವೆಂಕಟೇಶ ನಾಯಕ್ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಪಾಲಿಸದೇ ಇದ್ದರೂ, ಆರು ರಾಷ್ಟ್ರೀಯ ಪಕ್ಷಗಳನ್ನು ಆರ್ ಟಿಐ ವ್ಯಾಪ್ತಿಗೆ ತಂದ ೨೦೧೩ರ ಜೂನ್ ತಿಂಗಳ ಸಿಐಸಿ ಆದೇಶವು ಊರ್ಜಿತದಲ್ಲೇ ಇದೆ. ಅದನ್ನು ಯಾವುದೇ ನ್ಯಾಯಾಲಯ ರದ್ದು ಪಡಿಸಿಲ್ಲ ಅಥವಾ ಅದಕ್ಕೆ ತಡೆಯಾಜ್ಞೆಯನ್ನೂ ನೀಡಿಲ್ಲ. ಆದ್ದರಿಂದ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಸಂಬಂಧ ಪಟ್ಟಂತೆ ಅವು ಮಾಹಿತಿ ಹಕ್ಕು ಕಾಯ್ದೆಗೆ ಒಳಪಡುತ್ತವೆ ಎಂದು ನಾಯಕ್ ಹೇಳಿದರು. ಭಾರತದ ಚುನಾವಣಾ ಆಯೋಗದ ಬಳಿ ಇರುವ ರಾಜ್ಯ ಹಾಗೂ ರಾಷ್ಟ್ರೀಯ ಪಕ್ಷಗಳ ಎಲ್ಲ ಮಾಹಿತಿ ಕೂಡಾ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ. ಚುನಾವಣಾ ಆಯೋಗದ ಸಿಪಿಐಒ ಅವರು ರಾಜಕೀಯ ಪಕ್ಷಗಳು ಆರ್ ಟಿಐ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ನಿಲುವು ತಳೆದು ಮಾಹಿತಿ ನಿರಾಕರಿಸಲು ಸಾಧ್ಯವೇ ಇಲ್ಲ ಎಂದು ಅವರು ನುಡಿದರು. ಆದೇಶದಲ್ಲಿನ ವಿವಾದಾತ್ಮಕ ಹೇಳಿಕೆ ಬಗ್ಗೆ ದೂರವಾಣಿ ಮೂಲಕ ವಿಚಾರಿಸಿದಾಗ ವಿಲ್ಫ್ರೆಡ್ ಅವರು, ಎಲ್ಲ ರಾಜಕೀಯ ಪಕ್ಷಗಳು ಆರ್ ಟಿಐ ಅಡಿ ಬರುವುದಿಲ್ಲ ಎಂಬುದು ತಮ್ಮ ಅರ್ಥವಾಗಿತ್ತು ಎಂದು ಹೇಳಿದರು. ಆದರೆ ಆರ್ ಟಿಐ ಅರ್ಜಿಯು ಆರ್ ಟಿಐ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಆರು ರಾಜಕೀಯ ಪಕ್ಷಗಳಿಗೆ ಸಂಬಂಧ ಪಟ್ಟದ್ದಾಗಿತ್ತು ಎಂದಾಗ ಅವರು ಯಾವುದೇ ವಿವರಣೆಯನ್ನೂ ನೀಡಲಿಲ್ಲ. ಏನಿದ್ದರೂ ಚುನಾವಣಾ ಬಾಂಡ್ ಗಳಿಗೆ ಸಂಬಂಧ ಪಟ್ಟ ಪ್ರಶ್ನೆಯನ್ನು ಮಾತ್ರ ಅವರು ಹಣಕಾಸು ಸಚಿವಾಲಯಕ್ಕೆ ರವಾನಿಸಿದ್ದರು.

2018: ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಗಳ ಸಂಚುಕೋರ, ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಈಗ ಕಾನೂನು ಕ್ರಮ ಜರುಗಿಸುವುದು ರಾಜಕೀಯವಾಗಿ ಭಾರಿ ತುಟ್ಟಿಯಾದೀತು ಎಂದು ಮಾಜಿ ಐಎಸ್ ಐ ಮುಖ್ಯಸ್ಥ ಜನರಲ್ ಅಸದ್ ದುರ್ರಾನಿ ತಮ್ಮ ಪುಸ್ತಕ ಒಂದರಲ್ಲಿ ಬರೆದರು. ಮಾಜಿ - ರಾ ಮುಖ್ಯಸ್ಥ ಎಎಸ್ ದುಲತ್ ಅವರ ಜೊತೆಗೆ ದುರ್ರಾನಿ ಅವರು ಈ ಪುಸ್ತಕವನ್ನು ಬರೆದರು. ‘ನೀವು ಸಯೀದ್ ವಿರುದ್ಧ ಕಾನೂನು ಕ್ರಮ ಜರುಗಿಸಿದರೆ ಅದಕ್ಕೆ ಬರುವ ಮೊದಲ ಪ್ರತಿಕ್ರಿಯೆ ’ಇದು ಭಾರತದ ಪರವಾದ ಕ್ರಮ, ನೀವು ಸಯೀದ್ ಬೇಟೆಯಾಡುತ್ತಿದ್ದೀರಿ, ಆತ ಮುಗ್ಧ ಇತ್ಯಾದಿ. ಈಗ, ಇದು ರಾಜಕೀಯವಾಗಿ ಅತ್ಯಂತ ತುಟ್ಟಿಯಾದೀತು ಎಂದು ಅವರು ಹೇಳಿದರು.  ‘ಸ್ಪೈ ಕ್ರಾನಿಕಲ್ಸ್: ರಾ, ಐಎಸ್ ಐ ಅಂಡ್ ದಿ ಇಲ್ಯೂಷನ್ ಆಫ್ ಪೀಸ್ ಶೀರ್ಷಿಕೆಯ ಪುಸ್ತಕವು ದುರ್ರಾನಿ ಮತ್ತು ದುಲತ್ ನಡುವಣ ಸಂಭಾಷಣೆಗಳನ್ನು ಆಧರಿಸಿದ್ದು, ಉಭಯರೂ ಸರ್ಜಿಕಲ್ ದಾಳಿ, ಕುಲಭೂಷಣ್  ಜಾಧವ್, ನವಾಜ್ ಶರೀಫ್, ಕಾಶ್ಮೀರ ಮತ್ತು ಬುರ್‍ಹಾನ್ ವನಿ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿದೆ.  ಪಾಕಿಸ್ತಾನಕ್ಕೆ ಸಯೀದ್ ’ಮೌಲ್ಯ ಬಗ್ಗೆ ದುರ್ರಾನಿ ಅವರನ್ನು ದುಲತ್ ಅವರು ಪ್ರಶ್ನಿಸಿದಾಗ, ದುರ್ರಾನಿ ’ಆತನನ್ನು ಕಾನೂನು ಕ್ರಮಕ್ಕೆ ಒಳಪಡಿಸುವುದು ಅತ್ಯಂತ ತುಟ್ಟಿಯಾದೀತು ಎಂದು ಉತ್ತರಿಸಿದರು.  ಭಯೋತ್ಪಾದಕ ಚಟುವಟಿಕೆಗಳಲ್ಲಿನ ಪಾತ್ರದ ಹಿನ್ನೆಲೆಯಲ್ಲಿ ತಲೆಗೆ ಅಮೆರಿಕದಿಂದ ೧೦೦ ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲ್ಪಟ್ಟಿರುವ ಸಯೀದನನ್ನು ಕಳೆದ ವರ್ಷ ಜನವರಿಯಿಂದ ನವೆಂಬರ್ ವರೆಗೆ ಗೃಹ ಬಂಧನದಲ್ಲಿ ಇಡಲಾಗಿತ್ತು.  ಜಮಾತ್ -ಉದ್-ದವಾ ಸಂಘಟನೆಯು ನಿಷೇಧಿತ ಲಷ್ಕರ್-ಇ-ತೊಯಿಬಾ (ಎಲ್ ಇಟಿ) ಸಂಘಟನೆಯ ಮುಂಚೂಣಿ ಸಂಘಟನೆ ಎಂದು ನಂಬಲಾಗಿದೆ. ೧೬೬ ಮಂದಿಯನ್ನು ಬಲಿಪಡೆದ ೨೦೦೮ರ ಮುಂಬೈ ಭಯೋತ್ಪಾದಕ ದಾಳಿಯ ಹೊಣೆಗಾರಿಕೆಯನ್ನು ಲಷ್ಕರ್-ಇ-ತೊಯಿಬಾ ಹೊತ್ತುಕೊಂಡಿತ್ತು. ಮುಂಬೈ ಭಯೋತ್ಪಾದಕ ದಾಳಿಗಳ ಬಳಿಕ ಅಮೆರಿಕ ಮತ್ತು ವಿಶ್ವಸಂಸ್ಥೆ ಸಯೀದನನ್ನು ಜಾಗತಿಕ ಭಯೋತ್ಪಾದಕ ಎಂಬುದಾಗಿ ಘೋಷಿಸಿದ್ದು, ೨೦೦೮ರ ನವೆಂಬರ್ ತಿಂಗಳಲ್ಲಿ ಆತನನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು. ಆದರೆ ಕೆಲವು ತಿಂಗಳುಗಳ ಬಳಿಕ ನ್ಯಾಯಾಲಯ ಆತನನ್ನು ಬಿಡುಗಡೆ ಮಾಡಿತ್ತು. ‘ಆತನ ವಿರುದ್ಧ ಯಾವುದೇ ಹೊಸ ಆರೋಪ ಇಲ್ಲದೇ ಇದ್ದರೂ ಆತನನ್ನು ನ್ಯಾಯಾಲಯಗಳಿಗೆ ಒಯ್ಯಲಾಗಿತ್ತು. ಆತನನ್ನು ಈಗಲೂ ಬಂಧಿಸಬಹುದು. ಆದರೆ ಆತ ಆರು ತಿಂಗಳಲ್ಲಿ ಹೊರಬರುತ್ತಾನೆ ಎಂದು ಸಯೀದ್ ಬಂಧನದ ಬಗ್ಗೆ ದುರ್ರಾನಿ ಬರೆದರು.  ಹಾರ್ಪರ್ ಕೊಲ್ಲಿನ್ ಇಂಡಿಯಾ ಪುಸ್ತಕವನ್ನು ಪ್ರಕಟಿಸಿದೆ. ದುಲತ್, ದುರ್ರಾನಿ ಮತ್ತು ಪತ್ರಕರ್ತ ಆದಿತ್ಯ ಸಿನ್ಹ ಅವರ ಸಂಭಾಷಣೆ ಈ ಪುಸ್ತಕದಲ್ಲಿ ಇದೆ.  ಸಯೀದ್ ಗೃಹಬಂಧನವನ್ನು ಕೊರಿಯೋಗ್ರಾಫ್ ಮಾಡಲಾಗಿದೆಯೇ ಎಂಬ ದುಲತ್ ಅವರ ಪ್ರಶ್ನೆಗೆ ದುರ್ರಾನಿ ಅವರು, ’ಸಯೀದ್‌ಗೆ ಸಂಬಂಧಿಸಿಂತೆ ಹೊಸದೇನಿದೆ? ಏನಾದರೂ ಹೆಚ್ಚಿನ ಸಾಕ್ಷ್ಯಾಧಾರ ಲಭಿಸಿದೆಯೇ? ಹಫೀಜ್ ಸಯೀದ್ ಜೊತೆಗೆ ಏನೋ ಹೊಂದಾಣಿಕೆ ಇದೆ ಎಂದು ಯಾರಾದರೂ ನಿರೀಕ್ಷಿಸಬಹುದು ಎಂದು ಉತ್ತರಿಸಿದರು. ಸಯೀದ್ ಗೃಹ ಬಂಧನದಿಂದ ಭಾರತ-ಪಾಕ್ ಬಾಂಧವ್ಯದ ಮೇಲೆ ಏನಾದರೂ ಧನಾತ್ಮಕ ಪರಿಣಾಮವಿದೆಯೇ ಎಂಬ ಪ್ರಶ್ನೆಗೆ ’ಈಗಲೇ ಭಾರತ-ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಕೆಲವೇ ಕೆಲವು ಧನಾತ್ಮಕ ಅಂಶಗಳಿವೆ. ಆದರೆ ನಿರಂತರ ಒತ್ತಡದಲ್ಲಿ ಇರುವ ರಾಷ್ಟ್ರಕ್ಕೆ ಇದು ಉಸಿರಾಡುವಷ್ಟು ಸಮಯ ಕೊಡಬಹುದಷ್ಟೆ ಎಂದು ದುರ್ರಾನಿ ಉತ್ತರ ನೀಡಿದರು.  ಮಾಧ್ಯಮ ಒಂದಕ್ಕೆ ಮೂರು ದಿನಗಳ ಹಿಂದೆ ನೀಡಿದ್ದ ಸಂದರ್ಶನ ಒಂದರಲ್ಲಿ ಐಎಸ್ ಐ ಮುಖ್ಯಸ್ಥ ’ಕಾಶ್ಮೀರದ ಹಾಲಿ ಅಶಾಂತಿಯಲ್ಲಿ ಪಾಕಿಸ್ತಾನವು ಸಕ್ರಿಯವಾಗಿ ಶಾಮೀಲಾಗಿದೆ ಎಂದು ಸುಳಿವು ನೀಡಿದ್ದರು. ’ಪಾಕಿಸ್ತಾನದಲ್ಲಿ ಕೆಲವರು ಕಾಶ್ಮೀರದ ಮೇಲಿನ ಭಾರತದ ಹಿಡಿತ ಸಡಿಲವಾಗುವ ನಿರೀಕ್ಷೆಯೊಂದಿಗೆ ಕಾಯುತ್ತಿರುವುದಕ್ಕೆ ಕಾರಣಗಳಿರಬಹುದು. ಕಾಶ್ಮೀರವು ಉರಿಯತ್ತಿರುವಾಗ ಯಾರೊಬ್ಬರೂ ಪಿಟೀಲು ಬಾರಿಸುತ್ತಾ ಕೂರಲಾಗದು ಎಂದು ಅವರು ಹೇಳಿದರು. ದುರ್ರಾನಿ ಅವರು ಭಾರತೀಯನ ಜೊತೆ ಸೇರಿ ಪುಸ್ತಕ ಬರೆದಿರುವುದಕ್ಕೆ ಕೆಂಡಾಮಂಡಲವಾಗಿರುವ ಪಾಕಿಸ್ತಾನಿ ಸೇನೆಯು, ದುರ್ರಾನಿ ಅವರು ಸೇನಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿದ್ದು, ಪುಸ್ತಕದ ಬಗ್ಗೆ ಸೋಮವಾರ ತನ್ನ ಮುಂದೆ ಸ್ಪಷ್ಟನೆ ನೀಡುವಂತೆ ಸೂಚಿಸಿ ಸಮನ್ಸ್ ಕಳುಹಿಸಿತು.  ತಮ್ಮ ವಿರುದ್ಧದ ಆರೋಪಗಳಿಂದ ತಾನು ಬೇಸರಗೊಂಡಿರುವುದಾಗಿ ದುರ್ರಾನಿ ಟ್ವೀಟ್ ಮಾಡಿದ್ದಾರೆ.  ’ನನ್ನ ಜನರೇ ನನ್ನ ವಿರುದ್ಧ ಮಾಡಿರುವ ಆರೋಪಗಳಿಂದ ನಾನು ಬೇಸರಗೊಂಡಿದ್ದೇನೆ. ನಾನು ನನ್ನ ಜೀವವನ್ನೇ ಅಪಾಯಕ್ಕೆ ಒಡ್ಡಿ ಪಾಕಿಸ್ತಾನದ ಸೇವೆ ಮಾಡಿದ್ದೇನೆ. ಇತರಿಗಾಗಿ ಸಾರ್ಥರಹಿತರಾಗಿ ಸೇವೆ ಮಾಡುವ ಜನರು ಎಂದಿಗೂ ಅವರಿಗೆ ಲಭಿಸಬೇಕಾದ ಗೌರವವನ್ನು ಪಡೆಯುವುದಿಲ್ಲ, ಬದಲಿಗೆ ತಮ್ಮದೇ ಲಾಭಗಳಿಗಾಗಿ ಎಲ್ಲ ತಪ್ಪುಗಳನ್ನೂ ಎಸಗುವ ಮಂದಿಯನ್ನು ದೊರೆಗಳಂತೆ ಗೌರವಿಸಲಾಗುತ್ತದೆ ಎಂದು ದುರ್ರಾನಿ ಟ್ವೀಟ್ ಮಾಡಿದರು.  ಇನ್ನೊಂದು ಟ್ವೀಟಿನಲ್ಲಿ ದುರ್ರಾನಿ ಅವರು, ಪುಸ್ತಕದಿಂದ ಬರುವ ಹಣವನ್ನು ಬಡಜನರು ಮತ್ತು ಭಯೋತ್ಪಾದನೆಯ ಸಂತ್ರಸ್ಥರಿಗಾಗಿ ತಮ್ಮೊಂದಿಗೆ ಹಲವಾರು ವರ್ಷಗಳಿಂದ ಒಡನಾಟ ಹೊಂದಿರುವ ಸರ್ಕಾರೇತರ ಸಂಸ್ಥೆಗಳ (ಎನ್ ಜಿಒ) ಮೂಲಕವಾಗಿ ಬಳಸಲಾಗುವುದೇ ವಿನಃ ತಮ್ಮ ಐಷಾರಾಮೀ ಬದುಕಿಗಾಗಿ ಅಲ್ಲ ಎಂದೂ ತಿಳಿಸಿದರು.

2018: ನವದೆಹಲಿ: ಪಾಕಿಸ್ತಾನ ಹೊರಡಿಸಿದೆ ಎನ್ನಲಾಗಿರುವ ಗಿಲ್ಗಿಟ್ -ಬಾಲ್ಟಿಸ್ಥಾನ ಕುರಿತ ಆದೇಶಕ್ಕೆ ಸಂಬಂಧಿಸಿದಂತೆ ಭಾರತದಲ್ಲಿನ ಪಾಕಿಸ್ತಾನಿ ಉಪ ಹೈಕಮೀಷನರ್ ಸೈಯದ್ ಹೈದರ್ ಶಾ ಅವರನ್ನು ಕರೆಸಿಕೊಂಡ ಭಾರತ, ’ಬಲಾತ್ಕಾರವಾಗಿ ಅತಿಕ್ರಮಿಸಿಕೊಂಡಿರುವ ತನ್ನ ಯಾವುದೇ ಭಾಗದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಕ್ರಮಕ್ಕೆ ಕಾನೂನುಬದ್ಧ ಅಡಿಗಟ್ಟು ಇರುವುದಿಲ್ಲ ಎಂದು ಎಚ್ಚರಿಸಿತು.  ‘ಗಿಲ್ಗಿಟ್ ಬಾಲ್ಟಿಸ್ಥಾನವೂ ಸೇರಿದಂತೆ ಇಡೀ ಜಮ್ಮು ಮತ್ತು ಕಾಶ್ಮೀರ ರಾಜ್ಯವು ೧೯೪೭ರಲ್ಲಿ ಭಾರತಕ್ಕೆ ಸೇರ್ಪಡೆಯಾಗಿರುವ ನೆಲೆಯಲ್ಲಿ ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬ ಸಂದೇಶವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದರ ಮೂಲಕ ಶಾ ಅವರಿಗೆ ನೀಡಿತು. ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಖನ್ ಅಬ್ಬಾಸಿ ಅವರು ಮೇ ೨೧ರಂದು ಗಿಲ್ಗಿಟ್- ಬಾಲ್ಟಿಸ್ಥಾನಕ್ಕೆ ಸಂಬಂಧಿಸಿದ ತನ್ನ ಆದೇಶದಲ್ಲಿ ಪ್ರದೇಶದ ವ್ಯವಹಾರಗಳನ್ನು ನಿಭಾಯಿಸಲು ಸ್ಥಳೀಯ ಮಂಡಳಿಯಿಂದ ಹೆಚ್ಚುವರಿ ಅಧಿಕಾರ ಪಡೆದಿರುವುದಾಗಿ ತಿಳಿಸಿದ್ದರು.  ಪಾಕಿಸ್ತಾನದಲ್ಲಿನ ನಾಗರಿಕ ಹಕ್ಕುಗಳ ಸಮೂಹಗಳು ಈ ಆದೇಶವನ್ನು ಟೀಕಿಸಿದ್ದವು. ಪಾಕಿಸ್ತಾನವು ಬಲಾತ್ಕಾರದಿಂದ ಅಕ್ರಮವಾಗಿ ತನ್ನ ವಶದಲ್ಲಿ ಇಟ್ಟುಕೊಂಡಿರುವ ಯಾವುದೇ ಭಾಗದ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಕ್ರಮಕ್ಕೆ ಯಾವುದೇ ಶಾಸನಬದ್ಧತೆ ಇರುವುದಿಲ್ಲ ಮತ್ತು  ಮತ್ತು ಅದು ಸಂಪೂರ್ಣವಾಗಿ ಅಸ್ವೀಕಾರಾರ್ಹ. ಬದಲಿಗೆ ಪಾಕಿಸ್ತಾನವು ತಾನು ಅಕ್ರಮವಾಗಿ ವಶಪಡಿಸಿಕೊಂಡಿರುವ ಎಲ್ಲ ಪ್ರದೇಶಗಳನ್ನು ತತ್ ಕ್ಷಣ ತೆರವು ಮಾಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿತು. ಇಂತಹ ಕ್ರಮಗಳಿಂದ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಭಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವುದನ್ನು ಮುಚ್ಚಿಡಲು ಸಾಧ್ಯವಿಲ್ಲ ಅಥವಾ ಅಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲು, ಶೋಷಿಸಲು ಮತ್ತು ಪಾಕಿಸ್ತಾನದ ಆಕ್ರಮಿತ ಭಾಗಗಳಲ್ಲಿ ವಾಸವಾಗಿರುವ ಜನರ ಸ್ವಾತಂತ್ರ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನೂ ಸಚಿವಾಲಯವು ಪಾಕಿಸ್ತಾನಿ ಉಪ ಹೈಕಮೀಷನರ್ ಅವರಿಗೆ ರವಾನಿಸಿತು.


2009: ಪಾಕಿಸ್ಥಾನದಲ್ಲಿ ಭಯೋತ್ಪಾದಕರು ಮತ್ತೆ ತಮ್ಮ ಅಟ್ಟಹಾಸ ಮೆರೆದು, ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರಿನಲ್ಲಿ ರಕ್ತದ ಕೋಡಿ ಹರಿಸಿದರು. ಶಂಕಿತ ತಾಲಿಬಾನ್ ಉಗ್ರರು, ಲಾಹೋರ್ ಪ್ರಾಂತ್ಯದ ಐಎಸ್‌ಐ ಕಚೇರಿ ಮೇಲೆ ಈದಿನ ಬೆಳಿಗ್ಗೆ ನಡೆಸಿದ ಭೀಕರ ದಾಳಿಯಲ್ಲಿ ಏಳು ಜನ ಐಎಸ್‌ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಸಿಬ್ಬಂದಿ ಸೇರಿದಂತೆ 35 ಜನ ಮೃತರಾಗಿ 100ಕ್ಕೂ ಹೆಚ್ಚು ಜನ ಗಾಯಗೊಂಡರು. ಎರಡರಿಂದ ನಾಲ್ಕರಷ್ಟಿದ್ದ ಶಸ್ತ್ರಸಜ್ಜಿತ ಉಗ್ರರು ಜನನಿಬಿಡ ರಸ್ತೆಯಲ್ಲಿದ್ದ ಐಎಸ್‌ಐ ಪ್ರಾಂತೀಯ ಕಚೇರಿಯ ಮೇಲೆ ದಾಳಿ ನಡೆಸಲೆಂದೇ ಸಜ್ಜಾಗಿ ಬಂದಿದ್ದರು. ಶಕ್ತಿಶಾಲಿ ಸ್ಫೋಟಕಗಳು ತುಂಬಿದ್ದ ಕಾರನ್ನು ಐಎಸ್‌ಐ ಕಚೇರಿಯೊಳಗೆ ನುಗ್ಗಿಸಲು ಹವಣಿಸಿದರು. ಆದರೆ, ಐಎಸ್‌ಐ ಕಚೇರಿಯ ಭದ್ರತಾ ಸಿಬ್ಬಂದಿ ಅವರನ್ನು ತಡೆಯಲು ಯತ್ನಿಸಿದಾಗ ವಾಹನದಿಂದ ಕೆಳಗಿಳಿದ ಉಗ್ರರು ಭದ್ರತಾ ಸಿಬ್ಬಂದಿಯತ್ತ ಗುಂಡು ಹಾರಿಸುತ್ತಾ ವಾಹನ ಸ್ಫೋಟಿಸಿದರು.

2009: ವಿಶ್ವದ 17 ರಾಷ್ಟ್ರಗಳ 22 ಹೊಸ ಮೀಸಲು ವನ್ಯಜೀವಿ ಅಭಯಾರಣ್ಯಗಳನ್ನು ಗುರುತಿಸಿದ ಯುನೆಸ್ಕೊ, ತನ್ನ ವಿಶ್ವವ್ಯಾಪಿ ಜೀವವೈವಿಧ್ಯ ಮೀಸಲು ಅರಣ್ಯದ ಪಟ್ಟಿಯಲ್ಲಿ ಭಾರತದ ಮೂರು ತಾಣಗಳಿಗೆ ಸ್ಥಾನ ಕಲ್ಪಿಸಿತು. ಅದರಲ್ಲಿ ಒರಿಸ್ಸಾದ ಸಿಂಪ್ಲಿಪಾಲ್, ಮೇಘಾಲಯದ ನಾರ್‌ಕೆಕ್, ಮಧ್ಯಪ್ರದೇಶದ ಪಂಚ್‌ಮರ್ಲಿ ಮೀಸಲು ಅರಣ್ಯಗಳು ಹೊಸದಾಗಿ ಸೇರ್ಪಡೆಯಾದವು. ಜಾಗತಿಕ ಜೀವ ಜಗತ್ತಿನ ಮಾಹಿತಿ ಸಂಪರ್ಕ ಕಲ್ಪಿಸುತ್ತಿರುವ ಯುನೆಸ್ಕೊ 107 ರಾಷ್ಟ್ರಗಳ ಮೀಸಲು ಅಭಯಾರಣ್ಯಗಳ ಮಾಹಿತಿ ಹೊಂದಿದೆ.

2009: ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಭೂ ಕುಸಿತದ ಭಗ್ನಾವಶೇಷದಿಂದ ಇನ್ನೂ ಐದು ಶವಗಳನ್ನು ಹೊರತೆಗೆಯಲಾಯಿತು., ಇದರೊಂದಿಗೆ ಪಶ್ಚಿಮ ಬಂಗಾಳದ ಚಂಡಮಾರುತದಲ್ಲಿ ಸತ್ತವರ ಸಂಖ್ಯೆ 86ಕ್ಕೆ ಏರಿದಂತಾಯಿತು.

2009: ಮುಂಬೈ ದಾಳಿಯ (26/11) ಬಂಧಿತ ಆರೋಪಿ ಅಜ್ಮಲ್ ಕಸಾಬ್‌ನ ವಿಚಾರಣೆಯನ್ನು ನಡೆಸಿದ ವಿಶೇಷ ನ್ಯಾಯಾಲಯವು ಪ್ರತ್ಯಕ್ಷ ಸ್ವತಂತ್ರ ಸಾಕ್ಷಿ ಎಂಬ ನೆಲೆಯಲ್ಲಿ ನಾಗರಿಕರೊಬ್ಬರ ಸಾಕ್ಷ್ಯವನ್ನು ದಾಖಲಿಸಿಕೊಂಡಿತು. ಕಸಾಬ್‌ನನ್ನು ಗುರುತಿಸುವಲ್ಲಿ ಪ್ರಸ್ತುತ ಸ್ವತಂತ್ರ ಸಾಕ್ಷಿದಾರ ಯಶಸ್ವಿಯಾದರು. ಹೊಟೇಲ್ ತಾಜ್‌ನಲ್ಲಿ ನೌಕರನಾಗಿದ್ದ ಭರತ್ ತಾಮೋರ್ ಎಂಬವರೇ ಈ ಸಾಕ್ಷಿದಾರ. ನವೆಂಬರ್ 26ರಂದು ದೋಣಿಯ ಮೂಲಕ ನಗರದ ಸಮುದ್ರ ತೀರದಲ್ಲಿರುವ ಮೀನುಗಾರರ ಕಾಲೋನಿಯಲ್ಲಿ ಬಂದಿಳಿದ 10 ಬಂಧೂಕುಧಾರಿ ವ್ಯಕ್ತಿಗಳಲ್ಲಿ ಕಸಾಬ್ ಕೂಡ ಇದ್ದ ಎಂಬುದಾಗಿ ಸಾಕ್ಷಿದಾರ ಗುರುತಿಸಿದರು. ಸಾಕ್ಷಿದಾರ ಸಾಮಾನ್ಯ ನಾಗರಿಕನಾಗಿರುವುದರಿಂದ ಪ್ರಸ್ತುತ ಪುರಾವೆಗಳು ಅತ್ಯಂತ ಮಹತ್ವದ್ದು. ಈ ವ್ಯಕ್ತಿ ಪ್ರಥಮ ಪ್ರತ್ಯಕ್ಷ ಸಾಕ್ಷ್ಯದಾರ ಎಂಬುದಾಗಿ ವಿಶೇಷ ನ್ಯಾಯಾಲಯ ದಾಖಲಿಸಿತು.. ಕಸಾಬ್‌ನನ್ನೊಳಗೊಂಡ ಉಗ್ರರ ತಂಡವನ್ನು ದಾಳಿ ನಡೆಸುವ ಮುನ್ನ ಈ ವ್ಯಕ್ತಿ ನೋಡಿದ್ದರು. ರಾತ್ರಿ 9.15ರ ವೇಳೆಗೆ ನೌಕರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸರ್ಕಾರಿ ಅಭಿಯೋಜಕರು ಉಲ್ಲೇಖಿಸಿದ್ದರು. ದುಷ್ಕರ್ಮಿಗಳಲ್ಲಿ ಇಬ್ಬರು ಭರತ್ ತಾಮೋರ್‌ನೊಂದಿಗೆ ವಾಗ್ವಾದ ನಡೆಸಿದ್ದರು. ತಾಮೋರ್ ಶಸ್ತ್ರಧಾರಿ ತಂಡದವರಲ್ಲಿ ನೀವ್ಯಾರು ಎಂದು ವಿಚಾರಿಸಿದ್ದೇ ಮಾತಿನ ಚಕಮಕಿಗೆ ಕಾರಣ ಎಂದು ನ್ಯಾಯಾಲಯದ ಕಟಕಟೆಯಲ್ಲಿ ಅವರು ಹೇಳಿದರು. ದೋಣಿಯಲ್ಲಿ ಬಂದ 10 ಮಂದಿಯಲ್ಲಿ 8 ಜನರು ಕೆಳಕ್ಕಿಳಿದು ಸಾಗಿದರೆ, ಉಳಿದಿಬ್ಬರು ನಾರಿಮನ್ ಪಾಯಿಂಟ್ ಕಡೆಗೆ ದೋಣಿ ಚಲಾಯಿಸಿದ್ದರು.

2009: ಇಲಿಯೊಂದು ಕಣ್ಣಿಗೆ ಬಿದ್ದಾಕ್ಷಣ ನಿಂತಲ್ಲೇ ಕುಪ್ಪಳಿಸಿ, ಚೀರಾಡಿ, ದಿಗಿಲು ಬೀಳುವವರೇ ಹೆಚ್ಚು. ಆದರೆ, ಅಷ್ಟೇನೂ ದಿಗಿಲು ಬೀಳಬೇಡಿ; ಮನುಷ್ಯರಿಗೂ ಇಲಿಗಳಿಗೂ ಜೈವಿಕವಾಗಿ ಅಷ್ಟೇನೂ ವ್ಯತ್ಯಾಸವಿಲ್ಲ ಎಂದು ವಿಜ್ಞಾನಿಗಳು ಬಹಿರಂಗ ಪಡಿಸಿದರು. ಇಲಿಯ ವಂಶವಾಹಿ ನಕ್ಷೆ ರಹಸ್ಯವನ್ನು ಇದೀಗ ಸಂಪೂರ್ಣ ಬಿಡಿಸುವಲ್ಲಿ ಯಶಸ್ವಿಯಾಗಿರುವ ಬ್ರಿಟನ್, ಅಮೆರಿಕ, ಸ್ವೀಡನ್ ಸಂಶೋಧಕರ ತಂಡ ಈ ಮಾಹಿತಿ ಹೊರಗೆಡಹಿತು. 'ಮನುಷ್ಯರು ಮತ್ತು ಇಲಿಗಳ ವಂಶವಾಹಿ ನಕ್ಷೆಯಲ್ಲಿ ಶೇ 20ರಷ್ಟು ಮಾತ್ರ ವ್ಯತ್ಯಾಸವಿದ್ದರೆ, ಶೇ 80ರಷ್ಟು ಸಾಮ್ಯತೆ ಇದೆ. ಇದು ಖಚಿತವಾಗಿರುವುದರಿಂದ ಮನುಷ್ಯರನ್ನು ಕಾಡುವ ರೋಗಗಳಿಗೆ ಮದ್ದು ಕಂಡುಹಿಡಿದ ಸಂದರ್ಭದಲ್ಲಿ ಇಲಿಗಳ ಮೇಲೆ ಅದನ್ನು ಪ್ರಯೋಗಿಸಬಹುದಾದ ಸಾಧ್ಯತೆ ಇನ್ನಷ್ಟು ಹೆಚ್ಚಾಗಿದೆ' ಎಂದು ಸಂಶೋಧಕರು ವಿವರಿಸಿದರು. ಇಲಿಗಳ ವಂಶವಾಹಿ ನಕ್ಷೆ 90 ದಶಲಕ್ಷ ವರ್ಷಗಳ ವಿಕಾಸ ಅವಧಿಯಲ್ಲಿ ಸಾಕಷ್ಟು ಬದಲಾಗಿದ್ದು, ಕೆಲವು ತಳಿಗುಣಗಳು ಪ್ರಸ್ತುತ ಕ್ಷಿಪ್ರವಾಗಿ ವಿಕಾಸವಾಗುತ್ತಿವೆ ಎಂದೂ ಅವರು ಪ್ರತಿಪಾದಿಸಿದರು. ಸಸ್ತನಿ ವರ್ಗದ ಪ್ರಾಣಿಗಳ ಸಾಮಾನ್ಯ ವಂಶವಾಹಿ ಪತ್ತೆ ಹಚ್ಚಲು, ಇಲಿ- ಮನುಷ್ಯರ ಮಧ್ಯೆ ವ್ಯತ್ಯಾಸಕ್ಕೆ ಕಾರಣವಾದ ವಂಶವಾಹಿಗಳ ಜಾಡು ಹಿಡಿಯಲು ತಮ್ಮ ಅನ್ವೇಷಣೆ ರಹದಾರಿ ಒದಗಿಸುತ್ತದೆ ಎಂಬ ಆಶಾಭಾವದ ಮಿಂಚು ಕೂಡ ವಿಜ್ಞಾನಿಗಳಲ್ಲಿ ಮೂಡಿತು.

2009: ಅಮೆರಿಕದ ಫೋನಿಕ್ಸ್ನಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರೆಡ್ ಮಿಲ್‌ನಲ್ಲಿ (ನಡಿಗೆ ಯಂತ್ರ) ಕತ್ತು ಸಿಕ್ಕಿಕೊಂಡು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಮಾಜಿ ಹೇವಿ ವೇಟ್‌ಲಿಫ್ಟಿಂಗ್ ಚಾಂಪಿಯನ್ ಮೈಕ್ ಟೈಸನ್ ಪುತ್ರಿ ಎಕ್ಸೋಡಸ್ ಟೈಸನ್ (4) ಈದಿನ ಕೊನೆಯುಸಿರೆಳೆದಳು ಎಂದು ಪೊಲೀಸರು ತಿಳಿಸಿದರು. 7 ವರ್ಷದ ಅಣ್ಣನೊಂದಿಗೆ ಆಟವಾಡುತ್ತಿದ್ದಾಗ ಟ್ರೆಡ್ ಮಿಲ್‌ನ ಕೇಬಲ್‌ಗೆ ಕತ್ತು ಸಿಲುಕಿಕೊಂಡು ತೊಂದರೆಗೊಳಗಾದ ಎಕ್ಸೋಡಸ್‌ಳನ್ನು ಎರಡು ದಿನ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವಘಡ ಸಂಭವಿಸಿದಾಗ ಮೈಕ್ ಟೈಸನ್ ಮನೆಯಲ್ಲಿ ಇರಲಿಲ್ಲ.

2008: ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ 13ನೇ ವಿಧಾನಸಭೆ ರಚನೆಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಹಿಂದಕ್ಕೆ ಪಡೆಯುವಂತೆ ಕೋರಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದರು. ಒಟ್ಟು 224 ಮಂದಿ ಶಾಸಕರ ಆಯ್ಕೆ ಕುರಿತು ಚುನಾವಣಾ ಆಯೋಗ ರಾಜ್ಯಪತ್ರ (ಗೆಜೆಟ್) ಪ್ರಕಟಿಸಿ, ಅದರ ಪ್ರತಿಯೊಂದನ್ನು ರಾಜ್ಯಪಾಲರಿಗೆ ಸಲ್ಲಿಸಿತು.

2008: ಟೆಂಪೊ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ, ಗುಬ್ಬಿ ಶಾಸಕರನ್ನು ಅಭಿನಂದಿಸಲು ಹೋಗಿದ್ದ ನಾಲ್ವರು ಜೆಡಿಎಸ್ ಕಾರ್ಯಕರ್ತರು ಮೃತರಾಗಿ, ಇತರ 14 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ತುಮಕೂರು ನಗರ ಸಮೀಪದ ಮಲ್ಲಸಂದ್ರದ ಹಾಲಿನ ಡೇರಿ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಂಭವಿಸಿತು.

2008: ಜರ್ಮನ್ ಪ್ರವಾಸದಲ್ಲಿದ್ದ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಐತಿಹಾಸಿಕ ಬರ್ಲಿನ್ ಯುದ್ಧ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಎರಡನೇ ಮಹಾ ಯುದ್ಧದಲ್ಲಿ ಮಡಿದ ಭಾರತೀಯ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಎರಡನೇ ಮಹಾಯುದ್ಧದಲ್ಲಿ ಮಡಿದ 50 ಭಾರತೀಯರನ್ನು ಇಲ್ಲಿ ಸಮಾಧಿ ಮಾಡಲಾಗಿತ್ತು.

2008: ತಮಿಳು ಉಗ್ರಗಾಮಿಗಳ ನೆಲೆಗಳ ಮೇಲೆ ಶ್ರೀಲಂಕಾ ವಾಯುಪಡೆ ನಡೆಸಿದ ದಾಳಿಯಲ್ಲಿ 36 ಮಂದಿ ಬಂಡುಕೋರರು ಹತರಾದರು. ಸ್ಫೋಟಕ ತಯಾರಿಕೆಯಲ್ಲಿ ನಿಷ್ಣಾತನಾಗಿದ್ದ ಡೋರಾ ಎಂಬ ಕುಖ್ಯಾತ ಉಗ್ರ ಈ ದಾಳಿಯಲ್ಲಿ ಮೃತನಾದ ಎಂದು ವರದಿಗಳು ತಿಳಿಸಿದವು.

2008: ಪ್ರಸಿದ್ಧ ಪರ್ವತಾರೋಹಿ ಹಾಗೂ ರಾಜತಾಂತ್ರಿಕ ದಿವಂಗತ ಸರ್ ಎಡ್ಮಂಡ್ ಹಿಲರಿ ಅವರಿಗೆ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ಮೆಲ್ಬೋರ್ನಿನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವಾಣಿಜ್ಯ ಸಚಿವ ಕಮಲ್ ನಾಥ್ ಅವರು ಸರ್ ಎಡ್ಮಂಡ್ ಹಿಲರಿ ಅವರ ಪತ್ನಿ ಜೂನ್ ಹಿಲರಿ ಅವರಿಗೆ ಪ್ರದಾನ ಮಾಡಿದರು.

2008: ಕಂಪ್ಯೂಟರ್ ಮುಂದೆ ಕುಳಿತು ಇ-ಮೇಲ್ ಮೂಲಕ ಬೆದರಿಕೆ ಹಾಕುವವರ ಪತ್ತೆಗೆ ಲಖನೌ ಮೂಲದ ಸಂಸ್ಥೆಯೊಂದು ಸಾಫ್ಟ್ವೇರ್ ಒಂದನ್ನು ತಯಾರಿಸಿತು. ಜೈಪುರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳು ಇ-ಮೇಲ್ ತಂತ್ರಜ್ಞಾನವನ್ನು ಬಳಸಿದ್ದರ ಹಿನ್ನೆಲೆಯಲ್ಲಿ ಈ ಸಾಫ್ಟ್ವೇರನ್ನು ಅಭಿವೃದ್ಧಿಪಡಿಸಲಾಯಿತು ಎಂದು ಜಿಐ ಬಯೋಮೆಟ್ರಿಕ್ಸ್ನ ನಿರ್ದೇಶಕ ಅಮಿತ್ ಕೌಶಲ್ ತಿಳಿಸಿದರು. ಗ್ರಾಹಕ ನೊಂದಣಿ ಮತ್ತು ಗುರುತಿಸುವಿಕೆ (ಸಿಆರ್ಐಸಿಎಚ್-ಕ್ರಿಷ್) ಎಂಬ ಹೆಸರಿನ ಈ ಸಾಫ್ಟವೇರ್ ಬಳಸಿ ಕಂಪ್ಯೂಟರ್ ಮೂಲಕ ಇ-ಮೇಲ್ ಮಾಡುವವರ ಭಾವಚಿತ್ರ ಮತ್ತು ಬೆರಳಚ್ಚುಗಳನ್ನು ಪತ್ತೆ ಹಚ್ಚಬಹುದು. ಇದು ಆರೋಪಿಗಳ ಪತ್ತೆಗೆ ಬಹುಪಯೋಗಿಯಾಗಲಿದೆ ಎಂಬುದು ಅಮಿತ್ ಕೌಶಲ್ ಹೇಳಿಕೆ.

2008: ಪ್ರಸಿದ್ಧ ಶಬರಿಮಲೈ ದೇವಸ್ಥಾನದಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯಂದು ಭಕ್ತರಿಗೆ ಕಾಣಿಸಿಕೊಳ್ಳುವ `ಮಕರ ಜ್ಯೋತಿ' ಅತೀಂದ್ರಿಯ ಬೆಳಕಲ್ಲ. ಅದು ಮಾನವ ನಿರ್ಮಿತ ಎಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಕ್ತಾರ ರಾಹುಲ್ ಈಶ್ವರ್ ತಿಳಿಸಿದರು. ಪೂರ್ವ ಪ್ರದೇಶದ ಪೊನ್ನಂಬಳಮೇಡು ಬೆಟ್ಟದ ನಡುವೆ ಬುಡಕಟ್ಟು ಜನರು ಈ ಬೆಳಕನ್ನು ಹಚ್ಚುತ್ತಾರೆ. ಇದು ಪವಿತ್ರ ಜ್ಯೋತಿ. ಇದನ್ನು ಮೊದಲು ಪರಶುರಾಮ ಆಚರಿಸಿದ ಎಂಬ ದಂತಕತೆಯಿದೆ. ಈ ಸಂದರ್ಭದಲ್ಲಿ ನಕ್ಷತ್ರ ಕಾಣಿಸಿಕೊಳ್ಳುತ್ತದೆ. ಆಗ ಬೆಟ್ಟದಲ್ಲಿನ ಬುಡಕಟ್ಟು ಜನರು ಜ್ಯೋತಿಯನ್ನು ಉರಿಸುತ್ತಾರೆ. ಆದರೆ ಯಾರು ಉರಿಸುತ್ತಾರೆ ಎಂಬುದು ತಮಗೆ ಗೊತ್ತಿಲ್ಲ ಎಂದು ಈಶ್ವರ ವಿವರಿಸಿದರು. ಶಬರಿಮಲೈ ದೇವಸ್ಥಾನವು ಅಸಂಖ್ಯ ಭಕ್ತರು ಭೇಟಿ ನೀಡುವ ಪ್ರಪಂಚದ ಐದು ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಇದು ವಿವಾದಗಳು ಹಾಗೂ ತಪ್ಪು ಮಾಹಿತಿಗಳಿಂದ ಮುಕ್ತವಾಗಿರಬೇಕೆಂಬ ಉದ್ದೇಶದಿಂದ ಈ ಸ್ಪಷ್ಟನೆ ನೀಡುತ್ತಿರುವುದಾಗಿ ಅವರು ಹೇಳಿದರು.

2008: ಬಾಲಿವುಡ್ ಮೆಘಾ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಕುಟುಂಬದ ಸದಸ್ಯರೊಂದಿಗೆ ಪ್ರಭಾದೇವಿಯಲ್ಲಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಅಮಿತಾಭ್ ಅವರು ಪುತ್ರ ಅಭಿಷೇಕ್ ಬಚ್ಚನ್ ಹಾಗೂ ಸೊಸೆ ಐಶ್ವರ್ಯ ರೈ ಅವರೊಂದಿಗೆ ಮುಂಬೈನ `ಜಲ್ಸಾ' ನಿವಾಸದಿಂದ ಬೆಳಿಗ್ಗೆ ಪ್ರಭಾದೇವಿಯಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕಾಲು ನಡಿಗೆಯಲ್ಲಿ ಆಗಮಿಸಿ, ಸೂರ್ಯ ಉದಯವಾಗುವ ಮುನ್ನ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ `ಕಾಕಡಾರತಿ'ಯಲ್ಲಿ ಪಾಲ್ಗೊಂಡರು. ಜಯಾಭಾದುರಿ ಅವರು ದೇವಸ್ಥಾನದಲ್ಲಿ ಅವರ ಜೊತೆಯಾದರು.

2008: ರಾಜ್ಯ ರಸ್ತೆ ಸಾರಿಗೆ ನಿಗಮ ಈ ವರ್ಷ ಉತ್ತಮ ಆದಾಯ ಗಳಿಸುವಲ್ಲಿ ದಾಪುಗಾಲು ಹಾಕಿತು. ಹಿಂದಿನ ದಿನ (ಮೇ 26) ಒಂದೇ ದಿನದಲ್ಲಿ 6.67ಕೋಟಿ ಆದಾಯಗಳಿಸಿ ಹೊಸ ದಾಖಲೆ ನಿರ್ಮಿಸಿತು. ಇದು ನಿಗಮದ ಇತಿಹಾಸದಲ್ಲಿಯೇ ಅತ್ಯಧಿಕ ಆದಾಯ ಗಳಿಸಿದ ದಿನವಾಯಿತು. ಇದೇ ಮೇ 19ರಂದು 5.95 ಕೋಟಿ ರೂ. ಹಾಗೂ ಮೇ 12ರಂದು 5.82 ಕೋಟಿ ರೂ. ಆದಾಯವನ್ನು ಗಳಿಸಿ ನಿಗಮ ದಾಖಲೆ ಮಾಡಿತ್ತು.

2007: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಸಿಬ್ಬಂದಿಯನ್ನು ಹೊತ್ತ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರು ಬಳಿಯ ಕೆರೆ ಅಂಗಳದಲ್ಲಿ ಇಳಿಯಿತು. ಆದರೆ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಿಬ್ಬಂದಿ ಅಪಾಯದಿಂದ ಪಾರಾದರು.

2007: ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಮ್ ಅವರ ಸಹೋದರ ಚಿತ್ರ ನಿರ್ಮಾಪಕ ಜಿ. ಶ್ರೀನಿವಾಸನ್ ಅವರು ಮನಾಲಿಯ ಹಾಲನ್ನಿನಲ್ಲಿ ಟ್ರೆಕ್ಕಿಂಗ್ ನಿರತರಾಗಿದ್ದಾಗ 50 ಅಡಿ ಆಳದ ಕಮರಿಗೆ ಬಿದ್ದು ಅಸು ನೀಗಿದರು. ಶ್ರೀನಿವಾಸನ್ ಅವರು ಗುರು ಚಿತ್ರದ ನಿರ್ಮಾಪಕರಾಗಿದ್ದು ಪತ್ನಿ ಸಂಧ್ಯಾ ಲಕ್ಷ್ಮಣ್, ಪುತ್ರಿ ಶ್ರೇಯಾ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಟ್ರೆಕ್ಕಿಂಗ್ ನಡೆಸುತ್ತಿದ್ದಾಗ ದುರಂತಕ್ಕೆ ತುತ್ತಾದರು.

2007: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 50ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರದ ಸುಮಾರು 50,000 ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಮಹಾಲಕ್ಷ್ಮಿ ರೇಸ್ ಕೋರ್ಸಿನಲ್ಲಿ ಈ ಕಾರ್ಯಕ್ರಮ ನಡೆಯಿತು.

2007: ದೇಶದ ಪ್ರಮುಖ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ ಅಂಬಾನಿ ಅವರು ಭಾರತದ ಏಕೈಕ ಒಂದು ಲಕ್ಷ ಕೋಟ್ಯಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಮಲಯಾಳಂ ಚಿತ್ರರಂಗದ ಖ್ಯಾತ ನಟ ಒಡವಿಲ್ ಉನ್ನಿಕೃಷ್ಣನ್ (62) ನಿಧನರಾದರು.

2006: ಸುನಾಮಿ ಏಟಿನಿಂದ ಇನ್ನೂ ಚೇತರಿಸದ ಇಂಡೋನೇಷ್ಯಕ್ಕೆ ಈದಿನ ನಸುಕಿನಲ್ಲಿ ಇನ್ನೊಂದು ಆಘಾತ. ಭಾರಿ ಜನಸಾಂದ್ರತೆ ಇರುವ ಜಾವಾ ಪ್ರಾಂತ್ಯದಲ್ಲಿ ಶಕ್ತಿಶಾಲಿ ಭೂಕಂಪ ಸಂಭವಿಸಿ ಒಟ್ಟು 5000ಕ್ಕೂ ಹೆಚ್ಚು ಮಂದಿ ಮೃತರಾದರು. ಸಹಸ್ರಾರು ಮಂದಿ ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.2ರಷ್ಟಿತ್ತು. ಆ ಬಳಿಕ ಭೂಮಿ ಸುಮಾರು 45 ಸಲ ಕಂಪಿಸಿತು.

1999: ಕರ್ನಾಟಕದ ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ರಮ ಆರಂಭಿಸಿತು. ಕಂದಾಯ ಸಚಿವ ಸೋಮಶೇಖರ್ ಕಾಲದಲ್ಲಿ ಚಿತ್ರದುರ್ಗ ಹಾಗೂ ಗುಲ್ಬರ್ಗದಲ್ಲಿ ಪ್ರಾಯೋಗಿಕವಾಗಿ ಕೇಂದ್ರ ನೆರವಿನೊಂದಿಗೆ ಈ ಕಾರ್ಯಕ್ರಮ ಆರಂಭಗೊಂಡಿತು. ಸರ್ಕಾರ ಅವಧಿಗೆ ಮುನ್ನ ಬಿದ್ದ ಕಾರಣ ಅದು ಮುಂದುವರೆಯಲಿಲ್ಲ. 2001ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ `ಭೂಮಿ' ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಮತ್ತೆ ಅನುಷ್ಠಾನಗೊಳಿಸಿತು. ಪಾರದರ್ಶಕತೆಗೆ ಅವಕಾಶ ಮಾಡಿಕೊಟ್ಟ ಈ ಕಾರ್ಯಕ್ರಮ 2006ರಲ್ಲಿ ವಿಶ್ವಸಂಸ್ಥೆಯ `ಸಾರ್ವಜನಿಕ ಸೇವಾ ಪ್ರಶಸ್ತಿ'ಗೆ ಪಾತ್ರವಾಯಿತು.

1994: ಅಲೆಗ್ಸಾಂಡರ್ ಸೋಲ್ಜೆನಿತ್ಸಿನ್ 20 ವರ್ಷಗಳ ವಿದೇಶವಾಸದ ನಂತರ ರಷ್ಯಕ್ಕೆ ಹಿಂತಿರುಗಿದರು.

1964: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ನವದೆಹಲಿಯಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.

1937: ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಕ್ಯಾಲಿಫೋರ್ನಿಯಾದ ಮರೀನ್ ಕೌಂಟಿಯನ್ನು ಸಂಪರ್ಕಿಸಲು ಹೊಸದಾಗಿ ನಿರ್ಮಿಸಲಾದ ಗೋಲ್ಡನ್ ಗೇಟ್ ಬ್ರಿಜ್ಜನ್ನು ಸಾರ್ವಜನಿಕರಿಗೆ ಸಂಚಾರಕ್ಕಾಗಿ ತೆರೆಯಲಾಯಿತು. ಮೊದಲ ದಿನವೇ 2 ಲಕ್ಷ ಮಂದಿ ಸೇತುವೆಯನ್ನು ದಾಟಿದರು. ಈ ಸೇತುವೆಯನ್ನು ಪೂರ್ಣಗೊಳಿಸಲು 4 ವರ್ಷ, 4 ತಿಂಗಳು, 22 ದಿನಗಳು ಬೇಕಾದವು.

1914: ಅಗ್ರಗಣ್ಯ ಪಿಟೀಲು ವಿದ್ವಾಂಸರಲ್ಲಿ ಒಬ್ಬರಾದ ಆರ್. ಆರ್. ಕೇಶವ ಮೂರ್ತಿ (27-5-1914ರಿಂದ 23-10-2006ರ ವರೆಗೆ) ಅವರು ರಾಮಸ್ವಾಮಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಸಂಗೀತ ಕಾಶಿ ಎನಿಸಿದ್ದ ರುದ್ರಪಟ್ಟಣದಲ್ಲಿ ಜನಿಸಿದರು.

1902: ಕಲಾವಿದ ಹಾರಾಡಿ ರಾಮ ಗಾಣಿಗ ಜನನ.

1897: ಸಾಹಿತ್ಯ ಮತ್ತು ರಂಗಭೂಮಿ ಎರಡರಲ್ಲೂ ವಿಶಿಷ್ಟ ಸೇವೆ ಸಲ್ಲಿಸಿದ ಬಿ. ಪುಟ್ಟಸ್ವಾಮಯ್ಯ (27-5-1897ರಿಂದ 25-1-1984) ಅವರು ಬಸಪ್ಪ - ಮಲ್ಲಮ್ಮ ದಂಪತಿಯ ಪುತ್ರನಾಗಿ ಬೆಂಗಳೂರಿನಲ್ಲಿ ಜನಿಸಿದರು. ಹಲವಾರು ಪತ್ರಿಕೆಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ ಇವರು ಕಥೆ, ಕಾದಂಬರಿ ನಾಟಕಗಳನ್ನು ಬರೆದಿದ್ದು, ಇವರ ಜನಪ್ರಿಯ `ಮಲ್ಲಮ್ಮನ ಪವಾಡ' ಕಾದಂಬರಿ ಚಲನಚಿತ್ರವಾಗಿತ್ತು.

1703: ತ್ಸಾರ್ ದೊರೆ ಪೀಟರ್ ದಿ ಗ್ರೇಟ್ ರಷ್ಯದ ನೂತನ ರಾಜಧಾನಿ ಸೇಂಟ್ ಪೀಟರ್ಸ್ ಬರ್ಗನ್ನು ನಿರ್ಮಿಸಿದ. 1914ರಲ್ಲಿ ಅದನ್ನು ಪೆಟ್ರೋಗ್ರಾಡ್ ಎಂದು ಹೆಸರಿಸಲಾಯಿತು. 1924ರಲ್ಲಿ ಅದಕ್ಕೆ `ಲೆನಿನ್ ಗ್ರಾಡ್' ಎಂದು ಸೋವಿಯತ್ ನಾಯಕ ವ್ಲಾಡಿಮೀರ್ ಲೆನಿನ್ ಹೆಸರನ್ನು ಇಡಲಾಯಿತು. 1991ರಲ್ಲಿ ಮತ್ತೆ ಅದಕ್ಕೆ ಮೂಲ ಹೆಸರನ್ನೇ (ಸೇಂಟ್ ಪೀಟರ್ಸ್ ಬರ್ಗ್) ಇಡಲಾಯಿತು.

1679: ಇಂಗ್ಲೆಂಡಿನ ಸಂಸತ್ತು ಸಾರ್ವಜನಿಕರಿಗೆ ಅನಗತ್ಯ ಬಂಧನದಿಂದ ರಕ್ಷಣೆ ಒದಗಿಸುವ ಸಲುವಾಗಿ ಹೇಬಿಯಸ್ ಕಾರ್ಪಸ್ ಕಾನೂನನ್ನು ಅಂಗೀಕರಿಸಿತು. ಈ ಕಾನೂನಿನ ಮುಖ್ಯಾಂಶಗಳನ್ನು ನಂತರ ಅಮೆರಿಕದ ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಯಿತು.

No comments:

Post a Comment