ನಾನು ಮೆಚ್ಚಿದ ವಾಟ್ಸಪ್

Thursday, May 30, 2019

ಇಂದಿನ ಇತಿಹಾಸ History Today ಮೇ 30

ಇಂದಿನ ಇತಿಹಾಸ History Today ಮೇ 30

2019: ಲಾಸ್ ಏಂಜೆಲಿಸ್ (ಕ್ಯಾಲಿಫೋರ್ನಿಯಾ): ಹುಟ್ಟುವಾಗ ದೊಡ್ಡ  ಸೇಬು ಹಣ್ಣಿನ (ಏಪಲ್)
ಗಾತ್ರದಲ್ಲಿದ್ದ ಜೀವಂತವಾಗಿರುವ ವಿಶ್ವದ  ಅತಿ ಸಣ್ಣ ಮಗು (ತೂಕ ಕೇವಲ 245 ಗ್ರಾಮ್ (8.6 ಔನ್ಸ್) ಜನಿಸಿರುವುದಾಗಿ ಕ್ಯಾಲಿಫೋರ್ನಿಯಾದ ಆಸ್ಪತ್ರೆಯೊಂದು 2019 ಮೇ 29 ರಂದು (ಭಾರತದಲ್ಲಿ 2019 ಮೇ 30) ಪ್ರಕಟಿಸಿತು.ಆಸ್ಪತ್ರೆಯ ಸಿಬ್ಬಂದಿಸೇಬೀಎಂಬುದಾಗಿ ಅಡ್ಡ ಹೆಸರು ಇಟ್ಟಿರುವ ಪುಟ್ಟ ಹುಡುಗಿ ತಾಯಿ ಗರ್ಭದಲ್ಲಿ 23 ವಾರ, 3 ದಿನ ಕಳೆದ ಬಳಿಕ ಭೂಮಿಗೆ ಬಂದಿದೆ. ಸ್ಯಾನ್ ಡೀಗೋದಲ್ಲಿನ ಮಹಿಳೆಯರ ಶಾರ್ಪ್ ಮೇರೀ ಬಿರ್ಚ್ ಆಸ್ಪತ್ರೆಯಲ್ಲಿ ಮಗು ಜನಿಸಿತು. ಮಗು ಆರೋಗ್ಯವಾಗಿದ್ದು  5 ತಿಂಗಳ ಆಸ್ಪತ್ರೆವಾಸದ ಬಳಿಕ ಮನೆಗೆ ಳುಹಿಸಿಕೊಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

2019: ನವದೆಹಲಿಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ ಅವರು ೨೪ ಮಂದಿ ಸಂಪುಟ ದರ್ಜೆ ಸಚಿವರು ಮತ್ತು  ೩೧ ಮಂದಿ ಸಹಾಯಕ ಸಚಿವರ ಜೊತೆಗೆ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ ಎರಡನೇ ಅವಧಿಯ ಸರ್ಕಾರ ಸಂಭ್ರಮೋತ್ಸಾಹದ ಮಧ್ಯೆ ಅಧಿಕಾರಕ್ಕೆ ಏರಿತು.  ಇದರೊಂದಿಗೆಮೋದಿ ಸರ್ಕಾರ- ಯುಗ ಆರಂಭಗೊಂಡಿತು. ಪ್ರಧಾನಿ ಮೋದಿ ಸೇರಿದಂತೆ  ಒಟ್ಟು 8 ಮಂದಿಯನ್ನು ಒಳಗೊಂಡ  ಸಚಿವ ಸಂಪುಟದ ನೂತನ ಸದಸ್ಯರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ೨೦೧೪ರಲ್ಲಿ ಅಧಿಕಾರಕ್ಕೆ ಏರಿದ್ದ ಮೋದಿ ಅವರ ಮೊದಲ ಸರ್ಕಾರದಲ್ಲಿ ಸಚಿವರಾಗಿದ್ದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಡಿ.ವಿ. ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ರವಿಶಂಕರ ಪ್ರಸಾದ್ ಮತ್ತಿತರರ ಜೊತೆಗೆ ಬಿಜೆಪಿ ಪ್ರಚಂಡ ಗೆಲುವಿನ ರೂವಾರಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವಾರು ಮಂದಿ ಹೊಸಬರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾದರು. ೨೫ ಸಂಸತ್ ಸದಸ್ಯರನ್ನು ಲೋಕಸಭೆಗೆ ಕಳುಹಿಸಿಕೊಟ್ಟಿರುವ ಕರ್ನಾಟಕದಿಂದ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸದರಾಗಿ ಪುನರಾಯ್ಕೆಯಾಗಿರುವ  ಕೇಂದ್ರ ಸಚಿವರಾಗಿದ್ದ ಸಚಿವ ಡಿ.ವಿ. ಸದಾನಂದ ಗೌಡ, ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ  ನಿರ್ಮಲಾ ಸೀತಾರಾಮನ್ ಅವರು ಮತ್ತೆ ಮೋದಿ ಸಂಪುಟಕ್ಕೆ ಸಂಪುಟದದರ್ಜೆ ಸಚಿವರಾಗಿ ಸೇರ್ಪಡೆಯಾದರು.  ಅದಲ್ಲದೆ ಧಾರವಾಡ ಕ್ಷೇತ್ರದಿಂದ ನಾಲ್ಕು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಪ್ರಹ್ಲಾದ ಜೋಶಿ ಅವರು ಸಂಪುಟ ದರ್ಜೆ ಸಚಿವರಾಗಿ ಹೊಸದಾಗಿ ಸೇರ್ಪಡೆಯಾದರು. ಕರ್ನಾಟಕದ ಬೆಳಗಾವಿಯಿಂದ ಲೋಕಸಭೆಗೆ ನಾಲ್ಕು ಬಾರಿ ಆಯ್ಕೆಯಾಗಿರುವ ಸುರೇಶ್ ಅಂಗಡಿ ಅವರೂ ಹೊಸದಾಗಿ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾದರು. ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪರಾಭವಗೊಳಿಸಿದ ಸ್ಮೃತಿ ಇರಾನಿ ಅವರು ಮತ್ತೆ ಸಂಪುಟದಲ್ಲಿ ಸಂಪುಟ ದರ್ಜೆ ಸ್ಥಾನ ಗಿಟ್ಟಿಸಿದರು. ಕೇಂದ್ರ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ,  ಹೊರತಾಗಿ ಹೊರತಾಗಿ ಸಾಧ್ವಿ ನಿರಂಜನ್ ಜ್ಯೋತಿ, ದೇಬಶ್ರೀ ಚೌಧರಿ ಮತ್ತು  ರೇಣುಕಾ ಸಿಂಗ್ ಸರೂಟ ಮಹಿಳಾ ಪ್ರತಿನಿಧಿಗಳಾಗಿ ಸೇರ್ಪಡೆಯಾದರು. 7 ಗಂಟೆಗೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ಆರಂಭವಾಗಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ನಡೆದ ಸಂಭ್ರಮದ ಪ್ರಮಾಣ ವಚನ ಸಮಾರಂಭವನ್ನು ದೇಶ ವಿದೇಶಗಳ ೮೦೦೦ ಮಂದಿ ಗಣ್ಯ ಅತಿಥಿಗಳು ಕಣ್ತುಂಬಿಕೊಂಡರು. ಗಣ್ಯರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಹಿರಿಯ ನಾಯಕರಾದ ಎಲ್. ಕೆ. ಅಡ್ವಾಣಿ, ಸುಷ್ಮಾಸ್ವರಾಜ್ ಮತ್ತಿರರು ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


2019: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ನೂತನ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ಡಿಎ) ಸರ್ಕಾರದಲ್ಲಿ ಜನತಾದಳ (ಸಂಯುಕ್ತ) ಪಾಲ್ಗೊಳ್ಳುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ಹಾಗೂ ಜನತಾದಳ (ಯು) ನಾಯಕ ನಿತೀಶ್ ಕುಮಾರ್ ಅವರು ಕೇಂದ್ರ ಸಂಪುಟದ ಪ್ರಮಾಣ ವಚನಕ್ಕೆ ಮುನ್ನವೇ ಪ್ರಕಟಿಸಿದರುಸಂಪುಟ ಸೇರ್ಪಡೆಯ ಆಹ್ವಾನ ನೀಡಲಾಗಿತ್ತು, ಆದರೆ ಅದು ನಮಗೆ ಸ್ವೀಕಾರಾರ್ಹ ಅಲ್ಲ ಎಂದು ಬಿಹಾರ ಮುಖ್ಯಮಂತ್ರಿ ಪ್ರಧಾನಿ ಮೋದಿ ಪ್ರಮಾಣ ವಚನ ಸರ್ಕಾರದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ನಿತೀಶ್ ಕುಮಾರ್ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಜೊತೆಗಿನ ಭೇಟಿ ಕಾಲದಲ್ಲಿ ಎರಡು ಸಂಪುಟ ಸ್ಥಾನಗಳನ್ನು ಕೇಳಿದ್ದರು ಎಂದು ಮೂಲಗಳು ಹೇಳಿವೆ. ಏನಿದ್ದರೂ ಶಿವಸೇನೆಯ ಸಂಜಯ್ ರೌತ್ ಅವರುಪ್ರತಿಯೊಂದು ಮಿತ್ರ ಪಕ್ಷಕ್ಕೂ ತಲಾ ಒಂದು ಸಂಪುಟ ಸ್ಥಾನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಬಿಹಾರದ ೪೦ ಲೋಕಸಭಾ ಸ್ಥಾನಗಳ ಪೈಕಿ ನಿತೀಶ್ ಕುಮಾರ್ ಅವರ ಪಕ್ಷವು ೧೬ ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿಯು ತಾನು ಸ್ಪರ್ಧಿಸಿದ್ದ ಎಲ್ಲ ೧೭ ಸ್ಥಾನಗಳನ್ನೂ ಗೆದ್ದಿತ್ತು. ನಿತೀಶ್ ಕುಮಾರ್ ಅವರ ನಿಕಟವರ್ತಿ ಆರ್ಸಿಪಿ ಸಿಂಗ್ ಅವರು ನೂತನ ಸರ್ಕಾರದಲ್ಲಿ ಜನತಾದಳ (ಸಂಯುಕ್ತ) ಪ್ರತಿನಿಧಿಯಾಗಿರುತ್ತಾರೆ ಎಂದು ವರದಿಗಳಿದ್ದವು.

2019: ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ, ಜನತಾದಳ (ಎಸ್) ನಾಯಕ ಎಚ್.ಡಿ. ಕುಮಾರ ಸ್ವಾಮಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಲೋಕಸಭಾ ಚುನಾವಣೆಯ ಪರಾಭವದ ಹಿನ್ನೆಲೆಯಲ್ಲಿ ಪಕ್ಷಾಧ್ಯಕ್ಷ ಹುದ್ದೆಯನ್ನು ತ್ಯಜಿಸದಂತೆ ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ದೆಹಲಿಗೆ ಆಗಮಿಸಿದ ಕುಮಾರ ಸ್ವಾಮಿಯವರು ರಾಹುಲ್ ಗಾಂಧಿಯವರನ್ನು ದೆಹಲಿಯ ತುಘ್ಲಕ್ ರಸ್ತೆಯಲ್ಲಿನ ಅವರ ನಿವಾಸದಲ್ಲಿ ಭೇಟಿ ಮಾಡಿ ೨೦ ನಿಮಿಷಗಳಿಗೂ ಹೆಚ್ಚು ಕಾಲ ಮಾತನಾಡಿದರು.  ಬಳಿಕ ವರದಿಗಾರರ ಜೊತೆ ಮಾತನಾಡಿದ ಕುಮಾರ ಸ್ವಾಮಿಹುದ್ದೆಯಿಂದ ಕೆಳಗಿಳಿಯದಂತೆ ನಾನು ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ತಾವು ರಾಹುಲ್ ಗಾಂಧಿಯವರಿಗೆ ವಿವರಿಸಿರುವುದಾಗಿಯೂ ಮುಖ್ಯಮಂತ್ರಿ ನುಡಿದರು. ರಾಜೀನಾಮೆ ವಾಪಸಿಗೆ ರಾಹುಲ್ ತಯಾರಿಲ್ಲ- ತರುಣ್ ಗೊಗೋಯ್: ಈಮಧ್ಯೆ, ಅಸ್ಸಾಮಿನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ತರುಣ್ ಗೊಗೋಯಿ ಅವರುರಾಹುಲ್ ಗಾಂಧಿಯವರು ತಮ್ಮ ಪದತ್ಯಾಗ ಪಟ್ಟಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ ಎಂದು ಹೇಳಿದರು.  ‘ರಾಹುಲ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯುಬೇಕು ಎಂದು ನಾವು ಬಯಸುತ್ತಿದ್ದೇವೆ. ಆದರೆ ಅವರು ತಾವು ಇನ್ನು ಪಕ್ಷಾಧ್ಯಕ್ಷರಾಗಿ ಮುಂದುವರೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಸರ್ವಾನುಮತದಿಂದ ರಾಹುಲ್ ಗಾಂಧಿಯವರ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ನಾವು ಅವರಿಗೆ ಹೇಳಿದ್ದೇವೆ, ಆದರೆ ಅವರು ಅದನ್ನು ಮಾಡುತ್ತಿಲ್ಲ ಎಂದು ಗೊಗೋಯಿ ನುಡಿದರು.  ‘ಪ್ರಜಾಪ್ರಭುತ್ವದಲ್ಲಿ ಪ್ರಬಲ ಪ್ರತಿಪಕ್ಷದ ಅಗತ್ಯವಿದೆ. ಯಾರು ಪ್ರಬಲ ಪ್ರತಿಪಕ್ಷವಾಗುತ್ತಾರೆ? ಇರುವುದು ಕಾಂಗ್ರೆಸ್ ಪಕ್ಷ ಮಾತ್ರ. ಮತ್ತು ರಾಹುಲ್ ಗಾಂಧಿಯವರಿಗೆ ತಮ್ಮ ವರ್ಚಸ್ಸು ಬಳಸಿಕೊಂಡು ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಇದೆ ಎಂದು ಅವರು ಹೇಳಿದರು. ಮುಂದಿನ ಪಕ್ಷಾಧ್ಯಕ್ಷರಿಗೆ ನೆರವಾಗುವುದಾಗಿ ರಾಹುಲ್ ಗಾಂಧಿಯವರು ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕ ನುಡಿದರು. ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ತಾನು ಮುಂದುವರೆಯುವುದಾಗಿ ರಾಹುಲ್ ಹೇಳಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ತಾತ್ವಿಕ ಹೋರಾಟವನ್ನು ಮಾಡುವುದಾಗಿ ರಾಹುಲ್ ಹೇಳಿದ್ದಾರೆ. ಮುಂದಿನ ಕಾಂಗ್ರೆಸ್ ಅಧ್ಯಕ್ಷರಿಗೆ ತಾವು ನೆರವಾಗುವುದಾಗಿಯೂ ಅವರು ಹೇಳಿದ್ದಾರೆ ಎಂದು ಗೊಗೋಯಿ ಹೇಳಿದರುಮೇ ೨೫ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ತಾವು ಹುದ್ದೆಗೆ ರಾಜೀನಾಮೆ ನೀಡಲು ತಾವು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದರು. ಅವರ ರಾಜೀನಾಮೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಸರ್ವಾನುಮತದಿಂದ ತಿರಸ್ಕರಿಸಿ ಪಕ್ಷವನ್ನು ಪ್ರತಿ ಹಂತದಲ್ಲೂ ಮರುಸಂಘಟನೆ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ ವಯನಾಡು ಕ್ಷೇತ್ರದಲ್ಲಿ ಜಯ ಗಳಿಸಿರುವ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಪರಂಪರಾಗತ ಭದ್ರಕೋಟೆ ಅಮೇಥಿ ಕ್ಷೇತ್ರದಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಎದುರು ಸೋಲು ಉಂಡಿದ್ದರು.

2019: ವಿಜಯವಾಡ: ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ ರೆಡ್ಡಿ ಅವರು ರಾಜ್ಯದ ನೂತನ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿ ಸಿದರು. ವಿಜಯವಾಡದ ಇಂದಿರಾ ಗಾಂಧಿ ಮುನ್ಸಿ ಪಲ್ ಸ್ಟೇಡಿಯಂನಲ್ಲಿ ಮಧ್ಯಾಹ್ನ ನಡೆದ ಸಮಾ ರಂಭದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಜಗನ್ ಮೋಹನ್ ಪ್ರಮಾಣ ವಚನ ಸ್ವೀಕರಿಸಿ ದರು.ರಾಜ್ಯಪಾಲ ನರಸಿಂಹನ್ ಪ್ರಮಾಣ ವಚನ ಬೋಧಿಸಿದರು.ಸಮಾರಂಭ ಸ್ಥಳಕ್ಕೆ ತೆರೆದ ಜೀಪಿನಲ್ಲಿ ಆಗಮಿಸಿದ ಜಗನ್ ಅವರಿಗೆ ರಸ್ತೆಯುದ್ಧಕ್ಕೂ ಜನರು ಜೈಕಾರ ಕೂಗಿದರು.  ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರ ಶೇಖರ್ ರಾವ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಡಿಎಂಕೆ ಮುಖ್ಯಸ್ಥ ಎಂ.ಕೆ, ಸ್ಟಾಲಿನ್, ಪಾಂಡಿಚ್ಚೇರಿ ಸಚಿವ ಮಲ್ಲಡಿ ಕೃಷ್ಣ ರಾವ್ ,ಜಗನ್ ರೆಡ್ಡಿ ಅವರ ಅಮ್ಮ ವಿಜಯ ಲಕ್ಷ್ಮಿ, ಪತ್ನಿ ಭಾರತಿ, ಸಹೋದರಿ ಶರ್ಮಿಳಾ, ಮಗಳು ಹ? ರೆಡ್ಡಿ ಮತ್ತು ವರ್ಷಾ ರೆಡ್ಡಿ ಭಾಗವಹಿಸಿ ದ್ದರು. ಈ ಸಮಾರಂಭದಲ್ಲಿ ಸುಮಾರು ೨೦,೦೦೦ ಜನರು ಪಾಲ್ಗೊಂಡಿದ್ದರು.  ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು ಜಗನ್ ಆಮಂತ್ರಿಸಿದ್ದರೂ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಜಗನ್ ಅವರನ್ನು ಅಭಿನಂದಿಸುವುದಕ್ಕಾಗಿ ಟಿಡಿಪಿ ಪಕ್ಷದ ಪ್ರತಿನಿಧಿಯನ್ನು ಜಗನ್ ನಿವಾಸಕ್ಕೆ ಕಳುಹಿಸಿ ಕೊಟ್ಟಿದ್ದರು. ತಂದೆಯ ಸಾವಿನ ಬಳಿಕ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ೧೮ ತಿಂಗಳು ಜೈಲುವಾಸ ಅನುಭವಿಸಿ ೨೦೧೩ರ ಸೆಪ್ಟೆಂಬರ್‌ನಲ್ಲಿ ಜಾಮೀ ನಿನ ಮೇಲೆ ಹೊರಬಂದ ಜಗನ್ ತಮ್ಮ ವಿರುದ್ಧ ನಡೆಸಲಾದ ?ಡ್ಯಂತ್ರ ಅರಿತು ಕಾಂಗ್ರೆಸ್ ತೊರೆದು ಸ್ವಂತ ಪಕ್ಷ ಸ್ಥಾಪಿಸಿದರು.

2018:  ಜಕಾರ್ತ: ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ಆಯಕಟ್ಟಿನ ನೌಕಾಬಂದರು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸುವ ಮೂಲಕ ರಕ್ಷಣೆ ಮತ್ತು ಕಡಲತೀರದ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಭಾರತ ಮತ್ತು ಇಂಡೋನೇಶ್ಯ ಪ್ರತಿಜ್ಞೆ ಸ್ವೀಕರಿಸಿದವು.  ಉಭಯ ರಾಷ್ಟ್ರಗಳ ಧುರೀಣರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಡೋನೇಶ್ಯದ ಅಧ್ಯಕ್ಷ ಜೊಕೊ ವಿಡೋಡೊ ಅವರು ಜಕಾರ್ತದಲ್ಲಿ ಸಭೆಯ ಬಳಿಕ ಈ ವಿಚಾರವನ್ನು ಪ್ರಕಟಿಸಿದರು.  ಸುಮಾತ್ರ ದ್ವೀಪದ ತುದಿ ಹಾಗೂ ಮಲಕ್ಕಾ ಜಲಸಂಧಿಯಲ್ಲಿರುವ ದಟ್ಟಣೆಯ ನೌಕಾ ಮಾರ್ಗವಾಗಿರುವ ಸಬಂಗ್‌ನ್ನು ಜಾಗತಿಕ ವ್ಯಾಪಾರ ಕೇಂದ್ರವನ್ನಾಗಿ ರೂಪಿಸಲು ಮೂಲಸವಲತ್ತು ಕಲ್ಪಿಸುವುದು ಹಾಗೂ ಅದನ್ನು ಆರ್ಥಿಕ ವಲಯವನ್ನಾಗಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಉಭಯ ರಾಷ್ಟ್ರಗಳ ಧುರೀಣರು ಮಾತುಕತೆ ನಡೆಸಿದರು. ‘ಭಾರತ -ಅಸಿಯಾನ್ ಪಾಲುದಾರಿಕೆಯು ಇಂಡೋ-ಫೆಸಿಫಿಕ್ ಪ್ರದೇಶ ಹಾಗೂ ಅದರಾಚೆಗೂ ಶಾಂತಿ ಮತ್ತು ಪ್ರಗತಿಯ ಖಾತರಿ ಒದಗಿಸುವ ಶಕ್ತಿಯಾಗಬಲ್ಲುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷೀಯ ಅರಮನೆಯಲ್ಲಿ ನಡೆದ ಮಾತುಕತೆಯ ಬಳಿಕ ಹಿಂದಿಯಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದರು.  ‘ಭಾರತವು ಆಯಕಟ್ಟಿನ ರಕ್ಷಣಾ ಪಾಲುದಾರ.. ಸಬಂಗ್ ದ್ವೀಪ ಮತ್ತು ಅಂಡಮಾನ್ ದ್ವೀಪಗಳು ಸೇರಿದಂತೆ ಮೂಲಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸಹಕಾರ ಮುಂದುವರೆಯಲಿದೆ ಎಂದು ವಿಡೊಡೊ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.  ಚೀನಾವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ನೌಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಕಳವಳದ ಮಧ್ಯೆ ಮೋದಿ ಅವರ ’ಆಕ್ಟ್ ಈಸ್ಟ್ ನೀತಿಯ ಅಂಗವಾಗಿ ಅಸಿಯಾನ್ (ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಶನ್ಸ್) ರಾಷ್ಟ್ರಗಳ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಯಿತು. ಮೋದಿ ಅವರು ಈ ವರ್ಷ ನವದೆಹಲಿಯ  ಗಣರಾಜ್ಯ ದಿನ ಪರೇಡಿನಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವಂತೆ ಅಸಿಯಾನ್ ಕೂಟದ ಎಲ್ಲ ೧೦ ನಾಯಕರಿಗೂ ಆಹ್ವಾನ ನೀಡಿದ್ದರು. ಈ ಸಮಾರಂಭದಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿದೇಶೀ ಅತಿಥಿಗಳು ಪಾಲ್ಗೊಂಡದ್ದು ದಾಖಲೆಯಾಗಿತ್ತು.  ವಿವಾದಾತ್ಮಕ ದಕ್ಷಿಣ ಚೀನಾ ಸಮುದ್ರದ ಜಲಮಾರ್ಗವನ್ನು ಬಹುತೇಕ ಚೀನಾ ತನ್ನದೆಂದು ಪ್ರತಿಪಾದಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಏಶ್ಯದಲ್ಲಿ ಪ್ರಕ್ಷುಬ್ದತೆ ಇದೆ.  ಬ್ರೂನೀ, ಮಲೇಶ್ಯ, ಫಿಲಿಪ್ಪೈನ್ಸ್, ತೈವಾನ್, ವಿಯೆಟ್ನಾಮ್ ಕೂಡಾ ಈ ಪ್ರದೇಶಕ್ಕೆ ಸಂಬಂಧಿಸಿದಂತೆ ತಕರಾರು ಎತ್ತಿವೆ. ಈ ಜಲಮಾರ್ಗದ ಮೂಲಕ  ಪ್ರತಿವರ್ಷ ಅಂದಾಜು ೩೦೦೦ ಕೋಟಿ ಡಾಲರ್ ಮೌಲ್ಯದ ವಸ್ತುಗಳು ಸಾಗುತ್ತವೆ.
ಇಂಡೋನೇಶ್ವವು ನಾಥೂಲಾ ದ್ವೀಪದ ಸುತ್ತ ಮೀನುಗಾರಿಕೆ ಹಕ್ಕಿಗಾಗಿ ಚೀನಾದ ಜೊತೆಗೆ ಘರ್ಷಣೆಗೆ ಇಳಿದಿದೆ ಮತ್ತು ಅಲ್ಲಿಗೆ ತನ್ನ ಸೇನೆಯನ್ನು ವಿಸ್ತರಿಸಿದೆ.  ತನ್ನ ಸಾರ್ವ ಭೌಮತ್ವವನ್ನು ದೃಢ ಪಡಿಸುವ ಸಲುವಾಗಿ ಈ ಪ್ರದೇಶಕ್ಕೆ ಮರುನಾಮಕರಣ ಮಾಡಿ ಇದು ತನ್ನ ವಿಶೇಷ ಆರ್ಥಿಕ ವಲಯ ಎಂದೂ ಇಂಡೋನೇಶ್ಯ ಘೋಷಿಸಿದೆ. ಇಂಡೋನೇಶ್ಯಕ್ಕೆ ತಮ್ಮ ಮೊತ್ತ ಮೊದಲ ಭೇಟಿ ನೀಡಿರುವ ಮೋದಿ ಅವರು ವಿಶ್ವದ ದೊಡ್ಡ ಮುಸ್ಲಿಮ್ ಬಾಹುಳ್ಯವಿರುವ ಈ ರಾಷ್ಟ್ರದ ರಾಜಧಾನಿಯಲ್ಲಿನ  ಇಸ್ತಿಖ್ಲಾಲ್ ಮಸೀದಿಗೆ ಭೇಟಿ ನೀಡಲಿದ್ದಾರೆ. ಮೋದಿ ಅವರು 31ರ ಗುರುವಾರ ಮಲೇಶ್ಯಕ್ಕೆ ಭೇಟಿ ನೀಡಲಿದ್ದು ಇತ್ತೀಚೆಗೆ ಚುನಾಯಿತರಾದ ಪ್ರಧಾನಿ ಮಹತಿಯಾರ್ ಮೊಹಮ್ಮದ್ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲಿ ಪ್ರಾದೇಶಿಕ ಭದ್ರತಾ ವೇದಿಕೆ ಶಾಂಗ್ರಿ-ಲಾ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಇಂಡೋನೇಶ್ಯದ ಕಡಲ ವ್ಯವಹಾರಗಳ ಸಚಿವ ಲುಹುತ್ ಪಂಡಜೈತನ್ ಅವರು ಪ್ರಸ್ತುತ ೪೦ ಮೀಟರ್ (೧೩೧ ಅಡಿ) ಆಳ ಇರುವ ಸಬಂಗ್ ಬಂದರನ್ನು ವಾಣಿಜ್ಯ ನೌಕೆಗಳು ಮತ್ತು ಜಲಾಂತರ್ಗಾಮಿಗಳ ಬಳಕೆಗೆ ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸಬಹುದು ಎಂದು ಕಳೆದ ವಾರ ಹೇಳಿದ್ದರು. ಸಬಂಗ್ ಬಂದರು ಟ್ರಾನ್ಸಶಿಪ್ಮೆಂಟ್ ಬಂದರು ಆಗಿ ಎರಡು ವರ್ಷಗಳಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಇಂಡೋನೇಷ್ಯದ ಸಾರಿಗೆ ಸಚಿವರು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದರು. ಭಾರತದ ವೀಸಾ ಕೊಡುಗೆ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮೂಲದ ಇಂಡೋನೇಶ್ಯ ಪ್ರಜೆಗಳಿಗೆ ೩೦ ದಿನಗಳ ಉಚಿತ ವೀಸಾ ಕೊಡುಗೆಯನ್ನು ಈದಿನ ಘೋಷಿಸಿದರು. ಈ ಕೊಡುಗೆಯನ್ನು ಬಳಸಿಕೊಂಡು ಭಾರತೀಯ ಮೂಲದ ಇಂಡೋನೇಶ್ಯ ಪ್ರಜೆಗಳು "ನವ ಭಾರತವನ್ನು ಕಾಣಲು ತಮ್ಮ  ಮೂಲ ದೇಶಕ್ಕೆ ಭೇಟಿ ನೀಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು. ಇಂಡೋನೇಶ್ಯದ ರಾಜಧಾನಿ ಜಕಾರ್ತದಲ್ಲಿ ಭಾರತೀಯ ಸಮುದಾಯವನ್ನು  ಉದ್ದೇಶಿಸಿ ಮಾತನಾಡುತ್ತಾ "ನಮ್ಮ ದೇಶಗಳ ಹೆಸರಿನಲ್ಲಿ ಸಾಮ್ಯತೆ ಇರುವುದು ಮಾತ್ರವಲ್ಲದೆ ಉಭಯ ದೇಶಗಳ ಮಿತೃತ್ವ ಕೂಡ ವಿಶಿಷ್ಟವೂ ಅನನ್ಯವೂ ಆಗಿ ಧ್ವನಿಸುತ್ತದೆ ಎಂದು ಹೇಳಿದರು.  "ನಿಮ್ಮಲ್ಲಿ ಅನೇಕರು ಇದುವರೆಗೂ ಭಾರತಕ್ಕೆ ಭೇಟಿ ಕೊಟ್ಟಿಲ್ಲ. ಮುಂದಿನ ವರ್ಷ ಪ್ರಯಾಗದಲ್ಲಿ ನಡೆಯುವ ಕುಂಭ ಮೇಳಕ್ಕೆ ನೀವೆಲ್ಲರೂ ಬರಬೇಕೆಂದು ನಾನು ಅಹ್ವಾನಿಸುತ್ತಿದ್ದೇನೆ. ಇಂಡೋನೇಶ್ಯದ ಪ್ರಜೆಗಳಿಗಾಗಿ ನಾವು ೩೦ ದಿನಗಳ ಉಚಿತ ವೀಸಾ ಕೊಡುಗೆ ನೀಡುತ್ತಿದ್ದೇವೆ. ಇದನ್ನು ಬಳಸಿಕೊಂಡು ನೀವೆಲ್ಲ ಒಮ್ಮೆ  ನಿಮ್ಮ ಮೂಲ ದೇಶವಾಗಿರುವ ಭಾರತಕ್ಕೆ ಭೇಟಿ ಕೊಡಿ ಎಂದು ಮೋದಿ ನೆರೆದ ಭಾರತೀಯ ಮೂಲದ ಜನರನ್ನು ಉದ್ದೇಶಿಸಿ ಹೇಳಿದರು.

2018: ನವದೆಹಲಿ : ಹದಿನಾರು ದಿನಗಳಿಂದ ಸತತ ಏರುತ್ತಾ ಬಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಈದಿನ  ಕೊನೆಗೂ ಇಳಿದವು.  ಆದರೆ  ಇಳಿದದ್ದು ಕೇವಲ ೧ ಪೈಸೆಯಷ್ಟು !  ಅಂದರೆ ಬೆಲೆ ಲೀಟರಿಗೆ ೭೮ರಿಂದ ೮೨ರ ಆಸುಪಾಸಿನಲ್ಲೇ ಇದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್  ಕಾರ್ಪೋರೇಷನ್ (ಐಓಸಿ) ತನ್ನ  ವೆಬ್ಸೈಟಿನಲ್ಲಿ ಈದಿನ  ದೆಹಲಿ  ಮತ್ತು ಮುಂಬಯಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಅನುಕ್ರಮವಾಗಿ ಲೀಟರಿಗೆ  ೬೦ ಮತ್ತು ೫೯ ಪೈಸೆ ಇಳಿದಿರುವುದಾಗಿ ಪ್ರಕಟಿಸಿತ್ತು. ಕೆಲವೇ ಗಂಟೆಗಳ ಬಳಿಕ ಐಓಸಿ ತನ್ನ ಈ ಪ್ರಕಟಣೆಯನ್ನು ಸರಿಪಡಿಸಿ ಪೆಟ್ರೋಲ್ , ಡೀಸೆಲ್ ದರ ಕೇವಲ ೧ ಪೈಸೆ ಇಳಿದಿರುವುದಾಗಿ ಸ್ಪಷ್ಟಪಡಿಸಿತು.  ಗುಮಾಸ್ತರ ತಪ್ಪಿನಿಂದಾಗಿ ೬೦ ಪೈಸೆ ದರ ಇಳಿಕೆಯಾಗಿದೆ ಎಂಬುದಾಗಿ ಮೊದಲು ಪ್ರಕಟಿಸಲಾಯಿತು ಎಂದು ಐಒಸಿ ಪ್ರಕಟಣೆ ಸ್ಪಷ್ಟ ಪಡಿಸಿತು. ಮೇ ೨೫ರ ದರವನ್ನು ಈದಿನದ ದರ ಎಂಬುದಾಗಿ ತಪ್ಪಾಗಿ ಪ್ರಕಟಿಸಲಾಯಿತು ಎಂದು ಐಓಸಿ ಅಧಿಕಾರಿ ಸ್ಪಷ್ಟ ಪಡಿಸಿದರು. ಮೊದಲಿನ ಪ್ರಕಟಣೆ ಪ್ರಕಾರ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ ೭೭.೮೩ ರೂಪಾಯಿ (೬೦ ಪೈಸೆ ಇಳಿಕೆ), ಡೀಸೆಲ್ ದರ ಲೀಟರಿಗೆ ೬೮.೭೫ ರೂಪಾಯಿಗಳಿಗೆ (೫೬ ಪೈಸೆ ಇಳಿಕೆ) ಇಳಿದಿದೆ ಎಂದು ತಿಳಿಸಲಾಗಿತ್ತು. ನಾಲ್ಕು ಮೆಟ್ರೋಪಾಲಿಟನ್ ನಗರಗಳಾಗಿರುವ  ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈಯಲ್ಲಿ ಪೆಟ್ರೋಲ್ ದರ ಲೀಟರಿಗೆ ಅನುಕ್ರಮವಾಗಿ ೭೮.೪೨, ೮೧.೦೫, ೮೬.೨೫ ಮತ್ತು ೮೧.೪೨ ರೂ ಇರುವುದಾಗಿ ಐಓಸಿ ಅಧಿಕೃತವಾಗಿ ತಿಳಿಸಿತು.  ಹಾಗೆಯೇ ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಡೀಸೆಲ್ ಲೀಟರ್ ದರ ಅನುಕ್ರಮವಾಗಿ ೬೯.೩೦, ೭೧.೮೫, ೭೩.೭೮ ಮತ್ತು ೭೩.೧೭ ರೂ. ಇರುವುದಾಗಿ ಅದು ತಿಳಿಸಿತು.  ಮೇ ೧೪ರಿಂದ ೧೬ ದಿನಗಳ ಸತತ ದರ ಏರಿಕೆಯ ಬಳಿಕ ಪೆಟ್ರೋಲ್, ಡೀಸೆಲ್ ದರ ಈದಿನ ಇಳಿಯಿತು. ಕಳೆದ ೧೫ ದಿನಗಳ ಅವಧಿಯಲ್ಲಿ ಪೆಟ್ರೋಲ್ ದರ ಲೀಟರಿಗೆ ೩.೮ ರೂಪಾಯಿ ಮತ್ತು ಡೀಸೆಲ್ ದರ ಲೀಟರಿಗೆ ೩.೩೮ ರೂಪಾಯಿಗಳಷ್ಟು ಏರಿದೆ. ಸ್ಥಳೀಯ ತೆರಿಗೆ ದರ ಅಥವಾ ವ್ಯಾಟ್ ಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಮೆಟ್ರೋ ನಗರಗಳು ಮತ್ತು ರಾಜ್ಯ ರಾಜಧಾನಿಗಳ ಪೈಕಿ ದೆಹಲಿಯಲ್ಲಿ ಅತ್ಯಂತ ಕಡಿಮೆ ದರ ಇದೆ.

2018: ತಿರುವನಂತಪುರ: ಕೇಂದ್ರ ಸರ್ಕಾರವು ಇಂಧನ ದರವನ್ನು ಲೀಟರಿಗೆ ಕೇವಲ ೧ ಪೈಸೆಯಷ್ಟು ಇಳಿಸಿದ್ದಕ್ಕೆ ಪ್ರತಿಯಾಗಿ ಕೇರಳ ಸರ್ಕಾರವು ರಾಜ್ಯದಲ್ಲಿ ಇಂಧನ ದರವನ್ನು ಜೂನ್ 1ರ ಶುಕ್ರವಾರದಿಂದ ಜಾರಿಯಾಗುವಂತೆ ಲೀಟರಿಗೆ ೧ ರೂಪಾಯಿಯಷ್ಟು ಇಳಿಸುವುದಾಗಿ ಪ್ರಕಟಿಸಿತು.  ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ದರವನ್ನು ಲೀಟರಿಗೆ ೧ ಪೈಸೆಯಷ್ಟು ಇಳಿಸಿದ ಕ್ರಮವು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಯಿತು. ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ’ಕೇರಳ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ರಾಜ್ಯದಲ್ಲಿ ಲೀಟರಿಗೆ ೧ ರೂಪಾಯಿಯಷ್ಟು ಇಳಿಸಲು ನಿರ್ಧರಿಸಿದ್ದು, ಪರಿಷ್ಕೃತ ದರವು ಜೂನ್ ೧ರಿಂದ ಜಾರಿಗೆ ಬರುವುದು ಎಂದು ಪ್ರಕಟಿಸಿದರು. ಈದಿನ  ಮಾರುಕಟ್ಟೆ ದರಗಳ ಪ್ರಕಾರ ಕೇರಳದಲ್ಲಿ ಪೆಟ್ರೋಲ್ ದರ ಲೀಟರಿಗೆ ೮೧.೩೪ ರೂಪಾಯಿ ಮತ್ತು ಡೀಸೆಲ್ ದರ ಲೀಟರಿಗೆ ೭೩.೯೯ ರೂಪಾಯಿ ಇತ್ತು. ರಾಜ್ಯ ಸರ್ಕಾರಗಳು ಇಂಧನ ದರಗಳ ಮೇಲೆ ಕೇಂದ್ರವು ವಿಧಿಸುವ ಅಬಕಾರಿ ಸುಂಕದ ಜೊತೆಗೆ ಹೆಚ್ಚುವರಿ ವ್ಯಾಟ್ ದರವನ್ನು ವಿಧಿಸುತ್ತವೆ.  ಕಳೆದ ಎರಡು ವಾರಗಳಿಂದ ಪೆಟ್ರೋಲ್ ದರ ನಿರಂತರವಾಗಿ ಏರುತ್ತಿರುವುದರಿಂದ ಧೃತಿಗೆಟ್ಟಿರುವ ಜನರಿಗೆ ಕೇರಳ ಸರ್ಕಾರ ಕೈಗೊಂಡಿರುವ ನಿರ್ಧಾರ ಮೊತ್ತ ಮೊದಲ ರಾಜ್ಯ ಸರ್ಕಾರ ಒಂದರಿಂದ ಪರಿಹಾರ ರೂಪದಲ್ಲಿ ಬಂದಿತು. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಳೆದ ೧೬ ದಿನಗಳಿಂದ ನಿರಂತರವಾಗಿ ಏರುತ್ತಿದ್ದು, ಒಟ್ಟಾರೆಯಾಗಿ ಪೆಟ್ರೋಲ್ ದರ ಲೀಟರಿಗೆ ೩.೮ ರೂಪಾಯಿಯಷು ಮತ್ತು ಡೀಸೆಲ್ ದರ ೩.೩೮ ರೂಪಾಯಿಯಷ್ಟು ಹೆಚ್ಚಿತು.  ಪೆಟ್ರೋಲ್ ಮತ್ತು ಇಂಧನ ಬೆಲೆ ಲೀಟರಿಗೆ ಅಂದಾಜು ೬೦ ಪೈಸೆಗಳಷ್ಟು ಇಳಿಸುವುದಾಗಿ ಮೊದಲು ಪ್ರಕಟಿಸಿದ್ದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಬಳಿಕ ’ಗುಮಾಸ್ತರಿಂದ ತಪ್ಪಾಗಿದೆ. ವಾಸ್ತವವಾಗಿ ತೈಲ ಬೆಲೆಗಳು ಇಳಿದಿರುವುದು ಲೀಟರಿಗೆ ೧ ಪೈಸೆಯಷ್ಟು ಮಾತ್ರ ಎಂದು ಸ್ಪಷ್ಟ ಪಡಿಸಿತ್ತು.


2009: ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯವೊಂದು ತಮಗೆ ನೀಡ ಬಯಸಿರುವ ಗೌರವ ಡಾಕ್ಟರೇಟ್ ಪದವಿಯನ್ನು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಿರಾಕರಿಸಿದರು. ಆ ದೇಶದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಯನ್ನು ಪ್ರತಿಭಟಿಸಿ ಅವರು ಈ ನಿರ್ಧಾರಕ್ಕೆ ಬಂದರು. ಬ್ರಿಸ್ಬೇನ್‌ನ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯ 66 ವರ್ಷದ ಅಮಿತಾಭ್ ಅವರು ಮನರಂಜನಾ ಪ್ರಪಂಚಕ್ಕೆ ನೀಡಿರುವ ಕೊಡುಗೆಯನ್ನು ಆಧರಿಸಿ ಈ ಪದವಿಯನ್ನು ನೀಡಲು ಮುಂದೆ ಬಂದಿತ್ತು. ಇದನ್ನು ಈ ಮುನ್ನ ಬಚ್ಚನ್ ಒಪ್ಪಿಕೊಂಡಿದ್ದರು. 'ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಇತ್ತೀಚೆಗೆ ನಡೆದಿರುವ ದಾಳಿಯನ್ನು ಮಾಧ್ಯಮಗಳಲ್ಲಿ ಕಂಡು ನನಗೆ ಹತಾಶೆ ಮತ್ತು ದಿಗ್ಭ್ರಮೆಯಾಗಿದೆ. ಪದವಿ ನಿರಾಕರಿಸುವ ಮೂಲಕ ನನಗೆ ಗೌರವ ನೀಡುತ್ತಿರುವ ಸಂಸ್ಥೆಗೆ ನಾನು ಅಗೌರವ ತೋರುತ್ತಿಲ್ಲ' ಎಂದೂ ಅವರು ಸ್ಪಷ್ಟ ಪಡಿಸಿದರು.

2009: ಬಡವರಿಗೆ ರಿಯಾಯಿತಿ ದರದಲ್ಲಿ ನಗರ ಸಾರಿಗೆ ಸೇವೆ ಒದಗಿಸುವ 'ಅಟಲ್ ಸಾರಿಗೆ' ಬಸ್ಸುಗಳ ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಆರ್ಥಿಕವಾಗಿ ಹಿಂದುಳಿದವರು ಹೆಚ್ಚಾಗಿ ವಾಸಿಸುವ ಆಯ್ದ ಸ್ಥಳಗಳಿಂದ ಈ ಬಸ್ಸುಗಳು ಹತ್ತಿರದ ಬಸ್ ನಿಲ್ದಾಣಗಳವರೆಗೆ ಸಂಚರಿಸುತ್ತವೆ. ಕೊಳೆಗೇರಿ ನಿವಾಸಿಗಳು, ಗಾರ್ಮೆಂಟ್ ಕಾರ್ಮಿಕರು ಮೊದಲಾದ ಕೂಲಿ ಕಾರ್ಮಿಕರಿಗೆ ರಿಯಾಯಿತಿ ದರದ ಸಾರಿಗೆ ಸೇವೆ ಸಿಗುವುದು. ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭವನ್ನು ನೆನಪಿನಲ್ಲಿಡಲು ನಗರದಲ್ಲಿ 'ಅಟಲ್ ಸಾರಿಗೆ' ಹೆಸರಿನಲ್ಲಿ ಶೇಕಡಾ 50ರಷ್ಟು ಕಡಿಮೆ ಪ್ರಯಾಣದ ದರ ಸೌಲಭ್ಯವನ್ನು ಸರ್ಕಾರ ಕಲ್ಪಿಸಿತು. ವಿಕಾಸ ಸಂಕಲ್ಪ ಉತ್ಸವಕ್ಕೆ ಸಜ್ಜಾದ ನಗರದ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಕೇಸರಿ ಮತ್ತು ಹಸಿರು ಬಣ್ಣದ ಪಟ್ಟಿ ಹೊಂದಿರುವ 'ಅಟಲ್ ಸಾರಿಗೆ' ಬಸ್‌ಗಳಿಗೆ ಮುಖ್ಯಮಂತ್ರಿ ಹಸಿರು ನಿಶಾನೆ ತೋರಿದರು.

2009: ಮುಂಬೈ ಮೇಲಿನ ದಾಳಿಗೆ ಕಾರಣ ಎನ್ನಲಾದ ಜಮಾತ್-ಉದ್ ದವಾ (ಜೆಯುಡಿ) ಸಂಘಟನೆ ಅಲ್ ಖೈದಾ ಜತೆ ಸಂಪರ್ಕ ಹೊಂದಿದೆ ಎಂದು ಇದೇ ಮೊದಲ ಬಾರಿ ಪಾಕಿಸ್ಥಾನ ಒಪ್ಪಿಕೊಂಡಿತು. ಜೆಯುಡಿ ಅಲ್ ಖೈದಾ ಜತೆ ಸಂಪರ್ಕ ಹೊಂದಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪಾಕ್ ಸರ್ಕಾರ ಹೇಳಿತು. ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ಥಾನದ ಅಟಾರ್ನಿ ಜನರಲ್ ಲತೀಫ್ ಖೋಸಾ ಲಾಹೋರ್ ಹೈಕೋರ್ಟ್ ಮುಂದೆ ಈ ವಿಚಾರ ಮಂಡಿಸಿದರು.

2009: ಬೆಂಗಳೂರು ವಿಶ್ವವಿದ್ಯಾಲಯವು ಬೆಂಗಳೂರು ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

2008: ಜನ ಸಾಗರದ ಹರ್ಷೋದ್ಘಾರ, ಕಿವಿಗಡಚಿಕ್ಕುವ ಪಟಾಕಿಗಳ ಸದ್ದು, ಮುಗಿಲು ಮುಟ್ಟುವ ಜಯ ಘೋಷಗಳ ನಡುವೆ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ನಾಡಿನ 19ನೇ ಮುಖ್ಯಮಂತ್ರಿಯಾಗಿ ರೈತ ಮತ್ತು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಅವರೊಂದಿಗೆ ಐವರು ಪಕ್ಷೇತರರು, ಪಕ್ಷದ ಮೂವರು ವಿಧಾನ ಪರಿಷತ್ ಸದಸ್ಯರು ಮತ್ತು ಇಪ್ಪತ್ತು ಮಂದಿ ವಿಧಾನಸಭಾ ಸದಸ್ಯರು ಹಾಗೂ ಎರಡೂ ಸದನದ ಸದಸ್ಯರಲ್ಲದ ಡಾ.ಮುಮ್ತಾಜ್ ಅಲಿ ಖಾನ್ ಸೇರಿ ಇತರ 29 ಮಂದಿ ಸಂಪುಟ ದರ್ಜೆ ಸಚಿವರಾಗಿ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನೂತನ ಸಚಿವರು: ಕೆ.ಎಸ್.ಈಶ್ವರಪ್ಪ, ಡಾ.ವಿ.ಎಸ್. ಆಚಾರ್ಯ, ಗೋವಿಂದ ಕಾರಜೋಳ, ರಾಮಚಂದ್ರಗೌಡ, ಸಿ.ಎಂ.ಉದಾಸಿ, ಆರ್. ಅಶೋಕ್, ಮುಮ್ತಾಜ್ ಅಲಿಖಾನ್, ಶೋಭಾ ಕರಂದ್ಲಾಜೆ, ಬಿ.ಎನ್.ಬಚ್ಚೇಗೌಡ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಶ್ರೀರಾಮುಲು, ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಎಸ್.ಎ. ರವೀಂದ್ರ ನಾಥ್, ಬಸವರಾಜ ಬೊಮ್ಮಾಯಿ, ಎಸ್. ಸುರೇಶ ಕುಮಾರ್, ರೇವುನಾಯ್ಕ್ ಬೆಳಮಗಿ, ಕೃಷ್ಣ ಪಾಲೆಮಾರ್, ಅರವಿಂದ ಲಿಂಬಾವಳಿ, ಎಸ್.ಕೆ.ಬೆಳ್ಳುಬ್ಬಿ, ಶಿವರಾಜ್ ತಂಗಡಗಿ, ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ನರೇಂದ್ರಸ್ವಾಮಿ, ಹಾಲಪ್ಪ
ವೆಂಕಟರಮಣಪ್ಪ, ಡಿ. ಸುಧಾಕರ್ ಮತ್ತು ಗೂಳಿಹಟ್ಟಿ ಶೇಖರ್.

2008: ಆಂಧ್ರಪ್ರದೇಶದ ವಿಶಾಖಪಟ್ಟಣಂನ ನೈಋತ್ಯ ಭಾಗದ ಹಲವು ಹಳ್ಳಿಗಳಲ್ಲಿ ಸಂಜೆ 4.50ರ ವೇಳೆಗೆ ಭೂಕಂಪ ಸಂಭವಿಸಿತು. ಈ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.7ರಷ್ಟಿತ್ತು ಎಂದು ಚಂಡಮಾರುತ ಮುನ್ಸೂಚನಾ ಕೇಂದ್ರ ತಿಳಿಸಿತು. ನರ್ಸಿಪಟ್ನಂ ಗ್ರಾಮದಲ್ಲಿ ಮೂರು ಸೆಕೆಂಡುಗಳ ಕಾಲ ಭೂಮಿ ಕಂಪಿಸಿ, ಪಾತ್ರೆಗಳು ಉರುಳಿ ಬಿದ್ದವು. ಗಾಬರಿಯಾದ ಜನ ತಮ್ಮ ಮನೆಗಳಿಂದ ಹೊರಗೆ ಓಡಿ ಬಂದರು. ಮಕಾವರಿಪಲೇಂ, ಕೊಟೌರತ್ಲಾ, ನಟವರಂ, ಅನಕಪಲ್ಲಿ, ಪದೇರು, ಚೊಡಾವರಂ, ಕೊಥಾಕೊಟಾ, ಕಸ್ಮಿಕೊಟಾ, ಎಲೆಮಂಚಿಲಿ, ಬುಚ್ಚಿಯಪೇಟ ಮುಂತಾದೆಡೆ ಭೂಕಂಪದ ಅನುಭವವಾಯಿತು.

2008: ಆರು ವರ್ಷಗಳ ಹಿಂದೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ನಿತೀಶ್ ಕಟಾರಾ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಜಕಾರಣಿ ಡಿ.ಪಿ. ಯಾದವ್ ಅವರ ಪುತ್ರ ವಿಕಾಸ್ ಯಾದವ್ ಹಾಗೂ ಆತನ ಸಹೋದರ ಸಂಬಂಧಿ ವಿಶಾಲ್ ಯಾದವ್ ಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿತು. ಈ ಪ್ರಕರಣದಲ್ಲಿ ತೀರ್ಪು ನೀಡಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶೆ ರವೀಂದರ್ ಕೌರ್ 'ಇಬ್ಬರು ತಪ್ಪಿತಸ್ಥರಿಗೂ ನಾನು ಜೀವಾವಧಿ ಶಿಕ್ಷೆ ನೀಡಿದ್ದೇನೆ. ಮರಣ ದಂಡನೆಗೆ ಅರ್ಹವಾದ ಪ್ರಕರಣ ಇದಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿಕಾಸ್ ಹಾಗೂ ವಿಶಾಲ್ ಯಾದವ್ 2002ರ ಫೆಬ್ರುವರಿ 16ರಂದು ಘಜಿಯಾಬಾದಿನ ಮದುವೆ ಸಮಾರಂಭವೊಂದರಿಂದ ನಿತೀಶ್ ಕಟಾರಾನನ್ನು ಅಪಹರಿಸಿ ಕೊಂದು ಹಾಕಿದ್ದರು. ತನ್ನ ಸಹೋದರಿ ಭಾರತಿ ಯಾದವ್ ಜೊತೆ ಕಟಾರಾ ಆತ್ಮೀಯವಾಗಿದ್ದುದನ್ನು ವಿಕಾಸ್ ವಿರೋಧಿಸುತ್ತಿದ್ದ. ನಿತೀಶ್ ತಾಯಿ ನೀಲಂ ಕಟಾರಾ, ಮಗನ ಕೊಲೆಗಾರರಿಗೆ ಶಿಕ್ಷೆಯಾಗುವತನಕ ಹೋರಾಡುವುದಾಗಿ ಪಣ ತೊಟ್ಟಿದ್ದರು.

2008: ಮಾಟ ಮಂತ್ರ ಮಾಡುತ್ತಿದ್ದ ಆರೋಪದ ಮೇರೆಗೆ 31 ವರ್ಷದ ಬುಡಕಟ್ಟು ಮಹಿಳೆಯೊಬ್ಬರನ್ನು ಸಜೀವ ದಹನ ಮಾಡಿದ ದಾರುಣ ಘಟನೆ ದಕ್ಷಿಣ ಒರಿಸ್ಸಾದ ಕೋರಾಪಟ್ ಜಿಲ್ಲೆಯ ಬಾಡಮಾಥೂರ್ ಗ್ರಾಮದಲ್ಲಿ ನಡೆಯಿತು. ಮಾರಮಣಿ ಜುಗೂರ್ ಎಂಬಾಕೆ ಸಜೀವ ದಹನಗೊಂಡ ನತದೃಷ್ಟೆ. ಈ ಕೃತ್ಯ ಎಸಗಿದ ಮೂವರ ಪೈಕಿ ಒಬ್ಬನ ಪತ್ನಿ ಮಹಿಳೆಯ ಮಾಟ ಮಂತ್ರದಿಂದಲೇ ಮೃತಪಟ್ಟಿದ್ದಾಳೆ ಎಂದು ನಂಬಿ ಈ ಹೇಯ ಕೃತ್ಯ ಎಸಗಲಾಯಿತು.

2008: ಕೊಲೆ ಪ್ರಕರಣವೊಂದರಲ್ಲಿ ಬಿಹಾರದ ಮಾಜಿ ಪಶು ಸಂಗೋಪನಾ ಸಚಿವ ಆದಿತ್ಯ ಸಿಂಗ್ ಮತ್ತು ಅವರ ಪುತ್ರ ಸುಮನ್ ಸಿಂಗ್ ತಪ್ಪಿತಸ್ಥರು ಎಂದು ಬಿಹಾರದ ನವಾಡಾ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿತು.

2008: ರಾಜಸ್ಥಾನದ ಸವಾಯ್ ಮಾಧೋಪುರ ಜಿಲ್ಲೆಯಲ್ಲಿ ಗುಜ್ಜರ್ ಪ್ರತಿಭಟನೆಯ ವೇಳೆ ಹಿಂಸಾಚಾರಕ್ಕೆ ಇಳಿದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಇಬ್ಬರು ಮೃತರಾಗಿ ಇತರ ಇಬ್ಬರು ಗಂಭೀರವಾಗಿ ಗಾಯಗೊಂಡರು.

2008: ಗ್ರಾಮೀಣ ಪ್ರವಾಸೋದ್ಯಮವನ್ನು ಬೆಳೆಸಲು ರೂಪಿಸಲಾಗಿರುವ `ವಿಸ್ಮಯ ಭಾರತ' ಆಂದೋಲನ ಯೋಜನೆಯ ಪಟ್ಟಿಗೆ ಹಂಪಿ ಸಮೀಪದ ಆನೆಗೊಂದಿಯನ್ನು ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾದ ಆನೆಗೊಂದಿಗೆ ದೇಶೀಯ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಈ ನಿರ್ಧಾರಕ್ಕೆ ಬಂದಿತು. ಪ್ರವಾಸೋದ್ಯಮ ಕಾರ್ಯದರ್ಶಿ ಎಸ್.ಬ್ಯಾನರ್ಜಿ ಅವರು, `ಈ ಯೋಜನೆಯಡಿ ದೇಶದಲ್ಲಿ ಆಯ್ಕೆ ಮಾಡಲಾದ 36 ಸ್ಥಳಗಳಲ್ಲಿ ಆನೆಗೊಂದಿ ಕೂಡ ಒಂದು' ಎಂದು ತಿಳಿಸಿದರು.

2008: ನಾಸಾದ ಮೂರು ಮಹಾನ್ ವೀಕ್ಷಣಾ ಪರಿಕರಗಳು ಸಂಗ್ರಹಿಸಿದ `ಕ್ಯಾಸಿಯೊಪಿಯಾ ಎ' ಹೆಸರಿನ ಬೃಹತ್ ನಕ್ಷತ್ರದ ಅವಶೇಷದ ಕಣ್ಮನ ಸೆಳೆಯುವ `ತಾತ್ಕಾಲಿಕ' ಬಣ್ಣದ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಈ ಚಿತ್ರವು ನಕ್ಷತ್ರಗಳ ಆಯುಷ್ಯ ಸಹಿತ ಖಗೋಳದ ಹಲವು ವಿಸ್ಮಯಗಳನ್ನೂ ಬಿಚ್ಚಿಟ್ಟಿತು. ಸ್ಪಿಟ್ಜರ್ ಸ್ಪೇಸ್ ಟೆಲಿಸ್ಕೋಪಿನಿಂದ ತೆಗೆದ ಚಿತ್ರ ಕೆಂಪು ಬಣ್ಣವನ್ನು, ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್ ಹಳದಿ ಬಣ್ಣವನ್ನು ಮತ್ತು ಚಂದ್ರ ಎಕ್ಸರೇ ಅಬ್ಸರ್ವೇಟರಿ ಹಸಿರು ಮತ್ತು ನೀಲಿ ಬಣ್ಣವನ್ನು ದಾಖಲಿಸಿವೆ. ಹಲವು ವರ್ಷಗಳ ಹಿಂದೆ ನಕ್ಷತ್ರಗಳು ಸ್ಫೋಟಗೊಂಡು ನಾಶಗೊಂಡದ್ದರ ನಿಗೂಢ ಅಂಶಗಳನ್ನು ಪತ್ತೆಹಚ್ಚುವುದಕ್ಕೆ ಖಗೋಳ ತಜ್ಞರಿಗೆ ಇಂತಹ ಚಿತ್ರಗಳು ನೆರವಿಗೆ ಬರುತ್ತವೆ. ನಮ್ಮ ಕ್ಷೀರಪಥದಲ್ಲಿನ ಬೃಹತ್ ನಕ್ಷತ್ರಗಳ ಆಯಸ್ಸು ಅಳೆಯುವ ಕಾರ್ಯಕ್ಕೆ ಇದರಿಂದ ಹೊಸ ಆಯಾಮ ದೊರಕಿತು. ಈ ನಕ್ಷತ್ರ ಭೂಮಿಯಿಂದ 11,000 ಜ್ಯೋತಿರ್ ವರ್ಷ ದೂರದಲ್ಲಿ ಇರುವುದರಿಂದ ಈ ಚಿತ್ರದಲ್ಲಿನ ನಕ್ಷತ್ರ 11,300 ಜ್ಯೋತಿರ್ ವರ್ಷಗಳ ಹಿಂದೆ ನಾಶವಾದುದು ಸ್ಪಷ್ಟವಾಯಿತು. ನಕ್ಷತ್ರದಲ್ಲಿ ಸ್ಫೋಟ ಸಂಭವಿಸಿ ಉಂಟಾದ ಈ ಅದ್ಭುತ ಬಣ್ಣದ ಬೆಳಕು ಭೂಮಿಗೆ ತಲುಪಲು 300 ವರ್ಷ ಹಿಡಿದಿತ್ತು.

2008: ನೇಪಾಳವನ್ನು ಗಣರಾಜ್ಯ ಎಂದು ಘೋಷಿಸಿದ ಬೆನ್ನಲ್ಲಿಯೇ ಪದಚ್ಯುತ ದೊರೆ ಜ್ಞಾನೇಂದ್ರ ಅವರು ತಮಗೆ ನೀಡಿದ ಗಡುವಿಗೆ ಮುನ್ನವೇ ಈದಿನ ಮಧ್ಯರಾತ್ರಿ ನಾರಾಯಣಹಿತಿ ಅರಮನೆಯನ್ನು ತೊರೆದರು. ಮಧ್ಯರಾತ್ರಿ ಅರಮನೆ ತೊರೆದ ದೊರೆ ತಮ್ಮ ಕುಟುಂಬ ವರ್ಗದೊಂದಿಗೆ ಖಾಸಗಿ ನಿವಾಸವಾದ ಮಹಾರಾಜಾಗಂಜ್ನ ನಿರ್ಮಲ್ ನಿವಾಸಕ್ಕೆ ತೆರಳಿದರು ಎಂದು ಟಿವಿ ಚಾನೆಲ್ ಒಂದು ಪ್ರಸಾರ ಮಾಡಿತು. ನಿರ್ಮಲ್ ನಿವಾಸ್ ನಾರಾಯಣಹಿತಿ ಅರಮನೆಯಿಂದ ಮೂರು ಮೈಲಿ ದೂರದಲ್ಲಿದೆ. ಆದರೆ ದೊರೆಯ ಆಪ್ತ ಕಾರ್ಯದರ್ಶಿ ಪಶುಪತಿ ಭಕ್ತಾ ಮಹಾರಾಜನ್ ಇದನ್ನು ಅಲ್ಲಗಳೆದು, ಅರಮನೆ ತೊರೆಯಲು 15 ದಿನಗಳು ಕಾಲಾವಕಾಶ ಪಡೆದಿರುವ ಜ್ಞಾನೇಂದ್ರ ಇನ್ನೂ ಅಲ್ಲಿಯೇ ವಾಸವಾಗಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

2008: ಭಾರತೀಯ ಮೂಲದ ಬಿಬಿಸಿ ವರದಿಗಾರ್ತಿ ಆಂಜೆಲ್ ಸೈನಿ (27) ಅವರಿಗೆ ಯೂರೋಪಿನ ಪ್ರತಿಷ್ಠಿತ `ಪ್ರಿಕ್ಸ್ ಸಿರ್ಕೊಮ್' ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿತು. ಬ್ರಿಟನ್ನಿನಲ್ಲಿನ ನಕಲಿ ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಬಯಲುಗೊಳಿಸುವ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತು. ಭಾರತೀಯರ ಸಹಿತ ಸಾವಿರಾರು ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ `ಐರಿಷ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿ' ಬಗ್ಗೆ ಅವರು ಈ ತನಿಖಾ ವರದಿ ಸಿದ್ಧಪಡಿಸಿದ್ದರು.

2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡ 2215 ಖಾಸಗಿ ಶಾಲೆಗಳು ಇನ್ನು ಮುಂದೆ ತಾವು ಅನುಮತಿ ಪಡೆದಿರುವ ಮಾಧ್ಯಮದಲ್ಲಿಯೇ ಬೋಧಿಸುವಂತೆ ವಾರದ ಹಿಂದೆ ನೀಡಿದ ಆದೇಶದಲ್ಲಿ ಮಾರ್ಪಾಡು ಮಾಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತು.

2007: ಅಡುಗೆ ಅರಿಶಿಣದಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂಬುದನ್ನು ತಾನು ಪತ್ತೆ ಹಚ್ಚಿರುವುದಾಗಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಪ್ರಕಟಿಸಿತು. ಕ್ಯಾನ್ಸ ರಿಗಷ್ಟೇ ಅಲ್ಲ ಹಾವು ಕಡಿತಕ್ಕೂ ಅಡುಗೆ ಅರಿಶಿಣ ಮದ್ದು ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ಸಂಶೋಧಕಿ ಡಾ. ಲೀಲಾ ಶ್ರೀನಿವಾಸನ್ ಅವರು ಬೆಂಗಳೂರಿನಲ್ಲಿ ಆದಿ ಚುಂಚನಗಿರಿ ಮಠದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸಮ್ಮುಖದಲ್ಲಿ ಪ್ರಕಟಿಸಿದರು.

2007: ಮಹಿಳೆಯರು ಹಾನಿಕಾರಕ ಪ್ಲಾಸ್ಟಿಕ್ ಸ್ಟಿಕರ್ಸ್ ಗಳಿಗೆ (ಟಿಕಲಿ) ಬದಲಾಗಿ ಬಳಸಹುದಾದ ನಂಜುಮುಕ್ತ, ಪರಿಸರ ಸ್ನೇಹಿ ನೈಸರ್ಗಿಕ ಸಿಂಧೂರವನ್ನು ಅವಿಷ್ಕರಿಸಿರುವುದಾಗಿ ಲಖನೌ ಮೂಲದ ರಾಷ್ಟ್ರೀಯ ಸಸ್ಯ ಸಂಶೋಧನಾ ಸಂಸ್ಥೆ (ಎನ್ಬಿಆರ್ಐ) ಪ್ರಕಟಿಸಿತು.

2007: ಗುರ್ಜರ ಜನಾಂಗವನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ಮಾಡಿದವರ ಮೇಲೆ ಪೊಲೀಸರು ಗೋಲಿಬಾರ್ ಮಾಡ್ದಿದನ್ನು ಖಂಡಿಸಿ ಗುರ್ಜರ ಮೀಸಲಾತಿ ಕ್ರಿಯಾ ಸಮಿತಿ ಕರೆಯ ಮೇರೆಗೆ ರಾಜಸ್ಥಾನದ ವಿವಿಧ ಪ್ರದೇಶಗಳಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು. ದೌಸಾ ಜಿಲ್ಲೆಯ ದುಬಿ ಮತ್ತು ಸಿಕಂದ್ರಾದಲ್ಲಿ ಎರಡು ಪೊಲೀಸ್ ಠಾಣೆಗಳಿಗೆ ಉದ್ರಿಕ್ತರು ಕಿಚ್ಚಿಟ್ಟರು.

2007: ಚಲನಚಿತ್ರೋದ್ಯಮ ರಂಗದಲ್ಲಿ `ಸ್ನೇಹಲ್ ಭಾಟ್ಕರ್' ಎಂದೇ ಖ್ಯಾತರಾಗಿದ್ದ ಗಾಯಕ ವಾಸುದೇವ ಗೋವಿಂದ ಭಾಟ್ಕರ್ (88) ಹೃದಯಾಘಾತದಿಂದ ನಿಧನರಾದರು. ಭಾಟ್ಕರ್ ಅವರು ಹಿಂದಿ ಮತ್ತು ಮರಾಠಿ ಚಿತ್ರಗಳಿಗೆ ಹಲವಾರು ಜನಪ್ರಿಯ ಹಾಡುಗಳನ್ನು ರಚಿಸಿದ್ದರು.

2006: ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಹುದ್ದೆ ಸೇರಿದಂತೆ 56 ಹುದ್ದೆಗಳನ್ನು `ಲಾಭದಾಯಕ' ವ್ಯಾಪ್ತಿಯಿಂದ ಹೊರಗಿಡುವ ಮಸೂದೆಯನ್ನು ರಾಷ್ಟ್ರಪತಿ ಅಬ್ದುಲ್ ಕಲಾಂ ವಾಪಸ್ ಕಳುಹಿಸಿದರು. ಸಂಸದರು ಮತ್ತು ಶಾಸಕರನ್ನು `ಲಾಭದ ಹುದ್ದೆ' ವಿವಾದದಿಂದ ಪಾರುಮಾಡಲು ಯತ್ನಿಸಿದ್ದ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಕ್ರಮದಿಂದ ಹಿನ್ನಡೆಯಾಯಿತು.

2006: ಭಾರತದ ಗೌರಿ ಶಂಕರ್ ಅವರು ಚಿಕಾಗೊ ಅಂತಾರಾಷ್ಟ್ರೀಯ ಓಪನ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡರು.

2006: ಕ್ಯಾನ್ನೆಸ್ಸಿನಲ್ಲಿ ಎರಡು ಬಾರಿ ಪ್ರತಿಷ್ಠಿತ ಪಾಲ್ಮೆ ಡಿ'ಓರ್ ಪ್ರಶಸ್ತಿಯನ್ನು ಗೆದ್ದ ಜಪಾನಿನ ಪ್ರಥಮ ಚಿತ್ರ ನಿರ್ದೇಶಕ ಶೋಹೆಲ್ ಇಮಾಮುರಾ ಈ ದಿನ 79ನೇ ವಯಸ್ಸಿನಲ್ಲಿ ನಿಧನರಾದರು. 1983ರಲ್ಲಿ ಪಾಲ್ಮೆ ಡಿ'ಓರ್ ಪ್ರಶಸ್ತಿಯನ್ನು `ದಿ ಬ್ಯಾಲ್ಲಡ್ ಆಫ್ ನರಯಾಮ'ಕ್ಕೆ ಪಡೆದಿದ್ದ ಇಮಾಮುರಾ, 1997ರಲ್ಲಿ `ದಿ ಎಲ್' ಗೆ ಈ ಪ್ರಶಸ್ತಿಯನ್ನು ಎರಡನೇ ಬಾರಿಗೆ ಪಡೆದರು.

1991: ಉಮಾಶಂಕರ ದೀಕ್ಷಿತ್ ನಿಧನರಾದರು.

1987: ಗೋವಾ ಭಾರತದ 25ನೇ ರಾಜ್ಯವಾಯಿತು. ಇಲ್ಲಿಯವರೆಗೆ ಅದು ಕೇಂದ್ರಾಡಳಿತ ಪ್ರದೇಶವಾಗಿತ್ತು.

1959: ಸರ್ ಕ್ರಿಸ್ಟೋಫರ್ ಕೋಕರೆಲ್ ಅವರು ವಿನ್ಯಾಸಗೊಳಿಸಿದ ಮೊತ್ತ ಮೊದಲ ಪ್ರಾಯೋಗಿಕ ಹೋವರ್ ಕ್ರಾಫ್ಟಿಗೆ ಐಲ್ ಆಫ್ ವೈಟ್ ನಲ್ಲಿ ಚಾಲನೆ ಸಿಕ್ಕಿತು. ಪ್ರಾರಂಭದಲ್ಲಿ ಇದನ್ನು ಸೇನಾ ಸೇವೆಗಾಗಿ ಮಾತ್ರ ಎಂಬುದಾಗಿ ರೂಪಿಸಲಾಗಿತ್ತಾದರೂ ನಂತರ ನಾಗರಿಕ ಬಳಕೆಗೆ ಇದನ್ನು ಬಿಡುಗಡೆ ಮಾಡಲಾಯಿತು.

1950: ಕಲಾವಿದೆ ಶೋಭಾ ಹುಣಸಗಿ ಜನನ.

1948: ಸುಗಮ ಸಂಗೀತರ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಪಂಕಜ ಸಿಂಹ (30-5-1948ರಿಂದ 20-12-2000) ಅವರು ಅಡ್ವೋಕೇಟ್ ಗೋವಿಂದರಾವ್- ಖ್ಯಾತ ಪಿಟೀಲು ವಾದಕಿ ಶಾರದಮ್ಮ ದಂಪತಿಯ ಮಗಳಾಗಿ ಹಾಸನದಲ್ಲಿ ಜನಿಸಿದರು.

1919: ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ ರಬೀಂದ್ರನಾಥ ಟ್ಯಾಗೋರ್ ಅವರು ತಮಗೆ ನೀಡಲಾಗಿದ್ದ `ನೈಟ್ ಹುಡ್' ಪದವಿಯನ್ನು ನಿರಾಕರಿಸಿ ಲಾರ್ಡ್ ಚೆಮ್ಸ್ ಫೋರ್ಡ್ ಅವರಿಗೆ ಪತ್ರ ಬರೆದರು.

1907: ನರೇಗಲ್ಲ ಮಾಸ್ತರ ಎಂದೇ ಖ್ಯಾತರಾಗಿದ್ದ ನರೇಗಲ್ಲ ಪ್ರಹ್ಲಾದರಾಯರು (30-5-1907ರಿಂದ 1977) ನವಲಗುಂದ ತಾಲ್ಲೂಕಿನ ಜಾವೂರಿನಲ್ಲಿ ಅನಂತರಾವ್ ನರೇಗಲ್ಲ- ಅಂಬಾಬಾಯಿ ಪುತ್ರನಾಗಿ ಜನಿಸಿದರು.

1895: ಖ್ಯಾತ ಇತಿಹಾಸಕಾರ ಪಾಂಡುರಂಗ ಶಂಕರಂ ಜನನ.

1606: ಸಿಖ್ ಧರ್ಮದ ಐದನೆಯ ಗುರುಗಳಾಗಿದ್ದ ಗುರು ಅರ್ಜುನ್ ದೇವ್ ಅವರನ್ನು ಬಂಡುಕೋರ ರಾಜಕುಮಾರ ಖುಸ್ರು ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಕಾರಣಕ್ಕಾಗಿ ಮೊಘಲ್ ದೊರೆ ಜಹಾಂಗೀರ್ ಚಿತ್ರಹಿಂಸೆಗೆ ಗುರಿಪಡಿಸಿ ಕೊಲ್ಲಿಸಿದ. ಸಿಖ್ ಧರ್ಮದ ಮೊದಲನೆಯ ಹುತಾತ್ಮರಾದ ಅರ್ಜುನ್ ದೇವ್ `ಗುರು ಗ್ರಂಥ ಸಾಹಿಬ್'ನ್ನು ಸಂಕಲನಗೊಳಿಸಿದವರು.

No comments:

Post a Comment