ಇಂದಿನ ಇತಿಹಾಸ History Today ಮೇ 29
2019: ನವದೆಹಲಿ: ಆರೋಗ್ಯದ ಕಾರಣ ನೀಡಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರದಿಂದ ಹೊರಗೆ ಉಳಿಯಬಯುಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಜೊತೆ ಪ್ರಧಾನಿಯವರು ರಾತ್ರಿ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಈ ಮಧ್ಯೆ ರಾಷ್ಟ್ರಪತಿ ಭವನದಲ್ಲಿ 2019 ಮೇ 30ರ ಗುರುವಾರ ಸಂಜೆ ೭ ಗಂಟೆಗೆ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸೇರಿದಂತೆ ಉನ್ನತ ನಾಯಕರು ಪಾಲ್ಗೊಳ್ಳಲಿದ್ದಾರೆ. ಏನಿದ್ದರೂ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ರಾತ್ರಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಸಂಪರ್ಕಿಸಿ ನಿರ್ಧಾರ ಮರುಪರಿಶೀಲನೆಗೆ ಮನವಿ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿದವು.. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಧಾನಿ ಮತ್ತು ಅವರ ಸಚಿವ ಸಂಪುಟದ ಇತರ ಸದಸ್ಯರಿಗೆ ಗೌಪ್ಯತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಲಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೂಡಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಮುನ್ನ ’ಸಾಂವಿಧಾನಿಕ ಕರ್ತವ್ಯ’ದ ನೆಲೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ನಿರ್ಧಾರ ಬದಲಿಸಿ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸೆಯಲ್ಲಿ ಹತರಾದ ಪಕ್ಷ ಸದಸ್ಯರ ಕುಟುಂಬ ಸದಸ್ಯರನ್ನು ಆಹ್ವಾನಿಸಿರುವ ಹಿನ್ನೆಲೆಯಲ್ಲಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದರು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೂ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿಲ್ಲ. ಪಟ್ನಾಯಕ್ ಅವರು ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದ್ದರು. ಆದರೆ ಮೋದಿಯವರು ಸಮಾರಂಭಕ್ಕೆ ಹಾಜರಾಗಿರಲಿಲ್ಲ. ದೇಶದ ವಿವಿಧ ನಾಯಕರ ಹೊರತಾಗಿ, ಬಾಂಗ್ಲಾದೇಶ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು
ಕಿರ್ಗಿಸ್ಥಾನ ಅಧ್ಯಕ್ಷರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನೇಪಾಳ, ಮಾರಿಷಸ್ ಮತ್ತು ಭೂತಾನ್ ಪ್ರಧಾನ ಮಂತ್ರಿಗಳು ಹಾಗೂ ಥಾಯ್ಲೆಂಡಿನ ವಿಶೇಷ ಪ್ರತಿನಿಧಿ ತಮ್ಮ ಹಾಜರಾತಿಯನ್ನು ದೃಢ ಪಡಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತು.
2019: ನವದೆಹಲಿ: ತಮ್ಮ ಆರೋಗ್ಯದ ಹಿನ್ನೆಲೆಯಲ್ಲಿ ತಮಗೆ ಯಾವುದೇ ಜವಾಬ್ದಾರಿ ನೀಡಬೇಡಿ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರದಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡರು. ಪ್ರಧಾನಿ ಮೋದಿ ಅವರು ಎರಡನೇ ಅವಧಿಯನ್ನು ಆರಂಭಿಸುವುದಕ್ಕೆ ಒಂದು ದಿನ ಮುಂಚಿತವಾಗಿ ಜೇಟ್ಲಿಯವರು ಪ್ರಧಾನಿಗೆ ಬರೆದ ತಮ್ಮ ಪತ್ರವನ್ನು ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಿದರು. ತಾವು ಕಳೆದ ೧೮ ತಿಂಗಳುಗಳಿಂದ ಕೆಲವು ಗಂಭೀರವಾದ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದು, ವೈದ್ಯರ ನೆರವಿನಿಂದ ಬಹುತೇಕ ಸಮಸ್ಯೆಗಳಿಂದ ಹೊರ ಬಂದಿದ್ದೇನೆ ಎಂದು ಜೇಟ್ಲಿ ಅವರು ಪ್ರಧಾನಿಯವರಿಗೆ ತಿಳಿಸಿದರು. ಈ ತಿಂಗಳ ಆದಿಯಲ್ಲಿ ಮುಕ್ತಾಯಗೊಂಡ ಏಳು ಹಂತಗಳ ಲೋಕಸಭಾ ಚುನಾವಣೆಯ ಪ್ರಚಾರದ ಬಳಿಕ ಪ್ರಧಾನಿಯವರ ಜೊತೆಗೆ ತಾವು ನಡೆಸಿದ ಸಂಭಾಷಣೆಯನ್ನು ಅರುಣ್ ಜೇಟ್ಲಿ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದರು. ’ಪ್ರಚಾರ ಮುಕ್ತಾಯಗೊಂಡ ಬಳಿಕ ನೀವು ಕೇದಾರನಾಥಕ್ಕೆ ಹೊರಟಿದ್ದಿರಿ, ಆಗ ಪ್ರಚಾರದ ಕಾಲದಲ್ಲಿ ನನಗೆ ವಹಿಸಲಾಗಿದ್ದ ಜವಾಬ್ದಾರಿಗಳನ್ನು ನಿಭಾಯಿಸಲು ನನಗೆ ಸಾಧ್ಯವಾದರೂ, ಭವಿಷ್ಯದಲ್ಲಿ ಸ್ವಲ್ಪ ಕಾಲ ನಾನು ಯಾವುದೇ ಜವಾಬ್ದಾರಿಯಿಂದ ದೂರ ಇರಲು ಬಯಸಿದ್ದೇನೆ, ಇದು ನನಗೆ
ನನ್ನ ಚಿಕಿತ್ಸೆ ಹಾಗೂ ಆರೋಗ್ಯದ ಬಗ್ಗೆ ಗಮನ ಕೇಂದ್ರೀಕರಿಸಲು ನೆರವಾಗುವುದು ಎಂದು ನಾನು ಮೌಖಿಕವಾಗಿ ನಿಮಗೆ ತಿಳಿಸಿದ್ದೆ’ ಎಂದು ಹಣಕಾಸು ಸಚಿವರು ಪ್ರಧಾನಿಗೆ ಬರೆದ ತಮ್ಮ ಪತ್ರದಲ್ಲಿ ಹೇಳಿದರು. ’ನನಗೆ ಚಿಕಿತ್ಸೆ ಮತ್ತು ಆರೋಗ್ಯದ ಸಲುವಾಗಿ ನ್ಯಾಯೋಚಿತ ಕಾಲಾವಧಿಯನ್ನು ನನಗೆ ದೊರಕಿಸಿಕೊಡಬೇಕು ಎಂದು ನಾನು ಔಪಚಾರಿಕವಾಗಿ ನಿಮಗೆ ಲಿಖಿತ ಮನವಿ ಮಾಡುತ್ತಿದ್ದೇನೆ. ಆದ್ದರಿಂದ ನೂತನ ಸರ್ಕಾರದಲ್ಲಿ ಸಧ್ಯಕ್ಕೆ ನನಗೆ ಯಾವುದೇ ಜವಾಬ್ದಾರಿಯನ್ನು ನೀಡಬೇಡಿ ಎಂದು ಕೋರುತ್ತೇನೆ’ ಎಂದು ಜೇಟ್ಲಿ ಬರೆದರು. ಏನಿದ್ದರೂ ಸರ್ಕಾರ ಅಥವಾ ಪಕ್ಷಕ್ಕೆ ಬೆಂಬಲವಾಗಿ ಯಾವುದೇ ಕೆಲಸವನ್ನು ಅನೌಪಚಾರಿಕವಾಗಿ ನಡೆಸಲು ತಾವು ಸಿದ್ಧ ಎಂದು ಸಚಿವರು ಹೇಳಿದರು. ಅರುಣ್ ಜೇಟ್ಲಿ ಅವರ ನಿರ್ಧಾರದ ಪರಿಣಾಮವಾಗಿ ಪ್ರಧಾನಿ ಮೋದಿಯವರು ತಮ್ಮ ಎರಡನೇ ಅವಧಿಯಲ್ಲಿ ನೂತನ ಹಣಕಾಸು ಸಚಿವರನ್ನು ಮಾಡಬೇಕಾಗುತ್ತದೆ. ಜೇಟ್ಲಿ ಅವರು ಎರಡು ಬಾರಿ ಅಸ್ವಸ್ಥರಾಗಿದ್ದಾಗ, ಪ್ರಧಾನಿಯವರು ತಾತ್ಕಾಲಿಕವಾಗಿ ಪೀಯೂಶ್ ಗೋಯಲ್ ಅವರಿಗೆ ಹಣಕಾಸು ಸಚಿವಾಲಯದ ಮಧ್ಯಂತರ ಉಸ್ತುವಾರಿ ನಿಭಾಯಿಸುವಂತೆ ಸೂಚಿಸಿದ್ದರು. ಅತಿ ದೊಡ್ಡ ಪರೋಕ್ಷ ತೆರಿಗೆ ಸುಧಾರಣೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಭಾರತದಲ್ಲಿ ವ್ಯವಹಾರ ನಡೆಸುವುದನ್ನು
ಸುಗಮಗೊಳಿಸಿದ ದಿವಾಳಿ ಕೋಡ್ ಜಾರಿಯನ್ನು ಜೇಟ್ಲಿ ಅವರು ಕಳೆದ ಐದು ವರ್ಷಗಳಲ್ಲಿ ನಿಭಾಯಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಮೊದಲ ಎನ್‌ಡಿಎ ಸರ್ಕಾರ ಮತ್ತು ಬಳಿಕ ಪ್ರಧಾನಿ ಮೋದಿ ಸರ್ಕಾರದಲ್ಲಿ ಪಕ್ಷವು ತಮಗೆ ವಹಿಸಿದ ಹಲವಾರು ಜವಾಬ್ದಾರಿಗಳನ್ನು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಜೇಟ್ಲಿ ನೆನಪಿಸಿದರು. ’ನಾನು ಹೆಚ್ಚಿನದನ್ನು ಕೇಳಲು ಸಾಧ್ಯವೇ ಇರಲಿಲ್ಲ’ ಎಂದು ಬರೆದ ಜೇಟ್ಲಿ ಪ್ರಧಾನಿ ಮೋದಿಯವರ ಸರ್ಕಾರದದಲ್ಲಿನ ಕಳೆದ ಐದು ವರ್ಷಗಳು ತಮಗೆ ’ಮಹಾನ್ ಗೌರವ ಮತ್ತು ಕಲಿಕಾ ಅನುಭವ’ ಎಂದು ಬಣ್ಣಿಸಿದರು. ಪ್ರಧಾನಿ ಮೋದಿ ಮತ್ತು ಬಿಜೆಪಿಯ ಮಹಾ ವ್ಯೂಹ ಚತುರ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರವು ಬಿಜೆಪಿಗೆ ಲೋಕಸಭೆಯಲಿ ೩೦೩ ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದತ್ತು. ೫೪೩ ಸದಸ್ಯಬಲದ ಲೋಕಸಭೆಯಲ್ಲಿ ಮಿತ್ರ ಪಕ್ಷಗಳನ್ನೂ ಸೇರಿಸಿಕೊಂಡು ಎನ್‌ಡಿಎ ಬಲ ೩೫೩ಕ್ಕೆ ಏರಿತ್ತು. ಅರುಣ್ ಜೇಟ್ಲಿ ಅವರ ಪ್ರಕಟಣೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರತಿಕ್ರಿಯಿಸಿದರು. ’ಹಲವಾರು ವರ್ಷಗಳಿಂದ ನನಗೆ ಅವರು ಚೆನ್ನಾಗಿ ಗೊತ್ತು. ರಾಜಕೀಯ ಭಿನ್ನಮತಗಳ ಹೊರತಾಗಿಯೂ ಅವರು ಅತ್ಯಂತ ಆತ್ಮೀಯ ವ್ಯಕ್ತಿಯಾಗಿ ಇದ್ದುದನ್ನು ನಾನು ಕಂಡಿದ್ದೇನೆ.’ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹೇಳಿದರು. ರಾಜಕಾರಣಿಯಾಗಿ ಬದಲಾದ ವಕೀಲ ಜೇಟ್ಲಿ ಅವರು ಶೀಘ್ರ ಚೇತರಿಸಲಿ ಎಂದು ಕೇಜ್ರಿವಾಲ್ ಹಾರೈಸಿದರು.
2019: ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ, ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಸೇರಿದಂತೆ ಕಾಂಗ್ರೆಸ್ ನಾಯಕರ ಭೇಟಿ ನಿರಾಕರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಾಸ್ತವವಾಗಿ ಕಾಂಗ್ರೆಸ್ಸಿನ ಬಹುತೇಕ ನಾಯಕರ ಜೊತೆಗಿನ ಸಂಪರ್ಕ ಕಡಿದುಕೊಂಡರು. ಈ ಮಧ್ಯೆ
ಕಾಂಗೆಸ್ ಅಧ್ಯಕ್ಷರ ನಿವಾಸದ ಹೊರಗೆ ಪ್ರದರ್ಶನಗಳನ್ನು ನಡೆಸಿದ ಕಾರ್‍ಯಕರ್ತರು ’ರಾಹುಲ್ ರಾಜೀನಾಮೆ ಬೇಡ’ ಕೂಗನ್ನು ಇನ್ನಷ್ಟು ಪ್ರಬಲಗೊಳಿಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಅವರ ಪದತ್ಯಾಗವನ್ನು ತಡೆಯಲು ಶೀಲಾ ದೀಕ್ಷಿತ್ ಅವರು ಯತ್ನಿಸಿದರು. ಆದರೆ ರಾಹುಲ್ ಗಾಂಧಿಯವರು ದೀಕ್ಷಿತ್ ಸೇರಿದಂತೆ ಪಕ್ಷದ ಯಾವ ನಾಯಕರನ್ನೂ ಭೇಟಿ ಮಾಡಲು ನಿರಾಕರಿಸಿದರು ಎಂದು ವರದಿಗಳು ಹೇಳಿದವು. ದಿನೇ ದಿನೇ ಹೆಚ್ಚುತ್ತಿರುವ ’ರಾಹುಲ್ ರಾಜೀನಾಮೆ ಬೇಡ’ ಕೂಗಿನ ನಡುವೆ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಪರಾಭವಕ್ಕೆ ಒಳಗಾಗಿರುವ ಪಕ್ಷವನ್ನು ಮುನ್ನಡೆಸುವಂತೆ ರಾಹುಲ್ ಮನವೊಲಿಸಿಲು ಇನ್ನಿಲ್ಲದ ಕಸರತ್ತು ನಡೆಸಿದರು. ’ರಾಜೀನಾಮೆ ನೀಡಬಾರದು ಎಂಬ ಸಂದೇಶವನ್ನು ನಾನು ಅವರಿಗೆ ನೀಡಿದ್ದೇನೆ. ಅವರು ತಮ್ಮ ಹುದ್ದೆಯಲ್ಲಿ ಮುಂದುವರೆಯಬೇಕು ಎಂದು ನಾನು ಬಯಸಿದ್ದೇನೆ. ಇಲ್ಲದೇ ಇದ್ದಲ್ಲಿ ಅದು ನಮಗೆ ನೋವುಂಟು ಮಾಡುತ್ತದೆ. ಇದನ್ನು ನಾವು ಅವರಿಗೆ ತಿಳಿಸಿದ್ದೇವೆ’ ಎಂದು ಶೀಲಾ ದೀಕ್ಷಿತ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. ಶೀಲಾ ದೀಕ್ಷಿತ್ ಅವರು ರಾಹುಲ್ ಗಾಂಧಿಯವರನ್ನು ಮನಸ್ಸು ಬದಲಾಯಿಸುವಂತೆ ಮನವೊಲಿಸಲು ಯತ್ನಿಸಿದ ಕಾಂಗ್ರೆಸ್ ಕಾರ್‍ಯಕರ್ತರ ಗುಂಪೊಂದರ ನೇತೃತ್ವ ವಹಿಸಿ, ೧೨ ತುಘ್ಲಕ್ ಲೇನ್‌ನಲ್ಲಿನ ರಾಹುಲ್ ನಿವಾಸಕ್ಕೆ ಆಗಮಿಸಿದ್ದರು. ರಾಹುಲ್ ಗಾಂಧಿಯವರು ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ೨೦೧೭ರಲ್ಲಿ ತಮ್ಮ ತಾಯಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ವಹಿಸಿಕೊಂಡ ಕಾಂಗ್ರೆಸ್ ಪಕ್ಷಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಹೇಳಿದ್ದರು. ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಕ್ಷ ನಾಯಕರು ಒತ್ತಾಯಿಸುತ್ತಿರುವುದರ ಹೊರತಾಗಿಯೂ, ಪಕ್ಷದ ಹೀನಾಯ ಸೋಲಿನ ಬಳಿಕ ನೈತಕ ಹೊಣೆ ಹೊತ್ತು ಪದತ್ಯಾಗ ಮಾಡಲು ಕೈಗೊಂಡ ತಮ್ಮ ನಿರ್ಧಾರಕ್ಕೆ ರಾಹುಲ್ ಗಾಂಧಿಯವರು ದೃಢವಾಗಿ ಅಂಟಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ ೫೨ ಸ್ಥಾನಗಳನ್ನು ಗೆದ್ದಿದ್ದು, ಪರಿಣಾಮವಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪಕ್ಷದ ಸರ್ಕಾರಗಳು ಪತನದ ಭೀತಿಯಲ್ಲಿವೆ. ’ನಾವು ರಾಹುಲ್ ಗಾಂಧಿಯವರ ನಿವಾಸದ ಸಮೀಪಕ್ಕೆ ಹೋಗುತ್ತಿದ್ದೇವೆ ಮತ್ತು ಅವರು ರಾಜೀನಾಮೆ ನೀಡಬಾರದು ಎಂಬ ನಮ್ಮ ಭಾವನೆಯನ್ನು ಅವರಿಗೆ ತಿಳಿಸುವ ಸಲುವಾಗಿ ಪ್ರದರ್ಶನ ನಡೆಸುತ್ತೇವೆ. ಅವರ ಪದತ್ಯಾಗದಿಂದ ಪಕ್ಷವು ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ನಾವು ಅದನ್ನು ಬಯಸುವುದಿಲ್ಲ. ಹೀಗೆ ಮಾಡಬೇಡಿ ಎಂಬುದಾಗಿ ಅವರಿಗೆ ಮನವಿ ಮಾಡಲು ನಾವು ಅಲ್ಲಿಗೆ ಹೋಗುತ್ತಿದ್ದೇವೆ’ ಎಂದು ಶೀಲಾ ದೀಕ್ಷಿತ್ ಇದಕ್ಕೆ ಮುನ್ನ ಸುದ್ದಿ ಸಂಸ್ಥೆ ಜೊತೆ ಹೇಳಿದ್ದರು. ’ರಾಹುಲ್ ಗಾಂಧಿಯವರ ರಾಜೀನಾಮೆಯನ್ನು ನಾವು ಅಂಗೀಕರಿಸುವುದಿಲ್ಲ’ ಎಂದು ಅವರು ದೃಢವಾಗಿ ಹೇಳಿದರು. ಪಕ್ಷವು ಈ ಹಿಂದೆಯೂ ಇಂತಹ ಸವಾಲುಗಳನ್ನು ಎದುರಿಸಿ ಗೆದ್ದು ಬಂದಿದೆ ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥೆ ಹೇಳಿದರು. ’ಇಂದಿರಾಗಾಂಧಿಯವರ ಕ್ರಿಯಾಶೀಲ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ೧೯೭೭ರ ಲೋಕಸಭಾ ಚುನಾವಣಾ ಹಿನ್ನಡೆ ವಿರುದ್ಧ ಹೋರಾಡಿ ಒಂದೂವರೆ ವರ್ಷದ ಬಳಿಕ ಕೇಂದ್ರದಲ್ಲಿ ಅಧಿಕಾರವನ್ನು ಮತ್ತೆ ಕೈವಶ ಪಡಿಸಿಕೊಂಡದ್ದಲ್ಲದೆ ಬಳಿಕ ಹಲವಾರು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರೆದಿತ್ತು’ ಎಂದು ದೀಕ್ಷಿತ್ ಹೇಳಿಕೆಯಲ್ಲಿ ತಿಳಿಸಿದರು. ಈ ಸವಾಲಿನ ಸಮಯದಲ್ಲಿ ದೆಹಲಿ ಕಾಂಗ್ರೆಸ್ ರಾಹುಲ್ ಗಾಂಧಿಯವರ ಜೊತೆಗೆ ನಿಲ್ಲುತ್ತದೆ ಎಂದು ಅವರು ಹೇಳಿದರು. ’ಕಾಂಗ್ರೆಸ್ ಅಧ್ಯಕ್ಷರಾಗಲೀ, ಪಕ್ಷ ಕಾರ್‍ಯಕರ್ತರಾಗಲೀ ಲೋಕಸಭಾ ಚುನಾವಣಾ ಹಿನ್ನಡೆಯಿಂದ ಕಂಗೆಡಬೇಕಾದ ಅಗತ್ಯವಿಲ್ಲ’ ಎಂದು ನುಡಿದ ದೀಕ್ಷಿತ್, ಪಕ್ಷಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರವನ್ನು ಹಿಂತೆಗೆದುಕೊಳ್ಳಿ ಎಂದು ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದರು. ದೆಹಲಿಯಲ್ಲಿ ಏಳೂ ಲೋಕಸಭಾ ಸ್ಥಾನಗಳನ್ನು
ಭಾರೀ ಅಂತರಗಳೊಂದಿಗೆ ಗೆದ್ದಿರುವ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ದೂಳೀಪಟಗೊಳಿಸಿದೆ. ಆದರೆ ಕಾಂಗ್ರೆಸ್ ಪಕ್ಷವು ಈ ಬಾರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ಹಿಂದೂಡಿ ೭ ಕ್ಷೇತ್ರಗಳ ಪೈಕಿ ೫ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಗಳಿಸುವಲ್ಲಿ ಸಫಲವಾಗಿತ್ತು. ಸ್ವತಃ ಶೀಲಾ ದೀಕ್ಷಿತ್ ಅವರು ಕೂಡಾ ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಅವರ ಎದುರು ೩,೬೬,೦೦೦ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ದೆಹಲಿಯ ಐದು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ೨ನೇ ಸ್ಥಾನ ಪಡೆದಿದ್ದು, ೫ ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲನೇ ಸ್ಥಾನವನ್ನೂ ಇತರ ೪೨ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಸ್ಥಾನವನ್ನೂ ಪಡೆದಿದೆ ಎಂದು ದೀಕ್ಷಿತ್ ಹೇಳಿದರು. ಕಾಂಗ್ರೆಸ್ ಕಾರ್‍ಯಕರ್ತರು ಮನೆ ಮನೆಗೆ ಧನಾತ್ಮಕ ಕಾರ್‍ಯಸೂಚಿಯೊಂದಿಗೆ ಹೋಗುವರು ಮತ್ತು ಜನರ ವಿಶ್ವಾಸವನ್ನು ಪಡೆಯುವರು ಮತ್ತು ೨೦೨೦ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರುವುದು ಎಂದು ದೀಕ್ಷಿತ್ ನುಡಿದರು. ಐದು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನದಂತಹ ರಾಜ್ಯಗಳ ಅಧಿಕಾರವನ್ನು ಪಡೆದಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ದೂಳೀಪಟಗೊಂಡದ್ದರಿಂದ ಸಿಡಿಮಿಡಿಗೊಂಡಿರುವ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರು ಕಾಂಗ್ರೆಸ್ ಹಿತಾಸಕ್ತಿಗಳನ್ನು ಬಲಿಗೊಟ್ಟು ಮಕ್ಕಳ ಹಿತಕ್ಕಾಗಿ ದುಡಿದಿದ್ದಾರೆ ಎಂದು ಆಕ್ರೋಶಗೊಂಡಿದ್ದಾರೆ ಎಂದು ವರದಿಗಳು ಹೇಳಿದವು. ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆಯಲ್ಲಿ ತಮ್ಮ ರಾಜೀನಾಮೆ ನಿರ್ಣಯವನ್ನು ಘೋಷಿಸಿದ ಬಳಿಕ ಈವರೆಗೂ ಪಕ್ಷ ನಾಯಕರು ಹಾಗೂ ಕಾರ್‍ಯಕರ್ತರ ಮನವಿಗಳಿಗೆ ಬಗ್ಗೆದ ರಾಹುಲ್ ಗಾಂಧಿ ಪದತ್ಯಾಗದ ನಿರ್ಣಯ ಬಗ್ಗೆ ಅಚಲರಾಗಿದ್ದಾರೆ. ಇತರ ನಾಯಕರ ಜೊತೆಗೆ ತಾಯಿ ಹಾಗೂ ಯುಪಿಎ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರ ಅವರ ಮನವೊಲಿಕೆ ಯತ್ನಕ್ಕೂ ರಾಹುಲ್ ಗಾಂಧಿ ಅವರು ಸ್ಪಂದಿಸಿಲ್ಲ ಎಂದು ವರದಿಗಳು ಹೇಳಿವೆ. ಬೇರೊಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲೇಬೇಕು ಎಂಬ ಸಂದೇಶವನ್ನು ಅವರು ಪಕ್ಷದ ನಾಯಕರಿಗೆ ಕಾರ್‍ಯಕಾರಿ ಸಮಿತಿ ಸಭೆಯಲ್ಲೇ ನೀಡಿದ್ದರು. ಈ ಮಧ್ಯೆ ಹಲವಾರು ರಾಜ್ಯಗಳ ಕಾಂಗ್ರೆಸ್ ಘಟಕಗಳು ನಿರ್ಣಯಗಳನ್ನು ಸ್ವೀಕರಿಸುವ ಮೂಲಕ ರಾಹುಲ್ ಗಾಂಧಿಯವರು ಪದತ್ಯಾಗ ನಿರ್ಣಯವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದವು.
2019: ಭುವನೇಶ್ವರ: ಬಿಜು ಜನತಾ ದಳ (ಬಿಜೆಡಿ) ಅಧ್ಯಕ್ಷ ನವೀನ್ ಪಟ್ನಾಯಕ್ ಅವರು ಒಡಿಶಾ ಮುಖ್ಯಮಂತ್ರಿಯಾಗಿ ಸತತ ಐದನೇ
ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ಮತ್ತು ಸಿಕ್ಕಿಂನಲ್ಲಿ ಪವನ್ ಚಾಮ್ನಿಂಗ್ ಅವರು ಸತತ ೫ ಅವಧಿಗೆ ಮುಖ್ಯಮಂತ್ರಿಗಳಾಗಿ ಸರ್ಕಾರ ನಡೆಸಿದ್ದರು.
ನೂತನ ಸಚಿವ ಸಂಪುಟದ ೨೦ ಮಂದಿ ಸದಸ್ಯರೂ ವಸ್ತು ಪ್ರದರ್ಶನ ಮೈದಾನದಲಿ ನಡೆದ ಬಹಿರಂಗ ಸಮಾರಂಭದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಜೊತೆಗೆ ರಾಜ್ಯಪಾರಾದ ಗಣೇಶಿ ಲಾಲ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ೨೦ ಮಂದಿ ಸಚಿವರ ಪೈಕಿ ಇಬ್ಬರು ಮಹಿಳೆಯರು ಸೇರಿದಂತೆ ೧೦ ಮಂದಿ ಹೊಸಬರು. ೪೦ ಡಿಗ್ರಿ ಸೆಲ್ಷಿಯಸ್ ಮೀರಿದ ಬಿಸಿಲ ಝಳದಲ್ಲೂ ಸುಮಾರು ೧೦,೦೦೦ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಜನರ ಮುಂದೆ ಮುಖ್ಯಮಂತ್ರಿ ಮತ್ತು ಸಚಿವರು ಪ್ರಮಾಣ ಸ್ವೀಕರಿಸಿದರು. ಪಟ್ನಾಯಕ್ ಅವರ ಹಿರಿಯ ಸಹೋದರ, ಕೈಗಾರಿಕೋದ್ಯಮಿ ಪ್ರೇಮ್ ಪಟ್ನಾಯಕ್ ಮತ್ತು ಸಹೋದರಿ ಖ್ಯಾತ ಲೇಖಕಿ ಗೀತಾ ಮೆಹ್ತ, ನೂರಾರು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಸಮಾರಂಭದಲ್ಲಿ ಪಾಲ್ಗೊಂಡರು. ಪ್ರಧಾನಿ ಸಂದೇಶ: ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಈ ಸಂದರ್ಭದಲ್ಲಿ ನವೀನ್ ಪಟ್ನಾಯಕ್ ಅವರನ್ನು ಅಭಿನಂದಿಸಿ, ಒಡಿಶಾ ಅಭಿವೃದ್ಧಿಗೆ ಕೇಂದ್ರದಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಪಟ್ನಾಯಕ್ ಅವರು ೨೦೦೦ದ ಮಾರ್ಚ್ ೫ರಂದು ಮೊದಲ ಬಾರಿಗೆ ಒಡಿಶಾ ಮುಖ್ಯಮಂತ್ರಿಯಾಗಿದ್ದರು. ಆಗ ಬಿಜೆಡಿಯು ಬಿಜೆಪಿಯ ಜೊತೆಗಿನ ಮೈತ್ರಿಯೊಂದಿಗೆ ಅಧಿಕಾರಕ್ಕೆ ಬಂದಿತ್ತು. ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡ ಬಳಿಕ ನಡೆದ ಚುನಾವಣೆಯಲ್ಲಿ ಗೆದ್ದ ನವೀನ್ ೨೦೦೪ರಿಂದ ೨೦೦೯ರವರೆಗೆ ಮುಖ್ಯಮಂತ್ರಿಯಾದರು. ಈ ಸಂದರ್ಭದಲ್ಲಿ ಅವರು ಸಿಪಿಎಂ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಜೊತೆಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಂಡ ಬಿಜೆಡಿ ೨೦೦೯ರ ಚುನಾವಣೆಯಲ್ಲಿ ೧೪೭ ಸದಸ್ಯ ಬಲದ ವಿಧಾನಸಭೆಯಲ್ಲಿ ೧೧೭ ಸ್ಥಾನಗಳನ್ನು ಸ್ವಂತ ಬಲದಿಂದಲೇ ಗೆದ್ದುಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲೂ ಯಾವುದೇ ಪಕ್ಷದ ಜೊತೆಗೂ ಮೈತ್ರಿ ಇಲ್ಲದೆ ೧೪೬ ವಿಧಾನಸಭಾ ಸ್ಥಾನಗಳ ಪೈಕಿ ೧೧೨ ಸ್ಥಾನಗಳನ್ನು ಬಿಜೆಡಿ ಗೆದ್ದುಕೊಂಡಿದೆ. ಬಿಜೆಡಿ ಅಭ್ಯರ್ಥಿಯ ನಿಧನದ ಕಾರಣ ಪಟ್ಕುರಾ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿತ್ತು. ಇದೇ ಮೊದಲ ಬಾರಿಗೆ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರಕ್ಕೆ ಬಿಜೆಪಿ ಮುಖ್ಯ ಪ್ರತಿಪಕ್ಷವಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ೨೩ ಸ್ಥಾನ ಗೆದ್ದರೆ, ಕಾಂಗ್ರೆಸ್ ೯ ಸ್ಥಾನಗಳನ್ನು ಗೆದ್ದಿತ್ತು.
2018: ಪಾಟ್ನಾ/ ಲಕ್ನೋ: ಬಿಹಾರ ಮತ್ತು ಉತ್ತರ
ಪ್ರದೇಶದ ವಿವಿಧ ಕಡೆಗಳಲ್ಲಿ ಬೀಸಿದ ಗುಡುಗು, ಮಿಂಚು ಬಿರುಗಾಳಿ ಮಳೆಗೆ ಮನೆ, ಗುಡಿಸಲುಗಳು ಕುಸಿದು
ಬಿದ್ದ ಹಾಗೂ ಮರಗಳು ಉರುಳಿದ ಪರಿಣಾಮವಾಗಿ ೩೪ ಮಂದಿ ಸಾವನ್ನಪ್ಪಿದರು. ಬಿಹಾರದಲ್ಲಿ ಹಿಂದಿನ ರಾತ್ರಿ
೧೯ ಮಂದಿ ಸಾವನ್ನಪ್ಪಿದರೆ, ಗಯಾ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಐವರು ಮೃತರಾಗಿದ್ದಾರೆ ಎಂದು
ಬಿಹಾರಿನ ನೈಸರ್ಗಿಕ ವಿಕೋಪ ನಿರ್ವಹಣಾ ಇಲಾಖೆ ತಿಳಿಸಿತು. ಮುಂಗೇರ್,
ಕಟಿಹಾರ್ ಮತ್ತು ನವಾಡಾ ಜಿಲ್ಲೆಗಳಲ್ಲಿ ಇತರ ಸಾವುಗಳು ಸಂಭವಿಸಿವೆ ಎಂದು ಇಲಾಖೆ ಹೇಳಿತು. ಉತ್ತರ ಪ್ರದೇಶದಲ್ಲಿ ೧೫ ಜನ ಸಾವನ್ನಪ್ಪಿದ್ದು, ೧೦ ಮಂದಿ
ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದರು. ಉನ್ನಾವೋದಲ್ಲಿ ಗುಡುಗು, ಮಿಂಚು, ಬಿರುಗಾಳಿ
ಮಳೆಗೆ ಮೇ 29ರ ಸೋಮವಾರ ರಾತ್ರಿ ೬ ಮಂದಿ ಸಾವನ್ನಪ್ಪಿದ್ದು, ರಾಯ್ ಬರೇಲಿಯಲ್ಲಿ ಮೂವರು, ಕಾನ್ಪುರ,
ಪಿಲಿಭಿಟ್ ಮತ್ತು ಗೊಂಡಾ ಜಿಲ್ಲೆಗಳಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ
ಪರಿಹಾರ ಕಮೀಷನರ್ ಸಂಜಯ್ ಕುಮಾರ್ ಹೇಳಿದರು. ಗಾಯಾಳುಗಳಲ್ಲಿ ನಾಲ್ವರು ಉನ್ನಾವೋದವರಾಗಿದ್ದು, ತಲಾ
ಮೂವರು ಕನ್ನೌಜ್ ಮತ್ತು ರಾಯ್ ಬರೇಲಿಯವರು. ಬಿರುಗಾಳಿಗೆ ಉನ್ನಾವೊ ಮತ್ತು ರಾಯ್ ಬರೇಲಿ ಜಿಲ್ಲೆಗಳಲ್ಲಿ
ಹಲವಾರು ಗುಡಿಸಲುಗಳು ಧರೆಗುರುಳಿವೆ ಎಂದು ಅವರು ನುಡಿದರು. ೨೪
ಗಂಟೆಗಳ ಒಳಗಾಗಿ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ನಿರ್ದೇಶನ ನೀಡಲಾಗಿದೆ
ಎಂದು ಉತ್ತರ ಪ್ರದೇಶದ ಪ್ರಿನ್ಸಿಪಲ್ ಸೆಕ್ರೆಟರಿ (ಮಾಹಿತಿ) ಅವನೀಶ್ ಅವಸ್ಥಿ ಹೇಳಿದರು. ಉನ್ನಾವೊ ಜಿಲ್ಲಾ ಮ್ಯಾಜಿಸ್ಟ್ರೇಟ್ ರವಿ ಕುಮಾರ್ ಅವರು
ಸಿಡಿಲು ಬಡಿದ ಪರಿಣಾಮವಾಗಿ ಇಬ್ಬರು ಸಾವನ್ನಪ್ಪಿದ್ದು, ಇತರರು ಮನೆ ಕುಸಿತ, ವಿದ್ಯುತ್ ಕಂಬ, ಮರಗಳು
ಉರುಳಿಬಿದ್ದ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಹರ್ದೋಯಿ -ಉನ್ನಾವೊ ಮುಖ್ಯರಸ್ತೆಯಲ್ಲಿನ ವಾಹನ ಸಂಚಾರ ಮರಗಳು
ಉರುಳಿ ಬಿದ್ದ ಪರಿಣಾಮವಾಗಿ ಅಸ್ತವ್ಯಸ್ತಗೊಂಡಿತು. ಉರುಳಿದ ಮರಗಳನ್ನು ಬಳಿಕ ತೆರವು ಮಾಡಲಾಯಿತು ಎಂದು
ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರು. ಮಳೆ, ಗುಡುಗು
ಮಿಂಚಿನ ಜೊತೆಗೆ ಗಂಟೆಗೆ ೫೦-೭೦ ಕಿಮೀ ವೇಗದ ಬಿರುಗಾಳಿ ಉತ್ತರ ಪ್ರದೇಶದ ವಿವಿಧ ಕಡೆಗಳಲ್ಲಿ ಮುಂದಿನ
ಕೆಲವು ದಿನಗಳ ಕಾಲ ಬೀಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು. ಬಿಹಾರ
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೈಸರ್ಗಿಕ ಪ್ರಕೋಪದಿಂದ ಸಾವುಗಳು ಸಂಭವಿಸಿದ್ದಕ್ಕಾಗಿ ಶೋಕ
ವ್ಯಕ್ತ ಪಡಿಸಿದ್ದು, ಕ್ಷಿಪ್ರವಾಗಿ ಪರಿಹಾರ ವಿತರಣೆ ಮಾಡುವಂತೆ ಸೂಚನೆ ನೀಡಿದರು. ಈ ತಿಂಗಳಲ್ಲಿ
ಬೀಸಿದ ದೂಳು ಮಿಶ್ರಿತ ಬಿರುಗಾಳಿಗೆ ವಿವಿಧ ರಾಜ್ಯಗಳಲ್ಲಿ ಅಪಾರ ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ.
ಮೇ ೨-೩ರಂದು ಬೀಸಿದ ದೂಳು ಮಿಶ್ರಿತ ಬಿರುಗಾಳಿಗೆ ಐದು ರಾಜ್ಯಗಳಲ್ಲಿ ೧೩೪ ಮಂದಿ ಮೃತರಾಗಿ ೪೦೦ಕ್ಕೂ
ಹೆಚ್ಚು ಮಂದಿ ಗಾಯಗೊಂಡಿದ್ದರು. ಉತ್ತರ ಪ್ರದೇಶದಲ್ಲಿ
ದೂಳು ಮಿಶ್ರಿತ ಬಿರುಗಾಳಿಗೆ ಅತ್ಯಂತ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಉತ್ತರ ಪ್ರದೇಶದಲ್ಲಿ ಮೃತರಾದ
೮೦ ಮಂದಿಯಲ್ಲಿ ಹೆಚ್ಚಿನವರು ಆಗ್ರಾ ಜಿಲ್ಲೆಯವರಾಗಿದ್ದರು.
2018: ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ
ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಂದ
ಮಾಹಿತಿ ಪಡೆದಿದ್ದು, ಪ್ರವಾಹದಿಂದ ಸಾರ್ವಜನಿಕರಿಂದ ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ
ನೀಡಿದರು. ಸಾರ್ವಜನಿಕರನ್ನು ರಕ್ಷಿಸಲು ಅಗತ್ಯವಿದ್ದಲ್ಲಿ ಕೋಸ್ಟ್ ಗಾರ್ಡ್ ನೆರವು ಪಡೆಯುವಂತೆ ಹಾಗೂ
ಹೆಚ್ಚಿನ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಜಿಲ್ಲಾಧಿಕಾರಿಗಳಿಗೆ ಸೂಚನೆ
ನೀಡಿದರು ಎಂದೂ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿತು.
ಯಶಸ್ವಿನಿ
ಯೋಜನೆ ಕುರಿತು ಚರ್ಚೆ: ಮುಖ್ಯಮಂತ್ರಿಯವರು ಯಶಸ್ವಿನಿ ಯೋಜನೆ ಹಾಗೂ ಇತ್ತೀಚೆಗೆ ಜಾರಿಗೊಳಿಸಲಾದ ಆರೋಗ್ಯ
ಕರ್ನಾಟಕ ಯೋಜನೆ ಕುರಿತೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಯೋಜನೆಗಳಿಂದ ಬಡವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಬಗೆಗಿನ
ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮಾಹಿತಿಯೊಂದಿಗೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ
ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್ ಅವರಿಗೆ ಸೂಚಿಸಿದರು ಎಂದು ಮುಖ್ಯಮಂತ್ರಿ ಕಚೇರಿ
ಪ್ರಕಟಣೆ ತಿಳಿಸಿತು.
ಮಂಗಳೂರು,
ಉಡುಪಿ, ಕಾರವಾರ: ಕರ್ನಾಟಕದ ಕರಾವಳಿಯಲ್ಲಿ ಕಳೆದ ೨ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಜನಜೀವನ
ಅಸ್ತವ್ಯಸ್ತವಾಗಿದೆ. ಮೂರು ಜಿಲ್ಲೆಗಳಲ್ಲಿ ನೂರಾರು ಮರಗಳು ಧರೆಗುರುಳಿದ್ದು, ಹಲವು ವಿದ್ಯುತ್ ಕಂಬಗಳು
ತುಂಡಾಗಿ ವ್ಯಾಪಕ ಹಾನಿ ಸಂಭವಿಸಿತು. ಮಂಗಳೂರಿನಲ್ಲಿ
ಮೇ 29ರ ಸೋಮವಾರ ರಾತ್ರಿಯಿಂದ ಭಾರೀ ಬಿರುಗಾಳಿಯೊಂದಿಗೆ ಕುಂಭದ್ರೋಣ
ಮಳೆ ಸುರಿಯುತ್ತಿದ್ದು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ
೬೬ ರಲ್ಲಿ ನೀರು ನಿಂತು ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಪಣಂಬೂರಿನಲ್ಲಿ
ರಸ್ತೆ ನದಿಯಂತಾಗಿದ್ದು ೨ ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ವಾಹನ
ಸವಾರರು ಸಂಚರಿಸಲಾಗದೆ ತೀವ್ರ ಪರದಾಟ ನಡೆಸಿದರು. ಪಡೀಲು-ಬಿ ಸಿ ರೋಡ್ ಹೆದ್ದಾರಿಯೂ ಜಲಾವೃತಗೊಂಡು
ವಾಹನ ಸವಾರರು ಪರದಾಡಿದರು. ಶಾಲಾ ಕಟ್ಟಡ ಕುಸಿತ: ಮಂಗಳೂರಿನ ಕೃಷ್ಣಾಪುರದ ಶ್ರೀ ನಾರಾಯಣ ಗುರು ಅನುದಾನಿತ
ಶಾಲೆಯ ಕಟ್ಟಡ ಕುಸಿದು ಬಿದ್ದಿದ್ದು, ಶಿಕ್ಷಕಯರಿಬ್ಬರು ಗಾಯಗೊಂಡಿದ್ದಾರೆ. ಮಮತಾ ಮತ್ತು ತುಳಸಿ ಎಂಬ
ಶಿಕ್ಷಕಿಯಬ್ಬರು ಗಾಯಗೊಂಡಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ. ಮಕ್ಕಳು
ತಡವಾಗಿ ಬಂದದ್ದರಿಂದ ಭಾರೀ ಅನಾಹುತ ತಪ್ಪಿತು ಎಂದು ವರದಿ ಹೇಳಿತು. ಉಡುಪಿ ಜಿಲ್ಲೆಯಲ್ಲೂ ಗುಡುಗು ಮಿಂಚಿನ ಸಹಿತ ಭಾರೀ ಮಳೆ
ಸುರಿದಿದ್ದು, ಅಪಾರ ಹಾನಿ ಸಂಭವಿಸಿದೆ. ಕಾರ್ಕಳದ ಬೈಲೂರಿಲ್ಲಿ ಸೋಮವಾರ ರಾತ್ರಿ ಸಿಡಿಲು ಬಡಿದು ಶೀಲಾ ನಲ್ಕೆ ಎಂಬ ಗ್ರಾಮ
ಪಂಚಾಯತ್ ಸದಸ್ಯೆ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಶಾಸಕ ಸುನೀಲ್ ಕುಮಾರ್ ಭೇಟಿ ನೀಡಿ
ಪರಿಶೀಲನೆ ನಡೆಸಿದರು. ಶಾಲಾ ,ಕಾಲೇಜುಗಳಿಗೆ ರಜೆ:
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೆಸಿಕಾಂಥ್ ಸೆಂಥಿಲ್, ಉಡುಪಿ
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು
ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರ ಮತ್ತು ಬುಧವಾರ ಶಾಲಾ ,ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆ ಸುರಿಯುತ್ತಿದ್ದು
ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಮನೆಗಳ ಮೇಲೆ ಮರಗಳು ಬಿದ್ದ ಬಗ್ಗೆ ವರದಿಯಾಗಿದೆ. ವಿದ್ಯುತ್
ಕಂಬಗಳು ಧರೆಗುರುಳಿದ್ದು ವ್ಯಾಪಕ ಹಾನಿ ಸಂಭವಿಸಿತು. ಮೆಕ್ನು ಚಂಡ ಮಾರುತದಿಂದ ಮುಂಗಾರು ಪ್ರವೇಶಿಸುವ
ಮುನ್ನವೇ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ.
ಈ ಮಧ್ಯೆ ಮಂಗಳವಾರ ಮುಂಗಾರು ಕೇರಳ ರಾಜ್ಯವನ್ನು ಪ್ರವೇಶಿಸಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ
ಕಾರಣ ಮೇ 31ರ ಗುರುವಾರವೂ ಭಾರೀ ಮಳೆಯಾಗುವ ಎಲ್ಲಾ
ಸಾಧ್ಯತೆಗಳಿವೆ ಎಂದು ಹವಾಮಾನ ಕಚೇರಿ ಮೂಲಗಳು ಹೇಳಿದವು.
2016: ಡೆಹ್ರಾಡೂನ್: ಹಿಂದಿನ ದಿನ ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಕೇದಾರನಾಥ ಅಕ್ಷರಶಃ ನಲುಗಿತು. ಮಳೆಯ ಅಬ್ಬರಕ್ಕೆ 30ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿ, ಹಲವು ಜಾನುವಾರುಗಳು ಸಾವನ್ನಪ್ಪಿದವು. ಕೇದಾರನಾಥ ಹಾಗೂ ಯಮುನೋತ್ರಿಗೆ ತೆರಳುವ ಮಾರ್ಗ ಬಂದ್ ಸ್ಥಗಿತಗೊಂಡಿತು. ರಾಜಧಾನಿ ಡೆಹ್ರಾಡೂನ್ನಲ್ಲಿ ಸಹ ಗುಡುಗು ಸಹಿತ ಮಳೆ ಮುಂದುವರೆಯಿತು. ಮರಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದ ಪರಿಣಾಮ ನಗರದಲ್ಲಿ ಕಗ್ಗತ್ತಲು ಆವರಿಸಿತು. ಜಾಹೀರಾತು ಫಲಕಗಳು ಸಹ ರಸ್ತೆಗೆ ಉರುಳಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮರಗಳು ಉರುಳಿದ ಪರಿಣಾಮ ಯಾತ್ರಿಕರು ಪರದಾಡಬೇಕಾದ ಸ್ಥಿತಿ ಇದೀಗ ನಿರ್ಮಾಣವಾಯಿತು. ಸಿಯಾಲ್ಕೋಟ್ ಹಾಗೂ ಕುಥಿಯಾನ ನಗರಗಳು ತುರ್ತು ಪರಿಸ್ಥಿತಿ ಎದುರಿಸಿದವು.
2016: ರಾಯಪುರ: ಬಸ್ತಾರ್ ಜಿಲ್ಲೆಯಲ್ಲಿ 9 ಮಹಿಳೆಯರೂ ಸೇರಿದಂತೆ 40 ಮಾವೋವಾದಿ ನಕ್ಸಲೀಯರು ಪೊಲೀಸರಿಗೆ ಶರಣಾಗತರಾದರು. ನಕ್ಸಲ್ ಪೀಡಿತ ಪ್ರದೇಶವೆಂದೇ ಕುಖ್ಯಾತವಾದ ಬಸ್ತಾರ್ ಜಿಲ್ಲೆಯಲ್ಲಿ ಶರಣಾಗತರಾಗುವ ನಕ್ಸಲೀಯರ ಪ್ರತಿ ತಲೆಗೆ 8 ಲಕ್ಷ ರೂ. ನೀಡುವುದಾಗಿ ಸರ್ಕಾರ ಘೊಷಣೆ ಮಾಡಿತ್ತು. ಅದರ ಅನ್ವಯ ದರ್ಭಾ ವಿಭಾಗ ಸಮಿತಿ ಮತ್ತು ಪೂರ್ವ ಬಸ್ತಾರ್ ವಿಭಾಗದ ತಲಾ 19 ಮಂದಿ, ಕಂಗೇರ್ ವೇಲಿ ಪ್ರದೇಶದ ಇಬ್ಬರು ನಕ್ಸಲೀಯರು ಪೊಲೀಸರ ಸಮ್ಮುಖ ಹಾಜರಾಗಿ, ಸಮಾಜದ ಮುಖ್ಯ ವಾಹಿನಿಗೆ ಬಂದು ಜೀವನ ನಿರ್ವಹಿಸುವುದಾಗಿ ಘೋಷಿಸಿದರು..
2016: ಇಸ್ಲಾಮಾಬಾದ್: ಭಾರತದ ರಾಜಧಾನಿ ನವದೆಹಲಿಯನ್ನು ಪಾಕಿಸ್ತಾನವು ಕೇವಲ 5 ನಿಮಿಷಗಳಲ್ಲಿ ಧ್ವಂಸಗೊಳಿಸಬಹುದು! ಹೌದು ಹೀಗೆಂದು ಹೇಳಿದ್ದು ಪಾಕಿಸ್ತಾನದ ಅಣ್ವಸ್ತ್ರ ಪಿತಾಮಹ ಡಾ. ಅಬ್ದುಲ್ ಖದೀರ್ ಖಾನ್. 2004ರಿಂದ ಪಾಕಿಸ್ತಾನದಿಂದ ಅಣ್ವಸ್ತ್ರಗಳ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ಅರೆ ಗೃಹ ಬಂಧನಕ್ಕೊಳಗಾಗಿರುವ ಖದೀರ್ ಖಾನ್ ಈ ಹೇಳಿಕೆ ನೀಡಿರುವುದು ಪಾಕಿಸ್ತಾನದ ಅಣ್ವಸ್ತ್ರ ಪರೀಕ್ಷೆ ವಾರ್ಷಿಕ ಸಮಾರಂಭದಲ್ಲಿ. 1998 ರಲ್ಲಿ ಪಾಕ್ ಅಣ್ವಸ್ತ್ರ ಪರೀಕ್ಷೆ ಖಾನ್ ಉಸ್ತುವಾರಿಯಲ್ಲೇ ನಡೆದಿತ್ತು. 1984 ರಲ್ಲೇ ಪಾಕಿಸ್ತಾನ ಅಣ್ವಸ್ತ್ರ ಶಕ್ತಿಯಲ್ಲಿ ಪಾರುಪತ್ಯ ಸಾಧಿಸುತ್ತಿತ್ತು, ಆದರೆ ಅಂದಿನ ಅಧ್ಯಕ್ಷ ಜನರಲ್ ಜಿಯಾ ಉಲ್ ಹಕ್ ವಿರೋಧದಿಂದ ಪ್ರಯೋಗ ಸಾಧ್ಯವಾಗಿರಲಿಲ್ಲ ಎಂಬುದು ಖಾನ್ ಉವಾಚ. 1979 ರಿಂದ 1988 ರವರೆಗೆ ಅಧಿಕಾರದಲ್ಲಿದ್ದ ಜನರಲ್ ಜಿಯಾ ಉಲ್ ಹಕ್, ವಿಶ್ವದ ಬಲಿಷ್ಠ ಸೇನೆಗಳು ಮಧ್ಯಪ್ರವೇಶಿಸಿದರೆ ಅಣ್ವಸ್ತ್ರ ಪರೀಕ್ಷೆಗೆ ತೊಂದರೆಯಾಗಬಹುದು ಎಂದು ವಿರೋಧಿಸಿದ್ದರು. ನಂತರದ ದಿನಗಳಲ್ಲಿ ಪಾಕಿಸ್ತಾನ ಅಣ್ವಸ್ತ್ರ ಪರೀಕ್ಷೆಗೆ ಎಲ್ಲೆಡೆ ವಿರೋಧ ವ್ಯಕ್ತವಾದ್ದರಿಂದ ಕಾರ್ಯಕ್ರಮ ಕೈಬಿಡಬೇಕಾಯಿತು ಎಂದು ಹೇಳಿದ ಖಾನ್, ಪಾಕಿಸ್ತಾನಕ್ಕೆ ಈ ಮಹತ್ತರ ಸೇವೆ ಸಲ್ಲಿಸಿದ್ದಕ್ಕೆ ತನಗೆ ಲಭಿಸಿದ್ದು ಮಾತ್ರ ‘ಗೃಹ ಬಂಧನ’ ಎಂದು ವಿಷಾದಿಸಿದರು.
2016: ದಾವಣಗೆರೆ: ರಾಷ್ಟ್ರವನ್ನು ಎಂದಿಗೂ ತಪ್ಪು ದಾರಿಯಲ್ಲಿ ಸಾಗಲು ನಾನು ಅವಕಾಶ ನೀಡುವುದಿಲ್ಲ, ಈ ಬಗ್ಗೆ ನಿಮಗೆ ಭರವಸೆ ನೀಡುವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಘೋಷಿಸಿದರು. ತಮ್ಮ ಸರ್ಕಾರವು ಎರಡು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಇಲ್ಲಿ ಹಮ್ಮಿಕೊಳ್ಳಲಾದ ’ವಿಕಾಸ ಪರ್ವ’ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ‘ಈ ಸರ್ಕಾರದ ಅತ್ಯಂತ ದೊಡ್ಡ ಸಾಧನೆ ಸ್ವಚ್ಛ ಭಾರತ ಅಭಿಯಾನ ಎಂದು ಸಮೀಕ್ಷೆಗಳು ಹೇಳಿವೆ’ ಎಂದು ನುಡಿದರು. ‘ನಿಮ್ಮಂತಹ ಜನತೆ ನನಗೆ ಇಷ್ಟೊಂದು ಪ್ರೀತಿ ಮತ್ತು ಆದರವನ್ನು ನೀಡುತ್ತಿರುವಾಗ ತಪ್ಪು ಮಾರ್ಗದಲ್ಲಿ ಸಾಗುವ ಅಗತ್ಯ ನನಗೆ ಇಲ್ಲ. ನನ್ನ ಸರ್ಕಾರ ‘ಕಾಂಗ್ರೆಸ್ ಮುಕ್ತ ಬಾರತ’ ನಿರ್ಮಾಣದ ಕೆಲಸವನ್ನಂತೂ ಕೈಗೆತ್ತಿಕೊಂಡಿದೆ. ನಾನೇನು? ದೇಶದ ಜನತೆಯೇ ಈ ಕೆಲಸವನ್ನು ಎತ್ತಿಕೊಂಡಿದೆ. ಆದರೆ ನನ್ನ ಸರ್ಕಾರವು ಭಾರತವನ್ನು ಮಧ್ಯವರ್ತಿ ಮುಕ್ತ ವನ್ನಾಗಿ ಮಾಡುವ ಕಾಯಕ ಕೈಗೆತ್ತಿಕೊಂಡಿದೆ ಎಂದು ಅವರು ನುಡಿದರು. ದೊಡ್ಡ ಕೆಲಸಗಳನ್ನು ಮಾಡುತ್ತಿಲ್ಲ ಎಂದು ನನ್ನನ್ನು ಟೀಕಿಸಲಾಗುತ್ತಿದೆ. ಹಿಂದಿನ ಸರ್ಕಾರಗಳು ದೊಡ್ಡ ಕೆಲಸಗಳನ್ನು ಜನರಿಗಾಗಿ ಮಾಡಿ, ತಾವು ದೊಡ್ಡ ಪ್ರಮಾಣದ ಲಾಭ ಗಿಟ್ಟಿಸಿಕೊಂಡಿವೆ. ನಾನೂ ಇದೇ ತಪ್ಪನ್ನು ಮಾಡಬೇಕೆ? ನಾನು ತಪ್ಪುದಾರಿಯಲ್ಲಿ ನಡೆಯಬೇಕೆ? ಎಂದು ಪ್ರಧಾನಿ ಪ್ರಶ್ನಿಸಿದರು. ಬರಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳನ್ನು ನಾನು ಭೇಟಿ ಮಾಡಿದ್ದೇನೆ. ಕೇಂದ್ರ ಮತ್ತು ರಾಜ್ಯಗಳು ಹೆಗಲಿಗೆ ಹೆಗಲು ನೀಡಿ ಜನರ ಕಷ್ಟ ಬಗೆ ಹರಿಸಲು ಶ್ರಮಿಸಬೇಕು ಎಂದು ಅವರಿಗೆ ಹೇಳಿದ್ದೇನೆ. ಸಾಕಷ್ಟು ಪ್ರಮಾಣದಲ್ಲಿ ನೀರು ಒದಗಿಸಿಕೊಟ್ಟರೆ ನಮ್ಮ ರೈತರು ಮಣ್ಣಿನಿಂದ ಚಿನ್ನ ಉತ್ಪಾದಿಸಬಲ್ಲರು ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಕೇಂದ್ರ ಸರ್ಕಾರವು ರೈತರಿಗೆ ನೀರೊದಗಿಸಲು ಕೃಷಿ ಸಿಂಚಾಯಿ ಯೋಜನೆ ರೂಪಿಸಿದೆ ಎಂದು ಮೋದಿ ಹೇಳಿದರು. ಕೇಂದ್ರ ಸರ್ಕಾರವು ಎರಡು ವರ್ಷಗಳಲ್ಲಿ ಕೈಗೊಂಡ ವಿವಿಧ ಯೋಜನೆಗಳನ್ನೂ ಅವರು ವಿವರಿಸಿದರು. ‘ ನಾನು ಚಹಾ ಮಾರುವಾಗ ರೂಪಾಯಿಗೆ ಒಂದು ಕಪ್ ಚಹಾ ಸಿಗುತ್ತಿತ್ತು. ಈಗ ನಿಮಗೆ 1 ರೂಪಾಯಿಗೆ ಒಂದು ಕಪ್ ಚಹ ಕೂಡಾ ಸಿಗುವುದಿಲ್ಲ. ಆದರೆ ಇಂದು ಜನತೆ ಒಂದು ರೂಪಾಯಿಗೆ ಜೀವ ವಿಮಾ ಪಡೆಯಲು ಸಾಧ್ಯವಾಗುವಂತೆ ಮಾಡಿದ್ದೇವೆ’ ಎಂದು ಮೋದಿ ನುಡಿದರು
2016: ಬೆಂಗಳೂರು/ನವದೆಹಲಿ: ಬಹು ನಿರೀಕ್ಷಿತ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪಕ್ಷ ಬಿಡುಗಡೆ ಮಾಡಿತು. ಕರ್ನಾಟಕದಿಂದ ಕೇಂದ್ರದ ವಾಣಿಜ್ಯೋದ್ಯಮ ರಾಜ್ಯ ಸಚಿವೆ (ಸ್ವತಂತ್ರ) ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್ ನೀಡಲಾಯಿತು. ಮತ್ತು ಕರ್ನಾಟಕ ವಿಧಾನ ಪರಿಷತ್ಗೆ ಮಾಜಿ ಸಚಿವ ವಿ. ಸೋಮಣ್ಣ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಈವರೆಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರಿಗೆ ರಾಜಸ್ಥಾನ ರಾಜ್ಯದಿಂದ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಯಿತು.. ಇನ್ನುಳಿದಂತೆ ಓಂ ಪ್ರಕಾಶ್ ಮಾಥುರ್ (ರಾಜಸ್ಥಾನ), ಹರ್ಷವರ್ಧನ್ ಸಿಂಗ್ (ರಾಜಸ್ಥಾನ), ರಾಮ್ ಕುಮಾರ್ ವರ್ವ (ರಾಜಸ್ಥಾನ), ಚೌಧರಿ ವೀರೆಂದರ್ ಸಿಂಗ್ (ಹರ್ಯಾಣ), ಪಿಯೂಶ್ ಗೋಯಲ್ (ಮಹಾರಾಷ್ಟ್ರ), ಮುಖ್ತಾರ್ ಅಬ್ಬಾಸ್ ನಕ್ವಿ (ಜಾರ್ಖಂಡ್), ಪುರುಷೋತ್ತಮ ರೂಪಾಲ (ಗುಜರಾತ್), ಅನಿಲ್ ಮಾಧವ್ ದವೆ (ಮಧ್ಯ ಪ್ರದೇಶ), ರಾಮ್ ವಿವಾರ್ ನೆತಂ (ಛತ್ತೀಸ್ಗಢ), ಗೋಪಾಲ್ ನಾರಾಯಣ ಸಿಂಗ್ (ಬಿಹಾರ). ಹಾಗೂ ವಿಧಾನ ಪರಿಷತ್ಗೆ ಸುರ್ಜಿತ್ ಠಾಕೂರ್ (ಮಹಾರಾಷ್ಟ್ರ), ಅರ್ಜುನ್ ಸಹಾನಿ (ಬಿಹಾರ) ಹೆಸರುಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಯಿತು.
2016: ನವದೆಹಲಿ/ ಬೀಜಿಂಗ್: ಆಯಕಟ್ಟಿನ ಚಾಬಹಾರ್ ಬಂದರು ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಚೀನಾ ಕೂಡಾ ಕಣ್ಣಿಟ್ಟಿದ್ದ ವಿಚಾರ ಇದೀಗ ಬೆಳಕಿಗೆ ಬಂದಿತು. ಬಂದರು ಅಭಿವೃದ್ಧಿ ಒಪ್ಪಂದಕ್ಕೆ ಭಾರತ ಮತ್ತು ಇರಾನ್ ಸಹಿ ಹಾಕಿದ್ದರಿಂದ ತನಗೆ ನಷ್ಟವಿಲ್ಲ, ಬದಲು ಅನುಕೂಲವೇ ಆಗಿದೆ ಎಂದು ಅದು ಪ್ರತಿಪಾದಿಸಿಕೊಂಡಿತು.
ಚಾಬಹಾರ್ ಮುಕ್ತ ವಾಣಿಜ್ಯ ವಲಯಕ್ಕೆ ಏಪ್ರಿಲ್ ತಿಂಗಳಲ್ಲಿ ಭೇಟಿ ನೀಡಿದ ಚೀನೀ ಒಕ್ಕೂಟವು ಬಂದರು ಅಭಿವೃದ್ದಿಯ ಜೊತೆಗೆ ಕೈಗಾರಿಕಾ ನಗರ ಅಭಿವೃದ್ಧಿ ಪಡಿಸುವ ಪ್ರಸ್ತಾಪ ಮುಂದಿಟ್ಟಿತ್ತು. ಆಯಕಟ್ಟಿನ ಬಂದರು ಅಭಿವೃದ್ಧಿಗಾಗಿ ಹೂಡಿಕೆ ಮಾಡಲು ಚೀನಾ ಆಸಕ್ತವಾಗಿದೆ ಎಂದು ಒಕ್ಕೂಟದ ಅಧ್ಯಕ್ಷರು ಹೇಳಿದ್ದರು. ಅದಕ್ಕೂ ಮುನ್ನ ಜನವರಿ ತಿಂಗಳಲ್ಲಿ ಇರಾನ್ಗೆ ಭೇಟಿ ನೀಡಿದ್ದ ಚೀನಾದ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರು ಬಂದರುಗಳ ಅಭಿವೃದ್ಧಿ ಪರಸ್ಪರ ಸಹಕಾರದ ಕ್ಷೇತ್ರಗಳಲ್ಲಿ ಬರುತ್ತದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದರು. ಇದೀಗ ಭಾರತ ಮತ್ತು ಇರಾನ್ ಚಾಬಹಾರ್ ಬಂದರು ಅಭಿವೃದ್ಧಿಗೆ ಒಪ್ಪಂದಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಚೀನಾ ‘ಈ ಒಪ್ಪಂದದ ಬಗ್ಗೆ ನಮಗೆ ಅಸೂಯೆ ಇಲ್ಲ, ಕೇಂದ್ರ ಏಷ್ಯಾದಲ್ಲಿ ಮೂಲ ಸವಲತ್ತುಗಳ ಅಭಿವೃದ್ಧಿಯಿಂದ ಚೀನಾದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲವಾಗಲಿದೆ’ ಎಂದು ಹೇಳಿತು..
2016: ನವದೆಹಲಿ: ಜನತೆಗೆ ಇನ್ನಷ್ಟು ಹತ್ತಿರವಾಗುವ ದೃಷ್ಟಿಯಿಂದ ಪ್ರಧಾನಿ ಕಚೇರಿಯ ವೆಬ್ಸೈಟ್ನ್ನು ಆರು ಪ್ರದೇಶಿಕ ಭಾಷೆಗಳಲ್ಲಿ ರೂಪಿಸಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚಾಲನೆ ನೀಡಿದರು. ಈಗಾಗಲೇ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ವೆಬ್ಸೈಟ್ ಕಾರ್ಯನಿರ್ವಹಿಸುತ್ತಿದೆ. ಪ್ರಾದೇಶಿಕ ಜನತೆಯನ್ನು ತನ್ನತ್ತ ಸೆಳೆದುಕೊಳ್ಳುವುದಕ್ಕಾಗಿ ಆರು ಪ್ರಾದೇಶಿಕ ಭಾಷೆಗಳಾದ ಬಂಗಾಳಿ, ಗುಜರಾತಿ, ಮರಾಠಿ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಸೇವೆಯನ್ನು ಆರಂಭ ಮಾಡಿದೆ. ಸುಷ್ಮಾ ಸ್ವರಾಜ್ ಲೋಕಾರ್ಪಣೆ ಮಾಡುತ್ತಿದ್ದಂತೆ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಪ್ರಾದೇಶಿಕ ಆರು ಭಾಷೆಗಳಲ್ಲಿ ವೆಬ್ ತಾಣ ರೂಪಿಸಿದವರಿಗೆ ಹಾಗೂ ಚಾಲನೆ ನೀಡಿದ ಸಚಿವರಿಗೆ ಧನ್ಯವಾದಗಳು. ಇದರಿಂದಾಗಿ ನಾನು ಜನರೊಂದಿಗೆ ಇನ್ನಷ್ಟು ಬೆರೆತು, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ ಎಂದು ತಿಳಿಸಿದರು. ಸರ್ಕಾರದ ಯೋಜನೆಗಳು ಜನರಿಗೆ ತಲುಪಲು ಹಾಗೂ ಭವಿಷ್ಯದ ಯೋಜನೆ ಹಮ್ಮಿಕೊಳ್ಳಲು ಇದು ಸಹಾಯಕವಾಗಿದೆ. ಈ ಜಾಲತಾಣಗಳ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಸಂಪರ್ಕ ಸಾಧಿಸುತ್ತೇವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.
2016: ಮಿಲನ್: ಕ್ರಿಸ್ಟಿಯಾನೊ ರೊನಾಲ್ಡೊ ಬಾರಿಸಿದ ಅಮೂಲ್ಯ ಪೆನಾಲ್ಟಿ ಶೂಟೌಟ್ ಗೋಲಿನಿಂದ ಸ್ಪೇನ್ ಫುಟ್ಬಾಲ್ನ ದೈತ್ಯ ಕ್ಲಬ್ ರಿಯಲ್ ಮ್ಯಾಡ್ರಿಡ್ ತಂಡ 11ನೇ ಬಾರಿ ಪ್ರತಿಷ್ಠಿತ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಹಿಂದಿನ ರಾತ್ರಿ ನಡೆದ ಫೈನಲ್ ಫೈಟ್ನಲ್ಲಿ ದಿಗ್ಗಜ ಜಿನೆದಿನ್ ಜಿದಾನೆ ಮಾರ್ಗದರ್ಶನದ ರಿಯಲ್ ಮ್ಯಾಡ್ರಿಡ್ ತಂಡ 5-3 ಪೆನಾಲ್ಟಿ ಗೋಲುಗಳಿಂದ ಅಥ್ಲೆಟಿಕೋ ಮ್ಯಾಡ್ರಿಡ್ ತಂಡವನ್ನು ಮಣಿಸಿತು. ಉಭಯ ತಂಡಗಳ ಪ್ರಚಂಡ ಹೋರಾಟದಿಂದ ಪೂರ್ಣಾವಧಿ ಮುಕ್ತಾಯಗೊಂಡಾಗ 1-1ರ ಸಮಬಲ ಕಂಡಿತ್ತು. ಬಳಿಕ ನೀಡಲಾದ ಪೆನಾಲ್ಟಿ ಶೂಟೌಟ್ನಲ್ಲಿ ಮೇಲುಗೈ ಕಂಡ ರಿಯಲ್ ಮ್ಯಾಡ್ರಿಡ್ ಸುಲಭವಾಗಿ ಗೆಲುವಿನ ನಗೆ ಬೀರಿತು. ಇದರಿಂದ ಅಥ್ಲೆಟಿಕೋ ಮ್ಯಾಡ್ರಿಡ್ ತಂಡದ ಮೊದಲ ಪ್ರಶಸ್ತಿ ಗೆಲುವಿನ ಆಸೆ ಭಗ್ನಗೊಂಡಿದೆ. ಚಾಂಪಿಯನ್ ತಂಡ 112 ಕೋಟಿ ರೂ. ಮತ್ತು ರನ್ನರ್ ಅಪ್ ತಂಡ 78ಕೋಟಿ ರೂ. ಪ್ರಶಸ್ತಿ ಬಹುಮಾನ ಜಯಿಸಿತು.
2016: ಕೋಲ್ಕತ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಬ್ರಿಟಿಷರು ಯುದ್ಧದ ಅಪರಾಧಿ ಎಂದು ಪರಿಗಣಿಸಿಯೇ ಇರಲಿಲ್ಲ. ಅಪರಾಧಿಯಾಗಿ ನೋಡುತ್ತಿರಲಿಲ್ಲ ಎಂದು ಪ್ರಧಾನ ಮಂತ್ರಿ ಕಚೇರಿ ಮೇ 27ರಂದು ಬಿಡುಗಡೆ ಮಾಡಿರುವ ಕಡತಗಳಿಂದ ಸ್ಪಷ್ಟವಾಯಿತು. ನ್ಯೂಯಾರ್ಕ್ನಲ್ಲಿರುವ ಭಾರತೀಯ ಕಾಯಂ ಸಂಸ್ಥೆ ಹಾಗೂ 1999ರಲ್ಲಿ ವಿದೇಶಾಂಗ ಸಚಿವಾಲಯ ನಡೆಸಿದ ಪತ್ರ ವ್ಯವಹಾರಗಳ ವಿವರವನ್ನು ಒಳಗೊಂಡ ಕಡತಗಳ ಕೊನೆಯ 24 ಕಂತುಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಿಂದ ಸ್ಪಷ್ಟ ಮಾಹಿತಿ ಗೋಚರಿಸುತ್ತಿದೆ ಎಂದು ವರದಿಯಾಯಿತು. ಈ ಸಂಬಂಧ ಪ್ರಧಾನ ಮಂತ್ರಿ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ ವಿಶ್ವಸಂಸ್ಥೆಯ ಯುದ್ಧ ಅಪರಾಧಿ ಹಾಗೂ ಶಂಕಿತರ ಪಟ್ಟಿಯಲ್ಲಿಯೂ (CROWCASS) ನೇತಾಜಿ ಅವರ ಹೆಸರಿಲ್ಲ ಎನ್ನುವ ಅಂಶವನ್ನೂ 1999, ಏಪ್ರಿಲ್ 6ರ ಪತ್ರ 91S/11/C/2/2000-PO1 ನಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದು ಈಗ ಬಹಿರಂಗಗೊಂಡಿತು. 1945ರಲ್ಲಿ ಅಮೆರಿಕ ಪತ್ರಕರ್ತರು ನೇತಾಜಿ ಅವರನ್ನು ಯುದ್ಧ ಅಪರಾಧಿಯನ್ನಾಗಿ ಪರಿಗಣಿಸಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಲೇಖಕ, ನೇತಾಜಿ ಕುರಿತು ಅಧ್ಯಯನ ನಡೆಸುತ್ತಿರುವ ಅಂಜು ಧರ್, ಈ ಪ್ರಕರಣಕ್ಕೆ ಸಂಬಂಧಿಸಿದ ಸತ್ಯ ನಹಿರಂಗಗೊಳ್ಳಲು ಸಾಕಷ್ಟು ಸಮಯ ವ್ಯರ್ಥವಾಗಿದೆ. ಆದರೆ ಈಗಲಾದರೂ ಪ್ರಕರಣಕ್ಕೆ ಅಂತ್ಯ ಸಿಕ್ಕಂತಾಗಿದೆ ಎಂದು ಹೇಳುವುದರ ಜತೆಗೆ ಸುಭಾಷ್ ಚಂದ್ರ ಬೋಸ್ ಅವರದ್ದು ಯುದ್ಧ ಅಪರಾಧಿಯಾಗಿ ನೋಡುವ ವ್ಯಕ್ತಿತ್ವವೂ ಆಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
2016: ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಮೊಮ್ಮಗ ಅಭಿಜಿತ್ ಸಿಂಗ್ ಸಂಧು (22) ಭಾನುವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಹಿಮಾಚಲ ಪ್ರದೇಶದ ರಾಮಪುರ ಬುಶಹರ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದರು.. ಅಭಿಜಿತ್ ಅವರು ಮೋಟಾರು ಬೈಕಿನಲ್ಲಿ ಸಂಚರಿಸುತ್ತಿದ್ದರು. ಅಭಿಜಿತ್ ಅವರ ತಂದೆ ಅಭಯ್ ಸಿಂಗ್ ಅವರು ಭಗತ್ ಸಿಂಗ್ ಅವರ ಕಿರಿಯ ಪುತ್ರರಾಗಿದ್ದರು.
2016: ರಿಯೋ ಡಿ ಜನೈರೊ: ಕನಿಷ್ಠ 30 ಮಂದಿ 16 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬ್ರೆಜಿಲ್ನಲ್ಲಿ ಘಟಿಸಿದ್ದು, ಆಕೆಯ ವಿಡಿಯೋ ಹಾಗೂ ಪೋಟೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿ ಇಡೀ ದಕ್ಷಿಣ ಅಮೆರಿಕವನ್ನೇ ಕಂಗಾಲಾಗಿಸಿತು. ಘಟನೆ ರಿಯೋ ಡಿ ಜನೈರೊನಲ್ಲಿ ವಾರದ ಹಿಂದೆಯೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿರುವುದಾಗಿ ಸಿಎನ್ಎನ್ ವರದಿ ಮಾಡಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಸಂಪಾದಿಸಿದ ಪೊಲೀಸರು ಈಗ 30ಕ್ಕೂ ಹೆಚ್ಚು ಮಂದಿಯ ಹುಡುಕಾಟ ನಡೆಸಿದ್ದಾರೆ ಎಂದು ವರದಿ ಹೇಳಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಈಗ ಕೇವಲ ಅತ್ಯಾಚಾರ ಪ್ರಕರಣವನ್ನಷ್ಟೇ ಅಲ್ಲ, ಬ್ರೆಜಿಲ್ ಅಂತರ್ಜಾಲ ನಿಯಮಾವಳಿಗಳನ್ನೂ ಉಲ್ಲಂಘಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂತರ್ಜಾಲ ವಿಡಿಯೋದಲ್ಲಿ ಆಕೆಯ ಗೆಳೆಯ ಸೇರಿದಂತೆ ಇನ್ನೆರಡು ಮಂದಿ ಆಕೆಯ ಮೇಲೆ ಕೆಟ್ಟದಾಗಿ ದುಡಿಸಿಕೊಂಡಿದ್ದು, ಅವರ ಗುರುತು ಕೂಡ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು. ಕೆಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಬ್ರೆಜಿಲ್ನ ಸುದ್ದಿ ಸಂಸ್ಥೆಯೊಂದು ಪ್ರಕಟಿಸಿತು. ಪ್ರಕರಣಕ್ಕೆ ಸಂಬಂಧಿಸಿ ಮಧ್ಯಂತರ ಅಧ್ಯಕ್ಷ ಮೈಕೆಲ್ ಟೆಮೆರ್ ಘಟನೆಯನ್ನು ಖಂಡಿಸಿ, ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಲು ಆದೇಶಿಸಿದರು.. ಘಟನೆ ಖಂಡಿಸಿ ಇಲ್ಲಿನ ಅನೇಕ ಸ್ತ್ರೀ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು.
2016: ನವದೆಹಲಿ: ಸಾಧುಗಳೆಂದರೇ ಕೇಸರಿ ಬಣ್ಣದ ನಾರು ಮಡಿ, ಪೇಟ, ರುದ್ರಾಕ್ಷಿ ಹಾರ ಧರಿಸುತ್ತಾರೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಇಲ್ಲೊಬ್ಬ ಬಾಬಾ ತಮ್ಮ ಮೈ ಮೇಲೆ ಬರೋಬ್ಬರಿ ಮೂರು ಕೋಟಿ ರೂ. ಬಂಗಾರದ ಒಡವೆ ಧರಿಸಿ ಓಡಾಡುತ್ತಿದ್ದು, ತಮಗೆ ಭದ್ರತೆ ಒದಗಿಸುವಂತೆ ಕೇಳಿಕೊಂಡ ಘಟನೆ ಬೆಳಕಿಗೆ ಬಂತು. ಉತ್ತರ ಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಿ, ಇದೀಗ ಆಗ್ರಾಕ್ಕೆ ತೆರಳುತ್ತಿರುವ ಬಾಬಾ ಮೈ ಮೇಲೆ 11.5 ಕೆ.ಜಿ ಬಂಗಾರ ಒಡವೆಗಳಿದ್ದು, ಜತೆಗೆ ತಮ್ಮ ಕಾರನ್ನು ಕೂಡಾ ಲೋಹದ ಮೂರ್ತಿಗಳಿಂದ ಅಲಂಕರಿಸಿಕೊಂಡಿದ್ದಾರೆ. ಇಷ್ಟೊಂದು ಅಧಿಕ ಮೌಲ್ಯದ ಒಡವೆಗಳನ್ನು ಮೈ ಮೇಲೆ ಧರಿಸಿದ್ದರಿಂದ ಬಾಬಾ ಪೊಲೀಸರ ರಕ್ಷಣೆ ಕೋರಿದರು. ಬಾಬಾ ಕೋರಿಕೆ ಮನ್ನಿಸಿ ಆಗ್ರಾದ ಪೊಲೀಸರು ಹೆಚ್ಚಿನ ರಕ್ಷಣೆ ಒದಗಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಎಸ್ಪಿ ಡಾ. ಪ್ರೀತಿಂದರ್ ಸಿಂಗ್, ಬಾಬಾ ಅವರಿಗೆ ಆಗ್ರಾ ಗಡಿವರೆಗೂ ಸೂಕ್ತ ರಕ್ಷಣೆ ಒದಗಿಸಲಾಗುವುದು. ಉತ್ತರ ಪ್ರದೇಶ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಬಾಬಾ ಭದ್ರತೆ ಕೋರಿದರೆ ಮೇಲಧಿಕಾರಿ ಬಳಿ ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಆಗ್ರಾದ ಬೀದಿಗಳಲ್ಲಿ ಜನರು ಬಾಬಾರನ್ನು ನೋಡಿ ಪುಳಕಿತರಾದರು. ಬಂಗಾರದ ವ್ಯಾಮೋಹದ ಕುರಿತು ಸ್ವತಃ ಬಾಬಾ “ಬಂಗಾರದಲ್ಲಿ ದೇವರಿದ್ದಾನೆ. ಈ ಒಡವೆಗಳನ್ನು 1972ರಿಂದ ಧರಿಸುತ್ತಿದ್ದು, ಇದರಿಂದ ಶಾಂತಿ ಸಿಗುತ್ತದೆ’ ಎಂದು ತಿಳಿಸಿದರು.
2016: ಬೊಗೊಟಾ: ಕೊಲಂಬಿಯಾದ ಅರಾಜಕ ಪ್ರದೇಶದಿಂದ ಕಣ್ಮರೆಯಾಗಿದ್ದ ಒಬ್ಬ ಸ್ಪಾನಿಷ್ ಪತ್ರಕರ್ತೆ ಮತ್ತು ಇಬ್ಬರು ಸ್ಥಳೀಯ ಬಾತ್ಮೀದಾರರನ್ನು ರಾಷ್ಟ್ರದ ಎರಡನೇ ಅತಿ ದೊಡ್ಡ ಬಂಡುಕೋರ ಗುಂಪು ಮೇ 27ರಂದು ಬಿಡುಗಡೆ ಮಾಡಿತು. ‘ನನಗೋಸ್ಕರ ಪ್ರಾರ್ಥನೆ ಮಾಡಿದ ಪ್ರತಿಯೊಬ್ಬನಿಗೂ ಧನ್ಯವಾದಗಳು’ ಎಂದು ಸ್ಪೇನ್ನ ‘ಎಲ್ ಮುಂಡೊ’ ವೃತ್ತ ಪತ್ರಿಕೆಗೆ ದೀರ್ಘ ಕಾಲದಿಂದ ಬಾತ್ಮೀದಾರರಾಗಿರುವ ಸಲೂದ್ ಹರ್ನಾಂಡೆಜ್, ಬಿಡುಗಡೆಯಾದ ಬಳಿಕ ಮೇ 27ರ ರಾತ್ರಿ ತಮ್ಮ ಪ್ರಥಮ ಪ್ರತಿಕ್ರಿಯೆಯಲ್ಲಿ ತಿಳಿಸಿದರು. ನ್ಯಾಷನಲ್ ಲಿಬರೇಷನ್ ಆರ್ಮಿ ಅಥವಾ ಇಎಲ್ಎನ್ ಸದಸ್ಯರು ಎಂಬುದಾಗಿ ತಮ್ಮನ್ನು ಗುರುತಿಸಿಕೊಂಡ ಬಂಡುಕೋರರು ಕ್ಯಾಟಾಟುಂಬೊ ಪ್ರದೇಶದ ಕ್ಯಾಥೋಲಿಕ್ ಪಾದ್ರಿಗಳ ನೇತೃತ್ವದ ನಿಯೋಗಕ್ಕೆ ಹರ್ನಾಡೆಂಜ್ ಅವರನ್ನು ಒಪ್ಪಿಸಿದರು. ಎರಡು ಗಂಟೆಗಳ ಬಳಿಕ ಕೊಲಂಬಿಯಾದ ಆರ್ಸಿಎನ್ ಜಾಲದ ಇತರ ಇಬ್ಬರು ಪತ್ರಕರ್ತರಾದ ಡೀಗೊ ಡಿ’ಪಾಬ್ಲೊ ಮತ್ತು ಕಾರ್ಲೋಸ್ ಮೆಲೊ ಅವರನ್ನು ಬಂಡುಕೋರರು ಬಿಡುಗಡೆ ಮಾಡಿದರು. ಈ ಪತ್ರಕರ್ತರು ಸ್ಪೇನ್ ಪತ್ರಕರ್ತನ ಶೋಧ ಕಾರ್ಯಾಚರಣೆ ಕುರಿತು ವರದಿ ಮಾಡುತ್ತಿದ್ದಾಗ ಕಣ್ಮರೆಯಾಗಿದ್ದರು. ಸ್ಪೇನ್ ಪತ್ರಿಕೆ ‘ಎಲ್ ಮುಂಡೊ’ ದ ಬಾತ್ಮೀದಾರಳಾದ ಹರ್ನಾಂಡೆಜ್ ವೆನೆಜುವೆಲಾ ಗಡಿಯ ಸಮೀಪದ ಪ್ರದೇಶದಲ್ಲಿ ಕಳೆದವಾರ ಕಾರ್ಯನಿರತರಾಗಿದ್ದಾಗ ಕಣ್ಮರೆಯಾಗಿದ್ದರು.
2016: ನವದೆಹಲಿ: ಭಾರತದ ಡಿಸ್ಕಸ್ ಥ್ರೋ ಪಟು ಸೀಮಾ ಪುನಿಯಾ ಕ್ಯಾಲಿಫೋರ್ನಿಯಾದ ಸ್ಯಾನಿನಾಸ್ನಲ್ಲಿ ನಡೆದ ಪ್ಯಾಟ್ ಯಂಗ್ ಥ್ರೋವರ್ ಕ್ಲಾಸಿಕ್ ಸ್ಪರ್ಧೆಯಲ್ಲಿ 62.62 ಮೀಟರ್ ದೂರಕ್ಕೆ ಎಸೆಯುವ ಮೂಲಕ ಸ್ವರ್ಣ ಸಂಪಾದಿಸಿದರು. ಜೊತೆಗೆ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡರು. ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳುವ 61.00 ಮೀಟರ್ ಮಾನದಂಡಕ್ಕಿಂತ ದೂರ ಎಸೆಯುವಲ್ಲಿ ಯಶಸ್ವಿಯಾದ ಸೀಮಾ ಪುನಿಯಾ 2008ರ ಒಲಿಂಪಿಕ್ ಪದಕ ವಿಜೇತೆ ಸ್ಟೇಫಿನ್ ಬ್ರೌನ್ ಟ್ರಾಫ್ಟಾನ್ಗಿಂತ ಮುಂದಕ್ಕೆ ಎಸೆದು ಈ ಸ್ಪರ್ಧೆಯಲ್ಲಿ ಚಿನ್ನ ಸಂಪಾದಿಸಿದರು. ಹರ್ಯಾಣ ಮೂಲದ ಅಥ್ಲೀಟ್ 2006ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ, 2010ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು, ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಅಲ್ಲದೇ ಇಂಚಿಯಾನ್ ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಗೆದ್ದುಕೊಂಡಿದ್ದರು.
2016: ಮುಂಬೈ: ಮುಂಬೈಯಲ್ಲಿ 51 ದಿವ್ಯಾಂಗ ಜೋಡಿಗಳು ಸಾಮೂಹಿಕ ಮದುವೆಯಲ್ಲಿ ವೈವಾಹಿಕ ಬಂಧನಕ್ಕೆ ಕಾಲಿರಿಸಿದವು.
2009: ಅಮೆರಿಕದ ವಾಷಿಂಗ್ಟನ್ನಿನಲ್ಲಿ ನಡೆದ ಸ್ಮರಣ ಶಕ್ತಿಗೆ ಸವಾಲೆಸೆಯುವ ರಾಷ್ಟ್ರೀಯ 'ಸ್ಪೆಲ್ಲಿಂಗ್ ಬೀ' (ಕಾಗುಣಿತ) ಸ್ಪರ್ಧೆಯಲ್ಲಿ ಕ್ಯಾನ್ಸಾಸ್‌ನ ಒಲಥೆ ನಿವಾಸಿ ಭಾರತೀಯ ಮೂಲದ 13 ವರ್ಷದ ಕಾವ್ಯಾ ಶಿವಶಂಕರ್ ಪಾರಿತೋಷಕ ಪಡೆದುಕೊಂಡರು. ಕಳೆದ ಮೂರು ವರ್ಷಗಳಲ್ಲೂ ಕಾವ್ಯ ಈ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದರು. 2006ರಲ್ಲಿ 10ನೆಯವರಾಗಿ, 2007ರಲ್ಲಿ 8ನೆಯವರಾಗಿ ಹಾಗೂ 2008ರಲ್ಲಿ 4ನೆಯವರಾಗಿ ಆಯ್ಕೆಯಾಗಿದ್ದರು.
2009: ಸರಾಸರಿ ಭಾರತೀಯರ ಮಾಸಿಕ ಆದಾಯ ರಾಷ್ಟ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೂ 3000 ದಾಟಿದೆ ಎಂದು ಕೇಂದ್ರೀಯ ಅಂಕಿಅಂಶಗಳ ಸಂಸ್ಥೆ (ಸಿಎಸ್‌ಓ) ಈದಿನ ಬಿಡುಗಡೆ ಮಾಡಿದ ರಾಷ್ಟ್ರೀಯ ವರಮಾನದ ಮುಂಗಡ ಅಂದಾಜು ವರದಿ ಹೇಳಿತು. ಆರ್ಥಿಕ ಸುಧಾರಣೆಗಳು ಹಾಗೂ 2005-06ರಿಂದ ಮೂರು ವರ್ಷಗಳವರೆಗೆ ಶೇ.9ಕ್ಕಿಂತ ಹೆಚ್ಚಿನ ಮಟ್ಟದ ವೃದ್ಧಿ ದರ ಇದಕ್ಕೆ ಕಾರಣ. ನಾಗರಿಕರ ಸರಾಸರಿ ಆದಾಯದ ಅಳತೆಗೋಲಾಗಿರುವ ತಲಾ ಆದಾಯ (ಪರ್ ಕ್ಯಾಪಿಟಾ) ಶೇ.12.2ರಷ್ಟು ಹೆಚ್ಚಾಗಿ 2008-09ರಲ್ಲಿ ವಾರ್ಷಿಕ ರೂ 37,490ಕ್ಕೆ ಏರಿದೆ ಎಂದು ವರದಿ ಹೇಳಿತು.
2009: ಭಾರತದ ಅಗ್ರಗಣ್ಯ ಬಯೊಟೆಕ್ನಾಲಜಿ ಕಂಪೆನಿ ಬಯೋಕಾನ್, ಬೆಂಗಳೂರಿನಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವ ನೂತನ ಬೇಸಲ್ ಇನ್ಸುಲಿನ್ 'ಬೇಸಲಾಗ್' ಬಿಡುಗಡೆ ಮಾಡಿತು. ಟೈಪ್ 1 ಮತ್ತು ಟೈಪ್ 2 ಮಧುಮೇಹಗಳೆರಡಕ್ಕೂ ಈ ಇನ್ಸುಲಿನ್ ಗಾಜಿರ್ಲ್ನ್ (ಮಾನವ ಇನ್ಸುಲಿನ್) ಸೂಕ್ತವೆನಿಸಿದ್ದು ದಿನವಿಡೀ ಒಂದೇ ರೀತಿಯಾಗಿ ಕಾರ್ಯ ನಿರ್ವಹಿಸುವ ಕಾರಣ ಆರೋಗ್ಯ ಸಮಸ್ಯೆಗಳಿರುವುದಿಲ್ಲ ಎಂದು ಇನ್ಸುಲಿನ್ ಬಿಡುಗಡೆ ಮಾಡಿ ಮಾತನಾಡಿದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹೇಳಿದರು. ಮಧುಮೇಹ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮಧುಮೇಹಿಗಳ ಜೀವನದಲ್ಲೊಂದು ಮುಖ್ಯ ತಿರುವು ನೀಡಲಿರುವ ಈ ಔಷಧಿಯಿಂದ ತೂಕ ಗಳಿಕೆಯೂ ಕಡಿಮೆ ಎಂದು ಅವರು ಬಣ್ಣಿಸಿದರು.
2009: ಕಿರಿಯ ಮಗನನ್ನು ತನ್ನ 'ರಾಜಕೀಯ ಉತ್ತರಾಧಿಕಾರಿ'ಯನ್ನಾಗಿಸುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಬಹುಕಾಲದ ಕನಸು ನನಸಾಯಿತು. ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಂ.ಕೆ. ಸ್ಟಾಲಿನ್ ಅವರನ್ನು ಈದಿನ ಉಪಮುಖ್ಯಮಂತ್ರಿ ಎಂದು ಘೋಷಿಸಲಾಯಿತು. ಕರುಣಾನಿಧಿ ಅವರ ಪುತ್ರರಾದ ಅಳಗಿರಿ ಮತ್ತು ಸ್ಟಾಲಿನ್‌ರಲ್ಲಿ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಜನರ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತು. ಕಾಕತಾಳೀಯ ಎಂಬಂತೆ ಹಿರಿಯ ಪುತ್ರ ಕೇಂದ್ರದ ಸಚಿವನಾದ ಮರುದಿನವೇ ಕಿರಿಯ ಮಗನನ್ನು ಉಪ ಮುಖ್ಯಮಂತ್ರಿ ಎಂದು ಘೋಷಿಸಲಾಯಿತು.
2009: ಮುಂಬೈ ಮೇಲಿನ ದಾಳಿ ಸಂದರ್ಭ ಹತ್ಯೆಯಾದ ಉಗ್ರ ಅಬು ಇಸ್ಮಾಯಿಲ್ ಜೇಬಿನಿಂದ ಪೊಲೀಸರು ವಶಪಡಿಸಿಕೊಂಡ ನಕಾಶೆಯನ್ನು (ದಾಳಿಗೆ ಗುರಿಯಿಟ್ಟ ಸ್ಥಳಗಳ ವಿವರ) ಸಾಕ್ಷಿಯೊಬ್ಬರು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಗುರುತಿಸಿದರು. ಎಲ್‌ಇಟಿ ಉಗ್ರಗಾಮಿ ಸಂಘಟನೆಯ ಸಂಚುಕೋರರಿಗೆ ನಕಾಶೆ ಹಸ್ತಾಂತರಿಸಿದ ಆರೋಪ ಹೊತ್ತ ಸಬಾವುದ್ದೀನ್ ಅಹ್ಮದ್ ಮತ್ತು ದಾಳಿ ನಡೆಸುವಾಗ ಬದುಕುಳಿದ ಏಕೈಕ ಬಂಧಿತ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಾಬ್ ಜೊತೆ ವಿಚಾರಣೆ ಎದುರಿಸಿದ ಫಾಹೀಮ್ ಅನ್ಸಾರಿ ಈ ನಕಾಶೆ ಸಿದ್ಧಪಡಿಸಿದ್ದಾಗಿ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತು.
2009: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಟಾಟಾ ಕಂಪನಿಯ ಚುನಾವಣಾ ವಿಭಾಗವು ದೇಣಿಗೆ ನೀಡಿದ ರೂ.27.65 ಲಕ್ಷ ಮೊತ್ತದ ಚೆಕ್ ಅನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ವಾಪಸ್ ಕಳುಹಿಸಿದರು. ನಾವು ವಿನಯಪೂರ್ವಕವಾಗಿ ಚೆಕ್ ಅನ್ನು ವಾಪಸ್ ನೀಡಿದ್ದೇವೆ. ಕಾರಣ ಏನು ಎಂದು ವಿವರಿಸುವ ಪತ್ರವನ್ನೂ ವಿನಯಪೂರ್ವಕವಾಗಿ ರವಾನಿಸಿದ್ದೇವೆ. ಎಂದು ಮಮತಾ ಬ್ಯಾನರ್ಜಿ ಹೇಳಿದರು. 'ನಾವು ಕಾರ್ಪೊರೇಟ್ ಕಂಪನಿಗಳಲ್ಲಿ ಯಾವುದೇ ಋಣ ಇರಿಸಿಕೊಳ್ಳುವುದಿಲ್ಲ, ನಾವು ಏನಿದ್ದರೂ ಸಾಮಾನ್ಯ ಜನರು, ರೈತರು, ದುಡಿಯುವ ವರ್ಗದವರ ಋಣದಲ್ಲಿದ್ದೇವೆ' ಎಂದು ಪಕ್ಷದ ಸಚಿವ ಶಿಶಿರ್ ಅಧಿಕಾರಿ ತಿಳಿಸಿದರು.
2009: ರಾಜ್ಯದಲ್ಲಿ ಜಾರಿಯಲ್ಲಿರುವ ಕಾನೂನುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಹೊರ ತರಲಾದ 'ಕರ್ನಾಟಕದ ಕಾನೂನುಗಳು' ಕುರಿತ ಸಿ.ಡಿ.ಯನ್ನು ಕಾನೂನು ಸಚಿವ ಎಸ್.ಸುರೇಶ ಕುಮಾರ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆ ಹೊರ ತಂದಿರುವ ಸಿ.ಡಿ.ಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ 1956ರ ನವೆಂಬರ್ ಒಂದರಿಂದ ರಚಿತವಾದ ಎಲ್ಲ ಕಾನೂನುಗಳ ಬಗ್ಗೆ ಸಮಗ್ರವಾದ ಮಾಹಿತಿ ಲಭ್ಯವಿದೆ.
2009: ಭಾರತದ ಅತ್ಯಂತ ಜನಪ್ರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೊನೆಗೂ ತಮ್ಮ ಸೂಕ್ತ 'ಜೊತೆಗಾರ'ನನ್ನು ಕಂಡುಕೊಂಡರು. ಆದರೆ ಇದು ಮಿಶ್ರ ಡಬಲ್ಸ್ ಪಂದ್ಯದ ಜೊತೆಗಾರ ಅಲ್ಲ. ಬದಲಾಗಿ ಬಾಳಸಂಗಾತಿ. ತಮ್ಮ ಬಾಲ್ಯ ಕಾಲದ ಗೆಳೆಯ ಮೊಹಮ್ಮದ್ ಸೊಹ್ರಾಬ್ ಮಿರ್ಜಾ ಜೊತೆ ಸಾನಿಯಾ ನಿಶ್ಚಿತಾರ್ಥ ನಡೆದಿದೆ ಎಂದು ಸಾನಿಯಾ ಅವರ ತಂದೆ ಇಮ್ರಾನ್ ಮಿರ್ಜಾ ಖಚಿತ ಪಡಿಸಿದರು.
2009: ಹಾಲಿವುಡ್ ಸೂಪರ್‌ಸ್ಟಾರ್ ಏಂಜಲೀನಾ ಜೋಲಿ ವಿಶ್ವದ ಅತಿ ಸುಂದರ ಮಹಿಳೆಯರಲ್ಲಿ ಒಬ್ಬರು ಎಂಬ ಖ್ಯಾತಿ ಗಳಿಸಿಕೊಂಡರು. ಆದರೆ, ಅಚ್ಚ ಕನ್ನಡತಿ ಸುಂದರಿ ದೀಪಿಕಾ ಪಡುಕೋಣೆ ಸೌಂದರ್ಯದಲ್ಲಿ ಏಂಜಲಿನಾ ಜೋಲಿ ಅವರನ್ನು ಹಿಂದಿಕ್ಕಿದರು. ಹಾಲಿವುಡ್‌ನ ಖ್ಯಾತ ನಿರ್ದೇಶಕ ರಾಬ್ ಕೊಹೆನ್, ದೀಪಿಕಾ ಕಣ್ಣು ಕುಕ್ಕುವ ಸೌಂದರ್ಯ ಹೊಂದಿದ್ದು ಏಂಜಲಿನಾಗಿಂತ ಸುಂದರಿ ಎಂದು ಹೇಳಿರುವುದಾಗಿ ಲಂಡನ್ ಪತ್ರಿಕೆಯೊಂದು ವರದಿ ಮಾಡಿತು.
2008: ಹಾಸನ ಜಿಲ್ಲೆ ಅರಕಲಗೂಡಿನ ಅಗ್ರಹಾರ ಕೆರೆ ಏರಿಯಿಂದ ಕೆರೆಗೆ ಲಾರಿ ಮಗುಚಿಬಿದ್ದ ಕಾರಣ ಮಹಿಳೆಯರು, ಮಕ್ಕಳು ಸೇರಿದಂತೆ 25 ಜನ ಮೃತರಾಗಿ ಇತರ 46ಕ್ಕೂ ಹೆಚ್ಚು ಜನ ಗಾಯಗೊಂಡರು. ಮದುವೆ ಸಮಾರಂಭದ ಬೀಗರ ಊಟಕ್ಕೆ ಪಯಣಿಸುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಕಂದಕಕ್ಕೆ ಮಗುಚಿತು.
2008: ರಾಜ್ಯಪಾಲರ ಶಿಫಾರಸಿನ ಆಧಾರದಲ್ಲಿ ಹಿಂದಿನ ದಿನ ಕೇಂದ್ರ ಸಚಿವ ಸಂಪುಟ ರಾಜ್ಯದ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂದಕ್ಕೆ ಪಡೆಯುವ ನಿಧರ್ಾರ ಕೈಗೊಂಡಿತ್ತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಂಪುಟ ನಿರ್ಧಾರಕ್ಕೆ ಈದಿನ ಅಂಕಿತ ಹಾಕಿದರು.
2008: ಕಠ್ಮಂಡುವಿನಲ್ಲಿ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಅರಮನೆಯ ಮೇಲೆ ಹಾರಾಡುತ್ತಿದ್ದ ರಾಜಮನೆತನದ ಬಾವುಟವನ್ನು ಕೆಳಗಿಳಿಸಿ, ರಾಷ್ಟ್ರೀಯ ಬಾವುಟವನ್ನು ಏರಿಸಲಾಯಿತು. ಇದರೊಂದಿಗೆ ನೇಪಾಳದಲ್ಲಿ ಎರಡೂವರೆ ಶತಮಾನಗಳ ಅರಸೊತ್ತಿಗೆ ಆಳ್ವಿಕೆ ಅಧಿಕೃತವಾಗಿ ಕೊನೆಗೊಂಡಂತಾಯಿತು. ಮಾಜಿ ದೊರೆ ಜ್ಞಾನೇಂದ್ರ ಅವರಿಗೆ ಅರಮನೆ ಬಿಡುವಂತೆ ರಾಜಕೀಯ ಪಕ್ಷಗಳು 15 ದಿನ ಗಡುವು ನೀಡಿದವು. ಅಷ್ಟರೊಳಗೆ ಅರಮನೆ ಬಿಡದಿದ್ದಲ್ಲಿ ಬಲವಂತವಾಗಿ ಹೊರಗೆ ಕಳುಹಿಸಬೇಕಾಗುತ್ತದೆ ಎಂದು ಗೃಹ ಸಚಿವ ಕೃಷ್ಣಪ್ರಸಾದ್ ಸಿತೌಲ ಎಚ್ಚರಿಕೆ ನೀಡಿದರು. ನೇಪಾಳದ ಅರಸೊತ್ತಿಗೆ ರದ್ದುಪಡಿಸಿ ಹೊಸ ಸರ್ಕಾರವನ್ನು ಸ್ಥಾಪಿಸಲು 560 ಮಂದಿ ಪರವಾಗಿ ಹಾಗೂ ನಾಲ್ಕು ಮಂದಿ ವಿರೋಧವಾಗಿ ಮತ ಚಲಾಯಿಸಿದ್ದರು.
2008: ಬೆಂಗಳೂರಿನ ನಾಗರಬಾವಿ ರಸ್ತೆಯ ವಿಸ್ತರಣಾ ಕಾರ್ಯದಿಂದ ಧರೆಗುರುಳಬೇಕಿದ್ದ ಸುಮಾರು 40 ಮರಗಳಿಗೆ ಮರು ಜೀವ ಬಂದಿತು. ವಸಂತಕಾಲದಲ್ಲಿ ಹೂವುಗಳು ಚಿಗುರಿ ಆಕರ್ಷಕವಾಗಿ ಕಂಗೊಳಿಸುತ್ತಿರುವ ಸುಮಾರು 40 `ತಬಿಬುಯಾ ರೋಸಿಯಾ' ಮರಗಳ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದರೂ ಜೀವ ಕಳೆದುಕೊಳ್ಳಲಿಲ್ಲ. ಹೀಗಾಗಿ ಈ ಮರಗಳನ್ನು ಬುಡಸಮೇತ ಕಿತ್ತು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿನ ಕಾನೂನು ಕಾಲೇಜಿನ ಸುತ್ತಮುತ್ತ ನೆಡುವ ಮೂಲಕ ಮರು ಜೀವ ನೀಡಲಾಯಿತು.
2008: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಟಿ. ಎಲ್. ದೇವರಾಜ್ ಅವರಿಗೆ 2007ರ `ರಾಂ ನಾರಾಯಣ ವೈದ್ಯ ಪ್ರಶಸ್ತಿ' ಪ್ರದಾನ ಮಾಡಿದರು. ಆಯುರ್ವೇದ ಶಿಕ್ಷಣ ಮತ್ತು ಚಿಕಿತ್ಸೆಗೆ ನೀಡಿದ ಗಮನಾರ್ಹ ಕೊಡುಗೆಗಾಗಿ ದೇವರಾಜ್ 2007ರ `ರಾಂ ನಾರಾಯಣ ವೈದ್ಯ ಪ್ರಶಸ್ತಿ' ಪಡೆದುಕೊಂಡರು. ಆಯುರ್ವೇದ ರಂಗದಲ್ಲಿನ ಸಾಧನೆಗಾಗಿ ನೀಡಲಾಗುವ ದೇಶದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಇದು. ಪ್ರಶಸ್ತಿಯು ರೂ 1.5 ಲಕ್ಷ ನಗದು ಒಳಗೊಂಡಿದೆ.
2007: ಹೊಟ್ಟೆಯ ಭಾಗದಲ್ಲಿ ಅಂಟಿಕೊಂಡಿದ್ದ 10 ತಿಂಗಳ ಗಂಡು ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವ ಶಸ್ತ್ರಕ್ರಿಯೆಯನ್ನು ರಾಯಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿಯಾಗಿ ನೆರವೇರಿಸಿದರು. ದೇಶದಲ್ಲಿ ನಡೆದ ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವ ನಾಲ್ಕನೇ ಶಸ್ತ್ರ ಚಿಕಿತ್ಸೆ ಇದು. ಅವಳಿ ಮಕ್ಕಳಾದ ರಾಮ ಮತ್ತು ಲಕ್ಷ್ಮಣನನ್ನು ಐದು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಯಶಸ್ವಿಯಾಗಿ ಬೇರ್ಪಡಿಸಲಾಯಿತು.
2007: ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಗುರ್ಜರ ಸಮುದಾಯದವರು ರಾಜಸ್ಥಾನದ ದೌಸಾ ಹಾಗೂ ಬಂಡಿ ಜಿಲ್ಲೆಯಲ್ಲಿ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಪೊಲೀಸರು ಗೋಲಿಬಾರ್ ಮಾಡಿದ ಪರಿಣಾಮವಾಗಿ 14 ಜನ ಗುಂಡಿಗೆ ಬಲಿಯಾದರು.
2007: ಸೌರ ಮಂಡಲ ಮತ್ತು ಭೂಮಿಯ ಅಸ್ತಿತ್ವವು ಊಹೆಗೂ ನಿಲುಕದ ಬ್ರಹ್ಮಾಂಡದಲ್ಲಿ ಅಪರೂಪದ ಸಂಗತಿಯೇನೂ ಅಲ್ಲ, ಅನಂತ ಆಕಾಶದಲ್ಲಿ ವಾಸಕ್ಕೆ ಯೋಗ್ಯವಾದ ಇಂತಹ ಕೋಟ್ಯಂತರ ಗ್ರಹಗಳು ಇರುವ ಸಾಧ್ಯತೆಗಳು ಹೆಚ್ಚು ಇವೆಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು. ಹೊನೊಲುಲುವಿನಲ್ಲಿ ನಡೆದ ಅಮೆರಿಕದ ಖಗೋಳ ವಿಜ್ಞಾನಿಗಳ ಸಮಾವೇಶದಲ್ಲಿ ಸಂಶೋಧಕರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಖಗೋಳ ವಿಜ್ಞಾನಿಗಳು ಕಳೆದ ವರ್ಷ ಒಟ್ಟು 28 ಹೊಸ ಗ್ರಹಗಳನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಸೌರವ್ಯೂಹದ ಆಚೆಗೆ ಈವರೆಗೆ 236 ಗ್ರಹಗಳನ್ನು ಗುರುತಿಸಲಾಗಿದೆ ಎಂಬುದು ಅವರ ಅಭಿಪ್ರಾಯ.
2007: ಮೆಕ್ಸಿಕೊದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಜಪಾನಿನ ನೃತ್ಯ ಕಲಾವಿದೆ ರಿಯೋ ಮೋರಿ 2007ನೇ ಸಾಲಿನ ಭುವನಸುಂದರಿಯಾಗಿ ಆಯ್ಕೆಯಾದರು. `ಭಾರತ ಸುಂದರಿ' ಪೂಜಾ ಗುಪ್ತ ಕೊನೆಯ ಐವರು ಸ್ಪರ್ಧಿಗಳಲ್ಲಿ ಸೇರ್ಪಡೆ ಆಗುವ ಅವಕಾಶದಿಂದಲೂ ವಂಚಿತರಾದರು.
2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕಿಂತ ಸ್ವಲ್ಪ ಮುಂಚೆ ತಲೆ ತಪ್ಪಿಸಿಕೊಂಡ ಪ್ರಮುಖ ಆರೋಪಿ ಟೈಗರ್ ಮೆಮನ್ ಗೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಆರ್ ಡಿ ಎಕ್ಸ್ ಸಾಗಣೆಯಲ್ಲಿ ನೆರವಾದ ಅಪರಾಧಕ್ಕಾಗಿ ಕಸ್ಟಮ್ಸ್ ಇಲಾಖೆಯ ನಾಲ್ಕು ಮಂದಿ ಮಾಜಿ ಅಧಿಕಾರಿಗಳಿಗೆ ನಿಯೋಜಿತ ಟಾಡಾ ನ್ಯಾಯಾಲಯವು 7ರಿಂದ 9 ವರ್ಷಗಳವರೆಗಿನ ಕಠಿಣ ಸೆರೆವಾಸದ ಶಿಕ್ಷೆ ವಿಧಿಸಿತು.
2007: ಬಡಗುತಿಟ್ಟು ಯಕ್ಷಗಾನದ ಖ್ಯಾತ ಮದ್ದಳೆ ವಾದಕ, ಮಾಂತ್ರಿಕ ದುರ್ಗಪ್ಪ ಗುಡಿಗಾರ (65) ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಭಟ್ಕಳದ ಚೌತನಿಯವರಾದ ದುರ್ಗಪ್ಪ ಗುಡಿಗಾರ ತಮ್ಮ ಕಲಾ ಸೇವೆಗಾಗಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕರ್ನಾಟಕ ಶ್ರೀ, ಮುದೂರು ದೇವರು ಹೆಗ್ಗಡೆ ಪ್ರತಿಷ್ಠಾನ, ಮಸ್ಕತ್ ರಂಗಭೂಮಿ ಪ್ರಶಸ್ತಿ, ಜನಪದ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ, ಸನ್ಮಾನಕ್ಕೆ ಪಾತ್ರರಾಗಿದ್ದರು.
2006: ಕಾವೇರಿ ನ್ಯಾಯಮಂಡಳಿಯ ನ್ಯಾಯದರ್ಶಿಗಳ ವರದಿಯನ್ನು ತಿರಸ್ಕರಿಸಿ 408 ಟಿಎಂಸಿ ನೀರಿಗೆ ಬೇಡಿಕೆ ಸಲ್ಲಿಸಲು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಕರ್ನಾಟಕಕ್ಕೆ 251 ಟಿಂಎಸಿ ನೀರು ನಿಗದಿ ಪಡಿಸಿ ನ್ಯಾಯದರ್ಶಿಗಳು ತಯಾರಿಸಿದ ವರದಿ ನ್ಯಾಯೋಚಿತವಲ್ಲ, ಅದನ್ನು ಒಪ್ಪಲಾಗದು ಎಂದು ಸಭೆ ಸ್ಪಷ್ಟ ಪಡಿಸಿತು.
2006: ಸೇನಾ ತರಬೇತಿಯನ್ನು ಸಾಂಸ್ಥೀಕರಣಗೊಳಿಸುವ ಪ್ರಪ್ರಥಮ ಚಾರಿತ್ರಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಸೋಮವಾರ ಬೀಜಿಂಗಿನಲ್ಲಿ ಸಹಿ ಹಾಕಿದವು. ಈ ಒಪ್ಪಂದವು ಜಂಟಿ ಸೇನಾ ಕವಾಯತು ಹಾಗೂ ವಿಚಾರ ವಿನಿಮಯಗಳಿಗೆ ಅವಕಾಶ ಕಲ್ಪಿಸಲಿದೆ. ಚೀನಾಕ್ಕೆ ಭೇಟಿ ನೀಡಿದ ಭಾರತದ ರಕ್ಷಣಾ ಸಚಿವ ಪ್ರಣವ್ ಮುಖರ್ಜಿ ಮತ್ತು ಚೀನಿ ರಕ್ಷಣಾ ಸಚಿವ ಜನರಲ್ ಕಾವೊ ಗಾಂಗ್ ಚುವಾನ್ ಅವರು ಇಲ್ಲಿ ಕೇಂದ್ರೀಯ ಸೇನಾ ಕಮೀಷನ್ ಮುಖ್ಯ ಕಚೇರಿಯಲ್ಲಿ 2 ಗಂಟೆಗಳ ಕಾಲ ನಡೆದ ಮಾತುಕತೆ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಿದರು.
2006: ದಕ್ಷಿಣ ಬಾಂಗ್ಲಾದೇಶದಲ್ಲಿ ಕಳೆದ ವರ್ಷ ಬಾಂಬ್ ದಾಳಿ ನಡೆಸಿ ಇಬ್ಬರು ನ್ಯಾಯಾಧೀಶರನ್ನು ಕೊಲೆಗೈದ ಪ್ರಕರಣದಲ್ಲಿ ವಹಿಸಿದ ಪಾತ್ರಕ್ಕಾಗಿ ನಿಷೇಧಿತ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಜುಮತುಲ್ ಮುಜಾಹಿದೀನ್ ಬಾಂಗ್ಲಾದೇಶ್ ಸಂಘಟನೆಯ ಉನ್ನತ ನಾಯಕರಾದ ಷೇಕ್ ಅಬ್ದುರ್ ರಹಮಾನ್ ಮತ್ತು ಸಿದ್ದುಕಿಲ್ ಇಸ್ಲಾಂ ಸೇರಿದಂತೆ ಏಳು ಮಂದಿ ಇಸ್ಲಾಮಿಕ್ ಉಗ್ರಗಾಮಿಗಳಿಗೆ ಜéಲಕಥಿ ಪಟ್ಟಣದ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿತು. ದಕ್ಷಿಣ ಜéಲಕಥಿ ಪಟ್ಟಣದಲ್ಲಿ ನ್ಯಾಯಾಧೀಶ ರೇಝಾ ತಾರಿಖ್ ಅಹಮದ್ ಅವರು ತೀರ್ಪನ್ನು ಓದಿ ಹೇಳಿದರು. ಈ ಪಟ್ಟಣದಲ್ಲೇ ನವೆಂಬರ್ 14ರಂದು ಇಬ್ಬರು ನ್ಯಾಯಾಧೀಶರನ್ನು ಕೊಲೆಗೈಯಲಾಗಿತ್ತು.
1973: ಕಲಾವಿದೆ ರೂಪ ಸಿ. ಜನನ.
1972: ಖ್ಯಾತ ಚಿತ್ರನಟ ಹಾಗೂ ರಂಗನಟ ಪೃಥ್ವಿರಾಜ್ ಕಪೂರ್ ತಮ್ಮ 65ನೇ ವಯಸ್ಸಿನಲ್ಲಿ ಅಸುನೀಗಿದರು. ಇವರು ಚಿತ್ರನಟರಾದ ರಾಜ್ ಕಪೂರ್, ಶಮ್ಮಿ ಕಪೂರ್ ಮತ್ತು ಶಶಿ ಕಪೂರ್ ಅವರ ತಂದೆ. ರಾಜ್ಯಸಭೆಗೆ ಸದಸ್ಯರಾಗಿ ನಾಮಕರಣಗೊಂಡ ಚಿತ್ರರಂಗದ ಪ್ರಪ್ರಥಮ ವ್ಯಕ್ತಿ ಇವರು. 1972 ರಲ್ಲಿ ಇವರಿಗೆ ಮರಣೋತ್ತರವಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು.
1968: ಕಲಾವಿದ ದೊಡ್ಡಮನಿ ಎಂ.ಜಿ. ಜನನ.
1953: ನ್ಯೂಜಿಲ್ಯಾಂಡಿನ ಎಡ್ಮಂಡ್ ಹಿಲರಿ ಮತ್ತು ಶೆರ್ಪಾ ತೇನ್ ಸಿಂಗ್ ನೋರ್ಗೆ ಪ್ರಪ್ರಥಮ ಬಾರಿಗೆ ಜಗತ್ತಿನ ಅತ್ಯುನ್ನತ ಶಿಖರ ಎವರೆಸ್ಟನ್ನು ಏರಿದರು.
1917: ಜಾನ್ ಎಫ್. ಕೆನಡಿ ಜನ್ಮದಿನ(1917-63). ಇವರು 1961-63ರ ಅವಧಿಯಲ್ಲಿ ಅಮೆರಿಕದ 35ನೇ ಅಧ್ಯಕ್ಷರಾಗಿದ್ದರು. ಡಲ್ಲಾಸ್ನಲ್ಲಿ ಮೋಟಾರಿನಲ್ಲಿ ಹೋಗುತ್ತಿದ್ದಾಗ ಇವರನ್ನು ಗುಂಡಿಟ್ಟು ಕೊಲೆಗೈಯಲಾಯಿತು.
1906: ಮೈಸೂರು ಶೈಲಿಯ ಭರತನಾಟ್ಯದ ಪ್ರವರ್ತಕರಲ್ಲಿ ಒಬ್ಬರು ಎಂದೇ ಖ್ಯಾತರಾದ ಡಾ. ಕೆ. ವೆಂಕಟಲಕ್ಷ್ಮಮ್ಮ (19-5-1906ರಿಂದ 3-7-2002) ಅವರು ಕಡೂರಿನ ತಂಗಲಿ ತಾಂಡ್ಯದಲ್ಲಿ ಜನಿಸಿದರು.
1877: ಸಾಹಿತಿ ನವರತ್ನ ರಾಮರಾವ್ (29-5-1877ರಿಂದ 27-11-1960) ಅವರು ನವರತ್ನ ಬಾಲಕೃಷ್ಣರಾಯರ ಪುತ್ರನಾಗಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಈ ದಿನ ಜನಿಸಿದರು. ಇವರ ದಕ್ಷ ಸೇವೆ, ಕನ್ನಡಕ್ಕೆ ನೀಡಿದ ಕೊಡುಗೆಗಾಗಿ ಮೈಸೂರಿನ ಮಹಾರಾಜರು `ರಾಜಸೇವಾಸಕ್ತ' ಬಿರುದು ನೀಡಿದ್ದರು.
1660: ಚಾರ್ಲ್ಸ್ ಸ್ಟುವರ್ಟ್ ತನ್ನ 30ನೇ ಹುಟ್ಟು ಹಬ್ಬದಂದು ಎರಡನೆಯ ಚಾರ್ಲ್ಸ್ ದೊರೆಯಾಗುವ ಸಲುವಾಗಿ ಲಂಡನ್ನಿಗೆ ಮರುಪ್ರವೇಶ ಮಾಡಿದ. 1651ರಲ್ಲಿ ವೋರ್ಸ್ಟರ್ ಯುದ್ಧದ ಬಳಿಕ ಇಂಗ್ಲೆಂಡಿನಿಂದ ಪರಾರಿಯಾಗಿದ್ದ. ಹಾಗೆ ಪರಾರಿಯಾಗುವಾಗ ಬೊಸ್ಕೊಬೆಲ್ನಲ್ಲಿ ಓಕ್ ಗಿಡವೊಂದನ್ನು ಅಡಗಿಸಿ ಇಟ್ಟಿದ್ದನಂತೆ. ಆತ ಮತ್ತೆ ದೊರೆಯಾದ ಸಂಭ್ರಮಕ್ಕಾಗಿ ಆತನಿಗೆ ನಿಷ್ಠರಾಗಿದ್ದ ಪ್ರಜೆಗಳು ಓಕ್ ಎಲೆಗಳನ್ನು ಧರಿಸಿ ಈ ದಿನವನ್ನು `ಓಕ್ ಆಪಲ್ ಡೇ' ಆಗಿ ಆಚರಿಸಿದರು.
No comments:
Post a Comment