ಇಂದಿನ ಇತಿಹಾಸ History Today ಜೂನ್ 30
2018: ನವದೆಹಲಿ: ಮುಂಬೈಯ ಎಲಿಫೆಂಟಾ ಗುಹೆಗಳು ಮತ್ತು ಛತ್ರಪತಿ ಶಿವಾಜಿ ಮಹಾರಾಜ್
ಟರ್ಮಿನಸ್ (ಸಿಎಸ್ ಎಚಿಟಿ) ಜೊತೆಗೆ ಈಗ ವಿಕ್ಟೋರಿಯಾ ಗೊಥಿಕ್ ಮತ್ತು ಆರ್ಟ್ ಡೆಕೊ ಎನ್ ಸೆಂಬಲ್ ಕೂಡಾ ಯುನೆಸ್ಕೊ ವಿಶ್ವ ಪರಂಪರೆ ತಾಣಪಟ್ಟಿಗೆ ಸೇರಿತು. ಯುನೆಸ್ಕೋದ
ಸಲಹಾ ಸಂಸ್ಥೆಯಾಗಿರುವ ಸ್ಮಾರಕಗಳು ಮತ್ತು ನಿವೇಶನಗಳ ಅಂತಾರಾಷ್ಟ್ರೀಯ ಮಂಡಳಿಯು (ಐಸಿಒಎಂಒಎಸ್) ವಿಕ್ಟೋರಿಯಾ
ಗೊಥಿಕ್ ಮತ್ತು ಆರ್ಟ್ ಡೆಕೊ ಎನ್ ಸೆಂಬಲ್‌ನ್ನು ಯುನೆಸ್ಕೊ ವಿಶ್ವ ಪರಂಪರೆ ತಾಣ ಪಟ್ಟಿಗೆ ಸೇರ್ಪಡೆ
ಮಾಡಲು ಈದಿನ ಹಸಿರು ನಿಶಾನೆ ತೋರಿಸಿತು. ಗಮನಾರ್ಹ ರಚನೆಗಳಾದ ಬಾಂಬೆ ಹೈಕೋರ್ಟ್, ಎಲ್ಫಿನಸ್ಟೋನ್
ಕಾಲೇಜ್, ಎನ್ ಜಿ ಎಂಎ ಮತ್ತು ಸಿಎಸ್ ಎಂವಿಎಸ್ ಗಳ ಜೊತೆಗೆ ಕೋಟೆ ಸುತ್ತುಮುತ್ತಣ ಕಟ್ಟಡಗಳು, ಚರ್ಚ್‌ಗೇಟ್
ಮತ್ತು ಮೆರೈನ್ ಡ್ರೈವ್ ಪ್ರದೇಶವನ್ನು ವಿಶ್ವ ಪರಂಪರೆ ತಾಣ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿ ನಿಯೋ- ಕ್ಲಾಸಿಕಲ್ ಮತ್ತು ಇಂಡೋ- ಸಾರ್ಸನಿಕ್ ಶಿಲ್ಪಕಲೆ
ಇದೆ. ವಸತಿ ಕಟ್ಟಡಗಳು, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ
ಸುತ್ತಣ ಓವಲ್ ಮೈದಾನ ಮತ್ತು ಮರೈನ್ ಡ್ರೈವ್ ನ ಮೊದಲ ಸಾಲಿನ ಕಟ್ಟಡಗಳು ಆರ್ಟ್ ಡೆಕೊ ಕಟ್ಟಡಗಳ ಭಾಗವಾಗಿದ್ದು,
ರೀಗಲ್ ಅಂಡ್ ಎರೋಸ್ ಸಿನಿಮಾಸ್ ಕೂಡಾ ಇದರಲ್ಲಿ ಸೇರಿವೆ. ವಿಕ್ಟೋರಿಯನ್ ಕಟ್ಟಡಗಳು ವಿಶ್ವದಲ್ಲಿ ೧೯ನೇ
ಶತಮಾನದ ವಿಕ್ಟೋರಿಯನ್ ಗೊಥಿಕ್‌ನ ಸುಂದರ ಕಟ್ಟಡಗಳ ಸಮೂಹವಾಗಿದ್ದು, ಆರ್ಟ್ ಡೆಕೊ ವಿಶ್ವದ ೨೦ನೇ ಶತಮಾನದ
ಎರಡನೇ ದೊಡ್ಡ ಏಕರೂಪದ ಸಂಗ್ರಹಗಳಾಗಿವೆ. ಯೋಜನೆಗಾಗಿ
೧೪ ವರ್ಷಗಳಿಂದ ಶ್ರಮಿಸುತ್ತಿದ್ದ ಅಬ್ಹಾ ನರೈನ್ ಲಂಬಾ ಅವರು ಯುನೆಸ್ಕೊಗೆ ಸಲ್ಲಿಸಲು ನಾಮಿನೇಷನ್
ಕಡತಕೋಶ ಸಿದ್ಧ ಪಡಿಸಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿ
ದೇವೇಂದ್ರ ಫಡ್ಣವೀಸ್ ಅವರು ನಾಮಿನೇಷನ್ ಕಡತಕೋಶಕ್ಕೆ ಅನುಮೋದನೆ ನೀಡಿದ್ದರು. ಆರ್ಟ್ ಡೆಕೊ ಮತ್ತು ವಿಕ್ಟೋರಿಯನ್ ಕಟ್ಟಡಗಳ ಭಾರತದ ೩೭ನೇ
ವಿಶ್ವ ಪರಂಪರೆ ತಾಣವಾಗಿದ್ದು ಮಹಾರಾಷ್ಟ್ರದ ಐದನೆಯ ಹಾಗೂ ಮುಂಬೈಯ ಮೂರನೆಯ ವಿಶ್ವ ಪರಂಪರೆ ತಾಣವಾಗಿದೆ.
2018:
ನವದೆಹಲಿ:
ತಾವು ’ಮನವಿ ಚೌಕಾಶಿ’ ನಡೆಸುತ್ತಿರುವುದಾಗಿ ಜಾರಿ ನಿರ್ದೇಶನಾಲಯದ (ಇಡಿ)
ಪ್ರತಿಪಾದನೆಯನ್ನು
ತಳ್ಳಿಹಾಕಿದ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರು ನ್ಯಾಯಾಲಯದ ಮುಂದೆ ’ಚೌಕಾಶಿ ಸಿದ್ಧಾಂತ’ ಇರಿಸಿ ಎಂದು
ಸವಾಲು ಹಾಕಿದರು. ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿರುವ ವರದಿಗಳು ನಾನು ’ಮನವಿ
ಚೌಕಾಶಿ’ ನಡೆಸಲು ಯತ್ನಿಸುತ್ತಿರುವುದಾಗಿ ವರದಿ ಮಾಡಿವೆ. ಜಾರಿ ನಿರ್ದೇಶನಾಲಯದ ದೋಷಾರೋಪ ಪಟ್ಟಿಯನ್ನು
(ಚಾರ್ಜ್‌ಶೀಟ್) ಮೊದಲು ಓದಿ ಎಂದು ಆ ಅಧಿಕಾರಿಗೆ ಗೌರವಪೂರ್ವಕವಾಗಿ ಹೇಳಲು ನಾನು ಇಚ್ಛಿಸುತ್ತೇನೆ.
ನನ್ನ ಆಸ್ತಿಗಳನ್ನು ನಾನು ಮುಂದಿಟ್ಟಿರುವ ನ್ಯಾಯಾಲಯದಲ್ಲಿ ಅವರು ತಮ್ಮ ’ಚೌಕಾಶಿ ಸಿದ್ಧಾಂತ’ವನ್ನು
ಇಡುವಂತೆ ನಾನು ಆಹ್ವಾನಿಸುತ್ತೇನೆ’ ಎಂದು ಮಲ್ಯ ಟ್ವೀಟ್ ಮಾಡಿದರು. ೯೦೦೦ ಕೋಟಿ ರೂಪಾಯಿ ಮೌಲ್ಯದ
ಸಾಲಕ್ಕೆ ಸಂಬಂಧಿಸಿದಂತೆ ಸುಸ್ತಿದಾರರಾದ ಬಳಿಕ ೨೦೧೬ರ ಮಾರ್ಚ್ ತಿಂಗಳಲ್ಲಿ ಇಂಗ್ಲೆಂಡಿಗೆ ಪರಾರಿಯಾಗಿರುವ
ಮದ್ಯ ಉದ್ಯಮಿ, ಪತ್ರಿಕೆಯೊಂದರಲ್ಲಿ ಬಂದ ವರದಿಗೆ ಪ್ರತಿಕ್ರಿಯಿಸಿದ್ದಾರೆ. ಮಲ್ಯ ಅವರು ’ಮನವಿ ಚೌಕಾಶಿ’ಯ
ಕೊಡುಗೆ ಮುಂದಿಟ್ಟಿದ್ದಾರೆ. ಆದರೆ ಅದು ದೇಶದಲ್ಲಿ ನಡೆಯುವುದಿಲ್ಲ ಎಂಬುದಾಗಿ ಜಾರಿ ನಿರ್ದೇಶನಾಲಯದ
ಅಧಿಕಾರಿಯೊಬರು ಹೇಳಿದ್ದನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿತ್ತು. ತಾನು ಬಾಂಕುಗಳ ಸಾಲ ಮರುಪಾವತಿ ಉದ್ದೇಶ ಇಟ್ಟುಕೊಂಡಿದ್ದು,
ತನ್ನ ಆಸ್ತಿಗಳನ್ನು ಮಾರಲು ಅವಕಾಶ ನೀಡಬೇಕು ಎಂಬುದಾಗಿ ಹೇಳುವ ಮೂಲಕ ಮಲ್ಯ ಅವರು ಮನವಿ ಚೌಕಾಶಿಯ
ಕೊಡುಗೆ ಮುಂದಿಟ್ಟಿದ್ದಾರೆ. ಅದು ದೇಶದಲ್ಲಿ ನಡೆಯುವುದಿಲ್ಲ, ವಿಷಯ ಈಗ ನ್ಯಾಯಾಲಯದ ಕೈಗಳಲ್ಲಿದೆ. ಏನು ಮಾಡಲೂ ಈಗ ಅದು
ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಶೇರುಗಳು ಮತ್ತು ಆಸ್ತಿಗಳ ಬಿಡುಗಡೆಗೆ ನಿರ್ದಿಷ್ಟ ನಿರ್ದೇಶನ ಇಲ್ಲದ
ಹೊರತು ನಾವು ನಿಯಮಿತ ಕ್ರಮ ಕೈಗೊಳ್ಳುತ್ತೇವೆ. ಆದರೆ ಇಂತಹ ನಿರ್ದೇಶನ ಬರುವ ಸಾಧ್ಯತೆಗಳಿಲ್ಲ’ ಎಂದು
ಅಧಿಕಾರಿ ಹೇಳಿದ್ದನ್ನು ಪತ್ರಿಕೆ ವರದಿ ಮಾಡಿತ್ತು.
ಕಿಂಗ್ ಫಿಶರ್ ಏರ್ ಲೈನ್ಸ್ ಸಾಲ ಸುಸ್ತಿ ಪ್ರಕರಣ ವಿವಾದಕ್ಕೆ ಸಂಬಂಧಿಸಿದಂತೆ ’ಎರಡು ವರ್ಷಗಳ
ಮೌನದ ಬಳಿಕ’ ಅವರು ಮಾತನಾಡಿದ್ದ ಮಲ್ಯ, ತಾವು ’ಉದ್ದೇಶಪೂರ್ವಕ ಸುಸ್ತಿದಾರ’ ಎಂಬುದನ್ನು ನಿರಾಕರಿಸಿದ್ದರು.
ಬ್ಯಾಂಕ್ ಸುಸ್ತಿಯ ’ಪೋಸ್ಟರ್ ಬಾಯ್’ ಆಗಿ ತಮ್ಮನ್ನು
ಮಾಡಲಾಗಿದೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದ ಮಲ್ಯ, ಸಾಲ ತೀರಿಸುವ ತಮ್ಮ ಯತ್ನದಲ್ಲಿ
’ರಾಜಕೀಯ ಪ್ರೇರಿತ ಮತ್ತು ಬಾಹ್ಯ ಶಕ್ತಿಗಳು ಹಸ್ತಕ್ಷೇಪ ಮಾಡಿದರೆ ತಾವು ಏನೂ ಮಾಡಲಾಗದು ಎಂದು ಹೇಳಿದ್ದರು. ಸರ್ಕಾರ ಮತ್ತು ಅದರ ಕ್ರಿಮಿನಲ್ ಸಂಸ್ಥೆಗಳ ನಿರಂತರ ಕ್ರಮಗಳಿಂದ
ಬಸವಳಿದ ಮಲ್ಯ, ೨೦೧೬ರ ಏಪ್ರಿಲ್ ೧೫ರಂದು ತಾವು ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ತಮ್ಮ ಕಡೆಯ ವಿವರಣೆ
ನೀಡಿ ಪತ್ರ ಬರೆದಿದ್ದುದಾಗಿಯೂ ಅದಕ್ಕೆ ಯಾವುದೇ ಸ್ಪಂದನೆಯೂ ಲಭಿಸಲಿಲ್ಲ ಎಂದೂ ಹೇಳಿದ್ದರು. ೨೦೧೬ರ
ಮಾರ್ಚ್ ೨೯ ಮತ್ತು ಏಪ್ರಿಲ್ ೬ರಂದು ಇತ್ಯರ್ಥಕ್ಕಾಗಿ ಎರಡು ಪ್ರಸ್ತಾಪಗಳನ್ನು ಮುಂದಿಟ್ಟಾಗ ಬ್ಯಾಂಕುಗಳು
ತಿರಸ್ಕರಿಸಿದವು ಎಂದೂ ಮಲ್ಯ ಹೇಳಿದ್ದರು. ಭಾರತೀಯ
ಅಧಿಕಾರಿಗಳು ಮಾಡಿರುವ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಇಂಗ್ಲೆಂಡ್ ನ್ಯಾಯಾಲಯದಲ್ಲಿ
ಗಡೀಪಾರು ವಿಚಾರಣೆ ಎದುರಿಸುತ್ತಿರುವ ಮಲ್ಯ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯಗಳು
(ಇಡಿ) ತಪ್ಪು ಆರೋಪಗಳನ್ನು ಹೊರಿಸಿ ತಮ್ಮ ವಿರುದ್ಧ ಸರ್ಕಾರ ಮತ್ತು ಸಾಲ ನೀಡಿದ ಬ್ಯಾಂಕುಗಳ ಪರವಾಗಿ
ಕೆಲಸ ಮಾಡುತ್ತಿವೆ ಎಂದು ದೂರಿದ್ದರು.
2018: ಗುವಾಹಟಿ: ಮಕ್ಕಳ ಕಳವು ಪುಕಾರುಗಳ ವಿರುದ್ಧ ಪ್ರಚಾರ ಅಭಿಯಾನಕ್ಕಾಗಿ ತ್ರಿಪುರಾ
ವಾರ್ತಾ ಮತ್ತು
ಸಂಸ್ಕೃತಿ ಇಲಾಖೆಯು ನಿಯೋಜಿಸಿದ್ದ ಸುಕಾಂತ ಚಕ್ರಬೊರ್ತಿ ಅವರನ್ನು ಜನರ ಗುಂಪು ಹೊಡೆದು
ಕೊಂದು ಹಾಕಿದ ಘಟನೆ ಜೂನ್ ೨೮ರ ತಡರಾತ್ರಿ ಘಟಿಸಿತು. ೩೩ರ ಹರೆಯದ ಚಕ್ರಬೊರ್ತಿ ಅವರು ಕಳೆದ ಎರಡು
ದಿನಗಳಲ್ಲಿ ಅಂಗಾಂಗಕ್ಕಾಗಿ ಮಕ್ಕಳ ಕಳ್ಳತನ ನಡೆಸಲಾಗುತ್ತಿದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ
ಹರಡಿದ ವದಂತಿಗೆ ತ್ರಿಪುರಾದಲ್ಲಿ ಬಲಿಯಾದ ಮೂವರು ಜನರ ಪೈಕಿ ಒಬ್ಬರಾಗಿದ್ದರು. ಗುಂಪುದಾಳಿಗಳಲ್ಲಿ
ಒಬ್ಬ ಕಾನ್ ಸ್ಟೇಬಲ್ ಸೇರಿದಂತೆ ಇತರ ಐವರು ಗಾಯಗೊಂಡರು. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿ ವರ್ಧಕ
ಹಿಡಿದುಕೊಂಡು ಪುಕಾರು ಹರಡುವುದರ ವಿರುದ್ಧ ಜಾಗೃತಿಗೊಳಿಸುವ ಕೆಲಸಕ್ಕಾಗಿ ನಿಯೋಜಿತರಾಗಿದ್ದ ಚಕ್ರಬೊರ್ತಿ
ಅವರು ಪುಕಾರು ಹರಡುವವರ ಹಲ್ಲೆಗೆ ಗುರಿಯಾಗಿರಬಹುದು ಎಂದು ಪೊಲೀಸರು ಮೊದಲಿಗೆ ಭಾವಿಸಿದ್ದರು. ಬಳಿಕ
ಬೇರೆ ಕಾರಣಗಳಿಗಾಗಿ ಚಕ್ರಬೊರ್ತಿ ಹತ್ಯೆಯಾಗಿರಬಹುದು, ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ’ಸಬ್ರೂಮ್ ನಿಂದ ವಾಪಸಾಗುತ್ತಿದ್ದಾಗ ಕಲಚ್ಚೇರಾದಲ್ಲಿ ಅವರ
ವಾಹನದ ಮೇಲೆ ಜನರ ಗುಂಪೊಂದು ದಾಳಿ ನಡೆಸಿತು. ಚಕ್ರಬೊರ್ತಿ ಸಾವನ್ನಪ್ಪಿದರು, ಆದರೆ ಥಳಿಸುವಿಕೆಗೆ
ತುತ್ತಾದ ಚಕ್ರಬೊರ್ತಿ ಅವರ ವಾಹನ ಚಾಲಕ ಗಾಯಗಳೊಂದಿಗೆ ಪಾರಾದ’ ಎಂದು ಅಸಿಸ್ಟೆಂಟ್ ಇನ್ ಸ್ಪೆಕ್ಟರ್
ಜನರಲ್ ಆಫ್ ಪೊಲೀಸ್ ಸ್ಮೃತಿ ರಂಜನ್ ದಾಸ್ ಅವರು ಅಗರ್ತಲದಲ್ಲಿ ವರದಿಗಾರರಿಗೆ ತಿಳಿಸಿದರು. ಇದಕ್ಕೆ ಮುನ್ನ ತ್ರಿಪುರಾ ಪಶ್ಚಿಮದ ಮುರಾಬಾರಿಯಲ್ಲಿ ಸ್ಥಳೀಯರು
ಬಿಹಾರ ಮತ್ತು ಉತ್ತರ ಪ್ರದೇಶದ ಮೂವರು ತಿರುಗು ವ್ಯಾಪಾರಿಗಳನ್ನು ಮಕ್ಕಳ ಅಪಹರಣಕಾರರು ಎಂಬುದಾಗಿ
ಶಂಕಿಸಿ ಥಳಿಸಿದ್ದರು. ಅವರು ತ್ರಿಪುರಾ ಸ್ಟೇಟ್ ರೈಫಲ್ಸ್ ಶಿಬರಕ್ಕೆ ಓಡಿದ್ದರು. ಆದರೆ ಇನ್ನು ದೊಡ್ಡ
ಗುಂಪು ಶಿಬಿರಕ್ಕೆ ಮುತ್ತಿಗೆ ಹಾಕಿ ಅವರ ಪೈಕಿ ಒಬ್ಬರನ್ನು ಥಳಿಸಿ ಕೊಂದು ಹಾಕಿತು. ಮೃತನನ್ನು ಉತ್ತರ
ಪ್ರದೇಶದ ಜಹೀರ್ ಖಾನ್ ಎಂಬುದಾಗಿ ಗುರುತಿಸಲಾಗಿದೆ. ಪೊಲೀಸರು ಗುಂಪನ್ನು ಚದರಿಸಲು ಯತ್ನಿಸುತ್ತಿದ್ದುದರ
ಮಧ್ಯೆಯೇ ಈ ಘಟನೆ ಘಟಿಸಿತ್ತು. ಮಗುವನ್ನು ಅಪಹರಿಸುವವಳು
ಎಂದು ಶಂಕಿಸಲಾದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬಳನ್ನು ಕೂಡಾ ಸೆಪಾಹಿಜಾಲ ಜಿಲ್ಲೆಯಲ್ಲಿನ ಬಿಶಾಲಗಢದಲ್ಲಿ
ಜನರ ಗುಂಪು ಹಲ್ಲೆ ನಡೆಸಿ ಚಚ್ಚಿ ಕೊಂದು ಹಾಕಿತ್ತು. ಗುಂಪು ದಾಳಿ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ
ತ್ರಿಪುರಾದ ಪೊಲೀಸ್ ಮಹಾ ನಿರ್ದೇಶಕ ಎ.ಕೆ. ಶುಕ್ಲ ಅವರು ಶುಕ್ರವಾರ ಮೊಬೈಲ್ ಸೇವಾದಾರರಿಗೆ ರಾಜ್ಯಾದ್ಯಂತ
ಶನಿವಾರ ಮಧ್ಯಾಹ್ನ ೨ ಗಂಟೆಯವರೆಗೆ ಎಸ್ ಎಂಎಸ್ ಮತ್ತು ಇಂಟರ್ ನೆಟ್ ಮಾಹಿತಿ ಸೇವೆಗಳನ್ನು ಅಮಾನತುಗೊಳಿಸುವಂತೆ
ಫೋನ್ ಸೇವಾದಾರರಿಗೆ ಸೂಚಿಸಿದ್ದರು. ಮುಖ್ಯಮಂತ್ರಿ ಬಿಪ್ಲದ್ ದೇಬ್ ಅವರೂ ಮಕ್ಕಳ ಅಪಹರಣದ ಪುಕಾರುಗಳನ್ನು
ನಂಬಬೇಡಿ ಎಂದು ಜನತೆಗೆ ಮನವಿ ಮಾಡಿದ್ದಾರೆ. ಬಿಜೆಪಿ ನೇತೃತ್ವದ ತ್ರಿಪುರಾ ಸರ್ಕಾರದ ವರ್ಚಸ್ಸಿಗೆ
ಮಸಿ ಬಳಿಕಯ ಸಿಪಿಐ(ಎಂ) ಹೂಡಿರುವ ಸಂಚು ಇದು ಎಂದೂ ಅವರು ಹೇಳಿದರು. ಮಕ್ಕಳ ಅಪಹರಣ ವದಂತಿ ಹಿನ್ನೆಲೆಯಲ್ಲಿ ಮೊದಲ ಗುಂಪುದಾಳಿ
ಅಸ್ಸಾಮಿನ ಕರ್ಬಿ ಅಂಗ್ಲೊಂಗ್ ಜಿಲ್ಲೆಯಲ್ಲಿ ಮೇ ೩೧ರಂದು ನಡೆದಿತ್ತು. ಗುವಾಹಟಿಯಲ್ಲಿ ಇಬ್ಬರು ಯುವಕರು
ದಾಳಿಗೆ ಬಲಿಯಾಗಿದ್ದರು.
2018: ನವದೆಹಲಿ: ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಸುಗ್ರೀವಾಜ್ಞೆಯ ಅಡಿಯಲ್ಲಿ ಆಗಸ್ಟ್
೨೭ರಂದು ತನ್ನ
ಮುಂದೆ ಹಾಜರಾಗುವಂತೆ ವಿಶೇಷ ಹಣ ವರ್ಗಾವಣೆ ನ್ಯಾಯಾಲಯವು ಮದ್ಯ ಉದ್ಯಮಿ ವಿಜಯ್ ಮಲ್ಯ
ಅವರಿಗೆ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮೇ ೨೭ರಂದು ಹೊರಡಿಸಲಾಗಿರುವ
ಈ ಸುಗ್ರೀವಾಜ್ಞೆಯು ಬ್ಯಾಂಕ್ ಸುಸ್ತಿದಾರರು ಅಥವಾ ದೇಶದಿಂದ ಪರಾರಿಯಾಗುವ ಹಾಗೂ ದೇಶದ ನ್ಯಾಯಾಲಯಗಳ
ವ್ಯಾಪ್ತಿಯಿಂದ ಹೊರಗೆ ವಿದೇಶಗಳಲ್ಲಿ ಇದ್ದುಕೊಂಡು ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಆರ್ಥಿಕ
ಅಪರಾಧಿಗಳ ಹಾಗೂ ಬ್ಯಾಂಕ್ ವಂಚಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ಜಾರಿ ಸಂಸ್ಥೆಗಳಿಗೆ
ಅಧಿಕಾರ ನೀಡುತ್ತದೆ. ಮಲ್ಯ ಅವರು ನೀಡಲಾದ ಗಡುವಿನ
ಒಳಗಾಗಿ ನಿಯೋಜಿತ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದಲ್ಲಿ ಅವರನ್ನು ’ದೇಶ ಭ್ರಷ್ಟ’ ಎಂಬುದಾಗಿ ಘೋಷಿಸಲಾಗುವುದು
ಮತ್ತು ಜಾರಿ ನಿರ್ದೇಶನಾಲಯವು ಅಂದಾಜು ೧೨,೫೦೦ ಕೋಟಿ ರೂಪಾಯಿ ಮೌಲ್ಯದ ಅವರ ಆಸ್ತಿಗಳನ್ನು ಮುಟ್ಟುಗೋಲು
ಹಾಕಿಕೊಳ್ಳಲಾಗುವುದು. ೬೨ರ ಹರೆಯದ ಮದ್ಯ ಉದ್ಯಮಿ
೨೦೧೬ರ ಮಾರ್ಚ್ ೨ ರಂದು ದೇಶದಿಂದ ಪರಾರಿಯಾಗಿದ್ದು, ಲಂಡನ್ನಿನಲ್ಲಿ ವಾಸವಾಗಿದ್ದಾರೆ ಮತ್ತು ವಿವಿಧ
ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮನ್ಸ್ ಹೊರಡಿಸಲಾಗಿದ್ದರೂ ವಿಚಾರಣೆಗೆ ನ್ಯಾಯಾಲಯಗಳಿಗೆ ಹಾಜರಾಗಿಲ್ಲ. ಈ ವಾರಾರಂಭದಲ್ಲಿ ತಾವು ಪ್ರಾಮಾಣಿಕವಾಗಿ ಬ್ಯಾಂಕ್ ಸಾಲಗಳನ್ನು
ಮರುಪಾವತಿ ಮಾಡಲು ೨೦೧೬ರಿಂದ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಪ್ರತಿಪಾದಿಸಿದ್ದ ಮಲ್ಯ, ಸುಗ್ರೀವಾಜ್ಞೆಯ
ಹಿನ್ನೆಲೆಯಲ್ಲಿ ಸಾಲ ಬಾಕಿ ಇತ್ಯರ್ಥದ ಕೊಡುಗೆ ಮುಂದಿಟ್ಟಿರುವೆನೆಂಬ ಆಪಾದನೆಗಳನ್ನು ತಿರಸ್ಕರಿಸಿದ್ದರು. ಇತ್ತೀಚಿನ ದೇಶ ಭ್ರಷ್ಟ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದ
ಬಳಿಕ ಕರ್ನಾಟಕ ಹೈಕೋರ್ಟ್ ಮುಂದೆ ಬ್ಯಾಂಕ್ ಬಾಕಿ ಇತ್ಯರ್ಥದ ಕೊಡುಗೆ ಇಟ್ಟಿರುವೆ ಎಂಬದು ಸರಿಯಲ್ಲ.
ಸಾಲ ಬಾಕಿ ಇತ್ಯರ್ಥಕ್ಕೆ ನಾನು ಪ್ರಾಮಾಣಿಕ ಉದ್ದೇಶ ಹೊಂದಿದ್ದು, ಇದಕ್ಕೆ ಬೇಕಾದಷ್ಟು ಸಾಕ್ಷ್ಯಾಧಾರಗಳಿವೆ
ಎಂದು ಮಲ್ಯ ಟ್ವೀಟ್ ಮಾಡಿದ್ದರು. ದೇಶಭ್ರಷ್ಟ ಆರ್ಥಿಕ
ಅಪರಾಧಿ ಎಂಬುದಾಗಿ ಹಣೆಪಟ್ಟಿ ಹಚ್ಚುವ ಬಗ್ಗೆ ನನ್ನ ಪ್ರತಿಕ್ರಿಯೆ ಕೇಳಲಾಗಿತ್ತು. ನಾನು ಕರ್ನಾಟಕ
ಹೈಕೋರ್ಟಿನ ಮುಂದೆ ಬ್ಯಾಂಕ್ ಪ್ರತಿಪಾದನೆಗಿಂತ ಹೆಚ್ಚಿನ ಪ್ರಮಾಣದಲ್ಲಿರುವ ನನ್ನ ಆಸ್ತಿಗಳ ಪಟ್ಟಿಯನ್ನು
ಇರಿಸಿರುವಾಗ ನಾನು ಆರ್ಥಿಕ ಅಪರಾಧಿಯಾಗಲು ಹೇಗೆ ಸಾಧ್ಯ? ದೇಶ ಭ್ರಷ್ಟ ಎಂಬುದು ದೂರವೇ ಉಳಿಯುತ್ತದೆ
ಎಂದು ಮಲ್ಯ ಇನ್ನೊಂದು ಟ್ವೀಟಿನಲ್ಲಿ ತಿಳಿಸಿದ್ದರು.
ಈ ಹೇಳಿಕೆ ನೀಡಲು ಈ ಸಮಯವನ್ನು ಆಯ್ಕೆ ಮಾಡಿಕೊಂಡದ್ದು ಏಕೆ ಎಂದು ಕೆಲವರು ಕೇಳುತ್ತಿರುವುದನ್ನು
ಪ್ರಸ್ತಾಪಿಸಿದ ಅವರು ’ಏಕೆಂದರೆ ನಾನು ಮತ್ತು ನನ್ನ ಯುನೈಟೆಡ್ ಬ್ರೀವರೀಸ್ ಹೋಲ್ಡಿಂಗ್ ಲಿಮಿಟೆಡ್
(ಯುಬಿಎಚ್ ಎಲ್) ಹೈಕೋರ್ಟಿನ ಮುಂದೆ ಜೂನ್ ೨೨ರಂದು ೧೩,೯೦೦ ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳ ಪಟ್ಟಿಯನ್ನು
ಹೈಕೋರ್ಟಿನಲ್ಲಿ ಇರಿಸಲು ಅರ್ಜಿ ಸಲ್ಲಿಸಿದ್ದೇವೆ ಅದಕ್ಕಾಗಿ’ ಎಂದು ಹೇಳಿದರು. ’ನನ್ನ ಇತ್ಯರ್ಥ ಕೊಡುಗೆಯ ಹಿನ್ನೆಲೆಯಲ್ಲಿ ನಾನು ಮಾಧ್ಯಮ
ಹೇಳಿಕೆ ನೀಡಿದ್ದೇನೆ. ವಿವಿಧ ಸಾಂದರ್ಭಿಕ ಬದಲಾವಣೆಗಳ ಕಾರಣ ಮತ್ತು ನನ್ನ ಆಸ್ತಿಗಳ ಮೌಲ್ಯದ ಬದಲಾವಣೆಗಳ
ಕಾರಣ ನನಗೆ ಇಂತಹ ಕೊಡುಗೆ ನೀಡಲು ಸಾಧ್ಯವಾಗಿರಲಿಲ್ಲ’ ಎಂದು ಮಲ್ಯ ಟ್ವೀಟ್ ಮಾಡಿದ್ದರು.
2018: ಬೆಂಗಳೂರು: ಕರ್ನಾಟಕ ಜಲ ನಿರ್ವಹಣಾ ಪ್ರಾಧಿಕಾರವನ್ನು ರಚಿಸಿ ಕೇಂದ್ರ ಸರ್ಕಾರವು ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಕರ್ನಾಟಕದ ಸರ್ವ ಪಕ್ಷ ಸಭೆ ಒಮ್ಮತದಿಂದ ನಿರ್ಧರಿಸಿತು. ಸಂಸತ್ತಿನಲ್ಲಿ ಚರ್ಚಿಸದೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿ ರಚಿಸಿದ ಕೇಂದ್ರ ಸರ್ಕಾರದ ’ಸ್ಕೀಂ’ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಲು ರಾಜ್ಯ ಸರ್ಕಾರ ತೀರ್ಮಾನಿಸಿತು. ಸರ್ವ ಪಕ್ಷ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಮಿಶ್ರ ಸರ್ಕಾರದ ಪಾಲುದಾರ ಕಾಂಗ್ರೆಸ್ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ’ಸುಪ್ರೀಂಕೋರ್ಟಿನ ತೀರ್ಪು ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿಲ್ಲ. ನಾವು ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದೇವೆ. ಈ ಹಿಂದೆ ನಾವು ಯಾವುದೇ ಸಮಿತಿಗೆ ಯಾರೇ ಪ್ರತಿನಿಧಿಯನ್ನು ಕಳುಹಿಸಬಾರದು ಎಂಬುದಾಗಿ ತೀರ್ಮಾನಿಸಿದ್ದೆವು. ಆದರೆ ಈಗ ನಾವು ಯಾವುದೇ ’ರಿಸ್ಕ್’ ತೆಗೆದುಕೊಳ್ಳುವಂತಿಲ್ಲ. ನಮ್ಮನ್ನು ಹೊರತು ಪಡಿಸಿ ಅವರು ಯಾವುದೇ ನಿರ್ಣಯ ಕೈಗೊಳ್ಳಲು ನಾವು ಬಯಸುವುದಿಲ್ಲ’ ಎಂದು ಹೇಳಿದರು. ’ನಾವು ನಮ್ಮ ಸಂಸತ್ ಸದಸ್ಯರಿಗೂ ಮನವಿ ಮಾಡಿದ್ದು ಸಂಸತ್ತಿನ ಒಳಗೆ ಮತ್ತು ಹೊರಗೆ ಪಕ್ಷ ಭೇದ ಮರೆತು ಒಟ್ಟಾಗಿ ನಿಲ್ಲಲು ಮತ್ತು ಸಂಸತ್ತಿನಲ್ಲಿ ಏಕಧ್ವನಿಯಿಂದ ವಿಷಯ ಪ್ರಸ್ತಾಪಿಸಲು ಅವರು ಒಪ್ಪಿದ್ದಾರೆ’ ಎಂದು ಅವರು ನುಡಿದರು. ರಾಜ್ಯದ ಅಭಿಪ್ರಾಯ ಪಡೆಯದೆ ಮತ್ತು ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ತರಾತುರಿಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಈ ತೀರ್ಮಾನದ ವಿರುದ್ಧ ಎಲ್ಲರೂ ಧ್ವನಿ ಎತ್ತಿದ್ದಾರೆ, ಸಚಿವರು, ಸಂಸದರು ಈ ವಿಷಯವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆ ಜುಲೈ ೨ರಂದು ನಡೆಯಲಿದೆ. ಈ ಸಭೆಯಲ್ಲಿ ರಾಜ್ಯದ ಪ್ರತಿನಿಧಿಗಳಾಗಿ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಕಾವೇರಿ ನೀರಾವರಿ ನಿಗಮದ ಆಡಳಿತ ವ್ಯವಸ್ಥಾಪಕ ಪ್ರಸನ್ನ ಅವರು ಪಾಲ್ಗೊಂಡು ರಾಜ್ಯದ ಅಭಿಪ್ರಾಯಗಳನ್ನು ವಿವರಿಸಲು ಅನುಮತಿ ನೀಡಲಾಗಿದೆ ಎಂದು ಅವರು ನುಡಿದರು. ಪ್ರಾಧಿಕಾರ ರಚಿಸುವ ಮುನ್ನ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂದು ಅಂತರ್ ರಾಜ್ಯ ಜಲವಿವಾದ ಕಾಯ್ದೆ ಹೇಳುತ್ತದೆ. ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ ತಜ್ಞರು ಎಲ್ಲ ಆಯಾಮಗಳಿಂದ ಪರಿಶೀಲಿಸಿದ ಬಳಿಕ ಯಾವ ರೀತಿ ದಾವೆ ದಾಖಲಿಸಬೇಕು ಎಂದು ತೀರ್ಮಾನಿಸಲಿದ್ದಾರೆ ಎಂದು ಅವರು ಹೇಳಿದರು. ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ಜಲ ನಿರ್ವಹಣಾ ಮಂಡಳಿಯ ರಚನೆಯು ಕರ್ನಾಟಕದ ಹಿತಾಸಕ್ತಿಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂಬುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಇವುಗಳನ್ನು ರಚಿಸುವ ಕೇಂದ್ರದ ಏಕಪಕ್ಷೀಯ ನಿರ್ಧಾರವನ್ನು ಆಕ್ಷೇಪಿಸಿದ್ದರು. ’ಕರ್ನಾಟಕವು ಯಾವಾಗಲೂ ಸಾಂವಿಧಾನಿಕ ನಿರ್ಣಯಗಳನ್ನು ಪಾಲಿಸುತ್ತದೆ. ನಾವು ಯಾವಾಗಲೂ ಸುಪ್ರೀಂಕೋರ್ಟ್ ಮತ್ತು ಅದರ ನಿರ್ದೇಶನಗಳನ್ನು ಗೌರವಿಸಿದ್ದೇವೆ. ಅವೈಜ್ಞಾನಿಕವಾಗಿ ರಚಿಸಲಾಗಿರುವ ಸ್ಕೀಮ್ ಗಳಿಗೆ ಸಂಬಂಧಿಸಿದಂತೆ ೨-೩ ವಿಚಾರಗಳಿವೆ ಅವುಗಳೀಗಾಗಿ ನಾವು ಹೋರಾಡುತ್ತೇವೆ’ ಎಂದು ಮುಖ್ಯಮಂತ್ರಿ ಹೇಳಿದ್ದರು. ಕುಮಾರ ಸ್ವಾಮಿ ಅವರು ಇಬ್ಬರು ಅಧಿಕಾರಿಗಳನ್ನು ಕಾವೇರಿ ಜಲ ನಿರ್ವಹಣಾ ಮಂಡಳಿಗೆ ನೇಮಕ ಮಾಡಿದ ಕೆಲವೇ ದಿನಗಳ ಬಳಿಕ ಈದಿನ ನಡೆದ ಸರ್ವ ಪಕ್ಷ ಸಭೆಯ ನಿರ್ಧಾರ ಹೊರಬಂದಿತು. ಮುಖ್ಯಮಂತ್ರಿಯವರು ಮೊದಲಿಗೆ ಮಂಡಳಿಗೆ ಪ್ರತಿನಿಧಿಗಳನ್ನು ನೇಮಿಸಲು ನಿರಾಕರಿಸಿದ್ದರು. ಕೇಂದ್ರವು ಕರ್ನಾಟಕದ ಪ್ರತಿನಿಧಿಗಳನ್ನು ಹೊರತು ಪಡಿಸಿ ಮಂಡಳಿಯನ್ನು ರಚಿಸಿತ್ತು. ತಮಿಳುನಾಡು, ಕೇರಳ ಮತ್ತು ಪುದುಚೆರಿ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ್ದವು. ರಾಜ್ಯದ ಆಕ್ಷೇಪದ ಹೊರತಾಗಿಯೂ, ಕೇಂದ್ರವು ಈಗಾಗಲೇ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರವನ್ನು ರಚಿಸುವ ಬಗ್ಗೆ ಅಧಿಸೂಚನೆ ಹೊರಡಿಸಿ ಅವುಗಳ ರಚನೆಯನ್ನೂ ಮಾಡಿತ್ತು. ಜೂನ್ ೨೨ ರಂದು ೯ ಸದಸ್ಯರ ಜಲ ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿಯನ್ನು ಕೇಂದ್ರವು ರಚಿಸಿತ್ತು. ಪ್ರಾಧಿಕಾರ ರಚನೆಯನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದ ಕರ್ನಾಟಕ ಬದಲಿಗೆ ಕಾವೇರಿ ನಿರ್ಣಯ ಅನುಷ್ಠಾನ ಸಮಿತಿ ರಚಿಸುವಂತೆ ಸಲಹೆ ಮಾಡಿತ್ತು. ಸರ್ವ ಪಕ್ಷ ಸಭೆಯು ಸಂಘಟಿತ ನಿಲುವು ತಾಳಲು ಕರೆ ಕೊಟ್ಟಿತು. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ ಕುಮಾರ್, ಡಿ.ವಿ. ಸದಾನಂದ ಗೌಡ, ಸಂಸದ ವೀರಪ್ಪ ಮೊಯಿಲಿ, ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಪರ ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಲಿರುವ ವಕೀಲರ ತಂಡದ ಸದಸ್ಯರಾದ ಮೋಹನ ಕಾತರಕಿ, ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಏನಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಣಾಯಕ ಸಭೆಗೆ ಗೈರು ಹಾಜರಾಗಿದ್ದರು. ತಮ್ಮ ಬದಲಿಗೆ ಮೊತ್ತ ಮೊದಲ ಬಾರಿಗೆ ಶಾಸಕರಾದ ತಮ್ಮ ಪುತ್ರ ಯತೀಂದ್ರ ಅವರನ್ನು ಕಳುಹಿಸಿದ್ದರು. ಪೂರ್ವ ನಿರ್ಧರಿತ ಕಾರ್‍ಯಕ್ರಮಗಳಿದ್ದುದರಿಂದ ಸಭೆಯಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ ಎಂದು ಅವರು ಹೇಳಿದ್ದರು.
2018: ಬೆಂಗಳೂರು:ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಟಿಎಂ
ವಿಜಯ್ ಭಾಸ್ಕರ್ ಅವರನ್ನು ನೇಮಕ ಮಾಡಿದ್ದು, ಮುಖ್ಯಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಈದಿನ ಸೇವೆಯಿಂದ ನಿವೃತ್ತರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಟಿಎಂ. ವಿಜಯ್ ಭಾಸ್ಕರ್ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತು. ನೂತನ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಕೆ.ರತ್ನಪ್ರಭಾ ಅವರು ಅಧಿಕಾರವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ನನ್ನ ಕೆಲಸಗಳ ಬಗ್ಗೆ ತೃಪ್ತಿ ಇದೆ ಎಂಬುದಾಗಿ ಹೇಳಿದರು. ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ 1983ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ವಿಜಯ ಭಾಸ್ಕರ್ರನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ರತ್ನಪ್ರಭಾ ಅವರ ಸೇವಾವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಅನುಮತಿ ಕೇಳಿತ್ತು. ಆದರೆ, ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಮುಖ್ಯ ಕಾರ್ಯದರ್ಶಿಯ ಬದಲಾವಣೆ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿದವು.
2007: ಕರ್ನಾಟಕ ರಾಜ್ಯದಲ್ಲಿ ಈದಿನ ಮಧ್ಯರಾತ್ರಿಯಿಂದ ಸಾರಾಯಿ ನಿಷೇಧ ಜಾರಿಗೆ ಬಂದಿತು. ಸ್ತ್ರೀಶಕ್ತಿ ಸಂಘಟನೆಗಳ ಒತ್ತಡಕ್ಕೆ ಮಣಿದು ಜುಲೈ 1ರಿಂದ ಸಾರಾಯಿ ನಿಷೇಧಿಸುವುದಾಗಿ ಸರ್ಕಾರ ಮುಂಗಡಪತ್ರದಲ್ಲಿ ಘೋಷಿಸಿತ್ತು. ಆದೇಶ ಧಿಕ್ಕರಿಸಿ ಸಾರಾಯಿ ತಯಾರಿಸಿದರೆ ಅಥವಾ ಮಾರಾಟ ಮಾಡಿದರೆ ಗೂಂಡಾ ಕಾಯ್ದೆ ಅನ್ವಯ 5 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿತು.
2007: ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೇರು ಹಂಪಿ ಅವರು ಹಾಲೆಂಡಿನ ಹಿಲ್ವೆರ್ಸಮ್ ನಲ್ಲಿ ನಡೆದ ಪುರುಷರ ಚೆಸ್ ಟೂರ್ನಿಯಲ್ಲಿ ಪಾಲ್ಗೊಂಡದ್ದಲ್ಲದೆ ಪ್ರಶಸ್ತಿಯನ್ನು ಕೂಡಾ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಹಂಪಿ ಅವರು ತಮ್ಮ ಎದುರಾಳಿ ಅತಿಥೇಯ ರಾಷ್ಟ್ರದ ಗ್ರ್ಯಾಂಡ್ ಮಾಸ್ಟರ್ ಎರಿಕ್ ವಾನ್ ಡೆನ್ ಡೊಯಲ್ ಅವರನ್ನು ಪರಾಭವಗೊಳಿಸಿ ಎಚ್ ಎಸ್ ಜಿ ಅಂತಾರಾಷ್ಟ್ರೀಯ ಓಪನ್ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಶಿಪ್ ಬಗಲಿಗೆ ಹಾಕಿಕೊಂಡರು.
2007: ದೆಹಲಿಯ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಸಾಹಿಬ್ ಸಿಂಗ್ ವರ್ಮಾ (64) ಅವರು ರಾಜಸ್ಥಾನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದರು. ಶಹಜಾನಪುರ ಬಳಿ ಅವರ ಕಾರಿಗೆ ಮಿನಿಟ್ರಕ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿತು. ದಿಲ್ಲಿಯ ಮುಂಡ್ಯಾ ಗ್ರಾಮದಲ್ಲಿ 1943ರ ಮಾರ್ಚ್ 15ರಂದು ರೈತ ಕುಟುಂಬದಲ್ಲಿ ಜನಿಸಿದ ವರ್ಮಾ 1993ರಲ್ಲಿ ದೆಹಲಿಯ ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ, 1996ರಲ್ಲಿ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೂ, ಪ್ರಚಾರಕರೂ ಆಗಿದ್ದ ಅವರು 2002ರಲ್ಲಿ ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಬಿಜೆಪಿ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
2007: ಹಿಂದಿನ ದಿನದ ರಾತ್ರಿಯಿಂದ ಸುರಿದ ಮಹಾಮಳೆಗೆ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಒಟ್ಟು 16 ಜನ ಮೃತರಾಗಿ, ನೂರಾರು ಗ್ರಾಮಗಳು ಜಲಾವೃತಗೊಂಡವು.
2007: 119 ವರ್ಷ ವಯಸ್ಸಿನ ಶತಾಯುಷಿ ಸ್ವಾತಂತ್ರ್ಯ ಯೋಧ ಪಂಡಿತ ಸುಧಾಕರ ಚತುರ್ವೇದಿ ಅವರನ್ನು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಪಿಂಚಣಿದಾರರ ಸಂಘದ ಸ್ವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
2007: ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಜಿ.ವಿ.ಕೆ. ರಾವ್ (87) ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಮೃತರಾದರು. 1974- 1977ರ ಅವಧಿಯಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜಿ.ವಿ.ಕೆ. ರಾವ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು.
2007: ಭಾರತೀಯ ಮೂಲದ ಆರ್ಥಿಕ ತಜ್ಞೆ ಶೃತಿ ವಡೇರಾ ಅವರು ಬ್ರಿಟನ್ನಿನ ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆಯಲ್ಲಿ ಸಂಸದೀಯ ಅಧೀನ ಕಾರ್ಯದರ್ಶಿಯಾಗಿ ನೇಮಕ ಗೊಂಡರು. ಪ್ರಧಾನಿ ಗಾರ್ಡನ್ ಬ್ರೌನ್ ಅವರಿಗೆ ಆಪ್ತರಾದ ವಡೇರಾ ಅವರಿಗೆ ನೀಡಲಾಗಿರುವ ಈ ಹುದ್ದೆ ಸಂಪುಟದಲ್ಲಿ ಸಹಾಯಕ ಸಚಿವರ ಹುದ್ದೆಗೆ ಸರಿಸಮವಾದದ್ದು.
2002: ಜಪಾನಿನ ಯೊಕೊಹಾಮಾದಲ್ಲಿ ಜರ್ಮನಿಯ ವಿರುದ್ಧ ಬ್ರೆಝಿಲನ್ನು 2-0 ಅಂತರದ ವಿಜಯದತ್ತ ಮುನ್ನಡೆಸುವ ಮೂಲಕ ಮೂರು ಫೈನಲ್ ಫುಟ್ ಬಾಲ್ ವಿಶ್ವಕಪ್ ಪಂದ್ಯಗಳಲ್ಲಿ ಆಡಿದ ಮೊತ್ತ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಬ್ರೆಝಿಲ್ ನ ಕ್ಯಾಪ್ಟನ್ ಮಾರ್ಕೊಸ್ ಕಫು ಪಾತ್ರರಾದರು.
1997: ಹಾಂಕಾಂಗಿನ ಗವರ್ನಮೆಂಟ್ ಹೌಸ್ ಮೇಲೆ ಇಂಗ್ಲೆಂಡಿನ ಯೂನಿಯನ್ ಜ್ಯಾಕ್ ಕಟ್ಟ ಕಡೆಯ ಬಾರಿಗೆ ಹಾರಾಡಿತು. 156 ವರ್ಷಗಳ ನಂತರ ತನ್ನ ವಸಾಹತನ್ನು ಚೀನಾಕ್ಕೆ ಒಪ್ಪಿಸಲು ಬ್ರಿಟನ್ ಈ ದಿನ ಸಿದ್ಧತೆ ನಡೆಸಿತು.
1948: ಬೆಲ್ ಟೆಲಿಫೋನ್ ಲ್ಯಾಬೋರೇಟರೀಸ್ ಸಂಶೋಧನಾ ನಿರ್ದೇಶಕ ರಾಲ್ಫ್ ಬೌನ್ ಅವರು `ಟ್ರಾನ್ಸಿಸ್ಟರ್' ನಿರ್ಮಿಸಿದ್ದನ್ನು ನ್ಯೂಜೆರ್ಸಿಯ ಮುರ್ರೇ ಹಿಲ್ಸ್ ನಲ್ಲಿ ಪತ್ರಕರ್ತರ ಮುಂದೆ ಪ್ರಕಟಿಸಿದರು. ಮ್ಯಾನ್ ಹಟ್ಟನ್ ನ ವೆಸ್ಟ್ ಸ್ಟ್ರೀಟ್ ನಲ್ಲಿದ್ದ ಬೆಲ್ ಕೇಂದ್ರ ಕಚೇರಿಯಲ್ಲಿ ಈ ಪತ್ರಿಕಾಗೋಷ್ಠಿ ನಡೆಯಿತು.
1917: ಭಾರತೀಯ ರಾಷ್ಟ್ರೀಯವಾದಿ ಬ್ರಿಟಿಷ್ ಆರ್ಥಿಕ ನೀತಿಯ ಕಟು ಟೀಕಾಕಾರ ದಾದಾಭಾಯಿ ನವರೋಜಿ ಅವರು ಮುಂಬೈಯಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು. `ಭಾರತದ ಹಿರಿಯಜ್ಜ' (ಗ್ರ್ಯಾಂಡ್ ಓಲ್ಡ್ಮ್ಯಾನ್ ಆಫ್ ಇಂಡಿಯಾ) ಎಂದೇ ಅವರು ಖ್ಯಾತರಾಗಿದ್ದರು.
1859: ಫ್ರೆಂಚ್ ಸಾಹಸಿ ಬ್ಲಾಂಡಿನ್ ಅವರು ನಯಾಗರಾ ಜಲಪಾತಕ್ಕೆ ಅಡ್ಡಲಾಗಿ 160 ಅಡಿ ಎತ್ತರದಲ್ಲಿ 1100 ಅಡಿ ಉದ್ದದ ಹಗ್ಗ ಕಟ್ಟಿ ಅದರ ಮೇಲೆ ನಡೆಯುತ್ತಾ ಜಲಪಾತವನ್ನು ದಾಟಿದರು. 5000 ಮಂದಿ ಈ ಸಾಹಸವನ್ನು ವೀಕ್ಷಿಸಿದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)