Monday, June 25, 2018

ಇಂದಿನ ಇತಿಹಾಸ History Today ಜುಲೈ 25

ಇಂದಿನ ಇತಿಹಾಸ History Today ಜುಲೈ 25

2018: ನವದೆಹಲಿ:  ಬ್ರಿಟನ್ ಮೂಲದ ಯುಗೌ ಸಮೀಕ್ಷೆಯು ತಯಾರಿಸಿದ ೨೦೧೮ರ ಸಾಲಿನ ವಿಶ್ವದ ಅತ್ಯಂತ ಜನಮೆಚ್ಚುಗೆಯ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ಚಿತ್ರ ನಟ ಅಮಿತಾಭ್ ಬಚ್ಚನ್, ಅವರ ಸೊಸೆ, ಕನ್ನಡತಿ ಐಶರ್ಯ ರೈ ಬಚ್ಚನ್, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಸ್ಥಾನ ಪಡೆದರು. ಯುಗೌ ಸಮೀಕ್ಷೆಯು ೩೫ ರಾಷ್ಟ್ರಗಳಿಂದ ಅತ್ಯಂತ ಹೆಚ್ಚು ಜನಮೆಚ್ಚುಗೆಗೆ ಪಾತ್ರರಾದ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗ ಪಡಿಸಿದ್ದು, ಭಾರತದ ಸಿನಿಮಾ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರಗಳಿಂದ ಒಬ್ಬೊಬ್ಬ ಪುರುಷರು ಮತ್ತು ಸಿನಿಮಾ ಕ್ಷೇತ್ರದ ಮೂವರು ನಟಿಯರನ್ನು ಅತ್ಯಂತ ಮೆಚ್ಚುಗೆಯ ವ್ಯಕ್ತಿಗಳು ಎಂಬುದಾಗಿ ಗುರುತಿಸಿತು. ೨೦೧೮ರ ಅತ್ಯಂತ ಮೆಚ್ಚುಗೆಯ ಪುರುಷರ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಅಗ್ರಸ್ಥಾನ ಪಡೆದಿದ್ದರೆ, ಅತ್ಯಂತ ಮೆಚ್ಚುಗೆಯ ಮಹಿಳಾ ಪಟ್ಟಿಯಲ್ಲಿ ಏಂಜೆಲಿನಾ ಜೋಲೀ ಮೊದಲ ಸ್ಥಾನ ಪಡೆದಿದ್ದಾರೆ. ಪಟ್ಟಿಯು ಅಮಿತಾಭ್ ಬಚ್ಚನ್, ಅವರ ಸೊಸೆ ಚಿತ್ರನಟಿ ಐಶ್ವರ್ಯ ರೈ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಹೆಸರನ್ನು ಆಯಾಯ ವರ್ಗಗಳಲ್ಲಿ ಹೆಸರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಅಮಿತಾಭ್  ಬಚ್ಚನ್ ಹೆಸರಿಗಿಂತ ಮೊದಲಿನ ಸ್ಥಾನದಲ್ಲಿ ಇದೆ.  ೩೫ ರಾಷ್ಟ್ರಗಳ ೩೭,೦೦೦ ಜನರನ್ನು ಅಂತರ್ಜಾಲದ (ಆನ್ ಲೈನ್) ಮೂಲಕ ಸಂದರ್ಶನ ನಡೆಸಿದ ಬಳಿಕ ೨೦ ಪುರುಷರು ಮತ್ತು ೨೦ ಮಹಿಳೆಯರ ಪಟ್ಟಿಯನ್ನು ಪ್ರಕಟಿಸಲಾಯಿತು.  ಬಿಲ್ ಗೇಟ್ಸ್ ಮತ್ತು ಏಂಜೆಲಿನಾ ಜೋಲೀ ಅವರು ವಿಶ್ವದ ಅತ್ಯಂತ ಮೆಚ್ಚುಗೆಯ ವ್ಯಕ್ತಿಗಳು ಎಂದು ಸಮೀಕ್ಷೆ ಮಾನ್ಯ ಮಾಡಿದೆ. ಇವರಿಬ್ಬರೂ ೨೦೧೫ರಲ್ಲಿ ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ಪಟ್ಟಿಗಳನ್ನು ಪ್ರಕಟಿಸಲು ಆರಂಭಿಸಿದಂದಿನಿಂದ ಪ್ರತಿವರ್ಷದ ಪಟ್ಟಿಯಲ್ಲೂ ಅಗ್ರಸ್ಥಾನವನ್ನೇ ಪಡೆಯುತ್ತಾ ಬಂದಿದ್ದರು. ಭಾರತದ ನಾಲ್ವರೂ ಚಿತ್ರ ನಟ-ನಟಿಯರು ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದರು.  ಅಮಿತಾಭ್ ಬಚ್ಚನ್ ಅವರು ಪುರುಷರ ಪಟ್ಟಿಯಲ್ಲಿ ೯ನೇ ಸ್ಥಾನವನ್ನು ಪಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬಚ್ಚನ್ ಗಿಂತ ಒಂದು ಸ್ಥಾನ ಮೊದಲು (೮ನೇ ಸ್ಥಾನ) ಇದ್ದಾರೆ. ಮೋದಿ ಅವರ ಜನಪ್ರಿಯತೆ ಹಿಂದಿಗಿಂತ ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿತು. ಮಹಿಳೆಯರ ವರ್ಗದಲ್ಲಿ ಐಶ್ವರ್ಯ ರೈ ವಿಶ್ವದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರ ಪಟ್ಟಿಯಲ್ಲಿ ೧೧ ನೇ ಸ್ಥಾನ ಪಡೆದಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ಅವರು ಐಶ್ವರ್ಯ ರೈ ನಂತರದ (೧೧, ೧೨) ಸ್ಥಾನ ಪಡೆದಿದ್ದಾರೆ. ವಂಡರ್ ವುಮನ್ ಸ್ಟಾರ್ ಗಾಲ್ ಗಡೋಟ್ ಅವರಿಗಿಂತ ಮೇಲಿನ ಸ್ಥಾನವನ್ನು ಈ ಮೂವರೂ ಬಾಲಿವುಡ್ ನಟ-ನಟಿಯರು ಪಡೆದರು. ಅತಿ ಮೆಚ್ಚುಗೆಯ ಮಹಿಳೆಯರ ಪಟ್ಟಿಯ ಮೊದಲ ೨೦ ಸ್ಥಾನಗಳಲ್ಲಿ ಉದ್ಯಮಿಗಳು, ನಟಿಯರು, ಗಾಯಕಿಯರು ಅಥವಾ ಟಿವಿ ನಿರೂಪಕಿಯರು ಪ್ರಾಬಲ್ಯ ಪಡೆದಿದ್ದಾರೆ. ಇವರ ಪೈಕಿ ಎಮ್ಮಾ ವಾಟ್ಸನ್ ಮತ್ತು ಆಂಜೆಲಿನಾ ಜೋಲಿಯಂತಹ ಕೆಲವರು ಮಾತ್ರ ತಮ್ಮ ಮಾನವೀಯ ಕೆಲಸಗಳಿಂದ ಗುರುತಿಸಲ್ಪಟ್ಟಿದ್ದಾರೆ.  ಇದಕ್ಕೆ ವ್ಯತಿರಿಕ್ತವಾಗಿ ಅತಿ ಮೆಚ್ಚುಗೆಯ ಪುರುಷರ ಪಟ್ಟಿಯಲ್ಲಿ ಬಹುತೇಕ ಮಂದಿ ರಾಜಕೀಯ, ವ್ಯಾಪಾರ ಮತ್ತು ಕ್ರೀಡಾಹಿನ್ನೆಲೆಯ ಮಂದಿ ಪ್ರಾಬಲ್ಯ ಪಡೆದಿದ್ದಾರೆ.  ಬಿಲ್ ಗೇಟ್ಸ್ ನಂತರದ ಸ್ಥಾನಗಳಲ್ಲಿ ಬರಾಕ್ ಒಬಾಮಾ, ಜಾಕೀ ಚಾನ್ ಮತ್ತು ಕ್ಷಿ ಜಿನ್ ಪಿಂಗ್ ಇದ್ದರೆ, ಮಹಿಳಾ ಪಟ್ಟಿಯಲ್ಲಿ ಜೋಲೀ ನಂತರದ ಸ್ಥಾನಗಳಲ್ಲಿ ಮಿಷೆಲ್ ಒಬಾಮಾ ಮತ್ತು ಒಪ್ರಾಹ್ ವಿನ್‌ಫ್ರೇ ಇದ್ದಾರೆ.  ವಿಶ್ವದ ಅತ್ಯಂತ ಮೆಚ್ಚುಗೆಯ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕನ್ನಡತಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇವಲ ೨ ದಿನಗಳ ಹಿಂದೆ ಮೇಡಮ್ ಟುಸ್ಸಾಡ್ ಅವರ ಲಂಡನ್ ಮತ್ತು ದೆಹಲಿಯ ವ್ಯಾಕ್ಸ್ (ಮೇಣದ) ಪ್ರತಿಮೆಗಳ ಗ್ಯಾಲರಿಗೆ ಸೇರ್ಪಡೆಯಾಗಲು ಆಯ್ಕೆಯಾಗಿದ್ದರು. ಮೇಡಂ ಟುಸ್ಸಾಡ್ ಅವರ ಲಂಡನ್ ವ್ಯಾಕ್ಸ್ ಪ್ರತಿಮೆಗಳ ಗ್ಯಾಲರಿಯಲ್ಲಿ ಈಗಾಗಲೇ ಬಾಲಿವುಡ್ ನಟ ನಟಿಯರಾದ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಕತ್ತೀನಾ ಕೈಫ್ ಮತ್ತಿತರರು ಸೇರ್ಪಡೆಯಾಗಿದ್ದಾರೆ.

2018: ಮೆಹ್ಸಾನಾ (ಅಹ್ಮದಾಬಾದ್): ೨೦೧೫ರಲ್ಲಿ ಪಾಟೀದಾರ ಪ್ರತಿಭಟನೆ ವೇಳೆ ನಡೆಸಿದ್ದ ಗಲಭೆಗೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ತಪ್ಪಿತಸ್ಥ ಎಂದು ಆದೇಶ ನೀಡಿದ ಗುಜರಾತಿನ ವಿಸ್ ನಗರ್ ನ್ಯಾಯಾಲಯವು ಎರಡು ವರ್ಷಗಳ ಸೆರೆವಾಸದ ಶಿಕ್ಷೆ ಜೊತೆಗೆ ೫೦ ಸಾವಿರ ರೂಪಾಯಿ ದಂಡವನ್ನೂ ವಿಧಿಸಿ ತೀರ್ಪು ನೀಡಿತು. ೨೦೧೫ರ ಜುಲೈ ೨೩ರಂದು ಪಾಟೀದಾರ್ ಅನಾಮತ್ ಆಂದೋಲನ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಸುಮಾರು ೫೦೦ ಮಂದಿ ಪಟೇಲ್ ಸಮುದಾಯದವರು ವಿಸ್ ನಗರದಲ್ಲಿನ ಬಿಜೆಪಿ ಶಾಸಕರ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಅಲ್ಲದೇ ಪತ್ರಕರ್ತರ ಮೇಲೂ ಹಲ್ಲೆ ನಡೆಸಿದ್ದರು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಹಾಗೂ ೧೭ ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಿಜೆಪಿ ಶಾಸಕ ಋಷಿಕೇಶ್ ಪಟೇಲ್ ಕಚೇರಿಯನ್ನು ಧ್ವಂಸಗೊಳಿಸಿದ ಸಂಬಂಧ ಪಾಟೀದಾರ ಅನಾಮತ್ ಆಂದೋಲನ ಸಮಿತಿ ನಾಯಕ ಹಾರ್ದಿಕ್ ಹಾಗೂ ಇತರರ ವಿರುದ್ಧ ವಿಸ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿದ ನಂತರ ವಿಸ್ ನಗರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿ.ಪಿ. ಅಗರ್ ವಾಲ್ ಅವರು ಹಾರ್ದಿಕ್ ಪಟೇಲ್, ಲಾಲ್‌ಜಿ ಪಟೇಲ್ ಹಾಗೂ ಎ.ಕೆ. ಪಟೇಲ್ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳ ಅಡಿಯಲ್ಲಿ ದಂಗೆ, ಹಿಂಸೆ, ಆಸ್ತಿಪಾಸ್ತಿಗೆ ಮತ್ತು ಅಕ್ರಮ ಜಮಾವಣೆ ವಿಚಾರಗಳಲ್ಲಿ ತಪ್ಪಿತಸ್ಥರು ಎಂದು ಹೇಳಿ, ಮೂವರಿಗೂ ತಲಾ ೨ ವರ್ಷಗಳ ಸೆರೆವಾಸದ ಶಿಕ್ಷೆ ಮತ್ತು ತಲಾ ೫೦ ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿ ತೀರ್ಪು ನೀಡಿದೆ ಎಂದು ಮಾಧ್ಯಮ ವರದಿ ತಿಳಿಸಿತು. ಉಳಿದ ೧೪ ಮಂದಿ ಆರೋಪಿಗಳನ್ನು ಸಾಕ್ಷ್ಯದ ಕೊರತೆ ಕಾರಣಕ್ಕಾಗಿ ಖುಲಾಸೆ ಮಾಡಲಾಯಿತು.

2018: ಮುಂಬೈ: ಮರಾಠಾ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಚಳವಳಿ ಆರಂಭಿಸಿದ್ದ ಮರಾಠಾ ಕ್ರಾಂತಿ ಮೋರ್ಚಾ, ಬುಧವಾರ ಇಡೀದಿನದ ಪ್ರತಿಭಟನೆಗಳ ಬಳಿಕ ಸಂಜೆಯ ವೇಳೆಗೆ ತನ್ನ ಹಿಂಸಾತ್ಮಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತು. ಮಧ್ಯಾಹ್ನ ೩ ಗಂಟೆ ವೇಳೆಗೆ ಚಳವಳಿ ಹಿಂತೆಗೆದುಕೊಳ್ಳುವ ಮುನ್ನ ಮಹಾರಾಷ್ಟ್ರ ಬಂದ್ ಕರೆಯಿಂದಾಗಿ ರಾಜಧಾನಿ ಮುಂಬೈ ಸೇರಿದಂತೆ ರಾಜ್ಯದ ಬಹಳಷ್ಟು ಭಾಗಗಳಲ್ಲಿ ಅರಾಜಕ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಪ್ರತಿಭಟನಕಾರರು ನವೀ ಮುಂಬೈ ಟೌನ್ ಶಿಪ್ ಮತ್ತು ಸತಾರಾ ಜಿಲ್ಲೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಿದ ಪರಿಣಾಮವಾಗಿ ಮರಾಠಾ ಸಮುದಾಯದ ಬಂದ್ ಹಿಂಸೆಗೆ ತಿರುಗಿ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಹಿಂಸೆಗೆ ಇಳಿದ ಪ್ರತಿಭಟನಕಾರರ ಮೇಲೆ ಪೊಲೀಸರು ಬೆತ್ತ ಪ್ರಹಾರ ಮಾಡಿದ್ದಲ್ಲದೆ ಪ್ಲಾಸ್ಟಿಕ್ ಬುಲೆಟ್ ಹಾಗೂ ಆಶ್ರುವಾಯು ಶೆಲ್ ಪ್ರಯೋಗಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.  ರಾಜ್ಯದ ವಿವಿಧ ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ ಮರಾಠಾ ಸಮುದಾಯ, ಮುಂಬೈ ನಿವಾಸಿಗಳ ಬದುಕನ್ನು ಹಾಳುಗೆಡವಲು ಬಯಸುವುದಿಲ್ಲ ಎಂಬ ಕಾರಣವನ್ನು ನೀಡಿತು. ಏನಿದ್ದರೂ ಚಳವಳಿ ಮತ್ತೆ ಆರಂಭವಾಗುವ ಸಾಧ್ಯತೆ ಇಲ್ಲದಿಲ್ಲ ಎಂದು ಕೆಲವು ಮೂಲಗಳು ಹೇಳಿದವು.  ‘ನಾವು ಒಗ್ಗಟ್ಟಿನಿಂದ ಇದ್ದೇವೆ ಎಂಬುದನ್ನು ತೋರಿಸಲು ಮಾತ್ರ ನಾವು ಬಯಸಿದ್ದೆವು ಮತ್ತು ನಾವು ಅದನ್ನು ಸಾಬೀತು ಪಡಿಸಿದ್ದೇವೆ. ಪ್ರತಿಭಟನೆಗಳು ಹಿಂಸೆಗೆ ತಿರುಗಬೇಕು ಎಂದು ನಾವೆಂದೂ ಬಯಸಿರಲಿಲ್ಲ. ಆದ್ದರಿಂದ ನಾವು ಈದಿನದ ಮಟ್ಟಿಗೆ ನಮ್ಮ ಮುಂಬೈ ಬಂದ್ ಕರೆಯನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಮರಾಠಾ ಮೋರ್ಚಾ ನಾಯಕ ವೀರೇಂದ್ರ ಪವಾರ್ ಮುಂಬೈಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.  ಕೆಲವರು ರಾಜಕೀಯ ದುರುದ್ದೇಶದಿಂದ ಹಿಂಸಾತ್ಮಕ ಚಟುವಟಿಕೆಗಳನ್ನು ಎಸಗಿದ್ದಾರೆ ಎಂಬ ಗುಮಾನಿ ನಮಗಿದೆ. ಇಲ್ಲದೇ ಇದ್ದಲ್ಲಿ ಚಳವಳಿಯು ಹಿಂದಿನಂತೆಯೇ ಶಾಂತಿಯುತವಾಗಿ ಇರಬೇಕಾಗಿತ್ತು. ಆದರೆ ಮುಂಬೈಯ ಹೊರಭಾಗದಿಂದ ಬಂದ ಹಿಂಸೆಯ ವರದಿಗಳನ್ನು ಪರಿಗಣಿಸಿ ಚಳವಳಿ ಹಿಂತೆಗೆದುಕೊಳ್ಳಲು ನಾವು ನಿರ್ಧರಿಸಿದೆವು ಎಂದು ಅವರು ಹೇಳಿದರು.  ಆಗಸ್ಟ್ ೯ರಂದು ಪುನಃ ಬಂದ್ ಗೆ ಕರೆ ನೀಡಬಹುದು ಆದರೆ ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು  ಎಲ್ಲಾ ಮರಾಠಾ ಮೋರ್ಚಾಗಳ ಹಿರಿಯ ಸದಸ್ಯರ ಜೊತೆ ಚರ್ಚಿಸಿ ಬಳಿಕ ಕೈಗೊಳ್ಳಲಾಗುವುದು ಎಂದು ಇನ್ನೊಬ್ಬ ಮೋರ್ಚಾ ನಾಯಕ ಹೇಳಿದರು.  ಈ ಮಧ್ಯೆ,  ಪ್ರತಿಭಟನಕಾರರು ಘಂಸೋಲಿ ಸ್ಟೇಷನ್ನಿನಲ್ಲಿ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚುಕಾಲ ರೈಲುಗಳನ್ನು ಅಡ್ಡಗಟ್ಟಿದ ಪರಿಣಾಮವಾಗಿ ಥಾಣೆ ಮತ್ತು ವಶಿ ನಡುವಣ ಟ್ರಾನ್ಸ್ -ಹಾರ್ಬರ್ ಮಾರ್ಗದಲ್ಲಿ ಸ್ಥಳೀಯ ರೈಲು ಸಂಚಾರ ಸೇವೆ ಅಸ್ತವ್ಯಸ್ತಗೊಂಡಿತು ಎಂದು ಪೊಲೀಸರು ತಿಳಿಸಿದರು.
ರಾಯಗಡ ಜಿಲ್ಲೆಯ ಪನ್ವೇಲ್ ನ ಪಲಾಪ್ಸೆ ಬಳಿ ಮುಂಬೈ-ಗೋವಾ ಹೆದ್ದಾರಿಯನ್ನೂ ಪ್ರತಿಭಟನಕಾರರು ಅಡ್ಡ ಗಟ್ಟಿದರು. ಸಿಯೋನ್-ಪನ್ವೇಲ್ ಹೆದ್ದಾರಿಯನ್ನು ಖರಗ್ಹಾರ್ ಮತ್ತು ವಶಿಯಲ್ಲಿ ಕೆಲ ಕಾಲ ಅಡ್ಡಗಟ್ಟಲಾಯಿತು, ಆದರೆ ಪೊಲೀಸರು ರಸ್ತೆ ಮೇಲಿದ್ದ ಪ್ರತಿಭಟನಕಾರರನ್ನು ತೆರವುಗೊಳಿಸಿದರು.  ಶೋಲಾಪುರ ಜಿಲ್ಲೆಯ ಪಂಢರಾಪುರದಲ್ಲಿ ಹಿಂಸಾಚಾರಕ್ಕೆ ಸಮುದಾಯದ ಕೆಲವು ಸದಸ್ಯರು ಯೋಜಿಸಿದ್ದಾರೆ ಎಂಬುದಾಗಿ ಆಪಾದಿಸಿದ್ದಕ್ಕಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಮರಾಠಾ ಕ್ರಾಂತಿ ಮೋರ್ಚಾ ಈದಿನ ಬಂದ್ ಗೆ ಕರೆ ನೀಡಿತ್ತು.  ದೇವಾಲಯ ಒಂದರಲ್ಲಿ ’ಆಷಾಢ ಏಕಾದಶಿ ಪೂಜೆ ನಡೆಸಬೇಕಾಗಿದ್ದ ಫಡ್ನವಿಸ್ ಅವರು ಮರಾಠಾ ಸಂಘಟನೆಗಳು ಕಾರ್‍ಯಕ್ರಮವನ್ನು ಹಾಳುಗೆವುದಾಗಿ ಬೆದರಿಕೆ ಹಾಕಿದ್ದನ್ನು ಅನುಸರಿಸಿ ತಮ್ಮ ನಿಗದಿತ ಕಾರ್‍ಯಕ್ರಮವನ್ನು ರದ್ದು ಪಡಿಸಿದ್ದರು. ರಾಜ್ಯ ಜನಸಂಖ್ಯೆಯ ಶೇಕಡಾ ೩೦ರಷ್ಟು ಪಾಲನ್ನು ಹೊಂದಿರುವುದರ ಜೊತೆಗೆ ರಾಜಕೀಯವಾಗಿ ಪ್ರಭಾವಶಾಲಿ ಸಮುದಾಯವಾಗಿರುವ ಮರಾಠಾ ಸಮುದಾಯಕ್ಕೆ ಮೀಸಲಾತಿ ಒದಗಿಸಬೇಕೆಂಬ ಬೇಡಿಕೆ ತೀವ್ರ ವಿವಾದಾಸ್ಪದ ವಿಷಯವಾಗಿ ಮಾರ್ಪಟ್ಟಿದೆ. ಸಮುದಾಯದ ನಾಯಕರು ಈ ಹಿಂದೆ ತಮ್ಮ ಬೇಡಿಕೆಗಳನ್ನು ಆಗ್ರಹಿಸಲು ವಿವಿಧ ಜಿಲ್ಲೆಗಳಲ್ಲಿ ರ್‍ಯಾಲಿಗಳನ್ನು ಸಂಘಟಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮರಾಠಾ ಕ್ರಾಂತಿ ಮೋರ್ಚಾವು ಕಳೆದ ವರ್ಷ ಮುಂಬೈಯಲ್ಲಿ ಬೃಹತ್  ರಾಲಿಯನ್ನು ಸಂಘಟಿಸಿತ್ತು. ಸರ್ಕಾರಕ್ಕೆ ನೀಡಬೇಕಾದ ಸಂದೇಶವನ್ನು ನಾವು ಮುಟ್ಟಿಸಿದ್ದೇವೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಸರ್ಕಾರದ ಸ್ಪಂದನೆ ಬಗ್ಗೆ ನಾವು ಭ್ರಮ ನಿರಸನಗೊಂಡಿದ್ದೇವೆ ಎಂದು ಪವಾರ್ ಹೇಳಿದರು. ಸರ್ಕಾರದ ಒಬ್ಬನೇ ಒಬ್ಬ ಪ್ರತಿನಿಧಿ ಕೂಡಾ ಪ್ರತಿಭಟನಕಾರರನ್ನು ಸಂಪರ್ಕಿಸಿಲ್ಲ ಎಂದು ಅವರು ನುಡಿದರು. ಮುಖ್ಯಮಂತ್ರಿ ಫಡ್ನವಿಸ್ ಅವರು ತಮ್ಮ ಹವಾನಿಯಂತ್ರಿತ ಕೊಠಡಿಗೆ ಸೀಮಿತರಾಗಿ ಕುಳಿತುಕೊಂಡಿದ್ದಾರೆ ಮತ್ತು ನಮ್ಮ ಬೇಡಿಕೆಗಳ ಬಗ್ಗೆ ಎಂದೂ ಚಿಂತಿಸಿಲ್ಲ ಎಂದು ಚಳವಳಿ ನಾಯಕರೊಬ್ಬರು ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು.

2018: ಪಟ್ನಾ: ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕಸಮತಾ ಪಕ್ಷದ (ಆರ್ ಎಲ್ ಎಸ್ ಪಿ) ನಾಯಕ
ಉಪೇಂದ್ರ ಕುಶವಾಹ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಮತ್ತು ೨೦೨೦ರ ವಿಧಾನಸಭಾ ಚುನಾವಣೆಗೆ ಹೊಸ ನಾಯಕನನ್ನು ಬಿಂಬಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಲಹೆ ಮಾಡಿದರು. ನಿತೀಶ್ ಕುಮಾರ್ ಅವರಂತಹ ಎತ್ತರದ ನಾಯಕರಿಗೆ ಎತ್ತರದ ಸ್ಥಾನದಲ್ಲಿ ಉಳಿಯಲು ೧೫ ವರ್ಷಗಳು ಬೇಕಾದಷ್ಟಾಯಿತು. ಕುಮಾರ್ ಅವರು ಇನ್ನು ದೊಡ್ಡ ರಾಜಕೀಯ ಪಾತ್ರ ವಹಿಸಬೇಕು ಎಂದು ಅವರು ನುಡಿದರು.  ‘ನಿತೀಶ್  ಜಿ ಅವರು ಮುಖ್ಯಮಂತ್ರಿಯಾಗಿ ೧೫ ವರ್ಷಗಳನ್ನು ಕಳೆದಿದ್ದಾರೆ. ಈಗ ಅವರು ಸ್ವತಃ ಈ ಹೊಣೆಗಾರಿಕೆಯನ್ನು ತ್ಯಜಿಸಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾವು ಬೇರೆ ಯಾರಾದರೂ ನಾಯಕನಿಗೆ ಅವಕಾಶ ನೀಡಬೇಕು. ಅವರು ಬೇರೆ ದೊಡ್ಡ ರಾಜಕೀಯ ಪಾತ್ರವನ್ನು ವಹಿಸಬಹುದು ಎಂದು ಕುಶವಾಹ ಹೇಳಿದರು.  ‘ಯಾರೇ ನಾಯಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಕೋರುತ್ತಾನೆ. ನಿತೀಶ್ ಜಿ ಅವರು ೧೫ ವರ್ಷಗಳಲ್ಲಿ ಅದನ್ನು ತೋರಿಸಿದ್ದಾರೆ. ನಾನು ಅವರನ್ನು ನಿಕಟವಾಗಿ ಬಲ್ಲೆ. ೨೦೨೦ರ ಚುನಾವಣೆಯಲ್ಲಿ ತಾವು ಸ್ಪರ್ಧಿಯಲ್ಲ ಎಂಬುದಾಗಿ ಅವರು ಸ್ವತಃ ಪ್ರಕಟಿಸುವರು ಎಂದು ನಾನು ನಂಬುವೆ ಎಂದು ಅವರು ನುಡಿದರು.  ‘ನಿಮಗೆ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಇದೆಯೇ?’ ಎಂಬ ಪ್ರಶ್ನೆಗೆ ’ಪ್ರತಿಯೊಬ್ಬ ರಾಜಕಾರಣಿಗೂ ಆ ಪಾತ್ರ ವಹಿಸಲು ಆಸಕ್ತಿ ಇರುತ್ತದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಕುಶವಾಹ ಉತ್ತರಿಸಿದರು.  ೨೦೨೦ರ ಬಿಹಾರ ಚುನಾವಣೆಯಲ್ಲಿ ಯಾರು ಮೈತ್ರಿಕೂಟದ ಮುಖವಾಗಿರಬೇಕು ಎಂಬ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ನಿತೀಶ್ ಕುಮಾರ್ ಅವರ ಜನತಾದಳ (ಸಂಯುಕ್ತ) ಮಧ್ಯೆ ಬಹಿರಂಗ ಚಕಮಕಿ ನಡೆದಿರುವುದರ ಮಧ್ಯೆಯೇ ಆರ್ ಎಲ್ ಎಸ್ ಪಿ ನಾಯಕನ ಹೇಳಿಕೆ ಬಂದಿರುವುದು ಕುತೂಹಲಕಾರಿ.  ಉಭಯ ಶಿಬಿರಗಳೂ ಇತ್ತೀಚೆಗೆ ಪಟ್ನಾದಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಮತ್ತು ನಿತೀಶ್ ಕುಮಾರ್ ನಡುವಣ ಭೇಟಿ ಕಾಲದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿರಬಹುದು ಎಂದು ಉಭಯ ಶಿಬಿರಗಳೂ ನಂಬಿವೆ. ಏನಿದ್ದರೂ ಕುಶವಾಹ ಹೇಳಿಕೆಯು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದಲ್ಲಿ (ಎನ್ ಡಿಎ) ಈ ವಿಚಾರದ ಬಗ್ಗೆ ಮತ್ತೆ ಚರ್ಚೆಯ ಕಿಡಿ ಎಬ್ಬಿಸುವ ಸಾಧ್ಯತೆ ಇದೆ. ತೇಜಸ್ವಿ ಯಾದವ್ ಅವರಿಗೆ ಅವರ ಪಕ್ಷ ಆರ್ ಜೆಡಿಯಲ್ಲಿ ಬಡ್ತಿ ನೀಡಲಾಗಿರುವ ಬಗ್ಗೆ ಪ್ರಶ್ನಿಸಿದಾಗ ’ಅವರು ಇನ್ನೂ ಮಗು. ತುಂಬಾ ದೂರ ಕ್ರಮಿಸಬೇಕಾಗಿದೆ ಎಂದು ಕುಶವಾಹ ಹೇಳಿದರು.

2018: ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಸಲ್ಲಿಸಲಾಗಿರುವ ಹಕ್ಕುಚ್ಯುತಿ ನೋಟಿಸ್ ಗಳು ತಮ್ಮ ಪರಿಶೀಲನೆಯಲ್ಲಿ ಇವೆ ಎಂದು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಇಲ್ಲಿ ಹೇಳಿದರು. ತಮಗೆ ಪ್ರಧಾನಿಯವರ ವಿರುದ್ಧ ಐದು ಹಕ್ಕುಚ್ಯುತಿ ನೋಟಿಸ್‌ಗಳು ಮತ್ತು ರಕ್ಷಣಾ ಸಚಿವರ ವಿರುದ್ಧ ಐದು ಹಕ್ಕು ಚ್ಯುತಿ ನೋಟಿಸ್ ಗಳು ವಿರೋಧ ಪಕ್ಷ ಸದಸ್ಯರಿಂದ ಬಂದಿದ್ದು ಸರ್ಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯ ಕಾಲದಲ್ಲಿ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸದನವನ್ನು ದಾರಿ ತಪ್ಪಿಸಿದ್ದಕ್ಕಾಗಿ ಇವುಗಳನ್ನು ನೀಡಲಾಗಿದೆ ಎಂದು ಮಹಾಜನ್ ನುಡಿದರು.  ‘ಒಬ್ಬ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ತಮಗೆ ನಾಲ್ಕು ಹಕ್ಕುಚ್ಯುತಿ ನೋಟಿಸ್ ಗಳು ಬಂದಿವೆ. ಇವುಗಳೂ ತಮ್ಮ ಪರಿಶೀಲನೆಯಲ್ಲಿವೆ ಎಂದೂ ಸುಮಿತ್ರಾ ಅವರು ಈ ಸಂದರ್ಭದಲ್ಲಿ ಹೇಳಿದರು.  ಶೂನ್ಯ ವೇಳೆಯ ಬಳಿಕ ತಾವು ಕಳುಹಿಸಿದ ನೋಟಿಸ್ ಗಳ ಬಗ್ಗೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಪ್ರಸ್ತಾಪಿಸಿದ ಬಳಿಕ ಸಭಾಧ್ಯಕ್ಷರು ಈ ವಿಚಾರವನ್ನು ತಿಳಿಸಿದರು. ಪ್ರಧಾನಿ ಮತ್ತು ರಕ್ಷಣಾ ಸಚಿವರು ಸದನವನ್ನು ದಾರಿ ತಪ್ಪಿಸಿದ್ದಾರೆ ಎಂದು ನೋಟಿಸ್ ಗಳು ಹೇಳಿವೆ; ಈ ಹಕ್ಕುಚ್ಯುತಿ ನೋಟಿಸ್ ಗಳನ್ನು ಅಂಗೀಕರಿಸಿ ಮುಂದಿನ ಪ್ರಕ್ರಿಯೆಗಾಗಿ ಹಕ್ಕುಚ್ಯುತಿ ಸಮಿತಿಗೆ ವಹಿಸಬೇಕು ಎಂದು ವಿಪಕ್ಷಗಳು ಕೋರಿದ್ದವು. ಸರ್ಕಾರದ ಕಡೆಯಿಂದಲೂ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು ಹೇಳಿದರು.

2018: ಇಸ್ಲಾಮಾಬಾದ್/ ಕರಾಚಿ/ ಪೇಶಾವರ: ಬಿಗಿ ಭದ್ರತೆಯೊಂದಿಗೆ ನಡೆದ ಪಾಕಿಸ್ತಾನದ ಸಂಸತ್ ಚುನಾವಣೆಯಲ್ಲಿ ಹಿಂಸಾಚಾರ ಭುಗಿಲೆದ್ದು, ಬಲೂಚಿಸ್ತಾನದ ಕ್ವೆಟ್ವಾ ಮತಗಟ್ಟೆ ಸಮೀಪ ಸಂಭವಿಸಿದ ಮಾನವ ಬಾಂಬ್ ದಾಳಿಗೆ ೩೧ ಮಂದಿಯಾಗಿರುವುದು ಸೇರಿದಂತೆ ವಿವಿಧ ಹಿಂಸಾಕೃತ್ಯಗಳಲ್ಲಿ ಕನಿಷ್ಠ ೩೪ ಮಂದಿ ಸಾವನ್ನಪ್ಪಿ, ೩೬ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಕ್ವೆಟ್ಟಾದಲ್ಲಿ ನಡೆದ ಮಾನವ ದಾಳಿಯ ಹೊಣೆಯನ್ನು ಐಸಿಸ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತು. ಮಾನವ ಬಾಂಬರ್ ಮತಗಟ್ಟೆಯೊಳಗೆ ಪ್ರವೇಶಿಸಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಆತನನ್ನು ತಡೆಯಲು ಯತ್ನಿಸಿದರು. ಆಗ ಆತ ತನ್ನನ್ನು ತಾನು ಸ್ಫೋಟಿಸಿಕೊಂಡ ಎಂದು ಸ್ಥಳೀಯ ಆಡಳಿತಾಧಿಕಾರಿ ಸುದ್ದಿ ಸಂಸ್ಥೆಗೆ ತಿಳಿಸಿದರು.  ಹಿಂಸಾಗ್ರಸ್ತ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸಂಭವಿಸಿದ ಮಾನವ ಬಾಂಬ್ ದಾಳಿಗೆ ಐವರು ಪೊಲೀಸರು ಮತ್ತು ಮತಗಟೆಯ ಹೊರಭಾಗದಲ್ಲಿದ್ದ ಇಬ್ಬರು ಅಪ್ರಾಪ್ತರು ಸೇರಿದಂತೆ ಕನಿಷ್ಠ ೩೧ ಮಂದಿ ಬಲಿಯಾದರು.  ಪೊಲೀಸ್ ವ್ಯಾನನ್ನು ಗುರಿಯಾಗಿ ಇಟ್ಟುಕೊಂಡು ಈ ದಾಳಿ ನಡೆಸಲಾಗಿದೆ. ಬಾಂಬ್ ದಾಳಿಯಲ್ಲಿ ಇತರ ೩೦ ಮಂದಿ ಗಾಯಗೊಂಡರು.  ಕ್ವೆಟ್ಟಾ ಬಲೂಚಿಸ್ತಾನದ ರಾಜಧಾನಿಯಾಗಿದ್ದು, ಆತ್ಮಹತ್ಯಾ ಬಾಂಬರ್ ಕ್ವೆಟ್ಟಾದ ಪೂರ್ವ ಬೈಪಾಸ್ ಸಮೀಪದ ಮತಗಟ್ಟೆ ಪ್ರವೇಶಿಲು ಬಯಸಿದ್ದ. ಆದರೆ ಬಿಗಿ ಪೊಲೀಸ್ ಕಾವಲು ಇದ್ದುದರಿಂದ ಆತನಿಗೆ ಅದು ಸಾಧ್ಯವಾಗಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಜಾಜ್ ಗೊರಯ ತಿಳಿಸಿದರು.  ‘ಆತ ಬಳಿಕ ಸ್ಟೇಷನ್ ಸಮೀಪ ಇದ್ದ ಪೊಲೀಸ್ ವಾಹನದತ್ತ ಸಾಗಿ ಬಾಂಬ್ ಸ್ಫೋಟಿಸಿಕೊಂಡ. ಕನಿಷ್ಠ ೩೧ ಮಂದಿ ಸಾವನ್ನಪ್ಪಿರುವುದನ್ನು ಮತ್ತು ಸುಮಾರು ೩೨ ಮಂದಿ ಗಾಯಾಳುಗಳನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿರುವುದನ್ನು ನಾನು ದೃಢ ಪಡಿಸಬಲ್ಲೆ ಎಂದು ಎಜಾಜ್ ಹೇಳಿದರು.  ಚುನಾವಣಾ ಭದ್ರತೆ ಸಲುವಾಗಿ ಪಾಕಿಸ್ತಾನಿ ಸೇನೆಯು ದೇಶಾದ್ಯಂತ ೩,೭೦,೦೦೦ ಸಿಬ್ಬಂದಿಯನ್ನು ಮತಗಟ್ಟೆಗಳ ಸಮೀಪ ನಿಯೋಜಿಸಿತ್ತು. ಜೊತೆಗೆ ೪,೫೦,೦೦೦ ಹೆಚ್ಚುವರಿ ಪೊಲೀಸರನ್ನೂ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಚುನಾವಣೆ ಕಾಲದಲ್ಲಿ ಡಿಐಜಿ ರಜಾಕ್ ಚೀಮಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದ್ದು, ಅವರು ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ಹೇಳಿದವು. ಖೈಬರ್ ಫಕ್ತೂನ್ ಕ್ವಾ ಸ್ವಾಬಿ ಜಿಲ್ಲೆಯಲ್ಲಿ ಪ್ರತಿಸ್ಪರ್ಧಿ ಪಕ್ಷಗಳ ಬೆಂಬಲಿಗರು ಮತಗಟ್ಟೆಯ ಹೊರಭಾಗದಲ್ಲಿ ಪರಸ್ಪರ ಗುಂಡು ಹಾರಿಸಿಕೊಂಡ ಪರಿಣಾಮವಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತನೊಬ್ಬ ಹತನಾಗಿ ಇತರ ಇಬ್ಬರು ಗಾಯಗೊಂಡರು ಎಂದು ಪೊಲೀಸರು ಹೇಳಿದರು.  ಪಿಟಿಐ ಕಾರ್ಯಕರ್ತ ಮತ್ತು ಆವಾಮಿ ನ್ಯಾಷನಲ್ ಪಾರ್ಟಿ (ಎಎನ್ ಪಿ) ಕಾರ್‍ಯಕರ್ತರ ಮಧ್ಯೆ ಎನ್ ಎ ೧೯(ಸ್ವಾಬಿ ೨) ಮತ್ತು ಪಿಕೆ -೪೭ (ಸ್ವಾಬಿ ೫) ಪ್ರದೇಶದಲ್ಲಿ ಈ ಘರ್ಷಣೆ ನಡೆಯಿತು.  ಎನ್ ಎ-೨೧೯ ಡಿಗ್ರಿ ಪ್ರದೇಶದ ಮೀರಾಪುರ್ಖಾಸ ಮತಗಟ್ಟೆಯ ಹೊರಭಾಗ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಹತನಾದ.  ಲಾರ್ಕಾನಾದ ರಾಜಕೀಯ ಶಿಬಿರ ಒಂದರ ಹೊರಗೆ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಗಾಯಗೊಂಡರು.
ಪಿಎಂಎಲ್-ಎನ್ ನಾಯಕ ಶಾಬಾಜ್ ಶರೀಫ್ ಅವರು ಕ್ವೆಟ್ಟಾದಲ್ಲಿ ಸಂಭವಿಸಿದ ಮಾನವ ಬಾಂಬ್ ದಾಳಿಯನ್ನು ಖಂಡಿಸಿದರು.  ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಕೂಡಾ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯಲ್ಲಿ ಬಲೂಚಿಸ್ತಾನ ಆವಾಮಿ ಪಕ್ಷದ ಚುನಾವಣಾ ಸಭೆಯೊಂದರಲ್ಲಿ ಇದೇ ತಿಂಗಳು ಮಾನವ ಬಾಂಬರ್ ನಡೆಸಿದ್ದ ದಾಳಿಯಲ್ಲಿ ೧೫೦ ಮಂದಿ ಸಾವನ್ನಪ್ಪಿ ಇತರ ೨೦೦ ಜನ ಗಾಯಗೊಂಡಿದ್ದರು. ಈದಿನದ ದಾಳಿ ಒಂದೇ ತಿಂಗಳಲ್ಲಿ ನಡೆದ ಎರಡನೇ ದಾಳಿಯಾಗಿದೆ ಎಂದು ವರದಿಗಳು ಹೇಳಿದವು. ಪಾಕಿಸ್ತಾನದ ೮೫೦೦೦ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಬೆಳಗ್ಗೆ ೮ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ ೬ಗಂಟೆವೇಳೆಗೆ ಮುಕ್ತಾಯಗೊಂಡಿತು. ಮತಗಳ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು ೨೪ ಗಂಟೆಗಳಲ್ಲಿ ಫಲಿತಾಂಶ ಲಭ್ಯವಾಗುವುದು ಎಂದು ಸಂಜೆವೇಳೆಗೆ ಬಂದ ವರದಿಗಳು ಹೇಳಿದವು.  ಈ ಮಧ್ಯೆ ಇಮ್ರಾನ್ ಖಾನ್ ಜೊತೆ ಪಾಕ್ ಮಿಲಿಟರಿ ರಹಸ್ಯವಾಗಿ ಕೈಜೋಡಿಸಿರುವುದಾಗಿ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗಿತ್ತು. ೧೯೪೭ರ ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನದ ಇತಿಹಾಸದಲ್ಲಿ ಮಿಲಿಟರಿ ಆಡಳಿತ ಬಹಳಷ್ಟು ಬಾರಿ ಜಾರಿಯಾಗಿತ್ತು. ಈ ಚುನಾವಣೆಯು ಮಾಜಿ ಕ್ರಿಕೆಟಿಗ, ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್(ಪಿಟಿಐ) ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಹಾಗೂ ಜೈಲುಪಾಲಾಗಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ೩೦ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.  ಪಾಕ್ ಸಂಸದೀಯ ಚುನಾವಣೆಯಲ್ಲಿ ಈ ಬಾರಿ ಹಲವು ಉಗ್ರ ಸಂಘಟನೆಗಳು ಸ್ಪರ್ಧಿಸಿದ್ದು, ಲಾಹೋರ್ ಮತಗಟ್ಟೆಯೊಂದರಲ್ಲಿ ಉಗ್ರ ಹಫೀಜ್ ಸಯೀದ್ ಮತದಾನ ಮಾಡಿ ಹೊರಬರುತ್ತಿರುವ ವಿಡಿಯೋ ಲಭ್ಯವಾಗಿದೆ.  ಇಮ್ರಾನ್ ಖಾನ್ ನೇತೃತ್ವದ ಪಿಟಿಐಗೆ ಆರಂಭಿಕ ಮುನ್ನಡೆ: ಲಭ್ಯ ವರದಿಗಳ ಪ್ರಕಾರ ಪಾಕಿಸ್ತಾನದ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವು ಆರಂಭಿಕ ಮುನ್ನಡೆ ಗಳಿಸಿದ್ದು ಭುಟ್ಟೋ ಅವರ ಪಿಪಿಪಿ ಸಿಂಧ್ ನಲ್ಲಿ ಮುನ್ನಡೆ ಸಾಧಿಸಿದೆ ಎಂದು ವರದಿಗಳು ಹೇಳಿದವು.



2017: ನವದೆಹಲಿ: ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ ಅವರು ಪ್ರಮಾಣವಚನ ಸ್ವೀಕರಿಸಿದರು. ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ರಾಷ್ಟ್ರಪತಿ ಭವನದ ಮುಂದೆ ಹಾಲಿ ಮತ್ತು ನಿಯೋಜಿತ ರಾಷ್ಟ್ರಪತಿಗಳಿಗೆ  ರಾಷ್ಟ್ರಪತಿಗಳ ಬೆಂಗಾವಲು ಪಡೆಯಿಂದ ಗೌರವ ರಕ್ಷೆ ನೀಡಲಾಯಿತು. ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ,ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ,ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ನಿತಿನ್ ಗಡ್ಕರಿ, ಅನಂತ್ ಕುಮಾರ್ , ಸಂಸದರು, ಮುಖ್ಯಮಂತ್ರಿಗಳು, ಶಾಸಕರು ಭಾಗಿಯಾಗಿದ್ದರು. ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೋವಿಂದ ಅವರು, ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ, ರಾಷ್ಟ್ರವನ್ನುದ್ದೇಶಿಸಿ ಚೊಚ್ಚಲ ಭಾಷಣ ಮಾಡಿದರು. ನಮ್ಮ ದೇಶದಲ್ಲಿ ಸರ್ವ ಧರ್ಮ ಸಮಾನತೆ ಇದೆ. ಅತ್ಯಂತ ವಿನಮ್ರತೆಯಿಂದ ಈ ಹುದ್ದೆಯನ್ನು ನಿಭಾಯಿಸುತ್ತೇನೆ. ಇನ್ನೊಬ್ಬರು ಭಾವನೆ ಗೌರವಿಸುವುದು ಪ್ರಜಾತಂತ್ರದ ವಿಶೇಷತೆ. ವಿಭಿನ್ನತೆ ನಡುವೆಯೂ ಏಕತೆ ನಮ್ಮ ದೇಶದ ವಿಶೇಷತೆಯಾಗಿದೆ. ಡಿಜಿಟಲ್ ಇಂಡಿಯಾ ಭಾರತದ ಪ್ರಗತಿಯಗೆ ಪೂರಕವಾಗಲಿದೆ ಎಂದು  ಅವರು ನುಡಿದರು. ಇಡೀ ಜಗತ್ತು ಭಾರತೀಯ ಸಂಸ್ಕೃತಿಯತ್ತ ತಿರುಗಿ ನೋಡುತ್ತಿದೆ. ನನ್ನನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ್ದಕ್ಕೆ ನಿಮಗೆ ಅಭಾರಿಯಾಗಿದ್ದೇನೆ.  ಶಿಕ್ಷಣ ಮತ್ತು ನೈತಿಕತೆ ನೆಲೆಗಟ್ಟಿನಲ್ಲಿ ಸಮಾನತೆಯ ಸಮಾಜವನ್ನು ನಿರ್ಮಿಸಬೇಕು ಎಂದು ರಾಮನಾಥ ಕೋವಿಂದ ಹೇಳಿದರು. ‘ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ಆದರೆ, ಹೆಚ್ಚು ಸಾಧನೆ ಮಾಡಲು ಪ್ರಯತ್ನಿಸುವ ಮೂಲಕ ಮತ್ತಷ್ಟು ಉತ್ತಮಗೊಳಿಸಲು ವೇಗವಾಗಿ ಕೆಲಸ ಮಾಡಬೇಕಿದೆ. ಇದು ಭಗವಾನ್‌ ಬುದ್ಧನ ಶಾಂತಿಯುತ ‌ಭೂಮಿ. ಶಾಂತಿ ಮತ್ತು ಪರಿಸರ ಸಮತೋಲನಕ್ಕೆ ಒತ್ತು ನೀಡಬೇಕು ಎಂದು ಹೇಳಿದರು
2017: ಚೆನ್ನೈ : ತಮಿಳು ನಾಡಿನಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಕಚೇರಿಗಳಲ್ಲಿ  ವಂದೇ
ಮಾತರಂ ರಾಷ್ಟ್ರ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಅಥವಾ ನುಡಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಆದೇಶಿಸಿತು. ''ಈ ದೇಶದ ಎಲ್ಲ ಪ್ರಜೆಗಳಲ್ಲಿ ದೇಶ ಪ್ರೇಮ ಇರಲೇಬೇಕಾದ ಆವಶ್ಯಕ ಗುಣವಾಗಿದೆ. ಆದುದರಿಂದ ಎಲ್ಲ ಶಾಲೆ, ಕಾಲೇಜು, ವಿದ್ಯಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಪ್ರತೀ ಸೋಮವಾರ ಅಥವಾ ಶುಕ್ರವಾರ, ಕನಿಷ್ಠ ವಾರಕ್ಕೊಮ್ಮೆ ವಂದೇ ಮಾತರಂ ರಾಷ್ಟ್ರಗೀತೆಯನ್ನು ಹಾಡಬೇಕು ಇಲ್ಲವೇ ನುಡಿಸಬೇಕು; ಅದೇ ರೀತಿ ಎಲ್ಲ ಸರಕಾರಿ ಕಚೇರಿಗಳು, ಖಾಸಗಿ ಕಂಪೆನಿಗಳು, ಕಾರ್ಖಾನೆಗಳು, ಕೈಗಾರಿಕೆಗಳು ಕನಿಷ್ಠ ತಿಂಗಳಿಗೊಮ್ಮೆ ವಂದೇ ಮಾತರಂ ಹಾಡಬೇಕು ಅಥವಾ ನುಡಿಸಬೇಕು'' ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿತು. ಹಾಗಿದ್ದರೂ ಯಾರಿಗಾದರೂ ರಾಷ್ಟ್ರಗೀತೆಯನ್ನು ಹಾಡುವುದಕ್ಕೆ ತೊಂದರೆ ಇದ್ದಲ್ಲಿ ಮತ್ತು ಅದಕ್ಕೆ ಸರಿಯಾದ ಕಾರಣಗಳಿದ್ದಲ್ಲಿ ಆತನನ್ನು ಬಲವಂತ ಪಡಿಸಬಾರದು ಎಂದು ಹೈಕೋರ್ಟ್‌ ಆದೇಶ ಹೇಳಿತು. ಶಾಲೆಗಳಲ್ಲಿ  ವಂದೇ ಮಾತರಂ ಹಾಡುವುದನ್ನು ಕಡ್ಡಾಯ ಮಾಡುವ ನಿಟ್ಟಿನಲ್ಲಿ ಕೇಂದ್ರಕ್ಕೆ ಆದೇಶ ನೀಡಬೇಕೆಂದು ಕೋರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಆಗಸ್ಟ್‌ 25ಕ್ಕೆ ನಿಗದಿಸಿದೆ. 
2017: ಅಹಮದಾಬಾದ್: ಗುಜರಾತಿನ ಉತ್ತರ ಮತ್ತು ಕೇಂದ್ರ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಗೆ ಪ್ರವಾಹ
ಉಂಟಾಗಿದ್ದು, ಪರಸ್ಥಿತಿ ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿದರು. ಬೆಳಿಗ್ಗೆ ದೆಹಲಿಯಲ್ಲಿ ಸಂಸತ್‌ನಲ್ಲಿ ನಡೆದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಅವರು, ಮಧ್ಯಾಹ್ನದ ನಂತರ ವೈಮಾನಿಕ ಸಮೀಕ್ಷೆಗೆ ಅಹಮದಾಬಾದ್‌ಗೆ ಬಂದಿಳಿದರು. ಸಮೀಕ್ಷೆಗೂ ಮುನ್ನ ಮೋದಿ ಅವರು ಪ್ರವಾಹ ಸ್ಥಿತಿ ಕುರಿತು ಉನ್ನತ ಅಧಿಕಾರಿಗಳ ಸಭೆ ನಡೆಸಿದರು.
2017: ನವದೆಹಲಿ:  ಸಿಕ್ಕಿಂ ಗಡಿಯ ಡೋಕ್ಲಾಮಮಿನಲ್ಲಿ ಭಾರತ- ಚೀನ ಸೇನಾ ಮುಖಾಮುಖೀ ಕಳೆದ ಎರಡು
ತಿಂಗಳಿಂದ ಸಾಗಿದ್ದು ಸಮರ ಬೆದರಿಕೆ ಎದುರಾಗಿರುವ ನಡುವೆಯೇ ಭಾರತದ ಸೇನಾ ಉಪ ಮುಖ್ಯಸ್ಥ ಶರತ್‌ ಚಂದ್‌ ಅವರು "ಮುಂಬರುವ ವರ್ಷಗಳಲ್ಲಿ ಚೀನ ಭಾರತಕ್ಕೆ ದೊಡ್ಡ ಬೆದರಿಕೆಯಾಗಲಿದೆ' ಎಂದು ಹೇಳಿದರು. ಸೇನೆಯ ಮಾಸ್ಟರ್‌ ಜನರಲ್‌ ಆರ್ಡ್‌ನೆನ್ಸ್‌ ಆ್ಯಂಡ್‌ ಕಾನ್‌ಫೆಡರೇಶನ್‌ ಆಪ್‌ ಇಂಡಿಯನ್‌ ಇಂಡಸ್ಟ್ರಿ ಏರ್ಪಡಿಸಿದ ಜಂಟಿ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಸೇನಾ ಉಪ ಮುಖ್ಯಸ್ಥ ಶರತ್‌ ಚಂದ್‌ ಅವರು ಎಲ್‌ಓಸಿಯಲ್ಲಿನ ಭಾರತೀಯ ಶಾಲೆಯನ್ನು ಗುರಿ ಇರಿಸಿಕೊಂಡು ಪಾಕ್‌ ಸೇನೆ ಶೆ‌ಲ್‌ ದಾಳಿ ನಡೆಸುತ್ತಿರುವುದು ಅತ್ಯಂತ ಹೇಯ ಹಾಗೂ ಹೇಡಿತನದ ಕೃತ್ಯ ಎಂದು ಹೇಳಿದರು. ನಮ್ಮ ಉತ್ತರ ದಿಕ್ಕಿನಲ್ಲಿ ಚೀನ ಇದೆ; ಅದರ ಭೂಭಾಗ ಅತ್ಯಂತ ದೊಡ್ಡದಿದೆ. ಅದರ ಸಂಪನ್ಮೂಲಗಳು ಅತ್ಯಪಾರ ಇವೆ; ಅದರ ಸೇನೆ ಕೂಡ ಬೃಹತ್‌ ಗಾತ್ರದಲ್ಲಿದೆ. ನಮ್ಮ ಮತ್ತು ಅವರ ನಡುವೆ ಹಿಮಾಲಯ ಪರ್ವತ ಇದ್ದರೂ ಚೀನ ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಬಲು ದೊಡ್ಡ ಬೆದರಿಕೆಯಾಗಲಿದೆ. ಸೈನ್ನೀಕರಣದಲ್ಲಿ ಚೀನ ಈಗ ಅಮೆರಿಕದ ಜತೆಗೆ ಸ್ಪರ್ಧೆ ನಡೆಸುವಷ್ಟು ಮುಂದಕ್ಕೆ ಸಾಗಿದೆ. ಮಾತ್ರವಲ್ಲದೆ ಚೀನ ವಿಶ್ವದ ಎರಡನೇ ಬೃಹತ್‌ ಆರ್ಥಿಕ ಶಕ್ತಿಯಾಗಿದೆ; ಬೇಗನೆ ಅದು ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ಅವರು ನುಡಿದರು.



2017: ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ವಿಜ್ಞಾನಿ, ಪದ್ಮ ಭೂಷಣ,
ಪದ್ಮ ವಿಭೂಷಣ ಯಶ್‌ಪಾಲ್(90) ಅವರು ಉತ್ತರಪ್ರದೇಶದ ನೋಯ್ಡಾದಲ್ಲಿ ಹಿಂದಿನ ದಿನ 24 ಜುಲೈ 2017ರ ರಾತ್ರಿ ನಿಧನರಾದರು. ಸೂರ್ಯ ಕಿರಣಗಳ ಅಧ್ಯಯನ, ಭೌತಶಾಸ್ತ್ರ, ಖಗೋಳ ವಿಜ್ಞಾನ ಅಧ್ಯಯನದ ಮೂಲಕ ಅವರು ವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದರು. ಕೊನೆಯವರೆಗೂ ವಿಜ್ಞಾನವನ್ನೇ ಉಸಿರಾಗಿಸಿಕೊಂಡ ಯಶ್‌ ಪಾಲ್‌ ವಿಜ್ಞಾನಿ ಮಾತ್ರವಾಗಿರಲಿಲ್ಲ. ಸಮಾಜಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಜ್ಞಾನದ ನಿಧಿಯಾಗಿದ್ದರು. ‘ಯಶ್‌ ಪಾಲ್‌ ಸಿಂಗ್‌’  ಅವರು ಸೂರ್ಯನಿಂದ ಹೊರಹೊಮ್ಮವ ವಿಶ್ವ ಕಿರಣಗಳ (ಕಾಸ್ಮಿಕ್ ರೇಸ್‌) ಅಧ್ಯಯನ ಕ್ಷೇತ್ರದಲ್ಲಿ  ಬಹುದೊಡ್ಡ ಹೆಸರು. ಹಾಗಂತ  ಅವರ ಕಾರ್ಯಕ್ಷೇತ್ರ  ಪ್ರಯೋಗಾಲಯದ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಲಿಲ್ಲ. ಪ್ರಯೋಗಾಲಯಗಳಿಗಿಂತ  ಸದಾ ಜನರ ಮಧ್ಯೆ ಇರುತ್ತಿದ್ದ ಅಪರೂಪದ ವಿಜ್ಞಾನಿ ಅವರಾಗಿದ್ದರು. ವಿಜ್ಞಾನಿ, ಶಿಕ್ಷಣ ತಜ್ಞ,  ಉತ್ತಮ ಆಡಳಿಗಾರ, ಚತುರ ಮಾತುಗಾರ, ಸದಾ ಸಮಾಜದ ಒಳಿತಿಗಾಗಿ ತುಡಿಯುತ್ತಿದ್ದ  ಬಹುಮುಖ ವ್ಯಕ್ತಿತ್ವದ ಸಂಗಮದಂತಿದ್ದ ಅವರು ನೇರ ನಡೆ, ನುಡಿಗಳಿಗಾಗಿ ಹೆಸರಾಗಿದ್ದರು. ಭಾರತದ ವಿಜ್ಞಾನ ಕ್ಷೇತ್ರದ ಪಿತಾಮಹರಾದ  ಡಾ. ಹೋಮಿ ಜಹಾಂಗೀರ್‌ ಭಾಭಾ, ಡಾ. ವಿಕ್ರಂ ಸಾರಾಭಾಯ್‌, ಸತೀಶ್‌ ಧವನ್‌ ಅವರಂತಹ ಮೇರು ವ್ಯಕ್ತಿಗಳ ಒಡನಾಟದಿಂದ ಅವರಿಗೆ ಈ ಅಪೂರ್ವ ವ್ಯಕ್ತಿತ್ವ ದಕ್ಕಿತ್ತು. ಯಶ್‌ ಪಾಲ್‌ ಅವರ ಪೂರ್ಣ ಹೆಸರು ಯಶ್‌ ಪಾಲ್‌ ಸಿಂಗ್‌. ಆದರೆ, ಅವರೆಂದೂ ತಮ್ಮ ಹೆಸರಿನ ಮುಂದೆ  ಸಿಂಗ್‌ ಎಂದು ಬರೆದುಕೊಳ್ಳಲಿಲ್ಲ. ಅದು ಅವರಿಗೂ ಇಷ್ಟವೂ ಇರಲಿಲ್ಲ.ಯಶ್‌ ಪಾಲ್‌ ಹುಟ್ಟಿದ್ದು (1926) ಝಾಂಗ್‌ ಎಂಬ ಹಳ್ಳಿಯಲ್ಲಿ. ಅದು ಈಗ ಪಾಕಿಸ್ತಾನದಲ್ಲಿದೆ.  

2017: ಬೆಂಗಳೂರು: ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿರುವ ಡಾ.ಜಿ. ಪರಮೇಶ್ವರ್‌ ಅವರು ತೆರವುಗೊಳಿಸಿದ್ದ

ಗೃಹ ಖಾತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅರಣ್ಯ ಸಚಿವ ರಮಾನಾಥ ರೈ ಅವರಿಗೆ  ನೀಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು.  ಈ ಸಂಬಂಧ ಸಚಿವ ರಮಾನಾಥ ರೈ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಗೃಹ ಖಾತೆಯ ಜವಾಬ್ದಾರಿ ನೀಡುವ ಕುರಿತು  ಚರ್ಚಿಸಿದರು.  ಹೈಕಮಾಂಡ್‌ ಸೂಚನೆಯನ್ನೂ ರೈ ಅವರಿಗೆ ಮನವರಿಕೆ ಮಾಡಿಕೊಟ್ಟರು. ಚರ್ಚೆಯ ಬಳಿಕ ರಮಾನಾಥ ರೈ ಗೃಹ ಖಾತೆಯ ಜವಾಬ್ದಾರಿ ಹೊರಲು ಸಹಮತಿ ವ್ಯಕ್ತಪಡಿಸಿದರು ಎಂದು ಸಿಎಂ ಆಪ್ತ ಮೂಲಗಳು ತಿಳಿಸಿದವು.



2016: ನವದೆಹಲಿಗರ್ಭ ಧರಿಸಿದ 24 ವಾರಗಳ ಬಳಿಕ ಗರ್ಭಪಾತಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತು. ಗರ್ಭಸ್ಥ ಶಿಶು ಅಸಹಜ ಬೆಳವಣಿಗೆ ಹೊಂದಿರುವ ಹಿನ್ನೆಲೆಯಲ್ಲಿ ಭ್ರೂಣ ತೆಗೆಸಲು ಅವಕಾಶ ಕೋರಿ ಅತ್ಯಾಚಾರ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಆದೇಶ ನೀಡಿತು. ಸಂತ್ರಸ್ತ ಮಹಿಳೆಯ ವೈದ್ಯಕೀಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಮುಂಬೈನ ಕಿಂಗ್ಎಡ್ವರ್ಡ್ ಮೆಮೊರಿಯಲ್ ಆಸ್ಪತ್ರೆಗೆ ಸುಪ್ರೀಂಕೋರ್ಟ್ ಸೂಚಿಸಿತ್ತು. ತಪಾಸಣೆ ನಡೆಸಿದ ವೈದ್ಯರು ಗರ್ಭಪಾತದಿಂದ ಸಂತ್ರಸ್ತ ಮಹಿಳೆಗೆ ಯಾವುದೇ ತೊಂದರೆಯಾಗುವುದಿಲ್ಲ. ವಿಕೃತ ಭ್ರೂಣವನ್ನು
ಬೆಳೆಯಲು ಬಿಟ್ಟರೆ ತಾಯಿಗೆ ಅಪಾಯವಿದೆ ಎಂದು ವರದಿ ನೀಡಿದರು. ಇದನ್ನು ಆಧರಿಸಿ ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್ ಮತ್ತು ಅರುಣ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಗರ್ಭಪಾತಕ್ಕೆ ಅನುಮತಿ ನೀಡಿ ಆದೇಶ ನೀಡಿತು ಪ್ರಕರಣದ ಹಿನ್ನೆಲೆ: ಮುಂಬೈನ ಮಹಿಳೆಯನ್ನು ವಿವಾಹವಾಗುವುದಾಗಿ ನಂಬಿಸಿದ ಗೆಳೆಯ ಅತ್ಯಾಚಾರ ಎಸಗಿದ್ದ. ಗರ್ಭದಲ್ಲಿರುವ ಮಗುವಿಗೆ ಜನ್ಮ ನೀಡಿ ಸಲಹಲು ಸಂತ್ರಸ್ತೆ ನಿರ್ಧರಿಸಿದ್ದಳು. ಆದರೆ 20 ವಾರಗಳ ಬಳಿಕ ತಪಾಸಣೆ ನಡೆಸಿದಾಗ ಭ್ರೂಣಕ್ಕೆ ಮೂಳೆ, ಪಿತ್ತಜನಕಾಂಗಗಳು ಇಲ್ಲ ಎಂಬುದು ಪತ್ತೆಯಾಗಿತ್ತು. ಗುಣಪಡಿಸಲಾಗದ ಸಮಸ್ಯೆಯಾದ್ದರಿಂದ ಅಕಸ್ಮಾತ್ ಮಗು ಜನಿಸಿದರೂ ಬದುಕುಳಿಯುವುದಿಲ್ಲ. ಜತೆಗೆ ಪ್ರಸವದ ಸನ್ನಿವೇಶದಲ್ಲಿ ಮಹಿಳೆಯ ಜೀವಕ್ಕೂ ಅಪಾಯವಿದೆ ಎಂದು ವೈದ್ಯರು ಹೇಳಿದ್ದರು. ವಿಚಾರಣೆ ಮುಂದುವರಿಕೆ: ಎಂಟಿಪಿ ಕಾಯ್ದೆ ಪರಿಚ್ಛೇದ 3ಬಿ ರದ್ದತಿ ಅಥವಾ ತಿದ್ದುಪಡಿ ಬಗ್ಗೆ ವಿಚಾರಣೆ ಮುಂದುವರಿಸುವುದಾಗಿ ಸುಪ್ರೀಂಕೋರ್ಟ್ ಹೇಳಿತು. ಗರ್ಭಪಾತ ಅವಧಿ ಮಿತಿಯನ್ನು 20ರಿಂದ 24 ವಾರಗಳಿಗೆ ಏರಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ಸಂಬಂಧ ಪರಾಮರ್ಶೆ ನಡೆಯುತ್ತಿದೆ. ಸುಪ್ರೀಂಕೋರ್ಟ್ ನಿರ್ಧಾರದಿಂದ ಸರ್ಕಾರದ ಪ್ರಕ್ರಿಯೆ ಮತ್ತಷ್ಟು ಚುರುಕು ಪಡೆದುಕೊಳ್ಳುವ ಸಾಧ್ಯತೆಯಿದೆ. ಕಾಯ್ದೆ ಏನು ಹೇಳುತ್ತದೆ? ವೈದ್ಯಕೀಯ ಗರ್ಭಪಾತ (ಮೆಡಿಕಲ್ ಟರ್ವಿುನೇಶನ್ ಆಫ್ ಪ್ರೆಗ್ನೆನ್ಸಿ) ಕಾಯ್ದೆಯ 3(2)(ಬಿ) ಪರಿಚ್ಛೇದದ ಪ್ರಕಾರ, ಗರ್ಭ ಧರಿಸಿದ 20 ವಾರಗಳ ಬಳಿಕ ಯಾವುದೇ ಕಾರಣಕ್ಕೂ ಗರ್ಭಪಾತ ಮಾಡುವಂತಿಲ್ಲ. ಆದರೆ ಮಗು ಅಸಹಜ ಬೆಳವಣಿಗೆ ಹೊಂದಿದ್ದರೆ ಅಥವಾ ತಾಯಿಯ ಜೀವಕ್ಕೆ ಗಂಭೀರ ಅಪಾಯವಿದೆ ಎಂದಾದರೆ 20 ವಾರಗಳ ಬಳಿಕವೂ ಕಾಯ್ದೆಯ 5ನೇ ಪರಿಚ್ಛೇದದಡಿ ಗರ್ಭಪಾತಕ್ಕೆ ಅವಕಾಶ ನೀಡಬಹುದು. ಸಂತ್ರಸ್ತೆಯ ವಾದವೇನು? ಭ್ರೂಣ ಅಸಹಜ ಬೆಳವಣಿಗೆ ಹೊಂದಿದೆ ಎಂಬುದನ್ನು 20 ವಾರದ ಬಳಿಕವಷ್ಟೇ ವೈದ್ಯರು ತಿಳಿಸಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಮಗುವಿನ ಬೆಳವಣಿಗೆಯನ್ನು 20 ವಾರಗಳ ನಂತರವಷ್ಟೇ ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಹುಟ್ಟುವ ಮಗು ಅಸಹಜವಾಗಿರಲಿದೆ ಎಂಬ ವಿಷಯದಿಂದ ತನ್ನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ತೊಂದರೆಯಾಗಿದೆ. 1971ರಲ್ಲಿ ಕಾನೂನು ರಚನೆಯಾಗಿದ್ದು, ಈಗ ವೈದ್ಯಕೀಯ ಸೌಲಭ್ಯಗಳಲ್ಲಿ ಭಾರೀ ಬದಲಾವಣೆಯಾಗಿದೆ. 26 ವಾರಗಳವರೆಗೂ ಸುರಕ್ಷಿತ ಗರ್ಭಪಾತ ನಡೆಸಲು ಈಗ ಸಾಧ್ಯವಿದೆ. ಹೀಗಾಗಿ ಎಂಟಿಪಿ ಕಾಯ್ದೆಯ 5ನೇ ಪರಿಚ್ಛೇದದಡಿ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಅತ್ಯಾಚಾರ ಸಂತ್ರಸ್ತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಳು.
2016: ನವದೆಹಲಿ: ಸಂಸತ್ ಭದ್ರತೆ ಕುರಿತು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು ವಿವಾದ ಸೃಷ್ಟಿಸಿದ್ದ ಆಮ್ ಆದ್ಮಿ ಪಕ್ಷದ (ಆಪ್)  ಸಂಸತ್ ಸದಸ್ಯ ಭಗವಂತ ಮಾನ್ ವಿರುದ್ಧ ತನಿಖೆ ನಡೆಸಲು ಸ್ಪೀಕರ್ ಸುಮಿತ್ರಾ ಮಹಾಜನ್ ಸಮಿತಿಯೊಂದನ್ನು ರಚಿಸಿದರು. ಸಮಿತಿ ವರದಿ ನೀಡುವವರೆಗೂ ಸಂಸತ್ ಕಲಾಪಗಳಲ್ಲಿ ಪಾಲ್ಗೊಳ್ಳದಂತೆ ಅವರು ಮಾನ್ಗೆ ನಿರ್ಬಂಧ ವಿಧಿಸಿದರು. 9 ಸದಸ್ಯರ ಸಮಿತಿ ಆಗಸ್ಟ್ 3 ಒಳಗಾಗಿ ವರದಿ ಸಲ್ಲಿಸುವ ನಿರೀಕ್ಷೆ ಇದೆ. ತನಿಖೆ ಮುಗಿಯುವವರೆಗೆ ಅಧಿವೇಶನದಲ್ಲಿ ಭಾಗವಹಿಸದಂತೆ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್, ಸಂಸದ ಭಗವಂತ್ ಮಾನ್ಗೆ ಸೂಚನೆ ನೀಡಿದರು. ಏನಿದು ಘಟನೆ?: ಸಂಸದ ಭಗವಂತ ಮಾನ್ ನವದೆಹಲಿಯ ನಿವಾಸದಿಂದ ಹೊರಟು ಸಂಸತ್ ಒಳಗೆ ಪ್ರವೇಶಿಸುವ ವಿಡಿಯೋ ಮಾಡಿ, ಕುರಿತು ವೀಕ್ಷಕ ವಿವರಣೆಯನ್ನೂ ನೀಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು. ಸಂಸತ್ ಭದ್ರತಾ ವ್ಯವಸ್ಥೆ ದೃಶ್ಯವೂ ಇದರಲ್ಲಿತ್ತು. ಹೀಗಾಗಿ ಸಂಸತ್ತಿನ ಭದ್ರತೆಗೆ ಧಕ್ಕೆಯಾಗಿದೆ ಎಂದು ಹಲವು ಸಂಸದರು ಆರೋಪಿಸಿದ್ದರು. ಸಂಸತ್ನಲ್ಲೂ ಇದು ಗದ್ದಲಕ್ಕೆ ಕಾರಣವಾಗಿತ್ತು. ಸಂಸದ ಮಾನ್ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಂಸದರು ಆಗ್ರಹಿಸಿದ್ದರು. ಸ್ಪೀಕರ್ ಭೇಟಿಯಾಗಿದ್ದ ಮಾನ್, ಮುಂದೆ ಇಂಥ ತಪ್ಪು ಮಾಡುವುದಿಲ್ಲ ಎಂದು ಕ್ಷಮೆ ಕೋರಿದ್ದರು. ಇದನ್ನು ತಿರಸ್ಕರಿಸಿರುವ ಸ್ಪೀಕರ್, ಘಟನೆ ಅತ್ಯಂತ ಗಂಭೀರ ವಿಚಾರ ಎಂದಿದ್ದಾರೆ.


2016: ಜೈಪುರಕೃಷ್ಣಮೃಗ ಹಾಗೂ ಜಿಂಕೆ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿತು. ಇದರಿಂದ ಜೈಲು ಭೀತಿಗೆ ಗುರಿಯಾಗಿದ್ದ ನಟ ಸಲ್ಮಾನ್ ನಿರಾಳರಾದರು. ಇದರೊಂದಿಗೆ ಹಿಟ್ ಆಂಡ್ ರನ್ ಪ್ರಕರಣದ ನಂತರ ಮತ್ತೊಂದು ಪ್ರಮುಖ ಪ್ರಕರಣದಲ್ಲಿ ಸಲ್ಮಾನ್ ಖುಲಾಸೆಗೊಂಡಂತಾಯಿತು. ಕೃಷ್ಣಮೃಗದ ದೇಹದಲ್ಲಿ ಸಿಕ್ಕ ಗುಂಡುಗಳು ಸಲ್ಮಾನ್ ಲೈಸೆನ್ಸ್ ಹೊಂದಿದ್ದ ಬಂದೂಕಿನಿಂದ ಸಿಡಿದಿರಲಿಲ್ಲ ಎಂದು ನ್ಯಾ. ನಿರ್ಮಲ್ಜಿತ್ ಕೌರ್ ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ 12 ಜನರು ಖುಲಾಸೆಗೊಂಡಿದ್ದಾರೆ. ಹೀಗಾಗಿ ಸಲ್ಮಾನ್ ವಿರುದ್ಧದ ಆರೋಪದಲ್ಲೂ ಹುರುಳಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಖುಲಾಸೆಗೆ ಕಾರಣವೇನು? ಪ್ರಕರಣದ ಪ್ರಮುಖ ಸಾಕ್ಷಿ ಎನ್ನಲಾದ ಜೀಪುಚಾಲಕ ಹರೀಶು ದುಲಾನಿಯನ್ನು ಇದುವರೆಗೂ ಪಾಟಿ ಸವಾಲಿಗೂ ಒಳಪಡಿಸಿಲ್ಲ. ಸಾಂರ್ದಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಕೆಳನ್ಯಾಯಾಲಯ ತೀರ್ಪು ನೀಡಿದೆ. ಆದರೆ ಪ್ರತ್ಯಕ್ಷ ಸಾಕ್ಷಿಯಾಗಲಿ, ಪೂರಕ ದಾಖಲೆ ಹಾಜರುಪಡಿಸಿಲ್ಲ ಎಂದು ಸಲ್ಮಾನ್ ಪರ ವಕೀಲ ಮಹೇಶ್ ಬೋರಾ ವಾದ ಮಂಡಿಸಿದ್ದರು. ಪ್ರಕರಣವೇನು? 1998ರಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣ ವೇಳೆ ಜೋಧಪುರದ ಹೊರವಲಯದ ಭಾವದ್ ರಕ್ಷಿತಾರಣ್ಯದಲ್ಲಿ ಸೆ. 26 ಹಾಗೂ 27ರಂದು ಎರಡು ಕೃಷ್ಣಮೃಗ ಹಾಗೂ ಸೆ.2 8-29ರಂದು ಗೊದ್ದಾ ಫಾಮರ್ನಲ್ಲಿ ಒಂದು ಜಿಂಕೆಯನ್ನು ಹತೈಗೈದ ಪ್ರಕರಣಗಳಲ್ಲಿ ಸಲ್ಮಾನ್ ವಿರುದ್ಧ ದೂರು ದಾಖಲಾಗಿತ್ತು. ಜೋದ್ಪುರದ ಲುನಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿತ್ತು. ಸಲ್ಮಾನ್ ಕೃಷ್ಣಮೃಗ ಬೇಟೆಗೆ ತೆರಳಿದ್ದ ವೇಳೆ ನಟರಾದ ಸೈಫ್ ಅಲಿಖಾನ್, ಅಮೃತಾಸಿಂಗ್, ಟಬು, ಸೋನಾಲಿ ಬೇಂದ್ರೆ ಕೂಡ ಜತೆಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯವು 2006ರಲ್ಲಿ ಎರಡು ಪ್ರಕರಣದಲ್ಲಿ ಕ್ರಮವಾಗಿ ಒಂದು ವರ್ಷ ಹಾಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಒಂದು ವಾರ ಜೈಲು ಶಿಕ್ಷೆ ಅನುಭವಿಸಿದ್ದ ಸಲ್ಮಾನ್ ಜಾಮೀನಿನ ಮೆಲೆ ಹೊರಬಂದಿದ್ದರು. ಶಿಕ್ಷೆ ಜಾರಿಯನ್ನು ಪ್ರಶ್ನಿಸಿ ಸಲ್ಮಾನ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು


2016: ಮುಂಬೈ: ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಮಾಜಿ ಫುಟ್ಬಾಲ್ ಆಟಗಾರ ಮರಿಟೊ ಗ್ರೇಸಿಯಸ್ ನಿಧನರಾದರು. 75 ಹರೆಯದ ಗ್ರೇಸಿಯಸ್ ಅವರಿಗೆ ಹೃದಯಾಘಾತವಾದ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲಮಹಾರಾಷ್ಟ್ರ ಹಾಗೂ ಟಾಟಾ ಸ್ಪೋರ್ಟ್ಸ್ ಕ್ಲಬ್ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದ ಗ್ರೇಸಿಯಸ್, ತಂಡದ ಪ್ರಮುಖ ಸ್ಟ್ರೈಕರ್ ಆಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲ ರಾಷ್ಟ್ರೀಯ ತಂಡದಲ್ಲಿ ಕೂಡ ಸ್ಥಾನ ಪಡೆದ ಆಟಗಾರ ಹಾಂಕಾಂಗ್ ವಿರುದ್ದದ ಸರಣಿಯಲ್ಲಿ ಹ್ಯಾಟ್ರಿಕ್ ಗೋಲುಗಳಿಸಿದ್ದರು. ಇದರಿಂದಾಗಿ ಸರಣಿಯಲ್ಲಿ ಭಾರತ 4-0 ಅಂತರದಲ್ಲಿ ಜಯ ದಾಖಲಿಸಿತ್ತು. 1978-79ರಲ್ಲಿ ಉತ್ತಮ ಪ್ರದರ್ಶನ ನೀಡಿದ ಗ್ರೇಸಿಯಸ್, ತಮ್ಮ ನಾಯಕತ್ವದಲ್ಲಿ ರೋವರ್ಸ್ ಕಪ್, ಬಾಂದೊಡ್ಕರ್ ಟ್ರೋಪಿ, ಹಾರ್ವಡ್ ಲೀಗ್, ನಾಡಕರ್ಣಿ ಕಪ್ ಸೇರದಂತೆ ಹಲವು ಪ್ರಶಸ್ತಿಗಳನ್ನು ಜಯಿಸಿದ ಸಾಧನೆ ಮಾಡಿದ್ದರು.

2016: ನವದೆಹಲಿ: ಎರಡನೇ ಹಂತದಲ್ಲಿ ನಿರ್ಮಾಣವಾದ ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು ಹಿಂದಿನ ರಾಷ್ಟ್ರಪತಿಗಳು, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ವೀಕ್ಷಿಸಿದ ಪ್ರಧಾನಿ ಪುಳಕಿತರಾದರು. ಮೋದಿ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಾಥ್ ನೀಡಿದರು. ಹತ್ತೊಂಭತ್ತು ತಿಂಗಳಿನಲ್ಲಿ ನಡೆದ ವಸ್ತು ಸಂಗ್ರಹಾಲಯದ ಕಾಮಗಾರಿಗೆ ಬರೋಬ್ಬರಿ 80 ಕೋಟಿ ರೂ. ವೆಚ್ಚವಾಗಿತ್ತು. ದೇಶದ ಮೊದಲ ಭೂಗತ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಯಿತು. ಅಕ್ಟೋಬರ್ 2ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಪ್ರವೇಶ ಶುಲ್ಕ ಎಂಭತ್ತು ರೂ. ಆಗಿದ್ದು, ಹ್ಯಾಂಡ್ ಶಾಡೋ ಶೋ, ಮಹಾತ್ಮಾ ಗಾಂಧೀಜಿ ಅವರ ಪಾದದ ಅಚ್ಚುಗಳು, ರಾಷ್ಟ್ರಪತಿಗಳ ವಾಹನ, ಥ್ರೀಡಿ ವೀಕ್ಷಣೆ ಸೇರಿದಂತೆ ಹಲವು ಅಚ್ಚರಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.


2016: ಮುಂಬೈ: 26/11 ಮುಂಬೈ ತಾಜ್ ಮೇಲಿನ ಉಗ್ರರ ದಾಳಿಯನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 4 ಪೊಲೀಸ್ ಶ್ವಾನಗಳ ಪೈಕಿ ಇತ್ತೀಚೆಗೆ ನಿಧನವಾದ ನಾಯಿಟೈಗರ್ಅಗಲಿಕೆಯಿಂದ ತಂಡದ ಮತ್ತೊಂದು ನಾಯಿ ಸೀಸರ್ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಶ್ವಾನಗಳ ಉಸ್ತುವಾರಿ ವಹಿಸಿರುವ ಫಿಜಾ ತಿಳಿಸಿದರು. ಲಾಬ್ರಾಡಾರ್ ತಳಿಯ ನಾಯಿಗಳು ಫ್ರೆಂಡ್ಲಿ ಡಾಗ್ ಎಂದೆ ಖ್ಯಾತ.. ಅಷ್ಟೇ ಚುರುಕು ಕೂಡ, ಮುಂಬೈ ಉಗ್ರರ ಜಾಡನ್ನು ಪತ್ತೆ ಮಾಡುವಲ್ಲಿ ಪೊಲೀಸರಿಗೆ ಸಹಾಯ ಮಾಡಿದ್ದ 4 ಶ್ವಾನಗಳ ಪೈಕಿ ಮ್ಯಾಕ್ಸ್ ಮತ್ತು ಸುಲ್ತಾನ್ ಎಂಬ 2 ಶ್ವಾನಗಳು ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದವು. ಇದೀಗ ಎರಡು ದಿನಗಳ ಹಿಂದೆ ಸೀಸರ್ ಜತೆಗಿದ್ದ ಟೈಗರ್ ಕೂಡ ಸಾವನ್ನಪ್ಪಿತ್ತು, ಸಂಗಾತಿಯನ್ನು ಕಳೆದುಕೊಂಡ ದುಃಖದಲ್ಲಿ ಸೀಸರ್ ಕೂಡ ಆಸ್ಪತ್ರೆಗೆ ದಾಖಲಾಯಿತು. ಬಾಂಬ್ ನಿಷ್ಕ್ರಿಯ ದಳದೊಂದಿಗೆ ದೆಹಲಿಯಲ್ಲಿ ನಡೆದ ಕಾರ್ಯಾಚರಣೆಯಲ್ಲೂ ತಂಡದ ಶ್ವಾನಗಳು ಭಾಗಿಯಾಗಿದ್ದವು.


2008: ಮಳೆ ಬರುವ ಮತ್ತು ಮೋಡ ಕವಿದ ವಾತಾವರಣದಿಂದ ಮಂಕಾಗಿದ್ದ ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಒಂಬತ್ತು ಬಾಂಬ್ಗಳು ಸ್ಫೋಟಿಸಿ ನಾಗರಿಕರನ್ನು ಬೆಚ್ಚಿ ಬೀಳಿಸಿದವು. ಸರಣಿ ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಳಾಗಿ, ಎಂಟು ಮಂದಿ ಗಾಯಗೊಂಡರು.

2007: ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಈದಿನ ಮಧ್ಯಾಹ್ನ ಅಧಿಕಾರ ಸ್ವೀಕರಿಸುವ ಮೂಲಕ 72 ವರ್ಷದ ಪ್ರತಿಭಾ ಪಾಟೀಲ್ ನೂತನ ಇತಿಹಾಸ ಸೃಷ್ಟಿಸಿದರು. ದೆಹಲಿಯ ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ಹನ್ನೆರಡನೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಇಂಗ್ಲಿಷಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರತಿಭಾ ಅವರು ಎಪಿಜೆ ಅಬ್ದುಲ್ ಕಲಾಂ ಜೊತೆ ಕುರ್ಚಿ ಬದಲಾಯಿಸಿಕೊಂಡರು. ಈ ಸಂದರ್ಭದಲ್ಲಿ 21 ಕುಶಾಲುತೋಪುಗಳನ್ನು ಹಾರಿಸಲಾಯಿತು.

2007: ಭಾರತ- ಅಮೆರಿಕ ಪರಮಾಣು ಒಪ್ಪಂದವನ್ನು ಜಾರಿಗೆ ತರಲು ಅನುವಾಗುವ 123ನೇ ಒಡಂಬಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ರಾಜಕೀಯ ವ್ಯವಹಾರ ಮತ್ತು ಭದ್ರತೆ ಕುರಿತ ಸಂಪುಟ ಸಮಿತಿಗಳ ಜಂಟಿ ಸಭೆಯಲ್ಲಿ ಈ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಯಿತು. ಹಿಂದಿನ ವಾರ ವಾಷಿಂಗ್ಟನ್ನಿನಲ್ಲಿ ನಡೆದ ಉಭಯ ದೇಶಗಳ ಅಧಿಕಾರಿ ಮಟ್ಟದ ಉನ್ನತ ಸಭೆಯಲ್ಲಿ ಈ ಒಡಂಬಡಿಕೆಯ ಕರಡು ಸಿದ್ಧಪಡಿಸಲಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಸಚಿವರಾದ ಎ.ಕೆ. ಆಂಟನಿ, ಪ್ರಣವ್ ಮುಖರ್ಜಿ, ಶಿವರಾಜ ಪಾಟೀಲ್, ಪಿ. ಚಿದಂಬರಂ, ಶರದ್ ಪವಾರ್, ಲಾಲೂ ಪ್ರಸಾದ್ ಮತ್ತು ಟಿ.ಆರ್. ಬಾಲು ಭಾಗವಹಿಸಿದ್ದರು. ಇದರೊಂದಿಗೆ ಭಾರತ ಮತ್ತು ಅಮೆರಿಕ ನಡುವೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಮಾತುಕತೆಗಳಿಗೆ ತೆರೆ ಬಿದ್ದಿತು.

2007: ಬದುಕಿನಲ್ಲಿ ಸರಳವಾದದ್ದೆಲ್ಲವನ್ನೂ ಪ್ರೀತಿಸುವ `ಕ್ಷಿಪಣಿ ಮನುಷ್ಯ' ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದ ಎದುರು ಭವ್ಯವಾದ ಬೀಳ್ಕೊಡುಗೆ ನೀಡಲಾಯಿತು. 300 ಕೊಠಡಿಗಳ ಭವ್ಯ ಭವನದಲ್ಲಿ 5 ವರ್ಷ ಕಳೆದ ಕಲಾಂ ಈದಿನ ರಾತ್ರಿ ತಾತ್ಕಾಲಿಕವಾಗಿ ನೀಡಲಾದ 5 ಕೊಠಡಿಗಳ ಸೇನಾ ವಸತಿಗೃಹದಲ್ಲಿ ತಂಗಿದರು. ಅವರ ಕುಟುಂಬದ ನಿಕಟ ಸಂಬಂಧಿಗಳು ಈ ಸಂದರ್ಭದಲ್ಲಿ ಜೊತೆಗಿದ್ದರು.

2007: ಓಂಕಾರ ಆಶ್ರಮದ ಶಿವಪುರಿ ಸ್ವಾಮೀಜಿ (69) ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹರ್ತಿ ಗ್ರಾಮದ ಯಲ್ಲಪ್ಪ ಹಾಗೂ ತಾಯಮ್ಮ ಅವರ ಪುತ್ರರಾದ ಸ್ವಾಮೀಜಿ ಕೈಲಾಸ ಆಶ್ರಮದ ತಿರುಚ್ಚಿ ಶ್ರೀಗಳ ಶಿಷ್ಯರಾಗಿದ್ದರು. ಎಳೆಯ ವಯಸ್ಸಿ ನಿಂದಲೇ ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿವಹಿಸಿದ್ದರು. ಇವರು 1994ರಲ್ಲಿ ಒಂಕಾರ ಆಶ್ರಮ ಸ್ಥಾಪಿಸಿದ್ದರು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಈದಿನ ಮತ್ತೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಿತು. ತಲೆಮರೆಸಿಕೊಂಡ ಪ್ರಮುಖ ಆರೋಪಿ ಟೈಗರ್ ಮೆಮನ್ ನ ಆಪ್ತ ಸ್ನೇಹಿತನಾಗಿದ್ದ ಫಾರೂಕ್ ಪಾಲ್ವೆ ಗಲ್ಲು ಶಿಕ್ಷೆಗೆ ಒಳಗಾದ ವ್ಯಕ್ತಿ. ಈತ ದಾದರ್ನ ಶಿವಸೇನಾ ಭವನ ಮತ್ತು ನರಿಮನ್ ಪಾಯಿಂಟ್ ಬಳಿಯ ಏರ್ ಇಂಡಿಯಾ ಕಟ್ಟಡದಲ್ಲಿ ಬಾಂಬ್ ಇರಿಸಿದ್ದ. ಫಾರೂಕ್ ಅಡಗಿಸಿಟ್ಟ ಬಾಂಬ್ ಸ್ಫೋಟಗೊಂಡು 24 ಜನರು ಬಲಿಯಾಗಿ, 79 ಮಂದಿ ಗಾಯಗೊಂಡಿದ್ದರು. ಕಳೆದ ವರ್ಷದ ಅಕ್ಟೋಬರ್ 9 ರಂದು ಫಾರೂಕ್ ತಪ್ಪಿತಸ್ಥನೆಂದು ನ್ಯಾಯಾಲಯ ಘೋಷಿಸಿತ್ತು. ಟಾಡಾ ನ್ಯಾಯಾಲಯ ಈತನಿಗೆ 2 ಲಕ್ಷ 65 ಸಾವಿರ ರೂಪಾಯಿ ದಂಡ ತೆರುವಂತೆಯೂ ಆದೇಶಿಸಿತು.

2007: ದೇಶದ 12ನೇ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡ ಮರುಗಳಿಗೆಯಲ್ಲೇ ಸೈಬರ್ ಲೋಕದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನಪ್ರಿಯ ವೆಬ್ಸೈಟ್ ಮಾಯವಾಯಿತು. ಕಲಾಂ ಅವರು ಜನತೆಯ ರಾಷ್ಟ್ರಪತಿಯೆಂದೇ ಬಿಂಬಿತವಾಗಲು ಈ ವೆಬ್ಸೈಟ್ ಪ್ರಮುಖ ಪಾತ್ರವಹಿಸಿತ್ತು. ಈದಿನ ಮಧ್ಯಾಹ್ನ 2.30ಕ್ಕೆ ಸಂಸತ್ ಭವನದ ಸೆಂಟ್ರಲ್ ಹಾಲಿನಲ್ಲಿ ಪ್ರತಿಭಾ ಪಾಟೀಲ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಕಲಾಂ ಅವರು `ಮಾಜಿ'ಯಾದರು, ಜತೆಗೆ ಅವರ ವೆಬ್ಸೈಟ್ ಕೂಡ! ಮೂರು ವರ್ಷಗಳಲ್ಲಿ ಡಾ.ಕಲಾಂ ಅವರ ವೆಬ್ಸೈಟ್ ಎಷ್ಟೊಂದು ಜನಪ್ರಿಯವಾಗಿತ್ತೆಂದರೆ ಪ್ರತಿ ಸೆಕೆಂಡ್ಗೆ ಮೂರು ಜನರು ಈ ವೆಬ್ಸೈಟನ್ನು ನೋಡುತ್ತಿದ್ದರು. ಸರಾಸರಿ ದಿನವೊಂದಕ್ಕೆ 2.50 ಲಕ್ಷ ಜನ ಈ ವೆಬ್ಸೈಟಿಗೆ ಭೇಟಿ ನೀಡಿದ್ದಾರೆ. 2004ರ ಆಗಸ್ಟ್ ತಿಂಗಳಿನಲ್ಲಿ ಈ ವೆಬ್ಸೈಟನ್ನು ಮರು ವಿನ್ಯಾಸಗೊಳಿಸಿ ಸರ್ಕಾರಿ ಶೈಲಿಗಿಂತ ವಿಭಿನ್ನವಾದ ಆಕರ್ಷಕ ವೆಬ್ಸೈಟನ್ನಾಗಿ ಪರಿವರ್ತಿಸಲಾಗಿತ್ತು. ಕಲಾಂ ಅವರು ತಾವು ಭಾಗವಹಿಸಿದ ಪ್ರತಿಯೊಂದು ಸಮಾರಂಭದಲ್ಲೂ ಈ ವೆಬ್ಸೈಟ್ ವಿಳಾಸವನ್ನು ಬಹಿರಂಗವಾಗಿ ಸಾರುತ್ತಿದ್ದರು. ದಿನವೊಂದಕ್ಕೆ ಕನಿಷ್ಟ 500 ಇ-ಮೇಲ್ಗಳು ಕಲಾಂ ಅವರಿಗೆ ಬರುತ್ತಿದ್ದವು. ಬಹುತೇಕ ಮೇಲ್ ಗಳನ್ನು ಸ್ವತಃ ಕಲಾಂ ಅವರೇ ಓದಿ ಅವುಗಳಿಗೆ ಉತ್ತರಿಸುತ್ತಿದ್ದರು. ಕೆಲವರನ್ನು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವಂತೆ ಆಹ್ವಾನಿಸುತ್ತಿದ್ದರು. ಹೀಗಾಗಿಯೇ ರಾಷ್ಟ್ರಪತಿ ಭವನವನ್ನು ಸಾಮಾನ್ಯ ಜನತೆಗೆ ತೆರೆದ ಕೀರ್ತಿ ಅವರಿಗೆ ಲಭಿಸಿತು. ಈ ಸೈಟಿನಲ್ಲಿ ಡಾ. ಕಲಾಂ ಅವರ ಎಲ್ಲ ಭಾಷಣಗಳೂ ಸದಾ ಜನತೆಗೆ ಲಭ್ಯವಾಗುತ್ತಿದ್ದವು.

2007: ವಾಯವ್ಯ ಪಾಕಿಸ್ತಾನದ ಬನ್ನು ನಗರದ ಮೇಲೆ ಅತಿಕ್ರಮಣಕಾರರು ನಸುಕಿನ ಜಾವ ನಡೆಸಿದ ರಾಕೆಟ್ ದಾಳಿಯಲ್ಲಿ 10 ಜನ ಸತ್ತು, 35ಕ್ಕೂ ಹೆಚ್ಚು ಜನರು ಗಾಯಗೊಂಡರು. ನಾಲ್ಕು ರಾಕೆಟ್ಗಳು ಇಲ್ಲಿನ ಎರಡು ಮನೆ, ಮಸೀದಿ ಮತ್ತು ಅಂಗಡಿಯೊಂದರ ಮೇಲೆ ಅಪ್ಪಳಿಸಿದವು.

2007: ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತಕ್ಕೆ ಕನಿಷ್ಠ 60 ಮಂದಿ ಬಲಿಯಾದರು.

2007: ಆಸ್ಟ್ರೇಲಿಯಾದ ನಾರ್ ಫೋಕ್ ದ್ವೀಪದಲ್ಲಿ 2002ರಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಕಗ್ಗೊಲೆ ಮಾಡಿದ ಅಪರಾಧಕ್ಕಾಗಿ ನ್ಯೂಜಿಲೆಂಡಿನ ಅಡುಗೆ ಕೆಲಸಗಾರನಿಗೆ ಸ್ಥಳೀಯ ನ್ಯಾಯಾಲಯ ಕನಿಷ್ಠ 18 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಒಂದು ಕಾಲದಲ್ಲಿ ದಕ್ಷಿಣ ಪೆಸಿಫಿಕ್ನ ಬ್ರಿಟಿಷ್ ಕಾಲೋನಿಯಾಗಿದ್ದ ಈ ಪುಟ್ಟ ದ್ವೀಪದಲ್ಲಿ ಕಳೆದ 150 ವರ್ಷಗಳ ಅವಧಿಯಲ್ಲಿ ನಡೆದ ಮೊದಲ ಹತ್ಯೆ ಇದು. ಆರೋಪಿ ಗ್ಲೆನ್ ಮೆಕ್ ನೆಲ್ (29) ಎಂಬಾತನು ಜನೆಲ್ಲಿ ಪ್ಯಾಟನ್ (29) ಎಂಬ ಮಹಿಳೆಯನ್ನು ಅಟ್ಟಿಸಿಕೊಂಡು ಹೋಗಿ ಇರಿದು ಕೊಂದಿದ್ದ. ಆಗ ಪ್ಯಾಟನ್ ಮೂಳೆ ಮುರಿತ ಮತ್ತು ಹಲವು ಇರಿತ ಸೇರಿದಂತೆ 64 ಕಡೆ ತೀವ್ರತರ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಗ್ಲೆನ್ಗೆ ಗರಿಷ್ಠ 24 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು ನ್ಯಾಯಾಲಯ ಆದೇಶಿಸಿತು.

2007: ಖ್ಯಾತ ಚಿತ್ರನಟಿ ಜಯಮಾಲಾ (ಜಯಂತಿ) ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ `ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ' ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ. ಇವರಿಗೆ `ಕೆಂಪೇಗೌಡ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ಕೇಂದ್ರ ನಿರ್ದೇಶಕ ಎಂ.ಜಿ.ಕೃಷ್ಣನ್ ಮಾರ್ಗದರ್ಶಕರಾಗಿದ್ದರು. ಮಂಗಳೂರಿನಲ್ಲಿ ಜನಿಸಿದ ಜಯಮಾಲ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಖಜಾಂಚಿಯಾದ ಇವರು ತುಳು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ಅಭಿನಯಿಸಿರುವವರು. ಹದಿಮೂರು ವರ್ಷದವರಿದ್ದಾಗ `ಕಾಸ್ ದಾಯೆ ಕಂಡನೆ' ಎಂಬ ತುಳು ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿ, ಈವರೆಗೆ ದಕ್ಷಿಣ ಭಾರತ ಐದು ಭಾಷೆಗಳಲ್ಲಿ ಒಟ್ಟು 75 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಐದು ಚಿತ್ರಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಕೂಡಾ ಇವರದು.

2006: ಕೊಚ್ಚಿಯ ರಾ (ಕೇಂದ್ರ ಸರ್ಕಾರದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ) ಮುಖ್ಯಸ್ಥ ಎಚ್. ತಾರಕನ್ ಅವರು ವಿ.ಆರ್. ಕೃಷ್ಣ ಅಯ್ಯರ್ ಪ್ರಶಸ್ತಿಗೆ ಆಯ್ಕೆಯಾದರು.

2006: ಕೊಂಕಣಿ ಕೂಟಮ್ ಬಹರೇನ್ ನೀಡುವ `ಕೊಂಕಣಿ ಕೂಟಮ್ 2006' ಪ್ರಶಸ್ತಿಗೆ ಖ್ಯಾತ ಕೊಂಕಣಿ ಭಾಷಾ ಲೇಖಕ, ಕವಿ, ಸಾಹಿತಿ ಮೆಲ್ವಿನ್ ರಾಡ್ರಿಗಸ್ ಕುಲಶೇಕರ ಅವರು ಆಯ್ಕೆಯಾದರು.

2006: ಕರ್ನಾಟಕದ 865 ಗ್ರಾಮಗಳು ಹಾಗೂ ಬೆಳಗಾವಿ ಸೇರಿದಂತೆ ಆರು ಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕು ಎಂದು ಕೋರಿ ಅಲ್ಲಿನ ಉನ್ನತ ನಿಯೋಗವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿತು.

1970: ಕೇರಳದ ಮಾಜಿ ಮುಖ್ಯಮಂತ್ರಿ ಪಿಳ್ಳೈ ಎ. ಥಾನು ನಿಧನ.

1950: ಖ್ಯಾತ ಚಿಂತಕಿ, ಸ್ತ್ರೀವಾದಿ ಪ್ರಭಾವತಿ ಅವರು ವೆಂಕಟಸುಬ್ಬಯ್ಯ- ರತ್ನಮ್ಮ ದಂಪತಿಯ ಮಗಳಾಗಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಜನಿಸಿದರು.

1938: ಖ್ಯಾತ ಹಿಂದಿ ಕವಿ ಕಾಳಿಚರಣ್ ಜನನ.

1929: ಲೋಕಸಭಾ ಮಾಜಿ ಅಧ್ಯಕ್ಷ ಸೋಮನಾಥ ಚಟರ್ಜಿ ಜನನ.

No comments:

Post a Comment