ನೂತನ ಸಂಸತ್ ಭವನ ದೇಶಕ್ಕೆ ಅರ್ಪಣೆ
ವೇದಘೋಷ, ಸರ್ವ ಪಂಥ ಪ್ರಾರ್ಥನೆ, ಮಂತ್ರಗಳ ಪಠಣ, ಲೋಕಸಭಾಧ್ಯಕ್ಷರ ಪೀಠದ ಬಲಭಾಗದಲ್ಲಿ ʼರಾಜದಂಡʼ (ಸೆಂಗೋಲ್) ಪ್ರತಿಷ್ಠಾಪನೆಯ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೩ ಮೇ ೨೮ರ ಭಾನುವಾರ ಸಂಸತ್ತಿನ ನೂತನ ಕಟ್ಟಡವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶಕ್ಕೆ ಅರ್ಪಿಸಿದರು..
ಪ್ರಧಾನಿ ಮೋದಿಯವರು 'ಸೆಂಗೊಲ್'ಗೆ ಸಾಷ್ಟಾಂಗ ನಮಸ್ಕಾರ ಮಾಡಿ ಬಳಿಕ ಅದನ್ನು ಲೋಕಸಭಾಧ್ಯಕ್ಷರ ಪೀಠದ ಬಲಬದಿಯಲ್ಲಿ ಪ್ರತಿಷ್ಠಾಪಿಸಿದರು.
ʼಸೆಂಗೋಲ್ʼ ಹಸ್ತಾಂತರವು ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಚೋಳ ರಾಜವಂಶದಲ್ಲಿ ನೂತನ ದೊರೆಗೆ ಅಧಿಕಾರ ಹಸ್ತಾಂತರವನ್ನು ಸಂಕೇತಿಸುತ್ತದೆ. ತಮಿಳುನಾಡಿನ 21 ಅಧೀನಂ ಪ್ರಧಾನ ಅರ್ಚಕರು 'ಸೆಂಗೊಲ್' ನ್ನು ಪವಿತ್ರಗೊಳಿಸಿ ಪ್ರಧಾನಿಗೆ ಹಸ್ತಾಂತರಿಸಿದರು. ಪ್ರಧಾನಿಯವರು ಅದನ್ನು ವಿಧ್ಯುಕ್ತ ಮೆರವಣಿಗೆಯಲ್ಲಿ ನೂತನ ಕಟ್ಟಡಕ್ಕೆ ಕೊಂಡೊಯ್ದು ಲೋಕಸಭೆ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ಚಪ್ಪಾಳೆ ಮತ್ತು 'ಮೋದಿ, ಮೋದಿ' ಘೋಷಣೆಗಳ ನಡುವೆ ಸ್ಥಾಪಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿಯವರು ಸ್ಮಾರಕ ಅಂಚೆ ಚೀಟಿ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನೆನಪಿಸುವ ೭೫ ರೂಪಾಯಿಗಳ ನಾಣ್ಯವನ್ನು ಬಿಡುಗಡೆ ಮಾಡಿದರು. ಕೇವಲ ಮೂರು ವರ್ಷಗಳ ಅವಧಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಿದ ಕೆಲಸಗಾರರನ್ನೂ ಪ್ರಧಾನಿ ಈ ಸಂದರ್ಭದಲ್ಲಿ ಸನ್ಮಾನಿಸಿದರು.
ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದ ಕ್ಷಣಗಳ ವಿಡಿಯೋ ಇಲ್ಲಿದೆ. ಇನ್ನೊಂದು ವಿಡಿಯೋ ನೂತನ ಕಟ್ಟದ ವಿಶೇಷತೆಗಳನ್ನು ತೋರಿಸುತ್ತದೆ.
ಸುಮಾರು ೨೦ಕ್ಕೂ ಹೆಚ್ಚು ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಿದ್ದವು. ಆದರೆ ಎನ್ ಡಿಎ ಅಂಗಪಕ್ಷಗಳು ಹಾಗೂ ಬಿಜೆಪಿಯ ಮಿತ್ರ ಪಕ್ಷಗಳು ಮತ್ತು ಇತರ ಕೆಲವು ವಿರೋಧ ಪಕ್ಷಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದವು. ಕರ್ನಾಟಕದ ಮಾಜಿ ಪ್ರಧಾನಿ ಜಾತ್ಯತೀತ ಜನತಾದಳದ ನಾಯಕ ಎಚ್.ಡಿ. ದೇವೇಗೌಡ ಅವರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.