Showing posts with label ನೋಟು. Show all posts
Showing posts with label ನೋಟು. Show all posts

Friday, May 19, 2023

ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

 ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

ನವದೆಹಲಿ: ಚಲಾವಣೆಯಲ್ಲಿ ಇರುವ ಎಲ್ಲ 2000 ರೂಪಾಯಿ ನೋಟುಗಳನ್ನು ತತ್‌ ಕ್ಷಣ ಚಲಾವಣೆಯಿಂದ ಹಿಂಪಡೆಯುವುದಾಗಿ 2023 ಮೇ 19ರ  ಶುಕ್ರವಾರ ಭಾರತೀಯ ರಿಸರ್ವ ಬ್ಯಾಂಕ್‌ (ಆರ್‌ ಬಿಐ) ಘೋಷಿಸಿದೆ. ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ.

ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾರ್ವಜನಿಕ ಸದಸ್ಯರಿಗೆ ಸಾಕಷ್ಟು ಸಮಯವನ್ನು ಒದಗಿಸಲು ಮತ್ತು ನೋಟು ಹಿಂತೆಗೆತದ ಪ್ರಕ್ರಿಯೆಯನ್ನು ಪೂರೈಸಿಕೊಳ್ಳುವ ಸಲುವಾಗಿ ಎಲ್ಲ ಬ್ಯಾಂಕುಗಳು 2023 ಸೆಪ್ಟೆಂಬರ್ 30 ರವರೆಗೆ ರೂ 2000ದ ಬ್ಯಾಂಕ್‌ ನೋಟುಗಳ ಠೇವಣಿ ಮತ್ತು ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಆರ್‌ ಬಿಐ (RBI) ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.

“2000 ರೂ ಮುಖಬೆಲೆಯ ಬ್ಯಾಂಕ್‌ ನೋಟುಗಳಲ್ಲಿ ಸುಮಾರು 89% ರಷ್ಟನ್ನು ಮಾರ್ಚ್ 2017 ರ ಮೊದಲು ಬಿಡುಗಡೆ ಮಾಡಲಾಗಿತ್ತು. ಅವುಗಳ ಅಂದಾಜು ಜೀವಿತಾವಧಿ 4-5 ವರ್ಷಗಳು.

ಚಲಾವಣೆಯಲ್ಲಿರುವ ಈ ಬ್ಯಾಂಕ್‌ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 31, 2018 ರ ಪ್ರಕಾರ ಗರಿಷ್ಠ 6.73 ಲಕ್ಷ ಕೋಟಿಗಳಿಂದ (ಚಲಾವಣೆಯಲ್ಲಿರುವ ನೋಟುಗಳ 37.3%) ರೂ 3.62 ಲಕ್ಷ ಕೋಟಿಗೆ ಇಳಿದಿದೆ. ಇದು ಮಾರ್ಚ್ 31, 2023 ರಂದು ಚಲಾವಣೆಯಲ್ಲಿರುವ ನೋಟುಗಳ ಕೇವಲ 10.8% ರಷ್ಟಿದೆ. ಇವುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂಬುದನ್ನು ಸಹ ಗಮನಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ “ಕ್ಲೀನ್ ನೋಟ್ ಪಾಲಿಸಿ”ಗೆ ಅನುಗುಣವಾಗಿ ಚಲಾವಣೆಯಿಂದ ರೂ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ ಸೆಪ್ಟೆಂಬರ್‌ 30 ರವರೆಗೆ ಮುಂದುವರಿಯಲಿವೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

Saturday, April 27, 2019

ಬರಲಿದೆ 20 ರೂಪಾಯಿಯ ಹೊಸ ನೋಟು

ಬರಲಿದೆ 20 ರೂಪಾಯಿಯ ಹೊಸ ನೋಟು
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕು ಶೀಘ್ರದಲ್ಲೇ 20 ರೂಪಾಯಿ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡಲಿದೆ. ಹೊಸ ನೋಟುಗಳು ಹಸಿರು ಹಳದಿ ಬಣ್ಣವನ್ನು ಹೊಂದಿರಲಿದ್ದು ಮಹಾತ್ಮಾಗಾಂಧಿ ಸರಣಿಯ ಮುಂದುವರಿಕೆಯಾಗಿರುತ್ತದೆ.

20 ರೂಪಾಯಿಗಳ ಹೊಸ ನೋಟಿನ ಹಿಂಭಾಗದಲ್ಲಿ ಎಲ್ಲೋರಾ ಗುಹೆಗಳ ಚಿತ್ರವಿದ್ದು ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.

ನೋಟಿನ ತಳಭಾಗದಲ್ಲಿ ಹಸಿರುಮಿಶ್ರತ ಹಳದಿ ಬಣ್ಣ ಇರಲಿದ್ದು, ಒಟ್ಟಾರೆ ಬಣ್ಣಗಳಿಗೆ ಹೊಂದುವಂತಹ ವಿನ್ಯಾಸಗಳನ್ನು ಹೊಂದಿರುತ್ತದೆ.

ಇದೇ ವೇಳೆಗೆ 20 ರೂಪಾಯಿ ಮುಖಬೆಲೆಯ ಹಿಂದಿನ ನೋಟುಗಳ ಚಲಾವಣೆ ಮುಂದುವರೆಯುತ್ತದೆ ಎಂದು ಆರ್ ಬಿಐ ತಿಳಿಸಿದೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:


Thursday, January 3, 2019

ರೂ ೨,೦೦೦ ನೋಟು ಮುದ್ರಣ ಸ್ಥಗಿತ, ಕರೆನ್ಸಿ ಮಾನ್ಯತೆ ಮುಂದುವರಿಕೆ


ರೂ ೨,೦೦೦ ನೋಟು ಮುದ್ರಣ ಸ್ಥಗಿತ, ಕರೆನ್ಸಿ ಮಾನ್ಯತೆ ಮುಂದುವರಿಕೆ

ನವದೆಹಲಿ: ಭಾರತವು 2016ರಲ್ಲಿ ನೋಟು ಅಮಾನ್ಯೀಕರಣ ಕಾಲದಲ್ಲಿ ಚಾಲ್ತಿಗೆ ತಂದ 2000 ರೂಪಾಯಿಗಳ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂದು ಉನ್ನತ ಸರ್ಕಾರಿ ಮೂಲಗಳು ತನಗೆ ತಿಳಿಸಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.

2000
ರೂಪಾಯಿ ಕರೆನ್ಸಿಯ ಪ್ರಸಾರವನ್ನು ಕ್ರಮೇಣ ತಗ್ಗಿಸುವ ಸಲುವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.

2000 ರೂಪಾಯಿ ನೋಟುಗಳ ಮುದ್ರಣ ಸ್ಥಗಿತದಿಂದ ಚಾಲ್ತಿಯಲ್ಲಿರುವ ನೋಟುಗಳು ಅಮಾನ್ಯವಾಗಿವೆ ಎಂದು ಅರ್ಥವಲ್ಲ. ಅವುಗಳ ಮಾನ್ಯತೆ ಮುಂದುವರೆದಿದೆ. ಆದರೆ ಕ್ರಮೇಣವಾಗಿ ಈ ನೋಟುಗಳು ಮಾರುಕಟ್ಟೆಯಿಂದ ಕಣ್ಮರೆಯಾಗುವ ಸಾಧ್ಯತೆ ಇದೆ.

ಕಾಳಧನ ಸಂಗ್ರಹ, ಹಣ ವರ್ಗಾವಣೆಗಳಿಗೆ ದೊಡ್ಡ ಪ್ರಮಾಣದಲ್ಲಿ ಉನ್ನತ ಮೌಲ್ಯದ ಈ ನೋಟುಗಳನ್ನು ಬಳಸಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.

ನೋಟು ಮುದ್ರಣ ಸ್ಥಗಿತ ಬಗ್ಗೆ ಮಿಂಚಂಚೆ ಮೂಲಕ ಕೇಳಲಾದ ಸ್ಪಷ್ಟನೆಗೆ ಭಾರತದ ಕೇಂದ್ರೀಯ ಬ್ಯಾಂಕ್ ಹಾಗೂ ಕರೆನ್ಸಿ ವಿತರಣಾ ಸಂಸ್ಥೆಯಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಉತ್ತರ ನೀಡಿಲ್ಲ. ಅದು ಸ್ಪಂದಿಸಿದಾಗ ಈ ವರದಿಯನ್ನು ಪರಿಷ್ಕರಿಸಲಾಗುವುದು ಎಂದು ‘ದಿ ಪ್ರಿಂಟ್’ ವರದಿ ತಿಳಿಸಿದೆ.

ಕಾಳಸಂತೆ, ಕಪ್ಪು ಹಣ ನಿಗ್ರಹಕ್ಕಾಗಿ ಸರ್ಕಾರವು 2016ರಲ್ಲಿ 1000 ರೂಪಾಯಿ ಮತ್ತು 500 ರೂಪಾಯಿಗಳ ನೋಟುಗಳನ್ನು ಅಮಾನ್ಯೀಕರಣಗೊಳಿಸಿತ್ತು. ಆ ಬಳಿಕ ನವೆಂಬರ್ ತಿಂಗಳಲ್ಲಿ 2000 ರೂಪಾಯಿಗಳ ಹೊಸ ನೋಟನ್ನು ಬಿಡುಗಡೆ ಮಾಡಲಾಗಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: