Wednesday, July 14, 2021

ಕಡೆಗೂ ಹಾರಿತು ಹದ್ದಿನ ಮರಿ ….!

 ಕಡೆಗೂ ಹಾರಿತು ಹದ್ದಿನ ಮರಿ ….!


ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆ. 2021 ಜುಲೈ 13ರ ಮಂಗಳವಾರ ಬೆಳಗ್ಗೆ 9.36ರ ಸಮಯ. ಬಡಾವಣೆಯ ವಾಟ್ಸಪ್ ಗುಂಪಿನಲ್ಲಿ ಮರವೊಂದರಲ್ಲಿ ಹಕ್ಕಿ ನೇತಾಡುತ್ತಿರುವ ಚಿತ್ರದ ಸಹಿತ ಸಂದೇಶ ಒಂದು ಪ್ರಕಟವಾಯಿತು. ಆರೋನ್ ಎಂಬವರು ಪ್ರಕಟಿಸಿದ ಚಿತ್ರದ ಮರದಲ್ಲಿ ಬಾವಲಿಯಂತೆ ಹಕ್ಕಿಯೊಂದು ನೇತಾಡುತ್ತಿತ್ತು.

‘ಈ ಬಡಪಾಯಿ ಹಕ್ಕಿಗೆ (ಈಗಲ್ - ಹದ್ದು) ಹಾರಲು ಯಾರಾದರೂ ನೆರವಾಗುತ್ತೀರಾ? ಇದರ ರೆಕ್ಕೆಗೆ  ಗಾಳಪಟದ ನೂಲು ಸಿಕ್ಕಿ ಹಾಕಿಕೊಂಡಿದೆ. ಅದರಿಂದ ತಪ್ಪಿಸಿಕೊಳ್ಳಲು ನಡೆಸಿದ ಯತ್ನದಲ್ಲಿ ಅದು ನೂಲಿನಲ್ಲಿ ಇನ್ನಷ್ಟು ಸಿಕ್ಕಿ ಹಾಕಿಕೊಂಡಿದೆ. ಅದಕ್ಕೆ ತಾನಾಗಿಯೇ ಹಾರಲು ಸಾಧ್ಯವಾಗುತ್ತಿಲ್ಲ. ಈ ಹಕ್ಕಿ ಸಿಕ್ಕಿಹಾಕಿಕೊಂಡಿರುವ ಜಾಗ ಬಡಾವಣೆಯ 2ನೇ ಕ್ರಾಸಿನ ದಕ್ಷಿಣ ಬದಿ’ ಎಂದು ಆರೋನ್ ಬರೆದಿದ್ದರು.


ಅಗ್ನಿಶಾಮಕ ದಳದ ಮಂದಿ ಈ ಪ್ರಕರಣದಲ್ಲಿ ನೆರವಾಗಬಹುದೇನೋ ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಅವರ ಬಳಿ ದೊಡ್ಡ ಏಣಿಗಳು ಇರುತ್ತವೆ. ಈ ಏಣಿಗಳೂ ಈ ಎತ್ತರವನ್ನು ತಲುಪಬಹುದು. ಕೆಲವು ವರ್ಷಗಳ ಹಿಂದೆ ನನ್ನ ಕಚೇರಿಯ ಸಮೀಪ ಪಾರಿವಾಳವೊಂದು ಗಗನಚುಂಬಿ ಕಟ್ಟಡದಲ್ಲಿ ಹೀಗೆ ಸಿಕ್ಕಿಹಾಕಿಕೊಂಡಿತ್ತು. ಅಗ್ನಿಶಾಮಕ ದಳದವರು ಅಲ್ಲಿಗೆ ಬಂದು ತಮ್ಮ  ಎತ್ತರದ ಏಣಿಗಳನ್ನು ಬಳಸಿ ರಕ್ಷಿಸಿದ್ದರು’ ಕಾರ್ತಿಕ್ ಅದಕ್ಕೆ ಪ್ರತಿಕ್ರಿಯಿಸಿದರು.

‘ಹೌದು ನೀವು ಅವರನ್ನ ಕರೆಯಬಹುದು’  ಬಡಾವಣೆಯ ಸಂಘದ ಸಹಕಾರ್ಯದರ್ಶಿ ರಾಘವೇಂದ್ರ ಕಾಮತ್  ಸೂಚಿಸಿದರು. ‘ಹೌದು’ ಇದು ಈಗಲ್ ಮರಿ’ ಎಂದೂ ಹಕ್ಕಿಯ ಚಿತ್ರವನ್ನು ಹಿರಿದುಗೊಳಿಸಿ ಅವರು ವಿವರಿಸಿದರು.

‘ಹತ್ತಿರದಲ್ಲೇ ಪ್ರಾಣಿ ರಕ್ಷಣಾ ಕೇಂದ್ರದವರಿದ್ದಾರೆಯೇ ಎಂದು ನೀವು ಪರಿಶೀಲಿಸಬಹುದು. ಅವರು ನೆರವು ನೀಡಬಹುದು’ ಎಂದು ಸೂಚನೆ ಸೈಯದ್ ವಾಸೀಮ್ ಅವರಿಂದ ಬಂತು. ಹಕ್ಕಿ ಸಂರಕ್ಷಣಾ ಕೇಂದ್ರದ ನಂಬರ್ 944964222 ಇದನ್ನೂ ಅವರು ನಮೂದಿಸಿದರು.  ‘ಸಂಪರ್ಕಿಸಲು ಯತ್ನಿಸುತ್ತಿದ್ದೇನೆ ಬಿಜಿ ಬರುತ್ತಿದೆ’ ಎಂದು ವಾಸೀಮ್ ಬರೆದರು.

‘ಬೆಸ್ಕಾಮ್ ಅಥವಾ ಬಿಬಿಎಂಪಿಯವರನ್ನು ಕರೆಯಿರಿ. ಅವರ ಬಳಿಯೂ  ದೊಡ್ಡ ದೊಡ್ಡ ಏಣಿಗಳಿವೆ. ಅವರು ನೆರವಾಗಬಹುದು’ ಎಂದರು ಮಂಜುಳಾ.

‘ಅವರನ್ನು ಕೂಡಾ ಕರೆಯಲು ಯತ್ನಿಸುತ್ತೇನೆ’ ಉತ್ತಿಸಿದರು ವಾಸೀಮ್. ‘ಪೀಪಲ್ ಫಾರ್ ಎನಿಮಲ್ಸ್’ನವರನ್ನು ಕರೆಯಿರಿ. ಇದು ಅವರ ನಂಬರ್  9900025370. ನಾನು ಈಗಷ್ಟೇ  ಅವರ ಬಳಿ ಮಾತನಾಡಿದೆ. ಅವರಿಗೆ ಲೊಕೇಷನ್ ಮತ್ತು ವಿಡಿಯೋ ಬೇಕಂತೆ’ ಸುಧೀರ್ ತಮ್ಮ ಸಂದೇಶವನ್ನು ಪ್ರಕಟಿಸಿದರು.


‘ಹಿಂದೊಮ್ಮೆ ಕಾಗೆ ಮರಿಯೊಂದು ಈ ಬಡಾವಣೆಯ 3ನೇ ಕ್ರಾಸಿನಲ್ಲಿ ಹೀಗೆ ಸಿಕ್ಕಿ ಹಾಕಿಕೊಂಡಿತ್ತು. ನಾನು ಅದನ್ನು ಉದ್ದವಾದ ಕೋಲಿನ ನೆರವಿನಿಂದ ಬಿಡಿಸಿದ್ದೆ’ ಮಧು ನಾಯರ್ ಅವರಿಗೆ ಹಿಂದಿನ ಘಟನೆ ನೆನಪಾಯಿತು.

‘ಇದು ಪೀಪಲ್ ಫಾರ್ ಎನಿಮಲ್ಸ್’ನವರ  ಸ್ಥಿರ ದೂರವಾಣಿ ಸಂಖ್ಯೆ ‘080-28611986’ ಇದಕ್ಕೂ ಕರೆ ಮಾಡಿ’ ಸುಧೀರ್ ಮತ್ತೆ ಸೂಚಿಸಿದರು.

‘ಈಗಾಗಲೇ ತಿಳಿಸಿ ಆಗಿದೆ. ಅವರು ಬಾಕಿ ಇರುವ ಪ್ರಕರಣಗಳನ್ನು ಮುಗಿಸಿಕೊಂಡು ಬರುತ್ತಾರಂತೆ. ಆದರೆ ಅದು ತಡವಾಗಬಹುದೇನೋ?’ ನಾನು ಗಾಳಿಪಟದ ನೂಲನ್ನು ಕತ್ತರಿಸಿದೆ. ಆದರೆ ನೂಲು ರೆಕ್ಕೆಗಳಿಗೆ ಸುತ್ತಿಕೊಂಡು ಕೊಂಬೆಗೆ ಸಿಕ್ಕಿ ಹಾಕಿಕೊಂಡಿದೆ’ ರಾಘವೇಂದ್ರ ಕಾಮತ್ ಆತಂಕ ವ್ಯಕ್ತ ಪಡಿಸಿದರು. ‘ಹೌದಾ’ ಮಧು ನಾಯರ್ ಅವರಿಂದ  ಅಸಹಾಯಕತೆಯ  ಭಾವ ವ್ಯಕ್ತವಾಯಿತು.

‘ಉದಯಶಂಕರ್ ಅವರು ಬೀದಿ ದೀಪ ಸರಿ ಪಡಿಸುವವರನ್ನು ಕರೆದಿದ್ದಾರೆ. ಬಹುಶ ಅವರು ನೆರವಿಗೆ ಬರಬಹುದುರಾಘವೇಂದ್ರ ಕಾಮತ್ ಆಶಾಭಾವನೆ ವ್ಯಕ್ತ ಪಡಿಸಿದರು.

‘ಇದು ಹೊರಮಾವು ಘಟಕದ ನಂಬರ್ 9449642222’ ಸುಧೀರ್ ಇನ್ನೊಂದು ಮೊಬೈಲ್ ನಂಬರ್  ನೀಡಿದರು.


‘ನಾನೂ ಪ್ರಯತ್ನಿಸಿದೆ. ನಾವು ಕೊಂಬೆ ಕಡಿಯಬೇಕಾಗಬಹುದು. ಆದರೆ ಅದು ತುಂಬಾ ಎತ್ತರದಲ್ಲಿದೆ. ಅಲ್ಲಿಗೆ ಏರುವುದು ಕಷ್ಟ. ಮೇಲಿನ ಯಾವುದಾದರೂ ತಂಡ ಬರಬಹುದು ಎಂದು ಆಶಿಸೋಣ’ ಮಧು ನಾಯರ್  ಆಸೆ. ‘ಹಕ್ಕಿಈಗ ಸದ್ದಿಲ್ಲದೆ ನೇತಾಡುತ್ತಿದೆ. ಹೀಗೆ ಸದ್ದಿಲ್ಲದೆ ನೇತಾಡುತ್ತಿದ್ದರೆ, ಸ್ವಲ್ಪ  ತಡವಾದರೂ ಅದಕ್ಕೆ ಹಾನಿ ಆಗದೇ ಇರಬಹುದು  ನಾಯರ್ ಸಂದೇಶಕ್ಕೆ  ಸ್ವಲ್ಪ ನಿರಾಳತೆಯ ವಾಕ್ಯ ಸೇರಿತ್ತು.

‘ಈಗ ಬರಬಹುದು. ನನಗೆ ಉದ್ದವಾದ ಪೈಪ್ ಸಿಕ್ಕಿದೆ’ ನಾಯರ್, ಕಾಮತ್ ಸಂದೇಶಕ್ಕೆ  ಸಂಘದ ಆಂತರಿಕ ಲೆಕ್ಕ ಪರಿಶೋಧಕ ಮೊಹ್ಸಿನ್  ಪ್ರತಿಕ್ರಿಯಿಸಿದರು.

 ‘ಪ್ರಯತ್ನಿಸಿದೆ, ಅದೂ ಸಾಲುತ್ತಿಲ್ಲ’ ಮೊಹ್ಸಿನ್ ನಿರಾಶೆ.

‘ಇರಲಿ, ಹೇಗಿದ್ದರೂ ಅವರು ಬರುತ್ತಿದ್ದಾರಲ್ಲ. ಕಾಯೋಣ’ ಮಧು ನಾಯರ್.

ಗಂಟೆ 11.31 ಆಗಿತ್ತು. ಹಕ್ಕಿ ಸಿಕ್ಕಿ ಹಾಕಿಕೊಂಡು ಅದಾಗಲೇ ಸುಮಾರು 2 ಗಂಟೆಗಳಾಗಿತ್ತು. ಹಕ್ಕಿಯಿಂದ ಯಾವ ಸದ್ದೂ ಇರಲಿಲ್ಲ.

‘ಓಹ್ ಬಂದರು’ ಮೊಹ್ಸಿನ್ ಖುಷಿಯ ಸಂದೇಶ. ಮಧು ನಾಯರ್ ಅವರಿಂದಲೂ ಖುಷಿಯ ಸಂಕೇತ.


ಬೆಳಗ್ಗೆ 11.31ರಿಂದ 11.51ರವರೆಗೆ  ಸ್ಮಶಾನ ಮೌನ. ಹಕ್ಕಿಗೆ ಏನಾಗಿದೆಯೋ ಏನೋ ಎಂಬ ಆತಂಕ.

ಸುಮಾರು 20  ನಿಮಿಷಗಳ ಬಳಿಕ ರಾಘವೇಂದ್ರ ಕಾಮತ್ ಸಂದೇಶ  ಪ್ರಕಟವಾಯಿತು: ‘ಹಕ್ಕಿಯ ರಕ್ಷಣೆಯಾಯಿತು. ಧನ್ಯವಾದಗಳು ಎಆರ್ ಆರ್ ಸಿ  ಹಕ್ಕಿ ರಕ್ಷಣಾ ತಂಡಕ್ಕೆ’

ಸಂದೇಶದ ಜೊತೆಗೆ ಎಆರ್ ಆರ್ ಸಿ ತಂಡದ ಕಾರು, ಏಣಿ, ನೂಲಿನ ಜೊತೆಗೆ ತಂಡದ ಕಾರ್ಯಾಚರಣೆಯ ವಿಡಿಯೋವನ್ನೂ ಕಾಮತ್  ಸಂದೇಶ ಹಂಚಿಕೊಂಡಿತ್ತು.

‘ಓಹ್. ನಿಮಗೆ ಇಡೀ ತಂಡಕ್ಕೆ ಧನ್ಯವಾದಗಳು’ ಆರೋನ್  ಕೃತಜ್ಞತೆ ಸಲ್ಲಿಸಿದರು. ‘ ಎಆರ್ ಆರ್ ಸಿ ತಂಡಕ್ಕೆ ಧನ್ಯವಾದಗಳು’ ಸೈಯದ್ ವಾಸೀಮ್  ಸಂದೇಶ  ಅದಕ್ಕೆ ಜೋಡಿಯಾಯಿತು. ಮಂಜುಳಾ, ಮಧು ನಾಯರ್  ಅವರಿಂದಲೂ ಖುಷಿಯ ಸಂದೇಶ ಹೊರ ಹೊಮ್ಮಿತು.

‘ಎಆರ್ ಆರ್ ಸಿ ತಂಡದಿಂದ ಅತ್ಯಂತ ಅದ್ಭತ ಕೆಲಸ. ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ’-ಇಡೀ ಬಡಾವಣೆಯ ಪರವಾಗಿ ತಮ್ಮ ಕೃತಜ್ಞತೆ ಸಲ್ಲಿಸಿದರು ಸಂಘದ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ್. ‘ಉತ್ತಮ ಕೆಲಸ’  ಎಂದು ದನಿ ಗೂಡಿಸಿದರು ವಿಕಾಸ್ ವರ್ಮಾ.

ಸುಮಾರು ಎರಡು ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಪುಟ್ಟ ಹಕ್ಕಿ ಮರಿ ಕಡೆಗೂ ಸ್ವಚ್ಚಂದವಾಗಿ ಬಾನಿನಲ್ಲಿ ಹಾರಿತ್ತು. ಗಾಳಿಪಟದ  ನೂಲು ಎಂಬ ‘ಮೃತ್ಯು ಪಾಶ’ದಿಂದ ಪಾರಾಗಿತ್ತು.

ಹಾಗಾದರೆ ಎ ಆರ್ ಆರ್ ಸಿ ತಂಡದವರು ಮಾಡಿದ್ದೇನು?

ಈ ಪುಟ್ಟ ವಿಡಿಯೋ ನೋಡಿ:





-ನೆತ್ರಕೆರೆ ಉದಯಶಂಕರ  

Sunday, May 23, 2021

PARYAYA: 'ಕೊರೋನಾ' ವಿರುದ್ಧ ಆಣ್ವಿಕ ಲಸಿಕೆ! ಸಿದ್ಧವಾಗುತ್ತಿದೆ ಬೆ...

PARYAYA: 'ಕೊರೋನಾ' ವಿರುದ್ಧ ಆಣ್ವಿಕ ಲಸಿಕೆ! ಸಿದ್ಧವಾಗುತ್ತಿದೆ ಬೆ...: ' ಕೊರೋನಾ' ವಿರುದ್ಧ ಆಣ್ವಿಕ ಲಸಿಕೆ ! ಸಿದ್ಧವಾಗುತ್ತಿದೆ   ಬೆಂಗಳೂರಿನಲ್ಲೇ ಬೆಂಗಳೂರು :   ಕೊರೋನಾ ವೈರಸ್ಸಿನ ಒಂದನೇ ಅಲೆಯಾಯಿತು ,   ಎರಡನೇ ಅಲ...

Monday, January 25, 2021

ಇಂದಿನ ಇತಿಹಾಸ History Today ಜನವರಿ 25

 ಇಂದಿನ ಇತಿಹಾಸ  History Today ಜನವರಿ 25 

2021: ನವದೆಹಲಿ: ೨೦೨೧ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಡಾ. ಬಿಎಂ ಹೆಗ್ಡೆ, ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜಪಾನ್  ಪ್ರಧಾನಿ ಶಿಂಜೋ ಅಬೆ, ಸಾಹಿತಿ ಚಂದ್ರ ಶೇಖರ ಕಂಬಾರ ಸೇರಿದಂತೆ ಒಟ್ಟು 119 ಮಂದಿ 2021ರ ಸಾಲಿನ ‘ಪದ್ಮ’ ಗೌರವಕ್ಕೆ ಆಯ್ಕೆಯಾಗಿದ್ದಾರೆ.

2021 ಜನವರಿ 25ರ ಸೋಮವಾರ ‘ಪದ್ಮ’ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದ್ದು ಏಳು
ಜನರಿಗೆ ಪದ್ಮವಿಭೂಣ, ೧೦ ಜನರಿಗೆ ಪದ್ಮಭೂಷಣ ಹಾಗೂ ೧೦೨ ಜನರಿಗೆ ಪದ್ಮಶ್ರೀ ಪ್ರಶಸ್ತಿಯ ಗೌರವ ಲಭಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)



ಇಂದಿನ ಇತಿಹಾಸ  History Today ಜನವರಿ 25  (2020+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

Sunday, January 24, 2021

ಇಂದಿನ ಇತಿಹಾಸ History Today ಜನವರಿ 24

 ಇಂದಿನ ಇತಿಹಾಸ  History Today ಜನವರಿ 24 

2021: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2021 ಜನವರಿ 23ರ ಕೋಲ್ಕತ ಭೇಟಿ ಕಾಲದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಚಿತ್ರವೊಂದು ೨೪ ಗಂಟೆಗಳ  ಒಳಗಿನ ಅವಧಿಯಲ್ಲಿ ಸುಮಾರು 10 ಲಕ್ಷ (೧ ಮಿಲಿಯನ್) ಲೈಕ್ಗಳನ್ನು ಪಡೆಯಿತು.  ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯ ನಿಮಿತ್ತ ಪ್ರಧಾನಿ ಜನವರಿ 23ರ ಶನಿವಾರ  ಕೋಲ್ಕತಕ್ಕೆ ಭೇಟಿ ನೀಡಿದ್ದರು. ನೇತಾಜಿ ಜನ್ಮದಿನವನ್ನು ಪ್ರಸ್ತುತ ವರ್ಷದಿಂದ ‘ಪರಾಕ್ರಮ ದಿನ’ವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  "ನೇತಾಜಿ ಬೋಸ್ಅವರಿಗೆ ಗೌರವ ಸಲ್ಲಿಸಲು ಕೋಲ್ಕತಕ್ಕೆ ತಲುಪಿದೆ" ಎಂಬ ಶೀರ್ಷಿಕೆಯೊಂದಿಗೆ  ಫೇಸ್ ಬುಕ್ ನಲ್ಲಿ ಚಿತ್ರವನ್ನು ಪ್ರಕಟಿಸಿದ್ದರು.  ಈ ಚಿತ್ರವು ಈವರೆಗೆ 10 ಲಕ್ಷ (1 ಮಿಲಿಯನ್ ) ಲೈಕ್ಗಳನ್ನು ಪಡೆದರೆ, 14,000ಕ್ಕೂ ಹೆಚ್ಚು ಮಂದಿ ಇದನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ 47,000 ಪ್ರತಿಕ್ರಿಯೆಗಳು (ಕಾಮೆಂಟ್) ಬಂದಿವೆ. ಪ್ರಧಾನಿಯವರು ಮೊದಲು ನೇತಾಜಿ ಭವನಕ್ಕೆ ಭೇಟಿ ನೀಡಿದರು. ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸುಭಾಶ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ವೇದಿಕೆಯನ್ನು ಹಂಚಿಕೊಂಡರು(ಹೆಚ್ಚಿನ  ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2021: ನವದೆಹಲಿ: ಕಲೆ, ಸಂಸ್ಕೃತಿ, ಕ್ರೀಡಾ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆ ಸೇರಿದಂತೆ ಸಾಮಾಜಿಕ ಸೇವೆ ಹಾಗೂ ಶೌರ್ಯ ಪ್ರದರ್ಶಿಸಿದ ವಿವಿಧ ರಾಜ್ಯಗಳ ಒಟ್ಟು ೩೨ ಮಕ್ಕಳು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾದರು.  ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ೨೧ ರಾಜ್ಯಗಳ ೩೨ ಜಿಲ್ಲೆಗಳ ಮಕ್ಕಳು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತು. ‘ಕಲೆ ಮತ್ತು ಸಂಸ್ಕೃತಿ ವಿಭಾಗದಿಂದ ಏಳು, ಹೊಸ ಆವಿಷ್ಕಾರ ಕ್ಷೇತ್ರದಿಂದ ಒಂಬತ್ತು, ವಿದ್ವತ್ಪೂರ್ಣ ಸಾಧನೆಗಾಗಿ ಐದು ಪ್ರಶಸ್ತಿಗಳನ್ನು ನೀಡಲಾಗಿದೆ. ಕ್ರೀಡಾ ಕ್ಷೇತ್ರದಿಂದ ಏಳು ಮಕ್ಕಳು ಪ್ರಶಸ್ತಿ ಪಡೆದಿದ್ದಾರೆ. ಧೈರ್ಯ ಸಾಹಸ ಪ್ರದರ್ಶಿಸಿದ ಮೂವರು ಮಕ್ಕಳು ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಿಂದ ಒಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆಎಂದು ಸಚಿವಾಲಯವು ವಿವರಿಸಿತು. ಯುವ ಸಾಧಕರನ್ನು ಶ್ಲಾಘಿಸಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರುಪ್ರಧಾನ ಮಂತ್ರಿ ಬಾಲ ಪುರಸ್ಕಾರ ೨೦೨೧ ವಿಜೇತರಿಗೆ ಪ್ರೇರಣೆ ನೀಡುವುದಲ್ಲದೆ, ಲಕ್ಷಾಂತರ ಚಿಕ್ಕ ಮಕ್ಕಳ ಕನಸು ಮತ್ತು ಆಶಯಗಳನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತದೆ. ನಮ್ಮ ರಾಷ್ಟ್ರವನ್ನು ಯಶಸ್ಸು ಮತ್ತು ಸಮೃದ್ಧಿಯ ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ನಾವೆಲ್ಲರೂ ನಮ್ಮ ವೈಯಕ್ತಿಕ ಪ್ರಯತ್ನವನ್ನು ಮಾಡೋಣಎಂದು ಸಂದೇಶ ನೀಡಿದರು. ಬಾಲಪುರಸ್ಕಾರಕ್ಕೆ ಪಾತ್ರರಾಗಿರುವ ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2021 ಜನವರಿ 25ರ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.

2021: ಕಠ್ಮಂಡು: ನೇಪಾಳದಲ್ಲಿ ಆಡಳಿತಾರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದ (ಎನ್ಸಿಪಿ) ಆಂತರಿಕ ಬಿಕ್ಕಟ್ಟಿನ ನಡುವೆ, 2021 ಜನವರಿ 24ರ ಭಾನುವಾರ ವಿರೋಧೀ ಬಣವು ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿತು. ನೇಪಾಳ ಸಂಸತ್ತನ್ನು ತುರ್ತಾಗಿ ವಿಸರ್ಜಿಸಿರುವ ಬೆನ್ನಲ್ಲೇ ರಾಜಕೀಯ ಅಸ್ಥಿರತೆ ಮನೆ ಮಾಡಿದ್ದು, ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿತು. ವಿರೋಧ ಬಣದ ವಕ್ತಾರ ನಾರಾಯಣಕಾಜಿ ಶ್ರೇಷ್ಠ ಪ್ರಕಾರ, ಪ್ರಧಾನಿ ಒಲಿ ಇನ್ನು ಮುಂದೆ ಎನ್ಸಿಪಿ ಪಕ್ಷದ ಸದಸ್ಯರಾಗಿರುವುದಿಲ್ಲ. ಪೆರಿಸ್ ಡಾಂಡಾದಲ್ಲಿ ಸೇರಿದ ಕೇಂದ್ರ ಸಮಿತಿ ಸಭೆಯು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರನ್ನು  ಪಕ್ಷದಿಂದ ಉಚ್ಛಾಟಿಸಲು ನಿರ್ಧರಿಸಿದೆ. ಇನ್ನು ಮುಂದೆ ಅವರು ನೇಪಾಳ ಕಮ್ಯೂನಿಸ್ಟ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಹೊಂದಿರುವುದಿಲ್ಲ ಎಂದು ಶ್ರೇಷ್ಠ ಹೇಳಿದರು. ಅಸಂವಿಧಾನಿಕ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಿ ಒಲಿ ಅವರನ್ನು ಪಕ್ಷದಿಂದ ಏಕೆ ತೆಗೆದುಹಾಕಬಾರದು ಮತ್ತು ನೇಪಾಳ ಸಂಸತ್ ವಿಸರ್ಜಿಸಿದ ಹಿಂದಿನ ಕಾರಣಗಳನ್ನು ಕೇಳಿ ವಿರೋಧ ಬಣದ ಮಾಜಿ ಪ್ರಧಾನಿ ಪುಷ್ಪಾ ಕಮಲ್ ದಹಲ್ ಮತ್ತು ಮಾಧವ್ ಕುಮಾರ್ ನೋಟಿಸ್ ಜಾರಿಗೊಳಿಸಿದ್ದರು. ಆದರೆ ಪ್ರಧಾನಿ ಒಲಿ ಯಾವುದೇ ಸ್ಪಷ್ಟನೆ ನೀಡದಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಯಿತು. ನಾವು ಬಹಳ ಸಮಯ ಕಾದೆವು. ಅವರು ನಮಗೆ ಉತ್ತರಿಸಲಿಲ್ಲ. ಹಾಗಾಗಿ ಪಕ್ಷದ ಕೇಂದ್ರ ಸಮಿತಿಯು ಪಕ್ಷದಿಂದ ಉಚ್ಛಾಟಿಸುವ ನಿರ್ಧಾರವನ್ನು ಕೈಗೊಂಡಿದೆ ಎಂದು ಶ್ರೇಷ್ಠ ತಿಳಿಸಿದರು.

ಇಂದಿನ ಇತಿಹಾಸ  History Today ಜನವರಿ 24  (2020+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

Friday, January 22, 2021

ಇಂದಿನ ಇತಿಹಾಸ History Today ಜನವರಿ 22

 ಇಂದಿನ ಇತಿಹಾಸ  History Today ಜನವರಿ 22 

2021: ನವದೆಹಲಿ: ಸುಮಾರು ಎರಡು ತಿಂಗಳ ಸುದೀರ್ಘ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಮತ್ತು ಚಳವಳಿ ನಿರತ ಕೃಷಿ ಮುಖಂಡರ ನಡುವಣ ಹನ್ನೊಂದನೇ ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸುವ ರೈತ ಸಂಘಗಳ ಜೊತೆಗಿನ ಮಾತುಕತೆಯಿಂದ ಹೊರನಡೆಯಲು ತಾನು ಸಿದ್ಧವಾಗಿರುವುದಾಗಿ ಎಂದು ಕೇಂದ್ರ ಸರ್ಕಾರ 2021 ಜನವರಿ 22ರ ಶುಕ್ರವಾರ ಸುಳಿವು ನೀಡಿತು. ತನ್ನ ನಿಲುವನ್ನು ಬಿಗಿಗೊಳಿಸಿದ ಸರ್ಕಾರ, ಕಾನೂನುಗಳ ಅನುಷ್ಠಾನವನ್ನು ೧೮ ತಿಂಗಳುಗಳವರೆಗೆ ತಡೆಹಿಡಿಯುವ ಪ್ರಸ್ತಾಪವು ತನ್ನ ‘ಅತ್ಯುತ್ತಮ ಮತ್ತು ಕೊನೆಯ ಕೊಡುಗೆ’ ಎಂದು ಹೇಳಿದೆ ಮತ್ತು ಕಾನೂನಿನಲ್ಲಿ ಯಾವುದೇ ಲೋಪವಿಲ್ಲ ಎಂದು ಪುನರುಚ್ಚರಿಸಿದ್ದರೂ ಸಹ, ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ಪ್ರತಿಭಟನಕಾರ ರೈತರನ್ನು ಕೋರಿತು. ಸರ್ಕಾರದ ಪ್ರಸ್ತಾವನೆಯ ಕುರಿತು ರೈತರು ಮಾತನಾಡಲು ಸಿದ್ಧರಾದಾಗ ಮಾತ್ರ ಮುಂದಿನ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈದಿನ ಘೋಷಿಸಿದರು. "ನಿಮ್ಮ ಕಳವಳಕ್ಕೆ ಸ್ಪಂದಿಸಲು ನಾವು ಯೋಚಿಸಿದ್ದೆವು. ಆದರೆ ಪ್ರಸ್ತಾಪದಲ್ಲಿ ಯಾವುದೇ  ತಪ್ಪು ಇಲ್ಲ. ನಾವು ನಿಮಗೆ ಉತ್ತಮ ಪ್ರಸ್ತಾಪವನ್ನು ನೀಡಿದ್ದೇವೆ. ದುರದೃಷ್ಟವಶಾತ್ ನೀವು ಅದನ್ನು ತಿರಸ್ಕರಿಸಿದ್ದೀರಿ’ ಎಂದು ತೋಮರ್ ಸಭೆಯಲ್ಲಿ ಹೇಳಿದರು.(ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜನವರಿ 22  (2020+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

Thursday, January 21, 2021

ಇಂದಿನ ಇತಿಹಾಸ History Today ಜನವರಿ 21

 ಇಂದಿನ ಇತಿಹಾಸ  History Today ಜನವರಿ 21 

2021: ನವದೆಹಲಿ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕಟ್ಟಡದಲ್ಲಿ 2021 ಜನವರಿ 21ರ ಗುರುವಾರ ಎರಡು ಬಾರಿ ಅಗ್ನಿಅನಾಹುತ ಸಂಭವಿಸಿದ್ದು, ಮೊದಲಿಗೆ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ಐದು ಸುಟ್ಟ ಶವಗಳು ಪತ್ತೆಯಾಗಿವೆ ಎಂದು ಪುಣೆಯ ಮೇಯರ್ ಮುರಳೀಧರ್ ಮೊಹೋಲ್ ಹೇಳಿದರು. ಕಟ್ಟಡದಲ್ಲಿ ಸಿಕ್ಕಿಬಿದ್ದ ಇತರ ಕೆಲವರನ್ನು ರಕ್ಷಿಸಲಾಗಿದೆ. ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ವೆಲ್ಡಿಂಗ್ ಕೆಲಸವು ಬೆಂಕಿಗೆ ಕಾರಣವಾಗಿದೆ ಎಂದು ಊಹಿಸಲಾಗಿದೆ ಎಂದು ಅವರು ಹೇಳಿದರು. ಕಂಪೆನಿಯ ಸಿಇಒ ಮೊದಲಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದರು, ಆದರೆ ಸಾವುಗಳು ದೃಢಪಟ್ಟ ನಂತರ ತಮ್ಮ ಹೇಳಿಕೆಯನ್ನು ಪರಿಷ್ಕರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2021: ನವದೆಹಲಿ
: ಎರಡನೇ ಸುತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿಗಗಳಿಗೆ  ಕೋವಿಡ್ -೧೯ ವಿರುದ್ಧ ಲಸಿಕೆ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ೫೦ ವರ್ಷಕ್ಕಿಂತ ಮೇಲ್ಪಟ್ಟ ಇತರ ರಾಜಕಾರಣಿಗಳ ಸರದಿ ಮುಂದಿನ ಹಂತದಲ್ಲಿ ಬರಲಿದೆ ಎಂದು ಮುಖ್ಯಮಂತ್ರಿಗಳ  ಸಭೆಯಲ್ಲಿ ಪ್ರಧಾನಿ ಹೇಳಿದರುಹೆಲ್ತ್ಕೇರ್ ಮತ್ತು ಮುಂಚೂಣಿ ಕಾರ್ಯಕರ್ತರಾದ  ಪೋಲಿಸ್, ಸಶಸ್ತ್ರ ಪಡೆ ಮತ್ತು ಪೌರ ಕಾರ್ಮಿಕ  ನಂತರ, ಲಸಿಕೆ ಹಾಕುವ ಮೂರನೇ ವರ್ಗವು ೫೦ ವರ್ಷಕ್ಕಿಂತ ಮೇಲ್ಪಟ್ಟವರಾಗಿರಬಹುದು, ನಂತರ ಸಹ ಕಾಯಿಲೆಗಳಿಂದ ಬಳಲುತ್ತಿರುವ ೫೦ ಕ್ಕಿಂತ ಕಡಿಮೆ ವಯಸ್ಸಿನವರಿಗೆ ಚಚ್ಚುಮದ್ದು ನೀಡಲಾಗುವುದು.  ನವೆಂಬರ್ ೨೪ ರಂದು  ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಮುಖ್ಯಮಂತ್ರಿಗಳ ನಡುವಣ ಸಭೆಯಲ್ಲಿ ಲಸಿಕೆ ಅಭಿಯಾನಕ್ಕೆ ತಾತ್ಕಾಲಿಕ ಆದ್ಯತೆಯ ಬಗ್ಗೆ ಚರ್ಚಿಸಲಾಗಿತ್ತು ಮತ್ತು ರಾಜ್ಯ ಸರ್ಕಾರಗಳಿಗೆ ಆ ಬಗ್ಗೆ ತಿಳಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ).

2021: ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ನಗರ ಪ್ರದೇಶಗಳಲ್ಲಿ .೬೮ ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 2021 ಜನವರಿ 21ರ ಗುರುವಾರ ಅನುಮೋದನೆ ನೀಡಿತು. ಕೇಂದ್ರ ಅನುಮೋದನೆ ಮತ್ತು ನಿರ್ವಹಣಾ ಸಮಿತಿ (ಸಿಎಸ್ಎಂಸಿ) ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿತು. ಸಭೆಯಲ್ಲಿ ೧೪ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಭಾಗವಹಿಸಿದ್ದರು. ಪಿಎಂಎವೈ-ಯು ಅಡಿಯಲ್ಲಿ ಇದುವರೆಗೆ ೪೧ ಲಕ್ಷ ಮನೆಗಳು ಪೂರ್ಣಗೊಂಡಿದ್ದು, ೭೦ ಲಕ್ಷಕ್ಕೂ ಹೆಚ್ಚು ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದು ಸಚಿವಾಲಯ ತಿಳಿಸಿತು. ಪಿಎಂಎವೈ (ನಗರ) ಅಡಿಯಲ್ಲಿ ಕೇಂದ್ರ ಮಂಜೂರು ಮತ್ತು ನಿರ್ವಹಣಾ ಸಮಿತಿ (ಸಿಎಸ್ಎಂಸಿ) ಸಭೆಯಲ್ಲಿ ,೬೮,೬೦೬ ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜನವರಿ 21  (2020+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ