ಇಂದಿನ ಇತಿಹಾಸ History Today ಜನವರಿ 24
2021: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2021 ಜನವರಿ 23ರ ಕೋಲ್ಕತ ಭೇಟಿ ಕಾಲದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಚಿತ್ರವೊಂದು ೨೪ ಗಂಟೆಗಳ ಒಳಗಿನ ಅವಧಿಯಲ್ಲಿ ಸುಮಾರು 10 ಲಕ್ಷ (೧ ಮಿಲಿಯನ್) ಲೈಕ್ಗಳನ್ನು ಪಡೆಯಿತು. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯ ನಿಮಿತ್ತ ಪ್ರಧಾನಿ ಜನವರಿ 23ರ ಶನಿವಾರ ಕೋಲ್ಕತಕ್ಕೆ ಭೇಟಿ ನೀಡಿದ್ದರು. ನೇತಾಜಿ ಜನ್ಮದಿನವನ್ನು ಪ್ರಸ್ತುತ ವರ್ಷದಿಂದ ‘ಪರಾಕ್ರಮ ದಿನ’ವಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. "ನೇತಾಜಿ ಬೋಸ್ ಅವರಿಗೆ ಗೌರವ ಸಲ್ಲಿಸಲು ಕೋಲ್ಕತಕ್ಕೆ ತಲುಪಿದೆ" ಎಂಬ ಶೀರ್ಷಿಕೆಯೊಂದಿಗೆ ಫೇಸ್ ಬುಕ್ ನಲ್ಲಿ ಚಿತ್ರವನ್ನು ಪ್ರಕಟಿಸಿದ್ದರು. ಈ ಚಿತ್ರವು ಈವರೆಗೆ 10 ಲಕ್ಷ (1 ಮಿಲಿಯನ್ ) ಲೈಕ್ಗಳನ್ನು ಪಡೆದರೆ, 14,000ಕ್ಕೂ ಹೆಚ್ಚು ಮಂದಿ ಇದನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ 47,000 ಪ್ರತಿಕ್ರಿಯೆಗಳು (ಕಾಮೆಂಟ್) ಬಂದಿವೆ. ಪ್ರಧಾನಿಯವರು ಮೊದಲು ನೇತಾಜಿ ಭವನಕ್ಕೆ ಭೇಟಿ ನೀಡಿದರು. ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸುಭಾಶ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೇದಿಕೆಯನ್ನು ಹಂಚಿಕೊಂಡರು.
2021: ನವದೆಹಲಿ: ಕಲೆ, ಸಂಸ್ಕೃತಿ, ಕ್ರೀಡಾ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆ ಸೇರಿದಂತೆ ಸಾಮಾಜಿಕ ಸೇವೆ ಹಾಗೂ ಶೌರ್ಯ ಪ್ರದರ್ಶಿಸಿದ ವಿವಿಧ ರಾಜ್ಯಗಳ ಒಟ್ಟು ೩೨ ಮಕ್ಕಳು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾದರು. ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ೨೧ ರಾಜ್ಯಗಳ ೩೨ ಜಿಲ್ಲೆಗಳ ಮಕ್ಕಳು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತು. ‘ಕಲೆ ಮತ್ತು ಸಂಸ್ಕೃತಿ ವಿಭಾಗದಿಂದ ಏಳು, ಹೊಸ ಆವಿಷ್ಕಾರ ಕ್ಷೇತ್ರದಿಂದ ಒಂಬತ್ತು, ವಿದ್ವತ್ಪೂರ್ಣ ಸಾಧನೆಗಾಗಿ ಐದು ಪ್ರಶಸ್ತಿಗಳನ್ನು ನೀಡಲಾಗಿದೆ. ಕ್ರೀಡಾ ಕ್ಷೇತ್ರದಿಂದ ಏಳು ಮಕ್ಕಳು ಪ್ರಶಸ್ತಿ ಪಡೆದಿದ್ದಾರೆ. ಧೈರ್ಯ ಸಾಹಸ ಪ್ರದರ್ಶಿಸಿದ ಮೂವರು ಮಕ್ಕಳು ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಿಂದ ಒಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ’ ಎಂದು ಸಚಿವಾಲಯವು ವಿವರಿಸಿತು. ಯುವ ಸಾಧಕರನ್ನು ಶ್ಲಾಘಿಸಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ‘ಪ್ರಧಾನ ಮಂತ್ರಿ ಬಾಲ ಪುರಸ್ಕಾರ ೨೦೨೧ ವಿಜೇತರಿಗೆ ಪ್ರೇರಣೆ ನೀಡುವುದಲ್ಲದೆ, ಲಕ್ಷಾಂತರ ಚಿಕ್ಕ ಮಕ್ಕಳ ಕನಸು ಮತ್ತು ಆಶಯಗಳನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತದೆ. ನಮ್ಮ ರಾಷ್ಟ್ರವನ್ನು ಯಶಸ್ಸು ಮತ್ತು ಸಮೃದ್ಧಿಯ ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ನಾವೆಲ್ಲರೂ ನಮ್ಮ ವೈಯಕ್ತಿಕ ಪ್ರಯತ್ನವನ್ನು ಮಾಡೋಣ’ ಎಂದು ಸಂದೇಶ ನೀಡಿದರು. ಬಾಲಪುರಸ್ಕಾರಕ್ಕೆ ಪಾತ್ರರಾಗಿರುವ ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2021 ಜನವರಿ 25ರ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
2021: ಕಠ್ಮಂಡು: ನೇಪಾಳದಲ್ಲಿ ಆಡಳಿತಾರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದ (ಎನ್ಸಿಪಿ) ಆಂತರಿಕ ಬಿಕ್ಕಟ್ಟಿನ ನಡುವೆ, 2021 ಜನವರಿ 24ರ ಭಾನುವಾರ ವಿರೋಧೀ ಬಣವು ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿತು. ನೇಪಾಳ ಸಂಸತ್ತನ್ನು ತುರ್ತಾಗಿ ವಿಸರ್ಜಿಸಿರುವ ಬೆನ್ನಲ್ಲೇ ರಾಜಕೀಯ ಅಸ್ಥಿರತೆ ಮನೆ ಮಾಡಿದ್ದು, ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿತು. ವಿರೋಧ ಬಣದ ವಕ್ತಾರ ನಾರಾಯಣಕಾಜಿ ಶ್ರೇಷ್ಠ ಪ್ರಕಾರ, ಪ್ರಧಾನಿ ಒಲಿ ಇನ್ನು ಮುಂದೆ ಎನ್ಸಿಪಿ ಪಕ್ಷದ ಸದಸ್ಯರಾಗಿರುವುದಿಲ್ಲ. ಪೆರಿಸ್ ಡಾಂಡಾದಲ್ಲಿ ಸೇರಿದ ಕೇಂದ್ರ ಸಮಿತಿ ಸಭೆಯು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲು ನಿರ್ಧರಿಸಿದೆ. ಇನ್ನು ಮುಂದೆ ಅವರು ನೇಪಾಳ ಕಮ್ಯೂನಿಸ್ಟ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಹೊಂದಿರುವುದಿಲ್ಲ ಎಂದು ಶ್ರೇಷ್ಠ ಹೇಳಿದರು. ಅಸಂವಿಧಾನಿಕ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಿ ಒಲಿ ಅವರನ್ನು ಪಕ್ಷದಿಂದ ಏಕೆ ತೆಗೆದುಹಾಕಬಾರದು ಮತ್ತು ನೇಪಾಳ ಸಂಸತ್ ವಿಸರ್ಜಿಸಿದ ಹಿಂದಿನ ಕಾರಣಗಳನ್ನು ಕೇಳಿ ವಿರೋಧ ಬಣದ ಮಾಜಿ ಪ್ರಧಾನಿ ಪುಷ್ಪಾ ಕಮಲ್ ದಹಲ್ ಮತ್ತು ಮಾಧವ್ ಕುಮಾರ್ ನೋಟಿಸ್ ಜಾರಿಗೊಳಿಸಿದ್ದರು. ಆದರೆ ಪ್ರಧಾನಿ ಒಲಿ ಯಾವುದೇ ಸ್ಪಷ್ಟನೆ ನೀಡದಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಯಿತು. ನಾವು ಬಹಳ ಸಮಯ ಕಾದೆವು. ಅವರು ನಮಗೆ ಉತ್ತರಿಸಲಿಲ್ಲ. ಹಾಗಾಗಿ ಪಕ್ಷದ ಕೇಂದ್ರ ಸಮಿತಿಯು ಪಕ್ಷದಿಂದ ಉಚ್ಛಾಟಿಸುವ ನಿರ್ಧಾರವನ್ನು ಕೈಗೊಂಡಿದೆ ಎಂದು ಶ್ರೇಷ್ಠ ತಿಳಿಸಿದರು.
No comments:
Post a Comment