ದಿಲ್ಲಿಯಲ್ಲಿ ‘ಏಕತೆಯ ಸಂದೇಶ’ ಸಾರಿದ ಕನ್ನಡದ ಕಥಕ್ ಜೋಡಿ
ಏರ್‌ಪೋರ್ಟ್ ದಶಮಾನೋತ್ಸವ ಸಂಭ್ರಮದಲ್ಲಿ ನಿರುಪಮಾ ರಾಜೇಂದ್ರ ‘ರಸಾಭಿನಂದನೆ’ಯ ಮೋಡಿ
ಬೆಂಗಳೂರು: ದೇಶದ ರಾಜಧಾನಿಯ ಏರ್‌ಪೋರ್ಟ್‌ಗೆ ದಶಮಾನೋತ್ಸವದ ಸಂಭ್ರಮ... ಜತೆಗೆ ಸತತ ಎರಡು ವರ್ಷಗಳಿಂದ ವಿಶ್ವದ ನಂ.೧ ವಿಮಾನ ನಿಲ್ದಾಣ ಅನ್ನೋ ಹೆಗ್ಗಳಿಕೆ.. ಈ ಹೆಗ್ಗಳಿಕೆಗೆ ಕಾರಣರಾದ ಎಲ್ಲರಿಗೂ ನೃತ್ಯದ ಮೂಲಕ ನಮನ ಸಲ್ಲಿಸಿದ ಭಾರತ.. ಭಾರತದಿಂದ ಪರವಾಗಿ ನೃತ್ಯದ ರಾಯಭಾರಿಗಳಾಗಿ ‘ರಸಾಭಿನಂದನೆ’ ಸಲ್ಲಿಸಿದ್ದು ಹೆಮ್ಮೆಯ ಕನ್ನಡದ ಕಥಕ್ ಜೋಡಿ ನಿರುಪಮಾ ರಾಜೇಂದ್ರ.
ಇಂಥಹ ಖುಷಿಯ ಕ್ಷಣಗಳಿಗೆ ಸಾಕ್ಷಿಯಾಗಿದ್ದು ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ ದಶಮಾನೋತ್ಸವ ಕಾರ್ಯಕ್ರಮ.
ದಶಮಾನೋತ್ಸವದ ಈ ಶುಭ ಸಂದರ್ಭದಲ್ಲಿ ವಿಮಾನ ನಿಲ್ದಾಣವನ್ನು ವಿಶ್ವದರ್ಜೆಗೇರಿಸಲು ಸಹಕರಿಸಿದ ಎಲ್ಲ ಸಂಸ್ಥೆಗಳಿಗೆ, ಗಣ್ಯರಿಗೆ ಅಭಿನಂದನೆ ಸಲ್ಲಿಸಲೆಂದೇ ಜಿಎಂಆರ್ ಗ್ರೂಪ್ ಇಂಥದೊಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿತ್ತು.
ದಶಮಾನೋತ್ಸವ ಸಂಭ್ರಮದಲ್ಲಿ ‘ರಸಾಭಿನಂದನ’ ಎಂಬ ನೃತ್ಯದ ಮೂಲಕ ಹೆಮ್ಮೆಯ ಕನ್ನಡದ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಇಡೀ ವಿಶ್ವಕ್ಕೆ ‘ಏಕತೆಯ ಸಂದೇಶ’ ಸಾರಿದರು. ಹೊಂದಾಣಿಕೆ ಮಹತ್ವವನ್ನು ನೃತ್ಯದ ಮೂಲಕ ನಿರೂಪಿಸಿದ್ದು, ಅಭಿನಂದಿಸಿದ್ದು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು.
ಇಡೀ ಪ್ರಪಂಚದಲ್ಲೇ, ಸೃಷ್ಟಿಯಲ್ಲೇ ಹೊಂದಾಣಿಕೆಯ ಪಾಠವಿದೆ. ಮೋಡದಿಂದ ಮಳೆ ಬರುವಂತೆ; ಸೂರ್ಯನಿಂದ ಕಮಲ ಅರಳುವಂತೆ ಪರಸ್ಪರ ಸಹಕಾರ, ಹೊಂದಾಣಿಕೆ ಇದ್ದಾಗ ಅಲ್ಲೊಂದು ಶಕ್ತಿ ಸೃಷ್ಟಿಯಾಗುತ್ತದೆ. ಹೀಗೆ ದೇಶ ದೇಶಗಳ ಹೊಂದಾಣಿಕೆ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಸಂದೇಶ ನೀಡುವ ಮೂಲಕ ಕಥಕ್ ಜೋಡಿ ಎಲ್ಲರ ಮೆಚ್ಚುಗೆ ಪಾತ್ರರಾದರು.
ನೃತ್ಯದ ಮೂಲಕವೇ ನಮನ ಸಲ್ಲಿಸಿದ ಈ ನಾಟ್ಯ ಜೋಡಿ, ಪ್ರಸ್ತುತಪಡಿಸಿದ ಮತ್ತೊಂದು ನೃತ್ಯರೂಪಕ ‘ಸಾಥ್ ಸಾಥ್’ ವಿಶ್ವದ ಗಣ್ಯರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಸಂಗತ್ಛದ್ವಂ ಸಂವದದ್ವಂ ಸಂವೋ ಮನಾಂಸಿ ಜಾನತಾಂ |
ದೇವಾ ಭಾಗಂ-ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||
ಒಂದಾಗಿ ನಡೆಯುವ.. ಒಂದಾಗಿ ನುಡಿಯುವ.. ಬುದ್ಧಿ-ಮನಸ್ಸಿನಲ್ಲಿ ಕಲ್ಮಶವಿಲ್ಲದೆ ಜಗತ್ತಿನ ಜನರೆಲ್ಲಾ ಒಂದೇ ಎಂಬ ಭಾವನೆ ನಮ್ಮದಾಗಲಿ.. ಎಂಬ ವೇದಮಂತ್ರದ ಸಂದೇಶವನ್ನು ನೃತ್ಯದಲ್ಲಿ ಅದ್ಭುತವಾಗಿ ಮೂಡಿಸಿದ್ದು ನಿರುಪಮಾ ರಾಜೇಂದ್ರ ಅವರ ಹೆಗ್ಗಳಿಕೆ. ಹವಾಯಿ, ಚೀನಾ, ಆಫ್ರಿಕಾ ಸೇರಿದಂತೆ ವಿಶ್ವದ ಹಲವು ಸಂಸ್ಕೃತಿಗಳ ಪ್ರತಿಬಿಂಬವಾಗಿ ‘ಸಾಥ್ ಸಾಥ್’ ನೃತ್ಯರೂಪಕ ಅನಾವರಣಗೊಂಡಿತು. ಇನ್ಮುಂದೆಯೂ ದೇಶದ ಅಭಿವೃದ್ಧಿಯಲ್ಲಿ ವಿಶ್ವದ ಇತರ ರಾಷ್ಟ್ರಗಳ ಸಹಕಾರ ಹೀಗೆ ಮುಂದುವರಿಯಲಿ ಎಂಬ ಸಂದೇಶ ಈ ನೃತ್ಯದಲ್ಲಿ ಮೂಡಿಬಂದಿದ್ದು ವಿಶೇಷವಾಗಿತ್ತು. ಈ ನೃತ್ಯ ಸಂಭ್ರಮದಲ್ಲಿ ೨೦ ಮಂದಿ ಅಭಿನವ ಡ್ಯಾನ್ಸ್ ಕಂಪನಿಯ ಕಲಾವಿದರು ನಿರುಪಮಾ ರಾಜೇಂದ್ರ ಅವರಿಗೆ ಸಾಥ್ ನೀಡಿದರು.
ಏರ್‌ಪೋರ್ಟ್ ದಶಮಾನೋತ್ಸವ ಸಂಭ್ರಮದಲ್ಲಿ ನಿರುಪಮಾ ರಾಜೇಂದ್ರ ಅವರ ಅಭಿವ್ಯಕ್ತಿಯ ‘ರಸಾಭಿನಂದನೆ’ಯ ಮೋಡಿಗೆ ಕೇಂದ್ರದ ಸಚಿವರಾದ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಕಥಕ್ ಜೋಡಿಯನ್ನು ಅಭಿನಂದಿಸಿದರು. ಜಿಎಂಆರ್ ಗ್ರೂಪ್‌ನ ಅಧ್ಯಕ್ಷ ಜಿ. ಮಲ್ಲಿಕಾರ್ಜುನ್ ರಾವ್ ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿರುಪಮಾ ಅವರ ನೃತ್ಯವೈಭವಕ್ಕೆ ಸಾಹಿತ್ಯದ ಸಾಥ್ ನೀಡಿದ್ದು ಶತಾವಧಾನಿ ಡಾ. ಆರ್.ಗಣೇಶ್. ಪ್ರವೀಣ್ ಡಿ.ರಾವ್ ಅವರ ಸಂಗೀತದ ಜತೆ ವಿನೋದ್‌ಗೌಡ ಹಾಗೂ ಸಂತೋಷ್‌ಕುಮಾರ್ ಅವರ ದೃಶ್ಯ-ಬೆಳಕಿನಾಟ ಮೇಳೈಸಿತ್ತು.