ಸಮಯದ ಬೆಲೆ: ಚಿತ್ರಮಂದಿರಕ್ಕೆ ಪಾಠ ಕಲಿಸಿದ ವಕೀಲ!
ಅದು ಹೈದರಾಬಾದಿನ ತಡ ರಾತ್ರಿ. ಕೆಲಸದ ಒತ್ತಡದಿಂದ ಕೊಂಚ ನಿರಾಳರಾಗಲು ವಕೀಲರೊಬ್ಬರು ಪಿವಿಆರ್ (PVR) ಸಿನಿಮಾದಲ್ಲಿ ರಾತ್ರಿ 10:35 ರ ಪ್ರದರ್ಶನಕ್ಕೆ ಟಿಕೆಟ್ ಬುಕ್ ಮಾಡಿದ್ದರು. ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಚಿತ್ರಮಂದಿರ ತಲುಪಿದ ಅವರು, ಸಿನಿಮಾ ಸರಿಯಾದ ಸಮಯಕ್ಕೆ ಶುರುವಾಗುತ್ತದೆ ಎಂದು ಭಾವಿಸಿದ್ದರು.
ಆದರೆ, ಪರದೆಯ ಮೇಲೆ ಸಿನಿಮಾ ಬರುವ ಬದಲು ಒಂದರ ಮೇಲೊಂದರಂತೆ ವಾಣಿಜ್ಯ ಜಾಹೀರಾತುಗಳು ಮತ್ತು ಮುಂಬರುವ ಸಿನಿಮಾಗಳ ಟ್ರೇಲರ್‌ಗಳು ಪ್ರಸಾರವಾಗತೊಡಗಿದವು. ರಾತ್ರಿ 10:35 ಕ್ಕೆ ಪ್ರಾರಂಭವಾಗಬೇಕಿದ್ದ ಸಿನಿಮಾ ಸುಮಾರು 17 ನಿಮಿಷ ತಡವಾಗಿ ಪ್ರಾರಂಭವಾಯಿತು!
ಇದರಿಂದಾಗಿ, ರಾತ್ರಿ 2 ಗಂಟೆಗೆ ಮನೆ ತಲುಪಬೇಕಿದ್ದ ವಕೀಲರು, ಮನೆಗೆ ತಲುಪುವಷ್ಟರಲ್ಲಿ ಸಮಯ ರಾತ್ರಿ 3 ಗಂಟೆಯಾಗಿತ್ತು. ತಡರಾತ್ರಿ ಪ್ರಯಾಣಿಸುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ. ಜೊತೆಗೆ ಅವರ ಮರುದಿನದ ಕೆಲಸಗಳೆಲ್ಲವೂ ಏರುಪೇರಾದವು.
"ಇದು ಸಣ್ಣ ಅಡಚಣೆಯಲ್ಲ. ಪ್ರೇಕ್ಷಕರನ್ನು ಬಂದಿಗಳನ್ನಾಗಿ ಮಾಡಿ, ಅವರ ಅಮೂಲ್ಯ ಸಮಯವನ್ನು ಸಿನಿಮಾ ಮಂದಿರ ತನ್ನ ಸ್ವಂತ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದೆ!" ಎಂದು ನಿರ್ಧರಿಸಿದ ವಕೀಲರು, ಜಿಲ್ಲಾ ಗ್ರಾಹಕ ನ್ಯಾಯಾಲಯದ (District Consumer Disputes Redressal Commission) ಬಾಗಿಲು ಬಡಿದರು.
ಪಿವಿಆರ್ (PVR) ಮುಂದಿಟ್ಟ ವಾದಗಳೇನು?
ನ್ಯಾಯಾಲಯದಲ್ಲಿ ಪಿವಿಆರ್ (PVR) ಆಡಳಿತ ಮಂಡಳಿಯು ತನ್ನನ್ನು ಸಮರ್ಥಿಸಿಕೊಳ್ಳಲು ಈ ಕೆಳಗಿನ ಕಾನೂನು ವಾದಗಳನ್ನು ಮಂಡಿಸಿತು:
- ಸಂವಿಧಾನದ ವಿಧಿ 19(1)(g): ವ್ಯಾಪಾರ ಮತ್ತು ವಹಿವಾಟು ನಡೆಸುವ ಮೂಲಭೂತ ಹಕ್ಕು ನಮಗಿದೆ.
- ಮಾಲೀಕತ್ವದ ಹಕ್ಕು: ಸಿನಿಮಾ ಮಂದಿರಗಳು ಖಾಸಗಿ ಸ್ವತ್ತು, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗದಂತೆ ತಮ್ಮ ನಿಯಮಗಳನ್ನು ರೂಪಿಸುವ ಹಕ್ಕು ನಮಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿತು.
- ಸಾರ್ವಜನಿಕ ಹಿತಾಸಕ್ತಿ: ನಾವು ಪ್ರಸಾರ ಮಾಡಿದ ಜಾಹೀರಾತುಗಳಲ್ಲಿ ಸಾಕ್ಷರತೆ, ಕೃಷಿ, ನಾರಿಯರ ಕಲ್ಯಾಣ ಮತ್ತು ಸ್ವಚ್ಛತೆಯಂತಹ ಸಮಾಜಮುಖಿ ವಿಷಯಗಳಿದ್ದವು. ಆದ್ದರಿಂದ ಸೇವೆಯಲ್ಲಿ ಯಾವುದೇ ಕೊರತೆಯಾಗಿಲ್ಲ ಎಂಬ ವಾದವನ್ನು ಅದು ಮುಂದಿಟ್ಟಿತು.
ಗ್ರಾಹಕ ನ್ಯಾಯಾಲಯದ ಏನು ಹೇಳಿತು?
ಪಿವಿಅರ್ (PVR) ಮಂಡಿಸಿದ ವಾದಗಳನ್ನು ಸಂಪೂರ್ಣವಾಗಿ ಗ್ರಾಹಕ ನ್ಯಾಯಾಲಯ ತಳ್ಳಿಹಾಕಿತು.
· ಸಾರ್ವಜನಿಕ ಹಿತಾಸಕ್ತಿ ಪ್ರದರ್ಶನದ ಮಿತಿ: ಸಮಾಜಮುಖಿ ಮಾಹಿತಿಯ ಚಿತ್ರಗಳು ಗರಿಷ್ಠ 2 ನಿಮಿಷಗಳಷ್ಟು ಮಾತ್ರ ಇರಬೇಕು ಹಾಗೂ ಸಿನಿಮಾ ಪ್ರಾರಂಭವಾಗುವ 10 ನಿಮಿಷಗಳ ಒಳಗಾಗಿ ಪ್ರಸಾರವಾಗಬೇಕು.
· ಅನುಚಿತ ವ್ಯಾಪಾರ ಪ್ರಕ್ರಿಯೆ: ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರನ್ನು ಬಲವಂತವಾಗಿ ಜಾಹೀರಾತು ನೋಡುವಂತೆ ಮಾಡಿ ವಾಣಿಜ್ಯ ಲಾಭಗಳಿಸುವುದು ಅನುಚಿತ ವ್ಯಾಪಾರ (Unfair Trade Practice) ಆಗುತ್ತದೆ-
ಎಂಬ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (Ministry of Information and Broadcasting) ನಿಯಮಾವಳಿಗಳನ್ನು ನ್ಯಾಯಾಲಯ ಎತ್ತಿಹಿಡಿಯಿತು.
ನ್ಯಾಯಾಲಯದ ಆದೇಶ
ಅಂತಿಮವಾಗಿ ನ್ಯಾಯಾಲಯವು ಈ ಕೆಳಗಿನ ಆದೇಶವನ್ನು ನೀಡಿತು:
- ₹20,000 - ದೂರುದಾರರಿಗೆ ಅನುಭವಿಸಿದ ಕಿರುಕುಳ ಮತ್ತು ತೊಂದರೆಗಾಗಿ ಪರಿಹಾರ.
- ₹5,000 - ದೂರಿನ ಕಾನೂನು ವೆಚ್ಚವಾಗಿ ವಕೀಲರಿಗೆ ನೀಡಬೇಕು.
- ₹50,000 - ದಂಡದ ರೂಪದಲ್ಲಿ (Punitive Damages) ಜಿಲ್ಲಾ ಗ್ರಾಹಕ ಕಲ್ಯಾಣ ನಿಧಿಗೆ (District Consumer Welfare Fund) ಪಾವತಿಸಬೇಕು.
- ಶಾಶ್ವತ ತಡೆ: ನಿಯಮ ಮೀರಿದ ಸುದೀರ್ಘ ಜಾಹೀರಾತು ಪ್ರದರ್ಶನವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.
ಬೆಂಗಳೂರಿನಲ್ಲೂ ನಡೆದಿತ್ತು ಇಂತಹುದೇ ಘಟನೆ!
ಇದೇ ರೀತಿಯ ಘಟನೆ 2023 ರಲ್ಲಿ ಬೆಂಗಳೂರಿನಲ್ಲಿ ಕೂಡಾ ನಡೆದಿತ್ತು. ಅಭಿಷೇಕ್ ಎಂಬ ಗ್ರಾಹಕರು 'ಸಾಮ್ ಬಹಾದ್ದೂರ್' ಸಿನಿಮಾ ನೋಡಲು ಹೋದಾಗ ಸುಮಾರು 25 ನಿಮಿಷಗಳ ಕಾಲ ಸುದೀರ್ಘ ಜಾಹೀರಾತುಗಳನ್ನು ಹಾಕಲಾಗಿತ್ತು. ಇದರಿಂದ ಅವರ ಕೆಲಸದ ವೇಳಾಪಟ್ಟಿ ಹಾಳಾಗಿತ್ತು.
2025 ರ ಫೆಬ್ರವರಿಯಲ್ಲಿ ತೀರ್ಪು ನೀಡಿದ್ದ ಬೆಂಗಳೂರು ಗ್ರಾಹಕ ನ್ಯಾಯಾಲಯವು PVR ಮತ್ತು Inox ಸಂಸ್ಥೆಗಳಿಗೆ ₹20,000 ಪರಿಹಾರ, ₹8,000 ಕಾನೂನು ವೆಚ್ಚ ಹಾಗೂ ₹1 ಲಕ್ಷ ರೂಪಾಯಿಗಳನ್ನು ಗ್ರಾಹಕ ಕಲ್ಯಾಣ ನಿಧಿಗೆ ದಂಡವಾಗಿ ಪಾವತಿಸಬೇಕು ಎಂದು ಆದೇಶಿಸಿತ್ತು. ಆದರೆ, ಟಿ ಕೆ ಟ್ ಬುಕಿಂಗ್ ಆ್ಯಪ್ 'BookMyShow' ಗೆ ಸಿನಿಮಾ ಪ್ರದರ್ಶನದ ಸಮಯದ ಮೇಲೆ ನಿಯಂತ್ರಣವಿಲ್ಲದ ಕಾರಣ ಅದನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು.
ಈ ಕಥೆಯಿಂದ ತಿಳಿಯಬೇಕಾದ ಕಾನೂನು ಅರಿವು:
- ಗ್ರಾಹಕರ ಸಮಯವೂ ಅಮೂಲ್ಯ: ನೀವು ಹಣ ನೀಡಿ ಖರೀದಿಸುವುದು 'ಸಿನಿಮಾ ನೋಡಲು' ಹೊರತು 'ಜಾಹೀರಾತು ವೀಕ್ಷಿಸಲು' ಅಲ್ಲ.
- ಸೇವೆಯ ಕೊರತೆ (Deficiency of Service): ನಿಯಮಿತ ಸಮಯಕ್ಕೆ ಸೇವೆ ನೀಡದಿರುವುದು ಅಥವಾ ಭರವಸೆ ನೀಡಿದ ಸಮಯವನ್ನು ಉಲ್ಲಂಘಿಸುವುದು ಗ್ರಾಹಕ ರಕ್ಷಣೆ ಕಾಯ್ದೆ-2019 ರ ಪ್ರಕಾರ ಶಿಕ್ಷಾರ್ಹ ಅಪರಾಧ.
- ಗ್ರಾಹಕರ ಹಕ್ಕು ಚಲಾಯಿಸಿ: ಸಿನಿಮಾ ಮಂದಿರಗಳು ಅಥವಾ ಯಾವುದೇ ಸಂಸ್ಥೆಗಳು ನಿಮ್ಮ ಹಕ್ಕುಗಳನ್ನು ಉಲ್ಲಂಘಿಸಿದರೆ, ಟಿಕೆಟ್, ಸಮಯದ ವಿಡಿಯೋ/ಫೋಟೋ ಇತ್ಯಾದಿ ನಿಯಮಿತ ದಾಖಲೆಗಳೊಂದಿಗೆ ಗ್ರಾಹಕ ನ್ಯಾಯಾಲಯವನ್ನು ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಸಂಪರ್ಕಿಸಬಹುದು.


No comments:
Post a Comment