ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ!
ಇದು ಬೆಂಗಳೂರಿನಲ್ಲಿ ಚಾಲ್ತಿಯಲ್ಲಿ ಇರುವ ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ.
ಎಲ್ಲ ಕಡೆಯಲ್ಲೂ ಆಟೋ ರಿಕ್ಷಾ ಇರುವುದು ಪ್ರಯಾಣಿಕರನ್ನು ಕರೆದೊಯ್ಯಲು. ಆದರೆ ಇಲ್ಲಿ ಅಂದರೆ ರಾಮಕೃಷ್ಣ ಹೆಗಡೆ ನಗರದಲ್ಲಿ ಆಟೋರಿಕ್ಷಾಗಳು ಪ್ರಯಾಣಿಕರ ಜೊತೆಗೆ ಅವರ ಕಸವನ್ನೂ ಸಾಗಿಸುತ್ತವೆ.
ಯಾಕೆ ಎಂದು ಕೇಳುತ್ತೀರಲ್ಲವೇ?
ಪ್ರಯಾಣಿಕರಿಗೆ ತಮ್ಮ ಮನೆಯನ್ನು ಸ್ವಚ್ಚಗೊಳಿಸಿದ ಬಳಿಕ ಗೋಣಿಯಲ್ಲಿ ತುಂಬಿದ ಕಸವನ್ನು ಪಕ್ಕದ ಬಡಾವಣೆಯಲ್ಲಿ ಮನೆಗಳ ಮುಂದೆ ಸುರಿಯಲು ಅಷ್ಟೇ.
ಕೆಲವು ದಿನಗಳ ಹಿಂದೆ ಗ್ರೇಟರ್ ಬೆಂಗಳೂರು ಅಥಾರಿಟಿ ಹಿಂದಿನ ಬಿಬಿಎಂಪಿ ಸಿಬ್ಬಂದಿ ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಕಸ ಬಿಸಾಕಿದವರ ಮನೆಗೆ ಕಸ ತಂದು ಸುರಿದು ದಂಡ ವಿಧಿಸುವ ಕ್ರಮ ಜರುಗಿಸಿದ್ದರು.
ಈಗ ಅವರ ಬದಲಿಗೆ ಜನರೇ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ತಮ್ಮ ಮನೆಯ ಕಸ ಸಾಗಿಸಿ ಸುರಿಯುವ ಕೆಲಸಕ್ಕೆ ಹೊರಟಿದ್ದಾರೆ. ಅವರಿಗೆ ಕಸ ಒಯ್ಯಲು ನೆರವಾಗುತ್ತಿರುವುದು ಆಟೋ ರಿಕ್ಷಾಗಳು ಅದಕ್ಕೆ ಹೇಳಿದ್ದು ಇದು ಬೆಂಗಳೂರಿನ ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ ಎಂದು.
ಇಲ್ಲಿರುವ ವಿಡಿಯೋ ನೋಡಿ. ಇದು ಹೆಗಡೆ ನಗರದ ಬಸವಲಿಂಗಪ್ಪ ನಗರಲ್ಲಿ ಇರುವ ಹತ್ಮನೆ ಬಡಾವಣೆಯಿಂದ ೭ನೇ ಅಡ್ಡರಸ್ತೆಯ ಮೂಲಕ ಶ್ರೀ ಬಾಲಾಜಿ ಕೃಪಾ ಬಡಾವಣೆಗೆ ಬಂದು ೪೦೮ನೇ ನಂಬರಿನ ಮನೆಯ ಗೇಟಿನ ಮುಂದೆ ಜಾರಿಸಿ ಹೋದ ದೃಶ್ಯ. ಆಟೋ ರಿಕ್ಷಾ ೪೦೭ನೇ ನಂಬರಿನ ಮನೆಯ ಮುಂದೆ ಕಸದ ಮೂಟೆ ಇಟ್ಟುಕೊಂಡು ಬರುವುದು ಮತ್ತು ೪೦೮ನೇ ನಂಬರಿನ ಮನೆಯ ಮುಂದೆ ಜಾರಿಸಿ ಮುಂದಕ್ಕೆ ಹೋಗುವುದು ಈ ಎರಡೂ ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಾಂ. ಬಹಳ ಮುಖ್ಯವಾದದ್ದು ಏನು ಎಂದರೆ ಇದು ೨೦೨೬ ಫೆಬ್ರುವರಿ ೫ರಂದು ಮಟ ಮಟ ಮಧ್ಯಾಹ್ನ ೩.೩೦ರ ಸಮಯದಲ್ಲಿ ನಡೆದ ಘಟನೆ.
ರಾತ್ರಿ ಹೊತ್ತಿನಲ್ಲಿ ಇಲ್ಲಿನ ರಸ್ತೆ ರಸ್ತೆಗಳಿಗೂ ಹೀಗೆಯೇ ಕಸ ಬಂದು ಬೀಳುತ್ತಿರುತ್ತವೆ.
ರಿಕ್ಷಾಗಳಷ್ಟೇ ಅಲ್ಲ, ಸ್ಕೂಟರುಗಳಲ್ಲಿ ಹೀಗೆ ಕಸದ ಮೂಟೆ ತಂದು ಮನೆಗಳ ಮುಂದೆ ತಂದು ಇಟ್ಟು ಆ ಮನೆಯವರ ಮೂಲಕ ಅದನ್ನು ಬಿಬಿಎಂಪಿ ವಾಹನಕ್ಕೆ ತಲುಪಿಸುವವರೂ ಇದ್ದಾರೆ.
ಬಿಬಿಎಂಪಿ/ ಜಿಬಿಎಯ ʼದಂಡʼಕ್ಕೆ ಇವರು ಬಗ್ಗುವುದಿಲ್ಲ. ಇವರಿಗೆ ʼದಂಡಂ ದಶಗುಣಂʼ ಎನ್ನುವ ಹಾಗೆ ಆರಡಿ ಉದ್ದದ ದಂಡಗಳಿಂದಲೇ ಬುದ್ದಿ ಕಲಿಸಬೇಕಾದ ಕಾಲ ಬರುತ್ತದೋ ಏನೋ.
ಬೆಂಗಳೂರಿನಲ್ಲಿ ಬೇರೆ ಯಾವುದಾದರೂ ಬಡಾವಣೆಯವರಿಗೆ ಇಂತಹ ಉಚಿತ ಕಸ ಸಾಗಣೆ ಆಟೋ ವ್ಯವಸ್ಥೆ ಬೇಕಾಗಿದ್ದರೆ ಅತ್ಯಂತ ವೇಗವಾಗಿ ನಂಬರ್ ಕೂಡಾ ಗೊತ್ತಾಗದಂತೆ ಸಾಗಿ ಹೋದ ಈ ಆಟೋ ರಿಕ್ಷಾದ ನಂಬರ್ ಗುರುತಿಸಿ ಅವರನ್ನೇ ಸಂಪರ್ಕಿಸಬಹುದು.

No comments:
Post a Comment