ಈ ಕೃಷಿಕ ಪದವೀಧರನ ಸಾಧನೆಗೊಂದು ಸೆಲ್ಯೂಟ್!
Wednesday, September 18, 2024
PARYAYA: ಸಾಧನೆ / ಸಾಧಕರು
PARYAYA: ಗಣೇಶೋತ್ಸವ ೨೦೨೪: ಭರತನಾಟ್ಯ
ಗಣೇಶೋತ್ಸವ ೨೦೨೪: ಭರತನಾಟ್ಯ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ೨೦೨೪ ಸೆಪ್ಟೆಂಬರ್ ೧೩, ೧೪ ಮತ್ತು ೧೫ರಂದು ಗಣೇಶೋತ್ಸವ ಕಾರ್ಯಕ್ರಮ ಸಡಗರದೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೈಸೂರಿನ ವಿದುಷಿ ಶ್ರೀಮತಿ ಮಧುರಾ ಕಾರಂತ್ ಅವರು ತಮ್ಮ ಭರತನಾಟ್ಯದ ಮೂಲಕ ಪ್ರೇಕ್ಷಕರ ಮನ ಗೆದ್ದರು. ಮಧುರಾ ಅವರ ಭರತನಾಟ್ಯದ ಒಂದು ದೃಶ್ಯ ಇಲ್ಲಿದೆ:Monday, September 16, 2024
PARYAYA: ಕೊನೆಯ ಕ್ಷಣದಲ್ಲೂ ಕಾಯಕದ್ದೇ ಚಿಂತನೆ..
ಕೊನೆಯ ಕ್ಷಣದಲ್ಲೂ ಕಾಯಕದ್ದೇ ಚಿಂತನೆ..
ಸರ್. ಹದಿನೈದು ನಿಮಿಷ ಅಷ್ಟೇ ಸಾರ್. ಹದಿನೈದು ನಿಮಿಷದ ಹಿಂದೆ ನನ್ನ ಬಳಿ ಫೋನಿನಲ್ಲಿ ಮಾತನಾಡಿದ್ದರು.ಈಗಷ್ಟೇ ಊಟ ಆಯ್ತು. ಗ್ಯಾಚ್ಯುಟಿ ಕೇಸಿಗೆ ಸಂಬಂಧಪಟ್ಟ ಹಾಗೆ ಹಲವಾರು ದಾಖಲೆಗಳ ಫೈಲ್ ಸಿದ್ಧ ಪಡಿಸಿ ಇಟ್ಟಿದ್ದೇನೆ. ಮನೆಗೆ ಬಂದು ಬಿಡಿ. ಕಾಪಿ ಮಾಡಿಸಿಕೊಂಡು ಬರೋಣ. ನಾಳೆ ವಕೀಲರನ್ನು ಕಂಡು ಮಾತಾಡೋಣ ಅಂತ ಹೇಳಿದ್ದರು. ನಾನು ಬರ್ತೇನೆ ಅಂತ ಹೇಳಿದ ಬಳಿಕ ಫೋನ್ ಇಟ್ಟಿದ್ದರು.
ನಾನು ಇನ್ನಿಬ್ಬರಿಗೂ ಫೋನ್ ಮಾಡಿ ಬರಲು ಹೇಳಿ ಬಳಿಕ ಮನೆಯಿಂದ ಹೊರಟಿದ್ದೆ. ಮೇಕ್ರಿ ಸರ್ಕಲ್ ತಲುಪಿದ್ದೆ. ಮೊಬೈಲ್ ಫೋನ್ ರಿಂಗಣಿಸಿತು. ಫೋನ್ ಕೈಗೆ ತೆಗೆದುಕೊಂಡೆ. ಆ ಕಡೆಯಿಂದ ಮ್ಯಾಡಮ್ ಮಾತನಾಡಿದರು: “ನೀಲಕಂಠಪ್ಪ, ಯಜಮಾನ್ರು ಕುಸಿದು ಬಿದ್ರು. ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದಾರೆ.”
ʼಯಾವ ಆಸ್ಪತ್ರೆ ಮೇಡಂ?ʼ
ʼಪೋರ್ಟಿಸ್ʼ.
ʼಸರಿ ಮೇಡಂ ನಾನು ಅಲ್ಲಿಗೆ ಬರ್ತೇನೆʼ.
ಮೇಕ್ರಿ ಸರ್ಕಲ್ ನಿಂದ ಸ್ವಲ್ಪ ದೂರ ಮುಂದಕ್ಕೆ ಬಂದಿದ್ದೆ. ಮತ್ತೆ ಫೋನ್ ಸದ್ದು ಮಾಡಿತು. ಕೈಗೆ ತೆಗೆದುಕೊಂಡೆ. ʼಸರ್ ಅಪ್ಪ ಹೋಗ್ಬಿಟ್ರುʼ ಮಗ ಹೇಳ್ತಾ ಇದ್ದರು.
ʼಈಗ ಎಲ್ಲಿದ್ದೀರಿ?ʼ
ʼವಾಪಸ್ ಮನೆಗೆ ಬಂದ್ವಿ. ಅಲ್ಲಿಗೇ ಬಂದು ಬಿಡಿʼ
ʼನನಗೆ ಶಾಕ್ ಆಗಿತ್ತು. ಅಷ್ಟೇ ಸಾರ್. ಹದಿನೈದು ನಿಮಿಷದ ಹಿಂದೆ ಮಾತನಾಡುವಾಗ ಚೆನ್ನಾಗಿಯೇ ಇದ್ದರು. ತುಂಬಾ ಚೆನ್ನಾಗಿ ಮಾತನಾಡಿದ್ದರು.ʼ
ʼಮತ್ತೆ ಏನಾಯಿತಂತೆ?ʼ
ʼಸರ್ ನನ್ನ ಬಳಿ ಮಾತನಾಡಿ ಫೋನ್ ಇಟ್ಟ ಬಳಿಕ ಸಣ್ಣಗೆ ಕೆಮ್ಮು ಬಂತಂತೆ.ಉಸಿರು ಎಳೆದುಕೊಳ್ಳಲು ಸ್ವಲ್ಪ ಕಷ್ಟ ಆಗ್ತಿದೆ ಅಂತ ಇನ್‌ಹೇಲರ್ ತೆಗೆದುಕೊಂಡು ಔಷಧ ತೆಗೆದುಕೊಳ್ಳಲು ಯತ್ನಿಸಿದರಂತೆ. ಆದರೆ ಸಾಧ್ಯವಾಗದೆ ಕುಸಿದರಂತೆ.ʼ
೨೦೨೪ ಸೆಪ್ಟೆಂಬರ್ ೧೪ರಂದು ಯಾವುದೋ ಯೋಚನೆಯಲ್ಲಿ ಇದ್ದರೇನೋ ಎಂಬಂತೆ ನಿಶ್ಚಲರಾಗಿ ಮಲಗಿದ್ದ ಅವರನ್ನು ನೋಡಿದ ಬಳಿಕ ರಾಮಾನುಜ ಎಚ್.ಎಸ್. (೦೨.೦೫.೧೮೬೦-೧೩.೦೯.೨೦೨೪) ಅವರ ಹಿಂದಿನ ದಿನ ಸಂಜೆಯ ಕೊನೆಯ ಕ್ಷಣಗಳ ಬಗ್ಗೆ ಹೇಳಿದ್ದು ನೀಲಕಂಠಪ್ಪ.
ಎಂತಹ ಕಾಯಕಜೀವಿ ರಾಮಾನುಜ ನೀವು. ಒಂದು ಸಲ ನನ್ನ ಬಳಿ ಮಾತನಾಡುವಾಗ ಹೇಳಿದ್ದಿರಿ. ಈ ಕೆಲಸ ಮಾಡಲು ತುಂಬಾ ಬದ್ಧತೆ ಬೇಕು. ಇಲ್ಲದಿದ್ದರೆ, ಅರ್ಧಕ್ಕೆ ಕೆಲಸ ನಿಂತುಹೋಗುತ್ತದೆ ಅಂತ.
ನೀವು ಮಾಡುತ್ತಿದ್ದ ಕೆಲಸ ನಿಲ್ಲಿಸಲೇ ಇಲ್ಲ. ಕೊನೆಯ ಕ್ಷಣದವರೆಗೂ. ನಿಜಕ್ಕೂ ಕಾಯಕಜೀವಿಯ ಅದ್ಭುತ ಬದ್ಧತೆಗೆ ಉದಾಹರಣೆ ನೀವು.
ಪ್ರಜಾವಾಣಿಯಲ್ಲಿ ಕೆಲಸ ಮಾಡುವಾಗಲೇ ನಿಮ್ಮನ್ನು ಗಮನಿಸಿದ್ದೆ. ನೌಕರರ ಹಿತ ಕಾಯುವ ಸಲುವಾಗಿ ಸಂಘದ ನಾಯಕರಾಗಿ ನೀವು ನಿರಂತರವಾಗಿ ಪಡುತ್ತಿದ್ದ ಶ್ರಮ ಅಷ್ಟಿಷ್ಟಲ್ಲ. ಯಾವುದೋ ಒಂದು ದಿನ ದೆಹಲಿಗೆ ಫೋನ್, ಇನ್ಯಾವುದೋ ಒಂದು ದಿನ ಚೆನ್ನೈಗೆ ಫೋನ್. ಈ ಫೋನಿನ ಬೆನ್ನಲ್ಲೇ ನಿಮಗೆ ಬೇಕಾಗಿದ್ದ ಅದ್ಯಾವುದೋ ದಾಖಲೆ ನಿಮ್ಮ ಕೈಸೇರುತ್ತಿತ್ತು.
ಕಾರ್ಮಿಕ ಕಾಯಿದೆಗಳ ಬಗೆ ನಿಮಗಿದ್ದ ಅನುಭವ ಅಪಾರ. ಎಷ್ಟೋ ಬಾರಿ ವಕೀಲರಿಗೇ ಪ್ರಕರಣವನ್ನು ಎಳೆ ಎಳೆಯಾಗಿ ವಿವರಿಸಿ, ಕೇಸ್ ಮುಂದುವರೆಸಬೇಕಾದ ದಿಕ್ಕನ್ನು ಸೂಚಿಸುತ್ತಿದ್ದಿರಿ. ಅವರಿಗೆ ವಾದಕ್ಕೆ ಬೇಕಾದ ಸಕಲ ಸಂಪನ್ಮೂಲಗಳನ್ನೂ ಒದಗಿಸಿಕೊಡುತ್ತಿದ್ದಿರಿ.
ಇಷ್ಟೆಲ್ಲ ಸಂಪನ್ಮೂಲ ಒದಗಿಸಲು ಕೈಯಿಂದಲೇ ಹಣ ವೆಚ್ಚ ಮಾಡಿಕೊಳ್ಳುತ್ತಿದ್ದಿರಿ. ನಿವೃತ್ತಿಯ ಬಳಿಕವೂ ನಿವೃತ್ತ ನೌಕರರ ಹಿತ ರಕ್ಷಣೆಗಾಗಿ ವಕೀಲರ ಜೊತೆಗೆ ಓಡಾಡುತ್ತಿದ್ದಿರಿ. ನ್ಯಾಯಾಲಯಗಳಿಗೆ ತೆರಳಿ ಸಾಕ್ಷ್ಯ ನೀಡುತ್ತಿದ್ದಿರಿ.
ವಾರದ ಹಿಂದೆ ಫೋನ್ ಮಾಡಿದ್ದಾಗ ನನ್ನ ಬಳಿ ಹೇಳಿದ್ದಿರಿ.ʼಯಾಕೋ ಆರೋಗ್ಯ ಸ್ವಲ್ಪ ಕೈಕೊಡುತ್ತಿದೆ. ಅದೂ ದೆಹಲಿಗೆ ಹೋಗಿ ಬಂದ ಬಳಿಕ. ಉಸಿರಾಟದ ಸಮಸ್ಯೆಯಾಗುತ್ತಿದೆ.ʼ. ನೀವು ದೆಹಲಿಗೆ ಹೋಗಿದ್ದದ್ದು ಕೂಡಾ ಕಾರ್ಮಿಕರಿಗೆ ಸಂಬಂಧಪಟ್ಟ ಪ್ರಕರಣದ ಸಲುವಾಗಿ.
ಇಷ್ಟೊಂದು ಬೇಗ ಹೀಗೇಕೆ ಹೊರಟು ಬಿಟ್ಟಿರಿ? ಹೊಸದಾಗಿ ಶುರು ಮಾಡಬೇಕು ಅಂದುಕೊಂಡಿದ್ದ ಹೋರಾಟದ ಬಗ್ಗೆ ದಿವಂಗತ ಸುಬ್ಬರಾವ್ ಅವರ ಬಳಿಯೋ, ದಿವಂಗತ ಶಾಂತಾರಾಮ್ ಭಟ್ ಅವರ ಬಳಿಯೋ ಸಲಹೆ ಪಡೆಯುವ ಯೋಚನೆ ಬಂತೇ?
ಪ್ರಶ್ನೆಗಳೆಲ್ಲ ಕೇವಲ ಪ್ರಶ್ನೆಗಳಾಗಿ ಉಳಿದು ಬಿಡುತ್ತವೆ.
ಬೇರೇನೂ ಹೇಳಲು ಸಾಧ್ಯವಾಗುತ್ತಿಲ್ಲ. ನಿಮ್ಮ ಹೋರಾಟದ ಕಾಯಕಕ್ಕೆ ಅಂತಿಮ ಫಲ ಇನ್ನೂ ಲಭಿಸಿಲ್ಲ. ಆದಷ್ಟು ಬೇಗ ಲಭಿಸಲಿ. ಎಲ್ಲೇ ಇದ್ದರೂ ನಿಮ್ಮ ಆತ್ಮಕ್ಕೆ ಶಾಂತಿ ಲಭಿಸುವಂತಾಗಲಿ ಮತ್ತು ನಿಮ್ಮ ಕುಟುಂಬದ ಸದಸ್ಯರೆಲ್ಲರಿಗೂ ಈ ಅಗಲಿಕೆಯ ನೋವು ಸಹಿಸುವ ಶಕ್ತಿ ಸಿಗಲಿ ಎಂಬುದಷ್ಟೇ ಪ್ರಾರ್ಥನೆ.
ಶಾಂತಾರಾಮ ನೀನೂ ರವಿಯ ದಾರಿ ಹಿಡಿದೆಯಾ..?
Friday, September 13, 2024
PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ
ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ
ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 2024ರ ಸಾರ್ವಜನಿಕ ಗಣೇಶೋತ್ಸವ ಸಡಗರದೊಂದಿಗೆ 2024 ಸೆಪ್ಟೆಂಬರ್ 13ರ ಶುಕ್ರವಾರ ಆರಂಭಗೊಂಡಿತು.
ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯದ ಕಂದಾಯ ಸಚಿವರೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಶ್ರೀ ಕೃಷ್ಣ ಬೈರೇಗೌಡ ಅವರು ಪಾಲ್ಗೊಂಡರು. ಅವರ ಜೊತೆಗೆ ಯುವ ನಾಯಕ ಶ್ರೀ ಶಿವಕುಮಾರ್ ಮತ್ತು ಇತರರೂ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶುಕ್ರವಾರ ಬೆಳಗ್ಗೆ ವಿಗ್ರಹ ಪ್ರತಿಷ್ಠಾಪನೆ, ಪ್ರಾಣಪ್ರತಿಷ್ಠೆ ಮತ್ತು ಗಣಪತಿ ಉಪನಿಷತ್ ಸಹಿತ ಪೂಜೆ ನೆರವೇರಿತು. ಸಂಜೆ 6 ಗಂಟೆಗೆ ಬೆಂಗಳೂರಿನ ಸ್ವರ ಚಿರಂತನ ತಂಡದಿಂದ ರಸಮಂಜರಿ ಕಾರ್ಯಕ್ರಮ, ರಾತ್ರಿ 9ಗಂಟೆಗೆ ಮಹಾ ಮಂಗಳಾರತಿ ನೆರವೇರಲಿದೆ.
2024 ಸೆಪ್ಟೆಂಬರ್ 14ರ ಶನಿವಾರ ಬೆಳಗ್ಗೆ 9 ಗಂಟೆಗೆ ಕೇರಳ ಚೆಂಡೆ ವಾದನದ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಮತ್ತು ಅಭಯ ಆಂಜನೇಯ ಪೂಜೆಯ ಜೊತೆಗೆ ಪ್ರತಿಷ್ಠಾಪಿತ ಸಾರ್ವಜನಿಕ ಗಣಪ- ಗೌರಿ ದೇವರಿಗೆ ಗಣಪತಿ ಉಪನಿಷತ್ ಸಹಿತ ಪೂಜೆ ನಡೆಯಲಿದೆ ಬೆಳಗ್ಗೆ 9ರಿಂದ 12 ಗಂಟೆಯವರೆಗೆ ಬಡಾವಣೆಯ ಮಕ್ಕಳು, ಮಹಿಳೆಯರಿಗೆ ಆಟೋಟ ಸ್ಪರ್ಧೆ ನಡೆಯಲಿದೆ. ಸಂಜೆ 4 ಗಂಟೆಗೆ ಟಿಸಿಎಲ್ ಸೇವಾ ಸಮುದಾಯದಿಂದ ಸಂಗೀತ ಕಚೇರಿ, ರಾತ್ರಿ 7ರಿಂದ ವಿದುಷಿ ಶ್ರೀಮತಿ ಮಧುರಾ ಕಾರಂತ್ ಮೈಸೂರು ಅವರಿಂದ ಭರತ ನಾಟ್ಯ, ಆ ಬಳಿಕ ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ.
2024 ಸೆಪ್ಟೆಂಬರ್ 15ರ ಭಾನುವಾರ ಬೆಳಗ್ಗೆ 9.30ಕ್ಕೆ ಗಣಪತಿ ಉಪನಿಷತ್ ಸಹಿತ ಪೂಜೆ, ಗಣ ಹವನ ನೆರವೇರಲಿದೆ. ಮಧ್ಯಾಹ್ನ 1ರಿಂದ ಪ್ರಸಾದ ವಿನಿಯೋಗ, ಸಂಜೆ 5 ಗಂಟೆಗೆ ಮಹಾಪೂಜೆ, ಬಳಿಕ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಮತ್ತು ವಿಸರ್ಜನೆ ನಡೆಯಲಿದೆ.
ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ, ಬಡಾವಣೆಯ ಸ್ಥಾಪಕರಾದ ಮಾಲೂರು ಎಸ್ ಎನ್ ಕೃಷ್ಣಯ್ಯ ಶೆಟ್ಟಿ ಅವರು ಕೂಡಾ ಪಾಲ್ಗೊಳ್ಳಲಿದ್ದಾರೆ.
ಗಣೇಶೋತ್ಸವ ಕಾರ್ಯಕ್ರಮಕ್ಕೆ ಶ್ರೀಮತಿ ಹೇಮಾ ಮತ್ತು ಕುಟುಂಬದವರು ಗಣೇಶ ವಿಗ್ರಹವನ್ನು ಪ್ರಾಯೋಜಿಸಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಬಡಾವಣೆಯ ಮಹಿಳೆಯರು ಗಣ ಹೋಮದ ಪ್ರಾಯೋಜನೆ ಮಾಡಿದ್ದಾರೆ. ಶ್ರೀ ಮುನಿರಾಜು ಮತ್ತು ಕುಟುಂಬ ಹೂ-ಹಣ್ಣುಗಳನ್ನು ಪ್ರಾಯೋಜಿಸಿದ್ದರೆ, ರಸ ಮಂಜರಿ (ಆರ್ಕೆಸ್ಟ್ರಾ) ಕಾರ್ಯಕ್ರಮಕ್ಕೆ ಶ್ರೀ ಎಚ್. ಶಿವಕುಮಾರ್ ಪ್ರಾಯೋಜನೆ ಮಾಡಿದ್ದಾರೆ.
ಪೆಂಡಾಲ್ ಮತ್ತು ವೇದಿಕೆಗೆ ಶ್ರೀ ಸಿರಾಜ್ ಮತ್ತು ಕುಟುಂಬ ಪ್ರಾಯೋಜನೆ ಮಾಡಿದ್ದರೆ, ಕೇರಳ ಚೆಂಡೆ ವಾದನಕ್ಕೆ ಬಡಾವಣೆಯ ಮಲಯಾಳಿ ಗೆಳೆಯರು ಪ್ರಾಯೋಜನೆ ಮಾಡಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ಶ್ರೀ ರಾಘವೇಂದ್ರ ಕಾಮತ್ ಮತ್ತು ಶ್ರೀ ಮಧು ನಾಯರ್ ಪ್ರಾಯೋಜಿಸಿದ್ದಾರೆ.
ಶ್ರೀ ಪ್ರದೀಪ ಶಾಸ್ತ್ರಿ ಮತ್ತು ಕುಟುಂಬ ಭರತ ನಾಟ್ಯದ ಪ್ರಾಯೋಜಿಕತ್ವ ವಹಿಸಿಕೊಂಡಿದ್ದರೆ ಶ್ರೀ ಎಚ್.ವಿ. ಉದಯಶಂಕರ್, ಶ್ರೀ ನಾಗರಾಜ್, ಶ್ರೀ ವಿ. ಮುನಿರಾಜು ಮತ್ತು ಶ್ರೀ ಕೃಷ್ಣೋಜಿ ರಾವ್ ಪ್ರಸಾದಕ್ಕೆ ಪಾಯೋಜಿಕತ್ವ ವಹಿಸಿಕೊಂಡಿದ್ದಾರೆ.
ಬಡಾವಣೆ ಮತ್ತು ಆಸುಪಾಸಿನ ಭಕ್ತಾದಿಗಳೂ ಉದಾರ ದೇಣಿಗೆ ಮೂಲಕ ಉತ್ಸವ ಯಶಸ್ಸಿಗೆ ಶ್ರಮಿಸಿದ್ದರೆ, ಯುವಕರ ತಂಡ ಗಣಪನ ಸೇವೆಗೆ ಹೆಗಲು ನೀಡಿ ಉತ್ಸವಕ್ಕೆ ಕಳೆಗಟ್ಟಿಸಿದೆ.
ಇವುಗಳನ್ನೂ ಓದಿರಿ:
Thursday, September 12, 2024
PARYAYA: ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್ ಭರವಸೆ
ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್ ಭರವಸೆ
ಬೆಂಗಳೂರು: ಡಿಜಿಟಲ್ ಪರಿವರ್ತನೆಯ ಮೂಲಕ ಗ್ರಾಮ ಪಂಚಾಯತಿಗಳ ಸಾಮರ್ಥ್ಯ ವೃದ್ಧಿಗಾಗಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ (ಎನ್‌ಎಲ್‌ಟಿ- ನ್ಯಾವಿಗೇಟೆಡ್ ಲರ್ನಿಂಗ್ ಟೆಕ್ನಾಲಜಿ) ಮತ್ತು ಇತರ ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಯೋಜನೆಗೆ ಬೆಂಬಲ ವ್ಯಕ್ತ ಪಡಿಸಿರುವ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಯೋಜನೆಯನ್ನು ಸರ್ಕಾರದ ಮುಂದಿನ ಮುಂಗಡ ಪತ್ರದಲ್ಲಿ ಅಳವಡಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ.
ನಗರದ ಅರಮನೆ ಮೈದಾನದ ಕೆ.ಸಿ. ಕ್ಲಬ್ ಆವರಣದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘ ʼಅಗ್ರಿ ಬೆಸ್ಟ್ ಕ್ಲಬ್-75ʼ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ ಡಿ ಪಿಆರ್) ಸಚಿವರ ಜೊತೆಗೆ ಮಾತನಾಡುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಪೂರ್ಣ ಸ್ವರಾಜ್ ಫೌಂಡೇಶನ್ ಸಂಸ್ಥಾಪಕ ಹಾಗೂ ನಿರ್ವಾಹಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್ ಅವರು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಪರಿವರ್ತನೆಯ ಮೂಲಕ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಎನ್ ಎಲ್ ಟಿ ಮತ್ತು ಇತರ ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆ ನೀಡಿದ ಪ್ರಾತ್ಯಕ್ಷಿಕೆಯನ್ನು ಸಚಿವರು ಮೆಚ್ಚಿಕೊಂಡರು.
ಇಂತಹ ಉಪಕ್ರಮಗಳು ಗ್ರಾಮೀಣ ಸಮುದಾಯಗಳಲ್ಲಿ ಧನಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ನುಡಿದರು. ಕೃಷಿ ವಿಶ್ವ ವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘವು ಈ ವಿಚಾರಗಳನ್ನು ತನ್ನ ಕಾರ್ಯಕ್ಷೇತ್ರದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಪರಿವರ್ತನೆಯ ಮೂಲಕ ಸಾಮರ್ಥ್ಯ ವೃದ್ಧಿಗಾಗಿ ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ನಿಟ್ಟಿನಲ್ಲಿ ಸಂಪೂರ್ಣ ಸ್ವರಾಜ್ ಫೌಂಡೇಶನ್ ಕೈಗೊಂಡಿರುವ ಉಪಕ್ರಮಗಳನ್ನು ಡಾ. ಶಂಕರ ಪ್ರಸಾದ್ ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಗ್ರಾಮ ಪಂಚಾಯಿತಿಯಂತಹ ಬುಡ ಮಟ್ಟದ ಸಂಸ್ಥೆಗಳನ್ನು ಬಲ ಪಡಿಸುವುದು, ಬಡತನ, ಸ್ವಚ್ಛತೆ, ಶುದ್ಧ ನೀರು, ನೈರ್ಮಲ್ಯ, ಆಹಾರ ಭದ್ರತೆ, ಆರೋಗ್ಯ ಮತ್ತು ಶಿಕ್ಷಣದಂತಹ ಸ್ಥಳೀಯ ವಿಷಯಗಳನ್ನು ಡಿಜಿಟಲ್ ಪರಿವರ್ತನೆಯ ಮೂಲಕ ನಿಭಾಯಿಸಬಹುದಾದ ಬಗೆಯ ಬಗ್ಗೆ ಅವರು ವಿವರ ನೀಡಿದರು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಸಾಧನೆಗೂ ಈ ತಂತ್ರಜ್ಞಾನಗಳ ಬಳಕೆಯ ಕುರಿತು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರಜಾತಂತ್ರದ ಪುನಸ್ಥಾಪನೆ ಹಾಗೂ ಭ್ರಷ್ಟಾಚಾರದ ಚಕ್ರವ್ಯೂಹ ಕುರಿತ ಪುಸ್ತಕಗಳನ್ನೂ ಅವರು ಸಚಿವರಿಗೆ ಅರ್ಪಿಸಿದರು.
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಅಗ್ರಿ ಬೆಸ್ಟ್ ಕ್ಲಬ್-75ರ ಸ್ವರ್ಣ ಮಹೋತ್ಸವವನ್ನು 2025ರಲ್ಲಿ ಆಚರಿಸುವ ಬಗ್ಗೆ ಸದಸ್ಯರು ಚರ್ಚಿಸಿದರು. ಸಂಘದ ಅಧ್ಯಕ್ಷ ಕೆ. ಎನ್. ಗೋಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇವುಗಳನ್ನೂ ಓದಿರಿ:
ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
Sunday, September 8, 2024
PARYAYA: ವಿನಾಯಕ ಚತುರ್ಥಿ ಆಚರಣೆ
ವಿನಾಯಕ ಚತುರ್ಥಿ ಆಚರಣೆ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೪ ಸೆಪ್ಟೆಂಬರ್ ೭ರ ಶನಿವಾರ ಶ್ರೀ ವಿನಾಯಕ ಚತುರ್ಥಿ ವಿಶೇಷ ಪೂಜೆ ನಡೆಯಿತು.
ಈ ಸಂದರ್ಭದ ವಿಡಿಯೋ ಇಲ್ಲಿದೆ.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: