ನಾನು ಮೆಚ್ಚಿದ ವಾಟ್ಸಪ್

Monday, September 16, 2024

PARYAYA: ಕೊನೆಯ ಕ್ಷಣದಲ್ಲೂ ಕಾಯಕದ್ದೇ ಚಿಂತನೆ..

 ಕೊನೆಯ ಕ್ಷಣದಲ್ಲೂ ಕಾಯಕದ್ದೇ ಚಿಂತನೆ..

ಸರ್.‌ ಹದಿನೈದು ನಿಮಿಷ ಅಷ್ಟೇ ಸಾರ್.‌ ಹದಿನೈದು ನಿಮಿಷದ ಹಿಂದೆ ನನ್ನ ಬಳಿ ಫೋನಿನಲ್ಲಿ ಮಾತನಾಡಿದ್ದರು.ಈಗಷ್ಟೇ ಊಟ ಆಯ್ತು. ಗ್ಯಾಚ್ಯುಟಿ ಕೇಸಿಗೆ ಸಂಬಂಧಪಟ್ಟ ಹಾಗೆ ಹಲವಾರು ದಾಖಲೆಗಳ ಫೈಲ್‌ ಸಿದ್ಧ ಪಡಿಸಿ ಇಟ್ಟಿದ್ದೇನೆ. ಮನೆಗೆ ಬಂದು ಬಿಡಿ. ಕಾಪಿ ಮಾಡಿಸಿಕೊಂಡು ಬರೋಣ. ನಾಳೆ ವಕೀಲರನ್ನು ಕಂಡು ಮಾತಾಡೋಣ ಅಂತ ಹೇಳಿದ್ದರು. ನಾನು ಬರ್ತೇನೆ ಅಂತ ಹೇಳಿದ ಬಳಿಕ ಫೋನ್‌ ಇಟ್ಟಿದ್ದರು.

ನಾನು ಇನ್ನಿಬ್ಬರಿಗೂ ಫೋನ್‌ ಮಾಡಿ ಬರಲು ಹೇಳಿ ಬಳಿಕ ಮನೆಯಿಂದ ಹೊರಟಿದ್ದೆ. ಮೇಕ್ರಿ ಸರ್ಕಲ್‌ ತಲುಪಿದ್ದೆ. ಮೊಬೈಲ್‌ ಫೋನ್‌ ರಿಂಗಣಿಸಿತು. ಫೋನ್‌ ಕೈಗೆ ತೆಗೆದುಕೊಂಡೆ. ಆ ಕಡೆಯಿಂದ ಮ್ಯಾಡಮ್‌ ಮಾತನಾಡಿದರು: ನೀಲಕಂಠಪ್ಪ, ಯಜಮಾನ್ರು ಕುಸಿದು ಬಿದ್ರು. ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದಾರೆ.”

ʼಯಾವ ಆಸ್ಪತ್ರೆ ಮೇಡಂ?ʼ

ʼಪೋರ್ಟಿಸ್‌ʼ.

ʼಸರಿ ಮೇಡಂ ನಾನು ಅಲ್ಲಿಗೆ ಬರ್ತೇನೆʼ.

ಮೇಕ್ರಿ ಸರ್ಕಲ್‌ ನಿಂದ ಸ್ವಲ್ಪ ದೂರ ಮುಂದಕ್ಕೆ ಬಂದಿದ್ದೆ. ಮತ್ತೆ ಫೋನ್‌ ಸದ್ದು ಮಾಡಿತು. ಕೈಗೆ ತೆಗೆದುಕೊಂಡೆ. ʼಸರ್‌ ಅಪ್ಪ ಹೋಗ್ಬಿಟ್ರುʼ ಮಗ ಹೇಳ್ತಾ ಇದ್ದರು.

ʼಈಗ ಎಲ್ಲಿದ್ದೀರಿ?ʼ

ʼವಾಪಸ್‌ ಮನೆಗೆ ಬಂದ್ವಿ. ಅಲ್ಲಿಗೇ ಬಂದು ಬಿಡಿʼ

ʼನನಗೆ ಶಾಕ್‌ ಆಗಿತ್ತು. ಅಷ್ಟೇ ಸಾರ್.‌ ಹದಿನೈದು ನಿಮಿಷದ ಹಿಂದೆ ಮಾತನಾಡುವಾಗ ಚೆನ್ನಾಗಿಯೇ ಇದ್ದರು. ತುಂಬಾ ಚೆನ್ನಾಗಿ ಮಾತನಾಡಿದ್ದರು.ʼ

ʼಮತ್ತೆ ಏನಾಯಿತಂತೆ?ʼ

ʼಸರ್‌ ನನ್ನ ಬಳಿ ಮಾತನಾಡಿ ಫೋನ್‌ ಇಟ್ಟ ಬಳಿಕ ಸಣ್ಣಗೆ ಕೆಮ್ಮು ಬಂತಂತೆ.ಉಸಿರು ಎಳೆದುಕೊಳ್ಳಲು ಸ್ವಲ್ಪ ಕಷ್ಟ ಆಗ್ತಿದೆ ಅಂತ ಇನ್‌ಹೇಲರ್‌ ತೆಗೆದುಕೊಂಡು ಔಷಧ ತೆಗೆದುಕೊಳ್ಳಲು ಯತ್ನಿಸಿದರಂತೆ. ಆದರೆ ಸಾಧ್ಯವಾಗದೆ ಕುಸಿದರಂತೆ.ʼ

೨೦೨೪ ಸೆಪ್ಟೆಂಬರ್‌ ೧೪ರಂದು ಯಾವುದೋ ಯೋಚನೆಯಲ್ಲಿ ಇದ್ದರೇನೋ ಎಂಬಂತೆ ನಿಶ್ಚಲರಾಗಿ ಮಲಗಿದ್ದ ಅವರನ್ನು ನೋಡಿದ ಬಳಿಕ ರಾಮಾನುಜ ಎಚ್.‌ಎಸ್. (೦೨.೦೫.೧೮೬೦-೧೩.೦೯.೨೦೨೪) ಅವರ ಹಿಂದಿನ ದಿನ ಸಂಜೆಯ ಕೊನೆಯ ಕ್ಷಣಗಳ ಬಗ್ಗೆ ಹೇಳಿದ್ದು ನೀಲಕಂಠಪ್ಪ.

ಎಂತಹ ಕಾಯಕಜೀವಿ ರಾಮಾನುಜ ನೀವು. ಒಂದು ಸಲ ನನ್ನ ಬಳಿ ಮಾತನಾಡುವಾಗ ಹೇಳಿದ್ದಿರಿ. ಈ ಕೆಲಸ ಮಾಡಲು ತುಂಬಾ ಬದ್ಧತೆ ಬೇಕು. ಇಲ್ಲದಿದ್ದರೆ, ಅರ್ಧಕ್ಕೆ ಕೆಲಸ ನಿಂತುಹೋಗುತ್ತದೆ ಅಂತ.  

ನೀವು ಮಾಡುತ್ತಿದ್ದ ಕೆಲಸ ನಿಲ್ಲಿಸಲೇ ಇಲ್ಲ. ಕೊನೆಯ ಕ್ಷಣದವರೆಗೂ. ನಿಜಕ್ಕೂ ಕಾಯಕಜೀವಿಯ ಅದ್ಭುತ ಬದ್ಧತೆಗೆ ಉದಾಹರಣೆ ನೀವು.

ಪ್ರಜಾವಾಣಿಯಲ್ಲಿ ಕೆಲಸ ಮಾಡುವಾಗಲೇ ನಿಮ್ಮನ್ನು ಗಮನಿಸಿದ್ದೆ. ನೌಕರರ ಹಿತ ಕಾಯುವ ಸಲುವಾಗಿ ಸಂಘದ ನಾಯಕರಾಗಿ ನೀವು ನಿರಂತರವಾಗಿ ಪಡುತ್ತಿದ್ದ ಶ್ರಮ ಅಷ್ಟಿಷ್ಟಲ್ಲ. ಯಾವುದೋ ಒಂದು ದಿನ ದೆಹಲಿಗೆ ಫೋನ್‌, ಇನ್ಯಾವುದೋ ಒಂದು ದಿನ ಚೆನ್ನೈಗೆ ಫೋನ್.‌ ಈ ಫೋನಿನ ಬೆನ್ನಲ್ಲೇ ನಿಮಗೆ ಬೇಕಾಗಿದ್ದ ಅದ್ಯಾವುದೋ ದಾಖಲೆ ನಿಮ್ಮ ಕೈಸೇರುತ್ತಿತ್ತು.

ಕಾರ್ಮಿಕ ಕಾಯಿದೆಗಳ ಬಗೆ ನಿಮಗಿದ್ದ ಅನುಭವ ಅಪಾರ. ಎಷ್ಟೋ ಬಾರಿ ವಕೀಲರಿಗೇ ಪ್ರಕರಣವನ್ನು ಎಳೆ ಎಳೆಯಾಗಿ ವಿವರಿಸಿ, ಕೇಸ್‌ ಮುಂದುವರೆಸಬೇಕಾದ ದಿಕ್ಕನ್ನು ಸೂಚಿಸುತ್ತಿದ್ದಿರಿ. ಅವರಿಗೆ ವಾದಕ್ಕೆ ಬೇಕಾದ ಸಕಲ ಸಂಪನ್ಮೂಲಗಳನ್ನೂ ಒದಗಿಸಿಕೊಡುತ್ತಿದ್ದಿರಿ.

ಇಷ್ಟೆಲ್ಲ ಸಂಪನ್ಮೂಲ ಒದಗಿಸಲು ಕೈಯಿಂದಲೇ ಹಣ ವೆಚ್ಚ ಮಾಡಿಕೊಳ್ಳುತ್ತಿದ್ದಿರಿ. ನಿವೃತ್ತಿಯ ಬಳಿಕವೂ ನಿವೃತ್ತ ನೌಕರರ ಹಿತ ರಕ್ಷಣೆಗಾಗಿ ವಕೀಲರ ಜೊತೆಗೆ ಓಡಾಡುತ್ತಿದ್ದಿರಿ. ನ್ಯಾಯಾಲಯಗಳಿಗೆ ತೆರಳಿ ಸಾಕ್ಷ್ಯ ನೀಡುತ್ತಿದ್ದಿರಿ.

ವಾರದ ಹಿಂದೆ ಫೋನ್‌ ಮಾಡಿದ್ದಾಗ ನನ್ನ ಬಳಿ ಹೇಳಿದ್ದಿರಿ.ʼಯಾಕೋ ಆರೋಗ್ಯ ಸ್ವಲ್ಪ ಕೈಕೊಡುತ್ತಿದೆ. ಅದೂ ದೆಹಲಿಗೆ ಹೋಗಿ ಬಂದ ಬಳಿಕ. ಉಸಿರಾಟದ ಸಮಸ್ಯೆಯಾಗುತ್ತಿದೆ.ʼ. ನೀವು ದೆಹಲಿಗೆ ಹೋಗಿದ್ದದ್ದು ಕೂಡಾ ಕಾರ್ಮಿಕರಿಗೆ ಸಂಬಂಧಪಟ್ಟ ಪ್ರಕರಣದ ಸಲುವಾಗಿ.

ಇಷ್ಟೊಂದು ಬೇಗ ಹೀಗೇಕೆ ಹೊರಟು ಬಿಟ್ಟಿರಿ? ಹೊಸದಾಗಿ ಶುರು ಮಾಡಬೇಕು ಅಂದುಕೊಂಡಿದ್ದ ಹೋರಾಟದ ಬಗ್ಗೆ ದಿವಂಗತ ಸುಬ್ಬರಾವ್‌ ಅವರ ಬಳಿಯೋ, ದಿವಂಗತ ಶಾಂತಾರಾಮ್‌ ಭಟ್‌ ಅವರ ಬಳಿಯೋ ಸಲಹೆ ಪಡೆಯುವ ಯೋಚನೆ ಬಂತೇ?

ಪ್ರಶ್ನೆಗಳೆಲ್ಲ ಕೇವಲ ಪ್ರಶ್ನೆಗಳಾಗಿ ಉಳಿದು ಬಿಡುತ್ತವೆ.

ಬೇರೇನೂ ಹೇಳಲು ಸಾಧ್ಯವಾಗುತ್ತಿಲ್ಲ. ನಿಮ್ಮ ಹೋರಾಟದ ಕಾಯಕಕ್ಕೆ ಅಂತಿಮ ಫಲ ಇನ್ನೂ ಲಭಿಸಿಲ್ಲ. ಆದಷ್ಟು ಬೇಗ ಲಭಿಸಲಿ. ಎಲ್ಲೇ ಇದ್ದರೂ ನಿಮ್ಮ ಆತ್ಮಕ್ಕೆ ಶಾಂತಿ ಲಭಿಸುವಂತಾಗಲಿ ಮತ್ತು ನಿಮ್ಮ ಕುಟುಂಬದ ಸದಸ್ಯರೆಲ್ಲರಿಗೂ ಈ ಅಗಲಿಕೆಯ ನೋವು ಸಹಿಸುವ ಶಕ್ತಿ ಸಿಗಲಿ ಎಂಬುದಷ್ಟೇ ಪ್ರಾರ್ಥನೆ.

-ನೆತ್ರಕೆರೆ ಉದಯಶಂಕರ

PARYAYA: ಕೊನೆಯ ಕ್ಷಣದಲ್ಲೂ ಕಾಯಕದ್ದೇ ಚಿಂತನೆ..:   ಕೊನೆಯ ಕ್ಷಣದಲ್ಲೂ ಕಾಯಕದ್ದೇ ಚಿಂತನೆ.. ಸರ್.‌ ಹದಿನೈದು ನಿಮಿಷ ಅಷ್ಟೇ ಸಾರ್.‌ ಹದಿನೈದು ನಿಮಿಷದ ಹಿಂದೆ ನನ್ನ ಬಳಿ ಫೋನಿನಲ್ಲಿ ಮಾತನಾಡಿದ್ದರು.ಈಗಷ್ಟೇ ಊಟ ಆಯ್ತು. ಗ...

No comments:

Post a Comment