ನಾನು ಮೆಚ್ಚಿದ ವಾಟ್ಸಪ್

Friday, February 23, 2018

ವಿಟ್ಲದ ಸರ್ಕಾರಿ ಎಲಿಮೆಂಟರಿ ಶಾಲೆಗೆ ಕಾಯಕಲ್ಪ



       ವಿಟ್ಲದ ಸರ್ಕಾರಿ ಎಲಿಮೆಂಟರಿ ಶಾಲೆಗೆ ಕಾಯಕಲ್ಪ
https://youtu.be/f4-Eiky6sXE

                                            
ವಿಟ್ಲ: ವಿಟ್ಲದ  ಎಲಿಮೆಂಟರಿ ಶಾಲೆ ಎಂದೇ ಖ್ಯಾತಿ ಪಡೆದ ವಿಟ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ  ಬರೋಬ್ಬರಿ 139 ವರ್ಷ.  ನಾರಾಯಣ ಶೆಟ್ಟಿ ಅವರು ಮುಖ್ಯೋಪಾಧ್ಯಾಯರಾಗಿದ್ದಾಗ ಸುಮಾರು 1300 ವಿದ್ಯಾರ್ಥಿಗಳು ಇದ್ದ ಶಾಲೆಯ ಮಕ್ಕಳ ಸಂಖ್ಯೆ ಖಾಸಗಿ ಶಾಲೆಗಳ ಪೈಪೋಟಿಯಿಂದಾಗಿ ಕಡಿಮೆಯಾಗುತ್ತಾ ಬಂದು ಶತಮಾನೋತ್ಸವ ವೇಳೆಗೆ 960, ಬೆಳ್ಳಿಹಬ್ಬದ ವೇಳೆಗೆ 653ಕ್ಕೆ ಇಳಿದಿತ್ತು. ಇತ್ತೀಚೆಗೆ ಸಂಖ್ಯೆ 400ಕ್ಕೆ ಇಳಿದಿತ್ತು.

ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್  ಅವರಂತಹ ಹಲವಾರು ಪ್ರತಿಭೆಗಳನ್ನು ನಾಡಿಗೆ ನೀಡಿರುವ  ಶಾಲೆಯ ವಿದ್ಯಾರ್ಥಿಗಳ  ಸಂಖ್ಯೆ  ಎರಡು ವರ್ಷಗಳ ಹಿಂದೆ 400ಕ್ಕೆ ಇಳಿದಾಗ, ವಿಟ್ಲದ ಉದ್ಯಮಿ ಸುಬ್ರಾಯ ಪೈ ಅವರು ಶಾಲೆಯನ್ನು ದತ್ತು ಸ್ವೀಕರಿಸಿ ಕಾಯಕಲ್ಪ ನೀಡಿದರು.

ಶಾಲೆಯ ಸುತ್ತ 5 ಖಾಸಗಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿದ್ದರೂ ಕೂಡಾ ಶಾಲೆಗೆ ಹಲವಾರು ಮೂಲಭೂತ ಸೌಲಭ್ಯಗಳನ್ನು ನೀಡಿ, ಗುಣಮಟ್ಟದ ಶಿಕ್ಷಣಕ್ಕೆ ಗುಣಮಟ್ಟದ ಶಿಕ್ಷಕರನ್ನು ನೇಮಿಸಿದರು. 1ರಿಂದ 8ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲಭಾಷಾ ಶಿಕ್ಷಣದ ವ್ಯವಸ್ಥೆ ಮಾಡಿದರು. ಸಮೀಪದ ಹಳ್ಳಿಗಳ ಮಕ್ಕಳಿಗೆ ಶಾಲೆಗೆ ಬರಲು ವಾಹನ ವ್ಯವಸ್ಥೆ ರೂಪಿಸಿದರು.

ಶಾಲೆಗೆ ಪೀಠೋಪಕರಣ,  ರಂಗಮಂದಿರ, ಶಾಲಾ ರಿಪೇರಿ, ಪೆಯಿಂಟಿಂಗ್, ಕಾಪೌಂಡ್, ಗ್ರಂಥಾಲಯ ಇತ್ಯಾದಿ ಒದಗಿಸಿದರು. ಈಗ ಶಾಲಾ ಮಕ್ಕಳ ಸಂಖ್ಯೆ 615ಕ್ಕೆ ಏರಿದೆ. ಸರ್ಕಾರದಿಂದ ನೇಮಕಗೊಂಡ 15 ಶಾಲಾ ಶಿಕ್ಷಕರ ಜೊತೆಗೆ ತಾವೇ ವೇತನ ನೀಡಿ 6 ಶಿಕ್ಷಕರನ್ನು ನೇಮಿಸಿದ್ದಾರೆ. ತಾವೇ ಶಿಕ್ಷಕರ ವೇತನವನ್ನೂ ಭರಿಸುತ್ತಿದ್ದಾರೆ.

ಇನ್ನೊಬ್ಬ ಹಳೆ ವಿದ್ಯಾರ್ಥಿ, ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿ ಸುಪ್ರಜಿತ್ ಆಫ್ ಇಂಡಸ್ಟ್ರೀಸ್ ಸಿಎಂಡಿ ಅಜಿತ್ ಕುಮಾರ ರೈ ಅವರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಮಹಡಿಗಳ 10 ತರಗತಿ ಕೊಠಡಿ ಸಹಿತವಾದ ಬೃಹತ್ ಕಟ್ಟಡವನ್ನು ಒದಗಿಸಿಕೊಟ್ಟಿದ್ದಾರೆ.  ಗ್ರಾನೈಟ್ ನೆಲದಿಂದ ಶೋಭಿಸುವ ಕಟ್ಟಡ ಫೆಬ್ರುವರಿ 22 ಗುರುವಾರ ಲೋಕಾರ್ಪಣೆಗೊಂಡಿದೆ.

ವಿಟ್ಲದ ಇದೇ ಶಾಲೆಯ ಹಳೆ ವಿದ್ಯಾರ್ಥಿಗಳಾದ ವಿಟ್ಲದ ಜನಪ್ರಿಯ ವೈದ್ಯ ಮಂಜುನಾಥ ರೈ ಅವರ ಪುತ್ರ ಅಜಿತ ಕುಮಾರ ರೈ ಮತ್ತು ವಿಟ್ಲದ ಜನಪ್ರಿಯ ವ್ಯಾಪಾರೋದ್ಯಮಿ ಜನಾರ್ದನ ಪೈ ಅವರ ಪುತ್ರ ಸುಬ್ರಾಯ ಪೈ ಅವರ ಶಿಕ್ಷಣ ಪ್ರೇಮದ ಪರಿಣಾಮವಾಗಿ ವಿಟ್ಲದ ಆಸುಪಾನಿನಲ್ಲೇ ಅತ್ಯಂತ ಹಳೆಯ ಶಾಲೆ ಎಂಬುದಾಗಿ ಖ್ಯಾತಿ ಪಡೆದಿರುವ ವಿಟ್ಲದ ಎಲಿಮೆಂಟರಿ ಶಾಲೆ ಇದೀಗ ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿಗೆ ನಿಲ್ಲುವಂತಾಗಿದ್ದು, ಗುಣಮಟ್ಟದ ಶಿಕ್ಷಣ ಎಲ್ಲ ಮಕ್ಕಳಿಗೂ ಲಭಿಸುವಂತಾಗಿದೆ.

ರೈ ಮತ್ತು ಪೈ ಗಳಂತಹ ಶಿಕ್ಷಣ ಪ್ರೇಮಿಗಳು ಊರೂರಲ್ಲೂ ಜನಿಸಿ, ಬೆಳೆಯುವಂತಾಗಲಿ, ಅವರ ಸೇವೆ ಇತರ ಎಲ್ಲರಿಗೂ ಅನುಕರಣೀಯವಾಗಲಿ ಎಂದು ಪರ್ಯಾಯ ತುಂಬು ಹೃದಯದಿಂದ ಹಾರೈಸುತ್ತದೆ.

-ನೆತ್ರಕೆರೆ ಉದಯಶಂಕರ

Click the image above or click here for video:
Video Courtesy: Vittla News App

No comments:

Post a Comment