ನಾನು ಮೆಚ್ಚಿದ ವಾಟ್ಸಪ್

Tuesday, February 27, 2018

ಇಂದಿನ ಇತಿಹಾಸ History Today ಫೆಬ್ರುವರಿ 27

ಇಂದಿನ ಇತಿಹಾಸ History Today ಫೆಬ್ರುವರಿ 27
 2018: ದುಬೈ: ದುಬೈಯಲ್ಲಿ ನಿಧನರಾದ ಭಾರತದ ಬಹುಭಾಷಾ ಮೋಹಕ ನಟಿ ಶ್ರೀದೇವಿ (೫೪) ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸುವ ಸಲುವಾಗಿ ಸಂರಕ್ಷಣೆ ವಿಧಿಗಳನ್ನು ಪೂರೈಸಲು ದುಬೈ ಪಬ್ಲಿಕ್ ಪ್ರಾಸೆಕ್ಯೂಟರ್ ಕಚೇರಿ ಅನುಮತಿ ನೀಡಿ,  ಸಾವಿಗೆ ಸಂಬಂಧಿಸಿದಂತೆ ಪ್ರಕರಣವನ್ನು ಮುಕ್ತಾಯಗೊಳಿಸಿತು. ‘ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಂತೆ ಪ್ರಜ್ಞೆ ತಪ್ಪಿದ ಪರಿಣಾಮವಾಗಿ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವು ಸಂಭವಿಸಿದೆ. ಆದ್ದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದ್ದು, ಇಂತಹ ಪ್ರಕರಣಗಳಲ್ಲಿ ಅನುಸರಿಸಲಾಗುವ ತನಿಖಾ ಪ್ರಕ್ರಿಯೆಗಳೂ ಮುಗಿದಿರುವುದರಿಂದ ಪಾರ್ಥಿವ ಶರೀರವನ್ನು ಸಂರಕ್ಷಣಾ ವಿದಿ ಪೂರೈಸಲು ಒಪ್ಪಿಸಲಾಗಿದೆ ಎಂದು ದುಬೈ ಪಬ್ಲಿಕ್ ಪ್ರಾಸೆಕ್ಯೂಟ್ ಕಚೇರಿ ತಿಳಿಸಿತು. ಇದಕ್ಕೆ ಸಂಬಂಧಿಸಿದ ಪತ್ರಗಳನ್ನು ಪೊಲೀಸರು ಹಸ್ತಾಂತರಿಸಿದ್ದಾರೆ ಎಂದು ದುಬೈಯಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿ ಹೇಳಿತು.  ’ದುಬೈ ಪೊಲೀಸರು ಭಾರತೀಯ ಸಿನಿಮಾ ತಾರೆ ಶ್ರೀದೇವಿ ಬೋನಿ ಕಪೂರ್ ಅವರ ಪಾರ್ಥಿವ ಶವ ಬಿಡುಗಡೆ ಸಂಬಂಧಿತ ಪತ್ರಗಳನ್ನು ಹಸ್ತಾಂತರಿಸಿದ್ದು, ಕುಟುಂಬ ಸದಸ್ಯರೂ ಇದಕ್ಕೆ ಸಂಬಂಧಿಸಿದ ಪತ್ರಗಳನ್ನು ಪಾರ್ಥಿವ ಶರೀರ ಸಂರಕ್ಷಣೆ ಸಲುವಾಗಿ ಒದಗಿಸಿದ್ದಾರೆ ಎಂದು ದುಬೈಯಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿ ಟ್ವೀಟ್ ಮಾಡಿತು. ಪೊಲೀಸರು  ಫೆ.26ರ ಸೋಮವಾರ ಶ್ರೀದೇವಿ ಪತಿ ಬೋನಿ ಕಪೂರ್ ಅವರ ಹೇಳಿಕೆಯನ್ನೂ ದಾಖಲಿಸಿದ್ದರು. ಶ್ರೀದೇವಿ ಅವರು ಬಾತ್ ಟಬ್ ನಲ್ಲಿ ಪ್ರಜ್ಞಾಶೂನ್ಯರಾಗಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಆಸ್ಪತ್ರೆಯಲ್ಲಿ ಅವರನ್ನು ತರುವಾಗಲೇ ಮೃತರಾಗಿದ್ದರು ಎಂದು ಘೋಷಿಸಲಾಯಿತು ಎಂದು ಕಪೂರ್ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಕಪೂರ್ ಅವರನ್ನು ಬರ್ ದುಬೈ ಪೊಲೀಸ್ ಠಾಣೆಗೆ ಕರೆಸಿ, ಹೇಳಿಕೆ ದಾಖಲು ಮಾಡಿಕೊಂಡ ಬಳಿಕ ತಮ್ಮ ಹೊಟೇಲ್ ಕೊಠಡಿಗೆ ವಾಪಸಾಗಲು ಅನುಮತಿ ನೀಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ’ಗಲ್ಫ್ ನ್ಯೂಸ್ ವರದಿ ಮಾಡಿತು. ಇಂತಹ ಪ್ರಕರಣಗಳಲ್ಲಿ ಅನುಸರಿಸಲಾಗುವ ಕಾನೂನು ಬದ್ಧ ವಿಧಿವಿಧಾನಗಳನ್ನು ಪೂರೈಸಲು ಪ್ರಕರಣವನ್ನು ಪೊಲೀಸರು ದುಬೈ ಪಬ್ಲಿಕ್ ಪ್ರಾಸೆಕ್ಯೂಷನ್ ಗೆ ಹಸ್ತಾಂತರಿಸಿದ್ದರು ಎಂದು ದುಬೈ ಸರ್ಕಾರ ಟ್ವೀಟ್ ಸಂದೇಶದಲ್ಲಿ ತಿಳಿಸಿತು. ಇದಕ್ಕೂ ಮುನ್ನ, ಕಾನೂನು ಬದ್ಧ ವಿಧಿ ವಿಧಾನಗಳು ಪೂರ್ಣಗೊಳ್ಳದೇ ಇರುವುದರಿಂದ ಪಾರ್ಥಿವ ಶರೀರದ ಹಸ್ತಾಂತರ ವಿಚಾರದಲ್ಲಿ ಮಂಗಳವಾರವೂ ಅನಿಶ್ಚಿತತೆ ಮುಂದುವರೆದಿತ್ತು. ದುಬೈನಲ್ಲಿ ತಾವು ತಂಗಿದ್ದ ಹೋಟೆಲ್‌ನಲ್ಲಿಯೇ ಫೆಬ್ರವರಿ ೨೪ರ ಶನಿವಾರ ರಾತ್ರಿ ನಿಧನರಾದ ಶ್ರೀದೇವಿ ಪಾರ್ಥಿವ ಶರೀರವನ್ನು ಹಸ್ತಾಂತರಿಸಿ, ಭಾರತಕ್ಕೆ ಕೊಂಡೊಯ್ಯಲು ಬೇಕಿದ್ದ ಅನುಮತಿ ಪತ್ರಗಳನ್ನು ದುಬೈ ಪೊಲೀಸರು ಇದೀಗ ನೀಡಿದರು. ಶ್ರೀದೇವಿ ಅವರ ಮೃತ ದೇಹವನ್ನು ನೀಡಲು ದುಬೈ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.  ಮೃತ ದೇಹ ಹಸ್ತಾಂತರಿಸುವ ಸಂಬಂಧ ಅಗತ್ಯವಿದ್ದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ದುಬೈನಲ್ಲಿನ ಭಾರತದ ರಾಯಭಾರ ಕಚೇರಿ ಅಧಿಕಾರಿ ಹಾಗೂ ಕುಟುಂಬಸ್ಥರಿಗೆ ಸ್ಥಳೀಯ ಕಾಲಮಾನ ೧೨.೪೫ಕ್ಕೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದಾಗಿ ‘ಗಲ್ಫ್ ನ್ಯೂಸ್ ಟ್ವೀಟ್ ಮಾಡಿತು. ಫೆಬ್ರುವರಿ ೨೬ರ ಸೋಮವಾರ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಅವರ ಸಾವಿನ ರಹಸ್ಯ ಬಯಲಾಗಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ಹೃದಯಸ್ತಂಭನದಿಂದ ಶ್ರೀದೇವಿ ಸಾವಿಗೀಡಾಗಿದ್ದಾರೆ ಎಂದು ಮೊದಲಿಗೆ ಹೇಳಲಾಗಿತ್ತು. ಪ್ರಯೋಗಾಲಯದಿಂದ ಬಂದಿರುವ ವರದಿಯಂತೆ ಅವರ ಸಾವಿಗೆ ಹೃದಯಸ್ತಂಭನ ಕಾರಣ ಅಲ್ಲ. ನೀರಿನಲ್ಲಿ ಮುಳುಗಿ ಅವರು ಮೃತಪಟ್ಟಿದ್ದಾರೆ ಎಂದು ದುಬೈ ಸರ್ಕಾರ ಹೇಳಿತ್ತು. ಹೋಟೆಲ್‌ನ ಸ್ನಾನಗೃಹದ ನೀರು ತುಂಬಿದ್ದ ಸ್ನಾನದ ತೊಟ್ಟಿಯಲ್ಲಿ (ಬಾತ್ ಟಬ್) ಆಕಸ್ಮಿಕವಾಗಿ ಮುಳುಗಿ ಅವರು ಮೃತಪಟ್ಟಿದ್ದಾರೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿತ್ತು. ಅವರ ರಕ್ತದಲ್ಲಿ ಮದ್ಯದ ಅಂಶ ಪತ್ತೆಯಾಗಿದೆ ಮತ್ತು ನೀರಿನಲ್ಲಿ ಮುಳುಗಿ ಸಾಯುವಾಗ ಅವರಿಗೆ ಪ್ರಜ್ಞೆ ಇರಲಿಲ್ಲ ಎಂದು ದುಬೈ ಸರ್ಕಾರ ಹೇಳಿತ್ತು.  ವಿಧಿವಿಜ್ಞಾನ ವರದಿ ಬಂದ ಬಳಿಕ, ಶ್ರೀದೇವಿ ಸಾವಿಗೆ ಸಂಬಂಧಿಸಿದಂತೆ ಹಲವಾರು ಅನುಮಾನಗಳು ಎದ್ದಿದ್ದವು. ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವು ಸಂಭವಿಸಿದೆ ಎಂಬುದಾಗಿ ವಿಧಿವಿಜ್ಞಾನ ವರದಿ ತಿಳಿಸಿದ ಬಳಿಕ, ಬಾತ್‌ಟಬ್‌ನಲ್ಲಿ ಬಿದ್ದು ಸಾಯಲು ಸಾಧ್ಯವೇ ಎಂಬ ಸಂಶಯ ಹಲವರಲ್ಲಿ ಮನೆ ಮಾಡಿತ್ತು. ಆದರೆ ಬಾತ್‌ಟಬ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಹಲವಾರು ಘಟನೆಗಳು ಈ ಹಿಂದೆಯೂ ನಡೆದಿವೆ. ಭಾರತದಲ್ಲಿ ಈ ರೀತಿಯ ಪ್ರಕರಣ ಅಸಹಜ ಅನಿಸಿದರೂ ಜಪಾನ್, ಅಮೆರಿಕದಲ್ಲಿ ಈ ರೀತಿಯ ಪ್ರಕರಣಗಳು ತುಂಬಾ ನಡೆದಿವೆ ಎಂದು ವರದಿಗಳು ತಿಳಿಸಿದವು.  ೨೦೧೭ರಲ್ಲಿ ಪ್ರಕಟಗೊಂಡಿದ್ದ ಜನರಲ್ ಅಂಡ್ ಫ್ಯಾಮಿಲಿ ಮೆಡಿಸಿನ್ ಎಂಬ ನಿಯತಕವು ಜಪಾನ್‌ನಲ್ಲಿ ವರ್ಷಕ್ಕೆ ಅಂದಾಜು ೧೯,೦೦೦ ಜನರು ಬಾತ್‌ಟಬ್‌ನಲ್ಲಿ ಮುಳುಗಿ ಸಾಯುತ್ತಾರೆ ಎಂದು ಹೇಳಿತ್ತು.  ಕಳೆದ ೧೦ ದಶಕಗಳಿಗೆ ಹೋಲಿಸಿದರೆ ಈ ರೀತಿಯ ಘಟನೆ ಶೇಕಡಾ ೭೦ರಷ್ಟು ಹೆಚ್ಚಿದೆ. ಜಪಾನಿಯರು ೪೧ ಡಿಗ್ರಿ ಸೆಂಟಿಗ್ರೇಡಿಗಿಂತಲೂ ಅಧಿಕ ಉಷ್ಣತೆಯಲ್ಲಿ ಸ್ನಾನ ಮಾಡುವ ಶೈಲಿ ಕೂಡ ಇದಕ್ಕೊಂದು ಕಾರಣವಾಗಿದೆ ಎಂದು ಜಪಾನ್‌ನ ಗ್ರಾಹಕ ಏಜೆನ್ಸಿ ಹೇಳಿತು.  ಮಾದಕ ದ್ರವ್ಯ ಅಥವಾ ಮದ್ಯ ಸೇವಿಸಿ ಬಾತ್‌ಟಬ್‌ನಲ್ಲಿ ಬಿದ್ದು ಸತ್ತಿರುವ ಪ್ರಕರಣಗಳು ಘಟಿಸಿದ್ದು, ಸತ್ತವರಲ್ಲಿ ಮಹಿಳೆಯರ ಸಂಖ್ಯೆ ಅಧಿಕ ಎಂದು ಅಮೆರಿಕದ ಸೆಂಟರ್ ಫಾರ್ ಡಿಸೀಸಸ್ ಕಂಟ್ರೋಲ್ ಇನ್ ಅಟ್ಲಾಂಟ ವರದಿ ಹೇಳಿತ್ತು.   ಶ್ರೀದೇವಿ ಅವರು ಸೋದರಳಿಯನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಪತಿ ಬೋನಿ ಕಪೂರ್ ಮತ್ತು ಪುತ್ರಿ ಖುಷಿಯ ಜೊತೆಗೆ ದುಬೈಗೆ ಕಳೆದ ವಾರ ತೆರಳಿದ್ದರು. ಪುತ್ರಿಯ ಜೊತೆಗೆ ಮುಂಬೈಗೆ ವಾಪಸಾಗಿದ್ದ ಬೋನಿ ಕಪೂರ್ ಶ್ರೀದೇವಿ ಅವರನ್ನು ’ಅಚ್ಚರಿಪಡಿಸಲು ಶನಿವಾರ ಮತ್ತೆ ದುಬೈಗೆ ವಾಪಸಾಗಿದ್ದರು. ಫೆಬ್ರುವರಿ ೨೫ರಂದು ಭಾರತೀಯ ಕಾಲಮಾನ ನಸುಕಿನ ೩ ಗಂಟೆಗೆ ಶ್ರೀದೇವಿ ಸಾವಿನ ಸುದ್ದಿ ಪ್ರಕಟವಾದಾಗ ದೇಶಾದ್ಯಂತ ಆಘಾತದ ಅಲೆ ಎದ್ದಿತ್ತು.


2018: ಕರಾಚಿ: ಪಕ್ಷದ ಮುಖ್ಯಸ್ಥ ಸ್ಥಾನದಿಂದ ಸುಪ್ರೀಂಕೋರ್ಟ್ ಅನರ್ಹಗೊಳಿಸಿದ ಕೆಲವೇ ದಿನಗಳಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು  ತನ್ನ ಆಜೀವ ನಾಯಕನಾಗಿ ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) (ಪಿಎಂಎಲ್-ಎನ್)  ಆಯ್ಕೆ ಮಾಡಿತು. ಶರೀಫ್ ಅವರ ಕಿರಿಯ ಸಹೋದರ ಶಾಬಾಜ್ ಶರೀಫ್ ಅವರನ್ನು ಪಕ್ಷದ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷವು ನೇಮಕ ಮಾಡಿತು. ಶಾಬಾಜ್ ಶರೀಫ್ ಪ್ರಸ್ತುತ  ರಾಷ್ಟ್ರದ ಅತ್ಯಂತ ದೊಡ್ಡ ಪ್ರಾಂತ್ಯವಾದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ.  ‘ಪಿಎಂಎಲ್ - ಎನ್ ನವಾಜ್ ಅವರನ್ನು ತನ್ನ ಆಜೀವ ಕ್ವಾಯಿದ್ ಆಗಿ ಆಯ್ಕೆ ಮಾಡಿದೆ. ಪ್ರಧಾನಿ ಶಾಹಿದ್ ಖಾಂಖನ್ ಅಬ್ಬಾಸಿ ಮತ್ತು ಮುಖ್ಯಮಂತ್ರಿ ಶಾಬಾಜ್ ಶರೀಫ್ ಅವರ ಸೂಚನೆಗೆ ಸಿಡಬ್ಲ್ಯೂಸಿ ಅನುಮೋದನೆ ನೀಡಿದೆ ಎಂದು ನವಾಜ್ ಪುತ್ರಿ ಮರ್ಯಮ್ ಟ್ವೀಟ್ ಮಾಡಿದರು.  ಪ್ರಸ್ತುತ ಪ್ರಧಾನಿ ಸ್ಥಾನದ ಹೊಣೆ ಹೊತ್ತಿರುವ ಶಾಹಿದ್ ಖಾಂಖನ್ ಅಬ್ಬಾಸಿ ಮತ್ತು ಪಕ್ಷದ ಇತರ ನಾಯಕರು ಕಾರ್ಯಕಾರಿಣಿ ನಿರ್ಧಾರವನ್ನು ಅನುಮೋದಿಸಿದರು.  ಪಕ್ಷದಲ್ಲಿ ’ಕ್ವಾಯಿದ್ ಹುದ್ದೆಗೆ ಅವಕಾಶ ಇಲ್ಲವಾದರೂ, ಕೇಂದ್ರೀಯ ಕಾರ್ಯಕಾರಿ ಸಮಿತಿಯು ಶರೀಫ್ ಅವರಿಗಾಗಿ ಈ ಹುದ್ದೆಯನ್ನು ಸೃಷ್ಟಿಸಿತ್ತು.  ಹುದ್ದೆಯು ಔಪಚಾರಿಕವಾದದ್ದಾಗಿದ್ದರೂ ಪಕ್ಷದಲ್ಲಿ ಹಲವರು ನವಾಜ್ ಶರೀಫ್ ಅವರು ಪಕ್ಷದ ನಾಯಕರಾಗಿ ಇರಬೇಕು ಮತ್ತು ಅವರ ಒಪ್ಪಿಗೆ ಇಲ್ಲದೆ ಯಾವುದೇ ನಿರ್ಧಾರವನ್ನೂ ಕೈಗೊಳ್ಳಬಾರದು ಎಂದು ಎಂದು ಆಗ್ರಹಿಸಿದ್ದರು.  ಕಳೆದ ವರ್ಷ ಜುಲೈ ತಿಂಗಳಲ್ಲಿ ಪಾಕಿಸ್ತಾನದ ಸುಪ್ರೀಂಕೋರ್ಟ್ ನವಾಜ್ ಶರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹ ಗೊಳಿಸಿದ್ದ ತನ್ನ ಹಿಂದಿನ ಆದೇಶವನ್ನು ಉಲ್ಲೇಖಿಸಿ. ಶರೀಫ್ ಅವರು ಪಕ್ಷದ ಹುದ್ದೆಯನ್ನೂ ಹೊಂದುವಂತಿಲ್ಲ ಎಂದು ತೀರ್ಪು ನೀಡಿತ್ತು. ಶರೀಫ್ ಅವರು ಹೊರಡಿಸಿದ ಎಲ್ಲ ಆದೇಶಗಳನ್ನು ಅಕ್ರಮ ಎಂಬುದಾಗಿ ಸಾರಿ ಅವುಗಳಿಗೆ ಮಾನ್ಯತೆ ಇಲ್ಲ ಎಂದು ಹೇಳಿತ್ತು. ತಮ್ಮನ್ನು ಅನರ್ಹಗೊಳಿಸಿದ ಕ್ರಮವನ್ನು ಟೀಕಿಸಿದ್ದ ಶರೀಫ್ ಇದು ನನ್ನ ವಿರುದ್ಧದ ಸಂಚು ಎಂದು ದೂರಿದ್ದರು.  ಪರಿಣಾಮವಾಗಿ ಮಾರ್ಚ್ ೩ರಂದು ನಡೆಯಲಿದ್ದ ಸೆನೆಟ್ ಚುನಾವಣೆಗಳಲ್ಲಿ ಎಲ್ಲ ಪಿಎಂಎಲ್ (ಎನ್) ಅಭ್ಯರ್ಥಿಗಳನ್ನು ಪಕ್ಷೇತರ ಅಭ್ಯರ್ಥಿಗಳು ಎಂಬುದಾಗಿ ಚುನಾವಣಾ ಆಯೋಗ ಘೋಷಿಸಿತ್ತು.  ಚುನಾವಣಾ ಆಯೋಗದ ಈ ವಿವಾದಾತ್ಮಕ ಆದೇಶವನ್ನು ಟೀಕಿಸಿದ್ದ ಪಿಎಂಎಲ್ (ಎನ್) ರಾಷ್ಟ್ರದ ಅತಿದೊಡ್ಡ ಪಕ್ಷವನ್ನೇ ಸೆನೆಟ್ ಚುನಾವಣಾ ಕಣದಿಂದ ಹೊರಹಾಕಿದ ಆಯೋಗದ ಕ್ರಮ ಕಾನೂನು ಮತ್ತು ಸಂವಿಧಾನದ ಉಲ್ಲಂಘನೆ ಎಂದು ಆಪಾದಿಸಿತ್ತು. ಪಕ್ಷೇತರರಾಗಿ ಗೆದ್ದ ಬಳಿಕ ಶರೀಫ್ ಅವರ ಅಭ್ಯರ್ಥಿಗಳು ಪಕ್ಷಕ್ಕೆ ಮರುಸೇರ್ಪಡೆಯಾಗುವ ನಿರೀಕ್ಷೆ ಇದೆ. ಸೆನೆಟ್ ಚುನಾವಣೆಯಲ್ಲಿ ಈಗಲೂ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯನ್ನು ಪಿಎಂಎಲ್ (ಎನ್) ಇಟ್ಟುಕೊಂಡಿದೆ. ಪಕ್ಷದ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಶಾಬಾಜ್ ಶರೀಫ್ ಹೊರತಾಗಿ ಬೇರೆ ಅಭ್ಯರ್ಥಿ ಇಲ್ಲ ಎಂದು ಪಕ್ಷದ ಮಾಹಿತಿ ಕಾರ್ಯದರ್ಶಿ ಸೆನೆಟರ್ ಮುಶಾಹಿದುಲ್ಲಾ ಹೇಳಿದರು.  ಪಕ್ಷದ ಹಂಗಾಮೀ ಅಧ್ಯಕ್ಷ ಸ್ಥಾನಕ್ಕೆ ಶಾಬಾಜ್ ಹೆಸರನ್ನು ನವಾಜ್ ಸೂಚಿಸಿದರು. ೧೦೦ಕ್ಕೂ ಹೆಚ್ಚು ಕಾರ್ಯಕಾರಿ ಸಮಿತಿ ಸದಸ್ಯರು ಅದನ್ನು ಸರ್ವಾನುಮತದಿಂದ ಅನುಮೋದಿಸಿದರು. ಪಕ್ಷದ ಜನರಲ್ ಕೌನ್ಸಿಲ್ ಮುಂದಿನ ತಿಂಗಳು ಇಸ್ಲಾಮಾಬಾದಿನಲ್ಲಿ ಸಭೆ ಸೇರಿ ಆಯ್ಕೆ ಮಾಡಿದ ಬಳಿಕ ಶಾಬಾಜ್ ಅವರು ಪಕ್ಷದ ಪೂರ್ಣಾವಧಿ ಅಧ್ಯಕ್ಷರಾಗಿ ಮುಂದುವರೆಯುವರು ಎಂದು ಅವರು ನುಡಿದರು. ಪಕ್ಷದ ನಿಯಮಾವಳಿಗಳ ಪ್ರಕಾರ, ಪಕ್ಷದ ಮುಖ್ಯಸ್ಥನನ್ನು ಕಿತ್ತು ಹಾಕಿದ ವಾರದ ಒಳಗಾಗಿ ಹಂಗಾಮಿ ಮುಖ್ಯಸ್ಥನನ್ನು ನೇಮಕ ಮಾಡಬೇಕು. ಬಳಿಕ ೪೫ ದಿನಗಳ ಒಳಗಾಗಿ ಪಕ್ಷದ ಜನರಲ್ ಕೌನ್ಸಿಲ್ ಅಧ್ಯಕ್ಷನನ್ನು ಆಯ್ಕೆ ಮಾಡಬೇಕು. ನವಾಜ್ ಶರೀಫ್ ಅವರನ್ನು ಸುಪ್ರೀಂಕೋರ್ಟ್ ಫೆಬ್ರುವರಿ ೨೨ರಂದು ಪಿಎಂಎಲ್-ಎನ್ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿತ್ತು.

2018: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಇಲ್ಲ ಎಂದು ಹೇಳುವ ಮೂಲಕ ಕಾಶ್ಮೀರ ಕಣಿವೆಯಲ್ಲಿ ಐಸಿಸ್ ತಲೆಯೆತ್ತಿದೆ ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ಮಂಗಳವಾರ ಗೌಣಗೊಳಿಸಿತು.  ‘ಕಣಿವೆಯಲ್ಲಿ ಐಸಿಸ್ ಸಂಘಟನೆಯ ಭೌತಿಕ ಮೂಲಸವಲತ್ತುಗಳಾಗಲೀ, ಮಾನವ ಸಂಪನ್ಮೂಲವಾಗಲೀ ಇಲ್ಲ. ಅದು ಕಣಿವೆಯಲ್ಲಿ ಅಸ್ತಿತ್ವದಲ್ಲಿ ಇಲ್ಲ ಎಂದು ಗೃಹ ಸಚಿವಾಲಯ ವಕ್ತಾರರು ಹೇಳಿದರು.  ಜಮ್ಮು ಮತ್ತು ಕಾಶ್ಮೀರದಲ್ಲಿ ಫೆ.25ರ ಭಾನುವಾರ ನಡೆದ  ಪೊಲೀಸ್ ಸಿಬ್ಬಂದಿ ಫರೂಖ್ ಅಹ್ಮದ್ ಯಾತೂ ಹತ್ಯೆಯ ಹೊಣೆ ತನ್ನದು ಎಂಬುದಾಗಿ ಐಸಿಸ್ ಭಯೋತ್ಪಾದಕ ಸಂಘಟನೆ ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿತು. ಐಸಿಸ್ ಸಂಘಟನೆಯ ಅಮಾಖ್ ಮತ್ತು ಅಲ್-ಖರಾರ್ ಪ್ರಚಾರ ದಳಗಳು ಪೊಲೀಸ್ ಸಿಬ್ಬಂದಿಯ ಹತ್ಯೆಗೆ ತನ್ನ ಭಯೋತ್ಪಾದಕ ಸಂಘಟನೆ ಹೊಣೆ ಎಂಬುದಾಗಿ ಪ್ರತಿಪಾದಿಸಿ ’ಇದೀಗ ಸಮರ ಆರಂಭಗೊಂಡಿದೆ ಎಂದು ಹೇಳಿಕೊಂಡಿದ್ದವು. ಅಹ್ಮದ್ ಅವರನ್ನು ಭಾನುವಾರ ಕೊಂದ ಹಂತಕರು ಅವರ ಬಳಿ ಇದ್ದ ಸರ್ವೀಸ್ ರೈಫಲನ್ನೂ ಕಿತ್ತುಕೊಂಡಿದ್ದರು.  ಈ ಕೃತ್ಯದ ಹಿಂದೆ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ (ಎಲ್ ಇಟಿ) ಸಂಘಟನೆ ಇರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮೊದಲು ಹಿಜ್ಬುಲ್ ಮುಜಾಹಿದೀನ್ ಸಂಘಟನೆಯನ್ನು ಸೇರಿ ಬಳಿಕ ಎಲ್ ಇಟಿಗೆ ಪಕ್ಷಾಂತರ ಮಾಡಿದ್ದ ಏಶಾ ಫಜ್ಲಿ ಈ ಕೃತ್ಯದ ಹಿಂದಿನ ಅಪರಾಧಿ ಇರಬಹುದು ಎಂದು ಶಂಕಿಸಲಾಯಿತು. ಕಾಶ್ಮೀರ ಕಣಿವೆಯಲ್ಲಿ ಐಸಿಸ್ ಅಸ್ತಿತ್ವವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದರೂ, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಎಸ್.ಪಿ. ವೈದ್ ಅವರು ಈದಿನ ಶ್ರೀನಗರದಲ್ಲಿ ಮಾತನಾಡುತ್ತಾ ’ಜಮ್ಮು ಮತ್ತು ಕಾಶ್ಮೀರದಲ್ಲಿ ಐಸಿಸ್ ಅಸ್ತಿತ್ವದ ಎದ್ದು ಕಾಣುವ ಚಿಹ್ನೆಗಳು ಇಲ್ಲವಾದರೂ, ಅದು ಏಕಾಂಗಿ ತೋಳ ದಾಳಿ ನಡೆಸುವ ಸಾಧ್ಯತೆಗಳು ಇವೆ ಎಂದು ಹೇಳಿದರು.  ಈ ದಾಳಿ ಆತಂಕದ ವಿಚಾರ ಎಂಬುದನ್ನು ಒಪ್ಪಿದ ಅವರು ’ಐಸಿಸ್ ಪ್ರತಿಪಾದನೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು. ‘ಐಸಿಸ್ ತನ್ನ ವೆಬ್ ಸೈಟ್ ’ಅಲ್ ಖರಾರ್ನಲ್ಲಿ ನಾವು ಇಲ್ಲಿದ್ದೇವೆ (ಕಾಶ್ಮೀರದಲ್ಲಿ) ಎಂದು ಹೇಳಿಕೊಂಡಿದೆ. ಇದರ ಬಗ್ಗೆ ಪರಿಶೀಲನೆಯ ಅಗತ್ಯ ಇದೆ. ಇದು ಚಿಂತೆಯ ವಿಚಾರ ಎಂದು ವೈದ್ ನುಡಿದರು. ಪೊಲಿಸರನ್ನು ಕೊಂದ ವಿಚಾರವನ್ನು ಮಾತ್ರವೇ ಅವರು ಪ್ರತಿಪಾದಿಸಿರುವುದಲ್ಲ. ಶಸ್ತಾಸ್ತ್ರವನ್ನೂ ತೋರಿಸಿದ್ದಾರೆ ಎಂದು ಹೇಳಿದ ಡಿಜಿಪಿ, ಪೊಲೀಸರು ಈ ಬಗ್ಗೆ ಮತ್ತು ಅವರ ಪ್ರತಿಪಾದನೆ ಬಗ್ಗೆ ತನಿಖೆ ನಡೆಸುವರು ಎಂದು ಹೇಳಿದರು. ‘ಕಳೆದ ನವೆಂಬರ್ ತಿಂಗಳಲ್ಲೂ ಅವರು ಇಂತಹುದೇ ಪ್ರತಿಪಾದನೆ ಮಾಡಿದ್ದರು. ಇದನ್ನೂ ಪರಿಶೀಲಿಸಬೇಕಾದ ಅಗತ್ಯ ಇದೆ. ಇಲ್ಲಿ ಗುಮಾನಿಯ ಎಳೆ ಇದೆ ಎಂದು ಅವರು ನುಡಿದರು. ಕಾಶ್ಮೀರದ ಜನ ಜಾಗೃತರಾಗಿದ್ದು, ಇದು ಇನ್ನೊಂದು ಸಿರಿಯಾ ಆಗಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು. ಕಳೆದ ನವೆಂಬರಿನಲ್ಲಿ ಶ್ರಿನಗರದಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಘರ್ಷಣೆಯಲ್ಲಿ ಜಾಗತಿಕ ಭಯೋತ್ಪಾದಕ ಸಂಘಟನೆ ಶಾಮೀಲಾಗಿದೆ ಎಂಬ ವರದಿಗಳು ಬಂದಿದ್ದವು. ಈ ಘರ್ಷಣೆಯಲ್ಲಿ ಮುಗೀಸ್ ಮೀರ್ ಎಂದು ಗುರುತಿಸಲಾದ ಭಯೋತ್ಪಾದಕನನ್ನು ಕೊಲ್ಲಲಾಗಿದ್ದು, ಸಬ್ ಇನ್ ಸ್ಪೆಕ್ಟರ್ ಇಮಾಮ್ ತಕ್ ಹುತಾತ್ಮರಾಗಿದ್ದರು.  ಆಗಲೂ ಅಮಾಖ್ ಈ ದಾಳಿಯ ಹೊಣೆ ತನ್ನದು ಎಂದು ಹೇಳಿಕೊಂಡಿತ್ತು. ಹಿನ್ನೆಲೆಯಲ್ಲಿ ಐಸಿಸ್ ಧ್ವಜದ ಜೊತೆಗೆ ಮುಗೀಸ್ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬಂದಿದ್ದವು. ಮುಗೀಸ್ ಶವಕ್ಕೂ ದಫನ ಕಾಲದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ಧ್ವಜವನ್ನು ಹೊದಿಸಲಾಗಿತ್ತು. ಆದರೆ ಮುಗೀಸ್ ತೆಹ್ರೀಕ್ -ಉಲ್- ಮುಜಾಹಿದೀಣ್ ಎಂಬ ಉಗ್ರಗಾಮಿ ಗುಂಪಿಗೆ ಸೇರಿದವನಾಗಿದ್ದು, ಪುಲ್ವಾಮ ಜಿಲ್ಲೆಯ ಕಮಾಂಡರ್ ಆಗಿದ್ದ ಎಂದು ಭದ್ರತಾ ಪಡೆ ಅಧಿಕಾರಿಗಳು ಪ್ರತಿಪಾದಿಸಿದ್ದರು. ೧೯೯೦ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲಿಗೆ ಭಯೋತ್ಪಾದನೆ ತಲೆ ಎತ್ತಿದಾಗ ಇದ್ದ ಕೆಲವು ಭಯೋತ್ಪಾದಕ ಗುಂಪುಗಳ ಪೈಕಿ ತೆಹ್ರೀಕ್ -ಉಲ್- ಮುಜಾಹಿದೀನ್ ಒಂದಾಗಿತ್ತು.

2018: ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಜನತಾದಳವು (ಜಾತ್ಯತೀತ) ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ (ಬಿಎಸ್ ಪಿ) ಜೊತೆ ಕೈಜೋಡಿಸಿದ ಬೆನ್ನಲ್ಲೇ ಈಗ ಹೈದರಾಬಾದಿನ ಸಂಸದ ಅಸಾದುದ್ದೀನ್ ಓವೈಸಿ ಅವರ ಮಜ್ಲಿಸ್-ಇ-ಇತ್ತೇಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಕೂಡಾ ಈ ಒಕ್ಕೂಟ ಸೇರುವ ಆಸಕ್ತಿ ವ್ಯಕ್ತ ಪಡಿಸಿರುವುದು ಬೆಳಕಿಗೆ ಬಂದಿತು. ಜನತಾದಳ (ಎಸ್) ಉನ್ನತ ನಾಯಕ ಹಾಗೂ ದೇವೇಗೌಡ ಕುಟುಂಬಕ್ಕೆ ಆಪ್ತನಾಗಿರುವ ನಾಯಕರೊಬ್ಬರ ಪ್ರಕಾರ ಓವೈಸಿ ಅವರು ಈಗಾಗಲೇ ವಿಷಯದ ಬಗ್ಗೆ ನವದೆಹಲಿಯಲ್ಲಿ ಜನತಾದಳ ಧುರೀಣರ ಜೊತೆ ಚರ್ಚಿಸಿದ್ದರು. ಹೆಸರು ಹೇಳಲು ಇಚ್ಛಿಸದ ಜನತಾದಳ ನಾಯಕ ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಾ, ಹೈದರಾಬಾದಿನ ಫೈರ್ ಬ್ರ್ಯಾಂಡ್ ಮುಸ್ಲಿಮ್ ನಾಯಕ ಕಾಂಗ್ರೆಸ್ ಪಕ್ಷವನ್ನು ಪರಾಭವಗೊಳಿಸುವ ಸಲುವಾಗಿ ಜನತಾದಳದ ಜೊತೆ ಸೇರಬಯಸಿದ್ದಾರೆ ಎಂದು ಹೇಳಿದರು. ’ನಮ್ಮ ನಾಯಕ ದೇವೇಗೌಡರು ಸಧ್ಯಕ್ಕೆ ಈ ಬಗ್ಗೆ ಯಾವುದೇ ಬದ್ಧತೆ ವ್ಯಕ್ತ ಪಡಿಸಿಲ್ಲ. ಆದರೆ ಓವೈಸಿ ಅವರು ಕರ್ನಾಟಕದಲಿ ಜೆಡಿ (ಎಸ್) ಮೈತ್ರಿಕೂಟ ಸೇರಬಯಸಿದ್ದಾರೆ ಎಂಬುದು ದೃಢಪಟ್ಟ ಸುದ್ದಿ ಎಂದು ಅವರು ನುಡಿದರು. ಜೆಡಿ (ಎಸ್) ಈಗಾಗಲೇ ೧೨೬ ವಿಧಾನಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ೨೦ ಸ್ಥಾನಗಳನ್ನು ಮಾಯಾವತಿ ಅವರಿಗೆ ಬಿಟ್ಟುಕೊಟ್ಟಿದೆ. ಶರದ್ ಪವಾರ್ ಅವರ ಎನ್ ಸಿಪಿ ಕೂಡಾ ಮೈತ್ರಿಕೂಟ ಸೇರುವ ಇಚ್ಛೆ ವ್ಯಕ್ತ ಪಡಿಸಿದ್ದು, ಬೆಳಗಾವಿ ಪ್ರದೇಶದಲ್ಲಿ ೭ ಸ್ಥಾನಗಳನ್ನು ಬಿಟ್ಟುಕೊಡುವಂತೆ ಜನತಾದಳವನ್ನು (ಎಸ್) ಒತ್ತಾಯಿಸಿದೆ.  ದೇವೇಗೌಡ ಅವರ ಕುಟುಂಬ ಮೂಲಗಳ ಪ್ರಕಾರ, ದೇವೇಗೌಡರು ತೀವ್ರವಾದಿ ಮುಸ್ಲಿಂ ಸಂಘಟನೆ ಎಂದೇ ಹೆಸರು ಪಡೆದಿರುವ ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳುವುದರಿಂದ ಆಗಬಹುದಾದ ಲಾಭ-ನಷ್ಟವನ್ನು ಅಳೆದು ನೋಡುತ್ತಿದ್ದಾರೆ. ಓವೈಸಿ ಅವರು ಕೆಲವು ಸಾವಿರ ಮುಸ್ಲಿಂ ಮತಗಳನ್ನು ಕಿತ್ತುಕೊಂಡು ಕೆಲವು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶವನ್ನು ಕಡಿಮೆಗೊಳಿಸಬಲ್ಲರು ಎಂಬದು ಗೌಡರಿಗೆ ಗೊತ್ತಿದೆ. ಕೆಲವು ಸ್ಥಾನಗಳಲ್ಲಿ ನಮಗೆ ಕೆಲವು ಸಾವಿರ ಮತಗಳು ಹೆಚ್ಚು ಬರುವ ಸಾಧ್ಯತೆಯೂ ಇದೆ. ಆದರೆ ಎಐಎಂಐಎಂನ ವರ್ಚಸ್ಸು ಉತ್ತಮವಾಗಿಲ್ಲ. ಇದನ್ನು ಮುಸ್ಲಿಮ್ ಮೂಲಭೂತವಾದಿ ಪಕ್ಷ ಎಂದೇ ನೋಡಲಾಗುತ್ತದೆ. ಓವೈಸಿ ಜೊತೆ ಮೈತ್ರಿಯಿಂದ ಕಟ್ಟಾ ಹಿಂದೂ ಮತಗಳ ಮೇಲೆ ದುಷ್ಪರಿಣಾಮವಾಗಬಹುದೆಂಬ ಚಿಂತೆ ದೇವೇಗೌಡರಿಗೆ ಇದೆ. ಬಿಜೆಪಿಯೇತರ ಹಿಂದುಗಳು ಕೂಡಾ ಓವೈಸಿ ಬ್ರ್ಯಾಂಡ್ ಕೋಮುವಾದಿ ರಾಜಕೀಯವನ್ನು ಇಚ್ಛಿಸುವುದಿಲ್ಲ ಎಂಬುದು ಗೌಡರಿಗೆ ಗೊತ್ತಿದೆ.  ‘ಹಿಂದುತ್ವ ಜನರು ಮಾತ್ರವೇ ಓವೈಸಿಯನ್ನು ಮೆಚ್ಚುವುದಿಲ್ಲವಾದ್ದರಿಂದ ಅವರ ಜೊತೆ ಮೈತ್ರಿ ಮಾಡಿಕೊಂಡರೆ ಹಿಂದು ಮತಗಳ ಮೇಲೆ ಏನೂ ಪ್ರತಿಕೂಲ ಪರಿಣಾಮ ಆಗುವುದಿಲ್ಲ. ಆದ್ದರಿಂದ ಓವೈಸಿ ಜೊತೆ ಕೈಜೋಡಿಸಿ ಎಂದು ಕೆಲವರು ಗೌಡರಿಗೆ ಸಲಹೆ ಮಾಡಿದ್ದಾರೆ ಎಂದೂ ಜೆಡಿ (ಎಸ್) ನಾಯಕ ನುಡಿದರು. ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲವು ಉನ್ನತ ಕಾಂಗ್ರೆಸ್ ನಾಯಕರು ಎಐಎಂಐಎಂ ಜೊತೆ ಬಿಜೆಪಿ ರಹಸ್ಯ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಪರಾಭವಗೊಳಿಸಲು ಯತ್ನಿಸುತ್ತಿದೆ ಎಂದು ಆಪಾದಿಸಿದ್ದರು.  ಬಿಜೆಪಿ ನಾಯಕರು ಓವೈಸಿ ಜೊತೆಗೆ ರಹಸ್ಯ ಮತುಕತೆ ನಡೆಸಿ ಕಾಂಗ್ರೆಸ್ ಮತಗಳನ್ನು ತಿಂದು ಹಾಕುವ ಸಲುವಾಗಿ ಮುಸ್ಲಿಂ ಬಾಹುಳ್ಯ ಇರುವ ಕನಿಷ್ಠ ೫೦ ವಿಧಾನಸಭಾ ಕ್ಷೇತ್ರಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವಂತೆ ಓವೈಸಿಗೆ ಸಲಹೆ ಮಾಡಿದ್ದಾರೆ ಎಂದೂ ಕಾಂಗ್ರೆಸ್ ದೂರಿತ್ತು. ಓವೈಸಿ ಅವರು ಕಾಂಗ್ರೆಸ್ ಪಕ್ಷದ ಗೆಲ್ಲುವ ಅವಕಾಶಗಳನ್ನು ಹಾಳು ಮಾಡಲು ಒಪ್ಪಿದ್ದಾರೆ ಎಂದೂ ಸಿದ್ದರಾಮಯ್ಯ ಹೇಳಿದ್ದರು. ’ಇದು ನಿಜವಾಗಿ ಚಿಂತೆಯ ವಿಷಯ. ಸ್ವತಃ ತನ್ನನ್ನು ಮುಸ್ಲಿಮರ ಪ್ರವಾದಿ ಎಂದು ಬಣ್ಣಿಸಿಕೊಳ್ಳುವ ಓವೈಸಿ ವಾಸ್ತವವಾಗಿ ಬಿಜೆಪಿಯ ಏಜೆಂಟ್. ಅವರು ಈ ಹಿಂದೆ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ನೆರವಾಗಿದ್ದಾರೆ. ಈಗ ಅವರು ಕರ್ನಾಟಕದಲ್ಲಿ ಬಿಜೆಪಿಗೆ ನೆರವಾಗಲು ಒಪ್ಪಿದ್ದಾರೆ. ನಾವು ಬಿಜೆಪಿ ಮತ್ತು ಓವೈಸಿಯನ್ನು ಅನಾವರಣ ಮಾಡಬಯಸಿದ್ದೇವೆ. ಅವರು ಹಿಂದುಗಳ ಜೊತೆಗೂ ಇಲ್ಲ ಅಥವಾ ಮುಸ್ಲಿಮರ ಜೊತೆಗೂ ಇಲ್ಲ ಎಂಬುದನ್ನು ಇದು ಸಾಬೀತು ಪಡಿಸಲಿದೆ. ವೋಟಿಗಾಗಿ ಅವರು ಯಾರ ಜೊತೆಗೆ ಬೇಕಾದರೂ ಕೈಜೋಡಿಸಲು ಸಿದ್ಧ ಎಂದು ಸಿದ್ದರಾಮಯ್ಯ ಹೇಳಿದ್ದರು.  ಕರ್ನಾಟಕದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ’ಬಿಜೆಪಿ ಭ್ರಮನಿರಸನಗೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಮತಗಳನ್ನು ವಿಭಜಿಸಲು ಸಾಧ್ಯವಿರುವ ಎಲ್ಲ ತಂತ್ರಗಳನ್ನೂ ಮಾಡುತ್ತಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ (ಪಿಎಫ್ ಐ) ತೀವ್ರವಾದಿ ಸಂಘಟನೆ ಮತ್ತು ಅದರ ರಾಜಕೀಯ ದಳವಾದ ಎಸ್ ಡಿಪಿಐ ಜೊತೆಗೂ ಬಿಜೆಪಿ ಮಾತುಕತೆ ನಡೆಸುತ್ತಿದೆ. ಮುಸ್ಲಿಮ್ ಮತಗಳನ್ನು ಒಡೆಯಲು ಅವರು ಓವೈಸಿ, ಪಿಎಫ್ ಐ ಮತ್ತು ಎಸ್ ಡಿಪಿಐ ನೆರವು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು.  ಕರ್ನಾಟಕದಲ್ಲಿ ತನ್ನ ಬೇರು ಆಳಕ್ಕೆ ಇಳಿಸುವ ಓವೈಸಿಯ ಕನಸು ಹೊಸತೇನಲ್ಲ. ಹಿಂದೆ ಹೈದರಾಬಾದಿನ ನಿಜಾಮರ ರಾಜ್ಯದ ಭಾಗಗಳಾಗಿದ್ದ ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡ ಹೈದರಾಬಾದ್ -ಕರ್ನಾಟಕ ಪ್ರದೇಶದಲ್ಲಿ ತನ್ನ ಪಕ್ಷವನ್ನು ಕಟ್ಟಲು ಓವೈಸಿ ಹಿಂದಿನಿಂದಲೇ ಯತ್ನಿಸುತ್ತಾ ಬಂದಿದ್ದರು. ಈ ಭಾಗ ೧೯೫೬ರಲ್ಲಿ ಕರ್ನಾಟಕಕ್ಕೆ ಸೇರ್ಪಡೆಯಾಗಿತ್ತು. ಇಲ್ಲಿ ಗಣನೀಯ ಸಂಖ್ಯೆಯಲ್ಲಿ ಮುಸ್ಲಿಮರಿದ್ದು, ಕನ್ನಡದ ಬಳಿಕ ಉರ್ದು ಎರಡನೇ ಪ್ರಮುಖ ಭಾಷೆಯಾಗಿದೆ.

2017: ವಾಷಿಂಗ್ಟನ್: ಮುಂದಿನ ವರ್ಷ ಸೂರ್ಯನ ಬಳಿಗೆ ಚೊಚ್ಚಲ ರೊಬಾಟಿಕ್ ಗಗನನೌಕೆ ಕಳುಹಿಸಲು ನಾಸಾ ಸಿದ್ಧತೆ ನಡೆಸಿರುವುದು ಸುದ್ದಿಯಾಯಿತು. ಗಗನ ನೌಕೆ ಬೆಳಗುತ್ತಿರುವ ನಕ್ಷತ್ರದ ಪರಿಸರದ ಅಧ್ಯಯನ ನಡೆಸಲಿದೆ. ಸೂರ್ಯನ ಒಳಕ್ಕೆ ನೌಕೆ ಸುಮಾರು 60 ಲಕ್ಷ ಕಿಲೋ ಮೀಟರ್ ದೂರ ಸಾಗಲಿದೆ. ಹಲವು ದೇಶಗಳು ಚಂದ್ರ, ಮಂಗಳ ಗ್ರಹ, ಅಂತರ್ತಾರಾ ಪ್ರದೇಶಕ್ಕೂ ಗಗನ ನೌಕೆಗಳನ್ನು ಕಳುಹಿಸಿವೆ. ಈಗ ನಾಸಾ ಮೊದಲ ಬಾರಿಗೆ ಭೂಮಿಯಿಂದ 1490 ಲಕ್ಷ ಕಿಲೋ ಮೀಟರ್ ಅಂತದಲ್ಲಿರುವ ಸೂರ್ಯನ ಮೇಲ್ಮೈ ಅಧ್ಯಯನಕ್ಕಾಗಿ ಸೋಲಾರ್ ಪ್ರೋಬ್ ಪ್ಲಸ್ ಯೋಜನೆ ಆರಂಭಿಸಲು ಯೋಜಿಸಿರುವುದಾಗಿ ಪ್ರಕಟಿಸಿತು. ಸೂರ್ಯನತ್ತ ಪ್ರಯಾಣಿಸುವ ನಮ್ಮ ಚೊಚ್ಚಲ ಯೋಜನೆ ಇದಾಗಲಿದೆ. ನಾವು ಸೂರ್ಯನ ಮೇಲ್ಮೈ ಮುಟ್ಟಲು ಸಾಧ್ಯವಿಲ್ಲ. ಆದರೆ ಯೋಜನೆಯಿಂದ ಮೂರು ಮಹತ್ವದ ಪ್ರಶ್ನೆಗಳಿಗೆ ಉತ್ತರ ಲಭಿಸಲಿದೆಎಂದು ಗೊಡ್ಡಾರ್ಡ್ ಫ್ಲೈಟ್ ಸೆಂಟರ್ ನಾಸಾ ಸಂಶೋಧನಾ ವಿಜ್ಞಾನಿ ಎರಿಕ್ ಕ್ರಿಸ್ಟಿಯನ್ ಹೇಳಿದರು. ಸೌರಗಾಳಿಯ ವೇಗ: ಸೌರಗಾಳಿ ಹೇಗೆ ವೇಗವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಅರಿತುಕೊಳ್ಳಲೂ ವಿಜ್ಞಾನಿಗಳು ಕಾತರರಾಗಿದ್ದಾರೆ ಎಂದುಲೈವ್ ಸೈನ್ಸ್ವರದಿ ಮಾಡಿತು. ಸೂರ್ಯನಿಂದ ಬಿಸಿ ಕಣಗಳ ಪ್ರವಾಹ ಗಂಟೆಗೆ 10 ಲಕ್ಷ ಮೈಲು ವೇಗದಲ್ಲಿ ಎಲ್ಲ ದಿಕ್ಕುಗಳಿಗೂ ಹರಿಯುತ್ತದೆ. ಆದರೆ ವೇಗ ಹೆಚ್ಚಾಗುವುದು ಹೇಗೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಕ್ರಿಸ್ಟಿಯನ್ನೌಕೆಗೆ ರಕ್ಷಣೆ: ಗಗನನೌಕೆಯುನ್ನು ಸೂರ್ಯನ ಶಾಖದಿಂದ ರಕ್ಷಿಸಿಕೊಳ್ಳುವ ಸಲುವಾಗಿ 11.4 ಸೆಂಟಿ ಮೀಟರಿನ ಕಾರ್ಬನ್-ಕಂಪೋಸಿಟ್ ಹೊರಕವಚವನ್ನು ನಾಸಾ ವಿನ್ಯಾಸಗೊಳಿಸಿದೆ. ಇದು ಗಗನನೌಕೆಯ ಹೊರಗಿನ 1,370 ಡಿಗ್ರಿ ಸೆಲ್ಸಿಯಸ್ ತಾಪವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.  ಏನು ಅಧ್ಯಯನ?  ಫೋಟೋಸ್ಪೀಯರ್ ಎಂದು ಕರೆಯಲಾಗುವ ಸೂರ್ಯನ ಮೇಲ್ಮೈ, ಕೊರೋನಾ ಎಂದು ಕರೆಯಲಾಗುವ ಅದರ ಪರಿಸರದ ತಾಪಮಾನ ಕುರಿತು ಅಧ್ಯಯನ ನಡೆಸಲು ನಾಸಾ ನಿರ್ಧರಿಸಿದೆ. ನಾಸಾದ ಪ್ರಕಾರ ಸೂರ್ಯನ ಮೇಲ್ಮೈ ತಾಪಮಾನ 5,500 ಡಿಗ್ರಿ ಸೆಲ್ಸಿಯಸ್. ಆದರೆ ಅದರ ಮೇಲಿನ ಪರಿಸರ 20 ಲಕ್ಷ ಡಿಗ್ರಿ ಸೆಲ್ಸಿಯಸ್ನಷ್ಟು ಬಿಸಿಯಾಗಿದೆ. ’ಬಿಸಿಯಾದ ವಸ್ತುವಿನಿಂದ ದೂರ ಹೋದಂತೆ ನಮಗೆ ತಣ್ಣನೆಯ ಅನುಭವವಾಗುತ್ತದೆ. ಆದರೆ ಸೂರ್ಯನ ಪರಿಸರ, ಸೂರ್ಯನ ಮೇಲ್ಮೈಗಿಂತ ಅತಿಹೆಚ್ಚು ಬಿಸಿಯಾಗಿರುವುದು ಏಕೆ ಎಂದುದು ದೊಡ್ಡ ಒಗಟುಎಂದು ಕ್ರಿಸ್ಟಿಯನ್ ಹೇಳುತ್ತಾರೆ.

2017: ಹೈದರಾಬಾದ್ : ಇಂದಿರಾಗಾಂಧಿ ಹಾಗೂ ರಾಜೀವ್ಗಾಂಧಿ ಸರ್ಕಾರದಲ್ಲಿ ಅತ್ಯಂತ ಪ್ರಭಾವಶಾಲಿ ಮುಖಂಡ ಎನಿಸಿದ್ದ ಕೇಂದ್ರದ ಮಾಜಿ ಸಚಿವ ಪಿ. ಶಿವಶಂಕರ್ (90) ಅವರು ನಿಧನರಾದರು. ಶಿವಶಂಕರ್ ಅವರು ವಿದೇಶಾಂಗ, ವಾಣಿಜ್ಯ, ಯೋಜನೆ ಮತ್ತು ಮಾನವ ಸಂಪನ್ಮೂಲ ಖಾತೆಗಳನ್ನು ನಿರ್ವಹಿಸಿದ್ದರು. ಸಿಕ್ಕಿಂ ಹಾಗೂ ಕೇರಳ ರಾಜ್ಯಗಳ ರಾಜ್ಯಪಾಲರಾಗಿಯೂ ಕೆಲಸ ಮಾಡಿದ್ದರು. ಆಂಧ್ರಪ್ರದೇಶದ ಹೈಕೋರ್ಟ್ನ್ಯಾಯಮೂರ್ತಿಯಾಗಿಯೂ ಕೆಲಸ ಮಾಡಿದ್ದ ಅವರು, ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಪ್ರಕರಣಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು. ಇಂದಿರಾಗಾಂಧಿ ಅವರ ಕೋರಿಕೆಯಂತೆ ಸಿಕಂದರಾಬಾದ್ಲೋಕಸಭಾ ಕ್ಷೇತ್ರದಿಂದ 1978 ಹಾಗೂ 1980ರಲ್ಲಿ ಸ್ಪರ್ಧಿಸಿ ಗೆದ್ದಿದ್ದರು.


2017: ಇಂದೋರ್‌: ದೇಶದ್ರೋಹ ಪ್ರಕರಣವೊಂದರಲ್ಲಿ ನಿಷೇಧಿತ ಉಗ್ರ ಸಂಘಟನೆ ಸಿಮಿ ಮುಖ್ಯಸ್ಥ ಸಫ್ದಾರ್ಹುಸೇನ್ನಾಗೋರಿ ಮತ್ತು ಇತರ 10 ಮಂದಿಗೆ  ಇಂದೋರ್  ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಸಜೆ ವಿಧಿಸಿತು. ಅಹಮದಾಬಾದ್ ಸಬರಮತಿ ಕೇಂದ್ರ ನ್ಯಾಯಾಲಯದಲ್ಲಿ ಎಲ್ಲ 10 ಮಂದಿ ಆರೋಪಿಗಳ ವಿರುದ್ಧ  ದೂರು ದಾಖಲಾಗಿತ್ತು. ವಿಶೇಷ ಹೆಚ್ಚುವರಿ ಸೆಷನ್ಸ್ನ್ಯಾಯಮೂರ್ತಿ ಬಿ.ಕೆ.ಪಲೋಡಾ ಅವರು 11 ಮಂದಿ ಸಿಮಿ ಕಾರ್ಯಕರ್ತರ ವಿರುದ್ಧ ತೀರ್ಪು ಪ್ರಕಟಿಸಿದರು. ತೀರ್ಪು ಪ್ರಕಟವಾಗುವಾಗ ತಮ್ಮನ್ನು ಇಂದೋರ್ ನ್ಯಾಯಾಲಯಕ್ಕೆ ಕರೆತರಬಾರದು ಬದಲಿಗೆ ವಿಡಿಯೊ ಕಾನ್ಫ್ರೆನ್ಸ್ಮೂಲಕವೇ ತಿಳಿಸಬೇಕು ಎಂದು 11 ಆರೋಪಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.  ಮಿಶ್ರಾ ಮತ್ತು ಮುನ್ರೋಜ್ಎಂಬ ಇಬ್ಬರು ಆರೋಪಿಗಳು ದೀರ್ಘ ಕಾಲದಿಂದ ಜಾಮೀನಿನ ಮೇಲೆ ಸೆರೆಮನೆಯಿಂದ ಹೊರ ಬಂದಿದ್ದರು. ಆದರೆ ತೀರ್ಪು ಪ್ರಕಟವಾಗುವ ದಿನ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅಪರಾಧಿ ಎಂದು ತೀರ್ಮಾನ ವಾಗುತ್ತಿದ್ದಂತೆ ಇಬ್ಬರನ್ನೂ ಜೈಲಿಗೆ ಕಳುಹಿಸಲಾಯಿತು.

2009: ಯೋಧರ ದಂಗೆ ಆರಂಭವಾದಾಗಿನಿಂದ ಕಾಣೆಯಾಗಿದ್ದ ಬಾಂಗ್ಲಾದೇಶ ರೈಫಲ್ಸ್‌ನ ಮಹಾನಿರ್ದೇಶಕ ಮೇಜರ್ ಜನರಲ್ ಶಕೀಲ್ ಅಹಮದ್ ಅವರು ಹತ್ಯೆಯಾಗಿರುವುದು ಬೆಳಕಿಗೆ ಬಂದಿತು. ಈದಿನ ಅನುಮಾನ ಬಂದ ಒಂದು ಕಡೆ ಮಣ್ಣನ್ನು ಅಗೆದು ತೆಗೆದಾಗ ಅಲ್ಲಿ ಒಂದೇ ಕಡೆ ಹೂಳಲಾಗಿದ್ದ 38 ಅಧಿಕಾರಿಗಳ ಮೃತದೇಹಗಳು ಕಂಡು ಬಂದವು. ಅವುಗಳನ್ನು ಹೊರ ತೆಗೆಯಲಾಯಿತು. ಬೆಳಿಗ್ಗೆ ಸೇನಾ ತುಕಡಿಗಳು ಬಂಡುಕೋರರು ಇದ್ದ ಸ್ಥಳವನ್ನು ಸುತ್ತುವರಿದಾಗ, ಅವರೆಲ್ಲರೂ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟರೆಂದೂ ಹೇಳಲಾಯಿತು. ಹೀಗಾಗಿ ದೇಶದ ವಿಭಿನ್ನ ಕಡೆ ಸೇನಾ ಬಂಡುಕೋರರ ದಾಳಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಂತಾಯಿತು.

2009: ಬಾಂಗ್ಲಾದೇಶ ರೈಫಲ್ಸ್‌ನಲ್ಲಿ (ಬಿಡಿಆರ್) ಸತತ ಎರಡು ದಿನಗಳ ಕಾಲ ನಡೆದ ಯೋಧರ ದಂಗೆ ಈದಿನ ಕೊನೆಗೊಂಡಿತು. ರಾಜಧಾನಿಯ ಹೊರವಲಯದಲ್ಲಿರುವ ಮುಖ್ಯ ಕೇಂದ್ರದಲ್ಲಿ ಆರಂಭವಾಗಿ, ದೇಶಾದ್ಯಂತ ಎಲ್ಲಾ ಬಿಡಿಆರ್ ಶಿಬಿರಗಳಿಗೂ ವ್ಯಾಪಿಸಿದ್ದ ದಂಗೆಯನ್ನು ನಿಯಂತ್ರಿಸಲು ಸೇನೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ಯಶಸ್ವಿಯಾಯಿತು. ಬ್ರಿಗೇಡಿಯರ್ ಜನರಲ್ ನೇತೃತ್ವದ ಎರಡು ಸೇನಾ ತುಕಡಿಗಳು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೇಂದ್ರದ ಮುಖ್ಯ ದ್ವಾರವನ್ನು ಪ್ರವೇಶಿಸಿದವು. ಆರು ಸೇನಾ ಟ್ಯಾಂಕುಗಳು, ಸೇನೆಯ 20 ವಾಹನಗಳು, ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕೇಂದ್ರವನ್ನು ಸುತ್ತುವರಿದು ಯೋಧರಲ್ಲಿ ಭೀತಿಯ ವಾತಾವರಣ ಹುಟ್ಟುಹಾಕಲಾಯಿತು. ಆ ನಂತರವಷ್ಟೇ ಬಂಡಾಯಗಾರರು ಶಸ್ತ್ರ ತ್ಯಜಿಸಲು ಆರಂಭಿಸಿದರು.

2009: ಹೊಗೇನಕಲ್ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಈ ಮೊದಲು ಒಪ್ಪಿದ್ದ ನೀರಿನ ಬಳಕೆ ಪ್ರಮಾಣಕ್ಕಿಂತ ಹೆಚ್ಚು ನೀರು ಕಳಿಸುವ ಹುನ್ನಾರ ನಡೆಸಿರುವುದು ವಿಸ್ತೃತ ಯೋಜನಾ ವರದಿಯಿಂದ (ಡಿಪಿಆರ್) ಬೆಳಕಿಗೆ ಬಂದಿತು. ಮೂಲ ಒಪ್ಪಂದದ ಪ್ರಕಾರ ಹೊಗೇನಕಲ್ ಯೋಜನೆಯಲ್ಲಿ ತಮಿಳುನಾಡು ಬಳಸುವ ಕಾವೇರಿ ನೀರಿನ ಪ್ರಮಾಣ 1.4 ಟಿಎಂಸಿ ಅಡಿಗಳಾಗಿತ್ತು. ಆದರೆ ತಮಿಳುನಾಡು ಸರ್ಕಾರ ಈಚೆಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಡಿಪಿಆರ್‌ನಲ್ಲಿ ಯೋಜನೆಯಲ್ಲಿ 2.1 ಟಿಎಂಸಿ ಅಡಿ ನೀರು ಬಳಸುವುದಾಗಿ ತಿಳಿಸಿದ್ದು ಬೆಳಕಿಗೆ ಬಂದಿತು.

2009: ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ಆರೋಪಿ ಅಜ್ಮಲ್ ಕಸಾಬನನ್ನು ಹಸ್ತಾಂತರಿಸುವಂತೆ ಪಾಕಿಸ್ಥಾನವು ಭಾರತಕ್ಕೆ ಅಧಿಕೃತವಾಗಿ ಮನವಿ ಮಾಡಿದೆ ಎಂಬುದಾಗಿ ಹೇಳಿಕೆ ನೀಡಿದ ಪಾಕಿಸ್ಥಾನದ ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಸರ್ದಾರ್ ಮೊಹಮ್ಮದ್ ಘಾಜಿ ಅವರನ್ನು ಪಾಕಿಸ್ಥಾನಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ವಿಶೇಷ ಪಬಿಕ್ಲ್ ಪ್ರಾಸೆಕ್ಯೂಟರ್ ಮತ್ತು ಡೆಪ್ಯುಟಿ ಅಟಾರ್ನಿ ಜನರಲ್ ಹುದ್ದೆಗಳಿಂದ ಕಿತ್ತು ಹಾಕಿದರು. ಘಾಜಿ ಅವರ ವಿರುದ್ಧ ತೀವ್ರವಾಗಿ ಹರಿಹಾಯ್ದ ಜರ್ದಾರಿ ಅವರು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಅವರನ್ನು ಉಭಯ ಹುದ್ದೆಗಳಿಂದಲೂ ತೆಗೆದುಹಾಕಿದ್ದಾರೆ ಎಂದು ಅಧಿಕೃತ ಪ್ರಕಟಣೆಯೊಂದನ್ನು ಉಲ್ಲೇಖಿಸಿ ಡಾನ್ ಸುದ್ದಿ ವಾಹಿನಿ ವರದಿ ಮಾಡಿತು.

2008: ಕೇರಳದ ಕಲ್ಲಿಕೋಟೆಯಿಂದ ಕರ್ನಾಟಕದ ಕಾರವಾರದವರೆಗಿನ ಕರಾವಳಿ ತೀರದಲ್ಲಿ ಕಳೆದ ಕೆಲವು ವರ್ಷಗಳಿಂದ ವಿಧ್ವಂಸಕ ಚಟುವಟಿಕೆಗಳ `ವಿಶ್ವದರ್ಶನ'ಕ್ಕೆ ಉಗ್ರರಿಂದ ಸಿದ್ಧತೆ ನಡೆಸುವ ಸಲುವಾಗಿ ಈ ಪ್ರದೇಶದ ಕೆಲವು ರಹಸ್ಯ ಕೇಂದ್ರಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿ, ಯುವಕರನ್ನು ತಯಾರುಗೊಳಿಸುವ ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿತ್ತು ಎಂಬ ಆತಂಕಕಾರಿ ವಿಷಯ ಉನ್ನತ ಪೊಲೀಸ್ ಮೂಲಗಳ ಗಮನಕ್ಕೆ ಬಂದಿತು. ಈ ಸಂದೇಹದ ಜಾಡು ಹಿಡಿದು ಕೇಂದ್ರ ತನಿಖಾ ದಳ ತನಿಖೆ ಆರಂಭಿಸಿತು.

2008: ಭಾರತ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಬಗ್ಗೆ ಬಹಿರಂಗವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯು ಹೇಡನ್ ವಿರುದ್ಧ ನೀತಿ ಸಂಹಿತೆ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಯಿತು. ಯಾವುದೇ ದೊಡ್ಡ ಶಿಕ್ಷೆ ಹಾಗೂ ದಂಡವನ್ನು ವಿಧಿಸದಿದ್ದರೂ ದೈತ್ಯ ಬ್ಯಾಟ್ಸ್ ಮನ್ ಗೆ ಛೀಮಾರಿ ಹಾಕಿ ಎಚ್ಚರಿಕೆಯನ್ನೂ ನೀಡಲಾಯಿತು. `ಭಜ್ಜಿ' ವಿರುದ್ಧದ ಹೇಡನ್ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತುರ್ತಾಗಿ ವಿಚಾರಣೆ ನಡೆಸಿತು.

2008: ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರವೂ ಮಗುವಿಗೆ ಜನ್ಮ ನೀಡಿದ ಮಹಿಳೆಗೆ 1.8 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿತು. ಈ ಹಣವನ್ನು ಅರ್ಜಿದಾರ ಮಹಿಳೆ ಸಾವಿತ್ರಿ ಅವರು ಅರ್ಜಿ ಸಲ್ಲಿಸಿದ ದಿನದಿಂದ ಶೇ 6ರ ಬಡ್ಡಿ ದರ ಸಹಿತವಾಗಿ ನೀಡುವಂತೆ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಆದೇಶ ನೀಡಿದರು. ಸಾವಿತ್ರಿ ಅವರಿಗೆ ಇಬ್ಬರು ಮಕ್ಕಳಿದ್ದ ಹಿನ್ನೆಲೆಯಲ್ಲಿ ಅವರು ಈ ಆಸ್ಪತ್ರೆಯಲ್ಲಿ 1995ರಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಚಿಕಿತ್ಸೆಯು ವಿಫಲವಾದ ಹಿನ್ನೆಲೆಯಲ್ಲಿ ಪುನಃ ಗರ್ಭ ಧರಿಸಿದ ಅವರು 1999ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಪುನಃ ಅವರು ಚಿಕಿತ್ಸೆಗೆ ಒಳಗಾಗಬೇಕಾಯಿತು. ವಿನಾ ಕಾರಣ ಇನ್ನೊಂದು ಮಗುವಿನ ಖರ್ಚು ವೆಚ್ಚ ನೋಡಿಕೊಳ್ಳಬೇಕಾಗಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವಿರುದ್ಧ ಅವರು ಸಿವಿಲ್ ಕೋರ್ಟಿನಲ್ಲಿ ಮೊಕದ್ದಮೆ ಹೂಡಿದರು. ಅವರಿಗೆ 1.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ 2003ರಲ್ಲಿ ಆದೇಶಿಸಿತು. ಈ ಆದೇಶದ ರದ್ದತಿಗೆ ಕೋರಿ ಕೋರಿ ಸರ್ಕಾರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರೆ, ಪರಿಹಾರದ ಮೊತ್ತ ಹೆಚ್ಚಳಕ್ಕೆ ಕೋರಿ ಸಾವಿತ್ರಿಯವರೂ ಮೇಲ್ಮನವಿ ಸಲ್ಲಿಸಿದ್ದರು.

2008: ಗಿನ್ನೆಸ್ ಮತ್ತು ಲಿಮ್ಕಾ ದಾಖಲೆಯ ಮೇಲೆ ಕಣ್ಣಿಟ್ಟ ಸ್ಕೇಟಿಂಗ್ ಪ್ರತಿಭೆ ಶಿಬಾನಿ ಎಂ.ನಾಯಕ್ ಮೈಸೂರು ನಗರದಲ್ಲಿ ಈದಿನ 26 ಟಾಟಾ ಇಂಡಿಕಾ ಕಾರುಗಳ ಕೆಳಗೆ ಸ್ಕೇಟ್ ಮಾಡುತ್ತಾ ಸಾಗಿ ಬಂದು ವೀಕ್ಷಕರಿಗೆ ರೋಮಾಂಚನ ಉಂಟು ಮಾಡಿದಳು. ಮೈಸೂರಿನ ವಿಜಯವಿಠಲ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಶಿಬಾನಿ ಕಳೆದ ಸೆಪ್ಟೆಂಬರಿನಲ್ಲಿ 14 ಕಾರುಗಳ ಕೆಳಗೆ ಸ್ಕೇಟಿಂಗ್ ಮಾಡುತ್ತಾ ನುಸುಳಿ ಬಂದಿದ್ದಳು. ಮಹಾರಾಜ ಕಾಲೇಜ್ ಬಳಿಯ ಕೃಷ್ಣರಾಜ ಬೌಲ್ ವಾರ್ಡ್ ಬಳಿ ಈ ಸಾಹಸ ವೀಕ್ಷಿಸಲು ನೂರಾರು ಜನರು ಸೇರಿದ್ದರು. ಆಕೆಯ ತಂದೆ- ತಾಯಿಯರಾದ ಟಿ.ಎನ್. ಮಲ್ಲೇಶ ಕುಮಾರ್- ರೂಪಾ ಹಾಗೂ ಕೋಚ್ ಶ್ರೀಕಾಂತ ಕೂಡಾ ಈ ಸಂತೋಷದ ಕ್ಷಣವನ್ನು ಚಪ್ಪಾಳೆ ತಟ್ಟಿ ಆನಂದಿಸಿದರು. ಶಿಬಾನಿ ನೆಲಮಟ್ಟದಿಂದ 6 ಇಂಚು ಎತ್ತರದಲ್ಲಿದ್ದ ಕಾರಿನ ಕೆಳಗೆ ನುಸುಳಿ ಬಂದಿದ್ದು, 5.75 ಇಂಚು ಎತ್ತರದ ಕಬ್ಬಿಣದ ರಾಡ್ ಕೆಳಗೆ ನುಸುಳಿ ಬಂದಿರುವುದು ಈ ಕ್ಷೇತ್ರದಲ್ಲಿ ಈಗಾಗಲೆ ಇರುವ ಗಿನ್ನೆಸ್ ದಾಖಲೆ. ಹಾಗೆಯೇ ಚೀನಾದ ಪೋರನೊಬ್ಬ 52 ಕಾರುಗಳ ಕೆಳಗೆ ಸ್ಕೇಟ್ ಮಾಡುತ್ತಾ ನುಸುಳಿ ಬಂದಿರುವುದು ಲಿಮ್ಕಾ ದಾಖಲೆ ಆಗಿದೆ. ಈ ದಾಖಲೆಯನ್ನು ಮುರಿಯಲು ಶಿಬಾನಿ ಕಳೆದ ಒಂದು ವರ್ಷದಿಂದ ಸತತ ಯತ್ನ ನಡೆಸಿದ್ದಾಳೆ.

2008: ಕ್ರಿಕೆಟ್ ಚೆಂಡು ಹಿಡಿಯಲು ಹೋಗಿ ಶಾಲೆಯೊಂದರ ಛಾವಣಿ ಏರಿ ಅಲ್ಲಿದ್ದ ವಿದ್ಯುತ್ ತಂತಿಯನ್ನು ಮುಟ್ಟಿ ಕೈಕಾಲುಗಳನ್ನು ಕಳೆದುಕೊಂಡ 12ರ ಹರೆಯದ ಬಾಲಕ ಗುಲ್ಬರ್ಗ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಹಿರೇಜೇವರ್ಗಿಯ ನಿಖಿಲ್ ಇಬ್ರಾಹಿಂಪೂರನಿಗೆ 2 ಲಕ್ಷ ರೂಪಾಯಿ ವೈದ್ಯಕೀಯ ವೆಚ್ಚ ನೀಡುವಂತೆ ಕರ್ನಾಟಕ ಹೈಕೋರ್ಟ್ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಗೆ ಆದೇಶಿಸಿತು. 2006ರ ನವೆಂಬರ್ 12ರಂದು ನಡೆದ ಈ ಘಟನೆಯ ಕುರಿತು `ಪ್ರಜಾವಾಣಿ' ಪ್ರಕಟಿಸಿದ್ದ ವಿಶೇಷ ವರದಿ ಆಧರಿಸಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹೈಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಜೆಸ್ಕಾಂ ವಿರುದ್ಧ ಸ್ವಯಂ ಪ್ರೇರಿತ (ಸು ಮೊಟೊ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

2008: ಮಹಿಳೆಯರಿಗೆ ಹೆರಿಗೆ ಸೌಲಭ್ಯಗಳನ್ನು ಕಲ್ಪಿಸುವ `ಹೆರಿಗೆ ಭತ್ಯೆ (ತಿದ್ದುಪಡಿ) ಮಸೂದೆ-2007' ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕಾರಗೊಂಡಿತು. ಸಂಸತ್ತಿನಲ್ಲಿ ಈ ಮಸೂದೆಯ ಅಂಗೀಕಾರದಿಂದ ಇದುವರೆಗೆ ಸರ್ಕಾರಿ ನೌಕರರು ಮಾತ್ರ ಪಡೆಯುತ್ತಿದ್ದ ಹೆರಿಗೆ ಸೌಲಭ್ಯಗಳನ್ನು ಖಾಸಗಿ ಕಂಪೆನಿಗಳು, ಕಾರ್ಖಾನೆಗಳು ಹಾಗೂ ತೋಟಗಳಲ್ಲಿ ದುಡಿಯುತ್ತಿರುವ ಮಹಿಳೆಯರು ಸಹ ಪಡೆದುಕೊಳ್ಳುವರು. ಹೊಸ ಕಾನೂನಿನಡಿ, ಹೆರಿಗೆಗಾಗಿ ವೈದ್ಯಕೀಯ ಸೇವೆಗೆ ನೀಡುವ ಹಣವು ಈಗಿನ ರೂ 250ರಿಂದ ರೂ 1,000ವರೆಗೆ ಹೆಚ್ಚಳವಾಗುವುದು. ಇದಲ್ಲದೆ ಈ ಮೊತ್ತವನ್ನು ರೂ 20,000ವರೆಗೂ ಹೆಚ್ಚಿಸುವ ಅಧಿಕಾರ ಕೇಂದ್ರಕ್ಕೆ ದೊರೆಯುವುದು. ನೌಕರರ ರಾಜ್ಯ ವಿಮಾ ಸೌಲಭ್ಯ (ಇ ಎಸ್ ಐ) ಕಾಯ್ದೆ 1961ರಡಿ ಬಾರದ ಮಹಿಳಾ ಉದ್ಯೋಗಿಗಳು, ಉದಾಹರಣೆಗೆ ಖಾಸಗಿ ಕಂಪೆನಿ, ಕಾರ್ಖಾನೆ, ಸರ್ಕಸ್, ಪ್ಲಾಂಟೇಶನ್ ಹಾಗೂ ಅಂಗಡಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಈ ಮಸೂದೆಯು ಸೌಲಭ್ಯ ಕಲ್ಪಿಸುವುದು. 10ಕ್ಕಿಂತಲೂ ಹೆಚ್ಚಿನ ನೌಕರರು ಕೆಲಸ ಮಾಡುವ ಸಂಸ್ಥೆಗಳು ಈ ಮಸೂದೆಯ ವ್ಯಾಪಿಗೆ ಒಳಪಡುವುವು.

2008: ನಾಗಾಲ್ಯಾಂಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಧಿಸುವುದಕ್ಕೆ ರಾಜ್ಯಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳುವ ಮೂಲಕ ಸಂಸತ್ತಿನ ಪೂರ್ಣ ಒಪ್ಪಿಗೆ ದೊರಕಿತು.

2008: ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ವರ್ಷದ ಹಿಂದೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹಾಗೂ ಆಕೆಯ ಪತಿ ಆಸೀಫ್ ಜರ್ದಾರಿ ಅವರಿಗೆ ಅಧ್ಯಕ್ಷ ಪರ್ವೇಜ್ ಮುಷರಫ್ ಕ್ಷಮೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಪಾಕಿಸ್ಥಾನ ಸುಪ್ರೀಂಕೋರ್ಟ್ ವಜಾಗೊಳಿಸಿತು. 2007ರ ಅಕ್ಟೋಬರ್ 5ರಂದು ಅಧ್ಯಕ್ಷರ ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಸುಗ್ರೀವಾಜ್ಞೆ ಮೂಲಕ ಮುಷರಫ್, ಭುಟ್ಟೋ ಅವರಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕ್ಷಮೆ ನೀಡಿದ್ದರು. ಆದರೆ, ಈ ಸುಗ್ರೀವಾಜ್ಞೆಯಿಂದ ನವಾಜ್ ಷರೀಫ್ ಸೇರಿದಂತೆ ಇತರ ಪಿಎಂಎಲ್- ಎನ್ ನಾಯಕರಿಗೆ ಲಾಭವಾಗಿರಲಿಲ್ಲ. ಈ ಸುಗ್ರೀವಾಜ್ಞೆ ಪ್ರಶ್ನಿಸಿ ಪಿಎಂಎಲ್- ಎನ್ ನಾಯಕ ಶಹಬಾಜ್ ಷರೀಫ್, ಜಮಾತೆ ಇಸ್ಲಾಮಿ ನಾಯಕ ಖಾಜಿ ಹುಸೇನ್ ಅಹ್ಮದ್ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಇಂತಹ ಐದು ಅರ್ಜಿಗಳಲ್ಲಿ ಮೂರು ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾ ಮಾಡಿತು.

2008: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬ್ರಾಡ್ ಹಾಗ್ ಅವರು ತ್ರಿಕೋನ ಏಕದಿನ ಪಂದ್ಯಗಳ ಸರಣಿಯ ಫೈನಲ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳುವುದಾಗಿ ಈದಿನ ಮೆಲ್ಬೋರ್ನಿನಲ್ಲಿ ಪ್ರಕಟಿಸಿದರು. 1996ರಲ್ಲಿ ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ ಪ್ರವೇಶ ಮಾಡಿದ್ದ ಹಾಗ್ ಆಡಿದ್ದು ಕೇವಲ ಏಳು ಟೆಸ್ಟ್. ಪದಾರ್ಪಣೆ ನಂತರ ದೀರ್ಘ ಕಾಲ ಎಲೆಮರೆಯ ಕಾಯಿಯಾಗಿ ಉಳಿದಿದ್ದ ಅವರು ಮತ್ತೆ ಟೆಸ್ಟಿನಲ್ಲಿ ಕಾಣಿಸಿಕೊಂಡದ್ದು 2003ರಲ್ಲಿ. ಈವರೆಗೆ ಆಡಿರುವ 121 ಏಕದಿನ ಪಂದ್ಯಗಳಲ್ಲಿ 26.73ರ ಸರಾಸರಿಯಲ್ಲಿ 154 ವಿಕೆಟುಗಳನ್ನು ಕಬಳಿಸಿದ್ದಾರೆ. 2003 ಹಾಗೂ 2007ರಲ್ಲಿ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ ಆಗಿದ್ದಾಗಲೂ ತಂಡದಲ್ಲಿದ್ದರು. ಶೇನ್ ವಾರ್ನ್ ನಿವೃತ್ತಿಯ ನಂತರ ತಂಡಕ್ಕೆ ಸ್ಪಿನ್ ವಿಭಾಗದಲ್ಲಿ ಅಗತ್ಯವಿದ್ದ ನೆರವು ನೀಡಿದ ಹೆಗ್ಗಳಿಕೆ ಹಾಗ್ ಅವರದು. ಭಾರತ ವಿರುದ್ಧ ಇತ್ತೀಚೆಗೆ ನಡೆದ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಅವರು ಒಟ್ಟು ಎಂಟು ವಿಕೆಟುಗಳನ್ನು ಕಬಳಿಸಿದ್ದರು.

2007: ಉತ್ತರಖಂಡ, ಪಂಜಾಬ್ ಮತ್ತು ಮಣಿಪುರ ಈ ಮೂರು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕೇಂದ್ರದ ಯುಪಿಎ ಸರ್ಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್ ಪಂಜಾಬ್ ಮತ್ತು ಉತ್ತರಖಂಡದಲ್ಲಿ ಅಧಿಕಾರ ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿತು. 60 ಸದಸ್ಯರ ಮಣಿಪುರದಲ್ಲಿ ಮಾತ್ರ 30 ಸ್ಥಾನ ಗೆದ್ದು ಸರ್ಕಾರ ರಚಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಯಿತು. ಪಂಜಾಬಿನಲ್ಲಿ ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ ನಿಚ್ಚಳ ಬಹುಮತದೊಂದಿಗೆ ಅಧಿಕಾರದತ್ತ ಸರಿದರೆ, ಉತ್ತರಖಂಡದಲ್ಲಿ ಬಿಜೆಪಿಗೆ ನಿಚ್ಚಳ ಬಹುಮತಕ್ಕೆ ಒಂದು ಸ್ಥಾನದ ಕೊರತೆಯಾದರೂ ಕಾಂಗ್ರೆಸ್ಸನ್ನು ಪದಚ್ಯುತಿಗೊಳಿಸಿ ಅಧಿಕಾರಕ್ಕೇ ಏರಲು ಸಾಧ್ಯವಾಯಿತು.

2007: ಪ್ರಸ್ತುತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತ 24,73,562 ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆ ಇದ್ದು, ಪ್ರತಿಯೊಬ್ಬ ಭಾರತೀಯನ ತಲೆಯ ಮೇಲೆ ತಲಾ 22,000 ರೂಪಾಯಿಗಳಿಗಿಂತ ಹೆಚ್ಚಿನ ಸಾಲದ ಹೊರೆ ಬೀಳುತ್ತದೆ. 1990-91ರಲ್ಲಿ ಪ್ರತಿಯೊಬ್ಬ ಭಾರತೀಯನ ತಲೆಯ ಮೇಲಿದ್ದ ಸಾಲದ ಹೊರೆ ಅಂದಾಜು 3500 ರೂಪಾಯಿ ಮಾತ್ರ. ಆಗ ಜನಸಂಖ್ಯೆ 90 ಕೋಟಿಯಾಗಿದ್ದು ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತ 3,14,558 ಕೋಟಿ ರೂಪಾಯಿಗಳು. 16 ವರ್ಷಗಳಲ್ಲಿ ಜನಸಂಖ್ಯೆ 112 ಕೋಟಿಗೆ ಏರಿದರೆ, ಸಾಲದ ಮೊತ್ತ 24,73,562 ಕೋಟಿ ರೂಪಾಯಿಗಳಿಗೆ ಜಿಗಿಯಿತು. ಸಂಸತ್ತಿನಲ್ಲಿ ಈದಿನ ಮಂಡಿಸಲಾದ ಆರ್ಥಿಕ ಸಮೀಕ್ಷೆಯ್ಲಲಿ ಈ ವಿವರ ಪ್ರಕಟಗೊಂಡಿತು.

2007: ಆಫ್ಘಾನಿಸ್ಥಾನಕ್ಕೆ ಭೇಟಿ ನೀಡಿರುವ ಡಿಕ್ ಚೆನಿ ಅವರನ್ನು ಗುರಿಯಾಗಿ ಇರಿಸಿ ಬಗ್ರಾಮ್ ನ ಅಮೆರಿಕದ ಸೇನಾ ನೆಲೆಯ ಹೊರಭಾಗದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 19 ಜನ ಮೃತರಾಗಿ 24 ಮಂದಿ ಗಾಯಗೊಂಡರು.

2007: ಬೊಫೋರ್ಸ್ ಫಿರಂಗಿ ಖರೀದಿ ಲಂಚ ಹಗರಣದ ಆರೋಪಿ ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ (69) ಅವರ ಪಾಸ್ ಪೋರ್ಟನ್ನು ಅರ್ಜೆಂಟೀನಾ ಮುಟ್ಟುಗೋಲು ಹಾಕಿಕೊಂಡಿತು.

2006: ಬೆಳಗಾವಿ ತಾಲ್ಲೂಕು ಪಂಚಾಯ್ತಿಯ ಮೊದಲ ಸಭೆಯಲ್ಲಿ ಆಡಳಿತಾರೂಢ ಎಂ ಇ ಎಸ್ ಬೆಂಬಲಿತ ಸದಸ್ಯರು ಅಧಿಕಾರಿಗಳ ಗೈರುಹಾಜರಿಯಲ್ಲಿ ಗಡಿ ವಿವಾದದ ತ್ವರಿತ ಇತ್ಯರ್ಥಕ್ಕೆ ಮನವಿ ಮಾಡುವ ನಿರ್ಣಯವನ್ನು ಕೈ ಎತ್ತುವ ಮೂಲಕ ಅಂಗೀಕರಿಸಿದರು.

1998: ಇಂಗ್ಲೆಂಡಿನ ಸಿಂಹಾಸನ ಏರಲು 1000 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಪುರುಷ ಸಂತತಿಗೆ ಇದ್ದ ಆದ್ಯತೆಯನ್ನು ಕೊನೆಗೊಳಿಸಲು ರಾಣಿ ಎಲಿಜಬೆತ್ ಒಪ್ಪಿಗೆಯೊಂದಿಗೆ ಹೌಸ್ ಆಫ್ ಲಾರ್ಡ್ಸ್ ಮಂಜೂರಾತಿ ನೀಡಿತು. ದೊರೆಯ ಮೊದಲ ಪುತ್ರಿಗೆ ಸಿಂಹಾಸನ ಏರಲು ಮೊದಲ ಪುತ್ರನಿಗೆ ಇರುವಷ್ಟೇ ಅಧಿಕಾರ ಇದರಿಂದ ಲಭಿಸಿತು.

1991: ಕುವೈತಿನ ವಿಮೋಚನೆ ಹಾಗೂ ಇರಾಕಿ ಪಡೆಗಳ ಪರಾಭವದೊಂದಿಗೆ ಕೊಲ್ಲಿ ಯುದ್ಧ ಕೊನೆಗೊಂಡಿತು.

1949: ಕಥಾ ಕೀರ್ತನಕಾರ, ಗಮಕಿ ಹಾಗೂ ಅಧ್ಯಾತ್ಮ ಮಾರ್ಗದರ್ಶಿ ಸಚ್ಚಿದಾನಂದ ದಾಸ್ ಅವರು ಉಪಾಧ್ಯಾಯ ಗಮಕಿ ಕೀರ್ತನೆಗಾರ ಶ್ರೀನಿವಾಸಯ್ಯ- ಕನಕಲಕ್ಷ್ಮಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಅತ್ತಿಗೋಡು ಗ್ರಾಮದಲ್ಲಿ ಜನಿಸಿದರು.

1932: ಅಮೆರಿಕದ ವಿವಾದಿತ ಬಹುವಿವಾಹಿತ ಚಿತ್ರನಟಿ ಎಲಿಜಬೆತ್ ಟೇಲರ್ ಹುಟ್ಟಿದ ದಿನ.

1931: ಅಲಹಾಬಾದಿನ ಆಲ್ ಫ್ರೆಡ್ ಪಾರ್ಕಿನಲ್ಲಿ ಭಾರತದ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದ್ ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಾಹುತಿ ಮಾಡಿಕೊಂಡರು.

1899: ಚಾರ್ಲ್ಸ್ ಹರ್ಬರ್ಟ್ ಬೆಸ್ಟ್ (1899-1978) ಹುಟ್ಟಿದ ದಿನ. ಶರೀರ ಶಾಸ್ತ್ರಜ್ಞನಾದ ಈತ ಸರ್ ಫ್ರೆಡರಿಕ್ ಬಂಟಿಂಗ್ ಜೊತೆ ಸೇರಿ, ನಾಯಿಗಳಲ್ಲಿ ಮಧುಮೇಹ ನಿಯಂತ್ರಿಸುವ ಇನ್ಸುಲಿನ್ ತಯಾರಿಸಿದ. ಆದರೆ ವೈದ್ಯಕೀಯಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಈತನಿಗೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ 1925ರವರೆಗೂ ಈತನಿಗೆ ಡಾಕ್ಟರ್ ಆಫ್ ಮೆಡಿಸಿನ್ ಪದವಿ ಸಿಗದೇ ಇದ್ದುದೇ ಕಾರಣ.

1854: ಝಾನ್ಸಿಯನ್ನು ಈಸ್ಟ್ ಇಂಡಿಯಾ ಕಂಪೆನಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು.

No comments:

Post a Comment