ನಾನು ಮೆಚ್ಚಿದ ವಾಟ್ಸಪ್

Friday, February 23, 2018

ಇಂದಿನ ಇತಿಹಾಸ History Today ಫೆಬ್ರುವರಿ 23

ಇಂದಿನ ಇತಿಹಾಸ History Today ಫೆಬ್ರುವರಿ 23
 2018: ನವದೆಹಲಿ: ಭಾರತ ಭೇಟಿಗಾಗಿ ಆಗಮಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೆಯು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಉಭಯ ದೇಶಗಳು ಪರಸ್ಪರ ವಾಣಿಜ್ಯ, ಇಂಧನ, ವ್ಯಾಪಾರ, ವಹಿವಾಟು ಮತ್ತು ದ್ವಿಪಕ್ಷೀಯ ಬಾಂಧವ್ಯ ವರ್ಧನೆ ಸೇರಿದಂತೆ ಆರು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕಿದವು.  ಉಭಯ ದೇಶಗಳು ಪರಸ್ಪರ ಬಾಂಧವ್ಯ ಮಾತ್ರವಲ್ಲದೆ ವ್ಯಾಪಾರ ವಾಣಿಜ್ಯ, ಇಂಧನ ಸಹಿತ ಹಲವು ಕ್ಷೇತ್ರಗಳಲ್ಲಿ ಲಾಭದಾಯಕ ವಹಿವಾಟು ನಡೆಸುವ ಕುರಿತೂ ವಿಸ್ತೃತ ಚರ್ಚೆ ನಡೆಸಿದವು.  ಆ ಬಳಿಕ ಜಸ್ಟಿನ್ ಟ್ರುಡೆಯು ಅವರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, "ನಿಮ್ಮ ಈ ಭೇಟಿಯನ್ನು ದೀರ್ಘ ಕಾಲದಿಂದ ನಿರೀಕ್ಷಿಸಲಾಗುತ್ತಿತ್ತು. ಇದೀಗ ನೀವು ಮತ್ತು ನಿಮ್ಮ ಕುಟುಂಬದವರು ಭಾರತ ಭೇಟಿ ಕೈಗೊಂಡಿರುವುದು ನಮಗೆ ಸಂತಸ ಉಂಟುಮಾಡಿದೆ ಎಂದು ಹೇಳಿದರು.  ಭಾರತ ಮತು ಕೆನಡಾ ದೇಶಗಳು  ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಡುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು. ರಾಜಕೀಯ ಉದ್ದೇಶಕ್ಕಾಗಿ ಮತ-ಧರ್ಮವನ್ನು ದುರುಪಯೋಗ ಮಾಡಿಕೊಳ್ಳಲು ಅವಕಾಶ ಇರಬಾರದು ಎಂದು ಮೋದಿ ನುಡಿದರು. ಕೆನಡಾ ದೇಶ ಭಾರತೀಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ತಾಣವಾಗಿದ್ದು ೧.೨೦ ಲಕ್ಷಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಕೆನಡದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ; ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ನಾವು ಪರಸ್ಪರ ತಿಳಿವಳಿಕೆ ಒಪ್ಪಂದವನ್ನು ನವೀಕರಿಸಿಕೊಂಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.  ಭಯೋತ್ಪಾದನೆ ಮತ್ತು ಉಗ್ರ ನಿಗ್ರಹ, ಸೇರಿದಂತೆ ಪರಸ್ಪರ ವ್ಯಾಪಾರ ಬಾಂಧವ್ಯ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ತೃತ ಮಾತುಕತೆ ನಡೆಸಲಾಯಿತು ಎಂದು ಅವರು ನುಡಿದರು. ಸುಮಾರು ೨ ಗಂಟೆಗಳಿಗೂ ಹೆಚ್ಚಿನ ಕಾಲಾವಧಿಯ ಮಾತುಕತೆಯಲ್ಲಿ ದ್ವಿಪಕ್ಷೀಯ ಪಾಲುದಾರಿಕೆ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು ಎಂದು ಮೋದಿ ಹೇಳಿದರು.  ಭಯೋತ್ಪಾದನೆ ವಿರುದ್ಧ ಉಭಯ ರಾಷ್ಟ್ರಗಳು ಒಟ್ಟಾಗಿ ಹೋರಾಟ ಮಾಡಬೇಕಾದ್ದು ಅತ್ಯಂತ ಮಹತ್ವ ಎಂದು ಒತ್ತಿ ಹೇಳಿದ ಪ್ರಧಾನಿ, ರಾಜಕೀಯ ಗುರಿಸಾಧನೆಯ ಕಾರಣಗಳಿಗಾಗಿ ಧರ್ಮವನ್ನು ದುರುಪಯೋಗಿಸಲು ಅವಕಾಶ ಇರಬಾರದು ಎಂದರು.  ಭಾರತದ ಸಾರ್ವಭೌಮತ್ವಕ್ಕೆ ಮತ್ತು ಏಕತೆಗೆ ಯಾರೇ ಆಗಲಿ ಸವಾಲು ಹಾಕುವುದನ್ನು ಸಹಿಸಲಾಗುವುದಿಲ್ಲ ಎಂದು ಪ್ರಧಾನಿ ಸ್ಪಷ್ಟ ಪಡಿಸಿದರು. ಟ್ರುಡೆಯು ಸರ್ಕಾರ ಖಲಿಸ್ತಾನ ವಿಚಾರದಲ್ಲಿ ಮೃದುನೀತಿ ತಳೆದಿದೆ ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಮೋದಿ ಅವರ ಮಾತುಗಳು ಮಹತ್ವ ಪಡೆದಿದೆ. ಕಳೆದ ಕೆಲವು ದಿನಗಳಲ್ಲಿ ಟ್ರುಡೆಯು ಅವರು ಭಾರತದ ಹಲವು ಭಾಗಗಳಿಗೆ ಭೇಟಿ ನೀಡಿರುವುದನ್ನು ಪ್ರಸ್ತಾಪಿಸಿದ ಮೋದಿ ’ರಾಷ್ಟ್ರದಲ್ಲಿನ ವೈವಿಧ್ಯತೆಯನ್ನು ಕೆನಡಾ ನಾಯಕರ ಅನುಭವ ಮಾಡಿಕೊಂಡಿರಬಹುದು ಎಂದು ಪ್ರಧಾನಿ ಹೇಳಿದರು. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರುಡೆಯು ಭಾರತವು ವಾಣಿಜ್ಯ ಸಹಕಾರದ ಸಹಜ ಪಾಲುದಾರ ಎಂದು ಬಣ್ಣಿಸಿದರು. ಇದಕ್ಕೆ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಕೆನಡಾ ಪ್ರಧಾನಿಯನ್ನು ಭೇಟಿ ಮಾಡಿ ಪರಸ್ಪರ ಹಿತಾಸಕ್ತಿಯ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದರು.  ಟ್ರುಡೆಯು ಜೊತೆಗೆ ಅತ್ಯಂತ ಸೌಹಾರ್ದ ಮಾತುಕತೆ ನಡೆಸಿದ ಸ್ವರಾಜ್ ಉಭಯ ರಾಷ್ಟ್ರಗಳ ಪಾಲುದಾರಿಕೆ ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದರು.
2018: ಪಟ್ನಾ: ಬಹುಕೋಟಿ ಮೇವು ಹಗರಣದಲ್ಲಿ ಒಂದಾದ ದೇವಘಡ ಜಿಲ್ಲಾ ಖಜಾನೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಲು ಜಾರ್ಖಂಡ್ ಹೈಕೋರ್ಟ್ ನಿರಾಕರಿಸಿತು. ಸಿಬಿಐ ವಿಶೇಷ ನ್ಯಾಯಾಧೀಶ ಶಿವಪಾಲ್ ಸಿಂಗ್ ಯಾದವ್ ಅವರು ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ೨೦೧೮ರ ಜನವರಿ ೬ರಂದು ಮೂರೂವರೆ ವರ್ಷಗಳ ಸೆರೆವಾಸ ಮತ್ತು ೧೦ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದ್ದರು. ೨೦೧೭ರ ಡಿಸೆಂಬರ್ ೨೩ರಂದು ನ್ಯಾಯಾಲಯವು ಯಾದವ್ ಅವರನ್ನು ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಪ್ರಸಾದ್ ಅವರು ಈ ಪ್ರಕರಣದಲ್ಲಿ ತಮಗೆ ಶಿಕ್ಷೆ ನೀಡಿದ್ದರ ವಿರುದ್ಧ ರಾಂಚಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.  ಖ್ಯಾತ ವಕೀಲ ಸುರೇಂದ್ರ ಸಿಂಗ್ ಅವರು ಈದಿನ ಲಾಲು ಪ್ರಸಾದ್ ಪರವಾಗಿ ವಾದಿಸಿ ಆರೋಗ್ಯದ ನೆಲೆಯಲ್ಲಿ ಜಾಮೀನು ನೀಡುವಂತೆ ಮನವಿ ಮಾಡಿದರು. ಸಿಬಿಐ ವಕೀಲರು ಜಾಮೀನು ನೀಡಲು ವಿರೋಧ ವ್ಯಕ್ತ ಪಡಿಸಿದ್ದರು.  ದೇವಘಡ ಜಿಲ್ಲಾ ಖಜಾನೆ ಪ್ರಕರಣ ಮತ್ತು ಚೈಬಾಸಾ ಖಜಾನೆ ಪ್ರಕರಣಗಳಲ್ಲಿ ನ್ಯಾಯಾಲಯಗಳು ಶಿಕ್ಷೆ ವಿಧಿಸಿದ ಬಳಿಕ ಲಾಲು ಪ್ರಸಾದ್ ಅವರನ್ನು ಪ್ರಸ್ತುತ ರಾಂಚಿಯ ಬಿರ್ಸಾ ಮುಂಡಾ ಕೇಂದ್ರೀಯ ಸೆರೆಮನೆಯಲ್ಲಿ ಇರಿಸಲಾಗಿತ್ತು. ಚೈಬಾಸಾ ಜಿಲ್ಲಾ ಖಜಾನೆ ಪ್ರಕರಣದಲ್ಲಿ ೧೯೯೨-೯೩ರ ಅವಧಿಯಲ್ಲಿ ಅಕ್ರಮವಾಗಿ ೩೩.೬೭ ಕೋಟಿ ರೂಪಾಯಿಗಳನ್ನು ಹಿಂಪಡೆದುಕೊಂಡ ಪ್ರಕರಣದಲ್ಲಿ ವಿಶೇಷ ಸಿಬಿಐ ಕೋರ್ಟಿನ ನ್ಯಾಯಾಧೀಶ ಎಸ್, ಎಸ್, ಪ್ರಸಾದ್ ಅವರು ಲಾಲು ಪ್ರಸಾದ್ ಅವರಿಗೆ ಐದು ವರ್ಷಗಳ ಸೆರೆವಾಸ ಮತ್ತು ೧೦ ಲಕ್ಷ ರೂಪಾಯಿಗಳ ದಂಡ ವಿಧಿಸಿ ೨೦೧೮ರ ಜನವರಿ ೨೪ರಂದು ತೀರ್ಪು ನೀಡಿದ್ದರು. ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರ ಸೇರಿದಂತೆ ೫೦ ಮಂದಿ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಇತರ ಆರು ಮಂದಿಯನ್ನು ಖುಲಾಸೆ ಮಾಡಿತ್ತು.  ೨೦೧೩ರ ಸೆಪ್ಟೆಂಬರ್  ೩೦ರಂದು ಲಾಲು ಪ್ರಸಾದ್ ಅವರಿಗೆ ಮೇವು ಹಗರಣದ ಮೊದಲ ಪ್ರಕರಣದಲ್ಲಿ ಐದು ವರ್ಷಗಳ ಸೆರೆವಾಸ ವಿಧಿಸಿದ್ದಲ್ಲದೆ, ೬ ವರ್ಷಗಳ ಅವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ವಿಧಿಸಲಾಗಿತ್ತು. ಬಳಿಕ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು. ಮೇವು ಹಗರಣಕ್ಕೆ ಸಂಬಂಧಿಸಿದ ಒಟ್ಟು ೬ ಪ್ರಕರಣಗಳ ಪೈಕಿ, ಮೂರು ಪ್ರಕರಣಗಳಲ್ಲಿ ಈವರೆಗೆ ಲಾಲು ಪ್ರಸಾದ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಇವುಗಳಲ್ಲಿ ಐದು ಪ್ರಕರಣಗಳು ಜಾರ್ಖಂಡ್‌ನಲ್ಲಿ ಇದ್ದರೆ ಒಂದು ಪ್ರಕರಣ ಪಾಟ್ನಾದಲ್ಲಿದ್ದು, ಲಾಲು ಪ್ರಸಾದ್ ಅವರು ವಿಚಾರಣೆ ಎದುರಿಸುತ್ತಿದ್ದಾರೆ.  ಡುಮ್ಕ ಮತ್ತು ದೊರಾಂಡ ಜಿಲ್ಲಾ ಖಜಾನೆಗಳಿಂದ (ಎರಡೂ ಜಾರ್ಖಂಡಿನಲ್ಲಿವೆ) ಹಣ ಹಿಂಪಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂಬರುವ ತಿಂಗಳುಗಳಲ್ಲಿ ತೀರ್ಪುಗಳು ಹೊರಬೀಳುವ ಸಾಧ್ಯತೆಗಳಿವೆ.


2018: ಸರ್ಖೇತಾಬಾತ್ (ಟರ್ಕ್‌ಮೆನಿಸ್ತಾನ್): ಟರ್ಕ್‌ಮೆನಿಸ್ತಾನ, ಆಫ್ಘಾನಿಸ್ಥಾನ, ಪಾಕಿಸ್ತಾನ ಮತ್ತು ಭಾರತ (ಟಾಪಿ-ಟಿಎಪಿಐ) ಆಫ್ಘಾನಿಸ್ಥಾನದ ಗಡಿಯಲ್ಲಿನ ಟರ್ಕ್‌ಮೆನಿಸ್ತಾನದಲ್ಲಿ ಬಹುಕೋಟಿ ಡಾಲರ್ ಮೊತ್ತದ ’ಟಾಪಿ ಗ್ಯಾಸ್ ಪೈಪ್ ಲೈನ್ ಯೋಜನೆಗೆ ಜಂಟಿಯಾಗಿ ಔಪಚಾರಿಕ ಚಾಲನೆ ನೀಡಿದವು. ಟಾಪಿ (ಟಿಎಪಿಐ) ಪೈಪ್ ಲೈನ್ ಯೋಜನೆಯು ದಕ್ಷಿಣ ಏಷ್ಯಾದ ಅನಿಲ ಕೊರತೆಯನ್ನು ನೀಗಿಸಲು ನೆರವಾಗುವುದು ಎಂದು ಹಾರೈಸಲಾಗಿದೆ. ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ, ಟರ್ಕ್‌ಮೆನಿಸ್ತಾನ ಅಧ್ಯಕ್ಷ ಗುರ್ಬಂಗುಲಿ  ಬೆರ್ಡಿಮುಖಾಮೆಡೊವ್, ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಖನ್ ಅಬ್ಬಾಸಿ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಅವರು ಆಫ್ಘಾನ್ ಗಡಿಯಲ್ಲಿರುವ ಅನಿಲ ಸಮೃದ್ಧ ಟರ್ಕ್‌ಮೆನಿಸ್ತಾನದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  ಟರ್ಕ್‌ಮೆನಿಸ್ತಾನದಲ್ಲಿನ ವಿದೇಶೀ ರಾಜತಾಂತ್ರಿಕ ಕಚೇರಿಗಳ ರಾಜತಾಂತ್ರಿಕರು ಸೇರಿದಂತೆ ಹಲವಾರು ಗಣ್ಯರನ್ನು ಟರ್ಕ್‌ಮೆನ್ ರಾಷ್ಟ್ರಗೀತೆ ಮತ್ತು ಪರಂಪರಾಗತ ಅಲೆಮಾರಿ ಜನಾಂಗದ ಆಹಾರದೊಂದಿಗೆ ಒಂದು ಕಾಲದಲ್ಲಿ ಸೋವಿಯತ್ ಯೂನಿಯನ್ ನ ದಕ್ಷಿಣದ ತುತ್ತ ತುದಿಯಾಗಿದ್ದ  ಸರ್ಖೇತಾಬಾತ್ ನಲ್ಲಿ ಸ್ವಾಗತಿಸಲಾಯಿತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಆಫ್ಘನ್ ಅಧ್ಯಕ್ಷ ಘನಿ ಅವರು ’ಪೈಪ್ ಲೈನ್ ರಾಷ್ಟ್ರಗಳನ್ನು ಒಗ್ಗೂಡಿಸಲಿದೆ ಎಂದು ಹೇಳಿದರು.  ಯೋಜನೆ ಬಗ್ಗೆ ನಕಾರಾತ್ಮಕ ಮಾತುಗಳಿದ್ದವು. ಆದರೆ ಈಗ ನಾವು ಟಾಪಿ ಪೈಪ್ ಲೈನ್ ನಿರ್ಮಾಣದ ಕಾರ್ಯವನ್ನು ವೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳಿದರು. ಟಾಪಿ ಪೈಪ್ ಲೈನ್ ಯೋಜನೆಗೆ ಟರ್ಕ್‌ಮೆನಿಸ್ತಾನ್, ಆಫ್ಘಾನಿಸ್ಥಾನ, ಪಾಕಿಸ್ತಾನ ಮತ್ತು ಭಾರತ (ಇಂಡಿಯಾ) ದೇಶಗಳ ಮೊದಲಕ್ಷರಗಳನ್ನು ಜೋಡಿಸಿ ’ಟಾಪಿ ಎಂಬುದಾಗಿ ಹೆಸರಿಡಲಾಗಿದೆ.  ೧,೮೪೦ ಕಿಮೀ (೧,೧೧೪೩ ಮೈಲು) ಉದ್ದದ ಯೋಜನೆಯನ್ನು ೨೦೨೦ರ ಆರಂಭದ ವೇಳೆಗೆ ಪೂರ್ಣಗೊಳಿಸುವ ಗುರಿ ಇದ್ದು, ಬಳಿಕ ಟರ್ಕ್‌ಮೆನಿಸ್ತಾನದ ಬೃಹತ್ ಗಾಲ್ಕಿನ್ವಿಷ್ ಅನಿಲ ನಿಕ್ಷೇಪದಿಂದ ಈ ಪೈಪ್ ಲೈನ್ ಮೂಲಕ ನೈಸರ್ಗಿಕ ಅನಿಲದ ಸರಬರಾಜು ಆಗಲಿದೆ. ೩೩೦೦ ಕ್ಯಬುಕ್ ಮೀಟರ್ ಅನಿಲವನ್ನು ಪ್ರತಿವರ್ಷ ಕೊಳವೆ ಮೂಲಕ ಪಂಪ್ ಮಾಡಲಾಗುವುದು. ದಕ್ಷಿಣ ಏಷ್ಯಾದ ಪ್ರತಿಸ್ಪರ್ಧಿ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಭಾರತ ಈ ಅನಿಲವನ್ನು ಖರೀದಿಸಲಿವೆ. ಸಮರಗ್ರಸ್ಥ ಆಫ್ಘಾನಿಸ್ತಾನದಲ್ಲಿ ಪೈಪ್ ಮೂಲಕ ಅನಿಲ ಸಾಗಣೆ ಒಂದು ದೃಷ್ಟಿಯಿಂದ ಸವಾಲಿನ ಕೆಲಸವೂ ಆಗಿದೆ.  ಟರ್ಕ್‌ಮೆನಿಸ್ತಾನವು ಪ್ರಸ್ತುತ ತನ್ನ  ನೈಸರ್ಗಿಕ ಅನಿಲ ಮಾರಾಟಕ್ಕೆ ಚೀನಾವನ್ನು ಮಾತ್ರವೇ ನೆಚ್ಚಿಕೊಳ್ಳಬೇಕಾಗಿದೆ. ಪಾಕಿಸ್ತಾನದ ಜೊತೆಗಿನ ಬಾಂಧವ್ಯ ಸುಗಮವಾಗಿರದ ಹಿನ್ನೆಲೆಯಲ್ಲಿ ಪೈಪ್ ಲೈನ್ ಯೋಜನೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆ ಸಮಂಜಸವೇ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು.  ಆದರೆ ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಅವರು ಯೋಜನೆಯು ನಮ್ಮ ಗುರಿಗಳ ಸಂಕೇತವಾಗಿದೆ. ಇದು ನಾಲ್ಕು ರಾಷ್ಟ್ರಗಳ ನಡುವಣ ಸಹಕಾರದ ಹೊಸ ಅಧ್ಯಾಯವನ್ನೇ ತೆರೆಯಲಿದೆ ಎಂದು ಹೇಳಿದರು. ಟರ್ಕ್‌ಮೆನಿಸ್ತಾನವು ವಿಶ್ವದಲ್ಲಿ ವಿಶಾಲವಾದ ತೈಲ ನಿಕ್ಷೇಪಗಳನ್ನು ಹೊಂದಿರುವ ೪ನೇ ಪ್ರಮುಖ ರಾಷ್ಟ್ರವಾಗಿದೆ. ಆದರೆ ಪ್ರಮುಖ ಗ್ರಾಹಕ ರಷ್ಯಾವು ೨೦೧೬ರಲ್ಲಿ ಟರ್ಕ್‌ಮೆನಿಸ್ತಾನದಿಂದ ಅನಿಲ ಖರೀದಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು.

2018: ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಬಹುಕೋಟಿ ವಂಚನೆ ಹಗರಣದ
ಹಿನ್ನೆಲೆಯಲ್ಲಿ ಆರೋಪಿ ನೀರವ್ ಮೋದಿ ಜ್ಯವೆಲ್ಸ್ ನ  ಬ್ರ್ಯಾಂಡ್ ರಾಯಭಾರಿ ಒಪ್ಪಂದವನ್ನು ಚಿತ್ರ ನಟಿ ಪ್ರಿಯಾಂಕಾ ಚೋಪ್ರಾ ರದ್ದು ಪಡಿಸಿದರು.  ಈ ವಿಷಯವಾಗಿ ಕಾನೂನು ಅಭಿಪ್ರಾಯ ಪಡೆಯುತ್ತಿರುವುದಾಗಿಯೂ ಅವರು ಹೇಳಿದರು. ನೀರವ್ ಮೋದಿ ಮೇಲಿನ ಇತ್ತೀಚಿನ ಆರೋಪಗಳ ಹಿನ್ನಲೆಯಲ್ಲಿ ನೀರವ್ ಮೋದಿ  ಬ್ರಾಂಡ್ ಉತ್ಪನ್ನದ ಆಭರಣಗಳ ರಾಯಭಾರಿಯಾಗಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅವರು ರಾಯಭಾರಿ ಒಪ್ಪಂದ ರದ್ದು ಪಡಿಸಲು ನಿರ್ಧರಿಸಿದರು ಎಂದು ಪ್ರಿಯಾಂಕಾ ಚೋಪ್ರಾ  ವಕ್ತಾರರು ತಿಳಿಸಿದರು. ೨೦೧೭ರ ಜನವರಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನೀರವ್ ಮೋದಿ ಜ್ಯುವೆಲ್ಸ್‌ನ ಬ್ಯಾಂಡ್ ರಾಯಭಾರಿಯಾಗಿದ್ದರು. ಮತ್ತು ಅದಕ್ಕಾಗಿ ಹಲವಾರು ಮುದ್ರಣ ಪ್ರಚಾರಗಳನ್ನು ಮಾಡಿದ್ದರು. ’ಸೇ ಯೆಸ್ ಫಾರ್ ಎವರ್ ಎಂಬ ಜಾಹೀರಾತು ಚಿತ್ರವನ್ನೂ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮೂಲಕ ಮೋದಿ ಸಲುವಾಗಿ ಅವರು ನಿರ್ಮಿಸಿದ್ದರು. ಈ ರೊಮ್ಯಾಂಟಿಕ್ ಪ್ರೊಪೋಸಲ್ ಚಿತ್ರದಲ್ಲಿ ಸಿದ್ಧಾರ್ಥ ಮಲ್ಹೋತ್ರ ಅವರು ಚೋಪ್ರಾ ಜೊತೆಗೆ ನಟಿಸಿದ್ದರು. ಕಪೂರ್ ಅಂಡ್ ಸನ್ಸ್ ಖ್ಯಾತಿಯ ಶಾಕುನ್ ಬಾತ್ರ ಚಿತ್ರವನ್ನು ನಿರ್ದೇಶಿಸಿದ್ದರು.  ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಗೊಂಡ ವೇಳೆಯಲ್ಲಿ ಚೋಪ್ರಾ ಅವರು ’ನೀರವ್ ಮೋದಿ ಅವರ ಜೊತೆಗಿನ ನನ್ನ ಒಡನಾಟವು ಹಲವಾರು ರೀತಿಯಲ್ಲಿ ಮನಸ್ಸುಗಳ ಮಿಲನದಂತಿದೆ. ನಾವಿಬ್ಬರೂ ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಹೊಂದಿದ್ದೇವೆ ಮತ್ತು ಜಾಗತಿಕ ರಂಗದಲ್ಲಿ ಅಧುನಿಕ ಭಾರತವನ್ನು ನಿರ್ಮಿಸುವ ಕಲ್ಪನೆಯ ಮೂಲಕ ಒಂದಾಗಿದ್ದೇವೆ ಎಂದು ಹೇಳಿದ್ದರು.  ಬಿಪಾಶಾ ಬಸು: ಗೀತಾಂಜಲಿ ಜೆಮ್ಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಚಿತ್ರ ನಟಿ ಬಿಪಾಶಾ ಬಸು ಅವರೂ ಮೋದಿ ಚಿಕ್ಕಪ್ಪ ಮೆಹುಲ್ ಚೋಕ್ಸಿ ಮಾಲೀಕತ್ವದ ಕಂಪೆನಿಯು ಒಪ್ಪಂದದ ಅವಧಿ ಮುಗಿದಿದ್ದರೂ ತನ್ನ ಚಿತ್ರಗಳ ಬಳಕೆ ಮುಂದುವರೆದಿದೆ ಎಂದು ಆಕ್ಷೇಪಿಸಿದರು.  ಏನಿದ್ದರೂ ಕಂಪೆನಿ ವಿರುದ್ಧ ಅವರು ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕೆಯ ವಕ್ತಾರರು ಸ್ಪಷ್ಟ ಪಡಿಸಿದರು. ೧೧,೪೦೦ ಕೋಟಿ ರೂಪಾಯಿ ಮೊತ್ತದ ಪಿಎನ್‌ಬಿ ಹಗರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಸಿಬಿಐ ಒಂಬತ್ತು ದಿನಗಳಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ನೀರವ್ ಮೋದಿ ಅವರ ಅಪಾರ ಪ್ರಮಾಣದ ಆಸ್ತಿಯನ್ನು ಜಪ್ತಿ ಮಾಡಿದೆ.

2018: ನವದೆಹಲಿ: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಂಶು ಪ್ರಕಾಶ್ ಅವರ ಮೇಲೆ ಆಪ್ ಶಾಸಕರಿಂದ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಸಾಕ್ಷ್ಯಧಾರ ಸಂಗ್ರಹಕ್ಕಾಗಿ ಪೊಲೀಸರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ಮೇಲೆ ’ದಾಳಿ ನಡೆಸಿದ್ದನ್ನು ಅನುಸರಿಸಿ ಕೇಜ್ರಿವಾಲ್ ಅವರು ಸಂಪುಟ ಸಹೋದ್ಯೋಗಿಗಳ ಸಹಿತವಾಗಿ ಸಂಜೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾನ್ ಅವರನ್ನು ಭೇಟಿ ಮಾಡಿದರು. ಲೆಫ್ಟಿನೆಂಟ್ ಗವರ್ನರ್ ಅವರು ಅಹಿತಕರ ಘಟನೆಗಳನ್ನು ಅತ್ಯಂತ ದುರದೃಷ್ಟಕರ ಎಂಬುದಾಗಿ ಬಣ್ಣಿಸಿ ಖಂಡಿಸಿದರು. ನೌಕರರು ಅಭದ್ರತೆ ಕಾಡಿ, ಸ್ಥೈರ್ಯ ಕಳೆದುಕೊಂಡರೆ ಯಾವುದೇ ಸರ್ಕಾರ ಜನರಿಗೆ ನೀಡಿದ ತನ್ನ ವಚನಗಳನ್ನು ಪೂರೈಸಲು ಸಾಧ್ಯವಿಲ್ಲ. ನಾಗರಿಕ ಸಮಾಜ ಮತ್ತು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದರು ಎಂದು ರಾಜ ಭವನದ ಪ್ರಕಟಣೆ ತಿಳಿಸಿತು. ದೆಹಲಿಯ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಚುನಾಯಿತ ಸರ್ಕಾರ ಮತ್ತು ನೌಕರರ ನಡುವಣ ಅಪನಂಬಿಕೆಯನ್ನು ನಿವಾರಿಸುವ ನಿಟ್ಟಿನಲ್ಲಿ ತತ್ ಕ್ಷಣ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಬೈಜಾಲ್ ನುಡಿದರು ಎಂದೂ ಹೇಳಿಕೆ ತಿಳಿಸಿತು. ಸಿಎಂ, ಎಲ್ ಜಿ ಮಾತುಕತೆ: ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ಇಬ್ಬರೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ಭೇಟಿ ಮಾಡಿದ ಬಳಿಕ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ನಡೆದ ಘಟನೆಯ ಬಳಿಕ ಕಳೆದ ೩ ದಿನಗಳಿಂದ ಅಧಿಕಾರಿಗಳು ಯಾವುದೇ ಸಭೆಗಳಿಗೂ ಹಾಜರಾಗುತ್ತಿಲ್ಲ. ಆಡಳಿತಕ್ಕೆ ಅಡಚಣೆಯಾಗಿದೆ. ನನಗೆ ಅತೀವ ಕಳವಳವಾಗಿದೆ ಎಂದು ಹೇಳಿದ ಲೆಫ್ಟಿನೆಂಟ್ ಗವರ್ನರ್ ಅಧಿಕಾರಿಗಳು ಮಾಮೂಲಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ತಾನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಚಿವ ಸಂಪುಟದ ಸದಸ್ಯರೂ ಈ ನಿಟ್ಟಿನಲ್ಲಿ ಅವರಿಗೆ ಪೂರ್ಣ ಸಹಕಾರದ ಭರವಸೆ ನೀಡಿದರು. ನಾವೆಲ್ಲರೂ ದೆಹಲಿಯ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯ ಇದೆ ಎಂದು ಕೇಜ್ರಿವಾಲ್ ಅವರು ಸಭೆಯ ಬಳಿಕ ಟ್ವೀಟ್ ಮಾಡಿದರು.  ಕೇಜ್ರಿವಾಲ್ ನಿವಾಸಕ್ಕೆ ಪೊಲೀಸ್ ತಂಡ: ಇದಕ್ಕೆ ಮುನ್ನ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಸಂಬಂಧ ದೆಹಲಿ ಪೊಲೀಸ್ ತಂಡ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸಕ್ಕೆ ತೆರಳಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿತ್ತು.  ಮುಖ್ಯ ಕಾರ್ಯದರ್ಶಿ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಸಿ.ಸಿ ಟಿ.ವಿ ದೃಶ್ಯಗಳು ಸೇರಿದಂತೆ ಎಲ್ಲಾ ಬಗೆಯ ಪುರಾವೆಗಳನ್ನು ಸಂಗ್ರಹಿಸಲು ಸಿಎಂ ನಿವಾಸಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ಉತ್ತರ ದೆಹಲಿಯ ಹೆಚ್ಚುವರಿ ಡಿಸಿಪಿ ಹರೀಂದರ್ ಸಿಂಗ್ ತಿಳಿಸಿದ್ದರು. ನನ್ನ ನಿವಾಸಕ್ಕೆ ಒಂದು ದೊಡ್ಡ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ. ಮುಖ್ಯಮಂತ್ರಿಯ ಇಡೀ ನಿವಾಸವನ್ನು ಹುಡುಕಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದರು. ೬೦ರಿಂದ ೭೦ ಪೊಲೀಸರು ಮುಖ್ಯಮಂತ್ರಿ ಕಚೇರಿಗೆ ಬಂದಿದ್ದಾರೆ. ಆದರೆ, ಈ ವೇಳೆ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ. ಯಾವುದೆ ಮಾಹಿತಿ ನೀಡದೆ ಸಿಎಂ ಸಿವಾಸಕ್ಕೆ ಬಂದು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ ಎಂದು ದೆಹಲಿ ಸರ್ಕಾರದ ವಕ್ತಾರ ಅರುಣೋದಯ್ ಪ್ರಕಾಶ್ ಹೇಳಿದ್ದರು. ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ  ಫೆ.19ರ ಸೋಮವಾರ ರಾತ್ರಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ  ಸಂಬಂಧಿಸಿ ಆಮ್ ಆದ್ಮಿ ಪಕ್ಷದ(ಎಎಪಿ) ಶಾಸಕ ಪ್ರಕಾಶ್ ಜರ್ವಾಲ್ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲಹೆಗಾರ ವಿ.ಕೆ. ಜೈನ್ ಅವರನ್ನು ಪೊಲೀಸರು  ಫೆ.21ರ ಬುಧವಾರ ಬಂಧಿಸಿದ್ದರು.

2018: ನವದೆಹಲಿ: ತನ್ನ ಹಿಂದಿನ ನಿಲುವಿನಿಂದ ಹಿಂದೆ ಸರಿದ ಕೇಂದ್ರ ಸರ್ಕಾರವು ದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿರುವ ಲೋಕಪಾಲ ನೇಮಕಾತಿ ಸಂಬಂಧಿತ ಸಭೆ ಮಾರ್ಚ್ ೧ರಂದು ನಡೆಯಲಿದ್ದು, ಸಭೆಯಲ್ಲಿ ವಿರೋಧ ಪಕ್ಷದ ಸಾಲಿನಲ್ಲಿರುವ ಏಕೈಕ ದೊಡ್ಡ ಪಕ್ಷದ ನಾಯಕ ಪಾಲ್ಗೊಳ್ಳಲಿದ್ದಾರೆ ಎಂದು ಸುಪ್ರೀಂಕೋರ್ಟಿಗೆ ತಿಳಿಸಿತು.  ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠದ ಮುಂದೆ ಕಾಮನ್ ಕಾಸ್ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ನ್ಯಾಯಾಲಯ ನಿಂದನೆ ಅರ್ಜಿಯು ಈದಿನ ವಿಚಾರಣೆಗೆ ಬಂದಾಗ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ನಿಗದಿತ ಸಭೆಯಲ್ಲಿ ಪ್ರಧಾನಿ, ಲೋಕಸಭಾಧ್ಯಕ್ಷರು, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಏಕೈಕ ದೊಡ್ಡ ವಿರೋಧ ಪಕ್ಷದ ನಾಯಕ ಪಾಲ್ಗೊಳ್ಳುವರು ಎಂದು ಹೇಳಿದರು.  ಅರ್ಜಿದಾರ ಕಾಮನ್ ಕಾಸ್ ಸರ್ಕಾರೇತರ ಸಂಘಟನೆಯ ಪರವಾಗಿ ಹಾಜರಾದ ವಕೀಲ ಪ್ರಶಾಂತ ಭೂಷಣ್ ಅವರು ’ಏಕೈಕ ದೊಡ್ಡ ವಿರೋಧ ಪಕ್ಷದ ನಾಯಕ ವಿಶೇಷ ಆಹ್ವಾನಿತರಾಗಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನುಡಿದರು. ಮಾರ್ಚ್ ೧ರ ಸಭೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿ ಎಂದು ನ್ಯಾಯಮೂರ್ತಿ ಗೊಗೋಯಿ ಸರ್ಕಾರಕ್ಕೆ ಸೂಚಿಸಿದರು. ಮುಂದಿನ ವಿಚಾರಣೆಯನ್ನು ಪೀಠವು ಮಾರ್ಚ್ ೬ಕ್ಕೆ ನಿಗದಿ ಪಡಿಸಿತು. ಏಕೈಕ ದೊಡ್ಡ ವಿರೋಧ ಪಕ್ಷದ ನಾಯಕನನ್ನು ಸಭೆಗೆ ಸೇರ್ಪಡೆ ಮಾಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಕಳೆದ ಹಲವಾರು ವರ್ಷಗಳಿಂದ ವಿರೋಧ ಪಕ್ಷದ ನಾಯಕನ ಬದಲಿಗೆ ಏಕೈಕ ದೊಡ್ಡ ವಿರೋಧ ಪಕ್ಷದ ನಾಯಕನಿಗೆ ಉನ್ನತ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕವಷ್ಟೇ ಲೋಕಪಾಲರ ನೇಮಕಾತಿ ಸಾಧ್ಯ ಎಂದು ಸರ್ಕಾರವು ಪ್ರತಿಪಾದಿಸುತ್ತಾ ಬಂದಿತ್ತು.  ೨೦೧೩ರ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯ ಪ್ರಕಾರ ಲೋಕಪಾಲರ ನೇಮಕಾತಿಗಾಗಿ ಉನ್ನತ ಮಟ್ಟದ ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭಾ ಅಧ್ಯಕ್ಷರು, ವಿರೋಧ ಪಕ್ಷದ ನಾಯಕ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರು ಆಯ್ಕೆ ಮಾಡುವ ಒಬ್ಬ ನ್ಯಾಯಮೂರ್ತಿ ಒಳಗೊಂಡಿರುತ್ತಾರೆ. ೧೬ನೇ ಲೋಕಸಭೆಯಲ್ಲಿ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯ ಶೇಕಡಾ ೧೦ರಷ್ಟು ಸದಸ್ಯರನ್ನು ಪಡೆಯಲು ವಿಫಲವಾದ ಕಾರಣ ಕಾಂಗ್ರೆಸ್ ಪಕ್ಷವು ಏಕೈಕ ದೊಡ್ಡ ವಿರೋಧ ಪಕ್ಷ ಎಸಿಸಿದರೂ ವಿರೋಧ ಪಕ್ಷದ ನಾಯಕ ಸ್ಥಾನಮಾನ ಗಳಿಸಲು ಶಕ್ತವಾಗಿರಲಿಲ್ಲ. ಏನಿದ್ದರೂ ೨೦೧೭ರ ಏಪ್ರಿಲ್ ನಲ್ಲಿ ನೀಡಿದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ವಿರೋಧ ಪಕ್ಷದ ನಾಯಕನ ಬದಲಿಗೆ ಏಕೈಕ ದೊಡ್ಡ ವಿರೋಧ ಪಕ್ಷದ ನಾಯಕನನ್ನು ಲೋಕಪಾಲ ನೇಮಕಾತಿ ಸಮಿತಿಗೆ ಸೇರ್ಪಡೆ ಮಾಡಲು ಲೋಕಪಾಲ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂಬ ಸರ್ಕಾರದ ವಾದವನ್ನು ಒಪ್ಪಿರಲಿಲ್ಲ.  ನ್ಯಾಯಮೂರ್ತಿ ರಂಜನ್ ಗೊಗೋಯಿ ಪೀಠವು ನೀಡಿದ ಈ ತೀರ್ಪು ೨೦೧೩ರ ಲೋಕಪಾಲ ಕಾಯ್ದೆಯು ಈಗಿನ ರೂಪದಲ್ಲಿಯೇ ಪೂರ್ಣವಾಗಿ ಕಾರ್ಯಸಾಧ್ಯವಾದ ಕಾಯ್ದೆ ಎಂದು ಹೇಳಿತ್ತು.  ೨೦೧೩ರ ಕಾಯ್ದೆಯು ಈಗಿನ ರೂಪದಲ್ಲಿಯೇ ಮಾನ್ಯತೆ ಪಡೆದ ವಿರೋಧ ಪಕ್ಷದ ನಾಯಕನ ಗೈರು ಹಾಜರಿಯಲ್ಲೂ ಲೋಕಪಾಲ ಮುಖ್ಯಸ್ಥರು ಮತ್ತು ಸದಸ್ಯರ ನೇಮಕಾತಿಗೆ ಸಾಕಷ್ಟು ಅವಕಾಶ ಕಲ್ಪಿಸಿದೆ ಎಂದು ನ್ಯಾಯಮೂರ್ತಿ ಗೊಗೋಯಿ ಹೇಳಿದ್ದರು.  ‘ಭ್ರಷ್ಟಾಚಾರದ ಬಗೆಗಿನ ಶೂನ್ಯ ಸಹನೆಯ ತನ್ನ ಬದ್ಧತೆಯನ್ನು ಸರ್ಕಾರ ಗೌರವಿಸಬೇಕು ಎಂದು ನ್ಯಾಯಮೂರ್ತಿ ಗೊಗೋಯಿ ಸರ್ಕಾರಕ್ಕೆ ಪತ್ರ ಬರೆದು ಸೂಚಿಸಿದ್ದರು. ಸಂಸತ್ತು ಇನ್ನಷ್ಟು ಉತ್ತಮ ಕಾನೂನು ರಚಿಸುವ ನಿಟ್ಟಿನಲ್ಲಿ ಕಾರ್ಯ ಮಗ್ನವಾಗಿದೆ ಎಂಬ ಏಕೈಕ ಕಾರಣಕ್ಕಾಗಿ ಹಾಲಿ ಕಾನೂನನ್ನು ಅಮಾನತು ಸ್ಥಿತಿಯಲ್ಲಿ ಇರಿಸಲಾಗದು ಎಂದೂ ತೀರ್ಪು ಹೇಳಿತ್ತು. ಆದರೆ ಈ ತೀರ್ಪಿನ ಹೊರತಾಗಿಯೂ, ಲೋಕಪಾಲ ನೇಮಕಾತಿಗಳಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. ಪರಿಣಾಮವಾಗಿಯೇ ಕಾಮನ್ ಕಾಸ್ ಸಂಸ್ಥೆಯು ನ್ಯಾಯಾಲಯ ನಿಂದನೆ ಅರ್ಜಿಯನ್ನು ದಾಖಲಿಸಿತ್ತು.


2017: ಮುಂಬೈ: ಬೃಹತ್ಮುಂಬೈ ನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಶಿವಸೇನೆ 84 ಸೀಟುಗಳಲ್ಲಿ ವಿಜಯ ಗಳಿಸಿದರೆ,  ಬಿಜೆಪಿ 82 ಸೀಟುಗಳನ್ನು ಗೆದ್ದುಕೊಂಡಿತು.  ಮುಂಬೈ ಮಹಾನಗರ ಪಾಲಿಕೆಯ ಗದ್ದುಗೆಗೇರಲು ಶಿವಸೇನೆ ಸಿದ್ಧತೆ ನಡೆಸುತ್ತಿದ್ದರೆ ಇತ್ತ ಬಿಜೆಪಿ ತಾವು ಸ್ವತಂತ್ರ ಅಭ್ಯರ್ಥಿಗಳ ಬೆಂಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿ ಘೋಷಿಸಿತು. ಈ  ಬಾರಿ ಶಿವಸೇನೆ ಬಿಜೆಪಿ ಜತೆ ಮೈತ್ರಿ ಮಾಡದೆ ಏಕಾಂಗಿಯಾಗಿ ಕಣಕ್ಕಿಳಿದಿತ್ತು. ಕಳೆದ ಎರಡು ದಶಕಗಳಲ್ಲಿ ಮುಂಬೈ ಮಹಾನಗರ ಪಾಲಿಕೆಯಲ್ಲಿ ಶಿವಸೇನೆಯೇ ಅಧಿಕಾರ ನಡೆಸಿತ್ತು. ಆದರೂ ಬಿಎಂಸಿಯಲ್ಲಿ ಅಧಿಕಾರಕ್ಕೇರಬೇಕಾದರೆ ಯಾವುದೇ ಪಕ್ಷಕ್ಕೆ 114 ಕಾರ್ಪರೇಟರುಗಳ ಬೆಂಬಲದ ಅಗತ್ಯವಿದೆ. ಮಹಾರಾಷ್ಟ್ರದಲ್ಲಿ ಅರಳಿದ ಕಮಲ: ಬಿಎಂಸಿ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸೀಟು ಗೆಲ್ಲಲು ಸಾಧ್ಯವಾಯಿತು. ಇದೊಂದು ಐತಿಹಾಸಿಕ ಗೆಲುವು. ಶಿವಸೇನೆ ನಮ್ಮ ಪಕ್ಷಕ್ಕಿಂತ ಎರಡೇ ಎರಡು ಹೆಚ್ಚು ಸೀಟುಗಳಲ್ಲಿ ಗೆಲುವು ಸಾಧಿಸಿದೆ. ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಢ್ಣವೀಸ್  ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಕಾರಣ ಎಂದು ಮುಂಬೈಯ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ಹೇಳಿದರು.
2017: ನವದೆಹಲಿ: ಭಾರತೀಯ ವಾಯುಪಡೆಯ ಬಹೂಪಯೋಗಿ ಸರಕುಸಾಗಣೆ ವಿಮಾನ ಹರ್ಕ್ಯುಲಸ್ ಸಿ – 130ಜೆ ವಿಮಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಲಡಾಕ್ ತೋಶಿ ವಾಯು ನೆಲೆಯಲ್ಲಿ ಹಾನಿಯಾಗಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿತು. ಕಳೆದ ವರ್ಷ ಡಿಸೆಂಬರ್ 13 ರಂದು ಹರ್ಕ್ಯುಲಸ್ ವಿಮಾನ ಸಮುದ್ರ ಮಟ್ಟದಿಂದ 10000 ಅಡಿ ಎತ್ತರದಲ್ಲಿರುವ ತೋಶಿ ವಾಯುನೆಲೆಯಲ್ಲಿ ಅಪಘಾತಕ್ಕೆ ಈಡಾಗಿತ್ತು. ವಾಯುನೆಲೆಯಲ್ಲಿ ವಿಮಾನ ಇಳಿದ ನಂತರ ಟ್ಯಾಕ್ಸಿವೇನಲ್ಲಿ ಸಾಗುತ್ತಿತ್ತು. ಸಂದರ್ಭದಲ್ಲಿ ಟ್ಯಾಕ್ಸಿವೇ ಪಕ್ಕದಲ್ಲಿ ಇದ್ದ ಕಂಬಕ್ಕೆ ವಿಮಾನದ ಎಡಭಾಗ ಡಿಕ್ಕಿ ಹೊಡೆದಿತ್ತು ಎಂದು ತಿಳಿದು ಬಂದಿತು. ವಾಯು ಪಡೆ ಘಟನೆಯನ್ನು ಇದುವರೆಗೆ ಬಹಿರಂಗ ಪಡಿಸದೆ ಗುಟ್ಟಾಗಿ ಇರಿಸಿತ್ತು. ಘಟನೆ ಸಂಬಂಧ ವಿಮಾನದ ಪೈಲೆಟ್ ಮತ್ತು ಗ್ರೂಪ್ ಕ್ಯಾಪ್ಟನ್ ಜಸ್ವೀತ್ ಸಿಂಗ್ ಛಾತ್ರ ಅವರನ್ನು ಅಮಾನತುಗೊಳಿಸಲಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ. ಅಪಘಾತದಲ್ಲಿ ವಿಮಾನದ ಎಡಭಾಗದ ರೆಕ್ಕೆ ಮತ್ತು ಇಂಜಿನ್ಗೆ ಧಕ್ಕೆಯಾಗಿದೆ. ಜತೆಯಲ್ಲೇ ವಿಮಾನದ ಮತ್ತಷ್ಟು ಭಾಗಗಳಿಗೂ ಧಕ್ಕೆಯಾಗಿದೆ. ತೋಶಿ ವಾಯು ನೆಲೆ ಸಿಯಾಚಿನ್ ನೀರ್ಗಲ್ಲಿನಲ್ಲಿರುವ ಸೈನಿಕರಿಗೆ ಅಗತ್ಯ ಸಾಮಗ್ರಿ ತಲುಪಿಸುವ ಪ್ರಮುಖ ತಾಣವಾಗಿದೆ ಎಂದು ವಾಯು ಪಡೆಯ ಮೂಲಗಳು ತಿಳಿಸಿದವು. ಭಾರತ 2011ರಲ್ಲಿ 6 ಹರ್ಕ್ಯುಲಸ್ ವಿಮಾನಗಳನ್ನು ಅಮೆರಿಕದಿಂದ ಖರೀದಿಸಿತ್ತು. 2014 ಮಾರ್ಚ್ನಲ್ಲಿ ಗ್ವಾಲಿಯರ್ ಸಮೀಪ ಹರ್ಕ್ಯುಲಸ್ ವಿಮಾನವೊಂದು ಅಪಘಾತಕ್ಕೀಡಾಗಿತ್ತು. ನಂತರ 5 ವಿಮಾನಗಳು ಮಾತ್ರ ಭಾರತದ ಬಳಿ ಉಳಿದಿತ್ತು. ಈಗ ಮತ್ತೊಂದು ವಿಮಾನಕ್ಕೆ ಹಾನಿಯಾಗಿರುವುದರಿಂದ 4 ಹರ್ಕ್ಯುಲಸ್ ವಿಮಾನಗಳು ಮಾತ್ರ ವಾಯು ಪಡೆಯ ಬಳಿ ಸುಸ್ಥಿತಿಯಲ್ಲಿ ಉಳಿದಂತಾಯಿತು.

2017: ಕೇಪ್ ಕ್ಯಾನವರಲ್: ಭೂಮಿಯ ಗುಣಲಕ್ಷಣಗಳನ್ನೇ ಹೋಲುವ ಗ್ರಹಗಳ ಹುಡುಕಾಟದಲ್ಲಿದ್ದ ಬಾಹ್ಯಾಕಾಶ ಸಂಶೋಧನಾ ವಿಜ್ಞಾನಿಗಳು ಭೂಮಿಯಿಂದ 39 ಜ್ಯೋತಿರ್ವರ್ಷ ದೂರದಲ್ಲಿ ಭೂಮಿಯನ್ನೇ ಹೋಲುವ 7 ಗ್ರಹಗಳನ್ನು ಪತ್ತೆ ಹಚ್ಚಿದರು.  ಈ ಎಲ್ಲಾ 7 ಗ್ರಹಗಳು ಒಂದೇ ನಕ್ಷತ್ರದ ಸುತ್ತ ಸುತ್ತುತ್ತಿದ್ದು, ಇದೇ ಮೊದಲ ಬಾರಿಗೆ ಒಂದೇ ನಕ್ಷತ್ರದ ಕಕ್ಷೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿಗೆ ಹೋಲಿಕೆಯಿರುವ ಗ್ರಹಗಳು ಪತ್ತೆಯಾದವು.   ಗ್ರಹಗಳಲ್ಲಿ ಜೀವಿಗಳು ವಾಸವಾಗಿರುವ ಸಂಭಾವ್ಯತೆ ಹೆಚ್ಚಾಗಿದ್ದು, ಅನ್ಯಗ್ರಹ ಜೀವಿಗಳಿಗಾಗಿ ಇಲ್ಲಿ ಹುಡುಕಾಟ ನಡೆಸಬಹುದು ಎಂದುನೇಚರ್ಪತ್ರಿಕೆ ವರದಿ ಮಾಡಿತು. ಭೂಮಿಯಿಂದ 39 ಜ್ಯೋತಿರ್ವರ್ಷ ದೂರದಲ್ಲಿರುವ TRAPPIST-1 ಎಂಬ ಸಣ್ಣ ನಕ್ಷತ್ರದ ಸುತ್ತಲೂ 7 ಗ್ರಹಗಳು ಸುತ್ತುತ್ತಿವೆ. ನಕ್ಷತ್ರ ಸೂರ್ಯನಿಗಿಂತಲೂ 10 ಪಟ್ಟು ಕಡಿಮೆ ಗಾತ್ರ ಹೊಂದಿದೆ ಮತ್ತು ಅದರ
ಉಷ್ಣಾಂಶ ಸಹ ಕಡಿಮೆ ಇದೆ. ನಕ್ಷತ್ರಕ್ಕೆ ಸಮೀಪದ ಕಕ್ಷೆಗಳಲ್ಲಿ 7 ಗ್ರಹಗಳು ಪ್ರದಕ್ಷಿಣೆ ಹಾಕುತ್ತಿವೆ. ಅತ್ಯಂತ ದೂರದಲ್ಲಿರುವ ಗ್ರಹ ಸಹ ಕೇವಲ 20 ದಿನಗಳಲ್ಲಿ ನಕ್ಷತ್ರದ ಸುತ್ತಲೂ ಒಂದು ಪ್ರದಕ್ಷಿಣಿ ಬರುತ್ತಿದೆ. ನಕ್ಷತ್ರದಿಂದ ಹೊರಹೊಮ್ಮುವ ಉಷ್ಣಾಂಶದ ಪ್ರಮಾಣ ಕಡಿಮೆ ಇದ್ದು, ಮೂರು ಗ್ರಹಗಳಿಗೆ ಜೀವಿಗಳು ಉಗಮವಾಗಲು ಮತ್ತು ಬದುಕಲು ಅಗತ್ಯವಿರುವಷ್ಟು ಮಾತ್ರ ಉಷ್ಣಾಂಶ ತಲುಪುತ್ತಿದೆ. ಇವೆಲ್ಲವೂ ಭೂಮಿಯ ಮೇಲಿನ ವಾತಾವರಣವನ್ನು ಪ್ರತಿಬಿಂಬಿಸುತ್ತವೆ. ಹೆಚ್ಚಿನ ಸಂಶೋಧನೆಯ ನಂತರ ಇಲ್ಲಿ ಜೀವಿಗಳಿರುವ ಕುರಿತು ಹೆಚ್ಚಿನ ಮಾಹಿತಿ ಬೆಳಕಿಗೆ ಬರಲಿದೆ ಎಂದು ಲೇಖಕ ಮೈಖಲ್ ಗಿಲನ್ ತಿಳಿಸಿದರು. ಗಿಲನ್ ಮತ್ತು ಅವರ ತಂಡ 2015ರಿಂದ TRAPPIST-1 ನಕ್ಷತ್ರದ ಕುರಿತು ಸಂಶೋಧನೆ ನಡೆಸುತ್ತಿದೆ. ಕಳೆದ ವರ್ಷ ಮೇನಲ್ಲಿ ಗಿಲನ್ ಈ ಸಂಬಂಧ ಒಂದು ಲೇಖನವನ್ನೂ ಸಹ ಪ್ರಕಟಿಸಿದ್ದರು. ನಂತರ ಚಿಲಿಯ ಅಕಟಾಮ ಮರುಭೂಮಿಯಲ್ಲಿರುವ ಬೃಹತ್ ದೂರದರ್ಶಕದ ಸಹಾಯದಿಂದ ನಕ್ಷತ್ರದ ಕುರಿತು ಸಂಶೋಧನೆ ಮುಂದುವರೆಸಲಾಯಿತು. ನಂತರ ನಕ್ಷತ್ರದ ಸುತ್ತಲೂ 7 ಗ್ರಹ ಸುತ್ತುತ್ತಿರುವುದು ಪತ್ತೆಯಾಯಿತು. ಹೆಚ್ಚಿನ ಸಂಶೋಧನೆಗಾಗಿ ನಾಸಾದ ಸ್ಪಿಟ್ಜರ್ ಬಾಹ್ಯಾಕಾಶ ದೂರದರ್ಶಕವನ್ನು ಬಳಸಿಕೊಳ್ಳಲಾಯಿತು ಎಂದು ಗಿಲನ್ ತಿಳಿಸಿದರು.
2009: ಜಗತ್ತಿನ ಚಲನಚಿತ್ರರಂಗದ ಚರಿತ್ರೆಯಲ್ಲಿ ಭಾರತದ ಚಿನ್ನದ ಅಧ್ಯಾಯವೊಂದು ತೆರೆದುಕೊಂಡಿತು. ಭಾರತದ ಪಾಲಿಗೆ ದಶಕಗಳ ಕಾಲ ಕಂಡೂ ಕಾಣದೆ ಮರೀಚಿಕೆಯಂತಿದ್ದ ಆಸ್ಕರ್ ಕಿರೀಟವು 'ಸ್ಲಂಡಾಗ್ ಮಿಲಿಯನೇರ್' ಮೂಲಕ ಈ ನಾಡಿಗೆ ಲಭಿಸಿತು. ಮುಂಬೈ ಕೊಳೆಗೇರಿಯ ಬದುಕಿನ ಕಥಾನಕವೊಂದರ ಸುತ್ತ ಹೆಣೆದುಕೊಂಡ 'ಸ್ಲಂಡಾಗ್ ಮಿಲಿಯನೇರ್'ಗೆ ಸಂಗೀತ ನೀಡಿದ ಎ ಆರ್ ರೆಹಮಾನ್ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇರಳದ ಕೊಲ್ಲಮ್ ಜಿಲ್ಲೆಯ ರಸೂಲ್ ಪೂಕುಟ್ಟಿ ಇದೇ ಚಿತ್ರಕ್ಕಾಗಿ ಅತ್ಯುತ್ತಮ ಧ್ವನಿಸಂಯೋಜನೆ ಪ್ರಶಸ್ತಿಯನ್ನು ಪಡೆದುಕೊಂಡರು. ಭಾರತೀಯ ಕಾಲಮಾನದ ಅನ್ವಯ ಲಾಸ್ ಏಂಜಲೀಸಿನಲ್ಲಿ ನಡೆದ ಕಾರ್ಯಕ್ರಮವನ್ನು ಈದಿನ ಬೆಳಗ್ಗೆ ಆರೂವರೆಯಿಂದ ಭಾರತದ ಕೋಟ್ಯಂತರ ಮಂದಿ ವೀಕ್ಷಿಸಿದರು. ರೆಹಮಾನ್ ಮತ್ತು ಪೂಕುಟ್ಟಿ ವೇದಿಕೆ ಏರಿ 'ಪ್ರಶಸ್ತಿ' ಸ್ವೀಕರಿಸುತ್ತ್ದಿದುದನ್ನು ಭಾರತದಾದ್ಯಂತ ಅಸಂಖ್ಯಾತ ಮಂದಿ ಟೀವಿಯ ಮೇಲೆ ವೀಕ್ಷಿಸುತ್ತಾ ರೋಮಾಂಚನಗೊಂಡರು. ಭಾರತೀಯ ಚಿತ್ರರಂಗದ 'ದಂತಕಥೆ' ಸತ್ಯಜಿತ್ ರಾಯ್ ಅವರು ಜೀವನಶ್ರೇಷ್ಠ ಸಾಧನೆಗಾಗಿ 1992ರಲ್ಲಿ ಆಸ್ಕರ್ ಕಿರೀಟ ಧರಿಸಿದ್ದರೆ, ಅದಕ್ಕೂ ಮೊದಲು 1983ರಲ್ಲಿ ರಿಚರ್ಡ್ ಅಟೆನ್ ಬರೋ ಅವರ 'ಗಾಂಧಿ' ಚಿತ್ರದಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ಭಾನು ಅಥೇಯಾ ಈ ಪ್ರಶಸ್ತಿ ಪಡೆದಿದ್ದರು. ಈ ಎರಡು ಆಸ್ಕರ್ 'ಮಿಂಚು'ಗಳನ್ನು ಹೊರತು ಪಡಿಸಿದರೆ ಭಾರತೀಯರ ಪಾಲಿಗೆ ಮರೀಚಿಕೆಯಂತಿದ್ದ ಆಸ್ಕರ್ ಇದೀಗ ಏಕಾಏಕಿ ಹೊಳೆಯಾಗಿ ಹರಿದು ಬಂದಿತು. ಭಾರತೀಯ ರಾಜತಾಂತ್ರಿಕ ವಿಕಾಸ್ ಸ್ವರೂಪ್ ಅವರ 'ಕ್ಯೂ ಅಂಡ್ ಎ' ಕಾದಂಬರಿ ಆಧಾರಿತ 'ಸ್ಲಂಡಾಗ್ ಮಿಲಿಯನೇರ್' 81ನೇ ಅಕಾಡೆಮಿ ಪ್ರಶಸ್ತಿಗಳ ಹತ್ತು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಸ್ಲಂಡಾಗ್ ಮಿಲಿಯನೇರ್ ನಿರ್ದೇಶಕ ಇಂಗ್ಲೆಂಡಿನ ಡ್ಯಾನಿ ಬೊಯ್ಲಾ ಅವರಿಗಂತೂ ಹೇಳಿತೀರದ ಸಂತಸ. ಅವರ ಈ 'ಸಾಧನೆ'ಗೆ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೆಶಕ ಪ್ರಶಸ್ತಿಗಳು ಲಭ್ಯವಾದವು. ಇದಲ್ಲದೆ ಇತರ 6 ಪ್ರಶಸ್ತಿಗಳನ್ನು ಈ ಚಿತ್ರ ಪಡೆದುಕೊಂಡಿತು.

2009: ಕಾನ್ಪುರದ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ವೈ-ಫೈ ಜಾಲ ಭೇದಿಸುವುದನ್ನು ತಡೆಯುವ ನೂತನ ತಂತ್ರಜ್ಞಾನವನ್ನು ಕಂಡು ಹಿಡಿಯಿತು. ಇದರ ಮೂಲಕ ಭಯೋತ್ಪಾದಕರು ರಹಸ್ಯ ತಾಣದಲ್ಲಿ ಕುಳಿತು ಮಾಹಿತಿಗಳನ್ನು ಕಲೆ ಹಾಕಿ ದಾಳಿಯ ಸಂಚು ರೂಪಿಸುವುದನ್ನು ತಡೆಯಬಹುದು. ಅಹಮದಾಬಾದಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ನಂತರ ಇಂಟರ್‌ನೆಟ್ ಪ್ರೊಟೊಕಾಲ್ (ಐಫೈ) ಮೂಲಕ ಭಯೋತ್ಪಾದಕರು ವಿವರ ಸಂಗ್ರಹಿಸಿ ದಾಳಿಯ ಸಂಚು ರೂಪಿಸಿರುವುದು ಬೆಳಕಿಗೆ ಬಂದಿತ್ತು. ವೈರ್‌ಲೆಸ್ ಇಂಟ್ರೂಶನ್ ಫ್ರೈವೆನ್ಸ್‌ನ್ ಸಿಸ್ಟಂ (ವಿಪ್ಸ್) ಎಂದು ಕರೆಯಲಾಗುವ ಈ ಹೊಸ ತಂತ್ರಜ್ಞಾನದಲ್ಲಿ ಯಾರೇ ಮಾಹಿತಿ ಕದಿಯಲು ಯತ್ನಿಸಿದರೆ ವೈ-ಫೈ ಪದ್ಧತಿಯಲ್ಲಿ ಅಳವಡಿಸಲಾದ ಸೆನ್ಸಾರ್ ಕೂಗಿಕೊಳ್ಳುತ್ತದೆ ಮತ್ತು ಮಾಹಿತಿ ದೊರೆಯದಂತೆ ಲಾಕ್ ಆಗುತ್ತದೆ ಎಂದು ಐಐಟಿ ಕಾನ್ಪುರದ ನಿರ್ದೇಶಕ ಸಂಜಯ್ ಗೋವಿಂದ ಧಾಂಡೆ ಹೇಳಿದರು. ಪ್ರವೀಣ್ ಭಾಗವತ್ ಅವರ ತಂಡ ಈ ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದೆ. ಅಹಮದಾಬಾದ್ ಬಾಂಬ್ ಸ್ಫೋಟದಲ್ಲಿ ಸರ್ಕಾರಿ ಮತ್ತು ವ್ಯವಹಾರ ಕೇಂದ್ರಗಳಲ್ಲಿ ಅಳವಡಿರುವ ವೈ-ಫೈ ಸಿಸ್ಟಂ ಮೂಲಕ ಭಯೋತ್ಪಾದಕರು ಮಾಹಿತಿ ಕಲೆಹಾಕಲು ಮುಂದಾಗಿದ್ದರು. ಭದ್ರತಾ ಏಜೆನ್ಸಿಗಳಿಗೆ ಈ ರಹಸ್ಯ ತಿಳಿದಿರಲಿಲ್ಲ. ಆದರೆ ಈಗ ಕಂಡುಹಿಡಿಯಲಾಗಿರುವ ಹೊಸ ತಂತ್ರಜ್ಞಾನದಿಂದ ಉಗ್ರರಿಗೆ ಯಾವುದೇ ಕೃತ್ಯಕ್ಕೂ ಮಾಹಿತಿ ದೊರೆಯಲಾರದು. ಅಹಮದಾಬಾದ್‌ನ ಸರಣಿ ಸ್ಫೋಟದ ಹೊಣೆ ಹೊತ್ತು ಅಮೆರಿಕದ ಹೇವುಡ್ ಕಂಪ್ಯೂಟರ್ ಕೇಂದ್ರದಿಂದ ಕಳೆದ ವರ್ಷದ ಜುಲೈ 27 ರಂದು ಒಂದು ಈ ಮೇಲ್ ಬಂದಿತ್ತು. ಆದರೆ ಈ ಕೇಂದ್ರದ ಮುಖ್ಯಸ್ಥರು ತಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು. ಇಂಟರ್‌ನೆಟ್ ಪ್ರೊಟೊಕಾಲ್ (ವೈ-ಫೈ) ವಿಳಾಸವನ್ನು ಬಳಸಿಕೊಂಡು ಈ ಕೆಲಸ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು.

2009: ಆಸ್ಕರ್ ಚಿತ್ರದ ಬೆಡಗಿ... ಫ್ರೀದಾ: ಮಂಗಳೂರು ಹುಡುಗಿ. ಸದಾ ಸ್ದುದಿಯಲ್ಲಿರುವ ಊರು ಮಂಗಳೂರು. ಅದು ದೇಶಕ್ಕೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಾಗಲೂ ನಂಟು ಹಾಕಿಕೊಳ್ಳುತ್ತದೆ. ವಿಶ್ವಸುಂದರಿ ಪಟ್ಟ ಅಲಂಕರಿಸಿದ ಐಶ್ವರ್ಯ ರೈ, ಬೂಕರ್ ಪಡೆದ ಅರವಿಂದ ಅಡಿಗ, ಈಗ ಆಸ್ಕರ್ ವಿಜೇತ ಚಿತ್ರದ ಫ್ರೀದಾ... ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯಲ್ಲಿ 'ಸ್ಲಮ್ ಡಾಗ್ ಮಿಲಿಯನೇರ್' ಸಿಂಹಪಾಲು ಪಡೆಯುವುದರೊಂದಿಗೆ ಚಿತ್ರದ ನಟಿ ಫ್ರೀದಾ ಪಿಂಟೋ ಅವರ ಮಂಗಳೂರು ಮೂಲವೂ ಪ್ರಸಿದ್ಧಿಗೆ ಬಂತು. ಫ್ರೀದಾ ಪಿಂಟೋ ಸಂದರ್ಶನವೊಂದರಲ್ಲಿ ತಮ್ಮ ಮೂಲ ಮಂಗಳೂರು ಎಂದು ಹೇಳಿದರು. ಆದರೆ ಆಕೆಯ ತಂದೆ ತಾಯಿ ಬಹಳ ವರ್ಷಗಳ ಹಿಂದೆಯೇ ಮುಂಬೈಗೆ ತೆರಳಿದ್ದರು. ಸದ್ಯ ಮುಂಬೈ ವಾಸಿಗಳು. ಫ್ರೀದಾಳ ತಂದೆ ಕಾರ್ಕಳ ತಾಲ್ಲೂಕಿನ ನೀರುಡೆಯ ಫ್ರೆಡ್ರಿಕ್ ಪಿಂಟೋ. ಪ್ರಸ್ತುತ ಬ್ಯಾಂಕ್ ಆಫ್ ಬರೋಡಾದ ಮುಂಬೈ ಶಾಖೆಯಲ್ಲಿ ಹಿರಿಯ ಪ್ರಬಂಧಕ. ತಾಯಿ ಮಂಗಳೂರು ದೇರೆಬೈಲಿನ ಸಿಲ್ವಿಯಾ ಪಿಂಟೋ. ಮುಂಬೈಯ ಸಂತ ಜೋನ್ಸ್ ಪ್ರೌಢಶಾಲೆಯ ಪ್ರಾಂಶುಪಾಲೆ. ಈ ದಂಪತಿಯ ಎರಡನೇ ಮಗಳು ಫ್ರೀದಾ. ಪಿಂಟೋ ಎಂಬುದು ಗೋವಾ ಮೂಲದಿಂದ ಮಂಗಳೂರಿಗೆ ಬಂದ ಒಂದು ಪಂಥಾನುಯಾಯಿ ಕೊಂಕಣಿ ಕ್ರೈಸ್ತರ ಸರ್‌ನೇಮ್. ಪಿಂಟೋ ಹೆಸರಿನ ಮಂದಿ ಹೆಚ್ಚಾಗಿರುವುದು ಮಂಗಳೂರು, ಗೋವಾ, ಮುಂಬೈ ಕರಾವಳಿಯಲ್ಲಿ.
ಫ್ರೀದಾಗೆ ತಮ್ಮ ಮಂಗಳೂರು ಮೂಲದ ಬಗ್ಗೆ ಹೆಮ್ಮೆಯಿದೆ. ಇಲ್ಲಿನ ದೈಜಿ ವರ್ಲ್ಡ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ, 'ನಾನು ಮೊದಲು ಭಾರತೀಯಳು ಹಾಗೂ ಮಂಗಳೂರಿನವಳು. ಯಾಕೆಂದರೆ ನನ್ನ ತಂದೆ- ತಾಯಿ ಮಂಗಳೂರಿನವರು. ಬಾಲ್ಯದ ಕೆಲ ಸಮಯವನ್ನು ಮಂಗಳೂರಿನಲ್ಲಿ ಕಳೆದ್ದಿದೇನೆ' ಎಂದು ಹೇಳಿದರು.

2009: ಕನ್ನಡ ಚಲನಚಿತ್ರ ಕಲಾವಿದರು, ಕಾರ್ಮಿಕರು ಮತ್ತು ತಂತ್ರಜ್ಞರ ಒಕ್ಕೂಟವು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಆಯೋಜಿಸಿದ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಚಾಲನೆ ನೀಡಿದರು. ಅಮೃತ ಮಹೋತ್ಸವ ಕುರಿತು ಪ್ರಚಾರ ನೀಡುವ ಉದ್ದೇಶಕ್ಕಾಗಿ ರೂಪಿಸಿದ ಬೇಲೂರು ಶಿಲಾಬಾಲಿಕೆ ಮಾದರಿಯ ಸ್ತಬ್ಧಚಿತ್ರವನ್ನು ಅನಾವರಣ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು. ಬಳಿಕ ಪಾರ್ವತಮ್ಮ ಅವರು, ಕನ್ನಡ ಚಿತ್ರರಂಗದ ಹಲವು ಗಣ್ಯರನ್ನು ಗೌರವಿಸಿದರು.

2008: ಕನ್ನಡದ ಖ್ಯಾತ ಸಾಹಿತಿ ಯಶವಂತ ಚಿತ್ತಾಲ ಅವರಿಗೆ ಅವರ ಕರ್ಮಭೂಮಿಯಾದ ಮಹಾನಗರ ಮುಂಬೈಯಲ್ಲಿ ಅಪಾರ ಸಂಖ್ಯೆಯ ಕನ್ನಡಿಗರ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮುಂಬೈಯ ಕನ್ನಡ ಸಂಘಗಳ ಸಹಕಾರದಿಂದ ಏರ್ಪಡಿಸಿದ ಸುವರ್ಣ ಕರ್ನಾಟಕ ಮುಂಬಯಿ ಉತ್ಸವದ ಸಂದರ್ಭದಲ್ಲಿ ನಾಡೋಜ ಪ್ರೊ. ದೇ.ಜವರೇಗೌಡ ಅವರು ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಪತ್ರವನ್ನು ಒಳಗೊಂಡ ಪ್ರಶಸ್ತಿಯನ್ನು ಯಶವಂತ ಚಿತ್ತಾಲ ಅವರಿಗೆ ನೀಡಿದರು.

2008: ಬೀದರಿನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಬ್ರಿಟನ್ ನಿರ್ಮಿತ ಅತ್ಯಾಧುನಿಕ `ಹಾಕ್ ಎಂ.ಕೆ. 132' (ಅಡ್ವಾನ್ಸ್ಡ್ ಜೆಟ್ ಟ್ರೇನರ್) ಯುದ್ಧವಿಮಾನಗಳನ್ನು ದೇಶಕ್ಕೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ವಾಯುಪಡೆಯ ಅಂಚೆ ವಿಭಾಗವು ಸಿದ್ಧಪಡಿಸಿದ ವಿಶೇಷ ಲಕೋಟೆಯನ್ನು ರಕ್ಷಣಾ ಸಚಿವರು ಬಿಡುಗಡೆಗೊಳಿಸಿದರು.

2008: ವಾಣಿಜ್ಯ ಉದ್ದೇಶದ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಕಡ್ಡಾಯ ಆದೇಶ ವಿರೋಧಿಸಿ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟ ಹಾಗೂ ಇತರೆ ಸಂಘಟನೆಗಳು ಕರೆ ಮೇರೆಗೆ ನಡೆದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದ ದಕ್ಷಿಣ ಭಾಗದಲ್ಲಿ ಮುಷ್ಕರ ಬಹುತೇಕ ಯಶಸ್ವಿಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಲಿಲ್ಲ.

2008: ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಮಾಜಿ ನಿರ್ದೇಶಕ ಮತ್ತು ರಾಜ್ಯ ಆಟೊಮೊಬೈಲ್ ವಿತರಕರ ಸಂಘಟನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಖ್ಯಾತ ಉದ್ಯಮಿ ವಿ.ಟಿ.ವೇಲು (88) ಬೆಂಗಳೂರಿನಲ್ಲಿ ನಿಧನರಾದರು. ಉದ್ಯಮಿ ವಿ.ಎಸ್. ತಿರುವೆಂಗಡಸ್ವಾಮಿ ಮುದಲಿಯಾರ್ ಅವರ ಪುತ್ರ ವಿ.ಟಿ.ವೇಲು ಅವರು ಬೆಂಗಳೂರಿನ ಆರ್ ಬಿ ಎ ಎನ್ ಎಂ ಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ಮದ್ರಾಸಿನಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಯನ ಪೂರ್ಣಗೊಳಿಸಿ ಉದ್ಯಮಕ್ಷೇತ್ರದತ್ತ ಆಸಕ್ತಿ ತಳೆದರು. ಇಂಡಿಯಾ ಗ್ಯಾರೇಜ್ ಮತ್ತು ಸದರ್ನ್ ಮೋಟಾರ್ಸ್ ಸಂಸ್ಥೆಗಳಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು ವಿ ಎಸ್ ಟಿ ಮೋಟಾರ್ಸ್ ಲಿಮಿಟೆಡ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಜೂನ್ 1967ರಲ್ಲಿ ರಾಜ್ಯ ಆಟೊಮೊಬೈಲ್ ವಿತರಕರ ಸಂಘಟನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಕೆಲ ವರ್ಷಗಳ ಕಾಲ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಮಿಟ್ಸುಬಿಷಿ ಪವರ್ ಟಿಲ್ಲರ್ಸ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮೂವತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಮೈಸೂರು ಪೇಪರ್ ಮಿಲ್ಸ್, ಚೋಳಮಂಡಲಂ ಇನ್ವೆಸ್ಟ್ ಮೆಂಟ್ ಅಂಡ್ ಫೈನಾನ್ಸ್ ಲಿಮಿಟೆಡ್, ಹಟ್ಟಿ ಗೋಲ್ಡ್ ಮೈನ್ಸ್ ಮತ್ತು ಲಕ್ಷ್ಮಿ ಮಿಲ್ಸ್ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಥಾಪನೆಗೊಳ್ಳುವ ಮುನ್ನ ನಗರಾಭಿವೃದ್ಧಿಗಾಗಿ ರೂಪಿಸಲಾಗಿದ್ದ ಮಂಡಳಿಗೆ ಸದಸ್ಯರಾಗಿ ವೇಲು ಅವರನ್ನು ಸರ್ಕಾರ ನಾಮಕರಣ ಮಾಡಿತ್ತು. ಟೆನ್ನಿಸ್ ಪಟು ಕೂಡ ಆಗಿದ್ದ ಅವರು ಮೈಸೂರು ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್, ಬೆಂಗಳೂರು ಟರ್ಫ್ ಕ್ಲಬ್ ಮತ್ತು ಬೆಂಗಳೂರು ಕ್ಲಬ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಮಲಾಬಾಯಿ ಬಾಲಕಿಯರ ಶೈಕ್ಷಣಿಕ ಟ್ರಸ್ಟಿನ ಗೌರವ ಕಾರ್ಯದರ್ಶಿ ಮತ್ತು ರೋಟರಿ ಕ್ಲಬ್ ಸದಸ್ಯರಾಗಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದರು.

2008: ಕೊಂಕಣಿಯ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂವರು ಸಾಧಕರಾದ ಸಾಹಿತ್ಯ ಕ್ಷೇತ್ರದ ಉಡುಪಿಯ ಡಾ. ಜೆರಾಲ್ಡ್ ಪಿಂಟೋ, ಜಾನಪದ ಕ್ಷೇತ್ರದ ಕುಂಬ್ರಿ ಹೊನ್ನಾವರದ ಮಂಜಯ್ಯ ಶಿವು ಹಾಗೂ ಕಲೆ (ನಾಟಕ) ಕ್ಷೇತ್ರದ ಮಂಗಳೂರಿನ ಫ್ರಾನ್ಸಿಸ್ ಫರ್ನಾಂಡಿಸ್ ಕಾಸ್ಸಿಯಾ ಅವರನ್ನು ಕೊಂಕಣಿ ಸಾಹಿತ್ಯ ಅಕಾಡೆಮಿಯ 2007ನೇ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿತು.

2008: `ಚೀನಿ ಕಮ್' ಚಿತ್ರದಲ್ಲಿ ಅಭಿನಯಕ್ಕಾಗಿ ನಟಿ ಟಬು ಫಿಲಂ ಫೇರ್ ಪ್ರಶಸ್ತಿಯ `ಉತ್ತಮ ನಟಿ' ಗೌರವವನ್ನು ತಮ್ಮದಾಗಿಸಿಕೊಂಡರು. `ತಾರೆ ಜಮೀನ್ ಪರ್' ಚಿತ್ರದ ದರ್ಶೀಲ್ ಉತ್ತಮ ನಟ ಪ್ರಶಸ್ತಿ ಗಳಿಸಿದರು. ಶಾರುಕ್ ಖಾನ್ ನಟಿಸಿದ `ಚಕ್ ದೇ ಇಂಡಿಯ'ವು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, `ಗುರು' ಚಿತ್ರಕ್ಕಾಗಿ ಎ. ಆರ್. ರೆಹಮಾನ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.

2007: ನಿತಾರಿ ಮಕ್ಕಳ ಸರಣಿ ಹತ್ಯೆ ಹಿನ್ನೆಲಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಅಸ್ತಿತ್ವಕ್ಕೆ ಬಂತು. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ಶಾಂತಾ ಸಿನ್ಹಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಮಕ್ಕಳ ಹಕ್ಕುಗಳ ಸೂಕ್ತ ಜಾರಿ ಹಾಗೂ ಅವರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಉಸ್ತುವಾರಿಯನ್ನು ಈ ಆಯೋಗದ್ದು.

2007: ಅಲ್ಕಟೆಲ್-ಲುಸೆಂಟ್ ಸಂಸ್ಥೆ ಹಕ್ಕುಸ್ವಾಮ್ಯ ಹೊಂದಿದ್ದ ಆಡಿಯೋ ತಂತ್ರಜ್ಞಾನವನ್ನು ಕೃತಿ ಚೌರ್ಯ ಮಾಡ್ದಿದಕ್ಕಾಗಿ 15.2 ಕೋಟಿ ಡಾಲರ್ (ಸುಮಾರು 6800 ಕೋಟಿ ರೂಪಾಯಿ) ನಷ್ಟ ತುಂಬಿಕೊಡಬೇಕು ಎಂದು ಅಮೆರಿಕದ ಫೆಡರಲ್ ಕೋರ್ಟ್ ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಗೆ ಆದೇಶ ನೀಡಿತು.

2007: ಪಾಕಿಸ್ಥಾನವು 2000 ಕಿ.ಮೀ. ವ್ಯಾಪ್ತಿಯ ದೂರಗಾಮೀ ಕ್ಷಿಪಣಿ `ಶಹೀನ್-2'ರ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ನಿರ್ದಿಷ್ಟ ಗುರಿಯ ಮೇಲೆ ಕರಾರುವಾಕ್ಕಾಗಿ ಸ್ಫೋಟಿಸುವ ಸಾಮರ್ಥ್ಯ ಹೊಂದಿದೆ.

2007: ರಂಗಭೂಮಿಯ ಕಲಾ ಕಣಜ ಎಂದೇ ಖ್ಯಾತರಾಗಿದ್ದ ರಂಗ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣ್ಣಿ ವೀರಭದ್ರಪ್ಪ (97) ಅವರು ಹೂವಿನ ಹಡಗಲಿ ಪಟ್ಟಣದಲ್ಲಿ ನಿಧನರಾದರು.

2007: ನೇಪಾಳದ ರಾಜಕುಟುಂಬದ ಹತ್ಯಾಕಾಂಡದ (2001) ಕಥಾ ನಾಯಕಿ ದೇವಯಾನಿ (34) ರಾಣಾ ಅವರ ಮದುವೆ ಭಾರತದ ಕೇಂದ್ರ ಸಚಿವ ಅರ್ಜುನ್ ಸಿಂಗ್ ಅವರ ಮೊಮ್ಮಗ 25ರ ಹರೆಯದ ಉದ್ಯಮಿ ಐಶ್ವರ್ಯಸಿಂಗ್ ಜೊತೆ ನವದೆಹಲಿಯಲ್ಲಿ ನಡೆಯಿತು.

2006: ರಷ್ಯಾ ರಾಜಧಾನಿ ಮಾಸ್ಕೋದಲ್ಲಿನ ಒಳಾಂಗಣ ವಾಣಿಜ್ಯ ಸಮುಚ್ಛಯ ಕುಸಿದು ಬಿದ್ದು 40 ಜನ ಮೃತರಾಗಿ 24ಕ್ಕೂ ಹೆಚ್ಚು ಜನ ಗಾಯಗೊಂಡರು.

2006: ಆಫ್ರಿಕಾ ಖಂಡದ ಮೊಜಾಂಬಿಕ್, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಫೆಬ್ರುವರಿ 22 ಮಧ್ಯರಾತ್ರಿ ಪ್ರಬಲ ಭೂಕಂಪ ಸಂಭವಿಸಿತು. 100 ವರ್ಷಗಳ ನಂತರ ಆಫ್ರಿಕಾದಲ್ಲಿ ಇಂತಹ ಪ್ರಬಲ ಭೂಕಂಪ ಸಂಭವಿಸಿತು.
2006: ಚಿತ್ರನಟಿ ಪ್ರೇಮಾ ಅವರ ನಿಶ್ಚಿತಾರ್ಥ ಸಾಫ್ಟ್ ವೇರ್ ಎಂಜಿನಿಯರ್ ಜೀವನ್ ಅಪ್ಪಚ್ಚು ಅವರ ಜೊತೆಗೆ ಬೆಂಗಳೂರಿನಲ್ಲಿ ನೆರವೇರಿತು.

2006: ಪ್ರೋತ್ಸಾಹದ ಮತ್ತು ಪ್ರಾಯೋಜಕರ ಕೊರತೆಯ ಕಾರಣ ಕರ್ನಾಟಕದ ಖ್ಯಾತ ಈಜುಗಾರ್ತಿ ನಿಶಾ ಮಿಲ್ಲೆಟ್ ನಿವೃತ್ತಿ ಘೋಷಿಸಿದರು.

2000: ವರ್ಷದ ಆಲ್ಬಮ್ ಸೇರಿದಂತೆ ಎಂಟು ಗ್ರಾಮ್ಮಿ ಪ್ರಶಸ್ತಿಗಳನ್ನು `ಸೂಪರ್ ನ್ಯಾಚುರಲ್' ಗಾಗಿ ಗೆದ್ದ ಕಾರ್ಲೋಸ್ ಸಂಟಾನಾ ಅವರು 1983ರಲ್ಲಿ ಒಂದೇ ರಾತ್ರಿಯಲ್ಲಿ ಮೈಕೆಲ್ ಜಾಕ್ಸನ್ ಮಾಡಿದ್ದ ದಾಖಲೆಗಳನ್ನು ಸರಿಗಟ್ಟಿದರು.
1997: ಸ್ಕಾಟ್ ಲ್ಯಾಂಡಿನಲ್ಲಿ ವಿಜ್ಞಾನಿಗಳು ವಯಸ್ಕ ಸ್ತನಿಯ ತದ್ರೂಪು ಸೃಷ್ಟಿಯಲ್ಲಿ (ಕ್ಲೋನಿಂಗ್) ತಾವು ಯಶಸ್ವಿಯಾಗಿದ್ದು ಈ ವಿಧಾನದಲ್ಲಿ `ಡಾಲಿ' ಹೆಸರಿನ ಕುರಿ ಮರಿಯನ್ನು ಸೃಷ್ಟಿಸಿರುವುದಾಗಿ ಪ್ರಕಟಿಸಿದರು.

1954: ಪಿಟ್ಸ್ ಬರ್ಗಿನಲ್ಲಿ ಮೊತ್ತ ಮೊದಲ ಬಾರಿಗೆ ಪೋಲಿಯೊ ವಿರುದ್ಧ ಮಕ್ಕಳಿಗೆ ಸಾಮೂಹಿಕ ಲಸಿಕೆ ಹಾಕಲಾಯಿತು.

1937: ರಾಜಲಕ್ಷ್ಮೀ ತಿರುನಾರಾಯಣ್ ಜನನ.

1935: ಕಲಾವಿದ ಎಚ್. ಎಂ. ಚೆನ್ನಯ್ಯ ಜನನ.

1930: ಖ್ಯಾತ ಸುಗಮ ಸಂಗೀತ ಗಾಯಕ ದೀನನಾಥ ಮಂಜೇಶ್ವರ ಅವರ ಶಿಷ್ಯ ಪರಂಪರೆಯ ಎಂ. ಎನ್. ಶೇಷಗಿರಿ (23-2-1930ರಿಂದ 15-2-2005) ಅವರು ನಿಂಗಪ್ಪ- ಗಂಗಮ್ಮ ದಂಪತಿಯ ಮಗನಾಗಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಜನಿಸಿದರು.

1905: ನಾಗರಿಕ ಸೇವಾ ಸಂಸ್ಥೆ ರೋಟರಿ ಕ್ಲಬ್ ಅಮೆರಿಕಾದಲ್ಲಿ ಸ್ಥಾಪನೆಗೊಂಡಿತು. ಷಿಕಾಗೊ ಅಟಾರ್ನಿ ಪಾವುಲ್ ಪಿ. ಹ್ಯಾರಿಸ್ ಇದರ ಸ್ಥಾಪಕರು. ಒಬ್ಬರ ಬಳಿಕ ಒಬ್ಬರಂತೆ ಸದಸ್ಯರ ಕಚೇರಿಗಳಲ್ಲಿ ಸಂಸ್ಥೆಯ ಸಭೆ ನಡೆಯಬೇಕಾಗಿದ್ದುದರಿಂದ ಇದಕ್ಕೆ `ರೋಟರಿ' ಹೆಸರನ್ನು ನೀಡಲಾಯಿತು. 1912ರಲ್ಲಿ ಇದರ ಹೆಸರು `ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ರೋಟರಿ ಕ್ಲಬ್ಸ್' ಎಂಬುದಾಗಿ ಬದಲಾಯಿತು. ಈಗಿನ `ರೋಟರಿ ಇಂಟರ್ ನ್ಯಾಷನಲ್' ಎಂಬ ಹೆಸರನ್ನು 1922ರಲ್ಲಿ ಅಂಗೀಕರಿಸಲಾಯಿತು.

1884: ಕಾಸಿಮೀರ್ ಫಂಕ್ (1884-1967) ಹುಟ್ಟಿದ ದಿನ. ಪೋಲಿಷ್ ಅಮೆರಿಕನ್ ಜೀವ ರಸಾಯನ ತಜ್ಞನಾದ ಈತ `ವಿಟಮಿನ್' ಶಬ್ಧವನ್ನು ಚಲಾವಣೆಗೆ ತಂದ.

1874: ಇಂಗ್ಲಿಷ್ ವ್ಯಕ್ತಿ ಮೇಜರ್ ವಾಲ್ಟೇರ್ ವಿಂಗ್ ಫೀಲ್ಡ್ `ಸ್ಪೆಯಿರಿಸ್ಟಿಕ್' (Sphairistike') ಹೆಸರಿನಲ್ಲಿ `ಲಾನ್ ಟೆನಿಸ್' ಆಟಕ್ಕೆ ಪೇಟೆಂಟ್ ಪಡೆದ.

1834: ಗುಸ್ತಾವ್ ನಾಚ್ಟಿಗಲ್ (1834-1885) ಹುಟ್ಟಿದ ದಿನ. ಜರ್ಮನ್ ಸಂಶೋಧಕನಾದ ಈತ ಸಹಾರಾ ಮರುಭೂಮಿಯನ್ನು ಕಂಡು ಹಿಡಿದ.

1821: ಕವಿ ಜಾನ್ ಕೀಟ್ಸ್ ರೋಮಿನಲ್ಲಿ ತನ್ನ 25ನೇ ವಯಸ್ಸಿನಲ್ಲಿ ಕ್ಷಯರೋಗಕ್ಕೆ ತುತ್ತಾಗಿ ಅಸುನೀಗಿದ.

No comments:

Post a Comment